ಮೊಹಮ್ಮದ್ ಅಸ್ಲಾಮ್‌ರವರು ಕರಗಿರುವ ಬಿಸಿ ಹಿತ್ತಾಳೆಯನ್ನು ಸಂಚಾಗೆ (ಅಚ್ಚು ಪಾತ್ರೆ) ಸುರಿಯುತ್ತಿದ್ದಂತೆ ಸಣ್ಣಸಣ್ಣ ಕಣಗಳು ಗಾಳಿಯಲ್ಲಿ ಹಾರುತ್ತವೆ. ಹೀಗೆ ಹಿತ್ತಾಳೆಯಿಂದ ಗಟ್ಟಿಯಾದ‌ ಚಂದನ್‌ ಪಿಯಾಲ್ (ಪೂಜೆಗೆ ಬಳಸುವ ಹರಿವಾಣ) ತಯಾರಾಗುತ್ತದೆ.

ಹಿತ್ತಾಳೆಯ ಕೆಲಸದಲ್ಲಿ ಅನುಭವಿಯಾಗಿರುವ ಲೋಹ ಕುಶಲಕರ್ಮಿ ಅಸ್ಲಾಮ್‌ರವರ ಕೈಗಳು ಕೊಂಚವೂ ಅಲ್ಲಾಡದೆ, ಜಾಗ್ರತೆಯಿಂದ ಕೆಲಸ ಮಾಡುತ್ತವೆ. ಬಿಸಿ ಹಿತ್ತಾಳೆಯನ್ನು ಸುರಿಯುವಾಗ ಕಂಟೈನರ್‌ ಮೇಲೆ ಒತ್ತಡವನ್ನು ಅಳೆಯುತ್ತಾರೆ, ಒಳಗೆ ಮರಳನ್ನು ಹಾಕಲಾಗಿದೆಯೇ ಎಂದು ಎಚ್ಚರದಿಂದ ನೋಡುತ್ತಾರೆ. ಇದು ದ್ರವ ಹಿತ್ತಾಳೆ ಚೆಲ್ಲದಂತೆ ತಡೆದು, ಉತ್ಪನ್ನಕ್ಕೆ ಸರಿಯಾದ ಆಕಾರವನ್ನು ನೀಡುತ್ತದೆ.

"ನಿಮ್ಮ ಕೈಗಳು ಅಲುಗಾಡಬಾರದು, ಇಲ್ಲದಿದ್ದರೆ ಸಂಚಾದ ಒಳಗಿನ ರಚನೆಗೆ ಧಕ್ಕೆಯಾಗುತ್ತದೆ. ಆದತ್[ಅಚ್ಚಿನ ಉತ್ಪನ್ನ] ಹಾಳಾಗುತ್ತದೆ,” ಎಂದು 55 ವರ್ಷ ವಯಸ್ಸಿನ ಅಸ್ಲಾಮ್ ಹೇಳುತ್ತಾರೆ. ಹಾಗಿದ್ದೂ ಕೂಡ, ಸೋರುವ ಮರಳು ಗಾಳಿಯಲ್ಲಿ ಏಳುವ ಕಣಗಳಷ್ಟು ಅವರನ್ನು ಚಿಂತೆಗೆ ಈಡು ಮಾಡುವುದಿಲ್ಲ. "ಇದನ್ನು ನೋಡಿದ್ರಾ? ಇದು ಹಿತ್ತಾಳೆ ಮತ್ತು ಇದಿನ್ನು ವೇಸ್ಟ್. ನಾವು ಇದರ ವೆಚ್ಚವನ್ನೂ ಭರಿಸಬೇಕಾಗುತ್ತದೆ,” ಎಂದು ಅವರು ಹೇಳುತ್ತಾರೆ. ಅವರು ತಯಾರಿಸುವ ಪ್ರತಿ 100 ಕಿಲೋಗ್ರಾಂಗಳಷ್ಟು ಹಿತ್ತಾಳೆಯಲ್ಲಿ, ಸುಮಾರು 3 ಕಿಲೋಗಳಷ್ಟು ಗಾಳಿಯಲ್ಲಿ ಹಾರಿಹೋಗುತ್ತದೆ. ಅಂದರೆ ಸುಮಾರು 50 ರೂಪಾಯಿ ಗಾಳಿಯಲ್ಲಿ ಮಾಯವಾಗುತ್ತದೆ.

ಮೊರಾದಾಬಾದ್‌ನ ಪೀರ್ಜಾದಾ ಪ್ರದೇಶದಲ್ಲಿರುವ ಇಂತಹ ಅನೇಕ ಭಟ್ಟಿಗಳಲ್ಲಿ (ಕುಲುಮೆಗಳು) ಕೆಲಸ ಮಾಡುವ ಅನೇಕ ಕುಶಲಕರ್ಮಿಗಳಲ್ಲಿ ಅಸ್ಲಾಮ್ ಕೂಡ ಒಬ್ಬರು. ಈ ಪ್ರದೇಶ ಹಿತ್ತಾಳೆ ಕೆಲಸಕ್ಕೆ ಹೆಸರುವಾಸಿಯಾಗಿದೆ. ಕರಕುಶಲತೆಯನ್ನು ಸ್ಥಳೀಯವಾಗಿ ದಲಾಯಿ‌ ಕ ಕಾಮ್ ಅಥವಾ ಎರಕಹೊಯ್ಯುವುದು ಎಂದು ಕರೆಯಲಾಗುತ್ತದೆ. ಈ ಕೆಲಸದಲ್ಲಿ ಕುಶಲಕರ್ಮಿಗಳು ಹಿತ್ತಾಳೆಯ ಸಿಲ್ಲಿ ತುಂಡುಗಳನ್ನು (ಇಂಗಟ್) ಕರಗಿಸಿ ಬೇರೆ ಬೇರೆ ಆಕಾರಗಳಿಗೆ ಅಚ್ಚು ಹಾಕುತ್ತಾರೆ.

ಕಲ್ಲಿದ್ದಲು, ಮರಳು, ಮರದ ಹಲಗೆಗಳು, ಕಬ್ಬಿಣದ ರಾಡ್‌ಗಳು, ಹಿಡಿಕೆ ಮತ್ತು ವಿವಿಧ ಗಾತ್ರದ ಇಕ್ಕುಳಗಳು - ಇವು ಇವರು ಕೆಲಸಕ್ಕೆ ಬಳಸುವ ಸಲಕರಣೆಗಳು. ಅಸ್ಲಾಮ್ ಮತ್ತು ಅವರ ಸಹಾಯಕ ರಯೀಸ್ ಜಾನ್‌ರವರ ಸುತ್ತ ದಿನದ 12 ಗಂಟೆಗಳ ಕಾಲ ಇವು ಹರಡಿಕೊಂಡಿರುತ್ತವೆ. ಅಸ್ಲಾಮ್‌ ಅವರು ಸದಾ ಜನಸಂದಣಿಯಿಂದ ಕೂಡಿರುವ ಈ ಐದು ಚದರ ಅಡಿಯ ಜಾಗಕ್ಕೆ ಪ್ರತಿ ತಿಂಗಳು 1,500 ರುಪಾಯಿ ಬಾಡಿಗೆ ಕೊಡುತ್ತಾರೆ.

PHOTO • Mohd Shehwaaz Khan
PHOTO • Mohd Shehwaaz Khan

ಎಡ: ಮೊರಾದಾಬಾದ್‌ನ ಪೀರ್ಜಾದಾ ಪ್ರದೇಶದ ಕುಲುಮೆಯೊಂದರಲ್ಲಿ ಮೊಹಮ್ಮದ್ ಅಸ್ಲಾಮ್‌ (ಬಲ) ಮತ್ತು ರಯೀಸ್ ಜಾನ್ (ಎಡ) ಚಂದನ್ ಪಿಯಾಲಿಗಳನ್ನು (ಪ್ರಾರ್ಥನೆಗೆ ಬಳಸುವ ಸಣ್ಣ ಹರಿವಾಣಗಳು) ಎರಕಹೊಯ್ಯುತ್ತಾರೆ. ಬಲ: ಅಸ್ಲಾಮ್ ಸಂಚಾವನ್ನು (ಅಚ್ಚು ಪಾತ್ರೆ) ತಯಾರಿಸಿ, ತಾವು ತಯಾರಿಸುವ ಉತ್ಪನ್ನದ ಒಳಗೆ ಅಚ್ಚನ್ನು ಕೂರಿಸುತ್ತಾರೆ

PHOTO • Mohd Shehwaaz Khan
PHOTO • Mohd Shehwaaz Khan

ಎಡಕ್ಕೆ: ಕರಗಿದ ಹಿತ್ತಾಳೆಯಲ್ಲಿ ಟೊಳ್ಳಾದ ಕುಳಿಯನ್ನು ರಚಿಸಲು ಅಸ್ಲಾಮ್ ಅವರು ಅಚ್ಚಿನ ಪಾತ್ರೆಗೆ ಮರಳನ್ನು ತುಂಬುತ್ತಾರೆ. ಬಲ: ನಂತರ ಅವರು ದ್ರವರೂಪದ ಹಿತ್ತಾಳೆಯನ್ನು ಸುರಿಯುವಾಗ, ಪಾತ್ರೆಯ ಒಳಗೆ ಮರಳು ಚೆಲ್ಲುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. "ನಿಮ್ಮ ಕೈಗಳು ಅಲುಗಾಡಬಾರದು, ಇಲ್ಲದಿದ್ದರೆ ಸಂಚಾದ ಒಳಗಿನ ರಚನೆಗೆ ಧಕ್ಕೆಯಾಗುತ್ತದೆ," ಎಂದು ಅವರು ಹೇಳುತ್ತಾರೆ

ಪಿತ್ತಲ್‌ ನಗರಿ (ಹಿತ್ತಾಳೆ ನಗರ) ಎಂದು ಜನಪ್ರಿಯವಾಗಿರುವ ಉತ್ತರ ಪ್ರದೇಶದ ಈ ನಗರದಲ್ಲಿ‌ ಹೆಚ್ಚಿನ ಕಾರ್ಮಿಕರು ಮುಸಲ್ಮಾನ ಸಮುದಾಯಕ್ಕೆ ಸೇರಿದವರು.  ಸುಮಾರು ಶೇಕಡಾ 90 ರಷ್ಟು ಕಾರ್ಮಿಕರು ಈ ಸಮುದಾಯಕ್ಕೆ ಸೇರಿದ್ದು, ಅವರಲ್ಲಿ ಹೆಚ್ಚಿನವರು ಪೀರ್ಜಾಡಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಾರೆ ಎಂದು  ಅಸ್ಲಾಮ್ ಅಂದಾಜಿನಿಂದ ಹೇಳುತ್ತಾರೆ. ಮೊರಾದಾಬಾದ್‌ನ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 47.12 ರಷ್ಟು ಮುಸಲ್ಮಾನರು ಇದ್ದಾರೆ (2011ರ ಜನಗಣತಿ).

ಅಸ್ಲಾಮ್‌ ಮತ್ತು ಜಾನ್ ಕಳೆದ ಐದು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಅವರು ಬೆಳಿಗ್ಗೆ 5:30 ಗಂಟೆಗೆ ಭಟ್ಟಿಗೆ ಬಂದು ಬೇಗನೆ ಕೆಲಸ ಆರಂಭಿಸಿದರೆ, ಮಧ್ಯಾಹ್ನ ಒಂದು ಹೊತ್ತು ಊಟಕ್ಕೆ ಮನೆಗೆ ಹೋಗುತ್ತಾರೆ. ಇಬ್ಬರೂ ಭಟ್ಟಿಯ ಹತ್ತಿರದಲ್ಲೇ ವಾಸಿಸುತ್ತಾರೆ. ಸಂಜೆ ಮನೆಯವರೇ ಚಹಾವನ್ನು ವರ್ಕ್‌ಶಾಪ್‌ಗೆ ತರುತ್ತಾರೆ.

"ನಾವು ಎಷ್ಟೇ ಕಠಿಣ ಕೆಲಸವಿದ್ದರೂ ಯಾವತ್ತೂ ಊಟವನ್ನು ತಪ್ಪಿಸುವುದಿಲ್ಲ. ಅದಕ್ಕಾಗಿಯೇ ಅಲ್ಲವೇ ನಾವು ಕೆಲಸ ಮಾಡುವುದು,” ಎಂದು ಅಸ್ಲಾಮ್ ಹೇಳುತ್ತಾರೆ.

ಅಸ್ಲಾಮ್‌ ಅವರ ಸಹಾಯಕರಾಗಿರುವ ಜಾನ್  ಅವರಿಗೆ ದಿನಕ್ಕೆ 400 ರುಪಾಯಿ ಪಗಾರ. ಇವರು ಇಬ್ಬರೂ ಒಟ್ಟಾಗಿ ಹಿತ್ತಾಳೆಯನ್ನು ಕರಗಿಸುವ, ಲೋಹವನ್ನು ತಣಿಸುವ ಮತ್ತು ತಮ್ಮ ಸುತ್ತಲೂ ಚೆಲ್ಲಿರುವ ಮರಳನ್ನು ಮರುಬಳಕೆಗಾಗಿ ಸಂಗ್ರಹಿಸುತ್ತಾರೆ.

ಜಾನ್ ಹೆಚ್ಚಾಗಿ ಇಟ್ಟಿಗೆಯ ಗೂಡುಗಳನ್ನು ನಿರ್ವಹಿಸುತ್ತಾರೆ. ಇಲ್ಲಿ ಅವರು ಕಲ್ಲಿದ್ದಲನ್ನು ಲೋಡ್ ಮಾಡಲು ನಿಲ್ಲುಬೇಕು. “ಒಬ್ಬನಿಗೆ ಮಾತ್ರ ಈ ಕೆಲಸ ಮಾಡಲು ಸಾಧ್ಯವಿಲ್ಲ. ನಿಮ್ಮ ಜೊತೆಗೆ ಕನಿಷ್ಠ ಎರಡು ಜನರಾದರೂ ಇರಬೇಕು. ಹಾಗಾಗಿ, ಅಸ್ಲಾಮ್‌ ಭಾಯ್‌ ರಜೆಯಲ್ಲಿದ್ದರೆ,  ನನಗೂ ಕೆಲಸ ಇರುವುದಿಲ್ಲ,” ಎಂದು 60 ವರ್ಷದ ಜಾನ್ ಹೇಳುತ್ತಾರೆ. "ರಯೀಸ್ ಭಾಯ್‌ ನಾಳೆ ಅವರ ಸಸುರಾಲ್ [ಅಳಿಯ] ಬಳಿ ಹೋಗುತ್ತಾರೆ, ನಂಗೆ 500 ರೂಪಾಯಿ ಇಲ್ಲದಾಗುತ್ತದೆ,” ಎಂದು ಅಸ್ಲಾಮ್ ನಗುತ್ತಾ ಹೇಳುತ್ತಾರೆ.

"ಈ ಕಲ್ಲಿದ್ದಲು ಧಲೈಯಾದ [ಹಿತ್ತಾಳೆ ಕ್ಯಾಸ್ಟರ್] ಬೆನ್ನುಮೂಳೆಯನ್ನು ಮುರಿದು ಹಾಕುತ್ತದೆ," ಎಂದು ಅಸ್ಲಾಮ್ ನಮಗೆ ಹೇಳುತ್ತಾರೆ. "ಅರ್ಧ ಬೆಲೆಗೆ ಕಲ್ಲಿದ್ದಲು ಸಿಕ್ಕಿದರೆ, ನಮಗೆ ಅದೊಂದು ದೊಡ್ಡ ನೆಮ್ಮದಿ," ಎನ್ನುತ್ತಾರೆ ಅವರು. ಅಸ್ಲಾಮ್‌ ದಿನದ ಆಧಾರದಲ್ಲಿ ಹಿತ್ತಾಳೆ ಎರಕ ಹೊಯ್ಯುವ ಥೆಕಾ (ಕಾಂಟ್ರ್ಯಾಕ್ಟ್)‌ ತೆಗೆದುಕೊಳ್ಳುತ್ತಾರೆ.

PHOTO • Mohd Shehwaaz Khan
PHOTO • Mohd Shehwaaz Khan

ಎಡ:  ಅಸ್ಲಾಮ್ ಅವರ ಸಹಾಯಕ ರಯೀಸ್ ಜಾನ್ ಅವರು ಹೆಚ್ಚಾಗಿ ಕುಲುಮೆಯನ್ನು ನಿರ್ವಹಿಸುತ್ತಾರೆ. ಇಬ್ಬರೂ  ಐದು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಬಲ: ಕುಲುಮೆಯಲ್ಲಿ ಕಲ್ಲಿದ್ದಲನ್ನು ಉರಿಸಲಾಗುತ್ತದೆ. ಒಂದು ಕಿಲೋ ಹಿತ್ತಾಳೆಯನ್ನು ಕರಗಿಸಲು ಸುಮಾರು 300 ಗ್ರಾಂಗಳಷ್ಟು ಕಲ್ಲಿದ್ದಲನ್ನು ಬಳಸುತ್ತಾರೆ. ಕಲ್ಲಿದ್ದಲಿನ ಬೆಲೆ (ಕೆಜಿಗೆ 55 ರುಪಾಯಿ) ತುಂಬಾ ಹೆಚ್ಚಾಗಿದೆ ಎಂದು ಅಸ್ಲಾಮ್‌ರಂತಹ ಲೋಹದ ಕೆಲಸ ಮಾಡುವವರು ಭಾವಿಸುತ್ತಾರೆ

ಅವರು ಸ್ಥಳೀಯ ಮಾರಾಟಗಾರರಿಂದ ಕೆಜಿಗೆ 500 ರುಪಾಯಿ ಕೊಟ್ಟು ಹಿತ್ತಾಳೆಯ ಗಟ್ಟಿಗಳನ್ನು ಖರೀದಿಸಿ, ಎರಕ ಹೊಯ್ಯುವ ಕೆಲಸ ಮುಗಿದ ಮೇಲೆ ಅವುಗಳನ್ನು ಹಿಂತಿರುಗಿಸುತ್ತಾರೆ. ಗುಣಮಟ್ಟದ ಹಿತ್ತಾಳೆಯ ಗಟ್ಟಿಗಳು ಸಾಮಾನ್ಯವಾಗಿ ಏಳರಿಂದ ಎಂಟು ಕೆಜಿ ತೂಗುತ್ತವೆ.

“ಸಿಗುವ ಕೆಲಸದ ಆಧಾರದ ಮೇಲೆ ದಿನಕ್ಕೆ ಕನಿಷ್ಠ 42 ಕೆಜಿ ಹಿತ್ತಾಳೆಯನ್ನು ಎರಕದ ಕೆಲಸಕ್ಕೆ ಬಳಸುತ್ತೇವೆ. ನಾವು ಎರಕ ಹೊಯ್ಯುವ ಪ್ರತಿ ಕಿಲೋಗ್ರಾಂಗೆ 40 ರುಪಾಯಿ ಸಿಗುತ್ತದೆ, ಇದು ಕಲ್ಲಿದ್ದಲು ಮತ್ತು ಇತರ ವೆಚ್ಚಗಳನ್ನೂ ಭರಿಸುತ್ತದೆ,” ಎಂದು   ಅಸ್ಲಾಮ್ ಹೇಳುತ್ತಾರೆ.

ಒಂದು ಕಿಲೋ ಕಲ್ಲಿದ್ದಲಿಗೆ 55 ರೂಪಾಯಿ. ಒಂದು ಕಿಲೋಗ್ರಾಂ ಹಿತ್ತಾಳೆಯನ್ನು ಕರಗಿಸಲು ಸುಮಾರು 300 ಗ್ರಾಂ ಕಲ್ಲಿದ್ದಲನ್ನು ಉರಿಸಬೇಕು ಎಂದು ಅಸ್ಲಾಮ್ ಹೇಳುತ್ತಾರೆ. "ಎಲ್ಲಾ ಖರ್ಚುಗಳನ್ನು ಬಿಟ್ಟು, ಪ್ರತೀ ಒಂದು ಕಿಲೋ ಲೋಹವನ್ನು ಎರಕಹೊಯ್ದರೆ ಆರರಿಂದ ಏಳು ರೂಪಾಯಿಗಳನ್ನು ಸಿಗುತ್ತದೆ," ಎಂದು ಅವರು ಹೇಳುತ್ತಾರೆ.

ರಯೀಸ್ ಜಾನ್ ತಮ್ಮ 10 ನೇ ವಯಸ್ಸಿನಲ್ಲಿ ಈ ಕೆಲಸ ಮಾಡಲು ಆರಂಭಿಸಿದರು. ಈ ಕೌಶಲ್ಯವನ್ನು ಕಲಿಯಲು ಅವರು ಒಂದು ವರ್ಷ ತೆಗೆದುಕೊಂಡರು. "ಇದು ಸುಲಭದ ಕೆಲಸದಂತೆ ಕಾಣಿಸುತ್ತದೆ, ಆದರೆ ಕೆಲಸ ಹಾಗಿಲ್ಲ," ಎನ್ನುತ್ತಾ, "ಹಿತ್ತಾಳೆ ಕರಗಿದ ನಂತರ ಹೇಗೆ ವರ್ತಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ," ಎಂದು ಹೇಳುತ್ತಾರೆ.

ಹಿತ್ತಾಳೆಯನ್ನು ಎರಕ ಹೊಯ್ಯುವಾಗ ನಮ್ಮ ಕೈಗಳು ಅಲುಗಾಡಬಾರದು ಮತ್ತು ಒಂದು ಭಂಗಿಯನ್ನು ಕಾಯ್ದುಕೊಳ್ಳಬೇಕು ಎಂದು ಜಾನ್ ವಿವರಿಸುತ್ತಾರೆ. “ಕಂಟೇನರನ್ನು ತುಂಬುವುದು ಒಂದು ಟ್ರಿಕ್. ನೌಸಿಖಿಯಾರಿಗೆ ( ಹೊಸಬರಿಗೆ) ಕರಗಿದ ಹಿತ್ತಾಳೆಯನ್ನು ತುಂಬಿಸಿದ ಮೇಲೆ ಕಂಟೇನರ್‌ಗೆ ಎಷ್ಟು ಬೀಟಿಂಗ್ ಬೇಕು ಎಂಬುದು ಗೊತ್ತಿರುವುದಿಲ್ಲ. ಅದನ್ನು ಸರಿಯಾಗಿ ಮಾಡದಿದ್ದರೆ ಆದತ್ [ಕೊನೆಯ ಅಚ್ಚಿನ ಪೀಸ್] ಒಡೆದು ಹೋಗುತ್ತದೆ. ಹಾಗೆಯೇ, ನಾವು ಕಂಟೇನರನ್ನು ಅಲುಗಾಡಿಸುತ್ತಾ ಎತ್ತಿದರೆ ಅದು ಒಡೆಯುತ್ತದೆ. ಅಂತಹ ಸಂದರ್ಭಗಳಲ್ಲಿ ಪರಿಣಿತರ ಕೈಗಳು ಸ್ವಾಭಾವಿಕವಾಗಿ ಚಲಿಸುತ್ತವೆ," ಎಂದು ಜಾನ್ ಹೇಳುತ್ತಾರೆ.

ಜಾನ್ ಅವರು ಹಿತ್ತಾಳೆಯ ಕೆಲಸ ಮಾಡುವವರ ದೀರ್ಘವಾದ ಪರಂಪರೆಯಿಂದ ಬಂದವರು. "ಇದು ನನ್ನ ಪೂರ್ವಜರು ಮಾಡುತಿದ್ದ ಕೆಲಸ. ನಾವು ಇದನ್ನು ಸುಮಾರು 200 ವರ್ಷಗಳಿಂದ ಮಾಡುತ್ತಿದ್ದೇವೆ," ಎಂದು ಅವರು ಹೇಳುತ್ತಾರೆ. ಆದರೆ ಜಾನ್ ಆಗಾಗ ಇದನ್ನು ಮುಂದುವರಿಸಬೇಕೋ ಬೇಡವೋ ಎಂದೂ ಯೋಚಿಸುತ್ತಾರೆ. "ನನ್ನ ತಂದೆ ಸ್ವಂತವಾಗಿ ಎರಕಹೊಯ್ಯುವ ಕೆಲಸ ಮಾಡುತ್ತಿದ್ದರು, ಆದರೆ ನಾನು ಮಾತ್ರ ದಿನಾ ಕೂಲಿ ಕೆಲಸ ಮಾಡುತ್ತೇನೆ," ಎಂದು ಅವರು ದುಃಖದಿಂದ ಹೇಳುತ್ತಾರೆ.

PHOTO • Mohd Shehwaaz Khan
PHOTO • Mohd Shehwaaz Khan

ಎಡಕ್ಕೆ: ಸಂಚಾ, ಮರದ ಎರಡು ಹಲಗೆಗಳು (ಫಂಟಿ ಮತ್ತು ಪಟ್ಲಾ) ಮರಳು, ಮರಳನ್ನು ತುಂಬಲು ಬೇಕಾದ ಸರಿಯಾ ಅಥವಾ ಕಬ್ಬಿಣದ ಸರಿಗೆ, ಸಂಡಾಸಿ ಅಥವಾ ಕಬ್ಬಿಣದ ಚಿಮಟಾ ಮತ್ತು ಉತ್ಪನ್ನದಲ್ಲಿರುವ ಹೆಚ್ಚುವರಿ ಹಿತ್ತಾಳೆಯನ್ನು ತೆಗೆಯಲು ಬೇಕಾದ ಇಕ್ಕಳ, ಅಚ್ಚನ್ನು ರಚಿಸಲು ಬಳಸುವ ಮುಸ್ಲಿ ಅಥವಾ ಕಬ್ಬಿಣದ ಒನಕೆ- ಇವು ಎರಕಹೊಯ್ಯುವ ಕೆಲಸಕ್ಕೆ ಬೇಕಾದ ಸಾಧನಗಳು. ಬಲ: ಚಂದನ್ ಪಿಯಾಲಿಗಳ ಮೇಲಿರುವ ಹೆಚ್ಚುವರಿ ಹಿತ್ತಾಳೆಯನ್ನು ಎರಕ ಹಾಕುವವರು ಮರುಬಳಕೆಗೆ ಬಳಸುತ್ತಾರೆ

ಅಸ್ಲಾಮ್ 40 ವರ್ಷಗಳ ಹಿಂದೆ ಹಿತ್ತಾಳೆ ಎರಕದ ಕೆಲಸ ಆರಂಭಿಸಿದರು. ಆರಂಭದಲ್ಲಿ ಅವರ ಕುಟುಂಬ ಅವರ ತಂದೆಯ ಹಣ್ಣು ಮತ್ತು ತರಕಾರಿ ಮಾರುವ ತಳ್ಳುಗಾಡಿಯಿಂದ ನಡೆಯುತ್ತಿತ್ತು. ಅಸ್ಲಾಮ್ ತಮ್ಮ ಕುಟುಂಬಕ್ಕೆ ನೆರವಾಗಲು ಈ ಉದ್ಯೋಗವನ್ನು ಕೈಗೆತ್ತಿಕೊಂಡರು. “ಇಲ್ಲಿ ಎಲ್ಲಾ ದಿನವೂ ಒಂದೇ ರೀತಿ; ಏನೂ ಬದಲಾಗುವುದಿಲ್ಲ," ಅವರು ಹೇಳುತ್ತಾರೆ. "ನಾವು ಇವತ್ತು ಸಂಪಾದಿಸಿದ 500 ರೂಪಾಯಿ ನಾವು 10 ವರ್ಷಗಳ ಹಿಂದೆ ಗಳಿಸಿದ 250 ರೂಪಾಯಿಗೆ ಸಮ," ಎಂದು ಅವರು ಬೆಲೆ ಏರಿಕೆಯ ಬಗ್ಗೆ ಹೇಳುತ್ತಾರೆ.

ಅಸ್ಲಾಮ್ ಅವರಿಗೆ ಇಬ್ಬರು ಹೆಣ್ಣುಮಕ್ಕಳೂ, ಒಬ್ಬ ಮಗ ಇದ್ದಾನೆ. ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. "ನನ್ನ ಮಗನಿಗೆ ಮದುವೆ ಮಾಡಿಸಿ, ಇನ್ನೊಬ್ಬ ಸದಸ್ಯರನ್ನು ಕರೆತರಲು ನಮ್ಮ ಮನೆಯಲ್ಲಿ ಸಾಕಷ್ಟು ಸ್ಥಳವಿಲ್ಲ," ಎಂದು ಅವರು ಹೇಳುತ್ತಾರೆ.

*****

ಪೀರಜಾದದಲ್ಲಿ ಕೆಲಸ ಮಾಡುವ ಕುಶಲಕರ್ಮಿಗಳಿಗೆ ಶುಕ್ರವಾರದಂದು ವಾರದ ರಜೆ. ಜುಮ್ಮಾಬಾರ್‌ನಂದು ಎಲ್ಲಾ ಭಟ್ಟಿಗಳು ತಮ್ಮ ಅಂಗಡಿಗಳನ್ನು ಮುಚ್ಚುತ್ತವೆ. ಸುತ್ತಿಗೆ ಮತ್ತು ಇಕ್ಕುಳಗಳ ಶಬ್ದದಿಂದ ತುಂಬಿರುತ್ತಿದ್ದ ಆ ಪ್ರದೇಶ ಅಂದು ಮೌನವಾಗುತ್ತದೆ.

ರಜೆಯ ದಿನ, ಮೊಹಮ್ಮದ್ ನಯೀಮ್ ತಮ್ಮ ಮೊಮ್ಮಕ್ಕಳೊಂದಿಗೆ ಮನೆಯ ಛಾವಣಿಯಲ್ಲಿ ಗಾಳಿಪಟಗಳನ್ನು ಹಾರಿಸುತ್ತಾರೆ. "ಇದರಿಂದ ನನ್ನ ಒತ್ತಡ ಕಡಿಮೆಯಾಗುತ್ತದೆ," ಎಂದು ಅವರು ವಿವರಿಸುತ್ತಾರೆ.

ವಾರದ ಉಳಿದ ದಿನಗಳನ್ನು ಅವರು ಕಿರಿದಾದ ಸಂದಿಯಲ್ಲಿರುವ ವರ್ಕ್‌ಶಾಪ್‌ನಲ್ಲಿ ಕಳೆಯುತ್ತಾರೆ. ಅಸ್ಲಾಮ್ ಮತ್ತು ಜಾನ್‌ ಅವರ ಭಟ್ಟಿಯಿಂದ ಅಲ್ಲಿಗೆ ಹೋಗಲು ಸುಮಾರು ಐದು ನಿಮಿಷಗಳ ಕಾಲ ನಡೆಯಬೇಕು. ನಯೀಮ್ ಅವರು 36 ವರ್ಷಗಳಿಂದ ಈ ಕಸುಬನ್ನು ಮಾಡುತ್ತಿದ್ದಾರೆ. "ಜನರಿಗೆ ಈ ಹಿತ್ತಾಳೆ ಸಮನುಗಳು ಏಕೆ ಇಷ್ಟವಾಗುತ್ತವೆ ಎಂಬುದು ನನಗೆ ಈಗಲೂ ಅರ್ಥವಾಗುವುದಿಲ್ಲ. ನಾನು ನನಗಾಗಿ ಯಾವುದೇ ಒಂದನ್ನು ಇಲ್ಲಿವರೆಗೆ ಮಾಡಿಲ್ಲ,” ಎಂದು ಅವರು ಹೇಳುತ್ತಾರೆ. ಅಸ್ಲಾಮ್ ಮತ್ತು ಜಾನ್‌ರಂತೆ ಮನೆಯ ಸಮೀಪದಲ್ಲಿಯೇ ಅವರು ಕೆಲಸ ಮಾಡುತ್ತಿಲ್ಲ. ಕೆಲಸಕ್ಕೆ ಹೋಗಲು ಅವರು 20 ಕಿಲೋ ಮೀಟರ್ ಪ್ರಯಾಣಿಸಬೇಕು. ಇನ್ನೂ ಕತ್ತಲೆ ಇರುವಾಗಲೇ ಬೆಳಗ್ಗೆ ಬೇಗ ಮನೆಯಿಂದ ಅವರು ಹೊರಡುತ್ತಾರೆ. ಹೋಗಿಬರಲು ಅವರಿಗೆ ದಿನಕ್ಕೆ ಸುಮಾರು 80 ರೂಪಾಯಿ ಖರ್ಚಾಗುತ್ತದೆ.

PHOTO • Aishwarya Diwakar
PHOTO • Aishwarya Diwakar

ಮೊಹಮ್ಮದ್ ನಯೀಮ್ ತಾವು ಕೆಲಸ ಮಾಡುವ ಭಟ್ಟಿಯಲ್ಲಿರುವ ಬೆಂಕಿಯನ್ನು (ಎಡ) ನೋಡಿಕೊಳ್ಳುತ್ತಾರೆ ಮತ್ತು ಕುಲುಮೆಯಲ್ಲಿರುವ ಅಚ್ಚನ್ನು (ಬಲ) ತಮ್ಮ ಕೈಗಳಿಂದ ಹೊರತೆಗೆಯುತ್ತಿದ್ದಾರೆ

55 ವರ್ಷ ವಯಸ್ಸಿನ ಇವರು ಹೆಚ್ಚಾಗಿ ಇಟ್ಟಿಗೆಯ ಗೂಡುಗಳಲ್ಲಿ ಕೆಲಸ ಮಾಡುತ್ತಾರೆ. ಇವರ ಮೂವರು ಸಹೋದ್ಯೋಗಿಗಳು ಅಚ್ಚು ಮತ್ತು ಮಿಶ್ರಣ ಮಾಡುವ ಕೆಲಸವನ್ನು ನಿರ್ವಹಿಸುತ್ತಾರೆ.

ಅವರು ದಿಯಾ(ದೀಪ), ಓಂ-ಆಕಾರದ ಚಿಹ್ನೆಗಳು ಮತ್ತು ದೀಪಗಳಿಗೆ ಆಧಾರದಂತಹ ಪೂಜಾ ಕ ಸಮಾನ್ (ಪೂಜೆಯ ಸಾಮಗ್ರಿಗಳನ್ನು) ತಯಾರಿಸುತ್ತಾರೆ. ಹೆಚ್ಚಿನವನ್ನು ದೇವಾಲಯಗಳಲ್ಲಿ ಬಳಸುತ್ತಾರೆ ಎಂದು ನಯೀಮ್ ಹೇಳುತ್ತಾರೆ.

"ನಾವು ಈ ದೇಶದ ಪ್ರತಿಯೊಂದು ದೇವಾಲಯಗಳಿಗೆ ಹಿತ್ತಾಳೆ ಉತ್ಪನ್ನಗಳನ್ನು ತಯಾರಿಸಿ ಕೊಟ್ಟಿದ್ದೇವೆ," ಎಂದು ಅವರು ತಮ್ಮ ಬೆರಳುಗಳಲ್ಲಿ ಎಣಿಸುತ್ತಾ, "ಕೇರಳ, ಬನಾರಸ್, ಗುಜರಾತ್ ಮತ್ತು ಹೀಗೆ," ಎಂದು ವ್ಯಂಗ್ಯದಿಂದ ಹೇಳುತ್ತಾರೆ.

ತಾಪಮಾನವು ಬಹುತೇಕ 42 ಡಿಗ್ರಿ ಸೆಲ್ಸಿಯಸ್‌ ತಲುಪಿದೆ, ಈ ಬಿಸಿಯ ಹೊರತಾಗಿಯೂ ನಯೀಮ್ ಎಲ್ಲರಿಗೂ ಸ್ವಲ್ಪ ಸ್ವಲ್ಪ ಚಹಾವನ್ನು ಮಾಡಿಕೊಡುವಂತೆ ಒತ್ತಾಯಿಸುತ್ತಾರೆ. "ನಾನು ಒಳ್ಳೆಯ ಚಹಾವನ್ನು ಮಾಡುತ್ತೇನೆ," ಎಂದು ಹೇಳುವಾಗ ಅವರ ಕಣ್ಣುಗಳು ಮಿನುಗುತ್ತವೆ. “ನೀವು ಯಾವತ್ತಾದರೂ ಭಟ್ಟಿ ವಾಲಿ ಚಾಯ್ ಕುಡಿದಿದ್ದೀರಾ ?" ಎಂದು ಅವರು ಪರಿಯ ವರದಿಗಾರರನ್ನು ಕೇಳುತ್ತಾರೆ. ಅವರ ಚಹಾದ ವಿಶೇಷತೆ ಏನು ಎಂದು ಕೇಳಿದಾಗ, ಹಾಲು ಮತ್ತು ಚಹಾ ಭಟ್ಟಿಯ ಶಾಖದಲ್ಲಿ ಚೆನ್ನಾಗಿ ಕುದಿಯುತ್ತವೆ ಎಂದು ಹೇಳುತ್ತಾರೆ.

ನಯೀಮ್ ತನ್ನ ಒಡಹುಟ್ಟಿದ ಸಹೋದರ ಮತ್ತು ಸೋದರಸಂಬಂಧಿಯ ಹಾದಿಯಲ್ಲಿಯೇ ಬಂದು ಈ ವೃತ್ತಿ ಮಾಡಲು ಆರಂಭಿಸಿದರು. ಆದರೆ ಬಟ್ಟೆ ಮಾರುವುದು ಅವರ ಕುಟುಂಬದ ಸಾಂಪ್ರದಾಯಿಕ ಉದ್ಯೋಗ. "ವೋ ನಿಕಲ್ ಗಯೇ, ಪರ್ ಮೈ ಯಹೀ ರೆಹ್ ಗಯಾ [ ಅವರು ಹೊರಟುಹೋದರು, ಆದರೆ ನಾನು ಮಾತ್ರ ಇಲ್ಲಿಯೇ ಉಳಿದೆ] ," ಅವರು ಅವರು ಹೇಳುತ್ತಾರೆ.

ನಯೀಮ್ ರವರಿಗೆ ದಿನಕ್ಕೆ ಸಿಗುವ 450-500 ರೂಪಾಯಿ ಸಂಬಳ ಸಾಕಾಗುವುದಿಲ್ಲ, ಆಗಾಗ ಕೆಲಸ ಬಿಡುವ ಬಗ್ಗೆ ಕೂಡ ಯೋಚಿಸುತ್ತಾರೆ. “ನನ್ನ ಬಳಿ ಹಣವಿದ್ದರೆ ಮತ್ತೆ ಬಟ್ಟೆ ಮಾರಲು ಹೋಗುತ್ತಿದ್ದೆ. ನನಗೆ ಆ ಕೆಲಸ ಮಾಡುವುದು ಇಷ್ಟ. ಇಡೀ ದಿನ ಆರಾಮವಾಗಿ ಕುರ್ಚಿಯಲ್ಲಿ ಕುಳಿತು ಬಟ್ಟೆಗಳನ್ನು ಮಾರಾಟ ಮಾಡುವುದಷ್ಟೇ ನೀವು ಮಾಡಬೇಕಿರುವುದು,”ಎಂದು ಅವರು ಹೇಳುತ್ತಾರೆ.

PHOTO • Aishwarya Diwakar
PHOTO • Aishwarya Diwakar

ಎಡಕ್ಕೆ: ನಯೀಮ್ ಮತ್ತು ಅವನ ಸಹೋದ್ಯೋಗಿಗಳು ದೀಪಗಳನ್ನು ಹಾಗೂ ಓಂ ಚಿಹ್ನೆಗಳನ್ನು ಭಾರತದಾದ್ಯಂತ ಇರುವ ದೇವಾಲಯಗಳಿಗೆ ತಯಾರಿಸಿ ಕೊಡುತ್ತಾರೆ ಬಲ: ಅಚ್ಚಿನಿಂದ ಓಂ ಚಿಹ್ನೆಯನ್ನು ತೆಗೆಯುತ್ತಿರುವುದು

PHOTO • Aishwarya Diwakar
PHOTO • Aishwarya Diwakar

ಎಡ: ತಾವು ಎರಕ ಹೊಯ್ದ ಓಂ ನೊಂದಿಗೆ ನಯೀಮ್. ಬಲ: ನಯೀಮ್ ಅವರು ಎರಕ ಹೊಯ್ದು ಮಾಡಿದ ಪಾಲೀಶ್ ಮಾಡದ ಚಂದನ್ ಪಿಯಾಲಿಗಳು

*****

ಪ್ರಸಿದ್ಧ ಹಿತ್ತಾಳೆ ಉದ್ಯಮವು ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರದ ' ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಭಾಗವಾಗಿದೆ. ಮೊರಾದಾಬಾದ್‌ನ ಲೋಹದ ಕ್ರಾಫ್ಟ್‌ಗಳಿಗೆ 2014 ರಲ್ಲಿ ಜಿಯಾಗ್ರಫಿಕಲ್ ಇಂಡಿಕೇಶನ್ಸ್ ಟ್ಯಾಗ್ (ಜಿಐ) ಸಿಕ್ಕಿತು. ಆದರೆ ಕುಶಲಕರ್ಮಿಗಳ ಬದುಕಿನ ಸ್ಥಿತಿ ಮಾತ್ರ ಸುಧಾರಿಸಿಲ್ಲ.

ಹಿತ್ತಾಳೆಯ ಉತ್ಪಾದನೆಯಲ್ಲಿ ಎರಕಹೊಯ್ಯುವುದು ಅತ್ಯಂತ ಶ್ರಮದ ಕೆಲಸ. ಕೆಲಸಗಾರರು ಗಂಟೆಗಟ್ಟಲೆ ಮಂಡಿ ಮೇಲೆ ಕುಳಿತು ಕೆಲಸ ಮಾಡುತ್ತಾರೆ. ಭಾರವಾದ ಕಂಟೈನರ್‌ಗಳನ್ನು ಎತ್ತಲು, ಮರಳನ್ನು ಸಮತಟ್ಟು ಮಾಡಲು ಮತ್ತು ಕಲ್ಲಿದ್ದಲನ್ನು ಕುಲುಮೆಗೆ ತುಂಬಲು ನಿರಂತರವಾಗಿ ತಮ್ಮ ಕೈಗಳಿಗೆ ಕೆಲಸ ಕೊಡುತ್ತಾರೆ. ಆದರೆ, ಸದಾ ಬೆಂಕಿಯ ಬಗ್ಗೆ ಜಾಗರೂಕತೆಯಿಂದ ಇರಬೇಕಾಗುತ್ತದೆ.

ಕಡಿಮೆ ಆದಾಯ ಕೊಡುವ ಕಠಿಣ ಪರಿಶ್ರಮದ ಎರಕಹೊಯ್ಯುವ ಈ ಕಲೆಯಿಂದ ಯುವ ಪೀಳಿಗೆ ದೂರ ಹೋಗುತ್ತಿದೆ.

ಯುವಕರು ಹೆಚ್ಚಾಗಿ ಮೀನಾ ಕ ಕಾಮ್  ಅಥವಾ ಲೋಹದ ಮೇಲ್ಮೈಗೆ ಬಣ್ಣ ಹಚ್ಚುವ ಉದ್ಯೋಗ ಮಾಡುತ್ತಾರೆ. ಇದರಿಂದ ಹೆಚ್ಚು ಗೌರವ ಸಿಗುತ್ತದೆ, ನಿಮ್ಮ ಬಟ್ಟೆಗಳು ಕೊಳೆಯಾಗುವುದಿಲ್ಲ ಎಂದು ಅವರು ಹೇಳುತ್ತಾರೆ. ಪ್ಯಾಕಿಂಗ್, ಹೊಲಿಗೆ ಮತ್ತು ಬಾಕ್ಸಿಂಗ್ ಉತ್ಪನ್ನಗಳು ಸೇರಿದಂತೆ ಇತರ ಕಡೆಗಳಲ್ಲೂ ಉದ್ಯೋಗಗಳನ್ನು ನೋಡುತ್ತಿದ್ದಾರೆ.

PHOTO • Mohd Shehwaaz Khan
PHOTO • Mohd Shehwaaz Khan

ಎಡ: ಮೊರಾದಾಬಾದ್‌ನ ಅನೇಕ ಯುವಕರು ಈ ವೃತ್ತಿಯನ್ನು ಕೈಗೆತ್ತಿಕೊಳ್ಳಲು ಹಿಂಜರಿಯುತ್ತಿದ್ದರೆ, ಮೊಹಮ್ಮದ್ ಸುಭಾನ್‌ ಬಳಿ ಬೇರೆ ಯಾವುದೇ ಆಯ್ಕೆಯಿಲ್ಲ. ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಅವರು ತಮ್ಮ ಉಳಿತಾಯದ ಹಣವನ್ನೂ ಕಳೆದುಕೊಂಡರು. ಈಗ ಹಣದ ಸಮಸ್ಯೆ ಜಾಸ್ತಿಯಾಗಿದೆ. ಮದುವೆ ಸೀಸನ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿಯೂ ಕೆಲಸ ಮಾಡುತ್ತಾರೆ. ಬಲ: ಕುಲುಮೆಯಿಂದ ಹೊರತೆಗೆಯಲಾಗಿರುವ, ಸುಭಾನ್‌ ಅಚ್ಚು ಹಾಕಿ ಮಾಡಿರುವ ದಿಯಾಗಳು (ದೀಪಗಳು)

PHOTO • Mohd Shehwaaz Khan
PHOTO • Mohd Shehwaaz Khan

ಎಡ: 'ನಾನು ಎರಡನೇ ಹಿರಿಯ ಮಗ ಮತ್ತು ನನ್ನ ಕುಟುಂಬವನ್ನು ನಾನೇ ನೋಡಿಕೊಳ್ಳಬೇಕು,' ಎಂದು ಸುಭಾನ್ ಹೇಳುತ್ತಾರೆ. ಬಲ: ಭಟ್ಟಿಯಲ್ಲಿ ಕೆಲಸ ಮಾಡುವಾಗ ಅವರ ಕಾಲುಗಳು ಸುಟ್ಟು ಗಾಯಗಳಾಗಿದ್ದವು, ಆದರೆ ಒಂದೇ ದಿನದಲ್ಲಿ ಕೆಲಸಕ್ಕೆ ಮರಳಿದರು

ಹಿತ್ತಾಳೆಯ ಎರಕದ ಕೆಲಸ ಮಾಡುವ 24 ವರ್ಷ ಪ್ರಾಯದ ಮೊಹಮ್ಮದ್ ಸುಭಾನ್ ತನ್ನ ಕುಟುಂಬವನ್ನು ನೋಡಿಕೊಳ್ಳಲು ಎರಡೆರಡು ಕೆಲಸಗಳನ್ನು ಮಾಡುತ್ತಾರೆ. ಹಗಲಿನಲ್ಲಿ ಹಿತ್ತಾಳೆ ಎರಕಹೊಯ್ದು 300 ರೂಪಾಯಿ ಸಂಪಾದನೆ ಮಾಡುತ್ತಾರೆ. ಮದುವೆಯ ಸೀಸನ್ ಆರಂಭವಾದಾಗ, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಾರೆ. ಆಗ ಪ್ರತಿ ಮದುವೆಗೆ ಅವರಿಗೆ ಸುಮಾರು 200 ರುಪಾಯಿ ಸಿಗುತ್ತದೆ. "ಹಣದ ಸಮಸ್ಯೆ ಹೆಚ್ಚಿರುವಾಗ ಈ ಕೆಲಸವನ್ನು ಬಿಡುವ ಪ್ರಶ್ನೆಯೇ ಇಲ್ಲ," ಎಂದು ಅವರು ಹೇಳುತ್ತಾರೆ.

ರಿಕ್ಷಾ ಚಾಲಕನ ಮಗನಾಗಿರುವ ಇವರು 12 ನೇ ವಯಸ್ಸಿನಲ್ಲಿಯೇ ಕೆಲಸ ಮಾಡಲು ಆರಂಭಿಸಿದರು. "ನಾನು ಎಂಟು ಮಕ್ಕಳಲ್ಲಿ ಎರಡನೇ ಹಿರಿಯ ಮಗ ಮತ್ತು ಕುಟುಂಬವನ್ನು ನಾನೇ ನೋಡಿಕೊಳ್ಳಬೇಕು," ಎಂದು ಸುಭಾನ್ ಹೇಳುತ್ತಾರೆ. "ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ, ನಾನು ನನ್ನ ಉಳಿತಾಯದ ಎಲ್ಲಾ ಹಣವನ್ನು ಕಳೆದುಕೊಂಡೆ. ಈಗ ಕೆಲಸ ಬಿಡುವುದು ಇನ್ನೂ ಕಷ್ಟವಾಗಿದೆ," ಎಂದು ಅವರು ಹೇಳುತ್ತಾರೆ.

ತಾನೊಬ್ಬ ಮಾತ್ರ ಹೀಗೆ ಇರುವುದು ಅಲ್ಲ ಎಂಬುದು ಸುಭಾನ್ ಅವರಿಗೆ ತಿಳಿದಿದೆ. “ಇಲ್ಲಿ ನನ್ನಂತ ಅನೇಕ ಯುವಕರು ಎರಡೆರಡು ಕೆಲಸಗಳನ್ನು ಮಾಡುತ್ತಿದ್ದಾರೆ. ಅಗರ್ ಪರೆಶಾನಿ ಆತಿ ಹೈ, ತೋ ಕುಚ್ ತೋ ಕರ್ನ ಪಡೇಗಾ [ಸಮಸ್ಯೆಗಳು ಬಂದರೆ, ನೀವು ಏನನ್ನಾದರೂ ಮಾಡಲೇಬೇಕು],”ಎಂದು ಅವರು ಹೇಳುತ್ತಾರೆ.

ಈ  ವರದಿಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಅಡಿಯಲ್ಲಿ ತಯಾರಿಸಲಾಗಿದೆ.

ಅನುವಾದ: ಚರಣ್‌ ಐವರ್ನಾಡು

Mohd Shehwaaz Khan

ஷெவாஸ் கான் தில்லியை சேர்ந்தவர். லாட்லி மீடியா விருதை 2023-ல் பெற்றவர். 2023ம் ஆண்டின் PARI-MMF மானியப் பணியாளராக இருந்தவர்.

Other stories by Mohd Shehwaaz Khan
Shivangi Pandey

ஷிவாங்கி பாண்டே புது டெல்லியை சேர்ந்த பத்திரிகையாளரும் மொழிபெயர்ப்பாளரும் ஆவார். மொழியின் இழப்பு எப்படி பொது நினைவை பாதிக்கிறது என்பதில் ஆர்வம் கொண்டவர். 2023ம் ஆண்டின் PARI-MMF மானியப் பணியாளர் ஆவார். Armory Square Ventures Prize For South Asian Literature In Translation 2024 விருது பட்டியல் இடம்பெற்றவர் அவர்.

Other stories by Shivangi Pandey
Photographer : Aishwarya Diwakar

ஐஸ்வர்யா திவாகர், உத்தரப்பிரதேச ராம்பூரை சேர்ந்த எழுத்தாளரும் மொழிபெயர்ப்பாளரும் ஆவார். ரொகில்காண்டின் பண்பாட்டு வரலாறு மற்றும் வாய்மொழி இலக்கியம் ஆகியவற்றில் அவர் பணிபுரிந்திருக்கிறார். தற்போது ஐஐடி மெட்ராஸில் உருது மொழிக்கான செயற்கை நுண்ணறிவு பணியில் இருக்கிறார்.

Other stories by Aishwarya Diwakar
Editor : Sarbajaya Bhattacharya

சர்பாஜயா பட்டாச்சார்யா பாரியின் மூத்த உதவி ஆசிரியர் ஆவார். அனுபவம் வாய்ந்த வங்க மொழிபெயர்ப்பாளர். கொல்கத்தாவை சேர்ந்த அவர், அந்த நகரத்தின் வரலாற்றிலும் பயண இலக்கியத்திலும் ஆர்வம் கொண்டவர்.

Other stories by Sarbajaya Bhattacharya
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad