ಮಾಯಾ ಥಾಮಿ ತನ್ನ ಬೆನ್ನಿನ ಮೇಲೆ 30 ಕೆಜಿ ಗ್ಯಾಸ್ ಸಿಲಿಂಡರೊಂದನ್ನು ಹೊತ್ತುಕೊಂಡು ಮೂರು ಕಿಲೋಮೀಟರ್ ನಡೆದರು. ಈ ಭಾರದೊಂದಿಗೆ 200 ಮೆಟ್ಟಿಲುಗಳನ್ನು ಹತ್ತಿ, ಆ ದಿನದ ಮೊದಲ ಗ್ರಾಹಕನಿಗೆ ಸಿಲಿಂಡರನ್ನು ತಲುಪಿಸಿದರು.
32 ವರ್ಷ ಪ್ರಾಯದ ಇವರು ತಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುತ್ತಾ, "ಈಗ ನಾನು ಆ ಬೆಟ್ಟಕ್ಕೆ ಮತ್ತೊಂದು ಸಿಲಿಂಡರನ್ನು ಸಾಗಿಸಬೇಕು," ಎಂದು ದೂರದಲ್ಲಿರುವ ಸ್ಥಳವೊಂದನ್ನು ತೋರಿಸುತ್ತಾರೆ. ತನ್ನ ಕೆಲಸಕ್ಕೆ 80 ರುಪಾಯಿ ಸಂಬಳ ತೆಗೆದುಕೊಂಡು ಮುಂದಿನ ಡೆಲಿವರಿ ಕೆಲಸಕ್ಕೆ ತಕ್ಷಣವೇ ಹೊರಡುತ್ತಾರೆ. ಮುಂದಿನ ಆರು ಗಂಟೆಗಳ ಕಾಲ, ಅವರು ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಗ್ಯಾಸ್) ಸಿಲಿಂಡರ್‌ಗಳನ್ನು ಹೊತ್ತುಕೊಂಡೇ ಓಡಾಡುತ್ತಾರೆ.
"ಲೋಡ್ ತುಂಬಾ ಭಾರವಿದ್ದಾಗ, ಪುರುಷರಿಗೆ ಆದ್ಯತೆ ನೀಡಲಾಗುತ್ತದೆ, ಮತ್ತು ನಾವು ಮಹಿಳೆಯರಾದ ಕಾರಣ ಜನ ನಮ್ಮ ಜೊತೆಗೆ ಚೌಕಾಸಿ ಮಾಡುತ್ತಾರೆ,” ಎಂದು ಮಾಯಾ ಹೇಳುತ್ತಾರೆ. ಒಂದು ಟ್ರಿಪ್‌ಗೆ ಮಹಿಳೆಗೆ 80 ರುಪಾಯಿ ನೀಡಿದರೆ, ಅಷ್ಟೇ ದೂರ ಸಾಮಾನು ಸಾಗಿಸುವ ಪುರುಷನಿಗೆ 100 ರುಪಾಯಿ ಕೊಡುತ್ತಾರೆ.
ಪಶ್ಚಿಮ ಬಂಗಾಳದ ಜನನಿಬಿಡ ಪಟ್ಟಣವಾದ ಪೂರ್ವ ಹಿಮಾಲಯದ ಡಾರ್ಜಿಲಿಂಗ್ 2,042 ಮೀಟರ್ ಎತ್ತರದಲ್ಲಿರುವ ಪ್ರದೇಶ. ಇಲ್ಲಿನ ಗುಡ್ಡಗಾಡು ಪ್ರದೇಶದ ರಸ್ತೆಗಳಲ್ಲಿ ಓಡಾಟ ಸುಲಭವಲ್ಲದ ಕಾರಣ, ಇಲ್ಲಿನ ನಿವಾಸಿಗಳು ದೈನಂದಿನ ಅಗತ್ಯಗಳಾದ ತರಕಾರಿಗಳು, ನೀರು, ಸಿಲಿಂಡರ್‌ಗಳು ಮತ್ತು ಮನೆಗೆ ತಂದ ಪೀಠೋಪಕರಣಗಳ ಸಾಗಿಸಲು ಈ ಹಮಾಲಿಗಳನ್ನು ಅವಲಂಬಿಸಬೇಕು. ವಾಹನಗಳಿಗೆ ಇಲ್ಲಿನ ಚಡಾವುಗಳನ್ನು ಏರಲು ಸಾಧ್ಯವಾಗುವುದಿಲ್ಲ, ಹಾಗಾಗಿ ಇರುವ ಆಯ್ಕೆಗಳೆಂದರೆ ಒಂದೋ ನೀವೇ ಒಯ್ಯುಬೇಕು, ಇಲ್ಲವೇ ಗ್ಯಾಸ್ ಏಜೆನ್ಸಿ ಅಥವಾ ಅಂಗಡಿಯವರು ಹಮಾಲಿಗಳ ಮೂಲಕ ತಲುಪಿಸುತ್ತಾರೆ.
ನೇಪಾಳದಿಂದ ಬಂದಿರುವ ಮಾಯಾ ಥಾಮಿ 12 ವರ್ಷಗಳಿಂದ ಡಾರ್ಜಿಲಿಂಗ್‌ನಲ್ಲಿ ಹಮಾಲಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಂತೆ, ನಗರದ ಇತರ ಹಮಾಲಿಗಳು ಕೂಡ ಹೆಚ್ಚಾಗಿ ನೇಪಾಳದಿಂದ ವಲಸೆ ಬಂದ ಮಹಿಳೆಯರು ಮತ್ತು ಥಾಮಿ ಸಮುದಾಯಕ್ಕೆ ಸೇರಿದವರು (ಇವರನ್ನು ಪಶ್ಚಿಮ ಬಂಗಾಳದಲ್ಲಿ ಇತರ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ). ಇವರು ನಮ್ಲೋ ಎಂಬ ಪಟ್ಟಿಯನ್ನು ಬಳಸಿ ಬಿಗಿಯಾದ ಡೋಕೊವನ್ನು (ಬಿದಿರಿನ ಬುಟ್ಟಿ) ತಮ್ಮ ಬೆನ್ನಿಗೆ ಕಟ್ಟಿಕೊಂಡು, ಅದರಲ್ಲಿ ತರಕಾರಿಗಳು, ಸಿಲಿಂಡರ್‌ಗಳು ಮತ್ತು ನೀರಿನ ಕ್ಯಾನ್‌ಗಳನ್ನು ಸಾಗಿಸುತ್ತಾರೆ.
"ಮದುವೆಯ ನಂತರ ಜವಾಬ್ದಾರಿಗಳು ಹೆಚ್ಚಾದವು, ಹಾಗಾಗಿ ನಾನು ಮುಗ್ಲಾನ್ [ಭಾರತ]ಕ್ಕೆ ಬಂದೆ" ಎಂದು ಮಾಯಾ ನೆನಪಿಸಿಕೊಳ್ಳುತ್ತಾರೆ. ನೇಪಾಳದಲ್ಲಿ, ಇವರು ಮತ್ತು ಪತಿ ಬೌಧೇಯವರು ತಮ್ಮ 2 ಕಥಾ (0.06 ಎಕರೆ) ಭೂಮಿಯಲ್ಲಿ ಅಕ್ಕಿ, ರಾಗಿ ಮತ್ತು ಆಲೂಗಡ್ಡೆಗಳನ್ನು ಬೆಳೆಯುತ್ತಿದ್ದರು; ಸಣ್ಣ ಅಂಗಡಿಗಳಲ್ಲಿ ದಿನಗೂಲಿ ಕೆಲಸವನ್ನೂ ಮಾಡುತ್ತಿದ್ದರು. ದಂಪತಿಗಳು 2021ರಲ್ಲಿ ನೇಪಾಳ ಗಡಿಯಿಂದ ರಸ್ತೆಯ ಮೂಲಕ ಕೆಲವು ಗಂಟೆಗಳ ಕಾಲ ಪ್ರಯಾಣಿಸಿ ಡಾರ್ಜಿಲಿಂಗ್‌ಗೆ ವಲಸೆ ಬಂದರು.
ಮಾಯಾ ಗ್ಯಾಸ್ ಏಜೆನ್ಸಿಗಳಿಂದ ಸಿಲಿಂಡರ್‌ಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸುತ್ತಾರೆ. "ನಾನು ಸಾಮಾನ್ಯವಾಗಿ ಬೆಳಿಗ್ಗೆ 7 ಗಂಟೆಗೆ ಕೆಲಸ ಮಾಡುವ ಜಾಗಕ್ಕೆ ಹೋಗುತ್ತೇನೆ. ಸಿಲಿಂಡರ್ ಬೇಕಾದವರು ನಮ್ಮ ಮೂಲಕ ಸಾಗಿಸುತ್ತಾರೆ," ಎಂದು ಅವರು ಹೇಳುತ್ತಾರೆ. ಸಾಮಾನ್ಯವಾಗಿ ಇವರು ಎರಡು ಸಿಲಿಂಡರ್‌ಗಳನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಒಂದು ದಿನದಲ್ಲಿ ನಾಲ್ಕು ಅಥವಾ ಐದು ಬಾರಿ ಸಾಗಾಟ ಮಾಡುತ್ತಾರೆ. ಇವರ ಈ ಕಠಿಣ ದುಡಿಮೆಯಲ್ಲಿ ದಿನಕ್ಕೆ 500 ರುಪಾಯಿ ಸಂಪಾದನೆಯಾಗುತ್ತದೆ. "ನಮ್ಲೋ ಬಳಸಿ ನನ್ನ ತಲೆಯ ಮೇಲೆ ಈ ಸಿಲಿಂಡರ್‌ಗಳ ಹೊರೆಗಳನ್ನು ನಿರಂತರವಾಗಿ ಹೊತ್ತು ಕೂದಲು ಉದುರುವಿಕೆ ಹೆಚ್ಚಾಗುತ್ತಿದೆ ಮತ್ತು ಶರೀರ ನೋವಾಗುತ್ತದೆ," ಎಂದು ಮಾಯಾ ಹೇಳುತ್ತಾರೆ. ಇವರ ರಕ್ತದೊತ್ತಡವೂ ಹೆಚ್ಚು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ.
ಮಾಯಾ ಸಿಲಿಂಡರ್‌ಗಳನ್ನು ಮನೆಗಳಿಗೆ ತಲುಪಿಸುತ್ತಾರೆ. ಅವರ ದಿನವು ಬೆಳಿಗ್ಗೆ 7 ಗಂಟೆಗೆ ಆರಂಭವಾಗುತ್ತದೆ. ಸಾಮಾನ್ಯವಾಗಿ ಇವರು ಒಂದು ದಿನದಲ್ಲಿ ನಾಲ್ಕು ಅಥವಾ ಐದು ಸಾಗಾಟಗಳನ್ನು ಮಾಡುತ್ತಾರೆ. ಇವರ ಈ ಕಠಿಣ ದುಡಿಮೆಯಿಂದ ದಿನಕ್ಕೆ 500 ರುಪಾಯಿಯ ವರೆಗೆ ಸಂಪಾದನೆಯಾಗುತ್ತದೆ
ತರಕಾರಿ ಸಾಗಿಸುವ ಹಮಾಲಿಗಳ ಕಥೆ ಸಿಲಿಂಡರ್ ವಿತರಿಸುವವರಿಗಿಂತ ಬೇರೆ. ಮಾರುಕಟ್ಟೆ ಮುಚ್ಚಿರುವ ಗುರುವಾರ ಒಂದು ದಿನ ಹೊರತುಪಡಿಸಿ ಪ್ರತಿದಿನ ಇವರು ಚೌಕ್ ಬಜಾರ್‌ನಲ್ಲಿ ರಾತ್ರಿ 8 ಗಂಟೆಯವರೆಗೆ ಕಾಯಬೇಕು. "ನಾವು ತರಕಾರಿಗಳನ್ನು ನಮ್ಮ ಗ್ರಾಹಕರಿಗೆ ಮಾರಿದ ನಂತರ, ನಾವು ಹತ್ತಿರದ ಹಮಾಲಿಗಳನ್ನು ಕರೆಯುತ್ತೇವೆ. ಇದರ ನಂತರ ಇವರ ಮತ್ತು ಗ್ರಾಹಕರ ನಡುವೆ ವ್ಯವಹಾರ ನಡೆಯುತ್ತದೆ," ಎಂದು ಬಿಹಾರ ಮೂಲದ ಅಂಗಡಿಯ ಮಾಲೀಕ ಮನೋಜ್ ಗುಪ್ತಾ ಹೇಳುತ್ತಾರೆ.
"ನಸಕೇಂ ಬೊಚ್ಚು ಭಂಡಾ ಭಂಡಾ 70 ಕೆಜಿ ಕೊ ಭಾರಿ ಬೊಕ್ನೆ ಬನಿ ಭೈಸಾಕ್ಯೋ [ನನಗೆ 70 ಕಿಲೋಗಳಷ್ಟು ಭಾರವನ್ನು ಹೊರುವುದು ಅಭ್ಯಾಸವಾಗಿ ಹೋಗಿದೆ]," ಎಂದು 70 ಕಿಲೋಗಳ ತರಕಾರಿ ಲೋಡನ್ನು ಹೋಟೆಲ್‌ಗೆ ತಲುಪಿಸಲು ಹೋಗುವಾಗ ದಾರಿಯಲ್ಲಿ 41 ವರ್ಷದ ಮನ್‌ಕುಮಾರಿ ಥಾಮಿ ಹೇಳುತ್ತಾರೆ. "ಇದನ್ನು ಮಾಡಲು ನನಗೆ ಸಾಧ್ಯವಿಲ್ಲ ಎಂದು ಹೇಳಿದರೆ, ಅವರು ಈ ಕೆಲಸವನ್ನು ಬೇರೆಯವರಿಗೆ ಕೊಡುತ್ತಾರೆ, ನನಗೆ 80 ರೂಪಾಯಿ ಲಾಸ್ ಆಗುತ್ತದೆ," ಎಂದು ಅವರು ಹೇಳುತ್ತಾರೆ.
"ಸಾಮಾನ್ಯವಾಗಿ, ನಾವು ಸುಮಾರು 15 ರಿಂದ 20 ನಿಮಿಷಗಳ ಕಾಲ ಬೆಟ್ಟವನ್ನು ಏರುತ್ತೇವೆ. ಏಕೆಂದರೆ ಹೋಟೆಲ್‌ಗಳು ಸಾಮಾನ್ಯವಾಗಿ ಚೌಕ್ ಬಜಾರ್ ಮೇಲೆ ಇವೆ. ನಾವು 10 ನಿಮಿಷ ದೂರದಲ್ಲಿರುವ ಹೋಟೆಲ್‌ಗಳಿಂದ 60 ರಿಂದ 80 ರೂಪಾಯಿಗಳನ್ನು ತೆಗೆದುಕೊಳ್ಳುತ್ತೇವೆ, ಅದಕ್ಕಿಂತ ಹೆಚ್ಚು ದೂರಲ್ಲಿರುವ ಹೋಟೆಲುಗಳಿಂದ 100 ರಿಂದ 150 ರೂಪಾಯಿಗಳನ್ನು ತೆಗೆದುಕೊಳ್ಳುತ್ತೇವೆ,” ಎಂದು ತರಕಾರಿ ಸಾಗಿಸುವ ಇನ್ನೋರ್ವ ಹಮಾಲಿ ಧನ್‌ಕುಮಾರಿ ಥಾಮಿ ಹೇಳುತ್ತಾರೆ.
ಧನ್‌ಕುಮಾರಿ ಥಾಮಿಯವರಿಗೆ ತರಕಾರಿ ಸಾಗಿಸುವ ಮಹಿಳಾ ಹಮಾಲಿಗಳು ಎದುರಿಸುವ ತಾರತಮ್ಯದ ಅರಿವಿದೆ: “ಕೇತ ಲೇ ಮಾತಾಯ್ ಸಕ್ಚಾ ಎಸ್ತೋ ಕಾಮ್ ತಾ ಹೈನಾ ರೈಸೌ ಬೈನಿ. ಖೈ ಏತಾ ತಾ ಬೆಸಿ ಲೇಡಿಸ್ ಹರು ನೈ ಚಾ ಭಾರಿ ಬೊಕ್ನೇ [‘ಈ ಕೆಲಸವನ್ನು ಪುರುಷರು ಮಾತ್ರ ಮಾಡಬಹುದು ಎಂದು ಭಾವಿಸುತ್ತಾರೆ.’ ಇದು ನಿಜವಲ್ಲ, ತಂಗಿ. ಇಲ್ಲಿರುವ ಬಹುತೇಕ ಹಮಾಲಿಗಳು ಹೆಂಗಸರು],” ಎಂದು ಅವರು ಹೇಳುತ್ತಾರೆ. 15 ವರ್ಷಗಳ ಹಿಂದೆ ಕುಡಿತದ ಚಟಕ್ಕೆ ಬಲಿಯಾಗಿ ಇವರ ಪತಿ ತೀರಿಕೊಂಡ ಮೇಲೆ ಧನ್‌ಕುಮಾರಿ ಈ ಕೆಲಸಕ್ಕೆ ಕೈ ಹಾಕಿದರು.
ನೀರು ಸಾಗಾಟ ಒಂದು ದೊಡ್ಡ ಕೆಲಸ ಎಂದು ಅಸ್ತಿ ಥಾಮಿ ಮತ್ತು ಜಂಗೀ ಥಾಮಿ ಹೇಳುತ್ತಾರೆ. ಪಾಂಡಮ್ ಟೀ ಗಾರ್ಡನ್‌ನ ಈ ದಂಪತಿಗಳು ಗ್ರಾಹಕರ ಮನೆಗಳಿಗೆ ನೀರಿನ ಕ್ಯಾನ್‌ಗಳನ್ನು ತಲುಪಿಸುತ್ತಾರೆ. ಡಾರ್ಜಿಲಿಂಗ್‌ನ ಕೆಲವು ಪ್ರದೇಶಗಳಲ್ಲಿ ನೀರಿನ ಕೊರತೆಯಿರುವುದರಿಂದ ಅವರಿಗೆ ಪ್ರತಿದಿನ ಕೆಲಸ ಸಿಗುತ್ತದೆ.
“ನಾನು ಮತ್ತು ನನ್ನ ಪತಿ ಪ್ರತಿದಿನ ಮುಂಜಾನೆ 6 ಗಂಟೆಗೆ ಪಾಂಡಮ್‌ನಿಂದ ನೀರು ತರಲು ಬರುತ್ತೇವೆ. ಜೆರ್ರಿ ಕ್ಯಾನ್‌ಗಳಲ್ಲಿ ನೀರನ್ನು ತುಂಬಿಸಿ, ನೀರು ಬೇಕಾದ ಮನೆಗಳಿಗೆ ತಲುಪಿಸುತ್ತೇವೆ,” ಎಂದು ಅಸ್ತಿ ಹೇಳುತ್ತಾರೆ. ಪಾಂಡಮ್‌ನಲ್ಲಿರುವ ಇವರ ಬಾಡಿಗೆ ಕೋಣೆ ಇವರು ನೀರು ತುಂಬಿಸುವ ಸ್ಥಳದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿದೆ.
ಇವರು ಒಮ್ಮೆ ಮಾಂಸ ಮಾರಾಟಕ್ಕೆ ಇಳಿದಿದ್ದರು. ಆದರೆ ಕೋವಿಡ್‌ನಿಂದಾಗಿ ಈ ವ್ಯಾಪಾರದಲ್ಲಿ ಯಾವುದೇ ಲಾಭವಿಲ್ಲದಾಯ್ತು ಎಂದು ಜಂಗೀ ನೆನಪಿಸಿಕೊಳ್ಳುತ್ತಾರೆ. ಆ ನಂತರ ದಂಪತಿಗಳು ಮರಳಿ ಹಮಾಲಿ ಕೆಲಸ ಶುರು ಮಾಡಿದರು.
*****
ಮಾಯಾ ಥಾಮಿಯ ಪತಿ ಬೌಧೇ ಥಾಮಿ ನೇಪಾಳದಿಂದ ವಲಸೆ ಬಂದವರ ಎರಡನೇ ತಲೆಮಾರಿನವರು. ಇವರ ಹೆತ್ತವರು ಸಹ ಹಮಾಲಿಗಳಾಗಿ ಕೆಲಸ ಮಾಡುತ್ತಿದ್ದರು ಮತ್ತು ಡಾರ್ಜಿಲಿಂಗ್‌ನ ಹೋಟೆಲ್‌ಗಳಿಗೆ ತರಕಾರಿಗಳನ್ನು ಸಾಗಿಸುತ್ತಿದ್ದರು. ಮಾಯಾ ಮತ್ತು ಬೌಧೇ ದಂಪತಿಗಳು ತಮ್ಮ ಕೆಲಸದ ಸ್ಥಳವಾದ ಚೌಕ್ ಬಜಾರ್‌ನಿಂದ 50 ನಿಮಿಷಗಳಷ್ಟು ದೂರದಲ್ಲಿರುವ ಗೌಶಾಲಾ ಬಳಿ ರೂಮೊಂದನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಈ ಕೋಣೆಗೆ ತಿಂಗಳಿಗೆ 2,500 ರುಪಾಯಿ ಬಾಡಿಗೆ ನೀಡುತ್ತಾರೆ.
ಹಲವಾರು ಹಮಾಲಿಗಳು ಕುಟುಂಬ ಸಮೇತರಾಗಿ, ಈ ಪ್ರದೇಶದಲ್ಲಿರುವ ಒಂಟಿ ಕೋಣೆಯನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಏಕೆಂದರೆ ಈ ಕೋಣೆಗಳು ಕೈಗೆಟುಕುವ ದರಕ್ಕೆ ಸಿಗುತ್ತವೆ.
ಮಾಯಾ ಮತ್ತು ಬೌಧೇಯವರ ಮಕ್ಕಳಾದ ಭಾವನಾ ಮತ್ತು ಭಾವಿನ್ ಇನ್ನೂ ಶಾಲೆಗೆ ಹೋಗುತ್ತಾರೆ. ಈ ಮಕ್ಕಳ ಶಿಕ್ಷಣವೇ ಮಾಯಾ ಅವರ ಪ್ರಮುಖ ಆದ್ಯತೆ: “ಭಾವನಾ ರಾ ಭಾವಿನ್ ಪರಿಂಜಲ್ ಮೋ ಮೇರೋ ನಮ್ಲೋ ಲೆ ಸಿಲಿಂಡರ್ ಬೊಚ್ಚು [ಭಾವನಾ ಮತ್ತು ಭಾವಿನ್‌ರ ವಿದ್ಯಾಭ್ಯಾಸ ಮುಗಿಯುವ ವರೆಗೆ ನಾನು ಸಿಲಿಂಡರ್‌ಗಳನ್ನು ಸಾಗಿಸುತ್ತೇನೆ],” ಎಂದು ಅವರು ಹೇಳುತ್ತಾರೆ.
ಅನುವಾದ: ಚರಣ್ ಐವರ್ನಾಡು