“ಶಾಸನ್ ಕಾ ಬಾರಾ ಕದರ್ ಕರಾತ್ ನಹಿ ಅಮ್ಚ್ಯಾ ಮೆಹನತಿಚಿ [ನಮ್ಮ ಕಠಿಣ ಪರಿಶ್ರಮವನ್ನು ಸರ್ಕಾರ ಏಕೆ ಪ್ರಶಂಸಿಸುವುದಿಲ್ಲ?]" ಎಂದು ಅಂಗನವಾಡಿ ಕಾರ್ಯಕರ್ತೆ ಮಂಗಲ್ ಕರ್ಪೆ ಕೇಳುತ್ತಾರೆ.
"ದೇಶಲಾ ನಿರೋಗಿ, ಶುದ್ಧ್ ಥೆವ್ನ್ಯಾತ್ ಆಮ್ಚಾ ಮೋಠಾ ಹಾತ್ಬಾರ್ ಲಾಗ್ತೋ [ದೇಶವನ್ನು ಆರೋಗ್ಯಕರವಾಗಿ ಮತ್ತು ಆರೋಗ್ಯಕರವಾಗಿಡುವಲ್ಲಿ ನಾವು ದೊಡ್ಡ ಪಾತ್ರ ವಹಿಸುತ್ತೇವೆ]" ಎಂದು ಮಂಗಲ್ ತನ್ನಂತಹ ಅನೇಕ ಅಂಗನವಾಡಿ ಕಾರ್ಯಕರ್ತರ ಕೊಡುಗೆಗಳ ಬಗ್ಗೆ ಹೇಳುತ್ತಾರೆ. ಮಂಗಲ್ ಅವರಂತಹ ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಯೋಜನೆಗಳು ಮತ್ತು ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಸೇರಿದಂತೆ ಅವರ ಚಿಕ್ಕ ಮಕ್ಕಳ ನಡುವಿನ ಪ್ರಮುಖ ಕೊಂಡಿಯಾಗಿದ್ದಾರೆ.
39 ವರ್ಷದ ಮಂಗಲ್ ಅವರು ಅಹ್ಮದರ್‌ನಗರ ಜಿಲ್ಲೆಯ ರಹ್ತಾ ತಾಲೂಕಿನ ದೋರ್ಹಾಲೆ ಗ್ರಾಮದಲ್ಲಿ ಅಂಗನವಾಡಿ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ಇವರಂತೆ 2 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೆಲಸ ಮಾಡುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಸಮಗ್ರ ಮಕ್ಕಳ ಅಭಿವೃದ್ಧಿ (ಐಸಿಡಿಎಸ್) ವ್ಯವಸ್ಥೆಯಡಿಯಲ್ಲಿ ಆರೋಗ್ಯ, ಪೋಷಣೆ ಮತ್ತು ಮಕ್ಕಳ ಶಿಕ್ಷಣದಂತಹ ಎಲ್ಲಾ ಚಟುವಟಿಕೆಗಳನ್ನು ಗ್ರಾಮಗಳಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ.
ತನ್ನ ಕರ್ತವ್ಯದ ವಿಷಯದಲ್ಲಿ ಕಣ್ಣುಮುಚ್ಚಿ ಕುಳಿತಿರುವ ಸರ್ಕಾರದ ಗಮನ ಸೆಳೆಯಲು ಅಂಗನವಾಡಿ ಕಾರ್ಯಕರ್ತೆಯರು ಡಿಸೆಂಬರ್ 5, 2023ರಿಂದ ರಾಜ್ಯಾದ್ಯಂತ ಅನಿರ್ದಿಷ್ಟ ಮುಷ್ಕರಕ್ಕೆ ಕರೆ ನೀಡಿದ್ದಾರೆ.
"ನಾವು ಈ ಮೊದಲೂ ಅನೇಕ ಆಂದೋಲನಗಳನ್ನು ನಡೆಸಿದ್ದೇವೆ" ಎಂದು ಮಂಗಲ್ ಅವರು ಹೇಳುತ್ತಾರೆ. "ನಮ್ಮನ್ನು ಸರ್ಕಾರಿ ನೌಕರರೆಂದು ಗುರುತಿಸಬೇಕು. ನಮಗೆ ತಿಂಗಳಿಗೆ 26,000 ರೂಪಾಯಿಗಳ ಸಂಬಳ ಬೇಕು. ನಮಗೆ ಪಿಂಚಣಿ, ಪ್ರಯಾಣ ಮತ್ತು ಇಂಧನ ಭತ್ಯೆಗಳು ಬೇಕು" ಎಂದು ಪ್ರಮುಖ ಬೇಡಿಕೆಗಳು ಒಂದರ ನಂತರ ಒಂದರಂತೆ ಪಟ್ಟಿ ಮಾಡುತ್ತಾರೆ.
ಪ್ರತಿಭಟನೆಯ ಮೂರನೇ ದಿನ, ಈ ವರದಿ ಪ್ರಕಟವಾಗುವವರೆಗೂ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ, ನೂರಾರು ಅಂಗನವಾಡಿ ಕಾರ್ಯಕರ್ತರು ಡಿಸೆಂಬರ್ 8, 2023ರಂದು ಶಿರಡಿ ನಗರದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಿದರು.
"ನಮಗೂ ಒಂದು ಗೌರವಯುತ ಜೀವನವಕಾಶ ನೀಡಿ ಎಂದಷ್ಟೇ ನಾವು ಕೇಳುತ್ತಿರುವುದು. ಇದರಲ್ಲಿ ತಪ್ಪೇನಿದೆ ಹೇಳಿ" ಎಂದು 58 ವರ್ಷದ ಅಂಗನವಾಡಿ ಕಾರ್ಯಕರ್ತೆ ಮಂದಾ ರುಕರೆ ಹೇಳುತ್ತಾರೆ. ನಿವೃತ್ತಿಯ ಅಂಚಿನಲ್ಲಿರುವ ಅವರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. "ನಾನು ಕೆಲವೇ ವರ್ಷಗಳಲ್ಲಿ ನಿವೃತ್ತಿಯಾಗಲಿದ್ದೇನೆ. ನಾನು ಹಾಸಿಗೆ ಹಿಡಿದರೆ ಯಾರು ನೋಡಿಕೊಳ್ಳುತ್ತಾರೆ?" ಮಂದಾ ಅವರು ತನ್ನ ಹುಟ್ಟೂರಾದ ರುಯಿ ಗ್ರಾಮದ ಅಂಗನವಾಡಿಗೆ ಸೇರಿಕೊಂಡು 20 ವರ್ಷಗಳಾಗಿವೆ. "ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದಕ್ಕೆ ಪ್ರತಿಯಾಗಿ ಸಾಮಾಜಿಕ ಭದ್ರತೆಯಾಗಿ ನನಗೆ ಏನು ಸಿಗುತ್ತದೆ?" ಎಂದು ಅವರು ಕೇಳುತ್ತಾರೆ.
ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 10,000 ರೂ., ಸಹಾಯಕಿಯರಿಗೆ 5,500 ರೂ. ಸಂಭಾವನೆ ದೊರೆಯುತ್ತಿದೆ. "ನಾನು ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ನನಗೆ 1,400 ಸಿಗುತ್ತಿತ್ತು. ಈಗ, 2005ರಿಂದ ಇಲ್ಲಿಯವರೆ, ಅದು 8,600 ರೂ.ಗಳಿಗೆ ಬಂದು ನಿಂತಿದೆ" ಎಂದು ಮಂಗಲ್ ಗೌರವಧನದ ವಿಷಯವನ್ನು ವಿವರಿಸುತ್ತಾರೆ.
ಮಂಗಲ್ ಅವರು ತನ್ನ ಗವಾನೆ ಬಸ್ತಿ ಅಂಗನವಾಡಿಯಲ್ಲಿ 50 ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಅವರಲ್ಲಿ ಸುಮಾರು 20 ಮಕ್ಕಳು 3ರಿಂದ 6 ವರ್ಷ ವಯಸ್ಸಿನರು, "ಪ್ರತಿದಿನ ಎಲ್ಲಾ ಮಕ್ಕಳು ಅಂಗನವಾಡಿಗೆ ಬರುವಂತೆ ನಾವು ನೋಡಿಕೊಳ್ಳಬೇಕು." ಕೆಲವೊಮ್ಮೆ, ಮಂಗಲ್ ಅವರು ಸ್ವತಃ ಮಕ್ಕಳ ಮನೆಗೆ ಹೋಗಿ ಅವರನ್ನು ತಮ್ಮ ಸ್ಕೂಟರಿನಲ್ಲಿ ಕರೆತರುತ್ತಾರೆ,
ಇಷ್ಟೇ ಅಲ್ಲದೆ "ಇದಾದ ಮೇಲೆ ನಾವು ಆ ಮಕ್ಕಳಿಗೆ ಉಪಾಹಾರ ಮತ್ತು ಆಹಾರವನ್ನು ತಯಾರಿಸಲು ಪ್ರಾರಂಭಿಸುತ್ತೇವೆ, ಮಕ್ಕಳು ಸರಿಯಾಗಿ ಏನು ತಿನ್ನುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸುತ್ತೇವೆ, ವಿಶೇಷವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಿಷಯದಲ್ಲಿ." ಇಲ್ಲಿಗೇ ಕೆಲಸ ಮುಗಿಯುವುದಿಲ್ಲ. ಮಗುವಿನ ಆರೋಗ್ಯ ದಾಖಲೆಯನ್ನು ನೋಂದಾಯಿಸುವುದು, ಅದನ್ನು ಪೋಷಣ್ ನ್ಯೂಟ್ರಿಷನ್ ಟ್ರ್ಯಾಕರ್ ಅಪ್ಲಿಕೇಶನ್ನಿನಲ್ಲಿ ಹಾಕುವುದು ಸೇರಿದಂತೆ ಮಾಹಿತಿಯನ್ನು ಭರ್ತಿ ಮಾಡುವ ಬಹಳ ಸಂಕೀರ್ಣ ಮತ್ತು ಸಮಯ ತೆಗೆದುಕೊಳ್ಳುವ ಕೆಲಸವೂ ಅವರ ಪಾಲಿಗಿದೆ.
"ರಿಜಿಸ್ಟರ್, ಪೆನ್-ಪೆನ್ಸಿಲ್-ರಬ್ಬರ್, ಅಪ್ಲಿಕೇಶನ್ಗಾಗಿ ನೆಟ್ ರೀಚಾರ್ಜ್, ಮನೆ ಮನೆಗೆ ಹೋಗಲು ಗಾಡಿಗೆ ಇಂಧನ, ಪ್ರತಿಯೊಂದು ವೆಚ್ಚವೂ ನಮ್ಮದು" ಎಂದು ಮಂಗಲ್ ತಮ್ಮ ಕೆಲಸದಲ್ಲಿನ ತೊಂದರೆಗಳನ್ನು ಪಟ್ಟಿ ಮಾಡುತ್ತಾರೆ. "ನಮಗಾಗಿ ನಮ್ಮ ಬಳಿ ಏನೂ ಉಳಿಯುವುದಿಲ್ಲ."
ಪದವೀಧರರಾದ ಮಂಗಲ್ ಕಳೆದ 18 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಇಬ್ಬರು ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದರು. ಸಾಯಿ (20) ಮತ್ತು ವೈಷ್ಣವಿ (18). ಸಾಯಿ ಎಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆಯುತ್ತಿದ್ದರೆ, ವೈಷ್ಣವಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. "ನಾನು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಬಯಸುತ್ತೇನೆ. ಇದಕ್ಕೆ ವರ್ಷಕ್ಕೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. 10,000 [ರೂಪಾಯಿ] ಪಡೆದು ಜೀವನೋಪಾಯವನ್ನು ಹೇಗೆ ಪೂರೈಸುವುದು?" ಎಂದು ಅವರು ಹೇಳುತ್ತಾರೆ.
ಹೆಚ್ಚಿನ ಸಂಪಾದನೆಗಾಗಿ ಅವರು ಬೇರೆ ಕೆಲಸಗಳನ್ನೂ ಮಾಡಬೇಕಾಗುತ್ತದೆ. "ನಾನು ಮನೆ ಮನೆಗೆ ಹೋಗಿ ರವಿಕೆ, ಉಡುಗೆ ಇತ್ಯಾದಿಯನ್ನು ಹೊಲಿಗೆಗೆ ಕೊಡುವುದಿದ್ದರೆ ಕೊಡಿ ಎಂದು ಕೇಳುತ್ತೇನೆ. ಜೊತೆಗೆ ಸಣ್ಣ ಸಣ್ಣ ವಿಡಿಯೋಗಳನ್ನು ಸಹ ಎಡಿಟ್ ಮಾಡಿ ಕೊಡುತ್ತೇನೆ, ಇಂಗ್ಲಿಷ್ ಭಾಷೆಯಲ್ಲಿರುವ ಅರ್ಜಿಗಳನ್ನು ಸಹ ಭರ್ತಿ ಮಾಡಿ ಕೊಡುತ್ತೇನೆ. ಸಿಕ್ಕ ಚಿಕ್ಕಪುಟ್ಟ ಕೆಲಸಗಳೆಲ್ಲವನ್ನೂ ಮಾಡುತ್ತೇನೆ. ಇದಲ್ಲದೆ ಬೇರೆ ದಾರಿಯಾದರೂ ಏನಿದೆ?" ಎಂದು ಮಂಗಲ್ ಕೇಳುತ್ತಾರೆ.
ಅಂಗನವಾಡಿ ಕಾರ್ಯಕರ್ತೆಯಾಗಿ ಮಂಗಲ್ ಅವರು ಎದುರಿಸುತ್ತಿರುವ ದುಃಸ್ಥಿತಿ ಆಶಾ ಕಾರ್ಯಕರ್ತರದೂ ಆಗಿದೆ. (ಓದಿ: ಹಳ್ಳಿಗಳ ಆರೋಗ್ಯ, ಅನಾರೋಗ್ಯಗಳ ಕಾಳಜಿ ಮಾಡುವ ತಾಯಂದಿರು ). ಈ ಇಬ್ಬರು ಸ್ವಯಂಸೇವಕರು ಆರೋಗ್ಯ, ಲಸಿಕೆ, ನವಜಾತ ಶಿಶುಗಳ ಪೌಷ್ಠಿಕಾಂಶದಿಂದ ಹಿಡಿದು ಮಾರಣಾಂತಿಕ ಕ್ಷಯರೋಗದಿಂದ ಕರೋನಾ ಸಾಂಕ್ರಾಮಿಕ ರೋಗದವರೆಗೆ ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.
ಏಪ್ರಿಲ್ 2022ರಲ್ಲಿ, ಭಾರತದ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಅಪೌಷ್ಟಿಕತೆ ಮತ್ತು ಕೋವಿಡ್ -19 ವಿರುದ್ಧ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರ ಪಾತ್ರವು "ನಿರ್ಣಾಯಕ" ಮತ್ತು "ಮುಖ್ಯ" ಎಂದು ಹೇಳಿದೆ. ಅರ್ಹ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವಾರ್ಷಿಕ ಶೇ.10ರಷ್ಟು ಬಡ್ಡಿಯೊಂದಿಗೆ ಗ್ರಾಚ್ಯುಟಿ ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರು ತಮ್ಮ ವಿದಾಯ ಹೇಳಿಕೆಯಲ್ಲಿ, "ಈ ಧ್ವನಿರಹಿತ ಕಾರ್ಮಿಕರು ಮಾಡುತ್ತಿರುವ ಕೆಲಸದ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಿಳಿದುಕೊಳ್ಳಬೇಕು ಮತ್ತು ಅವರಿಗೆ ಸುಧಾರಿತ ಸೌಲಭ್ಯಗಳನ್ನು ಒದಗಿಸುವ ಪ್ರಕ್ರಿಯೆಯನ್ನು ಕಂಡುಹಿಡಿಯಬೇಕು" ಎಂದು ಒತ್ತಾಯಿಸಿದ್ದರು.
ಮಂಗಲ್ ಮತ್ತು ಮಂದಾ ಅವರಂತಹ ಲಕ್ಷಾಂತರ ಜನರು ಈ ಹೇಳಿಕೆಯ ಅನುಷ್ಠಾನದ ಮೇಲೆ ಕಣ್ಣಿಟ್ಟಿದ್ದಾರೆ.
"ಈ ಬಾರಿ ನಮಗೆ ಲಿಖಿತ ಭರವಸೆ ಬೇಕು. ದುವರೆಗೂ ನಾವು ಹಿಂದೆ ಸರಿಯುವುದಿಲ್ಲ. ಇದು ನಮ್ಮ ಗೌರವದ ಪ್ರಶ್ನೆ, ನಮ್ಮ ಉಳಿವಿಗಾಗಿ [अस्तित्व] ಹೋರಾಟ" ಎಂದು ಮಂಗಲ್ ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು