ಸದಾ ಉರಿಬಿಸಿಲಿನಿಂದ ಕೂಡಿದ ರಣ್ ಪ್ರದೇಶದಲ್ಲಿ ಮಳೆಯೆನ್ನುವುದು ವಿಶೇಷ ಸಂಗತಿಯಾಗಿರುವುದರಲ್ಲಿ ಅಚ್ಚರಿಯಿಲ್ಲ. ಇಲ್ಲಿನ ಜನರು ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸದಾ ಮಳೆ ಧ್ಯಾನದಲ್ಲಿರುತ್ತಾರೆ. ಹಾಗೆಯೇ ಇಂತಹ ಪ್ರದೇಶದಲ್ಲಿ ಹೆಣ್ಣೊಬ್ಬಳ ಬದುಕಿನಲ್ಲಿ ಪ್ರೇಮ ತರುವ ಸಮಧಾನವನ್ನು ಮಳೆಗೆ ಹೋಲಿಸಿರುವುದರಲ್ಲಿ ಯಾವ ವಿಶೇಷವೂ ಇಲ್ಲ.
ಆದರೆ ಮಾನ್ಸೂನ್ ಮಳೆಯ ಪ್ರಣಯ ಮತ್ತು ವೈಭವ ಕಚ್ಛೀ ಜಾನಪದ ಗೀತೆಗಳಲ್ಲಿ ಕಂಡುಬರುವುದು ಅಸಾಮಾನ್ಯ ಸಂಗತಿಯೇನಲ್ಲ. ಕುಣಿಯುವ ನವಿಲು, ಕಾರ್ಮೋಡ, ಮಳೆ ಹಾಗೂ ಯುವತಿಯೊಬ್ಬಳು ತನ್ನ ಪ್ರೇಮಿಗಾಗಿ ಹಂಬಲಿಸುವ ಚಿತ್ರಗಳು ಭಾರತದ ಶಾಸ್ತ್ರೀಯ, ಜನಪ್ರಿಯ ಮತ್ತು ಜಾನಪದ ಸಂಗೀತ ಸಂಪ್ರದಾಯಗಳ ವರ್ಣಪಟಲದಲ್ಲಿ ಮಾತ್ರವಲ್ಲದೆ, ವರ್ಣಚಿತ್ರಗಳು ಮತ್ತು ಸಾಹಿತ್ಯದ ಅನೇಕ ಶೈಲಿಗಳಲ್ಲಿಯೂ ಕಂಡುಬರುತ್ತವೆ.
ಆದರೂ, ಗುಜರಾತಿ ಭಾಷೆಯಲ್ಲಿ ಹಾಡಲಾದ ಈ ಹಾಡಿನಲ್ಲಿ ಎಲ್ಲವನ್ನೂ ಒಟ್ಟಿಗೆ ಜೋಡಿಸಿರುವುದನ್ನು ನಾವು ಕೇಳಿದಾಗ, ಇದರಲ್ಲಿನ ಉಪಮೆಗಳು ಮೊದಲ ಮಳೆಯ ಹೊಸ ಮೋಡಿಯನ್ನು ನಮ್ಮೊಳಗೆ ಹುಟ್ಟಿಸುವುದು ಸುಳ್ಳಲ್ಲ. ಈ ಗೀತೆಯನ್ನು ಅಂಜಾರ್‌ನ ಘೇಲ್ಜಿ ಭಾಯಿಯವರ ದನಿಯಲ್ಲಿ ಪ್ರಸ್ತುತಪಡಿಸಲಾಗಿದೆ.



