ದಾಕ್ ಸದ್ದು ಈ ಅಗರ್ತಲಾವನ್ನು ಆವರಿಸಲಾರಂಭಿಸಿದೆ. ಅಕ್ಟೋಬರ್ 11ರಂದು ದುರ್ಗಾಪೂಜೆ ಆರಂಭಗೊಳ್ಳಲಿದೆ. ಮತ್ತು ಪ್ರತಿ ವರ್ಷವೂ ಹಬ್ಬದ ಸಿದ್ಧತೆಗಳು ವಾರಕ್ಕೂ ಮೊದಲೇ ಪ್ರಾರಂಭಗೊಳ್ಳುತ್ತವೆ. ಈಗಾಗಲೇ ಚಪ್ಪರಗಳಿಗಾಗಿ ಕಂಬಗಳನ್ನು ನೆಡಲಾಗಿದೆ, ವಿಗ್ರಹ ತಯಾರಕರು ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ, ಕುಟುಂಬಗಳು ಹೊಸ ಬಟ್ಟೆಗಳನ್ನು ಖರೀದಿಸುತ್ತಿವೆ.
ದಾಕ್ ಎನ್ನುವುದು ಡೊಳ್ಳಿನ ಮಾದರಿಯ ವಾದ್ಯ. ಅದನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಕೋಲಿನಿಂದ ಬಾರಿಸಲಾಗುತ್ತದೆ. ಅಥವಾ ಯಾವುದಾದರೂ ಗಟ್ಟಿಯಾದ ಸ್ಥಳದ ಮೇಲಿಟ್ಟು ಬಾರಿಸಲಾಗುತ್ತದೆ. ಈ ವಾದ್ಯವು ಇಂತಹ ಆಚರಣೆಗಳ ಅವಿಭಾಜ್ಯ ಅಂಗವಾಗಿದೆ.
ಈ ದಾಕ್ ಬಾರಿಸುವ ಕೆಲಸ ಪೂರ್ಣಾವಧಿಯದ್ದಲ್ಲ. ಪ್ರತಿ ವರ್ಷ ಪೂಜೆಯ ಐದು ದಿನಗಳ ಕಾಲ ಈ ಕೆಲಸವಿರುತ್ತದೆ. ಲಕ್ಷ್ಮಿ ಪೂಜೆಯ ದಿನದ ದಾಕ್‌ನ ಅಂತಿಮ ಸದ್ದು ಕೇಳುತ್ತದೆ. ಈ ವರ್ಷ ಇದು ಅಕ್ಟೋಬರ್ 20ಕ್ಕೆ ಮುಗಿಯಲಿದೆ. ಕೆಲವೊಮ್ಮೆ ದಾಕಿಗಳನ್ನು ದೀಪಾವಳಿಯಲ್ಲೂ ಬಾರಿಸಲು ಕರೆಸುತ್ತಾರೆ. ಆದರೆ ದುರ್ಗಾ ಪೂಜೆಯ ಸಮಯದಲ್ಲಿ ದಾಕ್ ಕಲಾವಿದರಿಗೆ ಅಗರ್ತಲಾ ಮತ್ತು ತ್ರಿಪುರಾ ರಾಜ್ಯದ ಇತರ ಭಾಗಗಳಲ್ಲಿ ಹೆಚ್ಚಿನ ಬೇಡಿಕೆಯಿರುತ್ತದೆ.
ದಾಕಿ ಕಲಾವಿದರನ್ನು ಪೆಂಡಾಲ್ ಸಮಿತಿಗಳು ಕರೆಸುತ್ತವೆ. ಕೆಲವೊಮ್ಮೆ ಕುಟುಂಬಗಳು ಕೂಡಾ ಕರೆಸುತ್ತವೆ. ಕೆಲವೊಮ್ಮೆ ಅವರನ್ನು ನೇಮಿಸಿಕೊಳ್ಳುವ ಮೊದಲು ಪ್ರದರ್ಶನ ನೀಡುವಂತೆ ಕೇಳಲಾಗುತ್ತದೆ. ಅವರಲ್ಲಿ ಬಹುತೇಕರು ಕಲಾ ನೈಪುಣ್ಯವನ್ನು ಹೊಂದಿರುತ್ತಾರೆ ಮತ್ತು ಅವರು ಇದನ್ನು ತಮ್ಮ ಕುಟುಂಬದ ಹಿರಿಯರಿಂದಲೇ ಕಲಿತಿರುತ್ತಾರೆ. “ನಾನು ನನ್ನ ಸೋದರ ಸಂಬಂಧಿಗಳ ಜೊತೆ ತಂಡವಾಗಿ ಹೋಗುತ್ತಿದ್ದೆ.” ಎನ್ನುತ್ತಾರೆ 45 ವರ್ಷದ ರಿಶಿ ದಾಸ್. “ಮೊದಲಿಗೆ ನಾನು ಜಾಗಟೆ ಬಾರಿಸುತ್ತಿದ್ದೆ ನಂತರ ಧೋಲ್, ಹಾಗೂ ಅದರ ನಂತರ ದಾಕ್ ಬಾರಿಸಲು ಆರಂಭಿಸಿದೆ.” (ಅವರು ಮತ್ತು ಇನ್ನೊಬ್ಬ ರಿಶಿದಾಸ್,ರೋಹಿದಾಸ್, ರವಿದಾಸ್ ಕುಟುಂಬಗಳು ಮೂಚಿ ಸಮುದಾಯಕ್ಕೆ ಸೇರಿವೆ. ಇವರನ್ನು ತ್ರಿಪುರಾದಲ್ಲಿ ಪರಿಶಿಷ್ಟ ಜಾತಿಯೆಂದು ಪಟ್ಟಿ ಮಾಡಲಾಗಿದೆ.)
ಅಗರ್ತಲಾದಲ್ಲಿನ ಅನೇಕ ದಾಕ್ ಕಲಾವಿದರಂತೆ ಇಂದ್ರಜಿತ್ ಕೂಡಾ ವರ್ಷದ ಉಳಿದ ಸಮಯದಲ್ಲಿ ರಿಕ್ಷಾ ಓಡಿಸುತ್ತಾರೆ. ಕೆಲವೊಮ್ಮೆ ಮದುವೆಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ನುಡಿಸುತ್ತಾರೆ, ಸ್ಥಳೀಯವಾಗಿ ಇದನ್ನು 'ಬ್ಯಾಂಡ್-ಪಾರ್ಟಿ' ಎಂದು ಕರೆಯಲಾಗುತ್ತದೆ. ದಾಕಿ ಕಲಾವಿದರು ಪ್ರತಿದಿನ ಎಲೆಕ್ಟ್ರಿಷಿಯನ್ ಅಥವಾ ಪ್ಲಂಬರ್ ಆಗಿ ಕೆಲಸ ಮಾಡುತ್ತಾರೆ, ಆದರೆ ಕೆಲವರು ತರಕಾರಿಗಳನ್ನು ಮಾರುತ್ತಾರೆ ಮತ್ತು ಇನ್ನೂ ಕೆಲವರು ಹತ್ತಿರದ ಹಳ್ಳಿಗಳಲ್ಲಿ ಕೃಷಿ ಮಾಡುತ್ತಾರೆ. ಸಮಾರಂಭಗಳು ಅಥವಾ ಪ್ರದರ್ಶನಗಳಿದ್ದಾಗ ಅಗರ್ತಲಾಕ್ಕೆ ಬರುತ್ತಾರೆ.
ರಿಕ್ಷಾ ಚಾಲಕನಾಗಿ ಇಂದ್ರಜಿತ್ ದಿನಕ್ಕೆ 500 ರೂ. ಗಳಿಸುತ್ತಾರೆ. ಅವರು ಹೇಳುತ್ತಾರೆ, "ಸಂಪಾದನೆಗಾಗಿ ಏನಾದರೂ ಮಾಡಲೇಬೇಕು. ರಿಕ್ಷಾ ಓಡಿಸುವುದು ಸುಲಭ. ಒಳ್ಳೆಯ ಕೆಲಸಕ್ಕಾಗಿ ಕಾಯುವುದರಲ್ಲಿ ಅರ್ಥವಿಲ್ಲ." ದುರ್ಗಾ ಪೂಜೆಯ ಸಮಯದಲ್ಲಿ ದಾಕಿಯಾಗಿ ವಾರದಲ್ಲಿ ಗಳಿಸುವಷ್ಟು ರಿಕ್ಷಾ ಓಡಿಸುವ ಮೂಲಕ ಅವರು ಒಂದು ತಿಂಗಳಲ್ಲಿ ಗಳಿಸುತ್ತಾರೆ. ಈ ವರ್ಷ 2021ರಲ್ಲಿ, ಪೆಂಡಾಲ್ ಸಮಿತಿಯು 15,000 ರೂ.ಗಳಿಗೆ ಒಪ್ಪಿಕೊಂಡು ಅವರನ್ನು ಕರೆಸಿಕೊಂಡಿದೆ. ಕೆಲವರು ಇನ್ನೂ ಕಡಿಮೆ ಮೊತ್ತಕ್ಕೂ ಒಪ್ಪಿಕೊಳ್ಳುತ್ತಾರೆ.
ಇಂದ್ರಜಿತ್ ವಿವರಿಸುತ್ತಾರೆ, ದಾಕಿ ಕಲಾವಿದರನ್ನು (ಅಗರ್ತಲಾದಲ್ಲಿ ಸಾಮಾನ್ಯವಾಗಿ ಪುರುಷರು ಮಾತ್ರ ಈ ವಾದ್ಯವನ್ನು ಬಾರಿಸುತ್ತಾರೆ) ಪೆಂಡಾಲ್‌ಗಳಲ್ಲಿ ಐದು ದಿನಗಳ ಪೂಜೆಗೆ ಕರೆಯಲಾಗುತ್ತದೆ. "ಪುರೋಹಿತರು ನಮ್ಮನ್ನು ಅಲ್ಲಿಗೆ ಕರೆದಾಗ, ನಾವು ಅಲ್ಲಿರಬೇಕು. ಬೆಳಗಿನ ಪೂಜೆಯ ಸಮಯದಲ್ಲಿ ನಾವು ಸುಮಾರು ಮೂರು ಗಂಟೆಗಳ ಕಾಲ ದಾಕ್ ಬಾರಿಸುತ್ತೇವೆ ಮತ್ತು ನಂತರ ಸಂಜೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಬಾರಿಸುತ್ತೇವೆ."
ಬ್ಯಾಂಡ್-ಪಾರ್ಟಿ ಕೆಲಸವು ಸಾಂದರ್ಭಿಕವಾಗಿ ದೊರೆಯುತ್ತದೆ. ಇಂದ್ರಜಿತ್ ಹೇಳುತ್ತಾರೆ, "ಸಾಮಾನ್ಯವಾಗಿ ನಾವು ಆರು ಜನರ ತಂಡವಾಗಿ ಕೆಲಸ ಮಾಡುತ್ತೇವೆ, ಹೆಚ್ಚಾಗಿ ಮದುವೆ ಸಮಯದಲ್ಲಿ ನಾವು ಪ್ರದರ್ಶನ ನೀಡುತ್ತೇವೆ ಮತ್ತು ಕಾರ್ಯಕ್ರಮದ ದಿನಗಳನ್ನು ಅವಲಂಬಿಸಿ ನಾವು ಹಣವನ್ನು ಪಡೆಯುತ್ತೇವೆ. ಕೆಲವರು ನಮಗೆ ಒಂದರಿಂದ ಎರಡು ದಿನಗಳ ಕೆಲಸ ನೀಡುತ್ತಾರೆ. ಇನ್ನೂ ಕೆಲವರು 6-7 ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಿರುತ್ತಾರೆ. ಒಟ್ಟಾರೆಯಾಗಿ, ತಂಡವು ಒಂದು ದಿನಕ್ಕೆ 5 ರಿಂದ 6 ಸಾವಿರ ರೂಪಾಯಿಗಳನ್ನು ಗಳಿಸುತ್ತದೆ.
ಕಳೆದ ವರ್ಷ ಕರೋನಾದಿಂದಾಗಿ, ಅನೇಕ ಜನರು ಪೂಜಾ ಸಮಾರಂಭಗಳನ್ನು ರದ್ದುಗೊಳಿಸಿದರು, ದಾಕಿ ಕಲಾವಿದರು ರಿಕ್ಷಾ ಎಳೆಯುವ ಅಥವಾ ಇತರ ಸಣ್ಣ ಉದ್ಯೋಗಗಳಿಂದ ಸಿಗುವ ಆದಾಯ ಮತ್ತು ಉಳಿತಾಯವನ್ನು ಅವಲಂಬಿಸುವ ಅನಿವಾರ್ಯತೆಗೊಳಗಾದರು. ಆದಾಗ್ಯೂ, ಕೆಲವು ಜನರಿಗೆ ಕೊನೆಯ ಕ್ಷಣದಲ್ಲಿ ದಾಕಿ ಬಾರಿಸುವ ಅವಕಾಶ ಸಿಕ್ಕಿತು (ಈ ಲೇಖನಲ್ಲಿನ ಎಲ್ಲಾ ಫೋಟೋಗಳನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ತೆಗೆದುಕೊಳ್ಳಲಾಗಿದೆ).
ದುರ್ಗಾ ಪೂಜೆ ಆರಂಭವಾದ ಒಂದು ವಾರದ ನಂತರ, ಲಕ್ಷ್ಮಿ ಪೂಜೆ ನಡೆಯುತ್ತದೆ, ಇದು ಅನೇಕ ದಾಕಿ ಕಲಾವಿದರಿಗೆ ಅವರ 'ಉದ್ಯೋಗ'ದ ಕೊನೆಯ ದಿನ. ಆ ಸಂಜೆ ಅವರು ಒಬ್ಬರೇ ಅಥವಾ ಜೊತೆಗಾರರೊಡನೆ ಅಗರ್ತಲಕ್ಕೆ ಹೋಗುವ ರಸ್ತೆಯಲ್ಲಿ ತನ್ನ ಡೋಲುಗಳೊಂದಿಗೆ ಹೊರಡುತ್ತಾರೆ. ಕುಟುಂಬಗಳು ಶುಭ ದಿನವನ್ನು ಸ್ಮರಣೀಯವಾಗಿಸಲು ಅವರನ್ನು ತಮ್ಮ ಮನೆಯಲ್ಲಿ 5-10 ನಿಮಿಷಗಳ ಕಾಲ ಬಾರಿಸುವಂತೆ ಆಹ್ವಾನಿಸುತ್ತವೆ, ಪ್ರತಿಯಾಗಿ, ದಾಕಿ ಕಲಾವಿದರು ಪ್ರತಿ ಮನೆಗೆ ಕೇವಲ 20ರಿಂದ 50 ರೂಪಾಯಿಗಳ ತನಕ ಪಡೆಯುತ್ತಾರೆ, ಮತ್ತು ಅವರಲ್ಲಿ ಅನೇಕರು ಸಂಪ್ರದಾಯವನ್ನು ಮುಂದುವರಿಸುವ ಸಲುವಾಗಿಯಷ್ಟೇ ಈ ಕೆಲಸವನ್ನು ಮಾಡುತ್ತಿರುವುದಾಗಿ ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು