“ಗಾಂಧೀಜಿಯವರ ಡೈರಿಯಲ್ಲಿ ನಮಗೆ ನಿಮ್ಮ ನಂಬರ್ ಸಿಕ್ತು. ಹೈವೇ ಪಕ್ಕದಲ್ಲಿ ಅವರಿಗೆ ಕಾರು ಡಿಕ್ಕಿ ಹೊಡೆದದ್ದರಿಂದಾಗಿ ಅವರು ಮೃತಪಟ್ಟರು,” ಎಂದು ರೇಷನ್ ಅಂಗಡಿ ಮಾಲೀಕ ಮತ್ತು ರಾಜಕೀಯ ಕಾರ್ಯಕರ್ತ ಬಿ.ಕೃಷ್ಣಯ್ಯ ಅವರು ಡಿಸೆಂಬರ್ 9 ಭಾನುವಾರದಂದು ನನಗೆ ದೂರವಾಣಿ ಕರೆ ಮೂಲಕ ತಿಳಿಸಿದರು.

ನಾನು ಕೊನೆಯ ಬಾರಿಗೆ ಗಂಗಪ್ಪ ಅಥವಾ ಗಾಂಧಿ ಎಂದು ಕರೆಯಲ್ಪಡುವ ಈ ವ್ಯಕ್ತಿಯನ್ನು ನವೆಂಬರ್ 24ರಂದು ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಭೇಟಿಯಾಗಿದ್ದೆ. ಆಗ ಸಮಯ ಸರಿ ಸುಮಾರು 10:30 ಗಂಟೆ, ಅವರು ತಮ್ಮ ಗಾಂಧಿ ವೇಷಭೂಷಣದಲ್ಲಿ ತಮ್ಮ ದಿನಚರಿಯನ್ನು ಪ್ರಾರಂಭಿಸಲು ಅನಂತಪುರಕ್ಕೆ ತೆರಳುತ್ತಿದ್ದರು. ಅವರು ಅನಂತಪುರದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ರಪ್ತಾಡು ಗ್ರಾಮದ ರಸ್ತೆ ಬದಿಯ ಖಾನಾವಳಿಯೊಂದರಲ್ಲಿ ತಂಗಿದ್ದರು. “ಸುಮಾರು ಎರಡು ತಿಂಗಳ ಹಿಂದೆ, ಒಬ್ಬ ಮುದುಕನಿಗೆ ಸ್ಥಳ ಬೇಕು ಎಂದು ಯಾರೋ ಹೇಳಿದರು, ಆದ್ದರಿಂದ ನಾನು ಅವರಿಗೆ ಇಲ್ಲಿಯೇ ಇರಲು ಅವಕಾಶ ಮಾಡಿಕೊಟ್ಟೆ. ಕೆಲವೊಮ್ಮೆ ಊಟವನ್ನೂ ಸಹ ಕೊಟ್ಟಿದ್ದೇನೆ” ಎನ್ನುತ್ತಾರೆ ಖಾನಾವಳಿಯ ಮಾಲೀಕ ವೆಂಕಟರಾಮಿ ರೆಡ್ಡಿ. ನನಗೆ ಕರೆ ಮಾಡಿದ್ದ ಕೃಷ್ಣಯ್ಯನವರು ಆಗಾಗ ಇಲ್ಲಿಗೆ ಬಂದು ಟೀ ಕುಡಿಯುತ್ತಿದ್ದರು ಮತ್ತು ಗಂಗಪ್ಪನ ಜೊತೆ ಹರಟೆ ಹೊಡೆಯುತ್ತಿದ್ದರು.

ಮೇ 2017ರಲ್ಲಿ ನಾನು 'ಪರಿ' ಗಾಗಿ ಗಂಗಪ್ಪನ ಕುರಿತಾಗಿ ಒಂದು ವರದಿ ಯನ್ನು ಮಾಡಿದ್ದೆ. ಆಗ ಅವರಿಗೆ ಸುಮಾರು 83 ವರ್ಷ ವಯಸ್ಸಾಗಿತ್ತು. 70 ವರ್ಷಗಳ ಕಾಲ ಕೃಷಿ ಕೂಲಿ ಕಾರ್ಮಿಕರಾಗಿ ದುಡಿದ ನಂತರ- ಪಶ್ಚಿಮ ಆಂಧ್ರಪ್ರದೇಶದ ಅನಂತಪುರ ಪಟ್ಟಣದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಅವರು ಗಾಂಧಿಯಂತೆ ವೇಷಭೂಷಣ ಧರಿಸಿ ತಮ್ಮನ್ನು 'ಮಹಾತ್ಮ'ನ ಅವತಾರದಲ್ಲಿ ತಮ್ಮ ಬದುಕಿಗೆ ಹೊಸ ರೂಪ ನೀಡಿದ್ದರು. ಅವರು ಪಡೆದ ಭಿಕ್ಷೆಯು ಅವರ ಕೃಷಿ ಕೂಲಿಯಿಂದ ಬರುವ ಸಂಪಾದನೆಗಿಂತಲೂ ಅಧಿಕವಾಗಿತ್ತು.

ಗಂಗಪ್ಪನವರು 2016ರಲ್ಲಿ ಹೊಲದಲ್ಲಿ ಕೆಲಸ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಕೃಷಿ ಕೂಲಿ ಕೆಲಸಕ್ಕೆ ನಿವೃತ್ತಿ ಹೇಳಿದರು. ನಂತರ ಅವರು ತಮ್ಮ ದುಡಿಮೆಗಾಗಿ ಹಗ್ಗಗಳನ್ನು ಹೆಣೆಯಲು ಪ್ರಾರಂಭಿಸಿದರು, ಆದರೆ ಅವರ ವಯೋವೃದ್ಧತನದ ಕೌಶಲಕ್ಕೆ ಹೆಚ್ಚಿನ ಪಗಾರ ಸಿಗುತ್ತಿರಲಿಲ್ಲ. ಹಾಗಾಗಿ ಅವರು ಗಾಂಧಿ ವೇಷ ಧರಿಸಲು ನಿರ್ಧರಿಸಿದ್ದರು.

ದಿನನಿತ್ಯದ ವಸ್ತುಗಳನ್ನೇ ಬಳಸಿಕೊಂಡು ತುರ್ತಾಗಿ ಅವರ ವೇಷಭೂಷಣವನ್ನು ಸಿದ್ದಪಡಿಸಿಕೊಳ್ಳುತ್ತಿದ್ದರು. ಅವರು 10 ರೂಪಾಯಿಯ ಪ್ಲಾಸ್ಟಿಕ್ ಬಾಕ್ಸ್‌ನಿಂದ ಪಾಂಡ್ಸ್ ಪೌಡರ್ ತೆಗೆದುಕೊಂಡು ತಮ್ಮನ್ನು ಮಹಾತ್ಮ'ರ ಹಾಗೆ ಹೊಳೆಯುವಂತೆ ಅಲಂಕಾರ ಮಾಡಿಕೊಂಡಿದ್ದರು. ರಸ್ತೆ ಬದಿಯ ಅಂಗಡಿಯಿಂದ ಖರೀದಿಸಿದ ಅಗ್ಗದ ಚಸ್ಮಾಗಳೇ ಅವರ ಗಾಂಧಿ ಕನ್ನಡಕಗಳಾಗಿದ್ದವು. ಸ್ಥಳೀಯ ಮಾರುಕಟ್ಟೆಯ 10 ರೂಪಾಯಿಯ ಬೆತ್ತವೇ ಅವರ ವಾಕಿಂಗ್ ಸ್ಟಿಕ್ ಆಗಿತ್ತು. ಅವರು ತಮ್ಮ ಮೇಕಪ್ ಮತ್ತು ವೇಷಭೂಷಣವನ್ನು ಪರೀಕ್ಷಿಸಲು ಎಲ್ಲೋ ಸಿಕ್ಕಿದ ಮೋಟಾರು ಬೈಕಿನ ಕನ್ನಡಿಯನ್ನು ಬಳಸುತ್ತಿದ್ದರು.

M. Anjanamma and family
PHOTO • Rahul M.

ಎಡಕ್ಕೆ: ನಾನು 2017ರಲ್ಲಿ ಭೇಟಿಯಾದಾಗ ಗಂಗಪ್ಪ ಟಾಲ್ಕಮ್ ಪೌಡರ್ ಹಚ್ಚಿಕೊಂಡು, 'ಗಾಂಧೀಜಿಯಾಗಲಿಕ್ಕೆ ಸಿದ್ದರಾಗುತ್ತಿದ್ದರು. ಬಲಕ್ಕೆ: ಅವರ ಪತ್ನಿ ಅಂಜನಮ್ಮ (ಎಡದಿಂದ ಮೂರನೇಯವರು) ಅವರ ಗ್ರಾಮದಲ್ಲಿ

2016ರ ಆಗಸ್ಟ್‌ ನಿಂದ ಪ್ರತಿದಿನ ಗಂಗಪ್ಪ ಈ ರೀತಿ ಗಾಂಧಿಯಾಗಿ ಪರಿವರ್ತನೆಗೊಂಡು ಅನಂತಪುರದ ಬೀದಿಗಳಲ್ಲಿ ನಿಲ್ಲುತ್ತಾರೆ ಅಥವಾ ಸುತ್ತಮುತ್ತಲಿನ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿನ ಸಂತೆ, ತಿಂಗಳ ಮಾರುಕಟ್ಟೆಗಳಿಗೆ ನಡೆದುಕೊಂಡು ಹೋಗಿ ಏನಿಲ್ಲವೆಂದರೂ ದಿನಕ್ಕೆ 150-600 ರೂ ಸಂಪಾದಿಸುತ್ತಾರೆ. “ಇತ್ತೀಚೆಗೆ ಒಂದು ಪರ್ಶ ಒಂದರಲ್ಲಿ (ಹಳ್ಳಿ ಜಾತ್ರೆ) ಒಂದು ದಿನದಲ್ಲಿ ನಾನು ಸುಮಾರು 1,000 ರೂಪಾಯಿಗಳನ್ನು ಗಳಿಸಿದೆ” ಎಂದು ಅವರು ನನಗೆ ಹೆಮ್ಮೆಯಿಂದ ಹೇಳಿದ್ದರು.

ಗಾಂಧೀಜಿಯಂತಹ ದುರ್ಬಲ ವ್ಯಕ್ತಿ ಸಾಮ್ರಾಜ್ಯವನ್ನು ಅಲುಗಾಡಿಸಬಹುದು ಮತ್ತು ಅದನ್ನು ಉರುಳಿಸಬಹುದು ಎನ್ನುವಂತಹ ಸಂಗತಿಯಿಂದ ಬಾಲ್ಯದಲ್ಲಿಯೇ ಗಂಗಪ್ಪನವರು ಸ್ಫೂರ್ತಿ ಪಡೆದಿದ್ದರು. ಗಾಂಧಿಯಾಗಲು ಪ್ರಯಾಣ ಮತ್ತು ತಾಳ್ಮೆ ಅತ್ಯಗತ್ಯ ಎಂದು ಅವರು ನಂಬಿದ್ದರು.ಮತ್ತು ಚಲನೆಯಲ್ಲಿರುವಾಗ ಮತ್ತು ನಿರಂತರವಾಗಿ ಹೊಸ ಜನರನ್ನು ಭೇಟಿ ಮಾಡುವ ಮೂಲಕ, ಗಂಗಪ್ಪನವರು ತಮ್ಮ ಜೀವನದುದ್ದಕ್ಕೂ ದಲಿತ (ಮಾದಿಗ) ಜಾತಿಯ ಹಿನ್ನಲೆಯಿಂದಾಗುವ ಕಹಿ ಅನುಭವದಿಂದ ಪಾರಾಗಲು ಪ್ರಯತ್ನಿಸುತ್ತಿದ್ದರು.

ನಾನು ಗಂಗಪ್ಪನವರನ್ನು ಮೊದಲು ಭೇಟಿಯಾದಾಗ, ಅವರು ತಮ್ಮ ಜಾತಿಯ ಬಗ್ಗೆ ಬರೆಯಬೇಡಿ ಎಂದು ವಿನಂತಿಸಿಕೊಂಡರು, ಏಕೆಂದರೆ ಅವರು ಅನಂತಪುರದ ದೇವಸ್ಥಾನದಲ್ಲಿ ರಾತ್ರಿ ಮಲಗಿದ್ದರು, ಅಲ್ಲಿ ಅವರು ದಲಿತ ಸಮುದಾಯದವರು ಎಂದು ಯಾರಿಗೂ ಹೇಳಿರಲಿಲ್ಲ. ಗಾಂಧಿಯಂತೆ ವೇಷ ಧರಿಸಿದಾಗಲೂ, ಅವರು ಜನಿವಾರ ಮತ್ತು ಕುಂಕುಮದಂತಹ ಧಾರ್ಮಿಕ ಸಂಕೇತಗಳನ್ನು ಬಳಸಿ 'ಪುರೋಹಿತರಂತೆ ಕಾಣಲು ಪ್ರಯತ್ನಿಸಿದರು.

ಇಂತಹ ಸೋಗಿನ ನಡುವೆಯೂ ಕೂಡ ಗಂಗಪ್ಪನವರ ಜಾತಿ ಮತ್ತು ಬಡತನ ಎಲ್ಲೆಡೆ ಅವರನ್ನು ಹಿಂಬಾಲಿಸಿತು. ನಾನು 2017 ಲ್ಲಿ ಅವರಿಂದ ದೂರವಾಗಿರುವ ಪತ್ನಿ ಎಂ.ಆಂಜನಮ್ಮ ಅವರನ್ನು ಭೇಟಿ ಮಾಡಿ ಅವರ ಕುಟುಂಬದ ಫೋಟೋವನ್ನು ತೆಗೆಸಿಕೊಳ್ಳುತ್ತಿದ್ದಾಗ ಅವರ ಗ್ರಾಮದ ಮನೆಯೊಂದರಲ್ಲಿ ಆಡುತ್ತಿದ್ದ ಮಕ್ಕಳಲ್ಲೊಂದು ಮಗು ದಲಿತ ಸಮೂಹದ ಫೋಟೋವೊಂದರಲ್ಲಿ ಕಾಣಿಸಿಕೊಳ್ಳಲು ಇಚ್ಚಿಸಲಿಲ್ಲ.

ಕೃಷ್ಣಯ್ಯನವರು ಭಾನುವಾರ ನನಗೆ ಕರೆ ಮಾಡಿದಾಗ, ನಾನು ನನ್ನ ವರದಿಯ ಟಿಪ್ಪಣಿಗಳಿಂದ ಕೆಲವು ವಿವರಗಳನ್ನು ನೀಡಿದ್ದೇನೆ ಮತ್ತು ಗಂಗಪ್ಪನ ಕುಟುಂಬದ ಫೋಟೋವನ್ನು ಅವರಿಗೆ ಕಳುಹಿಸಿದೆ. ಆಂಜನಮ್ಮ ಅವರ ನಿಖರವಾದ ವಿಳಾಸವನ್ನು ನೀಡಲು ನನಗೆ ಸಾಧ್ಯವಾಗದಿದ್ದಾಗ, ಕೃಷ್ಣಯ್ಯನವರು ಗಂಗಪ್ಪನ ಹಳ್ಳಿಯ ಮನೆಯನ್ನು ಅವರ ಜಾತಿ ಮೂಲದಿಂದ ಪತ್ತೆ ಮಾಡಲು ಸೂಚಿಸಿದರು (ಗ್ರಾಮಗಳಲ್ಲಿರುವ ಜಾತಿ ಆಧಾರಿತ ಸ್ಥಳಗಳನ್ನು ಉಲ್ಲೇಖಿಸಿ): “ನಾವು ಅವರ ಜಾತಿಯಿಂದ ಗೋರಂಟ್ಲಾದಲ್ಲಿ ಅವರ ಮನೆಯನ್ನು ಹುಡುಕುವ ಪ್ರಯತ್ನ ಮಾಡುತ್ತೇವೆ. ಆದರೆ,ಅವರು ಎಂದಾದರೂ ನಿಮಗೆ ಯಾವ ಜಾತಿಯವರೆಂದು ಹೇಳಿದ್ದಾರೆಯೇ?” ಎಂದು ಕೇಳಿದರು.

ಅನಂತಪುರದಿಂದ 100 ಕಿಲೋಮೀಟರ್‌ ದೂರದಲ್ಲಿರುವ ಗೋರಂಟ್ಲಾ ಎಂಬಲ್ಲಿನ ಸರ್ಕಲ್‌ ಇನ್ಸ್‌ಪೆಕ್ಟರ್ ಗೆ ಪರಿಚಯವಿರುವ ಕೃಷ್ಣಯ್ಯನವರ ಸಂಬಂಧಿಯೊಬ್ಬರಿದ್ದಾರೆ, ಅಲ್ಲಿ ಅಂಜನಮ್ಮ ತಮ್ಮ ಕಿರಿಯ ಮಗಳೊಂದಿಗೆ ವಾಸಿಸುತ್ತಿದ್ದಾರೆ.ಅವರ ಹಿರಿಯ ಮಗಳು ಮತ್ತು ಇನ್ನೊಂದು ಮಗು ದಶಕದ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದರು. ಗೋರಂಟ್ಲಾದಲ್ಲಿರುವ ಕಾನ್‌ಸ್ಟೆಬಲ್‌ ಒಬ್ಬರು ಆಂಜನಮ್ಮನವರಿಗೆ ಪತಿಯ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಡಿಸೆಂಬರ್ 10 ರ ಸೋಮವಾರ ಮಧ್ಯಾಹ್ನ ಗಂಗಪ್ಪನ ಶವವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಕೊನೆಗೂ ಈ ಅಶಕ್ತ ಮುದುಕನಿಗೆ ಡಿಕ್ಕಿ ಹೊಡೆದ ಕಾರನ್ನು ಯಾರಿಗೂ ಪತ್ತೆ  ಮಾಡಲು ಸಾಧ್ಯವಾಗಲಿಲ್ಲ.

ಅನುವಾದ: ಎನ್.ಮಂಜುನಾಥ್

Rahul M.

ராகுல் M. ஆந்திரப் பிரதேசம் அனந்தபூரிலிருந்து இயங்கும் சுதந்திர ஊடகவியலாளர்.

Other stories by Rahul M.
Translator : N. Manjunath