“ನಾನು ನಿಮಗೆ ಏನೆಂದು ಹೇಳಲಿ? ನನ್ನ ಬೆನ್ನು ಮುರಿದುಹೋಗಿದೆ ಮತ್ತು ಪಕ್ಕೆಲುಬು ಹೊರ ಚಾಚಿಕೊಂಡಿದೆ ”ಎಂದು ಬೀಬಾಬಾಯಿ ಲೊಯರೆ ಹೇಳುತ್ತಾರೆ. "ನನ್ನ ಹೊಟ್ಟೆ ಇಂಗಿದೆ, ಕಳೆದ 2 - 3 ವರ್ಷಗಳಲ್ಲಿ ನನ್ನ ಹೊಟ್ಟೆ ಮತ್ತು ಬೆನ್ನು ಒಂದಾಗಿವೆ. ಮತ್ತು ನನ್ನ ಮೂಳೆಗಳು ಟೊಳ್ಳಾಗಿವೆ ಎಂದು ಡಾಕ್ಟರ್ ಹೇಳುತ್ತಾರೆ.”

ನಾವು ಮುಲ್ಶಿ ಬ್ಲಾಕ್‌ನ ಹದಶಿ ಗ್ರಾಮದಲ್ಲಿರುವ ಅವರ ಮನೆಯ ಪಕ್ಕದಲ್ಲಿ ಟಿನ್‌ ಶೀಟ್‌ನಿಂದ ತಯಾರಿಸಿದ ಮಂದ ಬೆಳಕಿನ ಅಡುಗೆಮನೆಯಲ್ಲಿ ಕುಳಿತಿದ್ದೇವೆ. ಸುಮಾರು 55 ವರ್ಷ ವಯಸ್ಸಿನ ಬೀಬಾಬಾಯಿ, ಉಳಿದಿರುವ ಅಕ್ಕಿಯನ್ನು ಬಾಣಲೆಯಲ್ಲಿ ಮಣ್ಣಿನ ಒಲೆಯ ಮೇಲೆ ಬಿಸಿ ಮಾಡುತ್ತಿದ್ದಾರೆ. ಅವರು ನನಗೆ ಕುಳಿತುಕೊಳ್ಳಲು ಮರದ ಪಾಟ್ (ಮಣೆ) ನೀಡಿ ಅವರ ಕೆಲಸಗಳನ್ನು ಮುಂದುವರಿಸುತ್ತಾರೆ. ಅವರು ಪಾತ್ರೆಗಳನ್ನು ತೊಳೆಯಲು ಎದ್ದಾಗ, ಅವರ ಸೊಂಟ ಸಂಪೂರ್ಣವಾಗಿ ಬಾಗಿರುವುದನ್ನು ನಾನು ನೋಡಿದೆ, ಅವರ ಗಲ್ಲವು ಅವಳ ಬಹುತೇಕ ಮೊಣಕಾಲುಗಳನ್ನು ಮುಟ್ಟಬಹುದು. ಮತ್ತು ಅವರು ತನ್ನ ಕಾಲುಗಳನ್ನು ಮಡಚಿಕೊಂಡು ಕುಳಿತಾಗ, ಅವಳ ಮೊಣಕಾಲುಗಳು ಅವರ ಕಿವಿಯನ್ನು ಸ್ಪರ್ಶಿಸುತ್ತವೆ.

ಕಳೆದ 25 ವರ್ಷಗಳಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ನಾಲ್ಕು ಶಸ್ತ್ರಚಿಕಿತ್ಸೆಗಳು ಬೀಬಾಬಾಯಿಯನ್ನು ಈ ಸ್ಥಿತಿಗೆ ತಂದಿವೆ. ಮೊದಲಿಗೆ, ಅವರು ಟ್ಯೂಬೆಕ್ಟಮಿ ಮಾಡಿಸಿಕೊಂಡರು, ನಂತರಾ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾದರು ನಂತರ ಹಿಸ್ಟೆರೆಕ್ಟಮಿ ಮತ್ತೆ ಅದಾದ ನಂತರ  ಅವರ ಕರುಳು, ಹೊಟ್ಟೆಯ ಮತ್ತು ಸ್ನಾಯುಗಳ ಭಾಗದ ಕೊಬ್ಬು ಹೊರಹಾಕುವ ಶಸ್ತ್ರಚಿಕಿತ್ಸೆ.

“ನಾನು 12 ಅಥವಾ 13 ನೇ ವಯಸ್ಸಿನಲ್ಲಿ ಮದುವೆಯಾಗಿದ್ದೆ, ನಾನು ವಯಸ್ಸಿಗೆ ಬಂದ ಮೊದಲ ಐದು ವರ್ಷಗಳವರೆಗೆ ಗರ್ಭಧರಿಸಲಿಲ್ಲ ”ಎಂದು ಬೀಬಾಬಾಯಿ ಹೇಳುತ್ತಾರೆ, ಅವರು ಶಾಲೆಗೆ ಹೋಗಿಲ್ಲ. ಪತಿ ಮಹಿಪತಿ ಲೊಯರೆ ಅಥವಾ ಎಲ್ಲರೂ ಕರೆಯುವಂತೆ ಅಪ್ಪಾ, ಅವರಿಗಿಂತ 20 ವರ್ಷ ಹಿರಿಯರು ಮತ್ತು ನಿವೃತ್ತ ಜಿಲ್ಲಾ ಪರಿಷತ್ ಶಾಲಾ ಶಿಕ್ಷಕರಾಗಿದ್ದು, ಅವರನ್ನು ಪುಣೆ ಜಿಲ್ಲೆಯ ಮುಲ್ಶಿ ಬ್ಲಾಕ್‌ನ ವಿವಿಧ ಹಳ್ಳಿಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಲೊಯರೆ ಕುಟುಂಬವು ತಮ್ಮ ಕೃಷಿಭೂಮಿಯಲ್ಲಿ ಭತ್ತ, ಕಡಲೆ, ಬೀನ್ಸ್ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುತ್ತದೆ. ಅವರು ಒಂದು ಜೋಡಿ ಎತ್ತುಗಳು, ಎಮ್ಮೆ ಮತ್ತು ಹಸು ಮತ್ತು ಅದರ ಕರುವನ್ನು ಸಹ ಹೊಂದಿದ್ದಾರೆ ಮತ್ತು ಹಾಲು ಅವರಿಗೆ ಹೆಚ್ಚುವರಿ ಆದಾಯವನ್ನು ನೀಡುತ್ತದೆ. ಮಹಿಪತಿಯವರಿಗೂ ಪಿಂಚಣಿ ಬರುತ್ತದೆ.

ನನ್ನ ಎಲ್ಲಾ ಮಕ್ಕಳು ಮನೆಯಲ್ಲಿಯೇ ಹುಟ್ಟಿದರು, ”ಎಂದು ಬೀಬಾಬಾಯಿ ಮುಂದುವರೆಸುತ್ತಾರೆ. ಅವರ ಒದಲ ಮೊದಲ ಮಗ ಗಂಡು ಅವನು ಹುಟ್ಟುವಾಗ ಬೀಬಾ ಬಾಯಿಯವರಿಗೆ ಕೇವಲ 17 ವರ್ಷ. "ಆ ಸಮಯದಲ್ಲಿ ನಮ್ಮ ಹಳ್ಳಿಯಲ್ಲಿ ಒಳ್ಳೆಯ ರಸ್ತೆಗಳಾಗಲಿ, ವಾಹನಗಳಾಗಲಿ ಇರಲಿಲ್ಲ ಎತ್ತಿನ ಗಾಡಿಯಲ್ಲಿ ನನ್ನ ತವರಿಗೆ ಹೋಗುತ್ತಿದ್ದಾಗ  (ಬೆಟ್ಟಸಾಲಿನ ಹಿಂದಿನ ಹ‍ಳ್ಳಿ) ನನ್ನ ನೀರು ಒಡೆದು ಹೋಯಿತು ಅಲ್ಲೇ ನೋವು ಶುರುವಾಗಿ ನನಗೆ ಎತ್ತಿನ ಗಾಡಿಯಲ್ಲೇ ಹೆರಿಗೆಯಾಯಿತು!" ಬೀಬಾಬಾಯಿ ನೆನಪಿಸಿಕೊಳ್ಳುತ್ತಾರೆ. ನಂತರ ಪೆರಿನಿಯಲ್ ಟಿಯರ್‌ಗೆ ಅವರು ಎಪಿಸಿಯೋಟಮಿ ಮಾಡಿಸಿಕೊಳ್ಳಬೇಕಾಯಿತು. ಇದನ್ನು ಎಲ್ಲಿ ಮಾಡಿಸಿಕೊಂಡಿದ್ದೆಂದು ಅವರಿಗೆ ನೆನಪಿಲ್ಲ.

'My back is broken and my rib cage is protruding. My abdomen is sunken, my stomach and back have come together...'
PHOTO • Medha Kale

'ನನ್ನ ಬೆನ್ನು ಮುರಿದುಹೋಗಿದೆ ಮತ್ತು ನನ್ನ ಪಕ್ಕೆಲುಬು ಹೊರ ಚಾಚಿಕೊಂಡಿದೆ. ನನ್ನ ಹೊಟ್ಟೆ ಮತ್ತು ಬೆನ್ನು ಒಟ್ಟಿಗೆ ಸೇರಿದೆ ... '

ತಾನು ಎರಡನೇ ಮಗುವಿನ ಬಸುರಿಯಾಗಿದ್ದಾಗ, ಹದಶಿಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ದೊಡ್ಡ ಹಳ್ಳಿಯಾದ ಕೊಲ್ವಾನ್‌ನ ಖಾಸಗಿ ಚಿಕಿತ್ಸಾಲಯದ ವೈದ್ಯರು ತನ್ನ ಹಿಮೋಗ್ಲೋಬಿನ್ ಕಡಿಮೆ ಮತ್ತು ಭ್ರೂಣದ ಬೆಳವಣಿಗೆ ಸಾಮಾನ್ಯಕ್ಕಿಂತ ಕಡಿಮೆಯಿದೆ ಎಂದು ಹೇಳಿದ್ದನ್ನು ಬೀಬಾಬಾಯಿ ನೆನಪಿಸಿಕೊಳ್ಳುತ್ತಾರೆ. ಹಳ್ಳಿಯ ದಾದಿಯಿಂದ 12 ಚುಚ್ಚುಮದ್ದು ಮತ್ತು ಕಬ್ಬಿಣದ ಮಾತ್ರೆಗಳನ್ನು ಪಡೆದಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಪೂರ್ಣ ಅವಧಿ ಮುಗಿದ ನಂತರ ಬೀಬಾಬಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. “ಮಗು ಒಮ್ಮೆಯೂ ಅಳಲಿಲ್ಲ ಅಥವಾ ಶಬ್ದ ಮಾಡಲಿಲ್ಲ. ಅವಳು ತೊಟ್ಟಿಲಲ್ಲಿ ಮಲಗಿ ಅವಳು ಚಾವಣಿಯನ್ನು ದಿಟ್ಟಿಸುತ್ತಿದ್ದಳು. ಅವಳು ಸಾಮಾನ್ಯ ಮಗುವಲ್ಲ ಎಂದು ಶೀಘ್ರದಲ್ಲೇ ಅರಿವಾಯಿತು,” ಎಂದು ಬೀಬಾಬಾಯಿ ಹೇಳುತ್ತಾರೆ. ಈಗ ಸವಿತಾರಿಗೆ ಈಗ 36 ವರ್ಷ. ಪುಣೆಯ ಸಾಸೂನ್ ಆಸ್ಪತ್ರೆಯಲ್ಲಿ ಆಕೆಯನ್ನು “ಬುದ್ಧಿಮಾಂದ್ಯ” - ಅಥವಾ ಬೌದ್ಧಿಕವಾಗಿ ಅಂಗವಿಕಲೆ ಎಂದು ಗುರುತಿಸಲಾಯಿತು. ಅವರು ಹೊರಗಿನವರೊಂದಿಗೆ ಹೆಚ್ಚು ಮಾತನಾಡದಿದ್ದರೂ, ಕೃಷಿ ಕೆಲಸಕ್ಕೆ ಸಹಾಯ ಮಾಡುತ್ತಾರೆ ಮತ್ತು ಮನೆಯ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ.

ಬೀಬಾಬಾಯಿ ಇನ್ನೂ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದರು. ಅವರ ಕೊನೆಯ ಮಗು, ತುಟಿ ಮತ್ತು ಬಾಯಿಯ ಮೇಲ್ಭಾಗದ ಸೀಳಿನೊಂದಿಗೆ ಜನಿಸಿತು. “ಅವನಿಗೆ ಹಾಲು ಕೊಟ್ಟರೆ ಅದು ಅವನ ಮೂಗಿನಿಂದ ಹೊರಬರುತ್ತಿತ್ತು. ವೈದ್ಯರು (ಕೊಲ್ವಾನ್‌ನ ಖಾಸಗಿ ಚಿಕಿತ್ಸಾಲಯವೊಂದರಲ್ಲಿ) ಶಸ್ತ್ರಚಿಕಿತ್ಸೆಯ ಬಗ್ಗೆ 20,000 ರೂಪಾಯಿ ಖರ್ಚು ಬೀಳುತ್ತದೆ ಎಂದು ಹೇಳಿದ್ದರು. ಆದರೆ ಆ ಸಮಯದಲ್ಲಿ ನಾವು ಜಂಟಿ ಕುಟುಂಬದಲ್ಲಿ ವಾಸಿಸುತ್ತಿದ್ದೆವು. ನನ್ನ ಗಂಡನ ತಂದೆ ಮತ್ತು ಹಿರಿಯ ಸಹೋದರ (ಶಸ್ತ್ರಚಿಕಿತ್ಸೆಯ ಅಗತ್ಯದ ಬಗ್ಗೆ) ಹೆಚ್ಚು ಗಮನ ಹರಿಸಲಿಲ್ಲ, ಮತ್ತು ನನ್ನ ಮಗು ಒಂದು ತಿಂಗಳಲ್ಲಿ ಸತ್ತುಹೋಯಿತು ”ಎಂದು ದುಃಖದಿಂದ ಬೀಬಾಬಾಯಿ ಹೇಳುತ್ತಾರೆ.

ಆಕೆಯ ಹಿರಿಯ ಮಗ ಈಗ ಕುಟುಂಬ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಮತ್ತು ಕಿರಿಯ ಮಗ, ಅಂದರೆ ಅವರ ಮೂರನೆಯ ಮಗ, ಪುಣೆಯಲ್ಲಿ ಎಲಿವೇಟರ್ ತಂತ್ರಜ್ಞನಾಗಿ ಕೆಲಸ ಮಾಡುತ್ತಾರೆ.

ನಾಲ್ಕನೇ ಮಗುವಿನ ಮರಣದ ನಂತರ, ಬೀಬಾಬಾಯಿಗೆ ಹದಶಿಯಿಂದ 50 ಕಿಲೋಮೀಟರ್ ದೂರದಲ್ಲಿರುವ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಟ್ಯೂಬೆಕ್ಟಮಿ ಮಾಡಲಾಯಿತು. ಆ ಹೊತ್ತಿಗೆ ಅವರು 20ರ ದಶಕದ ಕೊನೆಯಲ್ಲಿದ್ದರು. ಅವರ ಹಿರಿಯ ಸೋದರ ಮಾವ ಚಿಕಿತ್ಸೆಯ ವೆಚ್ಚವನ್ನು ನೋಡಿಕೊಂಡರು, ಮತ್ತು ಅವರಿಗೆ ವಿವರಗಳು ನೆನಪಿಲ್ಲ. ಸ್ಟೆರಿಲೈಸೇಷನ್ ಪ್ರಕ್ರಿಯೆಯ ಕೆಲವು ವರ್ಷಗಳ ನಂತರ, ಅವರು ದೀರ್ಘಕಾಲದ ಹೊಟ್ಟೆ ನೋವಿನಿಂದ ಬಳಲಾರಂಭಿಸಿದರು ಮತ್ತು ಳ ಎಡಭಾಗದಲ್ಲಿ ದೊಡ್ಡ ಊತ ಬೆಳೆದುಕೊಂಡಿತು - ಅದನ್ನು ಕೇವಲ ವಾಯುವೆಂದು ಬೀಬಾಬಾಯಿ ನಿರ್ಲಕ್ಷ್ಯ ಮಾಡಿದ್ದರೂ, ವೈದ್ಯರು ಹರ್ನಿಯಾ ರೋಗನಿರ್ಣಯ ಮಾಡಿದರು. ಅದು ತುಂಬಾ ಕೆಟ್ಟದಾಗಿ ಗರ್ಭಾಶಯದ ಮೇಲೆ ಒತ್ತುತ್ತಿತ್ತು. ನಂತರ ಹರ್ನಿಯಾಗೆ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅವರ ಸೋದರಳಿಯ ಖರ್ಚುಗಳನ್ನು ನಿರ್ವಹಿಸಿದರು; ಅವರಿಗೆ ಅಲ್ಲಿ ಎಷ್ಟು ಖರ್ಚಾಯಿತು ಎನ್ನುವುದರ ಕುರಿತು ಮಾಹಿತಿಯಿಲ್ಲ.

Bibabai resumed strenuous farm labour soon after a hysterectomy, with no belt to support her abdominal muscles
PHOTO • Medha Kale

ಗರ್ಭಕೋಶದ ಶಸ್ತ್ರಚಿಕಿತ್ಸೆಯ ನಂತರ ಬೀಬಾಬಾಯಿ ಅವರ ಹೊಟ್ಟೆಯ ಸ್ನಾಯುಗಳ ಬೆಂಬಲಕ್ಕೆ ಯಾವುದೇ ಬೆಲ್ಟ್ ಇಲ್ಲದೆ ಶ್ರಮದಾಯಕ ಕೃಷಿ ಕೆಲಸವನ್ನು ಪುನರಾರಂಭಿಸಿದರು.

ನಂತರ, ತನ್ನ 30ರ ದಶಕದ ಕೊನೆಯಲ್ಲಿ, ಬೀಬಾಬಾಯ್ ಅಪಾಯಕಾರಿಯಾದ ಮುಟ್ಟನ್ನು ಅನುಭವಿಸಿದರು. "ರಕ್ತಸ್ರಾವವು ತುಂಬಾ ಹೆಚ್ಚಾಗಿತ್ತು, ಜಮೀನಿನಲ್ಲಿ ಕೆಲಸ ಮಾಡುವಾಗ ಹೆಪ್ಪುಗಟ್ಟಿದ ರಕ್ತ ನೆಲದ ಮೇಲೆ ಬೀಳುತ್ತಿತ್ತು. ನಾನು ಅವುಗಳನ್ನು ಮಣ್ಣಿನಿಂದ ಮುಚ್ಚುತ್ತಿದ್ದೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಎರಡು ವರ್ಷಗಳ ಕಾಲ ಇದನ್ನು ಸಹಿಸಿಕೊಂಡ ನಂತರ, ಕೊಲ್ವಾನ್‌ನಲ್ಲಿನ ಕ್ಲಿನಿಕ್ ಒಂದರಲ್ಲಿ ಬೀಬಾಬಾಯಿ ಖಾಸಗಿ ವೈದ್ಯರನ್ನು ಮತ್ತೊಮ್ಮೆ ನೋಡಿದರು. ಅಲ್ಲಿ ಅವರ ಗರ್ಭಕೋಶಕ್ಕೆ ಹಾನಿಯಾಗಿದೆ ('ಪಿಶ್ವಿ ನಾಸ್ಲಿಯೆ') ಮತ್ತು ಅದನ್ನು ತುರ್ತಾಗಿ ತೆಗೆದುಹಾಕಬೇಕಾಗುತ್ತದೆ ಎಂದು ವೈದ್ಯರು ಹೇಳಿದರು.

ಹೀಗೆ, ಅವರು ಸುಮಾರು 40 ವರ್ಷದವರಿದ್ದಾಗ, ಬೀಬಾಬಾಯಿಗೆ ಗರ್ಭಕೋಶ ತೆಗೆದುಹಾಕಲು ಪುಣೆಯ ಪ್ರಸಿದ್ಧ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿಯನ್ನು ಮಾಡಲಾಯಿತು. ಅವರು ಅಲ್ಲಿ ಸಾಮಾನ್ಯ ವಾರ್ಡ್‌ನಲ್ಲಿ ಒಂದು ವಾರ ಕಳೆದರು. "ಶಸ್ತ್ರಚಿಕಿತ್ಸೆಯ ನಂತರ ವೈದ್ಯರು [ಹೊಟ್ಟೆಯ ಸ್ನಾಯುಗಳ ಬೆಂಬಲಕ್ಕೆ] ಬೆಲ್ಟ್ ಅನ್ನು ಸೂಚಿಸಿದ್ದರು, ಆದರೆ ನನ್ನ ಕುಟುಂಬ ಅದನ್ನು ಕೊಡಿಸಲಿಲ್ಲ" ಎಂದು ಬೀಬಾಬಾಯಿ ಹೇಳುತ್ತಾರೆ; ಬಹುಶಃ ಅವರು ಬೆಲ್ಟಿನ ಮಹತ್ವವನ್ನು ಅರಿತಿರಲಿಲ್ಲ. ಅವರು ಸಾಕಷ್ಟು ವಿಶ್ರಾಂತಿಯನ್ನೂ ಪಡೆಯಲಿಲ್ಲ, ಮತ್ತು ಕೆಲವೇ ದಿನಗಳಲ್ಲಿ ಜಮೀನಿನಲ್ಲಿ ಕೆಲಸವನ್ನು ಪುನರಾರಂಭಿಸಿದರು.

ಹೀಗೆ, ಅವರು ಸುಮಾರು 40 ವರ್ಷದವರಿದ್ದಾಗ, ಬೀಬಾಬಾಯಿಗೆ ಗರ್ಭಕೋಶ ತೆಗೆದುಹಾಕಲು ಪುಣೆಯ ಪ್ರಸಿದ್ಧ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿಯನ್ನು ಮಾಡಲಾಯಿತು. ಅವರು ಅಲ್ಲಿ ಸಾಮಾನ್ಯ ವಾರ್ಡ್‌ನಲ್ಲಿ ಒಂದು ವಾರ ಕಳೆದರು. "ಶಸ್ತ್ರಚಿಕಿತ್ಸೆಯ ನಂತರ ವೈದ್ಯರು [ಹೊಟ್ಟೆಯ ಸ್ನಾಯುಗಳ ಬೆಂಬಲಕ್ಕೆ] ಬೆಲ್ಟ್ ಅನ್ನು ಸೂಚಿಸಿದ್ದರು, ಆದರೆ ನನ್ನ ಕುಟುಂಬ ಅದನ್ನು ಕೊಡಿಸಲಿಲ್ಲ" ಎಂದು ಬೀಬಾಬಾಯಿ ಹೇಳುತ್ತಾರೆ; ಬಹುಶಃ ಅವರು ಬೆಲ್ಟಿನ ಮಹತ್ವವನ್ನು ಅರಿತಿರಲಿಲ್ಲ. ಅವರು ಸಾಕಷ್ಟು ವಿಶ್ರಾಂತಿಯನ್ನೂ ಪಡೆಯಲಿಲ್ಲ, ಮತ್ತು ಕೆಲವೇ ದಿನಗಳಲ್ಲಿ ಜಮೀನಿನಲ್ಲಿ ಕೆಲಸವನ್ನು ಪುನರಾರಂಭಿಸಿದರು.

ಈ ಶಸ್ತ್ರಚಿಕಿತ್ಸೆಯ ನಂತರ 1ರಿಂದ 6 ಆರು ತಿಂಗಳುಗಳವರೆಗೆ ಯಾವುದೇ ಶ್ರಮದಾಯಕ ಚಟುವಟಿಕೆಗಳನ್ನು ಕೈಗೊಳ್ಳದಂತೆ ಸಲಹೆ ನೀಡಿದ್ದರೂ, ಕೃಷಿ ಕ್ಷೇತ್ರದ ಮಹಿಳೆಯರಿಗೆ “ಇಷ್ಟು ದೀರ್ಘಾವಧಿಯವರೆಗೆ ವಿಶ್ರಾಂತಿ ಪಡೆಯಲು ಅನುಕೂಲವಿರುವುದಿಲ್ಲ” ಮತ್ತು ಸಾಮಾನ್ಯವಾಗಿ ಬಹಳ ಬೇಗನೆ ಕೆಲಸಕ್ಕೆ ಮರಳುತ್ತಾರೆ ಎಂದು ಏಪ್ರಿಲ್ 2015 ರಲ್ಲಿ ಇಂಟರ್ನ್ಯಾಷನಲ್ ರಿಸರ್ಚ್ ಜರ್ನಲ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ಪ್ರಕಟವಾದ ನೀಲಂಗಿ ಸರದೇಶಪಾಂಡೆ ಅವರ ಗ್ರಾಮೀಣ ಮಹಿಳೆಯರಲ್ಲಿ ಮೆನೊಪಾಸ್‌ಗೂ ಮೊದಲು ಹಿಸ್ಟೆರೆಕ್ಟಮಿ ಎನ್ನುವ ಒಂದು ಸಂಶೋಧನಾ ವರದಿಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ

ಬಹಳ ಸಮಯದ ನಂತರ, ಬೀಬಾಬಾಯಿಯ ಮಗನೊಬ್ಬ ಅವರಿಗಾಗಿ ಎರಡು ಬೆಲ್ಟ್‌ಗಳನ್ನು ತಂದರು. ಆದರೆ ಅವರು ಈಗ ಅವುಗಳನ್ನು ಬಳಸಲು ಸಾಧ್ಯವಿಲ್ಲ. "ನೀವು ನೋಡಿ, ನನಗೆ  ಹೊಟ್ಟೆಯ ಕೆಳಭಾಗ ಸ್ವಲ್ಪವೂ ಉಳಿದಿಲ್ಲ, ಹೀಗಾಗಿ ಬೆಲ್ಟ್ ಹೊಂದಿಕೆಯಾಗುವುದಿಲ್ಲ" ಎಂದು ಅವರು ಹೇಳುತ್ತಾರೆ. ಗರ್ಭಕೋಶ ತೆಗೆಸಿದ ಸುಮಾರು ಎರಡು ವರ್ಷಗಳ ನಂತರ, ಪುಣೆಯ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಬೀಬಾಬಾಯ್ (ದಿನಾಂಕಗಳು ಮತ್ತು ವರ್ಷಗಳಂತಹ ವಿವರಗಳು ಅವರಿಗೆ ನೆನಪಿಲ್ಲ) ಅವರಿಗೆ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು. "ಈ ಸಮಯದಲ್ಲಿ, ಕರುಳುಗಳನ್ನು [ಭಾಗಶಃ] ತೆಗೆದುಹಾಕಲಾಗಿದೆ" ಎಂದು ಅವರು ಹೇಳುತ್ತಾರೆ. ತನ್ನ ಒಂಬತ್ತು ಗಜದ ಸೀರೆಯ ಗಂಟು ಕೆಳಗೆ ಎಳೆಯುತ್ತಾ, ಅವರು ನನಗೆ ಬಹುತೇಕ ಒಳಗೆ ಹೋಗಿರುವ ಹೊಟ್ಟೆಯನ್ನು ತೋರಿಸುತ್ತಾರೆ. ಮಾಂಸವಿಲ್ಲ, ಸ್ನಾಯುಗಳಿಲ್ಲ. ಸುಕ್ಕುಗಟ್ಟಿದ ಚರ್ಮ ಮಾತ್ರವೇ ಇದೆ.

ಈ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಯ ವಿವರಗಳ ಬಗ್ಗೆ ಅಥವಾ ನಿಖರವಾಗಿ ಯಾವ ಸಂದರ್ಭದಲ್ಲಿ ನಡೆಯಿತು ಎನ್ನುವ ಬಗ್ಗೆ ಬೀಬಾಬಾಯಿಯ ನೆನಪುಗಳು ಮಸುಕಾಗಿವೆ. ಆದರೆ ಮೂತ್ರಕೋಶ, ಕರುಳು ಮತ್ತು ಮೂತ್ರನಾಳಗಳಿಗೆ ಶಸ್ತ್ರಚಿಕಿತ್ಸೆಯ ನಂತರದ ಗಾಯಗಳು ಆಗಾಗ್ಗೆ ಗರ್ಭಕೋಶದ ಕಾಯಿಲೆಗೆ ಕಾರಣವಾಗುತ್ತದೆ ಎಂದು ಸರ್ದೇಶ್‌ಪಾಂಡೆ ಅವರ ವರದಿಯು ಹೇಳುತ್ತದೆ. ಪುಣೆ ಮತ್ತು ಸತಾರಾ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 44 ಪೂರ್ವ ಮೆನೊಪಾಸ್ ಸ್ಥಿತಿಯಲ್ಲಿರುವ ಮಹಿಳೆಯರನ್ನು ಸಂದರ್ಶನ ಮಾಡಿದಾಗ ‌ಶಸ್ತ್ರಚಿಕಿತ್ಸೆ ನಂತರ ಅವರು ಮೂತ್ರವಿಸರ್ಜನೆಯಲ್ಲಿ ತೊಂದರೆ ಮತ್ತು ತೀವ್ರ ಹೊಟ್ಟೆನೋವನ್ನು ಅನುಭವಿಸಿದ್ದಾಗಿ ತಿಳಿಸಿದ್ದಾರೆ. ನಂತರದ ದಿನಗಳಲ್ಲಿ  ಅವರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ ಮತ್ತು ಶಸ್ತ್ರಚಿಕಿತ್ಸೆಗೆ ಮುನ್ನ ಅವರು ಅನುಭವಿಸುತ್ತಿದ್ದ ಹೊಟ್ಟೆ ನೋವಿನಿಂದ ಯಾವುದೇ ಪರಿಹಾರ ಸಿಗಲಿಲ್ಲವೆಂದೂ ಹೇಳಿದ್ದಾರೆ.

Despite her health problems, Bibabai Loyare works hard at home (left) and on the farm, with her intellactually disabled daughter Savita's (right) help
PHOTO • Medha Kale
Despite her health problems, Bibabai Loyare works hard at home (left) and on the farm, with her intellactually disabled daughter Savita's (right) help
PHOTO • Medha Kale

ತನ್ನನ್ನು ಕಾಡುವ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ, ಬೀಬಾಬಾಯಿ ಲೊಯರೆ ಮನೆಯಲ್ಲಿ (ಎಡ) ಮತ್ತು ಜಮೀನಿನಲ್ಲಿ ಅವರ ಮಾನಸಿಕ ಅಶಕ್ತ ಮಗಳು ಸವಿತಾರ (ಬಲ) ಸಹಾಯದೊಂದಿಗೆ ಕಷ್ಟಪಟ್ಟು ಕೆಲಸ ಮಾಡುತ್ತಾರೆ

ಇವೆಲ್ಲವುಗಳ ಜೊತೆಗೆ, ಬೀಬಾಬಾಯ್ ಕಳೆದ 2 ರಿಂದ 3 ವರ್ಷಗಳಲ್ಲಿ ತೀವ್ರ ಆಸ್ಟಿಯೊಪೊರೋಸಿಸ್ (ಮೂಳೆಗಳು ದುರ್ಬಲಗೊಳ್ಳುವುದು) ಗೆ ಈಡಾಗಿದ್ದಾರೆ. ಆಸ್ಟಿಯೊಪೊರೋಸಿಸ್ ಎಂಬುದು ಹಿಸ್ಟೆರೆಕ್ಟಮಿ ಮತ್ತು ಅರ್ಲಿ ಮೆನೊಪಾಸ್‌ ನಂತರ ಕಾಣಿಸಿಕೊಳ್ಳುವ ಹಾರ್ಮೋನುಗಳ ಅಸಮತೋಲನ. ಆಸ್ಟಿಯೊಪೊರೋಸಿಸ್‌ನಿಂದಾಗಿ ನಿದ್ದೆ ಮಾಡುವಾಗಲೂ ಬೀಬಾಬಾಯಿಗೆ ಈಗ ಬೆನ್ನನ್ನು ನೇರಗೊಳಿಸುವುದು ಅಸಾಧ್ಯವಾಗಿದೆ. ಆಕೆಯ ಸಮಸ್ಯೆಯನ್ನು ‘ತೀವ್ರವಾದ ಗೂನಿನೊಂದಿಗೆ ಆಸ್ಟಿಯೊಪೊರೋಟಿಕ್ ಒತ್ತಡದ ಮುರಿತಗಳು’ ಎಂದು ಗುರುತಿಸಲಾಗಿದೆ, ಈಗ ಅವರು 45 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‌ನ ಕೈಗಾರಿಕಾ ಪಟ್ಟಣದ ಚಿಖಾಲಿಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರು ತನ್ನ ರಿಪೋರ್ಟ್‌ಗಳನ್ನು ಹೊಂದಿರುವ ಪ್ಲಾಸ್ಟಿಕ್ ಚೀಲವನ್ನು ನನಗೆ ಹಸ್ತಾಂತರಿಸಿದರು. ಇಡೀ ಬದುಕು ನೋವು ಮತ್ತು ಅನಾರೋಗ್ಯದಿಂದ ತುಂಬಿತ್ತು, ಮತ್ತು ಅವೆ ಫೈಲಿನಲ್ಲಿ ಕೇವಲ ಮೂರು ಹಾಳೆಗಳಿದ್ದವು, ಒಂದು ಎಕ್ಸರೆ ವರದಿ ಮತ್ತು ಕೆಲವು ಕೆಮಿಸ್ಟ್‌ ರೆಸಿಪ್ಟ್‌ಗಳು ಇದ್ದವು. ಅವರು ಎಚ್ಚರಿಕೆಯಿಂದ ಪ್ಲಾಸ್ಟಿಕ್ ಪೆಟ್ಟಿಗೆಯನ್ನು ತೆರೆದು ಅವರ ನೋವು ಮತ್ತು ಅಸ್ವಸ್ಥತೆಯನ್ನು ನಿವಾರಿಸುವ ಕ್ಯಾಪ್ಸೂಲ್‌ಗಳ ಪಟ್ಟಿಯನ್ನು ನನಗೆ ತೋರಿಸುತ್ತಾರೆ. ಅವು ತುಂಬಿದ ಅಕ್ಕಿ ನುಚ್ಚಿನ ಚೀಲವನ್ನು ಸ್ವಚ್ಛಗೊಳಿಸುವಂತಹ ರೀತಿಯ ಕಷ್ಟಕರವಾದ ಕೆಲಸವನ್ನು ಮಾಡಬೇಕಾದಾಗ ಅವರು ಸೇವಿಸುವ ಸ್ಟಿರಾಯ್ಡ್ ಅಂಶವಿಲ್ಲದ ಉರಿಯೂತದ ಔಷಧಗಳಾಗಿದ್ದವು.

"ಈ ಗುಡ್ಡಗಾಡು ಪ್ರದೇಶಗಳಲ್ಲಿನ ಕಠಿಣ ದೈಹಿಕ ಶ್ರಮ ಮತ್ತು ದೈನಂದಿನ ಬಿಡುವಿಲ್ಲದ ದುಡಿಮೆ ಅಪೌಷ್ಟಿಕತೆಯೊಂದಿಗೆ ಮಹಿಳೆಯರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ" ಎಂದು ಹದಶಿಯಿಂದ 15 ಕಿಲೋಮೀಟರ್ ದೂರದಲ್ಲಿರುವ ಪೌಡ್ ಗ್ರಾಮದಲ್ಲಿ ಕಳೆದ 28 ವರ್ಷಗಳಿಂದ ವೈದ್ಯರಾಗಿರುವ ಡಾ.ವೈದೇಹಿ ನಗರ್ಕರ್ ಹೇಳುತ್ತಾರೆ. "ನಮ್ಮ ಆಸ್ಪತ್ರೆಯಲ್ಲಿ, ಸಂತಾನೋತ್ಪತ್ತಿ ಕಾಯಿಲೆಗಳಿಗೆ ಆರೋಗ್ಯ ಸೇವೆ ಬಯಸುವ ಮಹಿಳೆಯರ ಸಂಖ್ಯೆಯಲ್ಲಿ ಸ್ವಲ್ಪ ಪ್ರಗತಿ ಕಾಣುತ್ತಿದ್ದೇನೆ, ಆದರೆ ಕಬ್ಬಿಣದ ಕೊರತೆ ರಕ್ತಹೀನತೆ, ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್‌ನಂತಹ ದೀರ್ಘಕಾಲದ ಕಾಯಿಲೆಗಳಿಗೆ ಈಗಲೂ ಚಿಕಿತ್ಸೆ ಮಾಡಲಾಗುವುದಿಲ್ಲ."

"ಮತ್ತು ಮೂಳೆಯ ಆರೋಗ್ಯವು ಕೃಷಿ ಕೆಲಸ ಮಾಡುವವರಿಗೆ ಕೆಲಸದಲ್ಲಿ ಪರಿಪೂರ್ಣತೆಗೆ ಬಹಳ ಅವಶ್ಯಕ, ಆದರೆ  ಆದರೆ ಆರೋಗ್ಯದ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತದೆ, ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರ ವಿಷಯದಲ್ಲಿ" ಎಂದು ಅವರ ಪತಿ ಡಾ. ಸಚಿನ್ ನಗರ್ಕರ್ ಹೇಳುತ್ತಾರೆ.

The rural hospital in Paud village is 15 kilometres from Hadashi, where public health infrastructure is scarce
PHOTO • Medha Kale

ಪೌಡ್ ಗ್ರಾಮದ ಗ್ರಾಮೀಣ ಆಸ್ಪತ್ರೆ ಹದಶಿಯಿಂದ 15 ಕಿಲೋಮೀಟರ್ ದೂರದಲ್ಲಿದೆ, ಅಲ್ಲಿಯೂ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳ ಕೊರತೆಯಿದೆ

ತಾನು ಯಾಕೆ ತುಂಬಾ ತೊಂದರೆ ಅನುಭವಿಸಿದ್ದೇನೆಂದು ಬೀಬಾಬಾಯಿಗೂ ತಿಳಿದಿದೆ: “ಆ ದಿನಗಳಲ್ಲಿ [20 ವರ್ಷಗಳ ಹಿಂದೆ], ಇಡೀ ದಿನ, ಬೆಳಿಗ್ಗೆಯಿಂದ ರಾತ್ರಿಯವರೆಗೆ, ನಾವು ಕೆಲಸ ಮಾಡುತ್ತಿದ್ದೆವು. ಬೆಟ್ಟದ ಮೇಲಿರುವ [ಅವರ ಮನೆಯಿಂದ ಸರಿಸುಮಾರು ಮೂರು ಕಿಲೋಮೀಟರ್] ಎತ್ತರದ ಹೊಲಗಳಿಗೆ ಏಳರಿಂದ ಎಂಟು ಸುತ್ತು ದನದ ಗೊಬ್ಬರ ಹಾಕಲು ಹೋಗುವುದು, ಬಾವಿಯಿಂದ ನೀರು ತರಲು ಹೋಗುವುದು ಮತ್ತು ಉರುವಲಿಗಾಗಿ ಸೌದೆ ತರಲು ಹೋಗುವುದು ಹೀಗೆ ಬಹಳ ಶ್ರಮವಹಿಸಿ ಕೆಲಸ ಮಾಡಬೇಕಿತ್ತು.

ಈಗಲೂ, ಬೀಬಾಬಾಯಿ ತನ್ನ ಹಿರಿಯ ಮಗ ಮತ್ತು ಸೊಸೆಗೆ ಹೊಲದಲ್ಲಿ ಬೇಸಾಯದ ಸಮಯದಲ್ಲಿ  ಸಹಾಯ ಮಾಡುತ್ತಾರೆ. "ರೈತನ ಕುಟುಂಬದಲ್ಲಿ ವಿಶ್ರಾಂತಿ ಎನ್ನುವ ಪದಕ್ಕೆ ಅರ್ಥವಿಲ್ಲ" ಎಂದು ಅವರು ಹೇಳುತ್ತಾರೆ. “ಅದರಲ್ಲೂ ಅವಳು ಮಹಿಳೆಯಾಗಿದ್ದರೆ ಅವಳಿಗೆ ಆರೋಗ್ಯ ಸರಿಯಿಲ್ಲ, ಅವಳು ಗರ್ಭಿಣಿ ಎನ್ನುವುದೆಲ್ಲ ಲೆಕ್ಕಕ್ಕೆ ಬರುವುದಿಲ್ಲ ಅವಳು ಕೆಲಸ ಮಾಡುತ್ತಲೇ ಇರಬೇಕು.

936 ಜನಸಂಖ್ಯೆ ಹೊಂದಿರುವ ಹದಶಿ ಎಂಬ ಹಳ್ಳಿಯಲ್ಲಿ ಯಾವುದೇ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳಿಲ್ಲ. ಹತ್ತಿರದ ಆರೋಗ್ಯ ಉಪಕೇಂದ್ರವೆಂದರೆ ಕೊಲ್ವಾನ್‌ನಲ್ಲಿರುವುದು, ಮತ್ತು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವು 14 ಕಿಲೋಮೀಟರ್ ದೂರದಲ್ಲಿರುವ ಕುಲೆ ಗ್ರಾಮದಲ್ಲಿದೆ. ಖಾಸಗಿ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು  ಬೀಬಾಬಾಯಿ ಹಲವು ದಶಕಗಳ ಕಾಲ ಖಾಸಗಿ ವೈದ್ಯರು ಮತ್ತು ಆಸ್ಪತ್ರೆಗಳ ಮೊರೆ ಹೋಗಲು ಇದೂ ಕಾರಣವಾಗಿರಬಹುದು. ಆದರೂ ಯಾವಾಗಲೂ ಯಾವ ವೈದ್ಯರು ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಬೇಕೆಂಬ ನಿರ್ಧಾರಗಳನ್ನು ಅವರ ಜಂಟಿ ಕುಟುಂಬದ ಪುರುಷರು ತೆಗೆದುಕೊಳ್ಳುತ್ತಿದ್ದರು.

ಗ್ರಾಮೀಣ ಮಹಾರಾಷ್ಟ್ರದ ಅನೇಕ ಜನರಿಗಿರುವಂತೆ ಬೀಬಾಬಾಯಿಗೆ ಯಾವತ್ತೂ ಭಗತ್ (ಸಾಂಪ್ರದಾಯಿಕ ವೈದ್ಯರು) ಅಥವಾ ದೇವ್ರುಶಿಗಳ (ಪ್ರಾರ್ಥನೆಗಳ ಮೂಲಕ ರೋಗ ವಾಸಿ ಮಾಡುವವರು) ಬಗ್ಗೆ ಕಡಿಮೆ ನಂಬಿಕೆಯಿತ್ತು ಮತ್ತು ದೇವ್ರುಶಿಯನ್ನು ತನ್ನ ಹಳ್ಳಿಯಲ್ಲಿ ಒಮ್ಮೆ ಮಾತ್ರ ಭೇಟಿ ಮಾಡಿದ್ದರು. “ಅವನು ನನ್ನನ್ನು ದೊಡ್ಡ ದುಂಡಗಿನ ತಟ್ಟೆಯಲ್ಲಿ ಕೂರಿಸಿ ನಾನೇನೋ ಸಣ್ಣ ಮಗುವೆಂಬಂತೆ ನನ್ನ ತಲೆಯ ಮೇಲೆ ನೀರು ಸುರಿದ, ಅದು ನನಗೆ ಇಷ್ಟವಾಗಲಿಲ್ಲ ನಾನು ಅಲ್ಲಿ ಹೋಗಿದ್ದು ಒಮ್ಮೆ ಮಾತ್ರ”ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಅಪವಾದವೆಂಬಂತೆ ಆಧುನಿಕ ಔಷಧದ ಮೇಲಿನ ಅವರ ನಂಬಿಕೆಗೆ ಕಾರಣ ಅವರ ಪತಿ ಶಾಲಾ ಶಿಕ್ಷಕರಾಗಿರುವುದೂ ಕಾರಣವಿರಬಹುದು.

ಇಷು ಹೊತ್ತಿಗೆ ಅಪ್ಪಾ, ಬೀಬಾಬಾಯಿಯನ್ನು ಕರೆದರು. ಇದು ಅವರಿಗೆ ಔಷಧಿ ಕೊಡುವ ಸಮಯವಾಗಿತ್ತು. ಅವರು ಸುಮಾರು 16 ವರ್ಷಗಳ ಹಿಂದೆ ಅವರ ನಿವೃತ್ತಿಗೆ ಎರಡು ವರ್ಷವಿದ್ದಾಗ ಅವರು ಪಾರ್ಶ್ವವಾಯುವಿಗೆ ತುತ್ತಾದರು. ಇದು ಅವರನ್ನು ಬಹುತೇಕ ಹಾಸಿಗೆ ಹಿಡಿಯುವಂತೆ ಮಾಡಿತು. ಅವರಿಗೆ ಸ್ವತಂತ್ರವಾಗಿ ಮಾತನಾಡಲು, ತಿನ್ನಲು ಅಥವಾ ಚಲಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ತನ್ನ ಹಾಸಿಗೆಯನ್ನು ಬಾಗಿಲಿನ ತನಕ ಎಳೆದುಕೊಂಡು ಬರುತ್ತಾರೆ. ಅವರ ಮನೆಗೆ ನಾನು ಮೊದಲ ಸಲ ಅವರ ಭೇಟಿಗೆಂದು ಹೋಗಿದ್ದಾಗ ಅಪ್ಪಾ ಕೋಪಗೊಂಡಿದ್ದರು. ಬೀಬಾಬಾಯಿ ನನ್ನೊಂದಿಗೆ ಮಾತನಾಡುತ್ತ ಕುಳಿತಿದ್ದರಿಂದ ಅವರಿಗೆ ಔಷಧಿ ಕೊಡುವುದು ತಡವಾಗಿತ್ತು.

ಬಿಬಾಬಾಯಿ ಅವರಿಗೆ ದಿನಕ್ಕೆ ನಾಲ್ಕು ಬಾರಿ ಆಹಾರವನ್ನು ನೀಡುತ್ತಾರೆ ಮತ್ತು ಅವರ ಸೋಡಿಯಂ ಕೊರತೆಗೆ ಚಿಕಿತ್ಸೆಯಾಗಿ ಅವರಿಗೆ ಔಷಧಿಗಳನ್ನು ಮತ್ತು ಉಪ್ಪುನೀರನ್ನು ಕೊಡುತ್ತಾರೆ. ಅವರು ತನ್ನ ಆರೋಗ್ಯ ಸಮಸ್ಯೆಗಳನ್ನೂ ಲೆಕ್ಕಿಸದೆ 16 ವರ್ಷಗಳಿಂದ, ಸಮಯಕ್ಕೆ ಸರಿಯಾಗಿ ಮತ್ತು ಪ್ರೀತಿಯಿಂದ ಇದನ್ನು ಮಾಡುತ್ತಿದ್ದಾರೆ. ಹಲವು ದಶಕಗಳ ಕೆಲಸ,  ನೋವು ಮತ್ತು ಅನಾರೋಗ್ಯದ ನಂತರವೂ ಅವರು ಎಷ್ಟು ಸಾಧ್ಯವೋ ಅಷ್ಟು ಬೇಸಾಯ ಮತ್ತು ಮನೆಯ ಕೆಲಸಗಳನ್ನು ಮಾಡಲು ಶ್ರಮಿಸುತ್ತಾರೆ. ಅವರೇ ಹೇಳುವಂತೆ, ರೈತನ ಮನೆಯಲ್ಲಿ ಮಹಿಳೆಯೊಬ್ಬಳು ಎಂದಿಗೂ ವಿಶ್ರಾಂತಿ ಪಡೆಯಲು ಪಡೆಯಲು ಸಾಧ್ಯವಿಲ್ಲ.

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು

Medha Kale

மேதா காலே, மும்பையில் வசிக்கிறார், பெண்கள் மற்றும் நல்வாழ்வு தொடர்பான விவகாரங்களில் எழுதுகிறார். PARIஇல் இவரும் ஒரு மொழிபெயர்ப்பாளர். தொடர்புக்கு [email protected]

Other stories by Medha Kale
Illustration : Priyanka Borar

ப்ரியங்கா போரர், தொழில்நுட்பத்தில் பல விதமான முயற்சிகள் செய்வதன் மூலம் புதிய அர்த்தங்களையும் வெளிப்பாடுகளையும் கண்டடையும் நவீன ஊடக கலைஞர். கற்றுக் கொள்ளும் நோக்கிலும் விளையாட்டாகவும் அவர் அனுபவங்களை வடிவங்களாக்குகிறார், அதே நேரம் பாரம்பரியமான தாள்களிலும் பேனாவிலும் அவரால் எளிதாக செயல்பட முடியும்.

Other stories by Priyanka Borar
Editor : Hutokshi Doctor
Series Editor : Sharmila Joshi

ஷர்மிளா ஜோஷி, PARI-ன் முன்னாள் நிர்வாக ஆசிரியர் மற்றும் எழுத்தாளர். அவ்வப்போது கற்பிக்கும் பணியும் செய்கிறார்.

Other stories by Sharmila Joshi
Translator : Shankar N Kenchanuru

Shankar N. Kenchanuru is a poet and freelance translator. He can be reached at [email protected].

Other stories by Shankar N Kenchanuru