ಕೊರೊನ ವೈರಸ್ ಕುರಿತ ತಮ್ಮ ಮೊದಲ ಭಾಷಣದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು; ಜನರು ತಟ್ಟೆ ಮುಂತಾದುವುಗಳಿಂದ ಗಂಟೆಯ ಶಬ್ದವನ್ನು ಹೊರಡಿಸಿ, ಕೆಟ್ಟ ಚೇತನಗಳನ್ನು ಹೆದರಿಸಿ ಓಡಿಸುವಂತೆ ಕರೆ ನೀಡಿದರು.

ತಮ್ಮ ಎರಡನೆ ಭಾಷಣದಲ್ಲಿ, ನಮ್ಮೆಲ್ಲರಲ್ಲೂ ಅವರು ಭಯವನ್ನು ಹುಟ್ಟಿಸಿದರು.

ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಬಡವರು, ಆಹಾರ ಮತ್ತಿತರ ಅವಶ್ಯಕ ವಸ್ತುಗಳನ್ನು ಮುಂದಿನ ದಿನಗಳಲ್ಲಿ ಪಡೆಯುವುದು ಹೇಗೆ ಎಂಬುದರ ಕುರಿತು ಅವರ ಭಾಷಣದಲ್ಲಿ ಒಂದು ಪದವನ್ನೂ ಉಚ್ಛರಿಸಲಿಲ್ಲ. ಹೀಗಾಗಿ ಎಲ್ಲೆಡೆ ಆತಂಕದ ವಾತಾವರಣ ದಿಢೀರನೆ ವ್ಯಾಪಿಸತೊಡಗಿತು. ಮಧ್ಯಮ ವರ್ಗದವರು ಅಂಗಡಿ ಮತ್ತು ಮಾರುಕಟ್ಟೆಗಳಲ್ಲಿ ಕಿಕ್ಕಿರಿದು ಸೇರತೊಡಗಿದರು – ಬಡವರಿಗೆ, ನಗರವನ್ನು ತೊರೆದು ತಮ್ಮ ಹಳ್ಳಿಗಳತ್ತ ಹೊರಟ ವಲಸಿಗರಿಗೆ, ಸಣ್ಣಪುಟ್ಟ ಮಾರಾಟಗಾರರಿಗೆ, ಮನೆಗೆಲಸದವರಿಗೆ, ಕೃಷಿ ಕಾರ್ಮಿಕರಿಗೆ, ರಬಿ ಫಸಲಿನ ಕಟಾವನ್ನು ಪೂರೈಸಲು ಸಾಧ್ಯವಾಗದ ರೈತರಿಗೆ, ಕಟಾವನ್ನೂ ಪೂರೈಸಿದ್ದಾಗ್ಯೂ, ಸಂಬಂಧಿತ ಇತರೆ ಕೆಲಸಗಳನ್ನು ಬಾಕಿಯುಳಿಸಿಕೊಂಡವರಿಗೆ, ನೂರಾರು, ಮಿಲಿಯಗಟ್ಟಲೆ ಭಾರತೀಯ ಅಂಚಿನ ಸಮುದಾಯಗಳಿಗೆ ಇದು ಸುಲಭ ಸಾಧ್ಯವಾಗಿರಲಿಲ್ಲ.

ಮಾರ್ಚ್ 26 ರಂದು ಹಣಕಾಸು ಸಚಿವರು ಪ್ರಕಟಿಸಿದ ಪ್ಯಾಕೇಜ್‍ನಲ್ಲಿ, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಈಗಾಗಲೇ ವಿತರಿಸಲ್ಪಟ್ಟಿರುವ 5 ಕೆ.ಜಿ ಧಾನ್ಯದ ಜೊತೆಗೆ ಪ್ರತಿಯೊಬ್ಬರಿಗೂ 3 ತಿಂಗಳವರೆಗೆ 5 ಕೆ.ಜಿ ಗೋಧಿ ಅಥವಾ ಅಕ್ಕಿಯನ್ನು ಉಚಿತವಾಗಿ ಹಂಚಲಾಗುತ್ತದೆಯೆಂದು ಪ್ರಕಟಿಸಲಾಯಿತು. ಆದರೆ, ಈ ಮೊದಲಿನ ಅಥವಾ ಪ್ರಸ್ತುತದ 5 ಕೆ.ಜಿ.ಗಳು ಉಚಿತವೇ ಅಥವ ಅದಕ್ಕೆ ಹಣವನ್ನು ಪಾವತಿಸಬೇಕೆ ಎಂಬುದು ಸ್ಪಷ್ಟವಿರಲಿಲ್ಲ. ಇದಕ್ಕೆ ಹಣವನ್ನು ಪಾವತಿಸಬೇಕೆಂದಾದರೆ ಇದು ಸಾಧ್ಯವಾಗದ ಮಾತು. ‘ಪ್ಯಾಕೇಜ್‍ನಲ್ಲಿನ’ ಹಲವಾರು ಅಂಶಗಳು ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ನಿಗದಿಸಲ್ಪಟ್ಟ ಮೊತ್ತವಾಗಿದೆ. 20 ರೂ.ಗಳ MGNREGA ಕೂಲಿಯಲ್ಲಿನ ಹೆಚ್ಚಳವು, ಬಾಕಿಯುಳಿದಿದ್ದ ಮೊತ್ತವೇ ಹೌದು. ಹೆಚ್ಚುವರಿ ದಿನಗಳ ಮಾತೇ ಇಲ್ಲವಲ್ಲ? ಒಂದೇ ಬಾರಿಗೆ ಅವರು ಕೆಲಸದಲ್ಲಿ ತೊಡಗಿದ್ದೇ ಆದರೆ, ಅವರು ಯಾವ ಪ್ರಕಾರದ ಕೆಲಸದಲ್ಲಿ ತೊಡಗತಕ್ಕದ್ದು? ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆಯೇ? ಕೆಲಸದ ಪರಿಮಾಣವು ನಿರೀಕ್ಷಿಸಬಹುದಾದ ಅನೇಕ ವಾರಗಳ ಅವಧಿಯನ್ನು ಜನರು ನಿಭಾಯಿಸುವುದಾದರೂ ಹೇಗೆ? ಅವರ ಆರೋಗ್ಯವು ಇದನ್ನು ಸಾಧ್ಯವಾಗಿಸುತ್ತದೆಯೇ? ಕೆಲಸವಿರಲಿ ಇಲ್ಲದಿರಲಿ, ಈ ಸಂಕಷ್ಟವು ಎಲ್ಲಿಯವರೆಗೆ ಮುಂದುವರಿಯುವುದೋ ಅಲ್ಲಿಯವರೆಗೂ ಪ್ರತಿಯೊಬ್ಬ ಕೆಲಸಗಾರ ಹಾಗೂ ರೈತನಿಗೂ ದಿನಂಪ್ರತಿ MGNREGA ಕೂಲಿಯನ್ನು ಪಾವತಿಸತಕ್ಕದ್ದು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್‍ ನಿಧಿ ಯೋಜನೆಯಲ್ಲಿ ಈಗಾಗಲೇ 2,000 ರೂ.ಗಳ ಸೌಲಭ್ಯವಿದ್ದು, ಅದಿನ್ನೂ ಬಾಕಿಯಿರುವ ಕಾರಣ, ಇದರಲ್ಲಿ ಹೊಸದೇನನ್ನೂ ಸೇರಿಸಲ್ಪಟ್ಟಿಲ್ಲ. ತ್ರಿಮಾಸದ (quarter) ಅಂತಿಮ ತಿಂಗಳಿನಲ್ಲಿ ಪಾವತಿಸುವುದಕ್ಕೆ ಬದಲಾಗಿ, ಅದನ್ನು ಮೊದಲ ತಿಂಗಳಿನಲ್ಲಿ ಮುಂಗಡವಾಗಿ ನೀಡಲಾಗುತ್ತಿದೆ. ಈ ಸಂಕಷ್ಟದ ಪರಿಸ್ಥಿತಿಯ ನಿಭಾವಣೆ ಹಾಗೂ ಲಾಕ್‍ಡೌನ್‍ ನಿಮಿತ್ತ ವ್ಯಯಿಸಲು ಇಚ್ಛಿಸಿರುವ 1.7 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್‍ನ ಹಣದ ವಿಂಗಡಣೆಯ ಯಾವುದೇ ವಿವರಣೆಯನ್ನು ಹಣಕಾಸು ಸಚಿವರು ಪ್ರಕಟಿಸಿರುವುದಿಲ್ಲ. ಇದರಲ್ಲಿನ ಹೊಸ ಅಂಶಗಳೇನು? ಈ ಮೊತ್ತದಲ್ಲಿನ ಹಳೆಯ ಬಾಬ್ತು ಎಷ್ಟಿದೆ ಅಥವ ಪ್ರಸ್ತುತ ಯೋಜನೆಗಳನ್ನು ಒಟ್ಟುಗೂಡಿಸಿ ಈ ಮೊತ್ತವನ್ನು ನಿರ್ಧರಿಸಲಾಗಿದೆಯೇ? ಅವು, ತುರ್ತುಪರಿಸ್ಥಿತಿಗಳ ನಿಭಾವಣೆ ಮಾಡಲಾರವು. ಪಿಂಚಣಿದಾರರು, ವಿಧವೆಯರು ಮತ್ತು ಅಂಗವಿಕಲರಿಗೆ ಎರಡು ಕಂತಿನಲ್ಲಿ 1,000 ರೂಗಳನ್ನು ಮೂರು ತಿಂಗಳಿನಲ್ಲಿ ಕೊಡಲಾಗುತ್ತದೆ ? 20 ಕೋಟಿ ಮಹಿಳೆಯರಿಗೆ ಜನ್‍ ಧನ್‍ ಯೋಜನೆಯಡಿ ಮೂರು ತಿಂಗಳವರೆಗೆ 500 ರೂ.ಗಳನ್ನು ಪಾವತಿಸಲಾಗುತ್ತದೆ ? ಇದು ಗುರುತಿನ ಚೀಟಿಗಿಂತಲೂ ಕಡೆಯಾದುದು. ಇದು ಭಂಡತನವೇ ಸರಿ.

ಸ್ವಸಹಾಯ ಗುಂಪುಗಳು ಪ್ರಸ್ತುತದಲ್ಲಿನ ಸಾಲದ ಹಣವನ್ನು ಪಡೆಯುವುದೇ ದುಸ್ವಪ್ನವೆನಿಸಿರುವಾಗ, ಸಾಲದ ಮಿತಿಯಲ್ಲಿನ ಹೆಚ್ಚಳವು ಪರಿಸ್ಥಿತಿಯನ್ನು ಹೇಗೆ ತಾನೇ ಮಾರ್ಪಾಡುಗೊಳಿಸೀತು? ತಮ್ಮ ಸ್ವಂತ ಹಳ್ಳಿಗಳಿಗೆ ವಾಪಸ್ಸು ತೆರಳುವ ಪ್ರಯತ್ನದಲ್ಲಿ ದೂರದಲ್ಲೆಲ್ಲೋ ಸಿಲುಕಿಕೊಂಡಿರುವ ಎಣಿಸಲಾರದಷ್ಟು ಸಂಖ್ಯೆಯ ವಲಸೆ ಕಾರ್ಮಿಕರಿಗೆ ಈ ‘ಪ್ಯಾಕೇಜ್‍ನಿಂದಾಗುವ’ ಸಹಾಯವಾದರೂ ಏನು? ವಲಸಿಗರಿಗೆ ಇದರಿಂದ ಸಹಾಯವಾಗುತ್ತದೆಂಬ ಸಮರ್ಥನೆಯು ಆಧಾರ ರಹಿತವಾದುದು. ಗಂಭೀರ ಸ್ವರೂಪದ ತುರ್ತುಪರಿಸ್ಥಿತಿ ನಿಭಾವಣಾ ಕ್ರಮಗಳನ್ನು ರೂಪಿಸುವಲ್ಲಿನ ವೈಫಲ್ಯವು ಅಪಾಯಕಾರಿಯಾಗಿದ್ದು, ಪ್ಯಾಕೇಜ್‍ಗಳನ್ನು ರೂಪಿಸುವವರ ನಿಲುವು ಗಾಬರಿ ಹುಟ್ಟಿಸುವಂತಿದೆ. ಈ ನೆಲದಲ್ಲಿ ಈಗ ಉದ್ಭವವಾಗುತ್ತಿರುವ ಪರಿಸ್ಥಿತಿಗಳ ಬಗ್ಗೆ ಅವರಿಗೆ ಯಾವುದೇ ಅಂದಾಜುಗಳಿಲ್ಲವೆಂಬುದು ಗೋಚರವಾಗುತ್ತಿದೆ.

PHOTO • Labani Jangi

ಈ ಲೇಖನದಲ್ಲಿನ ಎರಡೂ ಚಿತ್ರಗಳು; ದೆಹಲಿ ಹಾಗೂ ನೊಯ್ಡಾಗಳಿಂದ ಉತ್ತರ ಪ್ರದೇಶ ಹಾಗೂ ಇತರೆಡೆಗಳಲ್ಲಿನ ಹಳ್ಳಿಗಳಿಗೆ ತೆರಳುತ್ತಿರುವ ವಲಸೆ ಕಾರ್ಮಿಕರನ್ನು ಕುರಿತಂತೆ ಕಲಾವಿದೆಯೊಬ್ಬರ ಕುಂಚದಲ್ಲಿ ಮೂಡಿದ ಚಿತ್ರಣವಾಗಿದೆ. ಕಲಾವಿದೆ, ಲಬನಿ ಜಂಗಿಯವರು ಸ್ವ-ಶಿಕ್ಷಿತ (self-taught) ವರ್ಣಚಿತ್ರಕಾರರಾಗಿದ್ದು, ಕೊಲ್ಕತ್ತದ ಸೆಂಟರ್‍ ಫಾರ್‍ ಸ್ಟಡೀಸ್‍ ಇನ್‍ ಸೋಶಿಯಲ್ ಸೈನ್ಸಸ್‍ನಲ್ಲಿ ವಲಸೆ ಕಾರ್ಮಿಕರ ಬಗ್ಗೆ ಡಾಕ್ಟರೇಟ್‍ ಅಧ್ಯಯನದಲ್ಲಿ ತೊಡಗಿದ್ದಾರೆ

ಅಸಹಾಯಕ ಜನರಿಗೆ ನೆರವು ನೀಡುವ ನಿಟ್ಟಿನ ಯಾವುದೇ ಜವಾಬ್ದಾರಿಯುತ ಸಾಮಾಜಿಕ ಬೆಂಬಲ ಅಥವಾ ಯೋಜನೆಯಿಲ್ಲದ ಕಾರಣ, ಪ್ರಸ್ತುತದ ಲಾಕ್‍ಡೌನ್, ವಿಲೋಮ ವಲಸೆಗಳಿಗೆ (reverse migrations) ದಾರಿಯಾಗಬಹುದು. ದಾರಿಮಾಡಿಕೊಟ್ಟಿದೆ ಕೂಡ. ಇದರ ವ್ಯಾಪ್ತಿ ಹಾಗೂ ಆಳವನ್ನು ತಹಬಂದಿಗೆ ತರುವುದು ಅಸಾಧ್ಯ. ತಾವು ಕೆಲಸದಲ್ಲಿ ತೊಡಗಿರುವ ಪಟ್ಟಣ ಹಾಗೂ ಜಿಲ್ಲೆಗಳು ಲಾಕ್‍ಡೌನ್‍ ಆಗಿರುವುದರಿಂದ ಅಪಾರ ಸಂಖ್ಯೆಯ ಜನರು ತಮ್ಮ ಹಳ್ಳಿಗಳಿಗೆ ವಾಪಸ್ಸಾಗುತ್ತಿದ್ದಾರೆ ಎಂಬುದಾಗಿ ಹಲವಾರು ರಾಜ್ಯಗಳ ವರದಿಗಳು ತಿಳಿಯಪಡಿಸುತ್ತವೆ.

ಹಲವಾರು ಜನರು ತಮ್ಮ ಪ್ರಯಾಣಕ್ಕೆ ತಮ್ಮ ಕಾಲುಗಳನ್ನೇ ನೆಚ್ಚುವಂತಾಗಿದೆ. ಕೆಲವರು ಸೈಕಲ್ಲಿನಲ್ಲಿ ಮನೆಗೆ ತೆರಳುತ್ತಿದ್ದಾರೆ. ರೈಲು, ಬಸ್ಸು ಹಾಗೂ ವ್ಯಾನುಗಳ ಸಂಚಾರವನ್ನು ತಡೆಹಿಡಿದಿರುವುದರಿಂದ ಬಹಳಷ್ಟು ಜನರು ಮಧ್ಯದಾರಿಯಲ್ಲೇ ಸಿಲುಕಿಕೊಂಡಿದ್ದಾರೆ. ಪರಿಸ್ಥಿತಿಯು ಗಾಬರಿ ಹುಟ್ಟಿಸುವಂತಿದೆ. ಇದು ತೀವ್ರಗೊಂಡಲ್ಲಿ ಪರಿಸ್ಥಿತಿಯು ನರಕಸದೃಶವಾಗುತ್ತದೆ.

ಗುಜರಾತಿನ ಜಿಲ್ಲೆಗಳಿಂದ ರಾಜಾಸ್ಥಾನದ ಹಳ್ಳಿಗಳಿಗೆ, ಹೈದರಾಬಾದಿನಿಂದ ದೂರದ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಹಳ್ಳಿಗಳಿಗೆ, ದೆಹಲಿಯಿಂದ ಉತ್ತರ ಪ್ರದೇಶದಲ್ಲಿನ ಪ್ರದೇಶಗಳಿಗಷ್ಟೇ ಅಲ್ಲದೆ, ಬಿಹಾರಕ್ಕೆ, ಮುಂಬಯಿಯಿಂದ ಊಹಿಸಲಸಾಧ್ಯವಾದ ಅನೇಕ ಸ್ಥಳಗಳಿಗೆ ಬೃಹತ್ ಸಂಖ್ಯೆಯ ಜನರು ತಮ್ಮ ಮನೆಗಳತ್ತ ತೆರಳುತ್ತಿರುವುದನ್ನು ಊಹಿಸಿ. ಅವರಿಗೆ ಯಾವುದೇ ನೆರವು ದೊರೆಯದಿದ್ದಲ್ಲಿ, ಆಹಾರ ಹಾಗೂ ನೀರನ್ನು ದೊರಕಿಸಿಕೊಳ್ಳುವ ಅವರ ಸಾಮರ್ಥ್ಯವು ವೇಗವಾಗಿ ಕ್ಷೀಣಿಸತೊಡಗಿ, ವಿನಾಶಕ್ಕೆ ದಾರಿಯಾಗುತ್ತದೆ. ಅತಿಸಾರ, ಕಾಲರ ಮುಂತಾದ ರೋಗಗಳಿಗೆ ಅವರು ತುತ್ತಾಗಬಹುದು.

ಬಿಗಡಾಯಿಸುತ್ತಿರುವ ಆರ್ಥಿಕ ಸಂಕಷ್ಟದ ಜೊತೆಗೆ, ಶ್ರಮಿಕರು ಹಾಗೂ ಯುವಜನರಲ್ಲಿ ಹೆಚ್ಚಿನ ಸಾವುಗಳನ್ನು ಕಾಣುವ ಪರಿಸ್ಥಿತಿಯು ಎದುರಾಗಬಹುದು. ಪೀಪಲ್ಸ್ ಹೆಲ್ತ್ ಮೂವ್‍ಮೆಂಟ್‍ನ ಜಾಗತಿಕ ಸಂಯೋಜಕರಾದ ಪ್ರೊ. ಟಿ. ಸುಂದರರಾಮನ್‍, ಕೊರೊನ ವೈರಸ್‍ ಸಾವುಗಳೊಂದಿಗೆ ಇತರೆ ರೋಗಗಳಿಂದ ಉಂಟಾಗುವ ಸಾವುಗಳನ್ನೂ ಕಾಣುವ ಪರಿಸ್ಥಿತಿ ಎದುರಾಗುತ್ತದೆ ಎಂಬುದಾಗಿ ‘ಪರಿಗೆ’ ತಿಳಿಸಿದರು.

60 ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಶೇ. 8 ರಷ್ಟು ಜನರು ಕೊರೊನ ವೈರಸ್‍ನಿಂದ ಪೀಡಿತರಾಗುವ ಸಾಧ್ಯತೆ ಹೆಚ್ಚು. ಅವಶ್ಯಕ ಆರೋಗ್ಯ ಸೇವೆಗಳ ಲಭ್ಯತೆಯಲ್ಲಿನ ಕೊರತೆಯೊಂದಿಗೆ ಇತರೆ ರೋಗಗಳ ವಿಸ್ಫೋಟವು, ದುಡಿಮೆಯಲ್ಲಿ ತೊಡಗಬಲ್ಲ ವಯಸ್ಸಿನ ಜನರು ಮತ್ತು ಯುವಜನತೆಯತ್ತ ತನ್ನ ಪ್ರಹಾರವನ್ನು ಬೀಸುತ್ತದೆ.

ನ್ಯಾಶನಲ್‍ ಹೆಲ್ತ್  ಸಿಸ್ಟಮ್ಸ್ ರಿಸೋರ್ಸಸ್‍ ಸೆಂಟರ್‍ ನ ಮಾಜಿ ಕಾರ್ಯಕಾರಿ ನಿರ್ದೇಶಕರಾದ ಡಾ. ಸುಂದರರಾಮನ್‍, “ವಿಲೋಮ ವಲಸೆಯ ಸಮಸ್ಯೆ ಹಾಗೂ ಜೀವನೋಪಾಗಳಿಗೆ ಉಂಟಾಗುವ ಹಾನಿಯನ್ನು ಗುರುತಿಸಿ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗತಕ್ಕದ್ದು ಎಂದು ತಿಳಿಸಿದರು. ಇದಕ್ಕೆ ವಿಫಲರಾದಲ್ಲಿ, ವಿಲೋಮ ವಲಸೆಯು ಹೆಚ್ಚಾಗಿ, ಜಿಲ್ಲೆಗಳಲ್ಲಿನ ವಲಸೆ ಕಾರ್ಮಿಕರು ಹಸಿವಿಗೆ ತುತ್ತಾಗುತ್ತಾರಲ್ಲದೆ, ಅವರಿಗೆ ತಮ್ಮ ಅತ್ಯಲ್ಪ ಕೂಲಿಯೂ ದೊರಕದಿದ್ದಲ್ಲಿ, ದೀರ್ಘಾವಧಿಯವರೆಗೂ ಬಡಜನರನ್ನೇ ಬಹುಪಾಲು ಪೀಡಿಸುವ ರೋಗಗಳಿಂದ ಉಂಟಾಗುವ ಸಾವು; ಕೊರೊನ ವೈರಸ್‍ನಿಂದ ಉಂಟಾಗಬಹುದಾದ ಸಾವನ್ನೂ ಮೀರಿಸಬಹುದು.” ಎಂಬ ತಮ್ಮ ಮಾತುಗಳಿಗೆ ಅವರು ಒತ್ತು ನೀಡಿದರು.

PHOTO • Rahul M.

ಆಂಧ್ರ ಪ್ರದೇಶದ ಅನಂತಪುರ ಹಾಗೂ ಕೇರಳದ ಕೊಚ್ಚಿನ್‍ ನಡುವೆ ವಾರಕ್ಕೊಮ್ಮೆ ಪ್ರಯಾಣಿಸುವ ದಣಿದ ವಲಸೆ ಕಾರ್ಮಿಕರು

ಅನೇಕ ವಲಸಿಗರು ತಮ್ಮ ಕೆಲಸದ ಜಾಗದಲ್ಲಿಯೇ ನೆಲೆಸುತ್ತಾರೆ. ಈ ಸ್ಥಳಗಳು ಮುಚ್ಚಲ್ಪಟ್ಟಿದ್ದು, ಅವರನ್ನು ಅಲ್ಲಿಂದ ತೆರಳುವಂತೆ ತಿಳಿಸಲಾಗಿದೆ. ಅವರು ಹೋಗಬೇಕಾದರೂ ಎಲ್ಲಿಗೆ? ಇವರಲ್ಲಿನ ಎಲ್ಲರಿಗೂ ದೂರ ಪ್ರಯಾಣವನ್ನು ಕಾಲ್ನಡಿಗೆಯಲ್ಲಿ ಕೈಗೊಳ್ಳುವುದು ತ್ರಾಸದಾಯಕ, ಅವರಿಗೆ ಪಡಿತರ ಚೀಟಿಯೂ ಇಲ್ಲ. ಇವರಿಗೆ ಆಹಾರವನ್ನು ಹೇಗೆ ಒದಗಿಸುತ್ತೀರಿ?

ಆರ್ಥಿಕ ಸಂಕಷ್ಟವು ವೇಗವಾಗಿ ವ್ಯಾಪಿಸುತ್ತಿದೆ.

ಹೌಸಿಂಗ್ ಸೊಸೈಟಿಗಳಲ್ಲಿ; ಬಡಜನರು, ವಲಸೆ ಕಾರ್ಮಿಕರು, ಮನೆಗೆಲಸದವರು, ಕೊಳೆಗೇರಿಗಳಲ್ಲಿ ವಾಸಿಸುವವರೇ ಸಮಸ್ಯೆಯ ಮೂಲವೆಂಬುದಾಗಿ ಭಾವಿಸಿ, ಅವರನ್ನು ತಪ್ಪಿತಸ್ಥರಂತೆ ನೋಡಲಾಗುತ್ತಿದೆ. ವಾಸ್ತವದಲ್ಲಿ; ವಿಮಾನಗಳಲ್ಲಿ ಪ್ರಯಾಣಿಸುವ ನಾವೇ ಕೋವಿಡ್-19 ಹಾಗೂ ಅದಕ್ಕೂ ಮೊದಲಿನ SARS ನ ವಾಹಕರು. ಇದನ್ನು ಗುರುತಿಸದೆ, ಈ ಅನಪೇಕ್ಷಿತ ಅಂಶಗಳಿಂದ ನಗರಗಳನ್ನು ವರ್ಜಿಸಿ, ಶುಚಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ, ವಿಮಾನಗಳಲ್ಲಿ ಪ್ರಯಾಣಿಸುವವರು ವಾಪಸ್ಸಾಗುತ್ತಿರುವ ಆ ವಲಸೆ ಕಾರ್ಮಿಕರಿಗೆ ರೋಗದ ಸೋಂಕನ್ನು ಹರಡಿದಲ್ಲಿ, ಅವರು ಹಳ್ಳಿಗಳಿಗೆ ವಾಪಸ್ಸಾದಾಗ ಏನಾಗಬಹುದು ಎಂಬುದನ್ನು ಯೋಚಿಸಿ.

ಅದೇ ರಾಜ್ಯದಲ್ಲಿನ ಅಥವ ನೆರೆಯ ರಾಜ್ಯದಲ್ಲಿನ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ವಾಪಸ್ಸಾಗುತ್ತಿರುವ ವಲಸೆ ಕಾರ್ಮಿಕರು ಯಾವಾಗಲೂ ಕಾಣಸಿಗುತ್ತಾರೆ. ದಾರಿಯ ಮಧ್ಯೆ ಚಹಾದ ಅಂಗಡಿಗಳಲ್ಲಿ  ಹಾಗೂ ಧಾಬಾಗಳಲ್ಲಿ ಅವರು ಕೆಲಸವನ್ನು ನಿರ್ವಹಿಸಿ, ಊಟಕ್ಕೆ ದಾರಿಮಾಡಿಕೊಂಡು, ಅಲ್ಲಿಯೇ ರಾತ್ರಿಯನ್ನು ಕಳೆಯುವುದು ನಡೆದುಕೊಂಡು ಬಂದ ಪದ್ಧತಿ. ಈಗ ಬಹುತೇಕ ಅವೆಲ್ಲವೂ ಮುಚ್ಚಿರುವ ಕಾರಣ, ಮುಂದೇನಾಗಬಹುದು?

ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಮತ್ತು ಮಧ್ಯಮ ವರ್ಗದವರಿಗೆ, ಅವರು ಮನೆಯಲ್ಲೇ ಇದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡಲ್ಲಿ, ಎಲ್ಲವೂ ಸರಿಯಾಗುತ್ತದೆಯೆಂದು ಮನದಟ್ಟುಮಾಡಿಸಲಾಗಿದೆ. ಕೊನೆಯ ಪಕ್ಷ ನಾವು ವೈರಸ್‍ನಿಂದ ದೂರವಿರುತ್ತೇವೆ. ಆರ್ಥಿಕ ಸಂಕಷ್ಟವು ನಮ್ಮ ಮೇಲೆ ಯಾವ ಪರಿಣಾಮವನ್ನು ಬೀರಬಹುದೆಂಬ ಯಾವುದೇ ಅಂದಾಜಿಲ್ಲ. ಅನೇಕರಿಗೆ ‘ಸಾಮಾಜಿಕ ಅಂತರವು’ ವಿಭಿನ್ನ ರೀತಿಯಲ್ಲಿ ಅನುರಣಿಸುತ್ತಿದೆ. ಸುಮಾರು ಎರಡು ಸಹಸ್ರವರ್ಷಗಳ ಹಿಂದೆ, ನಾವು ಅದರ ಅತ್ಯಂತ ಶಕ್ತಿಶಾಲಿ ಸ್ವರೂಪವಾದ ಜಾತಿ ಪದ್ಧತಿಯನ್ನು ಆವಿಷ್ಕರಿಸಿದೆವು. ಲಾಕ್‍ಡೌನ್‍ಗೆ ನೀಡಿದ ನಮ್ಮ ಪ್ರತಿಕ್ರಿಯೆಯಲ್ಲಿ, ವರ್ಗ ಮತ್ತು ಜಾತಿ ವ್ಯವಸ್ಥೆಗಳು ಅಂತಃಸ್ಥಾಪಿತಗೊಂಡಿವೆ.

ಪ್ರತಿ ವರ್ಷವೂ ಎರಡೂವರೆ ಲಕ್ಷ ಭಾರತೀಯರು ಕ್ಷಯರೋಗದಿಂದಾಗಿ ಸಾವಿಗೀಡಾಗುವ ಅಥವ ಅತಿಸಾರದಿಂದ ಪ್ರತಿ ವರ್ಷವೂ 100,000 ಮಕ್ಕಳನ್ನು ಬಲಿತೆಗೆದುಕೊಳ್ಳುವ ವಿಷಯದ ಬಗ್ಗೆ ನಾವು ಗಮನಹರಿಸುವುದಿಲ್ಲ. ಅದು ನಾವಲ್ಲವಲ್ಲ . ಸುಂದರವಾಗಿರುವ ಜನರಿಗೆ, ತಮಗೆ ಪ್ರಾಣಾಂತಕ ರೋಗವನ್ನು ಕುರಿತಂತೆ ನಿರೋಧಕ ಶಕ್ತಿಯಿಲ್ಲವೆಂಬುದು ತಿಳಿದಾಗ ಭೀತಿಯು ಪ್ರಾರಂಭವಾಗುತ್ತದೆ. SARS ನ ಬಗ್ಗೆ ಆದದ್ದೂ ಇದೇ. 1994 ರಲ್ಲಿ ಸೂರತ್‍ನಲ್ಲಿ ಪ್ಲೇಗ್‍ ಬಂದಾಗಿನ ಸ್ಥಿತಿಯೂ ಇದೇ ಆಗಿತ್ತು. ಇವೆರಡೂ ಮಾರಣಾಂತಿಕ ಖಾಯಿಲೆಗಳಾಗಿದ್ದಾಗ್ಯೂ, ಭಾರತದಲ್ಲಿ ಅವು ಬಲಿಪಡೆದ ಜನಗಳ ಸಂಖ್ಯೆ ಬಹಳ ಕಡಿಮೆ. ಆದರೆ ಅವು ಅಪಾರವಾಗಿ ಗಮನಸೆಳೆದ ರೋಗಗಳಾಗಿದ್ದವು. ಸೂರತ್‍ನ ಬಗ್ಗೆ ನಾನು ಆಗ ಹೀಗೆ ಬರೆದಿದ್ದೆ: “ಪ್ಲೇಗ್‍ ಕೀಟಾಣುಗಳಿಗೆ ಯಾವುದೇ ವರ್ಗಭೇದವಿಲ್ಲ... ವಿಮಾನವನ್ನು ಹತ್ತಿ, ಕ್ಲಬ್‍ ಕ್ಲಾಸ್‍ನಲ್ಲಿ ಅವು ನ್ಯೂಯಾರ್ಕ್‍ಗೂ ಪ್ರಯಾಣಿಸಬಲ್ಲವು.”
PHOTO • Jyoti Shinoli

ಮಹುಲ್‍ ಗ್ರಾಮ, ಚೆಂಬೂರ್‍ ಹಾಗೂ ಮುಂಬಯಿಯಲ್ಲಿನ ಸಫಾಯಿ ಕರ್ಮಚಾರಿಗಳು ಕನಿಷ್ಠತಮ ಸುರಕ್ಷತೆಯೊಂದಿಗೆ ವಿಷಯುಕ್ತವಾಗಿರಬಹುದಾದ ಕಸದ ನಡುವೆ ಕಾರ್ಯನಿರ್ವಹಿಸುತ್ತಾರೆ

ಕಾರ್ಯಶೀಲತೆಯು ಅಗತ್ಯ. ಹೋರಾಟ ಒಂದು ವೈರಸ್‍ನೊಂದಿಗಲ್ಲ. ವ್ಯಾಪಕ ವ್ಯಾಧಿಗಳು ‘ಪ್ಯಾಕೇಜ್‍ಗಳಂತೆ.’ ಸ್ವತಃ ಹೇರಿಕೊಂಡ ಅಥವ ತೀಕ್ಷ್ಣಗೊಂಡ ಆರ್ಥಿಕ ಸಂಕಷ್ಟ, ಘೋರ ವಿಪತ್ತಿನಿಂದ ವಿನಾಶದತ್ತ ಕರೆದೊಯ್ಯಬಹುದು

ನಮ್ಮ ಹೋರಾಟ ಕೇವಲ ಒಂದು ವೈರಸ್‍ನೊಂದಿಗಷ್ಟೇ, ಅದರಲ್ಲಿ ಯಶಸ್ವಿಯಾದಲ್ಲಿ ಎಲ್ಲವೂ ಸರಿಯಾಗುತ್ತದೆನ್ನುವ ವಿಚಾರವು ಬಹಳ ಅಪಾಯಕಾರಿ. ಕೊವಿಡ್‍-19 ಕುರಿತಂತೆ ನಾವು ಗಂಭೀರತಮ ಹೋರಾಟವನ್ನು ನಡೆಸಬೇಕಿದೆಯೆಂಬುದು ನಿಜವೇ. ಇದು, 1918 ರಲ್ಲಿನ ಹಾಗೂ ತಪ್ಪಾಗಿ ಹೆಸರಿಸಲಾದ ‘ಸ್ಪ್ಯಾನಿಶ್‍ ಫ್ಲೂ’ ನಂತರದಲ್ಲಿ ಇಲ್ಲಿಯವರೆಗಿನ ಅವಧಿಯ ಅತ್ಯಂತ ಕೆಟ್ಟ ಸರ್ವವ್ಯಾಪಿ ವ್ಯಾಧಿಯಾಗಿದೆ. (1918-21 ರ ನಡುವೆ ಇದಕ್ಕೆ ತುತ್ತಾಗಿ ಭಾರತದಲ್ಲಿ 16-21 ಮಿಲಿಯನ್‍ ಜನರು ಸಾವಿಗೀಡಾಗಿದ್ದಾರೆ. 1921 ರ ಜನಗಣತಿಯಲ್ಲಿ ಮಾತ್ರವೇ ಗ್ರಾಮೀಣ ಜನಸಂಖ್ಯೆಯು ಇಳಿಮುಖವಾಗುತ್ತಿರುವುದನ್ನು ದಾಖಲಿಸಬಹುದಾಗಿದೆ.

ವಿಸ್ತೃತ ಸೂಕ್ಷ್ಮ ಪರಿಶೀಲನೆಯನ್ನು ಹೊರತುಪಡಿಸಿ, ಕೊವಿಡ್‍-19 ಕುರಿತಂತೆ ನಮ್ಮ ಗಮನವನ್ನು ಕೇಂದ್ರೀಕರಿಸಿದಲ್ಲಿ; ನಲ್ಲಿಗಳೆಲ್ಲವನ್ನೂ ತೆರೆದು ಅದರಲ್ಲಿ ನೀರು ಸುರಿಯುತ್ತಿರುವಂತೆಯೇ ನೆಲವನ್ನು ಒಣಗುವವರೆಗೂ ಒರೆಸುತ್ತೇನೆಂಬ ಪ್ರಯತ್ನದಂತಾಗುತ್ತದೆ. ಸಾರ್ವಜನಿಕರ ಆರೋಗ್ಯ ವ್ಯವಸ್ಥೆಗಳನ್ನು, ಹಕ್ಕುಗಳು ಹಾಗೂ ಅಧಿಕಾರಗಳನ್ನು ಬಲಪಡಿಸುವ ವಿಚಾರಗಳನ್ನೊಳಗೊಂಡ ದೃಷ್ಟಿಕೋನವನ್ನು ಮುನ್ನೆಲೆಗೆ ತರುವ ವಿಚಾರಗಳು ನಮಗೆ ಅವಶ್ಯ.

ವಿಶ್ವ ಆರೋಗ್ಯ ಸಂಸ್ಥೆಗೆ, ಪಾಶ್ಚಿಮಾತ್ಯ ಸರ್ಕಾರಗಳಿಂದ ಬೆಂಬಲಿಸಲ್ಪಟ್ಟ ಕಾರ್ಪೊರೆಟ್‍ ಹಿತಾಸಕ್ತಿಗಳ ಒತ್ತಡವಿಲ್ಲದ ಸಂದರ್ಭದಲ್ಲಿ, 1978 ರಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಕೆಲವು ಮಹಾನ್‍ ಬುದ್ಧಿಜೀವಿಗಳು, Alma Ata ಎಂಬ ಘೋಷಣೆಯನ್ನು ತಯಾರಿಸಿದರು. ಸದರಿ ಘೋಷಣೆಯು, ‘2000 ದ ವೇಳೆಗೆ ಎಲ್ಲರಿಗೂ ಆರೋಗ್ಯ’ ಎಂಬ ಜನಪ್ರಿಯ ಶಬ್ದಾವಳಿಯನ್ನು ಜನಪ್ರಿಯಗೊಳಿಸಿತು. “ವಿಶ್ವದ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಹಾಗೂ ಉತ್ತಮ ರೀತಿಯಲ್ಲಿ ಬಳಸುವ ಮೂಲಕ...” ಇದನ್ನು ಸಾಧಿಸಬಹುದೆಂಬ ವಿಶ್ವಾಸವನ್ನು ಅದು ಹೊಂದಿದ್ದಿತು.

80 ರ ದಶಕದಿಂದೀಚೆಗೆ ಆರೋಗ್ಯವನ್ನು ಕುರಿತ ಸಾಮಾಜಿಕ ಹಾಗೂ ಆರ್ಥಿಕ ನಿರ್ಧಾರಗಳನ್ನು ಅರಿತುಕೊಳ್ಳುವ ವಿಷಯಗಳು ಹೆಚ್ಚಾಗುತ್ತಿವೆ. ಆದರೆ ನವ-ಉದಾರವಾದವೆಂಬ ಮತ್ತೊಂದು ವಿಚಾರವೂ ಹೆಚ್ಚು ತ್ವರಿತವಾಗಿ ವೃದ್ಧಿಸುತ್ತಿದೆ.

ಮಾನವ ಹಕ್ಕುಗಳನ್ನು ವಿಶ್ವದಾದ್ಯಂತ ಅರ್ಥವಿಲ್ಲದ್ದು ಎಂಬುದಾಗಿ ಪರಿಗಣಿಸಲ್ಪಟ್ಟ ಕಾರಣ, 80 ರ ದಶಕದ ಕೊನೆಯ ಭಾಗದಲ್ಲಿ ಹಾಗೂ 90 ರ ದಶಕದ ಆರಂಭದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗವನ್ನು ಕುರಿತಂತೆ ಹೆಚ್ಚಿನ ವಿಚಾರಗಳು ಮುನ್ನೆಲೆಗೆ ಬರುತ್ತಿವೆ.

1990 ರ ದಶಕದ ಮಧ್ಯಭಾಗದಲ್ಲಿ, ಸಾಂಕ್ರಾಮಿಕ ರೋಗದ ಜಾಗತೀಕರಣವು ಅಡಿಯಿಟ್ಟಿತು. ಇಂತಹ ಮಾರಣಾಂತಿಕ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ, ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುವ ಬದಲಿಗೆ, ಅನೇಕ ರಾಷ್ಟ್ರಗಳು ತಮ್ಮ ಆರೋಗ್ಯ ವಲಯಗಳನ್ನು ಖಾಸಗೀಕರಣಗೊಳಿಸಿದವು. ಭಾರತದಲ್ಲಿ, ಸದರಿ ಕ್ಷೇತ್ರದಲ್ಲಿ ಸದಾ ಖಾಸಗಿಯವರ ಪ್ರಾಬಲ್ಯವನ್ನು ಕಾಣಬಹುದು. ವಿಶ್ವಕ್ಕೆ ಹೋಲಿಸಿದಲ್ಲಿ ಆರೋಗ್ಯ ವಲಯದಲ್ಲಿ ಕೇವಲ ಶೇ. 1.2 ರಷ್ಟು (ಜಿ.ಡಿ.ಪಿ.ಯಲ್ಲಿನ ಪಾಲು) ನಿಕೃಷ್ಟ ವೆಚ್ಚವನ್ನು ನಾವು ಇಲ್ಲಿ ಕಾಣುತ್ತಿದ್ದೇವೆ. ಎಂದಿಗೂ ಸದೃಢವಾಗಿಲ್ಲದ ಆರೋಗ್ಯ ವ್ಯವಸ್ಥೆಯು, 1990 ರಿಂದಾಚೆಗೆ ಉದ್ದೇಶಪೂರ್ವಕ ನೀತಿಗಳನ್ನು ಆಧರಿಸಿದ ಕ್ರಮಗಳಿಂದಾಗಿ, ಮತ್ತಷ್ಟು ದುರ್ಬಲಗೊಂಡಿತು. ಪ್ರಸ್ತುತ ಸರ್ಕಾರವು, ಜಿಲ್ಲಾ ಮಟ್ಟದ ಆಸ್ಪತ್ರೆಗಳನ್ನು ಸಹ ವಹಿಸಿಕೊಳ್ಳುವಂತೆ ಖಾಸಗಿ ಆಡಳಿತ ವರ್ಗವನ್ನು ಆಹ್ವಾನಿಸುತ್ತಿದೆ.

ಆರೋಗ್ಯದ ನಿಟ್ಟಿನ ವೆಚ್ಚವು, ಗ್ರಾಮೀಣ ಕುಟುಂಬದ ಋಣಭಾರದಲ್ಲಿ ತೀವ್ರ ಹೆಚ್ಚಳವನ್ನು ಕಾಣುತ್ತಿರುವ ಅಂಶವೆನಿಸಿದೆ. ಜೂನ್‍ 2018 ರಲ್ಲಿ, ಆರೋಗ್ಯ ವಲಯದ ವಿವಿಧ ದತ್ತಾಂಶಗಳನ್ನು ವಿಶ್ಲೇಷಿಸಿದ ಪಬ್ಲಿಕ್‍ ಹೆಲ್ತ್ ಫೌಂಡೇಶನ್‍ ಆಫ್ ಇಂಡಿಯಾ, ತಮ್ಮ ಸ್ವಂತ ಆರೋಗ್ಯದ ಸಮಸ್ಯೆಗಳನ್ನು ನಿಭಾಯಿಸುವ ವೆಚ್ಚಗಳಿಂದಾಗಿ 2011-12 ನೇ ಸಾಲಿನ ವರ್ಷವೊಂದರಲ್ಲೇ 55 ಮಿಲಿಯನ್‍ ಜನರು ಬಡತನಕ್ಕೀಡಾದರೆಂದು ಹಾಗೂ ಔಷಧಗಳಿಗೆ ವ್ಯಯಿಸಿದ ಹಣದಿಂದಾಗಿ ಇವರಲ್ಲಿನ 38 ಮಿಲಿಯನ್‍ ಜನರು ಬಡತನ ರೇಖೆಗಿಂತಲೂ ಕೆಳಕ್ಕೆ ತಳ್ಳಲ್ಪಟ್ಟರೆಂದು ತಿಳಿಸಿತು.

ಭಾರತದಾದ್ಯಂತ ರೈತರ ಆತ್ಮಹತ್ಯೆಗಳಿಂದಾಗಿ ಸಂಕಷ್ಟಕ್ಕೀಡಾದ ಅನೇಕ ಸಾವಿರಾರು ಕುಟುಂಬಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ಗಮನಾರ್ಹ ಅಂಶಗಳಲ್ಲಿ ಒಂದೆಂದರೆ: ಸಾಹುಕಾರನಿಂದ ಆಗಾಗ್ಗೆ ತಂದ ಸಾಲದಿಂದ ನಿಭಾಯಿಸಲಾಗುತ್ತಿರುವ ಆರೋಗ್ಯದ ನಿಟ್ಟಿನ ಮಿತಿಮೀರಿದ ಖರ್ಚುಗಳು.
PHOTO • M. Palani Kumar

ಇತರೆಡೆಗಳಲ್ಲಿನ ತಮ್ಮ ಸಮಸ್ಥಾನಿಕರಂತೆ (counterparts) ಚನ್ನೈನ ಗುತ್ತಿಗೆಯಾಧಾರಿತ ಸಫಾಯಿ ಕರ್ಮಚಾರಿಗಳು ನಿಕೃಷ್ಟ ಸುರಕ್ಷತೆಯೊಂದಿಗೆ ಅಥವ ಯಾವುದೇ ಸುರಕ್ಷತೆಗಳಿಲ್ಲದೆ ಕೆಲಸವನ್ನು ನಿರ್ವಹಿಸುತ್ತಿದ್ದಾರೆ

ನಮ್ಮಲ್ಲಿ ಕೊವಿಡ್‍-19 ನಂತಹ ವಿಷಮ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಜ್ಜುಗೊಂಡಿರುವ ಬೃಹತ್‍ ಜನಸಂಖ್ಯೆಯಿದೆ. ಇತರೆ ಹೆಸರುಗಳನ್ನು ಹೊಂದಿದ ಕೊವಿಡ್‍ಗಳನ್ನು ಮುಂದಿನ ವರ್ಷಗಳಲ್ಲಿ ನಾವು ಕಾಣುವವರಿದ್ದೇವೆಂಬುದು ಇಂದಿನ ದುರಂತ. 90 ರ ದಶಕದ ಉತ್ತರಾರ್ಧದಲ್ಲಿ SARS ಮತ್ತು MERS (ಇವೆರಡೂ ಕೊರೊನ ವೈರಸ್‍ನಿಂದಲೇ ಉದ್ಭವಗೊಂಡವು) ಹಾಗೂ ಇತರ ಜಾಗತಿಕವಾಗಿ ವ್ಯಾಪಿಸಿದ ರೋಗಗಳನ್ನು ಕಂಡಿದ್ದೇವೆ. ಭಾರತದಲ್ಲಿ 1994 ರಲ್ಲಿ, ಸೂರತ್‍ನಲ್ಲಿ ಪ್ಲೇಗ್‍ ಕಾಣಿಸಿಕೊಂಡಿತು. ಇವೆಲ್ಲವೂ ಮುಂದಿನ ಆಗುಹೋಗುಗಳ ಹಾಗೂ ನಾವು ರೂಪಿಸಿ, ತೊಡಗಿಸಿಕೊಂಡ ವಿಶ್ವದ ಮುನ್ಸೂಚನೆಗಳಾಗಿವೆ.

ಗ್ಲೊಬಲ್‍ ವೈರೊಮ್‍ ಪ್ರಾಜೆಕ್ಟ್ ನ ಪ್ರೊ. ಡೆನಿಸ್ ಕರೊಲ್‍ ಅವರು ಇತ್ತೀಚೆಗೆ ಹೀಗೆ ತಿಳಿಸುತ್ತಾರೆ: “ ನಾವು ಈ ಮೊದಲು ನೆಲೆಸಿಲ್ಲದ ಪರಿಸರ ವ್ಯವಸ್ಥೆಗಳನ್ನು ಪ್ರವೇಶಿಸತೊಡಗಿದ್ದೇವೆ.... ” ಮೊದಲಿಗೆ ಕೆಲವೇ ಜನರು ನೆಲೆಸಿದ್ದ ಸ್ಥಳಗಳಲ್ಲಿ ತೈಲ ಮತ್ತು ಖನಿಜಗಳನ್ನು ಹೊರತೆಗೆಯುವ ಕ್ರಿಯೆಗೆ ನಾವು ಬೆಲೆ ನೀಡುವಂತಾಗಿದೆ. ಸೂಕ್ಷ್ಮ ಪರಿಸರ ವ್ಯವಸ್ಥೆಗಳಲ್ಲಿನ ನಮ್ಮ ಅನಿರೀಕ್ಷಿತ ದಾಳಿಯು; ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲದೆ, ವನ್ಯ ಜೀವ ಜಂತುಗಳು ಹಾಗೂ ಮನುಷ್ಯರ ನಡುವಿನ ಸಂಪರ್ಕವು; ಸಾಂಕ್ರಾಮಿಕ ರೋಗಗಳು ಮತ್ತು ನಮಗೆ ಅಲ್ಪಸ್ವಲ್ಪ ತಿಳುವಳಿಕೆಯಿರುವ ಅಥವ ಯಾವುದೇ ತಿಳುವಳಿಕೆಯಿಲ್ಲದ ವೈರಸ್‍ಗಳ ಹರಡುವಿಕೆಗೂ ಕಾರಣವಾಗುತ್ತಿದ್ದು; ಆರೋಗ್ಯದ ಸಂಭಾವ್ಯ ವಿಪತ್ತುಗಳಿಗೆ ಎಡೆಮಾಡಿಕೊಟ್ಟಿದೆ.

ಹೌದು, ನಾವು ಇಂತಹ ಇನ್ನೂ ಅನೇಕವನ್ನು ಕಾಣಲಿದ್ದೇವೆ.

ಕೊವಿಡ್-19 ಎರಡು ರೀತಿಗಳಲ್ಲಿ ವರ್ತಿಸಬಹುದು.

ವೈರಸ್‍, ಮಾರ್ಪಾಡು ಹೊಂದಿ (ಇದು ನಮಗೆ ಅನುಕೂಲಕರವೂ ಹೌದು) ವಾರಗಳಲ್ಲೇ ಸಾವನ್ನಪ್ಪುತ್ತದೆ.

ಅಥವ: ತನ್ನ ಅನುಕೂಲಕ್ಕಾಗಿಯೇ ಅದು ಮಾರ್ಪಾಡು ಹೊಂದಿ, ಪರಿಸ್ಥಿತಿಯನ್ನು ಬಿಗಡಾಯಿಸುತ್ತದೆ. ಹೀಗಾದಲ್ಲಿ ಎಲ್ಲವೂ ನರಕಸದೃಶವೇ ಸರಿ.

ಸಲಹೆಗಳನ್ನು ಕುರಿತ ಸಹಮತದೊಂದಿಗೆ ನಾನು ಈ ಮುಂದಿನ ಸಲಹೆಗಳನ್ನು ನೀಡುತ್ತೇನೆ. ( ಬೃಹತ್‍ ಜಾಗತಿಕ ಸಂದರ್ಭದ ಹಿನ್ನೆಲೆಯಲ್ಲಿ ಋಣ ಬಾಧ್ಯತೆ, ಖಾಸಗೀಕರಣ ಮತ್ತು ಆರ್ಥಿಕ ಮಾರುಕಟ್ಟೆಯ ವೈಫಲ್ಯವನ್ನು ಕುರಿತ ಕ್ರಮಗಳನ್ನು ಪರಿಗಣಿಸಿದ ವಿಚಾರಗಳೂ ಇವೆ) ಸ್ಫೂರ್ತಿದಾಯಕವೆಂದು ಅಂಗೀಕರಿಸಲ್ಪಟ್ಟ ಕೇರಳ ಸರ್ಕಾರವು ಪ್ರಕಟಿಸಿದ ಕೆಲವು ಕ್ರಮಗಳನ್ನೂ ಗಮನಿಸಬಹುದು.


Ø ನಾವು ಮಾಡಬೇಕಾದ ಮೊಟ್ಟ ಮೊದಲ ಕೆಲಸವೆಂದರೆ: ನಮ್ಮಲ್ಲಿರುವ ‘ಹೆಚ್ಚುವರಿ’ 600 ಮಿಲಿಯನ್‍ ಟನ್‍ ಆಹಾರ ಧಾನ್ಯವನ್ನು ತುರ್ತಾಗಿ ಹಂಚಲು ವ್ಯವಸ್ಥೆ ಮಾಡತಕ್ಕದ್ದು. ಮಿಲಿಯಾಂತರ ವಲಸೆ ಕಾರ್ಮಿಕರು ಮತ್ತು ಈ ಸಂಕಟದಿಂದ ಸರ್ವನಾಶದೆಡೆಗೆ ಸಾಗಿರುವ ಇತರೆ ಬಡಜನರನ್ನು ತಕ್ಷಣವೇ ತಲುಪತಕ್ಕದ್ದು. ಪ್ರಸ್ತುತದಲ್ಲಿ ಮುಚ್ಚಿರುವ ಎಲ್ಲ ಸಾಮುದಾಯಿಕ ಸ್ಥಾನಗಳನ್ನು (ಶಾಲೆಗಳು, ಕಾಲೇಜುಗಳು, ಸಮುದಾಯ ಭವನಗಳು ಮತ್ತು ಕಟ್ಟಡಗಳು) ಅಲ್ಲಲ್ಲೇ ಸಿಲುಕಿರುವ ವಲಸಿಗರು ಹಾಗೂ ವಸತಿಹೀನರ ತಂಗುದಾಣಗಳಾಗಿ ಘೋಷಿಸತಕ್ಕದ್ದು.

Ø ಎರಡನೆಯ ಹಾಗೂ ಅಷ್ಟೇ ಮಹತ್ವದ ಅಂಶವೆಂದರೆ, ಎಲ್ಲ ರೈತರಿಗೂ ಖಾರಿಫ್ ಋತುವಿನಲ್ಲಿ ಆಹಾರ ಬೆಳೆಗಳನ್ನು ಬೆಳೆಯುವ ಅವಕಾಶವನ್ನು ನೀಡತಕ್ಕದ್ದು. ಪರಿಸ್ಥಿತಿಯು ಹೀಗೆಯೇ ಮುಂದುವರಿದಲ್ಲಿ; ಆಹಾರವನ್ನು ಕುರಿತ ಭೀಕರ ಸನ್ನಿವೇಶವು ಎದುರಾಗಬಹುದು. ತಾವು ಈ ಋತುವಿನಲ್ಲಿ ಕಟಾವು ಮಾಡಿದ ವಾಣಿಜ್ಯ ಬೆಳೆಯನ್ನು ಮಾರಲು ಅವರಿಗೆ ಸಾಧ್ಯವಾಗದು. ಹೆಚ್ಚುವರಿ ವಾಣಿಜ್ಯ ಬೆಳೆಗೆ ನಾವು ಎಡತಾಕಿದಲ್ಲಿ ಅದು ವಿನಾಶಕಾರಿಯಾಗಬಹುದು. ಕೊರೊನ ವೈರಸ್‍ನ ಲಸಿಕೆ/ಗುಣಪಡಿಸುವಿಕೆಗೆ ಇನ್ನೂ ಅನೇಕ ತಿಂಗಳು ಹಿಡಿಯಬಹುದು. ಈ ನಡುವೆ ಆಹಾರದ ದಾಸ್ತಾನು ಕ್ಷೀಣಿಸತೊಡಗುತ್ತದೆ.

Ø ರೈತರ ಉತ್ಪನ್ನಗಳ ನಿಟ್ಟಿನಲ್ಲಿ ಸರ್ಕಾರವು ನೆರವು ನೀಡತಕ್ಕದ್ದು, ಅವುಗಳ ರವಾನೆ ಹಾಗೂ ಬೃಹತ್‍ ಪ್ರಮಾಣದ ಖರೀದಿಗಳನ್ನು ವ್ಯವಸ್ಥೆಗೊಳಿಸಬೇಕು. ಸಾಮಾಜಿಕ ಅಂತರ ಹಾಗೂ ಲಾಕ್‍ಡೌನ್‍ಗಳಿಂದಾಗಿ ಅನೇಕರು ರಬಿ ಕಟಾವನ್ನು ಪೂರೈಸಿರುವುದಿಲ್ಲ. ಕಟಾವನ್ನು ಪೂರೈಸಿದ ರೈತರು, ಅದನ್ನು ಎಲ್ಲಿಗೂ ಸಾಗಿಸುವಂತಿಲ್ಲ ಹಾಗೂ ಮಾರುವುದೂ ಶಕ್ಯವಿಲ್ಲ. ಖಾರಿಫ್‍ನಲ್ಲಿ ಆಹಾರದ ಬೆಳೆಗಳ ಉತ್ಪಾದನೆಗೂ ರೈತರಿಗೆ ಆಗತಗಳು (inputs), ಬೆಂಬಲ ಸೇವೆಗಳು ಮತ್ತು ಮಾರುಕಟ್ಟೆ ಚಟುವಟಿಕೆಗಳ ನೆರವನ್ನೊಳಗೊಂಡ ಪರಿಸರ ವ್ಯವಸ್ಥೆಯು ಅವಶ್ಯ.

Ø ದೇಶಾದ್ಯಂತದ ಖಾಸಗಿ ವೈದ್ಯಕೀಯ ಸೇವೆಗಳನ್ನು ಸರ್ಕಾರವು ರಾಷ್ಟ್ರೀಕರಣಗೊಳಿಸಲು ಸಿದ್ಧವಿರತಕ್ಕದ್ದು. ಆಸ್ಪತ್ರೆಗಳಿಗೆ ‘ಕೊರೊನ ವಿಭಾಗಗಳನ್ನು’ ತೆರೆಯುವಂತೆ ಸಲಹೆ ನೀಡಿದಾಕ್ಷಣ ಸಮಸ್ಯೆಯ ನಿವಾರಣೆಯಾಗುವುದಿಲ್ಲ. ಲಾಭದ ದೃಷ್ಟಿಕೋನವುಳ್ಳ ವ್ಯವಸ್ಥೆಯಿಂದ ಸಂಕಷ್ಟವನ್ನು ಪರಿಹರಿಸಲು ಸಾಧ್ಯವಿಲ್ಲವೆಂದು ಮನಗಂಡ ಸ್ಪೇನ್‍ ದೇಶವು, ಕಳೆದ ವಾರ ತನ್ನೆಲ್ಲ ಆಸ್ಪತ್ರೆಗಳು ಮತ್ತು ಸ್ವಾಸ್ಥ್ಯ ಸೇವೆಗಳನ್ನು ಒದಗಿಸುವ  ಅಂಗಗಳನ್ನು ರಾಷ್ಟ್ರೀಕರಣಗೊಳಿಸಿತು.

Ø ಸಫಾಯಿ ಕರ್ಮಚಾರಿಗಳನ್ನು ತಕ್ಷಣವೇ ಸರ್ಕಾರದ/ನಗರಪಾಲಿಕೆಗಳ ಪೂರ್ಣಾವಧಿ ನೌಕರರೆಂದು ಪರಿಗಣಿಸಿ, ಪ್ರಸ್ತುತದಲ್ಲಿನ ಅವರ ವೇತನದೊಂದಿಗೆ 5,000 ರೂ.ಗಳನ್ನು ಮಾಹೆಯಾನ ನೀಡತಕ್ಕದ್ದು. ನಿರಂತರವಾಗಿ ಅವರಿಗೆ ನಿರಾಕರಿಸಲ್ಪಟ್ಟಿದ್ದ ಸಂಪೂರ್ಣ ವೈದ್ಯಕೀಯ ಸೌಲಭ್ಯಗಳನ್ನು ಸಹ ಒದಗಿಸತಕ್ಕದ್ದು. ಅವರಿಗೆ ಎಂದಿಗೂ ನೀಡದ ಸುರಕ್ಷಾ ಸಾಮಗ್ರಿಗಳನ್ನು ಸರಬರಾಜುಮಾಡತಕ್ಕದ್ದು. ಈಗಾಗಲೇ ಘಾಸಿಗೊಂಡಿರುವ ಲಕ್ಷಾಂತರ ಸಫಾಯಿ ಕರ್ಮಚಾರಿಗಳನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡುವಲ್ಲಿ ನಾವು ಮೂರು ದಶಕಗಳನ್ನು ಕಳೆದಿದ್ದೇವೆ. ಸಾರ್ವಜನಿಕ ಸೇವೆಗಳಿಂದ ಅವರನ್ನು ದೂರವಿರಿಸಿ, ಖಾಸಗಿ ಸಂಸ್ಥೆಗಳ ಮೂಲಕ ಅವರ ಕೆಲಸಗಳನ್ನು ಹೊರಗುತ್ತಿಗೆಯಡಿ ನಿರ್ವಹಿಸಲಾಗುತ್ತಿದೆ. ಇವರು ಅದೇ ಕೆಲಸಗಾರರನ್ನೇ ಕಡಿಮೆ ಸಂಬಳ ಹಾಗೂ ಯಾವುದೇ ಸೌಲಭ್ಯಗಳಿಲ್ಲದಂತೆ, ಒಪ್ಪಂದದ ಮೂಲಕ ಮರು ನೇಮಕ ಮಾಡಿದ್ದಾರೆ.

Ø ಬಡವರಿಗೆ ಮೂರು ತಿಂಗಳವರೆಗೆ ಉಚಿತ ಪಡಿತರವನ್ನು ಘೋಷಿಸಿ ತಕ್ಷಣದಿಂದಲೇ ಅವರಿಗೆ ಅದನ್ನು ಒದಗಿಸತಕ್ಕದ್ದು.

Ø ಈಗಾಗಲೇ ಹೋರಾಟದ ಮುಂಚೂಣಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ಆಶಾ, ಅಂಗನವಾಡಿ ಹಾಗೂ ಮಧ್ಯಾಹ್ನದ ಊಟದ ತಯಾರಿಕೆಯಲ್ಲಿ ನಿರತರಾದ ಕಾರ್ಯಕರ್ತರನ್ನು ತಕ್ಷಣವೇ ಸರ್ಕಾರಿ ನೌಕರರೆಂಬುದಾಗಿ ಕ್ರಮಬದ್ಧಗೊಳಿಸತಕ್ಕದ್ದು. ಭಾರತದ ಮಕ್ಕಳ ಆರೋಗ್ಯ ಹಾಗೂ ಜೀವನವು ಇವರ ಕೈಯಲ್ಲಿದೆ. ಇವರನ್ನು ಸಹ ಪೂರ್ಣಾವಧಿ ನೌಕರರೆಂದು ಪರಿಗಣಿಸಿ, ಸೂಕ್ತ ವೇತನ ಹಾಗೂ ಸುರಕ್ಷಾ ಸಾಮಗ್ರಿಗಳನ್ನು ನೀಡತಕ್ಕದ್ದು.

Ø ಈ ಸಂಕಷ್ಟದಿಂದ ಪಾರಾಗುವವರೆಗೂ ರೈತರು ಹಾಗೂ ಕಾರ್ಮಿಕರಿಗೆ ದಿನನಿತ್ಯವೂ ವೇತನವನ್ನು MGNREGA ವೇತನವನ್ನು ನೀಡತಕ್ಕದ್ದು. ಇದೇ ಅವಧಿಯಲ್ಲಿ ನಗರದ ಕಾರ್ಮಿಕರು ಮಾಹೆಯಾನ 6,000 ರೂ.ಗಳನ್ನು ಪಡೆಯತಕ್ಕದ್ದು.

ನಾವು ಈಗಿಂದೀಗಲೇ ಈ ಕ್ರಮಗಳನ್ನು ಕೈಗೊಳ್ಳತಕ್ಕದ್ದು. ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರದ ‘ಪ್ಯಾಕೇಜ್‍’, ಸಂವೇದನಾಶೂನ್ಯತೆ ಹಾಗೂ ಉಪೇಕ್ಷೆಯ ವಿಚಿತ್ರ ಮಿಶ್ರಣವೇ ಹೌದು. ನಾವು ಕೇವಲ ಒಂದು ವೈರಸ್‍ನೊಂದಿಗೆ ಹೋರಾಡುತ್ತಿಲ್ಲ. ಸರ್ವವ್ಯಾಪಿ ವ್ಯಾಧಿಗಳು ‘ಪ್ಯಾಕೇಜ್‍ಗಳೂ’ ಹೌದು. ಅವುಗಳಲ್ಲಿ ಆರ್ಥಿಕ ಸಂಕಷ್ಟವು ಸ್ವತಃ ಹೇರಿಕೊಂಡ ಅಥವ ಸ್ವತಃ ಉಲ್ಭಗೊಂಡ ಅಂಶವೆನಿಸಬಹುದಾಗಿದ್ದು, ನಮ್ಮನ್ನು ಅದು ಘೋರ ವಿಪತ್ತಿನಿಂದ ವಿನಾಶದೆಡೆಗೆ ಕರೆದೊಯ್ಯುತ್ತಿದೆ.

ವೈರಸ್‍ನ ಪ್ರಕೋಪವು ಮುಂದಿನ ಎರಡು ವಾರಗಳು ಹೀಗೇ ಮುಂದುವರೆದಲ್ಲಿ, ರೈತರು ಖಾರಿಫ್ ಋತುವಿನಲ್ಲಿ ಆಹಾರದ ಬೆಳೆಗಳನ್ನು ಬೆಳೆಯುವಂತೆ ಒತ್ತಾಯಿಸುವುದು ಅತ್ಯಂತ ಪ್ರಮುಖ ಕೆಲಸಗಳಲ್ಲೊಂದಾಗಿದೆ.

ಅದೇ ಸಮಯಕ್ಕೆ, ನಾವು ಸ್ವಲ್ಪ ದೂರದಲ್ಲಿ ನಿಂತು, ಹೊಸ ಅರಿವನ್ನು ಅದ್ಭುತವಾಗಿ ಮೂಡಿಸುತ್ತಿರುವ ಕೊವಿಡ್-19 ನ ಗಳಿಗೆಯನ್ನು ಗ್ರಹಿಸಬಲ್ಲೆವೆ? ಈ ಸಂಧಿಕಾಲದಲ್ಲಿ ನಾವು ಯಾವ ಮಾರ್ಗದಲ್ಲಿ ಸಾಗಬೇಕೆಂಬುದನ್ನು ನಿರ್ಧರಿಸಬೇಕಿದೆ. ಈ ಅವಧಿಯಲ್ಲಿ ಅಸಮಾನತೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ನ್ಯಾಯವನ್ನು ಕುರಿತ ಚರ್ಚೆಗಳನ್ನು ಪುನರಾರಂಭಿಸಿ ಅವನ್ನು ಅನುಸರಿಸತಕ್ಕದ್ದು.

ಈ ಲೇಖನದ ಆವೃತ್ತಿಯು ಮೊದಲಿಗೆ 2020 ರ ಮಾರ್ಚ್‍ 26 ರಂದು ದಿ ವೈರ್‍ ಪತ್ರಿಕೆಯಲ್ಲಿ ಪ್ರಕಟಿತಗೊಂಡಿದೆ.

ಅನುವಾದ: ಶೈಲಜ ಜಿ. ಪಿ.

பி. சாய்நாத், பாரியின் நிறுவனர் ஆவார். பல்லாண்டுகளாக கிராமப்புற செய்தியாளராக இருக்கும் அவர், ’Everybody Loves a Good Drought' மற்றும் 'The Last Heroes: Foot Soldiers of Indian Freedom' ஆகிய புத்தகங்களை எழுதியிருக்கிறார்.

Other stories by P. Sainath
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.