ಜಯಮ್ಮ ಬೆಳ್ಳಯ್ಯ 35 ವರ್ಷದ ಜೇನು ಕುರುಬ ಆದಿವಾಸಿ ಮಹಿಳೆ. ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಅನಂಜಿಹುಂಡಿ ಹಳ್ಳಿಯಾಕೆ. ಆಕೆಯ ಈ ಚಿತ್ರ ಪ್ರಬಂಧ, ಕಾಡಿನಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಇರುವ ಕೊಲ್ಲು-ಕೊಲ್ಲಲ್ಪಡು ಸಂಬಂಧವನ್ನ ಸೆರೆಹಿಡಿಯತ್ತೆ. ಭಾರತದ ಪ್ರಧಾನ ಹುಲಿ ಮೀಸಲು ಪ್ರದೇಶವಾದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ ಆಕೆಯ ನಿತ್ಯ ಜೀವನ. ಈ ಬದುಕಿನ ಆರು ತಿಂಗಳುಗಳನ್ನ ಕ್ಯಾಮೆರಾದಲ್ಲಿ ಕೆ ಸೆರೆ ಹಿಡಿದಿದ್ದಾಳೆ. 'ಕಾಡುಜೀವಿಗಳ ಜೊತೆ ಬಾಳು' ಕುರಿತು 'ಪರಿ' ಛಾಯಾಚಿತ್ರ ಯೋಜನೆಯನ್ನು ಹಮ್ಮಿಕೊಂಡಿದೆ. ಜಯಮ್ಮ ಬೆಳ್ಳಯ್ಯ ಅವರ ಈ ಚಿತ್ರ ಪ್ರಬಂಧ ಈ ಯೋಜನೆಯ ಭಾಗ. ಇದೇ ಮೊದಲ ಬಾರಿಗೆ ಆಕೆ ಕ್ಯಾಮೆರಾ ಹಿಡಿದಿದ್ದಾರೆ ಅನ್ನುವುದು ಇನ್ನೊಂದು ವಿಶೇಷ. (Fujifilm FinePix S8630)
ಆಕೆಯ ಈ ಚಿತ್ರ ಪ್ರಬಂಧ, ಮಾನವ-ಕಾಡುಜೀವಿ ಒಡನಾಡದಲ್ಲೂ ಇರುವ ಸೂಕ್ಷ್ಮ ಲಿಂಗಭೇದ ಪ್ರಕ್ರಿಯೆಗಳ ಮೇಲೆ ಬೆಳಕು ಚೆಲ್ಲತ್ತೆ. ಇದು, ಹಳ್ಳಿಯ ಬಡಜನರ ಸಾಮಾಜಿಕ-ಆರ್ಥಿಕ ಸ್ಥಿತಿಗಳನ್ನ ಕಡೆಗಣಿಸೋ ಪೂರ್ವ-ನಿಶ್ಚಿತ ಕಾಡುಜೀವಿ ಸಂರಕ್ಷಣಾ ವಿಧಾನಗಳನ್ನ ಸೂಚಿತವಾಗಿ ಪ್ರಶ್ನಿಸುತ್ತದೆ. ಇಲ್ಲಿರುವ ಹಕ್ಕಿಗಳ ಹಲವು ಸುಂದರ ಚಿತ್ರಗಳನ್ನ ಜಯಮ್ಮ ತೆಗೆದಿದ್ದಾರೆ. "ಇಷ್ಟ್ ಚೆನ್ನಾಗಿರೋ ಚಿತ್ರ ತೆಗ್‍ಯೋದನ್ನ ನಾನ್ ಕಲ್ತಿರೋದ್ ನೋಡಿ ನಮ್ಮನೇಲ್ ಆಶ್ಚರ್ಯ ಪಟ್ರು" ಅಂತಾರೆ ಜಯಮ್ಮ ಕನ್ನಡದಲ್ಲಿ
ದಿಬ್ಬದ ಮೇಲೆ ದನಗಳು: "ಈ ಗೊಡ್ ಹಸುಗ್ಳು [ವಿಶೇಷತೆ ಇಲ್ಲದ ನಾಟಿ ದನಗಳು, ಹೆಚ್ಚಾಗಿ ಸಗಣಿಗಾಗಿ ಬಳಸೋವು] ನಮ್ ಕುಟುಂಬದ್ದೇ, ನನ್ ತಂಗಿ ಮತ್ತೆ ವಾರಗಿತ್ತಿ ಅವನ್ ಮೇಯಿಸ್ಕೊಂಡ್ ಬರಕ್ಕೆ ಬಯಲ್‍ಗೆ ಕರ್‍ಕೊಂಡ್ ಹೋಗ್‍ತ್ತಿದ್ದಾರೆ. ನಮ್ ಹಳ್ಳಿ ತಲ್ಪಕ್ಕೆ [ಬಂಡೀಪುರ] ಕಾಡ್ ದಾಟ್‍ಬೇಕು. ಎರಡ್ ವರ್ಷದ್ ಹಿಂದೆ, ನಮ್ ಒಂದ್ ಕರೂನ ಕಾಡಲ್ ಒಂದ್ ಚಿರ್‍ತೆ ಸಾಯಿಸ್ತು."
ಮನೆಯತ್ತ ಕುರಿಗಳು: "ನನ್ ತಂಗೀರು ನಮ್ ಕುರಿಗಳ್‍ನ ಮನೆಗ್ ಹೊಡ್‍ಕೊಂಡ್ ಹೋಗ್‍ತ್ತಿದ್ದಾರೆ. ನನ್ ತಂಗಿ ತಾನ್ ಆಯ್ದ್ ಸೌದೆನೂ ಹೊತ್‍ಕೊಂಡ್ ಬರ್‍ತ್ತಿದ್ದಾಳೆ. ನಮ್ಮಲ್ ಕೆಲವ್‍ರಿಗೆ ಸರ್‍ಕಾರ್‍ದಿಂದ ಬಿಟ್ಟಿ ಎಲ್‍ಪೀಜಿ [ಅಡ್‍ಗೆ ಅನಿಲ] ಸಿಕ್‍ತು, ಆದ್‍ರೆ ಬೇರೇಯೋರು ತೊಗೊಳ್‍ಲಿಲ್ಲಾ. ಯಾಕಂದ್ರೆ ಹಣ ಕಟ್‍ಬೇಕಾಗತ್ತೋ ಏನೋ ಅಂತ."
ಮಹಿಳೇರು ಮೇಕೆಗಳು: "ಈ ಆಡ್‍ಗಳೂ ನಮ್ಮೋವೆ. ನನ್ ತಮ್ಮ, ತಂಗಿ ಮತ್ತೆ ವಾರಗಿತ್ತಿ ಅವನ್ನ್ ನೋಡ್ಕೊಳ್‍ತಾರೆ. ನಮ್ ಹತ್ರ ಸುಮಾರ್ 50 ಆಡ್‍ಗಳಿವೆ, ಅವು ಕಾಡಲ್ ಮೇಯತ್‍ವೆ. ದಿನಾ ಸಂಜೆಗ್ ಮುಂಚೆ ಅವನ್ನ್ ಕರ್‍ಕೊಂಡ್ ಬಂದ್‍ಬಿಡ್‍ತೀವಿ, ಇಲ್ದೇ ಇದ್ರೆ ಕಾಡ್‍ಪ್ರಾಣಿಗ್ಳು ಅವನ್ನ್ ಕೊಂದ್‍ಹಾಕ್‍ಬೋದು. ಸಾಕಷ್ತು ಹಣ ಸಂಪಾದ್ನೆ ಆಗ್ದೆ ಇದ್ರೆ, ಇಲ್ಲ ಬೇರೆ ಏನಾದ್ರು ಆದ್ರೆ, ಒಂದ್ ಎರಡ್ ಮೇಕೆಗಳ್‍ನ ಮಾರ್‍ಬಿಡ್ತೀವಿ."
ಹುಲಿಪಂಜದ ಗುರುತು: "ಒಂದ್ ದಿನ ಬೆಳಗ್ಗೆ ಕೆಲ್‍ಸಕ್ ಹೋಗೋವಾಗ [ಹತ್ರದ್ ಮನೆಗ್‍ಳಲ್ ಮನೆ ಕೆಲ್‍ಸಕ್ಕೆ] ಈ ಪಂಜದ್ ಗುರ್‍ತ್ ನೋಡ್‍ದೆ. ಈ ಸುತ್ತಾ ಬಹಳ ಹುಲಿಗ್‍ಳಿವೆ, ಬಂದೂ ಹೋಗಿ ಮಾಡ್ತಿರತ್ವೆ, ನಮ್ ದನ ಮೇಕೆಗಳನ್ ಸಾಯಿಸ್ತಿರತ್ವೆ. ಜನ ಹೇಳೋದು, ಈ ನಡ್‍ವೆ ಚಿರ್‍ತೆಗಳ್‍ಗಿಂತ ಹುಲಿಗ್‍ಳೇ ಹೆಚ್ಚು ಅಂತ."
ಇಬ್ಬರು ಹುಡುಗೀರು: "ನನ್ ತಂಗಿ ಮಕ್‍ಳು ಕಾಡಿನ್ ಮೂಲ್‍ಕ ಶಾಲೆಗ್ ಹೋಗ್‍ಬೇಕು; ಅವ್ರು ಮೂರ್ ಕೆಲೋಮೀಟ್ರು ನಡೀತಾರೆ ನಮ್ ಹಳ್ಳಿಯಿಂದ ದಿನಾ. ದೊಡ್ಡೋಳು ಎಂಟ್‍ನೇ ತರ್‍ಗತಿ ಮುಗ್‍ಸಿದಾಳೆ, ಆದ್ರೆ ಇಲ್ಲಿ ಪ್ರೌಢಶಾಲೆ ಇಲ್ಲ, ಅದಕ್ ಅವ್‍ಳು ಹತ್ ಕೆಲೋಮೀಟ್ರು ದೂರದ್ ಒಂದ್ ಶಾಲೆಗ್ ಹೋಗ್‍ಬೇಕು. ಅವ್‍ಳು ಅಲ್ಲಿನ್ ವಸ್‍ತೀಲ್ ಇರ್‍ಬೇಕು, ಇಲ್ಲ ದಿನಾ ಇಲ್ಲಿಂದ ಹೋಗೀಬಂದು ಮಾಡ್‍ಬೇಕು. ಆವ್‍ಳು ಅಲ್ಲಿಗ್ ಹೋಗ್ತಿರೋದ್ರಿಂದ ಅವ್‍ಳ್ ತಂಗಿ ಒಬ್‍ಳೇ ಶಾಲೆಗ್ ಹೋಗ್‍ಬೇಕು. ಆವ್‍ಳಿಗ್ ಕಾಡಲ್ ಒಬ್‍ಳೇ ಹೋಗಕ್ ದಿಗ್‍ಲು, ಅದಕ್ ಕೆಲವ್ ಸಲ ಶಾಲೆ ತಪ್ಪಿಸ್‍ಕೊಳ್ತಳೆ. ಮುಂದೆ ಶಾಲೆಯಿಂದ ಹೊರಗೂ ಬೀಳ್‍ಬೋದು. ನಮ್ ಹಳ್ಳೀಲ್ ಏಳ್ ಏಂಟ್ ಮಕ್‍ಳು ಶಾಲೆಗ್ ಹೋಗ್ತಿದ್ರು, ಹೆಚ್ಚೂ ಕಮ್ಮಿ ಎಲ್ರೂ ಹೊರಗ್ ಬಿದ್ರು. ನನ್ ತಂಗಿ ಮಕ್‍ಳೇ ಈ ಮಟ್ಟದ್ ಶಾಲೆಗ್ ಹೋಗಿರದು."
ಚಿರತೆ ಮರ: "ಇದೇ ಕಾಡಿನ್ ಮೂಲ್‍ಕ ಹೋಗೊ ಕಾಲ್‍ದಾರಿ. ನಾನ್ ಕೆಲ್‍ಸಕ್ ದಿನಾ ಇದೇ ದಾರೀಲ್ ಹೋಗದು, ನನ್ ತಂಗಿ ಮಕ್‍ಳು ನನ್ ಜೊತೆ ಬೆಳಗ್ಗೆ ಶಾಲೆಗ್ ನಡೀತಾರೆ. ಮೂರ್ ತಿಂಗ್‍ಳ್ ಕೆಳಗೆ ಒಬ್‍ಳು ಮುದ್‍ಕಿ ಕಾಡ್‍ಗೆ ಅವಳ್ ಮೇಕೆಗಳನ್ನ್ ಮೇಯಿಸ್‍ಕೊಂಡು ಹೋದ್‍ಲು. ಆಮೇಲ್ ನಾನ್ ಕೆಲಸ್‍ದಿಂದ ಮನೆಗ್ ಹೋಗ್‍ಬೇಕಾದ್ರೆೀ ಮರದ್ ಹತ್ರ ಬಹಳ ಜನ ನೆರ್‍ದಿದ್ರು. ಅವ್‍ಳ ಮೇಕೆಗಳೆಲ್ಲಾ ಮುಂಚೇನೆ ಮನೆಗ್ ಹೋಗಿದ್‍ವು, ಒಂದಕ್ಕೂ ಗಾಯ ಅಥ್ವಾ ಹಲ್ಲೆ ಆಗಿರ್‍ಲಿಲ್ಲಾ. ಅವ್‍ಳ್ ಯಾಕ್ ಮನೆಗ್ ಬರ್‍ಲಿಲ್ಲಾ ಅಂತ ಜನ ಹುಡುಕ್‍ಕ್ಕೊಂಡ್ ಹೋದಾಗ ಈ ಮರದ್ ಹತ್ರ ಬಿದ್ದಿದ್‍ಲು. ಪ್ರಾಣಿ ಅವ್‍ಳನ್ ತಿಂದ್‍ಹಾಕಿರ್‍ಲಿಲ್ಲಾ, ಆದ್ರೆ ಹಣೆ ಎರಡ್ ಪಕ್‍ದಲ್ಲೂ ಹಲ್ ಗುರ್‍ತ್ ಇದ್‍ವು. ಹುಲಿನೋ ಚಿರ್‍ತೆನೋ ನನಗ್ ಗೊತ್ತಾಗ್‍ಲಿಲ್ಲ. ಆಸ್‍ಪತ್ರೆಗ್ ಕರ್‍ಕೊಂಡ್ ಹೋಗಿದ್ ಮಾರ್‍ನೆ ದಿನ ತೀರ್‍ಕೊಂಡ್‍ಳು. ಅವ್‍ಳು ನನಗ್ ದೊಡ್ಡಮ್ಮ ಆಗ್‍ಬೇಕು. ನಾನ್ ಅದೇ ದಾರೀಲಿ ದಿನಾ ನಡೀತೀನಿ. ನಮಗ್ ಅಲ್ ಹೋಗಕ್ ಭಯ, ಆದ್ರೆ ಏನೂ ಮಾಡಕ್ಕಾಗಲ್ಲ. ಹೆದರಿ ಮನೆಲ್ ಕೂರಕ್ಕಾಗಲ್ಲ. ಶಾಲೆ ಮಕ್ಕಳ್‍ಗೆ ಬಸ್ ಸೌಕರ್ಯಕ್ಕೋಸ್ಕರ ಅರ್ಜಿಗ್ ರುಜು ಹಾಕ್ ಕಳಿಸ್‍ದ್ವಿ, ಆದ್ರೆ ಏನೂ ಆಗ್‍ಲಿಲ್ಲಾ."
ಚಿರತೆ: "ಆ ಚಿರ್‍ತೆ ನನ್ ಕೆಲ್‍ಸದ್ ಜಾಗದ್ ಹಿಂದೆ ಇರೋ ಗುಡ್ಡದ್ ಇಳ್‍ಜಾರಲ್ಲಿರೋ ಬಂಡೆ ಮೇಲ್ ಕೂತಿತ್ತು. ನಾನ್ ಸಂಜೆ ಮನೆಗ್ ಹೋಗ್‍ಬೇಕಾದ್ರೆ ಅದನ್ ನೋಡ್‍ದೆ. ನನಗ್ ಸಾಕಷ್ಟು ಹತ್ರನೆ ಇತ್ತು, ಸುಮಾರ್ ನಾಕೈದ್ ಮೀಟರ್ ದೂರ್‍ದಲ್ಲಿ. ನನ್ ಗಂಡ ನನ್ನನ್ ಕರ್‍ಕೊಂಡ್ ಹೋಗಕ್ ಬಂದಿದ್ರು, ಅದಕ್ ನನಗ್ ಅಷ್ಟ್ ದಿಗ್‍ಲಾಗ್‍ಲಿಲ್ಲ. ಚಿರ್‍ತೆ ಹತ್ರ ಬಂದ್ರೆ ಹೆಚ್ಚೇನು ಮಾಡಕ್ಕಾಗಲ್ಲ. ನನಗ್ ಆ ಚಿರ್‍ತೆ ಚಿತ್ರ ತೆಗಿಬೇಕಾಗಿತ್ತು, ಅದಕ್ಕೆ ತೆಗ್‍ದೆ. ನನ್ ಗಂಡ ಅಲ್ ಇಲ್ದೆಹೋಗಿದ್ರೂ ತೆಗಿತಿದ್ದೆ. ಹುಲಿಗ್‍ಳೂ ಚಿರ್‍ತೆಗ್‍ಳೂ ಅಂದ್ರೆ ಭಯಾನೆ. ಆ ಚಿತ್ರ ತೆಗ್‍ದಾಗ ಆ ಚಿರ್‍ತೆ ನಮ್ಮನ್ ನೋಡಿ ಮೆಲ್ಲಗ್ ಬಂಡೆ ಹಿಂದೆ ತಲೇನ್ ತಗ್ಗಿಸ್ತು."
ಮರಜಗಲಿ: “ನೆಲಗಡಲೆ, ರಾಗಿ ಮತ್ತೆ ಅವರೇಕಾಯಿ ಬೆಳಿಯೋವಾಗ ಜನ ಹೊಲಕ್ ಸಂಜೆ ಏಳ್ ಗಂಟೆಗ್ ಹೋಗಿ ಬೆಳಗ್ಗೆ ಆರರ್ ವರ್‍ಗೂ ಇದ್ ಬರ್‍ತಾರೆ. ಮರ ಹತ್ತಿ ರಾತ್ರಿಯೆಲ್ಲಾ ನಿದ್ದೆ ಇಲ್ದೆ ಪ್ರಾಣಿಗ್‍ಳಿಂದ ಹೊಲಾನ್ ಕಾಯ್‍ತಾರೆ. ಬೆಳೇನ ಆನೆ ಕಾಡ್‍ಹಂದಿ ಗಳಿಂದ ಕಾಪಾಡಕ್ ಪ್ರಯತ್ನಪಡ್ತಾರೆ. ಪ್ರಾಣಿಗ್‍ಳು ಬಂದಾಗ ಪಟಾಕಿ ಸಿಡಿಸ್ತಾರೆ. ಕೆಲವ್ ಸಲ ಏನೂ ಮಾಡಕ್ಕಾಗಲ್ಲ. ಹೀಗೆ ಆರ್ ತಿಂಗ್‍ಳು ಕೊಯ್ಲಿನ್ ಕಾಲ್‍ದಲ್ಲಿ ಕಾಯ್‍ತಾರೆ, ಇಲ್ದೆ ಇದ್ರೆ ಎಲ್ಲಾ ಹಾಳಾಗತ್ತೆ."
ಸತ್ತ ರಣಹದ್ದು: "ಆ ರಣಹದ್‍ಗೆ ವಿದ್ಯುತ್ ಹರೀತಿರೊ ತಂತಿ ಬಗ್ಗೆ ಗೊತ್ತಿಲ್‍ದೆ ಅದರ್ ಮೇಲ್ ಕೂತು ಸತ್ತಿದೆ. ಇದು ಮಳೆ ಬಂದ್ ನಿಂತ್‍ಮೇಲೆ. ಈ ಪ್ರಾಣಿಗಳಿಗೇನ್ ಗೊತ್ತು ಈ ತಂತಿಗಳಲ್ಲ್ ಹರೀತಿರೊ ವಿದ್ಯುತ್ ಬಗ್ಗೆ? ಕೆಳಗಿರೊ ರೋಜದ್ ಗಿಡದ್ [ಲಾಂಟಾನ ಕಮರ] ಬೇಲಿ ಮೇಲ್ ಬಿದ್ದಿದೆ. ಈ ಸುತ್ತಾ ಬಹಳ ರಣಹದ್‍ಗಳಿದ್ವು, ಆದ್ರೆ ಈಗ ಅವ್‍ಗಳ್ ಎಣಿಕೆ ಕಮ್ಮಿ ಆಗಿದೆ. ಮುಂಚೆ ಇಷ್ಟೊಂದ್ ರೋಜದ್ ಗಿಡಗಳಿರ್‍ಲಿಲ್ಲ, ಆದ್ರೆ ಕಳೆದ್ ಹತ್ ವರ್ಷದಿಂದ ತುಂಬಾ ಬೆಳೀತಿವೆ. ಹೇಗ್ ಇಷ್ಟ್ ಬೇಗ ಬೆಳದ್ವೂ ಅಂತ ಯಾರ್‍ಗೂ ಗೊತ್ತಿಲ್ಲ. ಇವಾಗ ಕಾಡಲ್ಲೂ ಬೆಳೀತಿವೆ. ಹುಲ್ ಬೆಳಿಯೊ ಜಾಗ್‍ದಲ್ಲ್ ಬೆಳಿಯತ್ವೆ, ಇದ್‍ರಿಂದ ಹುಲ್ ಕಮ್ಮಿ ಆಗ್‍ತಿದೆ. ಅದ್‍ರಿಂದ ದನ-ಮೇಕೆಗಳ್‍ಗೆ ತಿನ್ನಕ್ ಕಮ್ಮಿ ಸಿಗ್‍ತಿದೆ."
ಜಾರೆಡ್ ಮಾರ್‍ಗುಲೀಸ್ ಅವರು ಕರ್ನಾಟಕದ ಮಂಗಳ ಎಂಬ ಹಳ್ಳಿಯಲ್ಲಿರುವ 'ಮರಿಯಮ್ಮ ಚಾರಿಟಬಲ್ ಟ್ರಸ್ಟ್' ಸಹಯೋಗದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. . ಇದು ಸಾಧ್ಯವಾಗಿದ್ದು (ಬಾಲ್ಟಿಮೋರ್ ಕೌಂಟಿಯ) ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಪದವೀಧರ ಸಂಘದ 2015-2016ರ 'ಫುಲ್‍ಬ್ರೈಟ್-ನೆಹೆರು ವಿದ್ಯಾರ್ಥಿ ಸಂಶೋಧನಾ ಅನುದಾನ'ದ ಹಣಸಹಾಯದಿಂದ, ಮರಿಯಮ್ಮ ಚಾರಿಟಬಲ್ ಟ್ರಸ್ಟ್ ರವರ ನೇರ ಸಹಾಯದಿಂದ. ಎಲ್ಲಕ್ಕಿಂತ ಮಿಗಿಲಾಗಿ, ಛಾಯಚಿತ್ರಗ್ರಾಹಕರ ಉತ್ಸಾಹದ ಭಾಗವಹಿಸುವಿಕೆಯಿಂದ. ಬರಹದ ಅನುವಾದದಲ್ಲಿ ಬಿ. ಆರ್. ರಾಜೀವ್ ರ ಸಹಾಯ ಅಮೂಲ್ಯವಾದದ್ದು. 'ಪರಿ'ಯ ಕ್ರಿಯೇಟಿವ್ ಕಾಮನ್ಸ್ ನೀತಿಯ ಅನುಸಾರವಾಗಿ ಇಲ್ಲಿರುವ ಎಲ್ಲಾ ಛಾಯಾಚಿತ್ರಗಳ ಹಕ್ಕುಗಳು ಆಯಾ ಛಾಯಾಗ್ರಾಹಕರದ್ದು. ಇವುಗಳ ಬಳಕೆ ಮತ್ತು ಪುನರ್ ಮುದ್ರಣಕ್ಕೆ ಸಂಬಂಧಿಸಿದ ವಿಷಯಗಳಿಗೆ 'ಪರಿ' ಯನ್ನು ಸಂಪರ್ಕಿಸಿ.
ಅನುವಾದ : ನರೇನ್ ಹೂವಿನಕಟ್ಟೆ