ಪರಿಯ ' ಮುಖಗಳು (ಫೇಸಸ್)' ಯೋಜನೆಯು ನಮ್ಮ ದೇಶದ ಜನರು ಮತ್ತು ಜೀವನೋಪಾಯದ ವಿಶಾಲ ವೈವಿಧ್ಯತೆಯನ್ನು ಒಂದೆಡೆ ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ಸಾವಿರಾರು ಮುಖಗಳಿಂದ ಸಮೃದ್ಧವಾಗಿರುವ ಈ ಡೇಟಾಬೇಸ್ನಲ್ಲಿ ದೇಶದ ವಿವಿಧ ಭಾಗಗಳ ಜನರ ಮುಖ ಮತ್ತು ಜೀವನೋಪಾಯದ ಮಾಹಿತಿಯನ್ನು ಜಿಲ್ಲೆ ಮತ್ತು ಹಳ್ಳಿಯ ಆಧಾರದ ಮೇಲೆ ಎಚ್ಚರಿಕೆಯಿಂದ ಸಂಗ್ರಹಿಸಲಾಗಿದೆ.
ಈ ವರ್ಷ ದೇಶದ 53 ಹೊಸ ಬ್ಲಾಕ್ಗಳನ್ನು ಫೇಸ್ ಯೋಜನೆ ತಲುಪಿದೆ. ಉದಾಹರಣೆಗೆ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ದುಬ್ರಾಜ್ಪುರ ಬ್ಲಾಕ್, ಅಲ್ಲಿ ನಮ್ಮ ವರದಿಗಾರ ನಿವೃತ್ತ ಅಂಚೆ ಜವಾನ ಸಮೀರ್ ಪಾಠಕ್ ಅವರನ್ನು ಭೇಟಿಯಾದರು. ನಮ್ಮ ಡೇಟಾಬೇಸ್ಗೆ ಸೇರಿಸಲ್ಪಟ್ಟ ಹೊಸ ಬುಡಕಟ್ಟು ಜನರು: ಕನಿಕ್ಕರ್, ಮಲ್ಹಾರ್, ಕೋಲಿ, ಪನಿಯನ್, ಕಟ್ಟುನಾಯಕನ್, ಮಲೈ ಆರ್ಯನ್, ಅಡಿಯನ್ ಮತ್ತು ಬೋಡೋ.
ಯೋಜನೆಯ ಆರಂಭದಲ್ಲಿ ಅನೇಕ ವಿದ್ಯಾರ್ಥಿಗಳು ಛಾಯಾಗ್ರಹಣದ ಮೂಲಕ ಗ್ರಾಮೀಣ ಭಾರತದೊಂದಿಗೆ ಸಂಪರ್ಕ ಸಾಧಿಸುವ ಮತ್ತು ಅಲ್ಲಿನ ಬದುಕನ್ನು ದಾಖಲಿಸುವ ಸಂಕಲ್ಪದೊಂದಿಗೆ ಸೇರಿಕೊಂಡರು. ಕಳೆದ ಕೆಲವು ವರ್ಷಗಳಿಂದ ನಮ್ಮ ಸಂಗ್ರಾಹಕರು - ಅವರಲ್ಲಿ ಹೆಚ್ಚಿನವರು ಇನ್ನೂ ವಿದ್ಯಾರ್ಥಿಗಳು - ಈ ಯೋಜನೆಗಾಗಿ ದೇಶದಾದ್ಯಂತ ಅನೇಕ ಜಿಲ್ಲೆಗಳ ಅನೇಕ ಬ್ಲಾಕ್ಗಳ ಜನರ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದಾರೆ.
ರಾಜ್ಯದ ಪ್ರತಿ ಜಿಲ್ಲೆಯ ಪ್ರತಿ ಬ್ಲಾಕ್ನಿಂದ ಕನಿಷ್ಠ ಒಬ್ಬ ವಯಸ್ಕ ಹೆಣ್ಣು, ಒಬ್ಬ ವಯಸ್ಕ ಪುರುಷ, ಮತ್ತು ಒಂದು ಮಗು ಅಥವಾ ಹದಿಹರೆಯದವರ ಚಿತ್ರವನ್ನು ಸಂಗ್ರಹಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಯೋಜನೆಯಲ್ಲಿ ಗ್ರಾಮೀಣ ಭಾರತದ ಹೊರತಾಗಿ, ಸಣ್ಣ ಮತ್ತು ದೊಡ್ಡ ಪಟ್ಟಣಗಳಲ್ಲಿ ವಾಸಿಸುವ ವಲಸೆ ಕಾರ್ಮಿಕರ ಛಾಯಾಚಿತ್ರಗಳನ್ನು ಸಹ ಸಂಗ್ರಹಿಸಲಾಗಿದೆ.
ಕೇರಳದ ಅಲಪ್ಪುಳ ಜಿಲ್ಲೆಯ ಹರಿಪಾಡ್ ಬ್ಲಾಕ್ನ ನಾಲ್ಕು ತೆಂಗಿನ ನಾರು ಕಾರ್ಮಿಕರಲ್ಲಿ ಒಬ್ಬರಾದ ಸುಮಂಗಲಾ ಅವರನ್ನು ಭೇಟಿಯಾಗಿ – ತೆಂಗಿನ ನಾರು ಉದ್ಯಮ ಈ ವರ್ಷ ಫೇಸ್ ಡೇಟಾಬೇಸ್ಗೆ ಸೇರಿಸಲಾದ ಹೊಸ ಜೀವನೋಪಾಯಗಳಲ್ಲಿ ಒಂದಾಗಿದೆ. ಅವರ ಚಿತ್ರವು ನಮಗೆ ಗ್ರಾಮೀಣ ಮಹಿಳೆಯರೆಂದರೆ ಕೇವಲ ಮನೆ ಅಚ್ಚುಕಟ್ಟು ಮಾಡುವುದಷ್ಟೇ ಅಲ್ಲ, ಅವರು ಹೊಲದಲ್ಲಿ ಕೆಲಸ ಮಾಡುತ್ತಾರೆ, ಮೀನು, ತರಕಾರಿ ವ್ಯಾಪಾರ ಮಾಡುತ್ತಾರೆ, ಹೊಲಿಗೆ, ನೇಯ್ಗೆ ಮತ್ತು ಹೆಣಿಗೆಯಂತಹ ಕೆಲಸಗಳನ್ನು ಮಾಡಬಲ್ಲವರು ಹಾಗೂ ಒಟ್ಟಾರೆಯಾಗಿ ಅವರು ಬಹು ಕಾರ್ಯ ಪ್ರವೀಣರು ಎನ್ನುವ ಪಾಠವನ್ನು ತಿಳಿಸಿಕೊಡುತ್ತವೆ.
ಸಂಗ್ರಾಹಕರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿರುವುದರಿಂದ, ಈ ವರ್ಷ ಫೇಸ್ಗೆ ಸೇರಿಸಲಾದ ಹೆಚ್ಚಿನ ಮುಖಗಳು ವಿವಿಧ ವಯಸ್ಸಿನ ವಿದ್ಯಾರ್ಥಿಗಳಾಗಿದ್ದರೂ ಆಶ್ಚರ್ಯವೇನಿಲ್ಲ!
ನಾವು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ನಲ್ಲಿರುವ ಮೊಫ್ಲಾಂಗ್ ಬ್ಲಾಕ್ನಿಂದ ನೊಬಿಕಾ ಖಾಸಾಯಿಯವರ ಫೋಟೊವನ್ನು ಸಹ ಹೊಂದಿದ್ದೇವೆ (ಈ ವರ್ಷ ಮತ್ತೊಂದು ಹೊಸ ಸೇರ್ಪಡೆ). ನೊಬಿಕಾ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಮತ್ತು ಪಾರಂಪರಿಕ ಖಾಸಿ ಜಾನಪದ ನೃತ್ಯ ಕಲಾವಿದೆ. "ನನಗೆ ಸಾಂಪ್ರದಾಯಿಕ ಉಡುಗೆಗಳೆಂದರೆ ಇಷ್ಟ" ಎಂದು ನವಿಕಾ ಹೇಳುತ್ತಾರೆ, "ಆದರೂ ನೃತ್ಯ ಮಾಡುವ ಮೊದಲು ಇದನ್ನು ತೊಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ."
ನಾವು ಮಾಡುತ್ತಿರುವ ಕೆಲಸಗಳು ನಿಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸಿದ್ದಲ್ಲಿ ಮತ್ತು ನೀವೂ ಪರಿಯೊಡನೆ ಕೈ ಜೋಡಿಸಲು ಬಯಸಿದಲ್ಲಿ, ದಯವಿಟ್ಟು mailto:[email protected] ಮೂಲಕ ನಮ್ಮನ್ನು ಸಂಪರ್ಕಿಸಿ. ಫ್ರೀಲಾನ್ಸ್ ಮತ್ತು ಸ್ವತಂತ್ರ ಬರಹಗಾರರು, ವರದಿಗಾರರು, ಛಾಯಾಗ್ರಾಹಕರು, ಚಲನಚಿತ್ರ ತಯಾರಕರು, ಅನುವಾದಕರು, ಸಂಪಾದಕರು, ಚಿತ್ರಕಾರರು ಮತ್ತು ಸಂಶೋಧಕರನ್ನು ನಮ್ಮೊಂದಿಗೆ ಕೆಲಸ ಮಾಡಲು ನಾವು ಸ್ವಾಗತಿಸುತ್ತೇವೆ.
ಪರಿ ಒಂದು ಲಾಭೋದ್ದೇಶ ರಹಿತ ಸಂಸ್ಥೆಯಾಗಿದ್ದು, ಇದು ನಮ್ಮ ಬಹುಭಾಷಾ ಆನ್ಲೈನ್ ಜರ್ನಲ್ ಮತ್ತು ಆರ್ಕೈವ್ ಕೆಲಸಗಳನ್ನು ಮೆಚ್ಚುವ ಜನರ ದೇಣಿಗೆಗಳನ್ನು ಅವಲಂಬಿಸಿ ಮುಂದುವರೆಯುತ್ತಿದೆ. ನೀವು ಪರಿಗೆ ಕೊಡುಗೆ ನೀಡಲು ಬಯಸಿದರೆ ದಯವಿಟ್ಟು DONATE ಬಟನ್ ಕ್ಲಿಕ್ ಮಾಡಿ.
ಅನುವಾದ: ಶಂಕರ. ಎನ್. ಕೆಂಚನೂರು