ಕೃಷಿ ಕೂಲಿಯಾಗಿ 70 ವರ್ಷಗಳವರೆಗೆ ದುಡಿದ ನಂತರ, ಈಗ 83 ರ ಆಸುಪಾಸಿನಲ್ಲಿರುವ ಗಂಗಪ್ಪನವರು ಮಹಾತ್ಮ ಗಾಂಧಿ ಅವತಾರದಲ್ಲಿ ತಮ್ಮನ್ನು ಮರುಕಂಡುಕೊಂಡಿದ್ದಾರೆ. ಆಗಸ್ಟ್ 2016 ರಿಂದ ಅವರು ಪಶ್ಚಿಮ ಆಂಧ್ರಪ್ರದೇಶದ ಅನಂತಪುರ ಪಟ್ಟಣದಾದ್ಯಂತ ಗಾಂಧಿಯಂತೆ ವೇಷಭೂಷಣವನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅವರು  ಕಾಣಿಸಿಕೊಳ್ಳುತ್ತಾರೆ. ಅವರಿಗೆ ಬರುವ ಭಿಕ್ಷೆಯು ಕೃಷಿ ಕೂಲಿಯಿಂದ ಗಳಿಸಿದ ಆದಾಯಕ್ಕಿಂತ ಉತ್ತಮವಾಗಿರುತ್ತದೆ.

"ನಾನು ನಿಮ್ಮ ವಯಸ್ಸಿಗೆ ಬಂದರೆ, ನಾನು ಕೂಡ ನಿಮ್ಮಂತೆಯೇ ಡ್ರೆಸ್ ಮಾಡುತ್ತೇನೆ, ಸ್ವಾಮಿ" ಎಂದು ಗಂಗಪ್ಪನವರು ಬಾಲ್ಯದಲ್ಲಿ ಗಾಂಧೀಜಿ ಅನಂತಪುರಕ್ಕೆ ಭೇಟಿಯಾದಾಗ ಅವರನ್ನು ಭೇಟಿಯಾದಾಗ ಹೇಳಿದ್ದರು. "ಆ ಸಮಯದಲ್ಲಿ ಪೇರೂರು ಟ್ಯಾಂಕ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ನನ್ನ ತಂದೆ-ತಾಯಿ ಜೊತೆ ಇದ್ದೆ." ಗಂಗಪ್ಪನವರು ಹುಟ್ಟಿದ ಚೆನ್ನಂಪಲ್ಲಿ ಪೇರೂರಿನಿಂದ ಹೆಚ್ಚು ದೂರವಿಲ್ಲ. ಗಾಂಧೀಜಿಗೆ ತಾವು ಅಂದುಕೊಂಡಿದ್ದನ್ನು ಸಾಧಿಸುವ ಸಾಮರ್ಥ್ಯ, ಪರಾಕ್ರಮಿಗಳನ್ನು ಆಜ್ಞಾಪಿಸುವ ಅವರ ಸಾಮರ್ಥ್ಯಗಳೆಲ್ಲವೂ ಕೂಡ ಆಗ ತರುಣರಾಗಿದ್ದ ಗಂಗಪ್ಪನವರಿಗೆ ಮೆಚ್ಚುಗೆಯಾಗಿತ್ತು.

ಮಹಾತ್ಮಾ ಗಾಂಧಿಯವರೊಂದಿಗಿನ ಭೇಟಿಯ ಬಗ್ಗೆ ಗಂಗಪ್ಪನವರ ಹೇಳಿಕೆಯನ್ನು ಪರಿಶೀಲಿಸುವುದು ಅಥವಾ ದಿನಾಂಕವನ್ನು ಒದಗಿಸುವುದು ಕಷ್ಟಕರವಾಗಿದ್ದರೂ ಸಹ ಗಾಂಧಿ ಅವರ ಸ್ಮರಣೆಯು ಅವರ ಜೀವನಕ್ಕೆ ಪ್ರೇರಕವಾಗಿದೆ. ಗಂಗಪ್ಪನವರಿಗೆ ಪ್ರವಾಸವೆಂದರೆ ಅಚ್ಚುಮೆಚ್ಚು - ಗಾಂಧೀಜಿಯವರಂತಾಗಲು ಪ್ರವಾಸ ಮತ್ತು ತಾಳ್ಮೆ ಅತ್ಯಗತ್ಯ ಎಂದು ಅವರು ನಂಬಿದ್ದಾರೆ.

ಗಂಗಪ್ಪನವರು (ಈ ಹೆಸರಿನಿಂದ ಮಾತ್ರ ಕರೆದುಕೊಳ್ಳುತ್ತಾರೆ) ಈಗ ತಮ್ಮ ಹೆಸರು ಈಗ ಗಂಗುಲಪ್ಪ ಎಂದು ಹೇಳುತ್ತಾರೆ, ಏಕೆಂದರೆ ಜನರು ಹಾಗೆಯೇ ಅವರನ್ನು ತಪ್ಪಾಗಿ ಕರೆಯುತ್ತಿದ್ದಾರೆ. ತಮ್ಮ ಗಾಂಧಿಯ ವೇಷಭೂಷಣ ಎದ್ದುಕಾಣಲು ಅವರು ತಮ್ಮ ಎದೆಯ ಮೇಲೆ ಜನಿವಾರವನ್ನು ಧರಿಸುತ್ತಾರೆ. ಅವರು ತಮ್ಮ ಹಣೆಗೆ ಮತ್ತು ಅವರ ಪಾದಗಳಿಗೆ ಕುಂಕುಮವನ್ನು ಹಚ್ಚುತ್ತಾರೆ ಮತ್ತು ಕೆಲವೊಮ್ಮೆ ಗಾಂಧಿ ವೇಷಭೂಷಣದಲ್ಲಿದ್ದಾಗ ಜನರನ್ನು ತಮ್ಮ ಕೈಯಿಂದ ಆಶೀರ್ವದಿಸುವ ಮೂಲಕ  ಅವರು 'ಪುರೋಹಿತರಂತೆ ವರ್ತಿಸುತ್ತಾರೆ.

PHOTO • Rahul M.

ಫೋಟೋ: ಗಂಗಪ್ಪನವರಿಂದ ದೂರವಾಗಿರುವ ಪತ್ನಿ ಮಿದ್ದಿ ಅಂಜನಮ್ಮ(ಎಡದಿಂದ ಮೂರನೆಯವರು) ತಮ್ಮ ಕುಟುಂಬದ ಸದಸ್ಯರೊಂದಿಗೆ

ಅವರ ಕಲ್ಪನೆಯ ಜಾತಿ ಅಸ್ಮಿತೆ ಅವರಿಗೆ ಸ್ಥಳೀಯ ದೇವಸ್ಥಾನದಲ್ಲಿ ಬಾಗಿಲನ್ನು ತೆರೆದಿದೆ. ಹಗಲಿನಲ್ಲಿ ದೇವಾಲಯದ ಆವರಣದಲ್ಲಿರುವ ಕಲ್ಲಿನ ಬೆಂಚಿನಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ನೀಡಲಾಗುತ್ತದೆ. ಅವರು ದೇವಾಲಯದ ನಲ್ಲಿಗಳಲ್ಲಿ ಸ್ನಾನ ಮಾಡಿ ತಮ್ಮ ಮುಖದ ಮೇಲಿನ ಮೇಕಪ್ ಅನ್ನು ತೊಳೆಯುತ್ತಾರೆ.

ಗಂಗಪ್ಪನವರ ಪತ್ನಿ ಮಿದ್ದಿ ಅಂಜನಮ್ಮ ಮತ್ತು ಅವರ ಕುಟುಂಬದೊಂದಿಗಿನ ಸಂಬಂಧವು ದಶಕದಿಂದ ಒತ್ತಡದಲ್ಲಿದೆ. ಆಗ ಅವರ ಹಿರಿಯ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು. “ನಾನು ಕೊಲ್ಲಪಲ್ಲಿಗೆ ಕಾಡಿನಲ್ಲಿ ಗುಂಡಿ ತೋಡಲು ಹೋಗಿದ್ದೆ.” ನಾನು ಮನೆಗೆ ಹಿಂದಿರುಗಿದಾಗ ನನ್ನ ಮಗಳು ಸಾವನ್ನಪ್ಪಿದ್ದಾಳೆ,”ಎಂದು ಅವರು ಹೇಳುತ್ತಾರೆ, ಅವರು ತಮ್ಮ ಮಗಳನ್ನು ನೆನಪಿಸಿಕೊಂಡಾಗ ಕಣ್ಣೀರಿಡುತ್ತಾರೆ. “ನನ್ನ ಮಗಳು ಯಾಕ್ ಸತ್ಲು ಅಂತ ನಂಗ್ ಇನ್ನೂ ಗೊತ್ತಿಲ್ಲ. ಮತ್ತ ಅವಳು ಯಾಕ್ ಸತ್ಲು ಅಂತ ಯಾರೂ ಹೇಳಂಗಿಲ್ಲ. ಇಂತಾದ್ರಾಗ ನಾನು ಮನಿಗೆ ಹೆಂಗ್ ಹೊಳ್ಳಿ ಹೋಗ್ಲಿ?" ಎಂದು ಅವರು ದುಃಖತಪ್ತರಾಗಿ ಕೇಳುತ್ತಾರೆ.

ಆಂಜನಮ್ಮ ಎರಡು ವರ್ಷಗಳಿಂದ ಗಂಗಪ್ಪನವರೊಂದಿಗೆ ಮಾತನಾಡದಿದ್ದರೂ ಮತ್ತು ಅವರ ಅನಿರೀಕ್ಷಿತ ಮಾರ್ಗಗಳನ್ನು ದ್ವೇಷಿಸುತ್ತಿದ್ದರೂ, ಅವಳು ಅವರನ್ನು ತುಂಬಾ ನೆನಪು ಮಾಡಿಕೊಳ್ಳುತ್ತಾರೆ ಮತ್ತು ಈಗ ಅವರನ್ನು ಮರಳಿ ಮನೆಗೆ ಬರಲು ಬಯಸುತ್ತಾರೆ. "ದಯವಿಟ್ಟು ಅವರಿಗೆ ವಾಪಸ್ ಹೋಗಿ ಅಂತಾ ಹೇಳಿ, ನನ್ನ ಕಡೆ ಮೊಬೈಲ್ ಪೋನ್ ಆಗಲಿ ಅಥವಾ ತಿಂಗಳ ಪೂರ್ತಿಗೆ ಕಾಫಿ ಪೌಡರ್ ಖರೀದಿ ಮಾಡ್ಲಿಕ್ಕೂ ದುಡ್ಡು ಇಲ್ಲಾ. ಮಕ್ಳು (ಅವರ ಕಿರಿಯ ಮಗಳ ಇಬ್ಬರು ಗಂಡು ಮಕ್ಕಳಿಗೆ) ಚಿಲ್ಲರೆ ಕೇಳಿದ್ರ ಕೊಡಲಿಕ್ಕೂ ದುಡ್ಡ ಇಲ್ಲಾ. ಅಂಜನಮ್ಮ ಅವರು ತಮ್ಮ ಕಿರಿಯ ಮಗಳೊಂದಿಗೆ ನಾನು ಭೇಟಿಯಾದ ಅನಂತಪುರದಿಂದ 100 ಕಿಲೋಮೀಟರ್ ದೂರದಲ್ಲಿರುವ ಗೋರಂಟ್ಲಾ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.

PHOTO • Rahul M.

ಫೋಟೋ: ಎಡಕ್ಕೆ: ಗಂಗಪ್ಪ ಹಣ ಸಂಪಾದಿಸಲು ವಿವಿಧ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಸಂತೆ ಮತ್ತು ಮಾರುಕಟ್ಟೆಗಳಿಗೆ ಹೋಗುತ್ತಾರೆ. ಬಲಕ್ಕೆ: ಅವರು ತಮ್ಮ ಮೇಕಪ್ ಮತ್ತು ವೇಷಭೂಷಣವನ್ನು ಪರೀಕ್ಷಿಸಲು ಬೈಕ್‌ನ ಹಿಂಬದಿಯ ಕನ್ನಡಿಯನ್ನು ಬಳಸುತ್ತಾರೆ

ಗಂಗಪ್ಪನವರು ಮನೆಯಿಂದ ಹೊರಬಂದ ನಂತರ ಗದ್ದೆಯಲ್ಲಿ ಕೂಲಿ ಕೆಲಸ ಮುಂದುವರೆಸಿದ್ದರು. ಅವರು ಹೆಚ್ಚು ಮದ್ಯಪಾನ ಸೇವಿಸಲು ಪ್ರಾರಂಭಿಸಿದರು. ಅವರು 2016 ರಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರು. "ಮಾಲಾ ಪುನ್ನಮಿ [ವಾರ್ಷಿಕ ಹಬ್ಬ] ನಂತರ ನಾನು ಕೃಷಿ ಕೂಲಿ ಮಾಡುವುದನ್ನು ನಿಲ್ಲಿಸಿದೆ" ಎಂದು ಗಂಗಪ್ಪನವರು ನೆನಪಿಸಿಕೊಳ್ಳುತ್ತಾರೆ. "ನಾನು ಕೆಲವು ದಿನಗಳವರೆಗೆ ಹಗ್ಗಗಳನ್ನು ಹೆಣೆದಿದ್ದೇನೆ, ಆದರೆ ಅದರಿಂದ ಹೆಚ್ಚು ಪಗಾರ ಬರಲಿಲ್ಲ ." ಎಂದು ಅವರು ಹೇಳುತ್ತಾರೆ.

ಆಗ ಅವರಿಗೆ ಗಾಂಧೀಜಿಯ ನೆನಪು ಬಂದಿದ್ದರಿಂದಾಗಿ ಅವರು ತಮ್ಮನ್ನು ತಾವು ಮರುಪರಿವರ್ತಿಸಿಕೊಳ್ಳಲು ನಿರ್ಧರಿಸಿದರು.

ಗಂಗಪ್ಪನವರು ತಮ್ಮ ದೈನಂದಿನ ವಸ್ತುಗಳಿಂದಲೇ ಗಾಂಧೀಜಿ ವೇಷಭೂಷಣವನ್ನು ಸಿದ್ಧಪಡಿಸುತ್ತಾರೆ.10 ರೂಪಾಯಿಯ ಪ್ಲಾಸ್ಟಿಕ್ ಬಾಕ್ಸ್‌ನಿಂದ ಪಾಂಡ್ಸ್ ಪೌಡರ್ ಬಳಸಿ ತಮ್ಮನ್ನು ಮಹಾತ್ಮನ ಹಾಗೆ ಹೊಳೆಯುವಂತೆ" ಮಾಡುತ್ತಾರೆ. ಇನ್ನೂ ರಸ್ತೆ ಬದಿಯ ಅಂಗಡಿಯಿಂದ ಖರೀದಿಸಿದ ಅಗ್ಗದ ಚಸ್ಮಾ ಅವರ ಗಾಂಧೀಜಿಯ ಕನ್ನಡಕವಾಗಿದೆ. ಸ್ಥಳೀಯ ಮಾರುಕಟ್ಟೆಯಿಂದ 10 ರೂಪಾಯಿಯ ಕೊಟ್ಟು ಖರೀದಿಸಿದ ಬೆತ್ತವೇ ಅವರ ವಾಕಿಂಗ್ ಸ್ಟಿಕ್ ಆಗಿದೆ. ಅವರು ತಮ್ಮ ಮೇಕಪ್ ಮತ್ತು ವೇಷಭೂಷಣವನ್ನು ಪರೀಕ್ಷಿಸಲು ಎಲ್ಲೋ ಸಿಕ್ಕಿರುವ ಮೋಟಾರು ಬೈಕಿನ ಹಿಂಬದಿಯ ಕನ್ನಡಿಯನ್ನು ಬಳಸುತ್ತಾರೆ.

ಗಂಗಪ್ಪ ಗದ್ದೆಯಲ್ಲಿ ಕೆಲಸ ಮಾಡುವಾಗ ಹೆಚ್ಚಾಗಿ ಚೆಡ್ಡಿ ಧರಿಸುತ್ತಿದ್ದರು. "ಈಗ ನಾನು ಧೋತಿಯನ್ನು ಧರಿಸುತ್ತೇನೆ ಮತ್ತು  3 ಅಥವಾ 4  ದಿನಗಳಿಗೊಮ್ಮೆ  ನನ್ನ ತಲೆಯನ್ನು ಬೋಳಿಸಿಕೊಳ್ಳುತ್ತೇನೆ" ಎಂದು ಅವರು ಹೇಳುತ್ತಾರೆ. ಅವರು ಧೂಮಪಾನ ಮತ್ತು ಮದ್ಯಪಾನ ಮಾಡಿದರು ಸಹ, ಅವರು ಗಾಂಧೀಜಿ ವೇಷ ಧರಿಸಿದಾಗ ತಾವು ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅವರು ಸುತ್ತಮುತ್ತಲಿನ ಹಳ್ಳಿಗಳು ಮತ್ತು ಪಟ್ಟಣಗಳ ಜಾತ್ರೆಗಳು ಮತ್ತು  ತಿಂಗಳ ಮಾರುಕಟ್ಟೆಗಳಿಗೆ ಪ್ರಯಾಣಿಸುತ್ತಾರೆ, ಆಗ ಅವರಿಗೆ ದಿನಕ್ಕೆ ಏನಿಲ್ಲವೆಂದರರೂ 150-600 ರೂ ಸಂಪಾಧಿಸುತ್ತಾರೆ."ಇತ್ತೀಚೆಗೆ ಒಂದು ಪರ್ಶದಲ್ಲಿ (ಗ್ರಾಮದ ಜಾತ್ರೆ)  ಒಂದೇ ದಿನದಲ್ಲಿ ನಾನು ಸುಮಾರು 1,000 ರೂಪಾಯಿಗಳನ್ನು ಗಳಿಸಿದೆ" ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

a man and a woman
PHOTO • Rahul M.

ಫೋಟೋ: ಎಡಕ್ಕೆ: ಗಂಗಪ್ಪನವರ ರೂಪಾಂತರವು ಅವರಿಗೆ ಬಾಗಿಲು ತೆರೆಯಿತು. ಬಲಕ್ಕೆ: ಗಂಗಪ್ಪನವರ ಅರೆ ಪ್ರಯಾಣದ ಒಡನಾಡಿಯಾಗಿದ್ದ ಕುರುಬ ಪೂಜಮ್ಮ, ನಂತರ ತಮ್ಮದೇ ದಾರಿ ಹಿಡಿದರು

"ಇಂದು ಕದಿರಿ ಪುನ್ನಮಿಯಾದ್ದರಿಂದ ನಾನು ಆರು ಗಂಟೆಗಳ ಕಾಲ ಸತತವಾಗಿ ನಿಂತಿದ್ದೇನೆ.ಈ ಹಬ್ಬವನ್ನು ಅನಂತಪುರ ಜಿಲ್ಲೆಯ ಕದಿರಿ ಭಾಗದ ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ಹುಣ್ಣಿಮೆಯ ಪೂರ್ಣಚಂದ್ರ ಗೋಚರಿಸಿದಾಗ ಆಚರಿಸಲಾಗುತ್ತದೆ.”ಎಂದು ಅವರು ಹೇಳುತ್ತಾರೆ.

ಕೆಲವು ತಿಂಗಳ ಹಿಂದೆ, ಹತ್ತಿರದ ಪಟ್ಟಣವಾದ ಪುಟ್ಟಪರ್ತಿಗೆ ಪ್ರಯಾಣಿಸುತ್ತಿದ್ದಾಗ, ಗಂಗಪ್ಪನವರು 70 ರ ಹರೆಯದ ಕುರುಬ ಪೂಜಮ್ಮ ಎಂಬ ವಿಧವೆಯನ್ನು ಭೇಟಿಯಾದರು, ಅವರು ಪುಟ್ಟಪರ್ತಿ ಮತ್ತು ಪೆನುಕೊಂಡ ನಡುವಿನ 35 ಕಿಲೋಮೀಟರ್ ಮಾರ್ಗದಲ್ಲಿ ಭಿಕ್ಷೆ ಬೇಡುತ್ತಿದ್ದರು. "ಒಂದು ಸಂಜೆ, ನಾನು ಮನೆಗೆ ಹೋಗುತ್ತಿದ್ದಾಗ, ಅವರು ಒಬ್ಬಂಟಿಯಾಗಿ ಕುಳಿತಿರುವುದನ್ನು ನಾನು ನೋಡಿದೆ" ಎಂದು ಅವಳು ಹೇಳುತ್ತಾಳೆ. "ಅವರಿಗೆ ನೀವು ಏನ್ ಕೆಲಸ ಮಾಡ್ತೀರಿ ಅಂತ ಕೇಳ್ದೆ, ಅದಕ್ಕೆ ಅವ್ರು ಎಲ್ಲ ಬಿಡಿಸಿ ಹೇಳಿದ ಮ್ಯಾಲೆ ತಮ್ಮ ಜೊತಿ ಬರಾಕ್ ನಂಗ್ ಕೇಳಿದ್ರು, ಅದಕ್ಕ ನಾನು ಒಪ್ಪಿದೆ. ಅದಕ್ಕೆ ಅವರು 'ದಯವಿಟ್ಟು ಬನ್ನಿ. ನಾವು ಎಲ್ಲಿಗೆ ಹೋದರೂ, ನಾನು ನಿಮಗೆ ಸುತ್ತಮುತ್ತಲಿನ ಪ್ರದೇಶಗಳನ್ನು ತೋರಿಸ್ತಿನಿ" ಎಂದರು. ಹಾಗಾಗಿ ಪೂಜಮ್ಮ ಗಂಗಪ್ಪನವರ ಜೊತೆಯಲ್ಲಿ ಗಾಂಧೀ ವೇಷಭೂಷಣಕ್ಕೆ ಸಹಾಯ ಮಾಡುತ್ತಾ ಅವರ ಬೆನ್ನಿಗೆ ಪೌಡರ್ ಹಚ್ಚುವುದು, ಮತ್ತು ಅವರ ಬಟ್ಟೆ ಒಗೆಯುವ ಕೆಲಸವನ್ನು ಮಾಡುತ್ತಿದ್ದರು.

ಗಂಗಪ್ಪನವರೊಂದಿಗಿನ ಪೂಜಮ್ಮನ ಸಹ ಜೀವನ ಸುಲಭವಾಗಿರಲಿಲ್ಲ. ಅವರೇ ಹೇಳುವಂತೆ  “ಒಂದು ರಾತ್ರಿ, ಅವರು ಎಲ್ಲಿಗೋ ಹೋದರು ಬಾಳ್ ಹೊತ್ತ ಆದ್ರೂ ಹೊಳ್ಳಿ ಬರಲಿಲ್ಲ. ನಾನೊಬ್ಬಳೆ ಇದ್ದೆ. ನನಗೆ ನಿಜವಾಗಿಯೂ ಭಯವಾಯಿತು. ಅಲ್ಲೆಲ್ಲಾ ಸುತ್ತಮುತ್ತಲೂ ಜನರಿದ್ದರು ಮತ್ತು ನಾನು ಅಲ್ಲೇ ತಗಡಿನ ನೆರಳಿನಲ್ಲಿ ಕುಳಿತಿದ್ದೆ. ಏನ್ ಮಾಡಬೇಕು ಎನ್ನುವುದೇ ನನಗೆ ಚಿಂತೆಯಾಗಿತ್ತು, ಯಾರೂ ಇಲ್ಲದಿದ್ದರಿಂದ ಒಂದು ಕ್ಷಣ ಅಳುವ ಹಾಗೆ ಆಗಿತ್ತು, ಕೊನೆಗೆ ಅವರು ನನಗೆ ರಾತ್ರಿ ಊಟಾ ತಂಗೊಂಡ್ ಬಂದ್ರು" ಎಂದು ಹೇಳಿದರು.

PHOTO • Rahul M.

ಫೋಟೋ: ಹಳ್ಳಿ ಹಬ್ಬಕ್ಕೆ ಸಿದ್ಧತೆ: ಪೂಜಮ್ಮ ಗಂಗಪ್ಪನಿಗೆ ಗಾಂಧೀ ವೇಷಭೂಷಣ ತೊಡಿಸಿ, ಬೆನ್ನಿಗೆ ಪೌಡರ್ ಹಚ್ಚಲು ಸಹಾಯ ಮಾಡುತ್ತಾರೆ

ಗಂಗಪ್ಪ ಮತ್ತು ಪೂಜಮ್ಮ ಅವರು ಅನಂತಪುರ ಪಟ್ಟಣದ ಹೊರವಲಯದಲ್ಲಿ ಹೆದ್ದಾರಿಗೆ ಸಮೀಪದಲ್ಲಿ ವಾಸಿಸುತ್ತಿದ್ದಾರೆ. ಅವರು ಗಾಂಧೀಜಿಯ ಆರಾಧಕರಾಗಿರುವ ಮಾಲೀಕನ ರೆಸ್ಟೋರೆಂಟ್‌ ಹೊರಗೆ ಮಲಗುತ್ತಾರೆ. ಗಂಗಪ್ಪನವರು ಸಾಮಾನ್ಯವಾಗಿ ತಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹೇಗೆ ಅವರು ಬೆಳಿಗ್ಗೆ  5 ಗಂಟೆಗೆ ಎದ್ದು ರಾತ್ರಿ 9 ಗಂಟೆಗೆ ಮಲಗುತ್ತಿದ್ದರೂ ಈಗಲೂ ಹಾಗೆ ಮಾಡುತ್ತಾರೆ.

ಹೋಟೆಲ್ ನ ಹೊರಗಡೆ ಮಲಗುವ ಗಂಗಪ್ಪನವರಿಗೆ ಅವರು ಕೆಲವೊಮ್ಮೆ ರಾತ್ರಿ ಊಟ ನೀಡುತ್ತಾರೆ. ಇನ್ನೂ ಅವರು ಬೆಳಗಿನ ತಿಂಡಿಗಾಗಿ ರಸ್ತೆ ಬದಿಯ ಅಂಗಡಿಗಳಿಂದ ಏನನ್ನಾದರೂ ಖರೀದಿಸುತ್ತಾರೆ ಮತ್ತು ಮಧ್ಯಾಹ್ನದ ಹೊತ್ತು ಊಟವನ್ನು ತ್ಯಜಿಸುತ್ತಾರೆ.ಗಂಗಪ್ಪನವರು ಪೂಜಮ್ಮನು ಸಹ ಊಟವನ್ನು ಸರಿಯಾಗಿ ಮಾಡುವಂತೆ ನೋಡಿಕೊಳ್ಳುತ್ತಾರೆ. ಮತ್ತು ಅವರಿಗೆ ತಮ್ಮ ಇಚ್ಚೆಯ ಊಟವನ್ನು ಮಾಡಬೇಕೆನ್ನಿಸಿದಾಗ ಅವರು ರಾಗಿ ಮುದ್ದೆ ಮತ್ತು ಚಿಕನ್ ನ್ನು ಖರೀದಿಸುತ್ತಾರೆ ಮತ್ತು ಪೂಜಮ್ಮ ಅವರು ರಸ್ತೆಯ ತಾತ್ಕಾಲಿಕ ಒಲೆಯ ಮೇಲೆ ಮುದ್ದೆ (ರಾಗಿ ಮತ್ತು ಅಕ್ಕಿ ಚೆಂಡುಗಳು, ರಾಯಲಸೀಮಾ ಪ್ರದೇಶದ ಪ್ರಮುಖ ಆಹಾರವಾಗಿದೆ) ಮತ್ತು ಚಿಕನ್ ಕರಿಯನ್ನು ಬೇಯಿಸುತ್ತಾರೆ.

ಅವರದ್ದು ಅದೊಂದು ಸರಳ ಜೀವನ ಪದ್ದತಿ ಮತ್ತು ಈಗ ಅದು ಹಿಂದೆಂದಿಗಿಂತಲೂ ಉತ್ತಮವಾಗಿದೆ.ಈಗ ಅವರು ಗಾಂಧಿಯಾಗಿರುವುದರಿಂದ ಇನ್ನು ಮುಂದೆ ಅವರಿಗೆ ಊಟ ಮತ್ತು ವಸತಿ ಬಗ್ಗೆ ಚಿಂತಿಸಬೇಕಾದ ಪ್ರಮೇಯ ಬರುವುದಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲರೂ ಗಾಂಧಿಯನ್ನು ಗೌರವಿಸುತ್ತಿಲ್ಲ ಎಂದು ಗಂಗಪ್ಪನವರು ಬೇಸರ ವ್ಯಕ್ತಪಡಿಸುತ್ತಾರೆ.'ಅದೇಗೆ ಅವರಿಗೆ ಗೌರವಿಸಲಿಕ್ಕೆ ಆಗಲ್ಲ? ಕೆಲವು ಚಿಕ್ಕ ಹುಡುಗರು ನನ್ನ ಬಳಿಗೆ ಬಂದು ಗಾಂಧಿಯಂತೆ ಡ್ರೆಸ್ ಮಾಡುವುದನ್ನು ನಿಲ್ಲಿಸುವಂತೆ ನನ್ನನ್ನು ಕೇಳುತ್ತಾರೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ, 'ಸರ್ಕಾರವು ಈಗ ಕರೆನ್ಸಿ ನೋಟುಗಳಿಂದ ಗಾಂಧಿಯನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದೆ.ಆದ್ರೆ ನೀವ್ಯಾಕೆ ಈಗ ಅವರಂತೆ ಧರಿಸಲು ಬಯಸುತ್ತೀರಿ? ಎಂದು ಅವರು ನನ್ನನ್ನು ಪ್ರಶ್ನಿಸುತ್ತಾರೆ" ಎನ್ನುತ್ತಾರೆ ಗಂಗಪ್ಪನವರು.

ಟಿಪ್ಪಣಿ: ಪೂಜಮ್ಮ ಕೆಲವು ದಿನಗಳ ಹಿಂದೆ ಗಂಗಪ್ಪನವರನ್ನು ಬಿಟ್ಟು ಮನೆಗೆ ಹೋದರು. "ಅವಳು ಯುಗಾದಿ ಹಬ್ಬಕ್ಕಂತ ಹ್ಯಾದ್ಲು , ಮತ್ತ ಅವಳು ಹೊಳ್ಳಿ ಬರಲೇ ಇಲ್ಲ, ನನಗ ಅನ್ಸುತ್ತೆ ಆಕೆ ಅಲ್ಲೇ ಭಿಕ್ಷೆ ಬೇಡ್ತಿರಬೇಕು ಅಂತ, ಆಕೆಗೆ ನಾನು  400 ರೂಪಾಯಿ ಕೊಟ್ಟಿದ್ದೆ, ಈಗ ನಾನು ಒಬ್ನ ಇರಬೇಕು ನೋಡ್ರಿ" ಎಂದು ಅವರು ಹೇಳುತ್ತಿದ್ದರು.

ಅನುವಾದ - ಎನ್. ಮಂಜುನಾಥ್

Rahul M.

ராகுல் M. ஆந்திரப் பிரதேசம் அனந்தபூரிலிருந்து இயங்கும் சுதந்திர ஊடகவியலாளர்.

Other stories by Rahul M.
Translator : N. Manjunath