ಸೋಮವಾರ ಬೆಳಗಿನ 11 ಗಂಟೆಗೆ, 41 ವರ್ಷದ ಮುನೇಶ್ವರ್ ಮಾಂಝಿ ತಮ್ಮ ಮುರುಕಲು ಮನೆಯ ಹೊರಗಿನ ಔಟ್ಪೋಸ್ಟ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮನೆಯ ಮುಂದೆ ತೆರೆದ ಜಾಗದಲ್ಲಿ ಬಿದಿರಿನ ಕಡ್ಡಿಗಳಿಂದ ಕಟ್ಟಿದ ನೀಲಿ ಪಾಲಿಥಿನ್ ಶೀಟ್ ಬಿಸಿಲಿನಿಂದ ರಕ್ಷಿಸುತ್ತದೆ. ಆದರೆ ಇದು ಮಳೆಗೆ ಯಾವುದೇ ರಕ್ಷಣೆಯನ್ನು ನೀಡುವುದಿಲ್ಲ. ಪಾಟ್ನಾ ನಗರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಕಾಕೋ ಪಟ್ಟಣದ ಸಮೀಪವಿರುವ ಮುಸಹರಿ ಟೋಲಾದಲ್ಲಿ ವಾಸಿಸುವ ಮುನೇಶ್ವರ್ ಅವರು "ಕಳೆದ 15 ದಿನಗಳಿಂದ ನನಗೆ ಯಾವುದೇ ಕೆಲಸ ಸಿಕ್ಕಿಲ್ಲ" ಎಂದು ಹೇಳುತ್ತಾರೆ.
ಮುಸಹರಿ ಟೋಲಾ - ದಲಿತ ಸಮುದಾಯದ ಜನರು ವಾಸಿಸುವ ಮುಸಾಹರ್ ನೆಲೆಯನ್ನು ಗುರುತಿಸಲು ಬಳಸಲಾಗುವ ಪದ - ಇದು 60 ಕುಟುಂಬಗಳಿಗೆ ನೆಲೆಯಾಗಿದೆ. ಮುನೇಶ್ವರ್ ಮತ್ತು ಅವರ ಕುಗ್ರಾಮದಲ್ಲಿರುವ ಇತರರು ಸಮೀಪದ ಹೊಲಗಳಲ್ಲಿ ದುಡಿದು ಗಳಿಸುವ ದೈನಂದಿನ ಕೂಲಿಯನ್ನು ಅವಲಂಬಿಸಿದ್ದಾರೆ. ಆದರೆ ಕೆಲಸ ನಿಯಮಿತವಾಗಿಲ್ಲ ಎನ್ನುತ್ತಾರೆ ಮುನೇಶ್ವರ್. ಖಾರಿಫ್ ಮತ್ತು ರಬಿ ಬೆಳೆಗಳ ಬಿತ್ತನೆ ಮತ್ತು ಕಟಾವು ಸಮಯದಲ್ಲಿ, ವರ್ಷಕ್ಕೆ 3-4 ತಿಂಗಳು ಮಾತ್ರ ಲಭ್ಯವಿರುತ್ತದೆ.
ಕಳೆದ ಬಾರಿ ಅವರು ರಜಪೂತ ಸಮುದಾಯದ ಜಮೀನ್ದಾರರಾದ 'ಬಾಬು ಸಾಹಿಬ್' ಅವರ ಹೊಲಗಳಲ್ಲಿ ಕೆಲಸ ಮಾಡಿದರು. ಕೃಷಿ ಕೂಲಿ ಕಾರ್ಮಿಕರು ಪಡೆಯುವ ದಿನಗೂಲಿ ಬಗ್ಗೆ ಮುನೇಶ್ವರ್ ಹೇಳುತ್ತಾರೆ, ''ಎಂಟು ಗಂಟೆಗಳ ಕೆಲಸಕ್ಕೆ ನಮಗೆ 150 ರೂಪಾಯಿ ನಗದು ಅಥವಾ ಐದು ಕಿಲೋ ಅಕ್ಕಿ ನೀಡಲಾಗುತ್ತದೆ. ಸಾಕು." ಹಣಕ್ಕೆ ಬದಲಾಗಿ ಅಕ್ಕಿಯನ್ನು ನೀಡಿದಾಗ, ಅವರು ಒಟ್ಟಿಗೆ ಊಟವನ್ನು ಪಡೆಯುತ್ತಾರೆ - 4-5 ರೊಟ್ಟಿಗಳು ಅಥವಾ ಅಕ್ಕಿ, ಮತ್ತು ದಾಲ್ ಮತ್ತು ತರಕಾರಿಗಳ ಪಲ್ಯ.
ಭೂದಾನ ಚಳವಳಿಯ ಸಮಯದಲ್ಲಿ 1955ರಲ್ಲಿ ಅವರ ಅಜ್ಜ ಮೂರು ಬಿಘಾ (ಸುಮಾರು ಎರಡು ಎಕರೆ) ಕೃಷಿ ಭೂಮಿಯನ್ನು ಪಡೆದಿದ್ದರೂ - ಭೂರಹಿತ ವ್ಯಕ್ತಿಗಳಿಗೆ ಮರುಹಂಚಿಕೆಗಾಗಿ ಭೂಮಾಲೀಕರು ತಮ್ಮ ಭೂಮಿಯ ಒಂದು ಭಾಗವನ್ನು ಬಿಟ್ಟುಕೊಟ್ಟ ಸಮಯದಲ್ಲಿ - ಅದು ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ. " ಭೂಮಿ ನಾವು ವಾಸಿಸುವ ಸ್ಥಳದಿಂದ ಮೂರು ಕಿಲೋಮೀಟರ್ ದೂರದಲ್ಲಿದೆ. ನಾವು ಬೆಳೆಗಳನ್ನು ಬಿತ್ತಿದಾಗಲೆಲ್ಲಾ, ಪ್ರಾಣಿಗಳು ಅವುಗಳನ್ನು ತಿನ್ನುತ್ತವೆ ಮತ್ತು ನಾವು ನಷ್ಟವನ್ನು ಅನುಭವಿಸುತ್ತೇವೆ" ಎಂದು ಮುನೇಶ್ವರ್ ವಿವರಿಸುತ್ತಾರೆ.
ಹೆಚ್ಚಿನ ದಿನಗಳಲ್ಲಿ, ಮುನೇಶ್ವರರ ಕುಟುಂಬ ಮತ್ತು ಟೋಲಾದಲ್ಲಿನ ಇತರರು ಮಹುವಾ ಮರದ ಹೂವುಗಳಿಂದ ತಯಾರಿಸಿದ ಮದ್ಯವನ್ನು ( Madhuca longifolia var. latifolia ) ತಯಾರಿಸಿ ಮಾರಾಟ ಮಾಡುವ ಮೂಲಕ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ.
ಆದಾಗ್ಯೂ, ಇದು ಅಪಾಯಕಾರಿ ವ್ಯವಹಾರವಾಗಿದೆ. ಬಿಹಾರ್ ನಿಷೇಧ ಮತ್ತು ಅಬಕಾರಿ ಕಾಯ್ದೆ, 2016ರ ಕಠಿಣ ರಾಜ್ಯ ಕಾನೂನು ಮದ್ಯ ಅಥವಾ ಮಾದಕ ವಸ್ತುಗಳ ತಯಾರಿಕೆ, ಸ್ವಾಧೀನ, ಮಾರಾಟ ಅಥವಾ ಸೇವನೆಯನ್ನು ನಿಷೇಧಿಸುತ್ತದೆ. ಮತ್ತು 'ದೇಶೀಯ ಅಥವಾ ಸಾಂಪ್ರದಾಯಿಕ ಮದ್ಯ' ಎಂದು ವ್ಯಾಖ್ಯಾನಿಸಲಾದ ಮಹುವಾ ದಾರುವನ್ನು ಕೂಡ ಕಾನೂನಿನ ವ್ಯಾಪ್ತಿಗೆ ತಂದಿದೆ.
ಆದರೆ ಪರ್ಯಾಯ ಉದ್ಯೋಗಾವಕಾಶಗಳ ಕೊರತೆಯು ದಾಳಿ, ಬಂಧನ ಮತ್ತು ಕಾನೂನು ಕ್ರಮದ ಭಯದ ಹೊರತಾಗಿಯೂ ಮದ್ಯದ ತಯಾರಿಕೆಯನ್ನು ಮುಂದುವರೆಸಲು ಮುನೇಶ್ವರ ಅವರನ್ನು ತೊಡಗಿಸುತ್ತದೆ. “ಯಾರು ಹೆದರುವುದಿಲ್ಲ? ನಮಗೂ ಭಯವಾಗುತ್ತದೆ. ಆದರೆ, ಪೊಲೀಸರು ದಾಳಿ ನಡೆಸಿದಾಗ ಮದ್ಯವನ್ನು ಬಚ್ಚಿಟ್ಟು ಪರಾರಿಯಾಗುತ್ತೇವೆ ಎಂದು ಅವರು ಹೇಳುತ್ತಾರೆ. ಅಕ್ಟೋಬರ್ 2016ರಲ್ಲಿ ನಿಷೇಧವನ್ನು ಜಾರಿಗೊಳಿಸಿದಾಗಿನಿಂದ ಪೊಲೀಸರು 10ಕ್ಕೂ ಹೆಚ್ಚು ಬಾರಿ ಟೋಲಾ ಮೇಲೆ ದಾಳಿ ಮಾಡಿದ್ದಾರೆ. “ನನ್ನನ್ನು ಎಂದಿಗೂ ಬಂಧಿಸಿಲ್ಲ. ಅವರು ಪಾತ್ರೆಗಳನ್ನು ಮತ್ತು ಚೂಲ್ಹಾ [ಮಣ್ಣಿನ ಒಲೆ] ವನ್ನು ಅನೇಕ ಬಾರಿ ನಾಶಪಡಿಸಿದ್ದಾರೆ, ಆದರೆ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತಿದ್ದೇವೆ.
ಮುಸಾಹರ್ ಸಮುದಾಯದಲ್ಲಿನ ಬಹುತೇಕರು ಭೂರಹಿತರು ಮತ್ತು ಅವರು ದೇಶದ ಅತ್ಯಂತ ಸಮಾಜದ ಅಂಚಿನಲ್ಲಿರುವ ಮತ್ತು ಕಳಂಕಕ್ಕೆ ಈಡು ಮಾಡಲಾಗಿರುವ ಜನ ಸಮುದಾಯಗಳಲ್ಲಿ ಒಂದಕ್ಕೆ ಸೇರಿದವರು. ಮೂಲತಃ ಸ್ಥಳೀಯ ಅರಣ್ಯ ಬುಡಕಟ್ಟು, ಸಮುದಾಯದ ಹೆಸರನ್ನು ಎರಡು ಪದಗಳಿಂದ ಪಡೆಯಲಾಗಿದೆ - ಮೂಸಾ (ಇಲಿ) ಮತ್ತು ಅಹರ್ (ಆಹಾರ) - ಮತ್ತು ಇದರ ಅರ್ಥ 'ಇಲಿಗಳನ್ನು ತಿನ್ನುವವರು'. ಬಿಹಾರದಲ್ಲಿ, ಮುಸಾಹರರನ್ನು ಪರಿಶಿಷ್ಟ ಜಾತಿ ಎಂದು ವರ್ಗೀಕರಿಸಲಾಗಿದೆ ಮತ್ತು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ದಲಿತರಲ್ಲಿ ಮಹಾದಲಿತ ಎಂದು ಪಟ್ಟಿಮಾಡಲಾಗಿದೆ. ಕಡಿಮೆ ಸಾಕ್ಷರತೆಯ ಪ್ರಮಾಣ - 29 ಪ್ರತಿಶತ - ಮತ್ತು ಕೌಶಲದ ಕೊರತೆಯೊಂದಿಗೆ, ರಾಜ್ಯದಲ್ಲಿನ 27 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯು ಯಾವುದೇ ಕೌಶಲಪೂರ್ಣ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ. ಮತ್ತು ಮಹುವ ದಾರು ಸಮುದಾಯದ ಸಾಂಪ್ರದಾಯಿಕ ಪಾನೀಯವಾಗಿದ್ದರೂ, ಅದನ್ನು ಈಗ ಜೀವನೋಪಾಯಕ್ಕಾಗಿ ಹೆಚ್ಚು ಉತ್ಪಾದಿಸಲಾಗುತ್ತದೆ.
ಮುನೇಶ್ವರ್ 15ನೇ ವಯಸ್ಸಿನಿಂದ ಮಹುವಾ ಮದ್ಯ ತಯಾರಿಸುತ್ತಿದ್ದರು. "ನನ್ನ ತಂದೆ ಬಡವರಾಗಿದ್ದರು. ಅವರು ಕೈಗಾಡಿ [ಸರಕುಗಳನ್ನು ಸಾಗಿಸಲು ಬಳಸುತ್ತಿದ್ದ ಮರದ ಕೈ ಬಂಡಿ] ಎಳೆಯುವ ಕೆಲಸ ಮಾಡುತ್ತಿದ್ದರು. ಅದರಿಂದ ಬರುವ ಆದಾಯವು ಸಾಕಾಗುತ್ತಿರಲಿಲ್ಲ. ನಾನು ಕೆಲವೊಮ್ಮೆ ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಹೋಗಬೇಕಾಗಿತ್ತು," ಅವರು ಹೇಳುತ್ತಾರೆ. "ಆದ್ದರಿಂದ ನಾನು ಕೆಲವು ತಿಂಗಳುಗಳ ನಂತರ ಶಾಲೆಗೆ ಹೋಗುವುದನ್ನು ನಿಲ್ಲಿಸಿದೆ. ಸುತ್ತಮುತ್ತಲಿನ ಕೆಲವು ಕುಟುಂಬಗಳು ಮದ್ಯವನ್ನು ತಯಾರಿಸುತ್ತಿದ್ದವು, ಹಾಗಾಗಿ ನಾನು ಕೂಡ ಪ್ರಾರಂಭಿಸಿದೆ. ನಾನು ಇದನ್ನು 25 ವರ್ಷಗಳಿಂದ ಮಾಡುತ್ತಿದ್ದೇನೆ.”
ಮದ್ಯಸಾರದ ಬಟ್ಟಿ ಇಳಿಸುವಿಕೆಯು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಮೊದಲನೆಯದಾಗಿ, ಮಹುವಾ ಹೂವುಗಳನ್ನು ಗೂಡ್ (ಬೆಲ್ಲ) ಮತ್ತು ನೀರಿನೊಂದಿಗೆ ಬೆರೆಸಿ, ಹುದುಗಿಸಲು ಎಂಟು ದಿನಗಳ ಕಾಲ ನೆನೆಸಲಾಗುತ್ತದೆ. ನಂತರ ಮಿಶ್ರಣವನ್ನು ಲೋಹದ ಹಂಡಿ (ಮಡಕೆ)ಗೆ ಹಾಕಲಾಗುತ್ತದೆ, ಅದನ್ನು ಕುದಿಯಲು ಚೂಲ್ಹಾದ ಮೇಲೆ ಹೊಂದಿಸಲಾಗುತ್ತದೆ. ಮತ್ತೊಂದು ಹಂಡಿ ಸಣ್ಣದಾಗಿದ್ದು, ಜೀಡಿಮಣ್ಣಿನಿಂದ ಮಾಡಲ್ಪಟ್ಟಿದೆ, ಇದು ತೆರೆದ ತಳವನ್ನು ಹೊಂದಿದ್ದು, ಅದನ್ನು ಲೋಹದ ಪಾತ್ರೆಯೊಂದರ ಒಂದರ ಮೇಲೆ ಇರಿಸಲಾಗುತ್ತದೆ. ಈ ಜೇಡಿಮಣ್ಣಿನ ಹಂಡಿಯು ಒಂದು ರಂಧ್ರವನ್ನು ಹೊಂದಿರುತ್ತದೆ, ಅಲ್ಲಿ ಪೈಪ್ ಅಳವಡಿಸಲಾಗಿರುತ್ತದೆ ಮತ್ತು ಅದರ ಮೇಲೆ ನೀರನ್ನು ಹೊಂದಿರುವ ಮತ್ತೊಂದು ಲೋಹದ ಹಂಡಿಯನ್ನು ಇರಿಸಲಾಗಿರುತ್ತದೆ. ಆವಿಯನ್ನು ಹೊರಗೆ ಹೋಗದಂತೆ ತಡೆಯಲು ನಡುವಿನ ಅಂತರಗಳನ್ನು ಮಣ್ಣು ಮತ್ತು ಬಟ್ಟೆಗಳಿಂದ ತುಂಬಲಾಗುತ್ತದೆ.
ಕುದಿಯುವ ಮಹುವಾ ಮಿಶ್ರಣದಿಂದ ಉತ್ಪತ್ತಿಯಾಗುವ ಆವಿಯು ಮಣ್ಣಿನ ಹಂಡಿಯಲ್ಲಿ ಸಂಗ್ರಹವಾಗುತ್ತದೆ. ಇದು ಪೈಪ್ ಮೂಲಕ ಕೆಳಗಿನ ಲೋಹದ ಪಾತ್ರೆಯೊಳಗೆ ಹಾದುಹೋಗುತ್ತದೆ, ಇದು ತೊಟ್ಟಿಕ್ಕುವ ಘನೀಕೃತ ದ್ರವವನ್ನು ಸಂಗ್ರಹಿಸುತ್ತದೆ. ಉರಿಯುವ ಬೆಂಕಿಯಲ್ಲಿ ಸುಮಾರು ಎಂಟು ಲೀಟರ್ ಮದ್ಯವನ್ನು ಭಟ್ಟಿ ಇಳಿಸಲು ಮೂರರಿಂದ ನಾಲ್ಕು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. "ಬೆಂಕಿಯನ್ನು ಉರಿಸಲು ನಾವು [ಒಲೆಯ ಹತ್ತಿರ] ಅಲ್ಲಿಯೇ ಇರಬೇಕು" ಎಂದು ಮುನೇಶ್ವರ್ ಹೇಳುತ್ತಾರೆ. "ಇದು ತುಂಬಾ ಬಿಸಿಯಾಗಿರುತ್ತದೆ. ದೇಹ ಸುಡುತ್ತದೆ. ಆದರೂ, ನಮ್ಮ ಜೀವನವನ್ನು ನಡೆಸಲು ನಾವು ಅದನ್ನು ಮಾಡಬೇಕಾಗಿದೆ.” ಅವರು ಭಟ್ಟಿ ಇಳಿಸುವ ಪ್ರಕ್ರಿಯೆಗೆ 'ಮಹುವಾ ಚುವಾನಾ' ಎಂಬ ಪದವನ್ನು ಬಳಸುತ್ತಾರೆ.
ಮುನೇಶ್ವರ್ ಅವರು ತಿಂಗಳಿಗೆ 40 ಲೀಟರ್ ಮಹುವಾ ಮದ್ಯವನ್ನು ತಯಾರಿಸುತ್ತಾರೆ, ಅವರಿಗೆ 7 ಕೆಜಿ ಹೂವುಗಳು, 30 ಕೆಜಿ ಬೆಲ್ಲ ಮತ್ತು 10 ಲೀಟರ್ ನೀರು ಬೇಕಾಗುತ್ತದೆ. ಮಹುವಾ ಹೂವುಗಳನ್ನು 700 ರೂ.ಗೆ ಮತ್ತು ಬೆಲ್ಲವನ್ನು 1200 ರೂ.ಗೆ ಖರೀದಿಸುತ್ತಾರೆ. ಒಲೆ ಹಚ್ಚಲು 10 ಕೆಜಿ ಕಟ್ಟಿಗೆಯನ್ನು 80 ರೂಪಾಯಿಗೆ ಖರೀದಿಸುತ್ತಾರೆ. ಹೀಗೆ ತಿಂಗಳಿಗೆ 2000 ರೂ.ಗಳನ್ನು ಕಚ್ಚಾವಸ್ತುಗಳಿಗೆ ವ್ಯಯಿಸಬೇಕಾಗಿದೆ.
ಮುನೇಶ್ವರ್ ಮಾತನಾಡಿ, "ತಿಂಗಳಿಗೆ ಮದ್ಯ ಮಾರಾಟದಿಂದ ಬರುವ 4,500 ರೂ. ಆಹಾರದ ಖರ್ಚಿಗೆ ಹೋಗುತ್ತದೆಯಾದ್ದರಿಂದ, ನಾವು 400-500 ರೂಗಳನ್ನು ಸಹ ಉಳಿಸಲು ಸಾಧ್ಯವಾಗುತ್ತಿಲ್ಲ. ಉಳಿದ ಹಣವನ್ನು ಮಕ್ಕಳಿಗಾಗಿ ಖರ್ಚು ಮಾಡುತ್ತೇವೆ, ಅವರು ಆಗಾಗ ಬಿಸ್ಕತ್ತು ಮತ್ತು ಟಾಫಿಗಗಳು ಬೇಕೆಂದು ಹಟ ಮಾಡುತ್ತಾರೆ," ಎನ್ನುತ್ತಾರೆ. ಅವರಿಗೆ ಮತ್ತು ಅವರ ಪತ್ನಿ ಚಮೇಲಿ ದೇವಿ (36 ವರ್ಷ) ನಾಲ್ಕು ಮಕ್ಕಳಿದ್ದಾರೆ. ಮೂವರು ಹೆಣ್ಣು ಮಕ್ಕಳಿದ್ದು, ಅವರ ವಯಸ್ಸು 5ರಿಂದ 16 ವರ್ಷಗಳು ಮತ್ತು ಕಿರಿಯ ಮಗನಿಗೆ 4 ವರ್ಷ. ಚಮೇಲಿ ಕೃಷಿ ಕಾರ್ಮಿಕರಾಗಿದ್ದು, ಪತಿಯೊಂದಿಗೆ ಮದ್ಯ ತಯಾರಿಸುತ್ತಾರೆ.
ಅವರ ಗ್ರಾಹಕರು ಮುಖ್ಯವಾಗಿ ಸುತ್ತಮುತ್ತಲಿನ ಹಳ್ಳಿಗಳ ಕಾರ್ಮಿಕರು. ಮುನೇಶ್ವರ್ ಹೇಳುತ್ತಾರೆ, “ನಾವು 250 ಎಂಎಲ್ ಮದ್ಯಕ್ಕೆ 35 ರೂ. ಪಡೆಯುತ್ತೇವೆ. ಗ್ರಾಹಕರು ನಮಗೆ ನಗದು ರೂಪದಲ್ಲಿ ಪಾವತಿಸಬೇಕು. ಸಾಲದ ಮೇಲೆ ಗ್ರಾಹಕರಿಗೆ ಮದ್ಯವನ್ನು ನೀಡುವುದಿಲ್ಲ.
ಮದ್ಯಕ್ಕೆ ಬೇಡಿಕೆ ಹೆಚ್ಚಿದೆ - ಎಂಟು ಲೀಟರ್ ಮದ್ಯ ಮಾರಾಟ ಮಾಡಲು ಕೇವಲ ಮೂರು ದಿನಗಳು ಸಾಕಾಗುತ್ತದೆ. ಆದರೆ, ಹೆಚ್ಚು ಮದ್ಯ ತಯಾರಿಸಿಡುವುದು ಅಪಾಯಕಾರಿ. ಮುನೇಶ್ವರ್ ಹೇಳುತ್ತಾರೆ, "ಪೊಲೀಸರು ದಾಳಿ ನಡೆಸಿದಾಗ, ಪೂರ್ತಿ ಸಂಗ್ರಹಿಸಿದ ಮದ್ಯವನ್ನು ನಾಶಪಡಿಸುತ್ತಾರೆ, ಅದು ನಮಗೆ ನೋವುಂಟು ಮಾಡುತ್ತದೆ." ಈ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಸಹ ಎದುರಿಸಬೇಕಾಗುತ್ತದೆ. ಇದಲ್ಲದೇ ಒಂದು ಲಕ್ಷದಿಂದ ಹತ್ತು ಲಕ್ಷ ರೂಪಾಯಿವರೆಗೆ ಭಾರೀ ದಂಡ ತೆರಬೇಕಾಗಬಹುದು.
ಮುನೇಶ್ವರ್ ಅವರಿಗೆ ಮದ್ಯ ತಯಾರಿಕೆ ಜೀವನೋಪಾಯದ ಸಾಧನವೇ ಹೊರತು ಲಾಭದ ವ್ಯಾಪಾರವಲ್ಲ. ತನ್ನ ಒಂದು ಕೋಣೆಯ ಮನೆಯಂತಹ ರಚನೆಯತ್ತ ಬೊಟ್ಟು ಮಾಡಿ, "ನನ್ನ ಮನೆ ನೋಡಿ, ರಿಪೇರಿ ಮಾಡಿಸಲೂ ನಮ್ಮ ಬಳಿ ಹಣವಿಲ್ಲ," ಎನ್ನುತ್ತಾರೆ, ಮನೆ ರಿಪೇರಿ ಮಾಡಲು 40-50,000 ರೂ. ಬೇಕು. ಕೋಣೆಯಲ್ಲಿ ಮಣ್ಣಿನ ನೆಲವಿದೆ; ಒಳಗಿನ ಗೋಡೆಗಳು ಮಣ್ಣಿನ ಗಾರೆಯಿಂದ ಮಾಡಲ್ಪಟ್ಟಿದೆ ಮತ್ತು ಗಾಳಿ ಓಡಾಡಲು ಯಾವುದೇ ಕಿಟಕಿಗಳಿಲ್ಲ. ಕೋಣೆಯ ಒಂದು ಮೂಲೆಯಲ್ಲಿ ಒಲೆ ಇದೆ, ಅಲ್ಲಿ ಅನ್ನಕ್ಕಾಗಿ ಸ್ಟೀಲ್ ಪಾತ್ರೆ ಮತ್ತು ಹಂದಿಮಾಂಸಕ್ಕಾಗಿ ಬಾಣಲೆ ಇರಿಸಲಾಗಿದೆ. ಮುನೇಶ್ವರ್ ಹೇಳುತ್ತಾರೆ, “ನಾವು ಹಂದಿ ಮಾಂಸವನ್ನು ಹೆಚ್ಚು ತಿನ್ನುತ್ತೇವೆ. ಇದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ." ಟೋಲದಲ್ಲಿ ಮಾಂಸಕ್ಕಾಗಿ ಹಂದಿಗಳನ್ನು ಸಾಕಲಾಗಿದ್ದು, ಟೋಲದಲ್ಲಿ ಸುಮಾರು 3-4 ಅಂಗಡಿಗಳಲ್ಲಿ ಹಂದಿ ಮಾಂಸ ಸಿಗುತ್ತಿದ್ದು, ಕೆಜಿಗೆ 150-200 ರೂ. ಇರುತ್ತದೆ. ಸಬ್ಜಿ ಮಂಡಿ ಟೋಲಾದಿಂದ 10 ಕಿಮೀ ದೂರದಲ್ಲಿದೆ. "ನಾವು ಕೆಲವೊಮ್ಮೆ ಮಹುವಾ ಮದ್ಯವನ್ನು ಸಹ ಕುಡಿಯುತ್ತೇವೆ" ಎಂದು ಅವರು ಹೇಳುತ್ತಾರೆ.
2020ರಲ್ಲಿ, ಕೋವಿಡ್ -19 ಲಾಕ್ಡೌನ್ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರಲಿಲ್ಲ ಮತ್ತು ಆ ಸಮಯದಲ್ಲಿ ಮುನೇಶ್ವರ್ ತಿಂಗಳಿಗೆ 3,500 - 4,000 ರೂ ಗಳಿಸಿದರು. ಅವರು ಹೇಳುತ್ತಾರೆ, “ನಾವು ಮಹುವಾ, ಬೆಲ್ಲ ವ್ಯವಸ್ಥೆ ಮಾಡಿಕೊಂಡೆವು ಮತ್ತು ಮದ್ಯ ತಯಾರಿಸಿದೆವು, ದೂರದ ಪ್ರದೇಶಗಳಲ್ಲಿ, ಹೆಚ್ಚಿನ ಕಟ್ಟುನಿಟ್ಟಿನಿರಲಿಲ್ಲ, ಅದು ನಮಗೆ ಸಹಾಯ ಮಾಡಿತು, ನಮಗೂ ಗ್ರಾಹಕರು ಸಿಕ್ಕಿದರು. ಮದ್ಯದ ಸೇವನೆಯು ತುಂಬಾ ಸಾಮಾನ್ಯವಾಗಿದೆ, ಜನರು ಅದನ್ನು ಯಾವುದೇ ಬೆಲೆ ಬೇಕಾದರೂ ಕೊಟ್ಟು ಖರೀದಿಸಿ ಸೇವಿಸುತ್ತಾರೆ.
ಮಾರ್ಚ್ 2021ರಲ್ಲಿ ತಂದೆಯ ಮರಣದ ನಂತರ, ಅವರು ಸಾಲದ ಸುಳಿಗೆ ಸಿಲುಕಿದರು. ಸಂಪ್ರದಾಯದಂತೆ, ಮುನೇಶ್ವರ ಅಂತಿಮ ವಿಧಿಗಳನ್ನು ಮಾಡಲು ಮತ್ತು ಸಮುದಾಯಕ್ಕೆ ಊಟದ ವ್ಯವಸ್ಥೆ ಮಾಡಲು ಹಣವನ್ನು ಸಾಲ ಮಾಡಬೇಕಾಗಿತ್ತು. ಅವರು ರಜಪೂತ ಜಾತಿಯ ಖಾಸಗಿ ಲೇವಾದೇವಿಗಾರರಿಂದ ಐದು ಶೇಕಡಾ ಬಡ್ಡಿಗೆ 20,000 ರೂಪಾಯಿಗಳನ್ನು ತೆಗೆದುಕೊಂಡರು. ಅವರು ವಿವರಿಸುತ್ತಾರೆ, "ಮದ್ಯ ನಿಷೇಧವಿಲ್ಲದಿದ್ದರೆ, ನಾನು ಸಾಕಷ್ಟು ಹಣವನ್ನು ಉಳಿಸಿ [ಹೆಚ್ಚು ಮದ್ಯವನ್ನು ಮಾಡಿ] ಸಾಲವನ್ನು ತೀರಿಸುತ್ತಿದ್ದೆ, ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ ನಾನು ಸಾಲವನ್ನು ತೆಗೆದುಕೊಳ್ಳಬೇಕು, ನಾವು ಹೀಗೆ ಬದುಕುವುದು ಹೇಗೆ?"
ಈ ಹಿಂದೆ ಉತ್ತಮ ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದ ಮುನೇಶ್ವರ್ ಅವರಿಗೆ ಅಲ್ಲಿ ನಿರಾಸೆಯಾಗಿತ್ತು. ಮೊದಲ ಬಾರಿಗೆ, ಅವರು 2012ರಲ್ಲಿ ಮಹಾರಾಷ್ಟ್ರದ ಪುಣೆ ನಗರಕ್ಕೆ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡಲು ಹೋದರು, ಆದರೆ ಮೂರು ತಿಂಗಳೊಳಗೆ ಮನೆಗೆ ಮರಳಿದರು. ಅವರು ಹೇಳುತ್ತಾರೆ, “ನನ್ನನ್ನು ಅಲ್ಲಿಗೆ ಕರೆದೊಯ್ದ ಗುತ್ತಿಗೆದಾರ ನನಗೆ ಕೆಲಸ ನೀಡುತ್ತಿಲ್ಲ. ಹಾಗಾಗಿ, ನಾನು ಹತಾಶೆಗೊಂಡು ಹಿಂತಿರುಗಿದೆ. 2018ರಲ್ಲಿ, ಅವರು ಉತ್ತರ ಪ್ರದೇಶಕ್ಕೆ ಹೋಗಿದ್ದರು ಮತ್ತು ಈ ಬಾರಿ ಒಂದು ತಿಂಗಳಲ್ಲಿ ಮರಳಿದರು. ಅವರು ಹೇಳುತ್ತಾರೆ, ''ರಸ್ತೆ ಅಗೆಯಲು ತಿಂಗಳಿಗೆ ಕೇವಲ 6,000 ರೂ. ಸಂಬಳ ಕೊಡುತ್ತಿದ್ದರು. ಹೀಗಾಗಿ ಅಲ್ಲಿಂದ ಮರಳಿ ಬಂದುಬಿಟ್ಟೆ. ಅಂದಿನಿಂದ ನಾನು ಎಲ್ಲಿಯೂ ಹೋಗಿಲ್ಲ."
ರಾಜ್ಯದ ಕಲ್ಯಾಣ ನೀತಿಗಳು ಮುಸಾಹರ ಟೋಲಾದಲ್ಲಿ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಉದ್ಯೋಗ ಸೃಷ್ಟಿಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ ಗ್ರಾಮವನ್ನು ನಿರ್ವಹಿಸುವ ಗ್ರಾಮ ಪಂಚಾಯಿತಿ ಮುಖ್ಯಸ್ಥರು ಮದ್ಯ ತಯಾರಿಕೆಯನ್ನು ನಿಲ್ಲಿಸುವಂತೆ ಸ್ಥಳೀಯ ನಿವಾಸಿಗಳನ್ನು ಒತ್ತಾಯಿಸುತ್ತಿದ್ದಾರೆ. "ಸರ್ಕಾರ ನಮ್ಮನ್ನು ಒಬ್ಬಂಟಿಯಾಗಿಸಿದೆ" ಎನ್ನುತ್ತಾರೆ ಮುನೇಶ್ವರ್. "ನಾವು ಅಸಹಾಯಕರು. ದಯವಿಟ್ಟು ಸರ್ಕಾರಕ್ಕೆ ಹೋಗಿ ಹೇಳಿ, ನೀವು ಈ ಪ್ರದೇಶದಲ್ಲಿ ಒಂದೇ ಒಂದು ಶೌಚಾಲಯವನ್ನು ನೋಡಲು ಸಾಧ್ಯವಿಲ್ಲ. ಸರ್ಕಾರ ನಮಗೆ ಸಹಾಯ ಮಾಡುತ್ತಿಲ್ಲ, ಹಾಗಾಗಿ ನಾವು ಮದ್ಯವನ್ನು ತಯಾರಿಸಬೇಕಾಗಿದೆ. ಸರ್ಕಾರವು ನಮಗೆ ಕೆಲಸವನ್ನು ನೀಡಿದರೆ ಅಥವಾ ನಮಗೆ ಸಣ್ಣ ಅಂಗಡಿಯನ್ನು ಪ್ರಾರಂಭಿಸಲು ಅಥವಾ ಮಾಂಸ ಮತ್ತು ಮೀನು ಮಾರಾಟ ಮಾಡಲು ಹಣ ನೀಡಿದರೆ, ನಾವು ಮದ್ಯದ ವ್ಯಾಪಾರವನ್ನು ನಿಲ್ಲಿಸುತ್ತೇವೆ."
ಮುಸಾಹರಿ ಟೋಲಾ ನಿವಾಸಿಯಾದ 21 ವರ್ಷದ ಮೋತಿಲಾಲ್ ಕುಮಾರ್ ಅವರಿಗೆ, ಮಹುವಾ ದಾರು ಈಗ ಆದಾಯದ ಮುಖ್ಯ ಮೂಲವಾಗಿದೆ. ಅನಿಯಮಿತ ಕೃಷಿ ಕೆಲಸ ಮತ್ತು ಕಡಿಮೆ ವೇತನದಿಂದಾಗಿ ಅವರು 2016ರಲ್ಲಿ ನಿಷೇಧಕ್ಕೆ 2-3 ತಿಂಗಳು ಮೊದಲು ಸಾರಾಯಿ ಬಟ್ಟಿ ಇಳಿಸಲು ಪ್ರಾರಂಭಿಸಿದ್ದರು. 2020ರಲ್ಲಿ, "ದಿನಗೂಲಿಯಾಗಿ ನಮಗೆ ಕೇವಲ ಐದು ಕಿಲೋ ಅಕ್ಕಿಯನ್ನು ನೀಡಲಾಗುತ್ತಿತ್ತು." ಅವರು ಹೇಳುತ್ತಾರೆ, ಅವರು ಕೇವಲ ಎರಡು ತಿಂಗಳ ಕೃಷಿ ಕೆಲಸವನ್ನು ಪಡೆದಿದ್ದರು.
ಮೋತಿಲಾಲ್, ಅವರ ತಾಯಿ ಕೊಯಿಲಿ ದೇವಿ (51 ವರ್ಷ), ಮತ್ತು ಅವರ 20 ವರ್ಷದ ಪತ್ನಿ ಬುಲಾಕಿ ದೇವಿ ಅವರು ಮಹುವಾ ಮದ್ಯವನ್ನು ತಯಾರಿಸುತ್ತಾರೆ. ಅವರು ಪ್ರತಿ ತಿಂಗಳು ಸುಮಾರು 24 ಲೀಟರ್ ಮದ್ಯವನ್ನು ತಯಾರಿಸುತ್ತಾರೆ. ಮೋತಿಲಾಲ್ ಹೇಳುತ್ತಾರೆ, "ನಾನು ಮದ್ಯ ತಯಾರಿಸುವ ಮೂಲಕ ಗಳಿಸುವ ಹಣವು ಪೂರ್ತಿಯಾಗಿ ಆಹಾರ, ಬಟ್ಟೆ ಮತ್ತು ಔಷಧಿಗಳಿಗೆ ಹೋಗುತ್ತದೆ. ನಾವು ತುಂಬಾ ಬಡವರು. ಮದ್ಯ ತಯಾರಿಸಿದರೂ ಹಣ ಉಳಿಸಲು ಸಾಧ್ಯವಾಗುತ್ತಿಲ್ಲ. ನನ್ನ ಮಗಳು ಅನುವನ್ನು ಹೇಗೋ ನೋಡಿಕೊಳ್ಳುತ್ತಿದ್ದೇನೆ. ನಾನು ಹೆಚ್ಚು [ಮದ್ಯ] ಮಾಡಿದರೆ, ನನ್ನ ಆದಾಯ ಹೆಚ್ಚಾಗುತ್ತದೆ. ಇದಕ್ಕಾಗಿ ಹಣ [ಬಂಡವಾಳ] ಬೇಕು. ಅದು ನನ್ನಲ್ಲಿಲ್ಲ"
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಕಾಯಿದೆಯು ಇಲ್ಲಿನ ಮುಸಾಹರ್ ಸಮುದಾಯಕ್ಕೆ ಹೆಚ್ಚು ಸಹಾಯ ಮಾಡಿಲ್ಲ. ಮುನೇಶ್ವರ್ ಅವರು ಏಳು ವರ್ಷಗಳ ಹಿಂದೆ ಎಂಎನ್ಆರ್ಇಜಿಎ ಕಾರ್ಡ್ ಪಡೆದಿದ್ದರು, ಆದರೆ ಅವರಿಗೆ ಯಾವುದೇ ಕೆಲಸ ಸಿಕ್ಕಿಲ್ಲ. ಮೋತಿಲಾಲ್ ಎಂಎನ್ಆರ್ಇಜಿಎ ಕಾರ್ಡ್ ಅಥವಾ ಆಧಾರ್ ಕಾರ್ಡ್ ಹೊಂದಿಲ್ಲ. ಆಧಾರ್ ಕಾರ್ಡ್ ಪಡೆಯುವುದು ಹಣ ವಸೂಲಿ ಮಾಡುವ ಸರ್ಕಾರದ ತಂತ್ರ ಎಂದು ಟೋಲಾದ ಅನೇಕ ನಿವಾಸಿಗಳು ಭಾವಿಸುತ್ತಾರೆ. "ನಾವು ಬ್ಲಾಕ್ ಆಫೀಸ್ಗೆ [ಮೂರು ಕಿಲೋಮೀಟರ್ ದೂರದ] ಹೋದಾಗ, ಅವರು ಮುಖ್ಯಸ್ಥರ ಸಹಿ ಇರುವ ಪತ್ರವನ್ನು ಕೇಳುತ್ತಾರೆ" ಎಂದು ಮೋತಿಲಾಲ್ ಹೇಳುತ್ತಾರೆ. ನಾವು ಅವರಿಗೆ ಮುಖ್ಯಸ್ಥರಿಂದ ಪತ್ರವನ್ನು ನೀಡಿದಾಗ, ಅವರು ಟಿ.ಸಿ. ತರಲು ಕೇಳುತ್ತಾರೆ. ನಾನು ಶಾಲೆಯ ಪೇಪರ್ಗಳನ್ನು ತಂದಾಗ, ಅವರು ಹಣ ಕೇಳುತ್ತಾರೆ. ಬ್ಲಾಕ್ ಅಧಿಕಾರಿಗಳು 2,000-3,000 ರೂಪಾಯಿ ಲಂಚ ಪಡೆದ ನಂತರವೇ ಆಧಾರ್ ಕಾರ್ಡ್ ನೀಡುತ್ತಾರೆ ಎಂದು ನನಗೆ ತಿಳಿದಿದೆ. ಆದರೆ ನನ್ನ ಬಳಿ ಹಣವಿಲ್ಲ."
ಮುಸಹರಿ ತೊಲದ ಜೀವನ ಪರಿಸ್ಥಿತಿಯೇ ಸರಿಯಿಲ್ಲ. ಇಲ್ಲಿ ಶೌಚಾಲಯವಿಲ್ಲ, ಸಮುದಾಯ ಶೌಚಾಲಯವೂ ಇಲ್ಲ. ಯಾವುದೇ ಮನೆಯಲ್ಲೂ ಗ್ಯಾಸ್ ಸಂಪರ್ಕವಿಲ್ಲ - ಜನರು ಈಗಲೂ ಸೌದೆಯನ್ನೇ ಅಡುಗೆ ಮಾಡಲು ಮತ್ತು ಮದ್ಯ ತಯಾರಿಸಲು ಇಂಧನವಾಗಿ ಬಳಸುತ್ತಾರೆ. ಮೂರು ಕಿಲೋಮೀಟರ್ ದೂರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಹತ್ತಕ್ಕೂ ಹೆಚ್ಚು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಏಕೈಕ ಆರೋಗ್ಯ ಕೇಂದ್ರ ಇದಾಗಿದೆ. ಮುಖ್ಯಾಧಿಕಾರಿ ಹೇಳುತ್ತಾರೆ, "ಚಿಕಿತ್ಸೆಗೆ ಸಾಕಷ್ಟು ಸೌಲಭ್ಯಗಳಿಲ್ಲ, ಆದ್ದರಿಂದ ಜನರು ಖಾಸಗಿ ಕ್ಲಿನಿಕ್ಗಳನ್ನು ಅವಲಂಬಿಸಿದ್ದಾರೆ." ನಿವಾಸಿಗಳ ಪ್ರಕಾರ, ಕೊರೋನಾ ಸಮಯದಲ್ಲಿ ಟೋಲಾದಲ್ಲಿ ಒಂದೇ ಒಂದು ಕೋವಿಡ್ -19 ಲಸಿಕೆ ಶಿಬಿರವನ್ನು ಸ್ಥಾಪಿಸಲಾಗಿಲ್ಲ. ಜಾಗೃತಿ ಮೂಡಿಸಲು ಯಾವುದೇ ಸರ್ಕಾರಿ ಆರೋಗ್ಯ ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಲಿಲ್ಲ.
ಮೂಲ ಸೌಕರ್ಯಗಳ ತೀವ್ರ ಕೊರತೆಯ ನಡುವೆಯೂ ಇಲ್ಲಿನ ಕುಟುಂಬಗಳು ಮದ್ಯ ಮಾರಾಟವನ್ನು ಅವಲಂಬಿಸಿ ಬದುಕು ಸಾಗಿಸುವಂತಾಗಿದೆ. ಮೋತಿಲಾಲ್ ಹೇಳುತ್ತಾರೆ, “ನಮಗೆ ಎಲ್ಲಿಯೂ ಕೆಲಸ ಸಿಗುವುದಿಲ್ಲ, ಆದ್ದರಿಂದ ನಾವು ವಿಧಿಯಿಲ್ಲದೆ ಮದ್ಯವನ್ನು ತಯಾರಿಸುತ್ತೇವೆ. ಮದ್ಯ ತಯಾರಿಸಿದರಷ್ಟೇ ನಾವು ಬದುಕಲು ಸಾಧ್ಯ. ಮದ್ಯ ತಯಾರಿಸದಿದ್ದರೆ, ನಾವು ಸಾಯುತ್ತೇವೆ.”
ಭದ್ರತಾ ಕಾರಣಗಳಿಗಾಗಿ, ವರದಿಯಲ್ಲಿನ ಜನರು ಮತ್ತು ಸ್ಥಳಗಳ ಹೆಸರುಗಳನ್ನು ಬದಲಾಯಿಸಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು