PHOTO • P. Sainath

ಹಳ್ಳಿಯ ಕೆಲವರು ವೀರ್ ನಾರಾಯಣ್ ಸಿಂಗ್ ಅವರನ್ನು 'ಡಕಾಯಿತ' ಎಂದು ಕರೆಯುತ್ತಿದ್ದರು, ಆದರೆ ಸಮಯ ಕಳೆದಂತೆ ಅವರ ಆಲೋಚನೆಯೂ ಬದಲಾಗತೊಡಗಿತು.

"ವೀರ್ ನಾರಾಯಣ್ ಸಿಂಗ್?" ಎಂದು ಛತ್ತೀಸ್‌ಗ h ದ ಸೋನ್‌ಖಾನ್ ಗ್ರಾಮದ ಸಹಸ್ ರಾಮ್ ಕಂವರ್ ಹೇಳುತ್ತಾರೆ. "ಅವನು ದರೋಡೆಕೋರನಾಗಿದ್ದ, ಲೂಟಿಕೋರ. ಕೆಲವರು ಅವನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡಿದ್ದಾರೆ. ನಾವು ಮಾಡಲಿಲ್ಲ. "ಸುತ್ತಲೂ ಕುಳಿತಿದ್ದವರಲ್ಲಿ ಮೂರ್ನಾಲ್ಕು ಜನರು ಹೌದು ಎಂದು ತಲೆಯಾಡಿಸಿದರು. ಆದರೆ ಉಳಿದವರ ಆಲೋಚನೆಯು ಸಹಸ್ ರಾಮ್‌ ಯೋಚನಂತೆಯೇ ಇರುತ್ತದೆ.

ಅದನ್ನು ಕೇಳಿ ನಮಗೆ ಬಹಳ ನೋವಾಯಿತು. ಸೋನಾಖಾನ್ ಗ್ರಾಮವನ್ನು ಹುಡುಕುತ್ತಾ ನಾವು ಬಹಳ ದೂರ ಪ್ರಯಾಣಿಸಿದ್ದೆವು. ಈ ಗ್ರಾಮವು 1850ರ ದಶಕದ ಮಧ್ಯಭಾಗದ ಛತ್ತೀಸ್‌ಗಢ ಬುಡಕಟ್ಟು ದಂಗೆಯ ಕೇಂದ್ರವಾಗಿತ್ತು. ಇದು 1857ರ ಮಿಲಿಟರಿ ದಂಗೆಯ ಮೊದಲೇ ಪ್ರಾರಂಭವಾಗಿತ್ತು. ಒಬ್ಬ ನಿಜವಾದ ದೇಶದ ವೀರನನ್ನು ಇದು ಮುನ್ನೆಲೆಗೆ ತಂದಿತು.

ಈ ಗ್ರಾಮದಲ್ಲಿಯೇ ವೀರ್ ನಾರಾಯಣ್ ಸಿಂಗ್ ಬ್ರಿಟಿಷರನ್ನು ಎದುರಿಸಿದ್ದರು.

1850ರ ದಶಕದಲ್ಲಿ ಬರಗಾಲದ ಅಂಚಿಗೆ ತಲುಪಿದ ದೀನ ಸ್ಥಿತಿ ಈ ಕ್ರಾಂತಿಗೆ ಕಾರಣವಾಯಿತು. ಜನರ ದೈನಂದಿನ ಜೀವನವು ಹೆಚ್ಚು ಕಷ್ಟಕರವಾಗಿದ್ದರಿಂದ ಸೋನಾಖಾನಿನ ನಾರಾಯಣ್ ಸಿಂಗ್ ಈ ಪ್ರದೇಶದ ಭೂಮಾಲೀಕರನ್ನು ಧಿಕ್ಕರಿಸಿ ನಿಂತರು. "ಅವರು ಎಂದಿಗೂ ಭಿಕ್ಷೆ ಕೇಳಲಿಲ್ಲ" ಎಂದು ಹಳ್ಳಿಯ ಬುಡಕಟ್ಟು ಜನಾಂಗದ ಅತ್ಯಂತ ಹಿರಿಯ ವ್ಯಕ್ತಿ ಚರಣ್ ಸಿಂಗ್ ಹೇಳಿದರು. ನಾರಾಯಣ್ ಸಿಂಗ್ ಅವರ ಬಗ್ಗೆ ಅವರಿಗೆ ಒಂದಷ್ಟು ಸದಾಭಿಪ್ರಾಯ ಇರುವಂತೆ ಕಾಣುತ್ತಿತ್ತು.

"ಅವರು ವ್ಯಾಪಾರಿಗಳಿಗೆ ಮತ್ತು ಭೂಮಾಲೀಕರಿಗೆ ಗೋದಾಮುಗಳನ್ನು ತೆರೆದು ಧಾನ್ಯವನ್ನು ವಿತರಿಸಿ ಬಡವರ ಹಸಿವನ್ನು ನೀಗಿಸುವಂತೆ ಕೇಳಿಕೊಂಡರು." ಬರಗಾಲದ ಸಮಯದಲ್ಲಿ ಯಾವಾಗಲೂ ಇದ್ದಂತೆ, ಆಗಲೂ ಗೋದಾಮುಗಳು ಧಾನ್ಯದಿಂದ ತುಂಬಿದ್ದವು. "ಈಗ ಧಾನ್ಯ ನೀಡಿದಲ್ಲಿ ಮೊದಲ ಬೆಳೆ ಬಂದ ನಂತರ ಜನರು ತೆಗೆದುಕೊಂಡ ಧಾನ್ಯವನ್ನು ಹಿಂದಿರುಗಿಸಲಿರುವುದಾಗಿ ವ್ಯಾಪಾರಿಗಳಿಗೆ ಮತ್ತು ಭೂಮಾಲೀಕರಿಗೆ ಹೇಳಿದರು. ಭೂಮಾಲೀಕರು ಅದನ್ನು ಒಪ್ಪದಿದ್ದಾಗ, ಅವರು ಬಡ ಜನರೊಂದಿಗೆ ಸೇರಿಕೊಂಡರು ಮತ್ತು ಧಾನ್ಯವನ್ನು ಮುಟ್ಟುಗೋಲು ಹಾಕಿಕೊಂಡು ಎಲ್ಲರಿಗೂ ವಿತರಿಸಲು ದಾರಿ ಮಾಡಿಕೊಟ್ಟರು."

“He did not seek charity,” says Charan Singh, the oldest Adivasi resident of Sonakhan, who alone seems to have a more generous view of Veer Narayan Singh
PHOTO • P. Sainath

"ಅವರು ದಾನವನ್ನು ಬಯಸಲಿಲ್ಲ" ಎಂದು ಸೋನಾಖಾನಿನ ಹಿರಿಯ ಬುಡಕಟ್ಟು ನಿವಾಸಿ ಚರಣ್ ಸಿಂಗ್ ಹೇಳುತ್ತಾರೆ, ಅವರು ಮಾತ್ರ ವೀರ್ ನಾರಾಯಣ್ ಸಿಂಗ್ ಬಗ್ಗೆ ಹೆಚ್ಚು ಉದಾರ ದೃಷ್ಟಿಕೋನವನ್ನು ಹೊಂದಿದ್ದಂತೆ ಕಾಣುತ್ತಿತ್ತು.

"1857ರ ದಂಗೆಗೆ ಬಹಳ ಹಿಂದೆಯೇ ಈ ಸಂಘರ್ಷ ಪ್ರಾರಂಭವಾಯಿತು" ಎಂದು ಭೋಪಾಲ್‌ನ ಬರ್ಕತುಲ್ಲಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹೀರಾಲಾಲ್ ಶುಕ್ಲಾ ಹೇಳುತ್ತಾರೆ. ಆದಾಗ್ಯೂ, "ನಂತರ 1857ರ ದಂಗೆಯೊಂದಿಗೆ ಇದು ಸಂಬಂಧವನ್ನು ಹೊಂದಿತು." ಅಂದರೆ, ಒಂದೆಡೆ ಬಾಂಬೆ ಮತ್ತು ಕಲ್ಕತ್ತಾ ನಗರಗಳಲ್ಲಿ ಶ್ರೀಮಂತ ಮತ್ತು ಮೇಲ್ವರ್ಗದವರು ಬ್ರಿಟಿಷರು ಗೆಲ್ಲಬೇಕೆಂದು ರ‍್ಯಾಲಿಗಳನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ಛತ್ತೀಸ್‌ಗಢದ ಬುಡಕಟ್ಟು ಜನಾಂಗದವರು ಬಹಳಷ್ಟು ತ್ಯಾಗಗಳೊಂದಿಗೆ ಹೋರಾಡುತ್ತಿದ್ದರು.

1857ರಲ್ಲಿ ಬ್ರಿಟಿಷರು ನಾರಾಯಣ್ ಸಿಂಗ್ ಅವರನ್ನು ರಾಯ್‌ಪುರದಲ್ಲಿ ಗಲ್ಲಿಗೇರಿಸಿದರು.

ಸೋನಾಖಾನ್ ಜನರು ಸ್ವಾತಂತ್ರ್ಯಕ್ಕೆ ಕಾರಣವಾದ ತ್ಯಾಗಗಳನ್ನು ಅಪಹಾಸ್ಯ ಮಾಡುವುದಿಲ್ಲ. ಅವರಲ್ಲಿ ಅನೇಕರು ಇಂತಹ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ ಕೂಡ. ಅತಿಸಣ್ಣ ರೈತರಾದ ಜೈಸಿಂಗ್ ಪೈಕ್ರಾ ನಂಬುವಂತೆ “ಬ್ರಿಟಿಷರ ವಿರುದ್ಧ ಹೋರಾಡಿದ್ದು ಸರಿಯಾಗಿತ್ತು. ಇದು ನಮ್ಮ ದೇಶ.” ಎನ್ನುವ  ಅವರು ಕಳೆದ 50 ವರ್ಷಗಳಲ್ಲಿ "ಬಡವರಿಗೆ ಬಹಳ ಕಡಿಮೆ ಪ್ರಯೋಜನಗಳು ದೊರೆತಿವೆ" ಎಂದು ಗುರುತಿಸುತ್ತಾರೆ.

ಸೋನ್‌ಖಾನ್ ಎಂದರೆ 'ಚಿನ್ನದ ಗಣಿ', ಆದರೆ ಇಲ್ಲಿನ ಪರಿಸ್ಥಿತಿ ಹಾಗಿಲ್ಲ. ಛತ್ತೀಸ್‌ಗಢದ ಅನೇಕ ಬುಡಕಟ್ಟು ಮತ್ತು ಬುಡಕಟ್ಟಿನವರಲ್ಲದ ಜನರು ಬಡತನವನ್ನು ಎದುರಿಸುತ್ತಿರುವುದರಿಂದ ಸೋನ್‌ಖಾನ್‌ನಲ್ಲಿ ಹಸಿವು ಈಗಲೂ ಸಮಸ್ಯೆಯಾಗಿಯೇ ಉಳಿದಿದೆ. ಶ್ಯಾಮ್ ಸುಂದರ್ ಕಂವರ್ ಹೇಳುತ್ತಾರೆ, “ನೀವೇನಾದರೂ ಹಿಂದಿನ ವರ್ಷ ಇಲ್ಲಿಗೆ ಬಂದಿದ್ದರೆ ಈ ಇಲ್ಲಿ ನೋಡುವ ಜನರಿಗಿಂತ ಕಡಿಮೆ ಸಂಖ್ಯೆಯ ಜನರನ್ನು ನೋಡಬಹುದಿತ್ತು. ಇಲ್ಲಿ ಸಂಪಾದನೆಗೆ ಕೆಲಸಗಳು ಲಭ್ಯವಿಲ್ಲದ ಕಾರಣ ನಾವು ಕೆಲಸಕ್ಕೆ ವಲಸೆ ಹೋಗಬೇಕಾಗುತ್ತದೆ. "ಇಲ್ಲಿನ ಸಾಕ್ಷರತಾ ಅಭಿಯಾನದ ವೈಫಲ್ಯಕ್ಕೆ ಇದು ಕೂಡಾ ಒಂದು ಕಾರಣವಾಗಿದೆ."

ಸೋನಾಖಾನ್ ಗ್ರಾಮದ ಸುತ್ತಲೂ ಸಂರಕ್ಷಿತ ಅಭಯಾರಣ್ಯವಿದೆ. ಆಗಿದ್ದ ಅರಣ್ಯ ಸಂಬಂಧಿ ಸಮಸ್ಯೆಗಳು ಈಗಲೂ ಜೀವಂತವಾಗಿವೆ. ವೀರ್ ನಾರಾಯಣ್ ವಿರುದ್ಧ ಹೋರಾಡಿದ ಅದೇ ಪಡೆಗಳು ಈಗಲೂ ಈ ಪ್ರದೇಶವನ್ನು ತಮ್ಮ ಮುಷ್ಟಿಗಳಲ್ಲಿ ಇಟ್ಟುಕೊಂಡಿವೆ. ಅವರು ವ್ಯಾಪಾರಿಗಳು, ಲೇವಾದೇವಿಗಾರರು ಮತ್ತು ಭೂಮಾಲೀಕರು. "ಕೆಲವೊಮ್ಮೆ, ಜೀವನ ಸಾಗಿಸಲು ಭೂಮಿಯನ್ನು ಅಡಮಾನ ಇಡಬೇಕಾಗುತ್ತದೆ" ಎಂದು ಮತ್ತೊಬ್ಬ ರೈತ ವಿಜಯ್ ಪೈಕ್ರ ಹೇಳಿದರು.

PHOTO • P. Sainath

ಕೆಲವು ಸೋನಾಖಾನ್ ಗ್ರಾಮಸ್ಥರು ನಮ್ಮನ್ನು ಸಮಾಧಿಯ ಬಳಿಗೆ ಕರೆದೊಯ್ದರು

ಈ ಎಲ್ಲಾ ಸಮಸ್ಯೆಗಳು ಇಂದಿಗೂ ಇರುವಾಗ, ವೀರ್ ನಾರಾಯಣರ ಸ್ವಂತ ಹಳ್ಳಿಯಲ್ಲಿಯೇ ಅವರ ನೆನಪುಗಳೇಕೆ ಮಾಸುತ್ತಿವೆ?

"ಆ ಪ್ರಶ್ನೆಗೆ ಉತ್ತರ ಇತಿಹಾಸವನ್ನು ಕೆದಕಿ ಕಂಡುಹಿಡಿಯಲು ಸಾಧ್ಯವಿಲ್ಲ. 1980 ಮತ್ತು 90ರ ದಶಕಗಳಲ್ಲಿ ಮಧ್ಯಪ್ರದೇಶದ ರಾಜಕೀಯದಲ್ಲಿ ಇದನ್ನು ಕಾಣಬಹುದು" ಎಂದು ಭೋಪಾಲ್ ಸರ್ಕಾರದ ಅಧಿಕಾರಿಯೊಬ್ಬರು ಹೇಳುತ್ತಾರೆ.

ಚರಣ್ ಸಿಂಗ್ ನೆನಪಿಸಿಕೊಳ್ಳುತ್ತಾರೆ, “ಅರ್ಜುನ್ ಸಿಂಗ್ (ಅವರ ಹೆಲಿಕಾಪ್ಟರ್‌ನಲ್ಲಿ) ಸುಮಾರು 13 ವರ್ಷಗಳ ಹಿಂದೆ ಇಲ್ಲಿಗೆ ಬಂದು ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ಅನೇಕ ದೊಡ್ಡ ಜನರು ಬಂದರು. (ಹರ್ವನೇಶ್ ಸಿಂಗ್ ಮತ್ತು ಕಾಂತಿಲಾಲ್ ಭೂರಿಯಾ, ಮತ್ತು ವಿದ್ಯಾಚರಣ್ ಶುಕ್ಲಾ ಅವರಂತಹ ಮಂತ್ರಿಗಳು.) ಈ ಜನರು ಸಹ ಹೆಲಿಕಾಪ್ಟರ್ ಮೂಲಕ ಬಂದರು. ಈ ನಡುವೆ ಇನ್ನೂ ಅನೇಕ ಜನರು ಬರುತ್ತಲೇ ಇದ್ದರು.

ರಾಯ್‌ಪುರದಿಂದ ಸೋನ್‌ಖಾನ್‌ಗೆ ಹತ್ತಿರದ ಸ್ಥಳವಾದ ಪಿಥೋರಾಕ್ಕೆ ರಸ್ತೆ ಮೂಲಕ 100 ಕಿ.ಮೀ ದೂರವನ್ನು ಕ್ರಮಿಸಲು ಎರಡು ಗಂಟೆ ತೆಗೆದುಕೊಳ್ಳುತ್ತದೆ. ಆದರೆ, ಅಲ್ಲಿಂದ ಹಳ್ಳಿಗೆ ಉಳಿದ 30 ಕಿ.ಮೀ ದೂರ ಕ್ರಮಿಸಲು ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. "ಇಲ್ಲಿ ಯಾರಾದರೂ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾದರೆ, ನಾವು ಅವರನ್ನು ಚಿಕಿತ್ಸೆಗಾಗಿ 35 ಕಿಲೋಮೀಟರ್ ಕಾಡುಗಳ ಮೂಲಕ ಸಾಗಿಸಬೇಕು" ಎಂದು ಜೈ ಸಿಂಗ್ ಪೈಕ್ರ ಹೇಳುತ್ತಾರೆ.

ಆದರೆ ಅರ್ಜುನ್ ಸಿಂಗ್ ಉದ್ಘಾಟಿಸಿದ ಆಸ್ಪತ್ರೆಯ ಕತೆಯೇನು? "ಇದು ಪ್ರಾರಂಭಗೊಂಡ 13 ವರ್ಷಗಳಿಂದ ವೈದ್ಯರನ್ನು ನೋಡಿಯೇ ಇಲ್ಲ" ಎಂದು ಪೈಕ್ರ ಹೇಳುತ್ತಾರೆ. ಈ ಆಸ್ಪತ್ರೆ ಪ್ರಿಸ್ಕ್ರಿಪ್ಷನ್ಗಳನ್ನು ಸಂತೋಷದಿಂದ ಬರೆದುಕೊಡುವ ಕಂಪೌಂಡರ್ ಒಬ್ಬರನ್ನು ಹೊಂದಿದೆ. ಆದರೆ ಔಷಧಿಗಳನ್ನು ಹೊರಗೆ ಖರೀದಿಸಬೇಕು.

Hunger and poor health care are still issues in Sonakhan, as these women explain
PHOTO • P. Sainath

ಈ ಮಹಿಳೆಯರು ವಿವರಿಸಿದಂತೆ ಹಸಿವು ಮತ್ತು ಆರೋಗ್ಯ ರಕ್ಷಣೆ ಸೋನಾಖಾನ್‌ನಲ್ಲಿ ಈಗಲೂ ಸಮಸ್ಯೆಗಳಾಗಿ ಉಳಿದಿವೆ

ಹಾಗಾದರೆ, "ದೊಡ್ಡ ವ್ಯಕ್ತಿಗಳನ್ನು" ಇಲ್ಲಿಗೆ ಬರುವಂತೆ ಮಾಡಿದ್ದು ಯಾವುದು? ಮತ್ತು ಇಲ್ಲಿಗೆ ಬಂದು ಏನು ಮಾಡಿದರು?

"ಪ್ರತಿ ಬಾರಿಯೂ ಅವರು ಒಂದೇ ಉದ್ದೇಶಕ್ಕಾಗಿ ಇಲ್ಲಿಗೆ ಬರುತ್ತಾರೆ" ಎಂದು ಪೈಕ್ರ ಹೇಳುತ್ತಾರೆ. "ಅವರು ಇಲ್ಲಿಗೆ ಬಂದು ನಾರಾಯಣ್ ಸಿಂಗ್ ಕುರಿತು ಭಾಷಣ ಮಾಡುತ್ತಾರೆ ಮತ್ತು ಒಂದು ಕುಟುಂಬಕ್ಕೆ ಹಣ ಮತ್ತು ಉಡುಗೊರೆಗಳನ್ನು ನೀಡುತ್ತಾರೆ: ಅದೆಂದರೆ ಅವರ ಕುಟುಂಬ ಸದಸ್ಯರು." ಅವರ ಕುಟುಂಬಸ್ಥರು ಇಲ್ಲಿದ್ದಾರೆನ್ನೆವುದು ನಮಗೆ ತಿಳಿದಿಲ್ಲ.

"ಅವರ ವಂಶಸ್ಥರಲ್ಲಿ ಯಾರೂ ಇಲ್ಲಿ ಇದ್ದಿರಲಿಲ್ಲ. ಅವರು ನಿಜವಾಗಿಯೂ ನಾರಾಯಣ್‌  ಸಿಂಗ್‌ ಅವರ ವಂಶಸ್ಥರೆಂದು ಯಾರಿಗೆ ತಿಳಿದಿದೆ?" ಎಂದು ಚರಣ್ ಸಿಂಗ್ ಕೇಳುತ್ತಾರೆ. "ಅವರು ವಂಶಸ್ಥರು ಎಂದು ಹೇಳುತ್ತಾರೆ. ಆದರೆ ಅವರು ಹಳ್ಳಿಯ ಗ್ರಾಮದೇವತೆಯನ್ನು ಪೂಜಿಸುವುದಿಲ್ಲ."

"ಆದಾಗ್ಯೂ, ಅವರು ಆ ಎಲ್ಲಾ ಉಡುಗೊರೆಗಳನ್ನು ಪಡೆದುಕೊಳ್ಳುತ್ತಾರೆ" ಎಂದು ಪೈಕ್ರಾ ಆರೋಪಿಸುತ್ತಾರೆ.

ಮಧ್ಯಪ್ರದೇಶದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ ಸ್ವಾತಂತ್ರ್ಯ ಹೋರಾಟಗಾರರ ಅಧಿಕೃತ ದಾಖಲೆ ಸಂಪೂರ್ಣವಾಗಿ ಸರಿಯಾಗಿಲ್ಲ. ಸಾವಿರಾರು ಬುಡಕಟ್ಟು ಜನಾಂಗದವರು ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದರು. ಆದರೆ ಸರ್ಕಾರದ ಪಟ್ಟಿಯಲ್ಲಿ ಬುಡಕಟ್ಟು ಜನಾಂಗದವರ ಹೆಸರನ್ನು ಕಂಡುಹಿಡಿಯುವುದು ಬಹುತೇಕ ಅಸಾಧ್ಯ. ಛತ್ತೀಸ್‌ಗಢ ಅಥವಾ ಬಸ್ತಾರ್‌ ಎರಡೂ ಕಡೆಯಲ್ಲೂ ಇಲ್ಲ. ಆದರೆ, ಈ ಪಟ್ಟಿಯಲ್ಲಿ ಮಿರ್ದಾಗಳು, ಶುಕ್ಲಾಗಳು, ಅಗರ್‌ವಾಲ್‌ಗಳು, ಗುಪ್ತಾ, ದುಬೆ ಇತ್ಯಾದಿಗಳ ಹೆಸರುಗಳು ತುಂಬಿವೆ. ಈ ಇತಿಹಾಸವನ್ನು ಬಲಾಢ್ಯರೇ ಬರೆದಿದ್ದಾರೆ.

PHOTO • P. Sainath

ಹಿರಿಯರ ಮಾತುಗಳಲ್ಲಿ ಬ್ರಿಟಿಷರ ವಿರುದ್ಧ ಐತಿಹಾಸಿಕ ವೀರರು ನಡೆಸಿದ ಯುದ್ಧದ ಕಥೆಯನ್ನು ಸ್ಥಳೀಯರು ಕೇಳುತ್ತಿರುವುದು

1980ರ ದಶಕದ ಮಧ್ಯದಲ್ಲಿ, ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿಯಾಗಿದ್ದ ಅರ್ಜುನ್ ಸಿಂಗ್ ತಮ್ಮ ಇಬ್ಬರು ದೊಡ್ಡ ಪ್ರತಿಸ್ಪರ್ಧಿಗಳನ್ನು ಬದಿಗೆ ತಳ್ಳಲು ಬಯಸಿದ್ದರು. ಈ ಇಬ್ಬರು ಶುಕ್ಲಾ ಸಹೋದರರು. ಮೊದಲನೆಯದಾಗಿ, ಅದೇ ರಾಜ್ಯದ ಮೂರು ಬಾರಿ ಮುಖ್ಯಮಂತ್ರಿಯಾದ ಶ್ಯಾಮ್ ಚರಣ್ ಶುಕ್ಲಾ. ಎರಡನೆಯವರು, ಹಲವಾರು ಬಾರಿ ಕೇಂದ್ರ ಸಚಿವರಾಗಿದ್ದ ವಿದ್ಯಾ ಚರಣ್ ಶುಕ್ಲಾ. ಛತ್ತೀಸ್‌ಗಢ ಅವರ ಶಕ್ತಿ ಕೇಂದ್ರವಾಗಿತ್ತು, ಮತ್ತು ಸ್ವಲ್ಪ ಮಟ್ಟಿಗೆ ಈಗಲೂ ಅಲ್ಲಿ ಅವರಿಗೆ ನಿಯಂತ್ರಣವಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸುವ ಹೋರಾಟದಲ್ಲಿ ಅರ್ಜುನ್ ಸಿಂಗ್ ಅವರ ಹಿಂದೆ ಬಿದ್ದರು. ಮತ್ತು ವೀರ್ ನಾರಾಯಣ್ ಅವರ ಹೆಸರನ್ನು ಸಹಾಯವಾಗಿ ತೆಗೆದುಕೊಂಡರು.

ನಾರಾಯಣ್ ಸಿಂಗ್ ಅವರ ಹೆಸರನ್ನು ಇತಿಹಾಸ ಪುಸ್ತಕಗಳಲ್ಲಿ ದಾಖಲಿಸದೆ ಉಳಿದಿರಬಹುದು, ಆದರೆ ಈ ಪ್ರದೇಶದ ಅವರ ಜನರಿಗೆ ಅಧಿಕೃತ ವೀರರಾಗಿದ್ದರು. ಆದರೆ, ಈಗ ರಾಜ್ಯ ಅದನ್ನು ಅಳವಡಿಸಿಕೊಂಡಿದೆ.

ಶುಕ್ಲಾ ಸಹೋದರರ ಪ್ರಭಾವ ಮತ್ತು ಶಕ್ತಿಯನ್ನು ಕಡಿಮೆ ಮಾಡಲು ವೀರ್ ನಾರಾಯಣ್ ಸಿಂಗ್ ಅವರಿಗೆ ಪ್ರಾಮುಖ್ಯತೆ ನೀಡಲಾಯಿತು. ಛತ್ತೀಸ್‌ಗಢದ ನಿಜವಾದ ನಾಯಕ ಯಾರು? ಬುಡಕಟ್ಟು ನಾಯಕನೋ? ಅಥವಾ ಗಣ್ಯ ಶುಕ್ಲಾಗಳೋ? ಛತ್ತೀಸ್‌ಗಢದ ವಿಶಾಲ ಸಂಪ್ರದಾಯಗಳು ಯಾರದು? ಸಮಕಾಲೀನ ಎಲ್ಲಾ ರಾಜಕೀಯ ಯುದ್ಧಗಳು ಹಿಂದಿನವುಗಳನ್ನು ಕೂಡಾ ಒಳಗೊಂಡಿವೆ. ವೀರ್ ನಾರಾಯಣ್ ಅವರನ್ನು ಬೆಂಬಲಿಸುವ ಮೂಲಕ, ಅರ್ಜುನ್ ಸಿಂಗ್ ಅವರು ಶುಕ್ಲಾರ ವಿರುದ್ಧದ ಹೋರಾಟದಲ್ಲಿ ಬುಡಕಟ್ಟು ಜನಾಂಗದವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು.

ಶೀಘ್ರದಲ್ಲೇ, ರಾಜ್ಯ ಯಂತ್ರೋಪಕರಣಗಳು ನಾರಾಯಣ್ ಸಿಂಗ್ ಅವರನ್ನು ಅವತಾರ ಪುರುಷರನ್ನಾಗಿ ಮಾಡಲು ಪ್ರಾರಂಭಿಸಿದವು. ಇದು ಕೆಲವು ಸಕಾರಾತ್ಮಕ ಫಲಿತಾಂಶಗಳನ್ನು ಸಹ ಹೊಂದಿದೆ. ಹೆಚ್ಚು ಜನಜನಿತವಾಗದೇ ಉಳಿದಿದ್ದ ನಾಯಕನೊಬ್ಬನಿಗೆ ಅಂತಿಮವಾಗಿ ಸರಿಯಾದ ಮನ್ನಣೆ ಸಿಕ್ಕಿತು. ಮತ್ತು ಅದನ್ನು ಯಾರೂ ತಪ್ಪೆನ್ನಲು ಸಾಧ್ಯವಿಲ್ಲ. ಆದರೆ, ಈ ಉದ್ದೇಶವು ಅದರ ಹಿಂದೆ ತನ್ನದೇ ಆದ ತರ್ಕವನ್ನು ಹೊಂದಿತ್ತು. ಸೋನಾಖಾನ್ ಪರಂಪರೆಯ ಬಗ್ಗೆ ನಾಯಕರಲ್ಲಿ ಸ್ಪರ್ಧೆಯಿತ್ತು, ಈ ಕಾರಣದಿಂದಾಗಿ ಅವರು ಇಲ್ಲಿಗೆ ತಲುಪಲು ಪ್ರಾರಂಭಿಸಿದರು. ಆಸ್ಪತ್ರೆಗಳು ಮತ್ತು ಇತರ ಕಟ್ಟಡಗಳನ್ನು ಉದ್ಘಾಟಿಸಲು ಪ್ರಾರಂಭಿಸಿದರು. ಆದಾಗ್ಯೂ, ಎರಡೂ ಆಸ್ಪತ್ರೆಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿಲ್ಲ ಮತ್ತು ಇತರ ಕಟ್ಟಡಗಳೂ ಸಹ ಕಾರ್ಯನಿರ್ವಹಿಸಲಿಲ್ಲ. ಉದ್ಯೋಗಗಳು ಮತ್ತು "ಪರಿಹಾರಗಳನ್ನು" ಘೋಷಿಸಲಾಯಿತು. ಜಲಾಶಯಗಳು ಮತ್ತು ಉದ್ಯಾನಗಳಿಗೆ ವೀರ್ ನಾರಾಯಣ್ ಸಿಂಗ್ ಹೆಸರಿಡಲಾಯಿತು.

ಆದರೆ ಈ ಎಲ್ಲದರಿಂದ ಕೇವಲ ಒಂದು ಕುಟುಂಬ ಮಾತ್ರ ಲಾಭ ಪಡೆದಿದೆಯೆಂದು ಗ್ರಾಮಸ್ಥರು ಆರೋಪಿಸುತ್ತಾರೆ.

PHOTO • P. Sainath

ನಾಯಿಗಳ ಆವಾಸಸ್ಥಾನವಾಗಿರುವ ವೀರ ನಾರಾಯಣ್‌ ಸಿಂಗ್‌ ಅವರ ಸಮಾಧಿ

ಇದರಿಂದಾಗಿ ನಾರಾಯಣ್ ಸಿಂಗ್ ಅವರ ಹೆಸರು ಇತರ ಪ್ರದೇಶಗಳಲ್ಲಿ ಹರಡಲು ಪ್ರಾರಂಭಿಸಿತು, ಆದರೆ ಜನರ ಅಸಮಾಧಾನವು ಅವರ ಗ್ರಾಮದಲ್ಲಿಯೇ ಹೆಚ್ಚುತ್ತಲೇ ಇತ್ತು. ಸೋನ್‌ಖಾನ್‌ ಜನರ ಕೋಪಕ್ಕೆ ಕಾರಣ ಬಹುಶಃ ಇದರಿಂದ ಒಂದು ಕುಟುಂಬಕ್ಕೆ ಮಾತ್ರ ಸಹಾಯವಾಗುತ್ತಿದೆಯೆನ್ನುವುದು.

ವೀರ್ ನಾರಾಯಣ್ ಸಂಕೇತಿಸುತ್ತಿದ್ದ ಪ್ರತಿಭಟನೆಯ ರಾಜಕೀಯ ಮರೆಗೆ ಹೋಗಿ ಪ್ರೋತ್ಸಾಹದ ರಾಜಕೀಯ ಗೆದ್ದಿತು. ಗಣ್ಯರ ಆಲಿಂಗನದಿಂದ ಅಧಿಕೃತ ಜಾನಪದ ನಾಯಕನೊಬ್ಬ ಕೆಡವಲ್ಪಟ್ಟ. 80ರ ದಶಕವು ಬರುತ್ತಿದ್ದಂತೆ ಜನರೊಂದಿಗೆ ಒಗ್ಗಟ್ಟಾಗಿ ನಿಂತಿದ್ದ ನಾಯಕನೊಬ್ಬನ ಇಮೇಜ್‌ ಚೂರುಚೂರಾಗಿತ್ತು.

ನಾವು ಅಲ್ಲಿದ್ದ ಕೊನೆಯ ದಿನಗಳಲ್ಲಿ ಗ್ರಾಮಸ್ಥರು ಸ್ವಲ್ಪ ಮೃದುವಾದರು. ಮತ್ತು ಅವರ ಆಕ್ರೋಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. "ಅವರು ನಿಜವಾಗಿಯೂ ಒಳ್ಳೆಯ ವ್ಯಕ್ತಿಯಾಗಿದ್ದರು" ಎಂದು ವಿಜಯ್ ಪೈಕ್ರ ಹೇಳುತ್ತಾರೆ. ''ಆದರೆ ಅವರು ನಮ್ಮೆಲ್ಲರ ಪರವಾಗಿ ಹೋರಾಡಿದರು, ಅಲ್ಲವೇ? ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲ. ಅವರು ನಿಸ್ವಾರ್ಥಿಯಾಗಿದ್ದರು. ಆದರೆ ಈಗ ಕೇವಲ ಒಂದು ಕುಟುಂಬಕ್ಕೆ ಮಾತ್ರ ಏಕೆ ಪ್ರಯೋಜನ ಸಿಗುತ್ತಿದೆ?

ವೀರ್ ನಾರಾಯಣ್ ಸಿಂಗ್ ಸೋನ್‌ಖಾನಿನಲ್ಲಿ ಎರಡು ಬಾರಿ ನಿಧನರಾದರು. ಮೊದಲ ಬಾರಿಗೆ, ಬ್ರಿಟಿಷ್ ಸರ್ಕಾರದ ಕೈಯಲ್ಲಿ. ಎರಡನೇ ಬಾರಿಗೆ ಮಧ್ಯಪ್ರದೇಶ ಸರ್ಕಾರದ ಕೈಯಲ್ಲಿ. ಆದಾಗ್ಯೂ, ಅವರು ಯಾವ ಸಮಸ್ಯೆಗಳ ವಿರುದ್ಧ ಹೋರಾಡಿದ್ದರೋ ಎಲ್ಲಾ ಸಮಸ್ಯೆಗಳು ಮಾತ್ರ ಇಂದಿಗೂ ಜೀವಂತವಾಗಿವೆ.

ಈ ಲೇಖನ ಮೂಲತಃ ಆಗಸ್ಟ್ 27, 1997ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಯಿತು.

ಸರಣಿಯ ಇನ್ನಷ್ಟು ಬರಹಗಳು ಇಲ್ಲಿವೆ:

‘ಸಾಲಿಹಾನ್’ ಸರಕಾರದ ಮೇಲೆ ಎರಗಿದಾಗ

ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 1

ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 2

ಲಕ್ಷ್ಮಿ ಪಾಂಡಾರ ಕೊನೆಯ ಯುದ್ಧ

ಒಂಬತ್ತು ದಶಕಗಳ ಅಹಿಂಸೆ

ಶೇರ್‌ಪುರ: ದೊಡ್ಡ ತ್ಯಾಗ, ಸಣ್ಣ ಸ್ಮರಣೆ

ಗೋದಾವರಿ: ಮತ್ತು ಪೊಲೀಸರು ಈಗಲೂ ಆಕ್ರಮಣಕ್ಕಾಗಿ ಕಾಯುತ್ತಿದ್ದಾರೆ

ಕಲ್ಲಿಯಶ್ಶೆರಿ: ಸುಮುಕನ್ ಹುಡುಕಾಟದಲ್ಲಿ

ಕಲ್ಲಿಯಶ್ಶೆರಿ: 50ನೇ ವರ್ಷದಲ್ಲೂ ಹೋರಾಟ

ಅನುವಾದ: ಶಂಕರ ಎನ್. ಕೆಂಚನೂರು

பி. சாய்நாத், பாரியின் நிறுவனர் ஆவார். பல்லாண்டுகளாக கிராமப்புற செய்தியாளராக இருக்கும் அவர், ’Everybody Loves a Good Drought' மற்றும் 'The Last Heroes: Foot Soldiers of Indian Freedom' ஆகிய புத்தகங்களை எழுதியிருக்கிறார்.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru