" ಮೇ ತೇಜ್ ದೌ ಡ್ ಕೇ ವೂಂ ಗಾ, ಔರ್ ಕೂನೊ ಮೇ ಬಸ್ ಜಾವೂಂಗಾ [ನಾನು ವೇಗವಾಗಿ ಓಡಿ ಬಂದು ಕೂನೊದಲ್ಲಿ ನೆಲೆಯನ್ನು ಸ್ಥಾಪಿಸುತ್ತೇನೆ]."

ಇದು ಚಿಂಟು ಎನ್ನುವ ಚೀತಾ ತನ್ನ ಚಿತ್ರವಿರುವ ಪೋಸ್ಟರನ್ನು ಓದಬಲ್ಲವರಿಗೆ ಸಾರುತ್ತಿರುವ ಸಂದೇಶ.

ಈ ಪೋಸ್ಟರ್ ಅನ್ನು ಆರು ತಿಂಗಳ ಹಿಂದೆ ಮಧ್ಯಪ್ರದೇಶದ ಅರಣ್ಯ ಇಲಾಖೆಯ ಮೇಲಧಿಕಾರಿಗಳ ಅಧಿಕೃತ ಆದೇಶದ ಮೇರೆಗೆ ಹಾಕಲಾಗಿತ್ತು. ಇದು ಕೂನೊ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಎಲ್ಲಾ ಹಳ್ಳಿಗಳಿಗೆ ತನ್ನ ವ್ಯಾಪ್ತಿಯನ್ನು ಚಾಚಿದೆ,  ಈ ಪ್ರದೇಶದಲ್ಲಿ ಪೋಸ್ಟರಿನಲ್ಲಿರುವ ಸ್ನೇಹಪರ ಪಾತ್ರವಾದ 'ಚಿಂಟು ಚೀತಾ' ತನ್ನ ಮನೆಯನ್ನು ನಿರ್ಮಿಸಲು ಯೋಜಿಸುತ್ತಿದೆ.

ಚಿಂಟು ತನ್ನ ಮನೆಯನ್ನು 50 ನಿಜ ಜೀವನದ ಆಫ್ರಿಕನ್ ಚೀತಾಗಳೊಂದಿಗೆ ಹಂಚಿಕೊಳ್ಳಲಿದೆ. ಆದರೆ ಬಾಗ್ಚಾ ಗ್ರಾಮದ 556 ಜನರು ಈ ಚಿರತೆಗೆಳಿಗಾಗಿ ಸ್ಥಳಾಂತರಗೊಳ್ಳಲು ಮತ್ತು ಬೇರೆಡೆ ನೆಲೆಗೊಳ್ಳಲು ಸಜ್ಜಾಗಿದ್ದಾರೆ. ಮುಖ್ಯವಾಗಿ ಇದು ಅಲ್ಲಿನ ಕಾಡಿನೊಡನೆ ಬಹಳ ನಿಕಟವಾಗಿ ಬದುಕನ್ನು ಬೆಸೆದುಕೊಂಡಿರುವ ಸಹಾರಿಯ ಆದಿವಾಸಿ ಜನರ ಪಾಲಿಗೆ ಅವರ ಬದುಕು ಮತ್ತು ಜೀವನೋಪಾಯವನ್ನು ಕಸಿದುಕೊಳ್ಳುವ ಗಡಿಪಾರಾಗಿದೆ.

ಇನ್ನು ಮುಂದೆ ಈ ರಾಷ್ಟ್ರೀಯ ಉದ್ಯಾನವನಕ್ಕೆ ಹೆಚ್ಚಿನ ಬೆಲೆಯ ಸಫಾರಿ ಟಿಕೇಟುಗಳನ್ನು ಕೊಂಡು ಆಮದು ಮಾಡಲಾದ ಚಿರತೆಗಳನ್ನು ನೋಡಲು ಬರುವ ಜನರಿಗಷ್ಟೇ ಪ್ರವೇಶವಿರಲಿದೆ. ಇದು ಪೂರ್ವನಿಯೋಜಿತವಾಗಿ, ಸ್ಥಳೀಯ ನಿವಾಸಿಗಳನ್ನು ಹೊರಗಿಡುತ್ತದೆ, ಅವರಲ್ಲಿ ಹೆಚ್ಚಿನವರು ಬಡತನ ರೇಖೆಗಿಂತ ಕೆಳಗಿದ್ದಾರೆ.

ಈ ನಡುವೆ ʼಮುದ್ದು ಹುಟ್ಟಿಸುವʼ ಈ ಚುಕ್ಕಿಯುಳ್ಳ ದೊಡ್ಡ ಬೆಕ್ಕಿನ ಚಿತ್ರವು ಎಂಟು ವರ್ಷದ ಸತ್ಯನ್‌ ಜಾಟವ್‌ನಂತಹವರನ್ನು ಗೊಂದಲಕ್ಕೆ ದೂಡಿದೆ. ಅವನು ಅಪ್ಪನ ಬಳಿ “ಇದೇನು ಮೇಕೆಯೇ?” ಎಂದು ಕೇಳಿದರೆ, ಅವನ ತಮ್ಮ ನಾಲ್ಕು ವರ್ಷದ ಅನುರೋಧ್‌ ಪ್ರಕಾರ ಅದೊಂದು ನಾಯಿಯ ಚಿತ್ರ ಎನ್ನುತ್ತಾನೆ. ಈ ಮಕ್ಕಳು ವಾಸವಿರುವುದು ಅಭಯಾರಣ್ಯದ ಹೊರಗೆ 20 ಕಿಲೋಮೀಟರ್‌ ದೂರದಲ್ಲಿರುವ ಪೈರಾ ಜಾಟವ್‌ ಎನ್ನುವ ಕೊಪ್ಪಲಿನವರು.

Chintu Cheetah poster
PHOTO • Priti David
Village near Kuno National Park
PHOTO • Priti David

ಎಡಕ್ಕೆ- ಕೂನೊ ರಾಷ್ಟ್ರೀಯ ಉದ್ಯಾನವನದ ದ್ವಾರದ ಮೇಲೆ 'ಚಿಂಟು ಚೀತಾ' ಪೋಸ್ಟರ್ ಅಂಟಿಸಲಾಗಿತ್ತು. ಬಲಗಡೆ: ಕಾಡಿನ ಅಂಚಿನಲ್ಲಿರುವ ಬಾಗ್ಚಾ ಗ್ರಾಮ

ಚಿಂಟು ಪ್ರಕಟಣೆಯ ನಂತರ ಎರಡು ವಿವರವಾದ ಕಾಮಿಕ್ಸ್ ಬಂದವು, ಅವುಗಳನ್ನು ಪೋಸ್ಟರ್ ರೂಪದಲ್ಲಿ ಎಲ್ಲೆಡೆ ಅಂಟಿಸಲಾಯಿತು. ಇದರಲ್ಲಿ ಮಿಂಟು ಮತ್ತು ಮೀನು ಎಂಬ ಎರಡು ಮಕ್ಕಳ ಪಾತ್ರಗಳು ಚೀತಾದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತವೆ. ಇದು ಎಂದಿಗೂ ಮಾನವರ ಮೇಲೆ ದಾಳಿ ಮಾಡುವುದಿಲ್ಲ ಮತ್ತು ಚಿರತೆಗಿಂತ ಒಳ್ಳೆಯ ಪ್ರಾಣಿಗಳು ಎಂದು ಅವರು ಹೇಳುತ್ತಾರೆ. ಇನ್ನೂ ಮುಂದೆ ಹೋಗಿ, ಮಿಂಟು ಪಾತ್ರವು ಅದನ್ನು ಸಾಕಲು ಯೋಚಿಸುತ್ತಿರುವುದಾಗಿ ಹೇಳುತ್ತದೆ.

ಆಕಸ್ಮಾತ್‌ ಈ ಜಾಟವ್‌ ಮಕ್ಕಳು ಈ ದೊಡ್ಡ ಬೆಕ್ಕುಗಳನ್ನು ಕಂಡರೆ ಅವುಗಳನ್ನು ಸಾಕಲು ಪ್ರಯತ್ನಿಸದಿರಲಿ ಎಂದು ಹಾರೈಸೋಣ.

ಏಕೆಂದರೆ ಅವುಗಳ ಕುರಿತಾದ ನಿಜ ಕತೆ ಇಲ್ಲಿದೆ. ಮತ್ತು ಅದರಲ್ಲಿ ʼಕ್ಯೂಟ್‌ʼ ಅನ್ನಿಸುವಂತಹದ್ದು ಏನೂ ಇಲ್ಲ.

ಅಸಿನೊನಿಕ್ಸ್ ಜುಬಾಟಸ್ ( Acinonyx jubatus) - ಆಫ್ರಿಕನ್ ಚೀತಾ - ಸಂಭಾವ್ಯ ಅಪಾಯಕಾರಿ ದೊಡ್ಡ ಸಸ್ತನಿ ಮತ್ತು ಅತ್ಯಂತ ವೇಗದ ಭೂ ಪ್ರಾಣಿಯಾಗಿದೆ. ಇದು ದುರ್ಬಲ ಪ್ರಭೇದವಾಗಿದೆ, ನಿರ್ಣಾಯಕವಾಗಿ ಅಳಿವಿನಂಚಿನಲ್ಲಿದೆ, ಭಾರತಕ್ಕೆ ಸ್ಥಳೀಯವಲ್ಲ, ಮತ್ತು ನೂರಾರು ಸ್ಥಳೀಯ ಕುಟುಂಬಗಳನ್ನು ಅವರ ಮನೆಗಳಿಂದ ಹೊರದೂಡಲಿದೆ.

*****

"ಈ ವರ್ಷದ ಮಾರ್ಚ್ 6ರಂದು, ಅಲ್ಲಿನ ಅರಣ್ಯ ಚೌಕಿಯಲ್ಲಿ ಒಂದು ಸಭೆಯನ್ನು ಕರೆಯಲಾಯಿತು " ಎಂದು 40 ವರ್ಷದ ಬಲ್ಲು ಆದಿವಾಸಿ ತನ್ನ ಹಳ್ಳಿಯಾದ ಬಾಗ್ಚಾದ ಅಂಚಿನಲ್ಲಿರುವ ಕೂನೊ ಕಾಡಿನತ್ತ ಬೊಟ್ಟು ಮಾಡಿ ತೋರಿಸುತ್ತಾರೆ. "ಈ ಪ್ರದೇಶವು ರಾಷ್ಟ್ರೀಯ ಉದ್ಯಾನವನವಾಗಿ ಮಾರ್ಪಟ್ಟಿದೆ ಮತ್ತು ನಾವು ಸ್ಥಳಾಂತರಗೊಳ್ಳಬೇಕು ಎಂದು ನಮಗೆ ತಿಳಿಸಲಾಯಿತು."

ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಪಶ್ಚಿಮ ಅಂಚಿನಲ್ಲಿರುವ ಬಾಗ್ಚಾ ಸಹರಿಯಾ ಆದಿವಾಸಿ ಸಮುದಾಯದವರ ಗ್ರಾಮವಾಗಿದ್ದು, ಮಧ್ಯಪ್ರದೇಶದಲ್ಲಿ ಶೇ.42ರಷ್ಟು ಸಾಕ್ಷರತೆಯೊಂದಿಗೆ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ಎಂದು ಗುರುತಿಸಲ್ಪಟ್ಟಿದೆ. ವಿಜಾಪುರ ಬ್ಲಾಕ್‌ನಲ್ಲಿರುವ ಈ ಗ್ರಾಮವು 556 ಜನಸಂಖ್ಯೆಯನ್ನು ಹೊಂದಿದೆ (ಜನಗಣತಿ 2011), ಅವರು ಹೆಚ್ಚಾಗಿ ಮಣ್ಣು ಮತ್ತು ಇಟ್ಟಿಗೆಯಿಂದ ನಿರ್ಮಿಸಿದ ಮನೆಗಳಲ್ಲಿ ವಾಸಿಸುತ್ತಾರೆ, ಕಲ್ಲಿನ ಚಪ್ಪಡಿಗಳನ್ನು ಛಾವಣಿಯಾಗಿ ಹೊದಿಸಲಾಗಿರುತ್ತದೆ, ಇದು ರಾಷ್ಟ್ರೀಯ ಉದ್ಯಾನವನದಿಂದ ಸುತ್ತುವರೆದಿದೆ (ಇದನ್ನು ಕೂನೊ ಪಲ್ಪುರ್ ಎಂದೂ ಕರೆಯಲಾಗುತ್ತದೆ), ಅಲ್ಲಿ ಕೂನೊ ನದಿ ಹರಿಯುತ್ತದೆ.

ಸಹರಿಯಾ ಜನರು ಮಳೆಯಾಶ್ರಿತ ಕೃಷಿಯನ್ನು ಸಣ್ಣ ತುಂಡು ಭೂಮಿಯಲ್ಲಿ ಅಭ್ಯಾಸ ಮಾಡುತ್ತಾರೆ ಮತ್ತು ಮರಮುಟ್ಟಲ್ಲದ ಅರಣ್ಯ ಉತ್ಪನ್ನಗಳನ್ನು (NTFP) ಮಾರಾಟ ಮಾಡಲು ಕೂನೊ ಅಭಯಾರಣ್ಯವನ್ನು ಅವಲಂಬಿಸಿದ್ದಾರೆ

ವಿಡಿಯೋ ನೋಡಿ: ಆಫ್ರಿಕಾದಿಂದ ತರಿಸಲಾಗುವ ಚೀತಾಗಳಿಗಾಗಿ ಕೂನೊ ರಾಷ್ಟ್ರೀಯ ಉದ್ಯಾನದಲ್ಲಿ ಆದಿವಾಸಿಗಳ ಸ್ಥಳಾಂತರ

ಕಲ್ಲೋ ಆದಿವಾಸಿ ಈಗ ತನ್ನ 60ರ ಹರೆಯದಲ್ಲಿದ್ದಾರೆ ಮತ್ತು ತನ್ನ ವೈವಾಹಿಕ ಬದುಕೆಲ್ಲವನ್ನೂ ಬಾಗ್ಚಾದಲ್ಲಿ ಕಳೆದಿದ್ದಾರೆ. "ನಮ್ಮ ಭೂಮಿ ಇಲ್ಲೇ ಇದೆ. ನಮ್ಮ ಕಾಡು ಇಲ್ಲಿದೆ, ನಮ್ಮ ಮನೆ ಇಲ್ಲಿದೆ, ಇಲ್ಲಿ ಏನಿದೆಯೋ ಅದು ನಮ್ಮದು. ಈಗ ನಮ್ಮನ್ನು ತೊರೆಯುವಂತೆ ಒತ್ತಾಯಿಸಲಾಗುತ್ತಿದೆ." ಒಬ್ಬ ರೈತ ಮಹಿಳೆ, ಅರಣ್ಯ ಉತ್ಪನ್ನಗಳ ಸಂಗ್ರಾಹಕಿ, ಮತ್ತು ಏಳು ಮಕ್ಕಳ ತಾಯಿ ಮತ್ತು ಅನೇಕ ಮೊಮ್ಮಕ್ಕಳ ಅಜ್ಜಿ(ಅವರೆಲ್ಲರೂ ಅವರೊಡನೆ ಬದುಕುತ್ತಿದ್ದಾರೆ), ಆಗಿರುವ ಅವರು ಕೇಳುತ್ತಾರೆ, "ಚಿರತೆಯು ಯಾವ ಪ್ರಯೋಜನವನ್ನು ತರುತ್ತದೆ?"

ಬಾಗ್ಚಾವನ್ನು ತಲುಪಲು ಶಿಯೋಪುರದಿಂದ ಸಿರೋನಿ ಪಟ್ಟಣಕ್ಕೆ ಹೋಗುವ ಹೆದ್ದಾರಿಯನ್ನು ಬಿಟ್ಟು , ಕರ್ಧಾಯ್ , ಖೈರ್ ಮತ್ತು ಸಲೈ ಮರಗಳ ಎಲೆಯುದುರುವ ಕಾಡುಗಳ ಮೂಲಕ ಸಾಗುವ ಮಣ್ಣಿನ ರಸ್ತೆಯನ್ನು ಪ್ರವೇಶಿಸಬೇಕು . ಹನ್ನೆರಡು ಕಿಲೋಮೀಟರುಗಳ ನಂತರ, ಹಳ್ಳಿಯು ಎತ್ತರದಲ್ಲಿ ಕಾಣಿಸುತ್ತದೆ, ಹೆಚ್ಚಿನ ಸಂಖ್ಯೆಯ ಬೀಡಾಡಿ ದನಗಳು ಸುತ್ತಲೂ ಗಿರಕಿ ಹೊಡೆಯುತ್ತಿರುತ್ತವೆ. ಅತ್ಯಂತ ಹತ್ತಿರದ ಆರೋಗ್ಯ ಕೇಂದ್ರವು 20 ಕಿಲೋಮೀಟರ್ ದೂರದಲ್ಲಿದೆ ಮತ್ತು 108ಕ್ಕೆ ಕರೆ ಮಾಡುವ ಮೂಲಕ ಸೌಲಭ್ಯ ಪಡೆಯಬಹುದು, ಅಂದರೆ ಫೋನ್ ಲೈನ್ ಗಳು ಮತ್ತು ನೆಟ್ವರ್ಕ್ ಕಾರ್ಯನಿರ್ವಹಿಸುತ್ತಿರುವಾಗ ಮಾತ್ರ. ಬಾಗ್ಚಾದಲ್ಲಿ ಪ್ರಾಥಮಿಕ ಶಾಲೆ ಇದೆ, ಮತ್ತು 5ನೇ ತರಗತಿಯ ನಂತರ ಓದಲು, ಮಕ್ಕಳು 20 ಕಿಲೋಮೀಟರ್ ದೂರದಲ್ಲಿರುವ ಓಚಾದ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಬೇಕು ಮತ್ತು ವಾರದ ದಿನಗಳಲ್ಲಿ ಅಲ್ಲಿಯೇ ಉಳಿಯಬೇಕು.

ಸಹರಿಯಾ ಜನರು ಸಣ್ಣ ತುಂಡು ಭೂಮಿಗಳಲ್ಲಿ ಮಳೆಯಾಶ್ರಿತ ಕೃಷಿಯನ್ನು ಅಭ್ಯಾಸ ಮಾಡುತ್ತಾರೆ ಮತ್ತು ಮರಮಟ್ಟುರಹಿತ ಅರಣ್ಯ ಉತ್ಪನ್ನಗಳನ್ನು (NTFP) ಮಾರಾಟ ಮಾಡಲು ಕೂನೊವನ್ನು ಅವಲಂಬಿಸಿದ್ದಾರೆ. ಅವರು ಸ್ಥಳಾಂತರಗೊಂಡ ನಂತರ ಎರಡನೆಯದು ಕಣ್ಮರೆಯಾಗುತ್ತದೆ. ಚಿರ್ ಮರಗಳಿಂದ ಹೊರತೆಗೆಯಲಾಗುವ  ರಾಳ ( ಗೊಂಡ್ ) ನಂತಹ NTFP, ಆದಾಯದ ಪ್ರಮುಖ ಮೂಲವಾಗಿದೆ. ಇತರ ರಾಳಗಳು, ತೆಂಡು ಎಲೆಗಳು, ಹಣ್ಣುಗಳು, ಬೇರುಗಳು ಮತ್ತು ಗಿಡಮೂಲಿಕೆಗಳ ಅವರ ಇನ್ನಿತರ ಸಂಪಾದನೆಯ ಮೂಲಗಳು. ಎಲ್ಲಾ ಋತುಗಳು ಉತ್ತಮವಾಗಿದ್ದರೆ, ಈ ಮೂಲದಿಂದ ತಮ್ಮ ವಾರ್ಷಿಕ ಆದಾಯವು ಒಂದು ಕುಟುಂಬಕ್ಕೆ (ಸರಾಸರಿ 10 ಜನರ ಗಾತ್ರ) 2-3 ಲಕ್ಷ ರೂ.ಗಳನ್ನು ಮುಟ್ಟಬಹುದು ಎಂದು ಸಹರಿಯಾ ಜನರು ಲೆಕ್ಕಹಾಕುತ್ತಾರೆ. ಇದು ಅವರ BPL (ಬಡತನ ರೇಖೆಗಿಂತ ಕೆಳಗಿರುವ) ಕಾರ್ಡುಗಳ ಮೂಲಕ ಪಡೆದ ಪಡಿತರದೊಂದಿಗೆ, ನಿಜವಾದ ಭದ್ರತೆಯಲ್ಲದಿದ್ದರೂ ಸ್ವಲ್ಪಮಟ್ಟಿಗಿನ ಆಹಾರ ಸ್ಥಿರತೆಯನ್ನು ಖಾತರಿಪಡಿಸುತ್ತದೆ.

ಕಾಡಿನಿಂದ ಹೊರಹೋಗುವುದೆಂದರೆ ಇದೆಲ್ಲ ಆದಾಯ ಮೂಲಗಳನ್ನು ಕಳೆದುಕೊಳ್ಳುವುದು. “ನಮಗೆ ಕಾಡು ನೀಡುತ್ತಿದ್ದ ಸುರಕ್ಷಿತ ಭಾವನೆ ಇಲ್ಲವಾಗುತ್ತದೆ. ಇನ್ನು ಮುಂದೆ ಚಿರ್‌ ಮತ್ತು ಗೊಂಡ್‌ ಸಂಗ್ರಹಿಸಲು ಸಾಧ್ಯವಿಲ್ಲ. ನಮ್ಮ ಉಪ್ಪು ಮತ್ತು ಎ‍ಣ್ಣೆಯ ಖರ್ಚು ಇದರಿಂದಲೇ ಹುಟ್ಟುತ್ತಿತ್ತು. ನಮಗೆ ದಿನಗೂಲಿಯೊಂದೇ ಆಯ್ಕೆಯಾಗಿ ಉಳಿಯಲಿದೆ,” ಸಹಾರಿಯ ಸಮುದಾಯದ ಹರೇತ್‌ ಆದಿವಾಸಿ ಹೇಳುತ್ತಾರೆ.

Ballu Adivasi, the headman of Bagcha village.
PHOTO • Priti David
Kari Adivasi, at her home in the village. “We will only leave together, all of us”
PHOTO • Priti David

ಎಡಕ್ಕೆ: ಬಲ್ಲು ಆದಿವಾಸಿ, ಬಾಗ್ಚಾ ಗ್ರಾಮದ ಪಟೇಲರು. ಬಲಕ್ಕೆ: ಕರಿ ಆದಿವಾಸಿ, ಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ. 'ನಾವೆಲ್ಲರೂ ಒಟ್ಟಿಗೆ ಹೊರಡುತ್ತೇವೆ, ನಾವೆಲ್ಲರೂ'

ಸ್ಥಾನಪಲ್ಲಟದ ಮಾನವ ಮತ್ತು ಆರ್ಥಿಕ ವೆಚ್ಚಗಳು ಗಮನಾರ್ಹವಾಗಿವೆ ಎಂದು ಪ್ರೊಫೆಸರ್ ಅಸ್ಮಿತಾ ಕಬ್ರಾ ಹೇಳುತ್ತಾರೆ. 2004ರಲ್ಲಿ ಬಾಗ್ಚಾದಲ್ಲಿ ನಡೆದ ಅವರ ಸಂಶೋಧನೆಯು, ಹಳ್ಳಿಯು ಮಾರಾಟ ಮಾಡಬಹುದಾದ ಅರಣ್ಯ ಉತ್ಪನ್ನಗಳಿಂದ ಗಣನೀಯ ಆದಾಯವನ್ನು ಹೊಂದಿದೆ ಎಂದು ತೋರಿಸಿಕೊಟ್ಟಿತು. "ಭೂಪ್ರದೇಶವು ಉರುವಲು, ಮರ, ಗಿಡಮೂಲಿಕೆಗಳು, ಹಣ್ಣುಗಳು, ಮಹುವಾ ಮತ್ತು ಹೆಚ್ಚಿನದನ್ನು ಕೊಡುಗೆಯಾಗಿ ನೀಡುತ್ತಿತ್ತು" ಎಂದು ಅವರು ಹೇಳುತ್ತಾರೆ. ಅಧಿಕೃತ ವೆಬ್ಸೈಟ್ ಪ್ರಕಾರ, 748 ಚದರ ಕಿಲೋಮೀಟರುಗಳೊಂದಿಗೆ, ಕೂನೊ ರಾಷ್ಟ್ರೀಯ ಉದ್ಯಾನವನವು ಒಂದು ದೊಡ್ಡ ಪ್ರದೇಶವನ್ನು ಒಳಗೊಂಡಿದೆ ಮತ್ತು ಅದರ ಒಟ್ಟು ವಿಸ್ತೀರ್ಣ 1,235 ಚದರ ಕಿ.ಮೀ.

ಕಾಡಿನಿಂದ ಬರುವ ಸಮೃದ್ಧಿಯ ಹೊರತಾಗಿ, ತಲೆಮಾರುಗಳಿಂದ ನಿರಂತರವಾಗಿ ಸಾಗುವಳಿ ಮಾಡುತ್ತಿರುವ ಕೃಷಿ ಭೂಮಿಯನ್ನು ಬದಲಾಯಿಸುವುದು ಕಷ್ಟ. "ಮಳೆ ಬಂದಾಗ ನಾವು ಸಜ್ಜೆ , ಜೋಳ , ಮಕ್ಕಾ , ಉದ್ದು, ಉದ್ದು , ಎ‍ಳ್ಳು , ಹೆಸರುಕಾಳು ಮತ್ತು ರಾಮಸ್ [ ಅಲಸಂದೆ ] ಬೆಳೆಯಲು ಸಾಧ್ಯವಾಗುತ್ತದೆ, ಮತ್ತು ನಾವು ಬೆಂ ಡೆ , ಕಡ್ಡು, ಟೋರಿಯಂತಹ ತರಕಾರಿಗಳನ್ನು ಸಹ ಬೆಳೆಯುತ್ತೇವೆ" ಎಂದು ಹರೇತ್ ಆದಿವಾಸಿ ಹೇಳುತ್ತಾರೆ.

15 ಬಿಘಾ ಭೂಮಿಯಲ್ಲಿ (5 ಎಕರೆಗಿಂತ ಕಡಿಮೆ) ಕೃಷಿ ಮಾಡುತ್ತಿರುವ ಕಲ್ಲೋ, "ಇಲ್ಲಿ ನಮ್ಮ ಭೂಮಿ ಬಹಳ ಉತ್ಪಾದಕವಾಗಿದೆ. ನಾವು ಇಲ್ಲಿಂದ ಹೊರಡಲು ಬಯಸುವುದಿಲ್ಲ, ಆದರೆ ಅವರು ನಮ್ಮನ್ನು ಈ ಊರನ್ನು ತೊರೆಯುವಂತೆ ಒತ್ತಾಯಿಸಬಹುದು."

ಸಹರಿಯಾ ಸಮುದಾಯದ ಜನರನ್ನು ಕಾಡಿನಿಂದ ಸ್ಥಳಾಂತರಿಸಿ ಚೀತಾಗಳಿಗೆ ಮುಕ್ತ ಸ್ಥಳವನ್ನಾಗಿ ಮಾಡುವ ಯೋಜನೆಯನ್ನು ಸರಿಯಾದ ಪರಿಸರ ಸಂಶೋಧನೆಯಿಲ್ಲದೆ ಮಾಡಲಾಗುತ್ತಿದೆ ಎಂದು ಪ್ರೊ. ಕಾಬ್ರಾ ಹೇಳುತ್ತಾರೆ. "ಬುಡಕಟ್ಟು ಜನರನ್ನು ಹೊರಹಾಕುವುದು ಖಂಡಿತವಾಗಿಯೂ ಸುಲಭ ಏಕೆಂದರೆ, ಐತಿಹಾಸಿಕವಾಗಿ, ಅರಣ್ಯ ಇಲಾಖೆ ಮತ್ತು ಬುಡಕಟ್ಟು ಜನರ ನಡುವಿನ ಸಂಬಂಧವು ಯಜಮಾನಿಕೆಯ ರೂಪವನ್ನು ಹೊಂದಿದೆ - ಇಲಾಖೆಯು ಅವರ ಜೀವನದ ಅನೇಕ ಅಂಶಗಳನ್ನು ನಿಯಂತ್ರಿಸುತ್ತದೆ" ಎಂದು ಅವರು ಹೇಳುತ್ತಾರೆ.

ರಾಮ್ ಚರಣ್ ಆದಿವಾಸಿಯವರನ್ನು ಜೈಲಿಗೆ ತಳ್ಳಿದ ಇತ್ತೀಚಿನ ಅನುಭವವು ಇದನ್ನು ದೃಢೀಕರಿಸುತ್ತದೆ. ಅವರು 50 ವರ್ಷಗಳ ಹಿಂದೆ ಇಲ್ಲಿ ಜನಿಸಿದಾಗಿನಿಂದ ಕೂನೊದ ಕಾಡುಗಳೊಳಗೆ ಮತ್ತು ಹೊರಗೆ ಬದುಕುತ್ತಿದ್ದಾರೆ, ಮೊದಲು ಉರುವಲು ತರಲು ಹೋಗುವಾಗ ತನ್ನ ತಾಯಿಯ ಜೊತೆ ಹೋಗುತ್ತಿದ್ದರು. ಆದರೆ ಕಳೆದ 5-6 ವರ್ಷಗಳಲ್ಲಿ, ಅರಣ್ಯ ಇಲಾಖೆಯು ರಾಮ್ ಚರಣ್ ಮತ್ತು ಅವರ ಸಮುದಾಯಕ್ಕೆ ಈ ಸಂಪನ್ಮೂಲಗಳಿಗೆ ಪ್ರವೇಶವನ್ನು ಮೊಟಕುಗೊಳಿಸಿದೆ, ಅವರ ಆದಾಯವನ್ನು ಕನಿಷ್ಠ ಅರ್ಧದಷ್ಟು ಕಡಿಮೆ ಮಾಡಿದೆ. "ರೇಂಜರ್‌ಗಳು ನಮ್ಮ ಮೇಲೆ [ಕಳೆದ ಐದು ವರ್ಷಗಳಲ್ಲಿ] ಬೇಟೆಯಾಡಿದ್ದೇವೆಂದು ಸುಳ್ಳು ಪ್ರಕರಣಗಳನ್ನು ಹಾಕಿ ನಮ್ಮನ್ನು (ಅವರ ಮಗ ಮಹೇಶ್ ಮತ್ತು ಅವರನ್ನು) ಶಿಯೋಪುರದ ಜೈಲಿಗೆ ಎಸೆದಿದ್ದಾರೆ. ನಾವು ಹೇಗೆಲ್ಲಾ ಮಾಡಿ ಜಾಮೀನು ಮತ್ತು ದಂಡಕ್ಕಾಗಿ 10,000-15,000 ರೂಪಾಯಿಗಳನ್ನು ಸಂಗ್ರಹಿಸಬೇಕಾಯಿತು" ಎಂದು ಅವರು ಹೇಳುತ್ತಾರೆ.

Residents of Bagcha (from left): Mahesh Adivasi, Ram Charan Adivasi, Bachu Adivasi, Hari, and Hareth Adivasi. After relocation to Bamura village, 35 kilometres away, they will lose access to the forests and the produce they depend on
PHOTO • Priti David

ಬಾಗ್ಚಾದ ನಿವಾಸಿಗಳು (ಎಡದಿಂದ): ಮಹೇಶ್ ಆದಿವಾಸಿ, ರಾಮ್ ಚರಣ್ ಆದಿವಾಸಿ, ಬಚ್ಚು ಆದಿವಾಸಿ, ಹರಿ ಮತ್ತು ಹರೇತ್ ಆದಿವಾಸಿ. 35 ಕಿಲೋಮೀಟರ್ ದೂರದಲ್ಲಿರುವ ಬಮುರಾ ಗ್ರಾಮಕ್ಕೆ ಸ್ಥಳಾಂತರಗೊಂಡ ನಂತರ, ಅವರು ಕಾಡುಗಳು ಮತ್ತು ಅವರು ಅವಲಂಬಿಸಿರುವ ಅದರ ಉತ್ಪನ್ನಗಳಿಗೆ ಪ್ರವೇಶವನ್ನು ಕಳೆದುಕೊಳ್ಳುತ್ತಾರೆ

ಒಕ್ಕಲೆಬ್ಬಿಸುವಿಕೆಯ ಆತಂಕ ಸನ್ನಿಹಿತವಾಗತ್ತಿರುವುದರ ಹೊರತಾಗಿಯೂ ಮತ್ತು ಅರಣ್ಯ ಇಲಾಖೆಯೊಂದಿಗೆ ಬಹುತೇಕ ದೈನಂದಿನ ಹೋರಾಟದ ಹೊರತಾಗಿಯೂ, ಬಾಗ್ಚಾದ ಜನರು ಧೈರ್ಯವನ್ನು ಕಳೆದುಕೊಳ್ಳದಿರಲು ಪ್ರಯತ್ನಿಸುತ್ತಿದ್ದಾರೆ. "ನಾವು ಇನ್ನೂ ಸ್ಥಳಾಂತರಗೊಂಡಿಲ್ಲ. ಗ್ರಾಮಸಭೆಯಲ್ಲಿ ನಾವು ನಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಿದ್ದೇವೆ" ಎಂದು ಹರೇತ್ ಬಲವಾದ ಧ್ವನಿಯಲ್ಲಿ ಹೇಳುತ್ತಾರೆ, ಅವರು ನಿವಾಸಿಗಳ ಗುಂಪಿನಿಂದ ಸುತ್ತುವರೆಯಲ್ಪಟ್ಟಿದ್ದರು. 70 ವರ್ಷದ ಅವರು ಹೊಸದಾಗಿ ರಚಿಸಲಾದ ಗ್ರಾಮ ಸಭೆಯ ಸದಸ್ಯರಾಗಿದ್ದಾರೆ, ಇದನ್ನು ಸ್ಥಳಾಂತರಕ್ಕೆ ಚಾಲನೆ ನೀಡಲು ಮಾರ್ಚ್ 6, 2022ರಂದು ಅರಣ್ಯ ಇಲಾಖೆಯ ಆಣತಿಯಂತೆ ರಚಿಸಲಾಗಿದೆ ಎಂದು ಅವರು ಹೇಳುತ್ತಾರೆ. ಅರಣ್ಯ ಹಕ್ಕು ಕಾಯ್ದೆ, 2006ರ (ಸೆಕ್ಷನ್ 4(2)(ಇ)) ಅಡಿಯಲ್ಲಿ, ಗ್ರಾಮಸಭೆಯು ತನ್ನ ಸಮ್ಮತಿಯನ್ನು ಲಿಖಿತವಾಗಿ ನೀಡಿದಾಗ ಮಾತ್ರವೇ ಯಾವುದೇ ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.

ಗ್ರಾಮದ ಪಟೇಲರು ಎಂದು ಇತರರಿಂದ ಕರೆಯಲ್ಪಡುವ ಬಲ್ಲು ಆದಿವಾಸಿ ಹೇಳುತ್ತಾರೆ, "ನೀವು ಅರ್ಹ ಹೆಸರುಗಳ ಸಂಖ್ಯೆಯನ್ನು 178 ಎಂದು ಬರೆದಿದ್ದೀರಿ ಎಂದು ನಾವು ಅಧಿಕಾರಿಗಳಿಗೆ ತಿಳಿಸಿದ್ದೇವೆ, ಆದರೆ ನಾವು ಗ್ರಾಮದಲ್ಲಿ 265 ಜನರು ಪರಿಹಾರಕ್ಕೆ ಅರ್ಹರಾಗಿದ್ದೇವೆ. ಅವರು ನಮ್ಮ ಸಂಖ್ಯೆಗೆ ಒಪ್ಪಲಿಲ್ಲ, ಮತ್ತು ನೀವು ನಮ್ಮೆಲ್ಲರಿಗೂ ಪರಿಹಾರದ ಭರವಸೆ ನೀಡುವವರೆಗೆ ನಾವು ಕದಲುವುದಿಲ್ಲ ಎಂದು ನಾವು ಹೇಳಿದೆವು. 30 ದಿನಗಳಲ್ಲಿ ಅದನ್ನು ಮಾಡುವುದಾಗಿ ಅವರು ಹೇಳಿದರು.”

ಒಂದು ತಿಂಗಳ ನಂತರ, ಏಪ್ರಿಲ್ 7, 2022ರಂದು ಮತ್ತೆ ಸಭೆ ನಡೆಯಿತು. ಹಿಂದಿನ ಸಂಜೆ, ಇಡೀ ಹಳ್ಳಿಯನ್ನು ಮರುದಿನ ಹಾಜರಿರುವಂತೆ ಕೇಳಲಾಯಿತು. ಇದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾದಾಗ, ಅಧಿಕಾರಿಗಳು ಒಂದು ಕಾಗದಕ್ಕೆ ಸಹಿ ಮಾಡುವಂತೆ ಹೇಳಿದರು, ಅದರಲ್ಲಿ ಬಲವಂತದಿಂದಲ್ಲದೆ ಸ್ವಇಚ್ಛೆಯಿಂದ ಹೊರಹೋಗಲು ಒಪ್ಪಿಕೊಂಡಿರುವುದಾಗಿ ಬರೆಯಲಾಗಿತ್ತು. ಸ್ಥಳಾಂತರ ಪರಿಹಾರಕ್ಕೆ ಕೇವಲ 178 ಜನರು ಮಾತ್ರ ಅರ್ಹರು ಎಂದು ಪತ್ರದಲ್ಲಿ ಪಟ್ಟಿ ಮಾಡಲಾಗಿತ್ತು. ಕೊನೆಗೆ ಗ್ರಾಮಸಭೆಯು ಸಹಿ ಹಾಕಲು ನಿರಾಕರಿಸಿತು.

ಕೂನೊ ಅರಣ್ಯದಲ್ಲಿನ ಅವರ ನೆರೆಹೊರೆಯವರಿಗೆ ಇನ್ನೂ ಈಡೇರದ ಭರವಸೆಗಳ ನೋವಿನ ನೆನಪು ಸಹರಿಯಾ ಸಮದಾಯದವರ ಕಠಿಣ ನಿಲುವನ್ನು ಪುಷ್ಟೀಕರಿಸುತ್ತದೆ - ಅಂದಾಜು 1,650 ಕುಟುಂಬಗಳನ್ನು ಹೊಂದಿರುವ 28 ಗ್ರಾಮಗಳು 1999ರಲ್ಲಿ ಗುಜರಾತಿನಿಂದ ಬರಲಿರುವ ಸಿಂಹಗಳಿಗೆ ದಾರಿ ಮಾಡಿಕೊಡಲು ತಮ್ಮ ಮನೆಗಳಿಂದ ಆತುರಾತುರವಾಗಿ ಸ್ಥಳಾಂತರಿಸಲ್ಪಟ್ಟವು. "ಇಲ್ಲಿಯವರೆಗೆ ಸರ್ಕಾರವು ಆ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಅವರು ಈಗಲೂ ತಮಗ ಸಿಗಬೇಕಿರುವ ಪರಿಹಾರಕ್ಕಾಗಿ ಸರ್ಕಾರದ ಹಿಂದೆ ಓಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳಲು ನಾವು ಬಯಸುವುದಿಲ್ಲ" ಎಂದು ಬಲ್ಲು ಹೇಳುತ್ತಾರೆ.

ತಮಾಷೆಯೆಂದರೆ ಆ ಜನರನ್ನು ಒಕ್ಕಲೆಬ್ಬಿಸಿ 22 ವರ್ಷಗಳಾಗಿದ್ದರೂ ಸಿಂಹಗಳು ಇನ್ನೂ ಇಲ್ಲಿ ಕಾಣಿಸಿಕೊಂಡಿಲ್ಲ.

*****

Painted images of cheetahs greet the visitor at the entrance of Kuno National Park in Madhya Pradesh's Sheopur district
PHOTO • Priti David

ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕೂನೊ ರಾಷ್ಟ್ರೀಯ ಉದ್ಯಾನವನದ ಪ್ರವೇಶದ್ವಾರದಲ್ಲಿ ಚೀತಾಗಳ ಚಿತ್ರಗಳು ಸಂದರ್ಶಕರನ್ನು ಸ್ವಾಗತಿಸುತ್ತವೆ

ಭಾರತದಲ್ಲಿ ಅಳಿವಿನಂಚಿಗೆ ಬೇಟೆಯಾಡಲ್ಪಟ್ಟ, ಏಷ್ಯಾದ ಚೀತಾ ( ಅಸಿನೋನಿಕ್ಸ್ ಜುಬಾಟಸ್ ವೆನಾಟಿಕಸ್ ) - ಒಂದು ಕಂದು ಬಣ್ಣದ, ಚುಕ್ಕೆಗಳಿರುವ ಕಾಡು ಬೆಕ್ಕು - ಇತಿಹಾಸ ಪುಸ್ತಕಗಳು ಮತ್ತು ಶೂಟಿಂಗ್ ದಂತಕಥೆಗಳಲ್ಲಿ ಚಿರಪರಿಚಿತ ಪ್ರಾಣಿಯಾಗಿದೆ. 1947ರಲ್ಲಿ  ನಮ್ಮ ದೇಶದಲ್ಲಿದ್ದ ಕೊನೆಯ ಮೂರು ಏಷಿಯನ್ ಚೀತಾಗಳನ್ನು ಛತ್ತೀಸ್ ಗಢದಲ್ಲಿ ಅಷ್ಟೇನೂ ಪರಿಚಿತವಲ್ಲದ ರಾಜಪ್ರಭುತ್ವದ ರಾಜ್ಯವಾದ ಕೋರಿಯಾದ ಅಂದಿನ ಮಹಾರಾಜ ರಾಮಾನುಜ್ ಪ್ರತಾಪ್ ಸಿಂಗ್ ದೇವ್ ಗುಂಡಿಕ್ಕಿ ಕೊಂದರು.

ದೇವ್ ಅವರ ಈ ಕೃತ್ಯವು ಸಿಂಹ, ಹುಲಿ, ಚೀತಾ, ಸಾಮಾನ್ಯ ಚಿರತೆ, ಹಿಮ ಚಿರತೆ ಮತ್ತು ಮೋಡದ ಚಿರತೆ (clouded leopard) ಎಂಬ ಆರು ದೊಡ್ಡ ಬೆಕ್ಕುಗಳು ವಾಸಿಸುತ್ತಿದ್ದ ಭೂಮಿಯ ಮೇಲಿನ ಏಕೈಕ ಸ್ಥಳವೆಂಬ ಸ್ಥಾನದಿಂದ ಭಾರತವನ್ನು ಹೊರಹಾಕಿತು. ಈ ವೇಗದ ಮತ್ತು ಶಕ್ತಿಶಾಲಿಯಾದ ದೊಡ್ಡ ಬೆಕ್ಕುಗಳು, 'ಕಾಡಿನ ರಾಜರು', ನಮ್ಮ ಅನೇಕ ಅಧಿಕೃತ ಸರಕಾರಿ ಚಿತ್ರಗಳಲ್ಲಿ ಪ್ರಾಬಲ್ಯ ಸಾಧಿಸುತ್ತವೆ. ಅಧಿಕೃತ ಮುದ್ರೆಗಳು ಮತ್ತು ಕರೆನ್ಸಿ ನೋಟುಗಳಲ್ಲಿ ಬಳಸಲಾಗುವ ಅಶೋಕ ಚಕ್ರವು ಏಷ್ಯಾದ ಸಿಂಹದ ಚಿತ್ರವನ್ನು ಹೊಂದಿದೆ. ಚೀತಾಗಳು ಇಲ್ಲವಾಗಿದ್ದು ನಮ್ಮ ರಾಷ್ಟ್ರಾಭಿಮಾನಕ್ಕೆ ದೊಡ್ಡ ಹೊಡೆತವೆಂದು ಭಾವಿಸಿದ ಮುಂದಿನ ಸರಕಾರಗಳು ತಮ್ಮ ಕಾರ್ಯಸೂಚಿಯಲ್ಲಿ ಚೀತಾಗಳ ಸಂರಕ್ಷಣೆಯೂ ಸೇರಿರುವುದನ್ನು ಖಚಿತಪಡಿಸಿಕೊಂಡವು.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಈ ವರ್ಷದ ಜನವರಿಯಲ್ಲಿ  'ಭಾರತದಲ್ಲಿ ಚೀತಾ ಪರಿಚಯಿಸಲು ಕ್ರಿಯಾ ಯೋಜನೆ'  ಎಂಬ ಶೀರ್ಷಿಕೆಯ ದಾಖಲೆಯನ್ನು ಬಿಡುಗಡೆ ಮಾಡಿತು. 'ಚೀತಾ' ಎಂಬ ಪ್ರಾಣಿಯ ಹೆಸರೇ ಸಂಸ್ಕೃತದಿಂದ ಬಂದಿದೆ ಮತ್ತು ಇದರರ್ಥ 'ಮಚ್ಚೆಯುಳ್ಳ' ಎಂದು ಇದು ನಮಗೆ ತಿಳಿಸುತ್ತದೆ. ಅಲ್ಲದೆ, ಮಧ್ಯ ಭಾರತದ ಗುಹಾ ವರ್ಣಚಿತ್ರಗಳಲ್ಲಿ, ನವಶಿಲಾಯುಗದ ಹಿಂದಿನವುಗಳಲ್ಲಿ, ಚೀತಾವನ್ನು ಚಿತ್ರಿಸಲಾಗಿದೆ. 1970ರ ದಶಕದ ಹೊತ್ತಿಗೆ, ಭಾರತ ಸರ್ಕಾರವು ಇರಾನಿನ ಷಾ ಅವರೊಂದಿಗೆ ಮಾತುಕತೆ ನಡೆಸಿತು, ಭಾರತದಲ್ಲಿ ಚೀತಾಗಳ ಸಂತತಿಯನ್ನು ಮರುಸ್ಥಾಪಿಸಲು ಕೆಲವು ಏಷ್ಯಾದ ಚೀತಾಗಳನ್ನು ಕೊಡುವಂತೆ ಕೇಳಿಕೊಳ್ಳಲಾಯಿತು.

2009ರಲ್ಲಿ MoEFCC ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ವೈಲ್ಡ್‌ಲೈಫ್ ಟ್ರಸ್ಟ್ ಆಫ್ ಇಂಡಿಯಾವನ್ನು ದೇಶಕ್ಕೆ ಚಿರತೆಗಳನ್ನು ಪರಿಚಯಿಸಬಹುದೇ ಎಂದು ನಿರ್ಣಯಿಸಲು ಕೇಳಿದಾಗ ಈ ಸಮಸ್ಯೆಯು ಮತ್ತೊಮ್ಮೆ ಕೈಗೆತ್ತಿಕೊಂಡಿತು. ಉಳಿದಿರುವ ಏಕೈಕ ಏಷ್ಯಾಟಿಕ್ ಚಿರತೆಗಳು ಪ್ರಸ್ತುತ ಇರಾನ್‌ನಲ್ಲಿ ಕಂಡುಬರುತ್ತವೆ, ಆದರೆ ಅವುಗಳ ಸಂಖ್ಯೆಯು ಯಾವುದನ್ನೂ ಆಮದು ಮಾಡಿಕೊಳ್ಳಲು ತುಂಬಾ ಕಡಿಮೆಯಾಗಿವೆ. ಆದ್ದರಿಂದ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ಆಫ್ರಿಕನ್ ಚಿರತೆಗಳು ಒಂದೇ ರೀತಿ ಕಾಣುವುದರಿಂದ ಅವುಗಳನ್ನು ಪರಿಗಣಿಸಲಾಗಿದೆ, ಅವುಗಳ ವಿಕಸನದ ಇತಿಹಾಸಗಳು ಅವುಗಳನ್ನು ಸರಿಸುಮಾರು 70,000 ವರ್ಷಗಳ ಅಂತರದಲ್ಲಿ ಇರಿಸುತ್ತವೆ ಎಂಬುದನ್ನು ಇಲ್ಲಿ ಯಾರೂ ಗಣನೆಗೆ ತೆಗೆದುಕೊಂಡಿಲ್ಲ.

ಇದಕ್ಕಾಗಿ ಮಧ್ಯ ಭಾರತದಾದ್ಯಂತದ ಹತ್ತು ಅಭಯಾರಣ್ಯಗಳನ್ನು ಸಮೀಕ್ಷೆ ಮಾಡಲಾಯಿತು ಮತ್ತು ಸಿಂಹಗಳಿಗೆ ಆಶ್ರಯ ನೀಡಲು 2018ರಲ್ಲಿ 748 ಚದರ ಕಿ.ಮೀ ಕೂನೊ ಪಾಲ್ಪುರ್ ರಾಷ್ಟ್ರೀಯ ಉದ್ಯಾನವನವಾಗಿ ಮೇಲ್ದರ್ಜೆಗೇರಿಸಲಾದ 345 ಚದರ ಕಿ.ಮೀ ಕೂನೊ ಅಭಯಾರಣ್ಯವನ್ನು ಅತ್ಯಂತ ಸೂಕ್ತವೆಂದು ಪರಿಗಣಿಸಲಾಯಿತು. ಆದರೆ ಇಲ್ಲಿ ಒಂದೇ ಒಂದು ಅನಾನುಕೂಲತೆ ಇತ್ತು: ಉದ್ಯಾನವನದೊಳಗೆ ಬರುವ ಬಾಗ್ಚಾ ಗ್ರಾಮವನ್ನು ಸ್ಥಳಾಂತರಿಸಬೇಕಾಗಿತ್ತು. ಆಘಾತಕಾರಿ ವಿಷಯವೆಂದರೆ, 2022 ರ ಜನವರಿಯಲ್ಲಿ MoEFCC ಪತ್ರಿಕಾ ಪ್ರಕಟಣೆಯಲ್ಲಿ ಕೂನೊ ಅಭಯಾರಣ್ಯವನ್ನು "ಯಾವುದೇ ಮಾನವ ನೆಲೆಗಳಿಲ್ಲದ...” ಎಂದು ಹೇಳಿತ್ತು

Bagcha is a village of Sahariya Adivasis, listed as a Particularly Vulnerable Tribal Group in Madhya Pradesh. Most of them live in mud and brick houses
PHOTO • Priti David
Bagcha is a village of Sahariya Adivasis, listed as a Particularly Vulnerable Tribal Group in Madhya Pradesh. Most of them live in mud and brick houses
PHOTO • Priti David

ಬಾಗ್ಚಾ ಸಹರಿಯಾ ಆದಿವಾಸಿಗಳ ಒಂದು ಗ್ರಾಮವಾಗಿದ್ದು, ಇದನ್ನು ಮಧ್ಯಪ್ರದೇಶದ ವಿಶೇಷ ದುರ್ಬಲ ಬುಡಕಟ್ಟು ಗುಂಪು ಎಂದು ಪಟ್ಟಿ ಮಾಡಲಾಗಿದೆ. ಅವರಲ್ಲಿ ಹೆಚ್ಚಿನವರು ಮಣ್ಣು ಮತ್ತು ಇಟ್ಟಿಗೆಯಿಂದ ನಿರ್ಮಿಸಲಾದ ಮನೆಗಳಲ್ಲಿ ವಾಸಿಸುತ್ತಾರೆ

ಚೀತಾವನ್ನು ಪರಿಚಯಿಸುವುದರಿಂದ ಹುಲಿ, ಚಿರತೆ, ಸಿಂಹ ಮತ್ತು ಚೀತಾಗಳು ಹಿಂದಿನಂತೆ ಸಹಬಾಳ್ವೆ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಕ್ರಿಯಾ ಯೋಜನೆ ದಾಖಲೆ ಹೇಳುತ್ತದೆ. ಆ ಹೇಳಿಕೆಯಲ್ಲಿ ಎರಡು ಎದ್ದು ಕಾಣುವ ದೋಷಗಳಿವೆ. ಇದು ಆಫ್ರಿಕನ್ ಚೀತಾ, ಭಾರತಕ್ಕೆ ಸ್ಥಳೀಯವಾದ ಏಷ್ಯಾದ ಚೀತಾ ಅಲ್ಲ. 2013ರ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಗುಜರಾತ್ ಸರ್ಕಾರವು ಅವುಗಳನ್ನು ಕಳುಹಿಸದ ಕಾರಣ ಸಿಂಹಗಳು ಪ್ರಸ್ತುತ ಕೂನೊದಲ್ಲಿ ಜೀವಿಸುತ್ತಿಲ್ಲ.

"ಈಗ 22 ವರ್ಷಗಳಾಗಿವೆ ಮತ್ತು ಸಿಂಹಗಳು ಬಂದಿಲ್ಲ ಮತ್ತು ಭವಿಷ್ಯದಲ್ಲಿ ಅವು ಬರುವುದಿಲ್ಲ" ಎಂದು ರಘುನಾಥ್ ಆದಿವಾಸಿ ಹೇಳುತ್ತಾರೆ. ಬಾಗ್ಚಾದಲ್ಲಿ ದೀರ್ಘಕಾಲದಿಂದ ವಾಸವಾಗಿರುವ ರಘುನಾಥ್ ಈಗ ತನ್ನ ಮನೆಯನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿತರಾಗಿದ್ದಾರೆ, ಏಕೆಂದರೆ ಕೂನೊ ಸುತ್ತಮುತ್ತಲಿನ ಗ್ರಾಮಗಳನ್ನು ನಿರ್ಲಕ್ಷಿಸುವುದು, ಅದನ್ನು ಇಲ್ಲವೆಂಬಂತೆ ಪರಿಗಣಿಸುತ್ತಿರುವುದು ಇದೇ ಮೊದಲಲ್ಲ.

'ಕಾಡಿನ ರಾಜರು'ಗಳ ಸ್ಥಳಾಂತರವು ವನ್ಯಜೀವಿ ಸಂರಕ್ಷಕರ ಹೆಚ್ಚುತ್ತಿರುವ ಕಾಳಜಿಯಿಂದ ಪ್ರಚೋದಿಸಲ್ಪಟ್ಟಿತು, ಏಷ್ಯಾದ ಸಿಂಹಗಳಲ್ಲಿ ಕೊನೆಯ ಸಿಂಹಗಳು ( ಪ್ಯಾಂಥೆರಾ ಲಿಯೋ ಲಿಯೋ ) ಎಲ್ಲಾ ಒಂದೇ ಸ್ಥಳದಲ್ಲಿ ಕೇಂದ್ರೀಕೃತವಾಗಿವೆ - ಗುಜರಾತ್ ನ ಸೌರಾಷ್ಟ್ರ ಪರ್ಯಾಯ ದ್ವೀಪ. ಕೋರೆಹಲ್ಲುಗಳ ಡಿಸ್ಟೆಂಪರ್ ವೈರಸ್, ಕಾಡ್ಗಿಚ್ಚು ಅಥವಾ ಇತರ ಅಪಾಯಗಳ ಸಾಧ್ಯತೆಯಿಂದಾಗಿ ಕೆಲವನ್ನು ಬೇರೆಡೆಗೆ ಸ್ಥಳಾಂತರಿಸದೆ ಹೋದರೆ ಅವುಗಳು ನಶಿಸಿಹೋಗುವ ಸಾಧ್ಯತೆಯಿದೆ.

ಆದಿವಾಸಿಗಳು ಮಾತ್ರವಲ್ಲದೆ, ದಲಿತ ಮತ್ತು ಇತರ ಹಿಂದುಳಿದ ವರ್ಗದ ಅರಣ್ಯವಾಸಿಗಳು ಸಹ ಪ್ರಾಣಿಗಳೊಂದಿಗೆ ಸಹಬಾಳ್ವೆ ನಡೆಸಬಲ್ಲೆವು ಎಂದು ಅರಣ್ಯ ಇಲಾಖೆಗೆ ಭರವಸೆ ನೀಡಿದರು. "ನಾವು ಯೋಚಿಸಿದೆವು, ನಾವು ಸಿಂಹಗಳಿಗಾಗಿ ಏಕೆ ಇಲ್ಲಿಂದ ಹೋಗಬೇಕು? ನಮಗೆ ಪ್ರಾಣಿಗಳು ತಿಳಿದಿವೆ, ನಾವು ಅವುಗಳಿಗೆ ಹೆದರುವುದಿಲ್ಲ. ನಾವು ಕಾಡಿನಲ್ಲಿ ಬೆಳೆದಿದ್ದೇವೆ. ಹಮ್ ಭಿ ಶೇರ್ ಹೈ! [ನಾವೂ ಕೂಡ ಸಿಂಹಗಳೇ!]," ಎಂದು ಒಂದು ಕಾಲದಲ್ಲಿ ರಾಷ್ಟ್ರೀಯ ಉದ್ಯಾನದೊಳಗೆ ಇದ್ದ ಪೈರಾ ಗ್ರಾಮದ 70 ವರ್ಷದ ನಿವಾಸಿ ರಘುಲಾಲ್ ಜಾಟವ್ ಹೇಳುತ್ತಾರೆ. ಅವರು 50 ವರ್ಷದವರೆಗೆ ಅಲ್ಲಿಯೇ ವಾಸಿಸುತ್ತಿದ್ದರು, ಮತ್ತು ಎಂದಿಗೂ ಅಹಿತಕರವಾದಂತಹ ಘಟನೆಗಳು ಏನೂ ಸಂಭವಿಸಲಿಲ್ಲ ಎಂದು ಹೇಳುತ್ತಾರೆ.

ಚೀತಾದಿಂದ ಮಾನವರ ಮೇಲೆ ಯಾವುದೇ ದಾಳಿಯ ಐತಿಹಾಸಿಕ ಅಥವಾ ಸಮಕಾಲೀನ ದಾಖಲೆಗಳಿಲ್ಲ ಎಂದು ಭಾರತೀಯ ವನ್ಯಜೀವಿ ಸಂಸ್ಥೆಯ (ಡಬ್ಲ್ಯುಐಐ) ಡೀನ್ ಡಾ. ಯಡವೇಂದ್ರ ಝಾಲಾ ಹೇಳುತ್ತಾರೆ. "ಮಾನವರೊಂದಿಗಿನ ಸಂಘರ್ಷವು ಒಂದು ಪ್ರಮುಖ ಕಾಳಜಿಯಲ್ಲ. ಪ್ರಸ್ತಾವಿತ ಚೀತಾ ಮರುಪ್ರಸರಣದ ತಾಣಗಳ ಸುತ್ತಲೂ ವಾಸಿಸುವ ಜನರು ದೊಡ್ಡ ಮಾಂಸಾಹಾರಿ ಜೀವಿಗಳೊಂದಿಗೆ ವಾಸಿಸಲು ಮತ್ತು ಸಂಘರ್ಷವನ್ನು ಕಡಿಮೆ ಮಾಡಲು ಸೂಕ್ತ ಜೀವನಶೈಲಿ ಮತ್ತು ಪಶುಸಂಗೋಪನೆ ಅಭ್ಯಾಸಗಳನ್ನು ಹೊಂದಿದ್ದಾರೆ." ಉಳಿದಂತೆ ಏನಾದರೂ ಜಾನುವಾರುಗಳ ನಷ್ಟವಿದ್ದರೆ ಅದನ್ನು ಬಜೆಟ್ ಮೂಲಕ ನೋಡಿಕೊಳ್ಳಲು ಸಾಧ್ಯವಿದೆ.

The Asiatic cheetah was hunted into extinction in India in 1947, and so the African cheetah is being imported to 're-introduce' the animal
PHOTO • Priti David

ಏಷ್ಯಾಟಿಕ್ ಚೀತಾವನ್ನು 1947ರಲ್ಲಿ ಭಾರತದಲ್ಲಿ ಅಳಿವಿನಂಚಿನಲ್ಲಿರುವಾಗ ಕೊನೆಯ ಬಾರಿ ಬೇಟೆಯಾಡಲಾಯಿತು, ಆದ್ದರಿಂದ ಪ್ರಾಣಿಯನ್ನು 'ಮರು-ಪರಿಚಯಿಸಲು' ಆಫ್ರಿಕನ್ ಚೀತಾವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ

ಏಪ್ರಿಲ್ 7, 2022ರಂದು ಸಭೆ ನಡೆಯಿತು. ಹಿಂದಿನ ಸಂಜೆ, ಇಡೀ ಹಳ್ಳಿಯನ್ನು ಮರುದಿನ ಹಾಜರಿರುವಂತೆ ಕೇಳಲಾಯಿತು. ಅಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾದ ಸಭೆಯಲ್ಲಿ ಅಧಿಕಾರಿಗಳು ತಮ್ಮನ್ನು ಬಲವಂತಪಡಿಸುತ್ತಿಲ್ಲ ಮತ್ತು ಹೊರಹೋಗಲು ಸ್ವ-ಇಚ್ಛೆಯಿಂದ ಒಪ್ಪಿಕೊಂಡಿದ್ದಾರೆ ಎಂದು ಬರೆದಿರುವ ಕಾಗದಕ್ಕೆ ಸಹಿ ಮಾಡುವಂತೆ ಅವರಿಗೆ ಹೇಳಿದರು

ಸ್ಥಳೀಯ ಜನರು ಮತ್ತು ವಿಜ್ಞಾನಿಗಳು ಇಬ್ಬರನ್ನೂ ನಿರ್ಲಕ್ಷಿಸಿದ ಕೇಂದ್ರ ಸರ್ಕಾರವು ಜನವರಿ 2022ರ ಪತ್ರಿಕಾ ಪ್ರಕಟಣೆಯಲ್ಲಿ ಹೀಗೆ ಹೇಳಿದೆ: "ಈ ಪ್ರಾಜೆಕ್ಟ್ ಚೀತಾ ಸ್ವತಂತ್ರ ಭಾರತದ ಏಕೈಕ ಅಳಿದುಹೋದ ದೊಡ್ಡ ಸಸ್ತನಿ - ಚೀತಾವನ್ನು ಮರಳಿ ತರುವ ಗುರಿಯನ್ನು ಹೊಂದಿದೆ." ಇದಲ್ಲದೆ, ಈ ಕ್ರಮವು "ಪರಿಸರ ಪ್ರವಾಸೋದ್ಯಮ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ."

ವಿಪರ್ಯಾಸವೆಂದರೆ, ಈ ವರ್ಷ ಆಗಸ್ಟ್ 15ರೊಳಗೆ ಆಫ್ರಿಕನ್ ಚೀತಾಗಳು ಭಾರತಕ್ಕೆ ಬರುವ ನಿರೀಕ್ಷೆಯಿದೆ.

ಬಾಗ್ಚಾ ಗ್ರಾಮವು ಅವುಗಳ ಮೊದಲ ಬೇಟೆಯಾಗಲಿದೆ.

ಸ್ಥಳಾಂತರ ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ಜಿಲ್ಲಾ ಅರಣ್ಯಾಧಿಕಾರಿ ಪ್ರಕಾಶ್ ವರ್ಮಾ ಅವರು, ಚೀತಾ ಪರಿಚಯ ಯೋಜನೆಗೆ 38.7 ಕೋಟಿ ರೂ.ಗಳ ಬಜೆಟ್ ಮೊತ್ತದಿಂದ, 26.5 ಕೋಟಿ ರೂ.ಗಳನ್ನು ಸ್ಥಳಾಂತರ ವೆಚ್ಚಕ್ಕಾಗಿ ಬಳಸಲಾಗುವುದು ಎಂದು ಹೇಳುತ್ತಾರೆ. "ಚಿರತೆಗಳ ಆವರಣ, ನೀರು ಮತ್ತು ರಸ್ತೆಗಳನ್ನು ತೆರವುಗೊಳಿಸಲು ಮತ್ತು ಪ್ರಾಣಿಯನ್ನು ನಿರ್ವಹಿಸಲು ಅರಣ್ಯ ಅಧಿಕಾರಿಗಳಿಗೆ ತರಬೇತಿ ನೀಡಲು ಸುಮಾರು 6 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ" ಎಂದು ಅವರು ಹೇಳುತ್ತಾರೆ.

ಆಫ್ರಿಕಾದಿಂದ 20 ಚಿರತೆಗಳ ಮೊದಲ ರವಾನೆಗಾಗಿ ಕಾವಲು ಗೋಪುರಗಳೊಡನೆ 35 ಚದರ ಕಿಲೋಮೀಟರ್ ಆವರಣವನ್ನು ನಿರ್ಮಿಸಲಾಗುತ್ತಿದೆ, ಪ್ರತಿ ಎರಡು ಕಿಲೋಮೀಟರ್‌ಗಳಿಗೆ ಕಾವಲು ಗೋಪುರಗಳು ಮತ್ತು ಪ್ರತಿ 5 ಚದರ ಕಿಲೋಮೀಟರ್‌ಗಳಿಗೆ ಸಣ್ಣ ಆವರಣವನ್ನು ಹೊಂದಿದೆ. ಚಿರತೆಗಳು ಪ್ರವರ್ಧಮಾನಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತಿದೆ. ಮತ್ತು ಸರಿಯಾಗಿ: ಆಫ್ರಿಕನ್ ಚಿರತೆ (ಅಸಿನೋನಿಕ್ಸ್ ಜುಬಾಟಸ್) ಆಫ್ರಿಕಾದಲ್ಲಿನ ವನ್ಯಜೀವಿಗಳ ಕುರಿತ IUCN ವರದಿಯಲ್ಲಿ ಆಫ್ರಿಕನ್ ಚೀತಾಗಳು ( Acinonyx jubatus ) ದುರ್ಬಲವಾಗಿವೆ ಎಂದು ಉಲ್ಲೇಖಿಸಲಾಗಿದೆ. ಇತರ ವರದಿಗಳು ಅದರ ಸಂಖ್ಯೆಯಲ್ಲಿ ಗಂಭೀರ ಕುಸಿತವನ್ನು ದಾಖಲಿಸುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ, ಸ್ಥಳೀಯವಲ್ಲದ, ದುರ್ಬಲಗೊಂಡಿರುವ ಪ್ರಭೇದಗಳನ್ನು ಪರಕೀಯ ವಾತಾವರಣಕ್ಕೆ ತರಲು ಮತ್ತು ಸ್ಥಳೀಯ ಮತ್ತು ವಿಶೇಷವಾಗಿ ದುರ್ಬಲ ಪರಿಶಿಷ್ಟ ಪಂಗಡದ ಸಮುದಾಯಗಳನ್ನು ಎತ್ತಂಗಡಿ ಮಾಡಲು ಇದು ಸುಮಾರು 40 ಕೋಟಿ ರೂ.ಗಳ ವೆಚ್ಚವಾಗಿದೆ. ಈ ಯೋಜನೆ 'ಮಾನವ-ಪ್ರಾಣಿ ಸಂಘರ್ಷ' ಎಂಬ ಪದಕ್ಕೆ ಹೊಸ ಅರ್ಥವನ್ನು ನೀಡುತ್ತದೆ.

The enclosure built for the first batch of 20 cheetahs from Africa coming to Kuno in August this year.
PHOTO • Priti David
View of the area from a watchtower
PHOTO • Priti David

ಎಡಕ್ಕೆ: ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಆಫ್ರಿಕಾದಿಂದ ಕೂನೊಗೆ ಬರಲಿರುವ 20 ಚೀತಾಗಳ ಮೊದಲ ತಂಡಕ್ಕಾಗಿ ಆವರಣವನ್ನು ನಿರ್ಮಿಸಲಾಗಿದೆ. ಬಲ: ಕಾವಲಿನ ಬುರುಜು ಪ್ರದೇಶದಿಂದ ಪ್ರದೇಶದ ನೋಟ

"ಮಾನವರು ಮತ್ತು ಪ್ರಾಣಿಗಳು ಒಟ್ಟಿಗೆ ವಾಸಿಸಲು ಸಾಧ್ಯವಿಲ್ಲ ಎಂಬ ಸಂರಕ್ಷಣೆಯ ಈ ಬಹಿಷ್ಕಾರದ ವಿಧಾನವನ್ನು ಊಹಿಸಲಾಗಿದೆ, ಸಾಬೀತುಗೊಳಿಸಲಾಗಿಲ್ಲ" ಎಂದು ಪ್ರೊ. ಕಬ್ರಾ ಸೂಚಿಸುತ್ತಾರೆ. ಅವರು ಈ ವರ್ಷದ ಜನವರಿಯಲ್ಲಿ ಸಂರಕ್ಷಣೆಗಾಗಿ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಒಂದು ಪ್ರಕಟಿತ ಪ್ರಬಂಧವನ್ನು ಸಹ-ಬರೆದರು. 2006ರ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದರೂ ಮತ್ತು ಅರಣ್ಯವಾಸಿಗಳಿಗೆ ರಕ್ಷಣೆಗಳನ್ನು ನೀಡಿದ್ದರೂ, ಭಾರತದಾದ್ಯಂತ ಹುಲಿ ಮೀಸಲು ಪ್ರದೇಶಗಳಿಂದ 14,500 ಕುಟುಂಬಗಳು ಸ್ಥಳಾಂತರಗೊಂಡಿದ್ದು ಹೇಗೆ ಎಂದು ಅವರು ಕೇಳುತ್ತಾರೆ. ಈ ತ್ವರಿತ ಸ್ಥಳಾಂತರ ಸಂಭವಿಸಲು ಕಾರಣವೆಂದರೆ ದಾಳಗಳು ಯಾವಾಗಲೂ ಗ್ರಾಮಸ್ಥರನ್ನು 'ಸ್ವಇಚ್ಛೆಯಿಂದ' ಸ್ಥಳಾಂತರಿಸಲು ವಿವಿಧ ಕಾನೂನು ಮತ್ತು ಕಾರ್ಯವಿಧಾನದ ಕ್ರಮಗಳನ್ನು ಬಳಸುವ ಅಧಿಕಾರಿಗಳ ಪರವಾಗಿ ರಚನೆಯಾಗಿರುತ್ತವೆ ಎಂದು ಅವರು ವಾದಿಸುತ್ತಾರೆ.

ಬಾಗ್ಚಾದ ನಿವಾಸಿಗಳು ಊರಿನಿಂದ ಹೊರಹೋಗಲು 15 ಲಕ್ಷ ರೂ.ಗಳ ಆಮಿಷ ಒಡ್ಡಲಾಗಿದೆ ಎಂದು ಹೇಳುತ್ತಾರೆ. ಅವರು ಪೂರ್ತಿ ಹಣವನ್ನು ನಗದು ರೂಪದಲ್ಲಿ ತೆಗೆದುಕೊಳ್ಳಬಹುದು ಅಥವಾ ಮನೆಯನ್ನು ನಿರ್ಮಿಸಲು ಭೂಮಿ ಮತ್ತು ಹಣವನ್ನು ಪಡೆಯಬಹುದು. "ಒಂದು ಮನೆಯನ್ನು ನಿರ್ಮಿಸಲು 3.7 ಲಕ್ಷ ರೂಪಾಯಿಗಳು ಮತ್ತು ಉಳಿಕೆ ಹಣದಲ್ಲಿ ಕೃಷಿಗಾಗಿ ಭೂಮಿ ಒಂದು ಆಯ್ಕೆಯಾಗಿದೆ. ಆದರೆ ಅವರು ವಿದ್ಯುತ್ ಸಂಪರ್ಕಗಳು, ಪಕ್ಕಾ ರಸ್ತೆಗಳು, ಕೈಪಂಪುಗಳು, ಕೊಳವೆಬಾವಿಗಳು ಮತ್ತು ಇತ್ಯಾದಿಗಳಿಗಾಗಿ ಹಣವನ್ನು ಕಡಿತಗೊಳಿಸುತ್ತಿದ್ದಾರೆ" ಎಂದು ರಘುನಾಥ್ ಹೇಳುತ್ತಾರೆ.

ಬಾಗ್ಚಾದಿಂದ ಸುಮಾರು 46 ಕಿಲೋಮೀಟರ್ ದೂರದಲ್ಲಿರುವ ಕರಾಹಾಲ್ ತೆ ಹಸಿ ಲ್‌ನ ಗೊರಾಸ್ ಬಳಿಯ ಬಮುರಾ ಈ ಜನರ ಹೊಸ ಮನೆಗೆ ಸ್ಥಳವಾಗಿದೆ. "ನಮಗೆ ತೋರಿಸಲಾದ ಹೊಸ ಭೂಮಿ ನಮ್ಮ ಈಗಿನ ಭೂಮಿಗಿಂತ ಕಳಪೆ ಗುಣಮಟ್ಟದ್ದಾಗಿದೆ. ಅದರಲ್ಲಿ ಕೆಲವು ಸಂಪೂರ್ಣವಾಗಿ ಕಲ್ಲಿನಿಂದ ಕೂಡಿವೆ ಮತ್ತು ಕಡಿಮೆ ಉತ್ಪಾದಕತೆಯನ್ನು ಹೊಂದಿವೆ. ಭೂಮಿಯು ಉತ್ಪಾದಕತೆ ಗಳಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ, ಮತ್ತು ಮೊದಲ ಮೂರು ವರ್ಷಗಳವರೆಗೆ ಯಾರೂ ನಮ್ಮ ಬೆಂಬಲಕ್ಕಿರುವುದಿಲ್ಲ" ಎಂದು ಕಲ್ಲೋ ಹೇಳುತ್ತಾರೆ.

*****

ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ಆಫ್ರಿಕನ್ ಚೀತಾಗಳನ್ನು ಭಾರತಕ್ಕೆ ತರಲು ನೀಡಲಾಗಿರುವ  ಪ್ರಾಥಮಿಕ ಕಾರಣಗಳಲ್ಲಿ 'ಪರಿಸರ ವ್ಯವಸ್ಥೆಯನ್ನು ಉಳಿಸುವುದು' ಕೂಡಾ ಒಂದು. ಡಾ. ರವಿ ಚೆಲ್ಲಂ ಅವರಂತಹ ವನ್ಯಜೀವಿ ತಜ್ಞರನ್ನು ಕೆರಳಿಸುವ ಒಂದು ಅಂಶವೂ ಇದೇ ಆಗಿದೆ. "ಹುಲ್ಲುಗಾವಲು ಸಂರಕ್ಷಣೆಯ ಹೆಸರಿನಲ್ಲಿ ಚೀತಾಗಳನ್ನು ಭಾರತಕ್ಕೆ ತರಲಾಗುತ್ತಿದೆ. ಭಾರತವು ಈಗಾಗಲೇ ಈ ಹುಲ್ಲುಗಾವಲುಗಳಲ್ಲಿ ಕ್ಯಾರಕಲ್ (ಗೊಂಚಲು ಕೂದಲುಳ್ಳ, ಸಣ್ಣ ಬಾಲದ, ಚುಕ್ಕೆ ಚುಕ್ಕೆ ತುಪ್ಪುಳದ, ತೀಕ್ಷ್ಣ ದೃಷ್ಟಿಯ ಕಾಡುಬೆಕ್ಕು), ಕೃಷ್ಣಮೃಗ ಮತ್ತು ಹೆಬ್ಬಕ (great Indian bustard) ನಂತಹ ವರ್ಚಸ್ವಿ ಪ್ರಾಣಿಗಳು ಅಳಿವಿನಂಚಿನಲ್ಲಿರುವುದರಿಂದ ಇದು ಯಾವುದೇ ಅರ್ಥವನ್ನು ಹೊಂದಿಲ್ಲ. ಆಫ್ರಿಕಾದಿಂದ ಇನ್ನೇನೋ ತರುವ ಅಗತ್ಯವೇನಿದೆ?" ಎಂದು ವನ್ಯಜೀವಿ ಜೀವಶಾಸ್ತ್ರಜ್ಞ ಮತ್ತು ಮೆಟಾಸ್ಟ್ರಿಂಗ್ ಫೌಂಡೇಶನ್ನ ಸಿಇಒ ಪ್ರಶ್ನಿಸುತ್ತಾರೆ.

ಮೇಲಾಗಿ, ಸರ್ಕಾರವು ಹೊಂದಿರುವ 15 ವರ್ಷಗಳಲ್ಲಿ 36 ಚಿರತೆಗಳ ಗುರಿ ಕಾರ್ಯಸಾಧ್ಯವಲ್ಲ ಅಥವಾ ಸುಸ್ಥಿರವಲ್ಲ  ಮತ್ತು ಯಾವುದೇ ಆನುವಂಶಿಕ ಶಕ್ತಿಯನ್ನು ಹೊಂದಿರುವುದಿಲ್ಲ ಎಂದು ಅವರು ಹೇಳುತ್ತಾರೆ. "ಇದು ವೈಭವೀಕೃತ ಮತ್ತು ದುಬಾರಿ ಸಫಾರಿ ಉದ್ಯಾನವನವಲ್ಲದೆ ಬೇರೇನೂ ಆಗುವುದಿಲ್ಲ" ಎಂದು ಭಾರತದಲ್ಲಿ ಜೀವವೈವಿಧ್ಯ ಸಂಶೋಧನೆ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುವ ನೆಟ್‌ವರ್ಕ್‌ನ ಜೈವಿಕ ವೈವಿಧ್ಯ ಸಹಯೋಗದ ಸದಸ್ಯರಾಗಿರುವ ಚೆಲ್ಲಮ್ ಹೇಳುತ್ತಾರೆ.

Mangu Adivasi was among those displaced from Kuno 22 years ago for the lions from Gujarat, which never came
PHOTO • Priti David

22 ವರ್ಷಗಳ ಹಿಂದೆ ಗುಜರಾತಿನಿಂದ ಬರಲಿರುವ ಸಿಂಹಗಳಿಗಾಗಿ ಕೂನೊದಿಂದ ಸ್ಥಳಾಂತರಗೊಂಡವರಲ್ಲಿ ಮಂಗು ಆದಿವಾಸಿ ಕೂಡ ಒಬ್ಬರು, ಆದರೆ ಅದು ಕೊನೆಗೂ ಬರಲೇ ಇಲ್ಲ

ಕೂನೊ ಅರಣ್ಯದಲ್ಲಿನ ತಮ್ಮ ನೆರೆಹೊರೆಯವರಿಗೆ ಈಡೇರಿಸದ ಭರವಸೆಗಳ ನೋವಿನ ನೆನಪು ಸಹರಿಯಾ ಸಮುದಾಯದ ಕಠಿಣ ನಿಲುವನ್ನು ಪುಷ್ಟೀಕರಿಸುತ್ತದೆ - ಅಂದಾಜು 1,650 ಕುಟುಂಬಗಳನ್ನು ಹೊಂದಿರುವ 28 ಹಳ್ಳಿಗಳ ಜನರನ್ನು 1999ರಲ್ಲಿ ಗುಜರಾತಿನಿಂದ ಬರಲಿರುವ ಸಿಂಹಗಳಿಗೆ ದಾರಿ ಮಾಡಿಕೊಡಲು ಅವರ ಮನೆಗಳಿಂದ ಆತುರಾತುರವಾಗಿ ಸ್ಥಳಾಂತರಿಸಲಾಯಿತು

ಮಂಗು ಆದಿವಾಸಿ ಬಾರದ ಸಿಂಹಗಳಿಗಾಗಿ ಕೂನೊ ಅರಣ್ಯ ಬಿಟ್ಟು 22 ವರ್ಷಗಳಾಗಿವೆ. ಪರಿಹಾರವಾಗಿ ಪಡೆದ ಜಮೀನು ಕೂಡ ಗುಣಮಟ್ಟದಿಂದ ಕೂಡಿಲ್ಲ. ಅವರು ಚೆಲ್ಲಮ್‌ ಅವರ ಅಭಿಪ್ರಾಯವನ್ನು ಒಪ್ಪುತ್ತಾರೆ. “ಇದೊಂದು ತೋರಿಕೆಯ ಕೆಲಸ. ನಾವು ಕೂನೊದಲ್ಲಿ ಈ ರೀತಿಯದ್ದನ್ನು ತಂದಿದ್ದೇವೆ ಎಂದು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯವಾಗಿ ಪ್ರಚಾರ ಮಾಡಲು ಅವರು ಇದನ್ನು ಮಾಡುತ್ತಿದ್ದಾರೆ. ಚಿರತೆಗಳನ್ನು [ಕಾಡಿಗೆ] ಬಿಟ್ಟರೆ ಇರುವ ಕೆಲವು ಪ್ರಾಣಿಗಳು ಸಾಯುತ್ತವೆ ಮತ್ತು ಕೆಲವು ಅಲ್ಲಿ ನಿರ್ಮಿಸಲಾದ ಆವಾಸಸ್ಥಾನದಲ್ಲಿ ಸ್ಥಾಪಿಸಲಾದ ವಿದ್ಯುತ್ ಬೇಲಿಯಲ್ಲಿ ಸಿಲುಕಿ ಸಾಯುತ್ತವೆ. ನೋಡೋಣ. "

ವಿದೇಶಿ ಪ್ರಾಣಿಗಳಿಂದ ರೋಗಕಾರಕಗಳು ಹರಡುವ ಅಪಾಯವೂ ಇದೆ. ಅಸ್ತಿತ್ವದಲ್ಲಿರುವ ಪ್ರಾಣಿಗಳ ರೋಗಕಾರಕಗಳ ಸಂಪರ್ಕದಿಂದ ಆಕ್ರಮಣಕಾರಿ ಕೀಟಗಳಿಂದ ಉಂಟಾಗುವ ಅಪಾಯಗಳನ್ನು ಯೋಜನೆಯು ಸಂಪೂರ್ಣವಾಗಿ ಪರಿಗಣಿಸುವುದಿಲ್ಲ ಎಂದು ಡಾ.ಕಾರ್ತಿಕೇಯನ್ ವಾಸುದೇವನ್ ಹೇಳುತ್ತಾರೆ.

ಹೈದರಾಬಾದಿನ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲಾರ್ ಬಯಾಲಜಿಯಲ್ಲಿರುವ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಯ ಪ್ರಯೋಗಾಲಯದ ಮುಖ್ಯ ವಿಜ್ಞಾನಿ ಡಾ. ಕಾರ್ತಿಕೇಯನ್, "ಸ್ಥಳೀಯ ವನ್ಯಜೀವಿಗಳು ಪ್ರಿಯಾನ್ ಮತ್ತು ಇತರ ರೋಗಗಳಿಗೆ ಒಡ್ಡಿಕೊಳ್ಳುವುದು, ಕಾರ್ಯಸಾಧ್ಯವಾದ ಜನಸಂಖ್ಯೆಯನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳುವಲ್ಲಿ ವಿಫಲವಾಗುವುದು, ಮತ್ತು ಪರಿಸರದಲ್ಲಿರಬಹುದಾದ ರೋಗಕಾರಕಗಳು [ಇದು ಚೀತಾಗಳ ಮೇಲೆ ಪರಿಣಾಮ ಬೀರಬಹುದು] " ಎಂದು ಎಚ್ಚರಿಸುತ್ತಾರೆ.

ಕಳೆದ ವರ್ಷ ನಡೆಯಬೇಕಿದ್ದ ಚೀತಾ ಆಗಮನವನ್ನು ತಾಂತ್ರಿಕ ಕಾರಣದಿಂದಾಗಿ ತಡೆಹಿಡಿಯಲಾಗಿದೆ ಎಂಬ ವದಂತಿಗಳು ವ್ಯಾಪಕವಾಗಿವೆ. 1972ರ ಭಾರತದ ವನ್ಯಜೀವಿ (ಸಂರಕ್ಷಣಾ) ಕಾಯ್ದೆಯು ದಂತದ ಯಾವುದೇ ವ್ಯಾಪಾರವನ್ನು, ಆಮದುಗಳನ್ನು ಸಹ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸೆಕ್ಷನ್ 49B ಸ್ಪಷ್ಟವಾಗಿ ಹೇಳುತ್ತದೆ. ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯಗಳ ಅಂತರರಾಷ್ಟ್ರೀಯ ವ್ಯಾಪಾರದ ಒಡಂಬಡಿಕೆ (ಸಿಐಟಿಎಸ್) ಅಡಿಯಲ್ಲಿ ದಂತದ ಮೇಲಿನ ನಿಷೇಧವನ್ನು ತೆಗೆದುಹಾಕಲು ಭಾರತವು ಬೆಂಬಲಿಸದ ಹೊರತು ನಮೀಬಿಯಾ ಯಾವುದೇ ಚೀತಾಗಳನ್ನು ಉಡುಗೊರೆಯಾಗಿ ನೀಡಲು ಸಿದ್ಧವಿಲ್ಲ, ಇದು ಆ ಸರಕುಗಳಲ್ಲಿ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತದೆ. ಇದನ್ನು ದೃಢೀಕರಿಸಲು ಅಥವಾ ನಿರಾಕರಿಸಲು ಯಾವುದೇ ಸಾರ್ವಜನಿಕ ಅಧಿಕಾರಿ ಸಿದ್ಧರಿರಲಿಲ್ಲ.

ಈ ನಡುವೆ ಬಾಗ್ಚಾ ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡ ದೇಹದಂತಾಗಿದೆ. ತಾನು ಈ ಹಿಂದೆ ಇಟ್ಟಿದ್ದ ರಾಳವನ್ನು ಸಂಗ್ರಹಿಸಲು ಕಾಡಿಗೆ ಹೋಗುವಾಗ, ಹರೇತ್ ಆದಿವಾಸಿಯು ಹೇಳುವುದನ್ನು ನಿಲ್ಲಿಸುತ್ತಾನೆ, "ನಾವು ಸರ್ಕಾರಕ್ಕಿಂತ ದೊಡ್ಡವರಲ್ಲ. ಅವರು ನಮಗೆ ಏನು ಹೇಳುತ್ತಾರೋ ಅದನ್ನು ನಾವು ಮಾಡಬೇಕು. ನಾವು ಹೋಗಲು ಬಯಸುವುದಿಲ್ಲ, ಆದರೆ ಅವರು ನಮ್ಮನ್ನು ತೊರೆಯುವಂತೆ ಒತ್ತಾಯಿಸಬಹುದು."

ಈ ಲೇಖನವನ್ನು ಸಂಶೋಧಿಸುವಲ್ಲಿ ಮತ್ತು ಅನುವಾದದಲ್ಲಿ ಮಾಡಿದ ಅಮೂಲ್ಯ ಸಹಾಯಕ್ಕಾಗಿ ವರದಿಗಾರರು ಸೌರಭ್ ಚೌಧರಿ ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Priti David

ப்ரிதி டேவிட் பாரியின் நிர்வாக ஆசிரியர் ஆவார். பத்திரிகையாளரும் ஆசிரியருமான அவர் பாரியின் கல்விப் பகுதிக்கும் தலைமை வகிக்கிறார். கிராமப்புற பிரச்சினைகளை வகுப்பறைக்குள்ளும் பாடத்திட்டத்துக்குள்ளும் கொண்டு வர பள்ளிகள் மற்றும் கல்லூரிகளுடன் இயங்குகிறார். நம் காலத்தைய பிரச்சினைகளை ஆவணப்படுத்த இளையோருடனும் இயங்குகிறார்.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru