“ಯೇ ಬತಾನ ಮುಷ್ಕಿಲ್ ಹೋಗಾ ಕಿ ಕೌನ್ ಹಿಂದೂ ಹೈ, ಕೌನ್ ಮುಸಲ್ಮಾನ್ [ಇಲ್ಲಿ ಯಾರು ಹಿಂದೂ ಮತ್ತು ಯಾರು ಮುಸ್ಲಿಂ ಎಂದು ಹೇಳುವುದು ಕಷ್ಟ].”
68 ವರ್ಷದ ಮೊಹಮ್ಮದ್ ಶಬ್ಬೀರ್ ಖುರೇಷಿ ತನ್ನ ಮತ್ತು ತನ್ನ ನೆರೆಮನೆಯ ಅಜಯ್ ಸೈನಿ (52) ಕುರಿತು ಮಾತನಾಡುತ್ತಿದ್ದಾರೆ. ಇಬ್ಬರೂ ಅಯೋಧ್ಯೆಯ ನಿವಾಸಿಗಳಾಗಿದ್ದು, ರಾಮಕೋಟ್ ಪ್ರದೇಶದ ದುರಾಹಿ ಕುವಾನ್ ಎನ್ನುವಲ್ಲಿ ಕಳೆದ 40 ವರ್ಷಗಳಿಂದ ನೆರೆಹೊರೆಯವರಾಗಿ ಬದುಕುತ್ತಿದ್ದಾರೆ.
ಕುಟುಂಬಗಳು ಬಹಳ ನಿಕಟ ಸಂಬಂಧವನ್ನು ಹೊಂದಿದ್ದು, ದೈನಂದಿನ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾರೆ. ಮತ್ತು ಪರಸ್ಪರ ಅವಲಂಬನೆಯೊಂದಿಗೆ ಬದುಕುತ್ತಿದ್ದಾರೆ. “ಒಮ್ಮೆ ನಾನು ಕೆಲಸದ ಸಲುವಾಗಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ಮಗಳಿಗೆ ಹುಷಾರು ತಪ್ಪಿದೆ ಎಂದು ಮನೆಯಿಂದ ಫೋನ್ ಕರೆ ಬಂದಿತ್ತು. ನಾನು ಮನೆಗೆ ಓಡಿ ಹೋಗುವ ಹೊತ್ತಿಗೆ ಖುರೇಷಿಯವರ ಕುಟುಂಬ ನಮ್ಮ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ನನ್ನ ಪತ್ನಿ ತಿಳಿಸಿದಳು. ಅವರು ಔಷಧಿಯನ್ನು ಸಹ ತಂದಿದ್ದರು.”
ಅವರು ಕುಳಿತು ಮಾತನಾಡುತ್ತಿದ್ದ ಹಿತ್ತಲಿನಲ್ಲಿ ಎಮ್ಮೆಗಳು, ಆಡುಗಳು ಮತ್ತು ಆರೇಳು ಕೋಳಿಯ ಹಿಂಡಿನಿಂದ ತುಂಬಿತ್ತು. ಜೊತೆಗೆ ಎರಡೂ ಕುಟುಂಬದ ಮಕ್ಕಳು ಅತ್ತಿತ್ತ ಓಡಾಡುತ್ತಾ ಆಟವಾಡುತ್ತಿದ್ದರು.
ಅದು 2024ರ ಜನವರಿ ತಿಂಗಳು, ಅಯೋಧ್ಯೆಯಲ್ಲಿ ರಾಮ ಮಂದಿರದ ಅದ್ದೂರಿ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಹೊಸದಾಗಿ ಹಾಕಲಾಗಿದ್ದ ಭಾರದ ಕಬ್ಬಿಣದ ಡಬಲ್ ಬ್ಯಾರಿಕೇಡ್ ಬೇಲಿ ಅವರ ಮನೆಗಳು ಮತ್ತು ದೇವಾಲಯದ ಗೋಡೆಗೆ ಗಡಿಯಾಗಿ ನಿಂತಿತ್ತು.
ಸೈನಿ ಮತ್ತವರ ಕುಟುಂಬವು ಎಂಭತ್ತರ ದಶಕದಲ್ಲಿ ಅಯೋಧ್ಯೆಗೆ ಸ್ಥಳಾಂತರಗೊಂಡರು. ಆಗಿನಿಂದಲೂ ಖುರೇಷಿ ಅವರ ನೆರಮನೆಯವರು. ಅಯೋಧ್ಯೆಗೆ ಬಂದ ಹೊಸತರಲ್ಲಿ ಅವರಿಗೆ ಹದಿಹರೆಯ. ಆ ದಿನಗಳಲ್ಲಿ ಬಾಬರಿ ಮಸೀದಿಯಿದ್ದ ಜಾಗದಲ್ಲಿನ ರಾಮನ ಮೂರ್ತಿಯನ್ನು ನೋಡಲು ಬರುವ ಜನರಿಗೆ ಒಂದು ರೂಪಾಯಿಗೆ ಹೂವಿನ ಹಾರಗಳನ್ನು ಮಾರಾಟ ಮಾಡುತ್ತಿದ್ದರು.
ಖುರೇಷಿಗಳು ಮೂಲತಃ ಕಸಾಯಿ ವೃತ್ತಿ ಮಾಡುತ್ತಿದ್ದರು, ಅವರ ಕುಟುಂಬವು ಅಯೋಧ್ಯೆ ಪಟ್ಟಣದ ಹೊರವಲಯದಲ್ಲಿ ಮಾಂಸದ ಅಂಗಡಿಯನ್ನು ಹೊಂದಿತ್ತು. 1992ರ ಸಮಯದಲ್ಲಿ ಅವರ ಮನೆ ಬೆಂಕಿಗೆ ಆಹುತಿಯಾಯಿತು. ಅದರ ನಂತರ ಕುಟುಂಬವು ವೆಲ್ಡಿಂಗ್ ವ್ಯವಹಾರವನ್ನು ಪ್ರಾರಂಭಿಸಿತು.
ಖುರೇಷಿ ತನ್ನ ಸುತ್ತಲೂ ಆಡುತ್ತಿರುವ ಎಲ್ಲಾ ವಯಸ್ಸಿನ ನೆರೆಮನೆಯ ಮಕ್ಕಳ ಗುಂಪನ್ನು ತೋರಿಸುತ್ತಾ “ಈ ಮಕ್ಕಳನ್ನು ನೋಡಿ... ಅವರು ಹಿಂದೂಗಳು... ನಾವು ಮುಸ್ಲಿಮರು. ಅವರೆಲ್ಲರೂ ಸಹೋದರ, ಸಹೋದರಿಯರಂತಿದ್ದಾರೆ” ಎಂದು ಹೇಳುತ್ತಾರೆ. “ಅಬ್ ಆಪ್ ಹಮಾರೇ ರೆಹನ್ ಸಹೆನ್ ಪತಾ ಕೀಜಿಯೇ ಕೌನ್ ಕ್ಯಾ ಹೈ. ಹಮ್ ಏಕ್ ದೂಸ್ರೇ ಕೇ ಸಾತ್ ಭೇದ್ ಭಾವ್ ನಹಿ ಕರ್ತೆ [ನಮ್ಮ ದಿನನಿತ್ಯದ ಬದುಕನ್ನು ನೋಡಿ ಯಾರು ಯಾವ ಧರ್ಮಕ್ಕೆ ಸೇರಿದವರೆಂದು ಹೇಳುವುದು ಕಷ್ಟ. ನಾವು ಭೇದ ಭಾವ ಮಾಡುವುದಿಲ್ಲ].” ಈ ಮಾತನ್ನು ಒಪ್ಪುವ ಅಜಯ್ ಸೈನಿಯವರ ಪತ್ನಿ, ಗುಡಿಯಾ ಸೈನಿ “ಅವರು ಬೇರೆ ಧರ್ಮಕ್ಕೆ ಸೇರಿದವರು ಎನ್ನುವುದು ನಮ್ಮಲ್ಲಿ ಯಾವ ವ್ಯತ್ಯಾಸಕ್ಕೂ ಕಾರಣವಾಗುವುದಿಲ್ಲ” ಎನ್ನುತ್ತಾರೆ.
ಒಂದು ದಶಕದ ಹಿಂದೆ, ಖುರೇಷಿಯವರ ಒಬ್ಬಳೇ ಮಗಳು ನೂರ್ ಜಹಾನ್ ವಿವಾಹದ ಸಂದರ್ಭದಲ್ಲಿ “ನಾವು ಸಹ ಸಂಭ್ರಮದಲ್ಲಿ ಭಾಗವಹಿಸಿದ್ದೆವು. ಅತಿಥಿಗಳನ್ನು ಸ್ವಾಗತಿಸುವ ಹಾಗೂ ಅವರ ಸೇವೆ ಮಾಡುವ ಕೆಲಸಗಳನ್ನು ಸಹ ಮಾಡಿದ್ದೆವು. ನಮಗೆ ಅಲ್ಲಿ ಕುಟುಂಬದ ವ್ಯಕ್ತಿಗಳಿಗೆ ಇರುವಷ್ಟೇ ಗೌರವವಿತ್ತು. ನಾವು ಸದಾ ಒಬ್ಬರ ಪರವಾಗಿ ಒಬ್ಬರು ನಿಲ್ಲುತ್ತೇವೆ” ಎನ್ನುತ್ತಾರೆ ಅಜಯ್ ಸೈನಿ.
ನಂತರ ಮಾತು ರಾಮಮಂದಿರದತ್ತ ಹೊರಳಿತು. ಅದು ಅವರು ಕುಳಿತಲ್ಲಿಗೆ ಕಾಣುತ್ತಿತ್ತು. ಅದು ಆಗಿನ್ನೂ ನಿರ್ಮಾಣ ಹಂತದಲ್ಲಿರುವ ಭವ್ಯ ರಚನೆಯಾಗಿತ್ತು. ಸುತ್ತಲೂ ಬೃಹತ್ ಕ್ರೇನುಗಳು ನಿಂತಿದ್ದವು. ಜೊತೆಗೆ ಚಳಿಗಾಲದ ಮಸುಕು ಸಹ ಹಬ್ಬಿತ್ತು.
ಖುರೇಷಿ ತನ್ನ ಸಾಧಾರಣ ಇಟ್ಟಿಗೆ ಮತ್ತು ಗಾರೆ ಬಳಸಿ ಕಟ್ಟಲಾದ ಮನೆಯಿಂದ ಕೆಲವೇ ಅಡಿಗಳಷ್ಟು ದೂರದಲ್ಲಿರುವ ಹೊಸ ದೇವಾಲಯದ ಭವ್ಯವಾದ ರಚನೆಯ ಕಡೆಗೆ ಬೆರಳು ತೋರಿಸುತ್ತಾ ಹೇಳುತ್ತಾರೆ: "ವೋ ಮಸ್ಜಿದ್ ಥಿ, ವಹಾನ್ ಜಬ್ ಮಗ್ರಿಬ್ ಕೆ ವಕ್ತ್ ಅಜಾನ್ ಹೋತಿ ಥಿ ತೋಹ್ ಮೇರೆ ಘರ್ ಮೇ ಚಿರಾಗ್ ಜಲ್ತಾ ಥಾ" (ಅಲ್ಲಿ ಮಸೀದಿ ಇತ್ತು, ಮತ್ತು ಆಜಾನ್ ಕರೆ ಮೇರೆಗೆ ಮನೆಯಲ್ಲಿ ಸಂಜೆ ದೀಪವನ್ನು ಬೆಳಗಿಸುತ್ತಿದ್ದೆವು) ಎಂದು ಅವರು ಮಸೀದಿಯನ್ನು ಉರುಳಿಸಿದ ಹಿಂದಿನ ಸಮಯವನ್ನು ನೆನಪಿಸಿಕೊಳ್ಳುತ್ತಾರೆ.
ಆದರೆ 2024ರ ಜನವರಿ ಆರಂಭದಿಂದ ಆಜಾನ್ ಸದ್ದು ಮೌನವಾಗಿರುವುದು ಖುರೇಷಿಯವರನ್ನು ಚಿಂತೆಗೀಡು ಮಾಡಿದೆ.
“ರಾಮ ಮಂದಿರದ ಕಾಂಪೌಂಡ್ ಗೋಡೆಗೆ ಹೊಂದಿಕೊಂಡಿರುವ ಈ ಎಲ್ಲಾ ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ನಮಗೆ ತಿಳಿಸಲಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ [2023] ಭೂ ಕಂದಾಯ ಇಲಾಖೆಯ ಜಿಲ್ಲಾ ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಮನೆಗಳ ಅಳತೆ ತೆಗೆದುಕೊಂಡರು" ಎಂದು ಸೈನಿ ಈ ವರದಿಗಾರರಿಗೆ ತಿಳಿಸಿದರು. ಸೈನಿ ಮತ್ತು ಖುರೇಷಿ ಅವರ ಮನೆ ದೇವಾಲಯದ ಕಾಂಪೌಂಡ್ ಮತ್ತು ಡಬಲ್ ಬ್ಯಾರಿಕೇಡ್ ಬೇಲಿಗೆ ಹೊಂದಿಕೊಂಡಿದೆ.
ಗುಡಿಯಾ ಮುಂದುವರೆದು ಹೇಳುತ್ತಾರೆ, "ನಮ್ಮ ಮನೆಯ ಬಳಿ ಇಷ್ಟು ದೊಡ್ಡ ದೇವಾಲಯ ಬಂದಿರುವುದು ಮತ್ತು ಈ ಎಲ್ಲಾ ಬೆಳವಣಿಗೆಗಳು ಸುತ್ತಲೂ ನಡೆಯುತ್ತಿರುವುದು ನಮಗೆ ಸಂತೋಷ ತಂದಿದೆ. ಆದರೆ ಈ ವಿಷಯಗಳು [ಸ್ಥಳಾಂತರ] ನಮಗೆ ಸಹಾಯ ಮಾಡುವುದಿಲ್ಲ" ಎಂದು ಅವರು ಹೇಳುತ್ತಾರೆ. "ಅಯೋಧ್ಯೆ ಕಾ ಕಾಯಪಲಟ್ ಹೋ ರಹಾ ಹೈ, ಪರ್ ಹಮ್ ಹಿ ಲೋಗೋ ಕೋ ಪಲಾಟ್ ಕೆ [ಅವರು ನಮ್ಮನ್ನು ದೂರ ಕಳುಹಿಸುವ ಮೂಲಕ ಅಯೋಧ್ಯೆಯನ್ನು ಪರಿವರ್ತಿಸುತ್ತಿದ್ದಾರೆ].
ಇಲ್ಲಿಗೆ ಹತ್ತಿರದಲ್ಲೇ ವಾಸಿಸುವ ಗ್ಯಾನಮತಿ ಯಾದವ್ ಈಗಾಗಲೇ ತನ್ನ ಮನೆಯನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ಕುಟುಂಬವು ಈಗ ಹಸುವಿನ ಸಗಣಿ ಮತ್ತು ಒಣ ಹುಲ್ಲಿನಿಂದ ಆವೃತವಾದ ತಾತ್ಕಾಲಿಕ ಗುಡಿಸಲಿನ ಅಡಿಯಲ್ಲಿ ವಾಸಿಸುತ್ತಿದೆ. "ರಾಮನಿಗೆ ದೇವಾಲಯ ಕಟ್ಟಲು ನಮ್ಮ ಮನೆಯನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ" ಎಂದು ತಮ್ಮ ಹೊಸ ಪರಿಸರದಲ್ಲಿ ತನ್ನ ಕುಟುಂಬವನ್ನು ಒಟ್ಟಿಗಿರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಈ ವಿಧವೆ ಹೇಳುತ್ತಾರೆ. ಅವರು ಹಾಲು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಾರೆ.
ಅಹಿರಾನಾ ಮೊಹಲ್ಲಾದ ದೇವಾಲಯದ ಮುಂಭಾಗದ ಪ್ರವೇಶದ್ವಾರಕ್ಕೆ ಹೊಂದಿಕೊಂಡಂತೆ ಇದ್ದ ಆರು ಕೊಠಡಿಗಳನ್ನು ಹೊಂದಿರುವ ಅವರ ಪಕ್ಕಾ ಮನೆಯನ್ನು ಡಿಸೆಂಬರ್ 2023ರಲ್ಲಿ ನೆಲಸಮಗೊಳಿಸಲಾಯಿತು. "ಅವರು ಬುಲ್ಡೋಜರ್ ತಂದು ನಮ್ಮ ಮನೆಯನ್ನು ನೆಲಸಮಗೊಳಿಸಿದರು. ನಾವು ಅವರಿಗೆ ದಾಖಲೆಗಳು, ಮನೆ ತೆರಿಗೆ ಮತ್ತು ವಿದ್ಯುತ್ ಬಿಲ್ಲುಗಳನ್ನು ತೋರಿಸಲು ಪ್ರಯತ್ನಿಸಿದಾಗ, ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಧಿಕಾರಿಗಳು ಹೇಳಿದರು" ಎಂದು ಅವರ ಹಿರಿಯ ಮಗ ರಾಜನ್ ಹೇಳಿದರು. ಆ ರಾತ್ರಿ, ನಾಲ್ಕು ಮಕ್ಕಳು, ವಯಸ್ಸಾದ ಮಾವ ಮತ್ತು ಆರು ಜಾನುವಾರುಗಳಿಂದ ಕುಟುಂಬವು ಛಾವಣಿಯಿಲ್ಲದೆ ಚಳಿಗಾಲದ ಚಳಿಯಲ್ಲಿ ನಡುಗುತ್ತಿತ್ತು. "ನಮಗೆ ಮನೆಯಲ್ಲಿನ ಏನನ್ನೂ ತೆಗೆದುಕೊಳ್ಳಲು ಅವಕಾಶವಿರಲಿಲ್ಲ" ಎಂದು ಅವರು ಹೇಳುತ್ತಾರೆ. ಟಾರ್ಪಾಲಿನ್ ಟೆಂಟ್ ಸ್ಥಾಪಿಸುವ ಮೊದಲು ಕುಟುಂಬವು ಈಗಾಗಲೇ ಎರಡು ಬಾರಿ ಸ್ಥಳಾಂತರಗೊಂಡಿದೆ.
"ಇದು ನನ್ನ ಗಂಡನ ಕುಟುಂಬದ ಮನೆ. ಅವರು ಮತ್ತು ಅವರ ಒಡಹುಟ್ಟಿದವರು ಐದು ದಶಕಗಳ ಹಿಂದೆ ಇಲ್ಲಿ ಜನಿಸಿದರು. ಆದರೆ ನಮ್ಮ ಮಾಲೀಕತ್ವವನ್ನು ಸಾಬೀತುಪಡಿಸಲು ನಮ್ಮ ಬಳಿ ದಾಖಲೆಗಳಿದ್ದರೂ ಸಹ ಇದು ನಝುಲ್ ಭೂಮಿ [ಸರ್ಕಾರಿ ಭೂಮಿ] ಎಂದು ಅಧಿಕಾರಿಗಳು ಹೇಳಿದ್ದರಿಂದ ನಮಗೆ ಯಾವುದೇ ಪರಿಹಾರ ಸಿಗಲಿಲ್ಲ" ಎಂದು ಗ್ಯಾನಮತಿ ಹೇಳುತ್ತಾರೆ.
ಸಾಕಷ್ಟು ಪರಿಹಾರ ಸಿಕ್ಕರೆ ಅಯೋಧ್ಯೆ ನಗರ ವ್ಯಾಪ್ತಿಯಲ್ಲಿ ಮತ್ತೊಂದು ತುಂಡು ಭೂಮಿ ಖರೀದಿಸಬಹುದು ಎಂದು ಖುರೇಷಿ ಮತ್ತು ಅವರ ಪುತ್ರರು ಹೇಳುತ್ತಾರೆ, ಆದರೆ ಇದು ಅವರ ಪಾಲಿಗೆ ಸಂತೋಷ ಕೊಡಬಲ್ಲ ನಡೆಯಲ್ಲ. “ಇಲ್ಲಿನ ಎಲ್ಲರಿಗೂ ನಾವು ಗೊತ್ತು; ಅವರೊಂದಿಗೆ ನಮಗೆ ನಿಕಟ ಸಂಬಂಧವಿದೆ. "ನಾವು ಇಲ್ಲಿಂದ ಹೊರಟು [ಮುಸ್ಲಿಂ ಬಾಹುಳ್ಯದ] ಫೈಜಾಬಾದ್ ತಲುಪಿದರೆ, ನಾವು ಇತರ ಸಾಮಾನ್ಯ ಜನರಂತೆ ಬದುಕುತ್ತೇವೆ" ಎಂದು ಶಬ್ಬೀರ್ ಅವರ ಕಿರಿಯ ಪುತ್ರರಲ್ಲಿ ಒಬ್ಬರಾದ ಜಮಾಲ್ ಖುರೇಷಿ ಹೇಳುತ್ತಾರೆ. “ಅಲ್ಲಿ ನಮ್ಮನ್ನು ಅಯೋಧ್ಯಾವಾಸಿಗಳೆಂದು ಕರೆಯುವುದಿಲ್ಲ.”
ಅಜಯ್ ಸೈನಿ ಸಹ ಇಂತಹದ್ದೇ ಭಾವನೆಯನ್ನು ಹಂಚಿಕೊಂಡರು. “ನಮ್ಮ ನಂಬಿಕೆ ಈ ನೆಲಕ್ಕೆ ಅಂಟಿಕೊಂಡಿದೆ. ನಮ್ಮನ್ನು ಇಲ್ಲಿಂದ 15 ಕಿಲೋಮೀಟರ್ ದೂರ ಕಳುಹಿಸಿದರೆ ನಮ್ಮ ನಂಬಿಕೆ ಮತ್ತು ವ್ಯವಹಾರ ಎರಡನ್ನೂ ಕಿತ್ತುಕೊಂಡಂತಾಗುತ್ತದೆ.”
ಸೈನಿಯವರು ಈ ಸ್ಥಳವನ್ನು ತೊರೆಯಲು ಹಿಂಜರಿಯುತ್ತಿರುವುದರ ಹಿಂದೆ ಅವರ ಹೊಟ್ಟೆಪಾಡಿನ ಪ್ರಶ್ನೆಯೂ ಇದೆ. "ನಯಾ ಘಾಟ್ ಬಳಿಯ ನಾಗೇಶ್ವರನಾಥ ದೇವಸ್ಥಾನದಲ್ಲಿ ಹೂವು ಮಾರುವ ನಾನು ಇಲ್ಲಿಂದ ಪ್ರತಿದಿನ 20 ನಿಮಿಷಗಳ ಕಾಲ ಸೈಕಲ್ ಪ್ರಯಾಣ ಮಾಡುತ್ತೇನೆ. ಪ್ರವಾಸಿಗರ ಸಂದಣಿಯನ್ನು ಆಧರಿಸಿ ಪ್ರತಿದಿನ 50ರಿಂದ 500 ರೂಪಾಯಿಗಳವರೆಗೆ ಸಂಪಾದಿಸುತ್ತೇನೆ. ಇದು ನನಗೆ ಕುಟುಂಬ ನಡೆಸಲು ಇರುವ ಏಕೈಕ ಆದಾಯದ ಮೂಲವಾಗಿದೆ. ಈಗ ಇದು ಬದಲಾದರೆ ನಾನು “ಹೆಚ್ಚುವರಿ ಪ್ರಯಾಣ ಮತ್ತು ಹೆಚ್ಚುವರಿ ಖರ್ಚಿಗೆ” ಸಿದ್ಧನಾಗಬೇಕಾಗುತ್ತದೆ.” ಎಂದು ಅವರು ಆತಂಕದಿಂದ ಹೇಳುತ್ತಾರೆ.
“ಇಂತಹ ಭವ್ಯ ದೇಗುಲವೊಂದು ನಮ್ಮ ಹಿತ್ತಲಿನಲ್ಲಿದೆ ಎನ್ನುವುದ ನಮಗೂ ಹೆಮ್ಮೆಯ ವಿಚಾರ. ಇದನ್ನು ದೇಶದ ಉಚ್ಛ ನ್ಯಾಯಾಲಯವು ನಂಬಿಕೆಯ ಆಧಾರದ ಮೇಲೆ ಅನುಮೋದಿಸಿದೆ. ಹೀಗಾಗಿ ಅದನ್ನು ವಿರೋಧಿಸಲು ಯಾವುದೇ ಕಾರಣಗಳಿಲ್ಲ” ಎನ್ನುತ್ತಾರೆ ಜಮಾಲ್.
“ಹಾಗೆಂದು ಇನ್ನು ಮುಂದೆ ನಮಗೆ ಇಲ್ಲಿ ವಾಸಿಸಲು ಅವಕಾಶ ಸಿಗುವುದಿಲ್ಲ. ನಮ್ಮನ್ನು ಇಲ್ಲಿಂದ ಹೊರಹಾಕಲಾಗುತ್ತಿದೆ.”
ದೇವಾಲಯದ ಹಿಂಭಾಗದ ಕಾಂಪೌಂಡಿನಲ್ಲಿ ಕಾವಲು ಗೋಪುರವಿದ್ದು, ಅಲ್ಲಿ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಕಾವಲು ಕಾಯುತ್ತಿರುವುದರಿಂದ ಇಲ್ಲಿನ ಕುಟುಂಬಗಳು ಈಗಾಗಲೇ ಮಿಲಿಟರಿ ವಲಯದಲ್ಲಿ ವಾಸಿಸುತ್ತಿರುವ ಒತ್ತಡವನ್ನು ಅನುಭವಿಸುತ್ತಿವೆ. "ಪ್ರತಿ ತಿಂಗಳು, ವಿವಿಧ ಸಂಸ್ಥೆಗಳು ನಿವಾಸಿಗಳ ಪರಿಶೀಲನೆಗಾಗಿ ನಾಲ್ಕು ಬಾರಿ ಇಲ್ಲಿಗೆ ಬರುತ್ತವೆ. ಅತಿಥಿಗಳು ಮತ್ತು ಸಂಬಂಧಿಕರು ರಾತ್ರಿ ತಂಗಿದ್ದರೆ, ಅವರ ವಿವರಗಳನ್ನು ಪೊಲೀಸರಿಗೆ ಒದಗಿಸುವುದು ಕಡ್ಡಾಯ ಮಾಡಲಾಗಿದೆ" ಎಂದು ಗುಡಿಯಾ ಹೇಳುತ್ತಾರೆ.
ಅಹಿರಾನಾ ಗಲ್ಲಿ ಮತ್ತು ದೇವಾಲಯದ ಬಳಿಯ ಕೆಲವು ರಸ್ತೆಗಳಲ್ಲಿ ಸ್ಥಳೀಯರು ಗಾಡಿಗಳಲ್ಲಿ ಓಡಾಡುವುದನ್ನು ನಿಷೇಧಿಸಲಾಗಿದೆ. ಅವರು ಈಗ ಹನುಮಾನ್ ಗರ್ಹಿಯ ಕೇಂದ್ರ ಸ್ಥಳವನ್ನು ತಲುಪಲು ಸುತ್ತು ಬಳಸಿನ ದಾರಿಯಲ್ಲಿ ಹೋಗಬೇಕಾಗಿದೆ.
ದುರಾಹಿ ಕುವಾನ್ ಪ್ರದೇಶದ ಅವರ ಮನೆಯ ಮುಂದಿನ ದಾರಿಯನ್ನು ಜನವರಿ 22, 2024ರಂದು ನಡೆದ ರಾಮ ಮಂದಿರದ ಅದ್ದೂರಿ ಉದ್ಘಾಟನೆಯಂದು ತಂಡೋಪತಂಡವಾಗಿ ಬಂದ ರಾಜಕೀಯ ನಾಯಕರು, ಸಚಿವರು ಮತ್ತು ಸೆಲೆಬ್ರಿಟಿಗಳಂತಹ ವಿಐಪಿಗಳಿಗೆ ತೆರೆದಿಡಲಾಗಿತ್ತು.
*****
05/02/2024ರ ಸೋಮವಾರದಂದು ರಾಜ್ಯ ಸರ್ಕಾರವು ತನ್ನ ಬಜೆಟ್ ಮಂಡಿಸಿತು ಮತ್ತು ಅದನ್ನು ರಾಮನಿಗೆ ಅರ್ಪಿಸಿತು. “ನಮ್ಮ ಯೋಚನೆ, ಪ್ರತಿಜ್ಞೆ ಮತ್ತು ಆಯವ್ಯಯದ ಪ್ರತಿ ಅಕ್ಷರದಲ್ಲೂ ರಾಮನಿದ್ದಾನೆ” ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಂದು ಹೇಳಿಕೆ ನೀಡಿದರು. ಈ ಬಜೆಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 150 ಕೋಟಿ ರೂ., ಅಂತಾರಾಷ್ಟ್ರೀಯ ರಾಮಾಯಣ ಮತ್ತು ವೈದಿಕ ಸಂಶೋಧನಾ ಸಂಸ್ಥೆಗೆ 10 ಕೋಟಿ ರೂ. ಸೇರಿದಂತೆ ಅಯೋಧ್ಯೆಯ ಮೂಲಸೌಕರ್ಯ ಅಭಿವೃದ್ಧಿಗೆ 1,500 ಕೋಟಿ ರೂ. ಮೀಸಲಿಡಲಾಗಿದೆ.
ದೇವಾಲಯದ ಸಂಕೀರ್ಣವು 70 ಎಕರೆ ಭೂಮಿಯಲ್ಲಿ ಹರಡಿಕೊಳ್ಳಲಿದೆ ಎನ್ನಲಾಗುತ್ತಿದೆ. 2.7 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ರಾಮ ದೇವಾಲಯವು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (ಎಸ್‌ಆರ್‌ಜೆಟಿಕೆಟಿ) ಮೂಲಕ ಹಣವನ್ನು ಪಡೆಯುತ್ತದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿ (ಎಫ್‌ಸಿಆರ್‌ಎ) ವಿದೇಶಿ ಪ್ರಜೆಗಳಿಂದ ದೇಣಿಗೆ ಪಡೆಯಲು ಅನುಮತಿ ಪಡೆದಿರುವ ಕೆಲವೇ ಸಂಸ್ಥೆಗಳಲ್ಲಿ ಇದೂ ಕೂಡಾ ಒಂದು. ಭಾರತೀಯ ಪ್ರಜೆಗಳು ಈ ಟ್ರಸ್ಟಿಗೆ ನೀಡುವ ದೇಣಿಗೆಗೆ ತೆರಿಗೆ ಕಡಿತದ ಅವಕಾಶ ನೀಡಲಾಗಿದೆ.
ರಾಜ್ಯ ಬಜೆಟ್‌ನ ಹೊರತಾಗಿ, ಕೇಂದ್ರ ಸರ್ಕಾರದಿಂದಲೂ ದೊಡ್ಡ ಮೊತ್ತವನ್ನು ಈಗಾಗಲೇ ಘೋಷಿಸಲಾಗಿದೆ. ಇದರಡಿ ರೂ. 11,100 ಕೋಟಿ ಮೌಲ್ಯದ 'ಅಭಿವೃದ್ಧಿ' ಯೋಜನೆಗಳೊಂದಿಗೆ ರೈಲ್ವೆ ನಿಲ್ದಾಣದ ಪುನರ್ ನಿರ್ಮಾಣಕ್ಕೆ 240 ಕೋಟಿ ರೂ. , ಹೊಸ ವಿಮಾನ ನಿಲ್ದಾಣಕ್ಕೆ 1,450 ಕೋಟಿ ರೂ. ಮೀಸಲಿಡಲಾಗಿದೆ.
ಉದ್ಘಾಟನೆಯ ನಂತರ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. "ದೇವಾಲಯ ತೆರೆದ ನಂತರ ಅಯೋಧ್ಯೆಗೆ ಪ್ರತಿದಿನ ಅಂದಾಜು 3 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಲಿದ್ದಾರೆ” ಎಂದು ಉತ್ತರ ಪ್ರದೇಶ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪ್ರವಾಸೋದ್ಯಮ) ಮುಖೇಶ್ ಮೆಶ್ರಮ್ ಹೇಳುತ್ತಾರೆ.
ಈ ಹೆಚ್ಚುವರಿ ಸಂದರ್ಶಕರನ್ನು ಸ್ವಾಗತಿಸುವ ಸಲುವಾಗಿ ಮಾಡಿಕೊಳ್ಳಬೇಕಿರುವ ಸಿದ್ಧತೆಗೆ ಇಲ್ಲಿನ ಸ್ಥಳೀಯ ಜನರು ತಮ್ಮ ಮನೆಗಳು ಮತ್ತು ಸ್ನೇಹ-ಸಂಬಂಧವನ್ನು ಬಿಟ್ಟುಕೊಡಬೇಕಾಗಿದೆ. ಇಲ್ಲೀಗ ನಗರವ್ಯಾಪಿ ಮೂಲಭೂತ ಸೌಕರ್ಯಗಳ ವಿಸ್ತರಣೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
"ಓಣಿಯ ಮೂಲೆಯಲ್ಲಿ ವಾಸಿಸುವ ನಮ್ಮ ಸಂಬಂಧಿಕರಾದ ಮುಸ್ಲಿಂ ಕುಟುಂಬಕ್ಕೆ ಈಗಾಗಲೇ ಪರಿಹಾರ ನೀಡಲಾಗಿದೆ. ಅವರ ಮನೆ ದೇವಾಲಯದ ಗೋಡೆಗೆ ಆತುಕೊಂಡಿದ್ದ ಕಾರಣ ಅದನ್ನುಈಗಾಗಲೇ ಭಾಗಶಃ ಕೆಡವಲಾಗಿದೆ” ಎಂದು ಖುರೇಷಿ ಅವರ ಮಗ ಜಮಾಲ್ ಹೇಳುತ್ತಾರೆ. ದೇವಾಲಯದ 70 ಎಕರೆ ಆವರಣದಲ್ಲಿ ವಾಸಿಸುವ 50 ಮುಸ್ಲಿಂ ಕುಟುಂಬಗಳು ಸೇರಿದಂತೆ ಸುಮಾರು 200 ಕುಟುಂಬಗಳ ಆಸ್ತಿಯನ್ನು ದೇವಾಲಯದ ಟ್ರಸ್ಟ್ (ಎಸ್ಆರ್‌ಜೆಟಿಕೆಟಿ) ವಶಪಡಿಸಿಕೊಳ್ಳಲು ಯೋಜಿಸುತ್ತಿರುವುದಾಗಿ ಅವರು ಹೇಳುತ್ತಾರೆ.
"ದೇವಾಲಯದ ಪರಿಧಿಗೆ ಅಡ್ಡಿಯಾಗಿದ್ದ ಮನೆಗಳನ್ನು ಟ್ರಸ್ಟ್ ಖರೀದಿಸಿದೆ ಮತ್ತು ಈ ನಿಟ್ಟಿನಲ್ಲಿ ಜನರಿಗೆ ಸೂಕ್ತ ಪರಿಹಾರವನ್ನು ನೀಡಲಾಗಿದೆ. ಇನ್ನಷ್ಟು ಭೂ ಸ್ವಾಧೀನದ ಯಾವುದೇ ಯೋಜನೆ ಇಲ್ಲ" ಎಂದು ವಿಎಚ್‌ಪಿ ಮುಖಂಡ ಶರದ್ ಶರ್ಮಾ ಹೇಳುತ್ತಾರೆ. ಆದರೆ ಟ್ರಸ್ಟ್ ದೇವಾಲಯದ ಸುತ್ತಮುತ್ತಲಿನ ಮನೆಗಳು ಮತ್ತು ಫಕೀರ್ ರಾಮ ಮಂದಿರ ಮತ್ತು ಬದರ್ ಮಸೀದಿಯಂತಹ ಧಾರ್ಮಿಕ ಸ್ಥಳಗಳಿಗೆ ಸೇರಿದ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಈ ನಡುವೆ ಈಗಾಗಲೇ ಇಲ್ಲಿಂದ ಸ್ಥಳಾಂತರ ಹೊಂದಿರುವ ಯಾದವರು ತಮ್ಮ ಮನೆಯ ಬಾಗಿಲಿನಲ್ಲೇ ದೊಡ್ಡದೊಂದು ರಾಮನ ಫೋಟೊ ಹಾಕಿಕೊಂಡಿದ್ದಾರೆ. “ನಾವು ಇಂತಹ ಪೋಸ್ಟರ್ ಹಾಕದಿದ್ದರೆ ಇಲ್ಲಿ ಕೂಡಾ ಬದುಕುವುದು ಕಷ್ಟವಾಗುತ್ತದೆ” ಎಂದು ರಾಜನ್ ಹೇಳುತ್ತಾರೆ. ಮನೆ ಕಳೆದುಕೊಂಡು ಸಂಕಷ್ಟಕ್ಕೊಳಗಾದ ಕುಟುಂಬವನ್ನು ನೋಡಿಕೊಳ್ಳುವ ಸಲುವಾಗಿ 21 ವರ್ಷದ ಅವರು ತಮ್ಮ ಕುಸ್ತಿ ತರಬೇತಿಯನ್ನು ಅರ್ಧದಲ್ಲೇ ತೊರೆದರು. “ಪ್ರತಿ ವಾರ, ಅಧಿಕಾರಿಗಳು ಮತ್ತು ಅಪರಿಚಿತ ವ್ಯಕ್ತಿಗಳು ಇಲ್ಲಿಗೆ ಬಂದು ನಾವು ಗುಡಿಸಲು ನಿರ್ಮಿಸಿದ ಜಾಗವನ್ನು ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಾರೆ. ನಾವು ಈ ಜಾಗವನ್ನು ಹೊಂದಿದ್ದೇವೆ ಆದರೆ ಇಲ್ಲಿ ಯಾವುದೇ ಶಾಶ್ವತ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ” ಎಂದು ಅವರು ಪರಿಗೆ ತಿಳಿಸಿದರು.
*****
"ಅಂದು ನನ್ನ ಮನೆ ಉರಿಯುತ್ತಿತ್ತು. ಅದನ್ನು ಲೂಟಿ ಮಾಡಲಾಗುತ್ತಿತ್ತು. [ಉದ್ರಿಕ್ತ ಜನಸಮೂಹ] ನಮ್ಮನ್ನು ಸುತ್ತುವರೆದಿದ್ದರು” ಎನ್ನುತ್ತಾ 1992ರ ಡಿಸೆಂಬರ್ 6ರಂದು ಹಿಂದೂ ಗುಂಪುಗಳು ಬಾಬರಿ ಮಸೀದಿಯನ್ನು ನೆಲಸಮಗೊಳಿಸಿ, ಅಯೋಧ್ಯೆಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡ ಸಮಯದಲ್ಲಿ ನಡೆದ ಘಟನೆಗಳನ್ನು ಖುರೇಷಿ ನೆನಪಿಸಿಕೊಳ್ಳುತ್ತಾರೆ.
ಮೂವತ್ತು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಅವರು ಹೇಳುತ್ತಾರೆ, “ಅಂತಹ ಸಂದರ್ಭದಲ್ಲಿ ನಮ್ಮ ಊರಿನ ಜನರು ನಮ್ಮನ್ನು ಸುರಕ್ಷಿತವಾಗಿ ಬಚ್ಚಿಟ್ಟರು. ಇದನ್ನು ನಾನು ಸಾಯುವ ತನಕವೂ ಮರೆಯಲಾರೆ.”
ಹಿಂದೂ ಪ್ರಾಬಲ್ಯದ ದುರಾಹಿ ಕುವಾನ್ ಪ್ರದೇಶದಲ್ಲಿ ವಾಸಿಸುವ ಬೆರಳೆಣಿಕೆಯಷ್ಟು ಮುಸ್ಲಿಮರಲ್ಲಿ ಖುರೇಷಿ ಕುಟುಂಬವೂ ಒಂದು. “ನಾವು ಎಂದೂ ಈ ಸ್ಥಳವನ್ನು ತೊರೆಯುವ ಕುರಿತು ಯೋಚಿಸಿದವರಲ್ಲ. ಇದು ನಮ್ಮ ಪೂರ್ವಜರ ಮನೆ. ಇಲ್ಲಿ ಈ ಹಿಂದೆ ನನ್ನ ಎಷ್ಟು ತಲೆಮಾರು ಬದುಕಿದೆಯೆನ್ನುವುದು ನನಗೆ ತಿಳಿದಿಲ್ಲ. ಇಲ್ಲಿನ ಹಿಂದೂಗಳಂತೆ ನಾನೂ ಇದೇ ಊರಿಗೆ ಸೇರಿದವನು” ಎಂದು ಲೋಹದ ಮಂಚವೊಂದರ ಮೇಲೆ ಕುಳಿತಿದ್ದ ಖುರೇಷಿ ವರದಿಗಾರರ ಬಳಿ ತಿಳಿಸಿದರು. ಅವರು ತನ್ನ ಎಂಟು ಗಂಡು ಮಕ್ಕಳು, ಅವರ ಹೆಂಡತಿ, ಮಕ್ಕಳು ಮತ್ತು ಇಬ್ಬರು ಸಹೋದರರಿಂದ ಕೂಡಿದ ದೊಡ್ಡ ಕುಟುಂಬದ ಮುಖ್ಯಸ್ಥರೂ ಹೌದು. ಅವರು ಹೇಳುವಂತೆ, ಈ ಹಿಂದೆ ಗಲಭೆಯ ಸಂದರ್ಭದಲ್ಲಿ ಅವರ ಕುಟುಂಬದಲ್ಲಿ ಒಟ್ಟು 18 ಮಂದಿಯಿದ್ದರು. ಮತ್ತು ಅವರೆಲ್ಲರಿಗೂ ಅವರ ನೆರೆಹೊರೆಯ ಹಿಂದೂಗಳು ಆಶ್ರಯ ನೀಡಿ ಕಾಪಾಡಿದ್ದರು.
“ಅವರು ನಮ್ಮ ಕುಟುಂಬದವರಿದ್ದಂತೆ. ನಮ್ಮ ಕಷ್ಟ ಸುಖಗಳಲ್ಲಿ ಅವರು ನಮ್ಮೊಂದಿಗೆ ನಿಂತಿದ್ದಾರೆ. ಹೀಗಿರುವಾಗ ಒಬ್ಬ ಹಿಂದೂವಾಗಿ ಅವರ ಕಷ್ಟದ ಸಮಯದಲ್ಲಿ ನೀವು ಅವರೊಂದಿಗೆ ನಿಲ್ಲದೆ ಹೋದರೆ ಅಂತಹ ಹಿಂದೂತ್ವದಿಂದ ಏನು ಪ್ರಯೋಜನ?” ಎಂದು ಕೇಳುತ್ತಾರೆ ಗುಡಿಯಾ ಸೈನಿ.
“ಇದು ಅಯೋಧ್ಯೆ. ಇಲ್ಲಿ ನೀವು ಯಾರು ಹಿಂದೂ, ಯಾರು ಮುಸ್ಲಿಂ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ಜನರು ಒಬ್ಬರ ಜೊತೆ ಇನ್ನೊಬ್ಬರು ಅಷ್ಟರಮಟ್ಟಿಗೆ ಬೆರೆತು ಹೋಗಿದ್ದಾರೆ” ಎನ್ನುತ್ತಾರೆ ಖುರೇಷಿ.
ತಮ್ಮ ಮನೆ ಸುಟ್ಟುಹೋದ ನಂತರ, ಕುಟುಂಬವು ಮನೆಯ ಕೆಲವು ಭಾಗಗಳನ್ನು ಕಿರಿದಾದ ಭೂಮಿಯಲ್ಲಿ ಮರುನಿರ್ಮಾಣ ಮಾಡಿತು. 60 ಕುಟುಂಬ ಸದಸ್ಯರ ದೊಡ್ಡ ಕಟುಂಬವು ಈಗ ತೆರೆದ ಹಿತ್ತಲಿನ ಸುತ್ತಲೂ ನಿರ್ಮಿಸಲಾಗಿರುವ ಮೂರು ವಿಭಿನ್ನ ರಚನೆಗಳ ಮನೆಯಲ್ಲಿ ವಾಸಿಸುತ್ತಿದೆ.
ಖುರೇಷಿ ಅವರ ಇಬ್ಬರು ಮಕ್ಕಳಾದ ಎರಡನೇ ಹಿರಿಯ ಮಗ ಅಬ್ದುಲ್ ವಾಹಿದ್ (45) ಮತ್ತು ನಾಲ್ಕನೇ ಮಗ ಜಮಾಲ್ (35) ವೆಲ್ಡಿಂಗ್ ವ್ಯವಹಾರ ನಡೆಸುತ್ತಿದ್ದಾರೆ. "ನಾವು 15 ವರ್ಷಗಳಿಂದ ಈ ಪ್ರದೇಶದ ಒಳಗೆ ಕೆಲಸ ಮಾಡಿದ್ದೇವೆ, 13 ಭದ್ರತಾ ಗೋಪುರಗಳು ಮತ್ತು ಪರಿಧಿಯ ಸುತ್ತಲೂ 23 ತಡೆಗೋಡೆಗಳನ್ನು ಸ್ಥಾಪಿಸುವುದು ಸೇರಿದಂತೆ ಹಲವಾರು ವೆಲ್ಡಿಂಗ್ ಕಾರ್ಯಗಳನ್ನು ನಿರ್ವಹಿಸಿದ್ದೇವೆ" ಎಂದು ಜಮಾಲ್ ಹೇಳುತ್ತಾರೆ. ಅವರು ತಾವು ಆರ್‌ಎಸ್ಎಸ್, ವಿಎಚ್‌ಪಿ ಮತ್ತು ಎಲ್ಲಾ ಹಿಂದೂ ದೇವಾಲಯಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿಯೂ ಮತ್ತು ಆರ್‌ಎಸ್ಎಸ್ ಸಂಸ್ಥೆಯ ಕಟ್ಟಡದೊಳಗೆ ವೀಕ್ಷಣಾ ಗೋಪುರವನ್ನು ಸ್ಥಾಪಿಸುತ್ತಿರುವುದಾಗಿಯೂ ಹೇಳುತ್ತಾರೆ. "ಯಹಿ ತೋ ಅಯೋಧ್ಯಾ ಹೈ [ಇದೇ ಅಯೋಧ್ಯೆ ಎಂದರೆ]! ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಶಾಂತಿಯಿಂದ ಬದುಕುತ್ತಾರೆ ಮತ್ತು ಒಟ್ಟಿಗೆ ಕೆಲಸ ಮಾಡುತ್ತಾರೆ" ಎಂದು ಜಮಾಲ್ ಹೇಳುತ್ತಾರೆ.
ಅವರ ಅಂಗಡಿ, ನ್ಯೂ ಸ್ಟೈಲ್ ಎಂಜಿನಿಯರಿಂಗ್, ಅವರ ಮನೆಯ ಮುಂಭಾಗದಲ್ಲೇ ಕಾರ್ಯನಿರ್ವಹಿಸುತ್ತದೆ. ವಿಪರ್ಯಾಸವೆಂದರೆ ಈ ಬಲಪಂಥೀಯ ಸಂಘಟನೆಗಳ ಅನುಯಾಯಿಗಳು ತಮ್ಮಂತಹ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನುವುದು ಖುರೇಷಿ ಕುಟುಂಬವನ್ನು ಕಂಗೆಡಿಸಿಲ್ಲ. "ಹೊರಗಿನವರು ಬಂದು ವಿವಾದಗಳನ್ನು ಹುಟ್ಟುಹಾಕಿದಾಗಲೇ ತೊಂದರೆ ಪ್ರಾರಂಭವಾಗುವುದು" ಎಂದು ಜಮಾಲ್ ಹೇಳುತ್ತಾರೆ.
ಇಲ್ಲಿನ ಕುಟುಂಬಗಳಿಗೆ ಕೋಮು ಉದ್ವಿಗ್ನತೆಯ ಅರಿವಿದೆ, ಅದರಲ್ಲೂ ವಿಶೇ಼ಷವಾಗಿ ಚುನಾವಣಾ ವರ್ಷದಲ್ಲಿ ನಡೆಯುವಂತಹವು. “ನಾವು ಅಂತಹ ಹಲವು ಅಪಾಯಕಾರಿ ಸಂದರ್ಭಗಳನ್ನು ನೋಡಿದ್ದೇವೆ. ಅದನ್ನು ರಾಜಕೀಯ ಲಾಭಕ್ಕಾಗಿ ಮಾಡಲಾಗುತ್ತದೆ ಎನ್ನುವುದು ಸಹ ನಮಗೆ ಗೊತ್ತು. ಈ ಆಟಗಳನ್ನು ದೆಹಲಿ ಮತ್ತು ಲಕ್ನೋದಲ್ಲಿ ಕುರ್ಸಿ (ರಾಜಕೀಯ ಸ್ಥಾನ) ಗಾಗಿ ಆಡಲಾಗುತ್ತದೆ. ಇದು ನಮ್ಮ ಬಂಧಗಳನ್ನು ಬದಲಾಯಿಸಲು ಸಾಧ್ಯವಿಲ್ಲ" ಎಂದು ಖುರೇಷಿ ದೃಢವಾಗಿ ಹೇಳುತ್ತಾರೆ.
ಉದ್ರಿಕ್ತ ಗುಂಪಿನ ಎದುರು ತನ್ನ ಹಿಂದೂ ಗುರುತು ತನ್ನನ್ನು ಕಾಯಬಲ್ಲದು ಆದರೆ ಅದು ತಾತ್ಕಾಲಿಕ ಎನ್ನುವುದು ಸೈನಿಯವರಿಗೂ ಗೊತ್ತು. 1992ರ ಗಲಭೆಯಲ್ಲಿ ಖುರೇಷಿಯವರ ಮನೆಯ ಮೇಲೆ ದಾಳಿಯಾದ ಸಂದರ್ಭದಲ್ಲಿ ಇದೇ ಗುರುತು ಅವರನ್ನು ಕಾಪಾಡಿತ್ತು. “ನಮ್ಮ ನೆರೆಯವರ ಮನೆಯ ಮೇಲೆ ದಾಳಿಯಾದರೆ ಅದೂ ನಮ್ಮನ್ನೂ ಭಾದಿಸುತ್ತದೆ. ಅವರ ಮನೆಗೆ ಹಚ್ಚಿದ ಬೆಂಕಿ ನಮ್ಮ ಮನೆಗೂ ವ್ಯಾಪಿಸಲು ಹೆಚ್ಚು ಹೊತ್ತು ಬೇಕಿಲ್ಲ” ಎನ್ನುತ್ತಾರೆ ಸೈನಿ. ಖುರೇಷಿ ಕುಟುಂಬದ ಕುರಿತು ಮಾತನಾಡುತ್ತಾ ಅವರು “ನಾವು ಸದಾ ಒಬ್ಬರ ಪರವಾಗಿ ಒಬ್ಬರು ನಿಲ್ಲುತ್ತೇವೆ” ಎನ್ನುತ್ತಾರೆ.
“ನಾವು ಒಟ್ಟಿಗೆ ಬದುಕುತ್ತಿದ್ದೇವೆ, ನಮ್ಮ ನಡುವೆ ಬಹಳಷ್ಟು ಪ್ರೀತಿ ಮತ್ತು ಬಾಂಧವ್ಯವಿದೆ” ಎನ್ನುತ್ತಾರೆ ಗುಡಿಯಾ.
ಅನುವಾದ: ಶಂಕರ. ಎನ್. ಕೆಂಚನೂರು