“ನನ್ನ ಐದು ವರ್ಷದ ಮಗಳಿಗೆ ಈಗ ತೀವ್ರ ಜ್ವರವಿದೆ, ಆದರೆ ಪೊಲೀಸರು ನನ್ನ ಪತಿಯನ್ನು (ಅವಳನ್ನು ವೈದ್ಯರ ಬಳಿ ಕರೆದೊಯ್ಯದಂತೆ) ತಡೆದರು. ಹಾಗಾಗಿ ಅವರು ಹೆದರಿ ವಾಪಸ್ ಬಂದರು. ನಮಗೆ ನಮ್ಮ ಕಾಲೋನಿಯ ಹೊರಗೆ ಹೋಗಲು ಅವಕಾಶವಿಲ್ಲ, ಆಸ್ಪತ್ರೆಗೆ ಕೂಡ ಹೋಗುವಂತಿಲ್ಲ” ಎಂದು ಶಕೀಲಾ ನಿಜಾಮುದ್ದೀನ್ ಹೇಳುತ್ತಿದ್ದರು.
30 ವರ್ಷದ ಶಕೀಲಾ, ಅಹಮದಾಬಾದ್ ನಗರದಲ್ಲಿರುವ ಸಿಟಿಜನ್ ನಗರ ರಿಲೀಫ್ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಮನೆಯಲ್ಲಿ ಗಾಳಿಪಟಗಳನ್ನು ತಯಾರಿಸುವುದರ ಮೂಲಕ ಜೀವನ ಸಾಗಿಸುತ್ತಾರೆ. ಅವರು ಮತ್ತು ಅವರ ಪತಿ, ದಿನಗೂಲಿ ಕೆಲಸಗಾರರಾಗಿದ್ದಾರೆ, ಈಗ ಲಾಕ್‌ಡೌನ್ ನಿಂದಾಗಿ ಅವರ ಆದಾಯದ ಜೊತೆಗೆ ಅವರ ಭರವಸೆಗಳು ಕ್ಷೀಣಿಸುತ್ತಿವೆ. "ಕ್ಲಿನಿಕ್ ಮುಚ್ಚಲಾಗಿದೆ," ಎಂದು ಅವರು ನನಗೆ ವೀಡಿಯೊ ಕರೆಯಲ್ಲಿ ಹೇಳಿದರು. “ಅವರು ನಮಗೆ 'ಮನೆಗೆ ಹೋಗಿ, ಕೆಲವು ಮನೆಮದ್ದುಗಳನ್ನು ತೆಗೆದುಕೊಳ್ಳಿ' ಎಂದು ಹೇಳುತ್ತಾರೆ. ಆಸ್ಪತ್ರೆಗೆ ಹೋಗಲು ಬಯಸಿದರೆ, ಪೊಲೀಸರು ಕಡತಗಳು ಮತ್ತು ದಾಖಲೆಗಳನ್ನು ಕೇಳುತ್ತಾರೆ. ಅವುಗಳನ್ನು ನಾವು ಎಲ್ಲಿಂದ ತರಬೇಕು ಹೇಳಿ?” ಎಂದು ಅವರು ಹತಾಶೆಯಿಂದ ಪ್ರಶ್ನಿಸುತ್ತಾರೆ.
2004ರಲ್ಲಿ ಗುಜರಾತ್‌ನಲ್ಲಿ ದತ್ತಿ ಸಂಸ್ಥೆಗಳಿಂದ ಸ್ಥಾಪಿಸಲ್ಪಟ್ಟ 81 ಕಾಲೋನಿಗಳಲ್ಲಿ ಒಂದಾಗಿರುವ ಈ ಕಾಲೋನಿಯಲ್ಲಿ, ಸುಮಾರು 50,000 ಕ್ಕೂ ಅಧಿಕ ಜನರು 2002 ರಲ್ಲಿನಡೆದ ಕೋಮುಗಲಭೆಯ ನಂತರ ಇಲ್ಲಿಗೆ ಸ್ಥಳಾಂತರಿಸಲ್ಪಟ್ಟಿದ್ದಾರೆ. ಈಗ ಲಾಕ್ ಡೌನ್‌ನಿಂದಾಗಿ ಮತ್ತೆ ಕೆಟ್ಟ ಗಳಿಗೆಯನ್ನು ಎದುರಿಸುತ್ತಿದ್ದಾರೆ.
ಆದರೆ ಅವರಲ್ಲಿ ಒಬ್ಬರು ತಮ್ಮ ಟಿವಿ ಪರದೆಯ ಮೇಲೆ ಅಮಿತಾಬ್ ಬಚ್ಚನ್ ಅವರನ್ನು ನೋಡುತ್ತಾ ನನಗೆ ಹೇಳುವಂತೆ, ಅಲ್ಲಿ ಎಲ್ಲರೂ ಒಟ್ಟಾಗಿ ಮತ್ತು ಕರೋನವೈರಸ್ ಭಾರತದಾದ್ಯಂತ ಹರಡುವುದನ್ನು ತಡೆಯುವಂತೆ ಅವರು ಮನವಿ ಮಾಡುತ್ತಿದ್ದರು.
"ನಾವು ಮನೆಯೊಳಗೆ ಕೈಗಳನ್ನು ಮಡಚಿಕೊಂಡು ಹೀಗೆ ಕುಳಿತುಕೊಳ್ಳುವುದಾದರೆ, ನಾವು ಏತಕ್ಕೆ ಕೈ ತೊಳೆಯಬೇಕು?" ಎಂದು ರೇಷ್ಮಾ ಸೈಯದ್ ಪ್ರಶ್ನಿಸುತ್ತಾರೆ, ಸಿಟಿಜಿನ್ ನಗರದ ನಾಯಕರಾಗಿರುವ ಕಾರಣ ಅವರಿಗೆ ಪ್ರೀತಿಯಿಂದ ರೇಷ್ಮಾ ಆಪಾ ಎಂದು ಕರೆಯುತ್ತಾರೆ, ಇದು 2002 ರ ಗಲಭೆ ಸಂತ್ರಸ್ತರ ಪುನರ್ವಸತಿಗಾಗಿ ಅಹ್ಮದಾಬಾದ್‌ನಲ್ಲಿ ಸ್ಥಾಪಿಸಿದ 15 ಕಾಲೋನಿಗಳಲ್ಲಿ ಇದು ಕೂಡ ಒಂದು. ಕಾಲೋನಿ ಗೇಟ್ ಬಳಿ ಕೆತ್ತಿರುವ ಕಲ್ಲಿನ ಫಲಕದ ಪ್ರಕಾರ, ಇದು 2004 ರಲ್ಲಿ ಕೇರಳ ರಾಜ್ಯ ಮುಸ್ಲಿಂ ಪರಿಹಾರ ಸಮಿತಿಯ ನೆರವಿನಿಂದ ಇದನ್ನು ನಿರ್ಮಿಸಲಾಯಿತು. ಆಗ ಮೊದಲು 40 ಕುಟುಂಬಗಳು ಇಲ್ಲಿಗೆ ಬಂದವು, ಎರಡು ವರ್ಷಗಳ ಹಿಂದೆ ಗಲಭೆಯಲ್ಲಿ ಬದುಕುಳಿದವರು ತಮ್ಮೆಲ್ಲಾ ವಸ್ತುಗಳು ಸುಟ್ಟು ಕರಕಲವಾಗಿದ್ದಕ್ಕೆ ಸಾಕ್ಷಿಯಾಗಿದ್ದರು.
ಈಗ ಇಲ್ಲಿ ಸುಮಾರು 120 ಮುಸ್ಲಿಂ ಕುಟುಂಬಗಳಿವೆ. ಮತ್ತು ಅದರ ಪಕ್ಕದ ಮುಬಾರಕ್ ನಗರ ಮತ್ತು ಘಾಸಿಯಾ ಮಸೀದಿ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳು 2002ಕ್ಕಿಂತ ಮುಂಚೆಯೇ ಆ ದೊಡ್ಡ ಘೆಟ್ಟೋವೊಂದರ ಭಾಗವಾಗಿದ್ದವು. ಸಿಜಿಜನ್ ನಗರವು ಅಸ್ತಿತ್ವಕ್ಕೆ ಬಂದ ಅದೇ ಸಮಯದಲ್ಲಿ ಅವರ ಸಂಖ್ಯೆಯು ಗಲಭೆ ನಿರಾಶ್ರಿತರೊಂದಿಗೆ ಹೆಚ್ಚಾಯಿತು.
ಸಿಟಿಜನ್ ನಗರವು ಕುಖ್ಯಾತ ಪಿರಾಣಾದ 'ಕಸದ ಪರ್ವತ ಶ್ರೇಣಿಯ' ತಪ್ಪಲಿನಲ್ಲಿ ಇದೆ. 1982ರಿಂದ ಅಹಮದಾಬಾದ್‌ನ ಪ್ರಮುಖ ಕಸ ಸಂಗ್ರಹಣೆಯ ಮೈದಾನವಾಗಿದೆ. 84 ಹೆಕ್ಟೇರ್ ಪ್ರದೇಶಗಳಲ್ಲಿ ಹರಡಿರುವ ಇದು 75 ಮೀಟರ್‌ಗಳಷ್ಟು ಎತ್ತರದ ಕಸದ ಗುಡ್ಡಗಳಿಂದ ಕೂಡಿದೆ.ಪಿರಾಣವು 85 ಲಕ್ಷ ಮೆಟ್ರಿಕ್ ಟನ್ ಕಸವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಮತ್ತು ಇದು ನಗರದ ಮೇಲೆ ಹೆಚ್ಚಾಗಿ ಬಿಡುಗಡೆ ಮಾಡುವ ವಿಷಕಾರಿ ಹೊಗೆಗೆ ಹೆಚ್ಚು ಕುಖ್ಯಾತಿಯನ್ನು ಪಡೆದಿದೆ.
ಕಸವನ್ನು ತೆರವುಗೊಳಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ)ಗೆ ಒಂದು ವರ್ಷದ ಗಡುವು ನೀಡಿ ಏಳು ತಿಂಗಳಾಗಿದೆ. ಈಗ ಕೇವಲ 150 ದಿನಗಳು ಬಾಕಿಯಿರುವಾಗ, ಭೂ ಭರ್ತಿ ಕ್ಷೇತ್ರದಲ್ಲಿ 30 ಟ್ರಾಮ್‌ಮೆಲ್ ಯಂತ್ರ ಮಾಡಬೇಕಾದ ಕೆಲಸವನ್ನು ಅಲ್ಲಿ ಕೇವಲ ಒಂದು ಯಂತ್ರ ಮಾಡುತ್ತಿದೆ.
ಏತನ್ಮಧ್ಯೆ, ಮಿನಿ ಜ್ವಾಲಾಮುಖಿ ಸ್ಫೋಟಗಳಿಂದ ಉಂಟಾಗುವ ಬೆಂಕಿಯು ಪ್ರತಿ ಬಾರಿ ಮತ್ತು ನಂತರ ದಟ್ಟ ಹೊಗೆಯ ಮೋಡಗಳನ್ನು ಹೊರ ಸೂಸುತ್ತದೆ. ಇಂತಹ ಘಟನೆಗಳು ಸಂಭವಿಸಿದಾಗ ಮಾಧ್ಯಮಗಳಲ್ಲಿ ಈ ಕಾಲೋನಿ ಕುರಿತಾದ ಸುದ್ದಿಗಳು ಬಿತ್ತರವಾಗುತ್ತವೆ, ಇಂತಹ ಕಾಲೊನಿಗಳ ಮನೆಯಲ್ಲಿ ಅವರು ಪುನರವಸತಿ ಸಿಕ್ಕು ವರ್ಷಗಳು ಕಳೆದರೂ ಸಹಿತ, ಆ ಮನೆಗಳಿಗೆ ಸಂಬಂಧಿಸಿದ ಯಾವುದೇ ಕಾಗದ ಪತ್ರಗಳಿಲ್ಲದೆ ಜೀವನ ಸಾಗಿಸುತ್ತಿರುವ ಜನರ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ.ಈ ನಗರದ ನಾಗರಿಕರು ಕಳೆದ 15 ವರ್ಷಗಳಿಂದಲೂ ವಿಷಕಾರಿ ಅನಿಲದೊಂದಿಗೆ ಉಸಿರಾಡುತ್ತಿದ್ದಾರೆ.
“ಒಣ ಕೆಮ್ಮು ಮತ್ತು ಶೀತದ ದೂರುಗಳೊಂದಿಗೆ ಬರುವ ಸಾಕಷ್ಟು ರೋಗಿಗಳಿದ್ದಾರೆ" ಎಂದು ಡಾ. ಫರ್ಹಿನ್ ಸೈಯದ್ ಹೇಳುತ್ತಾರೆ, ಅವರು ಸಮುದಾಯದ ದತ್ತಿ ಪ್ರತಿಷ್ಠಾನಗಳು ಮತ್ತು ಸಾಮಾಜಿಕ ಕಾರ್ಯಕರ್ತರು ನಡೆಸುತ್ತಿರುವ ಹತ್ತಿರದ ರಾಹತ್ ಸಿಟಿಜನ್ ಕ್ಲಿನಿಕ್‌ನಲ್ಲಿ ತೋರಿಸಿಕೊಳ್ಳುತ್ತಾರೆ. “ವಾಯುಮಾಲಿನ್ಯ ಮತ್ತು ಅಪಾಯಕಾರಿ ಅನಿಲಗಳು ಯಾವಾಗಲೂ ತೇಲುತ್ತಿರುವುದರಿಂದ, ಈ ಪ್ರದೇಶದಲ್ಲಿ ಉಸಿರಾಟದ ತೊಂದರೆಗಳು ಮತ್ತು ಶ್ವಾಸಕೋಶದ ಸೋಂಕುಗಳು ಸಾಮಾನ್ಯವಾಗಿದೆ. ಕಾಲೋನಿಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕ್ಷಯ ರೋಗಿಗಳಿದ್ದಾರೆ” ಎಂದು ಸೈಯದ್ ಹೇಳುತ್ತಾರೆ. ಆದರೆ ಈ ಲಾಕ್‌ಡೌನ್ ಆರಂಭವಾಗಿದ್ದರಿಂದಾಗಿ ಈ ಕ್ಲಿನಿಕ್ ನ್ನು ಮುಚ್ಚಬೇಕಾಯಿತು.
ರೇಷ್ಮಾ ಆಪಾದಂತಹ ನಿವಾಸಿಗಳಿಗೆ, ಕೋವಿಡ್ -19 ನೈರ್ಮಲ್ಯ ಮಾರ್ಗಸೂಚಿಗಳ ಮೂಲಕ ತಮ್ಮ ಕೈಗಳನ್ನು ಆಗಾಗ್ಗೆ ತೊಳೆಯುವಂತೆ ಸಲಹೆ ನೀಡುವುದು ಸಿಟಿಜನ್ ನಗರದಲ್ಲಿ ಕಡಿಮೆ ಅಥವಾ ಯಾವುದೇ ಶುದ್ಧ ನೀರು ಇಲ್ಲದ ಜನರ ಅಸಹಾಯಕತೆಯನ್ನು ಅಣಕಿಸುವಂತೆ ಕಾಣುತ್ತದೆ.
ಕರೋನವೈರಸ್ ಈ ಕಾಲೋನಿಗೆ ತರುವ ಭೀತಿ ಕೇವಲ ಸಾವು ಅಥವಾ ಸೋಂಕು ಅಥವಾ ಅನಾರೋಗ್ಯವಲ್ಲ, ಏಕೆಂದರೆ ಅದು ಈಗಾಗಲೇ ಇಲ್ಲಿ ಅಸ್ತಿತ್ವದಲ್ಲಿದೆ. ಆದರೆ ಈಗ ಹಸಿವು ಮತ್ತು ಸಂಪೂರ್ಣ ಲಾಕ್‌ಡೌನ್ ಹಿನ್ನೆಲೆಯಲ್ಲಿ ಎದುರಾಗಿರುವ ವೈದ್ಯಕೀಯ ಸಹಾಯದ ಕೊರತೆಯು ಮತ್ತಷ್ಟು ತೀವ್ರಗೊಂಡಿದೆ.
“ನಮ್ಮಲ್ಲಿ ಹೆಚ್ಚಿನ ಮಹಿಳೆಯರು ಇಲ್ಲಿರುವ ಪ್ಲಾಸ್ಟಿಕ್, ಡೆನಿಮ್, ತಂಬಾಕಿನಂತಹ ಸಣ್ಣ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾರೆ” ಎಂದು 45 ವರ್ಷದ ರೆಹಾನಾ ಮಿರ್ಜಾ ಹೇಳುತ್ತಾರೆ.ಮತ್ತು ಕಾರ್ಖಾನೆಗಳು ಈಗ ಹೇಗೂ ಅನಿರೀಕ್ಷಿತವಾಗಿವೆ. ಕೆಲಸವಿದ್ದರೆ ಅವರು ನಿಮ್ಮನ್ನು ಕರೆಯುತ್ತಾರೆ ಮತ್ತು ಯಾವುದೂ ಇಲ್ಲದಿದ್ದರೆ ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತಾರೆ.” ಎಂದು ಅವರು ಹೇಳುತ್ತಿದ್ದರು.ರೆಹಾನಾ ಎಂಬ ವಿಧವೆಯು ಸಮೀಪದ ತಂಬಾಕು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು 8ರಿಂದ 10 ಗಂಟೆಗಳ ಕೆಲಸ ಮಾಡಿದ ನಂತರ ದಿನಕ್ಕೆ 200 ರೂ.ಗಳನ್ನು ಸಂಪಾದಿಸುತ್ತಿದ್ದರು. ಆದರೆ ಲಾಕ್‌ಡೌನ್‌ಗೆ ಎರಡು ವಾರಗಳ ಮೊದಲು ಆ ಕೆಲಸವು ನಿಂತುಹೋಯಿತು, ಮತ್ತು ಈಗ ಲಾಕ್ ಡೌನ್ ತೆಗೆಯದ ಹೊರತು ಯಾವುದೇ ಕೆಲಸವನ್ನು ಹುಡುಕುವ ಭರವಸೆ ಇಲ್ಲ.ಇನ್ನೂ ಆಹಾರ ಖರೀದಿಸಲು ಅವರ ಬಳಿ ಹಣವೂ ಇಲ್ಲ.
‘ಯಾವುದೇ ತರಕಾರಿಗಳಿಲ್ಲ, ಹಾಲಿಲ್ಲ, ಚಹಾ ಎಲೆಗಳಿಲ್ಲ" ಎಂದು ರೇಷ್ಮಾ ಆಪ ಹೇಳುತ್ತಾರೆ,” ಮತ್ತು ಅನೇಕರು ಈಗ ಒಂದು ವಾರದಿಂದ ಆಹಾರವಿಲ್ಲದೆ ಇದ್ದಾರೆ. ಅಧಿಕಾರಿಗಳು ತರಕಾರಿ ಲಾರಿಗಳನ್ನು ಹೊರಗಿನಿಂದ ಬರಲು ಸಹ ಅನುಮತಿಸುವುದಿಲ್ಲ. ಅವರು ಆ ಪ್ರದೇಶದ ಹತ್ತಿರವಿರುವ ದಿನಸಿ ಅಂಗಡಿಗಳನ್ನು ತೆರೆಯಲು ಬಿಡುವುದಿಲ್ಲ. ಇಲ್ಲಿ ಅನೇಕರು ಸಣ್ಣ ಮಾರಾಟಗಾರರು, ಆಟೋ ಚಾಲಕರು, ಬಡಗಿಗಳು, ದಿನಗೂಲಿ ಕಾರ್ಮಿಕರು. ಅವರು ಹೊರಗಡೆ ಹೋಗಿ ಸಂಪಾದಿಸಲು ಸಾಧ್ಯವಿಲ್ಲ. ಮತ್ತು ನಮಗೆ ಯಾವುದೇ ಆದಾಯ ಕೂಡ ಬರುತ್ತಿಲ್ಲ, ಹಾಗಾದ್ರೆ ನಾವೇನು ತಿನ್ನಬೇಕು, ನಾವೇನು ಮಾಡಬೇಕು ಹೇಳಿ? ಎನ್ನುತ್ತಾರೆ.
ಕಾಲೋನಿಯ ಹಲವು ಆಟೋರಿಕ್ಷಾ ಚಾಲಕರಲ್ಲಿ ಒಬ್ಬರಾದ ಫಾರೂಕ್ ಶೇಖ್ ಹೇಳುವಂತೆ “ನಾನು ಆಟೋದ ಬಾಡಿಗೆಯಿಂದ ದಿನಕ್ಕೆ 300 ರೂ.ಗಳಿಸುತ್ತಿದ್ದೆ. ಆದರೆ ಈಗ ನನಗೆ ಯಾವುದೇ ಸ್ಥಿರ ಆದಾಯವಿಲ್ಲ.ನನಗೆ ಉತ್ತಮ ವ್ಯಾಪಾರವಿಲ್ಲದ ದಿನಗಳಲ್ಲೂ, ನಾನು ಬಾಡಿಗೆಯನ್ನು ಪಾವತಿಸಬೇಕು.ಕೆಲವು ದಿನಗಳಲ್ಲಿ ನಾನು ಕಾರ್ಖಾನೆಗಳಲ್ಲಿ ಹಣಕ್ಕಾಗಿ ಕೆಲವು ಕೆಲಸಗಳನ್ನು ಮಾಡುತ್ತೇನೆ. ಅವರು ತಮ್ಮ ಆಟೋದಲ್ಲಿ 15 ಗಂಟೆಗಳ ಕೆಲಸದ ನಂತರ ದಿನಕ್ಕೆ ಸರಾಸರಿ 600-700 ರೂ.ಗಳನ್ನು ಸಂಪಾದಿಸುತ್ತಿದ್ದರು, ಆದರೆ ಈಗ ಕೈಯಲ್ಲಿ ಅವರಿಗೆ ಕೇವಲ ಶೇ 50ರಷ್ಟು ಅಥವಾ ಅದಕ್ಕಿಂತಲೂ ಕಡಿಮೆ ಸಿಗುತ್ತದೆ.
ಆರು ಜನರ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿ, ಫಾರೂಕ್ ಗೂ ಕೂಡ ಈಗ ಲಾಕ್‌ಡೌನ್‌ನ ಬಿಸಿ ತಟ್ಟಿದೆ ಮತ್ತು ಈಗ ಅವರ ಪ್ರದೇಶದಲ್ಲಿಯೂ ಕರ್ಫ್ಯೂ ವಿಧಿಸಲಾಗಿದೆ. “ನಾವು ಪ್ರತಿದಿನ ಸಂಪಾದಿಸುತ್ತೇವೆ ಮತ್ತು ತಿನ್ನುತ್ತೇವೆ. ಈಗ ನಾವು ಹೊರಗೆ ಹೋಗಿ ಗಳಿಸಲು ಸಾಧ್ಯವಿಲ್ಲ. ಒಂದು ವೇಳೆ ಹೋದರೆ ಪೊಲೀಸರು ನಮಗೆ ಥಳಿಸುತ್ತಾರೆ ”ಎಂದು ಅವರು ಹೇಳುತ್ತಾರೆ. “ಕೆಲವರ ಮನೆಯಲ್ಲಿ ನೀರು ಕೂಡ ಇರುವುದಿಲ್ಲ. ಇನ್ನೂ ಎಲ್ಲಿಯ ಸ್ಯಾನಿಟೈಸರ್‌ಗಳು? ಎಲ್ಲಿಯ ಮುಖವಾಡಗಳು? ನಾವು ಬಡವರು. ನಮ್ಮಲ್ಲಿ ಅಂತಹ ಯಾವುದೇ ಅಲಂಕಾರಿಕ ವಸ್ತುಗಳು ಇಲ್ಲ. ಮಾಲಿನ್ಯ ಹೇಗಿದ್ದರೂ ಪ್ರತಿದಿನವೂ ಇದೆ. ಹಾಗೆಯೇ ರೋಗ ಮತ್ತು ಅನಾರೋಗ್ಯ ಕೂಡ" ಎನ್ನುತ್ತಾ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ.
ಇಂತಹ ಭಯಾನಕ ಜೀವನ ಪರಿಸ್ಥಿತಿಗಳು ಮತ್ತು ಅಪಾಯಗಳನ್ನು ಹೊಂದಿರುವ ಈ ಪ್ರದೇಶಕ್ಕೆ, ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಲು ಪದೇ ಪದೇ ವಿನಂತಿಸಿದರೂ ಇದುವರೆಗೆ ಅದು ಕಾರ್ಯಗತಗೊಂಡಿಲ್ಲ. 2017ರಲ್ಲಷ್ಟೇ ಇಲ್ಲಿ ರಹತ್ ಸಿಟಿಜನ್ ಕ್ಲಿನಿಕ್ ಪ್ರಾರಂಭವಾಯಿತು, ಸಂಪೂರ್ಣವಾಗಿ ಖಾಸಗಿ ದೇಣಿಗೆಗಳ ಮೂಲಕ ಮತ್ತು ಸಮುದಾಯದೊಂದಿಗೆ ಆರೋಗ್ಯ ಮತ್ತು ಶಿಕ್ಷಣದ ವಿಷಯಗಳ ಕುರಿತು ಕೆಲಸ ಮಾಡುತ್ತಿರುವ ಅಹ್ಮದಾಬಾದ್ ವಿಶ್ವವಿದ್ಯಾಲಯದ ಯುವ ಪ್ರಾಧ್ಯಾಪಕರಾದ ಅಬ್ರಾರ್ ಅಲಿಯಂತಹ ಜನರ ಪ್ರಯತ್ನಗಳು ಇಲ್ಲಿ ಕಾರ್ಯರೂಪಕ್ಕೆ ಬಂದವು, ಆದರೆ ಕ್ಲಿನಿಕ್ ನಡೆಸುವುದು ಸುಲಭದ ವಿಷಯವಲ್ಲ. ಅಲಿ ಅವರು ಸೂಕ್ತ ವೈದ್ಯರು, ದಾನಿಗಳು ಮತ್ತು ಉದಾರ ಭೂಮಾಲೀಕರನ್ನು ಹುಡುಕಲು ಹೆಣಗಾಡಿದ್ದಾರೆ. ಇದರ ಪರಿಣಾಮವಾಗಿ, ಎರಡೂವರೆ ವರ್ಷಗಳಲ್ಲಿ ಕ್ಲಿನಿಕ್ ಮೂರು ಸ್ಥಳಗಳನ್ನು ಮತ್ತು ನಾಲ್ಕು ವೈದ್ಯರನ್ನು ಬದಲಾಯಿಸಬೇಕಾಯಿತು.ಮತ್ತು ಈಗ ನಗರಾದ್ಯಂತ ಲಾಕ್‌ಡೌನ್ ಜಾರಿ ಇರುವುದರಿಂದಾಗಿ ಈ ಕ್ಲಿನಿಕ್ ಕೂಡ ಮುಚ್ಚಿದೆ.
ಸಿಟಿಜನ್ ನಗರವು ಎಎಮ್‌ಸಿಯ ವ್ಯಾಪ್ತಿ ಪ್ರದೇಶದಲ್ಲಿದೆ, ಆದರೆ ಅದಕ್ಕೆ ಮಹಾನಗರ ಪಾಲಿಕೆಯ ನೀರಿನ ಪೂರೈಕೆ ದೊರೆಯುವುದಿಲ್ಲ. 2009 ರಲ್ಲಿ ಬೋರ್‌ವೆಲ್ ಕೊರೆಯುವವರೆಗೂ ಇಲ್ಲಿನ ಜನರು ಖಾಸಗಿ ಟ್ಯಾಂಕರ್‌ಗಳನ್ನು ಅವಲಂಬಿಸಿದ್ದರು.ಆದರೆ ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಲ್ಲ ಎನ್ನುವುದನ್ನು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ತನ್ನ ಅಧ್ಯಯನದ ಮೂಲಕ ಕಂಡುಕೊಂಡಿತು, ಇದರಲ್ಲಿ ಲವಣಗಳು, ಲೋಹಗಳು, ಕ್ಲೋರೈಡ್, ಸಲ್ಫೇಟ್ ಮತ್ತು ಮೆಗ್ನೀಸಿಯಮ್‌ನ ಹೆಚ್ಚಿನ ಅಂಶಗಳು ಇರುವುದನ್ನು ಅಧ್ಯಯನ ಪತ್ತೆಹಚ್ಚಿತು. ಪ್ರಸ್ತುತ, ಸುಮಾರು ಆರು ತಿಂಗಳ ಹಿಂದೆ ಕೊರೆಯಲಾದ ಮತ್ತೊಂದು ಬೋರ್‌ವೆಲ್ ಕಾಲೋನಿಯ ಅಗತ್ಯತೆಯ ಭಾಗವನ್ನು ಪೂರೈಸುತ್ತದೆ. ಆದರೆ ನೀರಿನಿಂದ ಬರುವ ರೋಗಗಳು ಮತ್ತು ಉದರದ ಸೋಂಕುಗಳು ಇಲ್ಲಿ ಉಲ್ಬಣಗೊಳ್ಳುತ್ತಲೇ ಇವೆ. ಕಲುಷಿತ ನೀರಿನೊಂದಿಗೆ ಕೆಲಸ ಮಾಡುವ ಮತ್ತು ಸೇವಿಸುವುದರ ಪರಿಣಾಮವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಅನೇಕ ಚರ್ಮರೋಗಗಳು ಮತ್ತು ಶಿಲೀಂಧ್ರಗಳ ಸೋಂಕುಗಳು ತಗುಲುತ್ತಿವೆ.
ಸಿಟಿಜನ್ ನಗರದ ಜನರು ಬಹಳ ಹಿಂದೆಯೇ ಸರ್ಕಾರವು ಸಾಮಾಜಿಕವಾಗಿ ತಮ್ಮಿಂದ ದೂರವಿಟ್ಟಂತೆ ಕಾಣುತ್ತಾರೆ.ಕೋವಿಡ್ -19 ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಈಗಾಗಲೇ ಬಳಲುತ್ತಿರುವ ಸಮುದಾಯಗಳ ಬೆನ್ನಿಗೆ ಬಿದ್ದಿರುವ ಕೊನೆಯ ಹೊಡೆತವಾಗಿದೆ “ಸರ್ಕಾರಗಳು ಕೇವಲ ಮಾತಿನ ಆಶ್ವಾಸನೆಗಳನ್ನು ನೀಡುತ್ತವೆ ಮತ್ತು ಅದಕ್ಕೆ ಮತಗಳು ಬೇಕಾಗಿವೆ” ಎಂದು ಇಲ್ಲಿ ವಾಸಿಸುವ ಕೊಳಾಯಿಗಾರ ಮುಷ್ತಾಕ್ ಅಲಿ (ಹೆಸರು ಬದಲಿಸಲಾಗಿದೆ) ಹೇಳುತ್ತಾರೆ. “ನಾವು ಇಲ್ಲಿಯವರೆಗೂ ಹೇಗಿದ್ದೇವೆ ಎಂದು ನೋಡಲು, ನಮ್ಮ ಪ್ರದೇಶಗಳಿಗೆ ಯಾವ ನಾಯಕನೂ ಭೇಟಿ ಮಾಡುವ ತುರ್ತುನ್ನು ವ್ಯಕ್ತಪಡಿಸಿಲ್ಲ, ಅಂತಹ ಸರ್ಕಾರದಿಂದ ಏನು ಪ್ರಯೋಜನ ಹೇಳಿ? ಇಲ್ಲಿರುವ ಜನರಿಗೂ ಕೂಡ ಈಗ ಅವರ ಆಟಗಳು ಅರ್ಥವಾಗಿವೆ” ಎನ್ನುತ್ತಾರೆ.
ಮುಷ್ತಾಕ್ ಅವರ ಒಂದು ಕೋಣೆಯ ಮನೆಯಲ್ಲಿರುವ ಟಿವಿ ಸೆಟ್ ನಲ್ಲಿ ಮತ್ತು ಈ ದಟ್ಟಣೆಯ ಕಾಲೋನಿಯಲ್ಲಿರುವ ಇತರರಿಗೆ, ಅಮಿತಾಬ್ ಬಚ್ಚನ್ ಅವರ ಪರಿಚಿತ ಧ್ವನಿಯು ಅವರಿಗೆ ಉತ್ತೇಜಿಸುತ್ತಾ: “..ನಿಮ್ಮ ಕಣ್ಣು, ಮೂಗು, ಬಾಯಿಯನ್ನು ಅನಗತ್ಯವಾಗಿ ಮುಟ್ಟಬೇಡಿ..ಈ ಯಾವುದೇ ಲಕ್ಷಣಗಳು ನಿಮ್ಮಲ್ಲಿದ್ದರೆ ತಕ್ಷಣ ನಿಮ್ಮ ಹತ್ತಿರದ ಆರೋಗ್ಯ ಸೌಲಭ್ಯ ಅಥವಾ ನಿಮ್ಮ ವೈದ್ಯರನ್ನು ಭೇಟಿ ಮಾಡಿ” ಎನ್ನುವ ಧ್ವನಿ ಅವರಿಗೆ ಅನುರಣಿತವಾಗುತ್ತಿತ್ತು.
ಅನುವಾದ - ಎನ್ . ಮಂಜುನಾಥ್