ಈ ಡಿಸೆಂಬರ್‌ 20ಕ್ಕೆ ʼಪರಿʼ ತನ್ನ ಏಳನೇ ವರ್ಷಕ್ಕೆ ಕಾಲಿಟ್ಟಿದೆ. ನಾವು ಈ ಕೋವಿಡ್‌ ಪಿಡುಗಿನಿಂದ ಪಾರಾಗಿ ಉಳಿದಿದ್ದಷ್ಟೇ ಅಲ್ಲದೆ ಆ ಸಮಯದಲ್ಲಿ ಸಮಾಜದ ನೆನಪಿನಲ್ಲುಳಿಯುವಂತಹ ಕೆಲಸಗಳನ್ನೂ ಮಾಡಿದೆವು.

ಕಳೆದ ವರ್ಷ ಲಾಕ್‌ಡೌನ್ ಘೋಷಣೆಯ ಮೊದಲ ದಿನದಂದು, ಭಾರತ ಸರ್ಕಾರವು ಮಾಧ್ಯಮವನ್ನು (ಮುದ್ರಣ ಮತ್ತು ಎಲೆಕ್ಟ್ರಾನಿಕ್ ಎರಡೂ) ಅತ್ಯಗತ್ಯ ಸೇವೆಯೆಂದು ಘೋಷಿಸಿತು. ಖಂಡಿತ ಇದು ಒಳ್ಳೆಯ ನಡೆ. ಈ ಸಮಯದಲ್ಲಿ ಜನರ ಬದುಕಿನ ಸಂಕಷ್ಟಗಳನ್ನು ಸಮಾಜದ ಮುಂದಿಡಲು ಮಾಧ್ಯಮಗಳ ಅಗತ್ಯ ಈ ಸಮಯದಲ್ಲಿ ಎಂದಿಗಿಂತಲೂ ಹೆಚ್ಚೇ ಇತ್ತು. ಮಾಧ್ಯಮ ಈ ಸಮಯದಲ್ಲಿ ಜನರ ಬದುಕು ಮತ್ತು ಜೀವನೋಪಾಯಗಳು ಸಂಕಷ್ಟದಲ್ಲಿರುವುದರ ಕುರಿತು ವರದಿ ಮಾಡಬೇಕಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಈ ದೇಶದ ದೊಡ್ಡ ದೊಡ್ಡ ಮಾಧ್ಯಮ ಕಂಪನಿಗಳು ಏನು ಮಾಡಿದವು? ಅವು ಎರಡರಿಂದ ಎರಡೂವರೆ ಸಾವಿರ ಪತ್ರಕರ್ತರು ಮತ್ತು ಹತ್ತು ಸಾವಿರಕ್ಕೂ ಹೆಚ್ಚು ಮಾಧ್ಯಮ ಕೆಲಸಗಾರರನ್ನು ಕೆಲಸದಿಂದ ವಜಾ ಮಾಡಿದವು.

ಹಾಗಿದ್ದರೆ ಇಷ್ಟೆಲ್ಲ ಜನರನ್ನು ಮನೆಗೆ ಕಳುಹಿಸಿ ಇವರು ದೊಡ್ಡ ದೊಡ್ಡ ವರದಿಗಳನ್ನು ಹೇಗೆ ಮಾಡುತ್ತಾರೆ? ಅದರಲ್ಲೂ ಉಳಿದವರಿಗೂ 40ರಿಂದ 60 ಶೇಕಡಾದವರೆಗೆ ಸಂಬಳ ಕಡಿತಗೊಳಿಸಿರುವಾಗ. ಪತ್ರಕರ್ತರ ತಿರುಗಾಟಗಳನ್ನೂ ಕಡಿತಗೊಳಿಸಲಾಗಿದೆ. ಆದರೆ ಈ ಕಡಿತವನ್ನು ಜಾರಿಗೊಳಿಸಿದ್ದು ಪತ್ರಕರ್ತರ ಆರೋಗ್ಯದ ಮೇಲಿನ ಕಾಳಜಿಯಿಂದಲ್ಲ, ಆದರೆ ವೆಚ್ಚ ಕಡಿತಕ್ಕಾಗಿ. ವಿಶೇಷವಾಗಿ ಮಾರ್ಚ್‌ 25, 2020ರ ನಂತರ ಎರಡು ವಾರಗಳ ಕಾಲ ಅವರು ಮಾಡಿದ ದೊಡ್ಡ ದೊಡ್ಡ ವರದಿಗಳೆಲ್ಲವೂ ದೊಡ್ಡ ನಗರಗಳ ವ್ಯಾಪ್ತಿಗಳಲ್ಲಿದ್ದವು.

ಆದರೆ ʼಪರಿʼ  ಕಳೆದ ಎಪ್ರಿಲ್‌ 2020ರ ಎಪ್ರಿಲ್‌ ತಿಂಗಳಿನಿಂದ 11 ಜನರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಯಾವುದೇ ರೀತಿಯ ವೇತನ ಕಡಿತವನ್ನು ಜಾರಿಗೊಳಿಸಿಲ್ಲ – ಮತ್ತು ಆಗಸ್ಟ್‌ 2020ರಲ್ಲಿ ಪರಿ ಬಹುತೇಕ ತನ್ನ ಉದ್ಯೋಗಿಗಳಿಗೆ ಬಡ್ತಿ ಮತ್ತು ಸಂಬಳ ಏರಿಕೆಯನ್ನು ಜಾರಿಗೊಳಿಸಿದೆ.

ನಮ್ಮ ಎಂದಿನ ಗುರುತಾದ ವರದಿಗಳ ಜೊತೆಗೆ, ʼಪರಿʼ ಈ ಮಹಾಮಾರಿ ಪ್ರಾರಂಭಗೊಂಡ ನಂತರದಿಂದ ಇದುವರೆಗೆ 270ಕ್ಕಿಂತಲೂ ಹೆಚ್ಚು (ಅವುಗಳಲ್ಲಿ ಹೆಚ್ಚಿನವು ಬಹುಮಾಧ್ಯಮ ರೂಪದಲ್ಲಿವೆ) ವರದಿಗಳು , ಡಾಕ್ಯೂಮೆಂಟ್‌ಗಳನ್ನು ಕೋವಿಡ್‌ ಕಾಲದಲ್ಲಿ ಜನರ ಜೀವನೋಪಾಯಗಳು ಎನ್ನುವ ಒಂದೇ ವಿಷಯದಡಿ ಜನರ ಮುಂದಿರಿಸಿದೆ. ಪ್ರಯಾಣವೇ ದುಸ್ಸಾಧ್ಯವಾಗಿದ್ದ ಲಾಕ್‌ಡೌನ್ ಸಮಯದಲ್ಲಿ ನಮ್ಮ ವರದಿಗಾರರು ತಮಗೆ ಲಭ್ಯವಿರುವ‌ ಯಾವುದೇ ಪ್ರಯಾಣ ಸೌಲಭ್ಯಗಳನ್ನು ಬಳಸಿ ದೇಶದ ವಿವಿಧೆಡೆಯ ಹಳ್ಳಿಗಳಿಗೆ ಹೋಗಿ ಈ ವರದಿಗಳನ್ನು ತಂದರು. ಈ ವರದಿಗಳು ದೇಶದ 23 ರಾಜ್ಯಗಳ ಬಹುತೇಕ ಪ್ರದೇಶಗಳನ್ನು ಒಳಗೊಂಡಿವೆ. ಈ ಶೀರ್ಷಿಕೆಯಡಿ ನೀವು ಸುಮಾರು 65 ವಿವಿಧ ವರದಿಗಾರರ ಹೆಸರುಗಳನ್ನು ನೋಡಬಹುದು. ʼಪರಿʼ ಈ ಮಹಾಮಾರಿಗೆ ಮೊದಲೂ ವಲಸೆ ಕಾರ್ಮಿಕರ ಸುಖ-ದುಃಖಗಳ ಕುರಿತು ವರದಿ ಮಾಡುತ್ತಿತ್ತು. ನಾವು ಇತರ ಮಾಧ್ಯಮಗಳಂತೆ ಮಾರ್ಚಿ 25, 2020ರ ನಂತರ ಇದ್ದಕ್ಕಿದ್ದಂತೆ ವಲಸೆ ಕಾರ್ಮಿಕರ ಕುರಿತು ಜ್ಞಾನೋದಯ ಹೊಂದಿದವರಲ್ಲ.

ಇದೆಲ್ಲವೂ ನಮ್ಮ ಓದುಗರಿಗೆ ತಿಳಿದಿರುವ ವಿಷಯವೇ ಆಗಿದೆ; ಗೊತ್ತಿಲ್ಲದವರಿಗಾಗಿ ಇದನ್ನೆಲ್ಲ ವಿವರಿಸುತ್ತಿದ್ದೇವೆ. ʼಪರಿʼ ಕವರ್ ಸ್ಟೋರಿಗಳು, ವರದಿಗಳು, ಫೋಟೋಗಳು ಮತ್ತು ವೀಡಿಯೊಗಳೊಂದಿಗೆ ಪತ್ರಿಕೋದ್ಯಮ ಮತ್ತು ಜೀವನೋಪಾಯದ ಮೇಲೆ ಕೇಂದ್ರೀಕೃತಗೊಂಡಿರುವ ಗ್ರಾಮೀಣ ಭಾರತದ ಅತಿದೊಡ್ಡ ಆನ್‌ಲೈನ್ ಡೇಟಾಬೇಸ್ ಆಗಿದೆ. 83.3 ಕೋಟಿ ಗ್ರಾಮೀಣ ಜನರ ದನಿ ಮತ್ತು ಅನುಭವಗಳನ್ನು ಆಲಿಸುವ ಮೂಲಕ ಅವರ ದೈನಂದಿನ ಜೀವನ ಮತ್ತು ದೈನಂದಿನ ಅನುಭವಗಳನ್ನು ಸೆರೆಹಿಡಿಯುವುದು ʼಪರಿʼಯ ಮುಖ್ಯ ಉದ್ದೇಶವಾಗಿದೆ. ʼಪರಿʼ ಜಾನಪದ ಸಂಗೀತ, ಹಾಡುಗಳು, ಚಿತ್ರಗಳು, ಮತ್ತು ಫಿಲ್ಮ್‌ ಇವೆಲ್ಲವೂ ನಮ್ಮ ಸಂಗ್ರದಲ್ಲಿ ಸೇರಿವೆ.

PHOTO • Zishaan A Latif
PHOTO • Shraddha Agarwal

ಕೋವಿಡ್-ಲಾಕ್ ಡೌನ್ ಸಮಯದಲ್ಲಿ ನಮ್ಮ ಪರಿ ತಾನು ಮಾಡಿದ ಕೆಲಸಗಳಲ್ಲಿ ಕೆಲವು ಅತ್ಯುತ್ತಮವೆನ್ನಬಹುದಾದ ಕೆಲಸಗಳನ್ನು ಮಾಡಿದೆ, ಇದರಲ್ಲಿ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ (ಎಡ) ಕುರಿತು ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಶಸ್ತಿ ವಿಜೇತ ಸರಣಿ ಮತ್ತು ಈಗ ರದ್ದುಗೊಳಿಸಲಾಗಿರುವ ಕೃಷಿ ಕಾನೂನುಗಳ ವಿರುದ್ಧ ರೈತ ಪ್ರತಿಭಟನೆಗಳ (ಬಲ) ವಿವರವಾದ ನಿರಂತರ ವರದಿಗಳೂ ಸೇರಿವೆ

ʼಪರಿʼ ತನ್ನ ಈ 84 ತಿಂಗಳುಗಳ ಪ್ರಯಾಣದಲ್ಲಿ, 42 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಎಂದರೆ ಸರಾಸರಿ 59 ದಿನಗಳಿಗೊಂದು ಪ್ರಶಸ್ತಿಯನ್ನು ಪರಿ ತನ್ನದಾಗಿಸಿಕೊಂಡಿದೆ. ಇವುಗಳಲ್ಲಿ 12 ಅಂತರಾಷ್ಟ್ರೀಯ ಪ್ರಶಸ್ತಿಗಳಾಗಿವೆ. ಮತ್ತು 16 ಪ್ರಶಸ್ತಿಗಳು ಲಾಕ್‌ಡೌನ್‌ ಅವಧಿಯ ವರದಿಗಳಿಗೆ ದೊರೆತಿವೆ. ಏಪ್ರಿಲ್ 2020ರಲ್ಲಿ, ಯುನೈಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್ ಅವರು ತಮ್ಮ ವೆಬ್ ಆರ್ಕೈವ್‌ಗಳಲ್ಲಿ ಪರಿಯನ್ನು ಸೇರಿಸಿದ್ದಾಗಿ ನಮಗೆ ತಿಳಿಸಿದರು. ಅವರು ಹೇಳಿದಂತೆ: "ನಿಮ್ಮ ವೆಬ್‌ಸೈಟ್ ಈ ಆರ್ಕೈವ್ ಮತ್ತು ಐತಿಹಾಸಿಕ ದಾಖಲೆಯ ಪ್ರಮುಖ ಭಾಗವೆಂದು ನಾವು ಪರಿಗಣಿಸುತ್ತೇವೆ."

ʼಪರಿʼ ಮಹಿಳಾ ಸಂತಾನೋತ್ಪತ್ತಿ ಆರೋಗ್ಯ ಸಂಬಂಧಿ ಪ್ರಶಸ್ತಿ ವಿಜೇತ ಸರಣಿಯನ್ನೂ ಪ್ರಕಟಿಸಿದೆ. ಈ ಸರಣಿಯು ದೇಶದ 12 ರಾಜ್ಯಗಳನ್ನು ಒಳಗೊಂಡಿದ್ದು, ವಿಶೇಷವಾಗಿ ಮಹಿಳಾ ಹಕ್ಕುಗಳು ತೀರಾ ಕನಿಷ್ಟ ಮಟ್ಟದಲ್ಲಿ ಲಭ್ಯವಿರುವ ರಾಜ್ಯಗಳನ್ನು ಒಳಗೊಂಡಿದೆ. ಈ ಸರಣಿಯ 37 ಲೇಖನಗಳಲ್ಲಿ 33 ಲೇಖನಗಳು ಕೊವಿಡ್‌ ಪಿಡುಗು ಪ್ರಾರಂಭಗೊಂಡ ನಂತರ ಮತ್ತು ಲಾಕ್‌ಡೌನ್‌ ಅವಧಿಯಲ್ಲಿ ಪ್ರಕಟಗೊಂಡವು. ಇದು ಗ್ರಾಮೀಣ ಮಹಿಳೆಯರ ಅನುಭವವನ್ನು ಆಧರಿಸಿ ನಡೆಸಲಾದ ರಾಷ್ಟ್ರವ್ಯಾಪಿ ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳ ಕುರಿತಾದ ಸರಣಿಯಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮೊದಲ ರಾಷ್ಟ್ರವ್ಯಾಪಿ ಪ್ರಯತ್ನವಾಗಿದೆ.

ಇಂತಹ ಸಂಕಷ್ಟದ ಸಮಯದಲ್ಲಿ ನಾವು ಮಾಡಿದ ಕೆಲಸಕ್ಕೆ ಪ್ರತಿಯಾಗಿ ನಮಗೆ ದೊಡ್ಡ ಸಂಖ್ಯೆಯ ಓದುಗರ ಬೆಂಬಲ ದೊರೆತಿದೆ. ಈ ಸಮಯದಲ್ಲಿ ನಮ್ಮ ಓದುಗರ ಸಂಖ್ಯೆಯಲ್ಲಿ ಸುಮಾರು 150 ಶೇಖಡಾದಷ್ಟು ಬೆಳವಣಿಗೆ ಕಂಡುಬಂದಿದೆ. ಇನ್ಸ್ಟಾಗ್ರಾಮ್‌ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಬೆಳವಣಿಗೆ 200 ಶೇಕಡಾದಷ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಮಾಡಿದ್ದ ವರದಿಗಳಲ್ಲಿನ ವ್ಯಕ್ತಿಗಳಿಗೆ ಓದುಗರು ನೇರವಾಗಿ ಲಕ್ಷಗಟ್ಟಲೆ ರೂಪಾಯಿಗಳ ಸಹಾಯ ಮಾಡಿದ್ದಾರೆ.

ಇದರೊಂದಿಗೆ ನಾವು 25 ವರದಿಗಾರರು ಮತ್ತು ಫೋಟೊಗ್ರಾಫರ್‌ಗಳ ಸಹಾಯದೊಂದಿಗೆ 65 ಸವಿವರವಾದ ವರದಿಗಳನ್ನು, ಹಾಗೂ ಹತ್ತು ದಾಖಲೆಗಳನ್ನು ಈಗ ಹಿಂಪಡೆಯಲಾಗಿರುವ ಕೃಷಿಕಾನೂನುಗಳ ವಿರುದ್ಧದ ರೈತ ಹೋರಾಟಕ್ಕೆ ಸಂಬಂಧಿಸಿದ ಪ್ರಕಟಿಸಿದ್ದೇವೆ. ಇಂತಹ ವರದಿ, ಲೇಖನಗಳು ʼಮುಖ್ಯ ವಾಹಿನಿ ಮಾಧ್ಯಮಗಳಲ್ಲಿʼ ಹುಡುಕಿದರೂ ಸಿಗುವುದಿಲ್ಲ. ಈ ವರದಿಗಳು ಕೇವಲ ದೆಹಲಿ ಗಡಿಯಿಂದಷ್ಟೇ ವರದಿಯಾಗಿಲ್ಲ. ರಾಜ್ಯದ ಹಲವು ರಾಜ್ಯಗಳಿಂದ ಈ ವಿಷಯದ ಕುರಿತು ವರದಿ ಮಾಡಲಾಗಿತ್ತು.

ನಮ್ಮ ಲೇಖನಗಳು ಈ ಐತಿಹಾಸಿಕ ಹೋರಾಟದಲ್ಲಿ ಭಾಗಿಯಾಗಿದ್ದ ಭಾಗಿಯಾಗಿದ್ದ ರೈತರನ್ನು ವೈಯಕ್ತಿಕವಾಗಿ ಮಾತನಾಡಿಸಿ ಅವರು ಎಲ್ಲಿಂದ ಬಂದವರು, ಅವರ ಬೇಸಾಯದ ಸ್ಥಿತಿ ಹೇಗಿತ್ತು, ಅವರ ಬೇಡಿಕೆಗಳೇನು, ಅವರನ್ನು ತಮ್ಮ ಕುಟುಂಬದಿಂದ ತಿಂಗಳುಗಟ್ಟಲೆ ದೂರವಿದ್ದು ಅಷ್ಟು ತೀವ್ರವಾಗಿ ಹೋರಾಡುವಂತೆ ಪ್ರೇರೇಪಿಸಿದ ವಿಷಯ ಯಾವುದು ಎನ್ನುವುದನ್ನೆಲ್ಲ ಅರಿಯಲು ಪ್ರಯತ್ನಿಸಿತು. ಈ ರೈತರೆಲ್ಲರು ದೊಡ್ಡ ದನಿಯಲ್ಲಿ ಲಾಬಿ ಮಾಡಬಲ್ಲವರಲ್ಲ ಅಥವಾ ದೊಡ್ಡ ದೊಡ್ಡ ಚಿಂತಕರಲ್ಲ. ಆದರೆ ಅವರು ನಿಜವಾಗಿಯೂ ತಮ್ಮ ದೈನಂದಿನ ಬದುಕಿನಲ್ಲಿ ರೈತರು. ʼಪರಿʼ ಸದಾ ಜನಸಾಮನ್ಯರ ದನಿ. ನಮ್ಮ ಈ ಧ್ಯೇಯದ ಭಾಗವಾಗಿಯೇ ಯಾರೂ ವರದಿ ಮಾಡದ ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ನಡೆದ ಪ್ರತಿಭಟನಾ ಹೋರಾಟಗಳಲ್ಲೇ ದೊಡ್ಡದಾದ ಶಾಂತಿಯುತ, ಪ್ರಜಾಸತ್ತಾತ್ಮಕ ರೈತ ಪ್ರತಿಭಟನೆಯನ್ನು ನಾವು ವಿಸ್ತಾರವಾಗಿ ವರದಿ ಮಾಡಿದೆವು.

PHOTO • Vandana Bansal

(ಎಡ) ʼಪರಿʼಯ ವ್ಯಾಪಕ ಅನುವಾದಗಳೊಂದಿಗೆ, ವೈವಿಧ್ಯಮಯ ಹಿನ್ನೆಲೆಯ ವಿದ್ಯಾರ್ಥಿಗಳು ಸೇರಿದಂತೆ ಓದುಗರು ನಮ್ಮ ಲೇಖನಗಳನ್ನು ಬಹು ಭಾಷೆಗಳಲ್ಲಿ ಓದಬಹುದು. (ಬಲ) ತನ್ನ ಅಸ್ತಿತ್ವದ ಒಂದು ವರ್ಷದಲ್ಲಿ, ಪರಿ ಎಜುಕೇಷನ್ 63 ವಿವಿಧ ಸ್ಥಳಗಳ ವಿದ್ಯಾರ್ಥಿಗಳಿಂದ 135 ಲೇಖನಗಳನ್ನು ಬರೆಯಿಸಿ ಪ್ರಕಟಿಸಿದೆ

ಡಿಸೆಂಬರ್ 2014ರಲ್ಲಿ ಇಂಗ್ಲಿಷ್ ಭಾಷೆಯ ಮಾಧ್ಯಮ ವೇದಿಕೆಯಾಗಿ ಸ್ಥಾಪಿಸಲಾಯಿತು, ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಈಗ ಏಕಕಾಲದಲ್ಲಿ 13 ಭಾಷೆಗಳಲ್ಲಿ ತನ್ನ ಲೇಖನಗಳನ್ನು ಪ್ರಕಟಿಸುತ್ತದೆ ಮತ್ತು ಶೀಘ್ರದಲ್ಲೇ ಇತರ ಭಾಷೆಗಳಲ್ಲಿಯೂ ಲಭ್ಯವಿರುತ್ತದೆ. ನಾವು ಸಮಾನತೆಯನ್ನು ನಂಬುತ್ತೇವೆ, ಆದ್ದರಿಂದ ನಾವು ಯಾವುದೇ ಭಾಷೆಯಲ್ಲಿ ಬರೆದ ವರದಿಯನ್ನು ಎಲ್ಲಾ 13 ಭಾಷೆಗಳಲ್ಲಿ ಪ್ರಕಟಿಸುತ್ತೇವೆ. ಭಾರತೀಯ ಭಾಷೆಗಳು ಗ್ರಾಮೀಣ ಭಾರತದ ಆತ್ಮ ಎಂದು ನಾವು ನಂಬುತ್ತೇವೆ ಮತ್ತು ಪ್ರತಿ ಭಾರತೀಯ ಭಾಷೆಯೂ ನಮ್ಮ ಭಾಷೆಯಾಗಿದೆ . ನಮ್ಮ ಭಾಷಾಂತರಕಾರರಲ್ಲಿ ವೈದ್ಯರು, ಭೌತಶಾಸ್ತ್ರಜ್ಞರು, ಶಿಕ್ಷಕರು, ಕಲಾವಿದರು, ಪತ್ರಕರ್ತರು, ಗೃಹಿಣಿಯರು, ಭಾಷಾಶಾಸ್ತ್ರಜ್ಞರು, ಬರಹಗಾರರು, ಎಂಜಿನಿಯರ್‌ಗಳು, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸೇರಿದ್ದಾರೆ. ಹಿರಿಯ ಅನುವಾದಕರಿಗೆ 84 ವರ್ಷ, ಮತ್ತು ಕಿರಿಯ ಅನುವಾದಕರಿಗೆ 22 ವರ್ಷ. ಇವರಲ್ಲಿ ಕೆಲವರು ಭಾರತದ ಹೊರಗೆ ವಾಸಿಸುತ್ತಿದ್ದಾರೆ. ಉಳಿದವರು ಭಾರತದ ದೂರದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಇಂಟರ್ನೆಟ್ ಸಂಪರ್ಕದ ಸಮಸ್ಯೆ ಬಹಳ ಹೆಚ್ಚಾಗಿರುತ್ತದೆ.

ಪರಿಯನ್ನು ಯಾರು ಬೇಕಾದರೂ ಓದಬಹುದು. ಇದು ಯಾವುದೇ ಚಂದಾದಾರಿಕೆ ಶುಲ್ಕವನ್ನು ಹೊಂದಿಲ್ಲ. ಯಾವುದೇ ಲೇಖನವನ್ನು ಓದಲು ಹಣ ಖರ್ಚು ಮಾಡುವ ಅಗತ್ಯವಿಲ್ಲ. ಮತ್ತು ನಮ್ಮ ವೆಬ್‌ಸೈಟ್‌ನಲ್ಲಿ ಯಾವುದೇ ಜಾಹೀರಾತನ್ನು ಹಾಕುವುದಿಲ್ಲ. ಜಾಹೀರಾತುಗಳ ಮೂಲಕ ಅನಗತ್ಯ ಉತ್ಪನ್ನಗಳನ್ನು ಖರೀದಿಸಲು ಯುವಕರನ್ನು ಪ್ರೋತ್ಸಾಹಿಸುವ ಅನೇಕ ಮಾಧ್ಯಮ ವೇದಿಕೆಗಳು ಈಗಾಗಲೇ ಇವೆ. ನಾವೂ ಅವರ ಜೊತೆ ಯಾಕೆ ಸೇರಬೇಕು? ನಮ್ಮ ಓದುಗರಲ್ಲಿ ಸುಮಾರು 60 ಪ್ರತಿಶತದಷ್ಟು ಜನರು 34 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಅವರಲ್ಲಿ ಸುಮಾರು 60 ಪ್ರತಿಶತದಷ್ಟು ಜನರು 18ರಿಂದ 24 ವರ್ಷ ವಯಸ್ಸಿನವರು. ನಮ್ಮೊಂದಿಗೆ ಕೆಲಸ ಮಾಡುವ ಅನೇಕ ವರದಿಗಾರರು, ಬರಹಗಾರರು ಮತ್ತು ಛಾಯಾಗ್ರಾಹಕರು ಸಹ 18ರಿಂದ 24 ವರ್ಷ ವಯಸ್ಸಿನವರು.

ನಮ್ಮ ಅತಿ ಕಿರಿಯ ವಿಭಾಗವಾದ ʼಪರಿ ಎಜುಕೇಷನ್‌ ʼ ತಾನು ಪ್ರಾರಂಭಗೊಂಡ ಒಂದು ವರ್ಷದಲ್ಲೇ ಮಹತ್ತರವಾದುದನ್ನು ಸಾಧಿಸಿದೆ. ಅದು ಈಗ ಭವಿಷ್ಯದ ಪಠ್ಯಪುಸ್ತಕಗಳನ್ನು ತಯಾರಿಸುವಲ್ಲಿ ತೊಡಗಿದೆ. ಶಿಕ್ಷಣ ವಲಯದ 95 ಶಿಕ್ಷಣ ಸಂಸ್ಥೆಗಳು ಮತ್ತು 17 ಸಂಸ್ಥೆಗಳು ʼಪರಿʼಯನ್ನು ತಮ್ಮ ಪಠ್ಯಪುಸ್ತಕವಾಗಿ ಮತ್ತು ಗ್ರಾಮೀಣ ಬದುಕಿನ ಕುರಿತ ಕಲಿಕಾ ಮಾಧ್ಯಮವಾಗಿ ಉಪಯೋಗಿಸಿಕೊಳ್ಳುತ್ತಿವೆ. ಇವುಗಳಲ್ಲಿ 36 ಸಂಸ್ಥೆಗಳು ಪರಿ ಕೇಂದ್ರಿತ ಪಠ್ಯಕ್ರಮವನ್ನು ರಚಿಸುತ್ತಿದ್ದು, ಇದು ವಿದ್ಯಾರ್ಥಿಗಳಿಗೆ ಸಮಾಜದ ಅಂಚಿನಲ್ಲಿರುವ ಜನರೊಡನೆ ತೊಡಗಿಸಿಕೊಳ್ಳಲು ಅನುಕೂಲ ಮಾಡಿಕೊಡಲಿದೆ. ʼಪರಿ ಎಜುಕೇಷನ್‌ʼ 63 ಸ್ಥಳಗಳಿಂದ 135 ವರದಿಗಳನ್ನು ವಿದ್ಯಾರ್ಥಿಗಳಿಂದಲೇ ಬರೆಯಿಸಿ ಪ್ರಕಟಿಸಿದೆ. ಇದು ಕೃಷಿ ಸಂಕಷ್ಟಗಳು, ಮರೆಯಾಗುತ್ತಿರುವ ಜೀವನೋಪಾಯಗಳು, ಲಿಂಗತ್ವ ಸಮಸ್ಯೆಗಳು ಇತ್ಯಾದಿಯನ್ನು ಒಳಗೊಂಡಿದೆ. 2021ರ ಜನವರಿಯಿಂದ ಈ ವಿಭಾಗವು 120ಕ್ಕೂ ಹೆಚ್ಚು ಆನ್‌ಲೈನ್‌ ಮಾತುಕತೆ ಮತ್ತು ವರ್ಕ್‌ಶಾಪ್‌ಗಳನ್ನು ವಿವಿಧ ಖ್ಯಾತ ವಿಶ್ವವಿದ್ಯಾಲಯಗಳು ಮತ್ತು ದೂರದ ಹಳ್ಳಿಗಳ ಶಾಲೆಗಳಲ್ಲಿ ನಡೆಸಿದೆ.

ʼಪರಿʼಯ ಪಾಲಿಗೆ ʼಗ್ರಾಮೀಣʼ ಎನ್ನುವುದು ಸುಂದರವಾದ ರೋಮ್ಯಾಂಟಿಕ್‌ ಪ್ರದೇಶವಲ್ಲ. ಅಥವಾ ಸಾಂಸ್ಕೃತಿಕ ಆಚರಣೆಗಳ ವೈಭವೀಕರಣವೂ ಅಲ್ಲ ಅಥವಾ ಸದಾ ಒಬ್ಬರು ನೆಲೆಸಲು ಬಯಸುವ ಹಳೆಯ ನೆನಪುಗಳ ಜೀವನ ವಿಧಾನವೂ ಅಲ್ಲ. ಪರಿಯ ಪ್ರಯಾಣವು ಗ್ರಾಮೀಣ ಭಾರತವನ್ನು ನಿರ್ಮಿಸುವ ಸಂಕೀರ್ಣತೆಗಳು ಮತ್ತು ಹೊರಗಿಡುವಿಕೆಗಳ ಅನ್ವೇಷಣೆಯಾಗಿದೆ. ಗ್ರಾಮೀಣ ಭಾರತದ ಮೂಲಕ ರಾಷ್ಟ್ರದ ಪರಿಕಲ್ಪನೆಯ ಸಂಕೀರ್ಣತೆಗಳ ಬಗ್ಗೆ ಮತ್ತು ಗ್ರಾಮೀಣ ಭಾರತವನ್ನು ಸ್ಥಾಪಿಸಿದ ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳ ಬಗ್ಗೆ ಮಾತನಾಡುತ್ತದೆ. ಗ್ರಾಮೀಣ ಭಾರತದ ಈ ಚಿತ್ರವು ಎಷ್ಟು ಸುಂದರ ಮತ್ತು ಅದ್ಭುತವಾಗಿದೆಯೋ ಅಷ್ಟೇ ಕ್ರೂರ ಮತ್ತು ಅನಾಗರಿಕವಾಗಿದೆಯೆನ್ನುವ ಅರಿವು ʼಪರಿʼಯದು. ʼಪರಿʼಯಲ್ಲಿ ಕೆಲಸ ಮಾಡುವ ನಮಗೂ ಈ ಪ್ರಯಾಣವೊಂದು ನಿರಂತರ ಕಲಿಕೆಯಾಗಿದೆ. ಭಾರತದ ಜನಸಾಮನ್ಯರು ನಮ್ಮಲ್ಲಿ ಮೂಡಿಸುವ ಈ ಅರಿವನ್ನು ನಾವು ಗೌರವಿಸುತ್ತೇವೆ. ಅವರ ಬದುಕಿನ ಕತೆಗಳನ್ನೇ ಹೇಳು ನೌು ಈ ಸಂಕಷ್ಟದ ಸಮಯದ್ಲಲಿಯೂ ಆಯ್ಕೆ ಮಾಡಿಕೊಳ್ಳುವುದಕ್ಕೆ ಇದು ಕೂಡಾ ಒಂದು ಕಾರಣ.

PHOTO • Rahul M.
PHOTO • P. Sainath

ಹವಾಮಾನ ಬದಲಾವಣೆಯ ಕುರಿತು ನಮ್ಮ ಪ್ರಶಸ್ತಿ ವಿಜೇತ ಸರಣಿ (ಎಡ), ಸಾಮಾನ್ಯ ಜನರು ಮತ್ತು ಅವರ ಜೀವನದ ಅನುಭವಗಳ ಮೂಲಕ ಪರಿಸರ ಬದಲಾವಣೆಗಳನ್ನು ದಾಖಲಿಸುತ್ತದೆ; ಜೊತೆಗೆ, ನಾವು ಭಾರತದ ಕೊನೆಯ ಜೀವಂತ ಸ್ವಾತಂತ್ರ್ಯ ಹೋರಾಟಗಾರರ (ಬಲ) ಕುರಿತು ನಮ್ಮ ವಿಭಾಗವನ್ನು ನಿರಂತರವಾಗಿ ವಿಸ್ತರಿಸುತ್ತಿದ್ದೇವೆ

ಹವಾಮಾನ ಬದಲಾವಣೆ (ಪ್ರಶಸ್ತಿ) ಕುರಿತು ನಾವು ಪ್ರಕಟಿಸಿದ ಲೇಖನಗಳ ಸರಣಿ ಯನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಪುಸ್ತಕವಾಗಿ ಪ್ರಕಟಿಸಲಾಗುವುದು. ಈ ಸರಣಿಯು ರೈತರು, ಕಾರ್ಮಿಕರು, ಮೀನುಗಾರರು, ಅರಣ್ಯವಾಸಿಗಳು, ಕಡಲಕಳೆ ಆಯುವವರು, ಅಲೆಮಾರಿ ಕುರಿಗಾಹಿಗಳು, ಜೇನುಸಾಕಣೆದಾರರು, ಕೀಟ ಸಾಕಣೆಯಲ್ಲಿ ತೊಡಗಿರುವ ಜನರು ಮತ್ತು ಇತರರ ಅನುಭವ ಮತ್ತು ಹೇಳಿಕೆಗಳನ್ನು ಆಧರಿಸಿದೆ. ಮತ್ತು ಹವಾಮಾನ ಬದಲಾವಣೆಗೆ ಗುರಿಯಾಗುವ ಪರ್ವತ ಪ್ರದೇಶಗಳು, ಕಾಡುಗಳು, ಸಮುದ್ರಗಳು, ಕರಾವಳಿ ಪ್ರದೇಶಗಳು, ನದಿ ಜಲಾನಯನ ಪ್ರದೇಶಗಳು, ಹವಳದ ದ್ವೀಪಗಳು, ಮರುಭೂಮಿಗಳು, ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳ ಪರಿಸರ ವ್ಯವಸ್ಥೆಗಳಿಗೆ ಸಂಬಂಧಿಸಿದ ಕಥೆಗಳಿವೆ.

ಸಾಂಪ್ರದಾಯಿಕ ಮಾಧ್ಯಮದ ಭಾರೀ ಪದಗಳ ಬಳಕೆ, ಸಾಮಾನ್ಯ ಓದುಗರನ್ನು ದೂರವಿಡುತ್ತದೆ ಮತ್ತು ಹವಾಮಾನ ಬದಲಾವಣೆಯು ಆರ್ಕ್ಟಿಕ್ ಹಿಮನದಿಗಳ ಕರಗುವಿಕೆ, ಅಮೆಜಾನ್ ಮಳೆಕಾಡಿನ ನಾಶ ಮತ್ತು ಆಸ್ಟ್ರೇಲಿಯಾದಲ್ಲಿ ಬೆಂಕಿ ತುಂಬಿದೆ ಎಂದು ಅರ್ಥೈಸುವ ಒಂದು ರೀತಿಯ ಸ್ಟೀರಿಯೊಟೈಪ್ ನಂಬಿಕೆಯನ್ನು ಸ್ಥಾಪಿಸುತ್ತದೆ. ಮತ್ತೊಂದೆಡೆ, ಇಂಟರ್‌ಗವರ್ನಮೆಂಟಲ್ ಕಾನ್ಫರೆನ್ಸ್‌ಗಳಲ್ಲಿ ಒಪ್ಪಂದಗಳು ಅಥವಾ ಪ್ರಮುಖ ವರದಿಯಾದ ಐಪಿಸಿಸಿ (ಹವಾಮಾನ ಬದಲಾವಣೆಯ ಕುರಿತು ಇಂಟರ್‌ಗವರ್ನಮೆಂಟಲ್ ಪ್ಯಾನಲ್) ವರದಿಗಳನ್ನು ಸಂಕೀರ್ಣ ಭಾಷೆಯಲ್ಲಿ ಬರೆಯಲಾಗಿದೆ, ಅವುಗಳು ಓದಲು ಸಾಧ್ಯವಿಲ್ಲ. ʼಪರಿʼ ವರದಿಗಾರರು ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ತಮ್ಮ ಓದುಗರ ಮುಂದೆ ಕಥೆಗಳ ಮೂಲಕ ಸಾಮಾನ್ಯ ಜನರು ಆರಾಮವಾಗಿ ಓದುವ ರೀತಿಯಲ್ಲಿ ಪ್ರಸ್ತುತಪಡಿಸುತ್ತಾರೆ.

ದೇಶವು ಸ್ವಾತಂತ್ರ್ಯದ 75ನೇ ವರ್ಷವನ್ನು ಸಮೀಪಿಸುತ್ತಿರುವಾಗ, ನಾವು ನಮ್ಮ ನಡುವೆ ಈಗಲೂ ಬದುಕಿರುವ ಭಾರತದ ಕೊನೆಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ (ಲೇಖನಗಳು, ವೀಡಿಯೊಗಳು ಮತ್ತು ಆಡಿಯೊಗಳ ಮೂಲಕ) ಬರೆಯುವುದನ್ನು ಮುಂದುವರಿಸುತ್ತೇವೆ. ಮುಂಬರುವ 5-7 ವರ್ಷಗಳಲ್ಲಿ, ಈ ತಲೆಮಾರಿನ ಸ್ವಾತಂತ್ರ್ಯ ಹೋರಾಟಗಾರರ ಯಾವುದೇ ಸದಸ್ಯರು ನಮ್ಮೊಂದಿಗೆ ಉಳಿಯುವುದಿಲ್ಲ ಮತ್ತು ಭಾರತದ ಮಕ್ಕಳು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಕಥೆಗಳನ್ನು ಕೇಳಲು ಸಾಧ್ಯವಾಗುವುದಿಲ್ಲ. ʼಪರಿʼಯ ಅಸ್ತಿತ್ವದಲ್ಲಿರುವ ವೇದಿಕೆಯಲ್ಲಿ, ಅವರು ಹೋರಾಟಗಾರರ ಮಾತಿನಲ್ಲಿ ಸ್ವಾತಂತ್ರ್ಯ ಹೋರಾಟದ ಕತೆಯನ್ನು ಕೇಳಬಹುದು, ವೀಕ್ಷಿಸಬಹುದು ಮತ್ತು ಓದಬಹುದು.

ನಾವು ಸೀಮಿತ ಸಂಪನ್ಮೂಲಗಳೊಂದಿಗೆ ಕೆಲಸ ಮಾಡುತ್ತಿರುವ ಹೊಸ ಮಾಧ್ಯಮ ವೇದಿಕೆಯಾಗಿರಬಹುದು, ಆದರೆ ನಾವು ಭಾರತೀಯ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅತಿದೊಡ್ಡ ಫೆಲೋಶಿಪ್ ಕಾರ್ಯಕ್ರಮವನ್ನು ನಡೆಸುತ್ತೇವೆ. ಎಲ್ಲಾ 95 (ಭೌಗೋಳಿಕವಾಗಿ ಮತ್ತು ಐತಿಹಾಸಿಕವಾಗಿ ಪ್ರಮುಖ) ಪ್ರದೇಶಗಳು ಮತ್ತು ಅಲ್ಲಿನ ಗ್ರಾಮೀಣ ಪ್ರದೇಶಗಳಿಂದ ಒಬ್ಬ ಬರಹಗಾರ ಹೊರಹೊಮ್ಮಬೇಕು ಮತ್ತು ಆ ಪ್ರದೇಶಗಳಿಗೆ ಸಂಬಂಧಿಸಿದ ಕಥೆಗಳನ್ನು ಹೊರತರಬೇಕೆನ್ನುವುದು ನಮ್ಮ ಗುರಿಯಾಗಿದೆ. ನಮ್ಮ ಫೆಲೋಶಿಪ್ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾದ ಎಲ್ಲಾ 30 ಫೆಲೋಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು, ಮತ್ತು ಅವರಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತರು ಮತ್ತು ಸಾಂಪ್ರದಾಯಿಕವಾಗಿ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸೇರಿದವರು.

ಈ ಏಳು ವರ್ಷಗಳಲ್ಲಿ ನಾವು 240 ಇಂಟರ್ನ್‌ಗಳೊಂದಿಗೆ ಕೆಲಸ ಮಾಡಿದ್ದೇವೆ, ಅದರಲ್ಲಿ 80 ಇಂಟರ್ನ್‌ಗಳು ʼಪರಿʼ ಶಿಕ್ಷಣ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ʼಪರಿʼಯೊಂದಿಗೆ 2-3 ತಿಂಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ವಿಭಿನ್ನ ರೀತಿಯ ಪತ್ರಿಕೋದ್ಯಮವನ್ನು ಕಲಿಯುತ್ತಿದ್ದಾರೆ.

PHOTO • Supriti Singha

ʼಪರಿʼ ಪ್ರಪಂಚದ ಯಾವುದೇ ಭಾಷೆಯಲ್ಲಿ ಗ್ರಾಮೀಣ ಮಹಿಳೆಯರು ಸಂಯೋಜಿಸಿದ ಮತ್ತು ಹಾಡಿರುವ ