"ಪೊಲೀಸರು ನಮಗೆ ಮನೆಯೊಳಗೇ ಇರಲು ಕೇಳಿಕೊಂಡರು, ದಿನಸಿ ಅಥವಾ ಇತರ ಅಗತ್ಯ ವಸ್ತುಗಳನ್ನು ತರಲು ಹೊರಗಡೆ ಹೋದಾಗಲೆಲ್ಲಾ ಅವರು ನಮ್ಮನ್ನು ರೂಮ್ ಗಳಿಗೆ ತಲುಪುವವರೆಗೆ ಬಾರಿಸುತ್ತಿದ್ದರು, ರಾತ್ರಿ ವೇಳೆ ನಾವು ಮೂತ್ರ ವಿಸರ್ಜನೆಗೆ ಹೊರಟರೂ ಸಹಿತ ಅವರು ಅಲ್ಲಿ ಹಾಜರಿರುತ್ತಿದ್ದರು, ನಮಗೆ ಹೊಡೆಯಲು ಅವರು ಕಾಯುತ್ತಿದ್ದರು' ಎಂದು ಡೋಲಾ ರಾಮ್ ಹೇಳುತ್ತಾರೆ. ಹೀಗೆ ಮುಂಬೈನಲ್ಲಿ ರಾಷ್ಟ್ರವ್ಯಾಪಿ ಕೊರೊನಾ ಲಾಕ್ ಡೌನ್ ನ ಆರಂಭದ ಕೆಲವು ದಿನಗಳನ್ನು ಸ್ಮರಿಸಿಕೊಳ್ಳುತ್ತಿದ್ದರು.

ಮಾರ್ಚ್ 25ರ ಬೆಳಿಗ್ಗೆ, ಡೋಲಾ ರಾಮ್ ಮತ್ತು ಅವರ ಸಹೋದ್ಯೋಗಿಗಳು ಲಾಕ್‌ಡೌನ್ ಬಗ್ಗೆ ಕೇಳಿದ ನಂತರ ಮಲಾಡ್‌ನಲ್ಲಿರುವ ತಮ್ಮ ಕಾರ್ಯಕ್ಷೇತ್ರದಿಂದ ಬೋರಿವಾಲಿಯ ತಮ್ಮ ರೂಮ್ ಗಳಿಗೆ ಮರಳಿದರು. ಪರಿಸ್ಥಿತಿ ಬದಲಾಗಬಹುದು ಎಂದು ನಿರೀಕ್ಷಿಸುತ್ತಾ ಪ್ರತಿಯೊಬ್ಬರು 1000 ರೂ.ದಂತೆ ತಿಂಗಳ ಬಾಡಿಗೆ ನೀಡಿ, ಒಟ್ಟು 15 ಜನ ಆರು ದಿನಗಳ ಕಾಲ ಇಕ್ಕಟ್ಟಾದ ಕೋಣೆಯಲ್ಲಿಯೇ ಇದ್ದರು. ಆದರೆ ಶೀಘ್ರದಲ್ಲೇ ಅವರಿಗೆ ಆಹಾರದ ಕೊರತೆ ಎದುರಾಗಲು ಪ್ರಾರಂಭವಾಯಿತು. ಇದರಿಂದಾಗಿ 37 ವರ್ಷದ ಡೋಲಾ ರಾಮ್ ಮತ್ತು ಇತರರು ರಾಜಸ್ಥಾನದಲ್ಲಿ ತಮ್ಮ ಹಳ್ಳಿಗಳ ಮನೆಗೆ ಹಿಂದಿರುಗಲು ನಿರ್ಧರಿಸಿದರು.

"ಹೋಳಿ ಹಬ್ಬದ ನಂತರ ನಾವು ಹಳ್ಳಿಯಿಂದ ಹಿಂತಿರುಗಿದ್ದರಿಂದ, ಮುಂಬೈನಲ್ಲಿ ಯಾವುದೇ ಕೆಲಸ ಇರಲಿಲ್ಲ. ನಮ್ಮಲ್ಲಿ ಹೆಚ್ಚಿನ ಉಳಿತಾಯವೂ ಇರಲಿಲ್ಲ. ಆದ್ದರಿಂದ ನಗರದಲ್ಲಿ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಡೋಲಾ ರಾಮ್ ನಮ್ಮೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಾ ತಿಳಿಸಿದರು. ನಗರದಿಂದ ಹೊರಡುವ ಮೊದಲು ಅವರ ಐದು ವರ್ಷದ ಮಗ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂಬ ಸುದ್ದಿ ಬಂದಿತು. ಅವರ ಪತ್ನಿ ಸುಂದರ್ ಮತ್ತು ಇತರ ಸಂಬಂಧಿಕರು ಮಗುವನ್ನು ಮೊದಲು ಆಸ್ಪತ್ರೆಗೆ, ನಂತರ ಸ್ಥಳೀಯ ನಾಟಿ ವೈದ್ಯರಾದ ಭೋಪಾ ಬಳಿ ಕರೆದೊಯ್ದರೂ ಸಹಿತ ಮಗುವಿಗೆ ಗುಣಮುಖವಾಗಿರಲಿಲ್ಲ.

ರಾಜಸ್ಥಾನದ ಉದಯಪುರ ಜಿಲ್ಲೆಯ ಬರೋಲಿಯಾದಲ್ಲಿ ಹೋಳಿ ಹಬ್ಬವನ್ನು (ಮಾರ್ಚ್ 9-10) ಆಚರಿಸಿದ ಕೆಲವು ದಿನಗಳ ನಂತರ ಡೋಲಾ ರಾಮ್ ಮುಂಬೈಗೆ ಮರಳಿದ್ದರು. ಜೀವನೋಪಾಯಕ್ಕಾಗಿ ಅವರು ವರ್ಷಕ್ಕೆ 8-9 ತಿಂಗಳುಗಳನ್ನು ಸಾಲುಂಬಾರ್ ಬ್ಲಾಕ್‌ನಲ್ಲಿರುವ ತಮ್ಮ ಹಳ್ಳಿಯಿಂದ ಹೊರಗೆ ಕಳೆಯುತ್ತಾರೆ. ಕಳೆದ 15 ವರ್ಷಗಳಿಂದ ಅವರು ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಕಲ್ಲು ಒಡೆಯುವ ಕೆಲಸವನ್ನು ಮಾಡಿದ್ದಾರೆ, ರಾಜಸ್ಥಾನದಲ್ಲಿರುವ  ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ, ಅಥವಾ ಗೋವಾ, ಪುಣೆ ಮತ್ತು ಗುಜರಾತ್‌ಗೆ ಹೋಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ಮುಂಬೈಗೆ ಬರುತ್ತಿದ್ದಾರೆ. ಡೋಲಾ ರಾಮ್ ಅವರ ಇತ್ತೀಚಿನ ಕೆಲಸವು ಮಾರ್ಬಲ್ ಪಾಲಿಶ್ ಮಾಡುವುದಾಗಿದೆ, ಇದರಿಂದ ಅವರಿಗೆ ತಿಂಗಳಿಗೆ 12,000 ರೂಪಾಯಿ ಸಂಬಳ ಬರುತ್ತದೆ. ಅದರಲ್ಲಿ ಅವರು 7,000-8,000 ರೂ.ಗಳನ್ನು ಮನೆಗೆ ಕಳಿಸುತ್ತಾರೆ.ವರ್ಷದಲ್ಲಿ ಹೋಳಿಹಬ್ಬ ಮತ್ತು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಅವರು ಎರಡು ಬಾರಿ ತಮ್ಮ ಕುಟುಂಬವನ್ನು ಭೇಟಿ ಮಾಡುತ್ತಾರೆ. ಪ್ರತಿ ಬಾರಿ 15ರಿಂದ 30 ದಿನಗಳನ್ನು ಕಳೆದ ನಂತರ ಮತ್ತೆ ಹಿಂತಿರುಗುತ್ತಾರೆ.

ಮುಂಬೈಯಿಂದ ಇತ್ತೀಚೆಗಿನ ಬರೋಲಿಯಾಕ್ಕೆ ಬಂದಿದ್ದ ಪ್ರಯಾಣವು ಡೋಲಾ ರಾಮ್‌ಗೆ ನಿರೀಕ್ಷಿಸಿದಂತೆ ಇರಲಿಲ್ಲ, ಅದು ಕಷ್ಟಕರವಾಗಿತ್ತು. ಲಾಕ್ ಡೌನ್ ಪ್ರಾರಂಭವಾದ ಆರು ದಿನಗಳ ನಂತರ, ಅಂದರೆ ಮಾರ್ಚ್ 31 ರಂದು ಅವರು ಮತ್ತು ಇತರ ಸಹಚರರು ನಗರವನ್ನು ತೊರೆಯಲು ಆರಂಭಿಸಿದರು.“ರಾಜಸ್ತಾನದಲ್ಲಿನ ನಮ್ಮ ಹಳ್ಳಿಗೆ ತಲುಪಲು 19 ಜನರೆಲ್ಲರೂ ಸೇರಿ ಒಂದು ಟ್ಯಾಕ್ಸಿಯನ್ನು ಬಾಡಿಗೆಗೆ ತೆಗೆದುಕೊಂಡೆವು. ಆದರೆ ಮಹಾರಾಷ್ಟ್ರದ ಗಡಿಯಲ್ಲಿ ಪೊಲೀಸರು ನಮಗೆ ಹೋಗಲು ಅವಕಾಶ ನೀಡದೆ ವಾಪಸ್ ಕಳಿಸಿದರು. ಇದರಿಂದಾಗಿ ನಾವು ಮುಂಬೈನಲ್ಲಿ ಸಿಕ್ಕಿಕೊಳ್ಳಬೇಕಾಯಿತು”.ಎಂದು ಹೇಳಿದರು.

Young men wait for contractors at the labour naka in Udaipur. At least one male from most of the families in the district migrates for work (file photos)
PHOTO • Manish Shukla
Young men wait for contractors at the labour naka in Udaipur. At least one male from most of the families in the district migrates for work (file photos)
PHOTO • Jyoti Patil

ಉದಯಪುರದ ಶ್ರಮಿಕ್ ನಾಕಾದಲ್ಲಿ ಯುವಕರು ಗುತ್ತಿಗೆದಾರರಿಗಾಗಿ ಕಾಯುತ್ತಿರುವುದು. ಜಿಲ್ಲೆಯ ಬಹುತೇಕ ಕುಟುಂಬಗಳಿಂದ ಕನಿಷ್ಠ ಒಬ್ಬನಾದರೂ ಕೆಲಸಕ್ಕಾಗಿ ವಲಸೆ ಹೋಗುತ್ತಾನೆ (ಸಂಗ್ರಹ ಚಿತ್ರಗಳು)

ಏಪ್ರಿಲ್ 1ರ ಬೆಳಿಗ್ಗೆ 5 ಗಂಟೆಗೆ ಯಾವುದೇ ಅಡೆತಡೆ ಇಲ್ಲದೆ ಮತ್ತೆ ಮುಂಬಯಿಯಿಂದ ಹೊರಟರು. ಈ ಬಾರಿ ಅವರು ಜೋಡಿಯಾಗಿ ನಡೆದು ಮಹಾರಾಷ್ಟ್ರ-ಗುಜರಾತ್ ಗಡಿಗೆ ತೆರಳಿದರು. ತಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದ ಒಣ ಚಪಾತಿಗಳು ಕೇವಲ ಒಂದು ದಿನಕ್ಕೂ ಮೊದಲೇ ಖಾಲಿಯಾಗಿದ್ದವು. ಮರುದಿನ ಅವರು ಸೂರತ್ ಗೆ ತಲುಪಿದಾಗ ಆಗಲೇ ಪರಿಸ್ಥಿತಿ ಕಾವೇರಿತ್ತು, ವಲಸೆ ಕಾರ್ಮಿಕರು ತಮ್ಮನ್ನು ಮನೆಗೆ ತೆರಳಲು ಅನುವು ಮಾಡಿಕೊಡಬೇಕೆಂದು ಪ್ರತಿಭಟಿಸುತ್ತಿದ್ದರು.ಸೂರತ್‌ನಲ್ಲಿ ಪೊಲೀಸರು ಕಾರ್ಮಿಕರಿಗೆ ಅಷ್ಟೇ ಸಹಾಯವನ್ನು ಕೂಡ ಮಾಡಿದರು. ಚಹಾ ಮತ್ತು ಬಿಸ್ಕಿಟ್ ಗಳನ್ನು ನೀಡಿದರು ಎಂದು ಅವರು ಹೇಳುತ್ತಾರೆ. ರಾಜಸ್ಥಾನದ ಗಡಿಯುದ್ದಕ್ಕೂ ಸುಮಾರು 380 ಕಿಲೋಮೀಟರ್ ದೂರದಲ್ಲಿರುವ ಬನ್ಸ್ವಾರಕ್ಕೆ ಟ್ರಕ್‌ನಲ್ಲಿ ಕಳುಹಿಸಲು ವ್ಯವಸ್ಥೆಯನ್ನು ಸಹಿತ ಮಾಡಿದ್ದರು.

ಬನ್ಸ್ವಾರಾದ ಗಡಿಯಲ್ಲಿ, ಸ್ಥಳೀಯ ಅಧಿಕಾರಿಗಳು ಜನರನ್ನು ಜ್ವರದ ತಪಾಸಣೆಗೆ ಒಳಪಡಿಸಿದ ನಂತರವೇ ಅವರನ್ನು ಊರಿಗೆ ಹೋಗಲು ಅನುಮತಿಸುತ್ತಿದ್ದರು. “ನಮಗೆ ಅಲ್ಲಿ ಗ್ಲೂಕೋಸ್ ಬಿಸ್ಕತ್ತು ನೀಡಲಾಯಿತು. ಅದರಲ್ಲಿ ನಾವು ಕೆಲವನ್ನು ತಿಂದರೆ, ಕೆಲವನ್ನು ದಾರಿಯಲ್ಲಿ ತಿನ್ನಲು ತೆಗೆದುಕೊಂಡಿದ್ದೇವೆ” ಎಂದು ಡೋಲಾ ರಾಮ್ ಹೇಳುತ್ತಾರೆ. ಅಲ್ಲಿಂದ ಅವರು 63 ಕಿಲೋಮೀಟರ್ ದೂರದಲ್ಲಿರುವ ಆಸ್ಪುರಕ್ಕೆ ನಡೆದು ರಾತ್ರಿ ಧರ್ಮಶಾಲಾದಲ್ಲಿ ಉಳಿದುಕೊಂಡಿದ್ದರು. ನಂತರ ಅವರು ತರಕಾರಿಗಳನ್ನು ತಲುಪಿಸುವ ಪಿಕ್-ಅಪ್ ಟ್ರಕ್‌ನಲ್ಲಿ ಸಲುಂಬಾರ್‌ಗೆ ತೆರಳಿದರು, ಆ 24 ಕಿಲೋಮೀಟರ್ ಪ್ರಯಾಣಕ್ಕೆ ಯಾವುದೇ ಶುಲ್ಕ ವಿಧಿಸಲಿಲ್ಲ. ಕೊನೆಗೆ ಏಪ್ರಿಲ್ 5 ರಂದು ಅವರು ಸಲುಂಬಾರ್‌ನಿಂದ 14 ಕಿಲೋಮೀಟರ್ ದೂರದಲ್ಲಿರುವ ಬರೋಲಿಯಾಗೆ ಸಂಜೆ 7 ಗಂಟೆಗೆ ತಲುಪಿದರು.

ಬನ್ಸ್ವಾರಾದ ಕೆಲವು ಪೊಲೀಸರು, ಅವರನ್ನು ಮತ್ತು ಅವರ ಸಹಚರರನ್ನು ‘ರೋಗ ವಾಹಕರು’ (ಕರೋನವೈರಸ್) ಎಂದು ಕರೆದರು. 'ನಮಗೆ ಜ್ವರದ ಪರೀಕ್ಷೆ ಮಾಡಲಾಯಿತು. ಆದರೆ ನಮಗೆ ಹೀಗೇಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ.

ಮನೆಗೆ ತಲುಪಿದ ನಂತರವೂ ಡೋಲಾ ರಾಮ್‌ ಅವರ ಸಮಸ್ಯೆಗಳು ಬಗೆಹರಿಯಲಿಲ್ಲ. ಅವರು ತಮ್ಮ ಅನಾರೋಗ್ಯದಿಂದ ಬಳಲುತ್ತಿದ್ದ ಮಗನನ್ನು ಬರೋಲಿಯಾದಿಂದ 5-6 ಕಿಲೋಮೀಟರ್ ದೂರದಲ್ಲಿರುವ ಮಾಲ್ಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಏಪ್ರಿಲ್ 6 ರಂದು ನಾವು ಅವರೊಂದಿಗೆ ಮಾತನಾಡಿದಾಗ, "ನನ್ನ ಮಗನಿಗೆ ಜ್ವರ ಇದ್ದಿದ್ದರಿಂದ, ನಿನ್ನೆ ನನ್ನ ಹೆಂಡತಿ ಮತ್ತು ನಾನು ಮಗನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆವು. ಆಗ ಪೊಲೀಸರು ನಮ್ಮ ಮೇಲೆ ಹಲ್ಲೆ ಮಾಡಿ ನಮಗೆ ಹಿಂತಿರುಗಲು ಸೂಚಿಸಿದರು. ನಾವು ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ಹೇಳಿದಾಗಲೇ ಅವರು ನಮಗೆ ಹೋಗಲು ಅನುಮತಿ ನೀಡಿದ್ದು.” ಎಂದು ಅವರು ಹೇಳಿದರು. “ಇನ್ನೂ ಆಸ್ಪತ್ರೆಯಲ್ಲಿ, ಮಗನಿಗೆ ಉತ್ತಮ ಆರೈಕೆಯೂ ಸಿಗಲಿಲ್ಲ. ಆಸ್ಪತ್ರೆಗಳು ಈಗ ಜನಸಂದಣಿಯಿಂದ ಕೂಡಿವೆ. ವೈದ್ಯರು ನಮ್ಮ ಮಗನನ್ನು ಸರಿಯಾಗಿ ಪರೀಕ್ಷಿಸದೆ ಹಿಂತಿರುಗಲು ಸೂಚಿಸಿದರು" ಎಂದು ಡೋಲಾ ರಾಮ್ ವಿವರಿಸಿದರು.

ಮೂರು ದಿನಗಳ ನಂತರ ಮಗು ಸಾವನ್ನಪ್ಪಿತು, ಕೊನೆಗೆ ಅವನಿಗಿರುವ ಕಾಯಿಲೆ ಕೂಡ ಪತ್ತೆಯಾಗಲಿಲ್ಲ.ಆಘಾತದ ಸ್ಥಿತಿಯಲ್ಲಿದ್ದ ಮತ್ತು ಕೆಲವು ದಿನಗಳವರೆಗೆ ಮಾತನಾಡಲು ಸಾಧ್ಯವಾಗದ ತಂದೆ ಈಗ ನಮಗೆ ಹೀಗೆ ಹೇಳುತ್ತಾರೆ, “ಇದರ ಬಗ್ಗೆ ಯಾರೂ ಏನೂ ಮಾಡಲಾಗಲಿಲ್ಲ. ಭೋಪಾ ಮತ್ತು ವೈದ್ಯರು ಕೂಡ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅವನನ್ನು ಉಳಿಸುವ ಎಲ್ಲ ಪ್ರಯತ್ನವನ್ನು ಮಾಡಿದ್ದೇವೆ.ಆದರೆ, ನಮಗೆ ಉಳಿಸಲು ಸಾಧ್ಯವಾಗಲಿಲ್ಲ" ಎಂದು ಹೇಳಿದರು. ಯಾವುದೋ ಒಂದು ಶಕ್ತಿ ತಮ್ಮ ಮಗುವನ್ನು ತೆಗೆದುಕೊಂಡಿದೆ ಎಂದು ಅವರ ಕುಟುಂಬವರು ನಂಬಿದ್ದಾರೆ..

Many labourers from Udaipur district, who migrate to different parts of the country, are stranded because of the lockdown (file photo)
PHOTO • Manish Shukla

ದೇಶದ ವಿವಿಧ ಭಾಗಗಳಿಗೆ ವಲಸೆ ಹೋಗುವ ಉದಯಪುರ ಜಿಲ್ಲೆಯ ಅನೇಕ ಕಾರ್ಮಿಕರು ಲಾಕ್‌ಡೌನ್ ದಿಂದ ಸಿಕ್ಕಿಹಾಕಿಕೊಂಡಿದ್ದಾರೆ.(ಸಂಗ್ರಹ ಚಿತ್ರ)

1,149 ಜನಸಂಖ್ಯೆಯನ್ನು ಹೊಂದಿರುವ ಗ್ರಾಮವಾಗಿರುವ ಬರೋಲಿಯಾದಲ್ಲಿ, ಬಹುತೇಕ ಎಲ್ಲರೂ ಮೀನಾ (ಮಿನಾ ಎಂದು ಸಹ ಕರೆಯುತ್ತಾರೆ) ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಇದು ಪರಿಶಿಷ್ಟ ಪಂಗಡದ ಜನಸಂಖ್ಯೆಯ ಶೇಕಡಾ 99.56 ರಷ್ಟಿದೆ. ಹಳ್ಳಿಯ ಆದಾಯದ ಬಹುಪಾಲು ಭಾಗವು ಡೋಲಾರಾಮ್ ರಂತೆ ಕೆಲಸಕ್ಕೆ ವಲಸೆ ಹೋಗುವ ಪುರುಷ ಕಾರ್ಮಿಕರಿಂದ ಬರುತ್ತದೆ.ರಾಜಸ್ಥಾನದ ವಲಸೆ ಕಾರ್ಮಿಕರೊಂದಿಗೆ ಕೆಲಸ ಮಾಡುವ ಆಜೀವಿಕಾ ಬ್ಯೂರೋ ಎಂಬ ಸಂಸ್ಥೆ ಇತ್ತೀಚಿಗೆ ಸಲುಂಬಾರ್ ಬ್ಲಾಕ್‌ನಲ್ಲಿ ಮಾಡಿದ ಸಮೀಕ್ಷೆಯಲ್ಲಿ, ಶೇಕಡಾ 70 ರಷ್ಟು ಮನೆಗಳಿಂದ ಕನಿಷ್ಠ ಒಬ್ಬ ಪುರುಷ ಕೆಲಸಕ್ಕಾಗಿ ವಲಸೆ ಹೋಗುವುದನ್ನು ತೋರಿಸುತ್ತದೆ. ಅವರು ಮನೆಗೆ ವಾಪಸ್ ಕಳುಹಿಸುವ ಹಣವು ಆ ಮನೆಗಳ ಆದಾಯದ ಶೇಕಡಾ 60 ರಷ್ಟಿದೆ. ಮಹಿಳೆಯರು ಮತ್ತು ಯುವತಿಯರು ಸಾಮಾನ್ಯವಾಗಿ ಸಲುಂಬಾರ್‌ನ ಸ್ಥಳೀಯ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ.

ದೇಶಾದ್ಯಂತ ರಾಜ್ಯಗಳು ತಮ್ಮ ಗಡಿಗಳನ್ನು ಲಾಕ್ ಡೌನ್ ಮಾಡಲು ಮೊಹರು ಮಾಡಿ ಅಂತರರಾಜ್ಯ ಪ್ರಯಾಣವನ್ನು ಸ್ಥಗಿತಗೊಳಿಸಿದ್ದರಿಂದಾಗಿ ರಾಜಸ್ಥಾನದ ಸಾವಿರಾರು ವಲಸೆ ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ದರು. ಮಾರ್ಚ್ 25 ರ ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯಂತೆ, ಅಹಮದಾಬಾದ್ ನಗರದಲ್ಲಿ ವಾಸಿಸುತ್ತಿರುವ ರಾಜಸ್ಥಾನದ 50,000 ಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಮನೆಗೆ ಹಿಂದಿರುಗಲು ಪ್ರಾರಂಭಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

ಅವರಲ್ಲಿ 14 ವರ್ಷದ ಮುಖೇಶ್ (ಹೆಸರು ಬದಲಾಯಿಸಲಾಗಿದೆ), ಲಾಕ್ ಡೌನ್ ನಿಂದಾಗಿ ಬರೋಲಿಯಾದಲ್ಲಿರುವ ತಮ್ಮ ಮನೆಗೆ ವಾಪಾಸ್ಸಾಗಿದ್ದರು. ಅವರು ಅಹಮದಾಬಾದ್‌ನ ಉಪಾಹಾರ ಗೃಹವೊಂದರಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿ ಅವರ ಕೆಲಸ ಚಪಾತಿಗಳನ್ನು ತಯಾರಿಸುವುದಾಗಿತ್ತು. ಇದರಿಂದ ಅವರು ತಿಂಗಳಿಗೆ 8,000 ರೂ.ಗಳನ್ನು ಸಂಪಾದಿಸುತ್ತಿದ್ದರು. ಮುಖೇಶ್ ಅವರ ಕುಟುಂಬದ ಗಳಿಕೆಯ ಪ್ರಮುಖ ಸದಸ್ಯರಾಗಿದ್ದು. ಅವರ ವಿಧವೆ ತಾಯಿ ರಾಮ್ಲಿ (ಹೆಸರು ಬದಲಾಯಿಸಲಾಗಿದೆ) ಕ್ಷಯರೋಗದಿಂದ ಬಳಲುತ್ತಿದ್ದಾರೆ. ಅವರು ದಿನಗೂಲಿಗಾಗಿ ಸ್ಥಳೀಯ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ, ಆದರೆ ದೀರ್ಘಾವಧಿಯವರೆಗೆ ಇದನ್ನು ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. "ನಾನು ಚಿಕ್ಕವನು (ಅಪ್ರಾಪ್ತ ವಯಸ್ಕ) ಎಂದು ನನಗೆ ತಿಳಿದಿದೆ, ಆದರೆ ನನಗೆ ಕೆಲಸ ಮಾಡದೆ ಬೇರೆ ಯಾವುದೇ ದಾರಿಯಿಲ್ಲ "ಎಂದು ನಾಲ್ಕು ಕಿರಿಯ ಸಹೋದರರನ್ನು ಹೊಂದಿರುವ ಮುಖೇಶ್ ಹೇಳುತ್ತಾರೆ.

“ಹಣವಿಲ್ಲ, ಕೆಲಸವೂ ಇಲ್ಲ.ಹಾಗಾದರೆ ನಾವು ಮಾಡುವುದಾದರೂ ಏನು?” ಎಂದು ಮೀನಾ ಬುಡಕಟ್ಟು ಜನಾಂಗಕ್ಕೆ ಸೇರಿದ 40 ವರ್ಷದ ರಾಮ್ಲಿ ಪ್ರಶ್ನಿಸುತ್ತಾರೆ. “ಈಗಲೂ ನಾವು ಹಣ ಸಂಪಾದಿಸಲು, ಮಕ್ಕಳಿಗೆ ಆಹಾರವನ್ನು ನೀಡಲು ಮತ್ತು ಸಾಲವನ್ನು ಮರು ಪಾವತಿಸಲು ಕೆಲಸ ಮಾಡಬೇಕಾಗುತ್ತದೆ.ಸರ್ಕಾರ ನಮಗೆ ಏನನ್ನೂ ನೀಡಲು ಮುಂದಾಗುವುದಿಲ್ಲ” ಎಂದು ಅವರು ಪೋನ್ ಕರೆಯ ವೇಳೆ ತಿಳಿಸಿದರು.

ಲಾಕ್ ಡೌನ್ ಸಮಯದಲ್ಲಿ ಕಟ್ಟಡ ನಿರ್ಮಾಣದ ಯಾವುದೇ ಕೆಲಸಗಳಿಲ್ಲದ ಕಾರಣ, ರಾಮ್ಲಿ ಹತ್ತಿರದ ಕುಗ್ರಾಮದಲ್ಲಿರುವ ಜಮೀನಿನಲ್ಲಿ ಕೆಲಸವನ್ನು ಹುಡುಕಬೇಕಾಯಿತು. ಆದರೆ ಈಗ ಅವರ ಔಷಧಿಗಳು ಖಾಲಿಯಾಗಿದ್ದರಿಂದಾಗಿ, ಅವರಿಗೆ ಮತ್ತೆ ಹುಷಾರಿಲ್ಲ, ಹೀಗಾಗಿ ಅವರು 2-3 ದಿನಗಳಲ್ಲಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಪರಿಹಾರ ಪ್ಯಾಕೇಜಿನ ಭಾಗವಾಗಿ ಅತ್ಯಂತ ಬಡ ಕುಟುಂಬಗಳಿಗೆ ವಿತರಿಸಿದ ಪಡಿತರ ಕಿಟ್‌ಗಳನ್ನು ಪಡೆಯಲು ಗ್ರಾಮ ಪಂಚಾಯಿತಿಯೊಂದಿಗೆ ಹೋರಾಡಬೇಕಾಯಿತು ಎಂದು ಅವರು ಹೇಳುತ್ತಾರೆ. ರೇಷನ್ ಪಟ್ಟಿಯಲ್ಲಿ ತಮ್ಮ ಹೆಸರು ಬರದೆ ಇರುವುದಕ್ಕೆ ಪಂಚಾಯತ್ 'ಸರ್ಪಂಚ್' ಮತ್ತು 'ಸಚಿವ್' ರಸ್ತೆಯಾಚೆಗೆ ಮತ್ತು ಕಾಡಿಗೆ ಹತ್ತಿರದಲ್ಲಿರುವ ತಮ್ಮ ಮನೆಗೆ ಒಮ್ಮೆಯೂ ಭೇಟಿ ನೀಡದೇ ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ.

Left: Mukesh and Ramli at home in Baroliya.'We have to work even now,' says Ramli. Right: Women in Baroliya usually work at local construction sites (file photo)
PHOTO • Dharmendra
Left: Mukesh and Ramli at home in Baroliya.'We have to work even now,' says Ramli. Right: Women in Baroliya usually work at local construction sites (file photo)
PHOTO • Noel

ಎಡ: ಬರೋಲಿಯಾದ ಮನೆಯಲ್ಲಿ ಮುಖೇಶ್ ಮತ್ತು ರಾಮ್ಲಿ. 'ನಾವು ಈಗಲೂ ಕೆಲಸ ಮಾಡಬೇಕಾಗಿದೆ' ಎಂದು ರಾಮ್ಲಿ ಹೇಳುತ್ತಾರೆ. ಬಲ: ಬರೋಲಿಯಾದಲ್ಲಿ ಮಹಿಳೆಯರು ಸಾಮಾನ್ಯವಾಗಿ ಸ್ಥಳೀಯ ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ. (ಸಂಗ್ರಹ ಚಿತ್ರ )

ಕೊನೆಗೆ ರಾಮ್ಲಿ ಮತ್ತು ಮುಖೇಶ್ ರೇಷನ್ ಪಡೆದಾಗ, ಪ್ಯಾಕೇಜ್ ಅಪೂರ್ಣವಾಗಿತ್ತು. "ಇತರ ಪಡಿತರ ಕಿಟ್‌ಗಳಂತೆ ನಮಗೆ ಗೋಧಿ ಅಥವಾ ಅಕ್ಕಿ ಸಿಕ್ಕಿದ್ದಿಲ್ಲ. ಆದರೆ, ನನಗೆ ಯಾರನ್ನು ಕೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ" ಎಂದು ಮುಖೇಶ್ ನಮಗೆ ಹೇಳುತ್ತಾರೆ. ಅವರ ಪಾಲಿಗೆ ಕೇವಲ 500 ಗ್ರಾಂ ಸಕ್ಕರೆ ಮತ್ತು ಎಣ್ಣೆ, 100 ಗ್ರಾಂ ಮೆಣಸಿನ ಪುಡಿ ಮತ್ತು ಕೆಲವು ಮಸಾಲೆಗಳನ್ನು ಹೊಂದಿರುವ ಪಾಕೇಜ್ ಮಾತ್ರ ಬಂದಿತ್ತು. ಆದರೆ ಸರ್ಕಾರ ನೀಡಿರುವ ಪರಿಹಾರದ ಪ್ಯಾಕೆಟ್‌ಗಳಲ್ಲಿ 1 ಕೆಜಿ ಸಕ್ಕರೆ ಮತ್ತು ಎಣ್ಣೆ, ತಲಾ 5 ಕೆಜಿ ಗೋಧಿ ಹಿಟ್ಟು ಮತ್ತು ಅಕ್ಕಿ ಮತ್ತು ಕೆಲವು ಮಸಾಲೆ ಪದಾರ್ಥಗಳು ಇರಬೇಕಾಗಿತ್ತು.

"ಸರ್ಕಾರದ ಘೋಷಣೆಯಂತೆ ನಮಗೆ ಈ ತಿಂಗಳ ರೇಷನನ್ನು ಮುಂಚಿತವಾಗಿ ನೀಡಲಾಗಿದೆ.ಇದರಲ್ಲಿ ಪ್ರತಿ ವ್ಯಕ್ತಿಗೆ ಕೇವಲ ಐದು ಕೆಜಿ ಗೋದಿ ಮಾತ್ರ ಇದೆ, ಇನ್ನಾವುದೇ ಹೆಚ್ಚುವರಿ ವಸ್ತುಗಳು ಇಲ್ಲ. ಈ ಐದು ಕೆಜಿ ರೇಷನ್ ಮುಂದಿನ ಐದು ದಿನಗಳಲ್ಲಿ ಮುಗಿಯುತ್ತದೆ " ಎಂದು ಬರೋಲಿಯಾದಿಂದ 60 ಕಿಲೋಮೀಟರ್ ದೂರದಲ್ಲಿರುವ ಡುಂಗರಪುರ ಜಿಲ್ಲೆಯ ಸಾಗ್ವಾರಾ ಬ್ಲಾಕ್‌ನ ತಮ್ತಿಯಾ ಗ್ರಾಮದ ಕಾರ್ಯಕರ್ತ ಶಂಕರ್ ಲಾಲ್ ಮೀನಾ (43) ಹೇಳುತ್ತಾರೆ.

ಈ ಪರಿಸ್ಥಿತಿಯನ್ನು ಭ್ರಷ್ಟ ರೇಷನ್ ಡೀಲರ್ ಗಳ ಇನ್ನಷ್ಟು ಹದಗೆಡಿಸುತ್ತಿದ್ದಾರೆ ಎಂದು ಶಂಕರ್ ಹೇಳುತ್ತಾರೆ. "ರೇಷನ್ ವಿತರಿಸಲು ನಮ್ಮ ಕುಗ್ರಾಮಕ್ಕೆ ಬರುವ ಡೀಲರ್ ತೂಕ ಮಾಡುವಾಗ ಒಂದು ಅಥವಾ ಎರಡು ಕೆಜಿ ಕದಿಯುತ್ತಾನೆ. ನಮಗೆ ಅವನು ಖದಿಯುತ್ತಾನೆ ಎನ್ನುವುದು ಖಚಿತವಾಗಿದೆ, ಆದರೆ ಇದಕ್ಕೆ ನಾವೇನು ಹೇಳಬೇಕು ಹೇಳಿ?  ಹಳ್ಳಿಗಳಲ್ಲಿ ಉಳಿದ ಕಿರಾಣಿ ಅಂಗಡಿಗಳು ಅದೇ ರೀತಿಯ ಉತ್ಪನ್ನಗಳಿಗೆ ಎರಡು ಪಟ್ಟು ದರವನ್ನು ವಿಧಿಸುತ್ತಿವೆ" ಎಂದು ಅವರು ವಿವರಿಸಿದರು.

ಇನ್ನೂ ಬರೋಲಿಯಾದಲ್ಲಿ, ಜನರು ತಮ್ಮ ಜೀವನೋಪಾಯದ ಆಯ್ಕೆಗಳ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ. ಲಾಕ್‌ಡೌನ್ ಕಾರಣದಿಂದಾಗಿ ಎಲ್ಲ ಕಡೆ ಕಟ್ಟಡದ ನಿರ್ಮಾಣದ ಕಾರ್ಯಗಳು ಸ್ಥಗಿತಗೊಂಡಿವೆ, ಸ್ವಂತ ಜಮೀನನ್ನು ಹೊಂದಿರದ ಡೋಲಾ ರಾಮ್ ತಮ್ಮ ಮಗುವಿನ ಚಿಕಿತ್ಸೆಗಾಗಿ ವಿವಿಧ ಸಂಬಂಧಿಕರಿಂದ, ಸ್ನೇಹಿತರಿಂದ ಮತ್ತು ಮುಂಬೈನ ಸಣ್ಣ ಅಂಗಡಿಯವರಿಂದ, ಊರಿಗೆ ಹಿಂತಿರುಗುವುದಕ್ಕೆ ಪಡೆದಿರುವ 35,000 ರೂ.ಗಳ ಸಾಲವನ್ನು ತೀರಿಸುವ ಬಗ್ಗೆ ಚಿಂತಿತರಾಗಿದ್ದಾರೆ. ಏಪ್ರಿಲ್ 12 ರಂದು ಸಂಭವಿಸಿದ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದರಿಂದಾಗಿ ಅವರ ಯಾತನೆ ಇನ್ನಷ್ಟು ಅಧಿಕಗೊಂಡಿದೆ, ಮತ್ತು ಈಗ ಅವರಿಗೆ ಮತ್ತೆ ಯಾವಾಗ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಯುತ್ತಿಲ್ಲ.

ಆದಾಯದ ಕೊರತೆಯು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎನ್ನುವ ಆತಂಕ ರಾಮ್ಲಿ ಅವರದ್ದು. ಈಗ ಅವರು ಖಾಸಗಿ ಸಾಲಗಾರರಿಂದ ಎರವಲು ಪಡೆದ 10 ಸಾವಿರ ರೂ.ಗಳ ಒಟ್ಟು ನಾಲ್ಕು ಸಾಲಗಳನ್ನು ಮರುಪಾವತಿಸಬೇಕು. ಆ ಹಣವನ್ನು ಅವರ ಚಿಕಿತ್ಸೆಗಾಗಿ, ತಮ್ಮ ಮನೆಯನ್ನು ರಿಪೇರಿ ಮಾಡಲು ಮತ್ತು ಅವರ ಮಕ್ಕಳಲ್ಲಿ ಒಬ್ಬರಿಗೆ ಮಲೇರಿಯಾ ಬಂದಾಗ ಬಳಸಿಕೊಳ್ಳಲಾಗಿದೆ. ಅವರ ಕೊನೆಯ ಸಾಲವು ತಮ್ಮ ಇತರ ಸಾಲಗಳನ್ನು ಮರುಪಾವತಿಸಲು ತೆಗೆದುಕೊಂಡಿದ್ದಾಗಿತ್ತು.

ಕಳೆದುಹೋಗಿರುವ ಸಮಯ ಮತ್ತು ವೇತನವನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಬಗೆಗೆ ಯಾವುದೇ ಸ್ಪಷ್ಟತೆಯಿಲ್ಲದೆ, ಡೋಲಾ ರಾಮ್, ಮುಖೇಶ್ ಮತ್ತು ರಾಮ್ಲಿ ಅವರು ಹೆಚ್ಚು ಅನಿಶ್ಚಿತ ವರ್ಷವನ್ನು ಎದುರು ನೋಡುತ್ತಿದ್ದಾರೆ. “ನಾನು ಈಗಾಗಲೇ ಹೋಳಿ ಹಬ್ಬದ ವೇಳೆ ನನ್ನ ಬಹುತೇಕ ಉಳಿತಾಯದ ಹಣವನ್ನು ಖರ್ಚು ಮಾಡಿದ್ದೇನೆ" ಎಂದು ಡೋಲಾ ರಾಮ್ ಹೇಳುತ್ತಾರೆ. ನಾವು ಹೇಗೂ ಮನೆಗೆ ಮರಳಲು ಹಣವನ್ನು ಹೊಂದಿಸಿದ್ದೇವೆ, ಗುತ್ತಿಗೆದಾರರು ಕೂಡ ನಮಗೆ ಮುಂಗಡವಾಗಿ ಪಾವತಿಸಲು ನಿರಾಕರಿಸಿದರು. ಈಗ ಏನಾಗುತ್ತೋ ನೋಡೋಣ” ಎನ್ನುತ್ತಾರೆ ಡೋಲಾರಾಮ್.

ಅನುವಾದ - ಎನ್ . ಮಂಜುನಾಥ್

Drishti Agarwal and Preema Dhurve

திருஷ்டி அகர்வால், பிரீமா துர்வே இருவரும் ஆஜீவிகா அமைப்பில் பணியாற்றுகின்றனர். ஊரக, பருவகால புலம்பெயர்த் தொழிலாளர்களுக்கான பாதுகாப்பு, ஆதரவு, சேவைகளை வழங்கும் இலாப நோக்கற்ற சிறப்பு முன்னெடுப்பு, இந்த அமைப்பு.

Other stories by Drishti Agarwal and Preema Dhurve
Translator : N. Manjunath