ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಎಲ್ಲಾ ಚಿತ್ರಗಳನ್ನು ಪಿ. ಸಾಯಿನಾಥ್ ಅವರು 1993 ರಿಂದ 2002 ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.

ಮಣ್ಣು, ತಾಯಂದಿರು ಮತ್ತು ʼ ಕೆಲಸದ ಗಂಟೆಗಳು ʼ (man hours)

ಆಂಧ್ರಪ್ರದೇಶದ ವಿಜಯನಗರದಲ್ಲಿ ಭೂರಹಿತ ಕಾರ್ಮಿಕರೊಂದಿಗಿನ ಸಭೆಯನ್ನು ಬೆಳಗ್ಗೆ 7 ಗಂಟೆಗೆ ಸ್ವಲ್ಪ ಮೊದಲು ಎಂದು ನಿರ್ಧರಿಸಲಾಗಿತ್ತು. ದಿನವಿಡೀ ಅವರ ಕೆಲಸಗಳನ್ನು ತಿಳಿದುಕೊಳ್ಳುವ ಆಲೋಚನೆಯೊಂದಿಗೆ ನಾವು ಹಾಗೆ ಮಾಡಲು ನಿರ್ಧರಿಸಿದ್ದೆವು. ಆದರೂ ನಾವು ನಿಗದಿಪಡಿಸಿದ್ದ ಸಮಯ ತಡವಾಗಿತ್ತು. ನಾವು ಅಲ್ಲಿಗೆ ತಲುಪುವ ಹೊತ್ತಿಗೆ ಆ ಮಹಿಳೆಯರು ಅಂದಿನ ಮೂರು ಗಂಟೆಗಳ ಕೆಲಸವನ್ನು ಮುಗಿಸಿಯಾಗಿತ್ತು. ಅವರೆಲ್ಲರೂ ಅಲ್ಲಿನ ತಾಳೆಮರದ ತೋಪಿನಲ್ಲಿ ಅಗೆಯಲಾಗಿದ್ದ ಗುಂಡಿಯಲ್ಲಿನ ಮಣ್ಣು ತೆಗೆಯಲೆಂದು ಕೆಲಸದ ಸ್ಥಳದಲ್ಲಿ ಸೇರಿರುವ ತಮ್ಮ ಜೊತೆಗಾರರನ್ನು ಕೂಡಿಕೊಳ್ಳಲು ನಡೆದು ಹೋಗುತ್ತಿದ್ದರು.

ಈ ಮಹಿಳೆಯರಲ್ಲಿ ಅನೇಕರು ಈಗಾಗಲೇ ಅಡುಗೆ, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಮತ್ತು ಇತರ ಕೆಲವು ಮನೆಕೆಲಸಗಳನ್ನು ಮುಗಿಸಿ ಬಂದಿದ್ದರು. ಮಕ್ಕಳನ್ನು ಶಾಲೆಗೆ ಹೊರಡಿಸಿ ಬಂದಿದ್ದರು. ಕುಟುಂಬದ ಎಲ್ಲರಿಗೂ ತಿಂಡಿ ನೀಡಿ, ಎಂದಿನಂತೆ ಮಹಿಳೆಯರು ಕೊನೆಯದಾಗಿ ಊಟ ಮಾಡಿದ್ದರು. ಆದರೆ ಸರ್ಕಾರಿ ಉದ್ಯೋಗ ಖಾತ್ರಿ ಸೈಟ್‌ನಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ವೇತನ ನೀಡುತ್ತಿರುವುದು ಸ್ಪಷ್ಟವಾಗಿದೆ.

ಇಲ್ಲಿ ಕನಿಷ್ಠ ವೇತನ ಕಾಯ್ದೆಯನ್ನು ಪುರುಷರು ಮತ್ತು ಮಹಿಳೆಯರು ಇಬ್ಬರ ವಿಷಯದಲ್ಲೂ ಉಲ್ಲಂಘಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿರುವಂತೆ. ಆದರೂ, ಮಹಿಳಾ ಕಾರ್ಮಿಕರು ಪುರುಷರು ಪಡೆಯುವ ವೇತನದ ಅರ್ಧ ಅಥವಾ ಮೂರನೇ ಎರಡರಷ್ಟು ಪಡೆಯುತ್ತಾರೆ, ಇದು ಎಲ್ಲೆಡೆಯ ಕಥೆ.

ವೀಡಿಯೊ ನೋಡಿ: '7.30ಕ್ಕೆ ಕೆಲಸ ಪ್ರಾರಂಭಿಸಲು ಹೊರಬಂದ ಮಹಿಳೆಯರು ಈಗಾಗಲೇ ಮನೆಯಲ್ಲಿ ಮೂರು ಗಂಟೆಗಳ ಕಾಲ ಕೆಲಸ ಮಾಡಿ ಬಂದಿದ್ದರು'

ಮಹಿಳಾ ಕೃಷಿಕಾರ್ಮಿಕರ ಸಂಖ್ಯೆ ಹೆಚ್ಚುವುದರೊಂದಿಗೆ ಭೂಮಾಲಿಕರು ಅವರಿಗೆ ಕಡಿಮೆ ಕೂಲಿ ಕೊಡುವ ಮೂಲಕ ಲಾಭ ಪಡೆಯುತ್ತಿದ್ದಾರೆ. ಗುತ್ತಿಗೆದಾರರು ಮತ್ತು ಭೂಮಾಲೀಕರು ಮಹಿಳೆಯರಿಗೆ ಕಡಿಮೆ ಸಂಬಳ ನೀಡುತ್ತಾರೆ. ಏಕೆಂದು ವಿಚಾರಿಸಿದರೆ, ಅವರು ಸುಲಭವಾದ ಕೆಲಸಗಳನ್ನು ಮಾಡುತ್ತಾರೆ ಎಂದು ವಾದಿಸುತ್ತಾರೆ. ಆದರೆ ನಾಟಿ ಮಾಡುವುದು ಅಪಾಯಕಾರಿ ಮತ್ತು ಸಂಕೀರ್ಣ ಕೆಲಸವಾಗಿದೆ. ಹಾಗೆಯೇ ಕೊಯ್ಲು ಕೂಡಾ. ಇವೆರಡೂ ಕೆಲಸಗಳು ಸಂಗತಿಗಳು ಮಹಿಳೆಯರನ್ನು ಅನೇಕ ರೋಗಗಳಿಗೆ ಗುರಿಮಾಡುತ್ತವೆ.

ನಾಟಿ ಕೆಲಸವು ವಾಸ್ತವವಾಗಿ ಕೌಶಲ್ಯದ ಕೆಲಸವಾಗಿದೆ. ಸಣ್ಣ ಸಸ್ಯಗಳನ್ನು ಸಾಕಷ್ಟು ಆಳವಾಗಿ ನೆಡದಿದ್ದರೆ ಅಥವಾ ತಪ್ಪಾದ ದೂರದಲ್ಲಿ ನೆಟ್ಟರೆ ಅವು ಒಣಗಬಹುದು. ಹೊಲವನ್ನು ಸರಿಯಾಗಿ ಉಳುಮೆ ಮಾಡದಿದ್ದರೆ, ಅದರಲ್ಲಿ ಸಸ್ಯಗಳು ಬೆಳೆಯುವುದಿಲ್ಲ. ಹೆಚ್ಚಾಗಿ, ನಾಟಿ ಮಾಡುವಾಗ, ಪಾದದಿಂದ ಮೊಣಕಾಲಿನವರೆಗೆ ಆಳವಾದ ನೀರಿನಲ್ಲಿ ನಿಂತಿರಬೇಕಾಗುತ್ತದೆ. ಆದರೂ ಇದನ್ನು ಕೌಶಲ-ರಹಿತ ಕೆಲಸವೆಂದು ಪರಿಗಣಿಸಲಾಗಿದೆ ಮತ್ತು ಕಡಿಮೆ ವೇತನವನ್ನು ನೀಡಲಾಗುತ್ತದೆ. ಏಕೆಂದರೆ ಈ ಕೆಲಸ ಮಾಡುವವರು ಮಹಿಳೆಯರು.

ಮಹಿಳೆಯರಿಗೆ ಕಡಿಮೆ ವೇತನವನ್ನು ನೀಡುವುದರ ಕುರಿತು ಮತ್ತೊಂದು ವಾದವೆಂದರೆ ಅವರು ಪುರುಷರಷ್ಟು ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ ಮಹಿಳೆ ಕೊಯ್ಲು ಮಾಡಿದ ಭತ್ತದ ಪ್ರಮಾಣವು ಪುರುಷನಿಂದ ಕೊಯ್ಲು ಮಾಡಿದುದಕ್ಕಿಂತ ಕಡಿಮೆಯೆಂದು ತೋರಿಸಬಲ್ಲ ಯಾವುದೇ ಪುರಾವೆಗಳು ಲಭ್ಯವಿಲ್ಲ. ಪುರುಷರಂತೆಯೇ ದುಡಿದರೂ, ಮಹಿಳೆಯರಿಗೆ ಕಡಿಮೆ ವೇತನ ನೀಡಲಾಗುತ್ತದೆ.

ನಿಜವಾಗಿಯೂ ಮಹಿಳೆಯರು ಕಡಿಮೆ ದಕ್ಷತೆ ಹೊಂದಿದ್ದರೆ ಅಷ್ಟೊಂದು ಸಂಖ್ಯೆಯಲ್ಲಿ ಅವರನ್ನು ಭೂಮಾಲಿಕರು ನೇಮಿಸಿಕೊಳ್ಳುತ್ತಿದ್ದರೆ?

PHOTO • P. Sainath
PHOTO • P. Sainath
PHOTO • P. Sainath

1996ರಲ್ಲಿ, ಆಂಧ್ರ ಪ್ರದೇಶ ಸರ್ಕಾರವು ತೋಟಗಾರರು, ತಂಬಾಕು ಕೀಳುವವರು ಮತ್ತು ಹತ್ತಿ ಕೀಳುವವರಿಗೆ ಕನಿಷ್ಠ ವೇತನವನ್ನು ನಿಗದಿಪಡಿಸಿತು. ಈ ಕೂಲಿ ನಾಟಿ, ಕೊಯ್ಲು ಮುಂತಾದ ಕೆಲಸ ಮಾಡುವ ಕಾರ್ಮಿಕರಿಗಿಂತ ಹೆಚ್ಚಿತ್ತು. ಆದ್ದರಿಂದ, ಈ ತಾರತಮ್ಯವು ಸಾಮಾನ್ಯವಾಗಿ ಬಹಿರಂಗವಾಗಿ ಮತ್ತು 'ಅಧಿಕೃತವಾಗಿ' ಇರುತ್ತದೆ.

ವೇತನ ದರಗಳು ಉತ್ಪಾದಕತೆಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿಲ್ಲದಿರಬಹುದು. ಆದರೆ ಅವು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದ್ದ ಪೂರ್ವಾಗ್ರಹಗಳನ್ನು ಆಧರಿಸಿವೆ. ಇದು ತಾರತಮ್ಯದ ಹಳೆಯ ವಿಧಾನವಾಗಿದೆ. ಮತ್ತು ಇದನ್ನು ಸಾಮಾನ್ಯವೆಂದು ಒಪ್ಪಿಕೊಳ್ಳಲಾಗಿದೆ.

ಮಹಿಳೆಯರು ಹೊಲ ಮತ್ತು ಇತರ ಕೆಲಸದ ಸ್ಥಳಗಳಲ್ಲಿ ಪಡುವ ಶ್ರಮವು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಎಲ್ಲಾ ಕೆಲಸಗಳು ಅವರನ್ನು ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಮುಖ್ಯ ಜವಾಬ್ದಾರಿಯಿಂದ ಮುಕ್ತಗೊಳಿಸುವುದಿಲ್ಲ. ಈ ಬುಡಕಟ್ಟು ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಒರಿಸ್ಸಾದ ಮಲ್ಕಾನ್‌ಗಿರಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಕೆಳಭಾಗದ ಬಲ) ಕರೆತಂದಿದ್ದಾರೆ. ಇಲ್ಲಿಗೆ ತಲುಪಲು, ಅವರು ಹಲವಾರು ಕಿಲೋಮೀಟರ್‌ಗಳಷ್ಟು ತನ್ನ ಮಗನನ್ನು ಎತ್ತಿಕೊಂಡು ಗುಡ್ಡಗಾಡಿನ ರಸ್ತೆಗಳಲ್ಲಿ ನಡೆಯಬೇಕಾಗಿತ್ತು. ಅದೂ ಬೆಟ್ಟದ ಇಳಿಜಾರಿನಲ್ಲಿ ಗಂಟೆಗಟ್ಟಲೆ ದುಡಿದ ಬಳಿಕ.

PHOTO • P. Sainath
PHOTO • P. Sainath

ಅನುವಾದ: ಶಂಕರ. ಎನ್. ಕೆಂಚನೂರು

பி. சாய்நாத், பாரியின் நிறுவனர் ஆவார். பல்லாண்டுகளாக கிராமப்புற செய்தியாளராக இருக்கும் அவர், ’Everybody Loves a Good Drought' மற்றும் 'The Last Heroes: Foot Soldiers of Indian Freedom' ஆகிய புத்தகங்களை எழுதியிருக்கிறார்.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru