ಬಂಕಾ ಜಿಲ್ಲೆಯ ಚಿರ್ಚಿರ್ಯಾದಲ್ಲಿರುವ ಸಂತಾಲ್ ರ ಬಸ್ತಿಯಂತಿನ ಜಾಗದಲ್ಲಿ ಸುಮಾರು 80 ಮನೆಗಳಿರಬಹುದು. ಇಲ್ಲಿರುವ ಬಹಳಷ್ಟು ಕುಟುಂಬಗಳು ಚಿಕ್ಕಪುಟ್ಟ ಜಮೀನು ಮತ್ತು ಜಾನುವಾರುಗಳನ್ನು ಹೊಂದಿರುವವುಗಳು. ಇಲ್ಲಿಯ ಗಂಡಸರು ಅಕ್ಕಪಕ್ಕದ ಹಳ್ಳಿಗೆ ಮತ್ತು ಪಟ್ಟಣಗಳಿಗೆ ಕೃಷಿಕಾರ್ಮಿಕರಾಗಿಯೋ, ಕಟ್ಟಡ ನಿರ್ಮಾಣ ಕಾಮಗಾರಿಯ ಕಾರ್ಮಿಕರಾಗಿಯೋ ಹೋಗುವುದು ಸಾಮಾನ್ಯ.
``ಇದು `ಬರಾ(ಡಾ) ರೂಪಿ' ಹಳ್ಳಿ. ಅಂದರೆ ಎಲ್ಲಾ ಜಾತಿಗಳಿಗೆ ಸೇರಿದ ಜನರೂ ಇಲ್ಲಿ ವಾಸವಾಗಿದ್ದಾರೆ'', ಎನ್ನುತ್ತಿದ್ದಾರೆ ಚಿರ್ಚಿರ್ಯಾದ ಗೌರವಾನ್ವಿತ ವೃದ್ಧರಲ್ಲೊಬ್ಬರಾದ ಸಿಧ ಮುರ್ಮು. ``ಸಂತಾಲ್ ಗಳಲ್ಲೇ ಹಲವು ಉಪಜಾತಿಗಳಿವೆ. ನಾನು ಮುರ್ಮು ಜಾತಿಗೆ ಸೇರಿದವನು. ಬಿರ್ಸಾ ಹೆಸರಿನಲ್ಲಿ ಇನ್ನೊಂದಿದೆ. ಹೆಂಬ್ರಮ್, ತುದು...'', ಹೀಗೆ ಹೇಳುತ್ತಲೇ ಹೋಗುತ್ತಾರೆ ಸಿಧ.
ನಿಮ್ಮ ಸಂತಾಲಿ ಭಾಷೆಯಲ್ಲಿ ಯಾವುದಾದರೊಂದು ಕಥೆಯನ್ನೋ, ಗಾದೆಮಾತನ್ನೋ ಹೇಳಲಾಗುವುದೇ ಎಂದು ನಾನು ಸಿಧನಲ್ಲಿ ಕೇಳುತ್ತಿದ್ದೇನೆ. ಅದರ ಬದಲು ನಾವು ಹಾಡಿ ತೋರಿಸುತ್ತೇವೆ ಎನ್ನುತ್ತಾರೆ ಆತ. ಹೀಗೆ ಹೇಳಿದ ಸಿಧ ತಕ್ಷಣ ಎರಡು ಮನ್ಹಾರ್ ಗಳನ್ನು ತರಿಸಿದ್ದ. ಒಂದು ದಿಘ, ಮತ್ತೊಂದು ಝಲ್. ವಾದ್ಯಗಳು ನುಡಿಯಲು ಆರಂಭವಾದೊಡನೆಯೇ ಖಿಟಾ ದೇವಿ, ಬರ್ಕಿ ಹೆಂಬ್ರಮ್, ಪಕ್ಕು ಮುರ್ಮು, ಚುಟ್ಕಿ ಹೆಂಬ್ರಮ್... ಹೀಗೆ ಇನ್ನು ಕೆಲವು ಹೆಂಗಸರೂ ಕೂಡ ಬಂದು ನಮ್ಮೊಂದಿಗೆ ಸೇರಿಕೊಂಡರು. ಅವರನ್ನು ಹೇಗೋ ಒಪ್ಪಿಸಬೇಕಾಯಿತು ಅನ್ನುವುದನ್ನು ಬಿಟ್ಟರೆ ಎಲ್ಲರೂ ಪರಸ್ಪರರ ಕೈಗಳನ್ನು ಹಿಡಿದುಕೊಂಡು ಮಧುರವಾದ ಹಾಡೊಂದನ್ನು ಹಾಡಲು ಕೊನೆಗೂ ಸಿದ್ಧರಾಗಿದ್ದರು.
ಇಲ್ಲಿ ಪ್ರಸ್ತುತಪಡಿಸಲಾಗಿರುವ ಹಾಡಿನಲ್ಲಿ ತಮ್ಮ ಜೀವನ ವಿಧಾನ ಮತ್ತು ಸೊಹ್ರಾಯಿ ಹಬ್ಬದ ಬಗ್ಗೆ ಇವರುಗಳು ಹಾಡುತ್ತಿದ್ದಾರೆ. ಅಂದಹಾಗೆ ಜನವರಿಯಲ್ಲಿ ಆಚರಿಸಲಾಗುವ ಹನ್ನೆರಡು ದಿನಗಳ ಈ ಹಬ್ಬವು ಕಟಾವಿಗೆ ಸಂಬಂಧಪಟ್ಟಿರುವಂಥದ್ದು. ಈ ದಿನಗಳಲ್ಲೇ ಸಂತಾಲರು ತಮ್ಮ ಜಾನುವಾರುಗಳನ್ನು, ದೇವತೆಗಳನ್ನು ಆರಾಧಿಸುತ್ತಾರೆ. ಮಣ್ಣಿನ ಫಲವತ್ತತೆಯು ಬತ್ತದಿರಲಪ್ಪಾ ಎಂದು ಪ್ರಾರ್ಥಿಸುತ್ತಾರೆ. ನಂತರ ಭೋಜನ, ಸಂಗೀತ ಮತ್ತು ನೃತ್ಯಗಳನ್ನೂ ಕೂಡ ವ್ಯವಸ್ಥಿತವಾಗಿ ನಡೆಸಿಕೊಡಲಾಗುತ್ತದೆ.
ನೋಡಿ : ಸೊಹ್ರಾಯಿ ಹಾಡುಗಳು ಫೋಟೋ ಆಲ್ಬಮ್
ಚಿತ್ರಗಳು : ಶ್ರೇಯಾ ಕಾತ್ಯಾಯಿನಿ