ಆ ರಾತ್ರಿ ಇಡೀ ಗುಡ್ಡವೇ ಕುಸಿದುಬಿತ್ತು.
ರಾತ್ರಿ ಸುಮಾರು 11 ಗಂಟೆಯ ಸಮಯ. ಆ ಸಮಯದಲ್ಲಿ ಅನಿತಾ ಬಕಾಡೆ ನಿದ್ರಿಸುತ್ತಿದ್ದರು ಹಾಗೂ ಅವರ 17 ಜನರ ಅವಿಭಕ್ತ ಕುಟುಂಬದ ಪ್ರತಿಯೊಬ್ಬರೂ ಹತ್ತಿರದಲ್ಲೇ ಇರುವ 4-5 ಮನೆಗಳಲ್ಲಿ ಮಲಗಿದ್ದರು. ಅವರು ಹೇಳುತ್ತಾರೆ, “ಜೋರಾದ ಸದ್ದು ನಿದ್ರೆಯಲ್ಲಿದ್ದ ನಮ್ಮನ್ನು ಎಚ್ಚರಿಸಿತು, ಎಚ್ಚರವಾಗುತ್ತಿದ್ದಂತೆಯೇ ಏನಾಗುತ್ತಿದೆ ಎನ್ನುವುದು ನಮ್ಮ ಅರಿವಿಗೆ ಬಂತು. ಗಾಢ ಕತ್ತಲಲ್ಲಿ ಅಲ್ಲಿ ಇಲ್ಲಿ ಓಡತೊಡಗಿದೆವು. ಸ್ವಲ್ಪ ಸಮಯದಲ್ಲೇ ನಮ್ಮ ಮನೆಯ ಅಕ್ಕಪಕ್ಕದ ಮನೆಗಳೆಲ್ಲ ಕುಸಿದು ಬಿದ್ದವು.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಟಾನ್ ತಾಲ್ಲೂಕಿನ ಸಹ್ಯಾದ್ರಿ ಪರ್ವತ ಶ್ರೇಣಿಯ ನಡುವೆ ಇರುವ ಮಿರ್ಗಾಂವ್ ಎಂಬ ಹಳ್ಳಿಗೆ ಅಪ್ಪಳಿಸಿದ ಭೂಕುಸಿತದಿಂದ ಅನಿತಾ ಅವರ ಮನೆ ಪಾರಾಗಿದೆ. ಆದರೆ ಅವರು ಈ ವರ್ಷದ ಜುಲೈ 22ರ ರಾತ್ರಿ ತಮ್ಮ ಜಂಟಿ ಕೃಷಿ ಕುಟುಂಬದ 11 ಸದಸ್ಯರನ್ನು ಕಳೆದುಕೊಂಡರು. ಅವರಲ್ಲಿ ಕಿರಿಯವನು ಏಳು ವರ್ಷದ ಯುವರಾಜ್, ಸೋದರಳಿಯ, ಹಿರಿಯವರು 80 ವರ್ಷದ ಯಶೋದಾ ಬಕಾಡೆ, ಅನಿತಾರ ದೂರದ ಸಂಬಂಧಿ.
ಮರುದಿನ ಬೆಳಗ್ಗೆಯೇ ವಿಪತ್ತು ರಕ್ಷಣಾ ತಂಡ ಅಲ್ಲಿಗೆ ತಲುಪಿದ್ದು, ಮಧ್ಯಾಹ್ನದ ವೇಳೆಗೆ ಗ್ರಾಮದ ಅನಿತಾ ಹಾಗೂ ಇತರರನ್ನು ಸುಮಾರು 6 ಕಿ.ಮೀ ದೂರದಲ್ಲಿನ ಕೊಯ್ನಾನಗರ ಗ್ರಾಮದಲ್ಲಿರುವ ಜಿಲ್ಲಾ ಪರಿಷತ್ ಶಾಲೆಗೆ ಸ್ಥಳಾಂತರಿಸಲಾಯಿತು. ಮಿರ್ಗಾಂವ್ ಬೃಹತ್ ಕೊಯ್ನಾ ಅಣೆಕಟ್ಟು ಮತ್ತು ಜಲವಿದ್ಯುತ್ ಸ್ಥಾವರದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ.
ಗ್ರಾಮದ ಪೊಲೀಸ್ ಪಾಟೀಲ (ಪೇದೆ) ಸುನಿಲ್ ಶೆಲಾರ್ ಹೇಳುತ್ತಾರೆ, “ಸಂಜೆ 4ರ ಸುಮಾರಿಗೆ ಸಣ್ಣ ಭೂಕುಸಿತದ ನಂತರ, ನಾವು ಸಂಜೆ 7ರ ಸುಮಾರಿಗೆ ಗ್ರಾಮದಿಂದ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದ್ದೆವು ಮತ್ತು ಇನ್ನೇನೂ ತೊಂದರೆ ಆಗಲಿಕ್ಕಿಲ್ಲ ಎಂದು ನಾವು ಭಾವಿಸಿದ್ದೆವು. ಆದರೆ, ರಾತ್ರಿ 11 ಗಂಟೆ ಸುಮಾರಿಗೆ ಈ ಭೀಕರ ಘಟನೆ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ನಮ್ಮ ಇಡೀ ಗ್ರಾಮವೇ ಧ್ವಂಸಗೊಂಡಿತು.
ಮಿರ್ಗಾಂವ್‌ನ 285 ಜನರಲ್ಲಿ (2011ರ ಜನಗಣತಿಯ ಪ್ರಕಾರ) 11 ಮಂದಿ ಭೂಕುಸಿತದ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಇಲ್ಲಿನ ಜನರು ಧಾರಾಕಾರ ಮಳೆ ಮತ್ತು ಸಣ್ಣ ಭೂಕುಸಿತಗಳಿಗೆ ಮೊದಲಿನಿಂದಲೂ ಒಗ್ಗಿಕೊಂಡಿದ್ದರು. ಆದರೆ ಜುಲೈ 22ರಂದು ಸಂಭವಿಸಿದ ಭೂಕುಸಿತವು ಅಭೂತಪೂರ್ವ ಮತ್ತು ಅನಿರೀಕ್ಷಿತವಾಗಿತ್ತು ಎಂದು ಅವರು ಹೇಳುತ್ತಾರೆ. ಅಂದು ಕೊಯ್ನಾ ಜಲಾನಯನ ಪ್ರದೇಶದಲ್ಲಿ 746 ಮಿ.ಮೀ.ನಷ್ಟು ದಾಖಲೆ ಮಳೆಯಾಗಿದ್ದು, ಆ ವಾರ ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ತೀವ್ರ ನಷ್ಟವಾಗಿದೆ ಎಂದು ಹಲವು ಸುದ್ದಿ ವರದಿಗಳಲ್ಲಿ ದಾಖಲಾಗಿದೆ.
ಜಿಲ್ಲಾ ಪರಿಷತ್ ಶಾಲೆಯಲ್ಲಿ ನಡೆದ ಸಂವಾದದಲ್ಲಿ 45 ವರ್ಷದ ಜಯಶ್ರೀ ಸಪ್ಕಾಲ್, “ಜುಲೈ 21ರಂದು ಮಧ್ಯಾಹ್ನ ಮಳೆ ಪ್ರಾರಂಭವಾಯಿತು. ಪ್ರತಿ ವರ್ಷವೂ ಈ ಋತುವಿನಲ್ಲಿ ಭಾರೀ ಮಳೆ ಸಾಮಾನ್ಯವಾಗಿರುವುದರಿಂದ ನಾವು ಆ ಕುರಿತು ಹೆಚ್ಚು ಚಿಂತಿಸಲಿಲ್ಲ. ಆದರೆ, ಮರುದಿನ ರಾತ್ರಿ 11 ಗಂಟೆ ಸುಮಾರಿಗೆ ಜೋರಾದ ಧ್ವನಿ ಪ್ರತಿಧ್ವನಿಸಿದ್ದರಿಂದ ನಮಗೆಲ್ಲ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಗುಡ್ಡವು ದೊಡ್ಡದಾಗಿ ಕುಸಿದು ಕೆಲವೇ ನಿಮಿಷಗಳಲ್ಲಿ ನಮ್ಮ ಗ್ರಾಮವು ನಾಶವಾಯಿತು. ನಾವೊಂದಿಷ್ಟು ಮಂದಿ ಅದೃಷ್ಟವಶಾತ್ ಹತ್ತಿರದ ದೇವಸ್ಥಾನಕ್ಕೆ ಓಡಿ ಹೋಗಿ ತಪ್ಪಿಸಿಕೊಂಡೆವು.
21ರ ಹರೆಯದ ಕೋಮಲ್ ಶೆಲಾರ್, ಇದಕ್ಕೆ ತಮ್ಮ ಮಾತು ಸೇರಿಸುತ್ತಾ, "ನಮ್ಮ ಮನೆಗೆ ಓಡಿ ಬಂದ ಗ್ರಾಮದ ಕೆಲವರು ಬೆಟ್ಟ ಕುಸಿದು ಬಿದ್ದಿದೆ ಎಂದು ಹೇಳಿದರು. ನಾವು ಯೋಚಿಸಿ ಅರ್ಥಮಾಡಿಕೊಳ್ಳಲು ಒಂದು ಕ್ಷಣವೂ ತಡಮಾಡದೆ ತಕ್ಷಣವೇ ಮನೆಯಿಂದ ಹೊರಗೆ ಓಡಿಹೋದೆವು. ಹೊರಗೆ ತುಂಬಾ ಕತ್ತಲಾಗಿತ್ತು. ಸುತ್ತ ಏನೂ ಕಾಣುತ್ತಿರಲಿಲ್ಲ. ಹೇಗೋ ಸೊಂಟದವರೆಗಿನ ನೀರಿನಲ್ಲೇ ದೇವಸ್ಥಾನ ತಲುಪಿದ ನಾವು ಅಲ್ಲೇ ರಾತ್ರಿ ಕಳೆದೆವು.
ಮನೆಗಳು ಕುಸಿದು ಉಂಟಾದ ಜೀವಹಾನಿಯಲ್ಲದೆ, ಅತಿವೃಷ್ಟಿ ಮತ್ತು ಭೂಕುಸಿತದಿಂದ ಹೊಲಗಳಿಗೆ ಅಪಾರ ಹಾನಿಯುಂಟಾದ ಕಾರಣ ಬೆಳೆ ನಾಶವೂ ಸಂಭವಿಸಿದೆ. ಭೀಕರ ದೃಶ್ಯದಲ್ಲಿ 12 ಮನೆಗಳು ನಾಶವಾದ ಅವಿಭಕ್ತ ಕುಟುಂಬಕ್ಕೆ ಸೇರಿದವರಾದ 46 ವರ್ಷದ ರವೀಂದ್ರ ಸಪ್ಕಲ್ ಹೇಳುತ್ತಾರೆ, “ಘಟನೆಗೆ ಕೆಲವು ದಿನಗಳ ಮೊದಲು ನಾನು ಭತ್ತವನ್ನು ನಾಟಿ ಮಾಡಿದ್ದೆ ಮತ್ತು ಈ ಹಂಗಾಮಿನಲ್ಲಿ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದೆ. ಆದರೆ ನನ್ನ ಸಂಪೂರ್ಣ ಕೃಷಿ ಭೂಮಿ ಕೊಚ್ಚಿ ಹೋಗಿದೆ. ಈಗ ಎಲ್ಲೆಂದರಲ್ಲಿ ಕೆಸರು ಮಾತ್ರ ತುಂಬಿಕೊಂಡಿದೆ. ಈಗ ಏನು ಮಾಡಬೇಕೆಂದು ನನಗೆ ತೋಚುತ್ತಿಲ್ಲ. ನನ್ನ ಇಡೀ ಕುಟುಂಬ ಭತ್ತದ ಬೆಳೆಯ ಮೇಲೆ ಅವಲಂಬಿತವಾಗಿದೆ.
ಮಿರ್‌ಗಾಂವ್‌ನ ಹಿರಿಯರ ಪಾಲಿಗೆ, ಜಿಲ್ಲಾ ಪರಿಷತ್ ಶಾಲೆಗೆ ಆಗಿರುವ ಸ್ಥಳ ಬದಲಾವಣೆ ಸೇರಿದರೆ ಇದು ಮೂರನೇ ಸ್ಥಳಾಂತರವಾಗಿದೆ. 1960ರ ದಶಕದ ಆರಂಭದಲ್ಲಿ, ಕೊಯ್ನಾ ಅಣೆಕಟ್ಟಿನ ನಿರ್ಮಾಣ ಪ್ರಾರಂಭವಾದಾಗ, ಅವರು ತಮ್ಮ ತಲೆಯ ಮೇಲೊಂದು ಸೂರನ್ನು ಹುಡುಕಲು ಮೊದಲ ಬಾರಿಗೆ ತಮ್ಮ ವಸತಿ ಪ್ರದೇಶದಿಂದ ದೂರ ಹೋಗಬೇಕಾಯಿತು. ಕುಟುಂಬಗಳು ಆಶ್ರಯವನ್ನು ಹುಡುಕಲು ಎತ್ತರದ ಪ್ರದೇಶಗಳಿಗೆ ಹೋಗಬೇಕಾಗಿತ್ತು ಮತ್ತು ಹಳೆಯ ಮಿರ್ಗಾಂವ್ ಸ್ವಲ್ಪ ಸಮಯದ ನಂತರ ನೀರಿನಲ್ಲಿ ಮುಳುಗಿತು. ನಂತರ, 11 ಡಿಸೆಂಬರ್ 1967ರಂದು, ಕೊಯ್ನಾ ಅಣೆಕಟ್ಟಿನ ಸುತ್ತಲಿನ ಪ್ರದೇಶದಲ್ಲಿ ಹೆಚ್ಚು ತೀವ್ರತೆಯ ಭೂಕಂಪನ ಸಂಭವಿಸಿತು ಮತ್ತು ಹೊಸ 'ಮಿರ್ಗಾಂವ್'ನಲ್ಲಿ ವಾಸಿಸುವವರನ್ನು ಒಳಗೊಂಡಂತೆ ಹತ್ತಿರದ ಹಳ್ಳಿಗಳ ಜನರನ್ನು ರಕ್ಷಣಾ ಶಿಬಿರಗಳಿಗೆ ಕರೆದೊಯ್ಯಲಾಯಿತು. ಅದರ ನಂತರ ಮಿರ್ಗಾಂವ್ ಜನರು ಈ ವರ್ಷದ ಜುಲೈ 22ರಂದು ಭೂಕುಸಿತ ಘಟನೆ ನಡೆದ ಅದೇ ಸ್ಥಳದಲ್ಲಿ ವಾಸಿಸಲು ಮರಳಿದ್ದರು.
"ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಸರ್ಕಾರ ನಮಗೆ ಕೃಷಿಭೂಮಿ ಮತ್ತು ಉದ್ಯೋಗಗಳ ಭರವಸೆ ನೀಡಿತ್ತು" ಎಂದು 42 ವರ್ಷದ ಉತ್ತಮ್ ಶೆಲಾರ್ ಹೇಳುತ್ತಾರೆ. "ಇದೆಲ್ಲ ನಡೆದು 40 ವರ್ಷಗಳಿಗಿಂತ ಹೆಚ್ಚು ಸಮಯವಾಗಿದೆ, ಆದರೆ ನಮಗೆ ಏನೂ ಸಿಕ್ಕಿಲ್ಲ. ನೀವು ಕೊಯ್ನಾ ಪ್ರದೇಶದ ಮೂಲಕ ಹೋದರೆ, ಅಲ್ಲಿನ ಪರ್ವತಗಳಲ್ಲಿ ದೊಡ್ಡ ಬಿರುಕುಗಳನ್ನು ನೋಡಬಹುದು, ಈ ಪರ್ವತಗಳು ಮುಂದಿನ ಮಳೆಯಲ್ಲಿ ಕುಸಿಯುತ್ತವೆ. ನಾವು ನಿರಂತರ ಭಯದಲ್ಲೇ ಬದುಕುತ್ತಿದ್ದೇವೆ."
ಜುಲೈ 23ರಂದು, ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಘೋಷಿಸಿದೆ ಎಂದು ಸುದ್ದಿ ವರದಿಗಳು ತಿಳಿಸಿವೆ. ಅನಿತಾ ಬಕಾಡೆ ಅವರ ಕುಟುಂಬಕ್ಕೆ ಈ ಮೊತ್ತ ಬಂದಿದೆ. ಕೇಂದ್ರ ಸರ್ಕಾರವು ೨ ಲಕ್ಷ ರೂ.ಗಳನ್ನು ಘೋಷಿಸಿದೆ, ಇದುವರೆಗೆ ಬಕಾಡೆ ಕುಟುಂಬ ಈ ಮೊತ್ತವನ್ನು ಸ್ವೀಕರಿಸಿಲ್ಲ.
ಆದರೆ ಭೂಕುಸಿತದಲ್ಲಿ ತಮ್ಮ ಕೃಷಿಭೂಮಿ ಅಥವಾ ಮನೆಗಳನ್ನು ಕಳೆದುಕೊಂಡ ಜನರಿಗೆ ಇಲ್ಲಿಯವರೆಗೆ ಯಾವುದೇ ಪರಿಹಾರದ ಪ್ಯಾಕೇಜ್ ಘೋಷಿಸಲಾಗಿಲ್ಲ.
"ಕಂದಾಯ ಇಲಾಖೆಯು ನಮ್ಮಿಂದ (ಆಗಸ್ಟ್ 2ರಂದು ಪರಿಹಾರಕ್ಕಾಗಿ) ಒಂದು ನಮೂನೆಯನ್ನು ಭರ್ತಿ ಮಾಡಿಸಿಕೊಂಡಿತು, ಆದರೆ ಇನ್ನೂ ಏನನ್ನೂ ಘೋಷಿಸಲಾಗಿಲ್ಲ" ಎಂದು 25 ವರ್ಷದ ಗಣೇಶ್ ಶೆಲಾರ್ ಹೇಳುತ್ತಾರೆ, ಆದರೆ ಅವರ ಇಡೀ ಕೃಷಿಭೂಮಿಯನ್ನು ಆವರಿಸಿರುವ ಮಣ್ಣು ಮತ್ತು ಅವಶೇಷಗಳನ್ನು ನನಗೆ ತೋರಿಸುತ್ತಾರೆ. ಕೋವಿಡ್-19 ಅಂಟುರೋಗದ ಕಾರಣದಿಂದ ನವಿ ಮುಂಬೈನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಹುದ್ದೆಯನ್ನು ತೊರೆದ ನಂತರ ಗಣೇಶ್ ತಮ್ಮ ಕುಟುಂಬಕ್ಕೆ ಭತ್ತದ ಕೃಷಿಗೆ ಸಹಾಯ ಮಾಡಲೆಂದು ತಮ್ಮ ಹಳ್ಳಿಗೆ ಮರಳಿದರು. ಅವರು ನಡುವೆ ಒಂದೆಡೆ ನಿಂತು, ತನ್ನ ಕಣ್ಣೀರನ್ನು ತಡೆಹಿಡಿಯಲು ಪ್ರಯತ್ನಿಸಿದರು. "ನಾವು ನಮ್ಮ ಇಡೀ 10 ಎಕರೆ ಕೃಷಿಭೂಮಿಯನ್ನು ಕಳೆದುಕೊಂಡಿದ್ದೇವೆ, ನಮ್ಮ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇದಕ್ಕಾಗಿ ನಾವು ಸರ್ಕಾರದಿಂದ ಏನನ್ನಾದರೂ ಪರಿಹಾರ ಪಡೆಯಬಹುದೆನ್ನುವ ಕುರಿತು ಅನುಮಾನವಿದೆ."
ಏತನ್ಮಧ್ಯೆ, ಭೂಕುಸಿತದ ಅನೇಕ ವಾರಗಳ ನಂತರ, ಮಿರ್ಗಾಂವ್ ಸಂತ್ರಸ್ತರು ಸರ್ಕಾರ ಮತ್ತು ವಿವಿಧ ಎನ್ ಜಿಒಗಳು ಒದಗಿಸುವ ಆಹಾರ ಧಾನ್ಯಗಳು ಮತ್ತು ಇತರ ವಸ್ತುಗಳನ್ನು ಅವಲಂಬಿಸಿ ಜಿಲ್ಲಾ ಪರಿಷತ್‌ನ ಶಾಲೆಯಲ್ಲಿಯೇ ಉಳಿದಿದ್ದಾರೆ. ಮತ್ತು ಅವರೆಲ್ಲರೂ ಈಗ ಸರಿಯಾದ ಮತ್ತು ಶಾಶ್ವತ ಪುನರ್ವಸತಿಗಾಗಿ ಹಂಬಲಿಸುತ್ತಾ ಹತಾಶರಾಗುತ್ತಿದ್ದಾರೆ. "ನಮ್ಮ ಹಳ್ಳಿ ಈಗಿಲ್ಲ. ಸುರಕ್ಷಿತ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂಬುದು ಈಗ ನಮ್ಮ ಬೇಡಿಕೆಯಾಗಿದೆ" ಎಂದು ಪೊಲೀಸ್ ಪಾಟೀಲ್ ಸುನಿಲ್ ಶೆಲಾರ್ ಹೇಳುತ್ತಾರೆ.
"ಈಗ ಯಾರೂ ತಮ್ಮ ಮೊದಲಿನ [ಮಿರ್ಗಾಂವ್] ಮನೆಗೆ ಹೋಗಲು ಬಯಸುತ್ತಿಲ್ಲ. ನಾವು ಮತ್ತೆ ಅಲ್ಲಿ ವಾಸಿಸಲು ಬಯಸುವುದಿಲ್ಲ.ನಮಗೆ ಸಂಪೂರ್ಣ ಹೊಸದಾದ ಪುನರ್ವಸತಿ ಅಗತ್ಯವಿದೆ, ”ಎಂದು ಉತ್ತಮ್ ಶೆಲಾರ್ ಹೇಳುತ್ತಾರೆ.
ಭೂಕುಸಿತದಿಂದ ಪಾರಾಗಿ ಉಳಿದಿರುವವರಲ್ಲಿ ಒಬ್ಬರಾದ ಅನಿತಾರ ಚಿಕ್ಕಮ್ಮನ ಮಗ ಸಂಜಯ ಬಕಾಡೆ ಹೇಳುತ್ತಾರೆ, “ಸ್ವಾತಂತ್ರ್ಯ ದಿನಾಚರಣೆಯ [ಆಗಸ್ಟ್ 15] ಒಳಗೆ ನಮಗೆ ತಾತ್ಕಾಲಿಕ ಮನೆಗಳನ್ನು ಒದಗಿಸುವುದಾಗಿ ಸರಕಾರ ಹೇಳಿತ್ತು. ಆದರೆ ಅವರು ತಮ್ಮ ಮಾತನ್ನು ಉಳಿಸಿಕೊಂಡಿಲ್ಲ. ಇನ್ನೂ ಎಷ್ಟು ದಿನವೆಂದು ನಾವು ಇದೇ ಶಾಲೆಯಲ್ಲಿರಲು ಸಾಧ್ಯ?” ಇಲ್ಲಿ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ. ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಅವರು ಮುಂದುವರೆದು ಹೇಳುತ್ತಾರೆ, “ನಾವು ಈ ಜಿಲ್ಲೆಯನ್ನೇ ಬಿಟ್ಟು ಹೋಗುವುದಕ್ಕೂ ಸಿದ್ಧ, ನಮಗೆ ಪೂರ್ಣ ಹೊಸದಾದ ಪುನರ್ವಸತಿ ವ್ಯವಸ್ಥೆ ಮಾಡಬೇಕು.”
ಮಿರ್ಗಾಂವ್‌ನ ಭೂಕುಸಿತದಲ್ಲಿ ಸಾವನ್ನಪ್ಪಿದ 11 ಜನರ ಹೆಸರಿನಲ್ಲಿ ಆಗಸ್ಟ್ 14ರಂದು ಸಂಜೆ 4 ಗಂಟೆಗೆ ಶಾಲೆಯಲ್ಲಿ ವಾಸಿಸುತ್ತಿರುವ ಜನರು ಒಂದು ಸಣ್ಣ ಮೌನ ಶೃದ್ಧಾಂಜಲಿಯನ್ನು ಆಚರಿಸಿದರು. ಎಲ್ಲರ ಕಣ್ಣುಗಳು ಮುಚ್ಚಿದ್ದವು. ಅನಿತಾರ ಕಣ್ಣು ಮಾತ್ರ ತೆರೆದಿತ್ತು. ಬಹುಶಃ ಕುಟುಂಬದ 11 ಸದಸ್ಯರ ಸಾವಿನ ಆಘಾತದಿಂದ ಅವರಿನ್ನೂ ಹೊರಬಂದಿಲ್ಲ.
ಅವರು ಕೂಡ ಇತರರಂತೆ, ಈಗಲೂ ತನ್ನ ಪತಿ ಮತ್ತು ಮಗನೊಂದಿಗೆ ಶಾಲೆಯಲ್ಲಿಯೇ ವಾಸಿಸುತ್ತಿದ್ದಾರೆ, ಅವರಿಬ್ಬರು ಕೂಡ ವೃತ್ತಿಯಿಂದ ರೈತರು. ತನ್ನ ಕೆಲವು ಸಂಬಂಧಿಕರೊಂದಿಗೆ ಶಾಲೆಯ ಒಂದು ಮೂಲೆಯಲ್ಲಿ ನೆಲದ ಮೇಲೆ ಕುಳಿತು, ಅವರು ಹೇಳುತ್ತಾರೆ, "ನಾವು ನಮ್ಮ ಕುಟುಂಬ, ನಮ್ಮ ಮನೆಗಳು, ನಮ್ಮ ಸರ್ವಸ್ವವನ್ನೂ ಕಳೆದುಕೊಂಡಿದ್ದೇವೆ. ಈಗ ನಾವು ನಮ್ಮ ಹಳ್ಳಿಗೆ ಹಿಂತಿರುಗುವುದಿಲ್ಲ." ಅಳುತ್ತಿದ್ದ ಅವರಿಂದ ಮಾತು ಮುಂದುವರೆಸಲು ಸಾಧ್ಯವಾಗಲಿಲ್ಲ.
ಕವರ್ ಫೋಟೋ: ಗಣೇಶ್ ಶೆಲಾರ್
ಅನುವಾದ: ಶಂಕರ. ಎನ್. ಕೆಂಚನೂರು