ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.
ಪಶ್ಚಿಮ ಕಮೆಂಗ್ ಜಿಲ್ಲೆಯ ಲಗಂ ಗ್ರಾಮದ ಅಲೆಮಾರಿ ಪಶುಪಾಲಕ 35 ರ ಸುರಿಂಗ್, "ಜೊ಼ಮೊಗಳು ನಮ್ಮಲ್ಲೀಗ ಬಹಳ ಜನಪ್ರಿಯವಾಗಿವೆ", ಎನ್ನುತ್ತಾರೆ.
ಜೊ಼ಮೊ? ಹಾಗಂದರೇನು? 9,000 ಅಡಿಗಳ ಈ ಎತ್ತರದಲ್ಲಿ ಹಾಗೂ ಅರುಣಾಚಲ ಪ್ರದೇಶದ ಎತ್ತರದ ಪರ್ವತಗಳಲ್ಲಿ ಇವು ಜನಪ್ರಿಯವಾಗಲು ಕಾರಣಗಳೇನು?
ಜೊ಼ಮೊಗಳು ಯಾಕ್ ಮತ್ತು ಕೊಟ್ ಜಾನುವಾರುಗಳ ಮಿಶ್ರ ತಳಿಯಾಗಿದ್ದು, ಎತ್ತರದ ಪ್ರದೇಶಗಳ ಜಾನುವಾರುಗಳಲ್ಲಿ ಇವೂ ಒಂದು. ಜೊ಼ ಎಂದು ಕರೆಯಲ್ಪಡುವ ಗಂಡು ಮಿಶ್ರತಳಿಗೆ ಸಂತಾನಶಕ್ತಿಯಿಲ್ಲದ ಕಾರಣ, ಪಶುಪಾಲಕರು ಜೊ಼ಮೊಗೆ ಪ್ರಾಶಸ್ತ್ಯವನ್ನು ನೀಡುತ್ತಾರೆ. ಇದು ನೂತನ ತಳಿಯಲ್ಲವಾದ್ದರಿಂದ, ಪೂರ್ವ ಹಿಮಾಲಯದಲ್ಲಿನ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ; ಜಾನುವಾರುಗಳನ್ನು ಸಾಕುವ ಬ್ರೊಕ್ಪ ಅರೆ-ಅಲೆಮಾರಿ ಸಮುದಾಯದವರು ಇತ್ತೀಚೆಗೆ ಈ ಪ್ರಾಣಿಗಳನ್ನು ತಮ್ಮ ಗುಂಪಿನಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ.
ತನ್ನ ಮಂದೆಯಲ್ಲಿನ 45 ಪ್ರಾಣಿಗಳಲ್ಲಿ ಯಾಕ್ ಮತ್ತು ಜೊ಼ಮೊಗಳನ್ನು ಸಹ ಹೊಂದಿರುವ 45 ರ ಪೆಂಪ, ಈ ಯಾಕ್-ಹಸುವಿನ ಮಿಶ್ರ ತಳಿಗಳು, "ಧಗೆಯನ್ನು ಸಹಿಸಬಲ್ಲವುಗಳಾಗಿದ್ದು, ಕಡಿಮೆ ಎತ್ತರ ಹಾಗೂ ತಾಪಮಾನದ ಹೆಚ್ಚಳಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತವೆ", ಎನ್ನುತ್ತಾರೆ.
ಈ ಹೆಚ್ಚು ಎತ್ತರದ ಹುಲ್ಲುಗಾವಲುಗಳಲ್ಲಿ, ಶಾಖ ಅಥವ ಧಗೆಯು ವಾಸ್ತವಿಕ ಹಾಗೂ ಸಾಪೇಕ್ಷ ಸಂಗತಿಗಳಾಗಿವೆ. ಇಲ್ಲಿ ಯಾವುದೇ ವರ್ಷದ ಯಾವ ದಿನದಲ್ಲೂ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವುದಿಲ್ಲ. ಆದರೆ -35 ಡಿಗ್ರಿಯನ್ನು ಸಲೀಸಾಗಿ ತಾಳಿಕೊಳ್ಳಬಲ್ಲ ಯಾಕ್‍ಗಳು, ತಾಪಮಾನವು 12 ಅಥವ 13 ಡಿಗ್ರಿಗಳಿಗೆ ಏರಿಕೆಯಾದಲ್ಲಿ ಹೆಣಗಾಡುತ್ತವೆ.
ಮೊನ್ಪ ಎಂಬ ದೊಡ್ಡ ಬುಡಕಟ್ಟು ಗುಂಪಿನ ಅಲೆಮಾರಿ ಪಶುಪಾಲಕರಾದ ಬ್ರೊಕ್ಪ, (2011 ರ ಜನಗಣತಿಯನುಸಾರ ಇವರ ಸಂಖ್ಯೆ ಸುಮಾರು 60,000) ಶತಮಾನಗಳಿಂದಲೂ ಯಾಕ್‍ಗಳನ್ನು ಸಾಕುತ್ತಿದ್ದು, ಪರ್ವತಗಳ ಹುಲ್ಲುಗಾವಲುಗಳಲ್ಲಿ ಅವನ್ನು ಸುತ್ತಾಡಿಸಿ ಉಪಚರಿಸುತ್ತಾರೆ. ಚಳಿಗಾಲವು ತೀವ್ರವಾಗಿದ್ದಾಗ, ಅವರು ಕೆಳಗಿನ ಪ್ರದೇಶಗಳಲ್ಲಿ ವಾಸಿಸುತ್ತಾರಲ್ಲದೆ, ಬೇಸಿಗೆಯಲ್ಲಿ ಎತ್ತರದ ಪ್ರದೇಶಗಳಿಗೆ ವಲಸೆ ಹೋಗುತ್ತವೆ. 9,000 ಮತ್ತು 15,000 ಅಡಿಗಳಷ್ಟು ಎತ್ತರಕ್ಕೆ ಇವು ಚಲಿಸುತ್ತವೆ.
ಆದರೆ ಲಡಾಖ್‍ನ ಛಾಂಗ್ಥಾಂಗ್ ಪ್ರದೇಶದ ಛಾಂಗ್ಪಗಳಂತೆ, ಬ್ರೊಕ್ಪಗಳೂ ಸಹ ಅನಿಯಮಿತ ಹವಾಮಾನದಿಂದಾಗಿ ತೀವ್ರವಾದ ಪರಿಣಾಮಗಳಿಗೆ ಒಳಗಾಗಿದ್ದಾರೆ. ಶತಮಾನಗಳಿಂದಲೂ, ಅವರ ಸಮುದಾಯವು ಜೀವನೋಪಾಯಕ್ಕಾಗಿ, ಯಾಕ್, ಎಮ್ಮೆ ಕೋಣ, ಮೇಕೆ ಮತ್ತು ಕುರಿಗಳ ಸಾಕಾಣಿಕೆಯನ್ನು ಅವಲಂಬಿಸಿತ್ತು. ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ವಲಯಗಳಲ್ಲೂ ಅವರು ಯಾಕ್‍ಗಳನ್ನೇ ಬಹುತೇಕವಾಗಿ ಅವಲಂಬಿಸಿದ್ದರು. ಈಗ ಈ ಅನುಬಂಧವು ದುರ್ಬಲಗೊಳ್ಳುತ್ತಿದೆ.
"ತಾಪಮಾನದಿಂದಾಗಿ ಯಾಕ್‍ಗಳು ಫೆಬ್ರವರಿಯ ಅಂತಿಮ ಭಾಗವು ಪ್ರಾರಂಭಗೊಳ್ಳುತ್ತಿದ್ದಂತೆಯೇ ನಿತ್ರಾಣಗೊಳ್ಳುತ್ತವೆ", ಎನ್ನುತ್ತಾರೆ ಛಂದರ್ (ಸ್ಥಳೀಯವಾಗಿ ಇದನ್ನು ಛಂದೆರ್ ಎಂತಲೂ ಕರೆಯಲಾಗುತ್ತದೆ) ಗ್ರಾಮದ ಪಶುಪಾಲಕಿಯಾದ ಲೆಕಿ ಸುಜು಼ಕ್. ಪಶ್ವಿಮ ಕಮೆಂಗ್‍ನ ದಿರಂಗ್ ಬ್ಲಾಕ್‍ಗೆ ನಾನು ಭೇಟಿಯಿತ್ತಾಗ, ಆಕೆಯ ಕುಟುಂಬದೊಂದಿಗೆ ನೆಲೆಸಿದ್ದೆ. "ಕಳೆದ ಹಲವು ವರ್ಷಗಳಿಂದಲೂ ಬೇಸಿಗೆಯು ದೀರ್ಘವಾಗುತ್ತಿದ್ದು, ತಾಪಮಾನವು ಏರುತ್ತಿದೆ. ಯಾಕ್‍ಗಳು ಶಕ್ತಿಗುಂದಿವೆ", ಎನ್ನುತ್ತಾರೆ 40ರ ಅಂಚಿನಲ್ಲಿರುವ ಲೆಕಿ.

