ಜಯಪಾಲ್ ಅವರ ಎರಡು ಕೋಣೆಗಳ ಇಟ್ಟಿಗೆ ಮನೆಯ ಛಾವಣಿಯನ್ನು ಟಿನ್ ಶೀಟಿನಿಂದ ಹೊದೆಸಲಾಗಿದೆ. ಅವರ ಈ ಮನೆಯಲ್ಲಿ ಇನ್ನೂ ಅನೇಕ ದೊಡ್ಡ ಮನೆಗಳಿವೆ. ಈ ಮನೆಗಳಲ್ಲಿ ಹಲವು ಅಂತಸ್ತುಗಳು, ಎತ್ತರದ ಕಂಬಗಳು, ಬಾಲ್ಕನಿಗಳು ಮತ್ತು ಗೋಪುರಗಳಿವೆ.
ಈ ಮನೆಗಳನ್ನು ಪೇಪರ್ ಮತ್ತು ಅಂಟಿನಿಂದ ತಯಾರಿಸಲಾಗಿದೆ.
ಕಳೆದ 4-5 ವರ್ಷಗಳಿಂದ, 19 ವರ್ಷದ ಜಯಪಾಲ್ ಚೌಹಾಣ್ ಅವರು ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ತಮ್ಮ ಕರೋಲಿ ಗ್ರಾಮದ ಮನೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮನೆಗಳನ್ನು ಕಟ್ಟುತ್ತಿದ್ದಾರೆ. ಅವರ ಮನೆಗಳ ಗೋಡೆಗಳನ್ನು ಕಾಗದದ ಸುರುಳಿಗಳಿಂದ ಮಾಡಲಾಗಿದೆ ಮತ್ತು ನಂತರ ಅರಮನೆಗಳು ಮತ್ತು ಅವುಗಳ ಮೇಲಿನ ಗೋಪುರಗಳನ್ನು ಸಹ ಇವುಗಳಿಂದಲೇ ನಿರ್ಮಿಸಲಾಗಿದೆ.
"ಕಟ್ಟಡಗಳು ಮತ್ತು ಅವುಗಳ ನಿರ್ಮಾಣದ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ನನಗೆ ಸದಾ ಆಸಕ್ತಿ" ಎಂದು ಅವರು ಹೇಳುತ್ತಾರೆ.
ಜಯಪಾಲ್ 13ನೇ ವಯಸ್ಸಿನಲ್ಲಿ ದೇವಸ್ಥಾನಗಳ ಕಾರ್ಡ್‌ಬೋರ್ಡ್ ಮಾದರಿಗಳನ್ನು ತಯಾರಿಸುವ ಮೂಲಕ ತಮ್ಮ ಈ ಪ್ರಯಾಣವನ್ನು ಆರಂಭಿಸಿದರು. ಅವರು ಪಕ್ಕದ ಹಳ್ಳಿಯೊಂದರ ಮದುವೆಗೆ ಹೋಗಿದ್ದಾಗ ಯಾರದೋ ಮನೆಯಲ್ಲಿ ಗಾಜಿನಿಂದ ಮಾಡಿದ ದೇವಾಲಯದ ಸಣ್ಣ ಪ್ರತಿರೂಪವು ಕಾರ್ಡ್‌ಬೋರ್ಡ್ ಸಹಾಯದಿಂದ ಇದೇ ರೀತಿಯ ಪ್ರತಿಕೃತಿ ತಯಾರು ಮಾಡುವ ಕುತೂಹಲವನ್ನು ಅವರಲ್ಲಿ ಹುಟ್ಟುಹಾಕಿತು. ಅವರು ಕೆಲವು ಪ್ರತಿಕೃತಿಗಳನ್ನು ತಯಾರಿಸಿದರು ಮತ್ತು ಅವುಗಳನ್ನು ತಮ್ಮ ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಿದರು, ಮತ್ತು ನಂತರ ಅವರು ಮಾಡಿದ ಮಾದರಿಗೆ 2017ರ ಶಾಲಾ ಪ್ರದರ್ಶನದಲ್ಲಿ ಪ್ರಶಸ್ತಿಯನ್ನು ಪಡೆದರು.
ಕಾರ್ಡ್‌ಬೋರ್ಡ್‌ನಿಂದ ಮಾಡಿದ ಮೋಟಾರ್ ಬೈಕ್‌ನ ಮಾದರಿಗೆ ಶಾಲೆಯಲ್ಲಿ ಪ್ರಶಸ್ತಿಯನ್ನೂ ಪಡೆದರು. ಅಂತಹ ಮಾದರಿಗಳ ಸಂಗ್ರಹದಲ್ಲಿ ಟೇಬಲ್ ಫ್ಯಾನ್, ರೇಸ್ ಕಾರ್ ಮತ್ತು ಹಳೆಯ ಆಟಿಕೆಯಿಂದ ಚಕ್ರಗಳನ್ನು ಅಳವಡಿಸಿದ ಕ್ರೇನ್ ಯಂತ್ರದ ಮಾದರಿಗಳು ಸೇರಿವೆ.
"ಆದರೆ ಕಾಲಕ್ರಮೇಣ ತೇವಾಂಶದಿಂದಾಗಿ ಕಾರ್ಡ್ಬೋರ್ಡ್ ಬಾಗಲು ಪ್ರಾರಂಭಿಸಿತು" ಎಂದು ಜಯಪಾಲ್ ಹೇಳುತ್ತಾರೆ. "ನಂತರ ಒಂದು ದಿನ ನಾನು ಮನೆಯಲ್ಲಿ ಇರಿಸಲಾಗಿರುವ ಹಳೆಯ [ಶಾಲಾ] ಪುಸ್ತಕಗಳನ್ನು ಗುಜರಿಗೆ ಹಾಕುವ ಬದಲು ಅದನ್ನೇ ಒಳ್ಳೆಯ ರೀತಿಯಲ್ಲಿ ಬಳಸಲು ಯೋಚಿಸಿದೆ. ಇದು ಹಠಾತ್ ಹೊಳೆದ ಉಪಾಯವಾಗಿತ್ತು. ನಾನು ಅವುಗಳನ್ನು ಸುರುಳಿಗಳನ್ನಾಗಿ ಮಾಡಿ ಈ ದೊಡ್ಡ [ಮನೆಗಳ] ಮಾದರಿಗಳನ್ನು ತಯಾರಿಸಲಾರಂಭಿಸಿದೆ.”
ಪುನಸಾ ತಹಸಿಲ್‌ನಲ್ಲಿರುವ ಅವರ ಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಸಿಮೆಂಟ್ ಮನೆಗಳಿಂದ ಅವರಿಗೆ ಹೊಸ ಹೊಸ ಕಲ್ಪನೆಗಳು ಬರಲಾರಂಭಿಸಿದವು. ಅವರು ವಿವರಿಸುತ್ತಾರೆ, "ಹೊಸ ಮನೆಗಳನ್ನು ನಿರ್ಮಿಸುತ್ತಿರುವ ಜನರು ಹಳ್ಳಿಯಲ್ಲಿದ್ದಾರೆ ಮತ್ತು ನಾವು (ಅವರ ಕುಟುಂಬ) ಮತ್ತು ಇತರರ ಹೊಲದಲ್ಲಿ ಕೆಲಸ ಮಾಡುವವರು ಈಗಲೂ ಊರಿನ ಗಡಿಯ ಹೊರಗಿನ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿದ್ದಾರೆ. "ಆದರೆ ಎಲ್ಲಾ ಸಿಮೆಂಟ್ ಮನೆಗಳ ವಿನ್ಯಾಸವೂ ಹಿಡಿಸುವುದಿಲ್ಲ. ಆಗ ನಾನು ಎರಡು-ಮೂರು ಮನೆಗಳ ವಿನ್ಯಾಸವನ್ನು ಒಟ್ಟುಗೂಡಿಸಿ ಒಂದು ಮಾದರಿ ತಯಾರಿಸುತ್ತೇನೆ. ಸಾಧಾರಣ ಮನೆಗಳ ಪ್ರತಿಕೃತಿಯನ್ನು ತಯಾರಿಸುವುದಿಲ್ಲ. ಮನೆಯನ್ನು ನೋಡಿದ ತಕ್ಷಣ ಅದರ ಭಿನ್ನತೆ ಕಣ್ಣು ಸೆಳೆಯುವಂತಿದ್ದಾಗ ಮಾತ್ರ ಅವುಗಳ ಮಾದರಿಯನ್ನು ತಯಾರಿಸುತ್ತೇನೆ." ಎಂದು ಜಯಪಾಲ್ ಹೇಳುತ್ತಾರೆ.
ಅವರು ಸಾಧಾರಣ ಮನೆಗಳನ್ನಷ್ಟೇ ನೋಡುವುದಿಲ್ಲ. ಹೆಚ್ಚಾಗಿ ಅಪರೂಪದ ಬಾಗಿಲುಗಳು, ಡಿಸೈನ್‌ಗಳು ಇರುವ ಮನೆಗಳನ್ನು ಹುಡುಕುತ್ತಾರೆ. ಅಂತಹ ಒಂದು ಮಾಡೆಲ್ ತೋರಿಸುತ್ತಾ, ಅವರು ಹೇಳುತ್ತಾರೆ, “ನಾನು ಮೇಲಿನ ಮಹಡಿಯನ್ನು ಊರಿನಲ್ಲಿರುವ ಮನೆಯಂತೆ ತಯಾರಿಸಿದ್ದೇನೆ ಆದರೆ ಕೆಳಗಿನ ಭಾಗವನ್ನು ಬೇರೆ ರೀತಿ ತಯಾರಿಸಿದ್ದೇನೆ.” ಈ ವಿನ್ಯಾಸ ಅವರಿಗೆ ಹಳೆಯ ಪುಸ್ತಕಗಳನ್ನು ನೀಡಿದ ಅವರ ಶಾಲೆಯ ಶಿಕ್ಷಕರ ಮನೆಯನ್ನು ನೋಡಿ ಹೊಳೆದಿದ್ದು. ಆದರೆ ಅದರಲ್ಲಿ ತುಂಬಾ ಚಿತ್ರಗಳು ಮತ್ತು ಕಾರ್ಟೂನುಗಳಿದ್ದವು. ಅದರಲ್ಲಿ ಮನೆ ನಿರ್ಮಿಸಿದರೆ ಅಷ್ಟು ಚಂದ ಕಾಣುತ್ತಿರಲಿಲ್ಲ. ಹೀಗಾಗಿ ಹತ್ತಿರದ ಇನ್ನೊಂದು ಸರ್ಕಾರಿ ಶಾಲೆಯಿಂದ ನೋಟ್ ಪುಸ್ತಕಗಳನ್ನು ಪಡೆದರು.
"ನಾನು ಯಾವುದೇ ಪ್ಲಾನ್ ಅಥವಾ ವಿನ್ಯಾಸಗಳನ್ನು ಮಾಡುವುದಿಲ್ಲ (ವಾಸ್ತುಶಿಲ್ಪಕ್ಕೆ ಸಂಬಂಧಿಸಿದ), ನೇರವಾಗಿ ಮನೆ ಮಾದರಿಗಳನ್ನು ತಯಾರಿಸಲು ಪ್ರಾರಂಭಿಸುತ್ತೇನೆ" ಎಂದು ಜಯಪಾಲ್ ಹೇಳುತ್ತಾರೆ. ಆರಂಭದಲ್ಲಿ ತಯಾರಿಸಿದ ಮಾದರಿಗಳನ್ನು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಲಾಗುತ್ತಿತ್ತು, ಆದರೆ ಜನರು ತಾವು ಮಾಡಿದ ಮನೆ ಮಾದರಿಗಳನ್ನು ನೋಡಲು ಮನೆಗೆ ಬರಲು ಆರಂಭಿಸಿದಾಗ, ಅವರು ಉಡುಗೊರೆಯಾಗಿ ನೀಡುವುದನ್ನು ನಿಲ್ಲಿಸಿದರು. ಅವರು ಇಲ್ಲಿಯವರೆಗೆ ಯಾವುದೇ ಮಾದರಿಗಳನ್ನು ಮಾರಾಟ ಮಾಡಿಲ್ಲ ಮತ್ತು ಕೆಲವನ್ನು ಈಗ ಅವರ ಮನೆಯಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ."ನಾನು ಯಾವುದೇ ಪ್ಲಾನ್ ಅಥವಾ ವಿನ್ಯಾಸಗಳನ್ನು ಮಾಡುವುದಿಲ್ಲ (ವಾಸ್ತುಶಿಲ್ಪಕ್ಕೆ ಸಂಬಂಧಿಸಿದ), ನೇರವಾಗಿ ಮನೆ ಮಾದರಿಗಳನ್ನು ತಯಾರಿಸಲು ಪ್ರಾರಂಭಿಸುತ್ತೇನೆ" ಎಂದು ಜೈಪಾಲ್ ಹೇಳುತ್ತಾರೆ. ಆರಂಭದಲ್ಲಿ ತಯಾರಿಸಿದ ಮಾದರಿಗಳನ್ನು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಲಾಗುತ್ತಿತ್ತು, ಆದರೆ ಜನರು ತಾವು ಮಾಡಿದ ಮನೆ ಮಾದರಿಗಳನ್ನು ನೋಡಲು ಮನೆಗೆ ಬರಲು ಆರಂಭಿಸಿದಾಗ, ಅವರು ಉಡುಗೊರೆಯಾಗಿ ನೀಡುವುದನ್ನು ನಿಲ್ಲಿಸಿದರು. ಅವರು ಇಲ್ಲಿಯವರೆಗೆ ಯಾವುದೇ ಮಾದರಿಗಳನ್ನು ಮಾರಾಟ ಮಾಡಿಲ್ಲ ಮತ್ತು ಕೆಲವನ್ನು ಈಗ ಅವರ ಮನೆಯಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.
ಒಂದು ಮಾದರಿಯನ್ನು ನಿರ್ಮಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಮಾದರಿಯ ಸಂಕೀರ್ಣತೆ ಮತ್ತು ಅದನ್ನು ನಿರ್ಮಿಸಲು ಲಭ್ಯವಿರುವ ಸಮಯವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ಜೈಪಾಲ್‌ಗೆ ಕಾಗದದಿಂದ ಒಂದು ಮನೆ ತಯಾರಿಸಲು 4ರಿಂದ 20 ದಿನಗಳು ಬೇಕಾಗುತ್ತದೆ. ಪ್ರತಿಯೊಂದು ಮಾದರಿಯು ಅಂದಾಜು 2 x 2 ಅಡಿ ಎತ್ತರ ಮತ್ತು ಆಳ ಮತ್ತು 2.5 ಅಡಿ ಅಗಲವನ್ನು ಹೊಂದಿರುತ್ತವೆ.
ಇತ್ತೀಚೆಗೆ 12ನೇ ತರಗತಿಯನ್ನು [ಸಾಂಕ್ರಾಮಿಕ ಸಮಯದಲ್ಲಿ ಆನ್‌ಲೈನ್] ಹತ್ತಿರದ ಹಳ್ಳಿಯ ಶಾಲೆಯಲ್ಲಿ ಪೂರ್ಣಗೊಳಿಸಿರುವ ಜಯಪಾಲ್. ಪ್ರತಿಕೃತಿ ತಯಾರಿಸುವುದರ ಜೊತೆಗೆ ವೃತ್ತಿಯಿಂದ ಕಾರ್ಪೆಂಟರ್ ಆಗಿರುವ ತಂದೆ ದಿಲಾವರ್ ಸಿಂಗ್ ಚೌಹಾಣ್, 45, ಅವರಿಗೆ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಅವರ ತಂದೆಯು ಮೇಜು, ಖುರ್ಚಿ, ಮಕ್ಕಳ ಜೀಕಾಲಿ ಮತ್ತು ಇತರ ಪೀಠೋಪಕರಣಗಳನ್ನು ತಯಾರಿಸುತ್ತಾರೆ. ಜೊತೆಗೆ ಕರೋಲಿ ಮತ್ತು ನೆರೆಯ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಬಾಗಿಲಿನ ಚೌಕಟ್ಟುಗಳು ಮತ್ತು ದಾರಂದಗಳನ್ನು ಕೂಡಾ ಮಾಡುತ್ತಾರೆ.
ಜಯಪಾಲ್ ತನೆಗೆ ಮರಗೆಲಸದಲ್ಲಿ ಆಸಕ್ತಿಯಿಲ್ಲವೆಂದು ಹೇಳುತ್ತಾರೆ, ಆದರೆ ಅವರು ಬಾಗಿಲು ಮತ್ತು ಕಿಟಕಿಗಳ ವಿನ್ಯಾಸಗಳಿಗೆ, ಉಪಕರಣಗಳನ್ನು ನಿರ್ವಹಿಸಲು ಮತ್ತು ಹಾಳಾಗಿರುವ ಛಾವಣಿಗಳನ್ನು ಸರಿಪಡಿಸಲು ಸಹಾಯ ಮಾಡುತ್ತಾರೆ. "ನಾನು ಹತ್ತಿರದ ಹಳ್ಳಿಯಲ್ಲಿ ಮೂರು ಬಾಗಿಲುಗಳನ್ನು ವಿನ್ಯಾಸಗೊಳಿಸಿದ್ದೇನೆ, ಎರಡು ಕರೋಲಿಯಲ್ಲಿ" ಎಂದು ಅವರು ಹೇಳುತ್ತಾರೆ. "ನಾನು ಅಂತರ್ಜಾಲ ಮತ್ತು ಆನ್‌ಲೈನ್ ನಿಯತಕಾಲಿಕೆಗಳಿಂದ ಅನೇಕ ಉಲ್ಲೇಖಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ಅನನ್ಯ ವಿನ್ಯಾಸವನ್ನು ಬಿಡಿಸಲು ಪ್ರಯತ್ನಿಸುತ್ತೇನೆ - ಕೆಲವೊಮ್ಮೆ ಕಾಗದದ ಮೇಲೆ ಮಾಡುತ್ತೇನೆ, ಆದರೆ ಹೆಚ್ಚಿನ ಸಮಯ ನೇರವಾಗಿ ಮರದ ಮೇಲೆ - ಮತ್ತು ನನ್ನ ತಂದೆ ನಂತರ ಅದನ್ನು ಕೆತ್ತುತ್ತಾರೆ."
ಉಳಿದಂತೆ, ಜಯಪಾಲ್ 60 ಕಿಲೋಮೀಟರ್ ದೂರದ ಹಳ್ಳಿಯಲ್ಲಿ ಟೈಲರ್ ಆಗಿರುವ ಬಾವನ (ಸಹೋದರಿಯ ಪತಿ) ಜೊತೆ ಕೆಲಸ ಮಾಡುತ್ತಾರೆ. ಅವರು ಸಾಂದರ್ಭಿಕವಾಗಿ ಅಲ್ಲಿಗೆ ಹೋಗಿ ಬಟ್ಟೆಗಳನ್ನು ಕತ್ತರಿಸುವುದು ಅಥವಾ ಪ್ಯಾಂಟ್ ಹೊಲಿಯುವ ಕೆಲಸ ಮಾಡುತ್ತಾರೆ.
ಜಯಪಾಲ್ ತಾಯಿ, ರಾಜು ಚೌಹಾಣ್, 41, ಗೃಹಿಣಿ. ಹಿಂದೆ, ಅವಳು ಕೂಡ ಕುಟುಂಬದ ಬಡಗಿ ವ್ಯಾಪಾರದಲ್ಲಿ ಕೆಲಸ ಮಾಡುತ್ತಿದ್ದಳು. "ಚಾರ್ಪಾಯ್ ತಯಾರಿಸುತ್ತಿದ್ದರೆ, ನನ್ನ ತಂದೆ ಬೇರೆಲ್ಲ ಕೆಲಸ ಮಾಡುವಾಗ ಅಮ್ಮ ಅದರ ಕಾಲುಗಳನ್ನು ತಯಾರಿಸುತ್ತಿದ್ದರು" ಎಂದು ಜಯಪಾಲ್ ಹೇಳುತ್ತಾರೆ. ಆದರೆ ಈಗ ಕುಟುಂಬದ ಆರ್ಥಿಕ ಸ್ಥಿತಿ ಒಂದಿಷ್ಟು ಸುಧಾರಿಸಿದೆ, ಹೀಗಾಗಿ ಈಗ ಅವರು ಈ ಕೆಲಸ ಮಾಡುತ್ತಿಲ್ಲ.
ಜಯಪಾಲ್ ಅವರ ಅಂಕಲ್ ಮನೋಹರ್ ಸಿಂಗ್ ತನ್ವಾರ್, ರೈತ, ಅವರ ಮಾಡೆಲ್ ತಯಾರಿಕೆ ಕೆಲಸವನ್ನು ಹೆಚ್ಚು ಬೆಂಬಲಿಸುತ್ತಿದ್ದರು. ಅವರು ಅವರ ಮನೆಯ ಪಕ್ಕದಲ್ಲಿಯೇ ವಾಸಿಸುತ್ತಿದ್ದರು ಮತ್ತು ತನ್ನ ಅಳಿಯನ ಕೌಶಲವನ್ನು ತೋರಿಸಲು ಬಹಳಷ್ಟು ಅತಿಥಿಗಳನ್ನು ಕರೆತರುತ್ತಿದ್ದರು. ಕಳೆದ ವರ್ಷ ಅವರು ತೀರಿಕೊಂಡರು (ಪ್ರಾಯಶಃ ಡೆಂಗ್ಯೂ ಜ್ವರದಿಂದ)
ದಿಲಾವರ್ ಮತ್ತು ರಾಜು ತಮ್ಮ ಮಗನಿಗೆ ಬೆಂಬಲವಾಗಿ ನಿಂತಿದ್ದಾರೆ. “ನಾನು ಓದಿದವನಲ್ಲ ಆದರೆ ಅವನು ಸರಿಯಾದ ದಾರಿಯಲ್ಲಿದ್ದಾನೆಂದು ನನಗನ್ನಿಸುತ್ತದೆ. ಮತ್ತು ಬಹಳಷ್ಟು ಜನರು ಅವನ ಕೆಲಸಗಳನ್ನು ನೋಡಲು ಹುಡುಕಿಕೊಂಡು ಬರುತ್ತಾರೆ,” ಎಂದು ದಿಲಾವರ್ ಹೇಳುತ್ತಾರೆ. “ಅವನು ಎಲ್ಲಿಯವರೆಗೆ ಓದುತ್ತಾನೋ ಅಲ್ಲಿಯ ತನಕ ಅವನನ್ನು ಓದಿಸಲು ನನ್ನ ಸಾಮರ್ಥ್ಯ ಮೀರಿ ಪ್ರಯತ್ನಿಸುತ್ತೇನೆ. ಅವನ ಓದಿಗಾಗಿ ಮನೆ ಅಥವಾ ಹೊಲ ಮಾರಬೇಕಾಗಿ ಬಂದರೂ ಸರಿಯೇ ನಾನು ತಯಾರು. ಈ ಮಾತನ್ನು ಅವನಿಗೂ ಹೇಳಿದ್ದೇನೆ. ಯಾಕೆಂದರೆ ಭೂಮಿಯನ್ನು ಮುಂದೆಯೂ ಕೊಂಡುಕೊಳ್ಳಬಹುದು ಆದರೆ ಅವನ ವಿದ್ಯೆಯನ್ನಲ್ಲ.“ ರಾಜು ನನ್ನೊಂದಿಗೆ ಸರಳವಾಗಿ ಹೇಳುತ್ತಾರೆ “ದಯವಿಟ್ಟು ಅವನನ್ನು ಚೆನ್ನಾಗಿನೋಡಿಕೊಳ್ಳಿ. ನಮ್ಮ ಬಳಿ ಹೆಚ್ಚೇನೂ ಇಲ್ಲ. ನಮಗಿರುವುದು ಅವನೊಬ್ಬನೇ ಮಗ. ಅವನ (ಇಬ್ಬರು) ಅಕ್ಕಂದಿರಿಗೂ ಮದುವೆಯಾಗಿದೆ.”
ಪ್ರಸ್ತುತ ಜೈಪಾಲ್ ಅವರ ಮನೆ ಮನೆಗಳ ಪ್ರತಿಕೃತಿಗಳಿಂದ ಅಲಂಕರಿಸಲ್ಪಟ್ಟಿದ್ದರೂ, ಅವರ ಕುಟುಂಬವು ಸ್ಥಳಾಂತರದ ನೋವನ್ನು ಅನುಭವಿಸಿದೆ. 2008ರಲ್ಲಿ, ಅವರು ತಮ್ಮ ಗ್ರಾಮವಾದ ಕರೋಲಿಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಟೋಕಿಯನ್ನು ಬಿಡಬೇಕಾಗಿ ಬಂತು. ಓಂಕಾರೇಶ್ವರ ಅಣೆಕಟ್ಟೆಯ ಮುಳುಗಡೆ ಪ್ರದೇಶವಾಗಿ ಅದನ್ನು ಗುರುತಿಸಲಾಗಿತ್ತು.
10 ಕಿಲೋಮೀಟರ್ ದೂರದ ಹಳ್ಳಿಯಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಆದರೂ, ಾ ಊರು ದೂರದ ಪ್ರದೇಶ ಮತ್ತು ನಿರ್ಜನವಾಗಿದ್ದ ಕಾರಣ, ದಿಲಾವರ್ ಅಲ್ಲಿಗೆ ಹೋಗಲು ನಿರಾಕರಿಸಿದರು. "ಯಾವುದೇ ಅಂಗಡಿಗಳು ಇರಲಿಲ್ಲ, ಕೆಲಸವೂ ಸಿಗುತ್ತಿರಲಿಲ್ಲ" ಎಂದು ಜಯಪಾಲ್ ಹೇಳುತ್ತಾರೆ. ನಂತರ ಅವರ ತಂದೆ ಪರಿಹಾರವಾಗಿ ಪಡೆದ ಹಣದಲ್ಲಿ ಕರೋಲಿಯಲ್ಲಿ ಒಂದು ಸಣ್ಣ ತುಂಡು ಭೂಮಿಯನ್ನು ಖರೀದಿಸಿದರು. ಅವರು ಪ್ರಸ್ತುತ ಅದೇ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. ದಿಲಾವರ್ ಅವರ ಪೂರ್ವಜರ ಎರಡು ಎಕರೆ ಕೃಷಿ ಭೂಮಿಯೂ ಸಿಕ್ಕಿತು. ಕರೋಲಿಯಿಂದ 80 ಕಿಮೀ ದೂರದಲ್ಲಿರುವ ಈ ಭೂಮಿಯಲ್ಲಿ ಅವರು ಸೋಯಾಬೀನ್, ಗೋಧಿ ಮತ್ತು ಈರುಳ್ಳಿಯನ್ನು ಬೆಳೆಯುತ್ತಾರೆ.
ಜಯಪಾಲ್ ಅವರು ಟೋಕಿಯಲ್ಲಿದ್ದ ಟಿನ್‌ಶೀಟ್‌ನ ಛಾವಣಿ ಹೊಂದಿದ್ದ ತಾನು ಜನಿಸಿದ ಮಣ್ಣಿನ ಮನೆಯ ನೆನಪು ಅವರಲ್ಲಿ ಅಸ್ಪಷ್ಟವಾಗಿದೆ. "ನನಗೆ ಹೆಚ್ಚು ನೆನಪಿಲ್ಲ. ಈಗ ನಾನು ಮನೆಗಳ ಮಾದರಿಗಳನ್ನು ತಯಾರಿಸುತ್ತಿದ್ದೇನೆ, ಆದರೆ ಅವುಗಳಲ್ಲಿ ಕೆಲವು ಮುಳುಗಿರುವ ಕಾರಣ ನಾನು ಹೋಗಿ ನೋಡಲು ಸಾಧ್ಯವಿಲ್ಲ. ಆದರೆ ನಾನು ಈಗ ವಾಸಿಸುತ್ತಿರುವ ಮನೆಯ ಮಾದರಿಯನ್ನು ಮಾಡಬೇಕೆಂದಿದ್ದೇನೆ."
ಕುಟುಂಬವು ಈ ಮನೆಯಿಂದಲೂ ಸ್ಥಳಾಂತರಗೊಳ್ಳಬೇಕಾಗಬಹುದು ಏಕೆಂದರೆ ಜಮೀನು ಬೀದಿಯ ಸಮೀಪದಲ್ಲಿರುವುದರಿಂದ ಅದನ್ನು ಸರ್ಕಾರವು ಆರು ಪಥದ ರಸ್ತೆಯಾಗಿ ವಿಸ್ತರಿಸಲು ಯೋಜಿಸಿದೆ ಎಂದು ವರದಿಯಾಗಿದೆ. "ಆಗ ನಾವು ಮತ್ತೊಮ್ಮೆ ಬೇರೆ ಕಡೆಗೆ ಹೋಗಬೇಕಾಗುತ್ತದೆ" ಎಂದು ಜಯಪಾಲ್ ಹೇಳುತ್ತಾರೆ.
ಅವರು ಮತ್ತಷ್ಟು ಓದಲು ಯೋಜಿಸುತ್ತಿದ್ದು ಸಿವಿಲ್ ಎಂಜಿನಿಯರ್ ಆಗುವ ಬಯಕೆಯಲ್ಲಿದ್ದಾರೆ. ಏಕೆಂದರೆ ಅವರು ಕಟ್ಟಡ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಆ ಅರ್ಹತೆಯೊಂದಿಗೆ ಸರ್ಕಾರಿ ಉದ್ಯೋಗ ಪಡೆಯುವ ನಿರೀಕ್ಷೆಯುವ ನಿರೀಕ್ಷೆಯೂ ಅವರಿಗಿದೆ.
ಇತ್ತೀಚೆಗೆ, ಅವರು ತಾಜ್ ಮಹಲ್ ಮಾದರಿಯನ್ನು ತಯಾರಿಸಲು ಆರಂಭಿಸಿದ್ದಾರೆ. "ನಮ್ಮ ಮನೆಗೆ ಬಂದು ಮಾಡೆಲ್‌ಗಳನ್ನು ನೋಡಿದ ಯಾರಾದರೂ ತಾಜ್ ಮಹಲ್ ಮಾಡಿದ್ದೀರಾ ಎಂದು ನನ್ನನ್ನು ಕೇಳುತ್ತಾರೆ" ಎಂದು ಅವರು ಹೇಳುತ್ತಾರೆ. ಇದಕ್ಕೆ ಸಾಕಷ್ಟು ಕಾಗದದ ಅಗತ್ಯವಿರುತ್ತದೆ - ಆದರೆ ಭವ್ಯ ಸ್ಮಾರಕವು ಆಕಾರವನ್ನು ಪಡೆಯುತ್ತಿದೆ. ಮತ್ತು ಮುಂದಿನ ದಿನಗಳಲ್ಲಿ ಇವರ ಕೈಯಿಂದ ಇನ್ನಷ್ಟು ಸ್ಮಾರಕಗಳು ಅರಳಲಿವೆ - ಇವುಗಳಲ್ಲಿ ಪ್ರತಿಯೊಂದನ್ನೂ ಕೌಶಲ ಮತ್ತು ತಾಳ್ಮೆಯಿಂದ ರಚಿಸಲಾಗಿದೆ, ಮತ್ತು ಅಂಟು ಮತ್ತು ಸಾಕಷ್ಟು ಹಳೆಯ ಕಾಗದ.
ಅನುವಾದ: ಶಂಕರ ಎನ್. ಕೆಂಚನೂರು