ಫಟ್!
ಪೆಂಗ್ ಹಣ್ಣಿನ ಬುಲೆಟ್ ತುಪ್ಕಿಯಿಂದ ಹೊರಡುವ ಸದ್ದು ಹೀಗಿರುತ್ತದೆ. ಛತ್ತೀಸ್‌ಗಢದ ಜಗದಲ್‌ಪುರ ನಗರದಲ್ಲಿ ಗೊಂಚಾ ಹಬ್ಬದ ಸಂದರ್ಭದಲ್ಲಿ ಜನರು ದೇವರಿಗೆ ಗೌರವ ಸಲ್ಲಿಸುವುದರ ಭಾಗವಾಗಿ ಇದನ್ನು ಬಳಸುತ್ತಾರೆ.
ತುಪ್ಕಿ ಎಂಬುದು ಬಿದಿರಿನ ಕೊಳವೆಯಿಂದ ಮಾಡಿದ 'ಗನ್' ಆಗಿದ್ದು, ಅದರಲ್ಲಿ ಪೆಂಗ್ - ಕಾಡು ಹಣ್ಣನ್ನು, ಬುಲೆಟ್ಟಿನಂತೆ ಬಳಸಲಾಗುತ್ತದೆ. ಭಗವಾನ್ ಜಗನ್ನಾಥನ ರಥದ ಸುತ್ತಲಿನ ಜನಪ್ರಿಯ ಉತ್ಸವದಲ್ಲಿ ಸೆಲ್ಯೂಟ್ ಆಗಿ 'ಬಂದೂಕುಗಳನ್ನು' ಬಳಸಿ ಈ ಗುಂಡು ಹಾರಿಸಲಾಗುತ್ತದೆ. ಜುಲೈನಲ್ಲಿ ನಡೆಯುವ ಈ ಉತ್ಸವವು ರಾಜ್ಯದ ಬಸ್ತಾರ್ ಪ್ರದೇಶದ ಸಾವಿರಾರು ಜನರನ್ನು ಆಕರ್ಷಿಸುತ್ತದೆ.
"ಜನರು ಗೊಂಚಾ ಹಬ್ಬಕ್ಕಾಗಿ ಹತ್ತಿರದ ಹಳ್ಳಿಗಳಿಂದ ಬರುತ್ತಾರೆ ಮತ್ತು ಖಂಡಿತವಾಗಿಯೂ ತುಪ್ಕಿಯನ್ನು ಖರೀದಿಸುತ್ತಾರೆ" ಎಂದು ಜಗದಾಲ್ಪುರದ ನಿವಾಸಿ ವನಮಾಲಿ ಪಾಣಿಗ್ರಾಹಿ ಹೇಳುತ್ತಾರೆ, ಮೆರವಣಿಗೆಯಲ್ಲಿ ತುಪ್ಕಿ ಇಲ್ಲದ ಸಮಯ ನನಗಂತೂ ನೆನಪಿಲ್ಲ ಎನ್ನುತ್ತಾರವರು.
ಗುಂಡು, ಪೆಂಗ್, ಒಂದು ಸಣ್ಣ, ದುಂಡಗಿನ ಹಸಿರು-ಹಳದಿ ಹಣ್ಣಾಗಿದ್ದು, ಇದು ಹತ್ತಿರದ ಕಾಡುಗಳಲ್ಲಿ ಕಂಡುಬರುವ ಎತ್ತರದ ಬಳ್ಳಿಯಾಗಿದ್ದು (ಸೆಲಾಸ್ಟಸ್ ಪ್ಯಾನಿಕ್ಯುಲೇಟಸ್ ವಿಲ್ಡ್) ಮಲ್ಕಾಂಗಿನಿಯಲ್ಲಿ ಗುಂಪುಗಳಲ್ಲಿ ಬೆಳೆಯುತ್ತದೆ.
ಪುರಿಯಲ್ಲಿ ಗೊಂಚಾ ಹಬ್ಬವನ್ನು ಸಹ ಆಚರಿಸಲಾಗುತ್ತದೆ ಆದರೆ ತುಪ್ಕಿ ಮತ್ತು ಪೆಂಗ್‌ನೊಂದಿಗೆ ನಮಸ್ಕಾರ ನೀಡುವ ಸಂಪ್ರದಾಯವು ಬಸ್ತಾರ್ ಪ್ರದೇಶಕ್ಕೆ ಅನನ್ಯವಾಗಿದೆ. ಈ ಬಿದಿರಿನ 'ಬಂದೂಕ'ನ್ನು ಒಂದು ಕಾಲದಲ್ಲಿ ಕಾಡು ಪ್ರಾಣಿಗಳನ್ನು ಓಡಿಸಲು ಬಳಸಲಾಗುತ್ತಿತ್ತು.
ಸೋನ್ಸಾಯ್ ಬಘೇಲ್ (40) ರೈತ ಮತ್ತು ಬಿದಿರು ಕುಶಲಕರ್ಮಿಯಾಗಿದ್ದು, ಅವರು ಜಮಾವಾಡಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಧುರ್ವ ಆದಿವಾಸಿಯಾಗಿರುವ ಅವರು, ಜುಲೈ ತಿಂಗಳಿನಲ್ಲಿ ನಡೆಯುವ ಹಬ್ಬಕ್ಕೆ ಕೆಲವು ವಾರಗಳ ಮೊದಲು ಅಂದರೆ ಜೂನ್ ತಿಂಗಳಿನಿಂದ ತುಪ್ಕಿಗಳನ್ನು ತಯಾರಿಸಲು ತಮ್ಮ ಪತ್ನಿಯೊಂದಿಗೆ ಕೆಲಸ ಮಾಡುತ್ತಾರೆ. "ಪ್ರತಿ ವರ್ಷ ಹಬ್ಬದ ಮೊದಲು ನಾವು ತುಪ್ಕಿಗಳನ್ನು ತಯಾರಿಸಲು ಪ್ರಾರಂಭಿಸುತ್ತೇವೆ. ನಾವು ಕಾಡಿನಿಂದ [ಮುಂಚಿತವಾಗಿ] ಬಿದಿರನ್ನು ಸಂಗ್ರಹಿಸುತ್ತೇವೆ ಮತ್ತು ಅದನ್ನು ಒಣಗಿಸುತ್ತೇವೆ," ಎಂದು ಅವರು ಹೇಳುತ್ತಾರೆ.
ಕೊಡಲಿ ಮತ್ತು ಚಾಕುವನ್ನು ಸಾಧನಗಳಾಗಿ ಬಳಸಿಕೊಂಡು ಬಿದಿರಿನ ಕಾಂಡವನ್ನು ಟೊಳ್ಳು ಮಾಡುವ ಮೂಲಕ ತುಪ್ಕಿ 'ಗನ್' ತಯಾರಿಸಲಾಗುತ್ತದೆ. ನಂತರ ತುಪ್ಕಿಯನ್ನು ಅಲಂಕರಿಸಲು ವಿವಿಧ ಬಣ್ಣಬಣ್ಣದ ಎಲೆಗಳು ಮತ್ತು ಕಾಗದಗಳನ್ನು ಬಳಸಲಾಗುತ್ತದೆ.
"ನಾವು ಕಾಡುಗಳಿಂದ ಪೆಂಗ್ ಹಣ್ಣನ್ನು ಆರಿಸಿ ತರುತ್ತೇವೆ. ಈ ಹಣ್ಣು ಮಾರ್ಚ್ ನಂತರ ಲಭ್ಯವಿರುತ್ತದೆ ಮತ್ತು ಸುಮಾರು 100 ಹಣ್ಣುಗಳ ರಾಶಿಗೆ 10 ರೂಪಾಯಿಗಳಿಗೆ ಮಾರಾಟವಾಗುತ್ತದೆ," ಎಂದು ಸೋನ್ಸಾಯ್ ಹೇಳುತ್ತಾರೆ ಮತ್ತು "ಇದು ಔಷಧೀಯ ಹಣ್ಣು. ಇದರ ಎಣ್ಣೆಯು ಸಂಧಿವಾತ ಮತ್ತು ಕೀಲು ನೋವಿಗೆ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ. ಇದರಿಂದ ಪರಿಪೂರ್ಣ ಬುಲೆಟ್ ಸಹ ಮಾಡಲಾಗುತ್ತದೆ.
ತುಪ್ಕಿಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದು ಈ ಪ್ರದೇಶದ ಅನೇಕರಿಗೆ ವಾರ್ಷಿಕ ಆದಾಯದ ಮೂಲವಾಗಿದೆ ಮತ್ತು ತುಪ್ಕಿ ತಯಾರಕರು ಹಬ್ಬದ ಸಮಯದಲ್ಲಿ ಪ್ರತಿ ಹಳ್ಳಿಯಲ್ಲೂ ಹುಟ್ಟಿಕೊಳ್ಳುತ್ತಾರೆ. ಒಂದು ತುಪ್ಕಿ 35-40 ರೂ.ಗಳಿಗೆ ಮಾರಾಟವಾಗುತ್ತದೆ, ಮತ್ತು ಬಘೇಲ್ ಅವುಗಳನ್ನು ಮಾರಾಟ ಮಾಡಲು ತನ್ನ ಮನೆಯಿಂದ 12 ಕಿಲೋಮೀಟರ್ ದೂರದಲ್ಲಿರುವ ಜಗದಲ್ಪುರ ಪಟ್ಟಣಕ್ಕೆ ಪ್ರಯಾಣಿಸುತ್ತಾರೆ. ಮೂರು ದಶಕಗಳ ಹಿಂದೆ ಒಂದು ತುಪ್ಕಿ ಎರಡು ರೂಪಾಯಿಗೆ ಮಾರಾಟವಾಗುತ್ತಿತ್ತು ಎಂದು ಅವರು ಹೇಳುತ್ತಾರೆ.
ಬಘೇಲ್ ಅವರು ಬಸ್ತಾರ್ ಜಿಲ್ಲೆಯ ಜಗದಲ್ಪುರ್ ಬ್ಲಾಕ್‌ನಲ್ಲಿರುವ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಮಳೆಯಾಶ್ರಿತ ಬೆಳೆಯಾಗಿ ಭತ್ತವನ್ನು ಬೆಳೆಯುತ್ತಾರೆ. ಅವರ ಗ್ರಾಮವಾದ ಜಮವಾಡದ 780 ಕುಟುಂಬಗಳಲ್ಲಿ, 87 ಪ್ರತಿಶತದಷ್ಟು ಧುರ್ವಾ ಮತ್ತು ಮರಿಯಾ ಆದಿವಾಸಿ ಸಮುದಾಯಗಳಿಗೆ (ಜನಗಣತಿ 2011) ಸೇರಿವೆ.
ಗೊಂಚಾ ಉತ್ಸವವು ಭಗವಾನ್ ಜಗನ್ನಾಥನಿಗೆ ಸಂಬಂಧಿಸಿದ ಕಥೆಯಲ್ಲಿ ತನ್ನ ಬೇರುಗಳನ್ನು ಹೊಂದಿದೆ. ಚಾಳುಕ್ಯ ವಂಶದ ಬಸ್ತಾರ್ ರಾಜ ಪುರುಷೋತ್ತಮ್ ದೇವ್, ಭಗವಾನ್ ಜಗನ್ನಾಥನಿಗೆ ಚಿನ್ನ ಮತ್ತು ಬೆಳ್ಳಿಯನ್ನು ಅರ್ಪಿಸಲು ಪುರಿಗೆ ಹೋದನು. ಪುರಿ ರಾಜನ ನಿರ್ದೇಶನದಂತೆ ಜಗನ್ನಾಥ ದೇವಾಲಯದ ಪುರೋಹಿತ ಪುರುಷೋತ್ತಮನಿಗೆ 16 ಚಕ್ರಗಳ ರಥವನ್ನು ಉಡುಗೊರೆಯಾಗಿ ನೀಡಿದ.
ನಂತರ, ಸಾಲ್ ಮತ್ತು ತೇಗದಿಂದ ಮಾಡಿದ ದೈತ್ಯ ರಥವನ್ನು ವಿಭಜಿಸಲಾಯಿತು ಮತ್ತು ಬಸ್ತಾರ್‌ನಲ್ಲಿರುವ ಭಗವಾನ್ ಜಗನ್ನಾಥನಿಗೆ ನಾಲ್ಕು ಚಕ್ರಗಳನ್ನು ಅರ್ಪಿಸಲಾಯಿತು. ಬಸ್ತಾರ್‌ನಲ್ಲಿ ಗೋಂಚಾ ಉತ್ಸವ ಎಂದೂ ಕರೆಯಲ್ಪಡುವ ರಥಯಾತ್ರೆಯ ಮೂಲ ಇದು. (ಉಳಿದ 12 ಚಕ್ರಗಳ ರಥವನ್ನು ಮಾತಾ ದಂತೇಶ್ವರಿಗೆ ಅರ್ಪಿಸಲಾಯಿತು.)
ಪುರುಷೋತ್ತಮ್ ದೇವ ತುಪ್ಕಿಯನ್ನು ನೋಡಿ ಅದನ್ನು ಗೊಂಚ ಉತ್ಸವದಲ್ಲಿ ಬಳಸಲು ಅನುಮತಿಸಿದ. ಈ ಹಬ್ಬದ ಸಮಯದಲ್ಲಿ, ಜಗನ್ನಾಥನಿಗೆ ಪನಸ್ ಕುವಾವನ್ನು ನೀಡಲಾಗುತ್ತದೆ - ಹಣ್ಣಾದ ಹಲಸನ್ನು ಹಲ್ಬಿ ಭಾಷೆಯಲ್ಲಿ ಪನಸ್ ಕುವಾ ಎಂದು ಕರೆಯಲಾಗುತ್ತದೆ. ಜಗದಾಲ್ಪುರ ನಗರದ ಗೊಂಚಾ ಹಬ್ಬದಲ್ಲಿ, ಹೇರಳ ಮಾಗಿದ ಹಲಸಿನ ಹಣ್ಣು ಹೆಚ್ಚುವರಿ ಆಕರ್ಷಣೆಯಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು