ಜೂಲನ್ ಸಾಂಗಾ ಅವರ ಕೆಲಸದಲ್ಲಿ ತಪ್ಪು ಹುಡುಕುವುದು ಅಸಾಧ್ಯ
ಈಕೆ ನೇಯುವ ಚಟಾಯಿ ಅಥವಾ ಚಾಪೆಗಳು ನಾಲ್ಕು ಕಡೆಯಿಂದ ಒಂದೇ ರೀತಿ ಕಾಣುತ್ತವೆ. ಆಕೆ ಕೈಯಿಂದಲೇ ಹೆಣೆದು ಮಾಡುವ ಚಾಪೆಯ ವಿನ್ಯಾಸಗಳು ಎಲ್ಲಿ ಪ್ರಾರಂಭವಾಗುತ್ತವೆ ಮತ್ತು ಎಲ್ಲಿ ಮುಕ್ತಾಯವಾಗುತ್ತವೆ ಎಂದು ಗುರುತಿಸುವುದೇ ಬಹಳ ಕಷ್ಟ. ಏಕೆಂದರೆ ನೇಯುವಾಗ ಉಂಟಾಗುವ ಒಂದೇ ಒಂದು ತಪ್ಪು ಹೆಣಿಗೆ ತಿಂಗಳು ಪೂರ್ತಿ ಮಾಡಿದ ಪರಿಶ್ರಮವನ್ನು ಹಾಳು ಮಾಡಬಹುದು. ಆಕೆಗೆ ಕೆಲಸ ಎಷ್ಟು ಚೆನ್ನಾಗಿ ಕರಗತವಾಗಿದೆ ಎಂದರೆ ಆಕೆ ಇತರದೊಂದಿಗೆ ಮಾತನಾಡುತ್ತಲೇ ಕೆಲಸ ಮಾಡಬಲ್ಲರು.
ಜುಲನ್ ಮತ್ತು ಅವರ ದಿವಂಗತ ಪತಿ ಯಾಕೋ ದಂಪತಿಗಳಿಗೆ ಎರಡು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳು. ಆಕೆಯ ಹಿರಿಯ ಮಗ 2001 ನೇ ಇಸವಿಯಿಂದಲೇ ಬೇರೆ ಕಡೆ ವಾಸವಾಗಿದ್ದಾನೆ. ಆನಂತರ ಅನಾಹುತಗಳ ಸರಣಿಯೇ ಪ್ರಾರಂಭವಾಯಿತು. ಆಕೆಯ ಗಂಡ ಯಾಕೂಬ್, ಹೆಣ್ಣು ಮಗಳಾದ ರಾಹಿಲ್ ಮತ್ತು ನೀಲಮಣಿ ಹಾಗೂ ಕಿರಿಯ ಮಗ ಸಿಲಾಸ್ 2004ರಿಂದ 2010ರ ನಡುವೆ ಮರಣಹೊಂದಿದರು.
“ಕುಟುಂಬದಲ್ಲಿ ಸಂಭವಿಸಿದ ಈ ಎಲ್ಲ ಮರಣಗಳಿಂದಾಗಿ ನನ್ನ ಹೃದಯವೇ ಒಡೆದು ಹೋಯಿತು. ನನಗೆ ಏನು ಮಾಡಬೇಕೆಂದು ದಿಕ್ಕು ತೋಚಲಿಲ್ಲ. ನನ್ನ ಮನೆಯನ್ನು ನಡೆಸಿಕೊಂಡು ಹೋಗಲು ನನಗೆ ಬೇರೆ ಉಪಾಯವೇ ಉಳಿದಿರಲಿಲ್ಲ. ಹಾಗಾಗಿ ನಾನು ಚಾಪೆ ಹಣೆಯುವ ಕೆಲಸ ಪ್ರಾರಂಭ ಮಾಡಿದೆ” ಎಂದು ಜೂಲನ್ ಹೇಳುತ್ತಾರೆ.
2011ರ ಜನಗಣತಿಯ ಪ್ರಕಾರ ಜಾರ್ಖಂಡ್ ರಾಜ್ಯದ ಚಾಲಂಗಿ ಹಳ್ಳಿಯ ಜನಸಂಖ್ಯೆ 1221. ಅವರಲ್ಲಿ ಜೂಲನ್ ಒಬ್ಬರೇ ಚಾಪೆ ಹೆಣೆಯುವವರು. ಆಕೆ ಹುಡುಗಿಯಾಗಿದ್ದಾಗಿನಿಂದ ಈ ವರೆಗೂ 25ಕ್ಕೂ ಹೆಚ್ಚು ಚಾಪೆಗಳನ್ನು ಹೆಣೆದಿದ್ದಾರೆ. “ಈ ಚಾಪೆ ಹೆಣೆಯುವ ಕೆಲಸ ಬಹಳ ಕಷ್ಟಕರವಾಗಿರುವಂತೆ ಕಂಡರೂ ಇದನ್ನು ಕಲಿಯುವುದು ಬಹಳ ಸುಲಭ” ಎನ್ನುತ್ತಾರೆ. ತನ್ನ ನೆರೆಹೊರೆಯ ಮಹಿಳೆಯರ ಕೆಲಸವನ್ನು ಗಮನಿಸುತ್ತಾ ಆಕೆ ಈ ಕೌಶಲವನ್ನು ಕಲಿತದ್ದಂತೆ. “ನನಗೆ ಬಾಲ್ಯದಿಂದಲೇ ಈ ಚಾಪೆ ಹೆಣೆಯುವ ಕೌಶಲ ತಿಳಿದಿತ್ತು. ಆದರೆ ಹಣಕಾಸಿನ ಮುಗ್ಗಟ್ಟು ಎದುರಾದ ನಂತರವೇ ನಾನು ಈ ಕೌಶಲವನ್ನು ಬಳಸಲು ಪ್ರಾರಂಭಿಸಿದೆ” ಎನ್ನುತ್ತಾರೆ.
ಈಕೆ ಏಳನೇ ತರಗತಿಯವರೆಗೂ ಕಲಿತಿದ್ದಾರೆ. “ನಮ್ಮ ಕಾಲದಲ್ಲಿ ಶಿಕ್ಷಣಕ್ಕೆ ಅಂತಹ ಮಹತ್ವ ಏನು ಇರಲಿಲ್ಲ ಶಾಲೆಗೆ ಹೋಗುವುದರಿಂದ ಸಮಯ ವ್ಯರ್ಥ” ಎಂದೇ ಎಲ್ಲರೂ ತಿಳಿದಿದ್ದರು. ಚಾಪೆಗಳನ್ನು ಮಾರುವುದು, ಕೃಷಿ ಮತ್ತು ದಿನಗೂಲಿ ಕೆಲಸ ಮಾಡುವುದರಿಂದ ಆಕೆ ತನ್ನ ತಿಂಗಳ ಸಂಪಾದನೆಯನ್ನು ಮಾಡಿಕೊಳ್ಳುತ್ತಾರೆ.
ಜೂಲನ್ ಹೇಳುತ್ತಾರೆ “ಗದ್ದೆಯಲ್ಲಿ ಕೆಲಸ ಮಾಡುವುದು ಚಾಪೆ ಹೆಣೆಯುವುದಕ್ಕಿಂತ ಸುಲಭ. ಬೇಸಾಯದ ಕೆಲಸ ಕೇವಲ ಮಾನ್ಸೂನ್ ಮಳೆಯಾಗುವ ತಿಂಗಳುಗಳಲ್ಲಿ ಮಾತ್ರ ಇರುತ್ತದೆ. ದಿನಗೂಲಿ ಕೆಲಸವೂ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಇರುತ್ತದೆ. ಆದರೆ ಗಾತ್ರವನ್ನು ಹೊಂದಿಕೊಂಡು ಒಂದು ಚಾಪೆ ಹೆಣೆಯಲು ಸುಮಾರು 40 ರಿಂದ 60 ದಿನಗಳು ಬೇಕಾಗುತ್ತವೆ. ಒಂದೇ ರೀತಿ ಕುಳಿತು ಮಾಡುವ ಈ ಚಾಪೆ ಹೆಣೆಯುವ ಕೆಲಸ ಕೆಲವೊಮ್ಮೆ ಕಣ್ಣೀರು ತರಿಸುವಷ್ಟು ವಿಪರೀತ ಬೆನ್ನು ನೋವು ಉಂಟುಮಾಡುತ್ತದೆ ಎನ್ನುತ್ತಾರೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ಮುಂಡಾ ಸಮುದಾಯದವರಾದ ಜೂಲನ್, ಆಕೆಯ 36 ವಯಸ್ಸಿನ ಮಗಳು ಎಲಿಸಾಬ ಮತ್ತು 24 ವಯಸ್ಸಿನ ಬಿನೀತಾ ಜಾರ್ಖಂಡ್ ರಾಜ್ಯದ ಕುಂತೀ ಜಿಲ್ಲೆಯಲ್ಲಿ ವಾಸವಾಗಿದ್ದಾರೆ.
*****
ಈಚಲು ಸೋಗೆಗಳನ್ನು ಸಂಗ್ರಹಿಸಿ ಸೂರ್ಯನ ಬಿಸಿಲಿನಲ್ಲಿ ಒಣಗಿಸುವ ಮೂಲಕ ಈ ಚಾಪೆ ಹೆಣೆಯುವ ಕೆಲಸ ಪ್ರಾರಂಭವಾಗುತ್ತದೆ. ಈ ಸೋಗೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ, ಆದರೆ ಅವು ದುಬಾರಿ. ಹಾಗಾಗಿ ಆಕೆ ಸ್ವತಃ ಅವುಗಳನ್ನು ಸಂಗ್ರಹ ಮಾಡುತ್ತಾರೆ. ಆಕೆ ತಾನು ಹೆಣೆಯ ಬೇಕಾಗಿರುವ ಚಾಪೆಯ ಗಾತ್ರಕ್ಕೆ ಅನುಕೂಲ ಆಗುವಂತಹ ಸೋಗೆಗಳನ್ನು ಹುಡುಕಿ ಸಂಗ್ರಹಿಸುತ್ತಾರೆ. ಗೆಲ್ಲಿನಿಂದ ಬೇರ್ಪಡಿಸಿದ ಎಲೆಗಳನ್ನು ನೀರಿನಲ್ಲಿ ನೆನೆಸುತ್ತಾರೆ, ಆನಂತರ ಅವು ನೇಯಲು ತಯಾರಾಗುತ್ತವೆ.
ತನ್ನ ಅಂಗೈಯಷ್ಟು ಅಗಲದ ಉದ್ದನೆಯ ಪಟ್ಟಿಗಳನ್ನು ಹೆಣೆಯುವ ಮೂಲಕ ಆಕೆ ತನ್ನ ಕೆಲಸವನ್ನು ಪ್ರಾರಂಭಿಸುತ್ತಾರೆ. ತೆಳುವಾದ ಎಲೆಗಳನ್ನು ಒಂದರ ಮೇಲೊಂದು ಜೋಡಿಸುತ್ತಾ ಮತ್ತೆ ಮತ್ತೆ ಮರುಕಳಿಸುವ ಸಂಕೀರ್ಣವಾದ ವಿನ್ಯಾಸವನ್ನು ಹೆಣೆಯುತ್ತಾರೆ. ಎಲ್ಲೂ ತಪ್ಪಾಗದಂತೆ ಬಿಗಿಯಾಗಿ ಹೆಣಿಗೆ ಮಾಡುವ ಬಗ್ಗೆ ಅವರು ಎಚ್ಚರ ವಹಿಸುತ್ತಾರೆ. ಹೆಣೆಗೆ ಸಡಿಲವಾದರೆ ಅದು ಇಡೀ ಚಾಪೆಯ ವಿನ್ಯಾಸವನ್ನು ಹಾಳು ಮಾಡಬಲ್ಲದು.
ಪಟ್ಟಿ ತಯಾರಾದ ನಂತರ ಅದನ್ನು ಚಾಪೆಯ ಗಾತ್ರಕ್ಕೆ ಅನುಗುಣವಾಗಿ ಅಳತೆ ಮಾಡಿ ಕತ್ತರಿಸುತ್ತಾರೆ. ಅಳತೆಗೆ ಸರಿಯಾಗಿ ಕತ್ತರಿಸಿದ ಪಟ್ಟಿಗಳನ್ನು ಒಂದರ ಪಕ್ಕ ಒಂದು ಜೋಡಿಸಿ ಹೊಲಿಯುತ್ತಾರೆ. ಪಟ್ಟಿಗಳನ್ನು ಹೊಲಿಯಲು ಆಕೆ ದಬ್ಬಣದಂತಹ ಸೂಜಿಯನ್ನು ಬಳಸುತ್ತಾರೆ. ಸೂಜಿಗೆ ಹತ್ತು ರೂಪಾಯಿ ಮತ್ತು ಹೋಲಿಯಲು ಬಳಸುವ ಪ್ಲಾಸ್ಟಿಕ್ ದಾರದ ಉಂಡೆಗೆ 40 ರೂಪಾಯಿ ಆಗುತ್ತದೆ. ಇವೆರಡನ್ನೂ ಹಳ್ಳಿಯಿಂದ ಎರಡು ಕಿಲೋಮೀಟರ್ ದೂರದ ಚೌಕದಿಂದ (ಮಾರುಕಟ್ಟೆ) ಖರೀದಿಸಿ ತರುತ್ತಾರೆ. “ಆದರೆ ಹಿಂದೆ ಇದೇ ದಾರ 20 ರೂಪಾಯಿಗೆ ಮತ್ತು ಸೂಜಿ ಐದು ರೂಪಾಯಿಗೆ ಸಿಗುತ್ತಿತ್ತು” ಎನ್ನುತ್ತಾರೆ.
ಹೊಲಿಯುವುದು ಸುಲಭ ಮತ್ತು ಹೆಣೆಯುವುದಕ್ಕಿಂತ ಬೇಗ ಮುಗಿಯುತ್ತದೆ. ನಿರಂತರವಾಗಿ ಕೆಲಸ ಮಾಡಿದರೆ ಕೇವಲ ಎರಡೇ ದಿನದಲ್ಲಿ ಹೊಲಿಗೆಯ ಕೆಲಸ ಮುಗಿಯುತ್ತದೆ. ಹೊಸದಾಗಿ ಹೆಣೆದ ಚಾಪೆ ಸುಮಾರು ಐದು ಕಿಲೋ ತೂಕ ಇರುತ್ತದೆ. ಬಳಸುತ್ತಾ ಹಳೆಯದಾದಂತೆ ಅದರ ತೂಕ ಕಡಿಮೆಯಾಗುತ್ತದೆ.
ಈಚಲು ಎಲೆಗಳಿಂದ ಮಾಡಲಾದ ದಪ್ಪನೆಯ ಈ ಚಾಪೆಗಳು ಯಾವುದೇ ಋತುಮಾನದಲ್ಲೂ ಪ್ಲಾಸ್ಟಿಕ್ ಗಳಿಗಿಂತ ಉತ್ತಮವಾಗಿರುತ್ತದೆ. ಚಳಿಗಾಲದಲ್ಲಂತೂ ಇವು ಬಹಳ ಹಿತವಾಗಿರುತ್ತವೆ. ನೀರಿನಿಂದ ಒದ್ದೆಯಾಗದಂತೆ ಜಾಗೃತೆ ವಹಿಸಿದರೆ, ಈ ಚಾಪೆಗಳು ಸುಮಾರು ಐದು ವರ್ಷಕ್ಕೂ ಹೆಚ್ಚು ಕಾಲ ಬಾಳಿಕೆ ಬರುತ್ತವೆ.
“ನಾನು ಈ ಚಾಪೆಯನ್ನು ಕಳೆದ ಏಳು ವರ್ಷಗಳಿಂದಲೂ ಬಳಕೆ ಮಾಡುತ್ತಿದ್ದೇನೆ. ಇದು ಇನ್ನೂ ಬಾಳಿಕೆ ಬರುತ್ತದೆ. ಇದು ಎಲ್ಲೂ ಹರಿದಿಲ್ಲ ನೋಡಿ” ಎಂದು ತಮ್ಮ ಮನೆಯಲ್ಲಿರುವ ಒಂದು ಹಳೆಯ ಚಾಪೆಯನ್ನು ತೋರಿಸುತ್ತಾರೆ. ಜ್ಯುಲನ್ ಇದನ್ನು ಸದಾ ಒದ್ದೆಯಾಗದಂತೆ ಮಗುವಿನ ತರಹ ನೋಡಿಕೊಳ್ಳುತ್ತೇನೆ ಎನ್ನುತ್ತಾರೆ.
*****
“ಚಟಾಯಿ ಮಾಡುವುದೆಂದರೆ ಅಮ್ಮನಿಗೆ ಬಹಳ ಇಷ್ಟ. ಬಿಡುವು ಇದ್ದಾಗಲೆಲ್ಲ ಆಕೆ ಹೆಣಿಗೆ ಕೆಲಸ ಮಾಡುತ್ತಾರೆ” ಎಂದು ಜುಲನ್ ಅವರ ದೊಡ್ಡ ಮಗಳು ಎಲಿಸಾಬಾ ಹೇಳುತ್ತಾರೆ. ಆಕೆ ಅಮ್ಮನಿಂದ ಈ ಹೆಣಿಗೆ ಕೆಲಸವನ್ನು ಕಲಿತಿಲ್ಲ, ಆದರೆ ಸೋಗೆಗಳನ್ನು ತಂದು ತಯಾರಿ ಮಾಡಲು, ಹೆಣದ ಪಟ್ಟಿಯನ್ನು ಕತ್ತರಿಸಿ ಹೊಲಿಯಲು ಆಕೆ ಸಹಾಯ ಮಾಡುತ್ತಾಳೆ.
ಜೂಲನ್ ಅವರ ಸಣ್ಣ ಮಗಳು ಬಿನೀತಾಗೆ ಪೋಲಿಯೋ ಆಗಿದೆ. ಆಕೆಗೆ ಸ್ವತಂತ್ರವಾಗಿ ನಡೆದಾಡುವ ಸಾಮರ್ಥ್ಯ ಇಲ್ಲ. “ಆಕೆಯನ್ನು ಉತ್ತಮ ಆಸ್ಪತ್ರೆಗೆ ಸೇರಿಸಲು ನಮ್ಮ ಬಳಿ ಹಣ ಇಲ್ಲ ಸರಕಾರಿ ಆಸ್ಪತ್ರೆಯಲ್ಲೇ ಆಕೆಗೆ ಚಿಕಿತ್ಸೆ ಕೊಡಿಸಬೇಕಾಗಿದೆ. ಪ್ರತಿ ತಿಂಗಳು ಆಸ್ಪತ್ರೆಯಿಂದ ಔಷಧಿ ಮತ್ತು ಮಸಾಜ್ ಸೌಲಭ್ಯ ಸಿಗುತ್ತದೆ”.
ಎಂಟು ಗಂಟೆಯ ಕಠಿಣ ಕೃಷಿ ಕೂಲಿ ಕೆಲಸ ಮಾಡಿದರೆ ಕೇವಲ 100 ರೂಪಾಯಿ ಸಿಗುತ್ತದೆ. ಈಗ ಆಕೆಯ ಬಳಿ ಸ್ವಲ್ಪ ಸ್ವಂತ ಜಮೀನು ಇರುವುದರಿಂದ ಆಕೆ ಅದರಲ್ಲೇ ತಮಗೆ ಬೇಕಾದಷ್ಟು ಆಹಾದ ಬೆಳೆ ಬೆಳೆಯುತ್ತಾರೆ. ಇಂದಿರಾಗಾಂಧಿ ರಾಷ್ಟ್ರೀಯ ವಿಧವಾ ವೇತನ ಯೋಜನೆಯ ಮೂಲಕ ಜೂಲನ್ ರಿಗೆ ಪ್ರತಿ ತಿಂಗಳು 1000 ರೂಪಾಯಿ ಮಾಶಾಸನ ಸಿಗುತ್ತದೆ. ಸ್ವಾಮಿ ವಿವೇಕಾನಂದ ನಿಶಕ್ತ ಸ್ವಾವಲಂಬನ ಯೋಜನೆಯ ಅನ್ವಯ ಮಗಳು ವಿನಿತಾಗೆ 1000ರೂಪಾಯಿ ಸಹಾಯಧನ ದೊರೆಯುತ್ತದೆ.
“ನನ್ನ ಸಂಪೂರ್ಣ ಪರಿವಾರ ಇರುವಾಗ ನಾವೆಲ್ಲ ಕಲ್ಲಿನ ಗಣಿಗಾರಿಕೆ ಕೆಲಸಕ್ಕೆ ಹೋಗುತ್ತಿದ್ದೆವು. ಸಂಜೆ ಸುಸ್ತಾಗಿ ಮನೆಗೆ ಬಂದರೂ ನಾವು ನಗುತ್ತಾ ಹಾಸ್ಯ ಮಾಡುತ್ತಾ ಖುಷಿಯಾಗಿರುತ್ತಿದ್ದೆವು. ಹಿಂದೆ ನಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡುವುದು ಸುಲಭವಾಗಿತ್ತು” ಎಂದು ಹಳೆಯ ದಿನಗಳನ್ನು ಜೂಲನ್ ನೆನಪಿಸಿಕೊಳ್ಳುತ್ತಾರೆ.
*****
“ಹಿಂದೆ ನಾನು ಮರದ ನೆರಳಿನಲ್ಲಿ ಚಾಪೆಯನ್ನು ಹೆಣೆಯುತ್ತಿದ್ದೆ” ಎಂದು ತಮ್ಮ ಮನೆಯ ಚಾವಡಿಯಲ್ಲಿ ಕುಳಿತು ಜೂಲನ್ ನೆನಪಿಸಿಕೊಳ್ಳುತ್ತಾರೆ. ತಮ್ಮ ಸ್ವಂತ ಹಣದಿಂದ ಕಟ್ಟಿಸಿದ ಈ ಚಾವಡಿಯೇ ಈಗ ಆಕೆ ಹೆಣಿಗೆ ಕೆಲಸ ಮಾಡುವ ಜಾಗ. ಕೆಲವೊಮ್ಮೆ ಆಸು ಪಾಸಿನವರು ಕುಳಿತು ಹರಟೆ ಹೊಡೆಯುವ ಜಾಗವು ಇದುವೇ.
ಸುಮಾರು 10-20 ವರ್ಷಗಳ ಹಿಂದೆ ಬೇಸಿಗೆಯ ಫೆಬ್ರವರಿಯಿಂದ ಜೂನ್ ತಿಂಗಳ ನಡುವೆ ಹಳ್ಳಿಗರೆಲ್ಲ ಜೊತೆಯಾಗಿ ಸೇರಿ ಚಾಪೆ ಹೆಣೆಯುತ್ತಿದ್ದೆ. ಇದು ಹಳ್ಳಿಯ ಹೆಂಗಸರಿಗೆ ಜೊತೆ ಸೇರಿ ತಮ್ಮ ಸುಖ ದುಃಖ ಹಂಚಿಕೊಳ್ಳುವ ಅವಕಾಶವನ್ನು ಒದಗಿಸುತ್ತಿತ್ತು ಈಚಲು ಎಲೆಗಳಿಂದ ಹೆಣದ ಚಟಾಯಿಗಳು ಆಗ 600 ರಿಂದ 650 ಗಳಿಗೆ ಮಾರಾಟ ಆಗುತ್ತಿದ್ದವು.
ಇಂದು ಚಾಪೆಯ ಗಾತ್ರಕ್ಕೆ ಅನುಗುಣವಾಗಿ ಜೂಲನ್ ಹೆಣದ ಚಾಪೆಗಳು 1200-2500 ರೂಪಾಯಿಗಳ ವರೆಗೂ ಮಾರಾಟವಾಗುತ್ತದೆ. ಆದರೆ ಇದನ್ನು ತಯಾರಿಸಲು ಬೇಕಾಗುವ ಸಮಯ ಮತ್ತು ದೈಹಿಕ ಶ್ರಮವನ್ನು ಪರಿಗಣನೆಗೆ ತೆಗೆದುಕೊಂಡರೆ ಸಿಗುವ ಮೊತ್ತ ತೀರ ಕಡಿಮೆ. ಇತ್ತೀಚೆಗೆ ಜನ ಹೆಚ್ಚಾಗಿ ಪ್ಲಾಸ್ಟಿಕ್ ಚಾಪೆ ಬಳಸುತ್ತಾರೆ. ಪ್ಲಾಸ್ಟಿಕ್ ಚಾಪೆಗಳು (ದರ ₹100ರಿಂದ ಪ್ರಾರಂಭ ಆಗುತ್ತವೆ) ಅಗ್ಗ, ಹಗುರ ಮತ್ತು ಬಣ್ಣಗಳಲ್ಲಿ ಸಿಗುತ್ತವೆ.
ಜೂಲನ್ ಹೇಳುತ್ತಾರೆ “ಹಿಂದೆ ಈ ರೀತಿ ಹೆಣೆದ ಚಾಪೆಗಳು ಪ್ರತಿ ಮನೆಯಲ್ಲೂ ನೋಡಲು ಸಿಗುತ್ತಿದ್ದವು. ಆದರೆ ಈಗ ಅವು ಕೇವಲ ಆದಿವಾಸಿಗಳ ಮನೆಯಲ್ಲಿ ಮಾತ್ರ ಇವು ಕಾಣಸಿಗುತ್ತವೆ. ಅದು ಏಕೆಂದರೆ ಆದಿವಾಸಿ ಸಮುದಾಯದ ಸಂಪ್ರದಾಯದಂತೆ ಹೊಸತಾಗಿ ಮದುವೆಯಾಗುವ ಹುಡುಗಿ ಉಡುಗೊರೆಯಾಗಿ ತಾನು ಹೋಗುವ ಮನೆಗೆ ಹೊಸದಾಗಿ ಹೆಣೆದ ಚಾಪೆಯನ್ನು ತೆಗೆದುಕೊಂಡು ಹೋಗಬೇಕು.
ಕೈಯಲ್ಲಿ ಹೆಣೆದ ಚಾಪೆಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಇನ್ನು ಕೆಲವೇ ವರ್ಷಗಳಲ್ಲಿ ಚಟಾಯಿ ಹೆಣೆಯುವವರು ಕೇವಲ ನೆನಪು ಮಾತ್ರವಾಗಿ ಉಳಿಯುತ್ತಾರೆ.
ಈ ಲೇಖನವನ್ನು ರಚಿಸುವಲ್ಲಿ ಸಹಕಾರ ನೀಡಿದ ಪರಿಯ ಹಿಂದಿನ ಇಂಟರ್ನ್ ಗಳಾದ ಪ್ರವೀಣ್ ಕುಮಾರ್ ಮತ್ತು ಅಮೃತಾ ರಾಜಪೂತ್ ಹಾಗೂ ಇದರ ಇಂಗ್ಲೀಷ್ ಅನುವಾದ ಮಾಡಿದ ಧ್ಯಾನವಿ ಕಥರಾಣಿ ಅವರಿಗೆ ಕೃತಜ್ಞತೆಗಳು.
ಅನುವಾದ: ಅರವಿಂದ ಕುಡ್ಲ