ಯಲ್ಲಪ್ಪ ಸಿಟ್ಟು ಮತ್ತು ಗೊಂದಲದಲ್ಲಿದ್ದರು.

"ನಮ್ಮದು ಕರಾವಳಿಯಲ್ಲ, ಮೀನುಗಾರ ಸಮುದಾಯವಲ್ಲ. ನಮ್ಮನ್ನು ಏಕೆ ಸೆಂಬಾನಂದ ಮರವರರು ಅಥವಾ ಗೋಸಂಗಿ ಎಂದು ಗುರುತಿಸಲಾಗುತ್ತಿದೆ?

"ನಾವು ಶೋಲಗಾಗಳು" ಎಂದು 82 ವರ್ಷದ ಅವರು ನಿರ್ಣಾಯಕವಾಗಿ ಹೇಳುತ್ತಾರೆ. "[ಸರ್ಕಾರ] ನಮಗೆ ಪುರಾವೆಗಳನ್ನು ಕೇಳುತ್ತದೆ. ನಾವು ಇಲ್ಲಿದ್ದೇವೆ ಮತ್ತು ವಾಸಿಸುತ್ತಿದ್ದೇವೆ. ಆ ಪುರಾವೆ ಸಾಕಾಗುವುದಿಲ್ಲವೇ? ಆಧಾರ್ ಅಂತೆ ಆಧಾರ್. ಎಲ್ಲಿಂದ ತರ್ಲಿ ಆಧಾರ್? [ಪುರಾವೆ! ಪುರಾವೆ! [ಅವರಿಗೆ ಅದೇ ಬೇಕು].

ತಮಿಳುನಾಡಿನ ಮಧುರೈ ಜಿಲ್ಲೆಯ ಸಕ್ಕಿಮಂಗಲಂ ಗ್ರಾಮದ ನಿವಾಸಿಗಳಾದ ಯಲ್ಲಪ್ಪನ್ ಅವರ ಸಮುದಾಯವು ಚಾಟಿ ಬೀಸುವುದನ್ನು ಪ್ರದರ್ಶಿಸುತ್ತದೆ ಮತ್ತು ಸ್ಥಳೀಯವಾಗಿ ಅವರನ್ನು ಚಾಟೈ ಸಮುದಾಯ ಎಂದು ಕರೆಯಲಾಗುತ್ತದೆ. ಆದರೆ ಜನಗಣತಿಯಲ್ಲಿ, ಅವರನ್ನು ಸೆಂಬಾನಂದ್ ಮರವರರು ಎಂದು ಗುರುತಿಸಲಾಗಿದೆ ಮತ್ತು ಅವರನ್ನು ಅತ್ಯಂತ ಹಿಂದುಳಿದ ವರ್ಗಗಳು (ಎಂಬಿಸಿ) ವರ್ಗಕ್ಕೆ ಸೇರಿಸಲಾಗಿದೆ.

"[ಜನಗಣತಿ] ಸರ್ವೇಯರುಗಳು ನಮ್ಮನ್ನು ಭೇಟಿ ಮಾಡುತ್ತಾರೆ, ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಅವರಿಗೆ ಇಷ್ಟ ಬಂದಂತೆ ಯಾವುದೋ ವರ್ಗದ ಅಡಿಯಲ್ಲಿ ನಮ್ಮನ್ನು ಪಟ್ಟಿ ಮಾಡುತ್ತಾರೆ" ಎಂದು ಅವರು ಹೇಳುತ್ತಾರೆ.

ತಪ್ಪಾಗಿ ಗುರುತಿಸಲ್ಪಟ್ಟ ಮತ್ತು ವರ್ಗೀಕರಿಸಲ್ಪಟ್ಟ ಅಂದಾಜು 15 ಕೋಟಿ ಭಾರತೀಯರಲ್ಲಿ ಯಲ್ಲಪ್ಪನ್ ಕೂಡ ಒಬ್ಬರು.  ವಸಾಹತುಶಾಹಿ ಆಳ್ವಿಕೆಯಲ್ಲಿ ಸ್ಥಾಪಿಸಲಾದ ಕ್ರಿಮಿನಲ್ ಟ್ರೈಬ್ಸ್ ಆಕ್ಟ್, 1871 ರ ಮೂಲಕ ಈ ಸಮುದಾಯಗಳಲ್ಲಿ ಅನೇಕರಿಗೆ ಒಮ್ಮೆ 'ಆನುವಂಶಿಕ ಅಪರಾಧಿಗಳು' ಎಂದು ಹಣೆಪಟ್ಟಿ ಕಟ್ಟಲಾಯಿತು. ಈ ಕಾಯ್ದೆಯನ್ನು 1952ರಲ್ಲಿ ರದ್ದುಪಡಿಸಲಾಯಿತು ಮತ್ತು ಸಮುದಾಯಗಳನ್ನು ಡಿ-ನೋಟಿಫೈಡ್ ಬುಡಕಟ್ಟುಗಳು (ಡಿಎನ್‌ಟಿಗಳು) ಅಥವಾ ಅಲೆಮಾರಿ ಬುಡಕಟ್ಟುಗಳು (ಎನ್‌ಟಿ) ಎಂದು ಉಲ್ಲೇಖಿಸಲಾಯಿತು.

"ಅತ್ಯಂತ ಅಪೂರ್ಣವಾಗಿದೆ ಮತ್ತು ಕೆಟ್ಟದಾಗಿ ಅಸಮರ್ಪಕವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಅವರು ಸಾಮಾಜಿಕ ಶ್ರೇಣೀಕರಣದ ಕೆಳಸ್ತರದಲ್ಲಿ ದೃಢವಾಗಿ ಉಳಿದಿದ್ದಾರೆ, ವಸಾಹತುಶಾಹಿ ಆಳ್ವಿಕೆಯಲ್ಲಿ ಸೃಷ್ಟಿಯಾದ ಪೂರ್ವಾಗ್ರಹಗಳನ್ನು ಎದುರಿಸುತ್ತಿದ್ದಾರೆ " ಎಂದು ಡಿನೋಟಿಫೈಡ್ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳ ರಾಷ್ಟ್ರೀಯ ಆಯೋಗದ 2017ರ ಸರ್ಕಾರಿ ವರದಿ ಹೇಳುತ್ತದೆ.

Yellappan, part of the Sholaga community
PHOTO • Pragati K.B.
lives in Sakkimangalam village in Madurai district of Tamil Nadu
PHOTO • Pragati K.B.

ಶೋಲಗ ಸಮುದಾಯದ ಭಾಗವಾಗಿರುವ ಯಲ್ಲಪ್ಪನ್ (ಎಡ) ತಮಿಳುನಾಡಿನ ಮಧುರೈ ಜಿಲ್ಲೆಯ ಸಕ್ಕಿಮಂಗಲಂ ಗ್ರಾಮದಲ್ಲಿ (ಬಲ) ವಾಸಿಸುತ್ತಿದ್ದಾರೆ

ನಂತರ ಈ ಕೆಲವು ಗುಂಪುಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ), ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಇತರ ಹಿಂದುಳಿದ ವರ್ಗಗಳು (ಒಬಿಸಿ) ಮುಂತಾದ ಇತರ ವರ್ಗಗಳಲ್ಲಿ ಇರಿಸಲಾಯಿತು. ಆದಾಗ್ಯೂ, 269 ಸಮುದಾಯಗಳನ್ನು ಇಲ್ಲಿಯವರೆಗೆ ಯಾವುದೇ ವರ್ಗದ ಅಡಿಯಲ್ಲಿ ಗಣತಿ ಮಾಡಲಾಗಿಲ್ಲ ಎಂದು 2017ರ ವರದಿ ಹೇಳುತ್ತದೆ. ಇದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಭೂ ಹಂಚಿಕೆ, ರಾಜಕೀಯ ಭಾಗವಹಿಸುವಿಕೆ ಮತ್ತು ಹೆಚ್ಚಿನವುಗಳಂತಹ ಅವರ ಸರಿಯಾದ ಸಾಮಾಜಿಕ ಕಲ್ಯಾಣ ಕ್ರಮಗಳನ್ನು ನಿರಾಕರಿಸುತ್ತದೆ.

ಈ ಸಮುದಾಯಗಳ ಸದಸ್ಯರಲ್ಲಿ ಯಲ್ಲಪ್ಪನ್‌ ಅವರಂತಹ ಬೀದಿ ಪ್ರದರ್ಶಕರು, ಸರ್ಕಸ್ ಪ್ರದರ್ಶಕರು, ಭವಿಷ್ಯ ಹೇಳುವವರು, ಹಾವಾಡಿಗರು, ಮಣಿಸರ-ಮಾರಾಟಗಾರರು, ಸಾಂಪ್ರದಾಯಿಕ ವೈದ್ಯರು, ಬಿಗಿಯಾದ ಹಗ್ಗದ ನಡಿಗೆದಾರರು ಮತ್ತು 'ತಲೆಯಾಡಿಸುವ' ಕೋಲೆ ಬಸವ-ನಿರ್ವಹಣೆ ಮಾಡುವವರು ಸೇರಿದ್ದಾರೆ. ಅವರ ಜೀವನವು ವಲಸೆಯಿಂದ ಕೂಡಿದೆ ಮತ್ತು ಅವರ ಜೀವನೋಪಾಯವು ದುರ್ಬಲವಾಗಿದೆ. ಅವರ ಆದಾಯವು ಪ್ರತಿದಿನ ಹೊಸ ಗ್ರಾಹಕರನ್ನು ಹುಡುಕುವುದರ ಮೇಲೆ ಅವಲಂಬಿತವಾಗಿರುವುದರಿಂದ ಅವರು ಇನ್ನೂ ಅಲೆಮಾರಿಗಳಾಗಿದ್ದಾರೆ. ಆದರೆ, ಮಕ್ಕಳ ಶಿಕ್ಷಣಕ್ಕಾಗಿ, ಅವರು ನಿಯತಕಾಲಿಕವಾಗಿ ಹಿಂದಿರುಗುವ ನೆಲೆಯನ್ನು ಹೊಂದಿದ್ದಾರೆ.

ತಮಿಳುನಾಡಿನಲ್ಲಿ, ಪೆರುಮಾಳ್ ಮಾಟ್ಟುಕರನ್, ದೊಮ್ಮಾರ, ಗುಡುಗುಡುಪಾಂಡಿ ಮತ್ತು ಶೋಲಗಾ ಸಮುದಾಯಗಳನ್ನು ಜನಗಣತಿಯಲ್ಲಿ ಅವರ ವಿಶಿಷ್ಟ ಗುರುತನ್ನು ನಿರ್ಲಕ್ಷಿಸಿ ಎಸ್ಸಿ, ಎಸ್ಟಿ ಅಥವಾ ಎಂಬಿಸಿ ಎಂದು ಪಟ್ಟಿ ಮಾಡಲಾಗಿದೆ. ಅವರನ್ನು ಆದಿಯನ್, ಕಟ್ಟುನಾಯಕನ್ ಮತ್ತು ಸೆಂಬಾನಂದ ಮಾರ್ವಾರ್ ಸಮುದಾಯಗಳ ಜೊತೆ ಪಟ್ಟಿ ಮಾಡಲಾಗಿದೆ. ವಿವಿಧ ಸಮುದಾಯಗಳನ್ನು ವಿವಿಧ ರಾಜ್ಯಗಳಲ್ಲಿ ಇದೇ ರೀತಿಯಲ್ಲಿ ತಪ್ಪಾಗಿ ಪಟ್ಟಿ ಮಾಡಲಾಗಿದೆ.

"ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಇಲ್ಲದೆ ನಮ್ಮ ಮಕ್ಕಳಿಗೆ ಅವಕಾಶ ಸಿಗುವುದು ಸುಲಭವಿಲ್ಲ. ಬೆಂಬಲವಿಲ್ಲದೆ ನಾವು ಇತರರ ನಡುವೆ (ಡಿಎನ್‌ಟಿಗಳು ಮತ್ತು ಎನ್‌ಟಿಗಳಲ್ಲದವರು) ಅಭಿವೃದ್ಧಿ ಹೊಂದುತ್ತೇವೆ ಎಂದು ನಿರೀಕ್ಷಿಸುವುದು ಅನ್ಯಾಯ" ಎಂದು ಪೆರುಮಾಳ್ ಮಾಟ್ಟುಕಾರನ್ ಸಮುದಾಯದ ಸದಸ್ಯ ಪಾಂಡಿ ಹೇಳುತ್ತಾರೆ. ಅವರ ಜನರು ತಮ್ಮ ಅಲಂಕೃತ ಎತ್ತುಗಳೊಂದಿಗೆ ಮನೆ ಮನೆಗೆ ಹೋಗಿ ತಮ್ಮ ಜೀವನೋಪಾಯವನ್ನು ಸಂಪಾದಿಸುತ್ತಾರೆ. ಈ ಸಮುದಾಯವನ್ನು ಬೂಮ್ ಬೂಮ್ ಮಾಟ್ಟುಕಾರನ್ ಎಂದೂ ಕರೆಯಲಾಗುತ್ತದೆ ಮತ್ತು ಅವರು ಶಕುನವನ್ನು ಹೇಳುತ್ತಾರೆ ಮತ್ತು ಭಿಕ್ಷೆಗೆ ಪ್ರತಿಯಾಗಿ ಭಕ್ತಿಗೀತೆಗಳನ್ನು ಹಾಡುತ್ತಾರೆ. 2016ರಲ್ಲಿ ಅವರು ಎಸ್ಟಿ ವರ್ಗೀಕರಣವನ್ನು ಪಡೆದರು ಮತ್ತು ಅವರನ್ನು ಆದಿಯನ್ ಸಮುದಾಯದೊಡನೆ ಸೇರಿಸಲಾಯಿತು. ಅವರು ಇದರಿಂದ ಸಂತೋಷವಾಗಿಲ್ಲ ಮತ್ತು ಪೆರುಮಾಳ್ ಮಾಟ್ಟುಕಾರನ್‌ ಎಂದು ಕರೆಸಿಕೊಳ್ಳಲು ಬಯಸುತ್ತಾರೆ.

ಪಾಂಡಿ ಮಾತನಾಡುತ್ತಿರುವಾಗಲೇ ಅವರ ಮಗ ಧರ್ಮದುರೈ ಅಲಂಕರಿಸಿದ ಬಸವನನ್ನು ಎಳೆದುಕೊಂಡು ಬಂದರು. ಭುಜದಲ್ಲಿ ಅವರ ಭಿಕ್ಷೆಯ ಚೀಲವಿತ್ತು. ಅವರ ಕಂಕುಳದಲ್ಲಿ ʼಪ್ರಾಕ್ಟಿಕಲ್‌ ರೆಕಾರ್ಡ್‌ ಬುಕ್‌ʼ ಎಂದು ಬರೆದಿದ್ದ ಪುಸ್ತಕವಿತ್ತು.

His father, Pandi, with the decorated bull
PHOTO • Pragati K.B.
Dharmadorai is a student of Class 10 in akkimangalam Government High School in Madurai.
PHOTO • Pragati K.B.

ಧರ್ಮದೊರೈ (ಬಲ) ಮಧುರೈನ ಸಕ್ಕಿಮಂಗಲಂ ಸರ್ಕಾರಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ. ಅವನ ತಂದೆ, ಪಾಂಡಿ (ಎಡ), ಅಲಂಕೃತ ಎತ್ತಿನೊಂದಿಗೆ

ಮಧುರೈನ ಸಕ್ಕಿಮಂಗಲಂನ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿ ಧರ್ಮದೊರೈ. ಅವನು ದೊಡ್ಡವನಾದಾ ನಂತರ ಜಿಲ್ಲಾಧಿಕಾರಿಯಾಗಲು ಬಯಸುತ್ತಾನೆ ಮತ್ತು ಅದನ್ನು ಸಾಧಿಸಲು ಅವನು ಶಾಲೆಗೆ ಹೋಗಬೇಕಾಗುತ್ತದೆ. ಅವನು ಶಾಲೆಗೆ ಸಂಬಂಧಿಸಿದ ಏಳು ಪುಸ್ತಕಗಳನ್ನು ಕೊಳ್ಳಬೇಕಿತ್ತು. ತಂದೆ ಪಾಂಡಿ ನೀಡಿದ 500 ರೂಪಾಯಿಗಳು ಅದಕ್ಕೆ ಸಾಲದ ಕಾರಣ ಅವನು ಸ್ವತಃ ತಾನೇ ಹಣ ಹೊಂದಿಸಲು ನಿರ್ಧರಿಸಿದ.

"ನಾನು ಬಸವನೊಂದಿಗೆ 5 ಕಿಲೋಮೀಟರ್ ದೂರ ಹೋಗಿ 200 ರೂ.ಗಳನ್ನು ಸಂಗ್ರಹಿಸಿದೆ. ಆ ಹಣದಿಂದ ನಾನು ಈ ಪುಸ್ತಕವನ್ನು ಖರೀದಿಸಿದೆ" ಎಂದು ಅವನು ತನ್ನ ಸಾಹಸದ ಕುರಿತು ಸಂತೋಷದಿಂದ ಹೇಳುತ್ತಾನೆ.

ತಮಿಳುನಾಡಿನಲ್ಲಿ ಅತಿ ಹೆಚ್ಚು ಡಿಎನ್‌ಟಿ ಸಮುದಾಯಗಳಿವೆ - 68 ಮತ್ತು ಎರಡನೇ ಅತಿ ಹೆಚ್ಚು ಎಂದರೆ 60 ಎನ್‌ಟಿ ಸಮುದಾಯಗಳಿವೆ. ಆದ್ದರಿಂದ ಧರ್ಮದೊರೈಗೆ ಶಿಕ್ಷಣ ಪಡೆಯುವ ಅವಕಾಶಗಳು ಕಡಿಮೆ ಎಂದು ಪಾಂಡಿ ಭಾವಿಸುತ್ತಾರೆ. "ನಾವು ಇತರರೊಂದಿಗೆ ಸ್ಪರ್ಧಿಸುತ್ತಿದ್ದೇವೆ" ಎಂದು ಅವರು ದೀರ್ಘಕಾಲದವರೆಗೆ ಎಸ್ಟಿ ಸ್ಥಾನಮಾನವನ್ನು ಹೊಂದಿರುವವರನ್ನು ಉಲ್ಲೇಖಿಸಿ ಹೇಳುತ್ತಾರೆ. ತಮಿಳುನಾಡಿನಲ್ಲಿ ಹಿಂದುಳಿದ ವರ್ಗಗಳು (ಬಿಸಿ), ಅತ್ಯಂತ ಹಿಂದುಳಿದ ವರ್ಗಗಳು (ಎಂಬಿಸಿ), ವನ್ನಿಯಾರರು, ಡಿಎನ್ಎಟಿಗಳು, ಎಸ್ಸಿ ಮತ್ತು ಎಸ್ಟಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 69ರಷ್ಟು ಮೀಸಲಾತಿ ನೀಡಲಾಗುತ್ತದೆ.

*****

"ನಾವು ಹಾದುಹೋಗುವ ಹಳ್ಳಿಯಲ್ಲಿ ಏನಾದರೂ ಕಳೆದುಹೋದರೆ, ನಾವು ಮೊದಲು ದೂಷಿಸಲ್ಪಡುತ್ತೇವೆ. ಕೋಳಿ, ಆಭರಣಗಳು, ಹೀಗೆ ಏನೇ ಕಳ್ಳತನವಾದರೂ ನಮ್ಮನ್ನು ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ, ಜೈಲಿಗೆ ಹಾಕಲಾಗುತ್ತದೆ, ಥಳಿಸಲಾಗುತ್ತದೆ ಮತ್ತು ಅವಮಾನಿಸಲಾಗುತ್ತದೆ " ಎಂದು ಮಹಾರಾಜ ಹೇಳುತ್ತಾರೆ.

PHOTO • Pragati K.B.
His wife, Gouri performing stunts with fire
PHOTO • Pragati K.B.

ಎಡಕ್ಕೆ: ದೊಮ್ಮರ್ ಸಮುದಾಯದ ಬೀದಿ ಸರ್ಕಸ್ ಪ್ರದರ್ಶಕ ಮಹಾರಾಜ ತನ್ನ ಬಂಡಿಯನ್ನು ಪ್ಯಾಕ್ ಮಾಡುತ್ತಿದ್ದಾರೆ. ಬಲ: ಬೆಂಕಿಯೊಂದಿಗೆ ಆಡುತ್ತಿರುವ ಅವರ ಪತ್ನಿ ಗೌರಿ

ತಮ್ಮ 30ರ ದಶಕದ ಆರಂಭದಲ್ಲಿರುವ ಆರ್.ಮಹಾರಾಜ ಬೀದಿ ಸರ್ಕಸ್ ಕಲಾವಿದರ ದೊಮ್ಮರ್ ಸಮುದಾಯಕ್ಕೆ ಸೇರಿದವರು. ಅವರು ಶಿವಗಂಗಾ ಜಿಲ್ಲೆಯ ಮನಮದುರೈನಲ್ಲಿ ತಮ್ಮ ಕುಟುಂಬದೊಂದಿಗೆ ಬಂಡಿಯಲ್ಲಿ (ತಾತ್ಕಾಲಿಕ ಕ್ಯಾಂಪ್) ವಾಸಿಸುತ್ತಿದ್ದಾರೆ. ಅವರ ಕ್ಯಾಂಪಿನಲ್ಲಿ 24 ಕುಟುಂಬಗಳಿವೆ ಮತ್ತು ಮಹಾರಾಜರ ಮನೆ ತ್ರಿಚಕ್ರ ವಾಹನವಾಗಿದ್ದು, ಅದನ್ನು ಪ್ಯಾಕ್ ಮಾಡಬಹುದು ಮತ್ತು ದಂಪತಿಗಳು ಮತ್ತು ಅವರ ವಸ್ತುಗಳನ್ನು ಸಾಗಿಸಲು ಬಳಸಬಹುದು. ಅವರ ಇಡೀ ಮನೆ ಮತ್ತು ಕೆಲಸದ ಸಲಕರಣೆಗಳು - ಹಾಸಿಗೆ, ದಿಂಬುಗಳು ಮತ್ತು ಸೀಮೆಎಣ್ಣೆ ಒಲೆಯ ಜೊತೆಗೆ ಮೆಗಾಫೋನ್, ಆಡಿಯೊ ಕ್ಯಾಸೆಟ್ ಪ್ಲೇಯರ್, ರಾಡ್‌ಗಳು ಮತ್ತು ಅವರ ಪ್ರದರ್ಶನಗಳಿಗೆ ಬಳಸುವ ರಿಂಗುಗಳು - ಅವರೊಂದಿಗೆ ಚಲಿಸುತ್ತವೆ.

"ನನ್ನ ಹೆಂಡತಿ [ಗೌರಿ] ಮತ್ತು ನಾನು ಬೆಳಿಗ್ಗೆ ನಮ್ಮ ಬಂಡಿಯಲ್ಲಿ ಹೊರಡುತ್ತೇವೆ. ನಾವು ಇಲ್ಲಿಂದ ಮೊದಲ ಗ್ರಾಮವಾದ ತಿರುಪತ್ತೂರ್ ತಲುಪುತ್ತೇವೆ ಮತ್ತು ಹೊರವಲಯದಲ್ಲಿ ನಮ್ಮ ಬಂಡಿ [ಕ್ಯಾಂಪ್] ಹಾಕಲು ಮತ್ತು ಗ್ರಾಮದಲ್ಲಿ ನಮ್ಮ ಪ್ರದರ್ಶನವನ್ನು ನೀಡಲು ಗ್ರಾಮದ ತಲೈವರ್ [ಮುಖ್ಯಸ್ಥರಿಂದ] ಅನುಮತಿ ಪಡೆಯುತ್ತೇವೆ. ನಮ್ಮ ಧ್ವನಿವರ್ಧಕ ಮತ್ತು ಮೈಕ್ರೊಫೋನ್‌ಗೆ ವಿದ್ಯುತ್ ಸಂಪರ್ಕವನ್ನು ಸಹ ನಾವು ವಿನಂತಿಸುತ್ತೇವೆ.

ಅವರು ಅನುಮತಿ ನೀಡಿದರೆ, ಅವರು ತಮ್ಮ ಪ್ರದರ್ಶನದ ಬಗ್ಗೆ ಘೋಷಣೆಗಳನ್ನು ಮಾಡುತ್ತಾರೆ ಮತ್ತು ನಂತರ ಸಂಜೆ 4 ಗಂಟೆ ಸುಮಾರಿಗೆ ಪ್ರದರ್ಶನವು ಒಂದು ಗಂಟೆ ಸರ್ಕಸ್ ಸ್ಟಂಟುಗಳೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಎರಡನೇ ಗಂಟೆ ರೆಕಾರ್ಡ್ ಮಾಡಿದ ಸಂಗೀತಕ್ಕೆ ಫ್ರೀಸ್ಟೈಲ್ ನೃತ್ಯ ಮಾಡುತ್ತದೆ. ಪ್ರದರ್ಶನದ ನಂತರ ಅವರು ನೋಡುಗರಿಂದ ದೇಣಿಗೆಗಳನ್ನು ಕೇಳುತ್ತಾರೆ.

ವಸಾಹತುಶಾಹಿ ಕಾಲದಲ್ಲಿ ದೊಮ್ಮರ್ ಸಮುದಾಯವನ್ನು ಕ್ರಿಮಿನಲ್ ಬುಡಕಟ್ಟುಗಳೆಂದು ಪಟ್ಟಿ ಮಾಡಲಾಯಿತು. ಡಿನೋಟಿಫೈ ಮಾಡಲಾಗಿದ್ದರೂ, "ಅವರು ನಿರಂತರ ಭಯದ ಸ್ಥಿತಿಯಲ್ಲಿ ವಾಸಿಸುತ್ತಾರೆ. ಪೊಲೀಸ್ ದೌರ್ಜನ್ಯಗಳು ಮತ್ತು ಗುಂಪು ಹಲ್ಲೆಗಳು ಸಾಮಾನ್ಯ ಘಟನೆಯಾಗಿದೆ" ಎಂದು ಸಮುದಾಯಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಎನ್‌ಜಿಒ ಮಧುರೈನ ಟೆಂಟ್ (ಅಲೆಮಾರಿಗಳು ಮತ್ತು ಬುಡಕಟ್ಟುಗಳ ಸಬಲೀಕರಣ ಕೇಂದ್ರ) ಸೊಸೈಟಿಯ ಕಾರ್ಯದರ್ಶಿ ಆರ್ ಮಹೇಶ್ವರಿ ಹೇಳುತ್ತಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯು ಎಸ್ಸಿ ಮತ್ತು ಎಸ್ಟಿಗಳಿಗೆ ತಾರತಮ್ಯ ಮತ್ತು ಹಿಂಸಾಚಾರದಿಂದ ಕಾನೂನು ರಕ್ಷಣೆಯನ್ನು ನೀಡಿದ್ದರೂ, ವಿವಿಧ ಆಯೋಗಗಳು ಮತ್ತು ವರದಿಗಳ ಹೊರತಾಗಿಯೂ ಡಿಎನ್ಎಟಿಗಳು ಮತ್ತು ಎನ್‌ಟಿಗಳ ದುರ್ಬಲ ಗುಂಪುಗಳಿಗೆ ಅಂತಹ ಯಾವುದೇ ಸಾಂವಿಧಾನಿಕ ಮತ್ತು ಕಾನೂನು ರಕ್ಷಣೆ ಅಸ್ತಿತ್ವದಲ್ಲಿಲ್ಲ ಎಂದು ಅವರು ಗಮನಸೆಳೆಯುತ್ತಾರೆ.

Kili Josyam uses a parrot to tell fortunes.
PHOTO • Pragati K.B.
People from Narikuruvar community selling trinkets near the Meenakshi Amman temple in Madurai
PHOTO • Pragati K.B.

ಎಡ: ಕಿಳಿ ಜೋಶ್ಯಮ್ ಶಕುನ ಹೇಳಲು ಗಿಳಿಯನ್ನು ಬಳಸುತ್ತಾರೆ. ಬಲ: ಮಧುರೈನ ಮೀನಾಕ್ಷಿ ಅಮ್ಮನ್ ದೇವಾಲಯದ ಬಳಿ ನರಿಕುರುವರ್ ಸಮುದಾಯದ ಜನರು ಆಭರಣಗಳನ್ನು ಮಾರಾಟ ಮಾಡುತ್ತಾರೆ

ದೊಮ್ಮರ್ ಪ್ರದರ್ಶಕರು ಮನೆಗೆ ಹಿಂದಿರುಗುವ ಮೊದಲು ಕೆಲವೊಮ್ಮೆ ಒಂದು ವರ್ಷದವರೆಗೆ ಪ್ರಯಾಣಿಸುತ್ತಾರೆ ಎಂದು ಮಹಾರಾಜ ಹೇಳುತ್ತಾರೆ. "ಮಳೆ ಬಂದರೆ ಅಥವಾ ಪೊಲೀಸರು ನಮ್ಮ ಕೃತ್ಯಕ್ಕೆ ಅಡ್ಡಿಪಡಿಸಿದರೆ, ನಾವು ಆ ದಿನ ಯಾವುದೇ ಸಂಗ್ರಹವನ್ನು ಮಾಡುವುದಿಲ್ಲ" ಎಂದು ಗೌರಿ ಹೇಳುತ್ತಾರೆ. ಮರುದಿನ, ಅವರು ತಮ್ಮ ಬಂಡಿಯನ್ನು ಮುಂದಿನ ಹಳ್ಳಿಗೆ ಓಡಿಸುತ್ತಾರೆ ಮತ್ತು ಅಲ್ಲಿ ದಿನಚರಿಯನ್ನು ಪುನರಾವರ್ತಿಸಲಾಗುತ್ತದೆ.

ಅವರ 7 ವರ್ಷದ ಮಗ ಮಣಿಮಾರನ್‌ನ ಔಪಚಾರಿಕ ಶಿಕ್ಷಣವು ಸಾಮೂಹಿಕ ಸಮುದಾಯದ ಪ್ರಯತ್ನವಾಗಿದೆ. "ಒಂದು ವರ್ಷ ನನ್ನ ಸಹೋದರನ ಕುಟುಂಬವು ಅಲ್ಲಿಯೇ ಉಳಿದು ಮಕ್ಕಳನ್ನು ನೋಡಿಕೊಳ್ಳುತ್ತದೆ, ಕೆಲವೊಮ್ಮೆ ನನ್ನ ಚಿಕ್ಕಪ್ಪ [ಅವರನ್ನು] ನೋಡಿಕೊಳ್ಳುತ್ತಾರೆ" ಎಂದು ಅವರು ಹೇಳುತ್ತಾರೆ.

*****

ತಮ್ಮ ಯೌವನದ ದಿನಗಳಲ್ಲಿ ರುಕ್ಮಿಣಿಯವು ಪ್ರದರ್ಶಿಸುತ್ತಿದ್ದ ಆಟಗಳು ಪ್ರೇಕ್ಷಕರ ಉಸಿರುಗಟ್ಟಿಸುತ್ತಿದ್ದವು. ದೊಡ್ಡ ದೊಡ್ಡ ಕಲ್ಲುಗಳನ್ನು ಅವರು ತಮ್ಮ ಕೂದಲಿನಿಂದ ಎತ್ತುತ್ತಿದ್ದರು. ತಾನು ಇನ್ನೊಬ್ಬರೊಡನೆ ಸೇರಿ ಲೋಹದ ಕಂಬಿಗಳನ್ನು ಬಾಗಿಸುತ್ತಿದ್ದರು. ಇಂದೂ ಅವರು ತಮ್ಮ ಬೆಂಕಿ ಆಟ, ಲಾಠಿ ತಿರುಗಿಸುವಿಕೆ ಇತ್ಯಾದಿ ಪ್ರದರ್ಶನಗಳಿಂದ ಜನರನ್ನು ಆಕರ್ಷಿಸುತ್ತಾರೆ.

ಇವರು ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಮನಮದುರೈನಲ್ಲಿ ವಾಸಿಸುವ 37 ವರ್ಷದ ದೊಮ್ಮರು ಅಥವಾ ಬೀದಿ ಸರ್ಕಸ್ ಸಮುದಾಯದ ಸದಸ್ಯರಾಗಿದ್ದಾರೆ.

ಪ್ರದರ್ಶನಗಳಲ್ಲಿ ತನಗೆ ಕೆಟ್ಟ ಮಾತುಗಳಿಂದ ಕಿರುಕುಳ ನೀಡಲಾಗುತ್ತದೆ ಎಂದು ರುಕ್ಮಿಣಿ ಹೇಳುತ್ತಾರೆ. “ನಾವು ಪ್ರದರ್ಶನ ನೀಡುವಾಗ ಮೇಕಪ್‌ ಮತ್ತು ಬಣ್ಣಬಣ್ಣದ ಉಡುಪುಗಳನ್ನು ಧರಿಸಿರುತ್ತೇವೆ. ಗಂಡಸರು ಅದನ್ನೇ ಆಹ್ವಾನ ಎಂದುಕೊಳ್ಳುತ್ತಾರೆ. ನಮ್ಮನ್ನು ಅನುಚಿತವಾಗಿ ಮುಟ್ಟಲಾಗುತ್ತದೆ. ಕೆಟ್ಟ ಪದಗಳನ್ನು ಬಳಸಿ ಕರೆಯಲಾಗುತ್ತದೆ. ಕೆಲವೊಮ್ಮೆ ನಮ್ಮ ʼರೇಟ್‌ʼ ಕೂಡಾ ಕೇಳುತ್ತಾರೆ.”

ಪೊಲೀಸರು ಸಹಾಯ ಮಾಡುವುದಿಲ್ಲ. ನಾವು ಯಾರ ಮೇಲೆ ದೂರು ಕೊಡುತ್ತೇವೆಯೋ ಅವರೇ ನಮ್ಮ ಮೇಲೆ, “ಸುಳ್ಳು ಕಳ್ಳತನದ ಕೇಸುಗಳನ್ನು ಹಾಕುತ್ತಾರೆ. ಪೊಲೀಸರು ಆ ದೂರನ್ನು ಪಡೆದು ನಮ್ಮನ್ನು ಬಂಧಿಸಿ ಥಳಿಸುತ್ತಾರೆ.”

ಸ್ಥಳೀಯವಾಗಿ ಕಲೈಕೂಟಾಡಿಗಳ್ ಎಂದು ಕರೆಯಲ್ಪಡುವ ಈ ಎನ್‌ಟಿ ಸಮುದಾಯವನ್ನು 2022ರಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಅಡಿಯಲ್ಲಿ ಪಟ್ಟಿ ಮಾಡಲಾಯಿತು.

Rukmini, from the Dommara settlement in Manamadurai, draws the crowds with her fire stunts, baton twirling, spinning and more
PHOTO • Pragati K.B.

ಮನಮದುರೈನ ದೊಮ್ಮರಾ ಕ್ಯಾಂಪ್ ಪ್ರದೇಶದ ರುಕ್ಮಿಣಿ ತನ್ನ ಬೆಂಕಿ ಆಟ, ಲಾಠಿ ತಿರುಗಿಸುವಿಕೆ, ಲಾಗ ಹೊಡೆಯುವಿಕೆ ಮುಂತಾದವುಗಳಿಂದ ಜನಸಮೂಹವನ್ನು ಸೆಳೆಯುತ್ತಾರೆ

ರುಕ್ಮಿಣಿಯವರು ಹೇಳುವ ಅನುಭವಗಳು ಡಿಎನ್‌ಟಿ ಮತ್ತು ಎನ್‌ಟಿ ಸಮುದಾಯಗಳಿಗೆ ಹೊಸದೇನಲ್ಲ. ಕ್ರಿಮಿನಲ್ ಬುಡಕಟ್ಟು ಕಾಯ್ದೆಯನ್ನು ರದ್ದುಪಡಿಸಲಾಯಿತು ಆದರೆ ಕೆಲವು ರಾಜ್ಯಗಳು ರೂಢಿಗತ ಅಪರಾಧಿಗಳ ಕಾಯ್ದೆಯನ್ನು ಸ್ಥಾಪಿಸಿದವು, ಅದು ಇದೇ ರೀತಿಯ ನೋಂದಣಿ ಮತ್ತು ಕಣ್ಗಾವಲು ಕಾರ್ಯವಿಧಾನಗಳಿಗೆ ಕರೆ ನೀಡುತ್ತದೆ. ವ್ಯತ್ಯಾಸವೆಂದರೆ ಈಗ ವ್ಯಕ್ತಿಗಳನ್ನು ಗುರಿಯಾಗಿಸಲಾಗುತ್ತದೆ ಮತ್ತು ಇಡೀ ಸಮುದಾಯಗಳನ್ನು ಗುರಿಯಾಗಿಸಲಾಗುವುದಿಲ್ಲ.

