ಅಂಚೆ ಕಚೇರಿಯ ಕಿಟಕಿ ತೆರೆದಿತ್ತು. ಅಲ್ಲಿದ್ದ ಪೋಸ್ಟ್ ಮ್ಯಾನ್ ಆ ಕಿಟಕಿ ಮೂಲಕ ನಾವು ಸಮೀಪಿಸುತ್ತಿರುವುದನ್ನು ಗಮನಿಸುತ್ತಿದ್ದರು.ʼ
ರೇಣುಕಾ ಪ್ರಸಾದ್ ಅವರು ಒಂದು ಮುಗುಳ್ನಗೆಯೊಡನೆ ನಮ್ಮನ್ನು ಕಚೇರಿಯೊಳಗೆ ಸ್ವಾಗತಿಸಿದರು. ಆ ಅಂಚೆ ಕಚೇರಿ ಮನೆಯೊಂದರ ಭಾಗವಾಗಿರುವ ಒಂದು ಕೋಣೆ. ಕೋಣೆಯ ಒಳಗೆ ಹೋಗಲು ಮನೆಯ ಮೂಲಕವೇ ದಾರಿ. ಅವರ ಆ ಪುಟ್ಟ ಕಾರ್ಯಕ್ಷೇತ್ರದೊಳಗೆ ಕಾಲಿಡುತ್ತಲೇ ನಮ್ಮನ್ನು ಕಾಗದ ಮತ್ತು ಶಾಯಿಯ ವಾಸನೆ ನಮ್ಮನ್ನು ಸ್ವಾಗತಿಸಿದವು. ಅವರು ತಮ್ಮ ಕಾಗದಗಳನ್ನು ವಿಳಾಸಗಳಿಗೆ ಅನುಗುಣವಾಗಿ ಜೋಡಿಸುತ್ತಿದ್ದರು. ನನ್ನೆಡೆಗೆ ನೋಡಿ ಮುಗುಳ್ನಕ್ಕು ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. “ಬನ್ನಿ, ಬನ್ನಿ! ಆರಾಮಾಗಿ ಕೂತ್ಕೊಳ್ಳಿ” ಎನ್ನುತ್ತಾ ಮತ್ತೆ ಸ್ವಾಗತಿಸಿದರು.
ಹೊರಗಿನ ತಾಪಮಾನಕ್ಕೆ ಹೋಲಿಸಿದರೆ ಅಂಚೆ ಕಚೇರಿಯ ಒಳಗಿನ ವಾತಾವರಣ ತಣ್ಣಗಿತ್ತು. ಗಾಳಿಯೊಡನೆ ಸ್ನೇಹ ಬೆಳೆಸಲೆಂದು ಇದ್ದ ಒಂದು ಕಿಟಕಿಯನ್ನು ತೆರೆದಿಡಲಾಗಿತ್ತು. ಕೈ ಕಚೇರಿಯ ಸುಣ್ಣ ಬಳಿದ ಗೋಡೆಯಲ್ಲಿ ಯಿಂದ ತಯಾರಿಸಿದ ಹಲವು ಪೋಸ್ಟರುಗಳು, ನಕ್ಷೆಗಳು ಮತ್ತು ಪಟ್ಟಿಗಳು ನೇತಾಡುತ್ತಿದ್ದವು. ಅಲ್ಲಿದ್ದ ಡೆಸ್ಕ್ ಮತ್ತು ಸೆಲ್ಫ್‌ಗಳು ಕಚೇರಿಯ ಸಾಕಷ್ಟು ಜಾಗವನ್ನು ಕಬಳಿಸಿದ್ದವಾದರೂ ಅವುಗಳಿಂದ ಅಲ್ಲಿ ಇಕ್ಕಟ್ಟೇನೂ ಆಗುತ್ತಿರಲಿಲ್ಲ.
64 ವರ್ಷ ಹಿರಿಯರಾದ ರೇಣುಕಪ್ಪ ಗ್ರಾಮೀಣ್ ಡಾಕ್ ಸೇವಕ್ (ಗ್ರಾಮೀಣ ಅಂಚೆ ಸೇವಕ) ಆಗಿ ತುಮಕೂರು ಜಿಲ್ಲೆಯ ದೇವರಾಯಪಟ್ಟಣ ಎನ್ನುವ ಪಟ್ಟಣದಲ್ಲಿ ಕೆಲಸ ಮಾಡುತ್ತಾರೆ. ಇವರ ಸುಪರ್ದಿಯಲ್ಲಿ ಒಟ್ಟು ಆರು ಹಳ್ಳಿಗಳು ಬರುತ್ತವೆ.
ದೇವರಾಯಪಟ್ಟಣದ ಈ ಗ್ರಾಮೀಣ ಅಂಚೆ ಕಚೇರಿಯ ಅಧಿಕೃತ ಕೆಲಸದ ಸಮಯ ಬೆಳಗ್ಗೆ 8:30ರಿಂದ ಮಧ್ಯಾಹ್ನ 1 ಗಂಟೆಯ ತನಕ. ಆದರೆ ಕೆಲವೊಮ್ಮೆ ಇಲ್ಲಿನ ಏಕಮಾತ್ರ ಉದ್ಯೋಗಿಯಾಗಿರುವ ರೇಣುಕಾ ಪ್ರಸಾದ್ ಬೆಳಗಿನ 7 ಗಂಟೆಗೆಲ್ಲ ಬಂದು ಕೆಲಸ ಶುರುಹಚ್ಚಿಕೊಳ್ಳುತ್ತಾರೆ. ಮತ್ತು ಕೆಲಸ ಮುಗಿಯುವಾಗ ಸಂಜೆ 5 ದಾಟಿರುತ್ತದೆ. “ಇಲ್ಲಿನ ಕೆಲಸಗಳನ್ನು ಮುಗಿಸಲು ದಿನದ ನಾಲ್ಕೂವರೆ ಗಂಟೆಗಳು ಸಾಲುವುದಿಲ್ಲ” ಎಂದು ಈ ಹಿರಿಯ ಅಂಚೆಯಣ್ಣ ವಿವರಿಸುತ್ತಾರೆ.
ತುಮಕೂರು ಜಿಲ್ಲೆಯ ಬೆಳಗುಂಬ ಗ್ರಾಮದ ಅಂಚೆ ಕಚೇರಿಯಿಂದ ಬರುವ ಪೋಸ್ಟಲ್ ಚೀಲದಲ್ಲಿನ ಕಾಗದಗಳು, ಪತ್ರಿಕೆಗಳು ಮತ್ತು ಇತರ ದಾಖಲೆಗಳನ್ನು ಪಡೆಯುವುದರೊಂದಿಗೆ ರೇಣುಕಪ್ಪನವರ ಕೆಲಸ ಆರಂಭಗೊಳ್ಳುತ್ತದೆ. ಮೊದಲಿಗೆ ಅವರು ಅವೆಲ್ಲ ಅಂಗಳನ್ನು ದಾಖಲಿಸಿಕೊಳ್ಳಬೇಕು. ದಿನಂಪ್ರತಿ ಮಧ್ಯಾಹ್ನ ಎರಡು ಗಂಟೆಯ ನಂತರ ಅವುಗಳನ್ನು ಸಂಬಂಧಿಸಿದವರಿಗೆ ತಲುಪಿಸಲು ಹೊರಡುತ್ತಾರೆ. ಅವರು ಕಾಗದಗಳನ್ನು ತಲುಪಿಸುವ ಆರು ಗ್ರಾಮಗಳು - ದೇವರಾಯಪಟ್ಟಣ, ಮಾರನಾಯಕಪಾಳ್ಯ, ಪ್ರಶಾಂತನಗರ, ಕುಂದೂರು, ಬಂಡೆಪಾಳ್ಯ, ಶ್ರೀನಗರ - ಆರು ಕಿಲೋಮೀಟರ್ ವ್ಯಾಪ್ತಿಯಲ್ಲಿವೆ. ಅವರು ತಮ್ಮ ಪತ್ನಿ ರೇಣುಕಾಂಬ ಅವರೊಂದಿಗೆ ವಾಸಿಸುತ್ತಿದ್ದಾರೆ; ಅವರ ಮೂವರು ವಯಸ್ಕ ಹೆಣ್ಣುಮಕ್ಕಳು ಈಗ ಬೇರೆಡೆ ವಾಸವಿದ್ದಾರೆ.
ಅವರು ತಮ್ಮ ಮೇಜಿನ ಹಿಂದಿನ ಗೋಡೆಯ ಮೇಲೆ ನೇತುಹಾಕಿರುವ ಒಂದು ಸಣ್ಣ ಕೈಯಿಂದ ತಯಾರಿಸಿದ ನಕ್ಷೆಯನ್ನು ನಮಗೆ ತೋರಿಸಿದರು, ಅದರಲ್ಲಿ ಅವರು ಭೇಟಿ ನೀಡಬೇಕಾದ ಎಲ್ಲಾ ಹಳ್ಳಿಗಳು, ಅವು ಎಷ್ಟು ದೂರದಲ್ಲಿವೆ ಎನ್ನುವುದನ್ನು ನಾಲ್ಕು ದಿಕ್ಸೂಚಿ ಬಿಂದುಗಳೊಂದಿಗೆ ಕನ್ನಡದಲ್ಲಿ ಗುರುತು ಮಾಡಲಾಗಿದೆ ಮತ್ತು ಪೂರ್ಣ ವಿವರಗಳನ್ನು ಸಹ ನೀಡಲಾಗಿದೆ. ಪೂರ್ವಕ್ಕೆ 2 ಕಿಲೋಮೀಟರ್ ದೂರದಲ್ಲಿರುವ ಮಾರನಾಯಕನಪಾಳ್ಯವು ಹತ್ತಿರದ ಗ್ರಾಮವಾಗಿದೆ. ಪಶ್ಚಿಮಕ್ಕೆ ಸುಮಾರು 2.5 ಕಿ.ಮೀ ದೂರದಲ್ಲಿರುವ ಪ್ರಶಾಂತನಗರ, ಉತ್ತರ ಮತ್ತು ದಕ್ಷಿಣಕ್ಕೆ ಕುಂದೂರು ಮತ್ತು ಬಂಡೆಪಾಳ್ಯ ಕ್ರಮವಾಗಿ 3 ಕಿ.ಮೀ ಮತ್ತು ಶ್ರೀನಗರ 5 ಕಿ.ಮೀ ದೂರದಲ್ಲಿವೆ.
ಬಿಸಿಲಿರಲಿ ಅಥವಾ ಸುರಿವ ಮಳೆಯಿರಲಿ ರೇಣುಕಪ್ಪ ಒಬ್ಬರೇ ಇವಿಷ್ಟೂ ಊರುಗಳಿಗೆ ಕಾಗದ ತಲುಪಿಸುತ್ತಾರೆ.
ಈ ಊರುಗಳನ್ನು ತಲುಪಲು ಅವರು ಹಳೆಯದೊಂದು ಸೈಕಲ್ ಹೊಂದಿದ್ದಾರೆ. ಕಥೆಗಳಲ್ಲಿ ಬರುವ ಟಿಪಿಕಲ್ ಅಂಚೆಯಣ್ಣನಂತೆ ಅವರು ಆ ಸೈಕಲ್ ಹತ್ತಿ ಹಳ್ಳಿಗಳಿಗೆ ಹೋಗುತ್ತಾರೆ ಮತ್ತು ಊರಿನ ಜನರು ಓಡಿ ಬಂದು ನಗುತ್ತಾ ಅವರನ್ನು ಸ್ವಾಗತಿಸುತ್ತಾರೆ.
“ರೇಣುಕಪ್ಪಾ ಇವತ್ತು ನಮ್ಮ ಮನೆಯಲ್ಲಿ ಇವತ್ತು ಪೂಜೆಯಿದೆ ಬನ್ನಿ!” ಎಂದು ಅವರ ಮನೆಯ ಮುಂದೆ ಸಾಗುತ್ತಿದ್ದ ಮಹಿಳೆ ಕರೆದರು. ಅವರು ತಲೆಯಾಡಿಸಿ ಆಗಲಿ ಎಂದರು. ಹಳ್ಳಿಯ ಇನ್ನೊಬ್ಬ ವ್ಯಕ್ತಿ ರೇಣುಕಪ್ಪನವರಿಗೆ ಕೈ ಬೀಸಿ ಕರೆದು ನಮಸ್ಕರಿಸಿದ. ಇವರೂ ಅವನಿಗೆ ಮುಗುಳ್ನಕ್ಕು ನಮಸ್ಕರಿಸಿದರು. ಊರಿನ ಜನರು ಮತ್ತು ಪೋಸ್ಟ್ ಮ್ಯಾನ್ ನಡುವಿನ ಉತ್ತಮ ಸಂಬಂಧ ಅಲ್ಲಿ ಎದ್ದು ಕಾಣುತ್ತಿತ್ತು.
ರೇಣುಕಪ್ಪ ಪ್ರತಿದಿನ 10 ಕಿಲೋಮೀಟರ್ ದೂರವನ್ನು ಕಾಗದಗಳನ್ನು ತಲುಪಿಸುವ ಸಲುವಾಗಿ ಕ್ರಮಿಸುತ್ತಾರೆ. ಅವರು ಆ ದಿನದ ಕೆಲಸವನ್ನು ಮುಗಿಸುವ ಮೊದಲು ಆ ದಿನ ಅವರು ತಲುಪಿಸಿದ ಕಾಗದಗಳ ವಿವರಗಳನ್ನು ದಪ್ಪನೆಯ ಹರಿದಂತಿರುವ ಪುಸ್ತಕದಲ್ಲಿ ದಾಖಲಿಸುವುದು ಕಡ್ಡಾಯ.
ಈಗೀಗ ಆನ್ಲೈನ್ ಸಂವಹನಗಳು ಹೆಚ್ಚಿರುವುದರಿಂದಾಗಿ ಬರುವ ಕಾಗದಗಳ ಸಂಖ್ಯೆಯಲ್ಲಿ ಕುಸಿತ ಉಂಟಾಗಿದೆ ಎನ್ನುತ್ತಾರೆ ರೇಣುಕಪ್ಪ. “ಆದರೆ ಪತ್ರಿಕೆಗಳು, ಬ್ಯಾಂಕ್ ದಾಖಲೆಗಳು ಇತ್ತೀಚಿನ ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಾಗಿವೆ. ಹೀಗಾಗಿ ನನ್ನ ಕೆಲಸವೂ ಹೆಚ್ಚಾಗಿದೆ.”
ಅವರಂತಹ ಗ್ರಾಮೀಣ ಡಾಕ್ ಸೇವಕರನ್ನು 'ಹೆಚ್ಚುವರಿ ಇಲಾಖಾ ಕಾರ್ಮಿಕರು' ಎಂದು ಪರಿಗಣಿಸಲಾಗುತ್ತದೆ ಮತ್ತು ಅವರನ್ನು ಪಿಂಚಣಿ ಬಿಡಿ, ವೇತನಕ್ಕೂ ಪರಿಗಣಿಸಲಾಗುವುದಿಲ್ಲ. ಅವರು ಸ್ಟಾಂಪುಗಳು ಮತ್ತು ಲೇಖನ ಸಾಮಗ್ರಿಗಳ ಮಾರಾಟ, ಅಂಚೆಯ ಸಾಗಣೆ ಮತ್ತು ವಿತರಣೆ ಮತ್ತು ಯಾವುದೇ ಇತರ ಅಂಚೆ ಕರ್ತವ್ಯಗಳಂತಹ ಎಲ್ಲಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ನಿಯಮಿತ ನಾಗರಿಕ ಸೇವೆಯ ಭಾಗವಾಗಿರುವುದರಿಂದ, ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 2021 ರ ವ್ಯಾಪ್ತಿಗೆ ಬರುವುದಿಲ್ಲ. ಪ್ರಸ್ತುತ, 01/04/2011ರಿಂದ ಜಾರಿಗೆ ಬರುವಂತೆ ಸೇವಾ ಬಿಡುಗಡೆ ಪ್ರಯೋಜನ ಯೋಜನೆಯನ್ನು ಹೊರತುಪಡಿಸಿ ಅವರಿಗೆ ಯಾವುದೇ ಪಿಂಚಣಿ ಪ್ರಯೋಜನಗಳನ್ನು ನೀಡುವ ಯಾವುದೇ ಪ್ರಸ್ತಾಪವನ್ನು ಸರ್ಕಾರ ಹೊಂದಿಲ್ಲ.
ರೇಣುಕಪ್ಪ ನಿವೃತ್ತರಾದ ನಂತರ ಅವರಿಗೆ ಪ್ರಸ್ತುತ ಸಿಗುತ್ತಿರುವ ಮಾಸಿಕ 20,000 ರೂ.ಗಳ ಸಂಬಳ ನಿಲ್ಲುತ್ತದೆ ಮತ್ತು ಅವರಿಗೆ ಪಿಂಚಣಿ ಸಿಗುವುದಿಲ್ಲ. "ನನ್ನಂತಹ ಪೋಸ್ಟ್ ಮ್ಯಾನ್‌ಗಳು, ಏನಾದರೂ ಬದಲಾವಣೆ ಬರಬಹುದು ಎನ್ನುವ ಭರವಸೆಯೊಂದಿಗೆ ಅನೇಕ ವರ್ಷಗಳ ಕಾಲ ಕಾಯುತ್ತಿದ್ದೆವು. ನಮ್ಮ ಕಠಿಣ ಪರಿಶ್ರಮವನ್ನು ಯಾರಾದರೂ ಗುರುತಿಸುತ್ತಾರೆನ್ನುವ ಆಸೆಯಿಂದ ನಾವು ಕಾಯುತ್ತಿದ್ದೆವು. ಇತರ ಎಲ್ಲಾ ಪಿಂಚಣಿದಾರರಿಗೆ ನೀಡಲಾಗುವ ಮೊತ್ತದ ಒಂದು ಸಣ್ಣ ಭಾಗವನ್ನು, ಅಂದರೆ ಒಂದು ಸಾವಿರ ಅಥವಾ ಎರಡು ಸಾವಿರ ರೂಪಾಯಿಗಳನ್ನು ನೀಡಿದರೂ ನಮಗೆ ಸಾಕಾಗುತ್ತದೆ" ಎಂದು ಅವರು ಹೇಳುತ್ತಾರೆ. "ಇದು ಬದಲಾಗುವ ಹೊತ್ತಿಗೆ ನಾನು ನಿವೃತ್ತನಾಗಿರುತ್ತೇನೆ" ಎಂದು ಅವರು ನೋವಿನಿಂದ ಹೇಳುತ್ತಾರೆ.
ಗೋಡೆಯ ಮೇಲೆ ನೇತು ಹಾಕಲಾಗಿದ್ದ ಸಣ್ಣ ಪೇಪರ್ ಕಟಿಂಗ್ ಒಂದನ್ನು ನೋಡಿ, ಆ ಕುರಿತು ಕೇಳಿದಾಗ ಅವರ ಕಣ್ಣುಗಳು ಅರಳಿದವು. “ಅದು ನನ್ನ ಪಾಲಿನ ಸಣ್ಣ ಸಂಭ್ರಮ. ಅದನ್ನು ನಾನು ಅಂಚೆ ಚೀಟಿ ಪೋಸ್ಟರ್ ಎಂದು ಕರೆಯುತ್ತೇನೆ” ಎಂದು ಅವರು ಹೇಳಿದರು.
“ಇದು ನನಗೆ ಹವ್ಯಾಸವಾಗಿ ಬಂದಿದೆ. ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದು ಪ್ರಸಿದ್ಧ ಕವಿಗಳು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಇತರ ಗಮನಾರ್ಹ ವ್ಯಕ್ತಿಗಳನ್ನು ಗೌರವಿಸಲು ಈ ಅಂಚೆಚೀಟಿಗಳನ್ನು ಪತ್ರಿಕೆಯಲ್ಲಿ ಬಿಡುಗಡೆ ಮಾಡಲು ಪ್ರಾರಂಭಿಸಿತು.” ಆಗ ರೇಣುಕಪ್ಪ ಅವುಗಳನ್ನು ಪತ್ರಿಕೆಯಿಂದ ಕತ್ತರಿಸಿ ಸಂಗ್ರಹಿಸಿಟ್ಟುಕೊಳ್ಳುವ ಹವ್ಯಾಸವನ್ನು ಬೆಳೆಸಿಕೊಂಡರು. “ಮುಂದಿನ ಸಂಚಿಕೆ ಬರುವ ತನಕ ಕಾತುರದಿಂದ ಕಾಯುವುದರಲ್ಲಿ ಏನೋ ಒಂದು ಖುಷಿಯಿತ್ತು ನನಗೆ.”
ಈ ಲೇಖನವನ್ನು ಸಂಯೋಜಿಸಲು ಸಹಾಯ ಮಾಡಿದ ತುಮಕೂರಿನ ಟಿವಿಎಸ್ ಅಕಾಡೆಮಿಯ ಶಿಕ್ಷಕಿ ಶ್ವೇತಾ ಸತ್ಯನಾರಾಯಣ್ ಅವರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ಸಹಯೋಗದ ಭಾಗವಾಗಿ ಪರಿ ಎಜುಕೇಶನ್ ಈ ಕೆಳಗಿನ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಿತು: ಆದಿತ್ಯ, ಅಷ್ಟ, ದ್ರುತಿ, ದಿವ್ಯಶ್ರೀ, ಖುಷಿ ಜೈನ್, ನೇಹಾ, ಪ್ರಣೀತ್, ಪ್ರಣತಿ ಎಸ್., ಪ್ರಾಂಜಲಾ, ಸಂಹಿತಾ, ಗುಣೋತ್ತಮ್, ಪರಿಣಿತಾ, ನಿರುತಾ ಮತ್ತು ಉತ್ಸವ್.
ಅನುವಾದ: ಶಂಕರ. ಎನ್. ಕೆಂಚನೂರು