ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.

ಇವರು ಪ್ರತಿ ಮುಂಜಾನೆಯಲ್ಲೂ 3 ಗಂಟೆಗೆ ಎಚ್ಚರಗೊಳ್ಳುತ್ತಾರೆ. ಐದು ಗಂಟೆಗೆಲ್ಲ ತಮ್ಮ ಕೆಲಸಕ್ಕೆ ಹಾಜರಾಗಬೇಕಿರುವ ಇವರು, ತಮ್ಮ ಗೃಹಕೃತ್ಯಗಳೆಲ್ಲವನ್ನೂ ಅದಕ್ಕೂ ಮೊದಲೇ ಮುಗಿಸುವುದು ಅವಶ್ಯ. ಸದಾ ತೇವದಿಂದ ಕೂಡಿದ ವಿಶಾಲ ಹರವಿನ ಅವರ ಕೆಲಸದ ಸ್ಥಳವು ಹೆಚ್ಚು ದೂರವೇನಿಲ್ಲ. ಮನೆಯಿಂದ ಹೊರಬರುತ್ತಿದ್ದಂತೆಯೇ ದಾಪುಗಾಲು ಹಾಕುತ್ತಾ ಕಡಲನ್ನು ತಲುಪುವ ಇವರು ನೀರಿನಲ್ಲಿ ಧುಮುಕುತ್ತಾರೆ.

ಕೆಲವೊಮ್ಮೆ ಹತ್ತಿರದ ನಡುಗಡ್ಡೆಗಳಿಗೆ ದೋಣಿಯಲ್ಲಿ ತೆರಳಿ, ಅವುಗಳ ಸುತ್ತಲೂ ಮುಳುಗು ಹಾಕುತ್ತಾ 7-8 ಗಂಟೆಗಳವರೆಗೂ ಅದನ್ನು ಮುಂದುವರೆಸುತ್ತಾರೆ. ಪ್ರತಿ ಬಾರಿ ಮುಳುಗು ಹಾಕಿದಾಗಲೂ ತಮ್ಮ ಜೀವನವು ಇದನ್ನೇ ಅವಲಂಬಿಸಿದೆಯೋ ಎಂಬಂತೆ ಸಮುದ್ರದ ಜೊಂಡಿನ ಕಂತೆಯೊಂದನ್ನು ಬಿಗಿಯಾಗಿ ಹಿಡಿದು ಮೇಲೇಳುತ್ತಾರೆ.

ಕೆಲಸಕ್ಕೆ ತೆರಳುವ ದಿನದಂದು ಇವರು ಬಟ್ಟೆ ಹಾಗೂ ಬಲೆಯ ಚೀಲದೊಂದಿಗೆ ‘ರಕ್ಷಣಾ ಸಾಧನ’ವನ್ನು ಕೊಂಡೊಯ್ಯುತ್ತಾರೆ. ಅಂಬಿಗರು ಇವರನ್ನು ಸಮುದ್ರದ ಜೊಂಡು ಹೆಚ್ಚಾಗಿರುವ ನಡುಗಡ್ಡೆಯೆಡೆಗೆ ಕರೆದೊಯ್ಯುತ್ತಾರೆ. ತಮ್ಮ ಸೀರೆಯನ್ನು ಪಂಚೆಯಂತೆ ಎರಡು ಕಾಲುಗಳ ನಡುವೆ ಬಿಗಿದು ಕಟ್ಟಿ, ಬಲೆಯ ಚೀಲವನ್ನು ತಮ್ಮ ಸೊಂಟಕ್ಕೆ ಕಟ್ಟಿಕೊಂಡು, ಸೀರೆಯ ಮೇಲೆ ಟಿ-ಶರ್ಟ್‍ನ್ನು ಧರಿಸುತ್ತಾರೆ. ‘ರಕ್ಷಣಾ ಸಾಧನವು’ ಕಣ್ಣಿನ ಕನ್ನಡಕದಂತಿರುತ್ತದೆ. ಕೆಲವರು ಬಟ್ಟೆಯ ತುಂಡನ್ನು ಬೆರಳುಗಳಿಗೆ ಸುತ್ತಿಕೊಳ್ಳುತ್ತಾರೆ. ಇನ್ನು ಕೆಲವರು ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಕೈಗವಸನ್ನು ಹಾಗೂ ಪಾದವು ಚೂಪಾದ ಬಂಡೆಗಳಿಂದ ತರಚದಂತಿರಲು ರಬ್ಬರಿನ ಪಾದರಕ್ಷೆಯನ್ನು ಧರಿಸುತ್ತಾರೆ. ಕಡಲು ಮತ್ತು ನಡುಗಡ್ಡೆಗಳ ಸುತ್ತಲೂ ಈ ಸಾಧನಗಳನ್ನು ಇವರು ಬಳಸುತ್ತಾರೆ.

ಸಮುದ್ರದ ಜೊಂಡಿನ ಸಂಗ್ರಹವು ಸಾಂಪ್ರದಾಯಿಕ ವೃತ್ತಿಯಾಗಿದ್ದು, ಈ ಪ್ರದೇಶದಲ್ಲಿ ತಲೆಮಾರುಗಳಿಂದಲೂ ತಾಯಿಯಿಂದ ಮಗಳಿಗೆ ವರ್ಗಾಯಿಸಲ್ಪಡುತ್ತಾ, ಒಂಟಿ ಹಾಗೂ ನಿರ್ಗತಿಕ ಮಹಿಳೆಯರಿಗೆ ಆದಾಯದ ಏಕೈಕ ಮೂಲವಾಗಿದೆ.

ಸಮುದ್ರದ ಜೊಂಡು ಕಡಿಮೆಯಾಗುತ್ತಿರುವ ಕಾರಣ ಈ ಆದಾಯವು ಕ್ಷೀಣಿಸುತ್ತಿದೆ. ಉಷ್ಣತೆಯಲ್ಲಿನ ಹೆಚ್ಚಳ, ಸಮುದ್ರ ಮಟ್ಟದ ಏರಿಕೆ, ಹವಾಮಾನ ಹಾಗೂ ವಾಯುಗುಣದ ಬದಲಾವಣೆ ಮತ್ತು ಈ ಸಂಪನ್ಮೂಲದ ಅತಿಯಾದ ಬಳಕೆಯು ಇದಕ್ಕೆ ಕಾರಣಗಳಾಗಿವೆ.

“ಸಮುದ್ರದ ಜೊಂಡಿನ ಬೆಳವಣಿಗೆಯು ಗಮನಾರ್ಹವಾಗಿ ಕಡಿಮೆಯಾಗುತ್ತಿದೆ”, ಎನ್ನುತ್ತಾರೆ 42 ವರ್ಷದ ಪಿ. ರುಕ್ಕಮ್ಮ. ಇಲ್ಲಿ ಕೆಲಸದಲ್ಲಿ ತೊಡಗಿರುವ ಇತರೆ ಮಹಿಳಾ ಸಂಗ್ರಹಕಾರರಂತೆ ಇವರೂ ತಿರುಪ್ಪುಲ್ಲನಿ ವಿಭಾಗದ ಮಯಕುಲಂ ಬಳಿಯಲ್ಲಿನ ಭಾರತಿ ನಗರದವರಾಗಿದ್ದಾರೆ. “ಸಮುದ್ರದ ಜೊಂಡು ಮೊದಲು ದೊರೆಯುತ್ತಿದ್ದಷ್ಟು ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಇದು ನಮಗೆ ತಿಂಗಳಿಗೆ ಕೇವಲ 10 ದಿನಗಳ ಕೆಲಸವನ್ನಷ್ಟೇ ನೀಡುತ್ತದೆ”, ಎಂದು ಅವರು ತಿಳಿಸುತ್ತಾರೆ. ಮಹಿಳೆಯರು ವ್ಯವಸ್ಥಿತವಾಗಿ ಕೈಗೊಳ್ಳುವ ಈ ಸಂಗ್ರಹಣಾ ಕಾರ್ಯವು ವರ್ಷದಲ್ಲಿ ಕೇವಲ 5 ತಿಂಗಳ ಅವಧಿಗಷ್ಟೇ ಲಭ್ಯವಿರುವ ಕಾರಣ ಇದು ಅವರಿಗೆ ಒದಗಿದ ವಿಪತ್ತೇ ಸರಿ. ಅಲೆಗಳು ಹೆಚ್ಚು ಪ್ರಬಲವಾಗಿದ್ದು ಡಿಸೆಂಬರ್ 2004ರ ಸುನಾಮಿಯ ನಂತರ ಸಮುದ್ರದ ಮಟ್ಟ ಹೆಚ್ಚಾಗಿದೆ ಎಂಬುದು ರುಕ್ಕಮ್ಮನವರ ಅನಿಸಿಕೆ.

PHOTO • M. Palani Kumar

ಸಮುದ್ರದ ಜೊಂಡಿನ ಸಂಗ್ರಹಣೆಯು ಈ ಪ್ರದೇಶದ ಸಾಂಪ್ರದಾಯಿಕ ವೃತ್ತಿಯಾಗಿದ್ದು ತಾಯಿಯಿಂದ ಮಗಳಿಗೆ ವರ್ಗಾವಣೆಯಾಗುತ್ತದೆ. ಇಲ್ಲಿ ಯು. ಪಂಚಾವರಂ ಸಮುದ್ರದ ಜೊಂಡನ್ನು ಸಂಗ್ರಹಿಸುತ್ತಿದ್ದಾರೆ

ಈ ಬದಲಾವಣೆಗಳು ತನ್ನ ಎಂಟನೇ ವಯಸ್ಸಿನಿಂದಲೂ ಸಮುದ್ರದ ಜೊಂಡಿಗಾಗಿ ಸಮುದ್ರದಲ್ಲಿ ಮುಳುಗು ಹಾಕುತ್ತಿರುವ ಎ. ಮೂಕುಪೊರಿಯನ್ನು ಘಾಸಿಗೊಳಿಸಿವೆ. ಚಿಕ್ಕವಳಿದ್ದಾಗಲೇ ಆಕೆಯ ಹೆತ್ತವರು ಮರಣಹೊಂದಿದರು. ಸಂಬಂಧಿಕರು ಆಕೆಯನ್ನು ಮದ್ಯವಸನಿಗೆ ಕಟ್ಟಿದರು. ಈಗ 35 ವರ್ಷದ ಮೂಕುಪೊರಿಗೆ ಮೂರು ಹೆಣ್ಣುಮಕ್ಕಳಿದ್ದು ಈಗಲೂ ಆತನೊಂದಿಗೇ ಬದುಕುತ್ತಿದ್ದಾಳಾದರೂ, ಆತನು ಏನನ್ನಾದರೂ ಸಂಪಾದಿಸಿ ಕುಟುಂಬವನ್ನು ಸಲಹುವ ಸ್ಥಿತಿಯಲ್ಲಿಲ್ಲ.

ಆ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾದ ಈಕೆ ತನ್ನ ಮೂರು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ, “ಸಮುದ್ರದ ಜೊಂಡಿನ ಕೊಯ್ಲಿನಿಂದ ಸಿಗುವ ಸಂಪಾದನೆಯು ಈಗ ಸಾಲುತ್ತಿಲ್ಲವೆನ್ನುತ್ತಾರೆ.” ಆಕೆಯ ಹಿರಿಯ ಮಗಳು ಬಿ.ಕಾಂ ಪದವಿಯಲ್ಲಿದ್ದಾಳೆ. ಎರಡನೆಯ ಮಗಳು ಕಾಲೇಜು ಪ್ರವೇಶವನ್ನು ಎದುರು ನೋಡುತ್ತಿದ್ದಾಳೆ. ಕಿರಿಯ ಮಗಳು 6ನೇ ತರಗತಿಯಲ್ಲಿದ್ದಾಳೆ. “ಪರಿಸ್ಥಿತಿಯು ಸದ್ಯಕ್ಕೆ ಸುಧಾರಿಸುವಂತೆ ಕಾಣುತ್ತಿಲ್ಲ”, ಎಂದು ಮೂಕುಪೊರಿ ಚಿಂತಿತರಾಗುತ್ತಾರೆ.

ಆಕೆ ಹಾಗೂ ಆಕೆಯ ಸಹವರ್ತಿ ಸಂಗ್ರಾಹಕರು ತಮಿಳುನಾಡಿನಲ್ಲಿ ಅತ್ಯಂತ ಹಿಂದುಳಿದ ಸಮುದಾಯವೆಂದು ಪರಿಗಣಿಸಲ್ಪಟ್ಟ ಮುತ್ತುರೈಯರ್‍ಗೆ ಸೇರಿದವರಾಗಿದ್ದಾರೆ. ರಾಮನಾಥಪುರಂ ಮೀನುಗಾರರ ಸಂಘದ ಅಧ್ಯಕ್ಷರಾದ ಎ. ಪಲ್ಸಾಮಿಯವರು ತಮಿಳುನಾಡಿನ 940 ಕಿ.ಮೀ. ಕಡಲ ಅಂಚಿನಲ್ಲಿ 600ಕ್ಕಿಂತಲೂ ಹೆಚ್ಚಿನ ಸಮುದ್ರದ ಜೊಂಡಿನ ಸಂಗ್ರಾಹಕರು ಲಭ್ಯವಿಲ್ಲವೆಂಬುದಾಗಿ ತಿಳಿಸುತ್ತಾರೆ. ಆದರೆ ಇವರು ನಿರ್ವಹಿಸುವ ಕೆಲಸದಿಂದ ಉಪಕೃತರಾಗಿರುವ ಜನರು ಈ ರಾಜ್ಯಕ್ಕಷ್ಟೇ ಸೀಮಿತರಾಗಿಲ್ಲ.

“ನಾವು ಕೊಯ್ಲು ಮಾಡುವ ಸಮುದ್ರದ ಜೊಂಡು ಅಗರ್‍ ನ ತಯಾರಿಕೆಯಲ್ಲಿ ಬಳಸಲಾಗುತ್ತದೆ”, ಎಂಬುದಾಗಿ 42 ವರ್ಷದ ಪಿ. ರಾಣಿಯಮ್ಮ ತಿಳಿಸುತ್ತಾರೆ. ಈ ಜಿಲೆಟಿನ್‍ ಯುಕ್ತ ವಸ್ತುವನ್ನು ಆಹಾರ ಪದಾರ್ಥಗಳನ್ನು ಮಂದಗೊಳಿಸಲು ಬಳಸುತ್ತಾರೆ.

ಇಲ್ಲಿನ ಸಮುದ್ರದ ಜೊಂಡನ್ನು ಆಹಾರೋದ್ಯಮದಲ್ಲಿ ಸಹ ಬಳಸಲಾಗುತ್ತದೆ. ಔಷಧ ಕಂಪನಿಗಳು ಔಷಧ ತಯಾರಿಕೆಯಲ್ಲಿ ಇದನ್ನು ಬಳಸುತ್ತವಲ್ಲದೆ ಕೆಲವು ಗೊಬ್ಬರಗಳಲ್ಲಿಯೂ ಇದರ ಬಳಕೆಯಿದ್ದು, ಇನ್ನೂ ಕೆಲವಾರು ಉದ್ದೇಶಗಳಿಗೆ ಇದನ್ನು ಉಪಯೋಗಿಸಲಾಗುತ್ತದೆ. ಮಹಿಳೆಯರು ಸಮುದ್ರದ ಜೊಂಡಿನ ಸಂಗ್ರಹದ ಬಳಿಕ ಅದನ್ನು ಒಣಗಿಸುತ್ತಾರೆ. ನಂತರ ಇದನ್ನು ಮಧುರೈ ಜಿಲ್ಲೆಯ ಕಾರ್ಖಾನೆಗಳಿಗೆ ಕಳುಹಿಸಿ ಸಂಸ್ಕರಿಸಲಾಗುತ್ತದೆ. ಈ ಪ್ರದೇಶದಲ್ಲಿ ಮಟ್ಟಕೊರೈ (gracilaria) ಮತ್ತು ಮರಿಕೊಝುಂತು (gelidium amansii) ಎಂಬ ಎರಡು ಪ್ರಮುಖ ಪ್ರಕಾರಗಳಿವೆ. ಇದನ್ನು ಹಣ್ಣುಗಳ ಮಿಶ್ರಣ, ಹೂರಣ ಕಡುಬು ಮತ್ತು ಜಾಮ್‍ ಗಳಲ್ಲಿ ವಿನಿಯೋಗಿಸಲಾಗುತ್ತದೆ. ಪಥ್ಯದಲ್ಲಿರುವವರಿಗೆ ಇದು ಉಪಯುಕ್ತ. ಕೆಲವೊಮ್ಮೆ ಮಲಬದ್ಧತೆಯ ಚಿಕಿತ್ಸೆಗೂ ಇದನ್ನು ಬಳಸುತ್ತಾರೆ. ಇತರೆ ಔದ್ಯಮಿಕ ಉದ್ದೇಶಗಳ ಜೊತೆಗೆ ಮಟ್ಟಕೊರೈ (gracilaria) ಅನ್ನು ಬಟ್ಟೆಗೆ ಬಣ್ಣ ಹಾಕಲು ಉಪಯೋಗಿಸಲಾಗುತ್ತದೆ.

ಆದರೆ ಈ ಸಮುದ್ರ ಜೊಂಡುಗಳ ವ್ಯಾಪಕ ಜನಪ್ರಿಯತೆಯಿಂದಾಗಿ ಇದರ ಬಳಕೆಯು ಮಿತಿಮೀರುತ್ತಿದೆ. ಅನಿಯಂತ್ರಿತ ಸಂಗ್ರಹಣೆಯಿಂದಾಗಿ ಇದರ ಲಭ್ಯತೆಯು ಗಮನಾರ್ಹವಾಗಿ ಕ್ಷೀಣಿಸುತ್ತಿದೆ ಎಂಬುದಾಗಿ ದಿ ಸೆಂಟ್ರಲ್ ಸಾಲ್ಟ್ ಅಂಡ್ ಮರೈನ್ ಕೆಮಿಕಲ್ಸ್ ಇನ್‍ಸ್ಟಿಟ್ಯೂಟ್ (ಮಂಡಪಮ್ ಕ್ಯಾಂಪ್, ರಾಮನಾಥಪುರಂ) ತಿಳಿಸುತ್ತದೆ.

PHOTO • M. Palani Kumar

ಚಿಕ್ಕದೊಂದು ಮರಿಕೊಝುಂತು ಎಂಬ ಆಹಾರಯೋಗ್ಯ ಸಮುದ್ರ ಜೊಂಡಿನ ಸಂಗ್ರಹದೊಂದಿಗೆ ಪಿ. ರಾಣಿಯಮ್ಮ

ಸಮುದ್ರ ಜೊಂಡಿನ ಪ್ರಮಾಣವು ಕಡಿಮೆಯಾಗುತ್ತಿರುವುದನ್ನು ಇದು ಪ್ರತಿಬಿಂಬಿಸುತ್ತದೆ. “ಐದು ವರ್ಷಗಳ ಹಿಂದೆ; ಏಳು ವರ್ಷಗಳಲ್ಲಿ ಕನಿಷ್ಟ 10 ಕೆ.ಜಿ ಮರಿಕೊಝುಂತು ಎಂಬ ಸಮುದ್ರದ ಜೊಂಡನ್ನು ನಾವು ಸಂಗ್ರಹಿಸುತ್ತಿದ್ದೆವು. ಆದರೆ ಈಗ ಒಂದು ದಿನಕ್ಕೆ 3 ರಿಂದ 4 ಕೆ.ಜಿ.ಗಿಂತಲೂ ಹೆಚ್ಚಿನ ಸಂಗ್ರಹ ಸಾಧ್ಯವಾಗುತ್ತಿಲ್ಲ. ಅಲ್ಲದೆ ಸಮುದ್ರದ ಜೊಂಡಿನ ಗಾತ್ರವೂ ಸಹ ವರ್ಷಗಳು ಕಳೆದಂತೆ ಕಡಿಮೆಯಾಗುತ್ತಿದೆ”, ಎನ್ನುತ್ತಾರೆ ಎಸ್. ಅಮ್ರಿತಂ.

ಈ ನಿಟ್ಟಿನ ಉದ್ಯಮವೂ ಸಹ ಕುಸಿಯುತ್ತಿದೆ. 2014ರಲ್ಲಿ ಮಧುರೈಯಲ್ಲಿ 37 ಅಗರ್ ಘಟಕಗಳಿದ್ದವು. ಈಗ ಕೇವಲ 7 ಘಟಕಗಳಿದ್ದು, ಅವು ಕೇವಲ ತಮ್ಮ ಸಾಮರ್ಥ್ಯದ ಶೇ. 40ರಷ್ಟು ಪ್ರಮಾಣದಲ್ಲಿ ಮಾತ್ರವೇ ಕಾರ್ಯಪ್ರವೃತ್ತವಾಗಿವೆ ಎಂಬುದಾಗಿ ಆ ಜಿಲ್ಲೆಯಲ್ಲಿ, ಸಮುದ್ರ ಜೊಂಡಿನ ಸಂಸ್ಕರಣಾ ಕಂಪನಿಯನ್ನು ಹೊಂದಿರುವ ಎ. ಬೋಸ್ ತಿಳಿಸುತ್ತಾರೆ. ಬೋಸ್ ಅವರು ಅಖಿಲ ಭಾರತೀಯ ಅಗರ್ ಮತ್ತು ಅಲ್ಗಿನೆಟ್ ಉತ್ಪಾದಕರ ಕಲ್ಯಾಣ ಸಂಘದ ಅಧ್ಯಕ್ಷರು. ಇದು ಕಳೆದ 10 ವರ್ಷಗಳಲ್ಲಿ ಸದಸ್ಯರ ಅಭಾವದಿಂದಾಗಿ ತಟಸ್ಥವಾಗಿದೆ.

ನಮಗೆ ದೊರೆಯುವ ಕೆಲಸದ ದಿನಗಳ ಸಂಖ್ಯೆಯು ಕಡಿಮೆಯಾಗುತ್ತಿದೆ ಎನ್ನುತ್ತಾರೆ, ಕಳೆದ ನಾಲ್ಕು ದಶಕಗಳಿಂದಲೂ ಸಮುದ್ರದ ಜೊಂಡಿಗಾಗಿ ಮುಳುಗು ಹಾಕುತ್ತಿರುವ 55 ವರ್ಷದ ಎಂ. ಮರಿಯಮ್ಮ. ಅಕಾಲದಲ್ಲಿ ನಮಗೆ ಇತರ ಯಾವುದೇ ಉದ್ಯೋಗಾವಕಾಶಗಳೂ ಇಲ್ಲವೆಂಬುದಾಗಿ ಅವರು ಅಲವತ್ತುಕೊಳ್ಳುತ್ತಾರೆ.

1964ರಲ್ಲಿ ಮರಿಯಮ್ಮ ಹುಟ್ಟಿದಾಗ, ಪ್ರತಿ ವರ್ಷ ಮಯಕುಲಂ ಹಳ್ಳಿಯಲ್ಲಿ ಉಷ್ಣಾಂಶವು 38 ಸೆಲ್ಸಿಯಸ್ ಅಥವ ಅದಕ್ಕೂ ಹೆಚ್ಚಿನ ಮಟ್ಟಕ್ಕೆ ತಲುಪುತ್ತಿದ್ದ ದಿನಗಳ ಸಂಖ್ಯೆ 179. 2019ರಲ್ಲಿ ತಾಪಮಾನದ ದಿನಗಳ ಸಂಖ್ಯೆ 271ರಷ್ಟಿದ್ದು, ಶೇ. 50ರಷ್ಟು ಹೆಚ್ಚಳವನ್ನು ಕಾಣಬಹುದಾಗಿದೆ. ನ್ಯೂಯಾರ್ಕ್ ಟೈಮ್ಸ್‍ ನಿಂದ ಅಂತರ್ಜಾಲದಲ್ಲಿ ಈ ಜುಲೈ ತಿಂಗಳಲ್ಲಿ ಪ್ರಕಟಗೊಂಡ ಹವಾಮಾನ ಮತ್ತು ಜಾಗತಿಕ ತಾಪಮಾನವನ್ನು ಕುರಿತ ಸಂವಾದಾತ್ಮಕ ಸಾಧನದ (interactive tool) ಲೆಕ್ಕಾಚಾರದ ಪ್ರಕಾರ, ಮುಂದಿನ 25 ವರ್ಷಗಳಲ್ಲಿ 286ರಿಂದ 324 ತಾಪಮಾನದ ದಿನಗಳನ್ನು ನಿರೀಕ್ಷಿಸಲಾಗಿದೆ. ಹೀಗಾಗಿ ಸಮುದ್ರದ ತಾಪಮಾನವೂ ಸಹ ಹೆಚ್ಚಾಗುತ್ತಿರುವ ಬಗ್ಗೆ ಯಾವುದೇ ಅನುಮಾನವಿಲ್ಲ.

ಭಾರತಿನಗರದ ಮಹಿಳೆಯರಲ್ಲಷ್ಟೇ ಅಲ್ಲದೆ ಇತರೆ ವಲಯದಲ್ಲೂ ಈ ಎಲ್ಲದರ ಪರಿಣಾಮವನ್ನು ಗಮನಿಸಬಹುದು. ಹವಾಮಾನ ಬದಲಾವಣೆಯನ್ನು ಕುರಿತ ಅಂತರ್ ಸರಕಾರಿ ತಜ್ಞರ ಸಮಿತಿಯ ಇತ್ತೀಚಿನ ವರದಿಯು ಸಮುದ್ರದ ಜೊಂಡು, ಹವಾಮಾನದ ಒತ್ತಡವನ್ನು ಕಡಿಮೆಗೊಳಿಸುವ ಸಾಮರ್ಥ್ಯವಿರುವ ಪ್ರಮುಖ ಅಂಶವೆಂಬುದನ್ನು ಕುರಿತ ಅಧ್ಯಯನಗಳನ್ನು ಯಾವುದೇ ಸಮರ್ಥನೆಯಿಲ್ಲದೆ ತಿಳಿಯಪಡಿಸುತ್ತದೆ. “ಸಮುದ್ರದ ಜೊಂಡಿನ ಜಲಕೃಷಿಯು, ಸದರಿ ವಿಷಯದ ಕುರಿತ ಮತ್ತಷ್ಟು ಅಧ್ಯಯನವನ್ನು ನಿರೀಕ್ಷಿಸುತ್ತದೆ”, ಎಂಬುದನ್ನು ವರದಿಯು ಸ್ವತಃ ಒಪ್ಪಿಕೊಳ್ಳುತ್ತದೆ.

ಕಲ್ಕತ್ತದ ಜಾಧವ್‍ ಪುರ್ ವಿಶ್ವವಿದ್ಯಾಲಯದ ಸಾಗರವಿಜ್ಞಾನ ಅಧ್ಯಯನ ವಲಯದ ಪ್ರೊ. ತುಹಿನ್ ಘೋಷ್ ಈ ವರದಿಯ ಪ್ರಮುಖ ಬರಹಗಾರರು. ಇವರ ಅಭಿಪ್ರಾಯಗಳು ಮೀನುಗಾರ ಮಹಿಳೆಯರ ಹೇಳಿಕೆಗಳನ್ನು ದೃಢಪಡಿಸುತ್ತವೆ. “ಕೇವಲ ಸಮುದ್ರದ ಜೊಂಡುಗಳಷ್ಟೇ ಅಲ್ಲದೆ ಇತರೆ ಪ್ರಕ್ರಿಯೆಗಳೂ ಕ್ಷೀಣ ಅಥವ ತೀವ್ರ (ಉದಾ.ಗೆ ವಲಸೆ) ಗತಿಯಲ್ಲಿ ಸಾಗುತ್ತಿವೆ ಎಂಬುದಾಗಿ ಅವರು, ‘ಪರಿ’ಯೊಂದಿಗಿನ ದೂರವಾಣಿ ಮಾತುಕತೆಯಲ್ಲಿ ತಿಳಿಯಪಡಿಸಿದರು. “ ಮೀನು ಹಾಗೂ ಸೀಗಡಿ ಮರಿಗಳ ಉತ್ಪತ್ತಿ , ಸೀಗಡಿ ಹಾಗೂ ಜೇನು ಸಂಗ್ರಹಣೆ, ವಲಸೆ ( ಸುಂದರ್‍ಬನ್‍ನಲ್ಲಿ ನೋಡಿದಂತೆ ) ಮುಂತಾದ ಸಮುದ್ರ ಮತ್ತು ಭೂಮಿಗೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಕುರಿತಂತೆ ಇದು ನಿಜವೂ ಹೌದು.

PHOTO • M. Palani Kumar

ಕೆಲವೊಮ್ಮೆ ಮಹಿಳೆಯರು ಹತ್ತಿರದ ನಡುಗಡ್ಡೆಗಳಿಗೆ ತೆರಳಲು ಇಲ್ಲಿಂದ ದೋಣಿಯಲ್ಲಿ ಸಾಗುತ್ತಾರೆ

ಮೀನುಗಾರ ಸಮುದಾಯದ ಮಾತಿನಲ್ಲಿ ತಥ್ಯವಿದೆಯೆನ್ನುತ್ತಾರೆ ಪ್ರೊ. ಘೋಷ್. “ಮೀನಿಗೆ ಸಂಬಂಧಿಸಿದ ವಿಪತ್ತುಗಳಿಗೆ ಕೇವಲ ಹವಾಮಾನ ಬದಲಾವಣೆಯೇ ಅಲ್ಲದೆ, ಮೀನು ಹಿಡಿಯುವ ದೋಣಿಗಳಿಂದ ಮೀನುಗಳ ಅಪಾರ ಸಂಗ್ರಹಣೆ ಮತ್ತು ಔದ್ಯಮಿಕ ಶ್ರೇಣಿಯ ಮೀನುಗಾರಿಕೆಯೂ ಇದಕ್ಕೆ ಕಾರಣ. ಇದರಿಂದಾಗಿ ಸಾಂಪ್ರದಾಯಿಕ ಮೀನುಗಾರರಿಗೆ ತಮ್ಮ ಎಂದಿನ ಸಮುದ್ರ ಮಾರ್ಗಗಳಲ್ಲಿನ ಮೀನುಗಳ ಲಭ್ಯತೆಯೂ ಕಡಿಮೆಯಾಗಿದೆ.”

ಮೀನು ಹಿಡಿಯುವ ದೋಣಿಗಳು ಸಮುದ್ರದ ಜೊಂಡಿಗೆ ಹಾನಿಯನ್ನುಂಟುಮಾಡುವುದಿಲ್ಲವಾದರೂ, ಔದ್ಯಮಿಕ ವಲಯದ ಮಿತಿಮೀರಿದ ಬಳಕೆಯು ಇದನ್ನು ಪ್ರಭಾವಿಸುತ್ತಿದೆ. ಈ ಪ್ರಕ್ರಿಯೆಯಲ್ಲಿನ ತಮ್ಮ ಚಿಕ್ಕದಾದರೂ ಪ್ರಮುಖ ಪಾತ್ರದ ಬಗ್ಗೆ ಭಾರತಿ ನಗರದ ಮೀನುಗಾರ ಮಹಿಳೆಯರು ಪರ್ಯಾಲೋಚಿಸುತ್ತಾರೆ. ಕ್ಷೀಣಿಸುತ್ತಿರುವ ಸಮುದ್ರದ ಜೊಂಡಿನ ಬಗ್ಗೆ ಚಿಂತಿತರಾದ ಇವರು ತಮ್ಮಲ್ಲೇ ಸಭೆಗಳನ್ನು ನಡೆಸಿ, ಜುಲೈನಿಂದ 5 ತಿಂಗಳವರೆಗಿನ ಕ್ರಮಬದ್ಧ ಸಂಗ್ರಹಣೆಗೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿದರು. ಸಮುದ್ರ ಜೊಂಡಿನ ಪುನರ್ಜೀವನಕ್ಕೆ ಅವಕಾಶವನ್ನು ನೀಡುವ ಸಲುವಾಗಿ ನಂತರದ 3 ತಿಂಗಳವರೆಗೂ ಇವರು ಸಮುದ್ರಕ್ಕಿಳಿಯುವುದೇ ಇಲ್ಲ. ಮಾರ್ಚ್‍ನಿಂದ ಜೂನ್‍ವರೆಗೆ ಇವರು ಕೊಯ್ಲನ್ನು ಕೈಗೊಳ್ಳುತ್ತಾರಾದರೂ, ಇವರ ಮಾಹೆವಾರು ಕೆಲಸದ ಲಭ್ಯತೆ ಕೆಲವೇ ದಿನಗಳಿಗಷ್ಟೇ. ಸರಳವಾಗಿ ಹೇಳಬೇಕೆಂದರೆ ಈ ಮಹಿಳೆಯರು ತಮ್ಮದೇ ಆದ ಸ್ವ-ನಿಬಂಧನೆಯ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.

ಇದು ಆಲೋಚನಾಪೂರ್ಣ ನಡವಳಿಕೆಯೇ ಆದರೂ ಮಹಿಳೆಯರು ಇದಕ್ಕೆ ತೆರುತ್ತಿರುವ ಬೆಲೆಯು ಅಪಾರವಾದುದು. “ಬೆಸ್ತ ಮಹಿಳೆಯರಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ನಿಯಮದಡಿ ಕೆಲಸವನ್ನು ನೀಡುತ್ತಿಲ್ಲ. ಸಂಗ್ರಹಣೆಯ ಋತುವಿನಲ್ಲೂ ನಾವು ದಿನವೊಂದಕ್ಕೆ 100ರಿಂದ 150 ರೂ.ಗಳನ್ನಷ್ಟೇ ಗಳಿಸುತ್ತೇವೆ. ಪ್ರತಿಯೊಬ್ಬ ಮಹಿಳೆಯು ಒಂದು ದಿನಕ್ಕೆ 25 ಕೆ.ಜಿ ಸಮುದ್ರದ ಜೊಂಡನ್ನು ಸಂಗ್ರಹಿಸುತ್ತಾಳಾದರೂ, ಆಕೆಗೆ ಸಿಗುವ ಬೆಲೆಯು (ಇದೂ ಸಹ ಕಡಿಮೆಯಾಗುತ್ತಿದೆ) ಅವರು ಯಾವ ಪ್ರಕಾರದ ಸಮುದ್ರದ ಜೊಂಡನ್ನು ತರುತ್ತಾರೆಂಬುದನ್ನು ಅವಲಂಬಿಸಿದೆ”, ಎನ್ನುತ್ತಾರೆ ಮರಿಯಮ್ಮ.

ಕಾನೂನು ನಿಯಮಗಳಲ್ಲಿನ ಬದಲಾವಣೆಯೂ ಇದನ್ನು ಮತ್ತಷ್ಟು ಗೋಜಲುಗೊಳಿಸಿದೆ. 1980ರವರೆಗೂ ನಲ್ಲಥೀವು, ಛಲ್ಲಿ, ಉಪ್ಪುಥನ್ನಿ ಮುಂತಾದ ದೂರದ ನಡುಗಡ್ಡೆಗಳಿಗೆ ಇವರು ಎರಡು ದಿನಗಳ ದೋಣಿ ಪ್ರಯಾಣವನ್ನು ಕೈಗೊಳ್ಳುತ್ತಿದ್ದರಲ್ಲದೆ, ಮನೆಗೆ ಮರಳುವ ಮೊದಲು ಒಂದು ವಾರದವರೆಗೂ ಸಮುದ್ರದ ಜೊಂಡಿನ ಸಂಗ್ರಹದಲ್ಲಿ ತೊಡಗಿರುತ್ತಿದ್ದರು. ಆದರೆ ಆ ವರ್ಷದಂದು ಇವರು ತೆರಳುತ್ತಿದ್ದ 21 ನಡುಗಡ್ಡೆಗಳು ಅರಣ್ಯ ಇಲಾಖೆಯ ಸುಪರ್ದಿನಡಿ, ಮನ್ನಾರ್ ಸಮುದ್ರೀಯ ರಾಷ್ಟ್ರೀಯ ಉದ್ಯಾನಕ್ಕೆ ಒಳಪಟ್ಟವು. ಇಲಾಖೆಯು ನಡುಗಡ್ಡೆಯಲ್ಲಿ ತಂಗಲು ಅನುಮತಿ ನೀಡಲಿಲ್ಲ. ಅಲ್ಲದೆ ಈ ಪ್ರದೇಶಗಳ ಪ್ರವೇಶಾವಕಾಶವನ್ನು ತಡೆಹಿಡಿಯಿತು. ಈ ನಿಷೇಧವನ್ನು ಕುರಿತ ಪ್ರತಿಭಟನೆಗಳಿಗೆ ಯಾವುದೇ ಸಹಾನುಭೂತಿಪರ ಪ್ರತಿಕ್ರಿಯೆಯೂ ದೊರೆಯಲಿಲ್ಲ. 8 ಸಾವಿರದಿಂದ 10 ಸಾವಿರಗಳವರೆಗಿನ ದಂಡಕ್ಕೆ ಹೆದರಿ ಇವರು ಈಗ ನಡುಗಡ್ಡೆಗಳಿಗೆ ತೆರಳುತ್ತಿಲ್ಲ.

PHOTO • M. Palani Kumar

ಸಮುದ್ರದ ಜೊಂಡನ್ನು ಬಲೆಯ ಚೀಲಗಳಲ್ಲಿ ಸಂಗ್ರಹಿಸುವಾಗ ಇವರಿಗೆ ತರಚು ಗಾಯಗಳಾಗಿ ರಕ್ತ ಸುರಿಯುತ್ತದೆಯಾದರೂ, ಚೀಲವನ್ನು ತುಂಬುವ ಜೊಂಡು ಇವರ ಕುಟುಂಬಕ್ಕೆ ಆಸರೆಯಾಗಿದ್ದು, ಆದಾಯವನ್ನು ತರುತ್ತದೆ

ಹೀಗಾಗಿ ಆದಾಯವು ಮತ್ತಷ್ಟು ಕ್ಷೀಣಿಸಿದೆ. “ನಡುಗಡ್ಡೆಯಲ್ಲಿ ವಾರಗಟ್ಟಲೆ ತಂಗಿದಾಗ ಕನಿಷ್ಟ 1,500ರಿಂದ 2,000 ರೂ.ಗಳವೆರೆಗಿನ ಆದಾಯವನ್ನು ಗಳಿಸುತ್ತಿದ್ದೆವು. ನಮಗೆ ಮಟ್ಟಕೊರೈ ಮತ್ತು ಮರಿಕೊಝುಂತು ಸಮುದ್ರ ಜೊಂಡುಗಳೆರಡೂ ದೊರೆಯುತ್ತಿದ್ದವು. ಇದೀಗ ವಾರಕ್ಕೆ ಒಂದು ಸಾವಿರದ ಗಳಿಕೆಯೂ ಸಾಧ್ಯವಿಲ್ಲವಾಗಿದೆ”, ಎನ್ನುತ್ತಾರೆ ತನ್ನ 12ನೇ ವಯಸ್ಸಿನಿಂದಲೂ ಸಮುದ್ರ ಜೊಂಡಿನ ಸಂಗ್ರಹದಲ್ಲಿ ನಿರತರಾದ ಎಸ್. ಅಮ್ರಿತಂ.

ಇವರಿಗೆ ಹವಾಮಾನ ಬದಲಾವಣೆಯ ಚರ್ಚೆಗಳ ಬಗ್ಗೆ ಅರಿವಿಲ್ಲವಾದರೂ ಇದರ ಅನುಭವವಾಗಿದ್ದು; ಪರಿಣಾಮಗಳ ಬಗ್ಗೆ ಅರಿವಿದೆ. ತಮ್ಮ ಬದುಕು ಹಾಗೂ ವೃತ್ತಿಯಲ್ಲಿನ ಅನೇಕ ಬದಲಾವಣೆಗಳನ್ನು ಅವರು ಅರ್ಥೈಸಿಕೊಂಡಿದ್ದಾರೆ. ಸಮುದ್ರದ ವರ್ತನೆ, ಉಷ್ಣತೆ, ಹವಾಮಾನ ಹಾಗೂ ವಾಯುಗುಣದ ಬದಲಾವಣೆಗಳನ್ನವರು ಗಮನಿಸಿದ್ದಾರೆ. ಈ ಬದಲಾವಣೆಗಳಲ್ಲಿನ (ತಮ್ಮನ್ನೂ ಒಳಗೊಂಡಂತೆ) ಮಾನವನ ಚಟುವಟಿಕೆಗಳ ಪಾತ್ರದ ಬಗ್ಗೆ ತಿಳುವಳಿಕೆಯಿದೆ. ಇವರ ಏಕಮಾತ್ರ ಆದಾಯದ ಮೂಲವು ಈ ಜಟಿಲ ಪ್ರಕ್ರಿಯೆಗಳ ಗುಂಪಿನಲ್ಲಿ ಬಂಧಿಯಾಗಿದೆ. ತಮಗೆ ಯಾವುದೇ ಬದಲಿ ಆಯ್ಕೆಯನ್ನು ನೀಡದ ಬಗ್ಗೆ ಇವರಿಗೆ ತಿಳಿದಿದ್ದು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ನಮ್ಮನ್ನು ಹೊರಗಿರಿಸಲಾಗಿದೆಯೆಂಬ ಮರಿಯಮ್ಮನವರ ಟೀಕೆಯನ್ನಿಲ್ಲಿ ಗಮನಿಸಬಹುದು.

ಮಧ್ಯಾಹ್ನವಾಗುತ್ತಿದ್ದಂತೆಯೇ ನೀರಿನ ಮಟ್ಟ ಹೆಚ್ಚಾಗುತ್ತದೆ. ಹೀಗಾಗಿ ಅವರು ತಮ್ಮ ದಿನದ ಚಟುವಟಿಕೆಗಳನ್ನು ನಿಲ್ಲಿಸುತ್ತಾರೆ. ಕೆಲವೇ ಗಂಟೆಗಳಲ್ಲಿ ಅವರು ದೋಣಿಗಳಲ್ಲಿ ತೆರಳಿ ಬಲೆಯ ಚೀಲಗಳಲ್ಲಿ ತಾವು ಸಂಗ್ರಹಿಸಿದ್ದನ್ನು ತಂದು ದಡಕ್ಕೆ ಹಾಕುತ್ತಾರೆ.

ಇವರ ಚಟುವಟಿಕೆಯು ಸರಳವೇ ಆದರೂ ಅಪಾಯವಿಲ್ಲದಿಲ್ಲ. ಸಮುದ್ರವು ಹೆಚ್ಚು ಅಪಾಯಕಾರಿಯಾಗುತ್ತಿದೆ. ಕೆಲ ವಾರಗಳ ಹಿಂದೆ ಈ ಪ್ರದೇಶದಲ್ಲಿ ನಾಲ್ವರು ಮೀನುಗಾರರು ಮರಣಕ್ಕೀಡಾದರು. ಕೇವಲ ಮೂರು ದೇಹಗಳು ದೊರೆತವಷ್ಟೇ. ನಾಲ್ಕನೆಯ ದೇಹವು ದೊರೆತ ನಂತರವೇ ಮಾರುತಗಳು ತಣಿದು, ಸಮುದ್ರವು ಶಾಂತವಾಗುತ್ತದೆಂಬುದು ಸ್ಥಳೀಯರ ನಂಬಿಕೆ.

ಗಾಳಿಯು ಅನುಕೂಲಕರವಾಗಿಲ್ಲದಿದ್ದಲ್ಲಿ ಸಮುದ್ರ ಸಂಬಂಧಿತ ಕೆಲಸಗಳೆಲ್ಲವೂ ಸವಾಲಿನವೇ ಸರಿ ಎನ್ನುತ್ತಾರೆ ಸ್ಥಳೀಯರು. ಹವಾಮಾನದ ಬೃಹತ್ ಬದಲಾವಣೆಗಳ ಕಾರಣ, ಅನೇಕ ದಿನಗಳ ಪ್ರಕ್ರಿಯೆಗಳ ಊಹೆಯು ಸಾಧ್ಯವಿಲ್ಲವಾಗಿದೆ. ಸಾಂಕೇತಿಕವಾಗಿ ಹಾಗೂ ವಾಸ್ತವವಾಗಿ ತಾವು ಕೊಚ್ಚಿಕೊಂಡು ಹೋಗಬಹುದಾದ ಸಾಧ್ಯತೆಯಿದ್ದಾಗ್ಯೂ, ತಮ್ಮ ಜೀವನೋಪಾಯದ ಏಕೈಕ ಮಾರ್ಗಕ್ಕಾಗಿ ಮಹಿಳೆಯರು ಪ್ರಕ್ಷುಬ್ಧ ಸಮುದ್ರಕ್ಕೆ ತೆರಳುತ್ತಾರೆ.

PHOTO • M. Palani Kumar

ಸಮುದ್ರದ ಜೊಂಡಿಗಾಗಿ ದೋಣಿಯ ಕೌಶಲ: ಗಾಳಿಯು ಅನುಕೂಲಕರವಾಗಿಲ್ಲದಿದ್ದಲ್ಲಿ ಸಮುದ್ರ ಸಂಬಂಧಿತ ಕೆಲಸಗಳೆಲ್ಲವೂ ಸವಾಲೇ ಸರಿ. ವಾಯುಗುಣದ ಬೃಹತ್ ಬದಲಾವಣೆಗಳಿಂದಾಗಿ ಹಲವಾರು ದಿನಗಳ ಪ್ರಕ್ರಿಯೆಗಳ ಊಹೆಯು ಸಾಧ್ಯವಿಲ್ಲದಂತಾಗಿದೆ

PHOTO • M. Palani Kumar

ಹರಿದ ಕೈಗವಸಿನೊಂದಿಗೆ ಸಮುದ್ರ ಜೊಂಡಿನ ಸಂಗ್ರಾಹಕಿ - ಬಂಡೆ ಹಾಗೂ ಬಡಿಯುವ ನೀರನ್ನು ಎದುರಿಸುವ ದುರ್ಬಲ ಸುರಕ್ಷಾ ಸಾಧನ

PHOTO • M. Palani Kumar

ಬಲೆಗಳ ತಯಾರಿಕೆ: ಕನ್ನಡಕಗಳು, ಬಟ್ಟೆಯ ಪಟ್ಟಿಗಳು ಅಥವ ಕೈಗವಸು ಮತ್ತು ರಬ್ಬರ್ ಚಪ್ಪಲಿಗಳು, ಮಹಿಳೆಯರ ಪಾದಗಳು ಚೂಪು ಬಂಡೆಗಳಿಗೆ ಸಿಕ್ಕು ಗಾಯಗೊಳ್ಳುವುದನ್ನು ತಡೆಯುತ್ತವೆ

PHOTO • M. Palani Kumar

ಬಂಡೆಗಳ ಸಾಲನ್ನು ತಲುಪಲು ಪ್ರಬಲ ಅಲೆಗಳ ವಿರುದ್ಧ ಸೆಣಸುತ್ತಿರುವ ಎಸ್. ಅಮ್ರಿತಂ

PHOTO • M. Palani Kumar

ಸಮುದ್ರದ ಜೊಂಡನ್ನು ಸಂಗ್ರಹಿಸುವ ಬಲೆಯ ಚೀಲದ ಹಗ್ಗವನ್ನು ಬಿಗಿಮಾಡುತ್ತಿರುವ ಎಂ. ಮರಿಯಮ್ಮ

PHOTO • M. Palani Kumar

ಮುಳುಗು ಹಾಕಲು ಸಜ್ಜಾಗುತ್ತಿರುವುದು

PHOTO • M. Palani Kumar

ನಂತರ ಕಡಲ ತಡಿಗೆ ಮುನ್ನುಗ್ಗುತ್ತ ಮುಳುಗು ಹಾಕುತ್ತಿರುವುದು

PHOTO • M. Palani Kumar

ಮೀನು ಮತ್ತು ಸಮುದ್ರಜೀವಿಗಳನ್ನೊಳಗೊಂಡ ಅಪಾರದರ್ಶಕ ನೀರಿನಾಳ ಮಹಿಳೆಯರ ಕೆಲಸದ ತಾಣ

PHOTO • M. Palani Kumar

ಉದ್ದನೆಯ ಎಲೆಗಳನ್ನೊಳಗೊಂಡ ಸಮುದ್ರದ ಜೊಂಡು ಮಟ್ಟಕೊರೈಯನ್ನು ಸಂಗ್ರಹಿಸಿ, ಒಣಗಿಸಿ, ಬಟ್ಟೆಗಳಿಗೆ ಬಣ್ಣ ಹಾಕಲು ಬಳಸಲಾಗುತ್ತದೆ

PHOTO • M. Palani Kumar

ಕಡಲ ತಡಿಯಲ್ಲಿ ತೇಲಾಡುತ್ತಲೇ ಹಲವು ಸೆಕೆಂಡುಗಳ ಕಾಲ ಉಸಿರನ್ನು ಬಿಗಿಹಿಡಿದು ಮರಿಕೊಝುಂತನ್ನು ಸಂಗ್ರಹಿಸುತ್ತಿರುವ ರಾಣಿಯಮ್ಮ

PHOTO • M. Palani Kumar

ಕಷ್ಟಪಟ್ಟು ಸಂಪಾದಿಸಿದ ತಮ್ಮ ಸಂಗ್ರಹದೊಂದಿಗೆ ಅಲೆಗಳ ಬಡಿತದ ನಡುವೆ ಕಡಲ ಮೇಲ್ಭಾಗಕ್ಕೆ ವಾಪಸ್ಸಾಗುತ್ತಿರುವುದು

PHOTO • M. Palani Kumar

ಉಬ್ಬರವಿಳಿತವು ಆರಂಭವಾಗುತ್ತಿದೆಯಾದರೂ ಮಹಿಳೆಯರು ಮಧ್ಯಾಹ್ನದವರೆಗೂ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ

PHOTO • M. Palani Kumar

ಮುಳುಗು ಹಾಕಿದ ನಂತರ ತನ್ನ ಸಾಧನವನ್ನು ಶುಚಿಗೊಳಿಸುತ್ತಿರುವ ಸಮುದ್ರ ಜೊಂಡಿನ ಸಂಗ್ರಾಹಕಿ

PHOTO • M. Palani Kumar

ಆಯಾಸಗೊಂಡ ಮಹಿಳೆಯರಿಂದ ದಡಕ್ಕೆ ಮರುಪಯಣ

PHOTO • M. Palani Kumar

ತಾವು ಸಂಗ್ರಹಿಸಿದ ಸಮುದ್ರದ ಜೊಂಡನ್ನು ದಡಕ್ಕೆ ಎಳೆದೊಯ್ಯುತ್ತಿರುವ ಮಹಿಳೆಯರು

PHOTO • M. Palani Kumar

ಅಂದು ಸಂಗ್ರಹಿಸಿದ ಕಡು ಹಸಿರು ವರ್ಣಯುಕ್ತ ಸಮುದ್ರದ ಜೊಂಡನ್ನು ತುಂಬಿದ ಬಲೆಯ ಚೀಲವನ್ನು ಖಾಲಿಮಾಡುತ್ತಿರುವುದು

PHOTO • M. Palani Kumar

ಸಮುದ್ರದ ಜೊಂಡಿನಿಂದ ತುಂಬಿದ ದೋಣಿಯು ದಡಕ್ಕೆ ಮರಳುತ್ತಿರುವುದು: ಲಂಗರಿಗೆ ದಾರಿ ತೋರುತ್ತಿರುವ ಸಂಗ್ರಾಹಕಿ

PHOTO • M. Palani Kumar

ಸಂಗ್ರಹಿಸಿದ ಸಮುದ್ರದ ಜೊಂಡಿನ ಹೊರೆಯಿಳಿಸುತ್ತಿರುವ ಗುಂಪು

PHOTO • M. Palani Kumar

ದಿನದ ಸಂಗ್ರಹವನ್ನು ತೂಕ ಹಾಕುತ್ತಿರುವುದು

PHOTO • M. Palani Kumar

ಸಮುದ್ರದ ಜೊಂಡನ್ನು ಒಣಗಿಸುವ ಸಿದ್ಧತೆ

PHOTO • M. Palani Kumar

ಒಣಗಿಸುವ ಉದ್ದೇಶಕ್ಕಾಗಿ ಹರಡಿದ ಸಮುದ್ರ ಜೊಂಡಿನ ನಡುವೆ ತಮ್ಮ ಸಂಗ್ರಹವನ್ನು ಹೊತ್ತೊಯ್ಯುತ್ತಿರುವ ಇತರರು

PHOTO • M. Palani Kumar

ಕಡಲು ಹಾಗೂ ನೀರಿನಡಿಯಲ್ಲಿ ಗಂಟೆಗಳನ್ನು ವ್ಯಯಿಸಿದ ಮಹಿಳೆಯರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ

ಮುಖಪುಟ ಚಿತ್ರ: ಎ. ಮೂಕುಪೊರಿ ಬಲೆಯ ಚೀಲವನ್ನೆಳೆಯುತ್ತಿರುವುದು. 35ರ ವಯಸ್ಸಿನ ಈಕೆ, ತನ್ನ 8ನೇ  ವಯಸ್ಸಿನಿಂದಲೂ ಸಮುದ್ರದ ಜೊಂಡಿಗಾಗಿ ಮುಳುಗುಹಾಕುತ್ತಿದ್ದಾರೆ (ಛಾಯಾಚಿತ್ರ: ಎಂ. ಪಳನಿ ಕುಮಾರ್/ಪರಿ)

ಈ ಕಥೆಗೆ ನೀಡಿದ ಉದಾರ ನೆರವಿಗಾಗಿ ಎಸ್. ಸೆಂಥಲಿರ್ ಅವರಿಗೆ ಅನೇಕ ಧನ್ಯವಾದಗಳು .

ಯು.ಎನ್‍.ಡಿ.ಪಿ ಆಶ್ರಯದಲ್ಲಿ ಪರಿಯ ವತಿಯಿಂದ ದೇಶಾದ್ಯಂತ ಪರಿಸರದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ವರದಿಯಾಗಿಸುವ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಸದರಿ ವಿಷಯವನ್ನು ಕುರಿತಂತೆ ಸಾಮಾನ್ಯ ಜನರ ಅನುಭವ ಮತ್ತು ಹೇಳಿಕೆಗಳನ್ನು ಗ್ರಹಿಸುವ ನಿಟ್ಟಿನಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.

ಈ ಲೇಖನವನ್ನು ಪುನಃ ಪ್ರಕಟಿಸಲು ಬಯಸಿದಲ್ಲಿ, [email protected] ಗೆ ಬರೆದು, ಅದರ ಪ್ರತಿಯನ್ನು [email protected] ಗೆ ಸಲ್ಲಿಸಿ.

ಅನುವಾದ: ಶೈಲಜ ಜಿ. ಪಿ.

Reporter : M. Palani Kumar

எம். பழனி குமார், பாரியில் புகைப்படக் கலைஞராக பணிபுரிகிறார். உழைக்கும் பெண்கள் மற்றும் விளிம்புநிலை மக்களின் வாழ்க்கைகளை ஆவணப்படுத்துவதில் விருப்பம் கொண்டவர். பழனி 2021-ல் Amplify மானியமும் 2020-ல் Samyak Drishti and Photo South Asia மானியமும் பெற்றார். தயாநிதா சிங் - பாரியின் முதல் ஆவணப் புகைப்பட விருதை 2022-ல் பெற்றார். தமிழ்நாட்டில் மலக்குழி மரணங்கள் குறித்து எடுக்கப்பட்ட 'கக்கூஸ்' ஆவணப்படத்தின் ஒளிப்பதிவாளராக இருந்தவர்.

Other stories by M. Palani Kumar

பி. சாய்நாத், பாரியின் நிறுவனர் ஆவார். பல்லாண்டுகளாக கிராமப்புற செய்தியாளராக இருக்கும் அவர், ’Everybody Loves a Good Drought' மற்றும் 'The Last Heroes: Foot Soldiers of Indian Freedom' ஆகிய புத்தகங்களை எழுதியிருக்கிறார்.

Other stories by P. Sainath

பி. சாய்நாத், பாரியின் நிறுவனர் ஆவார். பல்லாண்டுகளாக கிராமப்புற செய்தியாளராக இருக்கும் அவர், ’Everybody Loves a Good Drought' மற்றும் 'The Last Heroes: Foot Soldiers of Indian Freedom' ஆகிய புத்தகங்களை எழுதியிருக்கிறார்.

Other stories by P. Sainath
Series Editors : Sharmila Joshi

ஷர்மிளா ஜோஷி, PARI-ன் முன்னாள் நிர்வாக ஆசிரியர் மற்றும் எழுத்தாளர். அவ்வப்போது கற்பிக்கும் பணியும் செய்கிறார்.

Other stories by Sharmila Joshi
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.