“ನಾನು ಸತ್ತರೂ ಪರವಾಗಿಲ್ಲ, ಆದರೆ ಈ ಆಸ್ಪತ್ರೆ ಬಿಲ್ ನಮ್ಮಿಂದ ಭರಿಸಲು ಸಾಧ್ಯವಿಲ್ಲ.” ಹೀಗೆಂದು ಹರಿಶ್ಚಂದ್ರ ಧಾವರೆ ತನ್ನ ಪತ್ನಿ ಜಯಶ್ರೀ ಬಳಿ ಸಾಯುವ ಎರಡು ದಿನದ ಮೊದಲು ಹೇಳಿದ್ದರು. 48ರ ಹರೆಯದ ಈ ಪತ್ರಕರ್ತರ ಆರೋಗ್ಯವು ಕೋವಿಡ್-19ರಿಂದ ಗಂಭೀರವಾಗಿ ಹದಗೆಟ್ಟು ಅವರಿಗೆ ವೆಂಟಿಲೇಟರ್ ಆಳವಡಿಸಲಾಗಿತ್ತು.
ಆ ಸಮಯದಲ್ಲೂ ಅವರು ತನ್ನ ಸ್ವಂತ ಜೀವಕ್ಕಾಗಿ ಕಾಳಜಿ ಮಾಡುತ್ತಿರಲಿಲ್ಲ. ಬದಲಿಗೆ ಆಸ್ಪತ್ರೆ ಬಿಲ್ಲು ಹೇಗೆ ಕಟ್ಟುವುದೆಂದು ಚಿಂತಿಸುತ್ತಿದ್ದರು. “ಅವರು ಮನೆಗೆ ಹೋಗೋಣವೆಂದು ನನ್ನೊಡನೆ ಜಗಳ ಮಾಡಿ ಅತ್ತಿದ್ದರು” ಎಂದು ನೆನಪಿಸಿಕೊಳ್ಳುತ್ತಾರೆ 38 ವರ್ಷದ ಜಯಶ್ರೀ.
2021ರ ಮಾರ್ಚ್ ತಿಂಗಳ ಕೊನೆಯಲ್ಲಿ ಹರಿಶ್ಚಂದ್ರರಿಗೆ ಕೊರೊನಾ ವೈರಸ್ ಸೋಂಕು ಉಂಟಾದಾಗ ಅವರ ಇಪ್ಪತ್ತು ವರ್ಷಗಳ ಪತ್ರಿಕಾ ವೃತ್ತಿ ಅವರ ಸಹಾಯಕ್ಕೆ ಬರಲಿಲ್ಲ. ಬದಲಿಗೆ ಅವರ ಕೆಲಸದಿಂದಲೇ ಅವರು ಅಪಾಯಕ್ಕೆ ಈಡಾಗಿದ್ದರು.
ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯ ಸುದ್ದಿ ಸಂಸ್ಥೆಗಳಲ್ಲಿ 2001ರ ಆರಂಭದಿಂದಲೂ ಕೆಲಸ ಮಾಡುತ್ತಿದ್ದ ವರದಿಗಾರರಾಗಿದ್ದ, ಹರಿಶ್ಚಂದ್ರ ಕೊನೆಯ ದಿನಗಳಲ್ಲಿ ಮರಾಠಿ ದೈನಿಕ ರಾಜಧರ್ಮದಲ್ಲಿದ್ದರು. "ಅವರು ಕೋವಿಡ್-19ರ ಎರಡನೇ ಅಲೆಯ ಬಗ್ಗೆ ವರದಿ ಮಾಡುತ್ತಿದ್ದರು. ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸುವುದು ಮತ್ತು ವರದಿಗಾಗಿ ಕ್ಷೇತ್ರ ಭೇಟಿಗಳಿಗೂ ಹೋಗುತ್ತಿದ್ದರು' ಎನ್ನುತ್ತಾರೆ ಜಯಶ್ರೀ. "ಅವರು ಹೊರಗೆ ಹೋದಾಗಲೆಲ್ಲಾ ನಮಗೆ ಚಿಂತೆಯಾಗುತ್ತಿತ್ತು. ಯಾಕೆಂದರೆ ಅವರಿಗೆ ಹೈ ಶುಗರ್ [ಮಧುಮೇಹ] ಮತ್ತು ರಕ್ತದೊತ್ತಡವಿತ್ತು. ಆದರೆ ಅವರು ತಾನು ಕೆಲಸಕ್ಕೆ ಹೋಗಲೇಬೇಕಿದೆ ಎನ್ನುತ್ತಿದ್ದರು."
ಮಾರ್ಚ್ 22ರಂದು, ಧಾವೆರ್ ಅವರಲ್ಲಿ ಕೋವಿಡ್ ರೋಗಲಕ್ಷಣಗಳು ಕಾಣಲು ಪ್ರಾರಂಭವಾಯಿತು. ಅವರು ಮೈ-ಕೈ ನೋವು ಮತ್ತು ಜ್ವರದಿಂದ ಬಳಲುತ್ತಿದ್ದರು. “ಅವರ ಆರೋಗ್ಯದ ಸ್ಥಿತಿ ಸುಧಾರಿಸದಿದ್ದಾಗ ಪಟ್ಟಣದ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು' ಎನ್ನುತ್ತಾರೆ ಜಯಶ್ರೀ. ಅಲ್ಲಿ ವರದಿ ಪಾಸಿಟಿವ್ ಬಂದ ನಂತರ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. "ಅಲ್ಲಿನ ಸೌಲಭ್ಯಗಳು ಉತ್ತಮವಾಗಿರಲಿಲ್ಲ, ಮತ್ತು ಅವರ ಆರೋಗ್ಯದ ಪ್ರಗತಿ ತೃಪ್ತಿಕರವಾಗಿರಲಿಲ್ಲ" ಎಂದು ಜಯಶ್ರೀ ಮುಂದುವರಿದು ಹೇಳುತ್ತಾರೆ. ಆದ್ದರಿಂದ ಮಾರ್ಚ್ 31ರಂದು, ಕುಟುಂಬವು ಅವರನ್ನು ಅಲ್ಲಿಂದ 60 ಕಿಲೋಮೀಟರ್ ದೂರದಲ್ಲಿರುವ ಸೋಲಾಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿತು.
ಅಲ್ಲಿ ಆರು ದಿನಗಳನ್ನು ಕಳೆದ ನಂತರ, ಧಾವರೆ ಎಪ್ರಿಲ್ 6ರಂದು ನಿಧನ ಹೊಂದಿದರು.
ಆಸ್ಪತ್ರೆ 4 ಲಕ್ಷ ರೂಪಾಯಿ ಬಿಲ್ ನೀಡಿತ್ತು. ಹರಿಶ್ಚಂದ್ರ ಅವರ ಮರಣದ ಸಮಯದಲ್ಲಿ ಅವರ ಮಾಸಿಕ ವೇತನ 4000 ರೂಪಾಯಿಗಳಿದ್ದವು. ಜಯಶ್ರೀ ಪತಿ ನಿಧನರಾದ ನಂತರ ಆಕೆಯ ಚಿನ್ನದ ಆಭರಣಗಳನ್ನು 1 ಲಕ್ಷ ರೂ.ಗೆ ಮಾರಾಟ ಮಾಡಿದರು. "ಸಂಬಂಧಿಕರು ನನಗೆ ಸ್ವಲ್ಪ ಹಣವನ್ನು ಸಾಲವಾಗಿ ನೀಡಿದರು. ಒಸ್ಮಾನಾಬಾದ್ ನ ಪತ್ರಕರ್ತರು ಕೂಡ ಒಂದಿಷ್ಟು ಹಣ [ರೂ. 20,000] ನೀಡಿ ನನಗೆ ಸ್ವಲ್ಪ ಸಹಾಯವನ್ನೂ ಮಾಡಿದರು" ಎಂದು ಅವರು ಹೇಳುತ್ತಾರೆ. "ಆದರೆ ನಾವು ಕುಟುಂಬದ ಏಕೈಕ ಸಂಪಾದಿಸುವ ಸದಸ್ಯರನ್ನು ಕಳೆದುಕೊಂಡಿದ್ದೇವೆ, ಈಗ ಸಾಲವನ್ನು ಹೇಗೆ ಮರುಪಾವತಿ ಮಾಡಬೇಕೆಂದು ನನಗೆ ತಿಳಿಯುತ್ತಿಲ್ಲ."
ಹರಿಶ್ಚಂದ್ರ ಅವರ ವಾರ್ಷಿಕ ಆದಾಯ ಸುಮಾರು ಒಂದು ಲಕ್ಷ ರೂ.ಗಳವರೆಗೆ ಇತ್ತು. ಅದರಲ್ಲಿ, ಅವರ ಸಂಬಳದ ಜೊತೆ ಅವರು ಪತ್ರಿಕೆಗೆ ತಂದ ಜಾಹೀರಾತುಗಳ ಮೇಲೆ ಸಿಗುವ ಶೇಕಡಾ 40ರಷ್ಟು ಕಮಿಷನ್ ಸೇರಿದೆ. ಜಯಶ್ರೀಯವರು ತಮ್ಮ ಮನೆಯಲ್ಲೇ ಬಿಸ್ಕತ್ತು, ಚಿಪ್ಸ್ ಮತ್ತು ಮೊಟ್ಟೆಗಳನ್ನು ಮಾರಾಟ ಮಾಡುವ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದಾರೆ. "ಆ ವ್ಯಾಪಾರದಿಂದ ಏನೂ ಸಿಗುವುದಿಲ್ಲ", ಎಂದು ಅವರು ಹೇಳುತ್ತಾರೆ. ಅವರು ಜೊತೆಗೆ ಬ್ಯೂಟಿ ಪಾರ್ಲರ್ ಸಹ ನಡೆಸುತ್ತಿದ್ದರು, ಆದರೆ ಕೋವಿಡ್ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಯಾವುದೇ ವ್ಯವಹಾರ ನಡೆಯುತ್ತಿಲ್ಲ.
ನವ ಬೌದ್ಧ ಸಮುದಾಯಕ್ಕೆ ಸೇರಿದ ಧಾವರೆ ಕುಟುಂಬವು ಮಹಾತ್ಮಾ ಜ್ಯೋತಿರಾವ್ ಫುಲೆ ಜನ ಆರೋಗ್ಯ ಯೋಜನೆ (ಎಂಜೆಪಿಜೆಎವೈ) ಅಡಿಯಲ್ಲಿ ಆರೋಗ್ಯ ವಿಮೆಗೆ ಅರ್ಹವಾಗಿದೆ- ಇದು ವಾರ್ಷಿಕ 1 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ವೈದ್ಯಕೀಯ ವೆಚ್ಚಗಳನ್ನು (ರೂ.2.5 ಲಕ್ಷದವರೆಗೆ) ಭರಿಸುವ ರಾಜ್ಯ ಸರ್ಕಾರದ ಯೋಜನೆಯಾಗಿದೆ. ಇದು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರನ್ನೂ ಒಳಗೊಂಡಿದೆ. ಈ ಯೋಜನೆಯಡಿ, ಆಸ್ಪತ್ರೆಯು ರೋಗಿಗೆ ಚಿಕಿತ್ಸೆ ನೀಡುತ್ತದೆ, ಆದರೆ ರಾಜ್ಯ ಸರ್ಕಾರಕ್ಕೆ ಬಿಲ್ ಕಳಿಸುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಸ್ಪತ್ರೆಯು ಹರಿಶ್ಚಂದ್ರರನ್ನು ವೇಟಿಂಗ್ ಲಿಸ್ಟಿನಲ್ಲಿ ಇರಿಸಿದೆ ಎಂದು ಕೊರೊನಾ ವೈರಸ್ ಸೋಂಕಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಶ್ರೀ ಹೇಳಿದರು ಮತ್ತು ಅವರು ಕೂಡಾ ಒಸ್ಮಾನಾಬಾದ್ ನ ಸಿವಿಲ್ ಆಸ್ಪತ್ರೆಯಲ್ಲಿ ಮೂರು ದಿನಗಳನ್ನು ಕಳೆದರು. "ಈ ಮಧ್ಯೆ ಅವರಿಗೆ ಚಿಕಿತ್ಸೆ ನೀಡುವಂತೆ ನಾವು ಅವರಿಗೆ ಹೇಳಿದೆವು. ಆದರೆ ಅರ್ಜಿ ಯನ್ನು ಪ್ರಕ್ರಿಯೆಮಾಡುವ ಮೊದಲೇ ಅವರು ನಿಧನರಾದರು. ಅವರು ಉದ್ದೇಶಪೂರ್ವಕವಾಗಿ ಅರ್ಜಿಯನ್ನು ವಿಳಂಬಮಾಡಿದರು ಎಂದು ನನಗನ್ನಿಸುತ್ತದೆ." ಹರಿಶ್ಚಂದ್ರ ಅವರು ಮೃತಪಟ್ಟ ದಿನ ಜಯಶ್ರೀಯವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಈ ವರ್ಷದ ಫೆಬ್ರವರಿಯಲ್ಲಿ ಕೋವಿಡ್-19ರ ಎರಡನೇ ಅಲೆ ಪ್ರಾರಂಭವಾದಾಗಿನಿಂದ ದೇಶಾದ್ಯಂತ ಪತ್ರಕರ್ತರ ಸುರಕ್ಷತೆಯ ವಿಷಯ, ವಿಶೇಷವಾಗಿ ಕ್ಷೇತ್ರ ವರದಿಗಾರರ ವಿಷಯವು ಚರ್ಚೆಯಲ್ಲಿದೆ. ಕೇಂದ್ರ ಸರ್ಕಾರವು ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಿಲ್ಲವಾದರೂ, ಒಡಿಶಾ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರದಂತಹ ರಾಜ್ಯಗಳು ಪತ್ರಕರ್ತರನ್ನು ಈ ವರ್ಗಕ್ಕೆ ಸೇರಿಸಿವೆ ಮತ್ತು ಆದ್ಯತೆಯ ಮೇಲೆ ಲಸಿಕೆ ನೀಡುತ್ತಿವೆ.
ಆದರೆ, ಮಹಾರಾಷ್ಟ್ರದಲ್ಲಿ, ಕೆಲವು ಕ್ಯಾಬಿನೆಟ್ ಸಚಿವರು ಸೇರಿದಂತೆ ರಾಜ್ಯ ಸರ್ಕಾರದೆದುರು ನಡೆಸಿದ ಪ್ರತಿಭಟನೆಗಳು ಮತ್ತು ಸಲ್ಲಿಸಿದ ಮನವಿಗಳ ಹೊರತಾಗಿಯೂ - ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪತ್ರಕರ್ತರನ್ನು ಆದ್ಯತೆಯ ವರ್ಗಕ್ಕೆ ಸೇರಿಸಿಲ್ಲ.
ಮಹಾರಾಷ್ಟ್ರದ ಸುಮಾರು 8,000 ಪತ್ರಕರ್ತರ ಒಕ್ಕೂಟವಾದ ಮರಾಠಿ ಪತ್ರಕಾರ್ ಪರಿಷತ್ ನ ಮುಖ್ಯ ಟ್ರಸ್ಟಿ ಎಸ್.ಎಮ್. ದೇಶಮುಖ್ ಹೇಳುವಂತೆ, "ಆಗಸ್ಟ್ 2020 ಮತ್ತು ಮೇ 2021ರ ನಡುವೆ ರಾಜ್ಯದಲ್ಲಿ 132 ಪತ್ರಕರ್ತರು ನಿಧನರಾಗಿದ್ದಾರೆ." ಆದರೆ ಇದು ಸರಿಯಾದ ಅಂದಾಜಲ್ಲ ಎಂದು ಗ್ರಾಮೀಣ ಪ್ರದೇಶಗಳಲ್ಲಿನ ವರದಿಗಾರರು ಹೇಳುತ್ತಾರೆ - ಪಟ್ಟಿಯಿಂದ ಹೆಚ್ಚು ಪ್ರಸಿದ್ಧವಲ್ಲದ ಸ್ಥಳೀಯ ಸುದ್ದಿ ಸಂಸ್ಥೆಗಳ ವರದಿಗಾರರ ಹೆಸರುಗಳು ಬಿಟ್ಟು ಹೋಗಿರಬಹುದೆಂದು ಅವರು ಹೇಳುತ್ತಾರೆ.
"ಗ್ರಾಮೀಣ ಪ್ರದೇಶಗಳ ಕೆಲವು ಪ್ರಕರಣಗಳ ಮಾಹಿತಿ ನನಗೆ ತಲುಪದಿರುವ ಸಾಧ್ಯತೆಯಿದೆ" ಎಂದು ದೇಶಮುಖ್ ಒಪ್ಪಿಕೊಳ್ಳುತ್ತಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ ಸುಮಾರು 6,000 ಪತ್ರಕರ್ತರು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಆದರೆ ಅವರೆಲ್ಲರೂ ಎಂಪಿಪಿ ಸದಸ್ಯರಲ್ಲ ಎಂದು ಅವರು ಹೇಳುತ್ತಾರೆ. "ಹಲವಾರು ಪ್ರಕರಣಗಳಲ್ಲಿ, ಪತ್ರಕರ್ತರು ಚೇತರಿಸಿಕೊಂಡರೂ, ಅವರ ಕುಟುಂಬ ಸದಸ್ಯರು ಮರಣ ಹೊಂದಿದ್ದಾರೆ."
ಮೇ 11ರಂದು ಮಹಾರಾಷ್ಟ್ರದ 90 ಪತ್ರಕರ್ತರು ಮುಂಚೂಣಿ-ಕಾರ್ಯಕರ್ತರ ಸ್ಥಾನಮಾನದ ಬೇಡಿಕೆಯನ್ನು ತೀವ್ರಗೊಳಿಸಲು ಆನ್ ಲೈನ್ ಸಭೆಯಲ್ಲಿ ಭಾಗವಹಿಸಿದ್ದರು. ಕೋವಿಡ್-19 ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಹರಡಿರುವುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಪತ್ರಕರ್ತರ ಸುರಕ್ಷತೆಯು ಈಗ ಹೆಚ್ಚು ಅಪಾಯದಲ್ಲಿದೆ, ಏಕೆಂದರೆ ಹತ್ತಿರದಲ್ಲೇ ಉತ್ತಮ ಆರೋಗ್ಯ ಆರೈಕೆ ಸಿಗುವ ಸಾಧ್ಯತೆಗಳು ಕಡಿಮೆಯಿರಬಹುದು.
ನವದೆಹಲಿ ಮೂಲದ ಇನ್ ಸ್ಟಿಟ್ಯೂಟ್ ಆಫ್ ಪರ್ಸೆಪ್ಷನ್ ಸ್ಟಡೀಸ್ ಭಾರತದಲ್ಲಿ ಕೋವಿಡ್-19ರಿಂದ ಸಂಭವಿಸಿದ ಪತ್ರಕರ್ತರ ಸಾವುಗಳ ಬಗ್ಗೆ ನಡೆಸಿದ ಸಂಶೋಧನೆಯ ಪ್ರಕಾರ, ಏಪ್ರಿಲ್ 1, 2020 ಮತ್ತು ಮೇ 12, 2021ರ ನಡುವಿನ 219 ಸಾವುಗಳಲ್ಲಿ 138 ಸಾವುಗಳು ಮೆಟ್ರೋ ನಗರಗಳಲ್ಲದ ಪ್ರದೇಶಗಳಲ್ಲಿ ಸಂಭವಿಸಿದೆ.
ಗ್ರಾಮೀಣ ಭಾರತದ ಪತ್ರಕರ್ತರು ಯಾವುದೇ ಗೌರವ, ಗುರುತಿಸುವಿಕೆಗಳಿಲ್ಲದೆ, ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಾ ಶ್ರಮಿಸುತ್ತಾರೆ. ಅವರನ್ನು ಮೊದಲಿನಿಂದಲೂ ನಿರ್ಲಕ್ಷಿಸುತ್ತಲೇ ಬರಲಾಗಿದೆಯೆಂದು ಒಸ್ಮಾನಾಬಾದ್ನ 37 ವರ್ಷದ ಪತ್ರಕರ್ತ ಸಂತೋಷ್ ಜಾದವ್ ಹೇಳುತ್ತಾರೆ. " ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಮತ್ತು ಪತ್ರಕರ್ತರನ್ನು ಕೋವಿಡ್ ಯೋಧರು ಎಂದು ವೈಭವೀಕರಿಸಲಾಗುತ್ತದೆ. ಸುದ್ದಿಗಾರಿಕೆಯನ್ನು ಅತ್ಯಗತ್ಯ ಸೇವೆಯೆಂದೂ ಕರೆಯಲಾಗುತ್ತದೆ, ಆದರೆ ಲಸಿಕೆಗಳ ವಿಷಯ ಬಂದಾಗ ನಮಗೆ ಆದ್ಯತೆ ಸಿಗುವುದಿಲ್ಲ" ಎಂದು ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮರಾಠಿ ದೂರದರ್ಶನ ಚಾನೆಲ್ ಗೆ ವರದಿ ಮಾಡುವ ಜಾಧವ್ ಹೇಳುತ್ತಾರೆ. "ನಾವು ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ನಾವು ಸರಿಯಾದ ಮಾಹಿತಿಯನ್ನು ಪ್ರಸಾರ ಮಾಡಬೇಕೆಂದು ನಿರೀಕ್ಷಿಸಲಾಗುತ್ತದೆ. ನಾವು ಇತರರ ಕಾಳಜಿಗಳಿಗೆ ಧ್ವನಿಯಾಗುತ್ತೇವೆ. ಆದರೆ ಪತ್ರಕರ್ತರ ಸಮಸ್ಯೆಗಳನ್ನು ಯಾರೂ ಕೇಳುತ್ತಿಲ್ಲ."
ಜಾಧವ್ ಅವರಂತಹ ಪತ್ರಕರ್ತರ ಸ್ಥಿತಿ ಬಹಳ ಕೆಟ್ಟದಾಗಿದೆ. "ನೀವು ಮುಂಬೈ ಅಥವಾ ದೆಹಲಿಯಲ್ಲಿದ್ದರೆ, ನಿಮ್ಮ ಧ್ವನಿ ಗಣನೆಗೆ ಬರುತ್ತದೆ. ಈ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ವರದಿಗಾರರನ್ನು ರಕ್ಷಿಸಲು ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳು ಏನು ಮಾಡಿವೆ? ಎಷ್ಟು ಸಂಪಾದಕರು ತಮ್ಮ ವರದಿಗಾರರಿಗೆ ಭರವಸೆ ನೀಡಿದ್ದಾರೆ? ಆದ್ಯತೆಯ ಆಧಾರದ ಮೇಲೆ ಎಷ್ಟು ಜನರು ತಮ್ಮ ವರದಿಗಾರರ ಲಸಿಕೆಗಾಗಿ ಪ್ರಚಾರ ಅಭಿಯಾನ ಮಾಡಿದ್ದಾರೆ?" ಎಂದು ಅವರು ಕೇಳುತ್ತಾರೆ. "ಗ್ರಾಮೀಣ ಪ್ರದೇಶದ ವರದಿಗಾರರಿಗೆ ಯೋಗ್ಯ ಸಂಬಳ ಸಿಗುವುದಿಲ್ಲ. ಅವರು ಸತ್ತರೆ ಅವರ ಮಕ್ಕಳ ಗತಿ ಏನಾಗಬೇಕು?"
ಕೋವಿಡ್-19 ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಹರಡಿರುವುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಪತ್ರಕರ್ತರ ಸುರಕ್ಷತೆಯು ಈಗ ಹೆಚ್ಚು ಅಪಾಯದಲ್ಲಿದೆ, ಏಕೆಂದರೆ ಹತ್ತಿರದಲ್ಲೇ ಉತ್ತಮ ಆರೋಗ್ಯ ಆರೈಕೆ ಸಿಗುವ ಸಾಧ್ಯತೆಗಳು ಕಡಿಮೆಯಿರಬಹುದು.
ಧಾವರೆ ಅವರ ಮಗಳು, 18 ವರ್ಷದ ವಿಶಾಖಾ 12ನೇ ತರಗತಿಯಲ್ಲಿ ಓದುತ್ತಿದ್ದು ಅವರು ವೈದ್ಯರಾಗಬೇಕೆಂದು ಅಂದುಕೊಂಡಿದ್ದಾರೆ ಆದರೆ ಈಗದು ಅನಿಶ್ಚಿತವಾಗಿದೆ. "ನಾನು ಅವಳ ಶಿಕ್ಷಣದ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ" ಎಂದು ಜಯಶ್ರೀ ಹೇಳುತ್ತಾರೆ. ವಿಶಾಖಾ ಅಮ್ಮನ ಮುಖ ನೋಡುತ್ತಿದ್ದರು.
ವಿಶಾಖ (ಮುಖಪುಟದ ಫೋಟೋದಲ್ಲಿ, ಕನ್ನಡಕ ಧರಿಸಿರುವವರು) ತನ್ನ ತಂದೆ ಸಾಯುವ ನಾಲ್ಕು ದಿನಗಳ ಮೊದಲು ವೀಡಿಯೊ ಕರೆ ಮಾಡಿದಾಗ ತನ್ನೊಂದಿಗೆ ಹರಟೆ ಹೊಡೆದಿದ್ದನ್ನು ನೆನಪಿಸಿಕೊಳ್ಳುತ್ತಾರೆ. "ಏಪ್ರಿಲ್ 2ರಂದು ಅವರ ಜನ್ಮದಿನವಾಗಿತ್ತು" ಎಂದು ಅವರು ಹೇಳುತ್ತಾರೆ. "ನಾನು ಅವರಿಗೆ ಶುಭ ಹಾರೈಸಲು ಕರೆ ಮಾಡಿದ್ದೆ. ಅವರು ನನಗೆ ಓದಿನ ಮೇಲೆ ಗಮನ ಕೇಂದ್ರೀಕರಿಸಲು ಹೇಳಿದರು ಮತ್ತು ಅವರು ಇಲ್ಲದಿದ್ದರೂ ನಾನು ಓದುವುದನ್ನು ನಿಲ್ಲಿಸಬಾರದೆಂದು ಹೇಳಿದ್ದರು. ಅವರಿಗೆ ನನ್ನನ್ನು ಸಾಧ್ಯವಿರುವಷ್ಟು ಓದಿಸುವ ಬಯಕೆಯಿತ್ತು"
ಮಗಳ ಶಿಕ್ಷಣದ ಮುಂದುವರಿಕೆಯ ಜೊತೆಗೆ, ಜಯಶ್ರೀಯವರು ಆಸ್ಪತ್ರೆಯ ಬಿಲ್ ಪಾವತಿಸಲು ಮಾಡಿದ ಸಾಲದ ಬಗ್ಗೆ ಚಿಂತಿತರಾಗಿದ್ದಾರೆ. "ನನ್ನ ಸಂಬಂಧಿಕರು ಹಣವನ್ನು ಕೇಳದಿರುವಷ್ಟು ಒಳ್ಳೆಯವರು, ಆದರೆ ಇದು ಬಹಳ ಕೆಟ್ಟ ಸಮಯ ಪ್ರತಿಯೊಬ್ಬರೂ ಹಣಕ್ಕಾಗಿ ಹೆಣಗಾಡುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ. "ನಾನು ನನ್ನ ಸಾಲವನ್ನು ಮರುಪಾವತಿಮಾಡಬೇಕಾಗಿದೆ, ಆದರೆ ಹೇಗೆಂದು ನನಗೆ ತಿಳಿದಿಲ್ಲ. ಎಲ್ಲ ಜವಬ್ದಾರಿಯೂ ನನ್ನ ತಲೆಯ ಮೇಲಿದೆ ಈಗ."
ಒಸ್ಮಾನಾಬಾದ್ನ ಕೆಲವು ಪತ್ರಕರ್ತರು ಆರ್ಥಿಕ ಬಿಕ್ಕಟ್ಟಿನಲ್ಲಿ ಕುಟುಂಬವನ್ನು ಬಿಟ್ಟು ಹೋಗುವ ಅಪಾಯಕ್ಕಿಂತ ಸುದ್ದಿ ಕ್ಷೇತ್ರದಿಂದ ದೂರವಿರುವುದು ಉತ್ತಮವೆನ್ನುವ ಭಾವನೆಯಲ್ಲಿದ್ದಾರೆ.
6 ಮತ್ತು 4 ವರ್ಷದ ಇಬ್ಬರು ಮಕ್ಕಳನ್ನು ಹೊಂದಿರುವ ಜಾಧವ್ ಫೆಬ್ರವರಿಯಲ್ಲಿ ಕೋವಿಡ್ ಎರಡನೇ ಅಲೆ ಪ್ರಾರಂಭವಾದಾಗಿನಿಂದ ಹೊರಗೆ ಹೋಗುತ್ತಿಲ್ಲ. ಅವರು 2020ರ ಮೊದಲ ಅಲೆಯ ಸಮಯದಲ್ಲಿ ಮನೆಯಿಂದ ಹೊರಗೆ ವರದಿ ಮಾಡಲು ಹೋಗಿ ದೊಡ್ಡ ಬೆಲೆ ಯನ್ನು ತೆತ್ತಿದ್ದಾರೆ. "ನನ್ನ ತಾಯಿ ನನ್ನಿಂದಾಗಿ ಮರಣ ಹೊಂದಿದರು" ಎಂದು ಅವರು ಹೇಳುತ್ತಾರೆ. "ನಾನು ಜುಲೈ 11ರಂದು ಕೊರೋನಾ ಪಾಸಿಟಿವ್ ಆಗಿದ್ದೆ. ಅದರ ನಂತರ ಅವರು ಸೋಂಕಿಗೆ ಒಳಗಾದರು. ನಾನು ಚೇತರಿಸಿಕೊಂಡೆ, ಆದರೆ ಅವರು ಚೇತರಿಸಿಕೊಳ್ಳಲಿಲ್ಲ. ಅವರ ಅಂತ್ಯಕ್ರಿಯೆಗೂ ನಾನು ಅಲ್ಲಿರಲು ಸಾಧ್ಯವಾಗಲಿಲ್ಲ. ಈಗ ಮತ್ತೆ ಹೊರಗೆ ಕಾಲಿಡುವ ಧೈರ್ಯ ವಿಲ್ಲ" ಎಂದು ಹೇಳಿದರು. ಅವರು ಒಸ್ಮಾನಾಬಾದ್ ಜಿಲ್ಲೆಯ ವಿವಿಧ ಭಾಗಗಳಲ್ಲಿನ ತಮ್ಮ ಸಂಪರ್ಕಗಳನ್ನು ವೀಡಿಯೊಗಳಿಗಾಗಿ ಮೂಲವಾಗಿಸಿಕೊಂಡಿದ್ದಾರೆ. "ನಾನು ಪ್ರಮುಖ ಸಂದರ್ಶನ ಅಥವಾ ತುಣುಕನ್ನು ಶೂಟ್ ಮಾಡಲು ಇದ್ದಾಗ ಮಾತ್ರ ಹೊರಗೆ ಕೆಮೆರಾದೊಡನೆ ಹೊರಡುತ್ತೇನೆ."
ಆದರೆ ೩೯ ವರ್ಷದ ದಾದಾಸಾಹೇಬ್ ಬಾನ್ ಸ್ಥಳದಿಂದ ವರದಿ ಮಾಡಲು ಆದ್ಯತೆ ನೀಡಿದರು. ಬೀಡ್ ಜಿಲ್ಲೆಯ ಆಷ್ಟಿ ತಾಲ್ಲೂಕಿನ ಕಸಾರಿ ಗ್ರಾಮದ ಮುದ್ರಣ ಮಾಧ್ಯಮದ ಪತ್ರಕರ್ತರಾದ ಅವರು ಜಿಲ್ಲೆಯ ಮರಾಠಿ ದೈನಿಕ ಲೋಕಶಾಗೆ ಬರೆಯುತ್ತಿದ್ದರು. ಅವರು ತಮ್ಮ ವರದಿಗಳಿಗಾಗಿ ದ್ವಿತೀಯ ಮೂಲಗಳನ್ನು ಅವಲಂಬಿಸುವ ಬಗ್ಗೆಯೂ ಯೋಚಿಸಲಿಲ್ಲ.
"ಅವರು ಆಸ್ಪತ್ರೆಗಳು, ಪರೀಕ್ಷಾ ಕೇಂದ್ರಗಳು ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು ಮತ್ತು ವಾಸ್ತವ ಪರಿಸ್ಥಿತಿಯ ಬಗ್ಗೆ ಬರೆಯುತ್ತಿದ್ದರು" ಎಂದು ಅವರ ಪತ್ನಿ 34 ವರ್ಷದ ಮೀನಾ ಹೇಳುತ್ತಾರೆ. "ಹೊಸ ಅಲೆಯ ಕುರಿತು ವರದಿ ಮಾಡುವಾಗ ಅವರು ಮಾರ್ಚ್ ಕೊನೆಯಲ್ಲಿ ಸೋಂಕಿಗೆ ಒಳಗಾದರು."
ಬಾನ್ ಅವರ ಕುಟುಂಬವು ಅವರನ್ನು ಕಸಾರಿಯಿಂದ 60 ಕಿಲೋಮೀಟರ್ ದೂರದಲ್ಲಿರುವ ಅಹ್ಮದ್ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿತು. ”ಆದರೆ ಅವರ ಆರೋಗ್ಯ ಸುಧಾರಿಸಲಿಲ್ಲ” ಎನ್ನುತ್ತಾರೆ ಮೀನಾ. "ಅವರ ದೇಹದಲ್ಲಿ ಆಮ್ಲಜನಕದ ಮಟ್ಟ ವು 80 ಇಳಿದಿತ್ತು. ಅವರ ಸ್ಥಿತಿ ಇನ್ನಷ್ಟು ಹದಗೆಡುತ್ತಲೇ ಇತ್ತು."
ನಾಲ್ಕು ದಿನಗಳ ನಂತರ, ಯಾವುದೇ ಇತರ ಕಾಯಿಲೆಗಳಿಲ್ಲದ (ಕೋಮೊರ್ಬಿಡಿಟಿಗಳಿಲ್ಲದ) ಬಾನ್ ಕೋವಿಡ್-19ಕ್ಕೆ ಬಲಿಯಾದರು. "ನಾವು ಆಸ್ಪತ್ರೆಯ ಶುಲ್ಕಗಳು ಮತ್ತು ಔಷಧಿಗಳಿಗಾಗಿ ಒಂದು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ" ಎಂದು ಬಾನ್ ಅವರ ಸೋದರಳಿಯ 35 ವರ್ಷದ ದಿಲೀಪ್ ಗಿರಿ ಹೇಳುತ್ತಾರೆ. "ಆಸ್ಪತ್ರೆಯ ಬಿಲ್ ಪಾವತಿಸಲು ನಾವು ಸ್ನೇಹಿತರು ಮತ್ತು ಸಂಬಂಧಿಕರಿಂದ ಹಣವನ್ನು ಸಾಲ ಪಡೆದಿದ್ದೇವೆ. ನನ್ನ ಮಾವನಿಗೆ ತಿಂಗಳಿಗೆ 7,000-8,000 ರೂ.ಗಿಂತ ಹೆಚ್ಚು ಸಂಪಾದಿನೆಯಿದ್ದಿರಲಿಲ್ಲ. ನಮ್ಮಲ್ಲಿ ಅಂತಹ ಉಳಿತಾಯವೂ ಇರಲಿಲ್ಲ."
ಬೀಡ್ ಸೇರಿದಂತೆ ರಾಜ್ಯದ ೧೪ ಕೃಷಿ ಸಂಕಷ್ಟದಲ್ಲಿರುವ ಜಿಲ್ಲೆಗಳ ರೈತ ಕುಟುಂಬಗಳನ್ನು ಒಳಗೊಂಡಿರುವ ಎಂಜೆಪಿಜೆಎವೈ ಅಡಿಯಲ್ಲಿ ಬಾನ್ ಅವರಿಗೆ ಚಿಕಿತ್ಸೆ ನೀಡಬಹುದಿತ್ತು. ಬಾನ್ ಅವರ ಕುಟುಂಬವು ಅವರ ಹಳ್ಳಿಯಲ್ಲಿ ಐದು ಎಕರೆ ಜಮೀನನ್ನು ಹೊಂದಿರುವದರಿಂದ ಅವರು ಕೂಡ ಈ ಯೋಜನೆಗೆ ಅರ್ಹರಾಗಿದ್ದರು.
ಬಾನ್ ಅವರಿಗೆ ಚಿಕಿತ್ಸೆ ನೀಡಿದ ಅಹ್ಮದ್ ನಗರದ ಖಾಸಗಿ ಆಸ್ಪತ್ರೆ ಅವರನ್ನು ಎಂಜೆಪಿಜೆಎವೈ ಅಡಿಯಲ್ಲಿ ಪರಿಗಣಿಸಲು ನಿರಾಕರಿಸಿತು. "ನಾವು ಯೋಜನೆಯ ಪ್ರಯೋಜನವನ್ನು ಪಡೆಯಲು ಬಯಸಿದಲ್ಲಿ ಮತ್ತೊಂದು ಆಸ್ಪತ್ರೆಯನ್ನು ಹುಡುಕುವಂತೆ ಅವರು ನಮಗೆ ಹೇಳಿದರು" ಎಂದು ಮೀನಾ ಹೇಳುತ್ತಾರೆ. "ಆ ಕ್ಷಣದಲ್ಲಿ, ಯೋಗ್ಯ ಆಸ್ಪತ್ರೆಯ ಬಗ್ಗೆ ಯೋಚಿಸಬಹುದೇ ಹೊರತು ಹಣದ ಕುರಿತಾಗಿಯಲ್ಲ. ವಿಪರ್ಯಾಸವೆಂದರೆ ಹಣ ಮತ್ತು ಜೀವ ಎರಡನ್ನೂ ಉಳಿಸಲಾಗಲಿಲ್ಲ"
ಬಾನ್ ಮತ್ತು ಮೀನಾ ಅವರ ಪುತ್ರರಾದ 15 ಮತ್ತು 14 ವರ್ಷದ ಋಷಿಕೇಶ್ ಮತ್ತು ಯಶ್ ಈಗ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಅವರು ಓದಿ ವೈದ್ಯರಾಗಬೇಕೆನ್ನುವುದು ಅವರ ತಂದೆಯ ಬಯಕೆಯಾಗಿತ್ತು.” ಮಕ್ಕಳನ್ನು ಪತ್ರಕರ್ತರನ್ನಾಗಿಸಲು ಅವರು ಉತ್ಸುಕರಾಗಿರಲಿಲ್ಲ” ಎನ್ನುತ್ತಾರೆ ದಿಲೀಪ್. "ಅವರ ಭವಿಷ್ಯ ಈಗ ಅವರ ತಾಯಿಯ ಕೈಯಲ್ಲಿದೆ. ಅವರ ಏಕೈಕ ಆದಾಯದ ಮೂಲವೆಂದರೆ ಕೃಷಿ. ನಾವು ಕೇವಲ ಜೋಳ ಮತ್ತು ಸಜ್ಜೆಯನ್ನು ಮಾತ್ರ ಬೆಳೆಯುತ್ತೇವೆ. ನಾವು ವಾಣಿಜ್ಯ ಬೆಳೆಗಳನ್ನು ಬೆಳೆಯುವುದಿಲ್ಲ," ಎಂದು ಅವರು ಮುಂದುವರೆದು ಹೇಳುತ್ತಾರೆ
ಮೌನವಾಗಿ ಅಕ್ಕ-ಪಕ್ಕ ಕುಳಿತು, ಹದಿಹರೆಯದ ಹುಡುಗರು ನಮ್ಮ ಸಂಭಾಷಣೆಯನ್ನು ಆಲಿಸುತ್ತಿದ್ದರು. "ಅವರು ತಮ್ಮ ತಂದೆಯನ್ನು ಕಳೆದುಕೊಂಡಾಗಿನಿಂದ ಅವರು ಅಸಾಮಾನ್ಯ ರೀತಿಯಲ್ಲಿ ಮೌನಿಗಳಾಗಿದ್ದಾರೆ" ಎಂದು ದಿಲೀಪ್ ಹೇಳುತ್ತಾರೆ. "ಅವರು ತಮಾಷೆಮಾಡುತ್ತಿದ್ದರು, ನಿರಂತರವಾಗಿ ತಂಟೆ ಮಾಡುತ್ತಿದ್ದರು. ಆದರೆ ಈಗ ಆಗೊಮ್ಮೆ ಈಗೊಮ್ಮೆ, ಅವರು ತಮ್ಮ ಪಪ್ಪಾ ಹೋದ ಸ್ಥಳಕ್ಕೆ ತಾವೂ ಹೋಗಬೇಕು ಎನ್ನುತ್ತಾರೆ."
ಅನುವಾದ : ಶಂಕರ ಎನ್ . ಕೆಂಚನೂರು