ಬ್ಯಾಂಕು (ನಿಮ್ಮಿಂದ) ಸಾಲ ವಸೂಲಿಗೆ ಗಾಂಧಿಗಿರಿ ಪ್ರಯೋಗಿಸಲು ನಿರ್ಧರಿಸಿದೆ. ಅದಕ್ಕಾಗಿ

1)  ನಿಮ್ಮ ಮನೆಯೆದುರು ಟೆಂಟ್ ಹಾಕಿ ಪ್ರತಿಭಟನೆ ನಡೆಸಲಿದ್ದೇವೆ.
2) ಬ್ಯಾಂಡ್ –ವಾದ್ಯಗಳನ್ನು ಬಳಸಲಿದ್ದೇವೆ.
3) ಮನೆಯೆದುರು ಘಂಟೆ ಬಾರಿಸಲಿದ್ದೇವೆ.

ಈ ಕ್ರಮಗಳಿಂದಾಗಿ ಸಮಾಜದಲ್ಲಿ ನಿಮಗಿರುವ ಮರ್ಯಾದೆಗೆ ಧಕ್ಕೆ ಆಗಬಹುದು.”

ಓಸ್ಮನಾಬಾದ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು (ODCC)  ತನ್ನ 20,000  ಗ್ರಾಹಕರಿಗೆ ಒಡ್ಡಿರುವ ಮಾನ ಕಳೆಯುವ ಬೆದರಿಕೆ ಇದು.

ಈ ಗ್ರಾಹಕರಲ್ಲಿ ಹೆಚ್ಚಿನವರು ರೈತರು. ಬೆಳೆ ವೈಫಲ್ಯ, ಮಾರುಕಟ್ಟೆಗೆ ಅತಿಯಾದ ಪೂರೈಕೆಯಿಂದಾಗಿ ದರ ಸಿಗದಿರುವುದರಂತಹ ಹಲವು ಕಾರಣಗಳಿಂದಾಗಿ ಹಲವಾರು ವರ್ಷಗಳಿಂದ ಮಾನಸಿಕ ಒತ್ತಡಕ್ಕೆ ಸಿಲುಕಿರುವವರು. ಇತ್ತೀಚೆಗಿನ ವರ್ಷಗಳಲ್ಲಿ ತೀವ್ರ ಬರ ಹಾಗೂ ನೀರಿನ ಸಂಕಷ್ಟ ಅವರ ಸಾಲ ಮರುಪಾವತಿ ಸಾಮರ್ಥ್ಯಕ್ಕೆ ಹೊಡೆತವನ್ನಿಕ್ಕಿದೆ.

ಇದೆಲ್ಲದರ ಮೇಲೆ ಈಗ, ಇತ್ತೀಚೆಗೆ ಸರ್ಕಾರ ರೂ 500 ಮತ್ತು ರೂ. 1000ರ ನೋಟುಗಳನ್ನು ರದ್ದು ಮಾಡಿರುವುದು ಅವರನ್ನು ಯಾವ ಪರಿ ಸಂಕಷ್ಟಕ್ಕೀಡು ಮಾಡಿದೆ ಎಂದರೆ, ಅವರಿಗೆ ಕೃಷಿ ಕಾರ್ಮಿಕರ ಕೂಲಿ ಕೊಡುವುದೂ ಕಷ್ಟ ಆಗಿಬಿಟ್ಟಿದೆ. “ನವೆಂಬರ್ 9 ರಿಂದೀಚೆಗೆ ಕೃಷಿ ಕಾರ್ಮಿಕರಿಗೆ ಒಂದು ಪೈಸೆ ಕೂಲಿಯನ್ನೂಕೊಟ್ಟಿಲ್ಲ, ಅವರೆಲ್ಲ ಹಸಿವಿನಿಂದ ಬಳಲುತ್ತಿದ್ದಾರೆ” ಎನ್ನುತ್ತಾರೆ ಖೇಡ್ ಗ್ರಾಮದ ಸಣ್ಣ ಕೃಷಿಕ ಎಸ್. ಎಂ. ಗಾವಳೆ.

ಬ್ಯಾಂಕಿನಿಂದ ಬಂದ ತಗಾದೆ ನೋಟೀಸಿನಲ್ಲಿ (ಅದರ ಮುಖ್ಯಾಂಶಗಳ ಭಾಷಾಂತರವನ್ನು ಈ ಪತ್ರದ ಕೊನೆಯಲ್ಲಿ ನೀಡಲಾಗಿದೆ) ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವವರಿಗೆ ಹಣ ವಾಪಸ್ ಕೊಡಲಾಗದಿರುವುದಕ್ಕೆ ಈ ಸಾಲಗಾರ ರೈತರೇ ಕಾರಣ ಎಂದು ಹೇಳಲಾಗಿದೆ. “ಹಣ ಸಿಗದೆ ಯಾರಾದರೂ ಠೇವಣಿದಾರರು ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ನೀವೇ ಹೊಣೆ ಹೊರಬೇಕಾದೀತು…” ಎಂದೂ ಬ್ಯಾಂಕಿನ ತಗಾದೆ ನೋಟೀಸು ರೈತರಿಗೆ ಎಚ್ಚರಿಕೆ ನೀಡಿದೆ.

ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕಿನ ವಸೂಲಿ ದಳಗಳು ಹಳ್ಳಿಗಳಿಗೆ ಭೇಟಿ ನೀಡಿ ರೈತರನ್ನು ಬೆದರಿಸುತ್ತಿರುವುದು ಅಲ್ಲಿನ ರೈತ ಕುಟುಂಬಗಳಲ್ಲಿ ಇನ್ನಷ್ಟು ಮಾನಸಿಕ ಹಿಂಸೆ, ಹತಾಶೆಗಳಿಗೆ ದಾರಿಮಾಡಿಕೊಡುತ್ತಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಸುಮಾರು 20,000 ರೈತರು ಒಟ್ಟಾಗಿ ಬಾಕಿ ಇರಿಸಿಕೊಂಡಿರುವ ಸಾಲದ ಮೊತ್ತ 180 ಕೋಟಿ ರೂ. ಆದರೆ, ಅದೇ ವೇಳೆ, ಅಲ್ಲಿನ ತೇರ್ನಾ ಮತ್ತುತುಳಜಾ ಭವಾನಿ ಎಂಬ ಎರಡು ಸಕ್ಕರೆ ಕಾರ್ಖಾನೆಗಳು ಒಟ್ಟಾಗಿ ಬಾಕಿ ಇರಿಸಿಕೊಂಡಿರುವ ಸಾಲದ ಮೊತ್ತ 352 ಕೋಟಿ ರೂ. ಗಳು.

ಬಡವರ ಸಾಲ ವಸೂಲಿಗೆ ಉಪಯೋಗಿಸುತ್ತಿರುವ ತಂತ್ರಗಳನ್ನು ಬ್ಯಾಂಕು ಈ ಬಲವಾನ ಕಂಪನಿಗಳ ಸಾಲ ವಸೂಲಿಗೆ ಬಳಸಲು ಹಿಂದೇಟು ಹಾಕುತ್ತದೆ. “ಕಾರ್ಖಾನೆಗಳು ಮುಚ್ಚಿವೆ” ಅನ್ನುತ್ತಾರೆ, ODCC  ಬ್ಯಾಂಕಿನ ನಿರ್ವಾಹಕ ನಿರ್ದೇಶಕ ವಿಜಯ್ ಘೋನ್ಸೆ ಪಾಟೀಲ್. ಹಾಗಾಗಿ ಅಲ್ಲಿ ‘ಗಾಂಧಿಗಿರಿ’ ಇಲ್ಲ. ಈ ಸುಸ್ತಿದಾರ ಕಂಪನಿಗಳ ಬೆಲೆಬಾಳುವ ಆಸ್ತಿಯನ್ನಾಗಲೀ, ಅಲ್ಲಿನ ಚರಾಸ್ತಿಯನ್ನಾಗಲೀ ವಶಕ್ಕೆ ತೆಗೆದುಕೊಳ್ಳುವ ಅಥವಾ ಹರಾಜು ಹಾಕುವ ಕೆಲಸವೂ ಬ್ಯಾಂಕಿನಿಂದ ಆರಂಭ ಆಗಿಲ್ಲ.

“ಈ ಗಾಂಧಿಗಿರಿಗೆ ಪ್ರೇರಣೆ ಶ್ರೀ ಅರುಣ್ ಶೌರಿ ಅವರ ಭಾಷಣ.” ಎನ್ನುತ್ತಾರೆ, ರೈತರಿಗೆ ಬೆದರಿಕೆ ನೋಟೀಸು ಬರೆದು ಕಳಿಸಿರುವ ಘೋನ್ಸೆ ಪಾಟೀಲ್. ಓಸ್ಮನಾಬಾದಿನಲ್ಲಿರುವ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ನಮ್ಮೊಂದಿಗೆ ಮಾತನಾಡಿದ ಅವರು, ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ, “ಕೇಂದ್ರ ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ, ಅದರ ಭಾಗವಾಗಿ ಹೀಗೆ ಮಾಡಲಾಗಿದೆ.” ಎಂದರು.


02-thumb_DSC00599_1024(Crop)-PS-Gandhigiri or Hara-kiri?.jpg

ಎಡ: ವಿಜಯ್ ಘೋನ್ಸೆ ಪಾಟೀಲ್, ODCC  ನಿರ್ವಾಹಕ ನಿರ್ದೇಶಕ, ಓಸ್ಮನಾಬಾದಿನಲ್ಲಿರುವ ಬ್ಯಾಂಕಿನ ಮುಖ್ಯಾಲಯದಲ್ಲಿ. ಬಲ: ಲೋಹರಾ ಹೋಬಳಿಯ ರೈತ ತನ್ನ ಸಮಸ್ಯೆಗಳನ್ನು ವಿವರಿಸುತ್ತಿರುವುದು .


“ ಪತ್ರ ಬರದವನು ನಾನೇ” ಎಂದ ಘೋನ್ಸೆ ಪಾಟೀಲ್ “ಇದು ಗಂಭೀರ ಸಂಗತಿ. ನಾವು ಮಾರ್ಚ್ 2017ರೊಳಗಾಗಿ ಸುಸ್ತಿ ಬಾಕಿ ಪ್ರಮಾಣವನ್ನು (NPAs) 15 ಶೇಕಡಾಕ್ಕಿಂತ ಕಡಿಮೆ ಪ್ರಮಾಣಕ್ಕೆ (ಒಟ್ಟುಸಾಲದ)  ಇಳಿಸಿಕೊಳ್ಳಲೇಬೇಕಾಗಿದೆ. ಇದನ್ನು ನಾನು ಒತ್ತಡಪೂರ್ವಕವಾದರೂ ಮಾಡಲೇಬೇಕು. ನನಗೆ ಬೇರೆ ದಾರಿ ಇಲ್ಲ.” ಎಂದರು. ಆ ಪತ್ರವನ್ನು ಕಾನೂನು ಸಲಹೆ ಇಲ್ಲದೆ ತಾನೇ ತಯಾರಿಸಿದ್ದು, “ಬ್ಯಾಂಕಿನ ನಿರ್ದೇಶಕ ಮಂಡಳಿಯ ಮುಂದಿಟ್ಟಾಗ, ಅವರದಕ್ಕೆ ಒಪ್ಪಿಗೆ ನೀಡಿದ್ದಾರೆ” ಎಂದೂ ಹೇಳಿದರು.

ಇಂತಹ ಹಲವಾರು ಪತ್ರಗಳಲ್ಲಿ ಅಕ್ಟೋಬರ್ ದಿನಾಂಕ ಇದೆ, ಆ ಬಗ್ಗೆ ರೈತರಿಗೆ ಸಿಟ್ಟಿದೆ. “ಈ ಪತ್ರಗಳು ನಮ್ಮ ಮನೆಗೆ ತಲುಪಿದ್ದು ನವೆಂಬರ್ 15ರ ಮೇಲೆ.” ಅಂದರೆ, ನೋಟು ರದ್ಧತಿಯ ಬಳಿಕ ಈ ಪತ್ರಗಳು ತಮಗೆ ತಲುಪಿವೆ. ಕ್ರೂರ ವ್ಯಂಗ್ಯವೆಂದರೆ, ಈ ಪತ್ರವನ್ನು ಡಿಸೆಂಬರ್ 2ರಂದು ‘ಪಡೆದಿರುವ’ವರಲ್ಲಿ ಮನೋಹರ್ ಯೇಲೋರ್ ಎಂಬವರೂ ಸೇರಿದ್ದಾರೆ. ಲೋಹಾರ ಹಳ್ಳಿಯ ಈ ಬಡಪಾಯಿ ರೈತ, ತನ್ನ 68,000ರೂ. ಸಾಲವನ್ನು ಈ ಬ್ಯಾಂಕಿಗೆ ಮರುಪಾವತಿ ಮಾಡಲು ಸಾಧ್ಯವಾಗದೆ, 2014ರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಓಸ್ಮನಾಬಾದಿನ ಲೋಹಾರ ಹೋಬಳಿಯ ನಾಗೂರು ಎಂಬ ಹಳ್ಳಿಯಲ್ಲಿ ಆಸುಪಾಸಿನ ಹಳ್ಳಿಗಳಿಂದ ಬಂದು ಸೇರಿರುವ ರೈತರು ತಮಗಾಗಿರುವ ಆಘಾತವನ್ನು ಹಂಚಿಕೊಂಡರು. “ಈ ರೀತಿ ಮರ್ಯಾದೆ ಕಳೆಯಹೊರಟರೆ, ನಮಗೆ ಆತ್ಮಹತ್ಯೆ ಮಾಡಿಕೊಳ್ಳದೆ ಬೇರೆ ದಾರಿಯೇ ಇರುವುದಿಲ್ಲ.” ರಾಜ್ಯಸರ್ಕಾರದ ದಾಖಲೆಗಳಲ್ಲೂ ಮಹಾರಾಷ್ಟ್ರದ ರೈತ ಆತ್ಮಹತ್ಯೆಗಳಲ್ಲಿ ಬಹುದೊಡ್ಡ ಕೊಡುಗೆ ನೀಡಿರುವ ಎರಡು ಜಿಲ್ಲೆಗಳೆಂದರೆ ಓಸ್ಮನಾಬಾದ್ ಮತ್ತು ಯಾವತ್ಮಲ್.  ದೇಶದಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯವೂ ಮಹಾರಾಷ್ಟ್ರ. ಅಲ್ಲಿ, 1995 ರಿಂದ 2014ರ ನಡುವೆ ಕನಿಷ್ಟ 63,000  ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತದೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ.


ವೀಡಿಯೋ: ನಾಗೂರ್, ಖೇಡ್, ಕಷ್ತಿ ಮತ್ತಿತರ ಹಳ್ಳಿಗಳ ರೈತರು ತಮಗೆ ODCC ಬ್ಯಾಂಕಿನಿಂದ ಬಂದಿರುವ, ಗಾಂಧಿಗಿರಿಯ ಮೂಲಕ ಮರ್ಯಾದೆ ಕಳೆಯುವ ಬೆದರಿಕೆ ಪತ್ರಗಳನ್ನು ತೋರಿಸುತ್ತಿರುವುದು; ನವೆಂಬರ್ 29, 2016


ನೋಟು ರದ್ಧತಿ ಅಲ್ಲಿ ಜನಸಾಮಾನ್ಯರ ಜೊತೆ ಬ್ಯಾಂಕುಗಳ ಮೇಲೂ ಹೊಡೆತ ನೀಡಿದೆ. ಇಬ್ಬರಲ್ಲೂ ಕಾಸಿಲ್ಲ. ಸಹಕಾರಿ ಬ್ಯಾಂಕುಗಳಿಗೆ ರದ್ದಾದ ನೋಟುಗಳನ್ನು ಸ್ವೀಕರಿಸಿ ವಿನಿಮಯ ಮಾಡಲು ಅವಕಾಶನೀಡಿದ್ದು ಕೇವಲ ಮೂರು ದಿನಗಳ ಕಾಲ ಮಾತ್ರ. ಉಳಿದೆಲ್ಲ ಬ್ಯಾಂಕುಗಳು ಇದನ್ನು ನವೆಂಬರ್ 29ರ ತನಕವೂ ಮಾಡಲು ಅವಕಾಶ ಪಡೆದವು. ಓಸ್ಮನಾಬಾದ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಂತೂ ಮೊದಲೇ ತೀವ್ರ ಸಂಕಷ್ಟದಲ್ಲಿತ್ತು. ಯಾಕೆಂದರೆ, ಅದರ ದೊಡ್ಡ ಸುಸ್ತಿದಾರರು ತಾವು ಬಾಕಿ ಇಟ್ಟಿರುವ 352 ಕೋಟಿ ರೂಪಾಯಿಗಳಲ್ಲಿ ಒಂದು ಪೈಸೆಯನ್ನೂ ಹಿಂದಿರುಗಿಸಿರಲಿಲ್ಲ. “ಇದನ್ನು ನಮ್ಮಿಂದ ವಸೂಲಿ ಮಾಡಲಾಗುತ್ತಿದೆ, ನಾವು ಸ್ವಲ್ಪವಾದರೂ ಮರುಪಾವತಿ ಮಾಡಲು ಪ್ರಯತ್ನಿಸಿದ್ದೇವೆ” ಎಂದು ಅಲವತ್ತುಕೊಳ್ಳುತ್ತಿದ್ದಾರೆ ಅಲ್ಲಿನ ಸಣ್ಣ ರೈತರು.

ನವೆಂಬರ್ 9ರ ಬಳಿಕ ಕೈಯಲ್ಲಿ ಕಾಸೇ ಇಲ್ಲದ ಇಲ್ಲಿನ ರೈತರು, ಕೂಲಿ ಕಾರ್ಮಿಕರು ಮತ್ತು ಸಣ್ಣ ಅಂಗಡಿಗಳವರು ಜೀವ ಉಳಿಸಿಕೊಳ್ಳುವುದಕ್ಕಾಗಿ ಏನೋ ಒಂದು ಹರುಕುಮುರುಕು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅದನ್ನು ಖೇಡ್ ನ ರೈತ ಎಸ್. ಎಂ. ಗಾವಳೆ ಹೀಗೆ ವಿವರಿಸುತ್ತಾರೆ “ ಕೃಷಿ ಕೂಲಿ ಕಾರ್ಮಿಕರಲ್ಲಿ ಕಾಸಿಲ್ಲದಿದ್ದರೆ, ಅವರಿಗೆ ಊಟವೂ ಕಷ್ಟ. ಹಾಗಾಗಿ ಅವರು ಕಿರಾಣಿ ಅಂಗಡಿಗಳಲ್ಲಿಮಾಡುವ ಸಾಲಕ್ಕೆ ನಾವು ಜಾಮೀನು ನಿಂತಿದ್ದೇವೆ. ಅವರು ಉದ್ರಿ ಮೇಲೆ ಕಿರಾಣಿ ತೆಗೆದುಕೊಂಡು ಹೋಗುತ್ತಿದ್ದಾರೆ.”

ಸ್ಥಳೀಯ ಕಿರಾಣಿ ಅಂಗಡಿ ಮಾಲಕರೂ ಬೇರೆಕಡೆಗಳಿಂದ ಸಗಟು ಮಾರಾಟಗಾರರಲ್ಲಿ ಲೆಕ್ಕ ಬರೆಸಿ, ಉದ್ರಿ ಮೇಲೆಯೇ ತಮ್ಮ ಅಂಗಡಿಗಳಲ್ಲಿ ಸಾಮಾನು ತಂದಿಟ್ಟು ಮಾರುತ್ತಿದ್ದಾರೆ. ಹಾಗಾಗಿ, ಈ ವಿನಾಶದ ಬಲೆಯಲ್ಲಿ ಕ್ರಷಿ ಕೂಲಿ ಕಾರ್ಮಿಕರು, ರೈತರು, ಕಿರಾಣಿ ಅಂಗಡಿಯವರೆಲ್ಲರೂ ಸಿಲುಕಿಕೊಂಡು ಕ್ಷಣಗಣನೆ ಮಾಡುತ್ತಿದ್ದಾರೆ.


03-thumb_DSC00545_1024-PS-Gandhigiri or Hara-kiri?.jpg

ನಾಗೂರಿನಲ್ಲಿ ಸಿಟ್ಟಿಗೆದ್ದಿರುವ ರೈತರು ತಮ್ಮ ಸಾಲದ ಮೊತ್ತ ಹಿಗ್ಗಿರುವುದನ್ನು ವಿವರಿಸುತ್ತಿರುವುದು


ಅಲ್ಲಿ ಇನ್ನೂ ಒಂದು ದೊಡ್ಡ ಸಮಸ್ಯೆ ಇದೆ. ಕೆಲವು ವರ್ಷಗಳ ಹಿಂದಿನಿಂದ ಬ್ಯಾಂಕು, ‘ಕೃಷಿ ಸಾಲ’ ಮತ್ತು ‘ಅವಧಿ ಸಾಲ’ ವನ್ನು ಒಂದೇ ಎಂದು ಪರಿಗಣಿಸಿ, ರೈತನ ಬಾಕಿಯನ್ನು ಮರುಲೆಕ್ಕಾಚಾರಮಾಡುತ್ತಿದೆ. ODCC ಬ್ಯಾಂಕಂತೂ ಹಲವಾರು ವರ್ಷಗಳಿಂದ ಇದನ್ನೇ ಮಾಡುತ್ತಾ ಬಂದಿದೆ. ಇದರ ಫಲಿತಾಂಶ ರೂಪದಲ್ಲಿ ರೈತರ ಸಾಲದ ಗಾತ್ರ ಹಿಗ್ಗಿಬಿಟ್ಟಿದೆ. ಈಗ ರೈತರನ್ನು ತಲುಪಿರುವ ತಗಾದೆ ನೋಟೀಸು ಕೇಳುತ್ತಿರುವುದು ಈ ಮೊತ್ತದ ಮರುಪಾವತಿಯನ್ನು. ನಿಜಕ್ಕೆಂದರೆ, ಈ 20,000 ರೈತರು ಕೊಡಬೇಕಿರುವ ಬಾಕಿ ಬರಿಯ 80  ಕೋಟಿ ರೂಪಾಯಿಗಳು. ಆ ಮೊತ್ತ ‘ಮರುಲೆಕ್ಕಾಚಾರ’ ದ ಬಳಿಕ 180 ಕೋಟಿ ರೂಪಾಯಿಗಳ ಬೃಹದಾಕಾರ ತಳೆದಿದೆ.

ಬೆಳೆಸಾಲ ಎಂಬುದು, ರೈತರು ನಗದು ಸಾಲದ ರೂಪದಲ್ಲಿ ಪಡೆಯುವ ಅಲ್ಪಾವಧಿ ಸಾಲ. ಇದು ಅವರ ಆ ಸೀಸನ್ನಿನ ಕೃಷಿ ಚಟುವಟಿಕೆಗೆ ಸಂಬಂಧಿಸಿದ್ದು. ಈ ಮೊತ್ತವನ್ನು ಅವರು ಬೀಜ, ರಸಗೊಬ್ಬರ, ಕೀಟನಾಶಕ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಅಥವಾ ಕೃಷಿ ಕಾರ್ಮಿಕರ ಕೂಲಿ ನೀಡಲು ಬಳಸಬಹುದು. ಅವರು ತಮಗೆ ಮಂಜೂರಾದ ಸಾಲದ ಮಿತಿಯೊಳಗೆ ತಮ್ಮ ಖಾತೆಯಿಂದ ಅಗತ್ಯ ಬಿದ್ದಾಗಲೆಲ್ಲ ನಗದಾಗಿ ಈ ಮೊತ್ತವನ್ನು ಹೊರತೆಗೆಯಬಹುದು. ಬೆಳೆಸಾಲಗಳ ಮೇಲಿನ ಬಡ್ಡಿ ಸಾಮಾನ್ಯವಾಗಿ ಏಳು ಪರ್ಸೆಂಟನ್ನು ಮೀರುವುದಿಲ್ಲ (ಇದರಲ್ಲೂ ನಾಲ್ಕು ಪರ್ಸೆಂಟನ್ನು ಸರಕಾರವೇ ಭರಿಸುತ್ತದೆ). ಈ ಸಾಲವನ್ನು ಅವರು ಪ್ರತೀ ವರ್ಷ ನವೀಕರಿಸಬೇಕಿರುತ್ತದೆ.

ಅವಧಿ ಸಾಲಗಳೆಂದರೆ ಬಂಡವಾಳ ಹೂಡಿಕೆಗಾಗಿ ಪಡೆದ ಸಾಲಗಳು – ಯಂತ್ರಗಳ, ನೀರಾವರಿಯಂತಹ ಖರ್ಚುಗಳಿಗಾಗಿ ಪಡೆಯುವಂತಹವು. ಈ ಸಾಲಗಳನ್ನು 3-7 ವರ್ಷಗಳ ಅವಧಿಯೊಳಗೆ ಮರುಪಾವತಿ ಮಾಡಬೇಕಾಗುತ್ತದೆ. ಈ ಸಾಲಗಳಿಗೆ ಬಡ್ಡಿ ದರ (ಕಂಪೌಂಡ್ ಮಾಡಲಾದ) ಕ್ರಷಿ ಸಾಲಕ್ಕೆ ಇರುವ ಬಡ್ಡಿದರದ ಎರಡುಪಾಲು ಹೆಚ್ಚಿರುತ್ತದೆ.

ನಮ್ಮೊಂದಿಗಿದ್ದು, ODCC ಬ್ಯಾಂಕಿನ ನೋಟೀಸು-ಪತ್ರಗಳನ್ನು ಅಧ್ಯಯನ ನಡೆಸಿರುವ ಔರಂಗಾಬಾದಿನ ಬ್ಯಾಂಕ್ ಆಫ್ ಮಹಾರಾಷ್ಟ್ರ ಸಿಬ್ಬಂದಿಗಳ ಯೂನಿಯನ್ನಿನ ಪ್ರಧಾನ ಕಾರ್ಯದರ್ಶಿ  ಧನಂಜಯ ಕುಲಕರ್ಣಿ ಅವರ ಪ್ರಕಾರ, “ ODCC (ಮತ್ತು ಇತರ ಬ್ಯಾಂಕುಗಳು) ಏನು ಮಾಡಿವೆಯೆಂದರೆ, ರೈತರ ಬೆಳೆಸಾಲ ಮತ್ತು ಅವಧಿ ಸಾಲಗಳನ್ನು ಜೊತೆಗೂಡಿಸಿ, ‘ಹೊಸ’ ಸಾಲವಾಗಿ ಪರಿವರ್ತಿಸಿವೆ. ಅದಕ್ಕೆ ಅವು ‘ಸಾಲಪಾವತಿ ಕಂತುಗಳ ಮರುನಿರ್ಧಾರ’ ಎಂದು ಹೆಸರುಕೊಟ್ಟಿವೆ. ODCC  ಕೂಡ ಇತರ ಬ್ಯಾಂಕುಗಳಂತೆಯೇ ಈ ಹೊಸ ಸಾಲಕ್ಕೆ 14 ಪರ್ಸೆಂಟ್ ಬಡ್ಡಿ ವಿಧಿಸಿದೆ. ಇದಲ್ಲದೆ, ಸಾಲ ವಿತರಿಸುವ ಸ್ಥಳೀಯ ಸೊಸೈಟಿ ಮಟ್ಟದಲ್ಲಿ ಈ ಬಡ್ಡಿಯ ಮೇಲೆ ಹೆಚ್ಚುವರಿಯಾಗಿ 2-4 ಪರ್ಸೆಂಟ್ ಬಡ್ಡಿ ಸೇರಿಸಲಾಗುತ್ತದೆ.  ಅಂದರೆ, ಸಾಲಗಾರ ರೈತ ಮರುಪಾವತಿ ಮಾಡುವಾಗ ಒಟ್ಟು 18 ಪರ್ಸೆಂಟ್ (ಕಂಪೌಂಡೆಡ್) ಬಡ್ಡಿ ಪಾವತಿ ಮಾಡಬೇಕಾಗುತ್ತದೆ.”

ಖೇಡ್ ಗ್ರಾಮದ ಶಿವಾಜಿರಾವ್ ಸಾಹೇಬ್ ಪಾಟೀಲ್ 2004ರಲ್ಲಿ ವಿದ್ಯುತ್ ಪಂಪು ಮತ್ತು ಪೈಪ್ ಲೈನ್ ನಿರ್ಮಾಣಕ್ಕೆಂದು  1.78 ಲಕ್ಷ ರೂಪಾಯಿಗಳ ಸಾಲ ಪಡೆದಿದ್ದರು. ಆರಂಭದ ದಿನಗಳಲ್ಲಿ ಅವರು 60,000ರೂ. ಮರುಪಾವತಿಯನ್ನೂ ಮಾಡಿದ್ದರು.  ಆದರೆ, ಆ ಬಳಿಕ ಈ ಸಾಲವನ್ನು ಅವರ ಬೆಳೆಸಾಲದ ಜೊತೆ ಸೇರಿಸಲಾಯಿತು. ಬ್ಯಾಂಕಿನ ಭಾಷೆಯಲ್ಲಿ ಅದನ್ನು ರೀ-ಫೇಸ್ (ಸಾಲ ಮರುಪಾವತಿಯ ಕಂತುಗಳ ಮರುನಿರ್ಧಾರ) ಮಾಡಲಾಯಿತು, ಅದೂ ಒಂದಕ್ಕಿಂತ ಹೆಚ್ಚು ಬಾರಿ. ಮತ್ತೆ ಈಗ “ಅವರು ನನಗೆ ನನ್ನ ಸಾಲ ಈಗ ಬಾಕಿ ಇರುವುದು 13 ಲಕ್ಷ ರೂಪಾಯಿ ಎಂದು ಹೇಳುತ್ತಿದ್ದಾರೆ” ಎಂದು ಸಿಟ್ಟಿನಿಂದ ಹೇಳುತ್ತಾರೆ ಆತ. ಹಠಾತ್ತಾಗಿ ನೆರೆದಿದ್ದ ರೈತರೆಲ್ಲ ಒಟ್ಟಾಗಿ ಎದ್ದು ನಿಂತು ತಮ್ಮದೂ ಅದೇ ಪಾಡು ಎಂದು ಸ್ವರ ಎತ್ತಿ ಅಸಹನೆ ವ್ಯಕ್ತಪಡಿಸುತ್ತಾರೆ. ಅವರೆಲ್ಲರ ಕೈನಲ್ಲೂ ODCC ಅವರಿಗೆ ಕಳುಹಿಸಿದ ತಗಾದೆ ನೋಟೀಸಿನ ಪ್ರತಿ ಇದೆ.


04-thumb_DSC00592_1024-PS-Gandhigiri or Hara-kiri?.jpg

ನಾಗೂರಿನ ರೈತರೊಬ್ಬರು ತಮ್ಮ ಸಹಕಾರ ಸಂಘದ ಸಾಲದ ತಖ್ತೆಯನ್ನು ತೋರಿಸುತ್ತಿರುವುದು; ಸಹಕಾರಿ ಸಂಘಗಳು ಇದರ ಮೇಲೆ ತಮ್ಮ ಪಾಲಿನ 2-4 ಪರ್ಸೆಂಟನ್ನು ಹೆಚ್ಚುವರಿಯಾಗಿ ಸೇರಿಸಿರುತ್ತವೆ


“ಬ್ಯಾಂಕಿನಿಂದ ನಾವು ಸಾಲ ಪಡೆದಿದ್ದೇವೆ, ಅದಕ್ಕೆ ಇಲ್ಲ ಅನ್ನುವುದಿಲ್ಲ” ಎನ್ನುವ ನಾಗೂರಿನ ಕ್ರಷಿಕ ಬಾಬಾಸಾಹೇಬ್ ವಿಠಲ್ ರಾವ್ ಜಾಧವ್, “ ನಾವದನ್ನು ಮರುಪಾವತಿ ಮಾಡುತ್ತೇವೆ. ಆದರೆ ಈಗ ನಮ್ಮ ಕೈನಲ್ಲಾಗುವುದಿಲ್ಲ. ಈ ಬಾರಿ ಮಳೆ ಚೆನ್ನಾಗಿತ್ತು [ಹಿಂದಿನ ಹಲವಾರು ಸೀಸನ್ ಗಳು ಕೆಟ್ಟದಾಗಿದ್ದವು] ಹಾಗಾಗಿ ಖಾರಿಫ್ ಬೆಳೆ ಚೆನ್ನಾಗಿ ಬಂದಿದೆ ಮತ್ತು ರಾಬಿ ಬೆಳೆ ಕೂಡ ಚೆನ್ನಾಗಿ ಬರುವ ನಿರೀಕ್ಷೆ ಇದೆ. ಹಾಗಾಗಿ ಮುಂದಿನ ವರ್ಷ ಸಾಲದ ಕಂತುಗಳನ್ನು ಪಾವತಿ ಮಾಡಲು ಸಾಧ್ಯ ಆಗುತ್ತದೆ. ಈ ವರ್ಷವೇ ಸಾಲ ಮರುಪಾವತಿ ಮಾಡಿದರೆ, ಅದು ನಮ್ಮನ್ನು ಮುಗಿಸಲಿದೆ. ‘ ರಿಫೇಸ್ ಮೆಂಟ್’ ಎಂದು ಬ್ಯಾಂಕಿನವರು ಹೇಳುತ್ತಿರುವುದು ನಮಗೆ ಮಾಡಿದ ಮೋಸವಾಗಿದ್ದು ಬ್ಯಾಂಕಿನ ನಿಯಮಗಳ ಉಲ್ಲಂಘನೆಯೂ ಹೌದು. ಅದರಿಂದಾಗಿ ನಮ್ಮ ಸಾಲ ದುಪ್ಪಟ್ಟು, ನಾಲ್ಕು ಪಟ್ಟು ಹೆಚ್ಚಾದಂತಾಗಿದೆ.  ಸರ್ಕಾರ ಕಾರ್ಪೋರೇಟ್ (NPAs)  ಗಳಿಗೆ ಮತ್ತು ಶ್ರೀಮಂತರಿಗೆ ಸಾಲ ಮನ್ನಾ ಮಾಡುತ್ತಿದೆ, ಆದರೆ ನಮ್ಮಂತಹ ಬಡಪಾಯಿ ಕೃಷಿಕರ ಮೇಲೆ ಚಾಟಿ ಬೀಸುತ್ತಿದೆ.” ಎನ್ನುತ್ತಾರೆ.

ಹೆಚ್ಚಿನ ಈ ಸಾಲಗಳು ಮತ್ತದರ ‘ರಿ-ಫೇಸಿಂಗ್’ ಮಾಡಿದ ಕ್ರಮ ಕೂಡ ಸಕಾಲಿಕ ಅಲ್ಲ. ಮಹಾರಾಷ್ಟ್ರದಲ್ಲಿ ಕೃಷಿ ಸಮಸ್ಯೆಗಳ ತೀವ್ರಗೊಳ್ಳುವಿಕೆಯನ್ನು ಅದು ಬಿಂಬಿಸುತ್ತಿದೆ. 1998ರ ಸುಮಾರಿಗೆ ಆರಂಭವಾದ, ಈ ಸಮಸ್ಯೆಗಳ ಸರಮಾಲೆ 2003-04 ರ ಹೊತ್ತಿಗೆ ತೀವ್ರಗೊಳ್ಳಲಾರಂಭಿಸಿ, 2011 ರ ವೇಳೆಗೆ ವಿಸ್ಫೋಟಕ ಹಂತ ತಲುಪಿತು. “ ನಾಲ್ಕು ವರ್ಷಗಳ ಕಾಲ ನನ್ನ ಬಳಿ 300-400 ಟನ್ನಿನಷ್ಟು ಕಬ್ಬು ಖರೀದಿಸುವವರಿಲ್ಲದೆ ಹಾಗೇ ಉಳಿದುಬಿಟ್ಟಿತು. ಕಾರ್ಖಾನೆಗಳಲ್ಲಿ ಕಬ್ಬು ಹೆಚ್ಚಾಗಿ, ಅವರು ಖರೀದಿಸಲು ನಿರಾಕರಿಸಿದರು. ನಾನು ದಿವಾಳಿ ಆಗಿಬಿಟ್ಟೆ. ಈಗ ಬ್ಯಾಂಕಿನವರ ಈ ತಗಾದೆ. ನಾನು ಈಗಾಗಲೇ ನನ್ನ ಕುಟುಂಬದ 15 ಎಕರೆ ಕ್ರಷಿಯೇತರ ಭೂಮಿಯನ್ನು ಮಾರಿಬಿಟ್ಟಿದ್ದೇನೆ. ಇಷ್ಟಾದರೂ ಈ ಹೊರೆ ತಗ್ಗಿಲ್ಲ” ಎಂದು ನೋವನ್ನು ಹಂಚಿಕೊಳ್ಳುತ್ತಾರೆ ಶಿವಾಜಿ ರಾವ್.

ಈ ಹಳ್ಳಿಯಲ್ಲಿ ಹೆಚ್ಚಿನವರು ರಾಬಿ ಬೆಳೆಯನ್ನು ನವೆಂಬರ್ 8ಕ್ಕೆ ಮುನ್ನವೇ ನಾಟಿ ಮಾಡಿದ್ದರು. ಆ ಬಳಿಕ ವ್ಯವಹಾರಗಳಿಗೆ ಹೊಡೆತ ಬಿದ್ದಿದೆ. ಖಾರಿಫ್ ಬೆಳೆಯ ಬೆಲೆಗಳು ಬಿದ್ದು ಹೋಗಿವೆ ಏಕೆಂದರೆ ಖರೀದಿದಾರರು “ ಹಳೆಯ ನೋಟುಗಳನ್ನು ಸ್ವೀಕರಿಸುವುದಿದ್ದರೆ ಮಾತ್ರ ನ್ಯಾಯವಾದ ಬೆಲೆ ಕೊಡುತ್ತೇವೆ” ಎನ್ನುತ್ತಿದ್ದಾರೆ ಎಂಬುದು ರೈತರ ಅಳಲು.

ಇತ್ತ ಬ್ಯಾಂಕಿನಲ್ಲೂ ನಾವು ODCC  ಕಳುಹಿಸಿದ ಪತ್ರ ಮತ್ತು ಅದು ತೆಗೆದುಕೊಳ್ಳಲುದ್ದೇಶಿಸಿರುವ ಕ್ರಮಗಳ ಮತ್ತದರ ಬಗ್ಗೆ ಚರ್ಚಿಸುವಾಗ ವಾತಾವರಣ ಥಂಡಾ ಹೊಡೆದಿದ್ದು, ಪೇಲವಗೊಂಡಿದೆ.

ಸ್ವತಃ ಬ್ಯಾಂಕಿನ ನಿರ್ವಾಹಕ ನಿರ್ದೇಶಕ ಘೋನ್ಸೆ ಪಾಟೀಲ್ ಅವರಿಗೆ ಇನ್ನೊಂದು ಜಿಲ್ಲೆಯ ಸಹಕಾರಿ ಬ್ಯಾಂಕಿನಿಂದ ಸಾಲ ಮರುಪಾವತಿ ಮಾಡದ್ದಕ್ಕಾಗಿ ತಗಾದೆ ನೋಟೀಸು ಬಂದಿದೆ. ಪರಿಸ್ಥಿತಿ ಇಲ್ಲಿಂದ ಇನ್ನಷ್ಟು ಹದಗೆಡಲಿದೆಯೇ ಹೊರತು ಸುಧಾರಿಸುವ ಲಕ್ಷಣಗಳಿಲ್ಲ ಎಂಬುದು ಅವರು ಮತ್ತು ಅವರ ಬ್ಯಾಂಕಿನ ಹಿರಿಯ ಅಧಿಕಾರಿಗಳ ಅನಿಸಿಕೆ. ಕೃಷಿ ಆತ್ಮಹತ್ಯೆಗಳು ಹೆಚ್ಚಾದರೆ ಏನು ಮಾಡುವುದು? ಆ ಪ್ರಕರಣಗಳ ಹೊಣೆ ಬ್ಯಾಂಕಿನ ಮೇಲೆ ಮತ್ತು ಬ್ಯಾಂಕ್ ಕಳುಹಿಸಿದ ನೋಟೀಸಿನ ಮೇಲೆ ಬಂದರೆ ಏನು ಮಾಡುವುದು? ಎಂಬೆಲ್ಲ ಚಿಂತೆಗಳು ಅವರದು. ಆ ಚಿಂತೆಗಳ ನಡುವೆಯೇ  ನಾವು ಹೊರಡುವ ವೇಳೆಗೆ “ಸಾಲ ವಸೂಲಿ ಅಭಿಯಾನ ನಡೆಸದೆ ನಮಗೆ ಬೇರೆ ದಾರಿ ಉಳಿದಿಲ್ಲ” ಎಂದರು ಘೋನ್ಸೆ ಪಾಟೀಲ್.

----------------------------

ODCC ಓಸ್ಮನಾಬಾದಿನ 20,000 ರೈತರಿಗೆ ಕಳುಹಿಸಿದ ಮರಾಠಿ ತಗಾದೆ ನೋಟೀಸಿನ ಕನ್ನಡ ಭಾಷಾಂತರ ಸಾರ:

ನಮಸ್ಕಾರ.

ಓಸ್ಮನಾಬಾದ್ ಜಿಲ್ಲಾ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ನಿಮಗೆ ತಿಳಿದಿದೆ ಎಂದುಕೊಂಡಿದ್ದೇವೆ. ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ, ಬ್ಯಾಂಕಿನ ಠೇವಣಿದಾರರು ಬ್ಯಾಂಕಿನ ಮೇಲೆ ತಮ್ಮ ಪೂರ್ಣ ಗಮನವನ್ನು ನೆಟ್ಟಿದ್ದಾರೆ. ಸಾಲಗಳು ಸಕಾಲಕ್ಕೆ ಮರುಪಾವತಿ ಆಗದೇ ಉಳಿದಿರುವುದರಿಂದಾಗಿ ಬ್ಯಾಂಕಿನ ಲಿಕ್ವಿಡಿಟಿ ನಷ್ಟವಾಗುವ ಭಯ ತಲೆದೋರಿರುವುದು ಈಗಿನ ದುಸ್ಥಿತಿಗೆ ಕಾರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕಿಗೆ ಉಳಿದಿರುವ ಏಕೈಕ ಹಾದಿ ಎಂದರೆ, ಬಾಕಿ ಇರುವ ಸಾಲಗಳನ್ನು ವಸೂಲಿ ಮಾಡುವುದು. ಸಹಜವಾಗಿಯೇ, ನೀವು ಸಾಲ ಮರುಪಾವತಿ  ಮಾಡದಿರುವುದರಿಂದಾಗಿ ಬ್ಯಾಂಕಿಗೆ ತನ್ನ ಠೇವಣಿದಾರರ ಹಣವನ್ನು ಮರಳಿಸಲು, ಮತ್ತು ಠೇವಣಿದಾರರಿಗೆ ಅಗತ್ಯವಿರುವಾಗ ಅವರ ಹಣವನ್ನು ವಾಪಸ್ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.  ಹೀಗಾಗಿ ನಮ್ಮ ಠೇವಣಿದಾರರಿಗೆ ನಮ್ಮ ಬ್ಯಾಂಕಿನ ಬಗ್ಗೆ ತೀರಾ ನಿರಾಸೆಯಾಗಿದೆ.

ಇದೇ ರೀತಿ, ಹಲವು ಮಂದಿ ಠೇವಣಿದಾರರು, ಬ್ಯಾಂಕಿನಲ್ಲಿರುವ ತಮ್ಮ ಹಣವನ್ನು ತಮಗೆ ಅಗತ್ಯವಿರುವಾಗ ತೆಗೆದುಕೊಳ್ಳಲು ನಮಗೆ ಅವಕಾಶ ಮಾಡಿಕೊಡದಿದ್ದರೆ ನಮಗೆ ಆತ್ಮಹತ್ಯೆ ಮಾಡಿಕೊಳ್ಳದೇ ಬೇರೆ ದಾರಿ ಉಳಿಯುವುದಿಲ್ಲ ಎಂದು ಟಿಪ್ಪಣಿಗಳನ್ನು ನಮಗೆ ಕಳುಹಿಸುತ್ತಿದ್ದಾರೆ. ನಮ್ಮ ಠೇವಣಿದಾರರು ಈ ಕಾರಣಗಳಿಗಾಗಿ ಆತ್ಮಹತ್ಯೆಯನ್ನೇನಾದರೂ ಮಾಡಿಕೊಂಡರೆ, ಅದರ ಹೊಣೆಯನ್ನು ನೀವೇ ಹೊರಬೇಕಾದೀತು ಎಂಬುದು ನಿಮಗೆ ತಿಳಿದಿರಲಿ.

… ನಿಮ್ಮ ಸಾಲ ಮರುಪಾವತಿಯಾಗದೇ ಉಳಿದಿರುವುದರಿಂದಾಗಿ, ಬ್ಯಾಂಕಿನಲ್ಲಿ ಹಣಕಾಸಿನ ಕೊರತೆ ಉಂಟಾಗಿದ್ದು, ಬ್ಯಾಂಕಿನ ದೈನಂದಿನ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗದಂತಹ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಆಡಳಿತ ಸಮಿತಿ, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಂಘವು ಸಾಲ ವಸೂಲಾತಿಗಾಗಿ ಗಾಂಧಿಗಿರಿ ಬಳಸಲು ತೀರ್ಮಾನಿಸಿವೆ. ಅದಕ್ಕಾಗಿ ಬ್ಯಾಂಕು ಈ ಕೆಳಗಿನ ಯಾವುದಾದರೊಂದು ಕ್ರಮವನ್ನು ಕೈಗೊಳ್ಳಲಿದೆ:

1)  ನಿಮ್ಮ ಮನೆಯೆದುರು ಟೆಂಟ್ ಹಾಕಿ ಪ್ರತಿಭಟನೆ ನಡೆಸಲಿದ್ದೇವೆ.
2) ಬ್ಯಾಂಡ್ –ವಾದ್ಯಗಳನ್ನು ಬಳಸಲಿದ್ದೇವೆ.
3) ಮನೆಯೆದುರು ಘಂಟೆ ಬಾರಿಸಲಿದ್ದೇವೆ.

ಈ ಕ್ರಮಗಳಿಂದಾಗಿ, ಸಮಾಜದಲ್ಲಿ ನಿಮಗಿರುವ ಮರ್ಯಾದೆಗೆ ಧಕ್ಕೆ ಆಗಬಹುದು. ಹಾಗಾಗಿ, ಅಂತಹ ಪರಿಸ್ಥಿತಿ ಬರಬಾರದೆಂದಿದ್ದರೆ, ತಾವು ತಮ್ಮ ಸಾಲದ ಬಾಕಿ ಕಂತುಗಳನ್ನು ಬಡ್ಡಿ ಸಮೇತವಾಗಿ ಸಂಬಂಧಪಟ್ಟ ಬ್ಯಾಂಕಿನಲ್ಲಿ 30 ದಿನಗಳೊಳಗಾಗಿ ಪಾವತಿ ಮಾಡಿ, ರಸೀದಿ ಪಡೆಯಬೇಕು. ತಪ್ಪಿದಲ್ಲಿ, ವಸೂಲಾತಿ ತಂಡವು ಮೇಲೆ ವಿವರಿಸಲಾದಂತೆ ಸಾಲ ವಸೂಲಿ ಕ್ರಮಗಳನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗುತ್ತದೆ.

ತಮಗೆ ಈ ಪರಿಸ್ಥಿತಿ ತಿಳಿದಿರಲಿ ಎಂಬ ಕಾರಣಕ್ಕಾಗಿ ಈ ಪತ್ರವನ್ನು ತಮಗೆ ಬರೆಯುತ್ತಿದ್ದೇವೆ.

ತಾವು ತಮ್ಮ ಸಾಲವನ್ನು ಬಡ್ಡಿ ಸಮೇತ ತೀರಿಸುತ್ತೀರಿ ಮತ್ತು ಇಂತಹ ಅನಪೇಕ್ಷಿತ ಘಟನೆಗಳಿಗೆ ಅವಕಾಶ ಕೊಡುವುದಿಲ್ಲ ಎಂಬ ಭರವಸೆ ನಮಗಿದೆ.

ನಿಮ್ಮ ಸಹಕಾರವನ್ನು ನಿರೀಕ್ಷಿಸುತ್ತಾ,

ಕಂತು ಬಾಕಿ ಇರುವ ಸಾಲದ ವಿವರಗಳು:

ಸಾಲದ ವಿಧ, ಅಸಲು: 136300 ಬಡ್ಡಿ:348930 ಒಟ್ಟು:485230

[ಪ್ರತಿಯೊಬ್ಬ ರೈತರ ಸಾಲದ ವಿವರ ಮೂಲ ಪತ್ರದಲ್ಲಿದೆ]

ತಮ್ಮ ವಿಶ್ವಾಸಿ

ಸಹಿ/-

ವಿಜಯ್ ಎಸ್. ಘೋನ್ಸೆ

ನಿರ್ವಾಹಕ ನಿರ್ದೇಶಕರು

பி. சாய்நாத், பாரியின் நிறுவனர் ஆவார். பல்லாண்டுகளாக கிராமப்புற செய்தியாளராக இருக்கும் அவர், ’Everybody Loves a Good Drought' மற்றும் 'The Last Heroes: Foot Soldiers of Indian Freedom' ஆகிய புத்தகங்களை எழுதியிருக்கிறார்.

Other stories by P. Sainath
Translator : Rajaram Tallur

Rajaram Tallur is a freelance journalist and a translator by profession. He has over 25 years of work experience in print and web media. Healthcare, science and developmental journalism are among his areas of interest.

Other stories by Rajaram Tallur