ಭಾನು ಗುಡ್ಡದ ತುದಿಯಲ್ಲಿರುವ ಸ್ಲಮ್ ಕಾಲೋನಿಯ ತನ್ನ ಮನೆಯತ್ತ ಇಕ್ಕಟ್ಟಾದ ದಾರಿಗುಂಟ ನಡೆಯುತ್ತಿದ್ದಾನೆ. ತನ್ನ ಮುಖಕ್ಕೆ ಕರ್ಛೀಫ್ ಅನ್ನು ಮಾಸ್ಕ್‌ನಂತೆ ಕಟ್ಟಿಕೊಂಡ ಅವನು ದಾರಿಯಲ್ಲಿ ಯಾರೋ ಉಚಿತವಾಗಿ ನೀಡಿದ ಅರ್ಧ ಕಿಲೋ ಅಕ್ಕಿ ಮತ್ತು ಬೇಳೆಗಳನ್ನು ಕೈಯಲ್ಲಿ ಹಿಡಿದಿದ್ದಾನೆ. ಎದುರಿನಿಂದ ಒಂದಿಷ್ಟು ಜನರು ಬರುತ್ತಿರುವುದನ್ನು ನೋಡಿದ ಭಾನು ಅಲ್ಲೇ ಒಂದು ಮನೆಯ ಬದಿಯಲ್ಲಿ ಮರೆಯಾಗಿ ನಿಲ್ಲುತ್ತಾನೆ. ಅವರೆಲ್ಲರೂ ತಲೆಯ ಮೇಲೆ ಬಟ್ಟೆಯ ಗಂಟು ಮನೆಯ ಪಾತ್ರೆ ಪಗಡಗಳ ಚೀಲವನ್ನು ಹೊತ್ತು ಹೊರಟಿದ್ದರು, ಭಾನು ಅವರಲ್ಲಿ ತನಗೆ ಪರಿಚಯದ ಮುಖಗಳು ಯಾವುದಾದರೂ ಇವೆಯೇ ಎಂದು ಕಣ್ಣು ಕಿರಿದಾಗಿಸಿಕೊಂಡು ನೋಡಿದ.
ಭಾನು ಸಣ್ಣ ಚರಂಡಿಯನ್ನು ದಾಟಿ ಮುನ್ನಡೆದ. ಕಾಲೋನಿಯ ಬೀದಿ ಗುಂಟ 10x10 ಅಳತೆಯ ಎಲ್ಲ ಕೋಣೆಗಳ ಬಾಗಿಲು ಮುಚ್ಚಿಕೊಂಡಿತ್ತು. ಆ ಎಲ್ಲ ಕೋಣೆಯ ಹಿಂದೆ ಒಂದು ಅಸಹನೀಯ ಮತ್ತು ಅಸಹಜವಾದ ಮೌನ ಮನೆಮಾಡಿತ್ತು. ಅಲ್ಲಿ ಯಾರೂ ಎಂದಿನಂತೆ ಮಾತುಗಳನ್ನಾಡುತ್ತಿಲ್ಲ, ಜಗಳವಾಡುತ್ತಿಲ್ಲ, ಗಹಗಹಿಸಿ ನಗುತ್ತಿಲ್ಲ, ತಮ್ಮ ಫೋನ್‌ಗಳಲ್ಲಿ ಜೋರಾಗಿ ಕಿರುಚುತ್ತಾ ಮಾತನಾಡುತ್ತಿಲ್ಲ, ದೊಡ್ಡ ದನಿ ಹೊರಡಿಸುತ್ತಿದ್ದ ಟಿವಿಗಳದ್ದು ಸದ್ದೇ ಇಲ್ಲ. ಬಗೆಬಗೆಯ ಅಡುಗೆ ಪರಿಮಳ ಮೂಗಿಗೆ ಅಡರುತ್ತಿಲ್ಲ, ಒಲೆಗಳು ತಣ್ಣಗಾಗಿವೆ.
ಭಾನುವಿನ ಕೋಣೆ ಗುಡ್ಡದ ತುದಿಯಲ್ಲಿದೆ. ಅತ್ತ ಮನೆಯಲ್ಲಿ, ಅವನ ಹೆಂಡತಿ ಸರಿತಾ ಬಾಗಿಲಿನೆಡೆಗೆ ಸುಮ್ಮನೆ ನೋಡುತ್ತಾ ಗ್ಯಾಸ್ ಒಲೆಯ ಪಕ್ಕ ಕುಳಿತಿದ್ದಾಳೆ. ಆರು ತಿಂಗಳ ಬಸುರಿಯಾದ ಅವಳ ಕೈಗಳು ಹೊಟ್ಟೆಯ ಮೇಲಾಡುತ್ತಿವೆ. ಅವಳ ಒಂಭತ್ತು ವರ್ಷದ ಮಗ ರಾಹುಲ್ ತನ್ನ ಆಟಿಕೆ ಕಾರನ್ನು ಸಿಮೆಂಟ್ ನೆಲದ ಮೇಲೆ ಓಡಿಸುತ್ತಾ ಆಗಾಗ ಅಮ್ಮನ ಬಳಿ ತಿನ್ನಲು ಏನಾದರೂ ಕೊಡುವಂತೆ ಪೀಡಿಸುತ್ತಿದ್ದಾನೆ.
“ಅಮ್ಮಾ… ನಂಗೆ ಹೊಟ್ಟೆ ಹಸೀತಿದೆ… ಬೆಳಿಗ್ಗೆಯಿಂದ ಏನೂ ತಿಂದಿಲ್ಲ ನಾನು… ನೀನು ಇವತ್ತು ಬೆಳಿಗ್ಗೆ ಹಾಲು, ಕ್ರೀಮ್ ಬಿಸ್ಕೆಟ್ ಕೂಡ ಕೊಟ್ಟಿಲ್ಲ, ಅಮ್ಮಾ….”
ಸರಿತಾ ಮಗನಿಗೆ ತಿಳಿಯದಂತೆ ನಿಟ್ಟುಸಿರಿಡುತ್ತಾ, ಮಗನನ್ನು ತನ್ನೆಡೆಗೆ ಸೆಳೆದುಕೊಂಡು “ಹೌದು, ಮಗೂ, ನಂಗೂ ಗೊತ್ತು. ಈಗ ಅಪ್ಪ ಬರ್ತಾರೆ ಬರುವಾಗ ಏನೆಲ್ಲ ತರ್ತಾರೆ ಅವರು ಬಂದ ತಕ್ಷಣ ನಾವೆಲ್ಲ ತಿನ್ನೋಣ. ಅಲ್ಲಿಯ ತನಕ ಹೊರಗೆ ಆಟ ಆಡ್ತೀಯಾ..?”
“ನನ್ನ ಜೊತೆ ಆಟ ಆಡೋಕೆ ಯಾರೂ ಇಲ್ಲಮ್ಮ” ರಾಹುಲ್ ಬೇಸರದಿಂದ ಹೇಳುತ್ತಾನೆ. “ಅಮ್ಮಾ, ವಿಕ್ಕಿ ಮತ್ತೆ ಬಂಟಿ ಎಲ್ಲೋದ್ರು?”
“ಅವರ ಊರಿಗೆ ಹೋಗಿರಬಹುದು, ಕಳೆದ ವರ್ಷ ಹೋಗಿದ್ರಲ್ವ ಹಾಗೇನೆ. ಬರ್ತಾರೆ ಸ್ವಲ್ಪ ದಿನ ಬಿಟ್ಟು”
“ಇಲ್ಲಮ್ಮ, ಸ್ಕೂಲ್ ನಡೀತಿರುವಾಗ್ಲೇ ಹೋಗಿದ್ದಾರೆ ಅವರು. ನಂಗನ್ಸತ್ತೆ ಅವ್ರು ಮತ್ತೆ ಬರಲ್ಲ. ನಾವು ದೊಡ್ಡೋರಾದ್ಮೇಲೆ ಮೂರೂ ಜನ ಇಂಜಿನಿಯರ್ ಆಗಿ ಗ್ಯಾರೇಜ್ ತೆಗ್ದು ಕಾರು ರಿಪೇರಿ ಮಾಡಬೇಕು ಅಂದುಕೊಂಡಿದ್ವಿ. ಆದ್ರೆ… ಅವ್ರು ಇನ್ನು ಸ್ಕೂಲ್‌ಗೆ ಬರೋದೂ ಡೌಟು…”
“ನೀನೂ ಮತ್ತೆ ನಿನ್ನ ಕಾರು!, ಹೋಗ್ಲಿ ಬಿಡು ಬೇಜಾರು ಮಾಡ್ಕೊಬೇಡ. ನೀನು ದೊಡ್ಡವ ಆದ ಮೇಲೆ ನಿಂದೇ ಕಾರ್ ಗ್ಯಾರೇಜ್ ಮಾಡುವಿಯಂತೆ. ನೀನು ದೊಡ್ಡ ಮನುಷ್ಯ ಆಗ್ತೀಯ!” ಎನ್ನುತ್ತಾ ಸರಿತಾ ಎದ್ದು ನಿಂತು ಗ್ಯಾಸ್ ಒಲೆಯ ಹಿಂದಿದ್ದ ಮೂರು ಹಲಗೆಗಳಿರುವ ಶೆಲ್ಫ್‌ನತ್ತ ನೋಡುತ್ತಾಳೆ. ಅಲ್ಲಿ ಕೆಲವು ಖಾಲಿ ಪಾತ್ರೆಗಳು, ಒಂದು ಸಣ್ಣ ಬಾಣಲಿ, ಲೋಟಗಳು, ಚಮಚೆಗಳು, ನಾಲ್ಕು ತಟ್ಟೆ, ಕೆಲವು ಬಟ್ಟಲುಗಳಿವೆ. ಇನ್ನೊಂದು ಹಲಗೆಯ ಮೇಲೆ ಬೇಳೆ ಕಾಳುಗಳನ್ನು ಹಾಕಿಡುವ ಪ್ಲಾಸ್ಟಿಕ್ ಡಬ್ಬಿಗಳಿವೆ. ಎಲ್ಲ ಡಬ್ಬಿಗಳೂ ಖಾಲಿ ಬಿದ್ದಿವೆ. ಅವಳು ಅದರಲ್ಲಿ ರಾಹುಲ್ ಎದುರು ಅವನಿಗಾಗಿ ಏನೋ ತಿಂಡಿ ಹುಡುಕುತ್ತಿರುವಂತೆ ನಟಿಸುತ್ತಾ ಒಂದೊಂದೇ ಡಬ್ಬಿಯ ಮುಚ್ಚಳ ತೆಗೆದು ಮುಚ್ಚಿಡುತ್ತಿದ್ದಾಳೆ. ಒಂದು ಡಬ್ಬಿಯಲ್ಲಿ ಕ್ರೀಮ್ ಬಿಸ್ಕೆಟ್‌ನ ಖಾಲಿ ಪ್ಯಾಕ್ ಇತ್ತು. ಅವಳು ಆ ಪ್ಯಾಕನ್ನು ಮುಷ್ಟಿಯಲ್ಲಿ ಮುದುರುತ್ತಾ ರಾಹುಲ್ ಕಡೆ ನೋಡುವಷ್ಟರಲ್ಲಿ ಭಾನು ಬಾಗಿಲಿನಲ್ಲಿದ್ದ. ಅವನು ಮುಖಕ್ಕೆ ಕಟ್ಟಿದ್ದ ಕರವಸ್ತ್ರ ಬಿಚ್ಚುತ್ತಾ ಅಲ್ಲೇ ನಿಟ್ಟುಸಿರು ಬಿಡುತ್ತಾ ಕುಸಿದು ಹೊಸಿಲಿನ ಮೇಲೆ ಕುಳಿತ. ರಾಹುಲ್ ಉತ್ಸಾಹದಿಂದ ಬ್ಯಾಗ್ ತೆಗೆದುಕೊಳ್ಳಲು ಅಪ್ಪನತ್ತ ಓಡಿದ.
“ಬಂದ್ರಾ?! ರಾಹುಲ್ ಅಪ್ಪನಿಗೆ ನೀರು ಕೊಡು ಮಗನೇ.”
ಭಾನು ಇಂದು ಭೇಟಿಯಾದ ತನ್ನ ಗುತ್ತಿಗೆದಾರನಿಗೆ ಮನಸಿನಲ್ಲಿಯೇ ಅದೆಷ್ಟನೆಯ ಸಲವೋ ಉತ್ತರಿಸುತ್ತಿದ್ದ.
“ಅಪ್ಪಾ, ನೀರು… ಅಪ್ಪಾ.. ತಗೋ ನೀರು ಕುಡಿ. ನೀನು ಬಿಸ್ಕೆಟ್ ತಂದಿಲ್ಲ ಅಲ್ವಾ? ರಾಹುಲ್ ಅಪ್ಪನ ಭುಜ ಅಲ್ಲಾಡಿಸುತ್ತಾ ಕೇಳಿದ.
ಭಾನು ಏನೂ ಮಾತಾಡದೆ ಮಗನ ಕೈಯಿಂದ ನೀರು ತೆಗೆದುಕೊಂಡು ಕುಡಿಯುತ್ತಾನೆ.
ಭಾನು ಸರಿತಾಳತ್ತ ನೋಡುತ್ತಾ “ಮೇಸ್ತ್ರಿ ದುಡ್ಡು ಕೊಡ್ಲಿಲ್ಲ, ಮತ್ತೆ ಇನ್ನೂ ಒಂದು ತಿಂಗಳು ಕೆಲಸ ಶುರುವಾಗಲ್ಲ ಅಂತ ಹೇಳಿದ”
ಸರಿತಾ ಮತ್ತೆ ತನ್ನ ಕೈಗಳನ್ನು ಹೊಟ್ಟೆಯ ಮೇಲೆ ತಂದುಕೊಂಡಳು. ಅವಳು ಹೊಟೆಯಲ್ಲಿದ್ದ ಮಗುವನ್ನು ಸಂತೈಸುತ್ತಿದ್ದಳೋ ಅಥವಾ ಆ ಮಗುವಿನಿಂದ ಅವಳು ಸಾಂತ್ವನ ಪಡೆಯುತ್ತಿದ್ದಾಳೋ ಎಂದು ಗುರುತಿಸುವುದು ಕಷ್ಟವಿತ್ತು.
“ಗವರ್ಮೆಂಟ್ ಎಲ್ಲಾನೂ ಕ್ಲೋಸ್ ಮಾಡಿದೆ,” ಭಾನು ಮಾತು ಮುಂದುವರೆಸುತ್ತಾನೆ, “ಈಗ ಏನೋ ಖಾಯಿಲೆ ಶುರುವಾಗಿದೆ, ಇನ್ನು ಕೆಲಸ ಮತ್ತೆ ಯಾವಾಗ ಶುರು ಅಂತ ಸರ್ಕಾರನೇ ಹೇಳ್ಬೇಕು.”
“ಕೈಯಲ್ಲಿ ಒಂದು ಕಾಸಿಲ್ದೆ ಒಂದೂವರೆ ತಿಂಗ್ಳಾಯ್ತು. ಅಕ್ಕಿ ಬೇಳೆ ಎಲ್ಲ ಖಾಲಿ… ಇನ್ನೂ ಎಷ್ಟು ದಿನ ಇನ್ನೊಬ್ರು ಕೊಟ್ಟಿದ್ದನ್ನ ತಿನ್ನುತ್ತಾ ಬದುಕು ಕಳೆಯೋದು?”
“ನಾನು ನಿನ್ನನ್ನ ಇಲ್ಲಿಗೆ ಕರ್ಕೊಂಡು ಬರ್ಬಾರ್ದಿತ್ತು,” ಭಾನುವಿಗೆ ತನ್ನ ದನಿಯಲ್ಲಿನ ಪಾಪಪ್ರಜ್ಞೆಯನ್ನು ಮುಚ್ಚಿಡಲು ಸಾಧ್ಯವಾಗಲಿಲ್ಲ. “ಈಗ ನೀನಿರೋ ಸ್ಥಿತಿಯಲ್ಲಿ… ಹೊಟ್ಟೆ ತುಂಬಿಸುವಷ್ಟು ದುಡಿದು ತರೋದಕ್ಕೆ ನನ್ನಿಂದ ಆಗ್ತಿಲ್ಲ.. ಹೀಗೇ ಇನ್ನೂ ಕೆಲವು ತಿಂಗಳು ಇದ್ರೆ ಏನು ಮಾಡೋದು?”
ಭಾನು ಅಸಹಾಯಕತೆಯಿಂದ ಕೈ ಕೈ ಹಿಸುಕಿಕೊಳ್ಳುತ್ತಾನೆ. ಅವನ ಕುಟುಂಬ ಒಂದೂವರೆ ತಿಂಗಳಿನಿಂದ ದಿನಕ್ಕೆ ಬೇಳೆ - ಅನ್ನದ ಕೇವಲ ಒಂದು ಊಟವನ್ನು ಮಾಡುತ್ತಿದೆ. ಅದೂ ಕೂಡ ಅಲ್ಲಿನ ಕೆಲವು ಸಂಘ ಸಂಸ್ಥೆಗಳು ಕೊಟ್ಟ ದಾನದಿಂದ. ಇದೆಲ್ಲ ಶುರುವಾಗುವ ಮೊದಲು ಅವರ ಕುಟುಂಬವು ಹಸಿರು ತರಕಾರಿ, ಹಾಲು ಮತ್ತು ಸಾಧ್ಯವಿರುವಾಗಲೆಲ್ಲ ಮೊಸರು, ಆರೆಂಜ್, ಆಪಲ್ ಇತ್ಯಾದಿ ಹಣ್ಣು-ಹಂಪಲುಗಳನ್ನೂ ತಿನ್ನುತ್ತಿದ್ದರು.





