ಪ್ರತಿದಿನ ಬೆಳಿಗ್ಗೆ ಹಿಮಾನ್ಷಿ ಕೂಬಾಲ್ ಪ್ಯಾಂಟ್ ಶರ್ಟ್ ತೊಟ್ಟು ಪತಿಯೊಡನೆ ತಮ್ಮ ಸಣ್ಣ ದೋಣಿಯೊಂದಿಗೆ ನೀರಿಗಿಳಿಯುತ್ತಾರೆ. ಮತ್ತೆ ಸಂಜೆಗೆ ಚಂದದ ಸೀರೆಯುಟ್ಟು, ಒಮ್ಮೊಮ್ಮೆ ಅಬ್ಬಲಿಗೆ (ಕನಕಾಂಬರ) ಹೂ ಮುಡಿದು ಗ್ರಾಹಕರಿಗೆ ಮೀನು ಕತ್ತರಿಸಿ ಕೊಡುವುದು, ಸ್ವಚ್ಛಗೊಳಿಸಿ ಕೊಡುವುದನ್ನು ಮಾಡುತ್ತಾರೆ.
ಈಗ ತನ್ನ ಮೂವತ್ತರ ಹರೆಯದಲ್ಲಿರುವ ಹಿಮಾನ್ಷಿ ತನ್ನ ಬಾಲ್ಯದಲ್ಲೇ ಮೀನುಗಾರಿಕೆಯಲ್ಲಿ ತೊಡಗಿದ್ದರು. ಆರಂಭದಲ್ಲಿ ಮಾಲ್ವಾಣ್ ತಾಲ್ಲೂಕಿನ ನದಿಗಳು ಮತ್ತು ಕೊಲ್ಲಿಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಅವರು ಮೂರು ವರ್ಷಗಳ ಹಿಂದೆ ದೋಣಿ ಖರೀದಿಸಿದಾಗಿನಿಂದ, ತನ್ನ ಗಂಡನೊಂದಿಗೆ ಅರೇಬಿಯನ್ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಮಾಲ್ವಣ್ ದಾಂಡಿಯ ತೀರದಲ್ಲಿರುವ ಕೆಲವೇ ಕೆಲವು ಮಹಿಳಾ ಮೀನುಗಾರರಲ್ಲಿ ಅವರೂ ಒಬ್ಬರು, ಅವರು ಚುರುಕಾಗಿ ಬಲೆಗಳನ್ನು ಬೀಸಬಲ್ಲರು. ಮತ್ತು ಮೀನುಗಾರಿಕೆಯಲ್ಲಿ ನಿರತರಾಗಿರುವ ತಾಲ್ಲೂಕಿನ ಒಟ್ಟು 111,807 ಜನಸಂಖ್ಯೆಯ 10,635 ನಿವಾಸಿಗಳಲ್ಲಿ ಒಬ್ಬರಾಗಿದ್ದಾರೆ.
"ನಾನು ಮೊದಲು ನನ್ನ ಪತಿಯೊಂದಿಗೆ ಇತರ ದೋಣಿಗಳಲ್ಲಿ ಮೀನು ವಿಂಗಡಿಸುವ ಕೆಲಸ ಮಾಡುತ್ತಿದ್ದೆ" ಎಂದು ಅವರು ಹೇಳುತ್ತಾರೆ. "ಕೊನೆಗೆ ಮೂರು ವರ್ಷಗಳ ಹಿಂದೆ, ನಮ್ಮದೇ ಆದ ಒಂದು ಸಣ್ಣ ದೋಣಿ ಖರೀದಿಸಲು ಸಾಕಾಗುವಷ್ಟು ಹಣ ಒಟ್ಟುಗೂಡಿಸಿದ್ದೆವು, ಅಂದಿನಿಂದ ನಾವು ಒಟ್ಟಿಗೆ ನಮ್ಮದೇ ದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದೇವೆ."
ಹತ್ತಿರದಲ್ಲಿ, "ತೀನ್ ಶೇ, ತೀನ್ ಶೇ ದಹ, ತೀನ್ ಶೇ ವೀಸ್! ( ಮುನ್ನೂರು, ಮುನ್ನೂರ ಹತ್ತು, ಮುನ್ನೂರು ಇಪ್ಪತ್ತು!)" ಎನ್ನುವ ಹರಾಜು ಕೂಗುವವರ ಸದ್ದು ಕೇಳುತ್ತಿತ್ತು. ಅನೇಕ ಮೀನುಗಾರರು ತಮ್ಮ ದೋಣಿಗಳಿಂದ ಮೀನು ತುಂಬಿದ ಕ್ರೇಟ್‌ಗಳನ್ನು ಬೀಚ್‌ಗೆ ಸಾಗಿಸುತ್ತಿದ್ದರು. ವ್ಯಾಪಾರಿಗಳು ಮತ್ತು ದಲ್ಲಾಳಿಗಳು ಈ ಜನಸಂದಣಿಯಿಂದ ಉತ್ತಮ ವ್ಯಾಪಾರ ಗಳಿಸಲು ತಮ್ಮದೇ ತಂತ್ರಗಳನ್ನು ಬಳಸುತ್ತಾರೆ. ಬೀದಿ ನಾಯಿಗಳು, ಬೆಕ್ಕುಗಳು ಮತ್ತು ಪಕ್ಷಿಗಳು ಅತ್ತಿತ್ತ ಓಡಾಡುತ್ತಿದ್ದವು.
"ಸಾಮಾನ್ಯವಾಗಿ, ನಾವು ಪ್ರತಿದಿನ ಬೆಳಿಗ್ಗೆ ಮೀನು ಹಿಡಿಯಲು ಹೋಗುತ್ತೇವೆ. ಆದರೆ ಹವಾಮಾನವು ಪ್ರತಿಕೂಲವಾಗಿದ್ದರೆ ಅಥವಾ ಬೇರೆ ಯಾವುದಾದರೂ ಕಾರಣದಿಂದ ನೀರಿಗಿಳಿಯದಿದ್ದರೆ, ಮೀನುಗಳನ್ನು ಕತ್ತರಿಸಿ ಸ್ವಚ್ಛಗೊಳಿಸುವ ಕೆಲಸಕ್ಕೆ ಮಾರುಕಟ್ಟೆಗೆ ಹೋಗುತ್ತೇವೆ. ಜೊತೆಗೆ ಪ್ರತಿದಿನ ಸಂಜೆ ಹರಾಜಿನಲ್ಲಿಯೂ ಭಾಗವಹಿಸುತ್ತೇವೆ.”
ಭಾರತದ ಹೆಚ್ಚಿನ ಭಾಗಗಳಲ್ಲಿ ಮೀನುಗಾರಿಕೆಯನ್ನು ಸಾಮಾನ್ಯವಾಗಿ ಪುರುಷರು ಮಾಡುತ್ತಾರೆ, ಹಿಮಾನ್ಷಿಯಂತಹ ಅನೇಕ ಮಹಿಳೆಯರು ಈ ವ್ಯವಹಾರದ ಇತರ ಅಂಶಗಳಾದ ಮೀನು ಸಂಸ್ಕರಣೆ ಮತ್ತು ಮಾರಾಟದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಇವರು ದೇಶದ ಒಟ್ಟು ಮೀನುಗಾರಿಕೆಯಲ್ಲಿನ ಮೀನುಗಾರಿಕೆ ನಂತರದ ಉದ್ಯೋಗಿಗಳ ಸಂಖ್ಯೆಯಲ್ಲಿ ಸುಮಾರು 66.7ರಷ್ಟಿದ್ದಾರೆ ಮತ್ತು ಇವರು ಈ ಉದ್ಯಮದ ಅವಿಭಾಜ್ಯ ಅಂಗವಾಗಿದ್ದಾರೆ. ಕೊನೆಯ ಸಾಗರ ಮೀನುಗಾರಿಕೆ ಗಣತಿಯ ಪ್ರಕಾರ (2010), ಮೀನು ಹಿಡಿಯುವ ನಂತರದ ಕೆಲಸ (ಮೀನು ಹಿಡಿಯುವ ಪ್ರಕ್ರಿಯೆಯನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳಲ್ಲಿ) ಸುಮಾರು 4 ಲಕ್ಷ ಮಹಿಳೆಯರನ್ನು ಒಳಗೊಂಡಿದೆ. ಇದಲ್ಲದೆ, ಸುಮಾರು 40,000 ಮಹಿಳೆಯರು ಮೀನು ಸಾಕಣಿಕೆಗಾಗಿ 'ಮೀನು ಬೀಜಗಳನ್ನು' (ಅಥವಾ ಮೊಟ್ಟೆಗಳು) ಸಂಗ್ರಹಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
"ಇದು ಬಹಳ ಶ್ರಮದಾಯಕವಾದ ಕೆಲಸ, ಮೀನು ಖರೀದಿಸುವುದು, ಅವುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಾಟ ಮಾಡುವುದು, ಐಸ್‌ನಲ್ಲಿ ಇರಿಸುವುದು ಮತ್ತೆ ಅವುಗಳನ್ನು ಕತ್ತರಿಸಿ ಮಾರುವುದು. ಇಷ್ಟೂ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು" ಎನ್ನುತ್ತಾರೆ ಜುವಾನಿತಾ (ಪೂರ್ಣ ಹೆಸರು ತಿಳಿದಿಲ್ಲ). ವಿಧವೆಯಾಗಿರುವ ಇವರು ಮೀನು ವ್ಯಾಪಾರಿಯಾಗಿದ್ದು ದಾಂಡಿ ಕಡಲ ತೀರದಲ್ಲಿ ಒಂದು ಕೋಣೆಯ ಇಟ್ಟಿಗೆ, ಕಲ್ನಾರಿನಿಂದ ಕಟ್ಟಿದ ಮನೆಯೊಂದರಲ್ಲಿ ವಾಸಿಸುತ್ತಾರೆ. ಅವರ ಮನೆಗೆ ನಾವು ಹೋದಾಗ ಗೋಡೆಯಲ್ಲಿ ಹರಾಜಿನಲ್ಲಿ ಮೀನು ಖರೀದಿಸಿದ್ದಕ್ಕಾಗಿ ನೀಡಿದ್ದ ರಶಿದಿಗಳು ಮನೆಯ ಮೂಲೆಯೊಂದರಲ್ಲಿ ತಂತಿಯಲ್ಲಿ ನೇತಾಡುತ್ತಿದ್ದವು.ಜುವಾನಿತರಂತಹ ವ್ಯಾಪಾರಿಗಳಿಲ್ಲದೆ ಮೀನುಗಳ ಹರಾಜು ಪೂರ್ಣಗೊಳ್ಳುವುದಿಲ್ಲ, ಅವರು ಹರಾಜಿನಲ್ಲಿ ವಿವಿಧ ರೀತಿಯ ಮೀನುಗಳನ್ನು ಖರೀದಿಸಿ ಸ್ಥಳೀಯ ಮಾರುಕಟ್ಟೆ ಅಥವಾ ಹತ್ತಿರದ ಪಟ್ಟಣಗಳ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಹರಾಜುದಾರರೊಂದಿಗೆ ಚೌಕಾಶಿ ನಡೆಸವುದು ಅವರ ದೈನಂದಿನ ವ್ಯವಹಾರದ ಒಂದು ಭಾಗ. ಉತ್ತಮ ಬೆಲೆಯನ್ನು ಪಡೆಯಲು ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರ ಶೈಲಿಯನ್ನು ಹೊಂದಿದ್ದಾರೆ. ಕೆಲವರು ಹರಾಜಿನ ಪೂರ್ಣ ಮೊತ್ತವನ್ನು ಕೊನೆಯಲ್ಲಿ ನೀಡಲು ಒಪ್ಪುತ್ತಾರೆ ಆದರೆ ಹರಾಜುದಾರನ ಬಳಿ ಒಂದಿಷ್ಟು ಮೀನು ಹೆಚ್ಚು ಕೊಡುವಂತೆ ಮನವೊಲಿಸುತ್ತಾರೆ. ಇನ್ನೂ ಕೆಲವರು ಹರಾಜು ಪ್ರಕ್ರಿಯೆ ಮುಗಿದ ನಂತರ ಗುಟ್ಟಾಗಿ ಚೌಕಾಶಿ ನಡೆಸಿ ಸಣ್ಣ ಮಟ್ಟದ (ಕೆಲವೊಮ್ಮೆ 5 ರೂಪಾಯಿ ಸಹ) ರಿಯಾಯಿತಿಯನ್ನೂ ಪಡೆಯುತ್ತಾರೆ.
ಮೀನು ಮಾರಾಟದ ದೀರ್ಘ ದಿನಚರಿ ಮೀನಿನ ಕೊರತೆ, ರಾತ್ರಿ ಊಟಕ್ಕೆ ಯಾವ ಮೀನಿನ ಸಾರು ಮಾಡುವುದು ಎನ್ನುವಂತಹ ಚರ್ಚೆಗಳೊಂದಿಗೆ ಸಾಗುತ್ತದೆ. ಇಲ್ಲಿ ಮಹಿಳೆಯಲು ಮೀನು ಕ್ಲೀನ್ ಮಾಡುವುದು, ಬೇಕಾದ ಅಳತೆಗೆ ಕತ್ತರಿಸಿ ಕೊಡುವುದು, ನಂತರ ಅವುಗಳನ್ನು ತೊಳೆಯುವುದು ಹೀಗೆ ಮೀನು ಸಾರು ಮಾಡಲು ತಯಾರಾಗುವ ತನಕ ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಇವರು ಮಾಡಿಕೊಡುತ್ತಾರೆ. ಇವರ ಅಳತೆಗೆ ತಕ್ಕಂತೆ ಮೀನು ಕತ್ತರಿಸುವ ನೈಪುಣ್ಯ ಯಾವ ಸರ್ಜರಿಗೂ ಕಡಿಮೆಯಿಲ್ಲ.
“ನಾನು ಒಂಭತ್ತನೇ ತರಗತಿಗೆ ಶಾಲೆ ಬಿಟ್ಟೆ. ಅಂದಿನಿಂದ ಈ ಮೀನು ಒಣಗಿಸುವ ಕೆಲಸ ಮಾಡುತ್ತಿದ್ದೇನೆ. ಹೊಟ್ಟೆಯ ಪಾಡಿಗೆ ಏನಾದರೂ ಮಾಡಲೇಬೇಕಿತ್ತು ಹಾಗಾಗಿ ಈ ಕೆಲಸವನ್ನು ಮಾಡುತ್ತಿದ್ದೇನೆ.” ಎನ್ನುತ್ತಾರೆ 42 ವರ್ಷದ ಬೆನ್ನಿ ಫೆರ್ನಾಂಡಿಸ್. ತಿಂಗಳಿಗೆ ಅಂದಾಜು 4,000 ಸಂಪಾದಿಸುವ ಇವರು ಮಾಲ್ವಾಣ್ ತಾಲೂಕಿನ ದೇವಬಾಗ ಎನ್ನುವ ಊರಿನವರು. ಇವರು ಒಂದು ಹೆಗಲಿನಲ್ಲಿ ಮೀನಿನ ಬುಟ್ಟಿ ಇನ್ನೊಂದು ಹೆಗಲಿನಲ್ಲಿ ತನ್ನ ಮಗುವನ್ನು ಎತ್ತಿಕೊಂಡು ಚಾಕಚಕ್ಯತೆಯಿಂದ ಕೆಲಸ ಮಾಡುತ್ತಾರೆ. ಈ ಮೀನು ಒಣಗಿಸುವ ಕೆಲಸವನ್ನೂ ದೇಶದೆಲ್ಲೆಡೆ ಮಹಿಳೆಯರೇ ಮಾಡುತ್ತಾರೆ. ಈ ಕೆಲಸ ಮಾಡಲು ಗಂಟೆಗಟ್ಟಲೆ ಸುಡುವ ಬಿಸಿಲಿನಲ್ಲಿರಬೇಕಾಗುತ್ತದೆ. “ಮಳೆಗಾಲದಲ್ಲಿ ನಮಗೆ ಮೀನು ಒಣಗಿಸುವ ಕೆಲಸ ಇರುವುದಿಲ್ಲ. ಆ ಸಮಯದಲ್ಲಿ ಸಿಗುವ ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತೇವೆ” ಎನ್ನುತ್ತಾರೆ ಬೆನ್ನಿ.
ಹಿಮಾನ್ಷಿ, ಜುವನಿತಾ ಮತ್ತು ಬೆನ್ನಿಯಂತಹ ಮಹಿಳೆಯರು ವಿಶೇಷವಾಗಿ ಮೀನುಗಾರಿಕಾ ಸಮುದಾಯದ ದುರ್ಬಲ ಮಹಿಳೆಯರು. ಅಧ್ಯಯನದ ಪ್ರಕಾರ ಇವರ ಮೇಲೆ ಮೀನುಗಾರಿಕೆಯ ಪ್ರಸ್ತುತ ಸ್ಥಿತಿ ಬಹಳ ಗಂಭೀರ ಪರಿಣಾಮ ಬೀರಿದೆ. ಅತಿಯಾದ ಮೀನುಗಾರಿಕೆ, ಯಾಂತ್ರಿಕ ಮೀನುಗಾರಿಕೆಯ ಬಾಹುಳ್ಯ, ಕಡಿಮೆಯಾಗುತ್ತಿರುವ ಮೀನಿನ ಲಭ್ಯತೆ, ಹವಮಾನ ಬದಲಾವಣೆ ಮತ್ತಿತರ ಸಮಸ್ಯೆಗಳು ಈ ಸಣ್ಣ ಮಟ್ಟದಲ್ಲಿ ಮೀನುಗಾರಿಕೆ ನಡೆಸುವವರನ್ನು ವಿಶೇಷವಾಗಿ ಬಾಧಿಸುತ್ತಿದೆ.
ಮಹಿಳೆಯರೂ ಪುರುಷರಂತೆಯೇ ಈ ಉದ್ಯೋಗದ ಮೇಲೆ ಅವಲಂಬಿತರಾಗಿದ್ದರೂ ಈ ಉದ್ಯೋಗದಲ್ಲಿರುವ ಬಹುತೇಕ ಮಹಿಳೆಯರಿಗೆ ಪುರುಷರಿಗೆ ಸಿಗುತ್ತಿರುವ ಸೌಲಭ್ಯಗಳು ಮತ್ತು ಸಬ್ಸಿಡಿಗಳು ಸಿಗುತ್ತಿಲ್ಲ. ಉದಾಹರಣೆಗೆ ಮಳೆಗಾಲದಲ್ಲಿ ಮೀನುಗಾರಿಕೆಯ ಮೇಲೆ ನಿಷೇಧವಿದ್ದಾಗ ಪುರುಷರಿಗೆ ಸಿಗುವಂತೆ ಮೀನುಗಾರ ಮಹಿಳೆಯರಿಗೆ(ಪುರುಷನಿಲ್ಲದ) ಅದೇ ಪರಿಹಾರ ದೊರೆಯುವುದಿಲ್ಲ.
ಸಂಜೆಯ ಸಮಯಕ್ಕೆ ಮರಳಿ ದಾಂಡಿ ಕಡಲ ತೀರಕ್ಕೆ ಬಂದರೆ ಇಲ್ಲಿನ ಮಹಿಳೆಯರು ಮಕ್ಕಳ ಚಾಕರಿ, ಮನೆಗೆಲಸ ಇತ್ಯಾದಿಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿರುತ್ತಾರೆ. ಕಡಲಿನಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಅವರ ಕೆಲಸಗಳು ಕಡಲ ತೀರದಿಂದ ಮನೆಗೆ ಸ್ಥಳಾಂತರಗೊಳ್ಳುತ್ತವೆ.ಈ ಲೇಖನವನ್ನು ದಕ್ಷಿಣ್ ಪೌಂಡೇಷನ್‌ನ ಯೋಜನೆಯ ಭಾಗವಾಗಿ ಬರೆಯಲಾಗಿದೆ.
ಅನುವಾದ: ಶಂಕರ ಎನ್. ಕೆಂಚನೂರು