ಸಮುದಾಯವು ಈ ಗ್ರಾಮದಲ್ಲಿ ತಾತ್ಕಾಲಿಕ ಡೇರೆಗಳು, ಕ್ಯಾರಾವಾನ್‌ಗಳು ಮತ್ತು ಇಟ್ಟಿಗೆ ಮತ್ತು ಗಾರೆಯ ರಚನೆಗಳ ನೆಲೆಯಲ್ಲಿ ವಾಸಿಸುತ್ತಿದೆ. ರುಕ್ಮಿಣಿಯವರ ನೆರೆಯವರಾದ 66 ವರ್ಷದ ಬೀದಿ ಸರ್ಕಸ್‌ ಪ್ರದರ್ಶಕಿ ಸೆಲ್ವಿ ಕೂಡಾ ತಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಹೇಳುತ್ತಾರೆ. “ಹಳ್ಳಿಯ ಗಂಡಸರು ರಾತ್ರಿ ವೇಳೆ ನಮ್ಮ ಡೇರೆಗಳಿಗೆ ನುಗ್ಗಿ ಬಂದು ನಮ್ಮ ಪಕ್ಕದಲ್ಲಿ ಮಲಗುತ್ತಾರೆ. ಅವರನ್ನು ದೂರವಿರಿಸುವ ಸಲುವಾಗಿಯೇ ನಾವು ಕೊಳಕಾಗಿರುತ್ತೇವೆ. ಸರಿಯಾಗಿ ತಲೆ ಬಾಚುವುದಿಲ್ಲ, ಸ್ನಾನ ಮಾಡುವುದಿಲ್ಲ ಮತ್ತು ಒಳ್ಳೆಯ ಬಟ್ಟೆಗಳನ್ನು ಹಾಕಿಕೊಳ್ಳುವುದಿಲ್ಲ. ಆದರೂ ದುಷ್ಕರ್ಮಿಗಳನ್ನು ತಡೆಯುವುದು ಸಾಧ್ಯವಾಗುವುದಿಲ್ಲ.” ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ತಾಯಿಯಾದ ಅವರು ಹೇಳುತ್ತಾರೆ.

“ನಾವು ತಿರುಗಾಟದಲ್ಲಿರುವಾಗ ನಿಮಗೆ ನಮ್ಮ ಗುರುತು ಸಿಗುವುದಿಲ್ಲ. ಆಗ ನಾವು ಅಷ್ಟು ಕೊಳಕಾಗಿರುತ್ತೇವೆ.” ಎನ್ನುತ್ತಾರೆ ಸೆಲ್ವಿಯವರ ಪತಿ ರತ್ತಿನಮ್.‌

19 ವರ್ಷದ ತಾಯಮ್ಮ ಸನ್ನತಿಪುಡುಕುಲಂನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದಾರೆ. ಅವಳು ತನ್ನ ಬುಡಕಟ್ಟಿನಲ್ಲಿ ಶಾಲೆಯನ್ನು ಪೂರ್ಣಗೊಳಿಸಿದ ಮೊದಲ ವ್ಯಕ್ತಿಯಾಗಲಿದ್ದಾರೆ.

ಆದರೆ ಕಾಲೇಜಿನಲ್ಲಿ "ಕಂಪ್ಯೂಟರ್ ಅಧ್ಯಯನ" ಮಾಡುವ ಅವರ ಕನಸುಗಳು ಹೆತ್ತವರ ಅನುಮೋದನೆಯನ್ನು ಪಡೆಯುವ ಸಾಧ್ಯತೆಯಿಲ್ಲ.

"ನಮ್ಮಂತಹ ಸಮುದಾಯಗಳ ಹುಡುಗಿಯರಿಗೆ ಕಾಲೇಜುಗಳು ಸುರಕ್ಷಿತವಾಗಿಲ್ಲ. [ಅವರನ್ನು] ಶಾಲೆಯಲ್ಲಿ 'ಸರ್ಕಸ್ ಪೋಡರ್ವ ಇವಾ' (ಸರ್ಕಸ್ ಪ್ರದರ್ಶಕರು) ಎಂದು ಬೆದರಿಸಲಾಗುತ್ತದೆ ಮತ್ತು ತಾರತಮ್ಯಕ್ಕೆ ಒಳಗಾಗುತ್ತಾರೆ. ಕಾಲೇಜಿನಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ." ಅದರ ಬಗ್ಗೆ ಮತ್ತಷ್ಟು ಯೋಚಿಸುತ್ತಾ, ತಾಯಿ ಲಚ್ಮಿ ಹೇಳುತ್ತಾರೆ, "ಇದಲ್ಲದೆ, ಅವಳಿಗೆ ಪ್ರವೇಶವನ್ನು ಯಾರು ನೀಡುತ್ತಾರೆ? ಮತ್ತು ಅವಳು ಕಾಲೇಜಿಗೆ ಸೇರಿದರೂ, ನಾವು ಅದರ ಶುಲ್ಕಗಳನ್ನು ಹೇಗೆ ಪಾವತಿಸುತ್ತೇವೆ?"

Families in the Sannathipudukulam settlement
PHOTO • Pragati K.B.
take turns fetching drinking water in a wheel barrow (right) every morning
PHOTO • Pragati K.B.

ಸನ್ನತಿಪುಡುಕುಲಂ ವಸತಿ ಪ್ರದೇಶದ (ಎಡ) ಕುಟುಂಬಗಳು ಪ್ರತಿದಿನ ಬೆಳಿಗ್ಗೆ ವ್ಹೀಲ್ ಬ್ಯಾರೋದಲ್ಲಿ (ಬಲಕ್ಕೆ) ಕುಡಿಯುವ ನೀರನ್ನು ತರುತ್ತವೆ

ಇದೇ ಕಾರಣಕ್ಕಾಗಿ ಸಮುದಾಯದ ಹೆಣ್ಣುಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಲಾಗುತ್ತದೆ, ಎಂದು ಎಂದು ಟೆಂಟಿನ ಮಹೇಶ್ವರಿ ವಿವರಿಸುತ್ತಾರೆ. "ಏನಾದರೂ ತಪ್ಪಾದರೆ [ಲೈಂಗಿಕ ದೌರ್ಜನ್ಯಗಳು, ಅತ್ಯಾಚಾರಗಳು ಮತ್ತು ಗರ್ಭಧಾರಣೆ], ಅವಳನ್ನು ಸಮುದಾಯದೊಳಗೆ ಸಹ ಬಹಿಷ್ಕರಿಸಲಾಗುತ್ತದೆ ಮತ್ತು ಮದುವೆಯ ಅವಕಾಶಗಳಿಲ್ಲ" ಎಂದು ಸೆಲ್ವಿ ಹೇಳುತ್ತಾರೆ.

ಈ ಸಮುದಾಯಗಳ ಮಹಿಳೆಯರಿಗೆ ಎರಡೆರಡು ಬಗೆಯ ಹೊಡೆತವಾಗಿದೆ. ಅತ್ತ ಹೊರಗಿನ ಕಾಟವಲ್ಲದೆ ಸಮುದಾಯದ ಒಳಗಿನಿಂದಲೂ ಲಿಂಗ ತಾರತಮ್ಯವನ್ನು ಸಹಿಸಬೇಕು.

*****

“ನನಗೆ 16 ವರ್ಷಕ್ಕೆ ಮದುವೆ ಮಾಡಿಸಲಾಯಿತು. ನಾನು ಓದಿಲ್ಲ. ನಾನು ಬದುಕು ನಡೆಸುವ ಸಲುವಾಗಿ ಶಕುನ ಹೇಳುತ್ತೇನೆ. ಆದರೆ ಈ ವೃತ್ತಿ ನನ್ನೊಂದಿಗೆ ಕೊನೆಯಾಗಬೇಕು.” ಎಂದು ಮೂರು ಮಕ್ಕಳ ತಾಯಿ 28 ವರ್ಷದ ಹಂಸವಳ್ಳಿ ಹೇಳುತ್ತಾರೆ. "ಅದಕ್ಕಾಗಿಯೇ ನಾನು ನನ್ನ ಎಲ್ಲಾ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇನೆ."

ಗುಡುಗುಡುಪಾಂಡಿ ಸಮುದಾಯದವರಾದ ಅವರು ಮಧುರೈ ಜಿಲ್ಲೆಯ ಹಳ್ಳಿಗಳಾದ್ಯಂತ ಪ್ರಯಾಣಿಸಿ ಶಕುನ ಹೇಳುತ್ತಾರೆ. ಒಂದೇ ದಿನದಲ್ಲಿ, ಅವರು ಸರಿಸುಮಾರು 55 ಮನೆಗಳನ್ನು ಕ್ರಮಿಸುತ್ತಾರೆ, ಮಧ್ಯ ತಮಿಳುನಾಡಿನ 40 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ 10 ಕಿಲೋಮೀಟರ್ ದೂರದವರೆಗೆ ನಡೆಯುತ್ತಾರೆ. 2009ರಲ್ಲಿ, ಅವರ ಕಾಲೊನಿ ನಿವಾಸಿಗಳಾದ ಕಟ್ಟುನಾಯಕನ್‌ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ಟಿ) ಎಂದು ವರ್ಗೀಕರಿಸಲಾಯಿತು.

“ನಮಗೆ ಈ ಮನೆಗಳಲ್ಲಿ ಒಂದಿಷ್ಟು ಆಹಾರ ಮತ್ತು ಕೈತುಂಬಾ ಧಾನ್ಯಗಳು ದೊರೆಯುತ್ತದೆ. ಕೆಲವರು ಒಂದು, ಎರಡು ರೂಪಾಯಿಗಳನ್ನೂ ಕೊಡುತ್ತಾರೆ” ಎನ್ನುತ್ತಾರವರು.

Hamsavalli with her son
PHOTO • Pragati K.B.
in the Gugudupandi settlement
PHOTO • Pragati K.B.

ಗುಡುಗುಡುಪಾಂಡಿ ಕ್ಯಾಂಪಿನಲ್ಲಿ (ಬಲ) ಹಂಸವಳ್ಳಿ ತನ್ನ ಮಗನೊಂದಿಗೆ (ಎಡ)

ಗುಡುಗುಡುಪಾಂಡಿ ಸಮುದಾಯದ ಈ ಕಾಲನಿ ವಿದ್ಯುತ್ ಸಂಪರ್ಕ ಅಥವಾ ನೈರ್ಮಲ್ಯ ಸೌಲಭ್ಯಗಳನ್ನು ಹೊಂದಿಲ್ಲ. ಜನವಸತಿ ಪ್ರದೇಶದ ಸುತ್ತಲಿನ ದಟ್ಟವಾದ ಪೊದೆಗಳ ನಡುವೆ ಬಯಲು ಮಲವಿಸರ್ಜನೆಯಿಂದಾಗಿ ಹಾವು ಕಡಿತವು ಇಲ್ಲಿ ಸಾಮಾನ್ಯ ಘಟನೆಯಾಗಿದೆ. "ಇಲ್ಲಿ ಹಾವುಗಳಿವೆ, ಅವು ನನ್ನ ಸೊಂಟದವರೆಗೂ ಸುತ್ತಿಕೊಳ್ಳುತ್ತವೆ ಮತ್ತು ಏರುತ್ತವೆ" ಎಂದು ಹಂಸವಳ್ಳಿ ಸನ್ನೆ ಮಾಡುತ್ತಾರೆ. ಮಳೆ ಬಂದಾಗ, ಡೇರೆಗಳು ಸೋರುತ್ತವೆ, ಆದ್ದರಿಂದ ಹೆಚ್ಚಿನ ಕುಟುಂಬಗಳು ಎನ್‌ಜಿಒ ನಿರ್ಮಿಸಿದ ದೊಡ್ಡ ಸಭಾಂಗಣವಾದ 'ಅಧ್ಯಯನ ಕೇಂದ್ರ'ದಲ್ಲಿ ರಾತ್ರಿ ಕಳೆಯುತ್ತವೆ.

ಆದರೆ ಆಕೆಯ ಸಂಪಾದನೆಯು 11, 9 ಮತ್ತು 5 ವರ್ಷ ವಯಸ್ಸಿನ ತನ್ನ ಮೂವರು ಮಕ್ಕಳನ್ನು ನೋಡಿಕೊಳ್ಳಲು ಸಾಕಾಗುವುದಿಲ್ಲ. "ಇಲ್ಲಿ ನನ್ನ ಮಕ್ಕಳು ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ವೈದ್ಯರು ಹೇಳುತ್ತಾರೆ, 'ಆರೋಗ್ಯಕರವಾಗಿ ತಿನ್ನಿರಿ, ಮಕ್ಕಳಿಗೆ ಶಕ್ತಿ ಮತ್ತು ರೋಗನಿರೋಧಕ ಶಕ್ತಿಗಾಗಿ ಪೌಷ್ಠಿಕಾಂಶದ ಅಗತ್ಯವಿದೆ' ಎಂದು. ಪಡಿತರ ಅಕ್ಕಿಯಿಂದ ತಯಾರಿಸಿದ ಗಂಜಿ ಮತ್ತು ರಸಂ ಅನ್ನು ಮಾತ್ರವೇ ಅವರಿಗೆ ತಿನ್ನಿಸಲು ಶಕ್ತಳಾಗಿದ್ದೇನೆ."

ಇದೇ ಕಾರಣಕ್ಕಾಗಿ ಅವರು ದೃಢವಾಗಿ ಹೇಳುತ್ತಾರೆ, "ಈ ಕೆಲಸವು ನನ್ನ ಪೀಳಿಗೆಯೊಂದಿಗೆ ಕೊನೆಗೊಳ್ಳಬೇಕು."

ಈ ಗುಂಪುಗಳ ಅನುಭವಗಳನ್ನು ಉಲ್ಲೇಖಿಸಿ, ಬಿ. ಅರಿ ಬಾಬು ಹೇಳುತ್ತಾರೆ, "ಸಮುದಾಯ ಪ್ರಮಾಣಪತ್ರವು ಕೇವಲ ವರ್ಗವನ್ನು ಗುರುತಿಸುವ ಕಾಗದವಲ್ಲ, ಅದು ಮಾನವ ಹಕ್ಕುಗಳ ಸಾಕ್ಷಾತ್ಕಾರದ ಸಾಧನವಾಗಿದೆ."  ಬಾಬು ಮಧುರೈನ ಅಮೆರಿಕನ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಪ್ರಮಾಣಪತ್ರವು ಸಾಮಾಜಿಕ ನ್ಯಾಯ ಮತ್ತು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು, ದಶಕಗಳ ತಪ್ಪುಗಳನ್ನು ಸರಿಪಡಿಸಲು ಇರುವ ಮಾರ್ಗವಾಗಿದೆ ಎಂದು ಅವರು ಹೇಳುತ್ತಾರೆ. ಅವರು ಸಾಂಕ್ರಾಮಿಕ ಪಿಡುಗು ಮತ್ತು ಅದರ ಲಾಕ್ಡೌನ್ ಸಮಯದಲ್ಲಿ ತಮಿಳುನಾಡಿನಲ್ಲಿ ಅಂಚಿನಲ್ಲಿರುವ ಗುಂಪುಗಳು ಎದುರಿಸುತ್ತಿರುವ ಕಷ್ಟಗಳನ್ನು ದಾಖಲಿಸಿದ ವಾಣಿಜ್ಯೇತರ ಯೂಟ್ಯೂಬ್ ಚಾನೆಲ್ ಬಫೂನ್‌ನ ಸ್ಥಾಪಕರಾಗಿದ್ದಾರೆ.

*****

"ನಾನು ಈ ಚುನಾವಣೆಗಳಲ್ಲಿ [2021ರಲ್ಲಿ ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ] 60 ವರ್ಷಗಳಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದೆ" ಎಂದು ಆರ್.ಸುಪ್ರಮಣಿ ತಮ್ಮ ಮತದಾರರ ಗುರುತಿನ ಚೀಟಿಯನ್ನು ಸನ್ನತಿಪುಡುಕುಲಂನಲ್ಲಿರುವ ತಮ್ಮ ಮನೆಯಲ್ಲಿ ಹೆಮ್ಮೆಯಿಂದ ಪ್ರದರ್ಶಿಸುತ್ತಾ ಹೇಳುತ್ತಾರೆ. ಎನ್‌ಜಿಒಗಳ ಸಹಾಯದಿಂದ ಆಧಾರದಂತಹ ಇತರ ಅಧಿಕೃತ ದಾಖಲೆಗಳನ್ನು ಸಹ ಪಡೆಯಲಾಗಿದೆ.

"ನಾನು ವಿದ್ಯಾವಂತನಲ್ಲ, ನನ್ನಿಂದ ಇನ್ನೇನಾದರೂ ಮಾಡಿ ಜೀವನೋಪಾಯವನ್ನು ಸಂಪಾದಿಸಲು ಸಾಧ್ಯವಿಲ್ಲ. ಸರ್ಕಾರವು ನಮಗೆ ಕೆಲವು ವೃತ್ತಿಪರ ತರಬೇತಿ ಮತ್ತು ಸಾಲವನ್ನು ನೀಡಬೇಕು. ಇದು ಸ್ವಯಂ ಉದ್ಯೋಗಕ್ಕೆ ಸಹಾಯ ಮಾಡುತ್ತದೆ" ಎಂದು ಅವರು ಹೇಳುತ್ತಾರೆ.

ಫೆಬ್ರವರಿ 15, 2022ರಂದು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಡಿಎನ್‌ಟಿಗಳ ಆರ್ಥಿಕ ಸಬಲೀಕರಣ (ಸೀಡ್) ಯೋಜನೆಯನ್ನು ಪ್ರಾರಂಭಿಸಿತು.  ವಾರ್ಷಿಕ 2.50 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ ಮತ್ತು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಇದೇ ರೀತಿಯ ಯೋಜನೆಯಿಂದ ಅಂತಹ ಯಾವುದೇ ಪ್ರಯೋಜನಗಳನ್ನು ಪಡೆಯದ ಕುಟುಂಬಗಳನ್ನು ಇದು ಗುರಿಯಾಗಿಸಿಕೊಂಡಿದೆ.

A palm-reader in front of the Murugan temple in Madurai .
PHOTO • Pragati K.B.
A group of people from the Chaatai or whip-lashing community performing in front of the Tirupparankundram Murugan temple in Madurai
PHOTO • Pragati K.B.

ಎಡ: ಮಧುರೈನ ಮುರುಗನ್ ದೇವಾಲಯದ ಮುಂದೆ ಕಣಿ ಹೇಳುವವರು. ಬಲ : ಮಧುರೈನ ತಿರುಪ್ಪರನ್ಕುಂಡ್ರಮ್ ಮುರುಗನ್ ದೇವಾಲಯದ ಮುಂದೆ ಚಾಟಾಯಿ ಅಥವಾ ಚಾಟಿಯಿಂದ ಹೊಡೆದುಕೊಳ್ಳುವ ಸಮುದಾಯದ ಜನರ ಗುಂಪು ಪ್ರದರ್ಶನ ನೀಡುತ್ತಿದೆ

2021-22ರಿಂದ 2025-26ರವರೆಗಿನ 5 ವರ್ಷಗಳ ಅವಧಿಯಲ್ಲಿ ಅಂದಾಜು 200 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಗಣತಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಇಲ್ಲಿಯವರೆಗೆ ಯಾವುದೇ ಸಮುದಾಯಗಳಿಂದ ಯಾವುದೇ ಹಣವನ್ನು ಸ್ವೀಕರಿಸಲಾಗಿಲ್ಲ.

"ಎಸ್ಸಿ ಮತ್ತು ಎಸ್ಟಿ ಸಮುದಾಯಗಳಂತೆ ನಮಗೂ ಸಂವಿಧಾನದಲ್ಲಿ ಪ್ರತ್ಯೇಕ ಮಾನ್ಯತೆ ಪಡೆದ ಸ್ಥಾನಮಾನವನ್ನು ನೀಡಬೇಕು. ನಮ್ಮನ್ನು ರಾಜ್ಯವು ನಿರ್ಲಕ್ಷಿಸದಂತೆ ನೋಡಿಕೊಳ್ಳಲು ಇದು ಮೊದಲ ಹೆಜ್ಜೆಯಾಗಿದೆ" ಎಂದು ಸುಪ್ರಮಣಿ ಹೇಳುತ್ತಾರೆ. ಅವರ ಸರಿಯಾದ ಗುರುತನ್ನು ಪಡೆಯಲು ಸರಿಯಾದ ಗಣತಿಯ ಹೊರತು ಬೇರೆ ದಾರಿಯಿಲ್ಲ ಎಂದು ಅವರು ಹೇಳುತ್ತಾರೆ.

2021-22ರ ಏಷ್ಯಾ ಪೆಸಿಫಿಕ್ ಫೋರಂ ಆನ್ ವುಮೆನ್, ಲಾ ಅಂಡ್ ಡೆವಲಪ್ಮೆಂಟ್ (ಎಪಿಡಬ್ಲ್ಯುಎಲ್‌ಡಿ) ಮಾಧ್ಯಮ ಫೆಲೋಶಿಪ್ ಭಾಗವಾಗಿ ಈ ಲೇಖನವನ್ನು ತಯಾರಿಸಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Pragati K.B.

பிரகதி கே.பி. ஒரு சுயாதீன பத்திரிகையாளர். அவர் இங்கிலாந்தின் ஆக்ஸ்ஃபோர்டு பல்கலைக்கழகத்தில் சமூக மானுடவியல் முதுகலை படித்துக் கொண்டிருக்கிறார்.

Other stories by Pragati K.B.
Editor : Priti David

ப்ரிதி டேவிட் பாரியின் நிர்வாக ஆசிரியர் ஆவார். பத்திரிகையாளரும் ஆசிரியருமான அவர் பாரியின் கல்விப் பகுதிக்கும் தலைமை வகிக்கிறார். கிராமப்புற பிரச்சினைகளை வகுப்பறைக்குள்ளும் பாடத்திட்டத்துக்குள்ளும் கொண்டு வர பள்ளிகள் மற்றும் கல்லூரிகளுடன் இயங்குகிறார். நம் காலத்தைய பிரச்சினைகளை ஆவணப்படுத்த இளையோருடனும் இயங்குகிறார்.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru