ಹರಿಯಾಣದ ಸೋನಿಪತ್ ಜಿಲ್ಲೆಯ ಸಿಂಘು-ದೆಹಲಿ ಗಡಿಯಲ್ಲಿ ಪ್ರತಿಭಟನಾಕಾರ ರೈತರ ಸಾಗರವನ್ನು ನೋಡುತ್ತಿದ್ದಂತೆ ಹರ್ಜೀತ್ ಸಿಂಗ್ ಅವರ ಮುಖದಲ್ಲಿ ಚಳಿಗಾಲದ ಮಸುಕು ಬೆಳಕು ಮೂಡಿ ಮರೆಯಾಗುತ್ತದೆ.
ಹತ್ತಿರದಲ್ಲಿ, ವೃದ್ಧರು ಮತ್ತು ಯುವಕರು - ಪುರುಷರು, ಮಹಿಳೆಯರು ಮತ್ತು ಮಕ್ಕಳು - ಎಲ್ಲರೂ ವಿವಿಧ ಕೆಲಸಗಳಲ್ಲಿ ನಿರತರಾಗಿದ್ದರು. ಇಬ್ಬರು ಗಂಡಸರು ಹಾಸಿಗೆಗಳನ್ನು ಕೋಲಿನಿಂದ ಬಾರಿಸಿ ಸ್ವಚ್ಛಗೊಳಿಸಿ ರಾತ್ರಿ ಮಲಗಲು ತಯಾರಿ ಮಾಡುತ್ತಿದ್ದರು. ಕೆಲವರು ದಾರಿಹೋಕರಿಗೆ ಚಹಾ ಮತ್ತು ಬಿಸ್ಕತ್ತುಗಳನ್ನು ವಿತರಿಸುತ್ತಿದ್ದರು. ಅನೇಕರು ತಮ್ಮ ಮೆಚ್ಚಿನ ನಾಯಕರ ಭಾಷಣಗಳನ್ನು ಕೇಳಲು ಈ ಬೃಹತ್ ಸಭೆಯ ಮುಂಭಾಗಕ್ಕೆ ಹೋಗುತ್ತಿದ್ದರೆ ಇನ್ನೂ ಕೆಲವರು ಊಟಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಉಳಿದವರು ಅಲ್ಲಿ ಇಲ್ಲಿ ಸುಮ್ಮನೆ ತಿರುಗಾಡುತ್ತಿದ್ದರು.
ಈ ವರ್ಷದ ಸೆಪ್ಟೆಂಬರ್ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಪ್ರವೇಶದ್ವಾರದಲ್ಲಿ ಜಮಾಯಿಸಿದ ಸಾವಿರಾರು ರೈತರಲ್ಲಿ ಹರ್ಜೀತ್ ಕೂಡ ಒಬ್ಬರು.
ಪಂಜಾಬ್ನ ಫತೇಘಡ್ ಸಾಹಿಬ್ ಜಿಲ್ಲೆಯ ಮಜ್ರಿ ಸೋಧಿಯಾನ್ ಗ್ರಾಮದಲ್ಲಿ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಭತ್ತ ಮತ್ತು ಗೋಧಿ ಬೆಳೆಯುತ್ತಿದ್ದೆ ಎಂದು ಅವರು ಹೇಳುತ್ತಾರೆ. 50 ವರ್ಷದ ಹರ್ಜೀತ್ ಅವಿವಾಹಿತರಾಗಿದ್ದು, ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ.
2017ರಲ್ಲಿ ಸಂಭವಿಸಿದ ಅಪಘಾತವೊಂದರಿಂದಾಗಿ ಹರ್ಜೀತ್ಗೆ ನಡೆಯಲು ಸಾಧ್ಯವಾಗಲಿಲ್ಲ. ಆದರೆ ತಮ್ಮ ರೈತ ಸಹೋದರರೊಂದಿಗೆ ಈ ಬೃಹತ್ ಪ್ರತಿಭಟನೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. "ನಾನು ನನ್ನ ಮನೆಯ ಛಾವಣಿಯ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ಜಾರಿ ಕೆಳಗೆ ಬಿದ್ದೆ" ಎಂದು ಅವರು ಹೇಳುತ್ತಾರೆ. "ನನ್ನ ಸೊಂಟದ ಮೂಳೆ ಮುರಿದಿದೆ."
ಅವರಿಗೆ ಆ ಕುರಿತು ಹೇಚ್ಚೇನು ಮಾಡಲು ಸಾಧ್ಯವಾಗಲಿಲ್ಲ. "ಪ್ರಥಮ ಚಿಕಿತ್ಸೆಯ ಹೊರತಾಗಿ, ಆಸ್ಪತ್ರೆಯು 2-3 ಲಕ್ಷ ರೂಪಾಯಿಗಳನ್ನು ಕೇಳುತ್ತಿರುವುದರಿಂದ ನನಗೆ ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿಲ್ಲ. ಅಷ್ಟೊಂದು ಹಣವನ್ನು ನಾನು ಎಲ್ಲಿಂದ ತರಲಿ?”
ಈಗ ಅವರು ಇಲ್ಲಿ ಎಲ್ಲವನ್ನೂ ಹೇಗೆ ನಿಭಾಯಿಸುತ್ತಾರೆ? ಮೆರವಣಿಗೆಯ ಸಮಯದಲ್ಲಿ, ಭಾಷಣಗಳಲ್ಲಿ ಅವರು ಹೇಗೆ ನಿಲ್ಲುತ್ತಾರೆ?
“ಈ ಟ್ರಾಕ್ಟರ್ನ ಚಕ್ರವನ್ನು ನೋಡಿ, ನಾನು ಅದನ್ನು ಒಂದು ಕೈಯಿಂದ ಹಿಡಿದು ಇನ್ನೊಂದು ಕೈಯಲ್ಲಿ ದಂಡ [ಕೋಲು] ಹಿಡಿದು ನಂತರ ನಿಧಾನವಾಗಿ ನಿಲ್ಲುತ್ತೇನೆ. ಕೆಲವೊಮ್ಮೆ ಯಾರದ್ದಾದರೂ ಬೆಂಬಲ ಪಡೆಯುತ್ತೇನೆ ಅಥವಾ ಗೋಡೆ ಹಿಡಿದು ನಿಲ್ಲಲು ಪ್ರಯತ್ನಿಸುತ್ತೇನೆ. ನಿಂತುಕೊಂಡಿರಲು ನಾನು ದಂಡದ ಬೆಂಬಲ ಪಡೆಯುತ್ತೇನೆ ”ಎಂದು ಅವರು ಹೇಳುತ್ತಾರೆ.
"ನಾನು ಪ್ರತಿಭಟನೆಗೆ ಬರಲು ಮುಖ್ಯ ಕಾರಣ, ನನ್ನ ಜನರು ನಮಗೆಲ್ಲರಿಗಾಗಿ ಹೋರಾಡುತ್ತಿರುವುದನ್ನು ನೋಡುತ್ತಾ ಸುಮ್ಮನೆ ಕೂರಲು ನನಗೆ ಸಾಧ್ಯವಿಲ್ಲದಿರುವುದು" ಎಂದು ಅವರು ಹೇಳುತ್ತಾರೆ. "ನಾನು ಟ್ರಕ್-ಟ್ರಾಲಿಯಲ್ಲಿ ಸುಮಾರು 250 ಕಿಲೋಮೀಟರ್ ದೂರ ಪ್ರಯಾಣಿಸಿದೆ." ಇತರ ರೈತರು ಪ್ರತಿಭಟನಾ ಸ್ಥಳವನ್ನು ತಲುಪಲು ಅವರಿಗೆ ಸಹಾಯ ಮಾಡಿದರು. ಇಲ್ಲಿ ಸೇರಿರುವ ರೈತ ಸಮೂಹವು ಹೊತ್ತುಕೊಂಡಿರುವ ನೋವಿನ ಮುಂದೆ ನನ್ನ ನೋವು ಏನೂ ಅಲ್ಲ ಎನ್ನುತ್ತಾರೆ ಹರ್ಜೀತ್.
ರಸ್ತೆ ತಡೆಗಳು ಮತ್ತು ಮುಳ್ಳುತಂತಿಗಳನ್ನು ಕಿತ್ತುಹಾಕುವುದು, ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಎದುರಿಸುವುದು, ಪೊಲೀಸರ ಥಳಿತ, ರಸ್ತೆಗಳಲ್ಲಿನ ಕಂದಕಗಳನ್ನು ದಾಟಲು ಪ್ರಯತ್ನಿಸುವುದು - ಹೀಗೆ ರೈತರು ಅನುಭವಿಸಿದ ಎಲ್ಲವನ್ನೂ ಅವರು ಕಣ್ಣಾರೆ ಕಂಡಿದ್ದಾರೆ.
"ನಾವು ಮುಂದೆ ಅನುಭವಿಸಬೇಕಿರುವ ನೋವು ಇನ್ನೂ ಹೆಚ್ಚಿವೆ" ಎಂದು ಹರ್ಜೀತ್ ಹೇಳುತ್ತಾರೆ. ಅವರ ರೈತ ಸ್ನೇಹಿತ ಕೇಸರ್ ಸಿಂಗ್ ಕೂಡ ಮೌನವಾಗಿ ಒಪ್ಪಿಕೊಳ್ಳುತ್ತಾ ತಲೆಯಾಡಿಸುತ್ತಾರೆ.
"ಅದಾನಿ ಮತ್ತು ಅಂಬಾನಿಯಂತಹ ಕಾರ್ಪೊರೇಟ್ಗಳು ನಮ್ಮ ಸ್ವಂತ ಭೂಮಿಯ ಮೇಲಿನ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆಂದು ನಮ್ಮ ನಾಯಕರು ಹೇಳುತ್ತಾರೆ. ಮತ್ತದು ನನಗೆ ನಿಜವೆನ್ನಿಸುತ್ತದೆ" ಎಂದು ನನ್ನ ಬಳಿ ಅವರು ಹೇಳಿಕೊಂಡರು.
ಇನ್ನೊಬ್ಬರಿಗೆ ಭೂಮಿಯನ್ನು ಗುತ್ತಿಗೆ ನೀಡಿದರೆ ಏನಾಗುತ್ತದೆಯೆನ್ನುವ ಅನುಭವ ಹರ್ಜೀತ್ ಅವರಿಗೆ ಈಗಾಗಲೇ ಆಗಿದೆ. ಅಪಘಾತದ ನಂತರ, ಹರ್ಜೀತ್ ತನ್ನ ನಾಲ್ಕು ಎಕರೆ ಭೂಮಿಯನ್ನು ಇನ್ನೊಬ್ಬ ರೈತನಿಗೆ ಬಾಡಿಗೆಗೆ ಕೊಟ್ಟಿದ್ದರು. ಅವರಿಗೆ ಆ ಕ್ಷಣವೇ ನಷ್ಟದ ಅನುಭವವಾಯಿತು. "ತಕ್ಷಣ ನಾನು ನಷ್ಟವನ್ನು ಅನುಭವಿಸಿದೆ." ಎನ್ನುತ್ತಾರೆ
2019ರಲ್ಲಿ ಅವರು ಆ ಭೂಮಿಯನ್ನು ಇನ್ನೊಬ್ಬ ರೈತನಿಗೆ ಎಕರೆಗೆ ರೂಪಾಯಿ 52,000ದಂತೆ ಗುತ್ತಿಗೆಗೆನೀಡಿದರು. ಅದು ಅವರಿಗೆ ವರ್ಷಕ್ಕೆ 208,000 ಆದಾಯವನ್ನುನೀಡಿತು (ಗೋಧಿ ಮತ್ತು ಭತ್ತದ ಎರಡು ಫಸಲುಗಳಿಗೆ). ಅದರಲ್ಲಿ ಅರ್ಧದಷ್ಟು ಮೊತ್ತವನ್ನು ಎಂದರೆ ರೂಪಾಯಿ 104,000 ಅನ್ನು ಸಾಗುವಳಿ ಮಾಡುವ ಮೊದಲು ಗುತ್ತಿಗೆದಾರರಿಂದ ಪಡೆದರು. ಉಳಿದ ಮೊತ್ತವನ್ನು ಸಾಗುವಳಿ ಇಳುವರಿ ಬಂದ ನಂತರ ನೀಡಲಾಗುತ್ತದೆ. ಈ ವರ್ಷವೂ ಅವರ ಆದಾಯದ ಮೂಲ ಇದೇ ಆಗಿದೆ.
"2018 ರಲ್ಲಿ, ನಾನು ಆ ಭೂಮಿಯನ್ನು ಕೃಷಿ ಮಾಡುತ್ತಿದ್ದಾಗ, ಅದೇ ಭೂಮಿಯಿಂದ ನಾನು 2.5 ಲಕ್ಷ ರೂಪಾಯಿಗಳನ್ನು ಸಂಪಾದಿಸಿದ್ದೆ" ಎಂದು ಅವರು ಹೇಳುತ್ತಾರೆ. “ವರ್ಷಕ್ಕೆ 46,000 ರೂಪಾಯಿಗಳ ನಷ್ಟ ಇದಲ್ಲದೆ, ಬೆಲೆಯೇರಿಕೆಗಳು ಸೋನ್ ಪೆ ಸುಹಾಗಾ [ಕೇಕ್ ಮೇಲೆ ಐಸಿಂಗ್] ಆಗಿದೆ. ಹಾಗಾಗಿ ನನ್ನ ಬಳಿ ಯಾವುದೇ ಉಳಿತಾಯವೂ ಇಲ್ಲವಾಗಿದೆ. ಮತ್ತು ನಾನು ಯಾವುದೇ ಪಿಂಚಣಿಯನ್ನೂ ಪಡೆಯುವುದಿಲ್ಲ."
"ನನ್ನ ಬೆನ್ನು ಮೂಳೆಯಲ್ಲೂ ಬಿರುಕಿದೆ" ಎಂದು ಹರ್ಜೀತ್ ಹೇಳುತ್ತಾರೆ. "ಇದು ಗಾಜಿನ ಗ್ಲಾಸಿನಲ್ಲಿ ನೀವು ಕೆಲವೊಮ್ಮೆ ಕಾಣಬಹುದಾದ ಬಿರುಕನ್ನು ಹೋಲುತ್ತದೆ" ಎಂದು ಅವರ ಸ್ನೇಹಿತ ಕೇಸರ್ ಹೇಳುತ್ತಾರೆ.
ಆದಾಗ್ಯೂ, ಅವರು ತನ್ನ ಬೆನ್ನು ಮೂಳೆ ಮುರಿದಿದ್ದರೂ ದೆಹಲಿಯ ಗಡಿಗೆ ಬಂದು ತಲುಪಿದ್ದಾರೆ. ಹರ್ಜೀತ್ ಸಿಂಗ್ಗೆ ನಡೆಯಲು ಸಾಧ್ಯವಾಗದಿರಬಹುದು, ಆದರೆ ಈ ಕೃಷಿ ಕಾನೂನುಗಳ ವಿರುದ್ಧ ಅವರು ಇಟ್ಟಿರುವ ಹೆಜ್ಜೆ ಬಹಳ ಪ್ರಬಲವಾದುದು.
ಅನುವಾದ: ಶಂಕರ ಎನ್. ಕೆಂಚನೂರು