ಮಲ್ಲಿಗೆ ಒಂದು ಗದ್ದಲದ ಹೂ. ಇದು ಬೆಳ್ಳಂಬೆಳಗ್ಗೆ ಇಲ್ಲಿನ ಮಾರುಕಟ್ಟೆಗೆ ಬರುತ್ತದೆ. ಮಧುರೈ ಮಟ್ಟಥವಾನಿ ಮಾರುಕಟ್ಟೆಯಲ್ಲಿ ಬಂದು ಸುರಿಯುವ ಚೀಲಗಟ್ಟಲೆ ಮುತ್ತಿನಂತಹ ಮಲ್ಲಿಗೆ ಮೊಗ್ಗುಗಳು ಇಲ್ಲಿನ ಗದ್ದಲಕ್ಕೆ ಕಾರಣ. “ವಾಳಿ, ವಾಳಿ” ಎಂದು ಗಂಡಸರು ಹೂಗಳನ್ನು ಸುರಿಯುವಾಗ ಕೂಗುತ್ತಾರೆ. ಪ್ಲಾಸ್ಟಿಕ್‌ ಶೀಟಿನ ಮೇಲೆ ಹೂವನ್ನು ಸುರಿದ ನಂತರ ಅದನ್ನು ಒಟ್ಟುಗೂಡಿಸಿ ಮಾರಾಟಗಾರರು ತೂಕ ಮಾಡುತ್ತಾರೆ. ಒಂದು ಕಿಲೋ ಹೂವನ್ನು ಗ್ರಾಹಕರ ಚೀಲಕ್ಕೆ ಸುರಿಯುತ್ತಾರೆ. ಅಲ್ಲಿ ಇನ್ಯಾರೋ ದರವನ್ನು ಕೂಗುತ್ತಾರೆ. ಟಾರ್ಪಲಿನ್‌ ಮೇಲೆ ಉಳಿದು ಹೋದ ಹೂವುಗಳನ್ನು ತುಳಿಯುತ್ತಾ ಸಾಗುತ್ತಾರೆ ಜಂಗುಳಿಯಲ್ಲಿನ ಜನರು. ಏಜೆಂಟರು ಖರೀದಿ ಮತ್ತು ಮಾರಾಟದ ಮೇಲೆ ಗಮನವಿಡುತ್ತಾರೆ. ತೀವ್ರ ಕಣ್ಣೋಟದೊಡನೆ ನೋಟ್‌ ಪುಸ್ತಕದ ಮೇಲೆ ಗಡಿಬಿಡಿಯಿಂದ ಬರೆದುಕೊಳ್ಳುತ್ತಾರೆ. ಈ ಯಾರೋ ಒಬ್ಬರು ಜಂಗುಳಿಯಿಂದ “ನನಗೆ ಐದು ಕಿಲೋ ಬೇಕು” ಎಂದು ಕೂಗುತ್ತಾರೆ.

ಮಹಿಳೆಯರು ಒಳ್ಳೆಯ ಹೂವಿಗಾಗಿ ಮಾರುಕಟ್ಟೆಯಲ್ಲಿ ಹುಡುಕುತ್ತಾರೆ. ಅವರು ಮೊಗ್ಗನ್ನು ಕೈಯಲ್ಲಿ ತೆಗೆದುಕೊಂಡು ಮತ್ತೆ ರಾಶಿಗೆ ಚೆಲ್ಲುತ್ತಾರೆ. ಅವರ ಕೈಯಿಂದ ಮೊಗ್ಗುಗಳು ಉದುರುವುದು ಹೂಮಳೆಯಂತೆ ಕಾಣುತ್ತದೆ. ಓರ್ವ ಹೂ ಮಾರಾಟಗಾರ ಹೆಂಗಸು ಗುಲಾಬಿ ಮತ್ತು ಚೆಂಡು ಹೂವನ್ನು ಸೇರಿಸಿ ಹಲ್ಲಿನಿಂದ ಕಚ್ಚಿ ಕ್ಲಿಪ್‌ ಅಗಲಿಸಿ ಹೂ ತಲೆಗಿಟ್ಟು ಕ್ಲಿಪ್‌ ಸೇರಿಸಿ ಮುಡಿದುಕೊಳ್ಳುತ್ತಾರೆ. ನಂತರ ಆಕೆ ತನ್ನ ಚೆಂಡು ಹೂ, ಮಲ್ಲಿಗೆ ಮತ್ತು ಗುಲಾಬಿ ತುಂಬಿದ ಬುಟ್ಟಿಯನ್ನು ಎತ್ತಿಕೊಂಡು ಮಾರುಕಟ್ಟೆಯಿಂದ ಮೆಲ್ಲನೆ ಹೊರನಡೆಯುತ್ತಾಳೆ.

ಆಕೆ ರಸ್ತೆ ಬದಿಯಲ್ಲಿ ಕೊಡೆಯೊಂದರ ಅಡಿ ಕುಳಿತು ಅವುಗಳನ್ನು ಬಿಡಿಬಿಡಿಯಾಗಿ ಮಾರತೊಡಗುತ್ತಾಳೆ. ಹಸಿರು ದಾರದಲ್ಲಿ ಬಂಧಿಯಾದ ಮಲ್ಲಿಗೆ ಮೊಗ್ಗುಗಳು ತಮ್ಮ ದಳಗಳ ಒಳಗೆ ಪರಿಮಳವನ್ನು ಮುಚ್ಚಿಟ್ಟುಕೊಂಡಿವೆ. ಒಮ್ಮೆ ಅವು ತಮ್ಮನ್ನು ಕೊಂಡವರ ಕಾರಿನಲ್ಲಿ, ದೇವರ ಫೋಟೊಗಳ ಎದುರು ಅರಳಿ ಅಲ್ಲಿ ಸುಳಿದು ಹೋಗುವವರಿಗೆಲ್ಲ ತಮ್ಮ ಹೆಸರು ಮಧುರೈ ಮಲ್ಲಿ ಎಂದು ಪರಿಮಳದ ಮೂಲಕ ಸಾರಿ ಹೇಳುತ್ತವೆ.

ಪರಿ ಮಟ್ಟುತವಾನಿ ಮಾರುಕಟ್ಟೆಗೆ ಮೂರು ವರ್ಷದಲ್ಲಿ ಒಟ್ಟು ಮೂರು ಸಲ ಭೇಟಿ ನೀಡಿತು. ಮೊದಲ ಭೇಟಿ 2021ರ ಸೆಪ್ಟೆಂಬರ್‌ ತಿಂಗಳಿನಲ್ಲಿ. ಆಗ ಗಣೇಶ ಚತುರ್ಥಿಗೆ ನಾಲ್ಕು ದಿನಗಳು ಬಾಕಿಯಿದ್ದವು. ಆಗ ಹೇರಲಾಗಿದ್ದ ಕೋವಿಡ್‌ ನಿರ್ಬಂಧಗಳು ಇದಕ್ಕೆ ಕಾರಣ. ಆಗ ಮಾರುಕಟ್ಟೆ ತಾತ್ಕಾಲಿಕವಾಗಿ ಮಟ್ಟುತವಾನಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಜಂಗಳಿಯನ್ನು ನಿಯಂತ್ರಿಸಿ ಸಾಮಾಜಿಕ ಅಂತರವನ್ನು ಕಾಪಾಡುವುದು ಇದರ ಹಿದಿನ ಉದ್ದೇಶವಾಗಿತ್ತು. ಆದರೆ ಮಾರುಕಟ್ಟೆ ಗಿಜಿಗುಡುತ್ತಿತ್ತು.

ಈ ಜಗತ್ತಿನ ಕುರಿತಾದ ನನ್ನ ಮೊದಲ ತರಗತಿಗೆ ಮೊದಲು, ಮಧುರೈ ಹೂವಿನ ಮಾರುಕಟ್ಟೆ ಸಂಘದ ಅಧ್ಯಕ್ಷರು ತಮ್ಮ ಹೆಸರನ್ನು ಘೋಷಿಸಿದರು: "ನಾನು ಪೂಕಡೈ ರಾಮಚಂದ್ರನ್. ಮತ್ತು ಇದು ನನ್ನ ವಿಶ್ವವಿದ್ಯಾಲಯ" ಎಂದು ಅವರು ಹೂವಿನ ಮಾರುಕಟ್ಟೆಯ ಕಡೆ ಕೈ ತೋರಿಸಿ ಹೇಳಿದರು.

Farmers empty sacks full of Madurai malli at the flower market. The buds must be sold before they blossom
PHOTO • M. Palani Kumar

ಹೂವಿನ ಮಾರುಕಟ್ಟೆಯಲ್ಲಿ ರೈತರು ಮಧುರೈ ಮಲ್ಲಿ ತುಂಬಿದ ಚೀಲಗಳನ್ನು ಖಾಲಿ ಮಾಡುತ್ತಿರುವುದು. ಮೊಗ್ಗುಗಳು ಅರಳುವ ಮೊದಲು ಮಾರಾಟ ಮಾಡಬೇಕು

Retail vendors, mostly women, buying jasmine in small quantities. They will string these flowers together and sell them
PHOTO • M. Palani Kumar

ಚಿಲ್ಲರೆ ಮಾರಾಟಗಾರರು, ಹೆಚ್ಚಾಗಿ ಮಹಿಳೆಯರು, ಮಲ್ಲಿಗೆಯನ್ನು ಸಣ್ಣ ಪ್ರಮಾಣದಲ್ಲಿ ಖರೀದಿಸುತ್ತಾರೆ. ಅವರು ಈ ಹೂವುಗಳನ್ನು ಕಟ್ಟಿ ಮಾರಾಟ ಮಾಡುತ್ತಾರೆ

63 ವರ್ಷದ ರಾಮಚಂದ್ರನ್ ಐದು ದಶಕಗಳಿಂದ ಮಲ್ಲಿಗೆ ವ್ಯಾಪಾರದಲ್ಲಿ ತೊಡಗಿದ್ದಾರೆ. ಅವರು ಹದಿಹರೆಯದವರಾಗಿದ್ದಾಗ ಪ್ರಾರಂಭಿಸಿದರು. "ನನ್ನ ಕುಟುಂಬದ ಮೂರು ತಲೆಮಾರುಗಳು ಈ ವ್ಯವಹಾರದಲ್ಲಿ ತೊಡಗಿವೆ" ಎಂದು ಅವರು ಹೇಳುತ್ತಾರೆ. ಹೀಗಾಗಿಯೇ ಅವರಿಗೆ ಪೂಕಡೈ ಎನ್ನುವ ಹೆಸರು ಸೇರಿಕೊಂಡಿದೆ. ತಮಿಳಿನಲ್ಲಿ ಅದರ ಅರ್ಥ ಹೂವಿನಂಗಡಿ ಎಂದು. "ನಾನು ನನ್ನ ಕೆಲಸವನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ, ನಾನು ಅದನ್ನು ಪೂಜಿಸುತ್ತೇನೆ. ಧರಿಸುವ ಬಟ್ಟೆಗಳು ಸೇರಿದಂತೆ ಎಲ್ಲವನ್ನೂ ಇದರಿಂದ ಗಳಿಸಿದ್ದೇನೆ. ಮತ್ತು ಪ್ರತಿಯೊಬ್ಬರೂ - ರೈತರು ಮತ್ತು ವ್ಯಾಪಾರಿಗಳು ಅಭಿವೃದ್ಧಿ ಹೊಂದಬೇಕೆಂದು ಬಯಸುತ್ತೇನೆ."

ಆದಾಗ್ಯೂ, ಇದು ಅಷ್ಟು ಸರಳವಲ್ಲ. ಮಲ್ಲಿಗೆ ವ್ಯಾಪಾರವನ್ನು ಬೆಲೆ ಮತ್ತು ಪರಿಮಾಣದ ಏರಿಳಿತಗಳು ನಿಯಂತ್ರಿಸುತ್ತವೆ, ಮತ್ತು ಈ ಮಾರುಕಟ್ಟೆಯ ಚಂಚಲತೆಯು ಇಳಿಜಾರಿನ ಹಾದಿಯಲ್ಲಿರುತ್ತದೆ ಮತ್ತು ಕ್ರೂರವಾಗಿರುತ್ತದೆ. ಇಷ್ಟೇ ಅಲ್ಲ: ನೀರಾವರಿಯ ಶಾಶ್ವತ ಸಮಸ್ಯೆಗಳು, ಒಳಸುರಿ ವೆಚ್ಚಗಳು ಮತ್ತು ಹೆಚ್ಚುತ್ತಿರುವ ವಿಶ್ವಾಸಾರ್ಹವಲ್ಲದ ಮಳೆಯ ಹೊರತಾಗಿ, ರೈತರು ಕಾರ್ಮಿಕರ ಕೊರತೆಯನ್ನು ಸಹ ಎದುರಿಸುತ್ತಿದ್ದಾರೆ.

ಈ ಉದ್ಯಮಕ್ಕೆ ಕೊವಿಡ್‌ ದೊಡ್ಡ ಹೊಡೆತವನ್ನೇ ನೀಡಿತು. ಮಲ್ಲಿಗೆಯನ್ನು ಅನಿವಾರ್ಯ ಉತ್ಪನ್ನವಲ್ಲವೆಂದು ಪಟ್ಟಿ ಮಾಡಿದ್ದು ಇದರ ವ್ಯವಹಾರಕ್ಕೆ ಅಡ್ಡಿಯಾಯಿತು. ಇದು ರೈತರು ಮತ್ತು ವ್ಯಾಪಾರಿಗಳಿಗೆ ಭರಿಸಲಾರದ ನಷ್ಟವನ್ನು ಉಂಟು ಮಾಡಿತು. ಅನೇಕ ಕೃಷಿಕರು ಅನಿವಾರ್ಯವಾಗಿ ಹೂವಿನ ಬದಲು ತರಕಾರಿಗಳು ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲಾರಂಭಿಸಿದರು.

ಆದರೆ ರಾಮಚಂದ್ರನ್‌ ಬೇರೆ ದಾರಿಗಳಿವೆ ಎನ್ನುತ್ತಾರೆ. ಅವರು ಒಂದೇ ಸಮಯದಲ್ಲಿ ಹಲವೆಡೆ ಕಣ್ಣಿಟ್ಟಿರುತ್ತಾರೆ. ರೈತರು, ಅವರ ಫಸಲು, ಖರೀದಿದಾರರು. ಮಾಲೆ ಕಟ್ಟುವವರು ಹೀಗೆ ಎಲ್ಲರ ಕಡೆಗೂ ಗಮನ ಕೊಡುತ್ತಾರೆ. ಮಲ್ಲಿಗೆ ವ್ಯಾಪಾರವನ್ನು ಸುಧಾರಿಸುವಲ್ಲಿ ಅವರು ಚಿಲ್ಲರೆ ಮತ್ತು ಸಗಟು ಎರಡಕ್ಕೂ ಗಮನಕೊಡುತ್ತಾರೆ. ಇದರಲ್ಲಿ ಸರಕಾರ ನಡೆಸುವ ಸುಗಂಧ ದ್ರವ್ಯದ ಕಾರ್ಖಾನೆ ಮತ್ತು ತಡೆರಹಿತ ರಫ್ತನ್ನು ಒಳಗೊಂಡಿದೆ.

“ನಾವು ಹಾಗೆ ಮಾಡಿದಲ್ಲಿ. ಮಧುರೈ ಮಲ್ಲಿಗೆ ಮಾಂಗಾಧ ಮಲ್ಲಿಗೆಯಾ ಇರ್ಕುಮ್‌ [ಮಧುರೈ ಮಲ್ಲಿಗೆ ತನ್ನ ಹೊಳಪನ್ನು ಕಳೆದುಕೊಳ್ಳುವುದಿಲ್ಲ]” ಎನ್ನುತ್ತಾರೆ. ಹೂವಿನ ಹೊಳಪು ಎನ್ನುವುದು ಇಲ್ಲಿ ಹೊಳಪಿಗಿಂತಲೂ ಹೆಚ್ಚಿನದನ್ನು ಸೂಚಿಸುತ್ತದೆ. ಅವರು ಈ ಪದವನ್ನು ಮತ್ತೆ ಮತ್ತೆ ಉಪಯೋಗಿಸುತ್ತಿದ್ದರು. ಅವರು ಹೇಳುವಂತೆ ಅವರ ನೆಚ್ಚಿನ ಹೂವಿಗೆ ಸುವಣ ಭವಿಷ್ಯವಿದೆ.

*****

Left: Pookadai Ramachandran, president of the Madurai Flower Market Association has been in the jasmine trade for over five decades
PHOTO • M. Palani Kumar
Right: Jasmine buds are weighed using electronic scales and an iron scale and then packed in covers for retail buyers
PHOTO • M. Palani Kumar

ಎಡ: ಮಧುರೈ ಹೂವಿನ ಮಾರುಕಟ್ಟೆ ಸಂಘದ ಅಧ್ಯಕ್ಷ ಪೂಕಡೈ ರಾಮಚಂದ್ರನ್ ಅವರು ಐದು ದಶಕಗಳಿಂದ ಮಲ್ಲಿಗೆ ವ್ಯಾಪಾರದಲ್ಲಿದ್ದಾರೆ. ಬಲ: ಮಲ್ಲಿಗೆ ಮೊಗ್ಗುಗಳನ್ನು ಎಲೆಕ್ಟ್ರಾನಿಕ್ ಮಾಪಕಗಳು ಮತ್ತು ಕಬ್ಬಿಣದ ತಕ್ಕಡಿ ಬಳಸಿ ತೂಕ ಮಾಡಲಾಗುತ್ತದೆ ಮತ್ತು ನಂತರ ಚಿಲ್ಲರೆ ಖರೀದಿದಾರರಿಗೆ ಕವರುಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ

In Madurai, jasmine prices vary depending on its variety and grade
PHOTO • M. Palani Kumar

ಮಧುರೈನಲ್ಲಿ, ಮಲ್ಲಿಗೆಯ ಬೆಲೆಗಳು ಅದರ ವೈವಿಧ್ಯತೆ ಮತ್ತು ದರ್ಜೆಯನ್ನು ಅವಲಂಬಿಸಿ ಬದಲಾಗುತ್ತವೆ

ಬೆಳಗಿನ ಹೊತ್ತು ಮಲ್ಲಿಗೆ ವ್ಯಾಪಾರ ಚುರುಕಾಗಿತ್ತು. ನಮ್ಮ ದನಿ ಇನ್ನೊಬ್ಬರಿಗೆ ಕೇಳಬೇಕಂದರೆ ಆ ಪರಿಮಳಭರಿತ ಗದ್ದಲದ ವಾತಾವರಣದಲ್ಲಿ ಕಿರುಚುವುದು ಅನಿವಾರ್ಯವಾಗಿತ್ತು.

ರಾಮಚಂದ್ರನ್‌ ನಮಗಾಗಿ ಚಹಾ ತರಿಸಿಕೊಟ್ಟರು. ಬೆಳಗಿನ ಬಿಸಿಲು ಮತ್ತು ಸೆಕೆಯ ನಡುವೆ ಬಿಸಿ ಚಹಾ ಕುಡಿಯುತ್ತಿರುವಾಗ ರೈತರು ಸಾವಿರಾರು ರೂಪಾಯಿಗಳ ವ್ಯವಹಾರ ಮಾಡುತ್ತಿದ್ದರು. ಕೆಲವರ ವ್ಯವಹಾರ 50,000 ರೂ. ಮೀರಿತ್ತು. “ಅವರು ಎಕರೆಗಟ್ಟಲೆ ಜಾಗದಲ್ಲಿ ಮಲ್ಲಿಗೆ ನೆಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಹೂ ಕಿಲೋ ಒಂದಕ್ಕೆ 1,000ದಂತೆ ಮಾರಾಟವಾದ ದಿನ ಒಬ್ಬರು 50 ಕೇಜಿ ಹೂ ತಂದಿದ್ದರು. ಎಂದರೆ 50,000 ರೂಪಾಯಿ. ಒಂದೇ ದಿನದಲ್ಲಿ ಐವತ್ತು ಸಾವಿರ ರೂಪಾಯಿಯ ಲಾಟರಿ ಹೊಡೆದಂತೆ.”

ಹಾಗಿದ್ದರೆ ಮಾರುಕಟ್ಟೆಯ ದಿನವೊಂದರ ವಹಿವಾಟು ಎಷ್ಟಿರಬಹುದು? 50 ಲಕ್ಷದಿಂದ ಒಂದು ಕೋಟಿ ಇರಬಹುದು ಎನ್ನುತ್ತಾರೆ ರಾಮಚಂದ್ರನ್.‌ “ಇದೊಂದು ಖಾಸಗಿ ಮಾರುಕಟ್ಟೆ. ಸುಮಾರು ನೂರು ಅಂಗಡಿಗಳಿವೆ. ಒಂದೊಂದು ಅಂಗಡಿ 50,000 ದಿಂದ ಒಂದು ಲಕ್ಷದ ತನಕ ವ್ಯವಹಾರ ಮಾಡುತ್ತವೆ. ಈಗ ನೀವೇ ಲೆಕ್ಕ ಹಾಕಿ.”

ವ್ಯಾಪಾರಿಗಳು ಮಾರಾಟದ ಮೊತ್ತದ ಮೇಲೆ ಶೇಕಡಾ 10ರಷ್ಟು ಕಮಿಷನ್‌ ಗಳಿಸುತ್ತಾರೆ ಎನ್ನುತ್ತಾರೆ ರಾಮಚಂದ್ರನ್.‌ “ಈ ಮೊತ್ತವು ಕಳೆದ ಹತ್ತು ವರ್ಷಗಳಿಂದ ಬದಲಾಗಿಲ್ಲ” ಎಂದು ಅವರು ಹೇಳುತ್ತಾರೆ. “ಅಲ್ಲದೆ ಇದು ಅಪಾಯಕಾರಿ ವ್ಯವಹಾರ” ರೈತನಿಂದ ಹಣ ಪಾವತಿಸಲು ಸಾಧ್ಯವಿಲ್ಲದ ಸಮಯದಲ್ಲಿ ವ್ಯಾಪಾರಿ ನಷ್ಟವನ್ನು ಭರಿಸಬೇಕಾಗುತ್ತದೆ. ಕೊವಿಡ್‌ ಲಾಕ್‌ ಡೌನ್‌ ಸಮಯದಲ್ಲಿ ಹಲವು ಬಾರಿ ಹೀಗಾಗಿದೆ.

ಎರಡನೇ ಭೇಟಿ 2022ರ ಚೌತಿ ಹಬ್ಬಕ್ಕೂ ಸ್ವಲ್ಪ ಮೊದಲು ಆಗಿತ್ತು. ಎರಡನೇ ಸಲ ಹೋಗಿದ್ದ ಉದ್ದೇಶಿತ ಹೂವಿನ ಮಾರುಕಟ್ಟೆಗೆ. ಈ ಮಾರುಕಟ್ಟೆಯು ಎರಡು ಅಗಲವಾದ ಹಾದಿಗಳನ್ನು ಹೊಂದಿದ್ದು ಎರಡೂ ಬದಿಗೆ ಅಂಗಡಿಗಳಿವೆ. ಇಲ್ಲಿನ ನಿಯಮಿತ ಖರೀದಿದಾರರಿಗೆ ಇಲ್ಲಿನ ವ್ಯವಹಾರ ತಿಳಿದಿರುವ ಕಾರಣ ವಹಿವಾಟುಗಳು ಬೇಗ ಬೇಗನೇ ನಡೆಯುತ್ತವೆ. ಹೂವಿನ ಅಂಗಡಿಗಳ ನಡುವಿನ ಕಾಲು ಹಾದಿಯು ಹಳೆಯ ಹೂವುಗಳ ರಾಶಿಯಿಂದ ಕೂಡಿದೆ. ಇಲ್ಲಿ ಹಳೆಯ ಹೂವಿನ ಕೊಳೆತ ವಾಸನೆ ಮತ್ತು ಹೊಸ ಹೂವಿನ ಸುಗಂಧ ಎರಡೂ ಗಮನಸೆಳೆಯುತ್ತವೆ. ಕೆಲವು ರಾಸಾಯನಿಕ ಸಂಯುಕ್ತಗಳ ಸಂಯೋಜನೆಯನ್ನು ಅವಲಂಬಿಸಿ ಈ ಕೆಟ್ಟ ವಾಸನೆಯ ಘಾಟು ಇರುತ್ತದೆಯೆನ್ನುವುದು ನಮ್ಮ ಗ್ರಹಿಕೆಗೆ ಸಿಕ್ಕ ಅಂಶ. ಈ ಸಂದರ್ಭದಲ್ಲಿ, ಮಲ್ಲಿಗೆಯಲ್ಲಿ ಸ್ವಾಭಾವಿಕವಾಗಿ ಕಂಡುಬರುವ ಸಂಯೋಜನೆಯು ಇಂಡೋಲ್, ಇದು ಮಲ, ತಂಬಾಕು ಹೊಗೆ ಮತ್ತು ಕಲ್ಲಿದ್ದಲು ಟಾರ್ಗಳಲ್ಲೂ ಇರುತ್ತದೆ.

ಕಡಿಮೆ ಸಾಂದ್ರತೆಯಲ್ಲಿ ಇಂಡೋಲ್ ಹೂವಿನ ವಾಸನೆಯನ್ನು ಹೊಂದಿರುತ್ತದೆ, ಆದರೆ ಹೆಚ್ಚಿನ ಸಾಂದ್ರತೆಗಳಲ್ಲಿ ಅದು ಕೆಟ್ಟ ವಾಸನೆಯನ್ನು ಹೊಂದಿರುತ್ತದೆ.

Other flowers for sale at the market
PHOTO • M. Palani Kumar
PHOTO • M. Palani Kumar

ಮಾರುಕಟ್ಟೆಯಲ್ಲಿನ ಇತರ ಹೂಗಳು

*****

ಹೂವಿನ ಬೆಲೆಯನ್ನು ನಿರ್ಧರಿಸುವ ಮುಖ್ಯ ಅಂಶಗಳ ಕುರಿತು ರಾಮಚಂದ್ರ ವಿವರಿಸುತ್ತಾರೆ. ಫೆಬ್ರವರಿ ತಿಂಗಳ ಮಧ್ಯ ಭಾಗದಲ್ಲಿ ಮಲ್ಲಿಗೆ ಹೂ ಬಿಡಲು ಆರಂಭಿಸುತ್ತದೆ. “ಏಪ್ರಿಲ್‌ ತನಕ ಉತ್ತಮ ಇಳುವರಿಯಿರುತ್ತದೆ. ಆದರೆ ದರ ಕಡಿಮೆಯಿರುತ್ತದೆ. ಆಗ ಕೇಜಿಯ ಬೆಲೆ 100-300 ರೂಗಳ ನಡುವೆ ಇರುತ್ತದೆ. ಮೇ ತಿಂಗಳ ಹದಿನೈದನೇ ತಾರೀಖಿನ ನಂತರ ಹವಮಾನದಲ್ಲಿ ಬದಲಾವಣೆಯಾಗಿ ಆಗ ಗಾಳಿ ಬೀಸತೊಡಗುತ್ತದೆ. ಆಗ ಇಳುವರಿ ಹೆಚ್ಚಿರುತ್ತದೆ. ಆಗಸ್ಟ್-ಸೆಪ್ಟೆಂಬರ್‌ ಸಮಯಕ್ಕೆ ಹೂವಿನ ಋತುವಿನ ಅರ್ಧ ಕಾಲ ಮುಗಿದಿರುತ್ತದೆ ಮತ್ತು ಇಳುವರಿ ಕಡಿಮೆಯಾಗುತ್ತದೆ. ಇಳುವರಿ ಕಡಿಮೆಯಾದಾಗ ಬೆಲೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹೂವಿನ ಬೆಲೆ 1,000 ರೂಪಾಯಿಯ ತನಕ ತಲುಪುತ್ತದೆ. ವರ್ಷದ ಕೊನೆಗೆ ಎಂದರೆ ನವೆಂಬರ್‌, ಡಿಸೆಂಬರ್‌ ತಿಂಗಳಿನಲ್ಲಿ ಇಳುವರಿ ಶೇಕಡಾ ಇಪ್ಪತೈದಕ್ಕೆ ಕುಸಿಯುತ್ತದೆ ಮತ್ತು ಬೆಲೆ ಗಗನಗಾಮಿಯಾಗಿರುತ್ತದೆ. ಈ ಸಮಯದಲ್ಲಿ "ಒಂದು ಕಿಲೋಗೆ ಮೂರು, ನಾಲ್ಕು ಅಥವಾ ಐದು ಸಾವಿರ ರೂಪಾಯಿಗಳು ಕೇಳರಿಯದ ಸಂಗತಿಯಲ್ಲ. ಥಾಯ್ ಮಾಸಮ್ [ಜನವರಿ 15ರಿಂದ ಫೆಬ್ರವರಿ 15] ಕೂಡ ಮದುವೆಯ ಋತುವಾಗಿದೆ, ಮತ್ತು ಈ ಸಮಯದಲ್ಲಿ ಹೆಚ್ಚಿನ ಬೇಡಿಕೆ ಮತ್ತು ಬಹಳ ಕಡಿಮೆ ಪೂರೈಕೆ ಇರುತ್ತದೆ."

ಮಟ್ಟುತವಾನಿಯ ಪ್ರಾಥಮಿಕ ಮಾರುಕಟ್ಟೆಗೆ ನೇರವಾಗಿ ರೈತರಿಂದ 20 ಟನ್, ಅಂದರೆ 20,000 ಕಿಲೋ ಹೂ ಪೂರೈಕೆಯಾಗುತ್ತದೆಂದು ರಾಮಚಂದ್ರನ್‌ ಹೇಳುತ್ತಾರೆ. ಮತ್ತು ನೂರು ಟನ್‌ ಇತರ ಹೂವುಗಳು ಕೂಡ ಇಲ್ಲಿಗೆ ಬರುತ್ತವೆ. ಇಲ್ಲಿಂದ ಹೂವುಗಳು ತಮಿಳುನಾಡಿನ ನೆರೆಯ ಜಿಲ್ಲೆಗಳಾದ ದಿಂಡಿಗಲ್, ಥೇನಿ, ವಿರುಧುನಗರ, ಶಿವಗಂಗೈ, ಪುದುಕೋಟ್ಟೈನ ಇತರ ಮಾರುಕಟ್ಟೆಗಳಿಗೆ ಹೋಗುತ್ತವೆ.

ಆದರೆ ಹೂ ಬಿಡುವಿಕೆಗೆ ನೇರ ಮಾದರಿಗಳೇನೂ ಇಲ್ಲ. “ಇದು ನೀರು, ಮಳೆಯನ್ನು ಅವಲಂಬಿಸಿರುತ್ತದೆ” ಎನ್ನುತ್ತಾರವರು. ಒಂದು ಎಕರೆ ಭೂಮಿಯನ್ನು ಹೊಂದಿರುವ ರೈತನು ಈ ವಾರ ಅದರ ಮೂರನೇ ಒಂದು ಭಾಗಕ್ಕೆ, ಮುಂದಿನ ವಾರ ಮೂರನೇ ಒಂದು ಭಾಗಕ್ಕೆ ನೀರು ಹಾಕುತ್ತಾನೆ, ಇದರಿಂದಾಗಿ ಅವನು [ಸ್ವಲ್ಪಮಟ್ಟಿಗೆ] ಸ್ಥಿರವಾದ ಇಳುವರಿಯನ್ನು ಪಡೆಯುತ್ತಾನೆ. ಆದರೆ ಮಳೆ ಬಂದಾಗ, ಎಲ್ಲರ ಹೊಲಗಳು ತೇವಗೊಳ್ಳುತ್ತವೆ ಮತ್ತು ಎಲ್ಲಾ ಸಸ್ಯಗಳು ಒಂದೇ ಬಾರಿಗೆ ಹೂ ಬಿಡುತ್ತವೆ. "ಆಗ ದರಗಳು ಕುಸಿಯುತ್ತವೆ."

ರಾಮಚಂದ್ರನ್‌ ಅವರಿಗೆ 100 ರೈತರು ಮಲ್ಲಿಗೆ ಪೂರೈಸುತ್ತಾರೆ. “ನಾನು ಹೆಚ್ಚು ಮಲ್ಲಿಗೆ ನೆಡುವುದಿಲ್ಲ” ಎಂದು ಅವರು ಹೇಳುತ್ತಾರೆ. “ಇದಕ್ಕೆ ಬಹಳಷ್ಟು ಶ್ರಮ ಬೇಕು” ಪ್ರತಿ ಕಿಲೋ ಹೂವನ್ನು ಕಿತ್ತು ಸಾಗಿಸುವುದಕ್ಕೆ 100 ರೂಪಾಯಿಗಳ ಹತ್ತಿರ ಖರ್ಚು ಬರುತ್ತದೆ ಎನ್ನುತ್ತಾರವರು. ಅದರಲ್ಲಿ ಮೂರನೇ ಎರಡರಷ್ಟು ಭಾಗವು ಕಾರ್ಮಿಕ ವೆಚ್ಚಗಳಿಗಾಗಿ ಹೋಗುತ್ತದೆ. ಮಲ್ಲಿಗೆಯ ಬೆಲೆ ಕಿಲೋಗೆ ನೂರು ರೂಪಾಯಿಗಿಂತ ಕಡಿಮೆಯಾದರೆ, ರೈತರು ಭಾರಿ ನಷ್ಟವನ್ನು ಅನುಭವಿಸುತ್ತಾರೆ.

ರೈತ ಮತ್ತು ವ್ಯಾಪಾರಿ ನಡುವಿನ ಸಂಬಂಧವು ಸಂಕೀರ್ಣವಾದುದು. ತಿರುಮಂಗಲಂ ತಾಲ್ಲೂಕಿನ ಮೆಲುಪ್ಪಿಲಿಗುಂಡು ಕುಗ್ರಾಮದ 51 ವರ್ಷದ ಮಲ್ಲಿಗೆ ಕೃಷಿಕ ಪಿ.ಗಣಪತಿ ಅವರು ರಾಮಚಂದ್ರನ್ ಅವರಿಗೆ ಹೂವುಗಳನ್ನು ಪೂರೈಸುತ್ತಾರೆ. ಅವರು ದೊಡ್ಡ ವ್ಯಾಪಾರಿಗಳ ಬಳಿ "ಅಡೈಕಾಲಂ" ಅಥವಾ ಆಶ್ರಯವನ್ನು ಪಡೆಯುವುದಾಗಿ ಹೇಳುತ್ತಾರೆ. " ಹೂಬಿಡುವ ಸಮಯದಲ್ಲಿ, ನಾನು ಹೂಗಳ ಮೂಟೆಗಳೊಂದಿಗೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಅನೇಕ ಬಾರಿ ಮಾರುಕಟ್ಟೆಗೆ ಹೋಗುತ್ತೇನೆ. ನನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯಾಪಾರಿಗಳು ನನಗೆ ಸಹಾಯ ಮಾಡಬೇಕು." ಓದಿ: ತಮಿಳುನಾಡಿನಲ್ಲಿ: ಮಲ್ಲಿಗೆಯ ಪರಿಮಳದ ಹಿಂದಿನ ಹೋರಾಟಗಳು

ಐದು ವರ್ಷಗಳ ಹಿಂದೆ, ಗಣಪತಿ ರಾಮಚಂದ್ರನ್ ಅವರಿಂದ ಕೆಲವು ಲಕ್ಷಗಳನ್ನು ಸಾಲವಾಗಿ ಪಡೆದಿದ್ದರು. ಮತ್ತು ಆ ಸಾಲವನ್ನು ಅವರಿಗೆ ಹೂ ಪೂರೈಕೆ ಮಾಡಿ ತೀರಿಸಿದರು. ಅಂತಹ ಸಂದರ್ಭದಲ್ಲಿ, ಕಮಿಷನ್ ಸ್ವಲ್ಪ ಹೆಚ್ಚಾಗಿರುತ್ತದೆ - ಅದು ಶೇಕಡಾ 10ರಿಂದ 12.5ಕ್ಕೆ ಏರುತ್ತದೆ.

Left: Jasmine farmer P. Ganapathy walks between the rows of his new jasmine plants.
PHOTO • M. Palani Kumar
Right: A farmer shows plants where pests have eaten through the leaves
PHOTO • M. Palani Kumar

ಎಡ: ಮಲ್ಲಿಗೆ ಕೃಷಿಕ ಪಿ.ಗಣಪತಿ ತನ್ನ ಹೊಸ ಮಲ್ಲಿಗೆ ಗಿಡಗಳ ಸಾಲುಗಳ ನಡುವೆ ನಡೆಯುತ್ತಿರುವುದು. ಬಲ: ಒಬ್ಬ ರೈತ ಕೀಟ ಬಾಧಿತ ಗಿಡದ ಎಲೆಯನ್ನು ತೋರಿಸುತ್ತಿದ್ದಾರೆ

ಮಲ್ಲಿಗೆಯ ಬೆಲೆಯನ್ನು ಯಾರು ನಿಗದಿಪಡಿಸುತ್ತಾರೆ? ರಾಮಚಂದ್ರನ್ ಈ ರೀತಿಯಾಗಿ ವಿವರಣೆ ನೀಡುತ್ತಾರೆ. "ಮಾರುಕಟ್ಟೆಯೆನ್ನುವುದು ಜನರಿಂದ ನಡೆಯುತ್ತದೆ. ಜನರು ಹಣವನ್ನು ಚಲಿಸುವಂತೆ ಮಾಡುತ್ತಾರೆ. ಮತ್ತು ಇದು ತುಂಬಾ ಕ್ರಿಯಾತ್ಮಕವಾಗಿದೆ" ಎಂದು ಅವರು ಹೇಳುತ್ತಾರೆ. "ದರವು ಕಿಲೋಗೆ 500 ರೂ.ಗಳಿಂದ ಪ್ರಾರಂಭವಾಗಬಹುದು. ಆ ಲಾಟ್ ಬೇಗ ಮಾರಾಟವಾದರೆ, ನಾವು ತಕ್ಷಣ ಅದನ್ನು 600ಕ್ಕೆ ಏರಿಸುತ್ತೇವೆ, ಅದಕ್ಕೂ ಬೇಡಿಕೆಯಿದ್ದಲ್ಲಿ ಮುಂದಿನ ಲಾಟಿಗೆ 800 ಎಂದು ಹೇಳುತ್ತೇವೆ.

ಅವರು ಯುವಕನಾಗಿದ್ದ ಸಮಯದಲ್ಲಿ “100 ಹೂ 2 ಆಣೆ, 4 ಆಣೆ, 8 ಆಣೆ ದರದಲ್ಲಿ ಮಾರಾಟವಾಗುತ್ತಿತ್ತು.”

ಆಗ ಹೂವುಗಳನ್ನು ಕುದುರೆ ಗಾಡಿಗಳಲ್ಲಿ ಸಾಗಿಸಲಾಗುತ್ತಿತ್ತು. ಜೊತೆಗೆ ದಿಂಡಿಗಲ್ ನಿಲ್ದಾಣದಿಂದ ಎರಡು ಪ್ಯಾಸೆಂಜರ್ ರೈಲುಗಳಲ್ಲಿ ಕೂಡ. "ಅವುಗಳನ್ನು ಬಿದಿರು ಮತ್ತು ತಾಳೆಗರಿ ಬುಟ್ಟಿಗಳಲ್ಲಿ ಕಳುಹಿಸಲಾಗುತ್ತಿತ್ತು, ಈ ಬುಟ್ಟಿಗಳಲ್ಲಿದ್ದರೆ ಹೂವಿಗೆ ಗಾಳಿಯಾಡುತ್ತದೆ ಮತ್ತು ಅದು ಮೆತ್ತಗಿರುತ್ತದೆ. ಆಗ ಮಲ್ಲಿಗೆ ಬೆಳೆಯುವ ರೈತರ ಸಂಖ್ಯೆ ಬಹಳ ಕಡಿಮೆಯಿತ್ತು. ಮತ್ತು ಕೆಲವೇ ಕೆಲವು ಮಹಿಳಾ ರೈತರಷ್ಟೇ ಬೆಳೆಯುತ್ತಿದ್ದರು."

ರಾಮಚಂದ್ರನ್‌ ತಮ್ಮ ಬಾಲ್ಯದ ಪರಿಮಳ ಭರಿತ ಗುಲಾಬಿಯ ಕುರಿತಾದ ನಾಸ್ಟಾಲಾಜಿಕ್‌ ಎನ್ನಬಹುದಾದ ನೆನಪುಗಳನ್ನು ಹೊಂದಿದ್ದಾರೆ. ಅದನ್ನು ಅವರು “ಪನ್ನೀರ್‌ ಗುಲಾಬಿ” ಎಂದು ಕರೆಯುತ್ತಾರೆ. “ಈಗ ಅಂತಹ ಹೂಗಳನ್ನು ಹುಡುಕುವುದು ಕಷ್ಟ ಆಗ ಗುಲಾಬಿ ಹೂಗಳಿಗೆ ಜೇನು ನೊಣಗಳು ಮುತ್ತಿಕೊಂಡಿರುತ್ತಿದ್ದವು. ಎಷ್ಟೋ ಸಲ ಅವು ನನಗೆ ಕಚ್ಚಿದ್ದವು!” ಎನ್ನುವ ಅವರ ದನಿಯಲ್ಲಿ ಕೋಪದ ಬದಲು ವಿಸ್ಮಯವಿತ್ತು.

ಅವರು ಇನ್ನಷ್ಟು ಗೌರವ ಭಾವದೊಡನೆ ತಾನು ದೇವಸ್ಥಾನಗಳ ಜಾತ್ರೆಗೆ ತಾನು ಹೂವು ನೀಡಿದ್ದನ್ನು ತೋರಿಸುತ್ತಾರೆ. ರಥ. ಪಲ್ಲಕ್ಕಿ, ದೇವರ ಅಲಂಕಾರ ಹೀಗೆ ವಿವಿಧ ಉದ್ದೇಶಗಳಿಗೆ ಅವರು ಹೂವನ್ನು ದಾನ ಮಾಡಿದ್ದಾರೆ. ಎಲ್ಲವೂ ಒಂದಕ್ಕಿಂತ ಒಂದು ಸುಂದರ.

ಆದರೆ ಅವರು ಭೂತಕಾಲದಲ್ಲಿಯೇ ಬದುಕುವುದಿಲ್ಲ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟ ನೋಟಗಳನ್ನು ಹೊಂದಿದ್ದಾರೆ. "ನಾವೀನ್ಯತೆ ಮತ್ತು ಲಾಭಕ್ಕಾಗಿ, ಔಪಚಾರಿಕವಾಗಿ ವಿದ್ಯಾವಂತ ಯುವಕರು ವ್ಯವಹಾರಕ್ಕೆ ಬರಬೇಕಾಗಿದೆ." ರಾಮಚಂದ್ರನ್ ಅವರು ಫ್ಯಾನ್ಸಿ ಕಾಲೇಜು ಅಥವಾ ವಿಶ್ವವಿದ್ಯಾಲಯ ಪದವಿಗಳನ್ನು ಹೊಂದಿಲ್ಲದಿರಬಹುದು, ಮತ್ತು ಅವರು 'ಯುವಕ' ಅಲ್ಲ. ಆದರೆ ಅವರೆಲ್ಲರಿಗಿಂತಲೂ ಉತ್ತಮ ಆಲೋಚನೆಗಳು ಅವರಲ್ಲಿವೆ.

*****

Ramachandran holds up (left) a freshly-made rose petal garland, the making of which is both intricate and expensive as he explains (right)
PHOTO • M. Palani Kumar
Ramachandran holds up (left) a freshly-made rose petal garland, the making of which is both intricate and expensive as he explains (right)
PHOTO • M. Palani Kumar

ರಾಮಚಂದ್ರನ್ (ಎಡಕ್ಕೆ) ಹೊಸದಾಗಿ ತಯಾರಿಸಿದ ಗುಲಾಬಿ ದಳದ ಹಾರವನ್ನು ಹಿಡಿದಿದ್ದಾರೆ, ಅದರ ತಯಾರಿಕೆಯು ಸಂಕೀರ್ಣವಾದುದು ಮತ್ತು ಬೆಲೆ ದುಬಾರಿ ಎಂದು ಅವರು ವಿವರಿಸುತ್ತಾರೆ (ಬಲ)

ಮೊದಲ ನೋಟದಲ್ಲಿ, ಹೂವಿನ ದಾರಗಳು, ಹೂಮಾಲೆಗಳು ಮತ್ತು ಪರಿಮಳಗಳು ಕ್ರಾಂತಿಕಾರಿ ವ್ಯವಹಾರ ಕಲ್ಪನೆಗಳಂತೆ ತೋರುವುದಿಲ್ಲ. ಅವು ನೀರಸವೆನ್ನಿಸುತ್ತವೆ. ಪ್ರತಿ ಹಾರವು ಏಕಕಾಲದಲ್ಲಿ ಸೃಜನಶೀಲತೆ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿದೆ, ಇವುಗಳನ್ನು ಮುಡಿಯಬಹುದು, ಮೆಚ್ಚಬಹುದು, ಗೊಬ್ಬರ ಮಾಡಬಹುದು.

38 ವರ್ಷದ ಜಯರಾಜ್, ಶಿವಗಂಗೈಯಿಂದ ಮಧುರೈಗೆ ಪ್ರತಿದಿನ ಕೆಲಸಕ್ಕೆ ಬಸ್ ಮೂಲಕ ಬರುತ್ತಾರೆ. ಹೂಮಾಲೆ ತಯಾರಿಕೆಯ "ಎ ಟು ಝಡ್" ಅವರಿಗೆ ಕರಗತ. ಮತ್ತು ಸುಮಾರು 16 ವರ್ಷಗಳಿಂದ ಸೊಗಸಾದ ಮಾಲೆಗಳನ್ನು ತಯಾರಿಸುತ್ತಿದ್ದಾರೆ. ಅವರು ಯಾವುದೇ ಫೋಟೋ ನೋಡಿ ಅದರ ವಿನ್ಯಾಸವನ್ನು ನಕಲು ಮಾಡಬಲ್ಲೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಒಂದು ಜೋಡಿ ಗುಲಾಬಿ-ದಳದ ಹಾರಗಳಿಗೆ, ಅವರು 1,200ರಿಂದ 1,500 ರೂಪಾಯಿಗಳನ್ನು ಗಳಿಸುತ್ತಾರೆ. ಸರಳ ಮಲ್ಲಿಗೆ ಹಾರಕ್ಕೆ, 200ರಿಂದ 250 ರೂಪಾಯಿಗಳ ಕೂಲಿ ನೀಡಲಾಗುತ್ತದೆ.

ನಮ್ಮ ಭೇಟಿಯ ಎರಡು ದಿನಗಳ ಮೊದಲು, ಹೂಮಾಲೆ ನೇಯುವವರ ತೀವ್ರ ಕೊರತೆಯಿತ್ತು ಎಂದು ರಾಮಚಂದ್ರನ್ ವಿವರಿಸುತ್ತಾರೆ. "ಹೂಮಾಲೆ ಕಟ್ಟಲು ನಿಮಗೆ ಸಾಕಷ್ಟು ತರಬೇತಿ ಬೇಕು. ಆದರೆ ಇದರಲ್ಲಿ ಒಳ್ಳೆಯ ಸಂಪಾದನೆಯಿದೆ” ಎಂದು ಅವರು ಒತ್ತಿ ಹೇಳುತ್ತಾರೆ. "ಒಬ್ಬ ಮಹಿಳೆ ಸ್ವಲ್ಪ ಹಣವನ್ನು ಹೂಡಿಕೆ ಮಾಡಬಹುದು, ಎರಡು ಕಿಲೋ ಮಲ್ಲಿಗೆಯನ್ನು ಖರೀದಿಸಬಹುದು ಮತ್ತು ಅದನ್ನು ಕಟ್ಟಿ ಮಾರಾಟ ಮಾಡಿದ ನಂತರ, ಅವಳು 500 ರೂಪಾಯಿಗಳ ಲಾಭವನ್ನು ಗಳಿಸಬಹುದು." ಇದು ಅವರ ಸಮಯ ಮತ್ತು ಶ್ರಮವನ್ನು ಒಳಗೊಂಡಿದೆ, ಸುಮಾರು 4,000 - 5,000 ಮೊಗ್ಗುಗಳ ಒಂದು ಕಿಲೋ ಮಧುರೈ ಮಲ್ಲಿಯನ್ನು ಕಟ್ಟಲು 150 ರೂಪಾಯಿಗಳ ಕೂಲಿ ಕೊಡಲಾಗುತ್ತದೆ. ಜೊತೆಗೆ, ಹೂವುಗಳನ್ನು 'ಕೂರು' ಅಥವಾ 100 ಹೂವುಗಳ ರಾಶಿಯಾಗಿ ಚಿಲ್ಲರೆ ಮಾರಾಟ ಮಾಡುವಲ್ಲಿ ಸಣ್ಣ ಆದಾಯದ ಸಾಧ್ಯತೆಯಿದೆ.

ಹೂವುಗಳನ್ನು ನೇಯಲು ವೇಗ ಮತ್ತು ಕೌಶಲದ ಅಗತ್ಯವಿದೆ. ರಾಮಚಂದ್ರನ್‌ ನಮಗೆ ಅದರ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಬಾಳೆ ನಾರನ್ನು ಎಡಗೈಯಲ್ಲಿ ಹಿಡಿದುಕೊಂಡು, ಬಲಗೈಯಿಂದ ವೇಗವಾಗಿ ಮೊಗ್ಗನ್ನು ಎತ್ತಿಕೊಳ್ಳುತ್ತಾರೆ. ನಂತರ ಮೊಗ್ಗುಗಳನ್ನು ಹೊರಮುಖವಾಗಿ ಒಂದರ ಪಕ್ಕ ಒಂದನ್ನಿಟ್ಟು ದಾರವನ್ನು ತಿರುಗಿಸುತ್ತಾರೆ. ಹಾಗೆ ಮಾಡುತ್ತಾ ಸಾಗಿದಾಗ ಅದೊಂದು ಮಲ್ಲಿಗೆ ದಂಡೆಯಾಗುತ್ತದೆ.

ಹೂಮಾಲೆಗಳನ್ನು ತಯಾರಿಸುವುದನ್ನು ವಿಶ್ವವಿದ್ಯಾಲಯದಲ್ಲಿ ಏಕೆ ಕಲಿಸಲಾಗುವುದಿಲ್ಲ ಎಂದು ಅವರು ಕೇಳುತ್ತಾರೆ. "ಇದು ವೃತ್ತಿಪರ ಮತ್ತು ಜೀವನೋಪಾಯದ ಕೌಶಲವಾಗಿದೆ. ನಾನು ಕೂಡ ಕಲಿಸಬಲ್ಲೆ. ನಾನು ವರದಿಗಾರನಾಗಬಹುದು... ನನಗೆ ಕೌಶಲಗಳಿವೆ."

The Thovalai flower market in Kanyakumari district functions under a big neem tree
PHOTO • M. Palani Kumar

ಕನ್ಯಾಕುಮಾರಿ ಜಿಲ್ಲೆಯ ತೋವಲೈ ಹೂವಿನ ಮಾರುಕಟ್ಟೆ ದೊಡ್ಡ ಬೇವಿನ ಮರದ ಕೆಳಗೆ ಕಾರ್ಯನಿರ್ವಹಿಸುತ್ತದೆ

ಕನ್ಯಾಕುಮಾರಿ ಜಿಲ್ಲೆಯ ತೋವಲೈ ಮಾರುಕಟ್ಟೆಯಲ್ಲಿ ಮೊಗ್ಗು ನೇಯುವ ಕೆಲಸವು ಗುಡಿಕೈಗಾರಿಕೆಯಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಗಮನ ಸೆಳೆಯುತ್ತಾರೆ. "ಕಟ್ಟಿದ ಹೂವುಗಳು ಅಲ್ಲಿಂದ ಇತರ ಪಟ್ಟಣಗಳು ಮತ್ತು ನಗರಗಳಿಗೆ, ವಿಶೇಷವಾಗಿ ನೆರೆಯ ಕೇರಳದ ಪ್ರದೇಶಗಳಾದ ತಿರುವನಂತಪುರಂ, ಕೊಲ್ಲಂ ಮತ್ತು ಕೊಚ್ಚಿನ್‌ ನಗರಗಳಿಗೆ ಹೋಗುತ್ತವೆ. ಈ ಮಾದರಿಯನ್ನು ಬೇರೆಡೆ ಏಕೆ ಪುನರಾವರ್ತಿಸಲಾಗುವುದಿಲ್ಲ? ಹೆಚ್ಚಿನ ಮಹಿಳೆಯರಿಗೆ ತರಬೇತಿ ನೀಡಿದರೆ, ಅದು ಖಂಡಿತವಾಗಿಯೂ ಉತ್ತಮ ಆದಾಯದ ಮಾದರಿಯಾಗಿದೆ. ಮಲ್ಲಿಗೆಯ ತವರಿನಲ್ಲಿ ಇದು ಸಾಧ್ಯವಾಗಬೇಕಲ್ಲವೆ?"

ಫೆಬ್ರವರಿ 2023ರಲ್ಲಿ, ಪರಿ ಪಟ್ಟಣದ ಆರ್ಥಿಕತೆಯನ್ನು ಅರ್ಥಮಾಡಿಕೊಳ್ಳಲು ತೋವಲೈ ಮಾರುಕಟ್ಟೆಗೆ ಪ್ರಯಾಣಿಸಿತು. ನಾಗರಕೋಯಿಲ್‌ನಿಂದ ಸ್ವಲ್ಪವೇ ದೂರದಲ್ಲಿರುವ ತೋವಲೈ ಪಟ್ಟಣವು ಬೆಟ್ಟಗಳು ಮತ್ತು ಹೊಲಗಳಿಂದ ಸುತ್ತುವರೆದಿದೆ ಮತ್ತು ಎತ್ತರದ ಗಾಳಿಯಂತ್ರಗಳಿಂದ ಆವೃತವಾಗಿದೆ. ಮಾರುಕಟ್ಟೆಯು ಒಂದು ದೊಡ್ಡ ಬೇವಿನ ಮರದ ಕೆಳಗೆ ಮತ್ತು ಅದರ ಸುತ್ತಮುತ್ತ ಕಾರ್ಯನಿರ್ವಹಿಸುತ್ತದೆ. ಮಲ್ಲಿಗೆಯ ದಂಡೆಗಳನ್ನು ಕಮಲದ ಎಲೆಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ, ಅವುಗಳನ್ನು ತಾಳೆ ಎಲೆ ಬುಟ್ಟಿಗಳಲ್ಲಿ ಹಾಕಲಾಗುತ್ತದೆ. ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಿಂದ ಮತ್ತು ಕನ್ಯಾಕುಮಾರಿಯಿಂದಲೇ ಮಲ್ಲಿಗೆ ಇಲ್ಲಿಗೆ ಬರುತ್ತದೆ ಎಂದು ವ್ಯಾಪಾರಿಗಳು - ಎಲ್ಲರೂ ಪುರುಷರು - ವಿವರಿಸುತ್ತಾರೆ. ಫೆಬ್ರವರಿ ಆರಂಭದಲ್ಲಿ, ದರವು ಕಿಲೋಗೆ 1,000 ರೂಪಾಯಿಗಳಾಗಿತ್ತು. ಆದರೆ ಇಲ್ಲಿನ ದೊಡ್ಡ ವ್ಯವಹಾರವೆಂದರೆ ಮಹಿಳೆಯರು ಕಟ್ಟಿದ ಹೂವುಗಳು. ಆದರೆ ಮಾರುಕಟ್ಟೆಯಲ್ಲಿ ಯಾರೂ ಇರಲಿಲ್ಲ. ಅವರು ಎಲ್ಲಿದ್ದಾರೆ, ನಾನು ಕೇಳಿದಾಗ, "ಅವರ ಮನೆಗಳಲ್ಲಿ," ಪುರುಷರು ಹಿಂದಿನ ಬೀದಿಯನ್ನು ತೋರಿಸುತ್ತಾ ಹೇಳಿದರು.

ಆಗ ನಮಗೆ ಸಿಕ್ಕವರೇ 80 ವರ್ಷದ ಆರ್.‌ ಮೀನಾ. ಅವರು ಪಟಪಟನೆ ಮಲ್ಲಿಗೆ (ಪಿಚ್ಚಿ ಅಥವಾ ಜಾತಿ ಮಲ್ಲಿ) ಮೊಗ್ಗನ್ನು ಎತ್ತಿಕೊಂಡು ದಂಡೆ ನೇಯುತ್ತಿರುವುದನ್ನು ನಾವು ನೋಡಿದೆವು. ಅವರು ಕನ್ನಡಕ ಧರಿಸಿರಲಿಲ್ಲ. ನನ್ನ ಅಚ್ಚರಿಯ ಪ್ರಶ್ನೆಗೆ ಅವು ಕೆಲವು ಸೆಕೆಂಡುಗಳ ಕಾಲ ಮೌನವಾಗಿ ನಕ್ಕರು. “ಹೂವಿನ ಬಗ್ಗೆ ನನಗೆ ಗೊತ್ತು, ಆದರೆ ಜನರು ಹತ್ತಿರ ಬರದೆ ಗುರುತು ಹತ್ತುವುದಿಲ್ಲ” ಅವರ ಬೆರಳುಗಳು ಅನುಭವ ಮತ್ತು ಅಭ್ಯಾಸ ಬಲದಿಂದ ಚಲಿಸುತ್ತವೆ.

ಆದರೆ ಮೀನಾ ಅವರ ಪರಿಣತಿಗೆ ತಕ್ಕಂತೆ ಪ್ರತಿಫಲ ದೊರಕಿಲ್ಲ. ಅವರು 200 ಗ್ರಾಂ ಪಿಚ್ಚಿ ಮಲ್ಲೆ ಕಟ್ಟಿದರೆ 30 ರೂಪಾಯಿಗಳನ್ನು ಕೂಲಿಯಾಗಿ ನೀಡಲಾಗುತ್ತದೆ. ಎಂದರೆ ಅವರು ಸುಮಾರು 2,000 ಮೊಗ್ಗುಗಳನ್ನು ಕಟ್ಟಬೇಕು. ಅಷ್ಟು ಮಾಡಲು ಅವರಿಗೆ ಒಂದು ಗಂಟೆ ಬೇಕಾಗುತ್ತದೆ. ಒಂದು ಕಿಲೋ ಮಧುರೈ ಮಲ್ಲಿ (ಸುಮಾರು 4,000 - 5,000 ಮೊಗ್ಗುಗಳು) ಕಟ್ಟಿದರೆ ಅವರಿಗೆ 75 ರೂಪಾಯಿ ಸಿಗುತ್ತದೆ. ಅವರು ಇದೇ ಕೆಲಸವನ್ನು ಮಧುರೈಯಲ್ಲಿ ಮಾಡಿದರೆ ಇದರ ಎರಡರಷ್ಟು ಹಣ ಸಂಪಾದಿಸಬಹುದು. ತೋವಲೈಯಲ್ಲಿ ಅವರು ಒಳ್ಳೆಯ ದಿನಗಳಂದು ನೂರು ರೂಪಾಯಿ ಸಂಪಾದಿಸುವುದಾಗಿ ಕಟ್ಟಿದ ಹೂವನ್ನು ಚೆಂಡಾಗಿಸುತ್ತಾ ಹೇಳುತ್ತಾರೆ.

ಇದಕ್ಕೆ ವ್ಯತಿರಿಕ್ತವಾಗಿ, ಹೂಮಾಲೆಗಳು ಹೆಚ್ಚು ಹಣ ಗಳಿಸುತ್ತವೆ. ಮತ್ತು ಹೆಚ್ಚಾಗಿ ಅವುಗಳನ್ನು ಪುರುಷರು ತಯಾರಿಸುತ್ತಾರೆ.

Seated in her house (left) behind Thovalai market, expert stringer Meena threads (right) jasmine buds of the jathi malli variety. Now 80, she has been doing this job for decades and earns a paltry sum for her skills
PHOTO • M. Palani Kumar
Seated in her house (left) behind Thovalai market, expert stringer Meena threads (right) jasmine buds of the jathi malli variety. Now 80, she has been doing this job for decades and earns a paltry sum for her skills
PHOTO • M. Palani Kumar

ತೋವಲೈ ಮಾರುಕಟ್ಟೆಯ ಹಿಂಭಾಗದಲ್ಲಿರುವ ತನ್ನ ಮನೆಯಲ್ಲಿ (ಎಡಕ್ಕೆ) ಕುಳಿತಿರುವ ಅನುಭವಿ ಹೂ ಕಟ್ಟುವ ಕೆಲಸಗಾರರಾದ ಮೀನಾ ಜಾತಿ ಮಲ್ಲಿ ತಳಿಯ ಮಲ್ಲಿಗೆ ಮೊಗ್ಗುಗಳನ್ನು (ಬಲ) ಕಟ್ಟುತ್ತಾರೆ. ಈಗ ಅವರಿಗೆ 80 ವರ್ಷ, ಅವರು ದಶಕಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ಅವರ ಕೌಶಲಕ್ಕಾಗಿ ಅಲ್ಪ ಮೊತ್ತವನ್ನು ಗಳಿಸುತ್ತಾರೆ

ಮಧುರೈ ಪ್ರದೇಶದಲ್ಲಿ ಸುಮಾರು 1,೦೦೦ ಕಿಲೋ ಮಲ್ಲಿಗೆ ಹಾರ ಮತ್ತು ದಂಡೆಗಳಾಗಿ ಬದಲಾಗುತ್ತದೆ ಎಂದು ರಾಮಚಂದ್ರನ್‌ ಅಂದಾಜಿಸುತ್ತಾರೆ. ಆದರೆ ಕೆಲವು ಸಮಸ್ಯೆಗಳೂ ಇವೆ. ಹೂವುಗಳನ್ನು ಬೇಗ ಕಟ್ಟಿ ಮುಗಿಸಬೇಕು. ತಡವಾದರೆ ಮಧ್ಯಾಹ್ನದ ಬಿಸಿಲಿಗೆ “ಮೊಟ್ಟು ವಿಡಿಚಿಡುಮ್”‌ ಎಂದು ಮೊಗ್ಗು ಅರಳುವುದರ ಕುರಿತು ಹೇಳುತ್ತಾರೆ. ಒಮ್ಮೆ ಮೊಗ್ಗು ಅರಳಿದರೆ ಅದರ ಬೆಲೆ ಕಳೆದುಕೊಳ್ಳುತ್ತದೆ. “SIPCOT? [The State Industries Promotion Corporation of Tamil Nadu] ಇಲ್ಲಿ ಮಹಿಳೆಯರಿಗೆ ಒಂದಿಷ್ಟು ಜಾಗವನ್ನು ಯಾಕೆ ಒದಗಿಸಬಾರದು? ಅದು ಏರ್‌ ಕಂಡಿಷನ್‌ ಆಗಿದ್ದರೆ ಇನ್ನೂ ಒಳ್ಳೆಯದು. ಹೂವು ಅರಳುವುದಿಲ್ಲ. ಮಹಿಳೆಯರಿಗೂ ಕೆಲಸ ಮಾಡಲು ಸುಲಭವಾಗುತ್ತದೆ ಅಲ್ಲವೆ?” ಜೊತೆಗೆ ಇದಕ್ಕೆ ವೇಗವೂ ಮುಖ್ಯ. ಏಕೆಂದರೆ ಮಲ್ಲಿಗೆ ದಂಡೆಗಳನ್ನು ವಿದೇಶಗಳಿಗೆ ತಲುಪಿಸುವಾಗ ಅದು ಮೊಗ್ಗಾಗಿಯೇ ತಲುಪಬೇಕಿರುವುದು ಬಹಳ ಮುಖ್ಯ.

ನಾನು ಮಲ್ಲಿಗೆಯನ್ನು ಕೆನಡಾ ಮತ್ತು ದುಬೈಗೆ ರಫ್ತು ಮಾಡಿದ್ದೇನೆ. ಕೆನಡಾಕ್ಕೆ ಹೋಗಲು 36 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅದು ಅವರ ಕೈಯನ್ನು ತಾಜಾ ಇರುವಾಗಲೇ ತಲುಪಬೇಕು, ಅಲ್ಲವೇ?"

ಅವರಿಗೆ ಹೂಗಳನ್ನು ತಲುಪಿಸುವುದು ಸುಲಭದ ಕೆಲಸವಲ್ಲ. ಇದು ಹಲವು ತಡೆಗಳನ್ನು ಹೊಂದಿದೆ. ಹೂವು ವಿಮಾನವೇರುವ ಮೊದಲು ಹಲವು ಗಂಟೆಗಳ ಕಾಲ ರಸ್ತೆ ಪ್ರಯಾಣ ಮಾಡಬೇಕಿರುತ್ತದೆ. ಅದು ಕೊಚ್ಚಿ.ಚೆನೈ ಅಥವಾ ತಿರುವನಂತಪುರದಂತಹ ದೂರದ ಊರಿಗೆ ಹೋಗಿ ಅಲ್ಲಿಂದ ವಿಮಾನವೇರಬೇಕು. ಅವರು ಮಧುರೈ ಮಲ್ಲಿಗೆಯ ರಫ್ತು ಕೇಂದ್ರವಾಗಬೇಕೆಂದು ಒತ್ತಾಯಿಸುತ್ತಾರೆ.

ಅವರ ಮಗ ಪ್ರಸನ್ನ ಕೂಡಾ ಇದಕ್ಕೆ ದನಿ ಸೇರಿಸುತ್ತಾರೆ. “ನಮಗೆ ಎಕ್ಸ್‌ಪೋರ್ಟ್‌ ಕಾರಿಡಾರ್‌ ಮತ್ತು ಮಾರ್ಗದರ್ಶನ ಬೇಕು. ರೈತರಿಗೆ ಮಾರುಕಟ್ಟೆ ಸಹಾಯ ಬೇಕು. ಅಲ್ಲದೆ ಸಾಕಷ್ಟು ಪ್ಯಾಕರ್ಸ್‌ ಕೂಡ ಇಲ್ಲಿಲ್ಲ. ಅದಕ್ಕಾಗಿ ನಾವು ಕನ್ಯಾಕುಮಾರಿಯ ತೋವಲೈ ಅಥವಾ ಚೆನೈಗೆ ಹೋಗಬೇಕು. ಪ್ರತಿ ದೇಶಕ್ಕೂ ಅದರದ್ದೇ ಆದ ಪ್ರಮಾಣೀಕರಣಗಳು ಮತ್ತು ಮಾನದಂಡಗಳಿವೆ. ಈ ವಿಷಯದಲ್ಲಿ ರೈತರಿಗೆ ಮಾರ್ಗದರ್ಶನ ದೊರೆತರೆ ಸಹಾಯವಾಗುತ್ತದೆ.” ಎಂದು ಅವರು ಒತ್ತಿ ಹೇಳುತ್ತಾರೆ.

ಇದಲ್ಲದೆ, ಮಧುರೈ ಮಲ್ಲಿ 2013 ರಿಂದ ಭೌಗೋಳಿಕ ಸೂಚಕ ( ಜಿಐ ಟ್ಯಾಗ್ ) ಹೊಂದಿದೆ. ಆದರೆ ಪ್ರಸನ್ನ ಅವರಿಗೆ ಇದರಿಂದ ಪ್ರಾಥಮಿಕ ಉತ್ಪಾದಕರು ಮತ್ತು ವ್ಯಾಪಾರಿಗಳಿಗೆ ಪ್ರಯೋಜನವಾಗಿದೆ ಎನ್ನಿಸುವುದಿಲ್ಲ.

“ಮಧುರೈ ಮಲ್ಲಿಯ ಹೆಸರಿನಲ್ಲಿ ಬೇರೆಡೆಯ ಮಲ್ಲಿಗೆ ಹೂಗಳನ್ನು ಮಾರುವುದನ್ನು ನಾನು ನೋಡಿದ್ದೇನೆ.”

Left: The jasmine flowers being packed in palm leaf baskets in Thovalai.
PHOTO • M. Palani Kumar
Right: Varieties of jasmine are packed in lotus leaves which are abundant in Kanyakumari district. The leaves cushion the flowers and keep them fresh
PHOTO • M. Palani Kumar

ಎಡಕ್ಕೆ: ತೋವಲೈಯಲ್ಲಿ ಮಲ್ಲಿಗೆ ಹೂವುಗಳನ್ನು ತಾಳೆಗರಿ ಬುಟ್ಟಿಗಳಲ್ಲಿ ಪ್ಯಾಕ್ ಮಾಡಲಾಗುತ್ತಿದೆ. ಬಲ: ಕನ್ಯಾಕುಮಾರಿ ಜಿಲ್ಲೆಯಲ್ಲಿ ಹೇರಳವಾಗಿರುವ ಕಮಲದ ಎಲೆಗಳಲ್ಲಿ ವಿವಿಧ ರೀತಿಯ ಮಲ್ಲಿಗೆಗಳನ್ನು ಪ್ಯಾಕ್ ಮಾಡಲಾಗುತ್ತದೆ. ಎಲೆಗಳು ಹೂವುಗಳನ್ನು ಮೆತ್ತಗಿರಿಸುತ್ತವೆ ಮಾಡಿ ತಾಜಾವಾಗಿರಿಸುತ್ತವೆ

ಮಧುರೈಗೆ ತನ್ನದೇ ಆದ ಸುಗಂಧ ದ್ರವ್ಯದ ಕಾರ್ಖಾನೆ ಬೇಕು ಎಂದು ರಾಮಚಂದ್ರನ್‌ ತನ್ನ ಮಾತುಗಳನ್ನು ಮುಗಿಸಿದರು. ಇದು ಈ ಪ್ರದೇಶದ ಪ್ರತಿಯೊಬ್ಬ ವ್ಯಾಪಾರಿ ಮತ್ತು ರೈತರ ಬೇಡಿಕೆಯೂ ಹೌದು. ಅದು ಸರ್ಕಾರ ನಡೆಸುವ ಸಂಸ್ಥೆಯಾಗಿರಬೇಕು ಎನ್ನುವುದು ರಾಮಚಂದ್ರನ್‌ ಅವರ ಒತ್ತಾಯ. ಈ ಪ್ರದೇಶದ ಓಡಾಟದ ಸಮಯದಲ್ಲಿ ಹಲವರ ಬಾಯಿಯಿಂದ ಈ ಮಾತನ್ನು ನಾನು ಕೇಳಲ್ಪಟ್ಟಿದ್ದೇನೆ.ಹೂವಿನ ಪರಿಮಳವನ್ನು ಭಟ್ಟಿ ಇಳಿಸುವ ಕಾರ್ಖಾನೆಯಾದರೆ ಇಲ್ಲಿನ ಸಮಸ್ಯೆಗಳು ತೀರಬಹುದೆನ್ನುವ ನಂಬಿಕೆ ಇಲ್ಲಿನ ಜನರದು.

ಅವರ ಭೇಟಿಯ ಒಂದು ವರ್ಷದ ನಂತರ 2022ರಲ್ಲಿ ನಾವು ಮಧುರೈಗೆ ಹೋಗಿದ್ದ ಸಮಯದಲ್ಲಿ ರಾಮಚಂದ್ರನ್‌ ಯುಎಸ್‌ಗೆ ತೆರಳಿದ್ದರು. ಅಲ್ಲಿ ಈಗ ಅವರು ತಮ್ಮ ಮಗಳೊಡನೆ ಇದ್ದಾರೆ. ಆದರೆ ಅವರು ಮಲ್ಲಿಗೆಯ ವಿಷಯದಲ್ಲಿ ಈಗಲೂ ತಮ್ಮ ಹಿಡಿತವನ್ನು ಒಂದಿಷ್ಟೂ ಸಡಿಲಿಸಿಲ್ಲ. ಅವರು ಅಲ್ಲಿಂದಲೇ ರಫ್ತಿಗೆ ಅನುಕೂಲ ಮಾಡಿಕೊಡಲು ಶ್ರಮಿಸುತ್ತಿದ್ದಾರೆ ಎಂದು ರೈತರು ಮತ್ತು ಅವರ ಸಿಬ್ಬಂದಿ ಹೇಳುತ್ತಾರೆ. ಜೊತೆಗೆ ಅಲ್ಲಿಂದಲೇ ಅವರು ತಮ್ಮ ವ್ಯವಹಾರ ಮತ್ತು ಮಾರುಕಟ್ಟೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ.

*****

ಒಂದು ಸಂಸ್ಥೆಯಾಗಿ ಮಾರುಕಟ್ಟೆ ಶತಮಾನಗಳಿಂದ ಅಸ್ತಿತ್ವದಲ್ಲಿದೆ: ಇದರ ಕೆಲಸ ವಾಣಿಜ್ಯ ವಿನಿಮಯವನ್ನು ಸುಗಮಗೊಳಿಸುವುದು ಎಂದು ಸ್ವತಂತ್ರ ಭಾರತದಲ್ಲಿ ಆರ್ಥಿಕ ನೀತಿ ನಿರೂಪಣೆಯ ಇತಿಹಾಸದ ಮೇಲೆ ಕೆಲಸ ಮಾಡುತ್ತಿರುವ ಜಿನೀವಾ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ನ ಡಾಕ್ಟರೇಟ್ ಸಂಶೋಧಕ ರಘುನಾಥ್ ನಾಗೇಶ್ವರನ್ ವಿವರಿಸುತ್ತಾರೆ. "ಆದರೆ ಕಳೆದ ಒಂದು ಶತಮಾನದಲ್ಲಿ, ಇದನ್ನು ತಟಸ್ಥ ಮತ್ತು ಸ್ವಯಂ-ನಿಯಂತ್ರಿತ ಸಂಸ್ಥೆ ಎಂದು ಬಿಂಬಿಸಲಾಗಿದೆ. ವಾಸ್ತವವಾಗಿ, ಅದನ್ನು ಒಂದು ಪೀಠದ ಮೇಲೆ ಇರಿಸಲಾಗಿದೆ.

"ಅಂತಹ ದಕ್ಷ ಸಂಸ್ಥೆಯನ್ನು ಮುಕ್ತವಾಗಿ ಬಿಡಬೇಕು ಎಂಬ ಕಲ್ಪನೆಯನ್ನು ಸಾಮಾನ್ಯೀಕರಿಸಲಾಗಿದೆ. ಮತ್ತು ಮಾರುಕಟ್ಟೆಯಿಂದ ಉತ್ಪತ್ತಿಯಾಗುವ ಯಾವುದೇ ಅಸಮರ್ಥ ಫಲಿತಾಂಶವು ಸರ್ಕಾರದ ಅನಗತ್ಯ ಅಥವಾ ದಾರಿತಪ್ಪಿದ ಹಸ್ತಕ್ಷೇಪಕ್ಕೆ ಕಾರಣವಾಗಿದೆ. ಮಾರುಕಟ್ಟೆಯ ಈ ಶೈಲಿಯ ಪ್ರಾತಿನಿಧ್ಯವು ಐತಿಹಾಸಿಕವಾಗಿ ನಿಖರವಾಗಿಲ್ಲ."

"ಮುಕ್ತ ಮಾರುಕಟ್ಟೆ" ಎಂದು ಕರೆಯಲ್ಪಡುವುದರ ಕುರಿತಾಗಿ ರಘುನಾಥ್ ವಿವರಿಸುತ್ತಾರೆ, ಅಲ್ಲಿ "ಬೇರೆ ಬೇರೆ ಪಾತ್ರಗಳು ಬೇರೆ ಬೇರೆ ರೀತಿಯ ಸ್ವಾತಂತ್ರ್ಯವನ್ನು ಆನಂದಿಸುತ್ತಾರೆ." ನೀವು ಮಾರುಕಟ್ಟೆ ವಹಿವಾಟುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ, "ಅದೃಶ್ಯ ಕೈ ಎಂದು ಕರೆಯಲ್ಪಡುವ ಕೈ ಇದೆ, ಹೌದು, ಆದರೆ ಅಂತಹ  ಮಾರುಕಟ್ಟೆ ಶಕ್ತಿಯನ್ನು ಹೊಡೆಯುವ ಅತ್ಯಂತ ಗೋಚರ ಮುಷ್ಟಿಗಳೂ ಇವೆ. ವ್ಯಾಪಾರಿಗಳು ಮಾರುಕಟ್ಟೆಗಳ ಕಾರ್ಯನಿರ್ವಹಣೆಗೆ ಕೇಂದ್ರವಾಗಿದ್ದಾರೆ, ಆದರೆ ಅವರು ಶಕ್ತಿಯುತ ಪಾತ್ರಗಳು ಎಂಬ ಅಂಶವನ್ನು ಗುರುತಿಸುವುದು ಮುಖ್ಯ ಏಕೆಂದರೆ ಅವರು ಅಮೂಲ್ಯವಾದ ಮಾಹಿತಿಯ ಭಂಡಾರವೂ ಹೌದು."

ರಘುನಾಥ್ ಹೇಳುತ್ತಾರೆ, "ಮಾಹಿತಿಯ ಅಸಮಾನತೆಯು ಶಕ್ತಿಯ ಉತ್ತಮ ಮೂಲವಾಗಿದೆ ಎಂದು ಅರಿತುಕೊಳ್ಳಲು ಪಂಡಿತರ ಪ್ರಬಂಧಗಳನ್ನು ಓದುವ ಅಗತ್ಯವಿಲ್ಲ. ಮಾಹಿತಿಯ ಇಂತಹ ಅಸಮಾನ ಪ್ರವೇಶವು ಜಾತಿ, ವರ್ಗ ಮತ್ತು ಲಿಂಗ ಅಂಶಗಳ ಕಾರ್ಯವಾಗಿದೆ. ನಾವು ಹೊಲ ಮತ್ತು ಕಾರ್ಖಾನೆಯಿಂದ ಭೌತಿಕ ಉತ್ಪನ್ನಗಳನ್ನು ಖರೀದಿಸಿದಾಗ ಅಥವಾ ನಮ್ಮ ಸ್ಮಾರ್ಟ್‌ ಫೋನುಗಳಲ್ಲಿ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿದಾಗ, ನಾವು ವೈದ್ಯಕೀಯ ಸೇವೆಗಳನ್ನು ಪ್ರವೇಶಿಸಿದಾಗ ನಾವು ಅದನ್ನು ಮೊದಲು ಅನುಭವಿಸುತ್ತೇವೆ, ಅಲ್ಲವೇ?" ಎಂದು ಅವರು ಕೇಳುತ್ತಾರೆ.

Left: An early morning at the flower market, when it was functioning behind the Mattuthavani bus-stand in September 2021, due to covid restrictions.
PHOTO • M. Palani Kumar
Right: Heaps of jasmine buds during the brisk morning trade. Rates are higher when the first batch comes in and drops over the course of the day
PHOTO • M. Palani Kumar

ಎಡ: ಕೋವಿಡ್ ನಿರ್ಬಂಧಗಳಿಂದಾಗಿ 2021 ರ ಸೆಪ್ಟೆಂಬರ್ನಲ್ಲಿ ಮಟ್ಟುತವಾನಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೂವಿನ ಮಾರುಕಟ್ಟೆಯಲ್ಲಿ ಒಂದು ಮುಂಜಾನೆ. ಬಲ: ಬೆಳಗಿನ ಚುರುಕಾದ ವ್ಯಾಪಾರದ ಸಮಯದಲ್ಲಿ ಮಲ್ಲಿಗೆ ಮೊಗ್ಗುಗಳ ರಾಶಿ. ಮೊದಲ ಬ್ಯಾಚ್ ಬಂದಾಗ ಮತ್ತು ದಿನದ ಅವಧಿಯಲ್ಲಿ ಇಳಿದಾಗ ದರಗಳು ಹೆಚ್ಚಾಗಿರುತ್ತವೆ

Left: Jasmine in an iron scale waiting to be sold.
PHOTO • M. Palani Kumar
Right: A worker measures and cuts banana fibre that is used to make garlands. The thin strips are no longer used to string flowers
PHOTO • M. Palani Kumar

ಎಡ: ಕಬ್ಬಿಣದ ತಕ್ಕಡಿಯಲ್ಲಿ ಮಲ್ಲಿಗೆ ಮಾರಾಟಕ್ಕಾಗಿ ಕಾಯುತ್ತಿದೆ. ಬಲ: ಒಬ್ಬ ಕೆಲಸಗಾರನು ಹೂಮಾಲೆಗಳನ್ನು ತಯಾರಿಸಲು ಬಳಸುವ ಬಾಳೆ ನಾರನ್ನು ಅಳೆದು ಕತ್ತರಿಸುತ್ತಿರುವುದು. ಈ ಪಟ್ಟಿಗಳನ್ನು ಈಗ ಹೂ ಕಟ್ಟಲು ಹೆಚ್ಚು ಬಳಸಲಾಗುತ್ತಿಲ್ಲ

"ಸರಕು ಮತ್ತು ಸೇವೆಗಳ ಉತ್ಪಾದಕರು ತಮ್ಮ ಉತ್ಪನ್ನಗಳ ಬೆಲೆಯನ್ನು ನಿಗದಿಪಡಿಸುವುದರಿಂದ ಮಾರುಕಟ್ಟೆ ಅಧಿಕಾರವನ್ನು ಚಲಾಯಿಸುತ್ತಾರೆ. ಮಾನ್ಸೂನ್ ಅಪಾಯ ಮತ್ತು ಮಾರುಕಟ್ಟೆ ಅಪಾಯಕ್ಕೆ ಒಳಗಾಗುವುದರಿಂದ ತಮ್ಮ ಉತ್ಪಾದನೆಯ ಬೆಲೆಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಿರದ ಉತ್ಪಾದಕರು ಇದ್ದಾರೆ. ನಾವು ಕೃಷಿ ಉತ್ಪನ್ನಗಳ ಉತ್ಪಾದಕರು, ರೈತರ ಬಗ್ಗೆ ಮಾತನಾಡುತ್ತಿದ್ದೇವೆ.

"ಜೊತೆಗ ರೈತರಲ್ಲೂ ಹಲವು ವರ್ಗಗಳಿವೆ, ಹೀಗಿರುವಾಗ ನಾವು ಸಣ್ಣ ವಿವರಗಳನ್ನು ಕೂಡಾ ಗಮನಿಸಬೇಕು" ಎಂದು ರಘುನಾಥ್ ಹೇಳುತ್ತಾರೆ. "ಮತ್ತು ಸಂದರ್ಭಕ್ಕೆ ಅನುಗುಣವಾಗಿ. ಈ ಮಲ್ಲಿಗೆ ಕಥೆಯಿಂದ ಉದಾಹರಣೆಗಳನ್ನು ತೆಗೆದುಕೊಳ್ಳೋಣ. ಸುಗಂಧ ದ್ರವ್ಯ ತಯಾರಿಕೆಯಲ್ಲಿ ಸರ್ಕಾರ ನೇರವಾಗಿ ಭಾಗಿಯಾಗಬೇಕೇ? ಅಥವಾ ಮಾರುಕಟ್ಟೆ ಸೌಲಭ್ಯಗಳನ್ನು ಸೃಷ್ಟಿಸುವ ಮೂಲಕ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ರಫ್ತು ಕೇಂದ್ರವನ್ನು ಸ್ಥಾಪಿಸುವ ಮೂಲಕ ಮಧ್ಯಪ್ರವೇಶಿಸಬೇಕೇ?

*****

ಮಲ್ಲಿಗೆ ಒಂದು ದುಬಾರಿ ಹೂವು. ಐತಿಹಾಸಿಕವಾಗಿ, ಮೊಗ್ಗುಗಳು ಮತ್ತು ಹೂವುಗಳು, ಗಿಡಗಳು ಮತ್ತು ಬೇರುಗಳು, ಗಿಡಮೂಲಿಕೆಗಳು ಮತ್ತು ತೈಲಗಳು, ಸುಗಂಧ ದ್ರವ್ಯಗಳು ಹಲವು ಬಗೆಯಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿವೆ; ಪೂಜಾ ಸ್ಥಳಗಳಲ್ಲಿ, ಭಕ್ತಿಯನ್ನು ಪ್ರಚೋದಿಸಲು; ಅಡುಗೆಮನೆಯಲ್ಲಿ, ರುಚಿಯನ್ನು ಹೆಚ್ಚಿಸಲು; ಮಲಗುವ ಕೋಣೆಯಲ್ಲಿ, ಬಯಕೆಯನ್ನು ತೀಕ್ಷ್ಣಗೊಳಿಸಲು. ಶ್ರೀಗಂಧ, ಕರ್ಪೂರ, ಏಲಕ್ಕಿ, ಕೇಸರಿ, ಗುಲಾಬಿ ಮತ್ತು ಮಲ್ಲಿಗೆ - ಇವು ಹಲವಾರು ಇತರವುಗಳ ನಡುವೆ, ಅಪ್ರತಿಮ ಮತ್ತು ಪರಿಚಿತ ಪರಿಮಳಗಳಾಗಿವೆ. ಏಕೆಂದರೆ ಅವುಗಳನ್ನು ಸಾಮಾನ್ಯವಾಗಿ ಎಲ್ಲೆಡೆ ಬಳಸಲಾಗುತ್ತದೆ ಮತ್ತು ಸುಲಭವಾಗಿ ಲಭ್ಯವಿವೆ, ಅವು ಅಸಾಧಾರಣವೆಂದು ನಮಗೆ ತೋರುವುದಿಲ್ಲ. ಆದರೆ ಸುಗಂಧ ದ್ರವ್ಯ ಉದ್ಯಮವು ನಿಮಗೆ ಬೇರೆ ರೀತಿಯ ಕತೆ ಹೇಳುತ್ತದೆ.

ಪರಿಮಳ ದ್ರವ್ಯ ಉದ್ಯಮದ ಕಾರ್ಯಚಟುವಟಿಕೆಗಳಲ್ಲಿ ನಮ್ಮ ಶಿಕ್ಷಣವು ಈಗಷ್ಟೇ ಪ್ರಾರಂಭವಾಗಿದೆ.

ಮೊದಲ ಮತ್ತು ಪ್ರಾಥಮಿಕ ಹಂತವು 'ನಿರ್ದಿಷ್ವಾಗಿರುತ್ತದೆ', ಹೂಗಳ ಸಾರವನ್ನು ಆಹಾರ ದರ್ಜೆಯ ದ್ರಾವಕವನ್ನು ಬಳಸಿಕೊಂಡು ಹೊರತೆಗೆಯಲಾಗುತ್ತದೆ. ಪರಿಣಾಮವಾಗಿ ಸಾರವು ಲೋಳೆಯಾಗಿರುತ್ತದೆ. ಅದರಲ್ಲಿನ ಅಂಟು ಅಂಶವನ್ನು ತೆಗೆದುಹಾಕಿದ ನಂತರ, ಅದು ಪೂರ್ಣ ದ್ರವ ಆಗುತ್ತದೆ, ಇದು ಆಲ್ಕೋಹಾಲ್‌ ಘಟಕದಲ್ಲಿ ಕರಗುವುದರಿಂದ ಅತ್ಯಂತ ಬಳಕೆದಾರ ಸ್ನೇಹಿ ಘಟಕಾಂಶವಾಗಿದೆ.

ಒಂದು ಕಿಲೋ ʼಅಪ್ಪಟ ಮಲ್ಲಿಗೆ ದ್ರವ (absolute)ʼ ಸರಿಸುಮಾರು 3,26,000 ರೂ.ಗಳಿಗೆ ಮಾರಾಟವಾಗುತ್ತದೆ.

Jathi malli strung together in a bundle
PHOTO • M. Palani Kumar

ಜಾತಿ ಮಲ್ಲಿಗೆಯ ದಂಡೆಯ ಕಟ್ಟು

ರಾಜಾ ಪಳನಿಸ್ವಾಮಿ, ಜಾಸ್ಮಿನ್ ಸಿಇ ಪ್ರೈವೇಟ್ ಲಿಮಿಟೆಡ್ (ಜೆಸಿಇಪಿಎಲ್) ನಿರ್ದೇಶಕರಾಗಿದ್ದಾರೆ. ಕಂಪನಿಯು ಮಲ್ಲಿಗೆ ಸಾಂಬಾಕ್ ಕಾಂಕ್ರೀಟ್ ಸೇರಿದಂತೆ ವಿವಿಧ ಹೂವಿನ ಸಾರಗಳ ಏಕೈಕ ಅತಿದೊಡ್ಡ ತಯಾರಕ ಕಂಪನಿಯಾಗಿದೆ. ಒಂದು ಕಿಲೋ ಮಲ್ಲಿಗೆ ಸಾಂಬಾಕ್ ಪಡೆಯಲು, ನಿಮಗೆ ಒಂದು ಟನ್ ಗುಂಡು ಮಲ್ಲಿ (ಅಥವಾ ಮಧುರೈ ಮಲ್ಲಿ) ಹೂವುಗಳು ಬೇಕಾಗುತ್ತವೆ ಎಂದು ಅವರು ನಮಗೆ ವಿವರಿಸುತ್ತಾರೆ. ತಮ್ಮ ಚೆನ್ನೈ ಕಚೇರಿಯಲ್ಲಿ ಕುಳಿತು, ಅವರು ಜಾಗತಿಕ ಸುಗಂಧ ಉದ್ಯಮದ ಬಗ್ಗೆ ನನಗೆ ಒಳನೋಟವನ್ನು ನೀಡಿದರು.

ಮೊದಲನೆಯದಾಗಿ, "ನಾವು ಸುಗಂಧ ದ್ರವ್ಯಗಳನ್ನು ತಯಾರಿಸುವುದಿಲ್ಲ. ನಾವು ನೈಸರ್ಗಿಕ ಪದಾರ್ಥಗಳನ್ನು ಉತ್ಪಾದಿಸುತ್ತೇವೆ, ಇದು ಸುಗಂಧ ಅಥವಾ ಸುಗಂಧ ದ್ರವ್ಯದ ತಯಾರಿಕೆಗೆ ಬೇಕಾಗುವ ಅನೇಕ ಘಟಕಗಳಲ್ಲಿ ಒಂದಾಗಿದೆ.” ಎಂದು ಅವರು ನಮಗೆ ಅರ್ಥ ಮಾಡಿಸಿದರು.

ಅವರು ಸಂಸ್ಕರಿಸುವ ನಾಲ್ಕು ರೀತಿಯ ಮಲ್ಲಿಗೆಗಳಲ್ಲಿ, ಎರಡು ಪ್ರಮುಖವಾದವು: ಜಾಸ್ಮಿನ್ ಗ್ರ್ಯಾಂಡಿಫ್ಲೋರಮ್ (ಜಾತಿ ಮಲ್ಲಿ) ಮತ್ತು ಜಾಸ್ಮಿನ್ ಸಾಂಬಾಕ್ (ಗುಂಡು ಮಲ್ಲಿ). ಮತ್ತು ಇವುಗಳಲ್ಲಿ ಮೊದಲನೆಯದರಲ್ಲಿ 'ಸಂಪೂರ್ಣ ಮಲ್ಲಿಗೆ ದ್ರವದ' ಕೊಡುಗೆ ಕಿಲೋಗ್ರಾಂಗೆ 3,000 ಮೇರಿಕನ್‌ ಡಾಲರ್. ಗುಂಡುಮಲ್ಲಿಯ 'ಸಂಪೂರ್ಣ ಮಲ್ಲಿಗೆ ದ್ರವ'ದ ಬೆಲೆ ಕಿಲೋ ಒಂದಕ್ಕೆ ಸುಮಾರು 4,000 ಯುಎಸ್ ಡಾಲರ್.

"ಮೂಲ ಮತ್ತು ಸಂಪೂರ್ಣ ರೂಪಾಂತರಗಳ ಬೆಲೆಗಳು ಹೂವುಗಳ ಬೆಲೆಗಳ ಮೇಲೆ ಮಾತ್ರ ಅವಲಂಬಿತವಾಗಿವೆ ಮತ್ತು ಐತಿಹಾಸಿಕವಾಗಿ ಹೂವುಗಳ ಬೆಲೆಗಳು ಮಾತ್ರ ಏರಿಕೆಯಾಗಿವೆ. ವರ್ಷದಿಂದ ವರ್ಷಕ್ಕೆ ಸಣ್ಣ ವಿಪತ್ತುಗಳು ಇರಬಹುದು, ಆದರೆ ದೀರ್ಘಕಾಲೀನ ಪ್ರವೃತ್ತಿಯನ್ನು ನೋಡಿದರೆ, ಬೆಲೆಗಳು ಏರುತ್ತಾ ಹೋಗಿವೆ" ಎಂದು ರಾಜಾ ಪಳನಿಸ್ವಾಮಿ ಹೇಳುತ್ತಾರೆ. ಅವರ ಕಂಪನಿಯು ವಾರ್ಷಿಕವಾಗಿ 1,000 ರಿಂದ 1,200 ಟನ್ ಮಧುರೈ ಮಲ್ಲಿಯನ್ನು (ಗುಂಡು ಮಲ್ಲಿ ಎಂದೂ ಕರೆಯಲಾಗುತ್ತದೆ) ಸಂಸ್ಕರಿಸುತ್ತದೆ ಎಂದು ರಾಜಾ ಹೇಳುತ್ತಾರೆ. ಇದು ಸುಮಾರು 1 ರಿಂದ 1.2 ಟನ್ ಜಾಸ್ಮಿನ್ ಸಾಂಬಾಕ್ ಪರಿಪೂರ್ಣ ದ್ರವವನ್ನು ನೀಡುತ್ತದೆ, ಸುಮಾರು 3.5 ಟನ್ ಜಾಸ್ಮಿನ್ ಸಾಂಬಾಕ್ ಸಂಪೂರ್ಣ ಜಾಗತಿಕ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ. ಒಟ್ಟಾರೆಯಾಗಿ, ತಮಿಳುನಾಡಿನ ರಾಜಾ ಅವರ ಎರಡು ದೊಡ್ಡ ಕಾರ್ಖಾನೆಗಳು ಮತ್ತು ಇತರ ಕೆಲವು ಉತ್ಪಾದಕರನ್ನು ಒಳಗೊಂಡಿರುವ ಭಾರತದ ಸುಗಂಧ ದ್ರವ್ಯ ಉದ್ಯಮವು "ಒಟ್ಟು ಸಾಂಬಾಕ್ ಹೂವಿನ ಉತ್ಪಾದನೆಯ ಶೇಕಡಾ 5ಕ್ಕಿಂತ ಕಡಿಮೆ" ಪ್ರಮಾಣವನ್ನು ಬಳಸುತ್ತದೆ.

ಅವರು ಹೇಳಿದ ಸಂಖ್ಯೆಯು ನಮ್ಮನ್ನು ಅಚ್ಚರಿಗೆ ದೂಡಿತ್ತು. ನಾವು ಮಾತನಾಡಿದ ಪ್ರತಿ ರೈತ, ಏಜೆಂಟ್‌ ಎಲ್ಲರೂ “ಸೆಂಟ್‌ ಫ್ಯಾಕ್ಟರಿ” ಎಷ್ಟು ಮುಖ್ಯವೆನ್ನುವುದನ್ನು ವಿವರಿಸುತ್ತಿದ್ದರು. ಇದಕ್ಕೆ ರಾಜ ಅವರು ಕೇವಲ ಮುಗುಳ್ನಗೆಯ ಪ್ರತಿಕ್ರಿಯೆ ನೀಡಿದರು. "ಒಂದು ಉದ್ಯಮವಾಗಿ ನಾವು ಹೂವುಗಳ ಅತ್ಯಂತ ಸಣ್ಣ ಗ್ರಾಹಕರಾಗಿದ್ದೇವೆ, ಆದರೆ ರೈತರು ಲಾಭ ಗಳಿಸುವುದನ್ನು ಖಚಿತಪಡಿಸಿಕೊಳ್ಳುವುದರಲ್ಲಿ ಮತ್ತು ಕನಿಷ್ಠ ಬೆಲೆಯನ್ನು ಕಾಪಾಡಿಕೊಳ್ಳುವಲ್ಲಿ ನಾವು ಪ್ರಮುಖ ಪಾತ್ರ ವಹಿಸುತ್ತೇವೆ. ರೈತರು ಮತ್ತು ವ್ಯಾಪಾರಿಗಳು ವರ್ಷಪೂರ್ತಿ ಹೂವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಇಷ್ಟಪಡುತ್ತಾರೆ. ಸೌಂದರ್ಯ ಸಾಧನ ಮತ್ತು ಸುಗಂಧ ದ್ರವ್ಯಗಳದ್ದು ಆಡಂಬರದ ಉದ್ಯಮ, ಇಲ್ಲಿ ಬಹಳ ದೊಡ್ಡ ಲಾಭವಿದೆ ಎಂದು ಜನರು ನಂಬುತ್ತಾರೆ. ಆದರೆ ಇದೊಂದು ಸರಕು ಮಾರುಕಟ್ಟೆ ಮಾತ್ರ

Pearly white jasmine buds on their way to other states from Thovalai market in Kanyakumari district
PHOTO • M. Palani Kumar

ಕನ್ಯಾಕುಮಾರಿ ಜಿಲ್ಲೆಯ ತೋವಲೈ ಮಾರುಕಟ್ಟೆಯಿಂದ ಇತರ ರಾಜ್ಯಗಳಿಗೆ ಹೋಗುವ ದಾರಿಯಲ್ಲಿ ಮುತ್ತಿನಂತಹ ಬಿಳಿ ಮಲ್ಲಿಗೆ ಮೊಗ್ಗುಗಳು

ಈ ಹೂವಿನ ಮಾತುಕತೆ ಭಾರತದಿಂದ ಫ್ರಾನ್ಸ್‌ ತನಕವೂ ಹಬ್ಬುತ್ತದೆ. ಮಧುರೈ ಮಾರುಕಟ್ಟೆಯ ಮಲ್ಲಿಗೆಯ ಸುಗಂಧವು ಜಗತ್ತಿನ ಕೆಲವು ವಿಶ್ವ ವಿಖ್ಯಾತ ಸುಗಂಧ ದ್ರವ್ಯ ಕಂಪನಿಗಳಾದ Dior, Guerlain, Lush, Bulgari ಸೇರಿದಂತೆ ಹಲವು ಗ್ರಾಹಕರನ್ನು ತಲುಪುತ್ತದೆ. ಈ ಎರಡು ಜಗತ್ತುಗಳು ಪರಸ್ಪರ ದೂರವಿದ್ದರೂ ಹತ್ತಿರದ ಸಂಬಂಧವನ್ನು ಹೊಂದಿವೆ.

ಫ್ರಾನ್ಸ್ ಸುಗಂಧ ದ್ರವ್ಯಗಳ ಜಾಗತಿಕ ರಾಜಧಾನಿಯಾಗಿದೆ. ಕಳೆದ ಐದು ದಶಕಗಳಿಂದ ಅವರು ಭಾರತದಿಂದ ಮಲ್ಲಿಗೆ ಸಾರವನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಸ್ಥಳೀಯವಾಗಿ ಜಾಸ್ಮಿನಮ್ ಗ್ರ್ಯಾಂಡಿಫ್ಲೋರಮ್ ಅಥವಾ ಜಾತಿ ಮಲ್ಲಿ ಎಂದು ಕರೆಯಲ್ಪಡುವ ಅದನ್ನು ಹುಡುಕಿಕೊಂಡು ಅವರು ಬಂದರು ಎಂದು ರಾಜಾ ವಿವರಿಸುತ್ತಾರೆ. "ಮತ್ತು ಇಲ್ಲಿ, ಅವರು ಅನೇಕ ವಿಭಿನ್ನ ಹೂವುಗಳ ದೊಡ್ಡ ನಿಧಿಯನ್ನು ಕಂಡುಕೊಂಡರು, ಅವುಗಳಲ್ಲಿ ಅನೇಕ ವಿಧಗಳು ಸೇರಿವೆ."

1999ರಲ್ಲಿ Dior ಸಂಸ್ಥೆಯಿಂದ ಅಪ್ರತಿಮ ಫ್ರೆಂಚ್ ಸುಗಂಧ ದ್ರವ್ಯವಾದ J’adore ಅನ್ನು ಬಿಡುಗಡೆ ಮಾಡಲಾಯಿತು. ಸುಗಂಧ ದ್ರವ್ಯ ತಯಾರಕನ ಟಿಪ್ಪಣಿಯು ವೆಬ್ಸೈಟಿನಲ್ಲಿ ಹೀಗೆ ಹೇಳುತ್ತದೆ, "ಅಸ್ತಿತ್ವದಲ್ಲಿಲ್ಲದ ಹೂವನ್ನು ಆವಿಷ್ಕರಿಸಲಾಗಿದೆ, ಇದೊಂದು ಆದರ್ಶಯುತ ಹೂವು." ಮತ್ತು ಈ ಆದರ್ಶ ಹೂವು ಭಾರತೀಯ ಮಲ್ಲಿಗೆ ಸಾಂಬಾಕ್ ಅನ್ನು ಒಳಗೊಂಡಿದೆ, ಅದರ "ತಾಜಾ ಮತ್ತು ಹಸಿರು ಟಿಪ್ಪಣಿಗಳು" ಎಂದು ರಾಜಾ ವಿವರಿಸುತ್ತಾರೆ, "ಇದು ಟ್ರೆಂಡ್ ಆಯಿತು." ಮತ್ತು ಮಧುರೈ ಮಲ್ಲಿಯನ್ನು Dior " ವೈಭವೋಪೇತ ಜಾಸ್ಮಿನ್ ಸಾಂಬಾಕ್" ಎಂದು ಕರೆಯುತ್ತದೆ. ಚಿನ್ನದ ಗೆರೆಗಳು ಇರುವ ಸಣ್ಣ ಬಾಟಲಿ ದ್ರವ್ಯ ಫ್ರಾನ್ಸ್‌ ಹಾಗೂ ಅದರಾಚೆ ತನ್ನ ಮಾರುಕಟ್ಟೆಯನ್ನು ಕಂಡಿದೆ.

ಆದರೆ ಅದಕ್ಕೂ ಬಹಳ ಹಿಂದೆಯೇ, ಮಧುರೈ ಮತ್ತು ಸುತ್ತಮುತ್ತಲಿನ ಹೂವಿನ ಮಾರುಕಟ್ಟೆಗಳಿಂದ ಹೂವುಗಳನ್ನು ಕೊಳ್ಳಲಾಗುತ್ತಿತ್ತು. ಆದರೆ ಪ್ರತಿ ದಿನ ಕೊಳ್ಳುತ್ತಿರಲಿಲ್ಲ. ವರ್ಷದ ಹಲವು ದಿನಗಳಲ್ಲಿ ಮಲ್ಲಿಗೆಯ ಬೆಲೆ ವಿಪರೀತವಿರುತ್ತಿತ್ತು.

"ಈ ಹೂವಿನ ಮಾರುಕಟ್ಟೆಗಳ ಹೂವುಗಳ ಬೇಡಿಕೆ ಮತ್ತು ಪೂರೈಕೆಯ ಮೇಲೆ ಪ್ರಭಾವ ಬೀರುವ ಎಲ್ಲಾ ಅಂಶಗಳ ಬಗ್ಗೆ ನಾವು ಸ್ಪಷ್ಟ ತಿಳುವಳಿಕೆಯನ್ನು ಹೊಂದಿರಬೇಕು" ಎಂದು ರಾಜಾ ಹೇಳುತ್ತಾರೆ. "ನಾವು ಮಾರುಕಟ್ಟೆಗಳಲ್ಲಿ ಖರೀದಿದಾರ / ಸಂಯೋಜಕರನ್ನು ಹೊಂದಿದ್ದೇವೆ ಮತ್ತು ಅವರು ಅಲ್ಲಿನ ಬೆಲೆಗಳನ್ನು ಬಹಳ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಾರೆ. ನಾವು ನಮ್ಮದೇ ಆದ ನಿಗದಿತ ಖರೀದಿ ಬೆಲೆ ಹೊಂದಿರುತ್ತೇವೆ. ಉದಾಹರಣೆಗೆ 120 ಬೆಲೆ ನಿಗದಿಪಡಿಸಿಕೊಂಡು ಆ ಬೆಲೆಗಾಗಿ ಕಾಯುತ್ತೇವೆ. ಬೆಲೆ ನಿಗದಿಯಲ್ಲಿ ನಮಗೆ ಯಾವುದೇ ಪಾತ್ರವಿಲ್ಲ" ಎಂದು ಅವರು ಹೇಳುತ್ತಾರೆ, ಮಾರುಕಟ್ಟೆ ದರವನ್ನು ನಿರ್ಧರಿಸುತ್ತದೆ.

"ನಾವು ಮಾರುಕಟ್ಟೆಯನ್ನು ಕಾದು ನೋಡುತ್ತೇವೆ. ಮತ್ತು ಈ ಪ್ರಮಾಣವನ್ನು ಸಂಗ್ರಹಿಸುವಲ್ಲಿ ನಾವು 15 ವರ್ಷಗಳ ಅನುಭವವನ್ನು ಹೊಂದಿರುವುದರಿಂದ - ಕಂಪನಿಯು ಸ್ವತಃ 1991 ರಲ್ಲಿ ಪ್ರಾರಂಭವಾಯಿತು – ಆಯಾ ಹಂಗಾಮಿನ ಬೆಲೆಯನ್ನು ಅಂದಾಜಿಸಬಲ್ಲೆವು. ಪೂರೈಕೆ ದೊಡ್ಡ ಮಟ್ಟದಲ್ಲಿದ್ದಾಗ ನಾವು ಹೂವು ಹೆಚ್ಚ್ ಕೊಳ್ಳುತ್ತೇವೆ ಮತ್ತು ಆ ಸಮಯದಲ್ಲಿ ನಮ್ಮ ಖರೀದಿ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ನಾವು ಪ್ರಯತ್ನಿಸುತ್ತೇವೆ."

Brisk trade at the Mattuthavani flower market in Madurai
PHOTO • M. Palani Kumar

ಮಧುರೈನ ಮಟ್ಟುತವಾನಿ ಹೂವಿನ ಮಾರುಕಟ್ಟೆಯಲ್ಲಿ ಚುರುಕಿನ ವ್ಯಾಪಾರ

ಈ ಮಾದರಿಯಿಂದಾಗಿಯೇ ಅವರ ಸಾಮರ್ಥ್ಯದ ಬಳಕೆಯು ತುಂಬಾ ಅನಿಯಮಿತವಾಗಿದೆ ಎಂದು ರಾಜಾ ಹೇಳುತ್ತಾರೆ. "ಇಲ್ಲಿ ಪ್ರತಿದಿನ ಪ್ರಮಾಣಿತ ಪ್ರಮಾಣದ ಹೂವುಗಳನ್ನು ಪಡೆಯಲಾಗುವುದಿಲ್ಲ, ಇದು ಉಕ್ಕಿನ ಕಾರ್ಖಾನೆಯಂತೆ ಅಲ್ಲ, ಅಲ್ಲಿ ನೀವು ಕಬ್ಬಿಣದ ಅದಿರನ್ನು ಸಾಲಾಗಿ ಇರಿಸಿಕೊಂಡಿರುತ್ತೀರಿ ಮತ್ತು ನಿಮ್ಮ ಯಂತ್ರವು ವರ್ಷಪೂರ್ತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ, ನಾವು ಹೂವುಗಳಿಗಾಗಿ ಕಾಯುತ್ತೇವೆ. ಆದ್ದರಿಂದ ನಮ್ಮ ಸಾಮರ್ಥ್ಯವನ್ನು ದೊಡ್ಡ ಪ್ರಮಾಣವನ್ನು ನಿಭಾಯಿಸಲು ಸಾಧ್ಯವಾಗುವಂತೆ ಇಷ್ಟು ದೊಡ್ಡ ರೀತಿಯಲ್ಲಿ ನಿರ್ಮಿಸಲಾಗಿದೆ."

ಅಂತಹ ದೊಡ್ಡ ಪ್ರಮಾಣದಲ್ಲಿ ಸಂಸ್ಕರಿಸುವಂತಹ ದಿನಗಳು ವರ್ಷದಲ್ಲಿ 20ರಿಂದ 25 ದಿನಗಳಿರಬಹುದು. "ಆ ದಿನಗಳಲ್ಲಿ ನಾವು ದಿನಕ್ಕೆ ಸುಮಾರು 12ರಿಂದ 15 ಟನ್ ಹೂವುಗಳನ್ನು ಸಂಸ್ಕರಿಸುತ್ತೇವೆ. ಉಳಿದ ಸಮಯದಲ್ಲಿ, 1ರಿಂದ 3 ಟನ್ ತನಕ ಸಣ್ಣ ಪ್ರಮಾಣದಲ್ಲಿ ಹೂ ಸಿಗುತ್ತದೆ, ಅಥವಾ ಕೆಲವೊಮ್ಮೆ ಏನೂ ಸಿಗುವುದಿಲ್ಲ."

ಸ್ಥಿರ ಬೆಲೆಯನ್ನು ಒದಗಿಸಲು ಕಾರ್ಖಾನೆಯನ್ನು ಸ್ಥಾಪಿಸುವಂತೆ ರೈತರು ಸರ್ಕಾರವನ್ನು ವಿನಂತಿಸುತ್ತಿರುವ ಕುರಿತಾದ ನನ್ನ ಪ್ರಶ್ನೆಗೆ ರಾಜಾ ಉತ್ತರಿಸುತ್ತಾರೆ. "ಬೇಡಿಕೆಯಲ್ಲಿನ ಅನಿಶ್ಚಿತತೆ ಮತ್ತು ಚಂಚಲತೆಯು ವ್ಯವಹಾರಕ್ಕೆ ಪ್ರವೇಶಿಸದಂತೆ ಸರ್ಕಾರವನ್ನು ನಿರುತ್ಸಾಹಗೊಳಿಸಬಹುದು. ರೈತರು ಮತ್ತು ವ್ಯಾಪಾರಿಗಳು ಸಾಮರ್ಥ್ಯವನ್ನು ಕಂಡರೂ, ಸರ್ಕಾರಕ್ಕೆ ಇದೊಂದು ವ್ಯವಹಾರದ ಸಾಧ್ಯತೆಯಾಗಿ ಕಂಡಿಲ್ಲದೆ ಇಲ್ಲದಿರಬಹುದು" ಎಂದು ರಾಜಾ ವಾದಿಸುತ್ತಾರೆ. "ಅವರು ಉತ್ಪಾದನೆಗೆ ಬಂದರೆ ಅವರು ಇನ್ನೊಬ್ಬ ಉದ್ಯಮಿಯಾಗುತ್ತಾರೆ. ಇತರರನ್ನು ಈ ಉತ್ಪಾನೆಯಿಂದ ದೂರವಿರಿಸಿ ಏಕಸ್ವಾಮ್ಯವನ್ನು ಪಡೆಯದೆ ಹೋದರೆ ಅವರೂ ಒಂದಷ್ಟು ರೈತರಿಂದ ಹೂವು ಖರೀದಿಸಿ ಅದರ ಸಾರವನ್ನು ನಾವೀಗ ಮಾರುತ್ತಿರುವ ಗ್ರಾಹಕರಿಗೇ ಮಾರಬೇಕಾಗುತ್ತದೆ.”

ಉತ್ತಮ ಪರಿಮಳವನ್ನು ಪಡೆಯಲು, ಮಲ್ಲಿಗೆ ಅರಳಿದ ಕೂಡಲೇ ಅದನ್ನು ಸಂಸ್ಕರಿಸಲಾಗುತ್ತದೆ ಎಂದು ರಾಜಾ ಹೇಳುತ್ತಾರೆ. "ನಿರಂತರ ರಾಸಾಯನಿಕ ಪ್ರತಿಕ್ರಿಯೆಯು ಹೂವು ಅರಳಿದಾಗ ವಾಸನೆಯನ್ನು ಅನುಭವಿಸಲು ಸಹಾಯ ಮಾಡುತ್ತದೆ; ಅದೇ ಹೂವು ಕೊಳೆತಾಗ ಕೆಟ್ಟ ವಾಸನೆ ಬರುತ್ತದೆ."

ಪ್ರಕ್ರಿಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಈ ವರ್ಷದ ಫೆಬ್ರವರಿ ಆರಂಭದಲ್ಲಿ ಮಧುರೈ ಬಳಿಯ ತನ್ನ ಸುಗಂಧ ದ್ರವ್ಯ ಕಾರ್ಖಾನೆಗೆ ಬರುವಂತೆ ರಾಜಾ ಆಹ್ವಾನಿಸಿದರು.

*****

A relatively quiet day at the Mattuthavani flower market in Madurai
PHOTO • M. Palani Kumar

ಮಧುರೈನ ಮಟ್ಟುತವಾನಿ ಹೂವಿನ ಮಾರುಕಟ್ಟೆಯಲ್ಲಿ ತುಲನಾತ್ಮಕವಾಗಿ ಶಾಂತ ದಿನ

2023ರ ಮಧುರೈ ಪ್ರವಾಸವು ಮಟ್ಟುತವಾನಿಗೆ ನೀಡಿದ ಅವಸರದ ಭೇಟಿಯೊಂದಿಗೆ ಆರಂಭಗೊಂಡಿತು. ಇದು ಅಲ್ಲಿಗೆ ನಮ್ಮ ಮೂರನೇ ಭೇಟಿಯಾಗಿತ್ತು. ಆಶ್ಚರ್ಯವೆಂಬಂತೆ ಮಾರುಕಟ್ಟೆ ಶಾಂತವಾಗಿತ್ತು. ಜನಸಂದಣಿ ಅಷ್ಟಾಗಿ ಇದ್ದಿರಲಿಲ್ಲ. ಮ್ಲಲಿಗೆ ಆವಕ ಬಹಳ ಕಡಿಮೆಯಿತ್ತು. ಆದರೆ ಇತರ ವರ್ಣರಂಜಿತ ಹೂಗಳ ರಾಶಿಯಿದ್ದವು. ಗುಲಾಬಿ ಬುಟ್ಟಿಗಳು, ಟ್ಯೂಬ್‌ ರೋಸ್‌ ಮತ್ತು ಚೆಂಡುಹೂ ಚೀಲ. ಧವನದ ರಾಶಿಗಳಿದ್ದವು. ಪೂರೈಕೆ ಕಡಿಮೆಯಿದ್ದರೂ ಅಂದು ಮಲ್ಲಿಗೆ ಕೇವಲ 1,000 ಬೆಲೆಗೆ ಮಾರಾಟವಾಗುತ್ತಿತ್ತು. ಅಂದು ಯಾವುದೇ ಶುಭ ಕಾರ್ಯಕ್ರಮಗಳು ಇಲ್ಲದೆ ಹೋಗಿದ್ದೆ ಇದಕ್ಕೆ ಕಾರಣವೆಂದು ವ್ಯಾಪಾರಿಗಳು ಹೇಳಿದರು.

ನಂತರ ನಾವು ಮಧುರೈ ನಗರದಿಂದ ನೆರೆಯ ದಿಂಡಿಗಲ್ ಜಿಲ್ಲೆಯ ನೀಲಕೊಟ್ಟೈ ತಾಲೂಕಿಗೆ, ರಾಜಾ ಅವರ ಕಂಪನಿಗೆ ಎರಡು ರೀತಿಯ ಮಲ್ಲಿಗೆ – ಗ್ರಾಂಡಿಫ್ಲೋರಮ್‌ ಮತ್ತು ಸಾಂಬಾಕ್ - ಪೂರೈಸುವ ರೈತರನ್ನು ಭೇಟಿ ಮಾಡಲು ಹೊರಟೆವು. ಮತ್ತು ಇಲ್ಲಿಯೇ ನಾನು ಅತ್ಯಂತ ಆಶ್ಚರ್ಯಕರವಾದ ಕಥೆಯನ್ನು ಕೇಳಿದೆ.

ಪ್ರಗತಿಪರ ರೈತ, ಸುಮಾರು ಎರಡು ದಶಕಗಳ ಮಲ್ಲಿ ಬೆಳೆದ ಅನುಭವ ಹೊಂದಿರುವ ಮರಿಯಾ ವೇಲಾಂಕಣ್ಣಿ ಅವರು ಹೇಳುವಂತೆ, ಉತ್ತಮ ಇಳುವರಿಯ ರಹಸ್ಯವೆಂದರೆ ಹಳೆಯ ಎಲೆಗಳನ್ನು ಮೇಯಲು ಆಡುಗಳನ್ನು ಬಿಡುವುದು.

“ಇದು ಮಧುರೈ ಮಲ್ಲಿಯ ವಿಷಯದಲ್ಲಿ ಮಾತ್ರವೇ ಕೆಲಸಕ್ಕೆ ಬರುತ್ತದೆ” ಎಂದು ಅವರು ಹೇಳುತ್ತಾರೆ. ಎಕರೆ ಜಮೀನಿನ ಆರನೇ ಒಂದು ಭಾಗದಲ್ಲಿ ಬೆಳೆದ ಸೊಂಪಾದ ಹಸಿರು ಗಿಡಗಳನ್ನು ತೋರಿಸುತ್ತಾ, “ಈ ರೀತಿ ಮಾಡಿದಾಗ ಇಳುವರಿ ದ್ವಿಗುಣಗೊಳ್ಳುತ್ತದೆ, ಕೆಲವೊಮ್ಮೆ ಮೂರು ಪಟ್ಟು ಹೆಚ್ಚಾಗುತ್ತದೆ” ಎನ್ನುತ್ತಾರೆ. ಇದು ಬಹಳ ಸುಲಭದ ಪ್ರಕ್ರಿಯೆ. ಒಂದಷ್ಟು ಆಡುಗಳನ್ನು ತೋಟದಲ್ಲಿ ಬಿಟ್ಟರಾಯಿತು. ಅವು ಹಳೆಯ ಎಲೆಗಳನ್ನು ಮೇಯುತ್ತವೆ. ಹತ್ತು ದಿನಗಳ ಕಾಲ ಹೊಲವನ್ನು ಒಣಗಲು ಬಿಟ್ಟು ನಂತರ ಅದನ್ನು ಫಲವತ್ತಾಗಿಸಿದರೆ, ಹದಿನೈದನೇ ದಿನಕ್ಕೆ ಹೊಸ ಚಿಗುರುಗಳು ಮೂಡತೊಡಗಿ, ಇಪ್ಪತೈದನೇ ದಿನದ ಹೊತ್ತಿಗೆ ನಿಮ್ಮ ಹೊಲದಲ್ಲಿ ಬಂಪರ್‌ ಬೆಳೆ ಸಿದ್ಧವಾಗಿರುತ್ತದೆ.

ಈ ಪ್ರದೇಶದಲ್ಲಿ ಇದೊಂದು ಸಾಮಾನ್ಯ ಅಭ್ಯಾಸ ಎಂದು ಅವರು ನಗುತ್ತಾ ಹೇಳುತ್ತಾರೆ. “ಹೂ ಬಿಡುವಿಕೆಯನ್ನು ಪ್ರಚೋದಿಸಲು ಗಿಡಗಳನ್ನು ಆಡುಗಳಿಂದ ಮೇಯಿಸುವುದು ಸಾಂಪ್ರದಾಯಿಕ ಬುದ್ಧಿವಂತಿಕೆಯಾಗಿದೆ. ಈ ನವೀನ ಚಿಕಿತ್ಸೆಯನ್ನು ಗಿಡಗಳಿಗೆ ವರ್ಷದಲ್ಲಿ ಮೂರು ಬಾರಿ ನೀಡಲಾಗುತ್ತದೆ. ಆಡುಗಳು ಎಲೆಗಳನ್ನು ತಿನ್ನುತ್ತಾ ಹೊಲಕ್ಕೆ ಗೊಬ್ಬರವನ್ನೂ ನೀಡುತ್ತವೆ. ಮೇಕೆ ಸಾಕಣೆದಾರರು ಇದಕ್ಕೆ ಹಣ ಕೇಳುವುದಿಲ್ಲ. ಕೇವಲ ಚಹಾ ಮತ್ತು ವಡೆಗೆ ಅವರು ಸಂತೃಪ್ತರಾಗುತ್ತಾರೆ. ಒಂದು ಆಡುಗಳನ್ನು ರಾತ್ರಿಯ ವೇಳೆ ಹೊಲದಲ್ಲಿ ಬಿಡಾರ ಹಾಕಿಸಬೇಕೆಂದರೆ ಕೆಲವು ನೂರು ಆಡುಗಳ ಬಿಡಾರಕ್ಕೆ 500 ರೂಪಾಯಿಗಳ ಶುಲ್ಕ ನೀಡಬೇಕಾಗುತ್ತದೆ. ಆದರೆ ಮಲ್ಲಿಗೆ ಕೃಷಿಕನಿಗೆ ಇದರಿಂದ ಲಾಭವೇ ಆಗುತ್ತದೆ.”

Left: Maria Velankanni, a progressive farmer who supplies JCEPL.
PHOTO • M. Palani Kumar
Right: Kathiroli, the R&D head at JCEPL, carefully choosing the ingredients to present during the smelling session
PHOTO • M. Palani Kumar

ಎಡ: ಜೆಸಿಇಪಿಎಲ್ ಸಂಸ್ಥೆಗೆ ಹೂ ಪೂರೈಸುವ ಪ್ರಗತಿಪರ ರೈತ ಮರಿಯಾ ವೇಲಾಂಕಣ್ಣಿ. ಬಲ: ಜೆಸಿಇಪಿಎಲ್ ನ ಆರ್ & ಡಿ ಮುಖ್ಯಸ್ಥ ಕದಿರೋಳಿ, ಪರಿಮಳ ಪರಿಶಿಲನೆ ಸೆಷನ್ನಿನಲ್ಲಿ ಪ್ರಸ್ತುತಪಡಿಸಬೇಕಾದ ಪದಾರ್ಥಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುತ್ತಾರೆ

Varieties of jasmine laid out during a smelling session at the jasmine factory. Here 'absolutes' of various flowers were presented by the R&D team
PHOTO • M. Palani Kumar
Varieties of jasmine laid out during a smelling session at the jasmine factory. Here 'absolutes' of various flowers were presented by the R&D team
PHOTO • M. Palani Kumar

ಮಲ್ಲಿಗೆ ಕಾರ್ಖಾನೆಯಲ್ಲಿ ಸ್ಮೆಲ್ಲಿಂಗ್‌ ಸೆಷನ್ನಿನಲ್ಲಿ ವಿವಿಧ ರೀತಿಯ ಮಲ್ಲಿಗೆಗಳನ್ನು ಇಡಲಾಗಿದೆ. ಇಲ್ಲಿ ಆರ್ & ಡಿ ತಂಡವು ವಿವಿಧ ಹೂವುಗಳ 'ಸಾರಗಳನ್ನು' ಪ್ರಸ್ತುತಪಡಿಸುತ್ತದೆ

ಜೆಸಿಇಪಿಎಲ್ ನ ದಿಂಡಿಗಲ್ ಕಾರ್ಖಾನೆ ಪ್ರವಾಸದಲ್ಲಿ ಹೆಚ್ಚಿನ ಆಶ್ಚರ್ಯಗಳು ಕಾಯುತ್ತಿದ್ದವು. ನಮ್ಮನ್ನು ಕೈಗಾರಿಕಾ-ಪ್ರಮಾಣದ ಸಂಸ್ಕರಣಾ ಘಟಕದ ಎಲ್ಲೆಡೆ ಸುತ್ತಾಡಿಸಲಾಯಿತು, ಅಲ್ಲಿ ಕ್ರೇನ್‌ಗಳು ಮತ್ತು ಪುಲ್ಲಿಗಳು ಮತ್ತು ಡಿಸ್ಟಿಲರಿಗಳು ಮತ್ತು ಕೂಲರ್ 'ಕಾಂಕ್ರೀಟ್' ಮತ್ತು 'ಸಾರದ' ಬ್ಯಾಚ್‌ಗಳನ್ನು ತಯಾರಿಸುತ್ತವೆ. ನಾವು ಭೇಟಿ ನೀಡಿದಾಗ ಮಲ್ಲಿಗೆ ಇದ್ದಿರಲಿಲ್ಲ. ಫೆಬ್ರವರಿ ಆರಂಭದಲ್ಲಿ, ಹೂವುಗಳು ತುಂಬಾ ಕಡಿಮೆ ಮತ್ತು ತುಂಬಾ ದುಬಾರಿಯಾಗಿರುತ್ತವೆ; ಈ ಸಮಯದಲ್ಲಿ ಇತರ ಸುಗಂಧ ದ್ರವ್ಯಗಳನ್ನು ಹೊರತೆಗೆಯಲಾಗುತ್ತದೆ, ಮತ್ತು ಅಲ್ಲಿನ ಹೊಳೆಯುವ ಸ್ಟೇನ್ಲೆಸ್ ಸ್ಟೀಲ್ ಯಂತ್ರಗಳು ಗುನುಗು ಸದ್ದಿನೊಂದಿಗೆ ದೈವಿಕ ವಾಸನೆಯನ್ನು ಹರಡುತ್ತವೆ, ನಾವೆಲ್ಲರೂ ನಮ್ಮ ಉಸಿರನ್ನು ತೀಕ್ಷ್ಣವಾಗಿ ಎಳೆದುಕೊಂಡು ಮುಗುಳ್ನಕ್ಕೆವು.

ಜೆಸಿಇಪಿಎಲ್ ಸಂಸ್ಥೆಯ ಆರ್ & ಡಿ ಮ್ಯಾನೇಜರ್ ಆಗಿರುವ 51 ವರ್ಷದ ವಿ.ಕದಿರೋಳಿ ಅವರು ವಾಸನೆಯ 'ಸಾರಗಳ' ಮಾದರಿಗಳನ್ನು ನಮಗೆ ನೀಡಿ ಮುಗುಳ್ನಕ್ಕರು. ಅವರು ಉದ್ದನೆಯ ಮೇಜಿನ ಹಿಂದೆ ನಿಂತಿದ್ದರು, ಅದರ ಮೇಲೆ ಬಿದಿರಿನ ಬುಟ್ಟಿಯಲ್ಲಿ ಇಟ್ಟ ಹೂಗಳಿದ್ದವು, ಸುಗಂಧ ದ್ರವ್ಯಗಳ ಬಗ್ಗೆ ಲ್ಯಾಮಿನೇಟೆಡ್ ಮಾಹಿತಿ ಹಾಳೆಗಳು ಮತ್ತು 'ಸಾರಗಳ' ಸಣ್ಣ ಬಾಟಲಿಗಳು ಇದ್ದವು. ಪರೀಕ್ಷಕ ಪಟ್ಟಿಗಳನ್ನು ವಿವಿಧ ಸಣ್ಣ ಬಾಟಲಿಗಳಲ್ಲಿ ಮುಳುಗಿಸಿ, ಪ್ರತಿ ಪದಾರ್ಥವನ್ನು ಕುತೂಹಲದಿಂದ ನೀಡುತ್ತಾರೆ ಮತ್ತು ಪ್ರತಿಯೊಂದು ಪ್ರತಿಕ್ರಿಯೆಯನ್ನು ದಾಖಲಿಸುತ್ತಾನೆ.

ಅಲ್ಲಿ ಸಿಹಿಯಾದ ಪರಿಮಳದ ದೇವಗಣಿಗಲೆ ಮತ್ತು ಟ್ಯೂಬ್‌ ರೋಸ್‌ ಪರಿಮಳಗಳಿದ್ದವು. ನಂತರ ಅವರು ಎರಡು ಬಗೆ ಗುಲಾಬಿ ಪರಿಮಳಗಳನ್ನು ತಂದರು. ಒಂದು ತಾಜಾ ಗುಲಾಬಿಯ ಪರಿಮಳ ಹೊಂದಿದ್ದರೆ ಇನ್ನೊಂದು ಹುಲ್ಲಿನ ವಾಸನೆ ಹೊಂದಿತ್ತು. ಇದಲ್ಲದೆ ಬಿಳಿ ಮತ್ತು ಗುಲಾಬಿ ಬಣ್ಣದ ಕಮಲದ ಪರಿಮಳವಿತ್ತು. ಇವೆರಡೂ ಸೌಮ್ಯವಾದ ಹೂವಿನ ವಾಸನೆ ಹೊಂದಿದ್ದವು. ಸೇವಂತಿಗೆ ಹೂವು ಅಪ್ಪಟ ಭಾರತೀಯ ಮದುವೆ ಮನೆಯ ಪರಿಮಳವನ್ನು ಹೊಂದಿತ್ತು.

ಅಲ್ಲಿ ಕೆಲವು ಗಿಡಮೂಲಿಕೆ ಮತ್ತು ಮಸಾಲೆ ಪದಾರ್ಥಗಳೂ ಇದ್ದವು. ವಿಲಕ್ಷಣವೆನ್ನಿಸುವ ಆದರೆ ಪರಿಚಿತವಾದ ಮೆಂತ್ಯದ ಒಗ್ಗರಣೆ ವಾಸನೆ, ಅಜ್ಜಿಯ ಅಡುಗೆಯ ಕರಿಬೇವಿನ ಪರಿಮಳ. ಅಲ್ಲಿನ ಪ್ರಮುಖ ಅಂಶವೆಂದರೆ ಮಲ್ಲಿಗೆ. ನಾನು ಹೂವಿನ ಪರಿಮಳವನ್ನು ವಿವರಿಸಲು ಪರದಾಡುತ್ತಿದ್ದಾಗ ಕದಿರೋಲ್‌ ನನ್ನ ಸಹಾಯಕ್ಕೆ ಬಂದರು. “ಹೂ, ಮಧುರ, ಪ್ರಾಣಿಯ ಪರಿಮಳ, ಹಸಿರು, ಹಣ್ಣು, ತಿಳಿ ಚರ್ಮದ ಪರಿಮಳ” ಎಂದು ಅವರು ಒಂದಿಷ್ಟೂ ತಡವರಿಸದೆ ಹೇಳಿದರು. ನಾನು ಅವರ ನೆಚ್ಚಿನ ಪರಿಮಳ ಯಾವುದೆಂದು ಕೇಳಿದೆ. ನಾನು ಅವರಿಂದ ಹೂವಿನ ಉತ್ತರ ನಿರೀಕ್ಷಿಸಿದ್ದೆ.

“ವೆನಿಲ್ಲಾ” ಎನ್ನುತ್ತಾ ಅವರು ನಕ್ಕರು. ಅವರು ಮತ್ತು ಅವರ ತಂಡವು ಕಂಪನಿಯ ಸಿಗ್ನೇಚರ್ ವೆನಿಲ್ಲಾ ಸಾರವನ್ನು ಸಂಶೋಧಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಅವರು ಮಧುರ ಸುಗಂದವನ್ನು ತಯಾರಿಸಲು ಮಧುರೈ ಮಲ್ಲಿ ಬಳಸುತ್ತಾರೆ. ಸುಗಂಧ ದ್ರವ್ಯ ಮತ್ತು ಸೌಂದರ್ಯವರ್ಧಕಗಳಿಗೆ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರು ನಾಯಕನಾಗಲು ಬಯಸುತ್ತಾರೆ.

ಕಾರ್ಖಾನೆಯಿಂದ ಸ್ವಲ್ಪ ದೂರದಲ್ಲಿ, ಮಧುರೈ ನಗರದ ಹೊರಗೆ, ಹಸಿರು, ಹಸಿರು ಹೊಲಗಳಲ್ಲಿ, ರೈತರು ತಮ್ಮ ಬದುಕಿಗೆ ಮಲ್ಲಿಗೆ ಗಿಡಗಳನ್ನು ಆಶ್ರಯಿಸುತ್ತಾರೆ. ಹೂವುಗಳು ಎಲ್ಲಿಯೂ ಕೊನೆಗೊಳ್ಳಬಹುದು - ಮಂಜುಗಟ್ಟಿದ ಗಾಜಿನ ಬಾಟಲಿ, ಪೂಜಾ ಸ್ಥಳ, ಮದುವೆ, ಕೈ ಬುಟ್ಟಿ, ಕಾಲುದಾರಿಯಲ್ಲಿ, ಬಿಳಿ ಸುರುಳಿಯಲ್ಲಿ, ದೈವಿಕ ವಾಸನೆಯಾಗಿ, ಹೀಗೆ ಪರಿಮಳಯುಕ್ತವಾಗಿ ಕೊನೆಗೊಳ್ಳಲು ಕೇವಲ ಮಲ್ಲಿಗೆಯಿಂದಷ್ಟೇ ಸಾಧ್ಯ.

ಈ ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಧನಸಹಾಯ ಕಾರ್ಯಕ್ರಮ 2020ರ ಭಾಗವಾಗಿ ಧನಸಹಾಯ ನೀ ಡಿರು ತ್ತದೆ.

ಅನುವಾದ : ಶಂಕರ . ಎನ್ . ಕೆಂಚನೂರು

Aparna Karthikeyan

அபர்ணா கார்த்திகேயன் ஒரு சுயாதீன பத்திரிகையாளர், எழுத்தாளர் மற்றும் PARI-யின் மூத்த மானியப் பணியாளர். 'Nine Rupees an Hour'என்னும் அவருடைய புத்தகம் தமிழ்நாட்டில் காணாமல் போகும் வாழ்வாதாரங்களைப் பற்றிப் பேசுகிறது. குழந்தைகளுக்கென ஐந்து புத்தகங்கள் எழுதியிருக்கிறார். சென்னையில் அபர்ணா அவரது குடும்பம் மற்றும் நாய்களுடன் வசிக்கிறார்.

Other stories by Aparna Karthikeyan
Photographs : M. Palani Kumar

எம். பழனி குமார், பாரியில் புகைப்படக் கலைஞராக பணிபுரிகிறார். உழைக்கும் பெண்கள் மற்றும் விளிம்புநிலை மக்களின் வாழ்க்கைகளை ஆவணப்படுத்துவதில் விருப்பம் கொண்டவர். பழனி 2021-ல் Amplify மானியமும் 2020-ல் Samyak Drishti and Photo South Asia மானியமும் பெற்றார். தயாநிதா சிங் - பாரியின் முதல் ஆவணப் புகைப்பட விருதை 2022-ல் பெற்றார். தமிழ்நாட்டில் மலக்குழி மரணங்கள் குறித்து எடுக்கப்பட்ட 'கக்கூஸ்' ஆவணப்படத்தின் ஒளிப்பதிவாளராக இருந்தவர்.

Other stories by M. Palani Kumar

பி. சாய்நாத், பாரியின் நிறுவனர் ஆவார். பல்லாண்டுகளாக கிராமப்புற செய்தியாளராக இருக்கும் அவர், ’Everybody Loves a Good Drought' மற்றும் 'The Last Heroes: Foot Soldiers of Indian Freedom' ஆகிய புத்தகங்களை எழுதியிருக்கிறார்.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru