ಜೂನ್ ಒಂದರಂದು ಸ್ವತಂತ್ರ ಭಾರತದ ಮೊದಲ ರೈತ ಮುಷ್ಕರ ನಡೆದು ಚರಿತ್ರೆ ಸೃಷ್ಟಿಯಾಯಿತು. ಈ ಘಟನೆ ನಡೆದದ್ದು ಪಶ್ಚಿಮ ಮಹಾರಾಷ್ಟ್ರದ ಅಹ್ಮದ್ ನಗರ್ ಜಿಲ್ಲೆಯಲ್ಲಿರುವ ಗೋದಾವರಿ ದಂಡೆಯ ಪುಂಟಾಂಬಾ ಎಂಬ ಸಣ್ಣ ವಾಣಿಜ್ಯ ನಗರಿಯಲ್ಲಿ. 13,000 ಜನರಿರುವ ಈ ಹಳ್ಳಿಯ ರೈತರು ಮುಷ್ಕರದ ವೇಳೆ ತಮ್ಮ ತರಕಾರಿ ದಾಸ್ತಾನನ್ನು ಮಾರದಿರುವ ಮೂಲಕ, ಹಾಲನ್ನು ರಸ್ತೆಗೆ ಸುರಿಯುವ ಮೂಲಕ, ಟೊಮ್ಯಾಟೋ, ಈರುಳ್ಳಿ, ಬದನೆ, ಮೆಣಸು ಮತ್ತಿತರ ತರಕಾರಿಗಳನ್ನು ರಸ್ತೆಯ ಮೇಲೆ ರಾಶಿ ಹಾಕುವ ಮೂಲಕ ಹಲವು ವಿಧಗಳಲ್ಲಿ ಪ್ರತಿಭಟಿಸಿದರು.

ಹಲವು ದಿನಗಳ ತನಕ ಸುದ್ದಿ ಮಾಡಿದ ಈ ಮುಷ್ಕರ ರಾಜ್ಯವ್ಯಾಪಿ ರೈತರ ಪ್ರತಿಭಟನೆಗಳಿಗೂ ಪ್ರೇರಣೆಯಾಯಿತು. ಅವರ ಬಹುಮುಖ್ಯ ಬೇಡಿಕೆ ಎಂದರೆ, ರೈತರಿಗೆ ಅವರ ಉತ್ಪಾದನಾ ವೆಚ್ಚ ಮತ್ತು ಅದಕ್ಕೆ 50 ಶೇಕಡಾ ಸೇರಿಸಿ ಅವರ ಕನಿಷ್ಠ ಬೆಂಬಲ ಬೆಲೆ ನಿಗದಿ ಆಗಬೇಕೆಂದು ಶಿಫಾರಸು ಮಾಡಿರುವ ಸ್ವಾಮಿನಾಥನ್ ಸಮಿತಿಯ ವರದಿಯನ್ನು ಜಾರಿಗೊಳಿಸಬೇಕು ಎಂಬುದು. ಮುಷ್ಕರದ ಗುರಿ ಇದ್ದದ್ದು ಮುಂಬಯಿ ಮತ್ತು ಪುಣೆಯ ಮಾರುಕಟ್ಟೆಗಳಿಗೆ ಅವರ ದಾಸ್ತಾನುಗಳು ತಲುಪದಂತೆ ನೋಡಿಕೊಳ್ಳುವುದಾಗಿತ್ತು ಏಕೆಂದರೆ, ಮಹಾನಗರಗಳಿಗೆ ಈ ಮೂಲಕವಾದರೂ ರೈತರ ಬವಣೆಗಳ ಬಿಸಿ ತಟ್ಟುವಂತಾಗಲಿ  ಎಂಬ ಉದ್ದೇಶ ಅವರಿಗಿತ್ತು.

ಪುಂಟಾಂಬಾದಿಂದ ದಕ್ಷಿಣಕ್ಕೆ 300 ಕಿಲೋಮೀಟರ್ ದೂರದಲ್ಲಿರುವ, ಮರಾಠಾವಾಡಾದ ಓಸ್ಮನಾಬಾದಿನಿಂದ  12 ಕಿಮೀ ದೂರದ ಕಾಮ್ತಾ ಹಳ್ಳಿಯಲ್ಲೂ ಜೂನ್ 1 ರಂದೇ ಮುಷ್ಕರ ಆರಂಭಗೊಂಡಿತ್ತು. “ಗ್ರಾಮಸಭೆಯು ಎಲ್ಲರ ಜೊತೆ ಚರ್ಚೆ ಮಾಡಿ ಈ ನಿರ್ಧಾರವನ್ನು ಕೈಗೊಂಡಿತ್ತು. ಪೂಂಟಾಂಬಾದ ಸುದ್ದಿ ಕೇಳಿದ ಬಳಿಕ ನಾವೂ ಹಾಗೇ ಮಾಡಬೇಕೆಂದು ನಿರ್ಧರಿಸಿದೆವು” ಎನ್ನುತ್ತಾರೆ ವಿಕಾಸ್ ಪತಾಡೆ.


Vikas Patade and brother Shivaji

ಓಸ್ಮನಾಬಾದಿನ ಕಾಮ್ತಾ ಹಳ್ಳಿಯ ರೈತ ಸಹೋದರರಾದ ವಿಕಾಸ್ ಪಾತಡೆ ಮತ್ತು ಶಿವಾಜಿ: “ನಾವು ಈ ಚಳುವಳಿಯಲ್ಲಿ ಸಣ್ಣದೇ ಆದರೂ ಒಂದು ಪಾತ್ರವನ್ನು ವಹಿಸಲು ನಿರ್ಧರಿಸಿದೆವು”

ಕಾಮ್ತಾ ಹಳ್ಳಿಯಲ್ಲಿ ಈ ಮುಷ್ಕರ ಒಂದು ವಾರಕ್ಕಿಂತ ಹೆಚ್ಚು ನಡೆಯಲು ಸಾಧ್ಯವಾಗಲಿಲ್ಲ. “ನಾವು ಪ್ರಯತ್ನ ಪಡುವಷ್ಟು ಪಟ್ಟೆವು. ಒಂದೇ ವಾರದಲ್ಲಿ ನಾವು ಮೂವರು ಸುಮಾರು 80,000 ರೂಪಾಯಿ ಕಳೆದುಕೊಂಡೆವು (ಮಾರುಕಟ್ಟೆಗೆ ದಾಸ್ತಾನು ಕಳಿಸಿಕೊಡದೇ ಇದ್ದುದರಿಂದ)” ಎಂದು 43 ವರ್ಷ ವಯಸ್ಸಿನ ವಿಕಾಸ್ ತನ್ನ ಮತ್ತು ತನ್ನಿಬ್ಬರು ಸಹೋದರರ ಕಥೆ ಹೇಳಿಕೊಂಡರು. ಅವರು ಒಟ್ಟಾಗಿ ತಮ್ಮ 20 ಎಕರೆ ನೆಲದಲ್ಲಿ ತರಕಾರಿಗಳನ್ನು ಮತ್ತು ಹೈನುಗಾರಿಕೆ ಮಾಡಿ ಹಾಲನ್ನು ಉತ್ಪಾದಿಸುತ್ತಿದ್ದಾರೆ. “ಆಗಿರುವ ಈ ನಷ್ಟ ಭರ್ತಿ ಮಾಡಿಕೊಳ್ಳಲು ನಮಗೆ ಒಂದು ವರ್ಷವೇ ಬೇಕಾಗಬಹುದು” ಎನ್ನುತ್ತಾರವರು. ಪಾತಡೆ ಸಹೋದರರಿಗೆ 8 ಲಕ್ಷ ರೂಪಾಯಿಗಳ ಸಾಲವೂ ಇದ್ದು, ಈಗ ಈ ನಷ್ಟವೂ ಅವರ ಹೊರೆಯನ್ನು ಹೆಚ್ಚಿಸಲಿದೆ.

ಒಂದು ವಾರದ ಕೆಚ್ಚಿನ ಹೋರಾಟದ ಬಳಿಕ – ಓಸ್ಮನಾಬಾದ್ ಮತ್ತು ಕಾಲಂಬ್ ಮಾರುಕಟ್ಟೆಗಳನ್ನು ಏಳುದಿನಗಳ ಕಾಲ ಮುಚ್ಚಿಸಿದ ಬಳಿಕ – ಕಾಮ್ತಾ ಸೋತಿತ್ತು. “ ನಾವು ನಮ್ಮ ಕುಟುಂಬಗಳನ್ನೂ ಸಾಕಬೇಕಲ್ಲ,” ಎನ್ನುತ್ತಾರೆ ವಿಕಾಸ್. ಆ ಹಳ್ಳಿ ಪ್ರತಿದಿನ ಮಾರುಕಟ್ಟೆಗಳಿಗೆ ಸುಮಾರು 70,000 ರೂಪಾಯಿಗಳ ಮೌಲ್ಯದ ತರಕಾರಿ ದಾಸ್ತಾನನ್ನು ಕಳಿಸಿಕೊಡುತ್ತದೆ. “ಒಂದು ವಾರ ಅಲ್ಲಿ ದಾಸ್ತಾನಿರಲಿಲ್ಲ. ಆದರೆ ಒಂದು ಪುಟ್ಟ ಹಳ್ಳಿಯ 1700 ಮಂದಿ (2011 ರ ಕಾನೇಶುಮಾರಿಯ ಪ್ರಕಾರ 1860 ಮಂದಿ) ಇಡಿಯ ರಾಜ್ಯವನ್ನು ಪ್ರಭಾವಿಸುವುದು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತಿತ್ತು. ಆದರೆ, ಸಣ್ನ ರೀತಿಯಲ್ಲಾದರೂ ಈ ಚಳುವಳಿಯಲ್ಲಿ ಪಾಲ್ಗೊಳ್ಳಬೇಕೆಂದಿತ್ತು” ಎನ್ನುತ್ತಾರೆ ವಿಕಾಸ್.

ಇತ್ತೀಚಿನ ಈ ಮುಷ್ಕರಗಳು ಅಹ್ಮದ್ ನಗರ್ ಮತ್ತು ನಾಸಿಕ್ ಕೇಂದ್ರವಾಗಿ ನಡೆದವು, ಹಲವೆಡೆ ಮೋರ್ಚಾಗಳು, ಮುಷ್ಕರಗಳು ನಡೆದವಾದರೂ ದೀರ್ಘಕಾಲ ನಡೆಯದೆ ನಂದಿದವು. ಇವೇ ಮರಾಠಾವಾಡದ (ಮತ್ತು ವಿದರ್ಭದ) ಯಾವತ್ತೂ ಕೃಷಿ ಸಂಕಟಗಳಿರುವ  ಸಾಂಪ್ರದಾಯಿಕ ವಲಯಗಳು.

ಮರಾಠಾವಾಡದ ಈ ಮುಷ್ಕರ ಯಾಕೆ ತೀವ್ರಗೊಳ್ಳಲಿಲ್ಲ ಮತ್ತು ದೀರ್ಘಕಾಲ ನಡೆಯಲಿಲ್ಲ? ಓಸ್ಮನಾಬಾದಿನ ಕಾಮ್ತಾದಂತಹ ಕೆಲವೇ ಹಳ್ಳಿಗಳನ್ನು ಹೊರತುಪಡಿಸಿದರೆ, ಭೀಡ್, ಔರಂಗಾಬಾದ್, ಜಾಲ್ನಾ, ಲಾತೂರ್ ಮತ್ತು ನಾಂದೇಡ್ ಗಳೆಂಬ ಐದು ಮರಾಠಾವಾಡಾ ಪ್ರಾಂತ್ಯದ ಜಿಲ್ಲೆಗಳು ಈ ಮುಷ್ಕರಕ್ಕೆ ತೋರಿಸಿದ ಪ್ರತಿಕ್ರಿಯೆ ನೀರಸವಾಗಿತ್ತು. ಮರಾಠಾವಾಡಾದ ಪರ್ಬನಿ ಮತು ಹಿಂಗೋಲಿ ಜಿಲ್ಲೆಗಳಲ್ಲಿ ಮಾತ್ರ ಪ್ರತಿಭಟನೆಗೆ ಕಾವಿತ್ತು.

ಹೆಚ್ಚಿನಂಶ ಇದಕ್ಕೆ ಬಹುಮುಖ್ಯ ಕಾರಣವೆಂದರೆ, ಈ ಪ್ರದೇಶ ಮುಷ್ಕರವನ್ನು ತಾಳಿಕೊಳ್ಳುವ ಚೈತನ್ಯವನ್ನು ಹೊಂದಿರಲಿಲ್ಲ. ನಾಸಿಕ್ ಹಾಗೂ ಪಶ್ಚಿಮ ಮಹಾರಾಷ್ಟ್ರದ ರೈತರು ಇವರಿಗೆ ಹೋಲಿಸಿದರೆ ಸಬಲರು. ಮರಾಠಾವಾಡಾ 2011 ರಿಂದ 2015 ರ ತನಕ ಸತತ ನಾಲ್ಕು ವರ್ಷಗಳ ಕಾಲ ಬರ ಅನುಭವಿಸಿದೆ; ನೀರಿನ ತೀವ್ರ ಕೊರತೆ ಅವರನ್ನು ಕಂಗೆಡಿಸಿದೆ.

ಭೀಡ್ ನ ಲಿಂಬಾಗಣೇಶ್ ಹಳ್ಳಿಯಲ್ಲಿ ಮಹಾನಂದಾ ಜಾಧವ್, 45, ಅವರನ್ನು ನಾನು  ಮಧ್ಯಾಹ್ನದ ಹೊತ್ತಿಗೆ ಹೊಲದಲ್ಲಿ ಭೇಟಿಯಾದಾಗ ಆಕೆ ನೆಲಗಡಲೆ ಕೀಳುತ್ತಿದ್ದರು. ಈಗಾಗಲೇ ಸಮಸ್ಯೆಯಲ್ಲಿದ್ದ ಅವರು ಮುಷ್ಕರಕ್ಕಿಳಿದಿದ್ದರೆ, ಪರಿಸ್ಥಿತಿ ಇನ್ನಷ್ಟು  ಹದಗೆಡುತ್ತಿತ್ತು. “ನಮ್ಮ ಗಾಲಂದಾ ಹೂವು ಕಳೆದ ವರ್ಷ ಸಂಪೂರ್ಣ ಒಣಗಿಹೋಗಿತ್ತು. ಅದರಿಂದ 50,000 ರೂಪಾಯಿ ನಷ್ಟವಾಯಿತು. ಜೊತೆಗೆ ನಮ್ಮ ಹೊಲಕ್ಕೆ ಹನಿ ನೀರಾವರಿ ವ್ಯವಸ್ಥೆ ಹಾಕಿಸಿದೆವು ಮತ್ತು ಬೋರ್ ವೆಲ್ ಕೊರೆಸಿದೆವು. ಹಾಗಾಗಿ ಬ್ಯಾಂಕಿನಲ್ಲಿ ಈಗಾಗಲೇ 2 ಲಕ್ಷ ಸಾಲ ಆಗಿದೆ” ಎಂದಾಕೆ ವಿವರಿಸಿದರು.

ಒಂದು ಸಂಕಟದಿಂದ ಪಾರಾಗಲು ಅವರು ಗಾಲಂದಾ ನೆಟ್ಟಿದ್ದರು, ಅದೂ ನಷ್ಟದ ಬಾಬ್ತೇ ಆಯಿತು. “ಕಳೆದ ವರ್ಷ ನಾವು ತೊಗರಿ ನೆಟ್ಟಿದ್ದೆವು, ಆದರೆ ಸರ್ಕಾರಿ ಕೇಂದ್ರಗಳಲ್ಲಿ ತೊಂದರೆಯಾಗಿ, ನಮಗದನ್ನು ಮಾರಿಕೊಳ್ಳಲಾಗಲಿಲ್ಲ. ನಾವು ಅದನ್ನು ಮಾರಿದ್ದರೆ, ನಮಗೆ ಮುಂದಿನ ಸೀಸನ್ನಿಗೆ ಸಾಲ ಇಲ್ಲದೆ ಬೀಜಗಳು, ಗೊಬ್ಬರ ಮತ್ತು ಕೀಟನಾಶಕಗಳನ್ನು ಖರೀದಿಸಲು ಸಾಧ್ಯ ಆಗುತ್ತಿತ್ತು” ಎನ್ನುತ್ತಾರೆ ಜಾದವ್.

ಜಾದವ್ ಅವರ 22 ಮತ್ತು 25 ವರ್ಷ ಪ್ರಾಯದ ಇಬ್ಬರು ಮಕ್ಕಳು ಭೀಡ್ ನಲ್ಲಿ ಬಿ.ಎಸ್ಸಿ ಕಲಿಯುತ್ತಿದ್ದಾರೆ. ಮುಷ್ಕರದಲ್ಲಿ ಪಾಲ್ಗೊಂಡಿದ್ದರೆ, ಅವರ ಕಲಿಕೆಯ ಫೀಸು ಕಟ್ಟುವುದೂ ಕಷ್ಟವಾಗುತ್ತಿತ್ತು. “ಪ್ರತೀ ವರ್ಷ ಅವರಿಬ್ಬರಿಗೂ ತಲಾ ಒಂದು ಲಕ್ಷ ರೂಪಾಯಿಗಳ ವಾರ್ಷಿಕ ಫೀಸು ಭರಿಸಬೇಕಾಗುತ್ತದೆ” ಎನ್ನುತ್ತಾರಾಕೆ.


ಭೀಡ್ ಜಿಲ್ಲೆಯ ಲಿಂಬಾಗಣೇಶ್ ಗ್ರಾಮದ ರೈತೆ ಮಹಾನಂದಾ ಜಾಧವ್: “ ನಾನೀಗ ಅವರಿವರನ್ನು ನೋಡಬೇಕಾದ ಪರಿಸ್ಥಿತಿ ಇದೆ (ಸಾಲಕ್ಕಾಗಿ)”

ರೈತರ ಆರ್ಥಿಕ ಸ್ಥಿತಿಗಳು ಒಂದೇ ರೀತಿ ಇದ್ದರೂ ಪರ್ಬನಿಯಲ್ಲಿ ಮಾತ್ರ ಪರಿಸ್ಥಿತಿ ಭಿನ್ನ. ಪರ್ಬನಿಯ ಹಿರಿಯ ಪತ್ರಕರ್ತ, ಸಾಹಿತ್ಯ ಅಕಾಡಮಿ ಪುರಸ್ಕ್ರತ ಆಸಾರಾಂ ಲೋಂಟೆ ಅವರ ಪ್ರಕಾರ ಈ ಜಿಲ್ಲೆ ಬಹಳ ಹಿಂದಿನಿಂದಲೂ ಮರಾಠಾವಾಡದ ರೈತ ಹೋರಾಟಗಳ ಕೇಂದ್ರ. “ನಮ್ಮಲ್ಲಿ ಷೇತ್ಕರಿ ಸಂಘಟನೆ, ಸಿಪಿಐ ಮತ್ತು ಸಿಪಿಎಂ ಕಾರ್ಯಕರ್ತರಿದ್ದಾರೆ, ಅವರು ಈ ವಿಚಾರಗಳನ್ನು ಎತ್ತುತ್ತಿರುತ್ತಾರೆ. ಇದೆಲ್ಲ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಯಾವ ರೀತಿ ಅಲ್ಲಿನ ಜನರ ಸಂಕಟಗಳನ್ನು ಯಾವ ರೀತಿ ಎತ್ತಿ, ಜನರನ್ನು ಒಗ್ಗೂಡಿಸುತ್ತಾರೆ ಎಂಬುದನ್ನು ಅವಲಂಬಿಸಿದೆ” ಎನ್ನುತ್ತಾರವರು.

ಓಸ್ಮನಾಬಾದಿನ ಸ್ಥಳೀಯ ಪತ್ರಕರ್ತರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. “ನರೇಂದ್ರ ದಾಭೋಲ್ಕರ್ ಹತ್ಯೆ ಆದಾಗ (ಪುಣೆ, ಆಗಸ್ಟ್ 2013), ಇಲ್ಲಿ ಯಾವುದೇ ಪ್ರೇರಣೆ ಇಲ್ಲದೆ ಒಂದು ಮಾರ್ಚ್ ಆಯೋಜನೆಗೊಂಡಿತು. ಸುಮಾರು 2500 ಜನ ಇದರಲ್ಲಿ  ಪಾಲ್ಗೊಂಡಿದ್ದರು. ಇಲ್ಲಿಯ ಜನರು ಸಾಮಾಜಿಕವಾಗಿ ಸಕ್ರಿಯರಾಗಿದ್ದಾರೆ ಮತ್ತು ಸ್ಥಳೀಯ ಕಾರ್ಯಕರ್ತರು ಅವರಿಗೆ ಸೂಕ್ತ ಮಾರ್ಗದರ್ಶನಗಳನ್ನು ನೀಡುತ್ತಿರುತ್ತಾರೆ” ಎನ್ನುತ್ತಾರೆ, ಓಸ್ಮನಾಬಾದಿನ ಲೋಕಸತ್ತಾ ವರದಿಗಾರ ರವೀಂದ್ರ  ಕೇಸ್ಕರ್.

ಆದರೆ, ಬರದ ದಿನಗಳಲ್ಲಿ ಕೃಷಿ ಸಂಕಟಗಳು ತುತ್ತತುದಿಯಲ್ಲಿದ್ದಾಗ ಏಳದ ರೈತರ ಆಕ್ರೋಷ ಈಗೇಕೆ ಏಳುತ್ತಿದೆ? ಎಂಬ ಪ್ರಶ್ನೆಗೆ ತಜ್ಞರು  ಇದು ಹವಾಮಾನದಲ್ಲಿನ ಏರಿಳಿತಗಳಿಗಿಂತ ಕೃಷಿ ಸಂಕಟ ದೊಡ್ಡದೆಂಬುದನ್ನು ಬೊಟ್ಟುಮಾಡುತ್ತದೆ ಎನ್ನುತ್ತಾರೆ. – ಇದು ನೀರಿನ ತಪ್ಪು ನಿರ್ವಹಣೆ, ಕೃಷಿಗೆ ಹೂಡಬೇಕಾಗಿರುವ ಬಂಡವಾಳದಲ್ಲಿ ಆಗಿರುವ ಹೆಚ್ಚಳ, ನ್ಯಾಯಬದ್ಧ ಸಾಲದ ವ್ಯವಸ್ಥೆ ಅಥವಾ ಬೆಂಬಲ ಬೆಲೆ ಇಲ್ಲದಿರುವುದರಂತಹ ನೀತ್ಯಾತ್ಮಕ ವಿಚಾರಗಳು ಈ ಸಂಕಟದ ಬೇರು ಎನ್ನುತ್ತಾರವರು.

ಪಶ್ಚಿಮ ಮಹಾರಾಷ್ಟ್ರ ಮತ್ತು ನಾಸಿಕ್ ಗಳಲ್ಲಿನ ಗಟ್ಟಿಧ್ವನಿ ಮತ್ತು ಆಗಾಗ ಮರಾಠಾವಾಡ ಮತ್ತು ವಿದರ್ಭಗಳಲ್ಲಿ ಕೇಳಿಬಂದ ಧ್ವನಿಗಳಿಂದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರೈತರ ಬೇಡಿಕೆಗಳಿಗೆ ತಲೆಬಾಗಬೇಕಾಯಿತು. ಜೂನ್ 12 ರಂದು ಅವರು ಹೇಳಿಕೆ ನೀಡಿ ಹಾಲಿನ ಬೆಲೆ ಹೆಚ್ಚಿಸುವ ಮತ್ತು ಸಾಲಮನ್ನಾ ಪ್ರಕಟಿಸುವ ಆಶ್ವಾಸನೆಗಳನ್ನಿತ್ತರು. ಅದಾದ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಸಾಲಮನ್ನಾಕ್ಕೆ ಬೇಕಾದ ಹಣಕಾಸನ್ನು ರಾಜ್ಯ ಸರ್ಕಾರಗಳು ತಾವೇ ಒಗ್ಗೂಡಿಸಿಕೊಳ್ಳಬೇಕೆಂದು ಹೇಳಿಕೆ ಕೊಟ್ಟರು.

ಸ್ವಾಮಿನಾಥನ್ ಸಮಿತಿ 2007 ರಲ್ಲಿ ಕೊಟ್ಟಿರುವ ವಿಸ್ತ್ರತ ವರದಿಯು  ಒಂದು ದಶಕದಿಂದ ಸರಕಾರದ ಮೇಜಿನ ಮೇಲೆಯೇ ಇದೆ. ತಾಂತ್ರಿಕವಾಗಿ, ಈ ಶಿಫಾರಸುಗಳನ್ನು ಒಪ್ಪಿ ಅಳವಡಿಸಬೇಕಾಗಿರುವುದು ಕೇಂದ್ರ ಸರಕಾರದ ಜವಾಬ್ದಾರಿ. ಲೋಕಸಭಾ ಚುನಾವಣೆಗಳಿಗೆ ಮೊದಲು, ಬಿಜೆಪಿ ಈ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸುವ ಆಶ್ವಾಸನೆಯನ್ನು ನೀಡಿತ್ತು. ಆದರೆ, 2014ರಲ್ಲಿ ಚುನಾವಣೆಗಳು ಮುಗಿದ ಮೇಲೆ, ಸರ್ಕಾರವು ತಿರುಗಿಬಿದ್ದು, ಸಮಿತಿಯ ವರದಿಯನ್ನು  ಅನುಷ್ಠಾನಗೊಳಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟಿನಲ್ಲಿ ಅಫಿದಾವಿತ್ ಸಲ್ಲಿಸಿದೆ.

ಫಡ್ನವೀಸ್ ಅವರು ಈ ಬಗ್ಗೆ ಪ್ರಧಾನಮಂತ್ರಿಗಳ ಜೊತೆ ಚರ್ಚಿಸಲು ದಿಲ್ಲಿಗೆ ನಿಯೋಗವೊಂದನ್ನು ಒಯ್ಯುವ ಯೋಜನೆಯಲ್ಲಿದ್ದಾರೆಂದು ತಿಳಿದುಬಂದಿದೆ. ಮಹಾರಾಷ್ಟ್ರದ ರೈತಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಜುಲೈ 25 ರವರೆಗಿನ  ವಾಯಿದೆಯನ್ನು  ನೀಡಿದ್ದು, ಸಂಪೂರ್ಣ ಸಾಲ ಮನ್ನಾ ಪ್ರಕಟಣೆ ಮತ್ತು ತಮ್ಮ ಉಳಿದ ಬೇಡಿಕೆಗಳ ಮೇಲೆ ಸರಕಾರದ ನಿಲುವಿನ ಸ್ಪಷ್ಟನೆ ಅಷ್ಟರೊಳಗೆ ಸಿಗಬೇಕೆಂದು ಹೇಳಿದ್ದಾರೆ.  – ಇವುಗಳಲ್ಲಿ ಬಹು ಮುಖ್ಯವಾದದ್ದು ಸ್ವಾಮಿನಾಥನ್ ಸಮಿತಿಯು ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಹೇಳಿರುವಂತದ್ದು (ಉತ್ಪಾದನಾ ವೆಚ್ಚಕ್ಕೆ 50 ಶೇಕಡಾ ಸೇರಿಸಿ). ಈ ಬೇಡಿಕೆಗಳು ಜುಲೈ 25 ರೊಳಗೆ ಈಡೇರದಿದ್ದರೆ ಪ್ರತಿಭಟನೆಗಳು ಮತ್ತೆ ಆರಂಭಗೊಳ್ಳಲಿವೆ ಎಂದು ರೈತ ನಾಯಕರು ಹೇಳಿದ್ದಾರೆ.


ಓಸ್ಮನಾಬಾದ್ ಜಿಲ್ಲೆಯ ಖಾಮಸ್ವಾಡಿ ಹಳ್ಳಿಯ ರೈತ ಹೋರಾಟಗಾರ ಶರದ್ ಷೆಲ್ಕೆ: “ನಾವು ನಮ್ಮ ಹೊಲಗಳಲ್ಲಿ ಹಗಲೂ ರಾತ್ರಿ ದುಡಿಯುತ್ತಿರುವುದು ಯಾವುದಕ್ಕಾಗಿ?”

ಸಮಿತಿಯ ಶಿಫಾರಸುಗಳು ಜಾರಿಗೊಂಡರೆ, ರೈತರಿಗೆ ಶಾಶ್ವತವಾಗಿ ಬಲ ಬಂದಂತೆ ಎನ್ನುತ್ತಾರೆ ಓಸ್ಮನಾಬಾದಿನ ಕಾಲಂಬ್ ತಾಲೂಕಿನಲ್ಲಿರುವ ಖಾಮಸ್ವಾಡಿ ಹಳ್ಳಿಯ ರೈತ ಹೋರಾಟಗಾರ ಶರದ್ ಷೇಲ್ಕೆ. ಹಾಗಾದಲ್ಲಿ ಅವರು ಸಾಲ ಮನ್ನಾವನ್ನೂ ಕೇಳಬೇಕಾಗುವುದಿಲ್ಲ. “ಕೇವಲ 8-9 ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ 50,000 ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಲಾಗಿತ್ತು. ಹಾಗಿದ್ದೂ ನಾವೀಗ ಮತ್ತದೇ ಸ್ಥಿತಿಗೆ ಬಂದು ತಲುಪಿದ್ದೇವೆ.  ಹಾಗಾಗಿ ಅಲ್ಪಕಾಲಿಕ ಪರಿಹಾರಗಳ ಬದಲು ನಾವು ಶಾಶ್ವತ ಪರಿಹಾರಗಳತ್ತ ಗಮನಹರಿಸಬೇಕಿದೆ” ಎನ್ನುತ್ತಾರವರು.

7000 ಜನರಿರುವ ಖಾಮಸ್ವಾಡಿಯಲ್ಲಿ ಷೇಲ್ಕೆಯವರು ಹಾಲು ಉತ್ಪಾದಕರನ್ನು ದೊಡ್ಡ ಸಂಖ್ಯೆಯಲ್ಲಿ ಸಂಘಟಿಸಿ, ಜೂನ್ 4-5 ರಂದು  ಎರಡು ದಿನಗಳ ಮುಷ್ಕರ ನಡೆಸಿದ್ದರು, ಹಾಲನ್ನು ರಸ್ತೆಗೆ ಚೆಲ್ಲಿ  ಪ್ರತಿಭಟಿಸಿದ್ದರು. ಒಂದು ಕಿಲೋಮೀಟರ್ ಉದ್ದದ ಪತ್ರವೊಂದನ್ನು ಬರೆದು, ಇಡಿಯ ಹಳ್ಳಿ ಸಹಿ ಮಾಡಿತ್ತು. ಅದರಲ್ಲಿ “ನೀವು ನಮಗೆ ಬೆಂಬಲ ಬೆಲೆಯನ್ನು ಖಚಿತಪಡಿಸಿ; ನಾವು ನಿಮಗೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸುತ್ತೇವೆ”, ಎಂದು ಸ್ಪಷ್ಟ ಮಾತಿನಲ್ಲಿ ಹೇಳುತ್ತಿರುವಂತೆ ಬರೆದಿತ್ತು.


video : ಓಸ್ಮನಾಬಾದ್ ಜಿಲ್ಲೆಯ ಖಾಮಸ್ವಾಡಿ ಹಳ್ಳಿಯ ರೈತ ಚಂದ್ರಕಾಂತ್ ಪಾಟೀಲ್: “ಮುಖ್ಯಮಂತ್ರಿಗಳಿಗೆ ನನ್ನದೊಂದು ಸವಾಲಿದೆ.”

“ನಾನು ಎರಡು ದಿನಗಳಲ್ಲಿ 800 ರೂಪಾಯಿಯ ಹಾಲು ನೆಲಕ್ಕೆ ಸುರಿದೆ. ಆದರೆ ಎಲ್ಲರೂ ನಮ್ಮ ಸಾಲಗಳ ಬಗ್ಗೆ ಯೋಚಿಸುತ್ತಿದ್ದೇವೆ. ನನಗೂ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ನಾವು ಮುಷ್ಕರವನ್ನು ಎರಡು ದಿನಗಳಷ್ಟೇ ಮಾಡಲು ಶಕ್ತರಾದೆವು. ಸರ್ಕಾರಕ್ಕೂ ಇದು ಗೊತ್ತಿದೆ” ಅನ್ನುತ್ತಾರೆ, ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತ ಚಂದ್ರಕಾಂತ ಪಾಟೀಲ್, 32.

ಪಾಟೀಲ್ ತನ್ನ ಐದೆಕರೆ ಹೊಲದಲ್ಲಿ ಗೋಧಿ, ಜೋಳ ಮತ್ತು ಸೋಯಾಬೀನ್ ಬೆಳೆಯುತ್ತಾರೆ. “ ರೈತನಿಗೆ ತನ್ನ ಉತ್ಪನ್ನವನ್ನು ತಾನೇ ಹಾಳು ಮಾಡುವಾಗ ಮನಸ್ಸಿನಲ್ಲಿ ಏನನ್ನಿಸುತ್ತದೆ ಎಂಬುದನ್ನು ನೀವು ಊಹಿಸಲಾರಿರಿ. ಯಾರೂ ನಮ್ಮ ಮಾತು ಕೇಳುವವರಿಲ್ಲದಾಗ ಇದು ನಮ್ಮ ಕೊನೆಯ ದಾರಿ. ಒಂದು ಕ್ವಿಂಟಾಲ್ ಗೋಧಿ ಅಥವಾ ಜೋಳ ಬೆಳೆಯಲು 2000 ರೂಪಾಯಿಗಳ ವೆಚ್ಚ ತಗಲುತ್ತದೆ. ಆದರೆ ಮಾರುಕಟ್ಟೆಯಲ್ಲಿಅವುಗಳ ಬೆಲೆ 1500-1700 ರೂಪಾಯಿ ದಾಟುವುದೇ ಇಲ್ಲ. ನಾವು ಬದುಕುವುದು ಹೇಗೆ ಹೇಳಿ?”  ಎಂದು ಪ್ರಶ್ನಿಸುತ್ತಾರಾತ.

ಫಡ್ನವೀಸ್ ಅವರಿಗೆ ನನ್ನ ಐದೆಕರೆ ಹೊಲವನ್ನು ದಾನ ಮಾಡುತ್ತೇನೆ. ಸಾಧ್ಯವಿದ್ದರೆ ಅವರು ಅಲ್ಲಿ ಕೃಷಿ ಮಾಡಿ ಅವರ ಕುಟುಂಬವನ್ನು ಸಾಕಿ ತೋರಿಸಲಿ ಎಂದು ಸವಾಲು ಹಾಕುವ ಪಾಟೀಲ್, “ಮನೆ ಖರ್ಚು, ಮಕ್ಕಳ ಶಿಕ್ಷಣ ಮತ್ತು ದಿನಕ್ಕೆರಡು ಊಟ – ಇಷ್ಟನ್ನು ಮುಖ್ಯಮಂತ್ರಿಗಳು ಕೃಷಿ ಮಾಡಿ ಐದು ವರ್ಷ ಸಾಧಿಸಿ ತೋರಿಸಲಿ. ನಾನು ನನ್ನ ಹೊಲವನ್ನೇ ಅವರಿಗೆ ಬರೆದುಬಿಡುತ್ತೇನೆ. ಈ ಹೋರಾಟದಲ್ಲಿ ನಮ್ಮ ತಲೆಮಾರಿಗೇನೂ ಸಿಗದಿದ್ದರೂ, ನಮ್ಮ ಆಹುತಿ ಆದರೂ ಸರಿಯೇ. ಆದರೆ, ಈ ಬೆಲೆ ನಿರ್ಧಾರದ ರಗಳೆ ಒಮ್ಮೆಗೆ ಮುಗಿದು ಹೋಗಲಿ” ಎನ್ನುತ್ತಾರೆ.

ಅನುವಾದ:  ರಾಜಾರಾಂ ತಲ್ಲೂರು

Parth M.N.

பார்த். எம். என் 2017 முதல் பாரியின் சக ஊழியர், பல செய்தி வலைதளங்களுக்கு அறிக்கை அளிக்கும் சுதந்திர ஊடகவியலாளராவார். கிரிக்கெடையும், பயணங்களையும் விரும்புபவர்.

Other stories by Parth M.N.
Translator : Rajaram Tallur

Rajaram Tallur is a freelance journalist and a translator by profession. He has over 25 years of work experience in print and web media. Healthcare, science and developmental journalism are among his areas of interest.

Other stories by Rajaram Tallur