ಸಂಪೂರ್ಣ ವೈಯಕ್ತಿಕ ರಕ್ಷಣಾ ಸಾಧನಳೊಂದಿಗೆ ಸಜ್ಜುಗೊಂಡಿದ್ದು, ಅನ್ಯಗ್ರಹ ಜೀವಿಗಳಂತೆ ಕಾಣುತ್ತಿದ್ದ ಅವರು, ದಕ್ಷಿಣ 24 ಪರಗಣಗದ ಆತನ ಹಳ್ಳಿಯಲ್ಲಿ ಬಂದಿಳಿದರು. “ನಾನೊಬ್ಬ ಪ್ರಾಣಿಯೋ ಎಂಬಂತೆ ಅವರು ನನ್ನನ್ನು ಹಿಡಿಯಲು ಬಂದಿದ್ದರು” ಎಂದರು ಹರನ್‌ಚಂದ್ರ ದಾಸ್‌. ಸ್ನೇಹಿತರು ಇವರನ್ನು ಹರು ಎಂದು ಕರೆಯುತ್ತಾರೆ. ಇವರ ಅಭಿಪ್ರಾಯದಂತೆ, ಈಗ ಅವರು ಆತನ ಸ್ನೇಹಿತರಾಗಿ ಉಳಿದಿಲ್ಲ. ಇತ್ತೀಚೆಗೆ, ಅವರು ದಾಸ್‌ ಅವರನ್ನು ಬಹಿಷ್ಕರಿಸುತ್ತಿದ್ದಾರೆ. “ಜನರು ನನ್ನ ಕುಟುಂಬಕ್ಕೆ ದಿನಸಿ ಹಾಗೂ ಹಾಲನ್ನು ಪೂರೈಸುವುದನ್ನು ನಿಲ್ಲಿಸಿದರು. ಹಲವಾರು ವಿಧಗಳಲ್ಲಿ ನಮಗೆ ಕಿರುಕುಳವನ್ನು ನೀಡಲಾದ ಕಾರಣ, ನಾವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದೆವು. ನಮ್ಮೆಲ್ಲ ನೆರೆಹೊರೆಯವರೂ ನಮ್ಮ ಬಗ್ಗೆ ಭಯಭೀತರಾಗಿದ್ದಾರೆ” ವೈದ್ಯಕೀಯ ತಪಾಸಣೆಯಲ್ಲಿ ಹರಚಂದ್ರ ದಾಸ್‌ ಕೋವಿಡ್‌-19 ಸೋಂಕಿತರಲ್ಲವೆಂದು ತಿಳಿದುಬಂದಾಗ್ಯೂ, ಈ ಪರಿಸ್ಥಿತಿಯು ಕಂಡುಬರುತ್ತಿದೆ.

ಆತನ ಅಪರಾಧ: ಇವರು ಆಸ್ಪತ್ರೆಯೊಂದರ ನೌಕರಿಯಲ್ಲಿರುವುದು. ಬಹುತೇಕ ಆರೋಗ್ಯ ಕಾರ್ಯಕರ್ತರು ಇಂತಹುದೇ ವಿರೋಧವನ್ನು ಎದುರಿಸುತ್ತಿದ್ದಾರೆ. ಬಹುಶಃ, ಆ ಜಿಲ್ಲಾ ಮಟ್ಟದ ಕಾರ್ಯಕರ್ತರೂ ಸಹ ಇವರು ಸೋಂಕಿತರಾಗಿದ್ದಾರೆಂಬ ಗುಮಾನಿಯ ಮೇಲೆ ಇವರನ್ನು ಅರಸುತ್ತಾ ಅಲ್ಲಿಗೆ ಬಂದಿರಬಹುದು.

“ನಾನು ಆಸ್ಪತ್ರೆಯೊಂದರಲ್ಲಿ ಕೆಲಸಮಾಡುವ ಕಾರಣ, ಸೋಂಕಿತನಾಗಿದ್ದೇನೆಂದು ಎಲ್ಲರೂ ಭಯಗೊಂಡಿದ್ದರು” ಎಂದು ಅವರು ತಿಳಿಸಿದರು.

30ರ ವಯಸ್ಸಿನ ಮಧ್ಯ ಭಾಗದಲ್ಲಿರುವ ಹರನ್‌ಚಂದ್ರ, ಕೊಲ್ಕತ್ತಾದಲ್ಲಿನ ಲಾಭ-ನಿರಪೇಕ್ಷ ಆಸ್ಪತ್ರೆಯಾದ ಇನ್ಸ್ಟಿಟ್ಯೂಟ್‌ ಆಫ್ ಚೈಲ್ಡ್‌ (ಐಸಿಹೆಚ್) ನಿರ್ವಹಣಾ ಕೊಠಡಿಯಲ್ಲಿ ಕೆಲಸವನ್ನು ನಿಭಾಯಿಸುತ್ತಾರೆ. ಟ್ರಸ್ಟ್‌ವೊಂದರ ನಿರ್ವಹಣೆಯಲ್ಲಿರುವ ಈ ಆಸ್ಪತ್ರೆಯಲ್ಲಿ ಕೊಲ್ಕತ್ತ ನಗರವಷ್ಟೇ ಅಲ್ಲದೆ, ಗ್ರಾಮೀಣ ಮತ್ತು ಉಪನಗರ ಪ್ರದೇಶಗಳ ಮಕ್ಕಳಿಗೂ ಚಿಕಿತ್ಸೆಯನ್ನು ನೀಡಲಾಗುತ್ತದೆ. 1956ರಲ್ಲಿ ಸ್ಥಾಪನೆಗೊಂಡ ಈ ಭಾರತದ ಪ್ರಥಮ ಶಿಶುವೈದ್ಯಕೀಯ ಸಂಸ್ಥೆಯು 220 ಹಾಸಿಗೆಗಳನ್ನೊಳಗೊಂಡಿದೆ. ಪಾರ್ಕ್‌ ಸರ್ಕಸ್‌ ಪ್ರದೇಶದಲ್ಲಿನ ಈ ಆಸ್ಪತ್ರೆಗೆ ಬರುವ ಮಕ್ಕಳ ಕುಟುಂಬಗಳಿಗೆಲ್ಲಿ ಇಲ್ಲಿ ಅಥವಾ ಇತರೆಡೆಗಳಲ್ಲಿ ದೊರೆಯುವ ವೈದ್ಯಕೀಯ ಚಿಕಿತ್ಸೆಯ ಅವಕಾಶವನ್ನು ಪಡೆಯುವುದು ಕಷ್ಟಕರ.  ‌

ಕೋವಿಡ್‌-19 ಮತ್ತು ಲಾಕ್‌ಡೌನ್‌ನಿಂದಾಗಿ ಆವರಿಗೆ ಆಸ್ಪತ್ರೆಯನ್ನು ತಲುಪುವುದೇ ದುಸ್ಸಾಧ್ಯವಾಗುತ್ತಿದೆ. ದಕ್ಷಿಣ 24 ಪರಗಣ ಜಿಲ್ಲೆಯಿಂದ ಈಗ ತಾನೇ ಬಂದ ರತನ್‌ ಬಿಸ್ವಾಸ್‌, “ಇಲ್ಲಿಗೆ ಬರುವುದೇ ಸಮಸ್ಯೆ. ವೀಳ್ಯದೆಲೆಗಳ ತೋಟದಲ್ಲಿ ದಿನಗೂಲಿಯ ಕೆಲಸವನ್ನು ನಿರ್ವಹಿಸುತ್ತಿದ್ದೆ. ಅಂಫನ್‌ (ಮೇ 20ರಂದು ಅಪ್ಪಳಿಸಿದ ಚಂಡಮಾರುತ) ಚಂಡಮಾರುತವು ಆ ತೋಟವನ್ನು ಹಾಳುಗೆಡವಿತು. ಹೀಗಾಗಿ, ನಾನು ನನ್ನ ಆದಾಯದ ಮೂಲವನ್ನು ಕಳೆದುಕೊಂಡೆ. ಈಗ ನನ್ನ ಕಿರಿಯ ಮಗನಿಗೆ ಕಿವಿಗಳ ಹಿಂಭಾಗದಲ್ಲಿ ಸೋಂಕು ಹರಡಿದೆ. ಆದ್ದರಿಂದ ನಾವು ಅವನನ್ನು ಇಲ್ಲಿಗೆ ಕರೆತಂದಿದ್ದೇವೆ. ರೈಲು ಸೇವೆಗಳು ಲಭ್ಯವಿಲ್ಲದ ಕಾರಣ, ಈ ಆಸ್ಪತ್ರೆಯನ್ನು ತಲುಪುವುದೇ ಕಷ್ಟಕರವಾಗಿತ್ತು” ಎಂದು ತಿಳಿಸಿರು. ದಾಸ್‌ನಂತಹ ಜನರು ಹಲವು ಬಸ್‌ಗಳು, ರಿಕ್ಷಾಗಳ ಮೂಲಕ ಹಾಗೂ ಸ್ವಲ್ಪ ದೂರವನ್ನು ಕಾಲ್ನಡಿಗೆಯಿಂದ ಕ್ರಮಿಸಿ, ಆಸ್ಪತ್ರೆಯನ್ನು ತಲುಪುತ್ತಿದ್ದಾರೆ.

ಐಸಿಹೆಚ್‌ ವೈದ್ಯರು ಮುಂಬರುವ ಮತ್ತಷ್ಟು ಸಮಸ್ಯೆಗಳ ಬಗ್ಗೆ ಎಚ್ಚರಿಸುತ್ತಾರೆ.

PHOTO • Ritayan Mukherjee

ಜಪಾನೀಸ್‌ ಎನ್‌ಸೆಫ಼ಲೈಟಿಸ್‌ನಿಂದ ಪೀಡಿತರಾದ ರೋಗಿಯೊಬ್ಬರಿಗೆ ಚುಚ್ಚುಮದ್ದನ್ನು ಸಜ್ಜುಗೊಳಿಸುತ್ತಿರುವ ಡಾ. ರೀನ ಘೋಷ್‌. ಲಾಕ್‌ಡೌನ್‌ನಿಂದಾಗಿ ಚುಚ್ಚುಮದ್ದಿನ ಆಂದೋಲನಕ್ಕೆ ತೀವ್ರ ಹಿನ್ನೆಡೆಯುಂಟಾಗಿದ್ದು, ನಿಯತ ಕ್ರಮದಲ್ಲಿ ಪ್ರತಿರಕ್ಷಣೆಯು (immunisation) ದೊರೆಯದ ಮಕ್ಕಳು ಅಪಾಯಕ್ಕೀಡಾಗಿದ್ದಾರೆ.

ರಕ್ತದ ಸರಬರಾಜಿನಲ್ಲಿ ಸದ್ಯಕ್ಕೆ ಬಿಕ್ಕಟ್ಟು ಉದ್ಭವಿಸಿಲ್ಲವಾದರೂ, ಪರಿಸ್ಥಿತಿಯು ಆಶಾಜನಕವಾಗಿಲ್ಲ ಎನ್ನುತ್ತಾರೆ ರಕ್ತವಿಜ್ಞಾನ ವಿಭಾಗದ ತಾರಕ್‌ನಾಥ್‌ ಮುಖರ್ಜಿ. “ಲಾಕ್‌ಡೌನ್‌ ಅವಧಿಯಲ್ಲಿ ರಕ್ತದಾನ ಶಿಬಿರಗಳು ವಿರಳವಾಗುತ್ತಿವೆ. ಸಾಮಾನ್ಯ ದಿನಗಳಲ್ಲಿ, ಪ್ರತಿ ತಿಂಗಳು (ದಕ್ಷಿಣ ಬಂಗಾಳದ ವಲಯದಲ್ಲಿ) 60ರಿಂದ 70ರಕ್ತದಾನ ಶಿಬಿರಗಳು ನಡೆಯುತ್ತವೆ. ಆದರೆ ಕಳೆದ ನಾಲ್ಕು ತಿಂಗಳಲ್ಲಿ, ಕೇವಲ 60 ಶಿಬಿರಗಳು ನಡೆದಿವೆ. ಕೆಲವೊಮ್ಮೆ ಗ್ರಾಮೀಣ ಪ್ರದೇಶಗಳ ಥಲಸ್ಸಿಮಿಯ ರೋಗಿಗಳ ಮೇಲೆ ಇದು ಪರಿಣಾಮವನ್ನು ಬೀರುತ್ತದೆ.”

“ಮಕ್ಕಳ ಆರೋಗ್ಯ ಸೇವಾ ವ್ಯವಸ್ಥೆಯು, ಕೋವಿಡ್‌-19ನಿಂದಾಗಿ ಅಪಾರವಾದ ಸಂಕಷ್ಟಕ್ಕೀಡಾಗಿದೆ, “ಲಾಕ್‌ಡೌನ್‌ನಿಂದಾಗಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಆರೋಗ್ಯ ಹಾಗೂ ಚುಚ್ಚುಮದ್ದಿನ ಅಸಂಖ್ಯಾತ ಶಿಬಿರಗಳನ್ನು ರದ್ದುಪಡಿಸಬೇಕಾಯಿತು. ಮುಂಬರುವ ವರ್ಷಗಳಲ್ಲಿ, ನ್ಯುಮೋನಿಯ, ದಡಾರ, ಸಿಡುಬು ಹಾಗೂ ನಾಯಿಕೆಮ್ಮು ಪ್ರಕರಣಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳಬಹುದೆಂದು ನನಗೆ ಆತಂಕವಾಗುತ್ತಿದೆ. ಭಾರತದಲ್ಲಿ ಪೋಲಿಯೋ ನಿರ್ಮೂಲನಗೊಂಡಿದ್ದಾಗ್ಯೂ, ಅದರ ಮೇಲೂ ಇದು ಪರಿಣಾಮವನ್ನು ಬೀರಬಹುದು” ಎನ್ನುತ್ತಾರೆ ಆಸ್ಪತ್ರೆಯಲ್ಲಿನ ಪ್ರತಿರಕ್ಷಣಾ ತಜ್ಞೆ, ಡಾ. ರೀನಾ ಘೋಷ್‌.

“ಸರ್ಕಾರವು, ಇತರೆ ಆರೋಗ್ಯ ಸೇವಾ ವಲಯಗಳ ಸಿಬ್ಬಂದಿಗಳನ್ನು ಕೋವಿಡ್‌ ಕರ್ತವ್ಯಗಳಿಗೆ ಮರುನಿಯೋಜಿಸಿದ ಕಾರಣ, ಚುಚ್ಚುಮದ್ದಿನ ಪ್ರಕ್ರಿಯೆಗೆ ಅಡಚಣೆಯುಂಟಾಗಿದೆ. ಹೀಗಾಗಿ, ಇಡೀ ಪ್ರತಿರಕ್ಷಣಾ ಪ್ರಕ್ರಿಯೆಗೇ ಹೊಡೆತ ಬಿದ್ದಿದೆ.”

ಆಸ್ಪತ್ರೆಯ ಎಲ್ಲ ಕಡೆಗಳಲ್ಲೂ, ಈಗಾಗಲೇ ಇದರ ಅವಶ್ಯಕತೆಯಿರುವ ಮಕ್ಕಳನ್ನು ಗಮನಿಸಿದಾಗ, ದುಗುಡವೆನಿಸುತ್ತದೆ. ಬಹುಸಂಖ್ಯಾತ ರೋಗಿಗಳು 12ರಿಂದ 14 ವಯಸ್ಸಿನವರು. ಇದಕ್ಕಿಂತಲೂ ಅತ್ಯಂತ ಕಡಿಮೆ ವಯಸ್ಸಿನ ಹಲವಾರು ಮಕ್ಕಳೂ ಇದ್ದಾರೆ.

“ನನ್ನ ಮಗುವಿಗೆ ರಕ್ತದ ಕ್ಯಾನ್ಸರ್‌. ಪ್ರಮುಖ ಕೆಮೋಥೆರಪಿಯ ದಿನಗಳು ತಪ್ಪಿಹೋದವು. ರೈಲು ಪ್ರಯಾಣದ ಸೌಲಭ್ಯವಿಲ್ಲ. ಕಾರಿನ ವೆಚ್ಚವನ್ನು ನಾನು ಭರಿಸಲಾರೆ. ಈತನ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಲ್ಲಿ, ನಾವೂ, ಕೊರೊನ ವೈರಸ್‌ ಸೋಂಕಿತರಾಗುತ್ತೇವೆ” ಎನ್ನುತ್ತಾರೆ, ಪೂರ್ವ ಮಿಡ್ನಾಪುರ್‌ನ ಹಳ್ಳಿಯೊಂದರ ನಿವಾಸಿಯಾದ ನಿರ್ಮಲ್‌ ಮೊಂಡಲ್‌ (ಹೆಸರನ್ನು ಬದಲಿಸಲಾಗಿದೆ). ಆಕೆಯ ಈ ಭಯವು, ಆಸ್ಪತ್ರೆಯ ಆಕೆಯ ಭೇಟಿಗಳ ಮೇಲೆ ಪ್ರಭಾವ ಬೀರಿದೆ.

PHOTO • Ritayan Mukherjee

ಐ.ಸಿ.ಹೆಚ್‌ ಉಪನಿರ್ದೇಶಕರಾದ ಡಾ. ಅರುಣಲೋಕೆ ಭಟ್ಟಾಚಾರ್ಯ, ಮಕ್ಕಳ ಜನರಲ್‌ ವಾರ್ಡ್‌ಗೆ ಭೇಟಿ ನೀಡಿದ್ದಾರೆ. ಸಾರ್ವಜನಿಕ ಸಾರಿಗೆಯು ಲಭ್ಯವಿಲ್ಲದ ಕಾರಣ, ಗ್ರಾಮೀಣ ಪ್ರದೇಶಗಳ ಅನೇಕ ರೋಗಿಗಳಿಗೆ ಆಸ್ಪತ್ರೆಯನ್ನು ತಲುಪುವುದು ಸಾಧ್ಯವಾಗುತ್ತಿಲ್ಲವೆಂದು ಅವರು ತಿಳಿಸುತ್ತಾರೆ.

“ಕೋವಿಡ್‌ನ ಪರಿಣಾಮಗಳು ಮಕ್ಕಳಲ್ಲಿ ಅಷ್ಟಾಗಿ ದೃಷ್ಟಿಗೋಚರವಲ್ಲ. ಮಕ್ಕಳು ಬಹುತೇಕವಾಗಿ ಲಕ್ಷಣರಹಿತರಾಗಿರುತ್ತಾರೆ (asymptomatic). ಆದರೆ ಅವರಲ್ಲಿನ ಕೆಲವರ ಕೋವಿಡ್‌ ತಪಾಷಣೆಯು ಅವರು ಸೋಂಕಿತರೆಂಬುದಾಗಿ ತಿಳಿಸುತ್ತದೆ. ವಾಸ್ತವಾಗಿ ಇವರು ಬೇರಾವುದೋ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿರುತ್ತಾರೆ. ಉಸಿರಾಟದ ಸಮಸ್ಯೆಗಳಿರುವ ಮಕ್ಕಳಿಗಾಗಿ ನಾವು ಪ್ರತ್ಯೇಕ ಘಟಕವನ್ನು ಹೊಂದಿದ್ದೇವೆ” ಎನ್ನುತ್ತಾರೆ ಐಸಿಹೆಚ್‌ ಮಕ್ಕಳ ಆರೋಗ್ಯಸೇವಾ ತಜ್ಞರಾದ ಡಾ. ಪ್ರಭಾಸ್‌ ಪ್ರಸೂನ್‌ ಗಿರಿ.

ಏತನ್ಮಧ್ಯೆ, ವೈದ್ಯರೂ ಸಹ ಕಳಂಕದಿಂದ ಬಾಧಿತರಾಗಿದ್ದಾರೆ. “ನನ್ನ ಪತಿಯು ಮತ್ತೊಂದು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ನಾನು ಇಲ್ಲಿನ ಸಿಬ್ಬಂದಿಯಾಗಿ ಕೆಲಸವನ್ನು ನಿರ್ವಹಿಸುವ ಕಾರಣ, ಈಗ ನಾವು ನನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಮ್ಮ ನೆರೆಹೊರೆಯವರು ಆಕ್ಷೇಪಿಸಬಹುದೆಂಬ ಕಾರಣಕ್ಕೆ ನಮ್ಮ ಸ್ವಂತ ಮನೆಗೆ ಮರಳಲು ಸಾಧ್ಯವಾಗುತ್ತಿಲ್ಲ” ಎನ್ನುತ್ತಾರೆ ಡಾ. ತಾರಕ್‌ ನಾಥ್‌ ಮುಖರ್ಜಿಯವರ ಪಕ್ಕದಲ್ಲಿ ನಿಂತಿದ್ದ ಸೋಮ ಬಿಸ್ವಾಸ್‌ (ಹೆಸರನ್ನು ಬದಲಿಸಲಾಗಿದೆ).

ಮಾರ್ಚ್‌ 18ರಲ್ಲಾಗಲೇ ವಿಶ್ವ ಆರೋಗ್ಯ ಸಂಸ್ಥೆಯು, “ದುರದೃಷ್ಟವಶಾತ್‌ ಕಳಂಕ ಅಥವಾ ಭಯದ ಕಾರಣದಿಂದಾಗಿ, ಕೆಲವು ಆರೋಗ್ಯಸೇವಾ ಕಾರ್ಯಕರ್ತರಿಗೆ ತಮ್ಮ ಕುಟುಂಬ ಹಾಗೂ ಸಮುದಾಯವು ತಮ್ಮವರಿಗಾಗಿ ಹಂಬಲಿಸುವ ಅನುಭವವಾಗಬಹುದು” ಎಂಬುದಾಗಿ ಎಚ್ಚರಿಸಿತ್ತು. ಈಗಾಗಲೇ ಸವಾಲಾಗಿ ಪರಿಣಮಿಸಿರುವ ಪರಿಸ್ಥಿತಿಯನ್ನು ಇದು ಮತ್ತಷ್ಟು ಕಠಿಣಗೊಳಿಸಿದೆ.

ಇಲ್ಲಿನ ಆರೋಗ್ಯಸೇವಾ ಕಾರ್ಯಕರ್ತರ ಅನುಭವವು ಈ ಎಚ್ಚರಿಕೆಗೆ ಪುಷ್ಠಿನೀಡುವಂತಿದೆ.

ಕೆಲವು ಕಾರ್ಯಕರ್ತರು ಹತ್ತಿರದ ಹಳ್ಳಿಗಳಿಂದ ಬರುತ್ತಿದ್ದ ಕಾರಣ, ಇನ್ಸ್ಟಿಟ್ಯೂಟ್‌ ಆಫ್‌ ಚೈಲ್ಡ್‌ ಹೆಲ್ತ್‌ ಸಂಸ್ಥೆಯು, ಆರೋಗ್ಯಸೇವಾ ಕಾರ್ಯಕರ್ತರ ಕುಟುಂಬಗಳಲ್ಲಿನ ತೊಂದರೆಗಳು; ವಾಹನ ಸೌಕರ್ಯದಲ್ಲಿನ ಜಟಿಲ ಸಮಸ್ಯೆಗಳು; ಅವರ ಉದ್ಯೋಗದ ಕಾರಣದಿಂದ ಉಂಟಾಗುತ್ತಿರುವ ಸಾಮಾಜಿಕ ಕಳಂಕ – ಹಾಗೂ ಇವೆಲ್ಲ ಹಿನ್ನಡೆಗಳ ಯಾತನಾಮಯ ಫಲಿತಾಂಶಗಳೊಂದಿಗೆ ಹೆಣಗಬೇಕಾಯಿತು.

ಇವೆಲ್ಲವುಗಳಿಂದಾಗಿ, ಆಸ್ಪತ್ರೆಯ ಹಾಸಿಗೆಗಳು ರೋಗಿಗಳಿಲ್ಲದೆ ಖಾಲಿಯುಳಿದ ವಿಚಿತ್ರ ಪರಿಸ್ಥಿತಿಯು ಉದ್ಭವಿಸಿದೆ. ವಾಸ್ತವಾಗಿ, ರೋಗಿಗಳ ಸಂಖ್ಯೆಯು ಕಡಿಮೆಯಿದ್ದಾಗ್ಯೂ, - ಒತ್ತಡವು ಅಪಾರ ಪ್ರಮಾಣದಲ್ಲಿ ವೃದ್ಧಿಸುತ್ತಿದೆ. “ಹೊರ ರೋಗಿಗಳ ವಿಭಾಗವು ಸಾಮಾನ್ಯವಾಗಿ ದಿನಂಪ್ರತಿ 300 ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದು, ಈಗ ಈ ಸಂಖ್ಯೆಯು ಸುಮಾರು 60ರಷ್ಟಿದೆ – ಅಂದರೆ ಶೇ.80ರಷ್ಟು ಇಳಿಕೆಯಾಗಿದೆ. ಒಳ-ರೋಗಿಗಳ ಸಂಖ್ಯೆಯು 220ರಿಂದ 90ಕ್ಕಿಳಿದಿದ್ದು, ಶೇ.60ರಷ್ಟು ಕಡಿಮೆಯಾಗಿದೆ. ಆದರೆ, ನಾವು ಒಟ್ಟಾರೆ ಸಿಬ್ಬಂದಿಯ ಶೇ.40ರಷ್ಟು ಸಂಖ್ಯೆಯಷ್ಟಿರುವ ಸಿಬ್ಬಂದಿಯೊಂದಿಗೆ ಕೆಲಸವನ್ನು ನಿರ್ವಹಿಸಬೇಕಿದೆ” ಎನ್ನುತ್ತಾರೆ ಆಸ್ಪತ್ರೆಯ ಆಡಳಿತಗಾರರು

Left: A nurse in the Neonatal Intensive Care Unit (NICU). Despite seeing staff on duty falling to 40 per cent of normal, the hospital soldiers on in providing services for children-left. Right: Health worker hazards: Jayram Sen (name changed) of the ICH was not allowed, for several days, to take water from a community tap in his village in the South 24 Parganas
PHOTO • Ritayan Mukherjee
Left: A nurse in the Neonatal Intensive Care Unit (NICU). Despite seeing staff on duty falling to 40 per cent of normal, the hospital soldiers on in providing services for children-left. Right: Health worker hazards: Jayram Sen (name changed) of the ICH was not allowed, for several days, to take water from a community tap in his village in the South 24 Parganas
PHOTO • Ritayan Mukherjee

ಎಡಕ್ಕೆ: ನವಜಾತ ಶಿಶು ಸಂಬಂಧಿತ ತೀವ್ರ ನಿಗಾ ಘಟಕಲ್ಲಿನ (Neonatal Intensive Care Unit) ದಾದಿ. ನೌಕರರ ಹಾಜರಾತಿಯು ಎಂದಿಗಿಂತಲೂ ಶೇ. 40ರಷ್ಟು ಕಡಿಮೆಯಿದ್ದಾಗ್ಯೂ, ಆಸ್ಪತ್ರೆಯ ಸಿಬ್ಬಂದಿಗಳು ಮಕ್ಕಳಿಗೆ ಸೇವೆಯನ್ನು ಒದಗಿಸುತ್ತಿದ್ದಾರೆ. ಬಲಕ್ಕೆ: ಆರೋಗ್ಯ ಕಾರ್ಯಕರ್ತರ ಸಂಕಷ್ಟಗಳು: ಐ.ಸಿ.ಹೆಚ್‌.ನಲ್ಲಿನ ಜಯರಾಂ ಸೆನ್‌ ಅವರಿಗೆ ದಕ್ಷಿಣ 24 ಪರಗಣದ ತನ್ನ ಹಳ್ಳಿಯಲ್ಲಿನ ಸಮುದಾಯದ ನಲ್ಲಿಯಿಂದ ಅನೇಕ ದಿನಗಳವರೆಗೂ ನೀರನ್ನು ಪಡೆಯುವ ಅವಕಾಶವಿರಲಿಲ್ಲ.

200 ದಾದಿಯರು, 60 ವಾರ್ಡ್‌ ಸಹಾಯಕರು, 56 ಜಾಡಮಾಲಿಗಳು ಮತ್ತು ಇತರೆ ವಿಭಾಗಗಳಲ್ಲಿನ 133 ಸಿಬ್ಬಂದಿಗಳೂ ಸೇರಿದಂತೆ ಒಟ್ಟು 450 ಜನರು ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಸುಮಾರು 2 ವೈದ್ಯರು ವಿವಿಧ ಹಂತಗಳಲ್ಲಿ, ಐಸಿಹೆಚ್‌ನೊಂದಿಗೆ ಸಹಯೋಗದಲ್ಲಿದ್ದಾರೆ. ಇವರಲ್ಲಿ ೪೦-೪೫ ವೈದ್ಯರು ಪೂರ್ಣಾವಧಿ ಸಂಸ್ಥಾನಿಕರಾಗಿ (in-house) ಸೇವೆಸಲ್ಲಿಸುತ್ತಿದ್ದು, ೧೫-೨೦ ಜನ ಸಲಹೆಗಾರರು ಪ್ರತಿ ನಿತ್ಯವೂ ಇಲ್ಲಿಗೆ ಬರುತ್ತಾರೆ. ಉಳಿದವರು ಶಸ್ತ್ರಚಿಕಿತ್ಸಕರಾಗಿ, ಬೋಧಕರಾಗಿ (ಅಧ್ಯಾಪನದ ಆಸ್ಪತ್ರೆಯಲ್ಲಿ) ಹಾಗೂ ಸ್ವಯಂಪ್ರೇರಿತವಾಗಿ ಹೊರರೋಗಿಗಳ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಲಾಕ್‌ಡೌನ್‌, ಇವರೆಲ್ಲರಿಗೂ ತೀವ್ರ ಸವಾಲುಗಳನ್ನೊಡ್ಡಿದೆ. “ರೋಗಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ವ್ಯವಸ್ಥೆಗೊಳಿಸುವುದು ಹಾಗೂ ವಿವಿಧ ಕೆಲಸಗಳಿಗೆ ವೈದ್ಯಕೀಯ ಸಿಬ್ಬಂದಿಗಳ ಹಂಚಿಕೆಯು ಈಗ ಸಮಸ್ಯೆಯಾಗಿ ಪರಿಣಮಿಸಿದೆ. ರೈಲುಗಳ ಸೌಲಭ್ಯವಿಲ್ಲದ ಕಾರಣ, ಸಿಬ್ಬಂದಿಗಳಲ್ಲಿನ ಅನೇಕರು ಇಲ್ಲಿಗೆ ತಲುಪುವುದು ಅಥವಾ ಮನೆಗೆ ಮರಳುವುದು ಸಾಧ್ಯವಾಗುತ್ತಿಲ್ಲ. ಬಸ್ಸುಗಳೂ ಲಭ್ಯವಿಲ್ಲ. ಕೆಲವು ಆರೋಗ್ಯಸೇವಾ ಕಾರ್ಯಕರ್ತರು ಆಸ್ಪತ್ರೆಯ ಆವರಣದಲ್ಲಿಯೇ ಉಳಿದುಕೊಂಡಿದ್ದಾರೆ. ಈಗಾಗಲೇ ತಮ್ಮ ಹಳ್ಳಿಗಳಲ್ಲಿರುವವರು “ಸಾಮಾಜಿಕ ಕಳಂಕವನ್ನು ತಪ್ಪಿಸಲು” ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ” ಎಂಬುದಾಗಿ ಉಪ ಮುಖ್ಯ ನಿರ್ವಹಣಾಧಿಕಾರಿ, ಆರಾಧನ ಘೋಷ್‌ ಚೌಧರಿ ತಿಳಿಸುತ್ತಾರೆ.

ಈಗ ಆಸ್ಪತ್ರೆಯು ಹಣಕಾಸಿನ ಸಮಸ್ಯೆಗಳನ್ನು ಸಹ ಎದುರಿಸುತ್ತಿದೆ. ಐಸಿಹೆಚ್‌ ಲಾಭನಿರಪೇಕ್ಷ ಸಂಸ್ಥೆಯಾಗಿದ್ದು, ಇಲ್ಲಿ ವೈದ್ಯರು ತಮ್ಮ ಸೇವೆಗಳಿಗಾಗಿ ಶುಲ್ಕವನ್ನು ಪಡೆಯುವುದಿಲ್ಲ. ಅಲ್ಲದೆ, ಇತರೆ ಶುಲ್ಕಗಳೂ ಅತ್ಯಂತ ಕಡಿಮೆ. (ಆಗಾಗ ಆಸ್ಪತ್ರೆಯು ಕಡು ಬಡವರಿಗೆ ಎಲ್ಲ ಶುಲ್ಕಗಳನ್ನೂ ಮನ್ನಾಮಾಡುತ್ತದೆ.) ಹೊರ ರೋಗಿಗಳ ಶಾಖೆಗೆ ಭೇಟಿ ನೀಡುವವರು ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯು ಕಡಿಮೆಯಾದ ಕಾರಣ, ಆ ಅತ್ಯಲ್ಪ ಆಧಾರಗಳೂ ಕಡಿಮೆಯಾಗಿದೆ. ಆದರೆ ಕೋವಿಡ್‌ ಕಾರಣದಿಂದಾಗಿ, ಆಸ್ಪತ್ರೆಯ ಖರ್ಚು ಕನಿಷ್ಠ ಶೇ. 15ರಷ್ಟು ಹೆಚ್ಚಾಗಿದೆ.

“ನಿರ್ಮಲೀಕರಣ, ವೈಯಕ್ತಿಕ ರಕ್ಷಣಾ ಸಾಧನಗಳು ಮತ್ತು ಇತರೆ ಕೋವಿಡ್‌ ಸಂಬಂಧಿತ ಖರ್ಚುಗಳನ್ನು ಇದು ಒಳಗೊಂಡಿದೆ” ಎನ್ನುತ್ತಾರೆ ಆರಾಧನ ಘೋಷ್‌ ಚೌಧರಿ. ಏರುತ್ತಿರುವ ವೆಚ್ಚವನ್ನು ರೋಗಿಗಳಿಂದ ಭರಿಸುವಂತಿಲ್ಲ. “ಏಕೆಂದರೆ, ನಾವು ಇಲ್ಲಿ ಸೇವೆಯನ್ನು ಒದಗಿಸುವವರು ಬಹುತೇಕವಾಗಿ ಬಡತನದ ರೇಖೆಗಿಂತ ಕೆಳಗಿರುವವರು. ಅವರು ಅದನ್ನು ಹೇಗೆ ತಾನೇ ಭರಿಸಲು ಸಾಧ್ಯ? ಅವರಿಗಿದ್ದ ಅಲ್ಪ ಆದಾಯವೂ ಲಾಕ್‌ಡೌನ್‌ನಿಂದಾಗಿ ನಿಂತುಹೋಗಿದೆ. ಕೆಲವೊಮ್ಮೆ ಇಂತಹ ಸಂದರ್ಭಗಳಲ್ಲಿ, ವೈದ್ಯರೇ ತಮ್ಮ ಸ್ವಂತ ಹಣದಿಂದ ಹೆಚ್ಚುವರಿ ಖರ್ಚುಗಳನ್ನು ಭರಿಸುತ್ತಾರೆ.  ಸದ್ಯಕ್ಕೆ, ದೇಣಿಗೆಯ ಹಣದಿಂದ ನಾವು ಇದನ್ನು ನಿಭಾಯಿಸುತ್ತಿದ್ದೇವೆ. ಆದರೆ ಬಹಳ ಕಾಲದವರೆಗೆ ನಾವು ಮುಂದುವರಿಯಲು, ಆ ಹಣವು ಸಾಕಷ್ಟಿಲ್ಲ.

ಹಲವು ವರ್ಷಗಳಿಂದಲೂ ಆರೋಗ್ಯಸೇವೆಯ ಮೂಲ ಸೌಕರ್ಯಗಳನ್ನು ರೂಪಿಸುವಲ್ಲಿನ ವೈಫಲ್ಯದಿಂದಾಗಿ, ನಾವೀಗ ತೊಂದರೆಗೆ ಸಿಲುಕಿದ್ದೇವೆ. ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ಮತ್ತು ನಿತ್ಯಕಾಲಿಕ ರೋಗಿಗಳು ವಾಸ್ತವಿಕವಾಗಿ ಇದರಿಂದಾಗಿ ತೊಂದರೆಗೀಡಾಗಿದ್ದಾರೆ.

PHOTO • Ritayan Mukherjee

ಬಂಕುರ ಜಿಲ್ಲೆಯ ಮಗುವೊಂದು, ಎದೆಯ ಎಕ್ಸ್‌-ರೇ ತೆಗೆಸಿಕೊಳ್ಳುತ್ತಿದೆ. ಸರ್ವವ್ಯಾಪಿ ವ್ಯಾಧಿಯಿಂದಾಗಿ, ಆರೋಗ್ಯಸೇವಾ ಸೌಲಭ್ಯದ ಸ್ಥಳವನ್ನಾಧರಿಸಿದಂತೆ, ಇಮೇಜಿಂಗ್‌ ಕ್ಷೇತ್ರಕ್ಕೆ ದೊಡ್ಡ ಹಿನ್ನೆಡೆಯುಂಟಾಗಿದೆ.

PHOTO • Ritayan Mukherjee

ವಿಕಿರಣ ವಿಭಾಗದ ನೀಲಾದ್ರಿ ಘೋಷ್‌ (ಹೆಸರನ್ನು ಬದಲಿಸಿದೆ) ಅವರು, ನೊಯ್ಡಾ ಜಿಲ್ಲೆಯ ತಮ್ಮ ಹಳ್ಳಿಯಲ್ಲಿನ ನೆರೆಹೊರೆಯವರಿಂದ ಖಂಡನೆ ಹಾಗೂ ಕಿರುಕುಳಕ್ಕೆ ಒಳಗಾದ ಕಾರಣ, ತಮ್ಮ ಮನೆಯಿಂದ ಹೊರಬರಲು ಪೋಲೀಸರ ನೆರವನ್ನು ಪಡೆಯಬೇಕಾಯಿತು.

PHOTO • Ritayan Mukherjee

ರೋಗಿಯ ಪರಿಸ್ಥಿತಿಯ ಮೇಲೆ ಪ್ರಮುಖ ಪರಿಣಾಮವನ್ನು ಬೀರುವ ಜೀವ-ರಕ್ಷಕ ವೈದ್ಯಕೀಯ ಅನಿಲಗಳನ್ನು ಆಸ್ಪತ್ರೆಯಲ್ಲಿ ಸುರಕ್ಷಿತವಾಗಿ ಸಂಗ್ರಗಹಿಸಲಾಗಿದೆ.

PHOTO • Ritayan Mukherjee

ಕ್ಯಾನ್ಸರ್‌ಪೀಡಿತ ಮಕ್ಕಳು ಮಹತ್ತರವಾದ ಸವಾಲುಗಳನ್ನೆದುರಿಸುತ್ತಿದ್ದಾರೆ. ಅನೇಕ ಮಕ್ಕಳಿಗೆ, ಅದರಲ್ಲೂ ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ, ಲಾಕ್‌ಡೌನ್‌ ಅವಧಿಯಲ್ಲಿ ತಮ್ಮ ಕೆಮೋಥೆರಪಿಯ ದಿನಗಳು ತಪ್ಪಿಹೋಗುತ್ತಿವೆ.

PHOTO • Ritayan Mukherjee

ನವಜಾತ ಶಿಶುಗಳು ಆಸ್ಪತ್ರೆಯಲ್ಲಿ ನೆಲೆಸಿದ್ದ ಅವಧಿಯಾದ್ಯಂತ ಹಾಗೂ ಆಸ್ಪತ್ರೆಯಿಂದ ತೆರಳಿದ 48-72 ಗಂಟೆಗಳ ಅವಧಿಯ ನಂತರ ಮತ್ತೊಮ್ಮೆ ಅವುಗಳ ತೂಕವನ್ನು ಪರೀಕ್ಷಿಸಲಾಗುತ್ತದೆ. ಮಗುವಿನ ತಂದೆ ತಾಯಿಯರನ್ನು ಸಹ ತೂಕಮಾಡಲಾಗುತ್ತದೆ.

PHOTO • Ritayan Mukherjee

ಏಕಾಂತವಾಸದ ಕೋಣೆಯಲ್ಲಿ, ಪಿಪಿಇ ಕಿಟ್‌ಗಳಲ್ಲಿರುವ ಸಿಬ್ಬಂದಿಗಳು, ಕೋವಿಡ್‌ ಸೋಂಕಿತ 35 ದಿನಗಳ ಮಗುವಿನ ನಿಗಾವಹಿಸುತ್ತಿದ್ದಾರೆ.

PHOTO • Ritayan Mukherjee

ಶಿಶುಚಿಕಿತ್ಸೆಯ ತೀವ್ರ ನಿಗಾ ಘಟಕದಲ್ಲಿ ಬಹಳ ಸೂಕ್ಷ್ಮ ಪರಿಸ್ಥಿತಿಯಲ್ಲಿರುವ ಮಗುವೊಂದರ ಮುತುವರ್ಜಿವಹಿಸಲಾಗುತ್ತಿದೆ. ಕೊಲ್ಕತ್ತದ ಫೆಡರೇಷನ್‌ ಆಫ್‌ ರೆಸಿಡೆಂಟ್‌ ಡಾಕ್ಟರ್ಸ್‌ ಅಸೋಸಿಯೇಷನ್ಸ್‌ನಿಂದ ಭಾರತೀಯ ಆರೋಗ್ಯ ಸಚಿವಾಲಯಕ್ಕೆ ರಕ್ಷಣೆ ಮತ್ತು ಸುರಕ್ಷತೆಯನ್ನು ಒದಗಿಸುವಂತೆ ಕೋರಲಾಗಿದೆ. ಅನೇಕ ವೈದ್ಯರು ಆಗೂ ದಾದಿಯರು ನೆರೆಹೊರೆಯವರಿಂದ ಪೀಡನೆಗೆ ಒಳಗಾಗಿರುವುದನ್ನು ವರದಿಸಿದ್ದಾರೆ.

PHOTO • Ritayan Mukherjee

ಕೋವಿಡ್‌ನಿಂದ ಗುಣಮುಖರಾದ ದಾದಿ, ಸಂಗೀತ ಪಾಲ್‌, ‘ಸಮರ್ಪಕ ಪ್ರತ್ಯೇಕ ವಾಸದ ನಿಯಗಳನ್ನು ಪಾಲಿಸಿ ಕೋವಿಡ್‌ ಅನ್ನು ಮಣಿಸಿದ ನಾನು, ಮತ್ತೆ ಕರ್ತವ್ಯದಲ್ಲಿ ತೊಡಗಿದ್ದೇನೆ. ನನ್ನ ಸಹೋದ್ಯೋಗಿಗಳು ಮನಃಪೂರ್ವಕವಾಗಿ ನನ್ನನ್ನು ಬರಮಾಡಿಕೊಂಡರುʼ ಎಂದು ತಿಳಿಸಿದರು.

PHOTO • Ritayan Mukherjee

ದಕ್ಷಿಣ ೨೪ ಪರಗಣd ಹಳ್ಳಿಯೊಂದರ ಒಂದು ತಿಂಗಳ ಮಗುವಿಗೆ ಇ.ಇ.ಜಿ ತಪಾಸಣೆ ನಡೆಸುತ್ತಿರುವ ವೈದ್ಯಕೀಯ ತಂತ್ರಜ್ಞರಾದ ಚಂಚಲ್‌ ಸಹಾ. ವಿಶೇಷ ಮುನ್ನೆಚ್ಚರಿಕೆಗಳೊಂದಿಗೆ, ಈ ಪ್ರಕ್ರಿಯೆಯನ್ನು ಕೈಗೊಳ್ಳಬೇಕಿರುವ ಪ್ರಯೋಗಾಲಯದ ತಂತ್ರಜ್ಞರು, ರೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿರುವುದನ್ನು ಗಮನಿಸಿದ್ದಾರೆ.

PHOTO • Ritayan Mukherjee

ತನ್ನ ಸಹೋದ್ಯೋಗಿಯ ಹಾಸ್ಯಕ್ಕೆ ನಗುವಿನ ಮೂಲಕ ಪ್ರತಿಕ್ರಿಯಿಸುತ್ತಿರುವ ಚುಚ್ಚುಮದ್ದು ವಿಭಾಗದ ಸಹಾಯಕಿ, ಮೌಮಿತ ಸಹ.

PHOTO • Ritayan Mukherjee

ಅತ್ಯಂತ ಹೆಚ್ಚಿನ ಕೆಲಸದ ಹೊರೆಯನ್ನು ನಿಭಾಯಿಸುತ್ತಿರುವ ವ್ಯವಸ್ಥಾಪಿಕೆ ಮತ್ತು ಪ್ರಭಾರಿ ದಾದಿಯರು (sister-in-charge); ರೋಗಿಗಳ ಸ್ವಾಸ್ಥ್ಯದ ಉಸ್ತುವಾರಿ ಮತ್ತು ದಾದಿಯರು, ವಾರ್ಡ್‌ ಸಹಾಯಕರು ಹಾಗೂ ಜಾಡಮಾಲಿ ಮುಂತಾದ ಎಲ್ಲ ರೀತಿಯ ಆರೋಗ್ಯ ಕಾರ್ಯಕರ್ತರ ಕರ್ತವ್ಯಗಳ ಮೇಲ್ವಿಚಾರಣೆಯ ಮೂಲಕ ಇಡೀ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಇಲ್ಲಿ, ವ್ಯವಸ್ಥಾಪಿಕೆ ಝರ್ನ ರಾಯ್‌ ಅವರು, ತಮ್ಮ ಕಛೇರಿಯ ಒಳಭಾಗದಲ್ಲಿ, ಕೆಲಸಗಳ ವಿವರಗಳನ್ನು ದಾಖಲಿಸುವ ಹಾಳೆಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

PHOTO • Ritayan Mukherjee

ವಾರ್ಡ್‌ ಸಹಾಯಕರು, ಚಹಾ ವಿರಾಮವನ್ನು ತೆಗೆದುಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದಲೂ  ತಮ್ಮ ಹಳ್ಳಿಗೆ ನಿಯತವಾದ ರೈಲು ಸೌಲಭ್ಯವಿಲ್ಲದ ಕಾರಣಕ್ಕೆ ಅಥವಾ ತಮ್ಮ ನೆರೆಹೊರೆಯವರ ಪೀಡನೆಯಿಂದ ತಪ್ಪಿಸಿಕೊಳ್ಳಲು ಅವರಲ್ಲಿನ ಅನೇಕರು, ಆಸ್ಪತ್ರೆಯ ಆವರಣದಲ್ಲಿ ನೆಲೆಸಿದ್ದಾರೆ.

PHOTO • Ritayan Mukherjee

ಪ್ರವೇಶ ದ್ವಾರದ ಬಳಿ, ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬರು, ಕುಟುಂಬದ ಸದಸ್ಯರೊಬ್ಬರು ಆಸ್ಪತ್ರೆಗೆ ದಾಖಲಾದುದನ್ನು ಖಚಿತಪಡಿಸಲು ತಮ್ಮ ಮನೆಗೆ ವೀಡಿಯೋ ಕರೆ (call) ಮಾಡುತ್ತಿದ್ದಾರೆ.

PHOTO • Ritayan Mukherjee

ಮಕ್ಕಳ ವೈದ್ಯಕೀಯ ಕ್ಷೇತ್ರದ ಪ್ರಧಾನ ವ್ಯಕ್ತಿಯೆನಿಸಿದ ಡಾ. ಕೆ.ಸಿ. ಚೌಧರಿ ಅವರು 1956ರಲ್ಲಿ ಕೊಲ್ಕತ್ತದಲ್ಲಿ ಇನ್ಸ್ಟಿಟ್ಯೂಟ್‌ ಆಫ್‌ ಚೈಲ್ಡ್‌ ಹೆಲ್ತ್‌ (ಐ.ಸಿ.ಹೆಚ್‌) ಅನ್ನು ಆರಂಭಿಸಿದರು. ಲಾಭರಹಿತ ಸಂಸ್ಥೆಯಾದ ಇದನ್ನು ಟ್ರಸ್ಟ್‌ ವತಿಯಿಂದ ನಿರ್ವಹಿಸಲಾಗುತ್ತದೆ.

ಅನುವಾದ : ಶೈಲಜ ಜಿ . ಪಿ .

Ritayan Mukherjee

ரிதயன் முகர்ஜி, கொல்கத்தாவைச் சேர்ந்த புகைப்படக்காரர். 2016 PARI பணியாளர். திபெத்திய சமவெளியின் நாடோடி மேய்ப்பர் சமூகங்களின் வாழ்வை ஆவணப்படுத்தும் நீண்டகால பணியில் இருக்கிறார்.

Other stories by Ritayan Mukherjee
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.