ಮಹಾರಾಷ್ಟ್ರ ಲೋಕಸೇವಾ ಆಯೋಗದ (ಎಂಪಿಎಸ್ಸಿ) ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದೇನೆ ಎಂದು ತಿಳಿದ ಕೆಲವೇ ಗಂಟೆಗಳಲ್ಲಿ ಸಂತೋಷ ಖಾಡೆ ತನ್ನ ಸ್ನೇಹಿತನೊಡನೆ ಬೀಡ್‌ನಿಂದ 180 ಕಿಲೋಮೀಟರ್‌ ದೂರದಲ್ಲಿರುವ ಸೋಲಾಪುರಕ್ಕೆ ಬೈಕಿನಲ್ಲಿ ಸಾಗಿದರು. ಅಲ್ಲಿ ಹೋದವರೇ ತನ್ನ ತಂದೆ ತಾಯಿ ವಾಸಿಸುತ್ತಿದ್ದ ಬಿದಿರು, ಹುಲ್ಲು ಮತ್ತು ಟಾರ್ಪಾಲಿನ್ ಶೀಟ್ ಬಳ ಕಟ್ಟಲಾಗಿದ್ದ ಕೋಪ್ ಎಂದು ಕರೆಯಲ್ಪಡುವ ಅವರ ತಾತ್ಕಾಲಿಕ ಮನೆಯನ್ನು ಕಿತ್ತೆಸೆದರು. ಇದು ಕಬ್ಬಿನ ಹಂಗಾಮಿನಲ್ಲಿ ಅವರ ಪೋಷಕರು ಆರು ತಿಂಗಳ ಕಾಲ ವಾಸಿಸುತ್ತಿದ್ದ ಮನೆಯಾಗಿತ್ತು.

"ನಾನು ನಾನು NT-D (ಅಲೆಮಾರಿ ಬುಡಕಟ್ಟುಗಳ ಉಪ-ವರ್ಗ) ನಲ್ಲಿ ಅಗ್ರಸ್ಥಾನ ಪಡೆದಿರುವ ಸಂತೋಷಕ್ಕಿಂತಲೂ ಹೆಚ್ಚು ಸಂತೋಷ ಕೊಟ್ಟ ವಿಷಯವೆಂದರೆ ಇನ್ನು ಮುಂದೆ ಅಪ್ಪ ಅಮ್ಮ ಕಬ್ಬಿನ ಗದ್ದೆಗಳಲ್ಲಿ ದುಡಿಯಬೇಕಿಲ್ಲ ಎನ್ನುವುದು" ಎಂದು ಖಾಡೆ ಹೇಳಿದರು. ಕುಟುಂಬದ 3 ಎಕರೆ ಮಳೆಯಾಶ್ರಿತ ಜಮೀನಿನ ಪಕ್ಕದಲ್ಲಿರುವ ತನ್ನ ಮನೆಯ ವಿಶಾಲವಾದ ವರಾಂಡಾದಲ್ಲಿ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತು ಅವರು ನಮ್ಮೊಡನೆ ಮಾತನಾಡುತ್ತಿದ್ದರು.

ಸುದ್ದಿಯನ್ನು ಕೇಳಿದಾಗ ಕಣ್ಣೀರು ಮತ್ತು ನಗು ಎರಡೂ ಒಟ್ಟಿಗೆ ಅವರನ್ನು ಸ್ವಾಗತಿಸಿದ್ದವು. ಖಾಡೆಯವರು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಬರಪೀಡಿತ ಪಟೋಡಾದಿಂದ ಸೋಲಾಪುರ ಜಿಲ್ಲೆಗೆ ವಾರ್ಷಿಕವಾಗಿ ಗುಳೇ ಹೋಗುವ ಪೋಷಕರ ಮಗ. ಸಾವರಗಾಂವ್‌ ಘಾಟಿನ ಇವರ ಕುಟುಂಬದಂತೆ ಅಲ್ಲಿನ ಶೇಕಡಾ 90 ರಷ್ಟು ಕುಟುಂಬಗಳು ವಾರ್ಷಿಕ ಸುಗ್ಗಿಗಾಗಿ ಪಶ್ಚಿಮ ಮಹಾರಾಷ್ಟ್ರ ಮತ್ತು ಕರ್ನಾಟಕದ ಕಬ್ಬು ಬೆಳೆಯುವ ಪ್ರದೇಶಗಳಿಗೆ ವಲಸೆ ಹೋಗುತ್ತವೆ ಎಂದು ಅವರು ಹೇಳಿದರು.

ವಂಜಾರಿ ಸಮುದಾಯದ ಸದಸ್ಯರಾಗಿರುವ ಖಾಡೆ ಅವರು 2021ರ ಎಂಪಿಎಸ್ಸಿ ಪರೀಕ್ಷೆಗಳಲ್ಲಿ ಪ್ರಭಾವಶಾಲಿ ಸಾಧನೆಯೊಂದಿಗೆ ಉತ್ತೀರ್ಣರಾಗಿದ್ದಾರೆ - ಅವರು ಸಾಮಾನ್ಯ ಪಟ್ಟಿಯಲ್ಲಿ ರಾಜ್ಯವ್ಯಾಪಿ 16ನೇ ಶ್ರೇಯಾಂಕ ಪಡೆದರು ಮತ್ತು ಎನ್‌ಟಿ-ಡಿ ವಿಭಾಗದಲ್ಲಿ ಅಗ್ರಸ್ಥಾನ ಪಡೆದರು.

"ಇದು ನನ್ನ ಹೆತ್ತವರ ಹಲವು ವರ್ಷಗಳ ಶ್ರಮ ಮತ್ತು ನನ್ನ ವರ್ಷಗಳ ಹೋರಾಟದ ಫಲಿತಾಂಶವಾಗಿದೆ. ಜೋ ಜಾನ್‌ವಾರ್ ಕಾ ಜೀನಾ ಹೋತಾ ಹೈ, ವಹೀ ಇನ್ಕಾ ಜೀನಾ ಹೋತಾ ಹೈ [ಅವರ ಬದುಕು ಪ್ರಾಣಿಗಳಂತೆಯೇ ಇರುತ್ತದೆ],” ಎಂದು ಅವರು ಕಬ್ಬಿನ ಕೊಯ್ಲು ಮಾಡುವ ಕಾರ್ಮಿಕರ ಬದುಕಿನ ಸ್ಥಿತಿಯನ್ನು ವಿವರಿಸಿದರು. "ನನ್ನ ಮೊದಲ ಗುರಿ ಅದನ್ನು ನಿಲ್ಲಿಸುವುದು, ಅವರು ಇನ್ನು ಮುಂದೆ ಕಬ್ಬಿನ ಕೊಯ್ಲಿಗೆ ವಲಸೆ ಹೋಗುವುದನ್ನು ತಡೆಯಬಲ್ಲಷ್ಟು ಸಂಪಾದೆಯಿರುವ ಉತ್ತಮ ಕೆಲಸವನ್ನು ಹುಡುಕುವುದಾಗಿತ್ತು."

Khade’s family’s animals live in an open shelter right next to the house
PHOTO • Kavitha Iyer

ಖಾಡೆ ಅವರ ಕುಟುಂಬದ ಜಾನುವಾರು ಗಳು ಮನೆಯ ಪಕ್ಕದಲ್ಲೇ ತೆರೆದ ಕೊಟ್ಟಿಗೆಯ ಲ್ಲಿ ವಾಸಿಸುತ್ತವೆ

2020 ರ ನೀತಿ ಆಯೋಗದ ವರದಿಯ ಪ್ರಕಾರ, ಭಾರತೀಯ ಸಕ್ಕರೆ ಉದ್ಯಮದ ವಾರ್ಷಿಕ ಹೊರಹರಿವು ಸುಮಾರು 80,000 ಕೋಟಿ ರೂ.ಗಳಾಗಿದ್ದು, ದೇಶಾದ್ಯಂತ 700 ಕ್ಕೂ ಹೆಚ್ಚು ಸ್ಥಾಪಿತ ಕಬ್ಬು ಅರೆಯುವ ಕಾರ್ಖಾನೆಗಳಿವೆ.

ಮಹಾರಾಷ್ಟ್ರ ಒಂದರಲ್ಲೇ ಸುಮಾರು 8 ಲಕ್ಷ ಕಬ್ಬು ಕಟಾವು ಕಾರ್ಮಿಕರಿದ್ದಾರೆ. ಹೆಚ್ಚಿನವರು ಮರಾಠಾವಾಡಾ ಪ್ರದೇಶಕ್ಕೆ, ವಿಶೇಷವಾಗಿ ಬೀಡ್ ಜಿಲ್ಲೆಗೆ ಸೇರಿದವರು. ಕಾರ್ಮಿಕರಿಗೆ ಸಾಂಪ್ರದಾಯಿಕವಾಗಿ ಒಂದು ದೊಡ್ಡ ಮೊತ್ತದ ಮುಂಗಡವನ್ನು ನೀಡಲಾಗುತ್ತದೆ, ಇದನ್ನು ಉಚಲ್ ಎಂದು ಕರೆಯಲಾಗುತ್ತದೆ (ಇದರ ಅಕ್ಷರಶಃ ಅನುವಾದ “ಎತ್ತಿಕೊಂಡು ಬರುವುದು”). 60,000-1,00,000 ರೂ.ಗಳ ವ್ಯಾಪ್ತಿಯಲ್ಲಿರುವ ಈ ಮೊತ್ತವನ್ನು ದಂಪತಿಗಳಿಗೆ ಆರು-ಏಳು ತಿಂಗಳ ಒಂದು ಹಂಗಾಮಿನ ಬಟವಾಡೆಯಾಗಿ ನೀಡಲಾಗುತ್ತದೆ.

ಈ ಕಾರ್ಮಿಕರ ಬದುಕು ಮತ್ತು ಕೆಲಸ ಎರಡೂ ಶೋಚನೀಯವಾಗಿವೆ. ಖಾಡೆಯವರ ತಾಯಿ ಕಬ್ಬು ಕಡಿಯುವ ಸಲುವಾಗಿ ಬೆಳಗಿನ ಮೂರು ಗಂಟೆಗೆ ಎದ್ದೇಳುತ್ತಾರೆ. ಅವರು ತಿನ್ನುವುದು ಬಹುತೇಕ ಹಳಸಲು ಆಹಾರವನ್ನು. ಶೌಚಾಲಯ ಸೌಲಭ್ಯ ಅಲ್ಲಿ ದೂರದ ಮಾತು. ಇನ್ನು ಕುಡಿಯುವ ನೀರಿಗಾಗಿ ಬಹಳ ದೂರದವರೆಗೆ ಪ್ರಯಾಣಿಸಬೇಕು. ಇದು ಒಂದೆರಡು ವರ್ಷಗಳ ಕತೆಯಲ್ಲ. ಅವರ ಬದುಕು ಇದ್ದಿದ್ದೇ ಹೀಗೆ. 2022ರಲ್ಲಿ ಅವರು ಹೋಗುತ್ತಿದ್ದ ಎತ್ತಿನಗಾಡಿಗೆ ಮರಳು ಸಾಗಣೆ ಟಿಪ್ಪರ್‌ ಡಿಕ್ಕಿ ಹೊಡೆದು ಗಾಡಿಯಿಂದ ಅವರು ಬಿದ್ದ ಕಾರಣ ಅವರ ಕಾಲು ಮುರಿದಿತ್ತು.

ಖಾಡೆ ತನ್ನ ಹೆತ್ತವರೊಂದಿಗೆ ಅನೇಕ ರಜಾದಿನಗಳನ್ನು ಕಬ್ಬು ಕಡಿಯುವುದು ಅಥವಾ ವಡಾ (ಎಲೆಗಳು) ಕಟ್ಟಲು ಸಹಾಯ ಮಾಡುವುದರಲ್ಲಿ ಕಳೆಯುತ್ತಿದ್ದರು. ಈ ವಡಾವನ್ನು ಎತ್ತು ಸಾಕಿರುವವರಿಗೆ ಮಾರುತ್ತಿದ್ದರು.

"ಹಲವು ಹುಡುಗರ ಕನಸು ಕ್ಲಾಸ್ 1 ಅಧಿಕಾರಿಯಾಗುವುದು, ಬೆಲೆಬಾಳುವ ಕಚೇರಿ, ಉತ್ತಮ ಸಂಬಳ, ಉತ್ತಮ ಕುರ್ಚಿ, ಲಾಲ್-ದಿವಾ (ಕೆಂಪು-ದೀಪ) ಹೊಂದಿರುವ ಕಾರು" ಎಂದು ಖಾಡೆ ಹೇಳಿದರು. “ನನಗೆ ಆ ಕನಸುಗಳಿರಲಿಲ್ಲ. ನನ್ನ ಕನಸು ಸೀಮಿತವಾಗಿತ್ತು: ನನ್ನ ಹೆತ್ತವರಿಗೆ ಮನುಷ್ಯರಂತೆ ಬದುಕಬಹುದಾದ ಜೀವನವನ್ನು ಕೊಡುವುದು."

2019 ರಲ್ಲಿ ಮಹಾರಾಷ್ಟ್ರ ಸರ್ಕಾರವು ಗೋಪಿನಾಥ್ ಮುಂಡೆ ಕಬ್ಬು ಕಟಾವು ಕಾರ್ಮಿಕರ ನಿಗಮವನ್ನು ಸ್ಥಾಪಿಸಿತು .  2023-24ನೇ ಹಣಕಾಸು ವರ್ಷದಲ್ಲಿ ನಿಗಮವು  ಕೈಗೊಳ್ಳಬೇಕಾದ  ಕಲ್ಯಾಣ ಚಟುವಟಿಕೆಗಳಿಗಾಗಿ 85 ಕೋಟಿ ರೂ.ಗಳನ್ನು ನಿಗದಿಪಡಿಸಲು ಸರ್ಕಾರ ಪ್ರಸ್ತಾಪ ಸಲ್ಲಿಸಿದೆ . ಆದಾಗ್ಯೂ, ಕಾರ್ಮಿಕರು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವುದು ಮುಂದುವರೆದಿದೆ.

*****

Santosh Khade and his mother, Saraswati, in the small farmland adjoining their home
PHOTO • Kavitha Iyer

ಸಂತೋಷ್ ಖಾಡೆ ಮತ್ತು ಅವರ ತಾಯಿ ಸರಸ್ವತಿ ತಮ್ಮ ಮನೆಯ ಪಕ್ಕದ ಸಣ್ಣ ಕೃಷಿಭೂಮಿಯಲ್ಲಿ

ಪ್ರಾಥಮಿಕ ಶಾಲೆಯಲ್ಲಿ, ಖಾಡೆ, ಅವರ ಇಬ್ಬರು ಸಹೋದರಿಯರು ಮತ್ತು ಸೋದರಸಂಬಂಧಿಗಳು ವರ್ಷದಲ್ಲಿ ಆರು ತಿಂಗಳು ಅಪ್ಪನ ಮನೆಯಲ್ಲಿ ಅಜ್ಜ ಅಜ್ಜಿ ಆರೈಕೆಯಲ್ಲಿ ಇರುತ್ತಿದ್ದರು. ಅವರು ಶಾಲೆಯಿಂದ ಹಿಂದಿರುಗಿದ ನಂತರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಸಂಜೆ ಓದುತ್ತಿದ್ದರು.

5 ನೇ ತರಗತಿಯಲ್ಲಿ, ಅವರ ಪೋಷಕರು, ತಮ್ಮ ಮಗನನ್ನು ತಲೆಮಾರುಗಳ ಕಠಿಣ ದುಡಿಮೆಯಿಂದ ಹೊರತರಲು ಉತ್ಸುಕರಾಗಿ, ಅಹ್ಮದ್‌ನಗರದ ಆಶ್ರಮ ಶಾಲೆಗೆ (ಅಲೆಮಾರಿ ಬುಡಕಟ್ಟು ಜನಾಂಗದವರಿಗೆ ರಾಜ್ಯ ಸರ್ಕಾರ ನಡೆಸುತ್ತಿರುವ ಉಚಿತ ವಸತಿ ಶಾಲೆ) ಸೇರಿಸಿದರು.

"ನಾವು ಬಡವರಾಗಿದ್ದೆವು, ಆದರೆ ನನ್ನ ಪೋಷಕರು ನನ್ನನ್ನು ಸ್ವಲ್ಪ ಮುದ್ದಿನಿಂದ ಬೆಳೆಸಿದರು. ಹೀಗಾಗಿ, ಅಹ್ಮದ್‌ನಗರದಲ್ಲಿ ನನಗೆ ಹೊಂದಿಕೊಳ್ಳಲು ಸಾಧ್ಯವಾಗದಿದ್ದಾಗ, ನನ್ನನ್ನು 6 ಮತ್ತು 7ನೇ ತರಗತಿಗಳಿಗಾಗಿ ಪಟೋಡಾ ಪಟ್ಟಣದ ಹಾಸ್ಟೆಲ್ಲಿಗೆ ಸ್ಥಳಾಂತರಿಸಲಾಯಿತು.

ಊರಿಗೆ ಹತ್ತಿರದ ಶಾಲೆಯಾದ ಕಾರಣ ಖಾಡೆ ಖಾಡೆ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಹೋಟೆಲ್ಲುಗಳಲ್ಲಿ ಸಣ್ಣಪುಟ್ಟ ಕೆಲಸ, ಸಣ್ಣ ಪ್ರಮಾಣದಲ್ಲಿ ಹತ್ತಿ ಮಾರುವಂತಹ ಕೆಲಸಗಳನ್ನು ಮಾಡತೊಡಗಿದರು. ಅವರ ಸಂಪಾದನೆಯು ಬ್ಯಾಗ್‌ಗಳು, ಪುಸ್ತಕಗಳು, ಜ್ಯಾಮಿತಿ ಉಪಕರಣಗಳು ಇತ್ಯಾದಿಯ ಖರೀದಿಗೆ ಬಳಕೆಯಾಗುತ್ತಿತ್ತು. ಅಪ್ಪ ಅಮ್ಮನ ಸಂಪಾದನೆಯಿಂದ ಇದೆಲ್ಲವನ್ನು ಖರೀದಿಸುವುದು ಕಷ್ಟವಿತ್ತು.

10 ನೇ ತರಗತಿಯ ಹೊತ್ತಿಗೆ, ಅವರು ರಾಜ್ಯ ಲೋಕಸೇವಾ ಆಯೋಗದ ಕೆಲಸಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದರು.

"ವಾಸ್ತವವಾಗಿ, ಇತರ ಯಾವುದೇ ವೃತ್ತಿಪರ ಶೈಕ್ಷಣಿಕ ಕೋರ್ಸ್ ಕೈಗೆಟುಕುತ್ತಿರಲಿಲ್ಲ - ನನ್ನ ಪೋಷಕರು ಆರು ತಿಂಗಳ ಕಾಲ ವಲಸೆ ಬಂದಾಗ 70,000-80,000 ರೂ.ಗಳನ್ನು ಗಳಿಸುತ್ತಿದ್ದರು, ಮತ್ತು ನಾನು ಸೇರಬಹುದಿದ್ದ ಯಾವುದೇ ಕೋರ್ಸಿಗೆ 1ರಿಂದ 1.5 ಲಕ್ಷ ರೂ.ಗಳವರೆಗೆ ವೆಚ್ಚವಾಗುತ್ತಿತ್ತು" ಎಂದು ಖಾಡೆ ಹೇಳಿದರು. "ಎಂಪಿಎಸ್ಸಿ ಪರೀಕ್ಷೆಗಳಿಗೆ ಕುಳಿತುಕೊಳ್ಳುವ ಆಯ್ಕೆಯೂ ಆರ್ಥಿಕವಾಗಿ ಸುಲಭವಿತ್ತು. ಇಲ್ಲಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ, ಪರೀಕ್ಷೆಗೆ ಕುಳಿತುಕೊಳ್ಳಲು ಯಾವುದೇ ವಿಶೇಷ ಕೋರ್ಸ್ ತೆಗೆದುಕೊಳ್ಳಬೇಕಾಗಿಲ್ಲ, ಲಂಚ ಪಾವತಿಸಬೇಕಾಗಿಲ್ಲ ಅಥವಾ ಯಾರದೇ ಶಿಫಾರಸನ್ನು ಪಡೆಯುವ ಅಗತ್ಯವಿಲ್ಲ. ಇದು ಅತ್ಯಂತ ಕಾರ್ಯಸಾಧ್ಯವಾದ ವೃತ್ತಿಜೀವನದ ಆಯ್ಕೆಯಾಗಿತ್ತು. ಫಕ್ತ್ಟ್ ಫಕ್ತ್ ಅಪ್ಲ್ಯಾ ಮೆಹ್ನಾತಿಚಾ ಜೊರಾವರ್ ಅಪಾನ್ ಪಾಸ್ ಹೌ ಶಕ್ತೋ [ಕಠಿಣ ಪರಿಶ್ರಮದ ಆಧಾರದ ಮೇಲೆ ಮಾತ್ರವೇ ಇಲ್ಲಿ ಯಶಸ್ವಿಯಾಗಬಹುದು.]

ತನ್ನ ಬ್ಯಾಚುಲರ್ ಪದವಿಗಾಗಿ, ಅವರು ಬೀಡ್ ನಗರಕ್ಕೆ ಸ್ಥಳಾಂತರಗೊಂಡರು ಮತ್ತು ಏಕಕಾಲದಲ್ಲಿ ಎಂಪಿಎಸ್ಸಿ ಪರೀಕ್ಷೆಗಳಿಗೆ ತಯಾರಿ ನಡೆಸಲು ನಿರ್ಧರಿಸಿದರು. "ನನಗೆ ಸಮಯವಿಲ್ಲ ಎಂದು ನಾನು ಭಾವಿಸಿದೆ, ನನ್ನ ಪದವಿಯ ವರ್ಷದಲ್ಲೇ ಎಂಪಿಎಸ್ಸಿ ಪರೀಕ್ಷೆಗಳನ್ನು ತೇರ್ಗಡೆಯಾಗಲು ನಾನು ಬಯಸಿದ್ದೆ" ಎಂದು ಅವರು ಹೇಳಿದರು.

Left: Behind the pucca home where Khade now lives with his parents and cousins  is the  brick structure where his family lived for most of his childhood.
PHOTO • Kavitha Iyer
Right: Santosh Khade in the room of his home where he spent most of the lockdown period preparing for the MPSC entrance exam
PHOTO • Kavitha Iyer

ಎಡ: ಖಾಡೆ ಈಗ ತನ್ನ ಪೋಷಕರು ಮತ್ತು ಸೋದರಸಂಬಂಧಿಗಳೊಂದಿಗೆ ವಾಸಿಸುತ್ತಿರುವ ಪಕ್ಕಾ ಮನೆಯ ಹಿಂದೆ ಅವರ ಕುಟುಂಬವು ಅವರ ಬಾಲ್ಯದ ಬಹುಪಾಲು ವಾಸಿಸುತ್ತಿದ್ದ ಇಟ್ಟಿಗೆಯ ಮನೆಯಿದೆ

ಬಲ: ಸಂತೋಷ್ ಖಾಡೆ ತಮ್ಮ ಮನೆಯ ಕೋಣೆಯಲ್ಲಿ ಲಾಕ್ಡೌನ್ ಅವಧಿಯ ಹೆಚ್ಚಿನ ಸಮಯವನ್ನು ಎಂಪಿಎಸ್ಸಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು

ಸಾವರಗಾಂವ್ ಘಾಟ್‌ನಲ್ಲಿರುವ ಅವರ ಹೊಸ ಮನೆಯ ಹಿಂದೆ ಇರುವ ಟಿನ್‌ ಶೀಟಿನ ಮಣ್ಣಿನ ಮನೆಯೊಂದರಲ್ಲಿ ಕುಟುಂಬ ಈ ಮೊದಲು ವಾಸಿಸುತ್ತಿತ್ತು. ಖಾಡೆ ಕಾಲೇಜಿಗೆ ಸೇರುತ್ತಿದ್ದಂತೆ, ಕುಟುಂಬವು ತಮ್ಮ ಪಕ್ಕಾ ಮನೆಯನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿತು. ಇದು ವಿದ್ಯಾಭ್ಯಾಸ ಮುಗಿಸಿ ನೌಕರಿ ಹುಡುಕುವ ತುರ್ತನ್ನು ಸೃಷ್ಟಿಸಿತು ಎನ್ನುತ್ತಾರೆ ಖಾಡೆ.

2019ರಲ್ಲಿ ತನ್ನ ಪದವಿಯನ್ನು ಪೂರ್ಣಗೊಳಿಸಿದ ನಂತರ, ಅವರು ತಮ್ಮ ದಿನಗಳನ್ನು ಗ್ರಂಥಾಲಯಗಳಲ್ಲಿ ಕಳೆಯಲು ಪ್ರಾರಂಭಿಸಿದರು, ಅವರು ಹೆಚ್ಚಾಗಿ ಪುಣೆಯಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಹಾಸ್ಟೆಲ್ಲಿನಲ್ಲಿ ವಾಸಿಸುತ್ತಿದ್ದರು. ಸ್ನೇಹಿತರು, ವಿಹಾರಗಳು ಮತ್ತು ಚಹಾ ವಿರಾಮಗಳನ್ನು ತಪ್ಪಿಸುವ ಯುವಕ ಎಂದು ಅವರು ಪ್ರಸಿದ್ಧರಾದರು.

"ಅಪುನ್ ಇಧರ್ ಟೈಂಪಾಸ್ ಕರ್ನೆ ನಹೀ ಆಯೇ ಹೈ [ನಾವು ಅಲ್ಲಿಗೆ ಸಮಯ ಕಳೆಯಲು ಹೋಗಿರಲಿಲ್ಲ]," ಎನ್ನುತ್ತಾರವರು.

ಪುಣೆಯ ಹಳೆಯ ವಸತಿ ಪ್ರದೇಶವಾದ ಕಸ್ಬಾ ಪೇಟೆಯಲ್ಲಿರುವ ಲೈಬ್ರರಿಗೆ ಹೋಗುವಾಗ ಅವರು ತಮ್ಮ ಫೋನನ್ನು ಕೋಣೆಯಲ್ಲೇ ಬಿಟ್ಟು ಹೋಗುತ್ತಿದ್ದರು. ಅಲ್ಲಿ ಅವರು ಮಧ್ಯರಾತ್ರಿ 1 ಗಂಟೆಯವರೆಗೆ ಓದುತ್ತಿದ್ದರು, ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಓದುವುದು ಮತ್ತು ಅವುಗಳನ್ನು ಪರಿಹರಿಸುವುದನ್ನು ಮಾಡುತ್ತಿದ್ದರು, ಜೊತೆಗೆ ಸಂದರ್ಶನ ವಿಭಾಗವನ್ನು ಸಂಶೋಧಿಸುವುದು, ಪ್ರಶ್ನೆ ಪತ್ರಿಕೆ ಹೊಂದಿಸುವವರು ಮತ್ತು ಸಂದರ್ಶಕರ ಮನಸ್ಥಿತಿಯನ್ನು ತಿಳಿಯಲು ಪ್ರಯತ್ನಿಸುತ್ತಿದ್ದರು.

ಸರಾಸರಿ ದಿನಕ್ಕೆ, ಅವರು 500-600 ಎಂಸಿಕ್ಯೂ (ಬಹು ಆಯ್ಕೆ ಪ್ರಶ್ನೆಗಳು) ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು.

ಏಪ್ರಿಲ್ 5, 2020ರಂದು ನಿಗದಿಪಡಿಸಲಾಗಿದ್ದ ಮೊದಲ ಲಿಖಿತ ಪರೀಕ್ಷೆಯು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಅನಿರ್ದಿಷ್ಟವಾಗಿ ಮುಂದಕ್ಕೆ ಹೋಯಿತು. "ನಾನು ಸಮಯದ ಲಾಭವನ್ನು ಪಡೆಯಲು ನಿರ್ಧರಿಸಿದೆ." ಹಾಗಾಗಿ ಸಾವರಗಾಂವ್ ಘಾಟ್‌ನಲ್ಲಿ, ಅವರು ತಮ್ಮ ಈಗ ಬಹುತೇಕ ಪೂರ್ಣಗೊಂಡಿರುವ ಪಕ್ಕಾ ಮನೆಯ ಒಂದು ಕೋಣೆಯನ್ನು ತನ್ನ ಓದಿನ ಕೋಣೆಯಾಗಿ ಪರಿವರ್ತಿಸಿದರು. "ನಾನು ರಾಣ್(ಗದ್ದೆ) ಗೆ ಹೋಗಿ ಅಲ್ಲಿ ಮಾವಿನ ಮರದ ಕೆಳಗೆ ಕುಳಿತು ಓದುತ್ತಿದ್ದೆ ಅಥವಾ ಮನೆಯ ತಾರಸಿಯ ಮೇಲೆ ಹೋಗಿ ಸಂಜೆಗಳಲ್ಲಿ ಓದುತ್ತಿದ್ದೆ."

ಅವರು ಅಂತಿಮವಾಗಿ 2021ರ ಜನವರಿಯಲ್ಲಿ ಎಮ್‌ಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯನ್ನು ತೆಗೆದುಕೊಂಡರು, ಮುಂದಿನ ಹಂತಕ್ಕೆ ಹೋಗಲು ಅಗತ್ಯವಿರುವ ಅಂಕಗಳಿಗಿಂತಲೂ 33 ಅಂಕಗಳನ್ನು ಹೆಚ್ಚು ಗಳಿಸಿದರು. ಆದಾಗ್ಯೂ, 'ಮೇನ್ಸ್' ಅಥವಾ ಮುಖ್ಯ ಪರೀಕ್ಷೆಯು ಈ ಬಾರಿ ಮತ್ತೆ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಿಂದ ವಿಳಂಬವಾಯಿತು.

ಈ ಸಮಯದಲ್ಲಿ ಖಾಡೆಯವರು ವೈಯಕ್ತಿಕವಾಗಿಯೂ ಹಿನ್ನಡೆ ಅನುಭವಿಸಿದರು. "ನನ್ನ 32 ವರ್ಷದ ಸೋದರಸಂಬಂಧಿ ಕೋವಿಡ್‌ ಬಂದು ನಿಧನರಾದರು. ಅವರು ಆಸ್ಪತ್ರೆಯಲ್ಲಿ, ನನ್ನ ಮುಂದೆಯೇ ನಿಧನರಾದರು. ನಾವು ನಮ್ಮ ಕೃಷಿಭೂಮಿಯಲ್ಲಿ ಅಂತಿಮ ವಿಧಿಗಳನ್ನು ನಡೆಸಿದೆವು" ಎಂದು ಅವರು ನೆನಪಿಸಿಕೊಂಡರು.

ನಂತರದ 15 ದಿನಗಳ ಪ್ರತ್ಯೇಕತೆಯ ಸಮಯದಲ್ಲಿ, ಹತಾಶೆಗೊಂಡ ಖಾಡೆ, ಏಕೈಕ ವಿದ್ಯಾವಂತ ಯುವಕನಾಗಿ, ಮನೆಯಲ್ಲಿಯೇ ಉಳಿಯುವುದು ತನ್ನ ಜವಾಬ್ದಾರಿ ಎಂದು ಭಾವಿಸಲು ಪ್ರಾರಂಭಿಸಿದರು. ಸಾಂಕ್ರಾಮಿಕ ಪಿಡುಗು ಜೀವನೋಪಾಯವನ್ನು ನಾಶಪಡಿಸಿತು ಮತ್ತು ಆದಾಯವನ್ನು ಹಾನಿಗೊಳಿಸಿತು. ಅವರು ತಮ್ಮ ಎಂಪಿಎಸ್ಸಿ ಪ್ರಯಾಣವನ್ನು ತೊರೆಯುವ ಆಲೋಚನೆಯೊಂದಿಗೆ ಆಟವಾಡಿದರು.

"ಆದರೆ ಕೊನೆಗೂ ನನ್ನೊಳಗೆ ಗಟ್ಟಿಯಾದ ಯೋಚನೆಯೆಂದರೆ ನಾನು ಈಗ ನನ್ನ ಪ್ರಯತ್ನವನ್ನು ಕೈಚೆಲ್ಲಿದರೆ, ಊರಿನ ಇತರ ಕಬ್ಬು ಕಾರ್ಮಿಕರ ಮಕ್ಕಳೂ ತಾವು ಏನನ್ನಾದರೂ ಸಾಧಿಸಬಹುದೆನ್ನುವ ಭರವಸೆಯನ್ನು ಕಳೆದುಕೊಂಡುಬಿಡುತ್ತಾರೆ. ಹೀಗಾಗಿ ನಾನು ಪ್ರಯತ್ನ ಬಿಡಬಾರದು ಎನ್ನುವುದು" ಎಂದು ಅವರು ಹೇಳಿದರು.

*****

Santosh Khade with one of the family’s four bullocks. As a boy, Khade learnt to tend to the animals while his parents worked
PHOTO • Kavitha Iyer

ಸಂತೋಷ್ ಖಾಡೆ ಕುಟುಂಬದ ನಾಲ್ಕು ಎತ್ತುಗಳ ಪೈಕಿ ಒಂದರ ಜೊತೆ. ಹುಡುಗನಾಗಿದ್ದಾಗ, ಖಾಡೆ ಪೋಷಕರು ಕೆಲಸ ಮಾಡುವಾಗ ಜಾನುವಾರುಗಳನ್ನು ನೋಡಿಕೊಳ್ಳುವುದನ್ನು ಕಲಿತಿದ್ದರು

ಡಿಸೆಂಬರ್ 2021ರಲ್ಲಿ ನಡೆದ ಮುಖ್ಯ ಪರೀಕ್ಷೆಯಲ್ಲಿ, ಖಾಡೆ ಸಂದರ್ಶನ ಸುತ್ತಿಗೆ ಅರ್ಹತೆ ಪಡೆದರು ಮತ್ತು 2022ರಲ್ಲಿ ಕಬ್ಬು ಕತ್ತರಿಸುವ ಕೆಲಸಕ್ಕೆ ಹೋಗಬೇಕಿಲ್ಲ ಎನ್ನುವ ಭರವಸೆ ಇತ್ತರು.

ಆದರೆ ಗಲಿಬಿಲಿ ಮತ್ತು ನಿರಾಶೆಯಲ್ಲಿದ್ದ ಅವರು ತಮ್ಮ ಮೊದಲ ಸಂದರ್ಶನವನ್ನು ಕೆಟ್ಟದಾಗಿ ನಿರ್ವಹಿಸಿದರು. "ಉತ್ತರ ಗೊತ್ತಿದ್ದರೂ ಗೊತ್ತಿಲ್ಲ ಎನ್ನುತ್ತಿದ್ದೆ." ಅವರು 0.75 ಅಂಕಗಳಿಂದ ಕಟ್ಆಫ್ ಹಂತ ತಲುಪಲು ವಿಫಲರಾದರು. ಆಗ 2022ರ ಮುಖ್ಯ ಪರೀಕ್ಷೆಗೆ 10 ದಿನಗಳಿಗಿಂತ ಕಡಿಮೆಯಿತ್ತು. “ಮೇನ್ ಸುನ್ ಹೋ ಗಯಾ [ನಾನು ನಿಶ್ಚೇಷ್ಟಿತನಾಗಿದ್ದೆ]. ನನ್ನ ಅಪ್ಪ ಅಮ್ಮ ಕಬ್ಬಿನ ಗದ್ದೆಯಲ್ಲಿದ್ದರು. ಹತಾಶೆಗೊಳಗಾದ ನಾನು ಬಾಪೂವಿಗೆ [ತಂದೆಗೆ] ಫೋನ್‌ ಮಾಡಿ ನನ್ನ ಮಾತನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಹೇಳಿದೆ."

ನಂತರ ನಡೆದ ಘಟನೆಯನ್ನು ವಿವರಿಸುವಾಗ ಖಾಡೆ ಭಾವುಕರಾದರು. ಪೋಲಿಯೊದಿಂದ ಅಂಗವಿಕಲರಾಗಿರುವ, ಅನಕ್ಷರಸ್ಥರಾದ ಮತ್ತು ಎಮ್‌ಪಿಎಸ್‌ಸಿ ಪರೀಕ್ಷೆಯ ಪ್ರಕ್ರಿಯೆ ಅಥವಾ ಅದರ ಸ್ಪರ್ಧಾತ್ಮಕ ಸ್ವಭಾವದ ಬಗ್ಗೆ ಯಾವುದೇ ಜ್ಞಾನವಿಲ್ಲದ ತಂದೆ ತನ್ನನ್ನು ಗದರಿಸಬಹುದೆಂದು ಅವರು ಭಾವಿಸಿದ್ದರು.

"ಆದರೆ ಅವರು ನನಗೆ ಬಯ್ಯಲಿಲ್ಲ, ಬದಲಿಗೆ, ʼ'ಭಾವ್ಡ್ಯಾ [ಅವರ ಪೋಷಕರು ಬಳಸುವ ಅಡ್ಡಹೆಸರು], ನಿನಗಾಗಿ ನಾನು ಇನ್ನೂ ಐದು ವರ್ಷಗಳವರೆಗೆ ಕಬ್ಬು ಕತ್ತರಿಸುವ ಕೆಲಸ ಮಾಡಬಲ್ಲೆʼ ಎಂದರು. ಯಾವುದೇ ಕಾರಣಕ್ಕೂ ಸರ್ಕಾರಿ ಕೆಲಸ ಪಡೆಯುವ ಪ್ರಯತ್ನ ನಿಲ್ಲಿಸದಂತೆ ಹೇಳಿದರು. ಇದರ ನಂತರ ನನಗೆ ಯಾವುದೇ ಉತ್ತೇಜನಕಾರಿ ಮಾತುಗಳ ಅಗತ್ಯ ಬೀಳಲಿಲ್ಲ."

ಪುಣೆಯಲ್ಲಿ ಖಾಡೆ ತನ್ನ ಫೋನ್ ಸ್ವಿಚ್ ಆಫ್ ಮಾಡಿ ಲೈಬ್ರರಿಗೆ ಹಿಂತಿರುಗಿದರು. ಅವರ ಮುಂದಿನ ಪ್ರಯತ್ನದಲ್ಲಿ, ಅವರ ಸ್ಕೋರ್ 700ರಲ್ಲಿ 417 ರಿಂದ 461ಕ್ಕೆ ಏರಿತು. ಈಗ ಅವರಿಗೆ ಸಂದರ್ಶನದ ಸುತ್ತಿನಲ್ಲಿ 100ಕ್ಕೆ 30-40 ಅಂಕಗಳು ಬೇಕಾಗಿದ್ದವು.

ಆಗಸ್ಟ್ 2022ಕ್ಕೆ ನಿಗದಿಪಡಿಸಲಾದ ಸಂದರ್ಶನವು ವಿಳಂಬವಾಗುತ್ತಿದ್ದಂತೆ, ಅವರ ಪೋಷಕರು ಮತ್ತೊಂದು ವರ್ಷದ ಉಚಲ್ ಸ್ವೀಕರಿಸಲು ನಿರ್ಧರಿಸಿದರು. "ನಾನು ಅಂದೇ ತೀರ್ಮಾನ ಮಾಡಿದೆ. ಮುಂದಿನ ಸಲ ಅವರನ್ನು ಭೇಟಿಯಾಗುವಾಗ ಏನಾದರೂ ಸಾಧಿಸಿರಲೇಬೇಕು ಎಂದು."

ಅವರು ಸಂದರ್ಶನ ಮುಗಿಸಿದ ದಿನ ಅದನ್ನು ಸಾಧಿಸಿದ್ದರು. ಅದು 2023ರ ಜನವರಿ ತಿಂಗಳು. ಅವರು ತನ್ನ ತಂದೆಗೆ ಫೋನ್‌ ಮಾಡಿ ನೀವು ಇನ್ನೆಂದೂ ಕೊಯ್ಟಾ (ಕುಡುಗೋಲು) ಹಿಡಿಯಬೇಕಿಲ್ಲ ಎಂದು ಹೇಳಿದರು. ಉಚಲ್‌ ಹಣವನ್ನು ಮರುಪಾವತಿಸಲು ಸಾಲ ಪಡೆದು, ಸೋಲಾಪುರಕ್ಕೆ ಹೊರಟರು. ಅಲ್ಲಿ ತನ್ನ ಹೆತ್ತವರ ಸಾಮಾನು ಸರಂಜಾಮುಗಳು ಮತ್ತು ಎತ್ತುಗಳನ್ನು ಪಿಕಪ್‌ ಗಾಡಿಯಲ್ಲಿ ತುಂಬಿಸಿ ಮನೆಗೆ ಕಳುಹಿಸಿದರು.

"ಅವರು ಕೆಲಸಕ್ಕೆ ಹೊರಟ ದಿನ ನನ್ನ ಪಾಲಿಗೆ ಕರಾಳ ದಿನವಾಗಿತ್ತು. ಅವರನ್ನು ಮನೆಗೆ ಕಳುಹಿಸಿದ ದಿನವು ನನ್ನ ಜೀವನದ ಅತ್ಯಂತ ಸಂತೋಷದ ದಿನವಾಗಿತ್ತು.”

ಅನುವಾದ: ಶಂಕರ. ಎನ್. ಕೆಂಚನೂರು

Kavitha Iyer

கவிதா ஐயர் 20 ஆண்டுகளாக பத்திரிகையாளராக இருந்து வருகிறார். ‘லேண்ட்ஸ்கேப்ஸ் ஆஃப் லாஸ்: தி ஸ்டோரி ஆஃப் ஆன் இந்திய வறட்சி’ (ஹார்பர்காலின்ஸ், 2021) என்ற புத்தகத்தை எழுதியவர்.

Other stories by Kavitha Iyer
Editor : Priti David

ப்ரிதி டேவிட் பாரியின் நிர்வாக ஆசிரியர் ஆவார். பத்திரிகையாளரும் ஆசிரியருமான அவர் பாரியின் கல்விப் பகுதிக்கும் தலைமை வகிக்கிறார். கிராமப்புற பிரச்சினைகளை வகுப்பறைக்குள்ளும் பாடத்திட்டத்துக்குள்ளும் கொண்டு வர பள்ளிகள் மற்றும் கல்லூரிகளுடன் இயங்குகிறார். நம் காலத்தைய பிரச்சினைகளை ஆவணப்படுத்த இளையோருடனும் இயங்குகிறார்.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru