ಇದೆಲ್ಲವೂ ಒಂದು ಕಾಗದದ ತುಂಡು ಮತ್ತು ಅಪರಿಚಿತರೊಬ್ಬರ ಪ್ರಶ್ನೆಯೊಂದಿಗೆ ಪ್ರಾರಂಭವಾಯಿತು.

12 ವರ್ಷದ ಕಮಲೇಶ್ ಡಾಂಡೋಲಿಯಾ ರಾಥೇಡ್ ಗ್ರಾಮದಲ್ಲಿರುವ ತನ್ನ ಮನೆಯ ಸಮೀಪವಿರುವ ಪ್ರವಾಸಿ ಅತಿಥಿ ಗೃಹದ ಬಳಿ ಅಲೆದಾಡುತ್ತಿದ್ದಾಗ ಪರದೇಸಿ (ಅಪರಿಚಿತ) ಯನ್ನು ಕಂಡರು. ಮೊದಲಿಗೆ ಅವರು ನನ್ನ ಬಳಿ ಭರಿಯಾ ಭಾಷೆ ಬರುತ್ತದೆಯೇ ಎಂದು ಕೇಳಿದರು." ಕಮಲೇಶ್ ಉತ್ತರಿಸುವ ಮೊದಲೇ, "ಆ ವ್ಯಕ್ತಿ ನನಗೆ ಒಂದು ಕಾಗದವನ್ನು ಕೊಟ್ಟು ಓದಲು ಕೇಳಿದರು."

ಆ ಅಪರಿಚಿತ ಸರಿಯಾದ ವ್ಯಕ್ತಿಯ ಬಳಿಯೇ ಕೇಳಿದ್ದರು. ಇಲ್ಲಿನ ತಮಿಯಾ ಬ್ಲಾಕ್‌ ಪಾತಾಲ್‌ಕೋಟ್‌ ಕಣಿವೆಯಲ್ಲಿ ಮಧ್ಯಪ್ರದೇಶದಲ್ಲಿ ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪಿನಡಿ ( ಪಿವಿಟಿಜಿ ) ಬರುವ ಭರಿಯಾ ಸಮುದಾಯದ ಅನೇಕ ಸದಸ್ಯರಿದ್ದಾರೆ. ಕಮಲೇಶ್‌ ಭರಿಯಾ ಸಮುದಾಯದವರು ಮತ್ತು ಅವರಿಗೆ ತಮ್ಮ ಸಮುದಾಯದ ಭಾಷೆಯಾದ ಭರಿಯಾಟಿಯಲ್ಲಿ ನಿರರ್ಗಳವಾಗಿ ಮಾತನಾಡಲು ಬರುತ್ತಿತ್ತು.

ಪುಟ್ಟ ಹುಡುಗ ಕಾಗದವನ್ನು ಆತ್ಮವಿಶ್ವಾಸದಿಂದ ಓದಿದ. ಅದರಲ್ಲಿ ಅ ರ ಸಮುದಾಯದ ಕುರಿತಾದ ಸಾಮಾನ್ಯ ಮಾಹಿತಿಯನ್ನು ಬರೆಯಲಾಗಿತ್ತು. ದೇವನಾಗರಿ ಲಿಪಿಯಲ್ಲಿದ್ದ ಕಾರಣ, "ಓದುವುದು ಸುಲಭವೆಂದು ಅನಿಸಿತು." ವಸ್ತುಗಳ ಹೆಸರುಗಳನ್ನು ಒಳಗೊಂಡ ಎರಡನೇ ವಿಭಾಗದಲ್ಲಿ, ಕಮಲೇಶ್ ಎಡವತೊಡಗಿದರು. "ಆ ಪದಗಳು ಖಂಡಿತವಾಗಿಯೂ ಭರಿಯಾಟಿಯಲ್ಲಿದ್ದವು, ಆ ಶಬ್ದಗಳು ತುಂಬಾ ಪರಿಚಿತವಾಗಿದ್ದವು, ಆದರೆ ಆ ಪದಗಳು ಅಪರಿಚಿತವಾಗಿದ್ದವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಏನನ್ನೋ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಾ ಅವರು ಒಂದು ನಿಮಿಷ ವಿರಾಮ ತೆಗೆದುಕೊಂಡರು. "ನಿರ್ದಿಷ್ಟವಾಗಿ ಒಂದು ಪದವಿತ್ತು. ಅದು ಒಂದು ರೀತಿಯ ಜಂಗ್ಲೀ ಜಡಿಬೂಟಿ [ಔಷಧೀಯ ಸಸ್ಯ]. ನಾನು ಅದನ್ನು ಬರೆದಿಟ್ಟುಕೊಂಡಿದ್ದರೆ ಚೆನ್ನಾಗಿರುತ್ತಿತ್ತು", ಎಂದು ಅವರು ನಿರಾಶೆಯಿಂದ ತಲೆ ಅಲ್ಲಾಡಿಸುತ್ತ ಹೇಳುತ್ತಾರೆ. "ಈಗ ನನಗೆ ಆ ಪದ ಅಥವಾ ಅದರ ಅರ್ಥವೂ ನೆನಪಿಲ್ಲ."

ಕಮಲೇಶ್ ಅವರ ವಿಷಾದವು ಅವರನ್ನು ಯೋಚಿಸುವಂತೆ ಮಾಡಿತು: "ಭರಿಯಾಟಿಯಲ್ಲಿ ಇನ್ನೂ ಎಷ್ಟೋ ಪದಗಳು ನನಗೆ ತಿಳಿದಿಲ್ಲ ಎನ್ನುವುದು ತಿಳಿದು ನನಗೆ ಕಸಿವಿಸಿಯಾಯಿತು." ಅವರಿಗೆ ತಾನು ನಿರರ್ಗಳವಾಗಿ ಮಾತನಾಡುತ್ತೇನೆ ಎನ್ನುವುದು ತಿಳಿದಿತ್ತು - ಅವರು ತನ್ನನ್ನು ಬೆಳೆಸಿದ ತನ್ನ ಅಜ್ಜ-ಅಜ್ಜಿಯರೊಂದಿಗೆ ಭರಿಯಾಟಿ ಮಾತನಾಡುತ್ತಾ ಬೆಳೆದವರು. "ನನ್ನ ಹದಿಹರೆಯದ ವರ್ಷಗಳ ತನಕ ಅದು ನಾನು ಮಾತನಾಡುತ್ತಿದ್ದ ಏಕೈಕ ಭಾಷೆಯಾಗಿತ್ತು. ನಿರರ್ಗಳವಾಗಿ ಹಿಂದಿ ಮಾತನಾಡಲು ನಾನು ಈಗಲೂ ಹೆಣಗಾಡುತ್ತೇನೆ" ಎಂದು ಅವರು ನಗುತ್ತಾ ಹೇಳುತ್ತಾರೆ.

PHOTO • Ritu Sharma
PHOTO • Ritu Sharma

ಎಡ: ಕಮಲೇಶ್ ಡಾಂ ಡೋಲಿಯಾ 29 ವರ್ಷದ ರೈತ ಮತ್ತು ಭರಿಯಾ ಸಮುದಾಯದ ಭಾಷಾ ಪುರಾತತ್ವಶಾಸ್ತ್ರಜ್ಞ, ಈ ಸಮುದಾಯ ವಿಶೇಷ ದುರ್ಬಲ ಬುಡಕಟ್ಟು ಗುಂಪು ( ಪಿವಿಟಿಜಿ) ಎಂದು ಮಧ್ಯಪ್ರದೇಶದಲ್ಲಿ ಗುರುತಿಸಿಕೊಂಡಿದೆ. ಬಲ: ಮಧ್ಯಪ್ರದೇಶದ ಛಿಂದವಾ ಜಿಲ್ಲೆಯ ರಾಥೇಡ್ ಗ್ರಾಮದಲ್ಲಿರುವ ಅವರ ಮನೆ

PHOTO • Ritu Sharma
PHOTO • Ritu Sharma

ಎಡಕ್ಕೆ: ತಾಮಿಯಾ ಬ್ಲಾಕ್ ಸತ್ಪುರ ಬೆಟ್ಟಗಳ 12 ಹಳ್ಳಿಗಳಲ್ಲಿ ಹರಡಿರುವ ಭರಿಯಾ ಸಮುದಾಯದ ನೆಲೆಯಾಗಿರುವ ಪಾ ತಾಲ್‌ಕೋಟ್‌ ಕಣಿವೆ ಯ ಆರಂಭದಲ್ಲಿ ಸಿಗುವ ಬೋರ್ಡು. ಎಲ್ಲಿಗಾದರೂ ಹೋಗಿ ಬರುವಾಗ ಸ್ಥಳೀಯರು ಇಲ್ಲಿ ಒಗ್ಗೂಡಿ ಒಟ್ಟಾಗಿ ಟ್ಯಾಕ್ಸಿ ಮಾಡಿಕೊಂಡು ಹೋಗುತ್ತಾರೆ. ಬಲ: ಕಮಲೇಶ್ ಅವರ ಮನೆಯ ಹೊರಗಿನ ರಸ್ತೆ ಮಧ್ಯಪ್ರದೇಶದ ಹಲವಾರು ಜನಪ್ರಿಯ ಪ್ರವಾಸಿ ತಾಣಗಳಿಗೆ ದಾರಿ ಮಾಡಿಕೊಡುತ್ತದೆ

ಮಧ್ಯಪ್ರದೇಶದಲ್ಲಿ ಭರಿಯಾ ಸಮುದಾಯಕ್ಕೆ ಸೇರಿದ ಸುಮಾರು ಎರಡು ಲಕ್ಷ ಜನರಿದ್ದಾರೆ (ಪರಿಶಿಷ್ಟ ಪಂಗಡಗಳ ಸಂಖ್ಯಾಶಾಸ್ತ್ರೀಯ ವಿವರ, 2013 ), ಆದರೆ ಅವರಲ್ಲಿ ಕೇವಲ 381 ಜನರು ಮಾತ್ರ ಭರಿಯಾಟಿಯನ್ನು ತಮ್ಮ ಮಾತೃಭಾಷೆಯಾಗಿ ದಾಖಲಿಸಿದ್ದಾರೆ. ಈ ಮಾಹಿತಿಯನ್ನು ಭಾರತೀಯ ಭಾಷಾ ಗಣತಿ ಪ್ರಕಟಿಸಿದ 2001ರ ಏಕೀಕೃತ ದತ್ತಾಂಶದಿಂದ ಪಡೆಯಲಾಗಿದೆ. 2011ರ ಜನಗಣತಿಯಲ್ಲಿ ಭರಿಯಾಟಿಯನ್ನು ಪ್ರತ್ಯೇಕವಾಗಿ ಪಟ್ಟಿ ಮಾಡದ ಕಾರಣ ಈ ಕುರಿತು ಹೆಚ್ಚಿನ ವಿವರ ಲಭ್ಯವಿಲ್ಲ. 10,000ಕ್ಕಿಂತ ಕಡಿಮೆ ಮಾತನಾಡುವವರನ್ನು ಹೊಂದಿರುವ ಭಾಷೆಗಳನ್ನು ಪಟ್ಟಿ ಮಾಡಲಾಗುವ ಹೆಸರಿಲ್ಲದ ಮಾತೃಭಾಷೆಗಳ ಪಟ್ಟಿಯಡಿಯಲ್ಲಿ ಇದನ್ನೂ ಪಟ್ಟಿ ಮಾಡಿರುವ ಸಾಧ್ಯತೆಯಿದೆ.

ಈ ಸಮುದಾಯವು ಒಂದು ಕಾಲದಲ್ಲಿ ಮಹಾರಾಷ್ಟ್ರದ ರಾಜರಿಗೆ ಕೂಲಿಗಳಾಗಿದ್ದರು ಎಂದು ಸರ್ಕಾರದ ಈ ವೀಡಿಯೊ ಹೇಳುತ್ತದೆ. ಮೂರನೇ ಆಂಗ್ಲೋ-ಮರಾಠ ಯುದ್ಧದ ಸಮಯದಲ್ಲಿ ನಾಗ್ಪುರದ ಎರಡನೇ ಮುಧೋಜಿ (ಅಪ್ಪಾ ಸಾಹೇಬ್ ಎಂದೂ ಕರೆಯುತ್ತಾರೆ) 1818ರ ಯುದ್ಧದಲ್ಲಿ ಸೋತ ರಾಜನು ತನ್ನ ರಾಜ್ಯದಿಂದ ಪಲಾಯನ ಮಾಡಿದ. ಅವನನ್ನು ಅನುಸರಿಸಿ ಬಂದ ಭರಿಯಾ ಜನರು ಮಧ್ಯಪ್ರದೇಶದ ಛಿಂದ್ವಾರ, ಬೆತುಲ್‌ ಮತ್ತಪಚ್ಮಡಿ ಕಾಡುಗಳಲ್ಲಿ ಆಸರೆ ಪಡೆದರು.

ಇಂದು ಸಮುದಾಯವು ತಮ್ಮನ್ನು ಭರಿಯಾ (ಅಥವಾ ಭಾರತಿ) ಎಂದು ಗುರುತಿಸಿಕೊಳ್ಳುತ್ತದೆ. ಅವರ ಸಾಂಪ್ರದಾಯಿಕ ಕಸುಬು ಸ್ಥಳಾಂತರಿ ಬೇಸಾಯವಾಗಿತ್ತು. ಅವರು ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳ ಬಗ್ಗೆ ವ್ಯಾಪಕ ಜ್ಞಾನವನ್ನು ಹೊಂದಿದ್ದರು – ಈ ಕಾರಣಕ್ಕಾಗಿ ಜನರು ವರ್ಷಪೂರ್ತಿ ಈ ಊರಿಗೆ ಭೇಟಿ ನೀಡುತ್ತಲೇ ಇರುತ್ತಾರೆ. "ಅವರು ನಮ್ಮಿಂದ ಜಡಿಬೂಟಿ ಖರೀದಿಸಲು ಇಲ್ಲಿಗೆ ಬರುತ್ತಾರೆ. ಅನೇಕ ಹಿರಿಯರು ಈಗ ಪರವಾನಗಿ ಹೊಂದಿದ್ದಾರೆ ಮತ್ತು ಈ ಔಷಧೀಯ ಸಸ್ಯಗಳನ್ನು ಮಾರಾಟ ಮಾಡಲು ನಾವು ಎಲ್ಲಿ ಬೇಕಾದರೂ ಹೋಗಬಹುದು" ಎಂದು ಕಮಲೇಶ್ ಹೇಳುತ್ತಾರೆ.

ಆದರೆ ಭಾಷೆಯಂತೆಯೇ, ಈ ಸಸ್ಯಗಳ ಜ್ಞಾನವೂ ಸಹ ಈಗ ಹಳ್ಳಿಯ ಹಿರಿಯರ ಬಳಿಯಷ್ಟೇ ಉಳಿದಿದೆ" ಎಂದು ಅವರು ಹೇಳುತ್ತಾರೆ.

ಸಾಂಪ್ರದಾಯಿಕ ಜ್ಞಾನವನ್ನು ಪಡೆಯದ ಯುವ ಪೀಳಿಗೆಗೆ, ವರ್ಷವಿಡೀ ಬದುಕು ನಡೆಸಲು ಸಹಾಯ ಮಾಡುವ ಭುರ್ತಾ (ಭರಿಯಾಟಿಯಲ್ಲಿ ಜೋಳ) ಕೃಷಿ ಮತ್ತು ಕಾಲಕ್ಕೆ ತಕ್ಕಂತೆ ದೊರೆಯುವ ಕಾಡುತ್ಪನ್ನಗಳಾದ ಚರಕ್ (ಚಿರೋಂಜಿ/ಕಡಪ ಬಾದಾಮಿ), ಮಹು (ಮಧುಕಾ ಲಾಂಗಿಫೋಲಿಯಾ), ಆಮ್ಲಾ (ನೆಲ್ಲಿಕಾಯಿ) ಮತ್ತು ಉರುವಲು ಕುರಿತು ತಿಳಿದಿಲ್ಲ.

ಸಮುದಾಯವಿರುವ ಊರುಗಳು ಮಹಾದೇವ್ ದೇವಾಲಯ ಮತ್ತು ರಾಜಾ ಖೋಹ್ ಗುಫಾದಂತಹ ಜನಪ್ರಿಯ ಪ್ರವಾಸಿ ತಾಣಗಳಿರುವ ಕಣಿವೆಯಲ್ಲಿದ್ದರೂ ಇಲ್ಲಿನ ರಸ್ತೆಗಳು ಕಳಪೆಯಾಗಿಯೇ ಇವೆ. ಸಮುದಾಯದ ಜನರು ಬಹುತೇಕ ಪಾತಾಲ್‌ಕೋಟ್ ಪ್ರದೇಶದಲ್ಲಿ, ಸತ್ಪುರ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಹರಡಿರುವ 12 ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಸಮುದಾಯದ ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಇಂದೋರ್ ರೀತಿಯ ಹತ್ತಿರದ ನಗರಗಳ ವಸತಿ ಶಾಲೆಗಳಲ್ಲಿ ಉಳಿದುಕೊಳ್ಳುತ್ತಾರೆ.

PHOTO • Ritu Sharma
PHOTO • Ritu Sharma

ಎಡ: ಕಮಲೇಶ್ ( ಎಡಕ್ಕೆ) ತನ್ನ ಕುಟುಂಬದೊಂದಿಗೆ ತಮ್ಮ ಮನೆಯ ಹೊರಗೆ. ಅವರ ಸಹೋದರನ ಪತ್ನಿ ಮತ್ತು ಅವರ ಪುತ್ರರಾದ ಸಂದೀಪ್ ( ಕಿತ್ತಳೆ ಬಣ್ಣದ ಉಡುಪಿನಲ್ಲಿ) ಮತ್ತು ಅಮೀತ್, ಕಮಲೇಶ್ ಅವರ ತಾಯಿ ಫುಲ್ಲೇಬಾಯಿ ( ಬಲಕ್ಕೆ); ಮತ್ತು ಅಜ್ಜಿ, ಸುಕ್ತಿಬಾಯಿ ( ಗುಲಾಬಿ ರವಿಕೆಯಲ್ಲಿ). ಬಲ: ಸಮುದಾಯದ ಸಾಂಪ್ರದಾಯಿಕ ಜೀವನೋಪಾಯವು ಸ್ಥಳಾಂತರ ಕೃಷಿಯನ್ನು ಒಳಗೊಂಡಿತ್ತು. ಇಂದು, ಯುವ ಪೀಳಿಗೆಯು ಇಂದಿನ ಯುವ ಜನತೆಯು ಜೋಳದ ಬೇಸಾಯ ಮತ್ತು ಕಾಡುತ್ಪತ್ತಿ ಮೂಲಕ ಬದುಕು ನಡೆಸುತ್ತಿದೆ

*****

ಮತ್ತೆ ಹತ್ತು ವರ್ಷಗಳ ನಂತರ, ಯುವಕರಾಗಿದ್ದ ಕಮಲೇಶ್‌ ಮಧ್ಯ ಭಾರತದ ಬೆಟ್ಟಗಳಲ್ಲಿ ತನ್ನ ಹಸುಗಳು ಮತ್ತು ಆಡುಗಳನ್ನು ಮೇಯಿಸುತ್ತಿದ್ದಾಗ, ಅದೇ ಅಪರಿಚಿತನನ್ನು ಇನ್ನೊಮ್ಮೆ ಭೇಟಿಯಾದರು. ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಿರುವಾಗಲೇ ಆ ವ್ಯಕ್ತಿ ಹಿಂದೆ ನಿಂತಿ ನಗುತ್ತಿರುವುದು ಕೇಳಿಸಿತು. ಆ ವ್ಯಕ್ತಿ ತನ್ನ ಕಾರನ್ನು ನಿಲ್ಲಿಸುತ್ತಿದ್ದ ಹಾಗೆ ಕಮಲೇಶ್‌ ತನ್ನೊಳಗೆ ಯೋಚಿಸುತ್ತಾ, “ಬಹುಶಃ ಅವನು ಸಹ ನನಗೆ ಓದಲು ಕಾಗಟ್ [ಕಾಗದ] ನೀಡಬಹುದು” ಎಂದುಕೊಂಡರು.

ಕುಟುಂಬದ ಬೇಸಾಯದ ಕೆಲಸಗಳಲ್ಲಿ ಸಹಾಯ ಮಾಡುವ ಸಲುವಾಗಿ ಕಮಲೇಶ್ 12ನೇ ತರಗತಿಯ ನಂತರ ಶಾಲೆ ಬಿಟ್ಟಿದ್ದರು; ಅವರಿಗೆ ಮತ್ತು ಅವರ ಏಳು ಒಡಹುಟ್ಟಿದವರಿಗೆ ಕಾಲೇಜು ಮತ್ತು ಶಾಲಾ ಶುಲ್ಕ ಪಾವತಿಸುವುದೂ ಕುಟುಂಬಕ್ಕೆ ಕಷ್ಟವಿತ್ತು. ಊರಿನಲ್ಲಿ 5ನೇ ತರಗತಿಯವರೆಗೆ ಪ್ರಾಥಮಿಕ ಶಾಲೆ ಇತ್ತು. ಅದರ ನಂತರ, ಹುಡುಗರು ತಾಮಿಯಾ ಮತ್ತು ಹತ್ತಿರದ ನಗರಗಳ ವಸತಿ ಶಾಲೆಗೆ ಹೋಗುತ್ತಿದ್ದರು, ಹುಡುಗಿಯರು ಶಾಲೆಯನ್ನು ತೊರೆಯುತ್ತಿದ್ದರು.

ಈ ಬಾರಿ ಆ ಅಪರಿಚಿತ 22 ವರ್ಷದ ಕಮಲೇಶ್ ಬಳಿ ನಿಮ್ಮ ಮಾತೃಭಾಷೆಯನ್ನು ಸಂರಕ್ಷಿಸಲು ಬಯಸುತ್ತೀರಾ ಎಂದು ಕೇಳಿದರು. ಭಾಷೆಯನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಭರಿಯಾಟಿ ಭಾಷೆ ಯಾವ ರೀತಿಯಿತ್ತು ಎನ್ನುವುದನ್ನು ತೋರಿಸಬಹುದು ಎಂದು ಅವರು ವಿವರಿಸಿದರು. ಈ ಪ್ರಶ್ನೆಯು ಅವರನ್ನು ಆಕರ್ಷಿಸಿತು ಮತ್ತು ಅವರು ತಕ್ಷಣ ಒಪ್ಪಿಕೊಂಡರು.

ಡೆಹ್ರಾಡೂನ್ ಮೂಲದ ಇನ್ಸ್ಟಿಟ್ಯೂಟ್ ಆಫ್ ಲ್ಯಾಂಗ್ವೇಜಸ್ ಅಂಡ್ ಲಿಂಗ್ವಿಸ್ಟಿಕ್ಸ್ ಸಂಸ್ಥೆಯ ಭಾಷಾ ಸಂಶೋಧಕ ಪವನ್ ಕುಮಾರ್ ಅವರು ಭರಿಯಾಟಿ ಭಾಷೆಯನ್ನು ದಾಖಲಿಸಲು ಗ್ರಾಮಕ್ಕೆ ಬಂದಿದ್ದರು. ಅವರು ಈಗಾಗಲೇ ಹಲವಾರು ಹಳ್ಳಿಗಳಿಗೆ ಪ್ರಯಾಣಿಸಿದ್ದರು, ಅಲ್ಲಿ ಅವರಿಗೆ ನಿರರ್ಗಳವಾಗಿ ಈ ಭಾಷೆಯನ್ನು ಮಾತನಾಡುವವರು ಸಿಕ್ಕಿರಲಿಲ್ಲ. ಪವನ್ ಕುಮಾರ್ ಈ ಪ್ರದೇಶದಲ್ಲಿ ಮೂರು-ನಾಲ್ಕು ವರ್ಷಗಳ ಕಾಲ ಇದ್ದರು ಮತ್ತು "ನಾವು ಭರಿಯಾಟಿಯಲ್ಲಿ ಅನೇಕ ಕಥೆಗಳನ್ನು ಮತ್ತು ಒಂದು ಕಿತಾಪ್ [ಪುಸ್ತಕ] ವನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಿದ್ದೇವೆ" ಎಂದು ಕಮಲೇಶ್ ನೆನಪಿಸಿಕೊಳ್ಳುತ್ತಾರೆ.

PHOTO • Ritu Sharma
PHOTO • Ritu Sharma

ಎಡ: ಕಮಲೇಶ್ ಓರ್ವ ರೈತ. ಕುಟುಂಬದ ಜಮೀನಿನ ಕೆಲಸದ ಲ್ಲಿ ಸಹಾಯ ಮಾಡಲು ಅವರು 12 ನೇ ತರಗತಿ ಯ ನಂತರ ಶಾಲೆ ಬಿಟ್ಟರು. ಬಲ: ಕಮಲೇಶ್ ಅವರ ಅಜ್ಜಿ, ಸುಮಾರು 80 ವರ್ಷದ ಸುಕ್ತಿಬಾಯಿ ಡಂ ಡೋಲಿಯಾ ಅವರಿಗೆ ಭರಿಯಾ ಟಿ ಮಾತ್ರ ಬರುತ್ತದೆ ಮತ್ತು ಅವ ರು ತಮ್ಮ ಮೊಮ್ಮಗನಿಗೆ ಭಾಷೆಯನ್ನು ಕಲಿಸುತ್ತಾರೆ

PHOTO • Ritu Sharma
PHOTO • Ritu Sharma

ಎಡ: ಕಮಲೇಶ್ ಮತ್ತು ಭಾಷಾ ಅಭಿವೃದ್ಧಿ ತಂಡವು ಭರಿಯಾ ಟಿ ಯಲ್ಲಿ ವರ್ಣಮಾಲೆಯ ಚಾರ್ಟ್ ಒಂದನ್ನು ಅಭಿವೃದ್ಧಿಪಡಿಸಿದೆ. ಬಲ: ಅವರು ಭರಿಯಾ ಟಿ ಯಲ್ಲಿ ಕಾಗುಣಿತ ಮಾರ್ಗದರ್ಶಿ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ

ಕಮಲೇಶ್ ಒಪ್ಪಿಗೆ ನೀಡಿದ ನಂತರ, ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡಲು ಸ್ಥಳವನ್ನು ಕಂಡುಹಿಡಿಯುವುದು ಮೊದಲ ಕೆಲಸಗಳಲ್ಲಿ ಒಂದಾಗಿತ್ತು. "ಯಹಾನ್ ಬಹುತ್ ಶೋರ್-ಶರಾಬಾ ಹೋತಾ ಥಾ ಕ್ಯುಂಕಿ ಟೂರಿಸ್ಟೊ ಕಾ ಆನಾ ಜಾನಾ ಲಗಾ ರೆಹ್ತಾ ಥಾ [ಇಲ್ಲಿ ಅನೇಕ ಪ್ರವಾಸಿಗರು ಬರುತ್ತಲೇ ಇರುವುದರಿಂದ ಬಹಳ ಗದ್ದಲದ ವಾತಾವರಣವಿರುತ್ತಿತ್ತು]. ಭರಿಯಾ ಭಾಷಾ ಅಭಿವೃದ್ಧಿ ತಂಡವನ್ನು ರಚಿಸಲು ಅವರು ಮತ್ತೊಂದು ಹಳ್ಳಿಗೆ ಹೋಗಲು ನಿರ್ಧರಿಸಿದರು.

ಒಂದು ತಿಂಗಳೊಳಗೆ ಕಮಲೇಶ್ ಮತ್ತು ಅವರ ತಂಡವು ಭರಿಯಾಟಿ ವರ್ಣಮಾಲೆಯ ಚಾರ್ಟ್ ಒಂದನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿತು, "ನಾನು ಪ್ರತಿ ಅಕ್ಷರಕ್ಕೂ ಚಿತ್ರಗಳನ್ನು ಬಿಡಿಸಿದ್ದೇನೆ." ಪದಗಳನ್ನು ಆಯ್ಕೆ ಮಾಡಲು ಹಿರಿಯರು ಸಹಾಯ ಮಾಡಿದರು. ಆದರೆ ಅವರು ಅಷ್ಟಕ್ಕೇ ನಿಲ್ಲಿಸಲಿಲ್ಲ. ಸಂಶೋಧಕರ ಸಹಾಯದಿಂದ, ಅವರ ತಂಡವು ವರ್ಣಮಾಲೆಯ ಚಾರ್ಟಿನ 500ಕ್ಕೂ ಹೆಚ್ಚು ಪ್ರತಿಗಳನ್ನು ಡಿಜಿಟಲ್ ಆಗಿ ಮುದ್ರಿಸುವಲ್ಲಿ ಯಶಸ್ವಿಯಾಯಿತು. ನರಸಿಂಗಪುರ, ಸಿಯೋನಿ, ಛಿಂದ್ವಾರ ಮತ್ತು ಹೋಶಂಗಾಬಾದ್ (ಈಗ ನರ್ಮದಾಪುರಂ ಎಂದು ಕರೆಯಲ್ಪಡುತ್ತದೆ) ಸೇರಿದಂತೆ ವಿವಿಧ ನಗರಗಳ ಪ್ರಾಥಮಿಕ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಈ ಚಾರ್ಟ್ಗಳನ್ನು ವಿತರಿಸಲು ಅವರು ಮೋಟಾರುಬೈಕ್ಗಳಲ್ಲಿ ಪ್ರಯಾಣಿಸುತ್ತಿದ್ದರು. "ನಾನು ಒಬ್ಬನೇ ತಮಿಯಾ, ಹರ್ರೈ ಮತ್ತು ಜುನ್ನಾರ್ಡಿಯೊದ 250ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಬೇಟಿ ನೀಡಿರಬಹುದು" ಎಂದು ಕಮಲೇಶ್ ಪರಿಗೆ ತಿಳಿಸಿದರು.

ಕೆಲವೊಮ್ಮೆ 85 ಕಿಲೋಮೀಟರುಗಳಷ್ಟು ದೂರದ ಊರುಗಳಿಗೂ ಹೋಗಬೇಕಾಗುತ್ತಿತ್ತು. "ಹಮ್ ತೀನ್-ಚಾರ್ ದಿನ್ ಘರ್ಪೆ ನಹೀ ಆತೆ ತೇ. ಹಮ್ ಕಿಸಿ ಕೆ ಭಿ ಘರ್ ರುಖ್ ಜಾತೆ ತೇ ರಾತ್ ಮೇ ಔರ್ ಸುಬಾಹ್ ವಾಪಸ್ ಚಾರ್ಟ್ ಬಾಟ್ನೆ ಲಗ್ತೆ." [ನಾವು ಮೂರ್ನಾಲ್ಕು ದಿನಗಳವರೆಗೆ ಮನೆಗೆ ಹಿಂದಿರುಗುತ್ತಿರಲಿಲ್ಲ. ನಾವು ರಾತ್ರಿ ಯಾರದೋ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದೆವು ಮತ್ತು ಬೆಳಿಗ್ಗೆಯ ಹೊತ್ತಿಗೆ ನಾವು ಮತ್ತೆ ಚಾರ್ಟ್‌ಗಳನ್ನು ವಿತರಿಸುತ್ತಿದ್ದೆವು]."

ಅವರು ಭೇಟಿಯಾದ ಹೆಚ್ಚಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಮ್ಮ ಸಮುದಾಯದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ, "ಆದರೆ ಅವರು ನಮ್ಮ ಪ್ರಯತ್ನಗಳನ್ನು ಬಹಳವಾಗಿ ಪ್ರಶಂಸಿಸಿದರು, ಇದು ಭರಿಯಾಟಿಯನ್ನು ಮಾತನಾಡದ ಹಳ್ಳಿಗಳನ್ನು ತಲುಪಲು ನಮಗೆ ಸಹಾಯ ಮಾಡಿತು" ಎಂದು ಕಮಲೇಶ್ ಹೇಳುತ್ತಾರೆ.

PHOTO • Ritu Sharma
PHOTO • Ritu Sharma

ರೀ ಯಾ ( ಮಾಧೇಚಿ ಎಂದೂ ಕರೆಯಲ್ಪಡುತ್ತದೆ), ಎನ್ನುವುದು ದೈನಂದಿನ ವಸ್ತುಗಳನ್ನು ಸಂಗ್ರಹಿಸಲು ಬಳಸುವ ಸಣ್ಣ ಶೆಲ್ಫ್ ಅಥವಾ ಕಬೋರ್ಡ್. ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಚಿತ ವಸ್ತುಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲು ಕಮಲೇಶ್ ಇದನ್ನು ಭರಿಯಾ ಟಿ ವರ್ಣಮಾಲೆಯ ಚಾ ರ್ಟಿನ ಲ್ಲಿ ಬಳಸಿದರು

PHOTO • Ritu Sharma
PHOTO • Ritu Sharma

ಎಡ: ಕಮಲೇಶ್ ಅವರು ಭರಿಯಾ ಟಿ ಭಾಷೆಯನ್ನು ದಾಖಲಿಸಲು ಬಳಸಿದ ಕೊನೆಯ ಕೆಲವು ಚಾರ್ಟ್ ಕಾಗದ ಗಳನ್ನು ತೋರಿಸು ತ್ತಿದ್ದಾರೆ, ಅದನ್ನು ಈಗ ಟ್ರಂ ಕಿ ನಲ್ಲಿ ಬಚ್ಚಿಡ ಲಾಗಿದೆ. ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಉಳಿದವುಗಳಲ್ಲಿ ಹೆಚ್ಚಿನವು ಕಳೆದುಹೋಗಿವೆ. ಬಲ: ಚಾರ್ಟ್ ಪೇಪ ರ್‌ ಗಳನ್ನು ಗುಂಪು ಚರ್ಚೆಗಳ ನಂತರ ರಚಿಸಲಾಗಿದೆ, ಮತ್ತು ಆರೋಗ್ಯ ಮತ್ತು ನೈರ್ಮಲ್ಯದ ಕುರಿತಾದ ಸಂದೇಶಗಳನ್ನು ಇವು ಒಳಗೊಂಡಿದೆ

ಒಂದು ವರ್ಷದೊಳಗೆ ಕಮಲೇಶ್ ಮತ್ತು ಅವರ ಭಾಷಾ ಅಭಿವೃದ್ಧಿ ತಂಡವು ಭಾಷಾ ಕಾಗುಣಿತ ಮಾರ್ಗದರ್ಶಿ , ಮೂರು ಆರೋಗ್ಯ ಕಥೆಗಳು ಮತ್ತು ಭರಿಯಾಟಿಯಲ್ಲಿ ಮೂರು ನೀತಿ ಕಥೆಗಳು ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದೆ. "ನಾವು ಮೊದಲು ಎಲ್ಲವನ್ನೂ ಕಾಗದದ ಮೇಲೆ ಬರೆದಿಟ್ಟುಕೊಂಡಿದ್ದೆವು" ಎಂದು ಈ ಮನೆಯ ಟ್ರಂಕಿನಲ್ಲಿ ಹುದುಗಿರುವ ಕೆಲವು ವರ್ಣರಂಜಿತ ಚಾರ್ಟ್ ಪೇಪರ್‌ಗಳನ್ನು ಹೊರತೆಗೆಯುತ್ತಾ ಅವರು ಹೇಳುತ್ತಾರೆ. ಸಮುದಾಯದ ಪ್ರಯತ್ನಗಳು ಭರಿಯಾಟಿಯಲ್ಲಿ ವೆಬ್ಸೈಟ್ ರಚನೆಗೂ ಕಾರಣವಾಯಿತು.

"ವೆಬ್ಸೈಟಿನ ಎರಡನೇ ಹಂತದ ರಚನೆಗಾಗಿ ನಾವು ಉತ್ಸುಕರಾಗಿದ್ದೆವು" ಎಂದು ಅವರು ರಥೇಡ್‌ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ನಮ್ಮೊಂದಿಗೆ ಮಾತನಾಡುತ್ತಾ ಹೇಳುತ್ತಾರೆ, "ಪಾಕೆಟ್ ಪುಸ್ತಕಗಳು, ಜಾನಪದ ಹಾಡುಗಳು, ಒಗಟುಗಳು, ಮಕ್ಕಳಿಗಾಗಿ ಪದಗಳ ಆಟ ಮತ್ತು ಇನ್ನೂ ಅನೇಕ ಡಿಜಿಟಲ್ ಪ್ರತಿಗಳನ್ನು ಹಂಚಿಕೊಳ್ಳಲು ನಾನು ಸಿದ್ಧನಾಗಿದ್ದೆ... ಆದರೆ ಸಾಂಕ್ರಾಮಿಕ ರೋಗವು ಅಪ್ಪಳಿಸಿತು."  ತಂಡದ ಪ್ರಯತ್ನಗಳು ಸ್ಥಗಿತಗೊಂಡವು. ಇದು ಸಾಲದೆನ್ನುವಂತೆ ಕಮಲೇಶ್ ಅವರ ಫೋನ್ ರೀಸೆಟ್ ಮಾಡಿದಾಗ ರಾತ್ರೋರಾತ್ರಿ ಅವರ ಫೋನಿನಲ್ಲಿದ್ದ ಡೇಟಾ ಪೂರ್ತಿಯಾಗಿ ಕಳೆದುಹೋಯಿತು. "ಸಬ್ ಚಲೇ ಗಯಾ" ಎಂದು ಅವರು ದುಃಖದಿಂದ ಹೇಳುತ್ತಾರೆ. "ಕೈಬರಹದ ಪ್ರತಿಯನ್ನು ಸಹ ಪಡೆಯಲು ನಮಗೆ ಸಾಧ್ಯವಾಗಲಿಲ್ಲ." ಅವರ ಬಳಿ ಸ್ಮಾರ್ಟ್ ಫೋನ್ ಇರಲಿಲ್ಲ. ಈ ವರ್ಷವಷ್ಟೇ ಅವರು ಇಮೇಲ್ ಮಾಡುವುದನ್ನು ಕಲಿತಿದ್ದಾರೆ.

ಅವರು ತನ್ನ ಬಳಿ ಉಳಿದಿದ್ದ ಬಾಕಿ ಮಾಹಿತಿಯನ್ನು ಅವರು ಇನ್ನೊಂದು ಹಳ್ಳಿಯ ತನ್ನ ತಂಡದ ಸದಸ್ಯರಿಗೆ ಹಸ್ತಾಂತರಿಸಿದರು. ಅವರು ಈಗ ತನ್ನೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಕಮಲೇಶ್ ಹೇಳುತ್ತಾರೆ, "ಅವರ ಬಳಿ ಈಗಲೂ ಆ ದಾಖಲೆಗಳು ಇವೆಯೇ ಎನ್ನುವುದು ತಿಳಿದಿಲ್ಲ."‌

ಆದರೆ ಕಮಲೇಶ್ ಅವರ ದಾಖಲೀಕರಣ ಕೆಲಸ ನಿಲ್ಲಿಸಲು ಪ್ರೇರೇಪಿಸಿದ್ದು ಸಾಂಕ್ರಾಮಿಕ ರೋಗ ಮಾತ್ರವಲ್ಲ. ತನ್ನ ಸಮುದಾಯದ ಯುವಕರು ಮತ್ತು ಹಿರಿಯರಲ್ಲಿನ ಆಸಕ್ತಿಯ ಕೊರತೆ ಕೂಡಾ ಭರಿಯಾಟಿಯನ್ನು ದಾಖಲಿಸುವಲ್ಲಿ ದೊಡ್ಡ ಅಡೆತಡೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳುತ್ತಾರೆ. "ಬುಜುರ್ಗೊ ಕೋ ಲಿಖ್ನಾ ನಹೀ ಹೈ ಔರ್ ಬಚ್ಚೋ ಕೋ ಬೋಲ್ನಾ ನಹೀ ಹೈ [ಹಿರಿಯರು ಬರೆಯಲು ಬಯಸುವುದಿಲ್ಲ ಮತ್ತು ಮಕ್ಕಳು ಮಾತನಾಡಲು ಬಯಸುವುದಿಲ್ಲ]" ಎಂದು ಅವರು ಹೇಳುತ್ತಾರೆ. "ನಿಧಾನವಾಗಿ ನಾನು ಭರವಸೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆ. ಕೊನೆಗೆ ಸಾಕೆನ್ನಿಸಿ ನಾನು ಈ ಕೆಲಸವನ್ನು ನಿಲ್ಲಿಸಿದೆ."

PHOTO • Ritu Sharma

ಕಮಲೇಶ್ ಮತ್ತು ಅವರ ಭರಿಯಾ ಟಿ ಭಾಷಾ ಅಭಿವೃದ್ಧಿ ತಂಡದ ಪ್ರಯತ್ನಗಳು ಭರಿಯಾ ಟಿ ಮತ್ತು ಇಂಗ್ಲಿ ಷ್‌ ಭಾಷೆಯಯಲ್ಲಿ ಬಹುಭಾಷಾ ವೆಬ್ಸೈಟ್ ರಚಿಸಲು ಕಾರಣವಾಯಿತು

PHOTO • Ritu Sharma

ವೆಬ್ಸೈಟ್ ರಚನೆಯ ಮೊದಲ ಹಂತದಲ್ಲಿ, ಕಮಲೇಶ್ ಮತ್ತು ಅವರ ತಂಡವು ತಮ್ಮ ಸಮುದಾಯ, ಭಾಷೆ, ಜೀವನೋಪಾಯ ಮತ್ತು ಭಾಷಾ ಕಾಗುಣಿತ ಮಾರ್ಗದರ್ಶಿ, ಆರೋಗ್ಯ ಕಥೆಗಳು ಮತ್ತು ನೈತಿಕ ಕಥೆಗಳು ಸೇರಿದಂತೆ ಅವರೇ ಬರೆದ ಹಲವಾರು ಪುಸ್ತಕಗಳ ಬಗ್ಗೆ ಮಾಹಿತಿಯನ್ನು ಅಪ್ಲೋಡ್ ಮಾಡಿದೆ

ಕಮಲೇಶ್ ಅವರ ತಂಡವು ಹೊಲಗಳಲ್ಲಿ ಕೆಲಸ ಮಾಡಲು ತಮ್ಮ ದಿನಗಳನ್ನು ಮುಡಿಪಾಗಿಟ್ಟ ಸಹ ರೈತರನ್ನು ಒಳಗೊಂಡಿತ್ತು. ದೀರ್ಘ ಮತ್ತು ದಣಿವಿನ ದಿನದ ನಂತರ, ಅವರು ಊಟಕ್ಕಾಗಿ ಮನೆಗೆ ಮರಳುತ್ತಿದ್ದರು ಮತ್ತು ಅವರು ವಿವರಿಸಿದಂತೆ ರಾತ್ರಿ ಬೇಗನೆ ಮಲಗುತ್ತಿದ್ದರು. ಈ ನಡುವೆ, ಒಂದು ನಿರ್ದಿಷ್ಟ ಹಂತದಲ್ಲಿ, ಅವರು ತಮ್ಮ ಭಾಗವಹಿಸುವಿಕೆಯನ್ನು ಸಹ ನಿಲ್ಲಿಸಿದರು.

ನಾನು ಇದನ್ನು ಏಕಾಂಗಿಯಾಗಿ ಮಾಡಲು ಸಾಧ್ಯವಿಲ್ಲ" ಎಂದು ಕಮಲೇಶ್ ಹೇಳುತ್ತಾರೆ. "ಇದು ಒಬ್ಬ ವ್ಯಕ್ತಿಯಿಂದಾಗುವ ಕೆಲಸವಲ್ಲ."

*****

ಕಮಲೇಶ್ ಹಳ್ಳಿಯ ಮೂಲಕ ಅಡ್ಡಾಡುತ್ತಿದ್ದವರು ಒಂದು ಮನೆಯ ಮುಂದೆ ನಿಂತರು. "ನಾನು ನನ್ನ ಸ್ನೇಹಿತರೊಂದಿಗೆ ಸೇರಿದಾಗಲೆಲ್ಲಾ, ನಾವು ದಿವ್ಲು ಭಯ್ಯಾ ಬಗ್ಗೆ ಚರ್ಚಿಸುತ್ತೇವೆ."

48 ವರ್ಷದ ಜಾನಪದ ನೃತ್ಯಗಾರ ಮತ್ತು ಗಾಯಕ ದಿವ್ಲು ಬಾಗ್ದರಿಯಾ ಮಧ್ಯಪ್ರದೇಶ ಸರ್ಕಾರ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭರಿಯಾ ಸಮುದಾಯದ ಪ್ರತಿನಿಧಿಯಾಗಿ ಆಗಾಗ ಸೇವೆ ಸಲ್ಲಿಸುತ್ತಾರೆ. ಕಮಲೇಶ್ ಹೇಳುತ್ತಾರೆ, "ನಮ್ಮ ಸಂಸ್ಕೃತಿಗೆ ನಮ್ಮ ಭಾಷೆ ಎಷ್ಟು ಮಹತ್ವದ್ದು ಎನ್ನುವುದನ್ನು ನಿಜವಾಗಿಯೂ ಗ್ರಹಿಸಬಲ್ಲ ಏಕೈಕ ವ್ಯಕ್ತಿ ಅವರು."

ಪರಿ ದಿವ್ಲು ಅವರನ್ನು ರಥೇಡ್ ಗ್ರಾಮದಲ್ಲಿನ ಅವರ ಮನೆಯ ಹೊರಗೆ ಭೇಟಿಯಾಯಿತು. ಉರುವಲು ಸಂಗ್ರಹಿಸಲು ಹೋಗಿದ್ದ ತಮ್ಮ ತಾಯಿಯ ಮರಳುವಿಕೆಗಾಗಿ ಕಾಯುತ್ತಿದ್ದ ಅವರು ತಮ್ಮ ಮೊಮ್ಮಕ್ಕಳಿಗಾಗಿ ಭರಿಯಾಟಿಯಲ್ಲಿ ಹಾಡನ್ನು ಹಾಡುತ್ತಿದ್ದರು.

"ಬರೆಯುವುದು ಮತ್ತು ಮಾತನಾಡುವುದು ಎರಡೂ ಮುಖ್ಯ" ಎಂದು ದಿವ್ಲು ಕಮಲೇಶ್ ಕಡೆಗೆ ವಾಲುತ್ತಾ ಹೇಳುತ್ತಾರೆ. "ಬಹುಶಃ ಇಂಗ್ಲಿಷ್ ಮತ್ತು ಹಿಂದಿಯನ್ನು ವಿಷಯಗಳಾಗಿ ಕಲಿಸುವಂತೆಯೇ, ಭರಿಯಾಟಿ ಮತ್ತು ಇತರ ಆದಿವಾಸಿ ಮಾತೃಭಾಷೆಗಳನ್ನು ಐಚ್ಛಿಕ ವಿಷಯವಾಗಿ ಕಲಿಸಬಹುದು?" ಅವರು ತಕ್ಷಣ ಕಮಲೇಶ್ ತಯಾರಿಸಿದ ವರ್ಣಮಾಲೆಯ ಚಾರ್ಟನ್ನು ತನ್ನ ಬಳಿಯಿದ್ದ ಚಾವಾಗೆ (ಮೊಮ್ಮಗ) ತೋರಿಸಲು ಪ್ರಾರಂಭಿಸಿದರು.

ಅವರ ಮೊಮ್ಮಗ ಚಾರ್ಟಿನಲ್ಲಿರುವ ಧಡುಸ್ (ಕೋತಿ) ಯನ್ನು ತೋರಿಸಿ ನಕ್ಕನು. "ಅವನು ಬೇಗ ಭರಿಯಾ ಕಲಿಯಲಿದ್ದಾನೆ" ಎಂದು ದಿವ್ಲು ಹೇಳಿದರು.

PHOTO • Ritu Sharma
PHOTO • Ritu Sharma

ಎಡ : 48 ವರ್ಷದ ಜಾನಪದ ನೃತ್ಯಗಾ ಮತ್ತು ಗಾಯಕ ದಿವ್ಲು ಬಾಗ್ದರಿಯಾ ಕಮಲೇಶ್ ಅವರ ತಂಡದ ಸದಸ್ಯ ಮತ್ತು ಮಧ್ಯಪ್ರದೇಶ ಸರ್ಕಾರ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭರಿಯಾ ಸಮುದಾಯವನ್ನು ಆಗಾಗ್ಗೆ ಪ್ರ ತಿನಿಧಿ ಸುತ್ತಾರೆ. ಬಲ: ದಿವ್ಲು ತನ್ನ ಮೊಮ್ಮಗ ಅಮೃತ್ ಜೊತೆ ಭರಿಯಾ ಟಿ ವರ್ಣಮಾಲೆಯ ಚಾರ್ಟನ್ನು ಪರಿಶೀಲಿಸುತ್ತಿದ್ದಾರೆ

ಕಮಲೇಶ್ ತನ್ನ ಸಮುದಾಯದೊಂದಿಗೆ ತೊಡಗಿಸಿಕೊಳ್ಳುವಾಗ ಎದುರಿಸಿದ ತೊಂದರೆಗಳ ಹೊರತಾಗಿಯೂ ಅವರು ಸೋಲಲಿಲ್ಲ. "ಅವನು ವಸತಿ ಶಾಲೆಗಳಿಗೆ ಹಾಜರಾಗಲು ಪ್ರಾರಂಭಿಸಿದರೆ, ಭರಿಯಾಟಿ ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ನಮ್ಮ ನಡುವೆ [ಇಲ್ಲಿ] ಬದುಕುವ ಮೂಲಕವಷ್ಟೇ ಭಾಷಾ ಕೌಶಲವನ್ನು ಕಾಪಾಡಿಕೊಳ್ಳಬಹುದು” ಈ ಭಾಷಾ ಸಂಗ್ರಹಕಾರ ಹೇಳುತ್ತಾರೆ.

"ವೈಸ್ ತೋ 100 ಮೇ ಸೆ 75 ಪ್ರತಿಶತ್ ತೋ ವಿಲುಪ್ತ್ ಹಿ ಹೋ ಚುಕಿ ಮೇರಿ ಭಾಷೆ [ನನ್ನ ಭಾಷೆ ಸುಮಾರು 75 ಪ್ರತಿಶತ ನಶಿಸಿದೆ]" ಎಂದು ಕಮಲೇಶ್ ಹೇಳುತ್ತಾರೆ. "ಭರಿಯಾಟಿಯಲ್ಲಿನ ವಸ್ತುಗಳ ಮೂಲ ಹೆಸರುಗಳನ್ನು ನಾವು ಮರೆತಿದ್ದೇವೆ. ಎಲ್ಲವೂ ನಿಧಾನವಾಗಿ ಹಿಂದಿಯೊಂದಿಗೆ ಬೆರೆತುಹೋಗಿದೆ.”

ಪ್ರಯಾಣವು ಹೆಚ್ಚು ಸಾಮಾನ್ಯವಾಗುತ್ತಿದ್ದಂತೆ ಮತ್ತು ಮಕ್ಕಳು ಶಾಲೆಗೆ ಹಾಜರಾಗಲು ಪ್ರಾರಂಭಿಸುತ್ತಿದ್ದಂತೆ, ಅವರು ಹಿಂದಿ ಶಬ್ದಕೋಶ ಮತ್ತು ನುಡಿಗಟ್ಟುಗಳೊಂದಿಗೆ ಮನೆಗೆ ಮರಳಿದರು, ಈ ಜ್ಞಾನವನ್ನು ತಮ್ಮ ಹೆತ್ತವರಿಗೆ ನೀಡಿದರು. ಪರಿಣಾಮವಾಗಿ, ಹಳೆಯ ತಲೆಮಾರು ಸಹ ತಮ್ಮ ಮಕ್ಕಳ ಮಾತಿನ ಮಾದರಿಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿತು, ಇದು ಭರಿಯಾಟಿ ಬಳಕೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಯಿತು.

ಕಮಲೇಶ್ ಹೇಳುತ್ತಾರೆ, "ಶಾಲೆ ಪ್ರಾರಂಭವಾದ ನಂತರ, ನಾನು ಭರಿಯಾಟಿಯಲ್ಲಿ ಮಾತನಾಡುವುದನ್ನು ಕಡಿಮೆ ಮಾಡಿದೆ ಮತ್ತು ಹಿಂದಿಯಲ್ಲಿ ಸಂವಹನ ನಡೆಸುವ ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆದೆ. ಈ ಬದಲಾವಣೆ ಕ್ರಮೇಣ ನನಗೆ ಅಭ್ಯಾಸವಾಯಿತು." ಅವರು ಹಿಂದಿ ಮತ್ತು ಭರಿಯಾಟಿ ಎರಡರಲ್ಲೂ ಪ್ರವೀಣರಾಗಿದ್ದಾರೆ; ಆದರೂ, ಅವರು ಎಂದಿಗೂ ಎರಡು ಭಾಷೆಗಳನ್ನು ಮಿಶ್ರಣ ಮಾಡಿ ಮಾತನಾಡುವುದಿಲ್ಲ ಎಂದು ಅವರು ಹೇಳುತ್ತಾರೆ. "ಭರಿಯಾಟಿಯನ್ನು ಮಾತ್ರ ಮಾತನಾಡುವ ನನ್ನ ಅಜ್ಜಿ ನನ್ನನ್ನು ಬೆಳೆಸಿದ್ದರಿಂದ, ಇತರರಂತೆ ಅವುಗಳನ್ನು ಸಲೀಸಾಗಿ ಬೆರೆಸಿ ಮಾತನಾಡುವುದು ನನಗೆ ಸವಾಲಾಗಿದೆ."

ಕಮಲೇಶ್ ಅವರ ಅಜ್ಜಿ, ಸುಮಾರು 80 ವರ್ಷ ವಯಸ್ಸಿನ ಸುಕ್ತಿಬಾಯಿ ಈಗಲೂ ಹಿಂದಿಯಲ್ಲಿ ಸಂವಹನ ನಡೆಸುವುದಿಲ್ಲ. ಅವರಿಗೆ ಹಿಂದಿ ಭಾಷೆ ಅರ್ಥವಾಗುತ್ತದೆಯಾದರೂ, ಅವರಿಗೆ ಅದರಲ್ಲಿ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ ಎಂದು ಕಮಲೇಶ್ ಹೇಳುತ್ತಾರೆ. ಅವರ ಒಡಹುಟ್ಟಿದವರು ಸಹ “ಅವರಿಗೆ ಮುಜುಗರವೆನ್ನಿಸುತ್ತದೆ ಎನ್ನುವ ಕಾರಣಕ್ಕೆ ಹಿಂದಿಯಲ್ಲಿ ಮಾತನಾಡಲು ಒಲವು ತೋರುತ್ತಾರೆ”. ಅವರ ಪತ್ನಿ ಅನಿತಾ ಕೂಡ ತಮ್ಮ ಸ್ಥಳೀಯ ಭಾಷೆಯನ್ನು ಮಾತನಾಡುವುದಿಲ್ಲ, ಆದರೆ ಕಮಲೇಶ್‌ ಪತ್ನಿಗೆ ಭರಿಯಾಟಿ ಮಾತನಾಡುವಂತೆ ಹುರಿದಂಬಿಸುತ್ತಿದ್ದಾರೆ.

PHOTO • Ritu Sharma

ಜನರು ಹೊರಗೆ ಪ್ರಯಾಣಿಸಿ ಇತರ ಭಾಷೆಗಳನ್ನು ಕಲಿಯುತ್ತಿದ್ದಂತೆ, ಭರಿಯಾ ಟಿ ಯಲ್ಲಿನ ವಸ್ತುಗಳ ಹೆಸರುಗಳು ನಶಿಸಿವೆ ಎಂದು ಕಮಲೇಶ್ ಹೇಳುತ್ತಾರೆ

"ಭರಿಯಾಟಿಯಿಂದ ಏನು ಪ್ರಯೋಜನ? ಇದು ನಮಗೆ ರೋಜಗಾರ್ [ಕೆಲಸ]‌ ವನ್ನು ಕೊಡುತ್ತದೆಯೇ? ಸಿರ್ಫ್ ಅಪ್ನಿ ಭಾಷಾ ಬೋಲ್ನೆ ಸೆ ಘರ್ ಚಲ್ತಾ ಹೈ? [ನಮ್ಮ ಮಾತೃಭಾಷೆಯನ್ನು ಮಾತನಾಡುವ ಮೂಲಕ ನಾವು ನಮ್ಮ ಮನೆಯನ್ನು ನಡೆಸಬಹುದೇ?] ಎಂಬ ಪ್ರಶ್ನೆ ಎರಡೂ ಭಾಷಾ ಉತ್ಸಾಹಿಗಳನ್ನು ಕಾಡುವ ಪ್ರಶ್ನೆ.

"ನಾವು ಹಿಂದಿಯನ್ನು ದೂರವಿಡಲು ಸಾಧ್ಯವಿಲ್ಲ" ಎಂದು ಪ್ರಾಯೋಗಿಕ ದನಿಯಲ್ಲಿ ದಿವ್ಲು ಹೇಳುತ್ತಾರೆ. "ಆದರೆ ನಾವು ನಮ್ಮ ಭಾಷೆಯನ್ನು ಜೀವಂತವಾಗಿಡಬೇಕು."

ಇದಕ್ಕೆ ಪ್ರತಿಕ್ರಿಯಿಸಿದ ಕಮಲೇಶ್, "ಈಗೆಲ್ಲ, ನೀವು ನಿಮ್ಮ ಆಧಾರ್ ಅಥವಾ ಚಾಲನಾ ಪರವಾನಗಿ ಇದ್ದರೂ ನಿಮ್ಮ ಗುರುತನ್ನು ಸಾಬೀತುಪಡಿಸಬಹುದು" ಎಂದು ಉತ್ತರಿಸುತ್ತಾರೆ.

ದಿವ್ಲು ಅವರ ಕಡೆಗೆ ಬಾಗಿ, "ಈ ದಾಖಲೆಗಳಿಲ್ಲದೆ ನಿಮ್ಮ ಗುರುತನ್ನು ಸಾಬೀತುಪಡಿಸುವಂತೆ ಯಾರಾದರೂ ಕೇಳಿದರೆ, ಹೇಗೆ ಸಾಬೀತುಪಡಿಸುತ್ತೀರಿ?" ಎಂದು ಕೇಳುತ್ತಾರೆ.

ಕಮಲೇಶ್ ನಗುತ್ತಾ, "ನಾನು ಭರಿಯಾಟಿಯಲ್ಲಿ ಮಾತನಾಡುತ್ತೇನೆ" ಎಂದು ಉತ್ತರಿಸುತ್ತಾರೆ.

“ಅದೇ ಹೇಳಿದ್ದ ನಾನು. ಭಾಷೆ ಕೂಡಾ ನಮ್ಮ ಗುರುತು” ಎಂದು ದಿವ್ಲು ದೃಢವಾಗಿ ಹೇಳುತ್ತಾರೆ.

ಭರಿಯಾಟಿಯ ಸಂಕೀರ್ಣ ಇತಿಹಾಸದಿಂದಾಗಿ ಭರಿಯಾಟಿಯ ಭಾಷಾ ವರ್ಗೀಕರಣವು ಅನಿಶ್ಚಿತವಾಗಿ ಉಳಿದಿದೆ. ಒಂದು ಕಾಲದಲ್ಲಿ ಬಹುಶಃ ದ್ರಾವಿಡ ಭಾಷೆಯಾಗಿದ್ದ ಈ ಭಾಷೆ ಈಗ ಬಲವಾದ ಇಂಡೋ-ಆರ್ಯನ್ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತದೆ, ವಿಶೇಷವಾಗಿ ಶಬ್ದಕೋಶ ಮತ್ತು ಧ್ವನಿಶಾಸ್ತ್ರದಲ್ಲಿ, ಇದು ಅದರ ಮಧ್ಯ ಭಾರತದ ಸ್ಥಾನ ಮತ್ತು ಎರಡೂ ಭಾಷಾ ಕುಟುಂಬಗಳೊಂದಿಗಿನ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ. ಅದರ ವರ್ಗೀಕರಣದಲ್ಲಿನ ಈ ಅಸ್ಪಷ್ಟತೆಯು ಕಾಲಾನಂತರದಲ್ಲಿ ಭಾರತೀಯ ಮತ್ತು ದ್ರಾವಿಡ ಪ್ರಭಾವಗಳ ಸಂಕೀರ್ಣ ಮಿಶ್ರಣವನ್ನು ಎತ್ತಿ ತೋರಿಸುತ್ತದೆ, ಇದು ಭಾಷಾಶಾಸ್ತ್ರಜ್ಞರಿಗೆ ಸ್ಪಷ್ಟವಾದ ವರ್ಗೀಕರಣವನ್ನು ಮಾಡುವಲ್ಲಿ ತೊಡಕಾಗಿ ಪರಿಣಮಿಸಿದೆ.

ವರದಿಗಾರರು ಪರಾರ್ಥ ಸಮಿತಿಯ ಮಂಜಿರಿ ಚಾಂಡೆ ಮತ್ತು ರಾಮದಾಸ್ ನಾಗರೆ ಮತ್ತು ಪಲ್ಲವಿ ಚತುರ್ವೇದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಾರೆ. ಖಾಲ್ಸಾ ಕಾಲೇಜಿನ ಸಂಶೋಧಕರು ಮತ್ತು ಉಪನ್ಯಾಸಕರಾದ ಅನಘಾ ಮೆನನ್ ಮತ್ತು ಐಐಟಿ ಕಾನ್ಪುರದ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ವಿಭಾಗದ ಭಾಷಾಶಾಸ್ತ್ರಜ್ಞ ಮತ್ತು ಸಹಾಯಕ ಪ್ರಾಧ್ಯಾಪಕ ಡಾ.ಚಿನ್ಮಯ್ ಧರೂರ್ಕರ್ ತಮ್ಮ ಜ್ಞಾನವನ್ನು ಈ ಲೇಖನಕ್ಕಾಗಿ ಉದಾರವಾಗಿ ಹಂಚಿಕೊಂಡಿರುತ್ತಾರೆ.

ಪರಿ ಎಂಡೇಜರಡ್ ಲಾಂಗ್ವೇಜ್ ಪ್ರಾಜೆಕ್ಟ್ (ಇಎಲ್‌ಪಿ) ಸರಣಿಯನ್ನು ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದ ಬೆಂಬಲದೊಂದಿಗೆ ಕಾರ್ಯರೂಪಕ್ಕೆ ತರಲಾಗಿದೆ. ಈ ಸರಣಿಯು ಭಾರತದ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಆ ಭಾಷೆಗಳನ್ನು ಮಾತನಾಡುವ ಜನರ ಬದುಕು ಮತ್ತು ಅನುಭವಗಳ ರೂಪದಲ್ಲಿ ದಾಖಲಿಸುವ ಗುರಿಯನ್ನು ಹೊಂದಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Ritu Sharma

ரிது ஷர்மா, பாரியில், அழிந்துவரும் மொழிகளுக்கான உள்ளடக்க ஆசிரியர். மொழியியலில் எம்.ஏ. பட்டம் பெற்ற இவர், இந்தியாவின் பேசும் மொழிகளை பாதுகாத்து, புத்துயிர் பெறச் செய்ய விரும்புகிறார்.

Other stories by Ritu Sharma
Editor : Priti David

ப்ரிதி டேவிட் பாரியின் நிர்வாக ஆசிரியர் ஆவார். பத்திரிகையாளரும் ஆசிரியருமான அவர் பாரியின் கல்விப் பகுதிக்கும் தலைமை வகிக்கிறார். கிராமப்புற பிரச்சினைகளை வகுப்பறைக்குள்ளும் பாடத்திட்டத்துக்குள்ளும் கொண்டு வர பள்ளிகள் மற்றும் கல்லூரிகளுடன் இயங்குகிறார். நம் காலத்தைய பிரச்சினைகளை ஆவணப்படுத்த இளையோருடனும் இயங்குகிறார்.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru