ಇಲ್ಲಿ ನೀವು ಹತ್ತಿರದಲ್ಲಿ ಆರೋಗ್ಯ ಸೇವೆಯನ್ನು ಪಡೆಯಬೇಕೆಂದರೆ ಅಣೆಕಟ್ಟೆಯ ನೀರಿನಲ್ಲಿ ತೇಲುವ ದೋಣಿಯಲ್ಲಿ ಕುಳಿತು ಎರಡು ಗಂಟೆಗಳ ಪ್ರಯಾಣ ಮಾಡಬೇಕು. ಅದು ಬೇಡವೆಂದರೆ ಅರೆ-ನಿರ್ಮಿತ ರಸ್ತೆಗಳಿರುವ ಪರ್ವತಗಳ ಗುಂಟ ಗಂಟೆಗಳ ಕಾಲ ಪ್ರಯಾಣಿಸಬೇಕು.

ಮತ್ತು ಪ್ರಭಾ ಗೊಲೋರಿ ಒಂಬತ್ತು ತಿಂಗಳ ತುಂಬು ಗರ್ಭಿಣಿ ಮತ್ತು ಯಾವುದೇ ಸಮಯದಲ್ಲಿ ಅವರಿಗೆ ಹೆರಿಗೆಯಾಗಬಹುದಿತ್ತು.

ನಾನು ಕೋಟಗುಡ ಹಾಡಿ ತಲುಪಿದಾಗ ಮಧ್ಯಾಹ್ನದ ಎರಡು ಗಂಟೆಯಾಗಿತ್ತು. ಪ್ರಭಾರ ಗುಡಿಸಲಿನ ಸುತ್ತಲೂ ನೆರೆ-ಹೊರೆಯ ಹೆಂಗಸರು ನೆರೆದಿದ್ದರು. ಮಗು ಉಳಿಯುವ ಕುರಿತು ಅವರಿಗೆ ಭರವಸೆ ಇದ್ದಿರಲಿಲ್ಲ.

35 ವರ್ಷದ ಪ್ರಬಾ ಅವರ ಮೊದಲ ಮಗ ಮೂರು ತಿಂಗಳ ವಯಸ್ಸಿನಲ್ಲಿ ತೀರಿಕೊಂಡಿದ್ದ. ಅವರ ಮಗಳಿಗೆ ಈಗ ಆರು ವರ್ಷ. ಹಳ್ಳಿಯಲ್ಲಿರುವ ಶುಶ್ರೂಷಕಿಯರ ಸಹಾಯದಿಂದ, ಆಕೆಯ ಎರಡೂ ಹೆರಿಗೆಗಳು ಮನೆಯಲ್ಲಿ ಹೆಚ್ಚು ತೊಂದರೆಯಿಲ್ಲದೆ ನಡೆದಿದ್ದವು. ಆದರೆ ಸೂಲಗಿತ್ತಿ ಈ ಬಾರಿ ಸ್ವಲ್ಪ ಆತಂಕಗೊಂಡಿದ್ದರು. ಈ ಬಾರಿಯ ಹೆರಿಗೆ ಸುಲಭವಿಲ್ಲವೆಂದು ಅವರಿಗೆ ಎನ್ನಿಸಿತ್ತು.

ಆ ದಿನ ಮಧ್ಯಾಹ್ನ ಫೋನ್‌ ಕರೆ ಬಂದ ಸಮಯದಲ್ಲಿ ನಾನು ವರದಿಯೊಂದರ ಸಲುವಾಗಿ ಹತ್ತಿರದ ಹಳ್ಳಿಯಲ್ಲಿದ್ದೆ. ನಂತರ ಅಲ್ಲಿಂದ ಸ್ನೇಹಿತರೊಬ್ಬರ ಮೋಟಾರುಬೈಕನ್ನು ತೆಗೆದುಕೊಂಡು (ನನ್ನ ಸಾಮಾನ್ಯ ಸ್ಕೂಟಿಗೆ ಈ ಗುಡ್ಡಗಾಡು ರಸ್ತೆಗಳನ್ನು ಏರಿಳಿಯುವುದು ಸಾಧ್ಯವಿಲ್ಲ), ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯ ಕೇವಲ 60 ಜನರ ಹಾಡಿಯಾದ ಕೋಟಗುಡಕ್ಕೆ ಧಾವಿಸಿದೆ.

ಚಿತ್ರಕೊಂಡ ತಾಲ್ಲೂಕಿನ ಈ ಊರನ್ನು ತಲುಪುವುದು ಕಷ್ಟವೆನ್ನುವುದು ಒಂದು ಕಡೆಯಾದರೆ. ಇನ್ನೊಂದೆಡೆ, ಮಧ್ಯ ಭಾರತದ ಬುಡಕಟ್ಟು ಪಟ್ಟಿಯ ಇತರ ಹಳ್ಳಿಗಳಂತೆ, ಇಲ್ಲಿಯೂ ಸರ್ಕಾರದ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಿರಂತರ ಯುದ್ಧ ನಡೆಯುತ್ತಿರುತ್ತದೆ. ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳು ಅನೇಕ ಸ್ಥಳಗಳಲ್ಲಿ ಅಸಮರ್ಪಕ ಮತ್ತು ವಿರಳವಾಗಿವೆ.

To help Praba Golori (left) with a very difficult childbirth, the nearest viable option was the sub-divisional hospital 40 kilometres away in Chitrakonda – but boats across the reservoir stop plying after dusk
PHOTO • Jayanti Buruda
To help Praba Golori (left) with a very difficult childbirth, the nearest viable option was the sub-divisional hospital 40 kilometres away in Chitrakonda – but boats across the reservoir stop plying after dusk
PHOTO • Jayanti Buruda

ಪ್ರಭಾ ಗೋಲೋರಿಯವರ ಈ ಕಷ್ಟಕರ ಹೆರಿಗೆಗೆ ಲಭ್ಯವಿದ್ದ ಹತ್ತಿರದ ಆರೋಗ್ಯ ಸೇವೆಯೆಂದರೆ 40 ಕಿ.ಮೀ ದೂರದಲ್ಲಿರುವ ಚಿತ್ರಕೊಂಡದ ಉಪ ವಿಭಾಗೀಯ ಆಸ್ಪತ್ರೆ - ಆದರೆ ಜಲಾಶಯದಲ್ಲಿನ ದೋಣಿಗಳು ಸಂಜೆಯ ನಂತರ ಸಂಚಾರ ನಡೆಸುವುದಿಲ್ಲ.

ಕೋಟಗುಡದಲ್ಲಿ ಕೆಲವೇ ಮನೆಗಳಿದ್ದು ಅವೆಲ್ಲವೂ ಪರೋಜಾ ಬುಡಕಟ್ಟು ಜನಾಂಗದವರಿಗೆ ಸೇರಿವೆ. ಅವರು ಮನೆ ಬಳಕೆಗಾಗಿ ಅರಿಶಿನ, ಶುಂಠಿ, ಬೇಳೆಕಾಳುಗಳು ಮತ್ತು ಅಕ್ಕಿಯನ್ನು ಬೆಳೆಯುತ್ತಾರೆ. ಜೊತೆಗೆ ಒಂದಿಷ್ಟು ಬೆಳೆಗಳನ್ನು ಅವರಿರುವಲ್ಲಿಗೇ ಬಂದು ಖರೀದಿಸುವ ವ್ಯಾಪಾರಿಗಳಿಗಾಗಿ ಬೆಳೆಯುತ್ತಾರೆ.

ಜೋಡಂಬೊ ಪಂಚಾಯತ್‌ಗೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವು ಇಲ್ಲಿಂದ ಐದು ಕಿಲೋಮೀಟರ್ ದೂರದಲ್ಲಿದೆಯಾದರೂ ಅಲ್ಲಿಗೆ ವೈದ್ಯರು ನಿಯಮಿತವಾಗಿ ಬರುವುದಿಲ್ಲ. 2020ರ ಆಗಸ್ಟ್‌ನಲ್ಲಿ ಪ್ರಭಾರ ಹೆರಿಗೆ ದಿನ ಹತ್ತಿರ ಬರುತ್ತಿದ್ದ ಸಮಯದಲ್ಲಿ ಆ ಪಿಎಚ್‌ಸಿಯನ್ನು ಲಾಕ್‌ಡೌನ್‌ ಕಾರಣದಿಂದಾಗಿ ಮುಚ್ಚಲಾಗಿತ್ತು. ಇಲ್ಲಿಂದ 100 ಕಿ.ಮೀ ದೂರದ ಕುದುಮುಲುಗುಮಾ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದೆ. ಈ ಸಂದರ್ಭದಲ್ಲಿ, ಪ್ರಭಾಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು, ಅದು ಅಲ್ಲಿ ಲಭ್ಯವಿಲ್ಲ.

ಹೀಗಾಗಿ, ಉಳಿದಿದ್ದ ಏಕೈಕ ಕಾರ್ಯಸಾಧು ಆಯ್ಕೆಯೆಂದರೆ 40 ಕಿಲೋಮೀಟರ್ ದೂರದ ಚಿತ್ರಕೊಂಡದಲ್ಲಿರುವ ಉಪ-ವಿಭಾಗೀಯ ಆಸ್ಪತ್ರೆ - ಆದರೆ ಚಿತ್ರಕೊಂಡ / ಬಲಿಮೆಲಾ ಜಲಾಶಯದ ಉದ್ದಕ್ಕೂ ದೋಣಿಗಳು ಮುಸ್ಸಂಜೆಯ ನಂತರ ಸಂಚಾರವನ್ನು ನಿಲ್ಲಿಸುತ್ತವೆ. ಉಳಿದಂತೆ ಎತ್ತರದ ದುರ್ಗಮ ರಸ್ತೆಯಲ್ಲಿ ಮೋಟಾರ್‌ ಸೈಕಲ್‌ ಅಥವಾ ಕಾಲ್ನಡಿಗೆಯಲ್ಲಿ ಹೋಗಬೇಕಿತ್ತು. ಆದರೆ ಒಂಬತ್ತು ತಿಂಗಳ ಗರ್ಭಿಣಿ ಪ್ರಬಾಗೆ ಈ ಆಯ್ಕೆಗಳು ಸಂಪೂರ್ಣವಾಗಿ ಸೂಕ್ತವಾಗಿರಲಿಲ್ಲ.

ಮಲ್ಕನ್ಗಿರಿ ಜಿಲ್ಲಾ ಕೇಂದ್ರದಲ್ಲಿ ನನ್ನ ಕೆಲವು ಪರಿಚಯಸ್ಥರಿಂದ ಸಹಾಯ ಪಡೆಯಲು ನಾನು ಪ್ರಯತ್ನಿಸಿದೆ ಆದರೆ ಅವರು ಅಂತಹ ಕೆಟ್ಟ ರಸ್ತೆಯಲ್ಲಿ ಆಂಬ್ಯುಲೆನ್ಸ್ ಕಳುಹಿಸುವುದು ಕಷ್ಟವೆಂದು ಹೇಳಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಜಲಮಾರ್ಗದ ಆಂಬುಲೆನ್ಸ್ ಸೇವೆ ಲಭ್ಯವಿದೆಯಾದರೂ ಲಾಕ್‌ಡೌನ್‌ ಕಾರಣದಿಂದಾಗಿ ಅದು ಬರಲು ಸಾಧ್ಯವಾಗಲಿಲ್ಲ.

ನಂತರ ಖಾಸಗಿ ಪಿಕ್-ಅಪ್‌ ವಾಹನವೊಂದನ್ನು 1,200 ರೂ. ಬಾಡಿಗೆಗೆ ಮಾತನಾಡಿ ಆಶಾ ಕಾರ್ಯಕರ್ತೆಯೊಬ್ಬರನ್ನು ಬರಲು ಒಪ್ಪಿಸಿದೆ. ಅವರು ಮರುದಿನ ಬೆಳಿಗ್ಗೆಯಷ್ಟೇ ಬರಲು ಸಾಧ್ಯವಾಯಿತು.

The state's motor launch service is infrequent, with unscheduled suspension of services. A privately-run boat too stops plying by evening. So in an emergency, transportation remains a huge problem
PHOTO • Jayanti Buruda

ಸರ್ಕಾರದ ಮೋಟಾರು ಲಾಂಚ್ ಸೇವೆ ವಿರಳವಾಗಿದ್ದು, ಸೇವೆಗಳನ್ನು‌ ಪ್ರಸ್ತುತ ನಿಲ್ಲಿಸಲಾಗಿದೆ. ಖಾಸಗಿಯಾಗಿ ಚಲಿಸುವ ದೋಣಿ ಕೂಡ ಸಂಜೆಯ ಹೊತ್ತಿಗೆ ಸಂಚಾರವನ್ನು ನಿಲ್ಲಿಸುತ್ತದೆ. ಹೀಗಾಗಿ ಇಲ್ಲಿ ತುರ್ತು ಪರಿಸ್ಥಿತಿಯಲ್ಲಿ, ಸಾರಿಗೆ ಒಂದು ದೊಡ್ಡ ಸಮಸ್ಯೆಯಾಗಿ ಉಳಿದಿದೆ

ನಾವು ಸ್ವಲ್ಪ ದೂರ ಹೋಗುತ್ತಿದ್ದಂತೆ ರಸ್ತೆ ಕೆಲಸ ನಡೆಯುತ್ತಿದ್ದ ಎತ್ತರದ ದಾರಿಯಲ್ಲಿ ವ್ಯಾನ್‌ ಕೆಟ್ಟು ನಿಂತಿತು. ಅಲ್ಲಿಯೇ ಉರುವಲು ಕಟ್ಟಿಗೆಗಾಗಿ ಬಂದಿದ್ದ ಗಡಿ ಭದ್ರತಾ ದಳದ ಟ್ರ್ಯಾಕ್ಟರ್‌ ಒಂದು ಕಣ್ಣಿಗೆ ಬಿತ್ತು. ನಂತರ ಅವರನ್ನು ಸಹಾಯಕ್ಕಾಗಿ ವಿನಂತಿಸಿದಾಗ ಅವರು ನಮ್ಮನ್ನು ಬಿಎಸ್ಎಫ್ ಕ್ಯಾಂಪ್ ಇರುವ ಬೆಟ್ಟದ ತುದಿಗೆ ಕರೆದೊಯ್ದರು. ಅಲ್ಲಿ ಹಂತಲಗುಡದ ಕ್ಯಾಂಪ್‌ನಲ್ಲಿದ್ದ ಸಿಬ್ಬಂದಿ ಪ್ರಭಾ ಅವರನ್ನು ಉಪ-ವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲು ಬೇಕಾದ ವ್ಯವಸ್ಥೆಯನ್ನು ಮಾಡಿದರು.

ಆ ಆಸ್ಪತ್ರೆಯಲ್ಲಿ, 60 ಕಿಲೋಮೀಟರ್ ದೂರದಲ್ಲಿರುವ ಮಲ್ಕನ್‌ಗಿರಿ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ಯಬೇಕಾಗುತ್ತದೆಂದು ಅಲ್ಲಿನ ಸಿಬ್ಬಂದಿ ಹೇಳಿದರು. ಅವರು ಮುಂದಿನ ಪ್ರಯಾಣಕ್ಕೆ ಬೇಕಾದ ವಾಹನದ ವ್ಯವಸ್ಥೆಗೆ ಸಹಾಯ ಮಾಡಿದರು.

ತಡ-ಮಧ್ಯಾಹ್ನದ ಹೊತ್ತಿಗೆ ನಾವು ಜಿಲ್ಲಾ ಆಸ್ಪತ್ರೆಯನ್ನು ತಲುಪಿದೆವು. ಒಂದು ದಿನದ ನಂತರ ನಾನು ಮತ್ತೆ ಕೋಟ ಗುಡಕ್ಕೆ ಓಡಿದೆ.

ಅಲ್ಲಿ, ಪ್ರಭಾ ಮೂರು ದಿನಗಳ ಕಾಲ ನೋವು ಅನುಭವಿಸಿದರು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಪ್ರಯತ್ನದ ನಡುವೆಯೂ ಹೆರಿಗೆಯಾಗಲಿಲ್ಲ. ಕೊನೆಗೆ ಆಕೆಗೆ ಸಿಝೇರಿಯನ್‌ ಮಾಡಬೇಕಾಗುತ್ತದೆಂದು ನಮಗೆ ತಿಳಿಸಿದರು.

ಅಂದು ಆಗಸ್ಟ್‌ 15ರಂದು ಮಧ್ಯಾಹ್ನ ಪ್ರಭಾ ಅವರಿಗೆ ಆರೋಗ್ಯಕರ ತೂಕ ಎನ್ನಬಹುದಾದ ಮೂರು ಕಿಲೋ ತೂಕ ಹೊಂದಿದ್ದ ಗಂಡು ಮಗು ಜನಿಸಿತು. ಆದರೆ ವೈದ್ಯರು ಮಗುವಿನ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಿದರು. ಮಗುವಿಗೆ ಮಲ ವಿಸರ್ಜಿಸಲು ಗುದದ್ವಾರ ಇದ್ದಿರಲಿಲ್ಲ. ಮತ್ತು ಅದಕ್ಕಾಗಿ ತಕ್ಷಣದ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಮಲ್ಕನ್‌ಗಿರಿ ಆಸ್ಪತ್ರೆಯಲ್ಲಿ ಇದಕ್ಕೆ ಬೇಕಾದ ಸೌಲಭ್ಯಗಳಿರಲಿಲ್ಲ.

ನವಜಾತ ಶಿಶುವನ್ನು 150 ಕಿ.ಮೀ ದೂರದ ಕೊರಪುಟ್‌ನಲ್ಲಿರುವ ಹೊಸ ಮತ್ತು ಸುಸಜ್ಜಿತ ಶಹೀದ್ ಲಕ್ಷ್ಮಣ್ ನಾಯಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಬೇಕಾಯಿತು.

Kusama Naria (left), nearly nine months pregnant, walks the plank to the boat (right, in red saree) for Chitrakonda to get corrections made in her Aadhaar card
PHOTO • Jayanti Buruda
Kusama Naria (left), nearly nine months pregnant, walks the plank to the boat (right, in red saree) for Chitrakonda to get corrections made in her Aadhaar card
PHOTO • Jayanti Buruda

ಸುಮಾರು ಒಂಬತ್ತು ತಿಂಗಳ ಗರ್ಭಿಣಿ ಕುಸಾಮಾ ನರಿಯಾ (ಎಡ) ತನ್ನ ತಿದ್ದುಪಡಿಗೊಂಡ ಆಧಾರ್ ಕಾರ್ಡ್‌ ಪಡೆಯಲೆಂದು ಚಿತ್ರಕೊಂಡಕ್ಕೆ ಹೋಗಲು ದೋಣಿ ಹತ್ತಲು (ಬಲಕ್ಕೆ, ಕೆಂಪು ಸೀರೆಯಲ್ಲಿ) ಹಲಗೆಯ ಮೇಲೆ ನಡೆದುಕೊಂಡು ಹೋಗುತ್ತಿರುವುದು.

ಮಗುವಿನ ತಂದೆ ಪೊಡು ಗೊಲೋರಿ ಸಂಪೂರ್ಣವಾಗಿ ದಣಿದಿದ್ದರು, ತಾಯಿಗೆ ಇನ್ನೂ ಪ್ರಜ್ಞೆಬಂದಿರಲಿಲ್ಲ. ಕೊನೆಗೆ ಆಶಾ ಕಾರ್ಯಕರ್ತೆ (ಕೋಟಗುಡದಿಂದ ಖಾಸಗಿ ಕಾರಿನಲ್ಲಿ ನನ್ನೊಂದಿಗೆ ಬಂದವರು) ಮತ್ತು ನಾನು ಮಗುವನ್ನು ಆಗಸ್ಟ್ 15, ಸಂಜೆ 6 ಗಂಟೆಗೆ ಕೊರಪುತ್‌ಗೆ ಕರೆದೊಯ್ದೆವು.

ನಾವು ಆಸ್ಪತ್ರೆಯ ಆಂಬ್ಯುಲೆನ್ಸ್ ಮೂಲಕ ಹೊರಟೆವು. ಅದು ಮೂರು ಕಿಲೋಮೀಟರ್ ಹೋಗುತ್ತಿದ್ದಂತೆ ಕೆಟ್ಟು ನಿಂತುಹೋಯಿತು. ನಾವು ಕರೆ ಮಾಡಿ ಕರೆಸಿದ ಇನ್ನೊಂದು ಆಂಬುಲೆನ್ಸ್‌ 30 ಕಿಲೋಮೀಟರ್ ದೂರ ಚಲಿಸಿ ಕೆಟ್ಟು ನಿಂತಿತು. ಕೊನೆಗೆ ಇನ್ನೊಂದು ಆಂಬುಲೆನ್ಸ್‌ಗೆ ಕರೆ ಮಾಡಿ ಸುರಿವ ಮಳೆ ಮತ್ತು ಲಾಕ್‌ಡೌನ್‌ ನಡುವೆ ದಟ್ಟ ಕಾಡಿನಲ್ಲಿ ಕಾಯುತ್ತಿದ್ದೆವು. ಅದು ಬಂದು ನಮ್ಮನ್ನು ಕರೆದೊಯ್ದು ಆಸ್ಪತ್ರೆ ತಲುಪಿಸುವಾಗ ಮಧ್ಯರಾತ್ರಿಯಾಗಿತ್ತು.

ಅಲ್ಲಿ ವೈದ್ಯರು ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಏಳು ದಿನಗಳ ಕಾಲ ಇರಿಸಿದರು. ಈ ಮಧ್ಯೆ ನಾವು ಪ್ರಬಾ ಮತ್ತು ಪೊಡು ಅವರನ್ನು ಕೊರಪುಟ್‌ಗೆ ಕರೆತಂದೆವು. ಹೆರಿಗೆಯಾದ ಒಂದು ವಾರದ ನಂತರ ಅವರು ಮಗುವಿನ ಮುಖವನ್ನು ನೋಡಿದರು. ತದನಂತರ ವೈದ್ಯರು ಅಂತಹ ಸಣ್ಣ ಮಗುವಿನ ಶಸ್ತ್ರಚಿಕಿತ್ಸೆಗೆ ಬೇಕಾದ ಸೌಲಭ್ಯಗಳು ಮತ್ತು ಕೌಶಲ್ಯಗಳನ್ನು ತಾವು ಹೊಂದಿಲ್ಲವೆಂದು ಹೇಳಿದರು.

ಈಗ ಮಗುವನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಮತ್ತದು ಬೆರ್ಹಾಂಪುರದಿಂದ 700 ಕಿ.ಮೀ ದೂರದಲ್ಲಿತ್ತು. ನಾವು ಎಂಕೆಸಿಜಿ ಕಾಲೇಜು ಮತ್ತು ಆಸ್ಪತ್ರೆಗೆ ನಮ್ಮನ್ನು ಕರೆದೊಯ್ಯಲಿರುವ ಆಂಬ್ಯುಲೆನ್ಸ್‌ಗಾಗಿ ಕಾಯತೊಡಗಿದೆವು ಮತ್ತು ಇನ್ನೊಂದು ಸುದೀರ್ಘ ಪ್ರಯಾಣ ನಮ್ಮೆದುರಿಗಿತ್ತು.

ಆಂಬ್ಯುಲೆನ್ಸ್ ಸೌಲಭ್ಯ ಸರಕಾರದಿಂದ ದೊರೆಯಿತು, ಆದರೆ ಆ ಪ್ರದೇಶವು ಬಹಳ ಸೂಕ್ಷ್ಮವಾಗಿರುವುದರಿಂದ ನಾವು ಖರ್ಚಿಗೆಂದು 500 ರೂ. ನೀಡಬೇಕಾಯಿತು. (ನಾನು ಮತ್ತು ನನ್ನ ಸ್ನೇಹಿತರು ಈ ಖರ್ಚುಗಳನ್ನು ನೋಡಿಕೊಂಡೆವು. ಈ ಆಸ್ಪತ್ರೆಗಳ ಓಡಾಟದಲ್ಲಿ ನಾವು ಒಟ್ಟು 3,000-4,000 ರೂಗಳನ್ನು ಖರ್ಚು ಮಾಡಿದ್ದೇವೆ). ಬೆರ್ಹಾಂಪುರದ ಆಸ್ಪತ್ರೆಯನ್ನು ತಲುಪಲು ನಮಗೆ 12 ಗಂಟೆಗಳಿಗಿಂತ ಹೆಚ್ಚು ಸಮಯ ಹಿಡಿಯಿತು.

People of Tentapali returning from Chitrakonda after a two-hour water journey; this jeep then takes them a further six kilometres to their hamlet. It's a recent shared service; in the past, they would have to walk this distance
PHOTO • Jayanti Buruda

ಎರಡು ಗಂಟೆಗಳ ದೋಣಿ ಪ್ರಯಾಣದ ನಂತರ ಚಿತ್ರಕೊಂಡದಿಂದ ಟೆಂಟಪಲ್ಲಿಗೆ ಮರಳುತ್ತಿರುವ ಜನರು. ಈ ಜೀಪ್ ಕಚ್ಚಾ ರಸ್ತೆಯಲ್ಲಿ ಆರು ಕಿಲೋಮೀಟರ್ ದೂರವನ್ನು ಕ್ರಮಿಸಿ ಅವರ ಹಾಡಿಗೆ ತಲುಪುತ್ತದೆ. ಈ ಶೇರ್ ಜೀಪ್ ಇತ್ತೀಚೆಗೆ ಪ್ರಾರಂಭವಾಗಿದ್ದು, ಅದಕ್ಕೂ ಮೊದಲು ಅವರು ನಡೆದೇ ತಮ್ಮ ಊರನ್ನು ತಲುಪಬೇಕಿತ್ತು

ಇದೆಲ್ಲ ಆಗುವ ಹೊತ್ತಿಗೆ ನಾವು ನಾಲ್ಕು ಬೇರೆ ಬೇರೆ ಆಸ್ಪತ್ರೆಗಳಿಗೆ ವ್ಯಾನ್‌, ಟ್ರ್ಯಾಕ್ಟರ್‌ ಮತ್ತು ಹಲವು ಆಂಬ್ಯುಲೆನ್ಸ್‌ಗಳ ಮೂಲಕ ಚಿತ್ರಕೊಂಡ - ಮಲ್ಕನ್‌ಗಿರಿ ಜಿಲ್ಲಾ ಕೇಂದ್ರ, ಕೊರಪುಟ್‌ ಮತ್ತು ಬೆಹರಾಂಪುರ ಹೀಗೆ 1,000 ಕಿಲೋಮೀಟರ್ ಸುತ್ತಿದ್ದೆವು.

ಶಸ್ತ್ರಚಿಕಿತ್ಸೆ ಕಷ್ಟವಿದೆಯೆಂದು ನಮಗೆ ತಿಳಿಸಲಾಯಿತು. ಮಗುವಿನ ಶ್ವಾಸಕೋಶಕ್ಕೂ ಹಾನಿಯಾಗಿರುವುದರಿಂದ ಅದರ ಕೆಲವು ಭಾಗಗಳನ್ನು ತೆಗೆದುಹಾಕಬೇಕಾಯಿತು. ಮಲವನ್ನು ಹೊರಹಾಕಲು ಹೊಟ್ಟೆಯಲ್ಲಿ ರಂಧ್ರವನ್ನು ಮಾಡಲಾಯಿತು. ಗುದದ್ವಾರದ ಬಳಿ ರಂಧ್ರವನ್ನು ಮಾಡಲು ಮತ್ತೊಂದು ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಆದರೆ ಮಗುವಿನ ತೂಕ ಎಂಟು ಕಿಲೋಗ್ರಾಂಗಳಷ್ಟು ಆಗುವ ತನಕ ಅದನ್ನು ಮಾಡುವಂತಿರಲಿಲ್ಲ.

ನಾನು ಕೊನೆಯ ಬಾರಿ ಕುಟುಂಬದೊಡನೆ ವಿಚಾರಿಸಿದಾಗ ಮಗುವಿನ್ನೂ ಎಂಟು ಕೇಜಿ ತೂಕವನ್ನು ತಲುಪಿರಲಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆಯಿನ್ನೂ ನಡೆದಿರಲಿಲ್ಲ. ಆಗ ಮಗುವಿಗೆ ಎಂಟು ತಿಂಗಳಾಗಿತ್ತು.

ಎಷ್ಟೊಂದು ಅಡೆತಡೆಗಳನ್ನು ಎದುರಿಸಿ ಜನಿಸಿದ ಈ ಮಗುವಿನ ನಾಮಕರಣಕ್ಕೆ ನನ್ನನ್ನು ಕರೆಯಲಾಗಿತ್ತು. ಅಂದು ನಾನು ಮಗುವಿಗೆ ಮೃತ್ಯಂಜಯನೆಂದು ಹೆಸರಿಟ್ಟೆ. ಆಗಸ್ಟ್ 15, 2020 - ಭಾರತದ ಸ್ವಾತಂತ್ರ್ಯ ದಿನ. ಅದೇ ದಿನ ಅವನೂ ಹಲವು ಹೋರಾಟಗಳನ್ನು ಎದುರಿಸಿ ತನ್ನ ತಾಯಿಯಂತೆಯೇ ತನ್ನ ಹಣೆಬರಹವನ್ನು ಗೆದ್ದಿದ್ದ.

*****

ಪ್ರಬಾ ಎದುರಿಸಿದ ಸಮಸ್ಯೆಗಳ ತೀವ್ರತೆ ಹೆಚ್ಚಿತ್ತಾದರೂ, ಮಲ್ಕನ್‌ಗಿರಿ ಜಿಲ್ಲೆಯ ಅನೇಕ ದೂರದ ಬುಡಕಟ್ಟು ಹಳ್ಳಿಗಳು ಆರೋಗ್ಯ ಸೇವೆ ಮತ್ತು ಮೂಲಸೌಕರ್ಯಗಳಿಂದ ವಂಚಿತರಾಗಿರುವುದರಿಂದ ಇಲ್ಲಿನ ಮಹಿಳೆಯರು ಇಂತಹ ಬಿಕ್ಕಟ್ಟನ್ನು ಎದುರಿಸುವುದು ಹೊಸತೇನಲ್ಲ.

ಮಲ್ಕನ್‌ಗಿರಿಯ 1,055 ಗ್ರಾಮಗಳಲ್ಲಿನ  ಜನಸಂಖ್ಯೆಯ ಶೇಕಡಾ 57ರಷ್ಟು ಪರೋಜಾ ಮತ್ತು ಕೋಯಾ ಬುಡಕಟ್ಟು ಜನಾಂಗದವರು. ಈ ಗುಂಪುಗಳ ಸಂಸ್ಕೃತಿ, ಸಂಪ್ರದಾಯಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಯಾವಾಗಲೂ ಹಾಡಿ ಹೊಗಳಲಾಗುತ್ತದೆಯಾದರೂ, ಅವರ ಆರೋಗ್ಯ ಸಂಬಂಧಿ ಅಗತ್ಯಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗಿದೆ. ಭೌಗೋಳಿಕವಾಗಿ ಎತ್ತರದ ಪ್ರದೇಶಗಳು, ಕಾಡುಗಳು ಮತ್ತು ಜಲಾಶಯಗಳು - ಹಲವು ವರ್ಷಗಳ ಸಂಘರ್ಷ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಗ್ರಾಮಗಳು ಮತ್ತು ಹಾಡಿಗಳಲ್ಲಿ ವೈದ್ಯಕೀಯ ಸೇವೆ ದುರ್ಲಭವಾಗಿದೆ.

People of Tentapali returning from Chitrakonda after a two-hour water journey; this jeep then takes them a further six kilometres to their hamlet. It's a recent shared service; in the past, they would have to walk this distance
PHOTO • Jayanti Buruda

'ನಾವು ಮಹಿಳೆಯರಿಗೂ ಹೃದಯವಿದೆ ಮತ್ತು ನಮಗೂ ನೋವಿನ ಅನುಭವವಾಗುತ್ತದೆಯೆನ್ನುವುದು ಪುರುಷರಿಗೆ ಅರ್ಥವಾಗುವುದೇ ಇಲ್ಲ. ಅವರ ಪ್ರಕಾರ ಮಹಿಳೆಯರು ಇರುವುದೇ ಮಕ್ಕಳನ್ನು ಹೆರಲು'

ಮಲ್ಕನ್‌ಗಿರಿ ಜಿಲ್ಲೆಯ ಕನಿಷ್ಠ 150 ಹಳ್ಳಿಗಳಿಗೆ ಯಾವುದೇ ರಸ್ತೆ ಸಂಪರ್ಕಗಳಿಲ್ಲ (ಇಡೀ ಒಡಿಶಾದಲ್ಲಿ ರಸ್ತೆಗಳಿಲ್ಲದ ಗ್ರಾಮಗಳ ಸಂಖ್ಯೆ 1,242 ಎಂದು ಪಂಚಾಯತ್ ರಾಜ್ ಮತ್ತು ಕುಡಿಯುವ ನೀರಿನ ಸಚಿವ ಪ್ರತಾಪ್ ಜೆನಾ ಅವರು ಫೆಬ್ರವರಿ 18, 2020ರಂದು ವಿಧಾನಸಭೆಯಲ್ಲಿ ಹೇಳಿದ್ದರು).

ಕೋಟಗುಡದಿಂದ ಎರಡು ಕಿಲೋಮೀಟರ್‌ ದೂರದಲ್ಲಿರುವ ಟೆಂಟಪಲ್ಲಿ ಕೂಡ ರಸ್ತೆ ಸಂಪರ್ಕವನ್ನು ಹೊಂದಿಲ್ಲ. "ನಮ್ಮ ಬದುಕು ಸುತ್ತಲೂ ನೀರಿನಿಂದ ತುಂಬಿ ಹೋಗಿದೆ. ಇಲ್ಲಿ ನಾವು ಸತ್ತರೂ ಬದುಕಿದರೂ ತಲೆಕೆಡಿಸಿಕೊಳ್ಳುವವರು ಯಾರು?" ಎಂದು 70ಕ್ಕೂ ಹೆಚ್ಚು ವರ್ಷಗಳನ್ನು ಟೆಂಟಪಲ್ಲಿಯಲ್ಲಿ ಕಳೆದಿರುವ ಕಮಲಾ ಖಿಲ್ಲೊ ಕೇಳುತ್ತಾರೆ. "ನಾವು ಜೀವನದ ಬಹು ಭಾಗವನ್ನು ಈ ನೀರನ್ನು  ನೋಡುತ್ತಲೇ ಕಳೆದಿದ್ದೇವೆ, ಇದು ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸಂಕಟವನ್ನು ಇನ್ನಷ್ಟು ಹೆಚ್ಚಿಸುತ್ತದೆ."

ನೀವು ಇತರ ಹಳ್ಳಿಗಳಿಗೆ ಹೋಗಬೇಕೆಂದರೆ, ಅಣೆಕಟ್ಟು ಪ್ರದೇಶದ ಟೆಂಟಪಲ್ಲಿ, ಕೋಟಗುಡ ಮತ್ತು ಜೋದಂಬು ಪಂಚಾಯತ್‌ನ ಇತರ ಮೂರು ಹಳ್ಳಿಗಳ ಜನರು ಒಂದೂವರೆ ಗಂಟೆಯಿಂದ ನಾಲ್ಕು ಗಂಟೆಗಳ ಕಾಲ ಮೋಟಾರು ದೋಣಿ ಮೂಲಕ ಪ್ರಯಾಣಿಸಬೇಕಾಗುತ್ತದೆ. ದೋಣಿ ಮೂಲಕ 40 ಕಿ.ಮೀ ದೂರದಲ್ಲಿರುವ ಚಿತ್ರಕೊಂಡ ಆಸ್ಪತ್ರೆಯೇ ಸದ್ಯಕ್ಕೆ ಹತ್ತಿರದಲ್ಲಿ ಲಭ್ಯವಿರುವ ಆರೋಗ್ಯ ಸೇವೆಯಾಗಿದೆ. 100 ಕಿ.ಮೀ ದೂರದ ಸಮುದಾಯ ಆರೋಗ್ಯ ಕೇಂದ್ರವನ್ನು ತಲುಪಲು ಸ್ಥಳೀಯರು ಮೊದಲು ದೋಣಿ ಮತ್ತು ನಂತರ ಬಸ್ ಅಥವಾ ಶೇರ್ ಜೀಪ್ ಮೂಲಕ ಪ್ರಯಾಣಿಸಬೇಕು.

ಜಲಸಂಪನ್ಮೂಲ ಇಲಾಖೆಯ ಮೋಟಾರು ಲಾಂ‌ಚ್ ಸೇವೆ ವಿಶ್ವಾಸಾರ್ಹವಲ್ಲ. ಇದು ಪುನರಾವರ್ತಿತವಾಗಿ ಮತ್ತು ಪೂರ್ವ ಸೂಚನೆ ಇಲ್ಲದೆ ನಿಂತುಹೋಗುತ್ತಿರುತ್ತದೆ. ಮತ್ತು ಈ ದೋಣಿಗಳು ದಿನದಲ್ಲಿ ಕೇವಲ ಒಂದು ಬಾರಿ ಮಾತ್ರವೇ ಸಂಚರಿಸುತ್ತವೆ. ಖಾಸಗಿ ಮೋಟಾರ್ ದೋಣಿಯ ಸಂಚಾರದ ಟಿಕೆಟ್ ಬೆಲೆ 20 ರೂ, ಸರ್ಕಾರಿ ದೋಣಿಗಿಂತ ಹತ್ತು ಪಟ್ಟು ಹೆಚ್ಚು. ಮತ್ತು ಸಂಜೆಯ ನಂತರ ಅದೂ ಲಭ್ಯವಿರುವುದಿಲ್ಲ. ತುರ್ತು ಸಂದರ್ಭಗಳಲ್ಲಿ ಇಲ್ಲಿ ಈಗಲೂ ಸಾರಿಗೆ ಲಭ್ಯವಿಲ್ಲದಿರುವುದು ದೊಡ್ಡ  ಸಮಸ್ಯೆಯಾಗಿ ಉಳಿದಿದೆ.

"ಅದು ಆಧಾರ್‌ ಕಾರ್ಡ್‌ ಸಂಬಂಧಿ ಕೆಲಸವಿರಲಿ ಅಥವಾ ಡಾಕ್ಟರ್‌ ಬಳಿ ಹೋಗುವುದಿರಲಿ ಎಲ್ಲದಕ್ಕೂ ನಾವು ಇವುಗಳನ್ನೇ [ಸಾರಿಗೆ ವಿಧಾನಗಳನ್ನು] ಅವಲಂಬಿಸಬೇಕಿದೆ. ಈ ಕಾರಣಕ್ಕಾಗಿ ಮಹಿಳೆಯರು ತಮ್ಮ ಹೆರಿಗಾಗಿ ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಾರೆ" ಎಂದು ಮೂರು ಮಕ್ಕಳ ತಾಯಿಯಾಗಿರುವ ಕೋಟಗುಡಾದ 20 ವರ್ಷದ ಕುಸುಮಾ ನರಿಯಾ ಹೇಳುತ್ತಾರೆ.

Samari Khillo of Tentapali hamlet says: 'We depend more on daima than the medical [services]. For us, they are doctor and god’
PHOTO • Jayanti Buruda
Samari Khillo of Tentapali hamlet says: 'We depend more on daima than the medical [services]. For us, they are doctor and god’
PHOTO • Jayanti Buruda

ಟೆಂಟಪಲ್ಲಿಯ ಸಮರಿ ಖಿಲ್ಲೊ ಹೇಳುತ್ತಾರೆ: ‘ನಮಗೆ ವೈದ್ಯರಿಗಿಂತ ಡೈಮಾಗಳ ಮೇಲೆ ಹೆಚ್ಚಿನ ನಂಬಿಕೆಯಿದೆ. ನಮಗೆ ಅವರೇ ವೈದ್ಯರು ಮತ್ತು ದೇವರು. '

ಆದರೆ ಈಗ ಆಶಾ ಕಾರ್ಯಕರ್ತರು ಈ ಹಳ್ಳಿಗಳಿಗೆ ಬರುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಆದರೆ ಇಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತರಿಗೆ ಹೆಚ್ಚಿನ ಅನುಭವ ಅಥವಾ ಜ್ಞಾನವಿಲ್ಲ. ತಿಂಗಳ ಎರಡು ದಿನಗಳು ಬಂದು ಗರ್ಭಿಣಿಯರಿಗೆ ಕಬ್ಬಿಣ, ಫೋಲಿಕ್ ಆಮ್ಲದ ಮಾತ್ರೆಗಳನ್ನು ನೀಡುವುದು ಮತ್ತು ಒಣ ಪೂರಕ ಆಹಾರವನ್ನು ನೀಡುವ ಕೆಲವನ್ನು ಮಾಡುತ್ತಾರೆ. ಮಕ್ಕಳ ವ್ಯಾಕ್ಸಿನೇಷನ್ ದಾಖಲೆಗಳನ್ನು ಸರಿಯಾಗಿ ಪಾಲಿಸಲಾಗಿಲ್ಲ. ಇರುವ ದಾಖಲೆಗಳೂ ಅಪೂರ್ಣ.  ಕೆಲವೊಮ್ಮೆ, ಹೆರಿಗೆ ಕ್ಲಿಷ್ಟಕರವೆನ್ನಿಸುವ ಸಮಯದಲ್ಲಿ ಅವರು ಗರ್ಭಿಣಿ ಮಹಿಳೆಯೊಂದಿಗೆ ಆಸ್ಪತ್ರೆಗೆ ಹೋಗುತ್ತಾರೆ.

ಇಲ್ಲಿ ಹಳ್ಳಿಗಳಲ್ಲಿ ನಿಯಮಿತ ಸಭೆಗಳು ಅಥವಾ ಜಾಗೃತಿ ಕಾರ್ಯಕ್ರಮಗಳು ನಡೆಯುವುದಿಲ್ಲ, ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರೊಂದಿಗೆ ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚೆ ಕೂಡ ಇರುವುದಿಲ್ಲ. ಆಶಾ ಕಾರ್ಯಕರ್ತೆಯರು ಶಾಲೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಹೇಳಲಾಗುತ್ತದೆಯಾದರೂ, ಕೋಟಗುಡದಲ್ಲಿ ಯಾವುದೇ ಶಾಲೆ ಇಲ್ಲದಿರುವುದರಿಂದ ಅದು ಇಲ್ಲಿ ನಡೆಯುತ್ತಿಲ್ಲ (ಟೆಂಟಪಲ್ಲಿಯಲ್ಲಿ ಒಂದೇ ಒಂದು ಶಾಲೆಯಿದೆ, ಆದರೆ ಅಲ್ಲಿಗೆ ಶಿಕ್ಷಕರೇ ನಿಯಮಿತವಾಗಿ ಬರುವುದಿಲ್ಲ) ಮತ್ತು ಅಂಗನವಾಡಿ ಕಟ್ಟಡವು ಅರೆ ನಿರ್ಮಿತ ಸ್ಥಿತಿಯಲ್ಲಿದೆ.

ಜೋಡಾಂಬೊ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಪಿಎಚ್‌ಸಿ ಸಣ್ಣ ಕಾಯಿಲೆಗಳಿಗೆ ಮಾತ್ರ ಪ್ರಾಥಮಿಕ ಚಿಕಿತ್ಸೆಯನ್ನು ನೀಡಬಲ್ಲದು ಮತ್ತು ಗರ್ಭಿಣಿಯರಿಗೆ ಅಥವಾ ಗಂಭೀರ ಅನಾರೋಗ್ಯ ಪ್ರಕರಣಗಳಿಗೆ ಯಾವುದೇ ಸೌಲಭ್ಯಗಳಿಲ್ಲದ ಕಾರಣ, ಆಕೆ ಮತ್ತು ಇತರ ದೀದಿಗಳು ಚಿತ್ರಕೊಂಡ ಸಿಎಚ್‌ಸಿಗೆ ಆದ್ಯತೆ ನೀಡುತ್ತಾರೆ ಎಂದು ಆ ಪ್ರದೇಶದ ಆಶಾ ಕಾರ್ಯಕರ್ತೆ ಜಮುನಾ ಖಾರಾ ಹೇಳುತ್ತಾರೆ. “ಆದರೆ ಇದು ಬಹಳ ದೂರದಲ್ಲಿದೆ ಮತ್ತು ರಸ್ತೆಯ ಮೂಲಕ ಸರಿಯಾದ ಪ್ರಯಾಣ ಸಾಧ್ಯವಿಲ್ಲ. ದೋಣಿ ಅಪಾಯಕಾರಿ. ಸರ್ಕಾರದ ಲಾಂಚ್ ಎಲ್ಲಾ ಸಮಯದಲ್ಲೂ ದೊರೆಯುವುದಿಲ್ಲ. ಈ ಕಾರಣದಿಂದಲೇ ಮೊದಲಿನಿಂದಲೂ ನಾವು ಡೈಮಾ [ಸಾಂಪ್ರದಾಯಿಕ ಸೂಲಗಿತ್ತಿಯರು, ಟಿಬಿಎ] ಗಳನ್ನು ಅವಲಂಬಿಸಿದ್ದೇವೆ.”

ಟೆಂಟಪಲ್ಲಿಯ ಪರೋಜಾ ಬುಡಕಟ್ಟು ಜನಾಂಗದವರಾದ ಸಮರಿ ಖಿಲ್ಲೊ ಅದನ್ನೇ ಪುನರುಚ್ಚರಿಸುತ್ತಾರೆ: “ನಮಗೆ ಔಷಧಕ್ಕಿಂತ ಡೈಮಾಗಳಲ್ಲಿ ಹೆಚ್ಚಿನ ನಂಬಿಕೆಯಿದೆ. ನನ್ನ ಮೂರು ಹೆರಿಗೆಗಳನ್ನು ಹಳ್ಳಿಯಲ್ಲಿಯೇ ಸೂಲಗಿತ್ತಿ ಮಾಡಿದ್ದಾಳೆ - ನಮ್ಮ ಗ್ರಾಮದಲ್ಲಿ ಮೂವರು ಡೈಮಾಗಳಿದ್ದಾರೆ.”

ಸುತ್ತಲಿನ ಸುಮಾರು 15 ಹಳ್ಳಿಗಳ ಮಹಿಳೆಯರು ಹೆರಿಗೆಗಾಗಿ ಸ್ಥಳೀಯ ಭಾಷೆಯಲ್ಲಿ ಬೋಧಕಿ ಡೋಕ್ರಿಯ ಎಂದು ಕರೆಯಲಾಗುವ ಸೂಲಗಿತ್ತಿಯರನ್ನು ಅವಲಂಬಿಸಿದ್ದಾರೆ. "ಆಸ್ಪತ್ರೆಗಳಿಗೆ ಭೇಟಿ ನೀಡದೆ ನಮಗೆ ಸುರಕ್ಷಿತ ಹೆರಿಗೆ ಮಾಡಿಸಿಕೊಳ್ಳಲು ಸಹಾಯ ಮಾಡುವ ಅವರು ನಮ್ಮ ಪಾಲಿಗೆ ವರದಾನದಂತೆ" ಎಂದು ಸಮರಿ ಹೇಳುತ್ತಾರೆ. "ಅವರೂ ಮಹಿಳೆಯರಾಗಿರುವ ಕಾರಣ  ಅವರಿಗೆ ನಮ್ಮ ನೋವು ಅರ್ಥವಾಗುತ್ತದೆ. ಆದರೆ ಈ ಪುರುಷರಿಗೆ ನಮಗೂ ಹೃದಯವಿದೆ, ನಮಗೂ ನೋವಾಗುತ್ತದೆಯೆನ್ನುವುದು ಅರ್ಥವಾಗುವುದೇ ಇಲ್ಲ. ಅವರ ಪ್ರಕಾರ ಹೆಣ್ಣು ಮಕ್ಕಳು ಹುಟ್ಟಿರುವುದೇ ಮಕ್ಕಳನ್ನು ಹೆರಲು."

Gorama Nayak, Kamala Khillo, and Darama Pangi (l to r), all veteran daima (traditional birth attendants); people of around 15 hamlets here depend on them
PHOTO • Jayanti Buruda

ಗೋರಮಾ ನಾಯಕ್, ಕಮಲಾ ಖಿಲ್ಲೊ, ಮತ್ತು ದರಾಮ ಪಂಗಿ ಎಡದಿಂದ ಬಲಕ್ಕೆ), ಎಲ್ಲರೂ ಅನುಭವಿ ಡೈಮಾಗಳು (ಸಾಂಪ್ರದಾಯಿಕ ಸೂಲಗಿತ್ತಿಯರು); ಇಲ್ಲಿನ ಸುಮಾರು 15 ಊರುಗಳ ಜನರು ಅವರನ್ನು ಅವಲಂಬಿಸಿದ್ದಾರೆ

ಈ ಶುಶ್ರೂಷಕಿಯರು ಗರ್ಭ ನಿಲ್ಲದ ಮಹಿಳೆಯರಿಗೆ ಕೆಲವು ಗಿಡಮೂಲಿಕೆ ಔಷಧಿಗಳನ್ನು ನೀಡುತ್ತಾರೆ. ಅದು ಪರಿಣಾಮ ಬೀರದಿದ್ದರೆ, ಅವಳ ಪತಿ ಮರುಮದುವೆಯಾಗುತ್ತಾನೆ.

ತನ್ನ 13ನೇ ವಯಸ್ಸಿನಲ್ಲಿ ಮದುವೆಯಾದ ಕುಸುಮಾ ನರಿಯಾ ಇಪ್ಪತ್ತು ವರ್ಷದ ಹೊತ್ತಿಗೆ ಮೂರು ಮಕ್ಕಳನ್ನು ಹಡೆದಿದ್ದರು. ಆಗ ತನಗೆ ಗರ್ಭ ನಿರೋಧಕಗಳಿರಲಿ ಮುಟ್ಟಿನ ಬಗ್ಗೆಯೇ ಗೊತ್ತಿರಲಿಲ್ಲವೆಂದು ನನ್ನ ಬಳಿ ಹೇಳಿದರು. "ಅದು ಆದಾಗ [ಮುಟ್ಟು] ನನ್ನ ಅಮ್ಮ ಬಟ್ಟೆ ಬಳಸುವಂತೆ ಹೇಳಿದಳು. ಅದಾದ ಸ್ವಲ್ಪ ದಿನಕ್ಕೆ ನಾನು ದೊಡ್ಡವಳಾಗಿದ್ದೇನೆಂದು ಹೇಳಿ ಮದುವೆ ಮಾಡಿಸಿದಳು. ಆ ಸಮಯದಲ್ಲಿ ನನಗೆ ದೈಹಿಕ ಸಂಬಂಧದ ಕುರಿತು ಏನೂ ತಿಳಿದಿರಲಿಲ್ಲ. ನನ್ನ ಮೊದಲ ಹೆರಿಗೆಯ ಸಮಯದಲ್ಲಿ ಅವನು ನನ್ನನ್ನು ಏಕಾಂಗಿಯಾಗಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದ. ಮಗುವಿನ ಜೀವದ ಕುರಿತು ಅವನಿಗೆ ಚಿಂತೆಯೇ ಇರಲಿಲ್ಲ. ಏಕೆಂದರೆ ಅದು ಹೆಣ್ಣು ಮಗುವಾಗಿತ್ತು. ಆದರೆ ನನ್ನ ಮಗಳು ಬದುಕಿ ಉಳಿದುಕೊಂಡಳು."

ಕುಸುಮಾ ಅವರ ಇನ್ನಿಬ್ಬರು ಮಕ್ಕಳು ಗಂಡು. "ಸಣ್ಣ ಅಂತರದಲ್ಲೇ ಇನ್ನೊಂದು ಮಗುವನ್ನು ಹೆರಲು ನಿರಾಕರಿಸಿದ್ದಕ್ಕಾಗಿ ಎಲ್ಲರೂ ಗಂಡು ಮಗು ನಿರೀಕ್ಷಿಸುತ್ತಿರುವುದಾಗಿ ತಿಳಿಸಿ ನನ್ನನ್ನು ಥಳಿಸಲಾಗಿತ್ತು. ಆಗ ನನಗಾಗಲಿ ನನ್ನ ಗಂಡನಿಗಾಗಲಿ ದವಾಯಿ [ಗರ್ಭನಿರೋಧಕಗಳು] ಬಗ್ಗೆ ಯಾವುದೇ ಕಲ್ಪನೆ ಇದ್ದಿರಲಿಲ್ಲ. ಆ ಕುರಿತು ತಿಳುವಳಿಕೆ ಇದ್ದಿದ್ದರೆ ನಾನು ತೊಂದರೆ ಅನುಭವಿಸುತ್ತಿರಲಿಲ್ಲ. ಆದರೆ ಆಗ ನಾನು ಮಗುವನ್ನು ಹೊಂದಲು ವಿರೋಧ ತೋರಿಸಿದ್ದರೆ ನನ್ನನ್ನು ಮನೆಯಿಂದ ಹೊರ ಹಾಕಿರುತ್ತಿದ್ದರು."

ಕೋಟಗುಡದಲ್ಲಿನ ಕುಸುಮಾ ಅವರ ಮನೆಯ ಹತ್ತಿರವೇ ಪ್ರಭಾ ವಾಸಿಸುತ್ತಾರೆ. ಅವರು ಒಮ್ಮೆ ನನ್ನೊಡನೆ ಮಾತನಾಡುತ್ತಾ ಹೀಗೆ ಹೇಳಿದ್ದರು: "ನಾನು ಬದುಕಿ ಬಂದಿರುವುದನ್ನೇ ನನಗೆ ನಂಬಲಾಗುತ್ತಿಲ್ಲ. ಆಗ ನಡೆಯುತ್ತಿದ್ದ ಎಲ್ಲವನ್ನೂ ನಾನು ಹೇಗೆ ಸಹಿಕೊಂಡೆ ಎಂದುಆಶ್ಚರ್ಯವಾಗುತ್ತದೆ. ಆಗ ನಾನು ಭೀಕರ ನೋವಿನಲ್ಲಿದ್ದೆ. ನನ್ನ ಸಹೋದರ ನನ್ನ ನೋವು ನೋಡಲು ಸಾಧ್ಯವಾಗದೆ ಅಳುತ್ತಿದ್ದ. ನಂತರ ಆಸ್ಪತ್ರೆಯಿಂದ ಆಸ್ಪತ್ರೆಗೆ ನಡೆಸಿದ ಓಡಾಟ. ಒಂದು ವಾರದ ಕಾಲ ಮಗುವನ್ನು ನೋಡಲು ಸಾಧ್ಯವಾಗದೆ ಹೋಗಿದ್ದು. ಇದೆಲ್ಲವನ್ನು ಹೇಗೆ ಸಹಿಸಿಕೊಂಡೆನೆಂದು ಈಗಲೂ ನನಗೆ ಅರ್ಥವಾಗುತ್ತಿಲ್ಲ. ಇಂತಹ ನೋವು ನನ್ನ ಶತ್ರುವಿಗೂ ಬರಬಾರದು. ಆದರೆ ನಾವು ಘಾಟಿಯ ಹುಡುಗಿಯರಿಗೆ ಇಂತಹದ್ದೊಂದು ಬದುಕಿನ ವಿನಹ ಬೇರೆ ಆಯ್ಕೆಯೇ ಇಲ್ಲ."

ಮೃತ್ಯುಂಜಯನಿಗೆ ಜನ್ಮ ನೀಡಿದ ಪ್ರಬಾ ಅವರ ಅನುಭವ - ಮತ್ತು ಇಲ್ಲಿನ ಹಳ್ಳಿಗಳಲ್ಲಿನ ಹಲವಾರು ಮಹಿಳೆಯರ ಕಥೆಗಳು ಮತ್ತು ಬುಡಕಟ್ಟು ಭಾರತದ ಈ ಭಾಗಗಳಲ್ಲಿನ ಮಹಿಳೆಯರು ಹೇಗೆ ಮಗುವಿಗೆ ಜನ್ಮ ನೀಡುತ್ತಾರೆ ಎಂಬ ಕಥೆಗಳು ಸಾಕಷ್ಟು ನಂಬಲಾಗದಷ್ಟು ನೋವಿನಿಂದ ಕೂಡಿವೆ. ಆದರೆ ನಮ್ಮ ಮಲ್ಕನ್‌ಗಿರಿಯಲ್ಲಿ ಏನಾಗುತ್ತಿದೆಯೆನ್ನುವುದರ ಕುರಿತು ಯಾರಾದರೂ ಯೋಚಿಸಬಹುದೆ?

ಪರಿ ಮತ್ತು ಕೌಂಟರ್‌ಮೀಡಿಯಾ ಟ್ರಸ್ಟ್, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಬೆಂಬಲದೊಂದಿಗೆ, ಗ್ರಾಮೀಣ ಭಾರತದ ಹದಿಹರೆಯದವರು ಮತ್ತು ಯುವತಿಯರ ಬಗ್ಗೆ ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದೊಂದು ಈ ಪ್ರಮುಖ ಆದರೆ ಸಮಾಜದ ಅಂಚಿನಲ್ಲಿರುವ ಗುಂಪಿನ ಪರಿಸ್ಥಿತಿಯನ್ನು ಅವರದೇ ಆದ ನಿರೂಪಣೆ ಮತ್ತು ಅನುಭವದ ಮೂಲಕ ಪ್ರಸ್ತುತಪಡಿಸುವ ಪ್ರಯತ್ನವಾಗಿದೆ.

ಈ ಲೇಖನವನ್ನು ಮರುಪ್ರಕಟಿಸಲು ಬಯಸುವಿರಾ? ದಯವಿಟ್ಟು [email protected] ಗೆ ಇ-ಮೇಲ್‌ ಬರೆಯಿರಿ. ccಯನ್ನು [email protected] ಈ ವಿಳಾಸಕ್ಕೆ ಸೇರಿಸಿ

ಅನುವಾದ: ಶಂಕರ ಎನ್. ಕೆಂಚನೂರು

Jayanti Buruda

ஜெயந்தி பருடா ஒடிசா மல்கங்கிரியின் செர்பல்லி கிராமத்தை சேர்ந்தவர். கலிங்கா தொலைக்காட்சியில் முழுநேர செய்தியாளராக பணிபுரிகிறார். கிராமப்புற வாழ்க்கைக் கதைகளை சேகரிக்கும் அவர் வாழ்க்கைகள், கலாசாரம் மற்றும் சுகாதார கல்வி பற்றிய செய்திகளை தருகிறார்.

Other stories by Jayanti Buruda
Illustration : Labani Jangi

லபானி ஜங்கி 2020ம் ஆண்டில் PARI மானியப் பணியில் இணைந்தவர். மேற்கு வங்கத்தின் நாடியா மாவட்டத்தைச் சேர்ந்தவர். சுயாதீன ஓவியர். தொழிலாளர் இடப்பெயர்வுகள் பற்றிய ஆய்வுப்படிப்பை கொல்கத்தாவின் சமூக அறிவியல்களுக்கான கல்வி மையத்தில் படித்துக் கொண்டிருப்பவர்.

Other stories by Labani Jangi
Editor : Pratishtha Pandya

பிரதிஷ்தா பாண்டியா பாரியின் மூத்த ஆசிரியர் ஆவார். இலக்கிய எழுத்துப் பிரிவுக்கு அவர் தலைமை தாங்குகிறார். பாரிபாஷா குழுவில் இருக்கும் அவர், குஜராத்தி மொழிபெயர்ப்பாளராக இருக்கிறார். கவிதை புத்தகம் பிரசுரித்திருக்கும் பிரதிஷ்தா குஜராத்தி மற்றும் ஆங்கில மொழிகளில் பணியாற்றுகிறார்.

Other stories by Pratishtha Pandya
Series Editor : Sharmila Joshi

ஷர்மிளா ஜோஷி, PARI-ன் முன்னாள் நிர்வாக ஆசிரியர் மற்றும் எழுத்தாளர். அவ்வப்போது கற்பிக்கும் பணியும் செய்கிறார்.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru