“ಕೇಂದ್ರ ಬಜೆಟ್ ಎನ್ನುವುದು ಅಧಿಕಾರಿಗಳಿಗೆ ಮಾತ್ರ” ಎನ್ನುವುದು ಅಲಿ ಮೊಹಮ್ಮದ್ ಲೋನ್ ಅವರ ನಂಬಿಕೆ. ಇದರ ಅರ್ಥ ಬಜೆಟ್ ಎನ್ನುವುದನ್ನು ಮಧ್ಯಮವರ್ಗದ ಸರ್ಕಾರಿ ಲೋಗ್ ಅಥವಾ ಸರ್ಕಾರಿ ನೌಕರರಿಗಾಗಿ ವಿನ್ಯಾಸಗೊಳಿಸಲಾಗಿರುತ್ತದೆ ಎನ್ನುವುದು ಅವರ ವಿವರಣೆ. ಇದು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಈ ಸಣ್ಣ ಬೇಕರಿ ಮಾಲೀಕರು ಬಜೆಟ್ ಎನ್ನುವುದು ತನ್ನಂತಹ ಜನರನ್ನು ಗಮನದಲ್ಲಿ ಇಟ್ಟುಕೊಂಡು ತಯಾರಿಸಲಾಗುವ ಸಂಗತಿಯಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿರುವುದನ್ನು ಸೂಚಿಸುತ್ತದೆ.
“2024ರಲ್ಲಿ ನಾನು 1,400 ರೂಪಾಯಿ ಕೊಟ್ಟು 50 ಕೇಜಿ ಹಿಟ್ಟು ತರುತ್ತಿದ್ದೆ, ಆದರೆ ಈಗ ಅಷ್ಟೇ ಹಿಟ್ಟಿಗೆ 2,200 ರೂಪಾಯಿ ಕೊಡಬೇಕಿದೆ” ಎಂದು ಈ 52 ವರ್ಷದ ಬೇಕರಿ ಮಾಲಿಕ ಹೇಳುತ್ತಾರೆ. ಅವರು ನಮ್ಮೊಂದಿಗೆ ತಂಗ್ ಮಾರ್ಗ್ ಬ್ಲಾಕ್ ವ್ಯಾಪ್ತಿಯ ಮಾಹೀನ್ ಎನ್ನುವ ಗ್ರಾಮದಲ್ಲಿ ಮಾತನಾಡುತ್ತಿದ್ದರು. “ಬೆಲೆಗಳನ್ನು ಇಳಿಸುವ ಬಜೆಟ್ ಬಂದರೆ ಅದರಲ್ಲಿ ನನಗೆ ಆಸಕ್ತಿ ಮೂಡುತ್ತದೆ. ಉಳಿದಂತೆ ಅದು ನಾನು ಈ ಮೊದಲು ಹೇಳಿದ ಹಾಗೆ ಕೇವಲ ಅಧಿಕಾರಿಗಳ ಹಿತವನ್ನು ಬಯಸುವ ಬಜೆಟ್” ಎಂದು ಅವರು ಹೇಳಿದರು.
ಶ್ರೀನಗರದಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ಮಾಹೀನ್ ಗ್ರಾಮವು ಚಳಿಗಾಲದ ಪ್ರವಾಸಿ ತಾಣಗಳಾದ ತಂಗ್ ಮಾರ್ಗ್ ಮತ್ತು ಡ್ರಾಂಗ್ ನಡುವೆ ಇದೆ. ಇದು ಮುಖ್ಯವಾಗಿ ಕುದುರೆ ಬಾಡಿಗೆ, ಸ್ಲೆಡ್ಜ್-ಪುಲ್ಲಿಂಗ್ ಮತ್ತು ಗೈಡ್ ಸೇವೆಗಳಂತಹ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಸುಮಾರು 250 ಕುಟುಂಬಗಳಿಗೆ ನೆಲೆಯಾಗಿದೆ. ತಂಪಾದ ಹವಾಮಾನದಿಂದಾಗಿ, ಮಾಹೀನ್ ಪ್ರಾಥಮಿಕವಾಗಿ ಜೋಳವನ್ನು ಉತ್ಪಾದಿಸುತ್ತದೆ.
![](/media/images/02a-DSC03371-MB-I_need_to_earn_12_lakhs_fi.max-1400x1120.jpg)
![](/media/images/02b-DSC03384-MB-I_need_to_earn_12_lakhs_fi.max-1400x1120.jpg)
ಎಡ : ಅಲಿ ಮೊಹಮ್ಮದ್ ಲೋನ್ ಅವರು ಮಾಹೀನ್ ಗ್ರಾಮದ ತಮ್ಮ ಬೇಕರಿಯೊಳಗೆ ಕುಳಿತಿದ್ದಾರೆ . ಕೇಂದ್ರ ಬಜೆಟ್ 2025 ಸರ್ಕಾರಿ ನೌಕರರು ಮತ್ತು ಮಧ್ಯಮ ವರ್ಗದವರಿಗಾಗಿ ಮಾತ್ರ ಎನ್ನುವುದು ಅವರ ನಂಬಿಕೆ . ಬಲ : ಮಾಹೀನ್ ಗ್ರಾಮದ ಒಂದು ನೋಟ
![](/media/images/03a-DSC03378-MBI_need_to_earn_12_lakhs_fir.max-1400x1120.jpg)
![](/media/images/03b-DSC03389-MB-I_need_to_earn_12_lakhs_fi.max-1400x1120.jpg)
ಎಡ: ಮಾಹೀನ್ ಚಳಿಗಾಲದ ಪ್ರವಾಸಿ ತಾಣಗಳಾದ ತಂಗ್ ಮಾರ್ಗ್ ಮತ್ತು ಡ್ರಾಂಗ್ ನಡುವೆ ಇದೆ. ಬಲ: ತಂಗ್ ಮಾರ್ಗದಲ್ಲಿ ಗ್ರಾಹಕರಿಗಾಗಿ ಕಾಯುತ್ತಿರುವ ಮಾಹೀನ್ ಗ್ರಾಮದ ಎಟಿವಿ ಚಾಲಕರು
ಅಲಿ ಮೊಹಮ್ಮದ್ ತನ್ನ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ (ಇಬ್ಬರೂ ವಿದ್ಯಾರ್ಥಿಗಳು) ವಾಸಿಸುತ್ತಿದ್ದಾರೆ ಮತ್ತು ಅವರ ಬೇಕರಿಯಲ್ಲಿ ತಯಾರಾಗುವ ಬ್ರೆಡ್ ಗ್ರಾಮದ ಹೆಚ್ಚಿನ ನಿವಾಸಿಗಳ ಮೇಜಿನ ಮೇಲೆ ಕೊನೆಗೊಳ್ಳುತ್ತದೆ. ಅವರ ಹಿರಿಯ ಮಗ ಯಾಸಿರ್ ಬೇಕರಿ ಕೆಲಸದಲ್ಲಿ ಸಹಾಯ ಮಾಡುತ್ತಾರೆ, ಬೆಳಿಗ್ಗೆ 5 ಗಂಟೆಗೆ ತೆರೆಯುವ ಬೇಕರಿಯನ್ನು ಮಧ್ಯಾಹ್ನ 2 ಗಂಟೆಗೆ ಮುಚ್ಚಲಾಗುತ್ತದೆ. ಇದರ ನಂತರ, ಅವರು ಹೆಚ್ಚುವರಿ ಹಣವನ್ನು ಸಂಪಾದಿಸಲು ಬೇಕರಿಯ ಪಕ್ಕದ ತಮ್ಮ ಕಿರಾಣಿ ಅಂಗಡಿಗೆ ಸ್ಥಳಾಂತರಗೊಳ್ಳುತ್ತಾರೆ, ಅದು ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೆಲೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
"12 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಲಭ್ಯವಿರುವ ಸಾಲಗಳ ಬಗ್ಗೆ ಜನರು ಚರ್ಚಿಸುವುದನ್ನು ನಾನು ಕೇಳಿದ್ದೇನೆ. ಆದರೆ, ಈ ತೆರಿಗೆ ವಿನಾಯಿತಿ ಪಡೆಯಲು ನಾನು ಮೊದಲು 12 ಲಕ್ಷ ಗಳಿಸಬೇಕಾಗಿದೆ. ನನ್ನ ವಾರ್ಷಿಕ ಆದಾಯ ಕೇವಲ 4 ಲಕ್ಷ ರೂಪಾಯಿಗಳು. ಯುವಕರಿಗೆ ಉದ್ಯೋಗ ನೀಡುವ ಬಗ್ಗೆ ಯಾರೂ ಏಕೆ ಮಾತನಾಡುತ್ತಿಲ್ಲ ಎನ್ನುವ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡುತ್ತದೆ. ಬಜೆಟ್ಟಿನಲ್ಲಿ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ಏನಾದರೂ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ?" ಎಂದು ಅವರು ಕುತೂಹಲದಿಂದ ಕೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು