"ನಾವು ದಶರಾ ನಾಚ್ [ನೃತ್ಯ] ಪ್ರದರ್ಶಿಸಲಿದ್ದೇವೆ" ಎಂದು ನೃತ್ಯಗಾರ್ತಿ ಇಟ್ವಾರಿ ರಾಮ್ ಮಚ್ಚಿಯಾ ಬೈಗಾ ಹೇಳುತ್ತಾರೆ. "ಈ [ನೃತ್ಯ] ದಸರಾದಿಂದ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ ಮತ್ತು ಮಾರ್ಚ್ ತನಕ ಮೂರರಿಂದ ನಾಲ್ಕು ತಿಂಗಳವರೆಗೆ ಮುಂದುವರಿಯುತ್ತದೆ. ದಶರಾವನ್ನು ಆಚರಿಸಿದ ನಂತರ, ನಾವು ನಮ್ಮ ಸಹವರ್ತಿ ಬೈಗಾ ಹಳ್ಳಿಗಳಿಗೆ ಭೇಟಿ ನೀಡುತ್ತೇವೆ ಮತ್ತು ಅಲ್ಲಿ ಇಡೀ ರಾತ್ರಿ ನೃತ್ಯ ಮಾಡುತ್ತೇವೆ "ಎಂದು ಛತ್ತೀಸ್ಗಢದ ಬೈಗಾ ಸಮಾಜದ ಅಧ್ಯಕ್ಷರು ಹೇಳುತ್ತಾರೆ.
ಸುಮಾರು ಅರವತ್ತು ವರ್ಷದವರಾದ ಈ ನರ್ತಕ ಮತ್ತು ರೈತ ಕಬೀರ್ ಧಾಮ್ ಜಿಲ್ಲೆಯ ಅಮಾನಿಯ ಗ್ರಾಮದ ನಿವಾಸಿ. ತಂಡದ ಇತರ ಸದಸ್ಯರೊಂದಿಗೆ, ರಾಯ್ಪುರದಲ್ಲಿ ನಡೆಯುತ್ತಿರುವ ರಾಜ್ಯ ಆಯೋಜಿಸಿರುವ ರಾಷ್ಟ್ರೀಯ ಬುಡಕಟ್ಟು ನೃತ್ಯ ಉತ್ಸವದಲ್ಲಿ ಭಾಗವಹಿಸಲು ಇತ್ವಾರಿರಿಜಿ ಆಗಮಿಸಿದ್ದಾರೆ.
ಬೈಗಾ ಸಮುದಾಯವು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ಆಗಿದ್ದು, ಇದು ಛತ್ತೀಸ್ಗಢದ ಇಂತಹ ಏಳು ಸಮುದಾಯಗಳಲ್ಲಿ ಒಂದಾಗಿದೆ. ಈ ಸಮುದಾಯದವರನ್ನು ಮಧ್ಯಪ್ರದೇಶದಲ್ಲಿಯೂ ಕಾಣಬಹುದು.
"ಸಾಮಾನ್ಯವಾಗಿ ಸುಮಾರು 30 ಜನರು ದಶರಾ ನಾಚ್ ನೃತ್ಯ ಮಾಡುತ್ತಾರೆ, ಮತ್ತು ನಮ್ಮಲ್ಲಿ ಪುರುಷ ಮತ್ತು ಸ್ತ್ರೀ ನೃತ್ಯಗಾರರು ಇದ್ದಾರೆ. ಹಳ್ಳಿಯಲ್ಲಿ, ನೃತ್ಯಗಾರರ ಸಂಖ್ಯೆ ನೂರರವರೆಗೂ ಏರುತ್ತದೆ" ಎಂದು ಇತ್ವಾರಿ ಜೀ ಹೇಳುತ್ತಾರೆ. ಪುರುಷ ತಂಡವು ಹಳ್ಳಿಗೆ ಭೇಟಿ ನೀಡಿದರೆ ಅವರು ಆ ಹಳ್ಳಿಯ ಮಹಿಳಾ ತಂಡದೊಂದಿಗೆ ನೃತ್ಯ ಮಾಡುತ್ತಾರೆ ಎಂದು ಅವರು ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಆತಿಥೇಯ ಗ್ರಾಮದ ಪುರುಷ ತಂಡವು ಅತಿಥಿ ತಂಡದ ಹಳ್ಳಿಗೆ ಭೇಟಿ ನೀಡುತ್ತದೆ ಮತ್ತು ಅಲ್ಲಿನ ಮಹಿಳಾ ತಂಡದೊಂದಿಗೆ ನೃತ್ಯ ಮಾಡುತ್ತದೆ.
“ನಮಗೆ ಹಾಡುವುದು ಮತ್ತು ಕುಣಿಯುವುದೆಂದರೆ ಸದಾ ಇಷ್ಟ” ಎಂದು ಅದೇ ಜಿಲ್ಲೆಯ ಕವರ್ಧಾ ಬ್ಲಾಕಿನ ಅನಿತಾ ಪಂಡ್ರಿಯಾ ಹೇಳುತ್ತಾರೆ. ಅವರು ಕೂಡಾ ಇತ್ವಾರೀ ಜೀ ಅವರ ತಂಡದೊಡನೆ ನೃತ್ಯೋತ್ಸವದಲ್ಲಿ ಭಾಗವಹಿಸಿದ್ದರು.
ನೃತ್ಯವು ಪ್ರಶ್ನೋತ್ತರ ರೂಪದ ಹಾಡನ್ನು ಒಳಗೊಂಡಿರುತ್ತದೆ.
ಬೈಗಾ ನೃತ್ಯವು ಇಲ್ಲಿನ ಎಲ್ಲಾ ಬೈಗಾ ಹಳ್ಳಿಗಳಲ್ಲಿ ಕಂಡುಬರುವ ಹಳೆಯ ಸಂಪ್ರದಾಯವಾಗಿದೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ, ಮತ್ತು ಜನಪ್ರಿಯ ತಾಣಗಳಲ್ಲಿ ವಿಐಪಿಗಳನ್ನು ರಂಜಿಸಲು ತಂಡಗಳನ್ನು ಆಗಾಗ್ಗೆ ಕರೆಯಲಾಗುತ್ತದೆ, ಆದರೆ ಪ್ರದರ್ಶನಗಳಿಗೆ ಅವರಿಗೆ ಸಾಕಷ್ಟು ಸಂಭಾವನೆ ನೀಡಲಾಗುವುದಿಲ್ಲ ಎಂದು ಸಮುದಾಯ ಹೇಳುತ್ತದೆ.
ಕವರ್ ಫೋಟೋ: ಗೋಪಿಕೃಷ್ಣ ಸೋನಿ
ಅನುವಾದ: ಶಂಕರ. ಎನ್. ಕೆಂಚನೂರು