ಗಣೇಶ್ ಮತ್ತು ಅರುಣ್ ಮುಕನೆ ಈಗ ಶಾಲೆಗೆ ಹೋಗುವಂತಿದ್ದಿದ್ದರೆ ಕ್ರಮವಾಗಿ ಒಂಬತ್ತು ಮತ್ತು ಏಳನೇ ತರಗತಿಯಲ್ಲಿ ಓದುತ್ತಿರಬೇಕಿತ್ತು, ಆದರೆ ಅವರು ಕೊಲೊಶಿಯಲ್ಲಿರುವ ತಮ್ಮ ಮನೆಯಲ್ಲಿ ವ್ಯರ್ಥ ಚಟುವಟಿಕೆಗಳಲ್ಲಿ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಕೊಲೋಶಿ ಮುಂಬೈನ ಹೊರವಲಯದಲ್ಲಿರುವ ಥಾಣೆ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ. ಅವರು ಸುತ್ತಮುತ್ತ ಸಿಗುವ ಕಸವನ್ನು ಸಂಗ್ರಹಿಸಿ ಅದರಿಂದ ಕಾರು ಮತ್ತು ಇತರ ವಸ್ತುಗಳನ್ನು ತಯಾರಿಸುತ್ತಾರೆ ಅಥವಾ ಅಲ್ಲಿ ಇಲ್ಲಿ ಕುಳಿತು ತಮ್ಮ ಸಮಯವನ್ನು ಕಳೆಯುತ್ತಾರೆ. ಅವರ ತಂದೆ-ತಾಯಿ ಇಬ್ಬರೂ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಾರೆ.
“ಅವರು ಈಗ ಶಾಲೆಗೆ ಹೋಗುತ್ತಿಲ್ಲ. ಚಿಕ್ಕವನು [ಅರುಣ] ಯಾವಾಗಲೂ ಗುಜರಿ ವಸ್ತುಗಳು ಮತ್ತು ಮರ ಬಳಸಿ ಬಸ್ಸು ತಯಾರಿಸುತ್ತಿರುತ್ತಾನೆ. ಅವನ ಇಡೀ ದಿನ ಆಟದಲ್ಲೇ ಕಳೆದುಹೋಗುತ್ತದೆ,” ಎನ್ನುತ್ತಾರೆ ನಿರಾ ಮುಕನೆ. “ನಂಗೆ ಶಾಲೆಯಲ್ಲಿ ಬೋರ್ ಆಗುತ್ತೆ ಅಂತ ಎಷ್ಟು ಸಲ ಹೇಳಬೇಕು?” ಎಂದು ಕೇಳುತ್ತಾ ಅಮ್ಮನೊಡನೆ ಒಂದಷ್ಟು ಹೊತ್ತು ಕಿತ್ತಾಡಿದ ಅರುಣ ಮತ್ತೆ ತನ್ನ ಗುಜರಿ ವಸ್ತುಗಳಿಂದ ಮಾಡಿದ ಆಟಿಕೆ ಕಾರನ್ನು ಹುಡುಕಿ ಹೋದ.
26 ವರ್ಷದ ನಿರಾ 7ನೇ ತರಗತಿಯವರೆಗೆ ಓದಿದ್ದಾರೆ, ಆದರೆ ಆಕೆಯ ಪತಿ 35 ವರ್ಷದ ವಿಷ್ಣು 2ನೇ ತರಗತಿಯ ನಂತರ ಶಾಲೆಯನ್ನು ತೊರೆದರು. ಮುಕಾನೆ ದಂಪತಿ ತಮ್ಮ ಮಕ್ಕಳು ಔಪಚಾರಿಕ ಶಿಕ್ಷಣವನ್ನು ಪಡೆಯಬೇಕು ಎಂದು ದೃಢವಾಗಿ ಹೇಳುತ್ತಾರೆ. ಮಕ್ಕಳು ಓದದಿದ್ದ ಅವರೂ ತಮ್ಮಂತೆ ಸ್ಥಳೀಯ ತೊರೆಗಳಲ್ಲಿ ಮೀನುಗಾರಿಕೆ ಅಥವಾ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವುದು ಅಥವಾ ಅನೇಕ ಆದಿವಾಸಿ ಕುಟುಂಬಗಳಂತೆ ಶಹಾಪುರ-ಕಲ್ಯಾಣ್ ಪ್ರದೇಶಕ್ಕೆ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ವಲಸೆ ಹೋಗಬೇಕಾಗುತ್ತದೆನ್ನುವ ಅರಿವು ಅವರಿಗಿದೆ.
"ನನಗೆ ಹೆಚ್ಚು ಓದಲು ಸಾಧ್ಯವಾಗಲಿಲ್ಲ. ಆದರೆ ನನ್ನ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂದು ನಾನು ಬಯಸುತ್ತೇನೆ," ಎಂದು ಮಹಾರಾಷ್ಟ್ರದ ವಿಶೇಷ ಮೂರು ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ಒಂದಾದ ಎಂದು ಪಟ್ಟಿ ಮಾಡಲಾದ ಕತ್ಕರಿ ಸಮುದಾಯಕ್ಕೆ ಸೇರಿದ ವಿಷ್ಣು ಹೇಳಿದರು. ಬುಡಕಟ್ಟು ವ್ಯವಹಾರಗಳ ಸಚಿವಾಲಯದ 2013ರ ವರದಿಯ ಪ್ರಕಾರ , ರಾಜ್ಯದಲ್ಲಿ ಕತ್ಕರಿ ಸಮುದಾಯವು ಶೇಕಡಾ 41ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ.
ನಾಲ್ಕು ವರ್ಷಗಳ ಹಿಂದೆ ಸಾಕಷ್ಟು ವಿದ್ಯಾರ್ಥಿಗಳು ಲಭ್ಯವಿಲ್ಲದ ಕಾರಣ ಸ್ಥಳೀಯ ಸರ್ಕಾರಿ ಶಾಲೆಯನ್ನು ಮುಚ್ಚುವುದಾಗಿ ಘೋಷಿಸಿದಾಗ, ವಿಷ್ಣು ಮತ್ತು ಅವರ ಪತ್ನಿ ತಮ್ಮ ಮಕ್ಕಳನ್ನು ಮಾಧ ಗ್ರಾಮದ ಸರ್ಕಾರಿ ಹೈಯರ್ ಸೆಕೆಂಡರಿ ಆಶ್ರಮ ಶಾಲೆಗೆ ಸೇರಿಸಿದರು. ಸ್ಥಳೀಯವಾಗಿ ಮಾಧ್ ಆಶ್ರಮ ಶಾಲೆ ಎಂದು ಕರೆಯಲ್ಪಡುವ ಈ ಸರ್ಕಾರಿ ವಸತಿ ಶಾಲೆಯು 1ರಿಂದ 12ನೇ ತರಗತಿಯವರೆಗೆ ತರಗತಿಗಳನ್ನು ಹೊಂದಿದೆ ಮತ್ತು ಇದು ಥಾಣೆ ಜಿಲ್ಲೆಯ ಮುರ್ಬಾದ್‌ನಿಂದ 30 ಕಿಲೋಮೀಟರ್ ದೂರದಲ್ಲಿದೆ. ಒಟ್ಟು 379 ವಿದ್ಯಾರ್ಥಿಗಳಲ್ಲಿ, ದಂಪತಿಗಳ ಮಕ್ಕಳು ಸೇರಿ 125 ಮಕ್ಕಳು ವಸತಿ ವಿದ್ಯಾರ್ಥಿಗಳು. "ಅಲ್ಲಿ ಅವರ ವಿದ್ಯಾಭ್ಯಾಸ ಮತ್ತು ಊಟ ಎರಡಕ್ಕೂ ಶಾಲೆಯಲ್ಲಿ ವ್ಯವಸ್ಥೆ ಇದ್ದ ಕಾರಣ ನನಗೆ ತುಂಬಾ ಖುಷಿಯಾಯಿತು ಎನ್ನುತ್ತಾರೆ ವಿಷ್ಣು. ಆದರೆ ನಮಗೆ ಅವರ ನೆನಪು ಬಹಳವಾಗಿ ಕಾಡುತ್ತಿತ್ತು."
ಲಾಕ್ಡೌನ್ ಘೋಷಣೆಯಾಗಿ ಶಾಲೆಗಳನ್ನು ಮುಚ್ಚಿದಾಗ, ಮಾಧ್ ಆಶ್ರಮ ಶಾಲೆಯಲ್ಲಿ ಓದುತ್ತಿದ್ದ ಕೊಲೊಶಿಯ ಹೆಚ್ಚಿನ ಮಕ್ಕಳು ತಮ್ಮ ಪೋಷಕರ ಬಳಿಗೆ ಮರಳಿದರು.
ಅಂತಹ ಪರಿಸ್ಥಿತಿಯಲ್ಲಿ, ವಿಷ್ಣುವಿನ ಇಬ್ಬರು ಪುತ್ರರು ಸಹ ಮನೆಗೆ ಬಂದರು. "ಆರಂಭದಲ್ಲಿ, ಅವರು ಮನೆಗೆ ಬಂದಿದ್ದಕ್ಕಾಗಿ ನಮಗೆ ಸಂತೋಷವಾಯಿತು." ಎಂದು ಅವರು ಹೇಳುತ್ತಾರೆ. ಕುಟುಂಬವನ್ನು ಪೋಷಿಸಲು ವಿಷ್ಣು ಹತ್ತಿರದ ಸಣ್ಣ ಚೆಕ್ ಡ್ಯಾಮ್ ಒಂದರಲ್ಲಿ ಮೀನುಗಳನ್ನು ಹಿಡಿದು ಅವುಗಳನ್ನು ಮುರ್ಬಾದ್ ಎನ್ನುವಲ್ಲಿ ಮಾರಾಟ ಮಾಡುತ್ತಿದ್ದರು. ಅವರು ದಿನಕ್ಕೆ ಎರಡರಿಂದ ಮೂರು ಕಿಲೋಗಳಷ್ಟು ಮೀನುಗಳನ್ನು ಹಿಡಿಯುತ್ತಿದ್ದರು, ಮತ್ತು ಮಕ್ಕಳು ಮನೆಗೆ ಮರಳಿದ ನಂತರ ಮೀನು ಮಾರಾಟದಿಂದ ಬರುತ್ತಿದ್ದ ಆದಾಯವು ಕುಟುಂಬವನ್ನು ಪೋಷಿಸಲು ಸಾಕಾಗುತ್ತಿರಲಿಲ್ಲ. ಆದ್ದರಿಂದ, ಅವರು ತನ್ನ ಆದಾಯವನ್ನು ಹೆಚ್ಚಿಸಲು ಹತ್ತಿರದ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅಲ್ಲಿ ಒಂದು ಸಾವಿರ ಇಟ್ಟಿಗೆಗಳಿಗೆ 600 ರೂಪಾಯಿಗಳನ್ನು ಪಡೆಯುತ್ತಾರೆ, ಆದರೆ ಅಲ್ಲಿ ಅವರಿಗೆ ಅಷ್ಟು ದುಡಿಯಲು ಆಗುತ್ತಿರಲಿಲ್ಲ, ಏಕೆಂದರೆ ದಿನವಿಡೀ ಕೆಲಸ ಮಾಡಿದ ನಂತರವೂ, ದಿನಕ್ಕೆ 700-750 ಇಟ್ಟಿಗೆಗಳನ್ನು ತಯಾರಿಸಲು ಸಾಧ್ಯವಾಗುವುದಿಲ್ಲ.
ಎರಡು ವರ್ಷಗಳ ನಂತರ ಶಾಲೆಗಳು ಪುನರಾರಂಭಗೊಂಡಿವೆ ಮತ್ತು ಮಾಧ್ ಆಶ್ರಮ ಶಾಲೆಯಲ್ಲಿ ತರಗತಿಗಳು ಪ್ರಾರಂಭವಾಗಿವೆ, ಆದರೆ ಗಣೇಶ್ ಮತ್ತು ಅರುಣ್ ಮುಕನೆ ಪೋಷಕರು ಮನವೊಲಿಸಿದರೂ ತಮ್ಮ ತರಗತಿಗಳಿಗೆ ಮರಳಲು ಸಿದ್ಧರಿಲ್ಲ. ಎರಡು ವರ್ಷಗಳ ಅಂತರದ ಕಾರಣಕ್ಕೆ ತಮಗೆ ಓದಿದ್ದೆಲ್ಲ ಮರೆತು ಹೋಗಿದೆಯೆಂದು ಅರುಣ್ ಹೇಳುತ್ತಾನೆ. ಆದರೆ ಅವನ ಪೋಷಕರು ಅದನ್ನು ನಿರ್ಲಕ್ಷಿಸಿಲ್ಲ, ಆದರೆ ಹಿರಿಯ ಮಗ ಗಣೇಶ್ ಅವನ ಓದನ್ನು ಪುನರಾರಂಭಿಸಲು ಅಗತ್ಯವಿರುವ ಪುಸ್ತಕಗಳನ್ನು ಒದಗಿಸುವ ಬಗ್ಗೆಯೂ ಅವರು ಯೋಚಿಸುತ್ತಿದ್ದಾರೆ.
4ನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಕೃಷ್ಣ ಭಗವಾನ್ ಜಾಧವ್ ಮತ್ತು ಆತನ ಸ್ನೇಹಿತ 3ನೇ ತರಗತಿಯ ವಿದ್ಯಾರ್ಥಿ ಕಾಲೂರಾಮ್ ಚಂದ್ರಕಾಂತ್ ಪವಾರ್ ಇಬ್ಬರಿಗೂ ಆಶ್ರಮಶಾಲೆಗೆ ಮತ್ತೆ ಸೇರುವ ಬಯಕೆಯಿದೆ: "ನಾವು ಓದಲು ಮತ್ತು ಬರೆಯಲು ಇಷ್ಟಪಡುತ್ತೇವೆ," ಎಂದು ಕೃಷ್ಣ ಮತ್ತು ಕಾಲೂರಾಮ್ ಒಕ್ಕೊರಲಿನಿಂದ ಹೇಳಿದರು. ಆದರೆ ಅವರು ಎರಡು ವರ್ಷಗಳ ಅಂತರಕ್ಕಿಂತ ಮೊದಲು ಔಪಚಾರಿಕ ಶಾಲಾ ಶಿಕ್ಷಣದಲ್ಲಿ ಕೆಲವು ವರ್ಷಗಳನ್ನು ಮಾತ್ರ ಕಳೆದಿದ್ದರಿಂದ, ಅವರು ಈಗ ಹೊಸದಾಗಿ ಓದುವುದನ್ನು ಕಲಿಯಬೇಕಿದೆ.
ಈ ಇಬ್ಬರು ಹುಡುಗರು ತಮ್ಮ ಶಾಲೆ ಮುಚ್ಚಲ್ಪಟ್ಟಾಗಿನಿಂದ ಈ ಪ್ರದೇಶದ ತೊರೆಗಳು ಮತ್ತು ನದಿಗಳ ದಡದಿಂದ ಮರಳನ್ನು ಹೊರತೆಗೆಯಲು ತಮ್ಮ ಕುಟುಂಬಗಳೊಂದಿಗೆ ಪ್ರಯಾಣಿಸುತ್ತಿದ್ದಾರೆ. ಅವರ ಕುಟುಂಬಗಳಿಗೆ ಹೆಚ್ಚು ಸಂಪಾದಿಸಬೇಕಾದ ಅನಿವಾರ್ಯತೆಯಿತ್ತು. ಮಕ್ಕಳು ಮನೆಗೆ ಮರಳಿದ್ದರಿಂದಾಗಿ ಮನೆಯಲ್ಲಿ ತಿನ್ನುವ ಬಾಯಿಗಳು ಹೆಚ್ಚಾಗಿವೆ.
*****
ದೇಶಾದ್ಯಂತ, ಪರಿಶಿಷ್ಟ ಪಂಗಡದ ಸಮುದಾಯಗಳ ಮಕ್ಕಳಲ್ಲಿ 5ನೇ ತರಗತಿಯ ನಂತರ ಶಾಲೆಯಿಂದ ಹೊರಗುಳಿಯುವ ಪ್ರಮಾಣವು ಶೇಕಡಾ 35ರಷ್ಟಿದೆ. ಇದು 8ನೇ ತರಗತಿಯ ನಂತರ ಶೇಕಡಾ 55ಕ್ಕೆ ಜಿಗಿಯುತ್ತದೆ. ಕೊಲೋಶಿಯ ಜನಸಂಖ್ಯೆಯು ಹೆಚ್ಚಾಗಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದು, ಈ ಕುಗ್ರಾಮ ಅಥವಾ ವಾಡಿಯಲ್ಲಿ ಸುಮಾರು 16 ಕತ್ಕರಿ ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ. ಮುರ್ಬಾದ್ ಬ್ಲಾಕ್ ಮಾ ಠಾಕೂರ್ ಆದಿವಾಸಿಗಳ ದೊಡ್ಡ ಜನಸಂಖ್ಯೆಯನ್ನು ಸಹ ಹೊಂದಿದೆ; ಈ ಎರಡೂ ಸಮುದಾಯಗಳ ಮಕ್ಕಳು ಆಶ್ರಮಶಾಲೆಯಲ್ಲಿ ಓದುತ್ತಿದ್ದರು.
ಲಾಕ್‌ಡೌನ್ ಸಮಯದಲ್ಲಿ ಇತರ ಮಕ್ಕಳಿಗೆ ಮಾರ್ಚ್ 2020ರಲ್ಲಿ ಆನ್‌ಲೈನ್ ಮುಖಾಂತರ ಕಲಿಯುವ ಅವಕಾಶ ದೊರಕಿತ್ತಾದರೂ, ಹೆಚ್ಚು ಆದಿವಾಸಿ ಮಕ್ಕಳು ಓದುವ ಈ ಮಾಧ್ ಆಶ್ರಮ ಶಾಲೆಯನ್ನು ಸುಮ್ಮನೆ ಮುಚ್ಚಲಾಯಿತು.
"ಎಲ್ಲಾ ವಿದ್ಯಾರ್ಥಿಗಳು ಅಥವಾ ಅವರ ಕುಟುಂಬಗಳಲ್ಲಿ ಸ್ಮಾರ್ಟ್ ಫೋನ್ ಇಲ್ಲದ ಕಾರಣ ಆನ್ಲೈನ್ ಶಾಲಾ ಶಿಕ್ಷಣವನ್ನು ಜಾರಿಗೆ ತರುವುದು ಅಸಾಧ್ಯವಾಗಿತ್ತು. ಫೋನ್ ಹೊಂದಿದ್ದವರು ನಾವು ಕರೆ ಮಾಡಿದಾಗ ಕೆಲಸ ಮಾಡುವ ಪೋಷಕರೊಂದಿಗೆ ಇರುತ್ತಾರೆ," ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಹೇಳುತ್ತಾರೆ. ಅನೇಕ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಇರುವುದಿಲ್ಲ ಮತ್ತು ಇದರಿಂದಾಗಿ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಇತರರು ಹೇಳಿದರು.
ಅವರು ಪ್ರಯತ್ನಿಸಲಿಲ್ಲ ಎಂದಲ್ಲ. 2021ರ ಕೊನೆಯಲ್ಲಿ ಮತ್ತು 2022ರ ಆರಂಭದಲ್ಲಿ, ಕೆಲವು ಶಾಲೆಗಳು ನಿಯಮಿತ ತರಗತಿಗಳನ್ನು ಪುನರಾರಂಭಿಸಿದವು. ಆದರೆ ವಿಷ್ಣುವವರ ಮಕ್ಕಳಾದ ಗಣೇಶ ಮತ್ತು ಅರುಣ್, ಕೃಷ್ಣ ಮತ್ತು ಕಾಲೂರಾಮ್ ಅವರಂತಹ ಅನೇಕ ಮಕ್ಕಳು ತರಗತಿಯ ಪಾಠ ಮತ್ತು ಶಿಕ್ಷಣದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದರು ಮತ್ತು ಶಾಲೆಗೆ ಹಿಂತಿರುಗಲು ಹಿಂಜರಿಯುತ್ತಿದ್ದರು.
"ಶಾಲೆಗೆ ಮರಳುವಂತೆ ನಾವು ಮನವೊಲಿಸಿದ ಕೆಲವು ಮಕ್ಕಳು ಓದಲು ಮರೆತಿದ್ದರು," ಎಂದು ಶಿಕ್ಷಕರೊಬ್ಬರು 'ಪರಿ'ಗೆ ತಿಳಿಸಿದರು. ಅಂತಹ ವಿದ್ಯಾರ್ಥಿಗಳ ವಿಶೇಷ ಗುಂಪನ್ನು ರಚಿಸಲಾಯಿತು ಮತ್ತು ಅವರ ಶಿಕ್ಷಕರು ಅವರಿಗಾಗಿ ಓದುವ ತರಗತಿಗಳನ್ನು ಪ್ರಾರಂಭಿಸಿದರು. 2021ರ ಫೆಬ್ರವರಿಯಲ್ಲಿ ಮಹಾರಾಷ್ಟ್ರದಲ್ಲಿ ಎರಡನೇ ಅಲೆಯು ಮತ್ತೊಂದು ಲಾಕ್‌ಡೌನ್‌ಗೆ ಕಾರಣವಾಗುವ ಹೊತ್ತಿಗೆ ಅವರು ನಿಧಾನವಾಗಿ ಓದಿಗೆ ಮರಳುತ್ತಿದ್ದರು, ನಂತರ ಅವರು ಒಂದಿಷ್ಟು ಕಲಿಕೆಯೊಂದಿಗೆ ಮತ್ತೊಮ್ಮೆ ಮನೆಗೆ ಮರಳಿದರು.
*****
ಕೃಷ್ಣನ ತಾಯಿ ಲೀಲಾ ಹೇಳುತ್ತಾರೆ, “ಇಷ್ಟು ಅಲ್ಪ ಆದಾಯದಲ್ಲಿ ಕುಟುಂಬವನ್ನು ಪೋಷಿಸಬೇಕೋ ಅಥವಾ ಮಕ್ಕಳಿಗೆ ಮೊಬೈಲ್ ಖರೀದಿಸಬೇಕೋ? ನನ್ನ ಪತಿ ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಹಾಸಿಗೆಯ ಮೇಲೆ ಮಲಗಿದ್ದಾರೆ. ನನ್ನ ಹಿರಿಯ ಮಗ ಸಂಪಾದನೆಗಾಗಿ ಕಲ್ಯಾಣ್‌ನಲ್ಲಿರುವ ಇಟ್ಟಿಗೆ ಭಟ್ಟಿಗೆ ಹೋಗಿದ್ದಾನೆ." ಕಿರಿಯ ಮಗನ ವಿದ್ಯಾಭ್ಯಾಸಕ್ಕೆ ಮೊಬೈಲ್ ಖರೀದಿಸುವುದು ಆರ್ಥಿಕ ಸಾಮರ್ಥ್ಯಕ್ಕೆ ಮೀರಿದ್ದು ಎನ್ನುತ್ತಾರವರು.
ಕೃಷ್ಣಾ ಮತ್ತು ಕಾಲೂರಾಂ ಮಧ್ಯಾಹ್ನದ ಊಟ ಮಾಡುತ್ತಿದ್ದರು. ಅವರ ತಟ್ಟೆಯಲ್ಲಿ ಅನ್ನದ ಹೊರತು ತರಕಾರಿಯಾಗಲೀ ಇನ್ನೇನೋ ನೆಂಚಿಕೊಳ್ಳಲಾಗಲಿ ಇದ್ದಿರಲಿಲ್ಲ.
ಲೀಲಾ, ದಿಯೋಘರ್‌ನ ಇತರರಂತೆ, ಜೀವನೋಪಾಯಕ್ಕಾಗಿ ತೊರೆಗಳ ದಡದಿಂದ ಮರಳನ್ನು ಹೊರತೆಗೆಯುತ್ತಾರೆ. ಒಂದು ಟ್ರಕ್ ಲೋಡ್ ಮಾಡಿದರೆ ರೂ. 3,000 ಸಿಗುತ್ತದೆ ಮತ್ತು ಒಂದು ಟ್ರಕ್ ತುಂಬಲು ಮೂರರಿಂದ ನಾಲ್ಕು ಜನ ಒಂದು ವಾರ ದುಡಿಯಬೇಕು. ನಂತರ ಹಣವನ್ನು ಕಾರ್ಮಿಕರ ನಡುವೆ ಹಂಚಲಾಗುತ್ತದೆ.
ಅಷ್ಟರಲ್ಲಿ ಊಟ ಮಾಡುತ್ತಿದ್ದ ಕಾಲೂರಂ ಕೇಳಿದ, "ಮತ್ತೆ ಯಾವಾಗ ಓದಲು ಶುರು ಮಾಡೋದು?" ಇದು ಅವನು ಯಾರನ್ನೂ ಉದ್ದೇಶಿಸಿ ಕೇಳಿದ ಪ್ರಶ್ನೆಯಲ್ಲವಾದರೂ, ಶೀಲಾ ಕೂಡಾ ಈ ಪ್ರಶ್ನೆಗೆ ಉತ್ತರ ಎದುರು ನೋಡುತ್ತಿದ್ದಾರೆ. ಏಕೆಂದರೆ ಅದು ಕೇವಲ ಮಕ್ಕಳ ಓದಿನ ಪ್ರಶ್ನೆ ಮಾತ್ರವಲ್ಲ, ಅವರ ಹೊಟ್ಟೆಯ ಪ್ರಶ್ನೆಯೂ ಹೌದು.
*****
2022ರ ಫೆಬ್ರವರಿಯಲ್ಲಿ ಮಾಧ್ ಆಶ್ರಮ ಶಾಲೆ ಪುನರಾರಂಭಗೊಂಡಿತು. ಕೆಲವು ಮಕ್ಕಳು ಹಿಂದಿರುಗಿದರು ಆದರೆ ಮಧ್ಯಮ ಮತ್ತು ಪ್ರಾಥಮಿಕ ಶಾಲೆಯಲ್ಲಿ (1-8 ನೇ ತರಗತಿ) ಸುಮಾರು 15 ಮಕ್ಕಳು ಹಿಂತಿರುಗಲಿಲ್ಲ. "ಅವರನ್ನು ಮರಳಿ ಶಾಲೆಗೆ ಕರೆತರಲು ನಾವು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ. ಆದರೆ ಈ ಮಕ್ಕಳು ಥಾಣೆ, ಕಲ್ಯಾಣ್ ಮತ್ತು ಶಹಾಪುರಗಳಲ್ಲಿ ತಮ್ಮ ಕುಟುಂಬಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈಗ ಅವರನ್ನು ಪತ್ತೆಹಚ್ಚುವುದು ತುಂಬಾ ಕಷ್ಟ," ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು ಹೇಳಿದರು.
ಅನುವಾದ: ಶಂಕರ. ಎನ್. ಕೆಂಚನೂರು