“ನಾನು ನನ್ನ ಭೂಮಿಯ ಮಾಲಿಕರಿಗೆ 25,000 ರೂಪಾಯಿಗಳನ್ನು ಕೊಡಬೇಕಿದೆ. ಈ ಸಾಲವನ್ನು ಮರುಪಾವತಿಸದೆ ನಾನು ಅಧಿಯಾ ಕಿಸಾನಿಯನ್ನು (ಗೇಣಿ) ಬಿಡಲು ಸಾಧ್ಯವಿಲ್ಲ” ಎಂದು ರವೇಂದ್ರ ಸಿಂಗ್ ಬರ್ಗಾಹಿ ಹೇಳುತ್ತಾರೆ. "ಅಗರ್ ಚೋಡ್ ದಿಯಾ ತೋ ಯೇ ವಾದಾ ಖಿಲಾಫಿ ಮಾನಾ ಜಾಯೇಗಾ [ಒಂದು ವೇಳೆ ನಾನು ಹಾಗೆ ಬಿಟ್ಟು ಬಿಟ್ಟರೆ ಅದು ಕೊಟ್ಟ ಭಾಷೆ ಮೀರಿದಂತೆ]."
ಮಧ್ಯಪ್ರದೇಶದ ಮುಗ್ವಾರಿ ಗ್ರಾಮದ ವಾಸಿಯಾದ ರವೇಂದ್ರ, ಅಲ್ಲಿ ಸುಮಾರು 20 ವರ್ಷಗಳಿಂದ ಗೇಣಿದಾರರಾಗಿ ಭೂಮಿಯನ್ನು ಕೃಷಿ ಮಾಡುತ್ತಿದ್ದಾರೆ. ಅಧಿಯಾ ಕಿಸಾನಿ (ಕೃಷಿ) ಒಂದು ಸಾಂಪ್ರದಾಯಿಕ, ಮೌಖಿಕ ಒಪ್ಪಂದವನ್ನು ಸೂಚಿಸುತ್ತದೆ - ಮಧ್ಯಪ್ರದೇಶದ ಸಿಧಿ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಮತ್ತು ವಿಂಧ್ಯ ಪ್ರದೇಶದಲ್ಲಿ ಕೆಲವೆಡೆ- ಮಾಲಿಕ್ (ಭೂಮಾಲೀಕರು) ಮತ್ತು ಬಾಡಿಗೆದಾರರು ಕೃಷಿ ವೆಚ್ಚವನ್ನು ಸಮಾನ ಭಾಗಗಳಲ್ಲಿ ಭರಿಸುತ್ತಾರೆ ಮತ್ತು ಇಳುವರಿಯನ್ನೂ ಸರಿ ಪಾಲು ಮಾಡಿಕೊಳ್ಳುತ್ತಾರೆ.
ರವೀಂದ್ರ ಮತ್ತು ಅವರ ಪತ್ನಿ ಮಮತಾ ಎಂಟು ಎಕರೆ ಭೂಮಿಯಲ್ಲಿ ಭತ್ತ, ಗೋಧಿ, ಸಾಸಿವೆ ಮತ್ತು ಬೇಳೆಕಾಳುಗಳನ್ನು ಬೆಳೆಯುತ್ತಾರೆ. ಗುತ್ತಿಗೆ ಕೃಷಿಯನ್ನು ಮಧ್ಯಪ್ರದೇಶದ ಆಡುಭಾಷೆಯಾದ ಬಗೇಲಿ ಭಾಷೆಯಲ್ಲಿ ಅಧಿಯಾ ಎಂದು ಕರೆಯಲಾಗುತ್ತದೆ. ಅಧಿಯಾ ಎಂದರೆ ಅರ್ಧ. ಆದರೆ ರವೀಂದ್ರ ಅವರ ಕುಟುಂಬದ ಪಾಲಿಗೆ ಅರ್ಧ ಎನ್ನವುದು ಯಾವತ್ತೂ ನ್ಯಾಯಯುತವಾಗಿ ದೊರೆತಿಲ್ಲ.
ಭಾರತದಾದ್ಯಂತ ವಿವಿಧ ರೂಪದಲ್ಲಿ ಅಸ್ಥಿತ್ವದಲ್ಲಿರುವ ಈ ಅನೌಪಚಾರಿಕ ಒಪ್ಪಂದದಲ್ಲಿ, ಭೂಮಾಲೀಕರು ಯಾವ ಬೆಳೆ ಬೆಳೆಯುವುದೆನ್ನುವುದನ್ನು ಸೇರಿದಂತೆ ಕೃಷಿ ಸಂಬಂಧಿತ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ತೀವ್ರ ಚಳಿ, ಅಕಾಲಿಕ ಮಳೆ, ಆಲಿಕಲ್ಲು ಮಳೆಯಿಂದಾಗಿ ಬೆಳೆಗಳು ಹಾನಿಗೊಳಗಾದಾಗ ಸರಕಾರ ಅಥವಾ ವಿಮಾ ಕಂಪನಿಗಳಿಂದ ಪರಿಹಾರ ದೊರೆತರೆ ಅದನ್ನು ಭೂಮಾಲಿಕರೇ ಇರಿಸಿಕೊಳ್ಳುತ್ತಾರೆ. ಗೇಣಿದಾರನಿಗೆ ಇದರಲ್ಲಿ ಏನೂ ದೊರೆಯುವುದಿಲ್ಲ.
ಈ ವಿಧಾನವು ಯಾವಾಗಲೂ ಗೇಣಿದಾರ ರೈತನನ್ನು ಅಸುರಕ್ಷಿತ ವಾತಾವರಣದಲ್ಲಿರಿಸುತ್ತದೆ. ಸಾಲ ಮತ್ತು ವಿಮೆಯಂತಹ ಯಾವುದೇ ರಕ್ಷಣೆ ಅವರಿಗೆ ದೊರೆಯುವುದಿಲ್ಲ. ಗುತ್ತಿಗೆ ಪಡೆದ ರೈತರು ಹೆಚ್ಚಾಗಿ ಸಾಲ ಮಾಡಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ. ಮುಂದಿನ ಬೆಳೆಗೆ ತಮ್ಮ ಪಾಲಿನ ಹೂಡಿಕೆಗಾಗಿ ಅವರು ತಮ್ಮ ಭೂಮಾಲಿಕರಿಂದಲೇ ಸಾಲ ಪಡೆಯುತ್ತಾರೆ.
"ನನ್ನ ಇಡೀ ಕುಟುಂಬ ದುಡಿಯತ್ತದೆ, ಆದರೂ ಸಂಪಾದನೆ ಮಾತ್ರ ಹೆಚ್ಚುವುದಿಲ್ಲ" ಎಂದು ಒಬಿಸಿ ವರ್ಗಕ್ಕೆ ಸೇರಿಸಲಾಗಿರುವ ಬಾರ್ಗಾಹಿ ಸಮುದಾಯದ 40 ವರ್ಷದ ರವೇಂದ್ರ (ಮೇಲಿನ ಕವರ್ ಫೋಟೋದಲ್ಲಿ ಮುಂಭಾಗದಲ್ಲಿರುವವರು) ಹೇಳುತ್ತಾರೆ. ಅವರ ಪುತ್ರರಾದ ವಿವೇಕ್, 12, ಮತ್ತು ಅನುಜ್, 10, ಹೊಲದಲ್ಲಿನ ಕಳೆಗಳನ್ನು ತೆಗೆಯಲು ಸಹಾಯ ಮಾಡುತ್ತಾರೆ. “ಅಕೇಲೆ ದಮ್ ಮೇ ತೋ ಖೇತಿ ಹೋತಿ ನಹಿ ಹೈ” - ಕೃಷಿಯನ್ನು ನಾನೊಬ್ಬನೇ ನಿರ್ವಹಿಸುವುದು ಸಾಧ್ಯವಿಲ್ಲ, ಎಂದು ಅವರು ಹೇಳುತ್ತಾರೆ. "ಕಳೆದ ವರ್ಷ, ನಾನು ಬೆಳೆಗಳಿಗಾಗಿ 15,000 ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ, ಆದರೆ ಗಳಿಸಿದ್ದು ಕೇವಲ 10,000 ಮಾತ್ರ.” ಕುಟುಂಬವು 2019ರ ರಬಿ ಹಂಗಾಮಿನಲ್ಲಿ ಭತ್ತವನ್ನು ಹಾಕಿ ನಂತರ ಖಾರಿಫ್ ಹಂಗಾಮಿನಲ್ಲಿ ಹೆಸರು ಬಿತ್ತನೆ ಮಾಡಿತ್ತು. ಅವರು ಸಾಮಾನ್ಯವಾಗಿ ಇಳುವರಿಯ ಒಂದು ಭಾಗವನ್ನು ತಮ್ಮದೇ ಬಳಕೆಗಾಗಿ ಇಟ್ಟುಕೊಳ್ಳುತ್ತಾರೆ ಮತ್ತು ಉಳಿದ ಬೆಳೆಯನ್ನು ಮಾರಾಟ ಮಾಡುತ್ತಾರೆ. ಆದರೆ ಮಳೆಯ ಕೊರತೆ ಭತ್ತದ ಬೆಳೆಯನ್ನು ನಾಶಗೊಳಿಸಿದರೆ, ತೀವ್ರ ಚಳಿ ಹೆಸರು ಕಾಳು ಇಳುವರಿಯನ್ನು ಹಾಳುಗೆಡವಿತು.
ಕುಟುಂಬವು ಒಂದು ಮಾವಿನ ಮರವನ್ನು ಹೊಂದಿದ್ದು, ಅದು ಅವರ ಮನೆಯ ಪಕ್ಕದಲ್ಲಿಯೇ ಬೆಳೆಯುತ್ತಿದೆ. ಮಮತಾ ಮತ್ತು ಅವರ ಪುತ್ರರು ಅಮಾಹರಿಯನ್ನು (ಒಣಗಿದ ಮಾವು, ಉಪ್ಪಿನಕಾಯಿ ಅಥವಾ ಪುಡಿಯನ್ನು ತಯಾರಿಸಲು ಬಳಸಲಾಗುತ್ತದೆ) ಎರಡು ಕಿಲೋಮೀಟರ್ ದೂರದಲ್ಲಿರುವ ಕುಚ್ವಾಹಿ ಗ್ರಾಮದಲ್ಲಿ ಬೇಸಿಗೆಯ ತಿಂಗಳುಗಳಲ್ಲಿ, ಮೇನಿಂದ ಜುಲೈವರೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಬಿದ್ದ ಕಚ್ಚಾ ಮಾವಿನ ಕಾಯಿಯನ್ನು ಸಂಗ್ರಹಿಸಲು ವಿವೇಕ್ ಮತ್ತು ಅನುಜ್ ಕೂಡ ಹಳ್ಳಿಯಲ್ಲಿ ಸಂಚರಿಸುತ್ತಾರೆ. "ನಾವು ಇವುಗಳನ್ನು ಪ್ರತಿ ಕಿಲೋಗೆ ಐದು ರೂಪಾಯಿಯಂತೆ ಮಾರಾಟ ಮಾಡಿ ಬೇಸಿಗೆಯಲ್ಲಿ 1,000ದಿಂದ 1,500 ರೂಪಾಯಿಗಳನ್ನು ಗಳಿಸುತ್ತೇವೆ" ಎಂದು 38 ವರ್ಷದ ಮಮತಾ ಹೇಳುತ್ತಾರೆ. "ಈ ವರ್ಷ, ಮಾವಿನ ಮಾರಾಟದಿಂದ ಗಳಿಸಿದ ಆದಾಯವು ನಮಗೆ ಒಂದಿಷ್ಟು ಬಟ್ಟೆಗಳನ್ನು ಖರೀದಿಸಲು ಸಾಕಾಗುತ್ತದೆ."
'ಮಾಲೀಕರಿಗೆ ಸರ್ಕಾರದ ಪರಿಹಾರ ದೊರೆತಿದ್ದು ತಿಳಿದು, ನನ್ನ ಪಾಲನ್ನು ಕೇಳಿದೆ, ಆದರೆ ಅವರು ನಿರಾಕರಿಸಿದರು' ಎಂದು ಜಂಗಾಲಿ ಸೋಂಧಿಯಾ ಹೇಳುತ್ತಾರೆ
ಬೆಳೆ ಹಂಗಾಮಿನ ನಡುವೆ ರವೇಂದ್ರ ಮೇ ಮತ್ತು ಜೂನ್ ತಿಂಗಳಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ. “ಈ ಸಮಯದಲ್ಲಿ [ಮುಗ್ವರಿ ಗ್ರಾಮದ ಮನೆಗಳ] ಜರಿದ ಗೋಡೆಗಳು ಮತ್ತು ಛಾವಣಿಗಳನ್ನು ಸರಿಪಡಿಸುವ ಮೂಲಕ ನಾವು [ಭೂಹೀನ ರೈತರು] ಒಂದಿಷ್ಟು ಹಣ ಗಳಿಸುತ್ತೇವೆ. ಇದು ನನಗೆ ಈ ವರ್ಷ 10,000ದಿಂದ 12,000 ರೂಪಾಯಿಗಳ ಸಂಪಾದನೆ ತಂದಿದೆ”ಎಂದು ಜೂನ್ ಮಧ್ಯದಲ್ಲಿ ನಾನು ಅವರೊಂದಿಗೆ ಮಾತನಾಡಿದಾಗ ರವೇಂದ್ರ ಹೇಳಿದರು. "ಮಾಲಿಕ್ ಅವರ ಸಾಲವನ್ನು ಮರುಪಾವತಿಸಲು ನಾನು ಈ ಹಣವನ್ನು ಬಳಸುತ್ತೇನೆ" ಎಂದು ಅವರು ಹೇಳಿದರು, ಅವರು ಹೇಳುವಂತೆ ಹಿಂದಿನ ಬೆಳೆಗೆ ಭೂಮಾಲೀಕರು ನೀರು, ಬೀಜಗಳು, ವಿದ್ಯುತ್ ಮತ್ತು ಇತರ ವೆಚ್ಚಗಳಿಗೆ ಪಾವತಿಸಿದ್ದರು.
"ಬೆಳೆಗಳು ನಾಶವಾದರೆ, ನಮ್ಮ ಪಾಲಿಗೆ ಏನೂ ಉಳಿಯುವುದಿಲ್ಲ" ಎಂದು ಮುಗ್ವಾರಿಯ ಇನ್ನೊಬ್ಬ ಅಧಿಯಾ ಕೃಷಿಕ 45 ವರ್ಷದ ಜಂಗಾಲಿ ಸೋಂಧಿಯಾ ಹೇಳುತ್ತಾರೆ, ವಿಪರೀತ ಹಿಮದಿಂದಾಗಿ ತಮ್ಮ ತೊಗರಿ ಬೆಳೆ ಹೇಗೆ ನಾಶವಾಯಿತೆಂದು ವಿವರಿಸುತ್ತಾ ಜಂಗಾಲಿ ಮೇಲಿನ ಮಾತುಗಳನ್ನು ಹೇಳಿದರು. "ಮಾಲಿಕ್‌ಗೆ ಸರಕಾರದಿಂದ ಪರಿಹಾರದ ಹಣ ದೊರೆತಿರುವ ಸುದ್ದಿ ತಿಳಿದು ಅವರ ಬಳಿ ನನ್ನ ಪಾಲನ್ನು ಕೇಳಲು ಹೋದೆ. ಆದರೆ ಅವರು ಭೂಮಿಯ ಮಾಲಿಕ ನಾನಾಗಿರುವುದರಿಂದ ಪೂರ್ತಿ ಪರಿಹಾರದ ಹಣ ತನಗೇ ಸೇರಬೇಕೆಂದು ಹೇಳಿ ಹಣ ನೀಡಲು ನಿರಾಕರಿಸಿದರು." ಪರಿಹಾರದ ಹಣ ಎಷ್ಟು ಬಂದಿದೆಯೆಂದು ಜಂಗಾಲಿಯವರಿಗೂ ತಿಳಿದಿಲ್ಲ. ಸುಮಾರು ಆರು ಸಾವಿರ ರೂಪಾಯಿಗಳ ನಷ್ಟವನ್ನು ಭರಿಸಲು ಅವರು ಊರಿನಲ್ಲಿ ಸಿಕ್ಕ ಕೂಲಿ ಕೆಲಸಗಳನ್ನೆಲ್ಲ ಮಾಡಬೇಕಾಯಿತು. ಅವರ ಇಬ್ಬರು ಗಂಡು ಮಕ್ಕಳು ಸಿಧಿ ಪಟ್ಟಣದ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡಿ ಸಂಪಾದಿಸಿ ಮನೆಗೆ ಹಣ ಕಳಿಸುತ್ತಾರೆ.
ಆದರೆ, ಮುಗ್ವರಿ ಗ್ರಾಮವಿರುವ ಸಿಧಿ ಬ್ಲಾಕ್‌ನ ಗೋಪಾದ್ ಬನಾಸ್ ತಹಸಿಲ್‌ನ ತಹಶೀಲ್ದಾರ್ ಲಕ್ಷ್ಮೀಕಾಂತ್ ಮಿಶ್ರಾ, ರೈತರಿಗೆ ಪರಿಹಾರ ಲಭ್ಯವಿದೆ ಎಂದು ಹೇಳುತ್ತಾರೆ. "ಭೂಮಾಲೀಕರು ಗೇಣಿದಾರರನ್ನು ಅಧಿಯಾ ರೈತರು ಎಂದು ಘೋಷಿಸಿದರೆ ಗೇಣಿದಾರರಿಗೆ ರಾಜ್ಯ ಸರ್ಕಾರದಿಂದ [ಬೆಳೆ ಹಾನಿಗೆ] ಪರಿಹಾರ ಸಿಗುತ್ತದೆ" ಎಂದು ಅವರು ಹೇಳುತ್ತಾರೆ.
ಅವರು ಮಧ್ಯಪ್ರದೇಶ ಸರ್ಕಾರದ 2014ರ ಸುತ್ತೋಲೆ, ರಾಜಸ್ವ ಪುಸ್ತಕ್ ಪರಿಪಾತ್ರ 6-4 ರ ಕುರಿತು ಹೇಳುತ್ತಿದ್ದಾರೆ, ಇದು ರೈತರು ತಮ್ಮ ಬೆಳೆಗಳಿಗೆ ಹಾನಿಯಾಗಿದ್ದರೆ ಸರ್ಕಾರದಿಂದ ಹೇಗೆ ಹಣಕಾಸಿನ ಪರಿಹಾರವನ್ನು ಪಡೆಯಬಹುದು ಎಂಬುದನ್ನು ವಿವರಿಸುತ್ತದೆ. ಇದಕ್ಕಾಗಿ, ಭೂಮಾಲೀಕರು ತಮ್ಮ ತಹಶೀಲ್ದಾರ್‌ಗೆ ಹಾನಿಯಾದ ಬೆಳೆಯ ಬಗ್ಗೆ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ. ಭೂಮಾಲೀಕರು ಅಧಿಯಾ ರೈತರು ಎಂದು ಘೋಷಿಸುವ ದಾಖಲೆಗಳನ್ನು ಸಲ್ಲಿಸಿದರೆ ಗೇಣಿದಾರರು ಈ ಪರಿಹಾರದ ಒಂದು ಭಾಗವನ್ನು ಪಡೆಯಬಹುದು ಎಂದು ಮಿಶ್ರಾ ಹೇಳುತ್ತಾರೆ. ಇದನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿಲ್ಲವಾದರೂ, ಇದು ಅಂಗೀಕೃತ ಅಭ್ಯಾಸ ಎಂದು ಅವರು ಹೇಳುತ್ತಾರೆ.
"ಸಿಧಿ ಜಿಲ್ಲೆಯಲ್ಲಿ ಪರಿಹಾರವನ್ನು ಪಡೆಯುವ ಸುಮಾರು 20,000 ಗೇಣಿದಾರರಿದ್ದಾರೆ, ಆದರೆ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ಈ ಪರಿಹಾರ ದೊರೆಯುತ್ತಿಲ್ಲ" ಎಂದು ಮಿಶ್ರಾ ಹೇಳುತ್ತಾರೆ. “ನಾವು ಭೂಮಾಲೀಕರನ್ನು ಘೋಷಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ, ಏಕೆಂದರೆ ಅಧಿಯಾ ಪರಸ್ಪರ ಒಪ್ಪಂದವಾಗಿದೆ. ರಾಜ್ಯದಲ್ಲಿ ಭೂಮಾಲೀಕರಿಗೆ ಹಾಗೆ ಮಾಡುವಂತೆ ಆದೇಶಿಸುವ ಯಾವುದೇ ಕಾನೂನುಗಳು ಅಸ್ಥಿತ್ವದಲ್ಲಿಲ್ಲ.”
ಆದಾಗ್ಯೂ, ಮಧ್ಯಪ್ರದೇಶ ಭೂಮಿಸ್ವಾಮಿ ಏವಮ್ ಬಟಾಯಿದಾರ್ ಕೆ ಹಿತೋಂ ಕಾ ಸಂರಕ್ಷಣ್ ವಿಧೇಯಕ್ , 2016, ಭೂಸ್ವಾಮಿಗಳು ಮತ್ತು ಬಟಾಯಿದಾರ್‌ಗಳು ತಮ್ಮ ಒಪ್ಪಂದದ ಪ್ರಕಾರ ನೈಸರ್ಗಿಕ ವಿಪತ್ತು ಅಥವಾ ಇತರ ಕಾರಣಗಳಿಂದಾಗಿ ಬೆಳೆ ಹಾನಿಯಾದರೆ ರಾಜ್ಯ ಅಥವಾ ವಿಮಾ ಕಂಪನಿಗಳಿಂದ ಪರಿಹಾರ ಪಡೆಯಬಹುದು ಎಂದು ಆದೇಶಿಸಿದೆ. ಈ ಕಾಯಿದೆಯು ಬಟಾಯಿ (ಗೇಣಿ) ಒಪ್ಪಂದದ ಟೆಂಪ್ಲೇಟ್ ಅನ್ನು ಸಹ ಒಳಗೊಂಡಿದೆ.
ಆದರೆ ಸಿಧಿಯ ರೈತರು ಮತ್ತು ತಹಸಿಲ್ದಾರ್ ಲಕ್ಷ್ಮಿಕಾಂತ್ ಮಿಶ್ರಾ ಇಬ್ಬರಿಗೂ ಈ ವಿಷಯದ ಕುರಿತು ಮಾಹಿತಿಯಿಲ್ಲ.
"ಬೀಜಗಳನ್ನು ಬಿತ್ತನೆ ಮಾಡುವುದರಿಂದ ಕೊಯ್ಲು ಮಾಡುವವರೆಗೆ - ನಾವು ಎಲ್ಲವನ್ನೂ ಮಾಡುತ್ತೇವೆ, ಆದರೆ ಹಂಗಾಮಿನ ಕೊನೆಯಲ್ಲಿ ನಾವು ಸ್ವಲ್ಪವೇ ಹಣ ಗಳಿಸುತ್ತೇವೆ" ಎಂದು ಜಂಗಲಿ ಹೇಳುತ್ತಾರೆ. ಭಾರಿ ನಷ್ಟದ ನಡುವೆಯೂ ಅವರು ಇನ್ನೂ ಅಧಿಯಾ ಕೃಷಿ ಯಾಕೆ ಮಾಡುತ್ತಾರೆ? "ನಾವು ಕೃಷಿಯಿಂದಲೇ ಬದುಕುವವರು, ಅದು ಇಲ್ಲದೆ ಹೋದರೆ, ನಾವು ಹಸಿವಿನಿಂದ ಸಾಯುತ್ತೇವೆ. ಮಾಲಿಕರೊಂದಿಗೆ ಜಗಳವಾಡಿ ನಾವು ಎಲ್ಲಿಗೆ ಹೋಗಿ ಬದುಕಲು ಸಾಧ್ಯ?" ಎಂದು ಅವರು ಕೇಳುತ್ತಾರೆ.
ಅನುವಾದ: ಶಂಕರ ಎನ್. ಕೆಂಚನೂರು