ಹರಿದ ಕಾಗದದ ಚೂರೊಂದು ಗಾಳಿಗೆ ಹಾರುತ್ತಾ ಆ ಅರ್ಧ ಕುಸಿದ ಗೋಡೆಯ ಬಳಿ ನಿಂತಿತು. ಅದರ ಮೇಲೆ ʼಅಕ್ರಮ, ಮತ್ತು ʼಅತಿಕ್ರಮಿತʼ ಎನ್ನುವ ಪದಗಳು ಎದ್ದು ಕಾಣುತ್ತಿದ್ದವು. ʼಹೊರದಬ್ಬಲಾಗುವುದುʼ ಎನ್ನುವ ಪದದ ಮೇಲೆ ಮಣ್ಣು ಚೆಲ್ಲಿದ್ದ ಕಾರಣ ಅದು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ದೇಶವೊಂದರ ಇತಿಹಾಸ ಅದರ ನಾಲ್ಕುಗೋಡೆಗಳ ನಡುವೆ ಇರಲು ಸಾಧ್ಯವಿಲ್ಲ. ಅದು ದುರ್ಬಲ ಗಡಿಗಳನ್ನು ಮೀರಿ ಆಕಾಶದೆತ್ತರಕ್ಕೆ, ದಬ್ಬಾಳಿಕೆ, ಶೌರ್ಯ ಮತ್ತು ಕ್ರಾಂತಿಯ ಲಾಂಛನಗಳಾದ್ಯಂತ ತಲುಪುತ್ತದೆ.

ಅವಳು ರಸ್ತೆಯಲ್ಲಿ ಬಿದ್ದಿದ್ದ ಕಲ್ಲು, ಇಟ್ಟಿಗೆಗಳ ರಾಶಿಯನ್ನು ನೋಡುತ್ತ ಕುಳಿತಿದ್ದಳು. ಹಿಂದಿನ ದಿನ ಅದು ಅವಳ ಮನೆ ಮತ್ತು ಅಂಗಡಿಯಾಗಿತ್ತು. ಕಳೆದ ಹದಿನಾರು ವರ್ಷಗಳಿಂದ ಆಕೆ ಸಂಜೆಯ ಹೊತ್ತು ಅಲ್ಲಿ ಕುಳಿತು ಚಹಾ ಹೀರುತ್ತಿದ್ದಳು. ಹಗಲಿನಲ್ಲಿ ಚಪ್ಪಲಿ ಮಾರುತ್ತಿದ್ದಳು.  ಫುಟ್‌ಪಾತ್‌ ಮೇಲಿದ್ದ ಆಕೆಯ ಈ ಅರಮನೆ ಈಗ ಚೂರು ಚೂರಾಗಿ ಅದರ ಇಟ್ಟಿಗೆ, ಕಲ್ಲುಗಳು ಯಾವುದೋ ಅನಾಥ ಸಮಾಧಿಯಂತೆ ಕಾಣುತ್ತಿತ್ತು.

ಒಂದು ಕಾಲದಲ್ಲಿ ಇಲ್ಲೊಬ್ಬ ಬೇಗಂ ವಾಸಿಸುತ್ತಿದ್ದಳು. ಬೇಗಂ ಹಝರತ್‌ ಮಹಲ್‌, ಅವಳು ಅವಧ್‌ನ ಮಹಾರಾಣಿಯಾಗಿದ್ದಳು. ಅವಳು ತನ್ನ ನೆಲವನ್ನು ಬ್ರಿಟಿಷರಿಂದ ಮುಕ್ತಗೊಳಿಸಲೆಂದು ಹೋರಾಡಿ ಕೊನೆಗೆ ನೇಪಾಳದಲ್ಲಿ ಆಶ್ರಯ ಪಡೆಯಬೇಕಾಗಿತ್ತು. ಈಕೆ ಭಾರತದ ವಸಾಹತುಶಾಹಿಯ ಹೋರಾಡಿ ಮರೆವೆಗೆ ಸರಿದಿರುವ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬಳು. ಅವಳ ಪರಂಪರೆ ಮಾಸಿ ಹೋಗಿ ಅಳಿಸಿಹೋಯಿತು. ಅವಳಿಂದು ತಣ್ಣನೆಯ ಕಲ್ಲಾಗಿ ಗಡಿಯ ಆ ಭಾಗದಲ್ಲಿರುವ ಕಠ್ಮಂಡುವಿನಲ್ಲಿ ಮಲಗಿದ್ದಾಳೆ.

ಅಂತಹ ಅಸಂಖ್ಯಾತ ಸಮಾಧಿಗಳು, ಪ್ರತಿರೋಧದ ಅಸ್ಥಿಪಂಜರಗಳು ಭಾರತೀಯ ಉಪಖಂಡದ ಎಲ್ಲೆಡೆ ಆಳದಲ್ಲಿ ಹುದುಗಿವೆ. ಆದರೆ ಅಜ್ಞಾನ ಮತ್ತು ದ್ವೇಷದ ಮಣ್ಣನ್ನು ತೆಗೆದುಹಾಕಬಲ್ಲ ಬುಲ್ಡೋಜರುಗಳು ಸಿಗುತ್ತಿಲ್ಲ, ಈ ಮರೆತುಹೋದ ಪ್ರತಿರೋಧದ ಮುಷ್ಟಿಗಳನ್ನು ಉತ್ಖನನ ಮಾಡಲು ಯಾವುದೇ ಯಂತ್ರಗಳಿಲ್ಲ. ವಸಾಹತುಶಾಹಿ ಇತಿಹಾಸವನ್ನು ನುಚ್ಚುನೂರು ಮಾಡಿ ಅದನ್ನು ತುಳಿತಕ್ಕೊಳಗಾದವರ ಧ್ವನಿಯಾಗಿ ಬದಲಾಯಿಸುವ ಬುಲ್ಡೋಜರುಗಳು ಯಾವುದೂ ಇಲ್ಲ. ಅನ್ಯಾಯದ ಹಾದಿಯಲ್ಲಿ ನಿಲ್ಲಬಲ್ಲ ಬುಲ್ಡೋಜರ್ ಇಲ್ಲ. ಇಲ್ಲ ಇನ್ನೂ ಬಂದಿಲ್ಲ.

ಗೋಕುಲ್‌ ಜಿ.ಕೆ. ಅವರ ದನಿಯಲ್ಲಿ ಕವನ ವಾಚನವನ್ನು ಕೇಳಿ

ರಾಜನ ಮುದ್ದು ಸಾಕುಪ್ರಾಣಿ

ನನ್ನ ನೆರೆಮನೆಯ ಅಂಗಳದಲ್ಲಿ
ಇದ್ದಕ್ಕಿದ್ದಂತೆ ಕಾಣಿಸಿಕೊಂಡಿತು
ಒಂದು ವಿಚಿತ್ರ ಜೀವಿ.
ಅದರ ಹಳದಿ ಚರ್ಮದ ತುಂಬೆಲ್ಲ ಪ್ರಚೋದನೆಯ ಅಂಟು.
ಈಗಷ್ಟೇ ಎಲ್ಲೋ ಕಿತ್ತು ತಿಂದ ದೇಹದ ರಕ್ತ ಮಾಂಸ ಅದರ ಉಗುರುಗಳಲ್ಲಿತ್ತು
ಮೃಗವು ಕಿರುಚಿತು
ತಲೆಯೆತ್ತಿ ನಿಂತು
ನನ್ನ ನೆರೆ ಮನೆಯವರ ಮೇಲೆರಗಿತು
ಪಕ್ಕೆಲುಬುಗಳಿಗೆ ಪಂಜದಿಂದ ಹೊಡೆದು
ಆಕೆಯ ಹೃದಯವನ್ನೇ ಕಿತ್ತು ತಂದಿತು
ತನ್ನ ತುಕ್ಕು ಹಿಡಿದ ಕೈಗಳಲ್ಲಿ
ಅಬ್ಬಾ! ಹಠಮಾರಿ ಪ್ರಾಣಿಯಿದು!
ರಾಜನ ಅಚ್ಚುಮೆಚ್ಚಿನ ಮುದ್ದು ಪ್ರಾಣಿಯಿದು.

ಆದರೆ ಅದಕ್ಕೆ ನಿರಾಶೆ ಹುಟ್ಟಿಸುವಂತೆ
ನನ್ನ ನೆರೆಯವರ ಎದೆಯ ಕಪ್ಪು ಆಳದಲ್ಲಿ
ಇನ್ನೊಂದು ಹೃದಯ ಹುಟ್ಟಿತು
ವ್ಯಗ್ರಗೊಂಡ ಮೃಗ ಮತ್ತೆ ಎಗರಿ ಅದನ್ನೂ ಕಿತ್ತು ಹಾಕಿತು.
ಮತ್ತೊಂದು ಕೆಂಪು ಹೃದಯ ಹುಟ್ಟತು ಜೀವದೊಡನೆ
ಅದು ಕಿತ್ತು ಬಿಸಾಡಿದಂತೆಲ್ಲ ಹೊಸದೊಂದು ಹೃದಯ ಹುಟ್ಟುತ್ತಲೇ ಇತ್ತು.

ಅಲ್ಲಿ,
ಹೊಸ ಹೃದಯ, ಹೊಸ ಬೀಜ,
ಹೊಸ ಹೂವು, ಹೊಸ ಬದುಕು,
ಹೊಸದೇ ಆದ ಒಂದು ಜಗತ್ತು ಹುಟ್ಟಿತು.

ಒಂದು ವಿಚಿತ್ರ ಪ್ರಾಣಿ ಕಾಣಿಸಿಕೊಂಡಿತು
ನನ್ನ ನೆರೆಮನೆಯ ಅಂಗಳದಲ್ಲಿ,
ಬೊಗಸೆ ತುಂಬಾ ಕದ್ದ ಹೃದಯಗಳಿರುವ ಪ್ರಾಣಿ.

ಅನುವಾದ: ಶಂಕರ. ಎನ್. ಕೆಂಚನೂರು

Poem and Text : Gokul G.K.

கோகுல் ஜி.கே. கேரளாவின் திருவனந்தபுரத்தைச் சேர்ந்த ஒரு சுயாதீன பத்திரிகையாளர்.

Other stories by Gokul G.K.
Illustration : Labani Jangi

லபானி ஜங்கி 2020ம் ஆண்டில் PARI மானியப் பணியில் இணைந்தவர். மேற்கு வங்கத்தின் நாடியா மாவட்டத்தைச் சேர்ந்தவர். சுயாதீன ஓவியர். தொழிலாளர் இடப்பெயர்வுகள் பற்றிய ஆய்வுப்படிப்பை கொல்கத்தாவின் சமூக அறிவியல்களுக்கான கல்வி மையத்தில் படித்துக் கொண்டிருப்பவர்.

Other stories by Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru