ಸಧ್ಯದ ಪರಿಸ್ಥಿತಿಯಲ್ಲಿ ಯಾವುದೇ ‍ಕ್ಷಣದಲ್ಲಿ ಬೇಕಿದ್ದರೂ ಮೀನಾಳ ಮದುವೆ ನಡೆದುಹೋಗಿಬಿಡಬಹುದು. ಮೀನಾ ಅದಕ್ಕೆ ಕಾರಣವನ್ನು ವಿವರಿಸುತ್ತಾ “ಕೆಲವು ತಿಂಗಳುಗಳಿಂದ ನಾನು ಎಲ್ಲರಿಗೂ ಸಮಸ್ಯೆಯಾಗಿ ಪರಿಣಮಿಸಿದ್ದೇನೆ” ಎನ್ನುತ್ತಾಳೆ. ಮೀನಾಳ ತಂಗಿಯೂ ಅದಾದ ಕೆಲವೇ ದಿನಗಳಲ್ಲಿ “ಸಮಸ್ಯೆಯಾದಳು,” ಅವಳಿಗೂ ಸದ್ಯದಲ್ಲೇ ಮದುವೆ ಮಾಡಿಸಲಿದ್ದಾರೆ. ಆ ಸಮಸ್ಯೆಯೆಂದರೆ ಇಂತಹ ಹೆಣ್ಣುಮಕ್ಕಳು ವಯೋಸಹಜವಾಗಿ ಮುಟ್ಟಾಗಲು ಪ್ರಾರಂಭವಾಗುವುದು.

14 ವರ್ಷದ ಮೀನಾ ಮತ್ತು 13 ವರ್ಷದ ಸೋನು, ಹಗ್ಗದ ಮಂಚದ (ಚಾರ್ಪಾಯ್) ಮೇಲೆ ಕುಳಿತು ಮಾತನಾಡುತ್ತಿದ್ದರು.‌ ಅವರು ಮಾತನಾಡುವಾಗ ಒಬ್ಬರ ಮುಖವನ್ನೊಬ್ಬರು ನೋಡುತ್ತಿದ್ದರು. ಮೀನಾ ಹೆಚ್ಚಾಗಿ ನೆಲದ ಮೇಲಿದ್ದ ಮರಳಿನತ್ತಲೇ ನೋಡುತ್ತಿದ್ದಳು. ಅವಳು ತನ್ನಲ್ಲಾಗಿರುವ ಮುಟ್ಟಾಗವಂತಹ ದೈಹಿಕ ಬದಲಾವಣೆಗಳ ಕುರಿತು ಇನ್ನೊಬ್ಬರ ಮಾತನಾಡಲು ಒಂದಷ್ಟು ನಾಚುತ್ತಿದ್ದಳು. ಅವರ ಹಿಂದಿದ್ದ ಕೋಣೆಯಲ್ಲಿ ಸಣ್ಣ ಕುರಿಮರಿಯೊಂದನ್ನು ಗೂಟಕ್ಕೆ ಕಟ್ಟಲಾಗಿತ್ತು. ಉತ್ತರ ಪ್ರದೇಶದ ಕೊರಾನ್ ಬ್ಲಾಕಿನಲ್ಲಿರುವ ಬೈತಕ್ವಾ ಎನ್ನುವ ಈ ಹಳ್ಳಿಯ ಸುತ್ತಮುತ್ತ ಕಾಡುಪ್ರಾಣಿಗಳ ಭಯವಿರುವುದರಿಂದ ಅದನ್ನು ಹೊರಗೆ ಬಿಟ್ಟಿಲ್ಲ ಎಂದು ಅಲ್ಲಿದ್ದವರಲ್ಲಿ ಒಬ್ಬರು ಹೇಳಿದರು.

ಈ ಹೆಣ್ಣುಮಕ್ಕಳು ತಿಂಗಳ ಮುಟ್ಟೆಂದರೆ ಅದು ನಾಚಿಕೆಪಡುವಂತಹ ವಿಚಾರವೆಂದೂ ಅದರ ಕುರಿತು ಭಯವನ್ನೂ ಇಟ್ಟುಕೊಳ್ಳಬೇಕೆಂದು ಅವರು ತಮ್ಮ ಪೋಷಕರಿಂದ ಕಲಿತಿದ್ದಾರೆ. ಪ್ರಯಾಗ್ ರಾಜ್ (ಹಿಂದಿನ ಅಹಮದಾಬಾದ್) ಬಳಿಯಿರುವ ಈ ಹಳ್ಳಿಯಲ್ಲಿ ಸರಿಯಾದ ಭದ್ರತೆಯಿಲ್ಲದ ಕಾರಣ ಪೋಷಕರು ತಮ್ಮ ಹೆಣ್ಣು ಮಕ್ಕಳು ಎಲ್ಲಿ ಮದುವೆಗೂ ಮೊದಲೇ  ಗರ್ಭಿಣಿಯರಾಗಿಬಿಡುತ್ತಾರೋ ಎನ್ನುವ ಭಯಕ್ಕೆ ಸಣ್ಣ ಪ್ರಾಯದಲ್ಲೇ ಮದುವೆ ಮಾಡಿಸಿಬಿಡುತ್ತಾರೆ.

“ಬಸಿರಾಗಬಲ್ಲ ವಯಸ್ಸಾದ ನಂತರ ಹೆಣ್ಣುಮಕ್ಕಳನ್ನು ನಾವು ಹೇಗೆ ಮನೆಯಲ್ಲಿ ಸುರಕ್ಷಿತವಾಗಿರಿಸಿಕೊಳ್ಳುವುದು?” ಎಂದು ಕೇಳುತ್ತಾರೆ ಮೀನಾಳ 27 ವರ್ಷದ ತಾಯಿ ರಾಣಿ. ರಾಣಿಯವರಿಗೆ ಅವರು 15 ವರ್ಷದವರಿರುವಾಗಲೇ ಮದುವೆ ಮಾಡಿಸಲಾಗಿತ್ತು. ಸೋನುವಿನ ತಾಯಿ ಚಂಪಾ ಕೂಡಾ ಸುಮಾರು 27 ವರ್ಷದ ಆಸುಪಾಸಿನಲ್ಲಿದ್ದಾರೆ. ಅವರಿಗೆ ತಾನು 13 ವರ್ಷದವಳಿರುವಾಗಲೇ ಮದುವೆಯಾಗಿದ್ದು ಕೂಡಾ ನೆನಪಿದೆ. ಅಲ್ಲಿ ನೆರೆದಿದ್ದ ಆರು ಜನ ಹೆಂಗಸರೂ 13 ಅಥವಾ 14ನೇ ವಯಸ್ಸಿಗೆ ಮದುವೆಯಾಗುವುದು ವಾಡಿಕೆ. ಅದರಲ್ಲಿ ತಪ್ಪೇನಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. “ನಮ್ಮ ಊರು ಈಗಲೂ ಬೇರೊಂದು ಯುಗದಲ್ಲಿ ಬದುಕುತ್ತಿದೆ. ನಮ್ಮ ಕೈಯಲ್ಲಿ ಏನೂ ಇಲ್ಲ. ನಾವು ಏನೂ ಮಾಡಲು ಸಾಧ್ಯವಿಲ್ಲ,” ಎಂದು ರಾಣಿ ಹೇಳುತ್ತಾರೆ.

ದೇಶದ ಮಧ್ಯ ಮತ್ತು ಉತ್ತರ ಭಾಗದ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಿನ ಪ್ರಮಾಣದಲ್ಲಿವೆ. 2015ರಲ್ಲಿ ಐಸಿಆರ್‌ಡಬ್ಲ್ಯೂ (ಇಂಟರ್ನ್ಯಾಷನಲ್ ಸೆಂಟರ್ ಫಾರ್ ರಿಸರ್ಚ್ ಆನ್ ವುಮೆನ್) ಮತ್ತು ಯುನಿಸೆಫ್ ನಡೆಸಿದ ಜಂಟಿ ಜಿಲ್ಲಾ ಮಟ್ಟದ ಅಧ್ಯಯನದ ಪ್ರಕಾರ, "ರಾಜ್ಯದ ಮೂರನೇ ಎರಡರಷ್ಟು ಜಿಲ್ಲೆಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮಹಿಳೆಯರಿಗೆ ಕಾನೂನುಬದ್ಧ ವಯಸ್ಸಿಗಿಂತಲೂ ಮೊದಲೇ ಮದುವೆ ಮಾಡಿಸಲಾಗಿದೆ."

ಬಾಲ್ಯವಿವಾಹ ತಡೆ ಕಾಯಿದೆ, 2006ರ ಪ್ರಕಾರ 18 ವರ್ಷಕ್ಕಿಂತ ಕೆಳಗಿನ ಹೆಣ್ಣು ಮಕ್ಕಳಿಗೆ ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳಿಗೆ ಮದುವೆ ಮಾಡಿಸುವುದನ್ನು ನಿಷೇಧಿಸಲಾಗಿದೆ. ಹಾಗೆ ಮದುವೆ ಮಾಡಿಕೊಟ್ಟರೆ ಅಥವಾ ಅದಕ್ಕೆ ಸಹಾಯ ಮಾಡಿದರೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷದವರೆಗೆ ದಂಡ ವಿಧಿಸಬಹುದು.

PHOTO • Priti David

ಮೀನಾ ಮತ್ತು ಸೋನು ಮುಟ್ಟಾಗುವುದೆಂದರೆ ನಾಚಿಕೆಪಡುವಂತಹ ವಿಷಯವೆನ್ನುವುದನ್ನು ಈಗಷ್ಟೇ ಕಲಿತಿದ್ದಾರೆ

“ಇಲ್ಲಿ ಕಾನೂನುಬಾಹಿರವಾದ ವಿವಾಹದ ವಿಷಯದಲ್ಲಿ ಸಿಕ್ಕಿಬೀಳುವ ಪ್ರಶ್ನೆಯೇ ಹುಟ್ಟುವುದಿಲ್ಲ” ಎನ್ನುತ್ತಾರೆ 47 ವರ್ಷದ ಅಂಗನವಾಡಿ ಕಾರ್ಯಕರ್ತೆಯಾದ ನಿರ್ಮಲಾ ದೇವಿ. “ಇಲ್ಲಿ ಮಕ್ಕಳಿಗೆ ಜನನ ಪ್ರಮಾಣ ಪತ್ರವೇ ಇರೋದಿಲ್ಲ ಸಾಕ್ಷ್ಯಕ್ಕೆ ವಯಸ್ಸಿನ ಆಧಾರವಾಗಿ ಏನನ್ನು ಬಳಸುತ್ತೀರಿ?” ಅವರು ಹೇಳುತ್ತಿರುವುದು ಸರಿಯಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯ (2015-16) ಪ್ರಕಾರ ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಶೇ.42ರಷ್ಟು ಜನನಗಳು ನೋಂದಣಿಯಾಗಿಲ್ಲ . ಪ್ರಯಾಗರಾಜ್ ಜಿಲ್ಲೆಯಲ್ಲಿ ಈ ಪ್ರಮಾಣವು 57%ದಷ್ಟಿದೆ.

“ಜನರು ಆಸ್ಪತ್ರೆಗಳಿಗೆ ಹೋಗುವುದಿಲ್ಲ” ಎಂದು ಅವರು ಮುಂದುವರೆದು ಹೇಳುತ್ತಾರೆ. "ಈ ಮೊದಲು, ನಾವು ಕೇವಲ ಫೋನ್ ಮಾಡಿದರೆ 30 ಕಿಲೋಮೀಟರ್ ದೂರದಲ್ಲಿರುವ ಕೊರಾನ್ ಸಮುದಾಯ ಆರೋಗ್ಯ ಕೇಂದ್ರದಿಂದ (ಸಿಎಚ್ ಸಿ) ಆಂಬ್ಯುಲೆನ್ಸ್ ಬರುತ್ತಿತ್ತು. ಆದರೆ ಅದಕ್ಕೆ ಈಗ ನಾವು 108 ಎನ್ನುವ ಮೊಬೈಲ್ ಅಪ್ಲಿಕೇಶನ್ ಬಳಸಬೇಕಾಗಿದೆ - ಇದಕ್ಕೆ 4ಜಿ ಸಂಪರ್ಕದ ಅಗತ್ಯವಿದೆ. ಆದರೆ ಇಲ್ಲಿ ಯಾವುದೇ ನೆಟ್ ವರ್ಕ್ ಸಿಗುವುದಿಲ್ಲ. ಈ ಕಾರಣದಿಂದಾಗಿ ಜನರು ಹೆರಿಗೆಗಾಗಿ ಸಿಎಚ್‌ಸಿಗೆ ಹೋಗಲು ಸಾಧ್ಯವಾಗುತ್ತಿಲ್ಲ" ಎಂದು ಅವರು ವಿವರಿಸುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಫೋನ್‌ ಕಾಲ್‌ ಬದಲು ಅಪ್ಲಿಕೇಷನ್‌ ಬಳಸುವಂತೆ ಮಾಡಿದ್ದು ಇಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಡಲು ಕಾರಣವಾಗಿದೆ.

ಪ್ರತಿ ವರ್ಷ ಸೋನು ಮತ್ತು ಮೀನಾರಂತಹ 1.5 ಮಿಲಿಯನ್ ಅಪ್ರಾಪ್ತ ಹೆಣ್ಣುಮಕ್ಕಳು ಮದುವೆಯಾಗುವ ದೇಶದಲ್ಲಿ, ಅಂತಹ ಮದುವೆಗಳನ್ನು ಏರ್ಪಡಿಸುವವರಿಗೆ ಯಾವುದೇ ಭಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಎನ್‌ಎಫ್‌ಎಚ್‌ಎಸ್-4 ಪ್ರಕಾರ, ಉತ್ತರ ಪ್ರದೇಶದ ಪ್ರತಿ ಐದು ಮಹಿಳೆಯರಲ್ಲಿ ಒಬ್ಬರಿಗೆ 18 ವರ್ಷಕ್ಕಿಂತ ಮೊದಲು ಮದುವೆಯಾಗಿರುತ್ತದೆ.

"ಭಗಾ ದೇತೆ ಹೈ (ಓಡಿಸಿಬಿಡುತ್ತಾರೆ)", ಎಂದು 30 ವರ್ಷದ ಸುನೀತಾ ದೇವಿ ಪಟೇಲ್ ಹೇಳಿದರು. ಅವರು ಬೈತಕ್ವಾ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ) ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಾರೆ. “ಮಕ್ಕಳು ಪ್ರಬುದ್ಧ ವಯಸ್ಕರಾಗುವವರೆಗೆ ಕಾಯಿರಿ ಎಂದು ನಾನು ಒತ್ತಾಯಿಸುತ್ತೇನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿಯಾಗುವುದು ಅಪಾಯಕಾರಿ ಎಂದು ಕೂಡಾ ಹೇಳುತ್ತೇನೆ. ಆದರೆ ಅವರು ಆ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಹೊರಡುವಂತೆ ಹೇಳುತ್ತಾರೆ. ನಾನು ಮುಂದಿನ ಸಲ ಅವರ ಮನೆಗೆ ಹೋದರೆ ಅಥವಾ ಅದಕ್ಕೂ ಸ್ವಲ್ಪ ದಿನಗಳ ನಂತರ ನೋಡಿದರೆ ಹುಡುಗಿಗೆ ಮದುವೆಯಾಗಿರುತ್ತದೆ."

ಆದರೆ ಪೋಷಕರಿಗೆ ತಮ್ಮ ಮಕ್ಕಳಿಗೆ ಬೇಗನೆ ಮದುವೆ ಮಾಡಿಸಲು ಅವರದೇ ಕಾರಣಗಳಿವೆ. "ನಮ್ಮ ಮನೆಯಲ್ಲಿ ಶೌಚಾಲಯವಿಲ್ಲ ಪ್ರತಿ ಸಲ ಶೌಚಕ್ಕೆಂದು 50-100 ಮೀಟರ್ ದೂರದ ಹೊಲ-ಗದ್ದೆಗಳಿಗೆ ಹೋದಾಗ ಅಥವಾ ದನ ಮೇಯಿಸಲೆಂದು ಹೋದಾಗ ಏನಾದರೂ ಅನಾಹುತ ಸಂಭವಿಸಬಹುದೆಂಬ ಭಯ ಕಾಡುತ್ತಿರುತ್ತದೆ" ಎನ್ನುತ್ತಾ ರಾಣಿ ಹತ್ರಾಸ್‌ನಲ್ಲಿ ನಡೆದ ಭೀಕರ ದುರ್ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಅಲ್ಲಿ ಸೆಪ್ಟೆಂಬರ್‌ 2020ರಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ಮೇಲ್ಜಾತಿಯ ಗಂಡಸರು ಅತ್ಯಾಚಾರ ಎಸಗಿದ್ದರು. “ಹಮೇ ಹತ್ರಾಸ್‌ ಕಾ ಡರ್‌ ಹಮೇಶಾ ಹೇ” [ನಮಗೆ ಹತ್ರಾಸ್‌ನಲ್ಲಿ ನಡೆದಂತಹ ಘಟನೆ ನಡೆದುಹೋಗಬಹುದೆಂಬ ಭಯ ಸದಾ ಕಾಡುತ್ತಿರುತ್ತದೆ]

ಜಿಲ್ಲಾ ಕೇಂದ್ರವಾದ ಕೊರಾನ್‌ನಿಂದ ಬೈತಕ್ವಾಗೆ ಹೋಗುವ ನಿರ್ಜನ ರಸ್ತೆಯಲ್ಲಿ ತೆರೆದ ಕುರುಚಲು ಕಾಡು ಮತ್ತು ಹೊಲಗಳ ಮೂಲಕ ಗಾಳಿ 30 ಕಿಲೋಮೀಟರ್ ವೇಗದಲ್ಲಿ ಬೀಸುತ್ತದೆ. ವಿಶೇಷವಾಗಿ ಕಾಡು ಮತ್ತು ಬೆಟ್ಟಗಳ ಮೂಲಕ ಹಾದುಹೋಗುವ ಐದು ಕಿಲೋಮೀಟರ್ ವಿಸ್ತಾರದ ದಾರಿಯು ನಿರ್ಜನ ಮತ್ತು ಅಪಾಯಕಾರಿಯಾಗಿದೆ. ಅಲ್ಲಿನ ಪೊದೆಗಳಲ್ಲಿ ಗುಂಡೇಟು ತಿಂದು ಗಾಯಗೊಂಡಿರುವ ದೇಹಗಳನ್ನು ನೋಡಿದ್ದೇವೆ ಎಂದು ಸ್ಥಳೀಯರು ಹೇಳುತ್ತಾರೆ. ಪೊಲೀಸ್ ಚೆಕ್‌ಪಾಯಿಂಟ್ ಅಥವಾ ರಸ್ತೆಗಳು ಸ್ವಲ್ಪಮಟ್ಟಿಗೆ ಉತ್ತಮವಾಗಿದ್ದರೂ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಮಳೆಗಾಲದ ಸಮಯದಲ್ಲಿ ಬೈತಕ್ವಾ ಸುತ್ತಮುತ್ತಲಿನ 30 ಹಳ್ಳಿಗಳಲ್ಲಿ, ಜನರು ಕೆಲವೊಮ್ಮೆ ಕೆಲವು ವಾರಗಳವರೆಗೆ ಕಾಣುವುದಿಲ್ಲ.

PHOTO • Priti David
PHOTO • Priti David

ಬೈತಕ್ವಾ ಕುಗ್ರಾಮ: ಹೆಣ್ಣು ಮಕ್ಕಳಿಗೆ 13-14 ವರ್ಷಕ್ಕೆ ಮದುವೆ ಮಾಡುವುದು ಸಹಜ, ವಿಶೇಷವೇನಲ್ಲ ಎನ್ನುತ್ತಾರೆ ಅಲ್ಲಿನ ಮಹಿಳೆಯರು

ಊರಿನ ಸುತ್ತಲೂ ವಿಂಧ್ಯಾಚಲದ ಸಣ್ಣ ಮತ್ತು ಕಂದುಬಣ್ಣದ ಒಣ ಬೆಟ್ಟಗಳಿವೆ, ಅದರ ಸುತ್ತಲೂ ಮುಳ್ಳಿನ ಕುರುಚಲು ಗಿಡಗಳ ಪೊದೆಗಳಿದ್ದು ಇದು ಮಧ್ಯಪ್ರದೇಶದ ಗಡಿಯನ್ನು ಗುರುತಿಸುತ್ತದೆ. ಕೋಲ್ ಸಮುದಾಯದ ಕೊಳೆಗೇರಿಗಳು ಸುಸಜ್ಜಿತ ರಸ್ತೆಗೆ ಹೊಂದಿಕೊಂಡಿವೆ ಮತ್ತು ಪಕ್ಕದ ಹೊಲಗಳು ಒಬಿಸಿ ಕುಟುಂಬಗಳಿಗೆ ಸೇರಿವೆ (ಇದರಲ್ಲಿ ಕೆಲವು ಭಾಗಗಳು ಮಾತ್ರ ದಲಿತರಿಗೆ ಸೇರಿವೆ), ಅವು ರಸ್ತೆಯ ಎರಡೂ ಬದಿಗಳಲ್ಲಿ ಹರಡಿಕೊಂಡಿವೆ.

ಈ ಗ್ರಾಮದಲ್ಲಿ ವಾಸಿಸುತ್ತಿರುವ ಕೋಲ್ ಸಮುದಾಯಕ್ಕೆ ಸೇರಿದ ಸುಮಾರು 500 ದಲಿತ ಕುಟುಂಬಗಳು ಮತ್ತು ಒಬಿಸಿ ಸಮುದಾಯಕ್ಕೆ ಸೇರಿದ ಸುಮಾರು 20 ಕುಟುಂಬಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಅವರ ಭಯವಾಗಿದೆ. ರಾಣಿ ಆತಂಕದಿಂದ ಹೇಳುತ್ತಾರೆ, "ಕೆಲವು ತಿಂಗಳ ಹಿಂದೆ, ನಮ್ಮ ಹುಡುಗಿಯೊಬ್ಬಳು ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದಳು ಆಗ ಕೆಲವು [ಮೇಲ್ವರ್ಗದ] ಹುಡುಗರು ಅವಳನ್ನು ಬಲವಂತವಾಗಿ ತಮ್ಮ ಮೋಟಾರ್ ಸೈಕಲ್ ಮೇಲೆ ಎತ್ತಿ ಕೂರಿಸಿಕೊಂಡರು. ಅವಳು ಹೇಗೋ ಚಲಿಸುವ ಬೈಕಿನಿಂದ ಹಾರಿ ತನ್ನನ್ನು ರಕ್ಷಿಸಿಕೊಂಡು ಮನೆಗೆ ಓಡಿಬಂದಳು."

ಜೂನ್ 12, 2021ರಂದು, 14 ವರ್ಷದ ಕೋಲ್ ಸಮುದಾಯದ ಹುಡುಗಿಯೊಬ್ಬಳು ಕಾಣೆಯಾಗಿದ್ದಳು ಮತ್ತು ಇಲ್ಲಿಯವರೆಗೆ ಅವಳು ಪತ್ತೆಯಾಗಿಲ್ಲ. ಅವರು ಪ್ರಥಮ ವರ್ತಮಾನ ವರದಿ ಯನ್ನು (ಎಫ್ ಐಆರ್) ತಯಾರಿಸಿದರು ಆದರೆ ಅದನ್ನು ನಮಗೆ ತೋರಿಸಲು ಒಪ್ಪಲಿಲ್ಲ ಎಂದು ಅವರ ಕುಟುಂಬ ಹೇಳುತ್ತದೆ. ಅವರು ಈ ಕುರಿತು ಗಮನಸೆಳೆದು ಪೋಲಿಸರ ಕೋಪಕ್ಕೆ ಈಡಾಗಬಹುದೆನ್ನುವ ಭಯದಲ್ಲಿದ್ದರು. ಘಟನೆಯ ಎರಡು ವಾರಗಳ ನಂತರ ಪೊಲೀಸರು ತನಿಖೆಗೆ ಬಂದರು ಎಂದು ಇತರರು ಹೇಳುತ್ತಾರೆ.

ನಿರ್ಮಲಾದೇವಿ ಮೆಲುದನಿಯಲ್ಲಿ ಹೇಳುತ್ತಾರೆ, "ನಾವು ಸಣ್ಣ ಸ್ಥಾನಮಾನದ [ಪರಿಶಿಷ್ಟ ಜಾತಿಯ] ಬಡವರು, ಪೊಲೀಸರಿಗೆ ನಮ್ಮ ಬಗ್ಗೆ ಕಾಳಜಿ ಇದೆಯೆಂದು ನೀವು ಹೇಳುತ್ತೀರಾ? ಜನರು ನಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆಯೇ? ನಾವು [ಅತ್ಯಾಚಾರ ಮತ್ತು ಅಪಹರಣದ] ಭಯದ ಛಾಯೆಯಡಿ ಬದುಕುತ್ತಿದ್ದೇವೆ."

ಸ್ವತಃ ಕೋಲ್ ಸಮುದಾಯಕ್ಕೆ ಸೇರಿದವರಾದ ನಿರ್ಮಲಾ ಅವರು ಗ್ರಾಮದ ಪದವಿ ಪಡೆದಿರುವ ಕೆಲವೇ ಕೆಲವರಲ್ಲಿ ಒಬ್ಬರು. ಮದುವೆಯ ನಂತರ ಅವರು ಈ ಪದವಿಯನ್ನು ಪಡೆದರು. ಪತಿ ಮುರಲೀಲಾಲ್ ಕೃಷಿಕ. ಅವರು ನಾಲ್ಕು ವಿದ್ಯಾವಂತ ಗಂಡು ಮಕ್ಕಳ ತಾಯಿಯಾಗಿದ್ದಾರೆ, ಅವರು ಮಿರ್ಜಾಪುರ ಜಿಲ್ಲೆಯ ಡ್ರಮ್ಮೊಂಡ್‌ಗಂಜ್ ಪ್ರದೇಶದ ಖಾಸಗಿ ಶಾಲೆಯಲ್ಲಿ ತನ್ನ ಸ್ವಂತ ಹಣದಿಂದ ಮಕ್ಕಳನ್ನು ಓದಿಸಿದ್ದಾರೆ. "ನನ್ನ ಮೂರನೇ ಮಗುವಿನ ನಂತರವೇ ನಾನು ನನ್ನ ಮನೆಯಿಂದ ಹೊರಬರಲು ಸಾಧ್ಯವಾಯಿತು. ನನ್ನ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ನಾನು ಬಯಸಿದ್ದೆ; ಅದು ನನ್ನ ಗುರಿಯಾಗಿತ್ತು," ಎಂದು ಅಸಹಾಯಕವಾಗಿ ನಗುತ್ತಾ ಹೇಳುತ್ತಾರೆ. ನಿರ್ಮಲಾ ಈಗ ತನ್ನ ಸೊಸೆ ಶ್ರೀದೇವಿಗೆ "ಆಕ್ಸಿಲರಿ ನರ್ಸ್ ಮಿಡ್‌ವೈಫ್ (ಎಎನ್‌ಎಮ್)" ಶಿಕ್ಷಣ ಮತ್ತು ತರಬೇತಿಗೆ ಸಹಾಯ ಮಾಡುತ್ತಿದ್ದಾರೆ. ಶ್ರೀದೇವಿ ತನ್ನ18 ವರ್ಷ ವಯಸ್ಸಿನಲ್ಲಿ, ನಿರ್ಮಲಾ ಅವರ ಮಗನನ್ನು ಮದುವೆಯಾಗಿದ್ದರು.‌

ಆದರೆ ಗ್ರಾಮದ ಇತರ ಪೋಷಕರು ಹೆಚ್ಚು ಭಯದಲ್ಲಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2019ರಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಎಸಗಲಾಗಿರುವ 59,853 ಅಪರಾಧ ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತಿದಿನ ಸರಾಸರಿ 164 ಅಪರಾಧಗಳು ನಡೆದಿವೆ. ಇದರಲ್ಲಿ ಅಪ್ರಾಪ್ತ ಮಕ್ಕಳು, ವಯಸ್ಕ ಮಹಿಳೆಯರ ಅತ್ಯಾಚಾರ, ಅಪಹರಣ ಮತ್ತು ಮಾನವ ಕಳ್ಳಸಾಗಣೆ ಪ್ರಕರಣಗಳು ಸೇರಿವೆ.

PHOTO • Priti David
PHOTO • Priti David

ಇಲ್ಲಿ ಜನನ ಪ್ರಮಾಣಪತ್ರಗಳನ್ನು ಮಾಡಿಸುವುದು ವಿರಳ, ಆದ್ದರಿಂದ ಅಪ್ರಾಪ್ತ ವಯಸ್ಸಿನ ಮದುವೆಯ ವಿಷಯದಲ್ಲಿ ಯಾರೂ ಸಿಕ್ಕಿಹಾಕಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅಂಗನವಾಡಿ (ಎಡ) ಕಾರ್ಯಕರ್ತೆ ನಿರ್ಮಲಾ ದೇವಿ (ಬಲ) ಹೇಳುತ್ತಾರೆ

"ಹುಡುಗಿಯರು [ಪುರುಷರ] ಗಮನಸೆಳೆಯಲು ಪ್ರಾರಂಭಿಸಿದಾಗ ಅವರನ್ನು ಸುರಕ್ಷಿತವಾಗಿಡುವುದು ಕಷ್ಟವಾಗುತ್ತದೆ" ಎಂದು ಸೋನು ಮತ್ತು ಮೀನಾರ ಅವರ ಸೋದರಸಂಬಂಧಿ ಮಿಥಿಲೇಶ್ ಹೇಳುತ್ತಾರೆ. "ಇಲ್ಲಿನ ದಲಿತರಿಗೆ ಇರುವ ಆಸೆಯೆಂದರೆ, ನಮ್ಮ ಹೆಸರು ಮತ್ತು ಘನತೆಯನ್ನು ಉಳಿಸಿಕೊಳ್ಳುವುದು. ನಮ್ಮ ಹೆಣ್ಣುಮಕ್ಕಳಿಗೆ ಬೇಗನೆ ಮದುವೆ ಮಾಡಿಸಿಬಿಟ್ಟರೆ ಅದನ್ನು ಸಾಧ್ಯವಾಗಿಸಬಹುದು."

ಮಿಥಿಲೇಶ್ ಇಟ್ಟಿಗೆ ಭಟ್ಟಿ ಅಥವಾ ಮರಳು ಗಣಿಗಾರಿಕೆಯ ಕೆಲಸಕ್ಕೆ ಹೋಗುವಾಗ ತನ್ನ 9 ವರ್ಷದ ಮಗ ಮತ್ತು 8 ವರ್ಷದ ಮಗಳನ್ನು ಹಳ್ಳಿಯಲ್ಲಿಯೇ ಬಿಟ್ಟು ಹೋಗಬೇಕಿರುತ್ತದೆ, ಹಾಗೆ ಹೊರಗೆ ಹೋದಾಗಲೆಲ್ಲ ಅವರು ಮಕ್ಕಳ ಸುರಕ್ಷತೆಯ ಕುರಿತು ಚಿಂತೆಯಲ್ಲಿರುತ್ತಾರೆ.

ಅವರ ಆದಾಯ ತಿಂಗಳಿಗೆ 5,000 ರೂಪಾಯಿಗಳಾದರೆ ಅವರ ಹೆಂಡತಿ ಪೂರಕವಾಗಿ ಉರುವಲು ಸೌದೆ ಮಾರಾಟ ಮತ್ತು ಕೊಯ್ಲಿನ ಸಮಯದಲ್ಲಿ ಗದ್ದೆಗಳಲ್ಲಿ ಒಂದಷ್ಟು ದುಡಿಯುತ್ತಾರೆ. ಅವರ ಊರಿನ ಸುತ್ತಮುತ್ತ ಬೇಸಾಯವನ್ನು ಒಂದು ಆಯ್ಕೆಯಾಗಿ ಪರಿಗಣಿಸಲು ಸಾಧ್ಯವಿಲ್ಲ. “ನಾವಿಲ್ಲಿ ಯಾವ ಬೆಳೆ ಬೆಳೆಯುವುದೂ ಸಾಧ್ಯವಿಲ್ಲ ಕಾಡುಪ್ರಾಣಿಗಳು ತಿಂದುಹಾಕುತ್ತವೆ. ಕಾಡುಹಂದಿಗಳಂತೂ ನಮ್ಮ‌ ಮನೆ ಬಾಗಿಲಿಗೇ ಬರುತ್ತವೆ. ಯಾಕೆಂದರೆ ನಾವು ಕಾಡಿನಂಚಿನಲ್ಲಿ ವಾಸವಿದ್ದೇವೆ.” ಎನ್ನುತ್ತಾರೆ ಮಿಥಿಲೇಶ್.

2011ರ ಜನಗಣತಿಯ ಪ್ರಕಾರ, ಬೈತಕ್ವಾದ ಒಂದು ಕುಗ್ರಾಮವಾಗಿರುವ ದಿಯೋಘಾಟ್‌ನ ಜನಸಂಖ್ಯೆಯ ಶೇಕಡಾ 61ರಷ್ಟು ಜನರು ಕೃಷಿ ಕೂಲಿ, ಗೃಹ ಕೈಗಾರಿಕೆ ಮತ್ತು ಇತರ ಉದ್ಯೋಗಗಳಲ್ಲಿ ತೊಡಗಿದ್ದಾರೆ. "ಪ್ರತಿಯೊಂದು ಮನೆಯಲ್ಲೂ ಒಬ್ಬರಿಗಿಂತ ಹೆಚ್ಚು ಜನರು ಕೂಲಿ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ" ಎಂದು ಮಿಥಿಲೆಶ್ ಹೇಳುತ್ತಾರೆ. ಅವರು ಉದ್ಯೋಗವನ್ನು ಹುಡುಕಿಕೊಂಡು ಅಲಹಾಬಾದ್, ಸೂರತ್ ಮತ್ತು ಮುಂಬೈಗೆ ಹೋಗುತ್ತಾರೆ, ಅವರು ಇಟ್ಟಿಗೆ ಗೂಡುಗಳಲ್ಲಿ ಅಥವಾ ಇತರ ವಲಯಗಳಲ್ಲಿ ದಿನಗೂಲಿ ಉದ್ಯೋಗಗಳಲ್ಲಿ ಕೆಲಸ ಮಾಡಿ, ದಿನಕ್ಕೆ ಸುಮಾರು 200 ರೂ. ಗಳಿಸುತ್ತಾರೆ.

"ಪ್ರಯಾಗ್ ರಾಜ್ ಜಿಲ್ಲೆಯ 21 ಬ್ಲಾಕ್‌ಗಳಲ್ಲಿ ಕೊರಾನ್ ಅತ್ಯಂತ ನಿರ್ಲಕ್ಷಿಸಲ್ಪಟ್ಟ ಪ್ರದೇಶ" ಎಂದು ಡಾ. ಯೋಗೇಶ್ ಚಂದ್ರ ಶ್ರೀವಾಸ್ತವ ಹೇಳುತ್ತಾರೆ. ಅವರು ಪ್ರಯಾಗ್ ರಾಜ್‌ನ ಸ್ಯಾಮ್ ಹಿಗ್ಗಿನ್ ಬೋಥಮ್ ಕೃಷಿ, ತಂತ್ರಜ್ಞಾನ ಮತ್ತು ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ವಿಜ್ಞಾನಿಯಾಗಿದ್ದಾರೆ ಮತ್ತು ಈ ಪ್ರದೇಶದಲ್ಲಿ 25 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. "ಒಟ್ಟಾರೆ ಜಿಲ್ಲೆಯ ಅಂಕಿಅಂಶಗಳು ಇಲ್ಲಿನ ವಿಷಾದನೀಯ ಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ" ಎಂದು ಅವರು ಮುಂದುವರೆದು ಹೇಳುತ್ತಾರೆ. "ಬೆಳೆ ಇಳುವರಿಯಿಂದ ಹಿಡಿದು ಶಾಲೆ ಬಿಟ್ಟ ಮಕ್ಕಳವರೆಗೆ, ಕೆಳಹಂತದ ಉದ್ಯೋಗಗಳಿಗೆ ವಲಸೆ, ಬಡತನ, ಬಾಲ್ಯ ವಿವಾಹ ಮತ್ತು ಶಿಶು ಮರಣದವರೆಗೆ ಯಾವುದೇ ಮಾನದಂಡವನ್ನು ತೆಗೆದುಕೊಳ್ಳಿ - ವಿಶೇಷವಾಗಿ ಕೊರಾನ್ ಅಭಿವೃದ್ಧಿಹೊಂದಿಲ್ಲ."

ಮದುವೆಯಾದ ನಂತರ, ಸೋನು ಮತ್ತು ಮೀನಾ ಸುಮಾರು 10 ಕಿಲೋಮೀಟರ್ ದೂರದ ಹಳ್ಳಿಯಲ್ಲಿರುವ ತಮ್ಮ ಗಂಡಂದಿರ ಮನೆಗಳಿಗೆ ಹೋಗುತ್ತಾರೆ. "ನಾನು ಅವನನ್ನು (ವರನನ್ನು) ಇನ್ನೂ ಭೇಟಿಯಾಗಿಲ್ಲ" ಎಂದು ಸೋನು ಹೇಳುತ್ತಾರೆ. "ಆದರೆ ನಾನು ಅವನ ಮುಖವನ್ನು ನನ್ನ ತಂದೆಯ ಚಿಕ್ಕಪ್ಪನ ಮೊಬೈಲ್ ಫೋನ್ ನಲ್ಲಿ ನೋಡಿದೆ. ನಾನು ಅವನೊಂದಿಗೆ ಆಗಾಗ್ಗೆ ಮಾತನಾಡುತ್ತೇನೆ. ಅವನು ನನಗಿಂತ ಕೆಲವು ವರ್ಷ ದೊಡ್ಡವನು, ಸುಮಾರು 15 ವರ್ಷ, ಮತ್ತು ಸೂರತ್‌ನ ಅಡುಗೆಮನೆಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಾನೆ."

PHOTO • Priti David
PHOTO • Priti David

ಎಡಕ್ಕೆ: "ಹುಡುಗಿಯರು [ಪುರುಷರ] ಗಮನಸೆಳೆಯಲು ಪ್ರಾರಂಭಿಸಿದಾಗ ಅವರನ್ನು ಸುರಕ್ಷಿತವಾಗಿಡುವುದು ಕಷ್ಟವಾಗುತ್ತದೆ" ಎಂದು ಮಿಥಿಲೇಶ್ ಹೇಳುತ್ತಾರೆ. ಬಲ: ಡಾ. ಯೋಗೇಶ್ ಚಂದ್ರ ಶ್ರೀವಾಸ್ತವ ಹೇಳುತ್ತಾರೆ, "ಯಾವುದೇ ಮಾನದಂಡ ತೆಗೆದುಕೊಳ್ಳಿ - ನಿರ್ದಿಷ್ಟವಾಗಿ ಕೊರಾನ್ ಬ್ಲಾಕ್ ಅನ್ನು ಅಭಿವೃದ್ಧಿಪಡಿಸಲಾಗಿಲ್ಲ"

ಈ ವರ್ಷದ ಜನವರಿಯಲ್ಲಿ ಬೈತಕ್ವಾ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಎನ್ ಜಿಒ ಒಂದು ವಿದ್ಯಾರ್ಥಿಗಳಿಗೆ ಉಚಿತ ಸ್ಯಾನಿಟರಿ ಪ್ಯಾಡ್‌, ಟವೆಲ್‌ ಮತ್ತು ಸಾಬೂನನ್ನು ಉಚಿತವಾಗಿ ಹಂಚುವುದರೊಂದಿಗೆ ಮುಟ್ಟಿನ ಸಮಯದಲ್ಲಿ ಚೊಕ್ಕಟವಾಗಿರುವುದು ಹೇಗೆಂದು ಕಲಿಸಲು ವೀಡಿಯೋ ಕೂಡಾ ತೋರಿಸಿತ್ತು. ಒಕ್ಕೂಟ ಸರ್ಕಾರದ ಕಿಶೋರಿ ಸುರಕ್ಷಾ ಯೋಜನೆಯಡಿ , 6ರಿಂದ 12 ನೇ ತರಗತಿಗಳ ವಿದ್ಯಾರ್ಥಿನಿಯರು ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಕಾರ್ಯಕ್ರಮವನ್ನು 2015ರಲ್ಲಿ ಅಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉತ್ತರ ಪ್ರದೇಶದಲ್ಲಿ ಪರಿಚಯಿಸಿದರು.

ಆದರೆ ಸೋನುವಾಗಲಿ, ಮೀನಾ ಆಗಲಿ ಇನ್ನು ಮುಂದೆ ಶಾಲೆಗೆ ಹೋಗುವುದಿಲ್ಲ. "ನಾವು ಶಾಲೆಗೆ ಹೋಗುವುದಿಲ್ಲ, ಆದ್ದರಿಂದ ಈ ಬಗ್ಗೆ ನಮಗೆ ತಿಳಿದಿಲ್ಲ" ಎಂದು ಸೋನು ಹೇಳುತ್ತಾಳೆ. ಇಬ್ಬರೂ ಪ್ರಸ್ತುತ ಬಳಸುತ್ತಿರುವ ಬಟ್ಟೆಯ ಬದಲು ಉಚಿತ ಸ್ಯಾನಿಟರಿ ಪ್ಯಾಡ್ ಗಳನ್ನು ಹೊಂದಲು ಬಯಸುತ್ತಿದ್ದರು.

ಸದ್ಯದಲ್ಲೇ ಮದುವೆಯಾಗಲಿದ್ದರೂ, ಇಬ್ಬರೂ ಹುಡುಗಿಯರಿಗೆ ಲೈಂಗಿಕತೆ, ಗರ್ಭಧಾರಣೆ ಅಥವಾ ಮುಟ್ಟಿನ ಸಮಯದ ನೈರ್ಮಲ್ಯದ ಬಗ್ಗೆ ಕಡಿಮೆ ತಿಳಿದಿದೆ ಅಥವಾ ಆ ಕುರಿತು ಯಾವುದೇ ಕಲ್ಪನೆ ಇಲ್ಲ. "ನನ್ನ ತಾಯಿ ನನ್ನ ಭಾಭಿಯನ್ನು (ದೊಡ್ಡಪ್ಪನ ಮಗನ ಹೆಂಡತಿ) ಈ ಬಗ್ಗೆ ಕೇಳಲು ಹೇಳಿದರು. ಇನ್ನು ಮುಂದೆ [ಕುಟುಂಬದ] ಯಾವುದೇ ಪುರುಷನ ಪಕ್ಕದಲ್ಲಿ ಮಲಗಬೇಡ, ಹಾಗೆ ಮಲಗಿದರೆ ಅದರಿಂದ ದೊಡ್ಡ ಸಮಸ್ಯೆಯಾಗುತ್ತದೆ ಎಂದು ನನ್ನ ಭಾಭಿ ನನಗೆ ಹೇಳಿದರು," ಎಂದು ಸೋನು ತಗ್ಗಿದ ದನಿಯಲ್ಲಿ ಹೇಳುತ್ತಾಳೆ. ಮೂವರು ಹುಡುಗಿಯರ ಕುಟುಂಬದಲ್ಲಿ ಹಿರಿಯ ಮಗಳಾದ ಸೋನು ತನ್ನ ಕಿರಿಯ ಸಹೋದರಿಯರನ್ನು ನೋಡಿಕೊಳ್ಳಲು 7ನೇ ವಯಸ್ಸಿನಲ್ಲಿ 2ನೇ ತರಗತಿಯಲ್ಲಿ ಶಾಲೆಯನ್ನು ಬಿಟ್ಟಳು.

ನಂತರ ಅವಳು ತನ್ನ ತಾಯಿ ಚಂಪಾ ಜೊತೆ ಹೊಲಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು ಮತ್ತು ಮನೆಯ ಹಿಂದಿನ ಕಾಡಿನಲ್ಲಿ ಉರುವಲು ಸೌದೆ ತರುವುದಕ್ಕೂ ಹೋಗುತ್ತಿದ್ದಳು. ಈ ಸೌದೆಯಲ್ಲಿ ಒಂದಷ್ಟನ್ನು ಮನೆಯಲ್ಲಿ ಬಳಸುತ್ತಾರೆ ಮತ್ತು ಉಳಿದಿದ್ದನ್ನು ಮಾರಾಟ ಮಾಡುತ್ತಾರೆ. ಎರಡು ದಿನಗಳ ಪರಿಶ್ರಮದಿಂದ ಇಲ್ಲಿನ ಮಹಿಳೆಯರು 200 ರೂಪಾಯಿ ಮೌಲ್ಯದ ಕಟ್ಟಿಗೆ ಸಂಗ್ರಹಿಸುತ್ತಾರೆ. ಈ ಹಣದಲ್ಲಿ ನಾವು ಕೆಲವು ದಿನಗಳವರೆಗೆ ಎಣ್ಣೆ ಮತ್ತು ಉಪ್ಪನ್ನು ಖರೀದಿಸುತ್ತೇವೆ ಎಂದು ಮೀನಾಳ ತಾಯಿ ರಾಣಿ ಹೇಳುತ್ತಾರೆ. ಸೋನು ತನ್ನ ಕುಟುಂಬದ 8-10 ಮೇಕೆಗಳನ್ನು ನೋಡಿಕೊಳ್ಳಲು ಸಹಾಯ ಮಾಡುತ್ತಾಳೆ. ಈ ಕೆಲಸಗಳಲ್ಲದೆ, ಅವಳು ತನ್ನ ತಾಯಿಗೆ ಅಡುಗೆ ಮತ್ತು ಇತರ ಮನೆಕೆಲಸಗಳಲ್ಲಿಯೂ ಸಹಾಯ ಮಾಡುತ್ತಾಳೆ.

ಸೋನು ಮತ್ತು ಮೀನಾರ ಪೋಷಕರು ಕೃಷಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಿಗೆ ದಿನಗೂಲಿ 150 ರೂ., ಪುರುಷರಿಗೆ 200 ರೂ. ಅದೂ ಅವರಿಗೆ ಕೆಲಸ ಸಿಕ್ಕಾಗ ಅಂದರೆ ತಿಂಗಳಿಗೆ 10ರಿಂದ 12 ದಿನ ಕೆಲಸ. ಅವರಿಗೆ ಯಾವಾಗಲೂ ಅಷ್ಟು ಕೆಲಸ ಸಿಗುವುದಿಲ್ಲ. ಸೋನುವಿನ ತಂದೆ ರಾಮಸ್ವರೂಪ್ ಕೆಲಸ ಹುಡುಕಿಕೊಂಡು ಹತ್ತಿರದ ಊರುಗಳು, ನಗರಗಳು, ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದರು, ಆದರೆ 2020ರಲ್ಲಿ ಅವರು ಟಿಬಿಗೆ ತುತ್ತಾಗಿ ನಿಧನರಾದರು.

ಅವರ ಚಿಕಿತ್ಸೆಗಾಗಿ "ನಾವು ಸುಮಾರು 20,000 ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ, ನಾನು ಇತರ ಕುಟುಂಬ ಸದಸ್ಯರು ಮತ್ತು ಹೊರಗಿನವರಿಂದ ಸಾಲ ತೆಗೆದುಕೊಳ್ಳಬೇಕಾಯಿತು" ಎಂದು ಚಂಪಾ ಹೇಳುತ್ತಾರೆ. ಅವರು ಮಾತು ಮುಂದುವರಿಸುತ್ತಾ, ತನ್ನ ಹಿಂದಿದ್ದ ಕೋಣೆಯಲ್ಲಿ ಕಟ್ಟಿದ್ದ ಪುಟ್ಟ ಮೇಕೆಯನ್ನು ತೋರಿಸುತ್ತಾ, "ಅವರ ಸ್ಥಿತಿ ಹದಗೆಟ್ಟಿತ್ತು ಹೀಗಾಗಿ ಚಿಕಿತ್ಸೆಗೆ ನಮಗೆ ಹೆಚ್ಚಿನ ಹಣ ಬೇಕಾಗಿತ್ತು, ಆದ್ದರಿಂದ ನಾನು ನನ್ನ ಮೇಕೆಗಳನ್ನು ಎರಡರಿಂದ ಎರಡೂವರೆ ಸಾವಿರದಂತೆ ಮಾರಾಟ ಮಾಡಬೇಕಾಯಿತು. ಈಗ ಇದೊಂದು ಮರಿ ನಮ್ಮೊಂದಿಗೆ ಉಳಿದಿದೆ."

"ನನ್ನ ತಂದೆ ತೀರಿಕೊಂಡ ನಂತರವೇ ನನ್ನ ತಾಯಿ ನನ್ನ ಮದುವೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು" ಎಂದು ಸೋನು ತನ್ನ ಕೈಗಳಿಂದ ಸದ್ದಿಲ್ಲದೆ ಮರೆಯಾಗುತ್ತಿರುವ ಮೆಹಂದಿಯನ್ನು ದಿಟ್ಟಿಸುತ್ತಾ ಹೇಳುತ್ತಾಳೆ.

PHOTO • Priti David
PHOTO • Priti David

ಮೀನಾ ಮತ್ತು ಸೋನುವಿನ ಅವಿಭಕ್ತ ಕುಟುಂಬದ ಮನೆ. "ನನ್ನ ತಂದೆ ತೀರಿಕೊಂಡ ನಂತರವೇ ನನ್ನ ತಾಯಿ ನನ್ನ ಮದುವೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು" ಎಂದು ಸೋನು ತನ್ನ ಕೈಗಳಿಂದ ಸದ್ದಿಲ್ಲದೆ ಮರೆಯಾಗುತ್ತಿರುವ ಮೆಹಂದಿಯನ್ನು ದಿಟ್ಟಿಸುತ್ತಾ ಹೇಳುತ್ತಾಳೆ

ಸೋನು ಮತ್ತು ಮೀನಾಳ ತಾಯಂದಿರು - ಚಂಪಾ ಮತ್ತು ರಾಣಿ - ಅಕ್ಕತಂಗಿಯರು, ಅವರು ಅಣ್ಣತಮ್ಮಂದಿರನ್ನು ವಿವಾಹವಾದರು. 25 ಜನರ ಅವರ ಕೂಡು ಕುಟುಂಬವು 2017ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ವಸತಿ ಯೋಜನೆಯಡಿ ನಿರ್ಮಿಸಲಾದ ಕೆಲವು ಕೋಣೆಗಳ ಮನೆಯಲ್ಲಿ ವಾಸಿಸುತ್ತಿದೆ, ಇದು ಗಾರೆ ಮಾಡದ ಗೋಡೆ ಮತ್ತು ಸಿಮೆಂಟ್‌ ತಾರಸಿಯನ್ನು ಹೊಂದಿದೆ. ಅವರ ಹಳೆಯ ಹುಲ್ಲು ಮತ್ತು ಮಣ್ಣಿನ ಮನೆಯು ಈಗಲೂ ಹೊಸ ಮನೆಯ ಹಿಂದೆ ಇದ್ದು ಅಲ್ಲಿಯೇ ಅಡುಗೆ ಮಾಡಲಾಗುತ್ತದೆ ಮತ್ತು ಅವರ ಕುಟುಂಬದ ಕೆಲವರು ಅಲ್ಲಿಯೂ ಮಲಗುತ್ತಾರೆ.

ಇಬ್ಬರು ಅಕ್ಕತಂಗಿಯರಲ್ಲಿ ಮೀನಾ ಮೊದಲು ಹರೆಯಕ್ಕೆ ಕಾಲಿಟ್ಟಳು. ಅವಳಿಗೆ ನೋಡಿದ ಹುಡುಗನಿಗೆ ಒಬ್ಬ ತಮ್ಮನಿದ್ದಿದ್ದರಿಂದ ಅವನನ್ನು ಸೋನುವಿಗೆ ಮಾತನಾಡಲಾಯಿತು. ಇಬ್ಬರೂ ಒಂದೇ ಮನೆಗೆ ಹೋಗುತ್ತಿರುವುದು ಅವರ ತಾಯಂದಿರಲ್ಲಿ ಒಂದಿಷ್ಟು ನಿರಾಳತೆ ಮೂಡಿಸಿದೆ.

ಮೀನಾ ತನ್ನ ಕುಟುಂಬದಲ್ಲಿ ಹಿರಿಯವಳಾಗಿದ್ದು ಇಬ್ಬರು ತಂಗಿಯರು ಮತ್ತು ಒಬ್ಬ ತಮ್ಮನನ್ನು ಹೊಂದಿದ್ದಾಳೆ. ಅವಳು ಒಂದು ವರ್ಷದ ಹಿಂದೆ 7ನೇ ತರಗತಿಯಲ್ಲಿರುವಾಗ ಶಾಲೆ ಬಿಟ್ಟಳು. "ನನ್ನ ಹೊಟ್ಟೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತ್ತು. ನಾನು ದಿನದ ಹೆಚ್ಚಿನ ಸಮಯದಲ್ಲಿ ಮನೆಯಲ್ಲಿ ಮಲಗಿರುತ್ತಿದ್ದೆ. ನನ್ನ ತಾಯಿ ಹೊಲಗಳಲ್ಲಿರುತ್ತಿದ್ದರು ಮತ್ತು ನನ್ನ ತಂದೆ ಕೊರಾನ್‌ಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಶಾಲೆಗೆ ಹೋಗೆಂದು ಯಾರೂ ಒತ್ತಾಯಿಸಲಿಲ್ಲ, ಆದ್ದರಿಂದ ನಾನು ಹೋಗಲಿಲ್ಲ" ಎಂದು ಅವಳು ಹೇಳುತ್ತಾಳೆ. ನಂತರ, ಆಕೆಗೆ ಮೂತ್ರಪಿಂಡದಲ್ಲಿ ಕಲ್ಲುಗಳು ಇರುವುದು ಪತ್ತೆಯಾಯಿತು, ಆದರೆ ಚಿಕಿತ್ಸೆಯು ತುಂಬಾ ದುಬಾರಿಯಾಗಿತ್ತು ಮತ್ತು 30 ಕಿಲೋಮೀಟರ್ ದೂರದಲ್ಲಿರುವ ಜಿಲ್ಲಾ ಕೇಂದ್ರಕ್ಕೆ ಹಲವಾರು ಬಾರಿ ಹೋಗಿ ಬರುವ ಅಗತ್ಯವಿತ್ತು, ಆದ್ದರಿಂದ ಚಿಕಿತ್ಸೆಯ ಆಲೋಚನೆಯನ್ನು ಕೈಬಿಡಲಾಯಿತು. ಹಾಗೆಯೇ, ಅದರೊಂದಿಗೆ ಅವಳ ಶಿಕ್ಷಣವೂ ಕೊನೆಯಾಯಿತು.

ಅವಳಿಗೆ ಈಗಲೂ ಆಗಾಗ ಹೊಟ್ಟೆನೋವು ಬರುತ್ತದೆ.

ಬಹುತೇಕ ಕೋಲ್ ಕುಟುಂಬಗಳು ತಮ್ಮ ಅಲ್ಪ ಸಂಪಾದನೆಯಲ್ಲಿಯೇ ತಮ್ಮ ಹೆಣ್ಣುಮಕ್ಕಳ ಮದುವೆಗೆ ಒಂದಷ್ಟು ಹಣವನ್ನು ಉಳಿಸಲು ಪ್ರಯತ್ನಿಸುತ್ತವೆ. “ಅವರ ಮದುವೆಗೆಂದು ಸುಮಾರು ಹತ್ತು ಸಾವಿರ ರೂಪಾಯಿ ಕೂಡಿಸಿ ಇಟ್ಟಿದ್ದೇವೆ, 100-150 ಮಂದಿಗೆ ಪೂರಿ, ಸಬ್ಜಿ, ಮೀಠಾ ಔತಣ ಮಾಡಬೇಕು” ಎನ್ನುತ್ತಾರೆ ರಾಣಿ. ಅಕ್ಕತಂಗಿಯರಿಬ್ಬರಿಗೂ ಒಂದೇ ದಿನ ಮದುವೆ ಮಾಡಿಸಲು ಯೋಚಿಸಿದ್ದಾರೆ.

ಇದರಿಂದ ಅವರ ಜವಾಬ್ದಾರಿಯಿಂದ ಮುಕ್ತಿ ಸಿಗುತ್ತದೆ ಮತ್ತು ಹುಡುಗಿಯರು ಕೂಡ ತಮ್ಮ ಬಾಲ್ಯದಿಂದ ಹೊರಬರುತ್ತಾರೆ ಎಂದು ಮಕ್ಕಳ ಕುಟುಂಬದ ಸದಸ್ಯರು ನಂಬುತ್ತಾರೆ. ಸೋನು ಮತ್ತು ಮೀನಾ ಮದುವೆಯ ಬಗ್ಗೆ ತಮ್ಮದೇ ಆದ ಆಲೋಚನೆಗಳನ್ನು ಹೆಣೆಯುತ್ತಿದ್ದಾರೆ, ಅದು ಅವರ ಸಂದರ್ಭಗಳು ಮತ್ತು ಸಾಮಾಜಿಕ ಪ್ರಭಾವಗಳ ಉತ್ಪನ್ನವಾಗಿದೆ. ಅವಳು ಹೇಳುತ್ತಾಳೆ, "ನಮ್ಮ ಮದುವೆಯಾದರೆ ಎರಡು ತಿನ್ನುವ ಬಾಯಿಗಳು ಕಡಿಮೆಯಾಗುತ್ತವೆ, ನಾವೇ ಈಗ ಒಂದು ಸಮಸ್ಯೆಯಾಗಿದ್ದೇವೆ."

PHOTO • Priti David

ಇಬ್ಬರು ಅಕ್ಕತಂಗಿಯರಲ್ಲಿ ಮೀನಾ ಮೊದಲು ಹರೆಯಕ್ಕೆ ಕಾಲಿಟ್ಟಳು. ಅವಳಿಗೆ ನೋಡಿದ ಹುಡುಗನಿಗೆ ಒಬ್ಬ ತಮ್ಮನಿದ್ದಿದ್ದರಿಂದ ಅವನನ್ನು ಸೋನುವಿಗೆ ಮಾತನಾಡಲಾಯಿತು. ಈಗ ಇಬ್ಬರೂ ಒಂದೇ ಮನೆಗೆ ಹೋಗುತ್ತಿದ್ದಾರೆ

ಬಾಲ್ಯವಿವಾಹವಾದ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಸಣ್ಣ ಪ್ರಾಯದಲ್ಲೇ ಗರ್ಭಿಣಿಯರಾಗುವುದರಿಂದಾಗಿ ಅವರಲ್ಲಿ ಗರ್ಭಾವಸ್ಥೆ ಮತ್ತು ಹೆರಿಗೆಯ ಸಮಯದಲ್ಲಿ ಸಾವಿನ ಅಪಾಯದ ಸಾಧ್ಯತೆ ಹೆಚ್ಚು ಎಂದು ಯುನಿಸೆಫ್‌ ಹೇಳುತ್ತದೆ . ಇಲ್ಲಿನ ಹೆಣ್ಣುಮಕ್ಕಳಿಗೆ ಸಣ್ಣಪ್ರಾಯದಲ್ಲೇ ಮದುವೆ ಮಾಡಲಾಗುತ್ತದೆ. “ಅವರಲ್ಲಿ ಕಬ್ಬಿಣದ ಅಂಶದ ಪರೀಕ್ಷೆ ಮಾಡುವುದಾಗಲಿ ಅಥವಾ ಫೋಲಿಕ್‌ ಆಸಿಡ್‌ ಮಾತ್ರೆಗಳನ್ನು ಕೊಡುವುದಕ್ಕಾಗಲಿ ಅವಕಾಶವೇ ಸಿಗುವುದಿಲ್ಲ,” ಎನ್ನುತ್ತಾರೆ ಆಶಾ ಕಾರ್ಯಕರ್ತೆಯಾಗಿರುವ ಸುನೀತಾ ದೇವಿ. ಅವರು ಈ ಮಾತುಗಳನ್ನು ಚೊಚ್ಚಲ ಗರ್ಭಿಣಿಯರಿಗೆಂದು ನಿಗದಿಪಡಿಸಲಾಗಿರುವ ಪ್ರಮಾಣಿತ ಉಪಚಾರದ ಶಿಷ್ಟಾಚಾರವನ್ನು ಉಲ್ಲೇಖಿಸಿ ಹೇಳುತ್ತಿದ್ದರು. ಅಂದಹಾಗೆ ಗ್ರಾಮೀಣ ಉತ್ತರಪ್ರದೇಶದ ಕೇವಲ 22 ಶೇಕಡದಷ್ಟು ಯುವ ಗರ್ಭಿಣಿಯರು ಮಾತ್ರವೇ ಪ್ರಸವ ಪೂರ್ವ ಆರೈಕೆಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ. ಇದು ಇತರ ರಾಜ್ಯಗಳಿಗೆ ಹೋಲಿಸಿದೆ ದೇಶದಲ್ಲೇ ಅತ್ಯಂತ ಕಡಿಮೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಇತ್ತೀಚೆಗೆ ಪ್ರಕಟಿಸಿದ ವರದಿಯಲ್ಲಿ ಈ ಅಂಕಿ ಅಂಶಗಳು ಕಂಡುಬಂದಿವೆ. ಅದೇ ವರದಿಯು ಉತ್ತರ ಪ್ರದೇಶದಲ್ಲಿ 15-49 ವಯೋಮಾನದ 52ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆಂದು ಹೇಳುತ್ತದೆ. ಇದು ಗರ್ಭಾವಸ್ಥೆಯಲ್ಲಿ ಅವರ ಜೀವಕ್ಕೆ ಮಾತ್ರವಲ್ಲದೆ ಅವರ ಹುಟ್ಟುವ ಮಕ್ಕಳಿಗೂ ಅಪಾಯವನ್ನು ಹೆಚ್ಚಿಸುತ್ತದೆ. ಉತ್ತರ ಪ್ರದೇಶದಲ್ಲಿ 5 ವರ್ಷದೊಳಗಿನ ಒಟ್ಟು ಮಕ್ಕಳಲ್ಲಿ ಶೇ.49ರಷ್ಟು ಮಕ್ಕಳು ಅಪೌಷ್ಟಿಕತೆ ಮತ್ತು ಶೇ.62ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದರ ಫಲಿತಾಂಶವೆಂದರೆ ಮಕ್ಕಳು ಪದೇಪದೇ ಕಾಯಿಲೆ ಬೀಳುವುದು ಮತ್ತು ಸಾವಿನ ಅಪಾಯ.

“ಇಲ್ಲಿ ಹೆಣ್ಣುಮಕ್ಕಳ ಪೌಷ್ಟಿಕತೆಗೆ ಒಂದಿಷ್ಟೂ ಪ್ರಾಮುಖ್ಯತೆ ನೀಡಲಾಗುವುದಿಲ್ಲ. ಮಗಳಿಗೆ ಮದುವೆ ನಿಶ್ಚಯವಾಗುತ್ತಿದ್ದಂತೆ ಇನ್ನು ಅವಳು ಬೇರೆ ಮನೆಗೆ ಹೋಗುವವಳು ಎನ್ನುವ ಕಾರಣಕ್ಕೆ ಹಾಲು ಕೊಡದಿರುವುದನ್ನು ನಾನೇ ನೋಡಿದ್ದೇನೆ. ಅವರಿಗೆ ಎಲ್ಲ ರೀತಿಯ ಉಳಿತಾಯವೂ ಸ್ವಾಗತಾರ್ಹವೇ, ಯಾಕೆಂದರೆ ಅವರ ಮಜಬೂರಿ [ಕಷ್ಟಗಳು] ಹಾಗಿವೆ” ಎನ್ನುತ್ತಾರೆ ಸುನಿತಾ.

ಆದರೆ ರಾಣಿ ಮತ್ತು ಚಂಪಾ ಮನಸ್ಸು ಈ ಸಮಯದಲ್ಲಿ ಬೇರೊಂದು ವಿಷಯದ ಮೇಲೆ ಕೇಂದ್ರೀಕೃತವಾಗಿದೆ.

“ನಮಗೆ ಚಿಂತೆಯಾಗಿರುವುದು ನಾವು ಕೂಡಿಟ್ಟಿರುವ ಹಣವು ಮಕ್ಕಳ ಮದುವೆಯಾಗುವುದರೊಳಗೆ ಕಳ್ಳತನವಾಗದಂತೆ ನೋಡಿಕೊಳ್ಳುವುದು ಹೇಗೆನ್ನುವುದು. ಜನರಿಗೆ ನಮ್ಮ ಬಳಿ ಹಣವಿರುವುದು ಗೊತ್ತಾಗಿದೆ.” ಎನ್ನುತ್ತಾರೆ ರಾಣಿ. “ಇದರೊಂದಿಗೆ ನಾನು ಇನ್ನೊಂದು 50,000 ರೂಪಾಯಿ ಸಾಲವನ್ನೂ ಮಾಡಬೇಕಾಗುತ್ತದೆ” ಅದರೊಂದಿಗೆ ಅವರನ್ನು ಕಾಡುತ್ತಿರುವ ʼಸಮಸ್ಯೆಯೂʼ “ಮುಗಿದುಹೋಗಲಿದೆ” ಎನ್ನುವುದು ಅವರ ನಂಬಿಕೆ.

ಅಲಹಾಬಾದ್‌ನ ಸ್ಯಾಮ್ ಹಿಗ್ಗಿನ್‌ಬಾಥಮ್ ಕೃಷಿ, ತಂತ್ರಜ್ಞಾನ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ವಿಸ್ತರಣಾ ಸೇವೆಗಳ ನಿರ್ದೇಶಕ ಪ್ರೊಫೆಸರ್ ಆರಿಫ್ ಎ. ಬ್ರಾಡ್‌ವೇ ಅವರ ಅಮೂಲ್ಯ ಕೊಡುಗೆ ಮತ್ತು ಪೂರಕ ಮಾಹಿತಿಗಳಿಗಾಗಿ ವರದಿಗಾರರು ತುಂಬುಹೃದಯದ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತಾರೆ.

ಈ ಲೇಖನದಲ್ಲಿ ಕೆಲವು ವ್ಯಕ್ತಿಗಳ ಹೆಸರನ್ನು ಗೌಪ್ಯತೆಯ ಕಾರಣದಿಂದ ಬದಲಾಯಿಸಲಾಗಿದೆ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳುಹಿಸಿ

ಅನುವಾದ: ಶಂಕರ. ಎನ್. ಕೆಂಚನೂರು

Priti David

ப்ரிதி டேவிட் பாரியின் நிர்வாக ஆசிரியர் ஆவார். பத்திரிகையாளரும் ஆசிரியருமான அவர் பாரியின் கல்விப் பகுதிக்கும் தலைமை வகிக்கிறார். கிராமப்புற பிரச்சினைகளை வகுப்பறைக்குள்ளும் பாடத்திட்டத்துக்குள்ளும் கொண்டு வர பள்ளிகள் மற்றும் கல்லூரிகளுடன் இயங்குகிறார். நம் காலத்தைய பிரச்சினைகளை ஆவணப்படுத்த இளையோருடனும் இயங்குகிறார்.

Other stories by Priti David
Illustration : Priyanka Borar

ப்ரியங்கா போரர், தொழில்நுட்பத்தில் பல விதமான முயற்சிகள் செய்வதன் மூலம் புதிய அர்த்தங்களையும் வெளிப்பாடுகளையும் கண்டடையும் நவீன ஊடக கலைஞர். கற்றுக் கொள்ளும் நோக்கிலும் விளையாட்டாகவும் அவர் அனுபவங்களை வடிவங்களாக்குகிறார், அதே நேரம் பாரம்பரியமான தாள்களிலும் பேனாவிலும் அவரால் எளிதாக செயல்பட முடியும்.

Other stories by Priyanka Borar

பி. சாய்நாத், பாரியின் நிறுவனர் ஆவார். பல்லாண்டுகளாக கிராமப்புற செய்தியாளராக இருக்கும் அவர், ’Everybody Loves a Good Drought' மற்றும் 'The Last Heroes: Foot Soldiers of Indian Freedom' ஆகிய புத்தகங்களை எழுதியிருக்கிறார்.

Other stories by P. Sainath
Series Editor : Sharmila Joshi

ஷர்மிளா ஜோஷி, PARI-ன் முன்னாள் நிர்வாக ஆசிரியர் மற்றும் எழுத்தாளர். அவ்வப்போது கற்பிக்கும் பணியும் செய்கிறார்.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru