“ನೀವು ನಿಜವಾಗಿಯೂ ಕಲಾ ಪ್ರಕಾರಕ್ಕೆ ಕರ್ಫ್ಯೂ ವಿಧಿಸುವುದು ಸಾಧ್ಯವೇ?” ಮಣಿಮಾರನ್, ಭಾವಶೂನ್ಯ ಧ್ವನಿಯಲ್ಲಿ ಪ್ರಶ್ನಿಸಿದರು. “ನಾವು ಈ ವಾರದಲ್ಲಿ ಬಾಂಗ್ಲಾ ದೇಶದಲ್ಲಿ ಇರಬೇಕಿತ್ತು. ನಮ್ಮ ೧೨ ಜನರ ತಂಡಕ್ಕೆ ಇದು ಮಹತ್ವದ ಅವಕಾಶ. ಆದರೆ, ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ನಮ್ಮೆಲ್ಲರ ಕಾರ್ಯಕ್ರಮಗಳೂ ರದ್ದುಗೊಂಡವು” ಎಂದರವರು. ತಮಿಳು ನಾಡಿನ ಅತ್ಯುತ್ತಮ ಪರೈ ಕಲಾವಿದ ಮತ್ತು ಬೋಧಕರಾದ ೪೫ ವರ್ಷದ ಮಣಿಮಾರನ್‌ ಅವರಿಗೆ ವ್ಯರ್ಥವಾಗಿ ಕಾಲ ಕಳೆಯುವುದು ಸಾಧ್ಯವಾಗದು.

ಹೀಗಾಗಿ, ಮಣಿಮಾರನ್‌ ಮತ್ತು ಅವರ ಪತ್ನಿ ಮಗಿಳಿನಿ, ಲಾಕ್‌ಡೌನ್‌ ನಡುವೆಯೂ ಫೇಸ್‌ಬುಕ್‌ ಲೈವ್‌ನಲ್ಲಿ ಅಥವಾ ಯೂಟ್ಯೂಬ್‌ನ ಧ್ವನಿಮುದ್ರಿತ ವೀಡಿಯೋಗಳಲ್ಲಿ ಪ್ರತಿದಿನವೂ ಪ್ರದರ್ಶನವನ್ನು ನೀಡಲಾರಂಭಿಸಿದರು.

ಕೋವಿಡ್‌-19ನಿಂದಾಗಿ, ಇವರ ತಂಡದ ಯೋಜನೆಗಳಿಗೆ ಎರಡು ತಿಂಗಳವರೆಗೂ  ಅಡ್ಡಿಯುಂಟಾಗಿದ್ದಾಗ್ಯೂ, ಮಣಿಮಾರನ್‌, ಎಂದಿನಂತೆ, ವೈರಸ್ ಬಗ್ಗೆ ಅರಿವನ್ನು ಮೂಡಿಸುವ ಹಾಡೊಂದನ್ನು ರೂಪಿಸಿದರು. ಸುಬ್ರಮಣಿಯನ್‌ ಮತ್ತು ಆನಂದ್‌ ಅವರುಗಳ ಮೇಳದೊಂದಿಗೆ ಇವರ ಪತ್ನಿ ಮಗಿಳಿನಿ ಅದಕ್ಕೆ ಧ್ವನಿ ನೀಡಿದರು. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಹ ದೊರೆಯಿತಲ್ಲದೆ, ದುಬಾಯ್‌ನ ರೇಡಿಯೋ ಸ್ಟೇಶನ್‌ ಇದನ್ನು ಪ್ರಸಾರಮಾಡಿ, ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿಯೂ ಅದನ್ನು ಅಳವಡಿಸಿತು.

ವೀಡಿಯೋ ವೀಕ್ಷಿಸಿ:  The Corona Song (ದಿ ಕೊರೊನಾ ಸಾಂಗ್ )

ಅತ್ಯಂತ ಯಶಸ್ವಿ ಜಾನಪದ ಕಲಾ ತಂಡಗಳಲ್ಲಿ ಒಂದೆನಿಸಿದ ತಮಿಳು ನಾಡಿನ ಬುದ್ಧರ್‌ ಕಲೈ ಕುಳು (೨೦೦೭ರಲ್ಲಿ ಪ್ರಾರಂಭಗೊಂಡ, ಬುದ್ಧರ್ ಕಲಾ ತಂಡ) ಎಂಬ ತಂಡವನ್ನು ನಿರ್ವಹಿಸುತ್ತಿರುವ ಮಣಿಮಾರನ್‌, ಒಂದೊಮ್ಮೆ ದಲಿತರು ಶವಸಂಸ್ಕಾರದ ಸಂದರ್ಭದಲ್ಲಿ ಬಾರಿಸುತ್ತಿದ್ದ ಪರೈ ಎಂಬ ತಮಟೆಯನ್ನು ಕಲಿಯಲು ಆಸಕ್ತಿಯಿರುವ ನೂರಾರು ಜನಕ್ಕೆ ತರಬೇತಿ ನೀಡುತ್ತಿದ್ದಾರೆ. ಇಂದು ಮಣಿಮಾರನ್‌ ಅವರಂತಹ ಕಲಾಕಾರರ ಶ್ರಮದಿಂದಾಗಿ, ಪರೈ ಎಂಬುದು ಕಲೆಯ ಒಂದು ಸಾಧನವಷ್ಟೇ ಅಲ್ಲದೆ, ವಿಮೋಚನೆಯ ಕಲಾ ಪ್ರಕಾರವೂ ಹೌದೆನಿಸಿದೆ.

“ಆದಾಗ್ಯೂ, ಜನರು ಶವಸಂಸ್ಕಾರಗಳಲ್ಲಿ ಪರೈ ಬಾರಿಸುವುದನ್ನು ಮುಂದುವರಿಸಿದ್ದಾರಾದರೂ, ಅವರು ಕಲಾವಿದರೆಂದು ಪರಿಗಣಿಸಲ್ಪಡುವುದಿಲ್ಲ. ಜಾನಪದ ಕಲಾವಿದರಿಗೆ ನೀಡಲಾಗುವ ಕಲೈಮಮಣಿ ಎಂಬ ಪಾರಿತೋಷಕವೂ ಸಹ (ರಾಜ್ಯ ಸರ್ಕಾರದಿಂದ ವತಿಯಿಂದ) ಪರೈ ಅನ್ನು ಕಲಾಪ್ರಕಾರವಾಗಿ ಗುರುತಿಸುವುದಿಲ್ಲ” ಎಂಬುದಾಗಿ ಕಲಾವಿದರು ದೂರುತ್ತಾರೆ. ಆದರೆ, ಮಣಿಮಾರನ್‌, ನಿರಂತರವಾಗಿ, ವಾರದ ತರಗತಿಗಳು ಮತ್ತು ವಾರ್ಷಿಕ ತರಬೇತಿ ಶಿಬಿರಗಳ ಮೂಲಕ ಪರೈ ಕಲೆಯನ್ನು, ಸಮಾಜದ ಅಸ್ಪೃಶ್ಯತೆ ಮತ್ತು ತಾತ್ಸಾರದ ದಟ್ಟ ಮುಸುಕಿನಿಂದಾಚೆಗೆ ಕೊಂಡೊಯ್ಯುವುದನ್ನು ಮುಂದುವರಿಸಿದ್ದಾರೆ. ಶಿಬಿರಗಳು ಉತ್ಸಾಹಪೂರ್ಣ ಹಾಗೂ ಪ್ರಭಾವಶಾಲಿಯಾದ ಇದನ್ನು ಕಲಿಯಲು ಎಲ್ಲ ಕ್ಷೇತ್ರಗಳ ಜನರನ್ನೂ ತಮ್ಮತ್ತ ಸೆಳೆಯುತ್ತಿವೆ. ಅವರು, ಅದನ್ನು ಕುರಿತ ಕೂಟನೀತಿಯ ಅರಿವನ್ನು ಸಹ ಪಡೆಯುತ್ತಿದ್ದಾರೆ. ಲಾಕ್‌ಡೌನ್‌ ದೆಸೆಯಿಂದಾಗಿ, ಈ ಶಿಬಿರಗಳನ್ನು ರದ್ದುಪಡಿಸಲಾಗಿದೆ.

ಕೆಲವು ಗಾನಾಗಳು (ಚೆನ್ನೈನ ಜಾನಪದ ಕಲಾ ಪ್ರಕಾರ), ತಪ್ಪು ಮಾಹಿತಿಯನ್ನು ಹರಡುತ್ತಿದ್ದುದನ್ನು ಕೇಳಿದ ನಂತರ, ತಾವೇ ವೈರಸ್‌ ಅನ್ನು ಕುರಿತ ಹಾಡನ್ನು ಬರೆದುದಾಗಿ ತಿಳಿಸಿದ ಮಣಿಮಾರನ್, “ಕೆಲವು ಕಲಾಕರಾರರು ಕೇಳಿದ ಸಂಗತಿಗಳು ಅವರನ್ನು ದಾರಿ ತಪ್ಪಿಸುತ್ತಿವೆ. ಉದಾಹರಣೆಗೆ, ಕೊರೊನಾ (ವೈರಸ್‌) ಮಾಂಸಾಹಾರದಿಂದ ಹರಡುತ್ತದೆಂಬ ಆಪಾದನೆ. ಮಾಂಸಾಹಾರದ ಬಗ್ಗೆ ಈಗಾಗಲೇ ಪ್ರಬಲ ರಾಜಕೀಯ ಲಾಬಿಯು ಚಾಲ್ತಿಯಲ್ಲಿದ್ದು, ಕೊರೊನಾವನ್ನು ಬಳಸುವ ಮೂಲಕ ಈ ಅಜೆಂಡಾಗೆ ಮತ್ತಷ್ಟು ಒತ್ತು ನೀಡುವುದು ಸಲ್ಲದು. ಹೀಗಾಗಿ ನಾವು ಈ ಹಾಡನ್ನು ರೂಪಿಸಿದ್ದೇವೆ” ಎಂದರು.

ಇದೆಲ್ಲಕ್ಕಿಂತಲೂ ಹೆಚ್ಚಾಗಿ, ಯಾವುದೇ ವಿಷಮ ಪರಿಸ್ಥಿತಿಯಿದ್ದಾಗಲೂ ಪ್ರಪ್ರಥಮವಾಗಿ ಅದಕ್ಕೆ ಪ್ರತಿಕ್ರಿಯಿಸುವ ಕಲಾಕಾರರಲ್ಲಿ, ಮಣಿಮಾರನ್‌ ಅವರೂ ಒಬ್ಬರು. “ಕಲೆಯು ರಾಜನೀತಿಯೂ ಹೌದು. ತಮ್ಮ ಸುತ್ತಲೂ ಸಮಾಜದಲ್ಲಿ ಘಟಿಸುತ್ತಿರುವ ಸಂಗತಿಗಳಿಗೆ ಪ್ರತಿಕ್ರಿಯಿಸುವುದು ಕಲಾಕಾರರಿಗೆ ಮಹತ್ವವಾದುದು. ಜಾನಪದ ಹಾಗೂ ಗಾನಾ ಕಲಾಕಾರರು ಇದನ್ನು ನಿರ್ವಹಿಸಿದ್ದಾರೆ. ವಿಪತ್ತಿನ ಪರಿಸ್ಥಿತಿಗಳಲ್ಲಿ ಅವರು ಕಲಾತ್ಮಕ ಕೊಡುಗೆಗಳನ್ನು ನೀಡಿದ್ದಾರೆ. ತಪ್ಪು ಮಾಹಿತಿಗೆ ಪ್ರತಿಕ್ರಿಯಿಸುವುದಕ್ಕಿಂತಲೂ ಹೆಚ್ಚಾಗಿ, ನಮ್ಮ ಕೊರೊನಾ ಹಾಡು, ಅರಿವನ್ನು ಮೂಡಿಸುತ್ತದೆ” ಎನ್ನುತ್ತಾರವರು.

2004ರ ಸುನಾಮಿಯಿಂದ ಉಂಟಾದ ಪರಿಣಾಮ ಹಾಗೂ ನಂತರದಲ್ಲಿನ ಗಜ ಚಂಡಮಾರುತದಿಂದಾಗಿ ತಮಿಳು ನಾಡಿನಾದ್ಯಂತ ಹಲವಾರು ಜಿಲ್ಲೆಗಳು ೨೦೧೮ರಲ್ಲಿ ವಿನಾಶಕ್ಕೀಡಾದವು. ಮಣಿಮಾರನ್‌ ಅವರು ತಮ್ಮ ಹಾಡುಗಳು ಮತ್ತು ಪ್ರದರ್ಶನಗಳ ಮೂಲಕ ಬದುಕುಳಿದವರ ನೋವಿಗೆ ಸಾಂತ್ವನ ನೀಡಿದರು. ಮಗಿಳಿನಿ, ತಮ್ಮ ಇತ್ತೀಚಿನ ಕೊರೊನಾ ಹಾಡಿನ ಬಗ್ಗೆ ತಿಳಿಸುತ್ತಾ, “ಜನರು ವಿಪತ್ತಿಗೀಡಾದ ಸಮಯದಲ್ಲಿ ಅವರೊಂದಿಗಿರುವುದು ನಮ್ಮ ಕರ್ತವ್ಯ. ನಾವು ಹಣವನ್ನು ದಾನವಾಗಿ ಕೊಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ, ಜನರಲ್ಲಿ ಅರಿವನ್ನು ಮೂಡಿಸಲು ನಮ್ಮ ಕಲೆಯನ್ನು ಬಳಸುತ್ತೇವೆ” ಎಂದರು.

PHOTO • M. Palani Kumar

2018ರಲ್ಲಿ ಗಜ ಚಂಡಮಾರುತದ ಪರಿಣಾಮಕ್ಕೀಡಾದ ತಮಿಳು ನಾಡಿನ ಪ್ರದೇಶಗಳಲ್ಲಿ ಬುದ್ಧರ್ ಕಲೈ ಕುಜು಼ ಕಲಾ ತಂಡವು ಪ್ರದರ್ಶನವನ್ನು ನೀಡುತ್ತಿರುವ ಕಡತದಲ್ಲಿನ ಚಿತ್ರಗಳು. ಈ ಪ್ರದರ್ಶನಗಳು ಮತ್ತು ಹಾಡುಗಳು ಜನರಿಗೆ ಸಾಂತ್ವನವನ್ನು ನೀಡಿದವು .

ಅವರ ಈ ಕಾರ್ಯವು ಗಜ ಚಂಡಮಾರುತದ ಪರಿಣಾಮದ ನಿಟ್ಟಿನಲ್ಲಿ ಅವರು ಕೈಗೊಂಡ ಕಾರ್ಯವನ್ನು ಹೋಲುತ್ತದೆ. ಮಣಿಮಾರನ್‌ ಮತ್ತು ಅವರ ತಂಡದವರು ಗಜ ಚಂಡಮಾರುತವು ಅಪ್ಪಳಿಸಿದ ಪ್ರದೇಶಗಳಿಗೆ ಅದರಲ್ಲೂ ವಿಶೇಷವಾಗಿ, ಕಾವೇರಿಯ ನಡುಗಡ್ಡೆಯ ಪ್ರದೇಶಗಳಿಗೆ ಒಂದರ ನಂತರ ಒಂದರಂತೆ ಭೇಟಿಯಿತ್ತು, ಪರೈ ಅನ್ನು ಬಾರಿಸುತ್ತಾ, ಜನಸಮೂಹವನ್ನು ಆಕರ್ಷಿಸಿದರು. ನಂತರದಲ್ಲಿ ಅವರು ಪರೈ ಹಾಗೂ ಸಾಂತ್ವನವನ್ನು ನೀಡುವ ಹಾಡುಗಳನ್ನು ಮುಂದುವರಿಸಿದರು. “ಒಬ್ಬ ವ್ಯಕ್ತಿಯು, ನಮ್ಮಲ್ಲಿಗೆ ಬಂದು, ‘ನಮ್ಮಲ್ಲಿ ಬಿಸ್ಕತ್ತು ಮುಂತಾದ ಇತರೆ ಪದಾರ್ಥಗಳನ್ನೊಳಗೊಂಡಂತೆ ಎಲ್ಲ ರೀತಿಯ ಪರಿಹಾರ ಸಾಮಗ್ರಿಗಳಿವೆ. ಆದರೆ, ನೀವು ನೀಡಿದ ಸಾಂತ್ವನವು ನಮ್ಮ ಮನಸ್ಸಿನಿಂದ ಭೀತಿಯನ್ನು ಆಳವಾಗಿ ತೊಡೆದುಹಾಕಿತು’ ಎಂದರು. ಕಲಾವಿದರಾದ ನಮಗೆ ಇದಕ್ಕಿಂತಲೂ ಮತ್ತೇನು ಬೇಕು” ಎಂದರು ಮಣಿಮಾರನ್.

ಈ ದಂಪತಿಗಳು ಈಗ ಪೆರಂಬಲೂರ್‌ ಜಿಲ್ಲೆಯ ಅಲಥೂರ್‌ ವಿಭಾಗದ ಥೆನುರ್‌ ಹಳ್ಳಿಯಲ್ಲಿ ನೆಲೆಸಿದ್ದು, ಪ್ರತಿದಿನವೂ ಫೇಸ್‌ಬುಕ್‌ ಲೈವ್‌ನ ಮೂಲಕ ಕೋವಿಡ್‌-19 ಕುರಿತ ವಿಷಯಗಳ ಬಗ್ಗೆ ಕಾರ್ಯಕ್ರಮಗಳು ಮತ್ತು ಲಘು ಸಂವಾದಗಳನ್ನು ನಡೆಸುತ್ತಾರೆ. “ನಾವು ಈ ಕಾರ್ಯಕ್ರಮವನ್ನು ಕೊರೊನಾ ಕುಂಬಿಡು (ಕೊರೊನಾ ನಮಸ್ತೆ) ಎಂಬ ಹೆಸರಿನಿಂದ ಕರೆಯುತ್ತೇವೆ. ಲಾಕ್‌ಡೌನ್‌ಗಿಂತಲೂ ಎರಡು ದಿನಗಳಿಗೆ ಮೊದಲು ನಾವು ಇದನ್ನು ಪ್ರಾರಂಭಿಸಿದೆವು. ಲಾಕ್‌ಡೌನ್‌ ತೆರವುಗೊಳಿಸುವವರೆಗೂ ಇದನ್ನು ಮುಂದುವರಿಸಲು ಉದ್ದೇಶಿಸಿದ್ದೇವೆ” ಎಂದು ಅವರು ತಿಳಿಸಿದರು.

ಅವಿರತವಾಗಿ ಸಾಗಿರುವ ಈ ಪ್ರದರ್ಶನ ಸರಣಿಯ ಮೊದಲ ದಿನದಂದು, ಹೊಸ ಹಾಡಿನ ಜೊತೆಗೆ, ಮಣಿಮಾರನ್‌ ಅವರು, ಕೊರೊನಾ ಸಮಯದಲ್ಲಿ, ಕಾಲುದಾರಿಗಳಲ್ಲಿ ನೆಲೆಸಿರುವ ಜನರ ಪರಿಸ್ಥಿತಿಯ ಬಗ್ಗೆ ಮಾತನಾಡಿದರು. ಎರಡನೆ ದಿನದಂದು, ವಯೋವೃದ್ಧರೇ ಹೆಚ್ಚಾಗಿ ಕೊರೊನಾ ವೈರಸ್‌ಗೆ ತುತ್ತಾಗುವ ಸಾಧ್ಯತೆಗಳಿವೆ ಎಂಬ ಅಂಶವನ್ನು ತಿಳಿಯಪಡಿಸಿದರು. ಮೂರನೆಯ ದಿನದಂದು, ಮಕ್ಕಳ ಬಗ್ಗೆ ಮಾತನಾಡಿದ ಮಣಿಮಾರನ್‌, ಸಾಂಪ್ರದಾಯಿಕ ಆಟಗಳನ್ನು ಪುನರುಜ್ಜೀವಿತಗೊಳಿಸಿ, ಮಕ್ಕಳನ್ನು ಈ ಆಟಗಳಲ್ಲಿ ತೊಡಗಿಸಬೇಕೆಂದು ಹೇಳಿದರು. ನಾಲ್ಕನೆಯ ದಿನದಂದು, ಟ್ರಾನ್ಸ್‌ಜೆಂಡರ್ ಸಮುದಾಯ ಮತ್ತು ಲಾಕ್‌ಡೌನ್‌ ಅವಧಿಯಲ್ಲಿ ಅವರು ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ನಮ್ಮ ಗಮನವನ್ನು ಸೆಳೆದರು.‌

“ನಾವು ಈಗಷ್ಟೇ ಅಲ್ಲದೆ, ಮಾಮೂಲಿ ದಿನಗಳಲ್ಲೂ ಅವರ ಬಗ್ಗೆ ಆಲೋಚಿಸಬೇಕು. ನನ್ನ ಫೇಸ್‌ಬುಕ್‌ ಲೈವ್‌ನಲ್ಲಿಯೂ ಇದನ್ನೇ ಹೇಳುತ್ತೇನೆ. ಕೊರೊನಾದ ದೆಸೆಯಿಂದಾಗಿ ಮಾನಸಿಕವಾಗಿ ಅವರು ಅನುಭವಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯ ಬಗ್ಗೆ ನಾವು ಮಾತನಾಡಿದಲ್ಲಿ, ನಮ್ಮ ಸಂದೇಶವು ಅವರಿಗೆ ಹೆಚ್ಚು ಪ್ರಭಾವಶಾಲಿಯಾಗಿ ತಿಳಿಸಲ್ಪಡುತ್ತದೆಂದು ನಾನು ಭಾವಿಸುತ್ತೇನೆ” ಎನ್ನುತ್ತಾರೆ ಮಣಿಮಾರನ್.

PHOTO • M. Palani Kumar

ಮೇಲಿನ ಸಾಲಿನಲ್ಲಿ ಎಡಕ್ಕೆ: ಪ್ರಾಚೀನ ಕವಿ ತಿರುವಳ್ಳುವರ್‌ ಪ್ರತಿಮೆಯ ಪಕ್ಕದಲ್ಲಿ ಕುಳಿತಿರುವ ಮಣಿಮಾರನ್‌ ಮತ್ತು ಮಗಿಳಿನಿ. ಅವರ ತಂಡವು, ಪರೈ ಜೊತೆಗೆ, ತಿರುವಳ್ಳುವರ್‌ ಅವರ ತಿರುಕ್ಕುರಳ್‌ ಕಾವ್ಯವನ್ನು ಕುರಿತಂತೆ ಕಾರ್ಯಕ್ರಮದ ಸರಣಿಯೊಂದನ್ನು ರೂಪಿಸುತ್ತಿದೆ. ಕೆಳಗಿನ ಸಾಲು: ಮಣಿಮಾರನ್‌ ಮತ್ತು ಅವರ ತಂಡದ ಸದಸ್ಯರು ರಾತ್ರಿಯ ಸಮಯದಲ್ಲಿ, ಪರೈ ಪ್ರದರ್ಶನವನ್ನು ನೀಡುತ್ತಿದ್ದಾರೆ (ಸಂಗ್ರಹ ಛಾಯಾಚಿತ್ರ )

ಪರೆಂಬಲೂರಿನ ಕೆಲವು ಹಳ್ಳಿಗಳಲ್ಲಿನ ಅಭಿವೃದ್ಧಿಯಲ್ಲಿ ನಿರತವಾಗಿರುವ ಪಯಿರ್‌ ಎಂಬ ಸಂಸ್ಥೆಯ ಜೊತೆಗೂಡಿ, ಮಣಿಮಾರನ್‌ ಅವರು ಮಕ್ಕಳಲ್ಲಿ ದೃಢವಾದ ಸಾಮಾಜಿಕ ಮೌಲ್ಯವನ್ನು ನೆಲೆಗೊಳಿಸಲು ಹೊಸ ಆಟಗಳನ್ನು ಸೃಜಿಸುವ (ದೈಹಿಕ ಅಂತರವನ್ನು ಪಾಲಿಸುವ ನಿಟ್ಟಿನಲ್ಲಿಯೇ) ನಿರೀಕ್ಷೆಯಲ್ಲಿದ್ದಾರೆ. “ಈ ಕುರಿತಂತೆ ನಾವೀಗಾಗಲೇ ಕೆಲಸವನ್ನು ಪ್ರಾರಂಭಿಸಿದ್ದೇವೆ. ಆದರೆ ಈಗ ಕೋವಿಡ್‌-19 ಬಗ್ಗೆ ಅರಿವನ್ನು ಮೂಡಿಸುವತ್ತ ನಮ್ಮ ಗಮನವನ್ನು ಕೇಂದ್ರೀಕರಿಸಿದ್ದೇವೆ. ಏಕೆಂದರೆ ನಮ್ಮ ಜನರಿಗೆ ಇದು ಹೊಸ ವಿಷಯವಾಗಿದ್ದು, ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನಾವು ಶೀಘ್ರದಲ್ಲಿಯೇ ಮಣಿಮಾರನ್‌ ಮತ್ತು ಮಗಿಜಿ಼ನಿ ಅವರೊಂದಿಗೆ ಅಂತಹ ಆಟಗಳನ್ನು ಕುರಿತಂತೆ ಕೆಲಸದಲ್ಲಿ ತೊಡಗುತ್ತೇವೆ” ಎಂಬುದಾಗಿ ಪಯಿರ್‌ನ ಮಾರ್ಗದರ್ಶಕರಾದ ಪ್ರೀತಿ ಜೇ಼ವಿಯರ್‌ ತಿಳಿಯಪಡಿಸಿದರು.

ಮಣಿಮಾರನ್‌ ಅವರ ಪ್ರಕಾರ, ಇವು ಅವರಂತಹ ಕಲಾವಿದರಿಗೆ ಸವಾಲಿನ ಸಮಯ. “ವಿಶೇಷವಾಗಿ ಜಾನಪದ ಕಲಾವಿದರು ಯಾವುದೇ ಆಪತ್ತಿನ ಸಮಯದಲ್ಲಿ ಜನರೊಂದಿಗಿರುತ್ತಾರೆ. ಈ ದೈಹಿಕ ಅಂತರವನ್ನು ಪಾಲಿಸುವುದು, ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುವುದು ಇವರಿಗೆ ತೊಂದರೆದಾಯಕವೂ ಹೌದು.”  “ಕೆಲಸವನ್ನು ಕಳೆದುಕೊಂಡ ಜಾನಪದ ಕಲಾವಿದರಿಗೆ ಸರ್ಕಾರವು ಸ್ವಲ್ಪವಾದರೂ ಪರಿಹಾರವನ್ನು ಒದಗಿಸತಕ್ಕದ್ದು. ಆಗ ನಾವು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನಗಳನ್ನು ನೀಡಬಹುದು. ಆರ್ಥಿಕವಾಗಿ ಕಲಾವಿದರು ಅತ್ಯಂತ ತೀವ್ರ ಪರಿಣಾಮಗಳಿಗೆ ತುತ್ತಾಗಿದ್ದಾರೆ” ಎಂದು ಆಗ್ರಹಪೂರ್ವಕವಾಗಿ ತಿಳಿಸುವ ಮಣಿಮಾರನ್‌ ಮತ್ತು ಮಗಿಜಿ಼ನಿ, ಪರಿಹಾರವಿರಲಿ, ಇಲ್ಲದಿರಲಿ ಪರೈ ಹಾಗೂ ಕೊರೊನಾ ವೈರಸ್‌ ಕುರಿತ ಜನರಲ್ಲಿನ ಭಯವನ್ನು ತೊಡೆದುಹಾಕುವ ಹಾಡುಗಾರಿಕೆಯನ್ನು ಅವರು ಪ್ರತಿದಿನವೂ  ಮುಂದುವರಿಸಿದ್ದಾರೆ. “ಜಾಗರೂಕರಾಗಿರುವಂತೆ ಒತ್ತಾಯಿಸುವುದನ್ನು ನಾವು ಮುಂದುವರಿಸಿ, ವೈರಸ್‌ ಹರಡುವುದನ್ನು ತಡೆಯಲು ನಮಗೆ ಸಾಧ್ಯವಿರುವುದೆಲ್ಲವನ್ನೂ ನಾವು ನಿರ್ವಹಿಸುತ್ತೇವೆ. ಅಂತಿಮವಾಗಿ ಕೊರೊನಾ ನಮ್ಮನ್ನು ತೊರೆದಾಗ, ನಮಸ್ತೆಯೊಂದಿಗೆ, ನಮ್ಮ ಪರೈನೊಂದಿಗೆ ಅದನ್ನು ಆಚರಿಸುತ್ತೇವೆ” ಎನ್ನುತ್ತಾರವರು.

ಕೊರೊನಾ ಹಾಡಿನ ಅನುವಾದ

ಥಾನ ಥನ ಥಾನ
ಕೊರೊನಾ ಉನ್ಮತ್ತವಾಗಿ ಕುಣಿಯುತ್ತಿದೆ

ಬಹಳಷ್ಟು ಜನರು
ಆಧಾರರಹಿತ ವದಂತಿಗಳನ್ನು ಹರಡುತ್ತಿದ್ದಾರೆ

ವದಂತಿಗಳನ್ನು ನಂಬಬೇಡಿ
ಉಪೇಕ್ಷೆಯ ಮಾತುಗಳು ಬೇಡ

ಉಪೇಕ್ಷೆಯು ಸಲ್ಲದು
ಭಯಪಡುವ ಅಗತ್ಯವಿಲ್ಲ

ಕೊರೊನಾದ ಆಕ್ರಮಣವನ್ನು
ಎದುರಿಸುವ ದಾರಿಯನ್ನು ಹುಡುಕಿ

ಕೊರೊನಾ ನಿಮ್ಮ ಬಳಿ ಸುಳಿಯದಂತೆ
ಮೂಗನ್ನು ಮುಚ್ಚಿಕೊಳ್ಳಿ

ಕೇವಲ ನಿಮ್ಮ ಜಾಗರೂಕತೆಯೊಂದೇ
ಕೊರೊನಾವನ್ನು ತಡೆಗಟ್ಟಬಲ್ಲದು

ದೈಹಿಕ ದೂರವನ್ನು ನಾವು ಪಾಲಿಸಿದಲ್ಲಿ,
ಕೊರೊನಾ ಕೂಡ ಓಡಿಹೋಗುತ್ತದೆ

ಥಾನ ಥನ ಥಾನ
ಕೊರೊನಾ ಉನ್ಮತ್ತವಾಗಿ ಕುಣಿಯುತ್ತಿದೆ

ಆಧಾರವಿಲ್ಲದ ವದಂತಿಗಳನ್ನು ಹಬ್ಬಿಸಬೇಡಿ, ನಿಲ್ಲಿಸಿ ಅದನ್ನು!

ಮಾಂಸಾಹಾರದಿಂದ ಕೊರೊನಾ
ಹರಡುವುದಿಲ್ಲ

ಸಸ್ಯಾಹಾರಿಗಳನ್ನೂ ಸಹ ಕೊರೊನಾ
ಬಿಡುವುದಿಲ್ಲ

ಎಲ್ಲ ದೇಶಗಳೂ
ದಿಗ್ಭ್ರಾಂತ ಸ್ಥಿತಿಯಲ್ಲಿವೆ

ಅದರ ಬೇರುಗಳನ್ನು ಹುಡುಕಲು
ಸಂಶೋಧನೆಗಳು ಚಾಲ್ತಿಯಲ್ಲಿವೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು,
ಆಹಾರಗಳನ್ನು ಸೇವಿಸಿ

ನಿಮ್ಮನ್ನು ರಕ್ಷಿಸಿಕೊಳ್ಳಿ
ಸುಳ್ಳನ್ನು ದೂರಮಾಡಿ

ಕೆಮ್ಮುವವರಿಂದ ದೂರವನ್ನು ಕಾಯ್ದುಕೊಳ್ಳಿ
ಸೀನುವವರಿಂದ ದೂರವಿರಿ

ಜ್ವರವು ಶಮನವಾಗದಿದ್ದಲ್ಲಿ, ಜಾಗರೂಕರಾಗಿರತಕ್ಕದ್ದು
ಅಸಹಜ ಉಸಿರಾಟವಿದ್ದಲ್ಲಿ, ಎಚ್ಚರಿಕೆಯಿಂದಿರತಕ್ಕದ್ದು

ಇವೆಲ್ಲವೂ ಎಂಟು ದಿನಗಳವರೆಗೂ ಮುಂದುವರಿದಲ್ಲಿ,
ಅದು ಕೊರೊನಾ ಆಗಿರಬಹುದು

ಕೊರೊನಾವನ್ನು ತಗ್ಗಿಸಲು,
ವೈದ್ಯರ ಸಹಾಯವನ್ನು ಪಡೆಯಿರಿ


ಅನುವಾದ
: ಶೈಲಜ ಜಿ . ಪಿ .

Kavitha Muralidharan

கவிதா முரளிதரன் சென்னையில் வாழும் சுதந்திர ஊடகவியலாளர் மற்றும் மொழிபெயர்ப்பாளர். இந்தியா டுடே (தமிழ்) இதழின் ஆசிரியராகவும் அதற்கு முன்பு இந்து தமிழ் நாளிதழின் செய்திபிரிவு தலைவராகவும் இருந்திருக்கிறார். அவர் பாரியின் தன்னார்வலர்.

Other stories by Kavitha Muralidharan
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.