ಚಿಕ್ಕ ಬಿದಿರಿನ ಶೆಡ್ ಒಂದರೊಳಗಿದ್ದ ಮಂಚದ ಮೇಲೆ ಮೋಹಿನಿ ಕೌರ್ ಅವರು ಹೊಲಿಯಬೇಕಿದ್ದ ಅಥವಾ ಸರಿಪಡಿಸಬೇಕಿದ್ದ ಬಟ್ಟೆಗಳ ರಾಶಿ ಬಿದ್ದಿತ್ತು. "ನನಗೆ ಹೊಲಿಗೆಯಲ್ಲಿ ಅಷ್ಟೊಂದು ಪರಿಣಿತಿಯಿಲ್ಲ, ಆದರೂ ನನ್ನ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದೇನೆ." ಎನ್ನುತ್ತಾರೆ ನವೆಂಬರ್ 2020ರಲ್ಲಿ ಸಿಂಘು ಪ್ರತಿಭಟನಾ ಸ್ಥಳಕ್ಕೆ ಬಂದ ನವ ದೆಹಲಿಯ ಸ್ವರೂಪ್ ನಗರದ 61 ವರ್ಷದ ಮೋಹಿನಿ ಕೌರ್. "ಪ್ರತಿಭಟನಾ ನಿರತ ರೈತರಿಗೆ ನನ್ನಿಂದ ಸಾಧ್ಯವಿರುವಷ್ಟು ಸೇವೆಯನ್ನು ಸಲ್ಲಿಸುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ. ನಮಗಾಗಿ ಅನ್ನ ಬೆಳೆದು ಕೊಡುವ ರೈತರಿಗೆ ನನ್ನ ಕೈಲಾದ ಸಹಾಯ ಮಾಡುವ ಹಂಬಲ ನನ್ನದು." ಅಂದಿನಿಂದ ಇಂದಿನವರೆಗೂ ಮೋಹಿನಿಯವರು ಒಮ್ಮೆಯೂ ಮನೆಗೆ ಮರಳಿಲ್ಲ. ಡಿಸೆಂಬರ್ 9, 2021ರಂದು ರೈತ ಸಂಘಗಳು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ನಂತರವೇ ಅವರು ಮನೆಯನ್ನು ನೆನಪಿಸಿಕೊಂಡಿದ್ದು.
ದೆಹಲಿ-ಹರಿಯಾಣ ಗಡಿಯಲ್ಲಿರುವ ಸಿಂಘುವಿನಲ್ಲಿ ಮೋಹಿನಿಯವರು ಸ್ವಯಂಸೇವಕಿಯಾಗಿ ಕೆಲಸ ಮಾಡುತ್ತಿರುವ ಸುದ್ದಿ ಪಂಜಾಬಿ ಪತ್ರಿಕೆ ಅಜಿತ್ ದೈನಿಕದಲ್ಲಿ ಸುದ್ದಿಯಾಗಿ ಬಂದಾಗ, ಅದು ಪಂಜಾಬಿನ ಓದುಗರೊಬ್ಬರನ್ನು ಮೋಹಿನಿಯವರಿಗೆ ಸಹಾಯಕನಾಗಿ ಒದಗಲು ಪ್ರೇರೇಪಿಸಿತು. ಈ ವರ್ಷದ ಜುಲೈನಲ್ಲಿ, 22 ವರ್ಷದ ಹರ್ಜೀತ್ ಸಿಂಗ್ ಎಂಬ ಯುವಕ ಅವರೊಡನೆ ಸಹಾಯಕರಾಗಿ ಸೇರಿಕೊಂಡರು.
ಹರ್ಜೀತ್ ಪಂಜಾಬಿನ ಲುಧಿಯಾನ ಜಿಲ್ಲೆಯ ಖನ್ನಾ ಎಂಬಲ್ಲಿ ಟೈಲರಿಂಗ್ ಅಂಗಡಿಯನ್ನು ಹೊಂದಿದ್ದಾರೆ. ಅವರ ತಂದೆ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಅಕ್ಕಿ, ಗೋಧಿ ಮತ್ತು ಮೆಕ್ಕೆಜೋಳ ಬೆಳೆಯುವ ರೈತ. "ನಾನು ನನ್ನ ಇಬ್ಬರು ಕರಿಗಾರ್ಗಳ (ಕುಶಲಕರ್ಮಿ ಕಾರ್ಮಿಕರ) ಉಸ್ತುವಾರಿಯಲ್ಲಿ ನನ್ನ ಅಂಗಡಿಯನ್ನು ಬಿಟ್ಟು ಈ ವರ್ಷದ ಜುಲೈ ತಿಂಗಳಿನಲ್ಲಿ ಮೋಹಿನಿ ಜೀಯವರಿಗೆ ಸಹಾಯ ಮಾಡಲು ಸಿಂಘುವಿಗೆ ಬಂದೆ. ಇಲ್ಲಿ ತುಂಬಾ ಕೆಲಸವಿದೆ; ಅವರೊಬ್ಬರೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ."
ಮಂಚ ಮತ್ತು ಕೆಲಸದ ಮೇಜಿನ ಜೊತೆಗೆ ಎರಡು ಹೊಲಿಗೆ ಯಂತ್ರಗಳು ಮತ್ತು ಒಂದು ಸ್ಟ್ಯಾಂಡ್ ಹೊಂದಿರುವ ಫ್ಯಾನ್ ಕೂಡಾ ಅವರ ಶೆಡ್ಡಿನಲ್ಲಿತ್ತು, ನೆಲದ ಮೇಲೆ ಹಾಲು ಕಾಯಿಸಲೆಂದು ಸಣ್ಣ ಸಿಲಿಂಡರ್ ಮತ್ತು ಸ್ಟೌ ಒಟ್ಟಿಗಿರುವ ʼಒಲೆಯೊಂದನ್ನುʼ ಇರಿಸಲಾಗಿತ್ತು. ಅಲ್ಲಿ ಓಡಾಡಲು ಸ್ವಲ್ಪವೇ ಸ್ವಲ್ಪ ಜಾಗವಿತ್ತು. ಮೋಹಿನಿ ಅಥವಾ ಹರ್ಜೀತ್ ಅವರನ್ನು ಯಾರಾದರೂ ಮಾತನಾಡಿಸಲು ಬಯಸಿದಲ್ಲಿ ಒಬ್ಬರಷ್ಟೇ ಒಳಗೆ ಹೋಗಲು ಸಾಧ್ಯ. ಅಲ್ಲಿಯ ʼಗ್ರಾಹಕʼರಾದ ಪ್ರತಿಭಟನಾ ನಿರತ ರೈತರು ಈ ʼಅಂಗಡಿʼಯ ಬಾಗಿಲಿನಲ್ಲೇ ನಿಲ್ಲಬೇಕು.
ಅವರ ಕೆಲಸ ಮೇಜಿನ ಒಂದು ತುದಿಯಲ್ಲಿ ಹೊಸ ಬಟ್ಟೆಗಳ ಕಟ್ಟುಗಳನ್ನು ಜೋಡಿಸಿಡಲಾಗಿತ್ತು. "ಇದು ಶುದ್ಧ ಹತ್ತಿಯ ಬಟ್ಟ. ನಾನು ಸಿಂಥೆಟಿಕ್ ಬಟ್ಟೆಗಳನ್ನ ಇಟ್ಟಿಲ್ಲ. ರೇಟು ಮಾರುಕಟ್ಟೆ ಬೆಲೆ ಏನಿದೆಯೋ ಅದೇ ಬೆಲೆ. ಇದು ನೂರು ರೂಪಾಯಿ ಮೀಟರಿಗೆ" ಎಂದು ಮೋಹಿನಿ ಬಟ್ಟೆಯ ಕುರಿತು ವಿಚಾರಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ವಿವರಿಸುತ್ತಿದ್ದರು. ಅವರು ಬಟ್ಟೆಯ ಹಣವನ್ನು ಮಾತ್ರವೇ ಪಡೆದು ಹೊಲಿಗೆ ಉಚಿತವಾಗಿ ಮಾಡಿಕೊಡುತ್ತಿದ್ದರು. ಜನರೇ ತಮ್ಮ ಖುಷಿಗೆ ಏನಾದರೂ ಕೊಟ್ಟರೆ ಪಡೆಯುತ್ತಿದ್ದರು.
ಮೋಹಿನಿಯವರು 1987ರಲ್ಲಿ ನರ್ಸಿಂಗ್ ತರಬೇತಿ ಪಡೆದಿದ್ದರು. ಕೆಲವು ವರ್ಷಗಳ ತನಕ ಈ ಸೇವೆಯಲ್ಲಿದ್ದ ಅವರು ನಂತರ ತಾಯ್ತನದ ಕಾರಣಕ್ಕೆ ಕೆಲಸವನ್ನು ಬಿಟ್ಟರು. 2011ರಲ್ಲಿ ಅವರ ಪತಿ ತೀರಿಕೊಂಡ ನಂತರ ಅವರು ಸ್ವತಂತ್ರರಾಗಿ ಬದುಕುತ್ತಿದ್ದಾರೆ. ಅವರ ವಿವಾಹಿತ ಪುತ್ರಿ ನೈರುತ್ಯ ದೆಹಲಿಯ ದ್ವಾರಕಾ ಜಿಲ್ಲೆಯ ಪಕ್ಕದಲ್ಲಿ ವಾಸಿಸುತ್ತಿದ್ದಾರೆ. ಐದು ವರ್ಷಗಳ ಹಿಂದೆ ಮೋಹಿನಿಯವರ 20 ವರ್ಷದ ಮಗ ತೀವ್ರವಾದ ಚಿಕನ್ ಫಾಕ್ಸ್ ಸೋಂಕಿಗೆ ತುತ್ತಾಗಿ ಮರಣ ಹೊಂದಿದರು. "ಮಗನನ್ನು ಕಳೆದುಕೊಂಡ ಸಂಕಟದೊಡನೆ ಬದುಕುವುದು ಅಷ್ಟು ಸುಲಭದ ಮಾತಲ್ಲ. ನನ್ನ ಒಂಟಿತನವು ಇಲ್ಲಿ ಬಂದು ರೈತರ ಸೇವೆ ಮಾಡುವಂತೆ ಪ್ರೇರೇಪಿಸಿತು. ಇಲ್ಲಿ ನನಗೆ ಒಂಟಿತನ ಅಷ್ಟು ಕಾಡುವುದಿಲ್ಲ." ಈಗ ಹರ್ಜೀತ್ ಮೋಹಿನಿಯವರನ್ನು ʼಮಾʼ ಎಂದು ಕರೆಯುತ್ತಾರೆ. "ನಾನೀಗ ಅವರ ಮಗ"ಎನ್ನುತ್ತಾರೆ ಕತ್ತಿನ ಸುತ್ತ ಟೇಪನ್ನು ಹಾರದಂತೆ ಧರಿಸಿದ್ದ ಹರ್ಜೀತ್.
ನವೆಂಬರ್ 26ರಂದು, ಸಿಂಗ್ ಅವರ ಆಂದೋಲನ ಸ್ಥಳದಲ್ಲಿನ ವೇದಿಕೆಯು ರೈತರ ಪ್ರಾರ್ಥನೆಗಳು, ಭಾಷಣಗಳು, ಹಾಡುಗಳು ಮತ್ತು ಚಪ್ಪಾಳೆಗಳಿಂದ ತುಂಬಿತ್ತು. ರೈತ ಚಳವಳಿಯ ಒಂದು ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಮತ್ತು ಮಹಿಳೆಯರು ಅಲ್ಲಿಗೆ ಬಂದಿದ್ದರು. ಆದರೆ ಮೋಹಿನಿ ಮತ್ತು ಹರ್ಜೀತ್ ಮಾತ್ರ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಅಳತೆ, ಕತ್ತರಿಸುವುದು ಮತ್ತು ಹೊಲಿಯುವುದು ಹೀಗೆ ಅವರ ಕೆಲಸ ಮುಂದುವರೆದಿತ್ತು. ಊಟ ಮತ್ತು ನಿದ್ರೆಯ ಹೊರತಾಗಿ ಅವರು ವಿರಾಮವನ್ನೇ ಪಡೆಯುತ್ತಿರಲಿಲ್ಲ. ಮೋಹಿನಿ ಅವರ ಗುಡಿಸಲಿನಲ್ಲಿ ಮಲಗಿದರೆ, ಹರ್ಜೀತ್ ಸ್ವಲ್ಪ ದೂರದಲ್ಲಿ ಅವರ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಮಲಗುತ್ತಾರೆ.
ಅವರು ಊಟ ಮತ್ತು ನಿದ್ರೆಯ ಹೊರತಾಗಿ ವಿರಾಮವನ್ನೇ ಪಡೆಯುತ್ತಿರಲಿಲ್ಲ. ಮೋಹಿನಿ ಅವರ ಗುಡಿಸಲಿನಲ್ಲಿ ಮಲಗಿದರೆ, ಹರ್ಜೀತ್ ಸ್ವಲ್ಪ ದೂರದಲ್ಲಿ ಅವರ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಮಲಗುತ್ತಾರೆ
ರೈತರು ಪ್ರತಿಭಟನೆ ನಡೆಯುವವರೆಗೂ ಮೋಹಿನಿ ಮತ್ತು ಹರ್ಜೀತ್ ತಮ್ಮ ಹೊಲಿಗೆ ಸೇವೆಯನ್ನು ಮುಂದುವರಿಸಲು ಬಯಸಿದ್ದರು. ಅದನ್ನು ಸಾಧಿಸಿದರು ಕೂಡಾ. "ಸೇವಾ ಸೇ ಕಭಿ ದಿಲ್ ನಹಿ ಭರ್ತಾ"[ಸೇವೆಯೆನ್ನುವುದು ಎಷ್ಟು ಮಾಡಿದರೂ ಇನ್ನಷ್ಟು ಮಾಡಬೇಕೆನ್ನಿಸುವಂತಹದ್ದು] ಎಂದು ಮೋಹಿನಿ ಹೇಳುತ್ತಾರೆ.
ರೈತ ಚಳುವಳಿಯ 378ನೇ ದಿನವಾದ ಡಿಸೆಂಬರ್ 9, 2021ರಂದು, ರೈತರು ದೆಹಲಿ ಗಡಿಯಿಂದ ಹಿಂತಿರುಗುತ್ತಾರೆಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಘೋಷಿಸಿದರು. ಜೂನ್ 5, 2020ರಂದು ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಪರಿಚಯಿಸಿ ಸೆಪ್ಟೆಂಬರ್ 20, 2020ರಂದು ಅಂಗೀಕರಿಸಲಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಕಳೆದೊಂದು ವರ್ಷದಿಂದ ಇಲ್ಲಿಯೇ ಧರಣಿ ಕುಳಿತಿದ್ದಾರೆ.
ಮೊದಲಿಗೆ ಯಾವ ತರಾತುರಿಯಲ್ಲಿ ಕಾನೂನನ್ನು ಅಂಗೀಕರಿಸಲಾಗಿತ್ತೋ, ಅದೇ ವೇಗದಲ್ಲಿ ನವೆಂಬರ್ 29, 2021ರಂದು ಸಂಸತ್ತಿನಲ್ಲಿ ಅದನ್ನು ರದ್ದುಗೊಳಿಸಲಾಯಿತು. ಈ ಕಾನೂನುಗಳೆಂದರೆ: ಕೃಷಿ ವ್ಯಾಪಾರ ಮತ್ತು ವಾಣಿಜ್ಯ (ಪ್ರವರ್ತನೆ ಮತ್ತು ಸಮನ್ವಯ) ಕಾಯಿದೆ, 2020 , ರೈತರ (ಸಬಲೀಕರಣ ಮತ್ತು ರಕ್ಷಣೆ) ಖಾತರಿ ಮತ್ತು ಕೃಷಿ ಸೌಲಭ್ಯಗಳ ಒಪ್ಪಂದ ಕಾಯಿದೆ, 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020 .
ಕೇಂದ್ರ ಸರ್ಕಾರವು ಅವರ ಹೆಚ್ಚಿನ ಬೇಡಿಕೆಗಳನ್ನು ಒಪ್ಪಿಕೊಂಡ ನಂತರ, ರೈತ ಸಂಘಗಳು ಡಿಸೆಂಬರ್ 9, 2021ರಂದು ತಮ್ಮ ಆಂದೋಲನವನ್ನು ಹಿಂಪಡೆಯುವುದಾಗಿ ಘೋಷಿಸಿದವು. ಆದರೆ, ಕನಿಷ್ಠ ಬೆಂಬಲ ಬೆಲೆ ಕಾನೂನಿಗೆ ಸಂಬಂಧಿಸಿದಂತೆ ಮಾತುಕತೆ ಮುಂದುವರಿಸುವುದಾಗಿ ಹೇಳಿದ್ದರು.
ದೆಹಲಿಯ ಪಶ್ಚಿಮದಲ್ಲಿರುವ ಸಿಂಘುವಿನಿಂದ 40 ಕಿ.ಮೀ ದೂರದಲ್ಲಿ ಟಿಕ್ರಿ ಆಂದೋಲನ ಸ್ಥಳದಲ್ಲಿ ಡಾ. ಸಾಕ್ಷಿ ಪನ್ನು ಅವರು ಚಿಕಿತ್ಸಾಲಯವೊಂದನ್ನು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ನಡೆಸುತ್ತಾರೆ. “ಯಾವುದೇ ದಿನ ಬನ್ನಿ, ಕನಿಷ್ಠ 100 ರೋಗಿಗಳು ಇದ್ದೇ ಇರುತ್ತಾರೆ. ಹೆಚ್ಚಿನವರಿಗೆ ಶೀತವಿರುತ್ತದೆ. ಕೆಲವರಿಗೆ ಮಧುಮೇಹ ಮತ್ತು ಕೆಲವರಿಗೆ ಅಧಿಕ ರಕ್ತದೊತ್ತಡ ಇರುತ್ತದೆ. ಇಲ್ಲಿ, ಈ ಪ್ರತಿಭಟನಾ ಶಿಬಿರಗಳಲ್ಲಿ ವಾಸಿಸುವುದು ಅನೇಕರ ಹೊಟ್ಟೆ ಕೆಡುವುದಕ್ಕೂ ಕಾರಣವಾಗಿದೆ,” ಎಂದು ಅವರು ಹೇಳುತ್ತಾರೆ.
ನಾವು ಸಾಕ್ಷಿಯವರನ್ನು ಭೇಟಿಯಾದಾಗ, ಅವರ ಆಸ್ಪತ್ರೆಯ ಹೊರಗೆ ರೋಗಿಗಳ ಉದ್ದನೆಯ ಸಾಲು ಕಾದು ನಿಂತಿತ್ತು. ಕೆಮ್ಮಿನ ಔಷಧಿ ಮುಗಿದಿದ್ದರಿಂದ ಮರುದಿನ ಬರುವಂತೆ ಒಬ್ಬರ ಬಳಿ ಹೇಳುತ್ತಿದ್ದರು. ಹರಿಯಾಣದ ಗ್ರಾಮಾಂತರದಲ್ಲಿರುವ ಉಜ್ಮಾ ಬೈಠಕ್ ಎನ್ನುವ ಸೇವಾ ಸಂಸ್ಥೆಯು ಈ ಚಿಕಿತ್ಸಾಲಯಕ್ಕೆ ಔಷಧಿ, ಮಾತ್ರೆಗಳು ಮತ್ತು ಅಗತ್ಯ ಸಾಮಗ್ರಿಗಳನ್ನು ಒದಗಿಸಿದೆ.
ಆಸ್ಪತ್ರೆಯ ಅವಧಿಯನ್ನು ವಿಸ್ತರಿಸಿದ್ದರೆ ಉತ್ತಮವಿತ್ತು ಎಂದು ಸಾಕ್ಷಿ ಹೇಳುತ್ತಾರೆ. ಆದರೆ, “ನನ್ನ ಮಗ ಮನೆಯಲ್ಲಿದ್ದಾನೆ, ವಸ್ತಿಕ್, 18 ತಿಂಗಳು. ನಾನು ಅವನನ್ನೂ ನೋಡಿಕೊಳ್ಳಬೇಕಿದೆ.” ಅವರು ಈ ವರ್ಷದ ಏಪ್ರಿಲ್ನಿಂದ ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಇಲ್ಲಿ ಕೆಲಸ ಮಾಡುತ್ತಿರುವಾಗ, ಹೋರಾಟವನ್ನು ಬೆಂಬಲಿಸುವ ಅವರ ಅತ್ತೆ-ಮಾವ ಮೊಮ್ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಾರೆ, ಅವರು ಆಸ್ಪತ್ರೆಯಿಂದ ಅಲ್ಲೇ ಸ್ವಲ್ಪ ದೂರದಲ್ಲಿ ನಡೆಯುವ ಪ್ರಾರ್ಥನೆ ಮತ್ತು ಸಭೆಗಳಿಗೆ ಹಾಜರಾಗುತ್ತಾರೆ.
ಸಾಕ್ಷಿಯವರ ಅಜ್ಜ ಜಮ್ಮುವಿನಲ್ಲಿ ಕೃಷಿ ಮಾಡುತ್ತಿದ್ದರು ಮತ್ತು ಅವರ ಅತ್ತೆ ಮನೆಯವರು ಮೂಲತಃ ಹರಿಯಾಣದ ಜಿಂದ್ ಜಿಲ್ಲೆಯ ಜಮೋಲಾ ಗ್ರಾಮದವರು. "ಹಳ್ಳಿಯೊಂದಿಗಿನ ನಮ್ಮ ಸಂಪರ್ಕ ಈಗಲೂ ಬಹಳ ನಿಕಟವಾಗಿದೆ. ಕೃಷಿ ಕಾನೂನುಗಳ ವಿರುದ್ಧ ರೈತರು ಆರಂಭಿಸಿರುವ ಹೋರಾಟವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ,” ಎಂದು ಸಾಕ್ಷಿ ಹೇಳುತ್ತಾರೆ.
ಹರಿಯಾಣದ ಬಹದ್ದೂರ್ಗಢದಲ್ಲಿರುವ ಟಿಕ್ರಿಯಿಂದ ಸಾಕ್ಷಿಯವರ ಮನೆ ಕೇವಲ ಐದು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ ಅವರು, ಅವರ ಪತಿ ಅಮಿತ್, ಪುಟ್ಟ ವಸ್ತಿಕ್ ಮತ್ತು ಅತ್ತೆ, ಮಾವ ಎಲ್ಲರೂ ಒಟ್ಟಿಗೆ ವಾಸಿಸುತ್ತಾರೆ. ಅವರು 2018ರಲ್ಲಿ MBBS ಪದವಿಯೊಂದಿಗೆ ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದ ಅವರು ಕಾಲೇಜು ಆಸ್ಪತ್ರೆಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದರು. ಪ್ರಸ್ತುತ ವಿರಾಮದಲ್ಲಿದ್ದು ಮಗ ಸ್ವಲ್ಪ ದೊಡ್ಡವನಾಗುತ್ತಿದ್ದಂತೆ, ಜನರಲ್ ಮೆಡಿಸಿನ್ ವಿಭಾದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಉದ್ದೇಶಿಸಿದ್ದಾರೆ.
"ನಾನು ಸದಾ ಜನರ ಸಲುವಾಗಿ ಏನನ್ನಾದರೂ ಮಾಡಲು ಬಯಸುತ್ತೇನೆ" ಎಂದು ಸಾಕ್ಷಿ ಹೇಳುತ್ತಾರೆ. “ರೈತರು ಟಿಕ್ರಿಯಲ್ಲಿ ಸೇರಿದಾಗ, ನಾನು ಇಲ್ಲಿಗೆ ಬಂದು ಆಸ್ಪತ್ರೆಯಲ್ಲಿ ವೈದ್ಯಳಾಗಿ ಸೇವೆ ಸಲ್ಲಿಸಲು ನಿರ್ಧರಿಸಿದೆ. ರೈತರು ಆಂದೋಲನದ ಸ್ಥಳದಲ್ಲಿ ಇರುವವರೆಗೂ ನಾನು ಇದನ್ನು ಮುಂದುವರಿಸುತ್ತೇನೆ.”
ರೈತರು ತಮ್ಮ ವಸ್ತುಗಳನ್ನು ಕಟ್ಟಿಕೊಂಡು ಊರಿಗೆ ಹೊರಟು ನಿಂತಿರುವುದನ್ನು ನೋಡಿ ಸಾಕ್ಷಿ ಭಾವುಕರಾಗಿದ್ದರು. “ಓಂದು ವರ್ಷದ ಕಠಿಣ [ರೈತರ] ಪರಿಶ್ರಮ ಇಂದು ಫಲ ನೀಡಿದೆ.” ಎಂದು ಅವರು ಸಂಭ್ರಮದಿಂದ ಹೇಳಿದರು. ಮೋಹಿನಿಯವರೂ ಈ ಕುರಿತು ಸಂಭ್ರಮದಲ್ಲಿದ್ದರು. “ಫತೇಹ್ ಹೋಗಯೀ [ನಾವು ಗೆದ್ದಿದ್ದೇವೆ]”ಎನ್ನುವುದು ಅವರೆ ಉದ್ಘಾರವಾಗಿತ್ತು. ತನ್ನ ಸೇವಾ ಮನೋಭಾವವನ್ನೂ ಇಂದಿಗೂ ಅದೇ ಉತ್ಸಾಹದಲ್ಲಿ ಕಾಪಿಟ್ಟುಕೊಂಡಿರುವ ಸಾಕ್ಷಿ ಹೇಳುತ್ತಾರೆ: “ನಾನು ಇಲ್ಲಿ ಕೊನೆಯ ದಿನದವರೆಗೂ ಇರುತ್ತೇನೆ. ಕೊನೆಯ ರೈತ ಇಲ್ಲಿಂದ ಮರಳುವವರೆಗೂ.”
ಈ ವರದಿ ಮಾಡುವಲ್ಲಿ ಸಾಕಷ್ಟು ಸಹಾಯ ನೀಡಿದ ಅಮೀರ್ ಮಲಿಕ್ ಅವರಿಗೆ ಲೇಖಕರು ಧನ್ಯವಾದ ಹೇಳಲು ಬಯಸುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು