ಈ ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪಿ. ಸಾಯಿನಾಥ್ ಅವರು 1993 ರಿಂದ 2002 ರ ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಈ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ಸಂತೆಯಿಂದ ಸಂತೆಗೆ...
ಈ ಬಿದಿರುಗಳ ಉದ್ದವು ಇವುಗಳನ್ನು ಇಲ್ಲಿಗೆ ಹೊತ್ತು ತಂದ ಮಹಿಳೆಯರಿಗಿಂತ ಸುಮಾರು ಮೂರು ಪಟ್ಟು ಹೆಚ್ಚು. ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯ ಈ ವಾರದ ಮಾರುಕಟ್ಟೆ (ಸಂತೆ)ಗೆ, ಪ್ರತಿ ಮಹಿಳೆ ಒಂದು ಅಥವಾ ಅದಕ್ಕಿಂತಲೂ ಹೆಚ್ಚು ಬಿದಿರುಗಳನ್ನು ಹೊತ್ತು ತಂದಿದ್ದಾರೆ. ಇಲ್ಲಿಗೆ ತಲುಪಲು, ಕೆಲವು ಮಹಿಳೆಯರು ತಮ್ಮ ತಲೆ ಅಥವಾ ಭುಜದ ಮೇಲೆ ಬಿದಿರನ್ನು ಹಿಡಿದು 12 ಕಿಲೋಮೀಟರ್‌ಗಳಷ್ಟು ನಡೆಯಬೇಕು. ನಿಸ್ಸಂಶಯವಾಗಿ, ಇದನ್ನು ಹೊತ್ತು ತರುವ ಮೊದಲು, ಅವರು ಕಾಡಿನಿಂದ ಬಿದಿರು ಕತ್ತರಿಸಿ ತರುವಲ್ಲಿ ಗಂಟೆಗಳ ಕಾಲ ಕೆಲಸ ಮಾಡಿರಬೇಕು.
ಇಷ್ಟು ಕಷ್ಟಪಟ್ಟು, ಅದೃಷ್ಟವಿದ್ದರೆ, ದಿನದ ಅಂತ್ಯದ ವೇಳೆಗೆ ಅವರು 20 ರೂಪಾಯಿ ಗಳಿಸಬಹುದು. ಕೆಲವು ಮಹಿಳೆಯರು ಗೊಡ್ಡಾದಲ್ಲಿಯೇ ಮತ್ತೊಂದು ಸಂತೆಗೆ ಹೋಗುತ್ತಿದ್ದಾರೆ, ಅಲ್ಲಿ ಅವರಿಗೆ ಕಡಿಮೆ ಹಣ ಸಿಗುತ್ತದೆ. ತಲೆಯ ಮೇಲೆ ಎತ್ತರದ ಎಲೆ ಹೊರೆಗಳನ್ನು ತರುತ್ತಿರುವ ಮಹಿಳೆಯರು ಸಹ ಈ ಎಲೆಗಳನ್ನು ಸಂಗ್ರಹಿಸಿ, ಒಟ್ಟಿಗೆ ಜೋಡಿಸಿ ಹೊಲಿಗೆ ಹಾಕಿ ಮಾರುಕಟ್ಟೆಗೆ ತಂದಿದ್ದಾರೆ. ಒಮ್ಮೆ ಬಳಸಿದ ನಂತರ ಎಸೆಯುವ ಈ ಎಲೆಗಳಿಂದ ಅತ್ಯುತ್ತಮವಾದ 'ತಟ್ಟೆ'ಗಳನ್ನು ತಯಾರಿಸಲಾಗುತ್ತದೆ. ಟೀ ಅಂಗಡಿಗಳು, ಹೋಟೆಲ್‌ಗಳು ಮತ್ತು ಕ್ಯಾಂಟೀನ್‌ಗಳು ಅವುಗಳನ್ನು ನೂರಾರು ಸಂಖ್ಯೆಯಲ್ಲಿ ಖರೀದಿಸುತ್ತವೆ. ಬಹುಶಃ ಈ ಮಹಿಳೆಯರು ರೂ.15-20 ಗಳಿಸಬಹುದು. ಮುಂದಿನ ಬಾರಿ ನೀವು ಈ ತಟ್ಟೆಯಲ್ಲಿ ರೈಲ್ವೇ ನಿಲ್ದಾಣದಲ್ಲಿ ತಿನ್ನುವಾಗ ಈ ಮಹಿಳೆಯರ ಕೆಲಸ ನೆನಪಾಗಬಹುದು.
ಈ ಎಲ್ಲಾ ಮಹಿಳೆಯರು ದೂರದ ಪ್ರಯಾಣ ಮತ್ತು ಅನೇಕ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಬೇಕಿರುತ್ತದೆ. ಸಂತೆಯ ದಿನಗಳಲ್ಲಿ ಒತ್ತಡ ಸ್ವಲ್ಪ ಹೆಚ್ಚಾಗಿರುತ್ತದೆ. ಈ ಹಾತ್(ಸಂತೆ) ವಾರಕ್ಕೊಮ್ಮೆ ಮಾತ್ರ ನಡೆಯುತ್ತದೆ. ಆದ್ದರಿಂದ, ಈ ದಿನದಂದು ಸಣ್ಣ ಉತ್ಪಾದಕರು ಅಥವಾ ಮಾರಾಟಗಾರರು ಏನನ್ನು ಗಳಿಸಿದರೂ, ಅವರ ಕುಟುಂಬವು ಮುಂದಿನ ಏಳು ದಿನಗಳವರೆಗೆ ಅದರಲ್ಲಿಯೇ ಬದುಕಬೇಕು. ಅವರು ಇತರ ಒತ್ತಡಗಳನ್ನೂ ಎದುರಿಸಬೇಕಾಗುತ್ತದೆ. ಆಗಾಗ್ಗೆ, ಹಳ್ಳಿಯ ಅಂಚಿನಲ್ಲಿ, ಅವರು ಅಲ್ಪ ಹಣಕ್ಕೆ ಉತ್ಪನ್ನಗಳನ್ನು ನೀಡುವಂತೆ ಅವರನ್ನು ಬೆದರಿಸುವ ಲೇವಾದೇವಿದಾರರನ್ನು ಎದುರಿಸುತ್ತಾರೆ. ಕೆಲವರು ಅವರ ಮುಂದೆ ಸೋಲನ್ನೂ ಒಪ್ಪಿಕೊಳ್ಳುತ್ತಾರೆ.
ಇನ್ನೂ ಕೆಲವರು ತಮ್ಮ ಉತ್ಪನ್ನಗಳನ್ನು ಅವರು ಯಾರಿಂದ ಸಾಲ ಪಡೆದಿದ್ದಾರೋ ಅವರಿಗೆ ಮಾತ್ರ ಮಾರಾಟ ಮಾಡುವ ಒಪ್ಪಂದಕ್ಕೆ ಬದ್ಧರಾಗಿದ್ದಾರೆ. ಒಡಿಶಾದ ರಾಯಗಡದಲ್ಲಿ ಈ ಬುಡಕಟ್ಟು ಮಹಿಳೆ ಅಂಗಡಿಯೊಂದರ ಮುಂದೆ ಕುಳಿತು ಅಂಗಡಿಯ ಮಾಲೀಕರಿಗಾಗಿ ಕಾಯುತ್ತಿರುವಂತೆ ತೋರುತ್ತಿದೆ. ಬಹುಶಃ ಅವಳು ಹಲವಾರು ಗಂಟೆಗಳ ಕಾಲ ಇಲ್ಲಿ ಕುಳಿತಿದ್ದಾಳೆ. ಗ್ರಾಮದ ಹೊರಗೆ, ಅದೇ ಬುಡಕಟ್ಟು ಗುಂಪಿನ ಹೆಚ್ಚಿನ ಜನರು ಮಾರುಕಟ್ಟೆಯ ಕಡೆಗೆ ಹೋಗುತ್ತಿದ್ದಾರೆ. ಬಹುತೇಕರು ವ್ಯಾಪಾರಿಗಳ ಬಳಿ ಸಾಲ ಮಾಡಿರುವುದರಿಂದ ಹೆಚ್ಚು ಚೌಕಾಸಿ ಮಾಡಲೂ ಸಾಧ್ಯವಿರುವುದಿಲ್ಲ.
![](/media/images/02a-ORISSA-08-17-PS-Visible_Work_Invisible.max-1400x1120.jpg)
![](/media/images/02b-ORISSA-08-08-PS-Visible_Work_Invisible.max-1400x1120.jpg)
![](/media/images/02c-ORISSA-M24-10A_done-PS-Visible_Work_In.max-1400x1120_nQgBqzw.jpg)
ಎಲ್ಲೆಡೆ ಮಹಿಳಾ ವ್ಯಾಪಾರಿಗಳು ಬೆದರಿಕೆಗಳ ಜೊತೆಗೆ ಲೈಂಗಿಕ ಕಿರುಕುಳವನ್ನು ಸಹ ಎದುರಿಸುತ್ತಾರೆ. ಇಲ್ಲಿ ಈ ಕೃತ್ಯಗಳನ್ನು ಪೊಲೀಸರು ಮಾತ್ರವಲ್ಲ, ಅರಣ್ಯ ಸಿಬ್ಬಂದಿಯೂ ಮಾಡುತ್ತಾರೆ.
ಒಡಿಶಾದ ಮಲ್ಕಾನ್‌ಗಿರಿಯ ಈ ಬೋಂಡಾ ಮಹಿಳೆಯರ ಪಾಲಿಗೆ ಮಾರುಕಟ್ಟೆಯಲ್ಲಿ ಇಂದು ನಿರಾಶಾದಾಯಕ ದಿನವಾಗಿದೆ. ಆದರೆ ಅವರು ಚಾಣಾಕ್ಷತನದಿಂದ ಬಸ್ಸಿನ ಛಾವಣಿಯ ಮೇಲೆ ಈ ಭಾರವಾದ ಪೆಟ್ಟಿಗೆಯನ್ನು ಜೋಡಿಸುತ್ತಿದ್ದಾರೆ. ಹತ್ತಿರದ ಬಸ್ ನಿಲ್ದಾಣವು ಅವರ ಗ್ರಾಮದಿಂದ ಸಾಕಷ್ಟು ದೂರದಲ್ಲಿದೆ, ಆದ್ದರಿಂದ ಅವರು ಈ ಪೆಟ್ಟಿಗೆಯನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡೇ ಮನೆಯ ತನಕ ನಡೆಯಬೇಕಿರುತ್ತದೆ.
ಜಾರ್ಖಂಡ್‌ನ ಪಲಾಮುದಲ್ಲಿ, ಈ ಮಹಿಳೆ, ತನ್ನ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಹಾತ್‌ಗೆ ಹೋಗುವಾಗ, ತನ್ನ ತಲೆಯ ಮೇಲೆ ಬಿದಿರು ಮತ್ತು ಸ್ವಲ್ಪ ಊಟವನ್ನು ಹೊತ್ತುಕೊಂಡಿದ್ದಾಳೆ. ಬಟ್ಟೆಯಲ್ಲಿ ಕಟ್ಟಿಕೊಂಡಿದ್ದ ಇನ್ನೊಂದು ಮಗು ಕೂಡ ಜೊತೆಯಲ್ಲಿದೆ.
![](/media/images/3a-PU02-03_edt-PS-Visible_Work_Invisible_W.max-1400x1120.jpg)
![](/media/images/3b-G001-20-PS-Visible_Work_Invisible_Women.max-1400x1120_w8opgA8.jpg)
ದೇಶಾದ್ಯಂತ ಸಣ್ಣ ಉತ್ಪಾದಕರಾಗಿ ಅಥವಾ ಮಾರಾಟಗಾರರಾಗಿ ಕೆಲಸ ಮಾಡುವ ಕೋಟಿಗಟ್ಟಲೆ ಮಹಿಳೆಯರು ವೈಯಕ್ತಿಕವಾಗಿ ಗಳಿಸುವ ಆದಾಯವು ಚಿಕ್ಕದಾಗಿದೆ, ಏಕೆಂದರೆ ಅದು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಗಳಿಸಲ್ಪಟ್ಟಿದೆ. ಆದರೆ ಅವರ ಕುಟುಂಬಗಳ ಉಳಿವಿಗೆ ಇದು ಮುಖ್ಯವಾಗಿದೆ.
ಆಂಧ್ರಪ್ರದೇಶದ ವಿಜಯನಗರಂನಲ್ಲಿ, ಕೇವಲ ಹದಿಮೂರು ವರ್ಷ ವಯಸ್ಸಿನ ಈ ಹುಡುಗಿ, ಕೋಳಿ ಕತ್ತರಿಸಿ ಗ್ರಾಮೀಣ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾಳೆ. ಅವಳ ನೆರೆಹೊರೆಯಲ್ಲಿ ವಾಸಿಸುವ ಹುಡುಗಿ ಈ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾಳೆ. ಅವರ ಗೆಳೆಯರು, ಪುರುಷ ಸಂಬಂಧಿಕರಿಗೆ ಶಾಲೆಗೆ ಹೋಗಲು ಹೆಚ್ಚಿನ ಅವಕಾಶಗಳಿವೆ. ಈ ಹುಡುಗಿಯರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರ ಜೊತೆಗೆ, ಮನೆಯಲ್ಲಿ ಅನೇಕ 'ಮಹಿಳೆಯರ ಕೆಲಸ'ಗಳನ್ನು ಸಹ ಮಾಡಬೇಕಾಗುತ್ತದೆ.
![](/media/images/4a-AP017-14A-PS-Visible_Work_Invisible_Wom.max-1400x1120_Ilnzhwn.jpg)
![](/media/images/4b-AP017-27A-PS-Visible_Work_Invisible_Wom.max-1400x1120.jpg)
ಅನುವಾದ: ಶಂಕರ. ಎನ್. ಕೆಂಚನೂರು