"ನಾನು ಎಲ್ಲವನ್ನೂ ಸರಿಪಡಿಸುವ ದಾರಿಯೊಂದನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ."

ಸುನೀಲ್ ಕುಮಾರ್ ಓರ್ವ ಥಥೇರಾ (ಲೋಹ ಪಾತ್ರೆಗಳ ತಯಾರಕ). “ಯಾರೂ ಸರಿಪಡಿಸಲು ಸಾಧ್ಯವಾಗದ ವಸ್ತುಗಳನ್ನು ತೆಗೆದುಕೊಂಡು ಜನರು ನಮ್ಮ ಬಳಿಗೆ ಬರುತ್ತಾರೆ. ಮೆಕ್ಯಾನಿಕ್‌ಗಳೂ ಕೆಲವೊಮ್ಮೆ ತಮ್ಮ ಉಪಕರಣಗಳನ್ನು ನಮ್ಮಲ್ಲಿಗೆ ತರುತ್ತಾರೆ.”

ತಾಮ್ರ, ಕಂಚು ಮತ್ತು ಹಿತ್ತಾಳೆಗಳ ಅಡುಗೆ ಪಾತ್ರೆಗಳನ್ನು ಹಾಗೂ ಗೃಹೋಪಯೋಗಿ ಲೋಹದ ಸಾಮಾನುಗಳನ್ನು ತಯಾರಿಸುವ ಇವರಿಗೆ ಒಂದು ದೀರ್ಘವಾದ ಪರಂಪರೆಯಿದೆ. "ಯಾರಿಗೂ ತಮ್ಮ ಕೈಗಳು ಕೊಳೆಯಾಗುವುದು ಬೇಕಿಲ್ಲ,” ಎಂದು 25 ವರ್ಷಗಳಿಂದ ಥಥೇರಾ ಕುಶಲಕರ್ಮಿಯಾಗಿ ಕೆಲಸ ಮಾಡುತ್ತಿರುವ 40 ವರ್ಷ ಪ್ರಾಯದ ಸುನೀಲ್‌ ಕುಮಾರ್ ಹೇಳುತ್ತಾರೆ. "ನಾನು ಇಡೀ ದಿನ ಆಸಿಡ್, ಇದ್ದಲು ಮತ್ತು ಬೆಂಕಿಯ ಉರಿಯೊಂದಿಗೆ ಕೆಲಸ ಮಾಡುತ್ತೇನೆ. ಏಕೆಂದರೆ ನನಗೆ ಅದರಲ್ಲಿ ಆಸಕ್ತಿಯಿದೆ,” ಎನ್ನುತ್ತಾರೆ ಅವರು.

ಪಂಜಾಬ್‌ನಲ್ಲಿ ಥಥೇರಾಗಳು (ತಥಿಯಾರ್‌ಗಳು ಎಂದೂ ಕರೆಯುತ್ತಾರೆ) ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವರು. ಅವರ ಸಾಂಪ್ರದಾಯಿಕ ಉದ್ಯೋಗವೇ ಹಸ್ತಚಾಲಿತ ಉಪಕರಣಗಳನ್ನು ಬಳಸಿ ಕಬ್ಬಿಣವಲ್ಲದ ಇತರ ಲೋಹಗಳನ್ನು ಬಾಗಿಲಿನ ಹಿಡಿಕೆಗಳು, ಬೀಗಗಳು ಮೊದಲಾದ ಆಕಾರಗಳಿಗೆ ಅಚ್ಚು ಹಾಕುವುದು. 67 ವರ್ಷ ಪ್ರಾಯದ ಅವರ ತಂದೆ ಕೇವಲ್ ಕ್ರಿಶನ್‌ರವರ ಜೊತೆಗೆ ಸುನೀಲ್‌ ಕುಮಾರ್‌ ದುರಸ್ತಿ ಕೆಲಸಕ್ಕೆ ಬಳಸುವ ಗುಜಿರಿ ಸಾಮಾನುಗಳನ್ನು ಖರೀದಿಸುತ್ತಾರೆ.

ಕಳೆದ ಕೆಲವು ದಶಕಗಳಿಂದ ಸ್ಟೀಲ್‌ನಂತಹ ಕಬ್ಬಿಣದ ವಸ್ತುಗಳಿಗೆ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ಕೈಯಿಂದ ಲೋಹದ ವಸ್ತುಗಳನ್ನು ತಯಾರಿಸುವವರ ಬದುಕಿನ ದಿಕ್ಕೇ ಬದಲಾಗಿದೆ. ಇಂದು ಮನೆಗಳಲ್ಲಿ ಬಳಕೆಯಾಗುವ ಹೆಚ್ಚಿನ ಅಡುಗೆ ಸಲಕರಣೆಗಳು ಉಕ್ಕಿನಿಂದ ತಯಾರಿಸಲ್ಪಟ್ಟಿವೆ. ಹಾಗಾಗಿ, ಗಟ್ಟಿಯಾದ ಮತ್ತು ದುಬಾರಿಯಾದ ಹಿತ್ತಾಳೆ ಹಾಗೂ ತಾಮ್ರ ವಸ್ತುಗಳಿಗಿರುವ ಬೇಡಿಕೆ ತೀವ್ರವಾಗಿ ಕುಸಿದಿದೆ.

Sunil Kumar shows an old brass item that he made
PHOTO • Arshdeep Arshi
Kewal Krishan shows a brand new brass patila
PHOTO • Arshdeep Arshi

(ಎಡ) ಹಿತ್ತಾಳೆಯಿಂದ ತಾವು ತಯಾರಿಸಿದ ಹಳೆಯ ವಸ್ತುವನ್ನು ತೋರಿಸುತ್ತಿರುವ ಸುನೀಲ್ ಕುಮಾರ್ ಮತ್ತು ಅವರ ತಂದೆ ಕೇವಲ್ ಕ್ರಿಶನ್ (ಬಲ) ಹೊಚ್ಚ ಹೊಸ ಹಿತ್ತಾಳೆಯ ಪಾತ್ರೆ ಪಟೀಲವನ್ನು ತೋರಿಸುತ್ತಿದ್ದಾರೆ

ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಲೆಹ್ರಾಗಾಗಾ ಪಟ್ಟಣದಲ್ಲಿ ಸುನಿಲ್ ಮತ್ತು ಅವರ ಕುಟುಂಬ ಅನೇಕ ತಲೆಮಾರುಗಳಿಂದ ಈ ಕರಕುಶಲ ಕೆಲಸವನ್ನು ಮಾಡುತ್ತಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಇತರ ಎರಡು ಥಥೇರಾ ಕುಟುಂಬಗಳಿದ್ದವು. "ದೇವಸ್ಥಾನದ ಹತ್ತಿರ ಒಬ್ಬನ ಅಂಗಡಿಯಿತ್ತು. ಮೂರು ಲಕ್ಷ ರೂಪಾಯಿಗಳ ಲಾಟರಿ ಗೆದ್ದ ನಂತರ ಅವನು ಈ ವೃತ್ತಿಯನ್ನು ಬಿಟ್ಟು ತನ್ನ ಅಂಗಡಿಯ ಬಾಗಿಲು ಮುಚ್ಚಿದ," ಎಂದು ಆರ್ಥಿಕ ಸಮಸ್ಯೆಯ ಕಾರಣವನ್ನು ಕೊಡುತ್ತಾ ಸುನೀಲ್ ಹೇಳುತ್ತಾರೆ.

ಆದರೆ, ಈ ವೃತ್ತಿಯಲ್ಲೇ ಮುಂದುವರಿದ ಸುನಿಲ್ ಕುಮಾರ್ ಅವರಂತಹ ಥಥೇರಾಗಳು ಸ್ಟೀಲ್‌ ವಸ್ತುಗಳ ರಿಪೇರಿ ಮತ್ತು ಕ್ರಾಫ್ಟಿಂಗ್, ಈ ಎರಡೂ ಕೆಲಸಗಳನ್ನು ಮಾಡಲು ಪ್ರಾರಂಭಿಸಿದ್ದಾರೆ.

ಲೆಹ್ರಾಗಾಗಾದಲ್ಲಿ ಸುನಿಲ್ ಅವರ ಅಂಗಡಿಯಲ್ಲಿ ಮಾತ್ರ ಹಿತ್ತಾಳೆಯ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು, ರಿಪೇರಿ ಮತ್ತು ಪಾಲಿಶ್ ಮಾಡಲಾಗುತ್ತದೆ. ಇದಕ್ಕಾಗಿ ದೂರ ದೂರದ ಹಳ್ಳಿಗಳು ಮತ್ತು ನಗರಗಳಿಂದ ಗ್ರಾಹಕರು ಇಲ್ಲಿಗೆ ಬರುತ್ತಾರೆ. ಅಂಗಡಿಗೆ ಯಾವುದೇ ಹೆಸರು ಅಥವಾ ಸೈನ್‌ಬೋರ್ಡ್ ಇಲ್ಲದಿದ್ದರೂ, ಜನರು ಮಾತ್ರ ಇದನ್ನು ಥಥೇರಾ ವರ್ಕ್‌ಶಾಪ್‌ ಎಂದೇ ಗುರುತಿಸುತ್ತಾರೆ.

"ನಾವು ಮನೆಯಲ್ಲಿ ಹಿತ್ತಾಳೆಯ ಪಾತ್ರೆಗಳನ್ನು ಇಟ್ಟುಕೊಂಡಿದ್ದೇವೆ. ಅದಕ್ಕಿರುವ ಬೆಲೆ ಹಾಗೂ ಅದರ ಜೊತೆಗಿನ ಭಾವನಾತ್ಮಕ ಸಂಬಂಧಕ್ಕಿರುವ ಮೌಲ್ಯದಿಂದಾಗಿ ಅವುಗಳನ್ನು ಇಟ್ಟುಕೊಳ್ಳಲಾಗುತ್ತದೆ. ಆದರೆ, ದಿನನಿತ್ಯ ಅವುಗಳನ್ನು ಬಳಸುವುದಿಲ್ಲ,” ಎಂದು ಸುನೀಲ್‌ರವರ ಅಂಗಡಿಯಲ್ಲಿ ಸ್ವಚ್ಚಗೊಳಿಸಲಾದ ತಮ್ಮ ನಾಲ್ಕು ಬಾಟಿಗಳನ್ನು (ಬೋಗುಣಿಗಳು) ತೆಗೆದುಕೊಂಡು ಹೋಗಲು ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ದಿರ್ಬಾ ಗ್ರಾಮದಿಂದ ಬಂದ ಗ್ರಾಹಕರೊಬ್ಬರು ಹೇಳುತ್ತಾರೆ. “ಸ್ಟೀಲಿನ ಪಾತ್ರೆಗಳನ್ನು ಯಾವಾಗಲೂ ಬಳಸಿದರೆ ಅವುಗಳ ಮೌಲ್ಯ ಹೋಗುತ್ತದೆ. ಮತ್ತೆ ಅವುಗಳನ್ನು ಮಾರಿದರೆ ನಿಮಗೆ ಏನೂ ಸಿಗುವುದಿಲ್ಲ.  ಆದರೆ, ಹಿತ್ತಾಳೆಯ ಪಾತ್ರೆಗಳಿಗೆ ಇರುವ ಬೆಲೆ ಮಾತ್ರ ಹಾಗೆಯೇ ಇರುತ್ತದೆ,” ಎಂದು ಅವರು ಹೇಳುತ್ತಾರೆ.

ಹಿತ್ತಾಳೆ ವಸ್ತುಗಳಿಗೆ ಮರುಜೀವ ನೀಡುವಂತೆ ಸುನೀಲ್‌ರಂತಹ ಥಥೇರಾರನ್ನು ಎಲ್ಲರೂ ಕೇಳಿಕೊಳ್ಳುತ್ತಾರೆ. ನಾವು ಸೆಪ್ಟೆಂಬರ್‌ನಲ್ಲಿ ಅವರನ್ನು ಭೇಟಿಯಾಗುವಾಗ ಅವರು ಮದುವೆಯಲ್ಲಿ ತಾಯಿ ತನ್ನ ಮಗಳಿಗೆ ಕೊಡುವ ಪಾತ್ರೆಗಳ ಕೆಲಸ ಮಾಡುತ್ತಿದ್ದರು. ಈ ವಸ್ತುಗಳನ್ನು ಬಳಸಲಾಗಿಲ್ಲ, ಅನೇಕ ವರ್ಷಗಳಾಗಿರುವುದರಿಂದ ಇದರ ಬಣ್ಣ ಬದಲಾಗಿದೆ. ಸುನೀಲ್‌ ಈಗ ಇವುಗಳಿಗೆ ಮತ್ತೆ ಹೊಸತನ ನೀಡಲು ಪ್ರಯತ್ನಿಸುತ್ತಿದ್ದಾರೆ.

ಹಿತ್ತಾಳೆ ಪಾತ್ರೆಗಳ ಮೇಲಿರುವ ಆಕ್ಸಿಡೇಶನ್‌ನಿಂದ ಉಂಟಾದ ಹಸಿರು ಕಲೆಗಳನ್ನು ಪರಿಶೀಲಿಸುವುದರೊಂದಿಗೆ ಸ್ವಚ್ಛಗೊಳಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಆ ಕಲೆಗಳನ್ನು ತೆಗೆಯಲು ಪಾತ್ರೆಯನ್ನು ಸಣ್ಣ ಕುಲುಮೆಯ ಮೇಲಿಟ್ಟು ಬಿಸಿಮಾಡಲಾಗುತ್ತದೆ ಮತ್ತು ಶಾಖಕ್ಕೆ ಈ ಕಲೆಗಳು ಕಪ್ಪು ಬಣ್ಣಕ್ಕೆ ತಿರುಗಿದ ನಂತರ ದುರ್ಬಲ ಆಸಿಡ್‌ನಿಂದ ಸ್ವಚ್ಛಗೊಳಿಸಬೇಕು; ನಂತರ ಮತ್ತೆ ಹೊಳಪನ್ನು ನೀಡಲು ಹುಣಸೆಹಣ್ಣಿನ ಪೇಸ್ಟನ್ನು ಪಾತ್ರೆಯ ಒಳ ಹೊರಗೆ ತಿಕ್ಕಿ ತಿಕ್ಕಿ ಉಜ್ಜಲಾಗುತ್ತದೆ. ಆಗ ಪಾತ್ರೆ ಕಂದು ಬಣ್ಣದಿಂದ ಕೆಂಪು-ಚಿನ್ನದ ಬಣ್ಣವನ್ನು ಪಡೆಯುತ್ತದೆ.

Sunil Kumar removes the handles of a kadhai before cleaning it. The utensil is going to be passed on from a mother to her daughter at her wedding.
PHOTO • Arshdeep Arshi
Sunil Kumar heats the inside of the kadhai to remove the green stains caused by oxidation
PHOTO • Arshdeep Arshi

ಕಡಾಯಿಯನ್ನು ಸ್ವಚ್ಛಗೊಳಿಸುವ ಮೊದಲು ಅದರ ಹಿಡಿಕೆಗಳನ್ನು ತೆಗೆಯುತ್ತಿರುವ ಸುನಿಲ್ ಕುಮಾರ್ (ಎಡ). ಈ ಪಾತ್ರೆಯು ಮದುವೆಯಲ್ಲಿ ತಾಯಿಯ ಕೈಯಿಂದ ಮಗಳಿಗೆ ಹೋಗುತ್ತದೆ. ಆಕ್ಸಿಡೇಶನ್‌ನಿಂದ ಉಂಟಾದ ಹಸಿರು ಕಲೆಗಳನ್ನು ತೆಗೆಯಲು ಅವರು ಕಡಾಯಿಯ ಒಳಭಾಗವನ್ನು ಬಿಸಿಮಾಡುತ್ತಿದ್ದಾರೆ

Sunil rubs tamarind on the kadhai to bring out the golden shine. He follows it up after rubbing diluted acid
PHOTO • Arshdeep Arshi
Sunil rubs tamarind on the kadhai to bring out the golden shine. He follows it up after rubbing diluted acid
PHOTO • Arshdeep Arshi

ಸುನಿಲ್ ಅವರು ಪಾತ್ರೆಗೆ ಚಿನ್ನದ ಹೊಳಪನ್ನು ನೀಡಲು ಹುಣಸೆಹಣ್ಣನ್ನು (ಎಡ) ಕಡಾಯಿಯ ಮೇಲೆ ಉಜ್ಜುತ್ತಾರೆ. ನಂತರ ದುರ್ಬಲ ಆಸಿಡ್‌ನಿಂದ ಉಜ್ಜತ್ತಾರೆ

ಸ್ವಚ್ಚಗೊಳಿಸಿದ ನಂತರ ಸುನಿಲ್ ಗ್ರೈಂಡಿಂಗ್‌ ಮೆಷಿನ್‌ ಬಳಸಿ ಅವುಗಳನ್ನು ಚಿನ್ನದ ಬಣ್ಣಕ್ಕೆ ತಿರುಗಿಸುತ್ತಾರೆ. "ನಮ್ಮಲ್ಲಿ ಗ್ರೈಂಡರ್ ಇಲ್ಲದಿದ್ದಾಗ, ಇದನ್ನು ಮಾಡಲು ರೇಗ್ಮಾರ್ [ಸ್ಯಾಂಡ್ ಪೇಪರ್] ಬಳಸುತ್ತಿದ್ದೆವು," ಎಂದು ಅವರು ಹೇಳುತ್ತಾರೆ.

ಮುಂದಿನ ಹಂತದಲ್ಲಿ ಟಿಕ್ಕಾ, ಅಂದರೆ ಪಾತ್ರೆಯ ಮೇಲೆ ಜನಪ್ರಿಯ ಡಿಸೈನನ್ನು ಡಾಟ್ ಮಾಡಲಾಗುತ್ತದೆ. ಆದರೆ, ಕೆಲವು ಗ್ರಾಹಕರು ಸರಳವಾಗಿ ಹೊಳಪು ನೀಡಲು ಅಥವಾ ಅವರಿಗೆ ಬೇಕಾದ ನಿರ್ದಿಷ್ಟ ಡಿಸೈನ್‌ ಮಾಡಲು ಹೇಳುತ್ತಾರೆ.

ಕಡಾಯಿಗೆ (ದೊಡ್ಡ ಪಾತ್ರೆ) ಚುಕ್ಕೆ ಹಾಕುವ ಮೊದಲು, ಸುನಿಲ್ ಆ ಪಾತ್ರೆಯ ಮೇಲೆ ಸ್ವಚ್ಛ ಮತ್ತು ಹೊಳೆಯುವ ಚುಕ್ಕೆಗಳನ್ನು ಮೂಡಿಸಲು ಬಳಸುವ ಬಡಿಗೆಗಳು ಹಾಗೂ ಸುತ್ತಿಗೆಗಳಿಗೆ ಪಾಲಿಶ್ ಮಾಡುತ್ತಾರೆ. ನಯಗೊಳಿಸಿದ ಈ ಸಾಧನಗಳು ಕನ್ನಡಿಯಂತೆ ಹೊಳೆಯುತ್ತವೆ. ನಂತರ ಅವರು ಕಡಾಯಿಯನ್ನು ಬಡಿಗೆಯ ಮೇಲೆ ಇರಿಸಿ, ವೃತ್ತಾಕಾರವಾಗಿ ಪಾತ್ರೆಯನ್ನು ತಿರುಗಿಸುತ್ತಾ ಹೊಡೆಯುತ್ತಾರೆ. ಆಗ ಪಾತ್ರೆಯ ಮೇಲೆ ಚುಕ್ಕೆಗಳು ಮೂಡಿ, ಚಿನ್ನದ ಹೊಳಪು ಬರುತ್ತದೆ.

ಹಿತ್ತಾಳೆಯ ಪಾತ್ರೆಗಳನ್ನು ಸರಿಯಾಗಿ ಬಳಸದೆ ಅಥವಾ ಹಲವು ವರ್ಷಗಳಿಂದ ಬಳಸದೆ ಇದ್ದರೆ, ಅವುಗಳ ಚಿನ್ನದ ಹೊಳಪನ್ನು ಮರಳಿ ತರಲು ಸ್ವಚ್ಛಗೊಳಿಸಿ ಪಾಲಿಶ್ ಮಾಡಬೇಕು.

The kadhai shines after being rubbed with diluted acid and the green stains are gone .
PHOTO • Arshdeep Arshi
Sunil Kumar then uses the grinder to give a golden hue
PHOTO • Arshdeep Arshi

ದುರ್ಬಲ ಆಸಿಡ್‌ನಿಂದ ಉಜ್ಜಿದಾಗ ಕಡಾಯಿ ಹೊಳೆಯುತ್ತದೆ ಮತ್ತು ಹಸಿರು ಕಲೆಗಳು ಮಾಯವಾಗುತ್ತವೆ. ನಂತರ ಸುನಿಲ್ ಕುಮಾರ್ ಗ್ರೈಂಡರ್ ಬಳಸಿ ಅದಕ್ಕೆ ಚಿನ್ನದ ಬಣ್ಣವನ್ನು ನೀಡುತ್ತಾರೆ

Sunil Kumar dotting a kadhai with a polished hammer
PHOTO • Arshdeep Arshi
Sunil Kumar dotting a kadhai with a polished hammer
PHOTO • Arshdeep Arshi

ಪಾಲಿಶ್ ಮಾಡಿದ ಸುತ್ತಿಗೆ ಬಳಸಿ ಕಡಾಯಿಗೆ ಚುಕ್ಕೆ ಹಾಕುತ್ತಿರುವ ಸುನೀಲ್ ಕುಮಾರ್

ಅಡುಗೆಗೆ ಬಳಸುವ ಹಿತ್ತಾಳೆಯ ಪಾತ್ರೆಗಳಿಗೆ ತವರ ಲೇಪನ ಹಾಕಬೇಕು. ಇದಕ್ಕೆ ಕಲಾಯಿ ಹಾಕುವುದು ಎಂದು ಕರೆಯುತ್ತಾರೆ. ಹಿತ್ತಾಳೆ ಮತ್ತು ಇತರ ಕಬ್ಬಿಣವನ್ನು ಹೊರತುಪಡಿಸಿದ ಲೋಹಗಳ ಪಾತ್ರೆಗಳ ಒಳ ಮೇಲ್ಮೈಯನ್ನು ತವರದ ಪದರದಿಂದ ಲೇಪಿಸಬೇಕು. ಆಗ ಅವುಗಳಲ್ಲಿ ಬೇಯಿಸಿದ ಅಥವಾ ತೆಗೆದಿಡಲಾದ ಆಹಾರವಸ್ತುಗಳು ಪಾತ್ರೆಯ ಲೋಹದೊಂದಿಗೆ ರಾಸಾಯನಿಕ ಪ್ರತಿಕ್ರಿಯೆಗೆ ಒಳಗಾಗುವುದಿಲ್ಲ.

‘ಭಾಂಡೆ ಕಲೈ ಕರಾ ಲೋ!’ - ಕೆಲವು ವರ್ಷಗಳ ಹಿಂದೆ ಬೀದಿ ವ್ಯಾಪಾರಿಗಳು ಹಿತ್ತಾಳೆಯ ಪಾತ್ರೆಗಳಿಗೆ ತವರ ಲೇಪನ ಮಾಡಿಕೊಡುವುದಾಗಿ ಗ್ರಾಹಕರನ್ನು ಹೀಗೆ ಕೂಗಿ ಸೆಳೆಯುತ್ತಿದ್ದರು. ಪಾತ್ರೆಗಳನ್ನು ಸರಿಯಾಗಿ ಬಳಸಿದರೆ ಐದು ವರ್ಷಗಳ ಕಾಲ ಕಲಾಯಿ ಇಲ್ಲದೆ ಉಪಯೋಗಿಸಬಹುದು ಎನ್ನುತ್ತಾರೆ ಸುನೀಲ್. ಆದರೂ, ಕೆಲವರು ಸುಮಾರು ಒಂದು ವರ್ಷ ಬಳಸಿದ ನಂತರ ಪಾತ್ರೆಗೆ ಕಲಾಯಿ ಹಾಕಿಸುತ್ತಾರೆ.

ಕಲಾಯಿ ಹಾಕುವಾಗ ಹಿತ್ತಾಳೆ ಪಾತ್ರೆಯನ್ನು ದುರ್ಬಲ ಆಸಿಡ್ ಮತ್ತು ಹುಣಸೆಹಣ್ಣಿನ ಪೇಸ್ಟ್‌ನಿಂದ ಸ್ವಚ್ಛಗೊಳಿಸಲಾಗುತ್ತದೆ. ನಂತರ ಪಿಂಕ್‌ ಬಣ್ಣಕ್ಕೆ ತಿರುಗುವವರೆಗೆ ಬೆಂಕಿಯ ಉರಿಯ ಮೇಲಿಟ್ಟು ಬಿಸಿಮಾಡಲಾಗುತ್ತದೆ. ಪಾತ್ರೆಯ ಒಳಭಾಗವನ್ನು ಜನ ನೌಸಾದರ್ ಎಂದು ಕರೆಯುವ ಕಾಸ್ಟಿಕ್ ಸೋಡಾ ಮತ್ತು ಅಮೋನಿಯಂ ಕ್ಲೋರೈಡ್‌ನ ಪುಡಿಯನ್ನು ಬೆರೆಸಿದ ನೀರನ್ನು ಚಿಮುಕಿಸುತ್ತಾ ಟಿನ್ ಕಾಯಿಲನಿಂದ ಉಜ್ಜುತ್ತಾರೆ. ನಂತರ, ಹತ್ತಿಯ ಸ್ವ್ಯಾಬ್‌ನಿಂದ ಸರಿಯಾಗಿ ಉಜ್ಜುವಾಗ ಬಿಳಿ ಹೊಗೆ ಬರುತ್ತದೆ. ಇದಾಗಿ, ಮ್ಯಾಜಿಕ್‌ನಂತೆ ಕೆಲವೇ ನಿಮಿಷಗಳಲ್ಲಿ ಪಾತ್ರೆಯ ಒಳಭಾಗ ಬೆಳ್ಳಿಯಂತೆ ಹೊಳೆಯುತ್ತದೆ. ಇದಾದ ಮೇಲೆ, ಪಾತ್ರೆಯನ್ನು ತಣ್ಣನೆಯ ನೀರಿನಲ್ಲಿ ಅದ್ದುತ್ತಾರೆ.

ಕೆಲವು ದಶಕಗಳಿಂದ ಸ್ಟೀಲ್ ಪಾತ್ರೆಗಳು ಹಿತ್ತಾಳೆಯ ಪಾತ್ರೆಗಳಿಗಿಂತ‌ ಹೆಚ್ಚು ಜನಪ್ರಿಯತೆಯನ್ನು ಗಳಿಸಿವೆ. ಏಕೆಂದರೆ ಅವುಗಳನ್ನು ತೊಳೆಯುವುದು ಸುಲಭ ಮತ್ತು ಆಹಾರದೊಂದಿಗೆ ರಾಸಾಯನಿಕ ಪ್ರತಿಕ್ರಿಯೆಗೆ ಒಳಗಾಗುವುದಿಲ್ಲ. ಹಿತ್ತಾಳೆಯ ಪಾತ್ರೆಗಳು ಹೆಚ್ಚು ಬಾಳಿಕೆ ಬಂದರೂ, ಅವುಗಳ ಮೌಲ್ಯ ಹೆಚ್ಚು ಇದ್ದರೂ, ಅವುಗಳನ್ನು ತುಂಬಾ ಕಾಳಜಿಯಿಂದ ಬಳಸಬೇಕು. ಬಳಸಿದ ತಕ್ಷಣ ಅವುಗಳನ್ನು ಸ್ವಚ್ಛಗೊಳಿಸುವಂತೆ ಸುನಿಲ್ ಅವರು ತಮ್ಮ ಗ್ರಾಹಕರಿಗೆ ಸಲಹೆ ನೀಡುತ್ತಾರೆ.

Nausadar is a powdered mix of caustic soda and ammonium chloride mixed in water and is used in the process of kalai
PHOTO • Arshdeep Arshi
Tin is rubbed on the inside of it
PHOTO • Arshdeep Arshi

ಎಡ: ನೌಸಾದರ್ ಎಂದು ಕರೆಯುವ ಕಾಸ್ಟಿಕ್ ಸೋಡಾ, ಅಮೋನಿಯಂ ಕ್ಲೋರೈಡ್ ಪುಡಿಯನ್ನು ಬೆರೆಸಿದ ನೀರನ್ನು ಕಲಾಯಿ ಹಾಕುವಾಗ ಬಳಸಲಾಗುತ್ತದೆ. ಬಲ: ಅದರ ಒಳಭಾಗವನ್ನು ಟಿನ್‌ನಿಂದ ಉಜ್ಜಲಾಗುತ್ತದೆ

The thathera heats the utensil over the flame, ready to coat the surface .
PHOTO • Arshdeep Arshi
Sunil Kumar is repairing a steel chhanni (used to separate flour and bran) with kalai
PHOTO • Arshdeep Arshi

ಎಡಕ್ಕೆ: ಥಥೇರಾ ಪಾತ್ರೆಯನ್ನು ಉರಿಯಲ್ಲಿ ಬಿಸಿ ಮಾಡಿ,ಅದರ ಮೇಲ್ಮೈಯನ್ನು ಲೇಪನಕ್ಕೆ ಸಿದ್ಧಪಡಿಸುತ್ತಾರೆ. ಬಲ:ಸ್ಟೀಲಿನ ಛನ್ನಿಗೆ (ಹಿಟ್ಟಿನಿಂದ ಹೊಟ್ಟುನ್ನು ಬೇರ್ಪಡಿಸಲು ಬಳಸುವ ಸಾಧನ) ಕಲಾಯಿ ಹಾಕುತ್ತಿರುವ ಸುನಿಲ್ ಕುಮಾರ್

*****

ಸುನಿಲ್ ಅವರ ತಂದೆ, ಕೇವಲ್ ಕ್ರಿಶನ್ ಅವರು 50 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮಲೇರ್ಕೋಟ್ಲಾದಿಂದ ಲೆಹ್ರಾಗಾಗಾಕ್ಕೆ ಬಂದಿದ್ದರು. "ಮೊದಲು ನಾನು ಕೆಲವು ದಿನಗಳವರೆಗೆ ಇದ್ದು ಹೋಗಲು ಬರುತ್ತಿದ್ದೆ, ಆದರೆ ನಂತರ ಬಂದ ನಾನು ಇಲ್ಲಿಯೇ ಉಳಿದುಕೊಂಡೆ," ಎಂದು ಅವರು ಹೇಳುತ್ತಾರೆ. ಈ ಕುಟುಂಬ ಅನೇಕ ತಲೆಮಾರುಗಳಿಂದ ಪಾತ್ರೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಕೇವಲ್ ಅವರ ತಂದೆ ಕೇದಾರ್ ನಾಥ್ ಮತ್ತು ಅಜ್ಜ ಜ್ಯೋತಿ ರಾಮ್ ನುರಿತ ಕುಶಲಕರ್ಮಿಗಳಾಗಿದ್ದರು. ಆದರೆ ಸುನಿಲ್ ಅವರಿಗೆ ತಮ್ಮ ಮಗ ಈ ವೃತ್ತಿಯಲ್ಲಿ ಮುಂದುವರಿಯುತ್ತಾನೆ ಎಂಬ ನಂಬಿಕೆಯಿಲ್ಲ: "ನನ್ನ ಮಗನಿಗೆ ಇದರಿಂದ ಸಂತೋಷ ಸಿಕ್ಕಿದರೆ ಮುಂದುವರಿಸಬಹುದು."

ಈಗಾಗಲೇ ಸುನೀಲ್ ಅವರ ಸಹೋದರ ಈ ಪಾರಂಪರಿಕ ಉದ್ಯೋಗದಿಂದ ದೂರ ಸರಿದು, ಖಾಸಗಿ ಟೆಲಿಕಾಂ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇತರ ಸಂಬಂಧಿಕರು ಸಹ ಇತರ ಅಂಗಡಿ ವ್ಯಾಪಾರಗಳಲ್ಲಿ ತೊಡಗಿಕೊಂಡಿದ್ದಾರೆ.

ಸುನಿಲ್ ಅವರು ಈ ವೃತ್ತಿಯನ್ನು ಕಲಿತದ್ದು ಕೇವಲ್ ಕ್ರಿಶನ್ ಅವರಿಂದ. "ನಾನು 10 ನೇ ತರಗತಿಯಲ್ಲಿದ್ದಾಗ ನನ್ನ ತಂದೆ ಒಮ್ಮೆ ಗಾಯಗೊಂಡಿದ್ದರು. ನಾನು ನನ್ನ ವಿದ್ಯಾಭ್ಯಾಸವನ್ನು ನಿಲ್ಲಿಸಿ ನಮ್ಮ ಜೀವನೋಪಾಯಕ್ಕಾಗಿ ಈ ವ್ಯಾಪಾರವನ್ನು ಮಾಡಬೇಕಾಯಿತು," ಎಂದು ಅವರು ತಮ್ಮ ಪಾತ್ರೆಗಳಿಗೆ ಸುತ್ತಿಗೆಯಿಂದ ಬಡಿಯುತ್ತಾ ಹೇಳುತ್ತಾರೆ. “ಶಾಲಾ ವಿದ್ಯಾರ್ಥಿಯಾಗಿದ್ದಾಗ ನಾನು ನನ್ನ ಬಿಡುವಿನ ವೇಳೆಯಲ್ಲಿ ಅಂಗಡಿಗೆ ಬರುತ್ತಿದ್ದೆ ಮತ್ತು ಏನಾದರೂ ಹೊಸತನ್ನು ಮಾಡುವ ಪ್ರಯೋಗ ಅಥವಾ ಬೇರೇನಾದರೂ ಕೆಲಸ ಮಾಡುತ್ತಿದ್ದೆ. ಒಮ್ಮೆ ನಾನು ಹಿತ್ತಾಳೆಯಲ್ಲಿ ಏರ್ ಕೂಲರ್‌ನ ಪ್ರತಿಕೃತಿಯನ್ನು ಮಾಡಿದ್ದೆ,” ಎಂದು ಹೆಮ್ಮೆಯಿಂದ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

ಸ್ವತಃ ತಾವೇ ತಯಾರಿಸಿ ಮಾರಾಟ ಮಾಡಿದ ಮೊದಲ ವಸ್ತು ಸಣ್ಣ ಪಟೀಲ. ಅಂದಿನಿಂದ ಅವರು ಬೇರೆ ಕೆಲಸವಿಲ್ಲದೇ ಇದ್ದಾಗ ಹೊಸದೇನಾದರೂ ಮಾಡಲು ಪ್ರಯತ್ನಿಸಲು ತೊಡಗಿಕೊಂಡರು ಎಂದು ಅವರು ಹೇಳುತ್ತಾರೆ. "ನಾನು ನನ್ನ ತಂಗಿಗಾಗಿ ಮುಖದ ಡಿಸೈನ್‌ ಇರುವ ಹಣ ತೆಗೆದಿಡುವ ಪೆಟ್ಟಿಗೆಯನ್ನು ಮಾಡಿಕೊಟ್ಟಿದ್ದೆ," ಎಂದು ಅವರು ಹೇಳುತ್ತಾರೆ. ತಮ್ಮ ಮನೆಯಲ್ಲಿ ಬಳಸಲು ಕ್ಯಾಂಪರ್‌ನಿಂದ (ಕುಡಿಯುವ ನೀರು ಸಂಗ್ರಹಣಾ ಘಟಕ) ನೀರು ತರಲು ಅವರು ಒಂದೋ ಎರಡು ಹಿತ್ತಾಳೆಯ ಪಾತ್ರೆಗಳನ್ನು ಕೂಡ ಮಾಡಿದ್ದರು.

ಕೆಲವು ದಶಕಗಳಿಂದ ಸ್ಟೀಲ್ ಪಾತ್ರೆಗಳು ಹಿತ್ತಾಳೆಯ ಪಾತ್ರೆಗಳಿಗಿಂತ‌ ಹೆಚ್ಚು ಜನಪ್ರಿಯತೆಯನ್ನು ಗಳಿಸಿವೆ. ಏಕೆಂದರೆ ಅವುಗಳನ್ನು ತೊಳೆಯುವುದು ಸುಲಭ ಮತ್ತು ಆಹಾರದೊಂದಿಗೆ ರಾಸಾಯನಿಕ ಪ್ರತಿಕ್ರಿಯೆಗೆ ಒಳಗಾಗುವುದಿಲ್ಲ

ಪಂಜಾಬ್‌ನ ಜಂಡ್ಯಾಲ ಗುರುನಲ್ಲಿರುವ ಥಥೇರಾ ಸಮುದಾಯವನ್ನು 2014ರಲ್ಲಿ ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಿದೆ. ಯುನೆಸ್ಕೋದ ಮಾನ್ಯತೆ ಮತ್ತು ಅಮೃತಸರದಾದ್ಯಂತ ಇರುವ ಗುರುದ್ವಾರಗಳಲ್ಲಿ ಹಿತ್ತಾಳೆಯ ಪಾತ್ರೆಗಳನ್ನು ಬಳಸುವುದರಿಂದ ಥಥೇರಾ ಸಮುದಾಯ ಮತ್ತು ಅವರ ವ್ಯಾಪಾರವು ಇನ್ನೂ ಜೀವಂತವಾಗಿರುವ ಕೆಲವೇ ಕೆಲವು ಸ್ಥಳಗಳಲ್ಲಿ ಇದೂ ಒಂದಾಗಿದೆ.

ದೊಡ್ಡ ಡೆಗ್‌ಗಳು (ಆಹಾರವನ್ನು ಬೇಯಿಸುವ ಪಾತ್ರೆಗಳು) ಮತ್ತು ಬಾಲ್ಟಿಗಳು (ಬಕೆಟ್‌ಗಳು) ಇಂದಿಗೂ ಗುರುದ್ವಾರಗಳಲ್ಲಿ ಅಡುಗೆ ಬೇಯಿಸಲು ಮತ್ತು ಊಟ ಬಡಿಸಲು ಬಳಸಲಾಗುತ್ತದೆ. ಆದರೂ, ಕೆಲವು ಗುರುದ್ವಾರಗಳು ನಿರ್ವಹಣೆಯ ಸಮಸ್ಯೆಗಳಿಂದಾಗಿ ಹಿತ್ತಾಳೆಯ ಪಾತ್ರೆಗಳ ಬಳಕೆಯಿಂದ ದೂರ ಸರಿದಿವೆ.

"ನಾವು ಈಗ ಹೆಚ್ಚಾಗಿ ದುರಸ್ತಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ. ಹೊಸ ಪಾತ್ರೆಗಳನ್ನು ತಯಾರಿಸಲು ನಮಗೆ ಸಮಯವಿಲ್ಲ,” ಎಂದು ಸುನಿಲ್ ಅವರು ಹಿತ್ತಾಳೆ ಮತ್ತು ಕಂಚಿನ ಪಾತ್ರೆಗಳನ್ನು ತಯಾರಿಸುತ್ತಿದ್ದ ಕಾಲದಲ್ಲಿ ಆಗಿರುವ ಗಂಭೀರ ಬದಲಾವಣೆಯನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ. ಒಬ್ಬ ಕುಶಲಕರ್ಮಿ ದಿನಕ್ಕೆ 10-12 ಪಟೀಲಗಳನ್ನು (ಆಹಾರ ಶೇಖರಿಸುವ ಮಡಕೆಗಳು) ಮಾಡಬಹುದು. ಆದರೂ, ಬದಲಾಗುತ್ತಿರುವ ಬೇಡಿಕೆ, ವೆಚ್ಚ ಮತ್ತು ಸಮಯದ  ಆಭಾವದ ಕಾರಣಗಳಿಂದಾಗಿ ಪಾತ್ರೆ ತಯಾರಕರು ಉತ್ಪಾದನೆಯಿಂದ ಬಹಳ ದೂರ ಸರಿದಿದ್ದಾರೆ.

"ನಾವು ಆರ್ಡರ್ ಕೊಟ್ಟರೆ ಮಾಡುತ್ತೇವೆ. ಅವುಗಳನ್ನು ತಯಾರಿಸಿ ಇಲ್ಲಿ ಸಂಗ್ರಹಿಸಿಡುವುದಿಲ್ಲ," ಎಂದು ಅವರು ಹೇಳುತ್ತಾರೆ. ದೊಡ್ಡ ದೊಡ್ಡ ಕಂಪನಿಗಳು ಪಾತ್ರೆಗಳು ಮತ್ತು ಇತರ ಉತ್ಪನ್ನಗಳನ್ನು ಥಥೇರಾಗಳಿಂದ ಖರೀದಿಸಿ, ನಾಲ್ಕು ಪಟ್ಟು ಬೆಲೆಗೆ ಮಾರಾಟ ಮಾಡುತ್ತವೆ.

ಬಳಸಲಾದ ಲೋಹದ ತೂಕ ಮತ್ತು ಗುಣಮಟ್ಟಕ್ಕೆ, ಹಾಗೆಯೇ ಪೀಸ್‌ಗೆ ಅನುಗುಣವಾಗಿ ಥಥೇರಾಗಳು ಹಿತ್ತಾಳೆಯ ಪಾತ್ರೆಗಳ ಬೆಲೆಯನ್ನು ನಿಗದಿಪಡಿಸುತ್ತಾರೆ. ಉದಾಹರಣೆಗೆ, ಒಂದು ಕಡಾಯಿಯನ್ನು ಪ್ರತಿ ಕಿಲೋಗ್ರಾಂಗೆ 800 ರುಪಾಯಿಯಂತೆ ಮಾರಲಾಗುತ್ತದೆ. ಹಿತ್ತಾಳೆಯ ಪಾತ್ರೆಗಳನ್ನು ಅವುಗಳ ತೂಕಕ್ಕೆ ಅನುಗುಣವಾಗಿ ಮಾರಾಟ ಮಾಡುವುದರಿಂದ ಸ್ಟೀಲ್ ಪಾತ್ರೆಗಳಿಗಿಂತ ಇವುಗಳ ಬೆಲೆ ಹೆಚ್ಚು.

As people now prefer materials like steel, thatheras have also shifted from brass to steel. Kewal Krishan shows a steel product made by his son Sunil.
PHOTO • Arshdeep Arshi
Kewal dotting a brass kadhai which is to pass from a mother to a daughter
PHOTO • Arshdeep Arshi

ಎಡ: ಜನರು ಈಗ ಸ್ಟೀಲ್‌ನಂತಹ ಪಾತ್ರೆಗಳನ್ನು ಬಳಸುತ್ತಿದ್ದಾರೆ, ಥಥೇರಗಳು ಹಿತ್ತಾಳೆಯಿಂದ ಉಕ್ಕಿನ ಕೆಲಸಕ್ಕೆ ಬದಲಾಗಿದ್ದಾರೆ. ತಮ್ಮ ಮಗ ಸುನಿಲ್ ತಯಾರಿಸಿದ ಸ್ಟೀಲ್ ಉತ್ಪನ್ನವನ್ನು ತೋರಿಸುತ್ತಿರುವ ಕೇವಲ್ ಕ್ರಿಶನ್. ಬಲ: ಮದುವೆಯಲ್ಲಿ ತಾಯಿ ಮಗಳಿಗೆ ಕೊಡುವ ಹಿತ್ತಾಳೆಯ ಕಡಾಯಿಗೆ ಚುಕ್ಕಿ ಹಾಕುತ್ತಿರುವ ಸುನಿಲ್

Brass utensils at Sunil shop.
PHOTO • Arshdeep Arshi
An old brass gaagar (metal pitcher) at the shop. The gaagar was used to store water, milk and was also used to create music at one time
PHOTO • Arshdeep Arshi

ಎಡ: ಸುನಿಲ್ ಅವರ ಅಂಗಡಿಯಲ್ಲಿರುವ ಹಿತ್ತಾಳೆ ಪಾತ್ರೆಗಳು. ಬಲ: ಅಂಗಡಿಯಲ್ಲಿರುವ ಹಳೆಯ ಹಿತ್ತಾಳೆಯ ಗಾಗರ್ (ಲೋಹದ ಹೂಜಿ). ಗಾಗರ್ ಅನ್ನು ನೀರು, ಹಾಲು ಸಂಗ್ರಹಿಸಿಡಲು ಬಳಸಲಾಗುತ್ತಿತ್ತು ಮತ್ತು ಒಂದು ಕಾಲದಲ್ಲಿ ನಾದ ಹೊಮ್ಮಿಸಲು ಸಹ ಬಳಸಲಾಗುತ್ತಿತ್ತು

“ನಾವು ಹೊಸ ಪಾತ್ರೆಗಳನ್ನು ತಯಾರಿಸುತ್ತಿದ್ದೆವು. ಸುಮಾರು 50 ವರ್ಷಗಳ ಹಿಂದೆ, ಸರ್ಕಾರ ನಮಗೆ ಸಬ್ಸಿಡಿಯಲ್ಲಿ ಜಿಂಕ್ ಮತ್ತು ತಾಮ್ರವನ್ನು ತೆಗೆದುಕೊಳ್ಳಲು ಕೋಟಾಗಳನ್ನು ನೀಡಿತ್ತು. ಆದರೆ ಈಗ ಸರ್ಕಾರವು ಕಾರ್ಖಾನೆಗಳಿಗೆ ಕೋಟಾವನ್ನು ನೀಡುತ್ತಿದೆ, ನಮ್ಮಂತಹ ಸಣ್ಣ ಉದ್ಯಮಿಗಳಿಗೆ ನೀಡುತ್ತಿಲ್ಲ,” ಎಂದು ಕೇವಲ್ ಕ್ರಿಶನ್ ಹೇಳುತ್ತಾರೆ. ಅರವತ್ತರ ಹರೆಯದಲ್ಲಿ ತಮ್ಮ ಸಮಯವನ್ನು ಅಂಗಡಿ ಕೆಲಸದ ಮೇಲ್ವಿಚಾರಣೆ ನೋಡಿಕೊಳ್ಳುತ್ತಾ ಕಳೆಯುತ್ತಿದ್ದಾರೆ ಮತ್ತು ಸರ್ಕಾರ ಸಬ್ಸಿಡಿಗಾಗಿ ಎದುರುನೋಡುತ್ತಿದ್ದಾರೆ.

ಅವರು ಸಾಂಪ್ರದಾಯಿಕವಾಗಿ 26 ಕಿಲೋ ಸತು ಮತ್ತು 14 ಕಿಲೋ ತಾಮ್ರವನ್ನು ಮಿಶ್ರಣ ಮಾಡಿ ಹೇಗೆ ಹಿತ್ತಾಳೆಯನ್ನು ತಯಾರಿಸುತ್ತಿದ್ದರು ಎಂಬುದನ್ನು ಕೇವಾಲ್ ವಿವರಿಸಿದರು. "ಲೋಹಗಳನ್ನು ಬಿಸಿಮಾಡಿ ಒಟ್ಟಿಗೆ ಬೆರೆಸಲಾಗುತ್ತದೆ. ನಂತರ ಸಣ್ಣ ಬೋಗುಣಿಗಳಲ್ಲಿ ಹಾಕಿ ಒಣಗಲು ಬಿಡಲಾಗುತ್ತದೆ. ನಂತರ ಬೌಲ್ ಆಕಾರದ ಈ ಲೋಹದ ತುಂಡುಗಳನ್ನು ಹಾಳೆಗಳಾಗಿ ಸುತ್ತಿ, ಅವನ್ನು ವಿವಿಧ ಪಾತ್ರೆಗಳು ಅಥವಾ ಕ್ರಾಫ್ಟ್‌ ಪೀಸ್‌ಗಳನ್ನಾಗಿಸಲು ಬೇರೆ ಬೇರೆ ಆಕಾರಗಳಿಗೆ ಅಚ್ಚು ಹಾಕಲಾಗುತ್ತದೆ,” ಎಂದು ಅವರು ಹೇಳುತ್ತಾರೆ.

ಸದ್ಯ ಈ ಪ್ರದೇಶದಲ್ಲಿ ಕೆಲವೇ ಕೆಲವು ರೋಲಿಂಗ್ ಮಿಲ್‌ಗಳು ಉಳಿದಿವೆ. ಅಲ್ಲಿಂದ ಥಥೇರಾಗಳು ತಮ್ಮ ಕಲಾಕೃತಿಗಳು ಅಥವಾ ಪಾತ್ರೆಗಳಿಗೆ ಅಚ್ಚು ಮಾಡಲು ಬೇಕಾದ ಲೋಹದ ಹಾಳೆಗಳನ್ನು ಪಡೆಯುತ್ತಾರೆ. “ನಾವು ಅವನ್ನು ಅಮೃತಸರದ ಜಂಡಿಯಾಲ ಗುರುನಿಂದ (ಲೆಹ್ರಗಾಗಾದಿಂದ 234 ಕಿಲೋಮೀಟರ್) ಇಲ್ಲವೇ, ಹರಿಯಾಣದ ಜಗಧಾರಿಯಿಂದ (203 ಕಿಲೋಮೀಟರ್ ದೂರ) ತೆಗೆದುಕೊಳ್ಳುತ್ತೇವೆ. ನಾವು ಮೆಟಲ್‌ ಶೀಟ್‌ಗಳನ್ನು ತೆಗೆದುಕೊಂಡು, ಗ್ರಾಹಕರಿಗೆ ಬೇಕಾದ ಪಾತ್ರೆಗಳನ್ನು ಮಾಡಿಕೊಡುತ್ತೇವೆ,” ಎಂದು ಸುನಿಲ್ ವಿವರಿಸುತ್ತಾರೆ.

ಕೇವಲ್ ಅವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ (ಸೆಪ್ಟೆಂಬರ್‌ನಲ್ಲಿ ಘೋಷಿಸಲಾಗಿದೆ)ಬಗ್ಗೆ ಉಲ್ಲೇಖಿಸುತ್ತಾರೆ.  ಈ ಯೋಜನೆಯ ಅಡಿಯಲ್ಲಿ ಸರ್ಕಾರವು ಕಮ್ಮಾರರು, ಬೀಗ ತಯಾರಿಸುವವರು, ಆಟಿಕೆ ತಯಾರಕರು ಹಾಗೂ ಇನ್ನಿತರ 15 ಕುಶಲಕರ್ಮಿಗಳಿಗೆ 3 ಲಕ್ಷ ರುಪಾಯಿ ಮೇಲಾಧಾರ-ಮುಕ್ತ ಸಾಲ ನೀಡುತ್ತದೆ, ಆದರೆ ಥಥೇರರಿಗೆ ಮಾತ್ರ ಏನೂ ಇಲ್ಲ.

ರಿಪೇರಿ ಕೆಲಸದಲ್ಲಿ ನಿಶ್ಚಿತವಾದ ಆದಾಯವೆಂಬುದಿಲ್ಲ. ಎಲ್ಲೋ ದಿನಕ್ಕೆ ಸುಮಾರು 1,000 ರುಪಾಯಿ ಆಗಬಹುದು ಅಷ್ಟೇ. ಸುನಿಲ್ ತಾವು ಹೊಸ ಪಾತ್ರೆಗಳನ್ನು ತಯಾರಿಸುವುದು ತಮ್ಮ ಬ್ಯುಸಿನೆಸ್‌ಗೆ ಸಹಾಯವಾಗುತ್ತದೆ ಎಂದು ಭಾವಿಸುತ್ತಾರೆ. ತಡವಾಗಿಯಾದರೂ, ಹಿತ್ತಾಳೆಯ ಪಾತ್ರೆಗಳ ಮೇಲಿನ ಆಸಕ್ತಿಗೆ ಮರುಜೀವ ಬರುತ್ತಿರುವುದನ್ನು ಅವರು ಗಮನಿಸಿದ್ದಾರೆ ಮತ್ತು ಈ ಸಂಪ್ರದಾಯ ಉಳಿಯುತ್ತದೆ ಎಂಬ ಭರವಸೆಯೂ ಅವರಿಗಿದೆ.

ಅನುವಾದ: ಚರಣ್ ಐವರ್ನಾಡು

Arshdeep Arshi

அர்ஷ்தீப் அர்ஷி சண்டிகரில் இருந்து இயங்கும் ஒரு சுயாதீன ஊடகர், மொழிபெயர்ப்பாளர். நியூஸ்18 பஞ்சாப், இந்துஸ்தான் டைம்ஸ் ஆகியவற்றில் முன்பு வேலை செய்தவர். பாட்டியாலாவில் உள்ள பஞ்சாபி பல்கலைக்கழகத்தில் ஆங்கில இலக்கியத்தில் எம்.ஃபில். பட்டம் பெற்றவர் இவர்.

Other stories by Arshdeep Arshi
Editor : Shaoni Sarkar

ஷாவோனி சர்கார், கொல்கத்தாவை சேர்ந்த ஒரு சுயாதீன பத்திரிகையாளர்.

Other stories by Shaoni Sarkar
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad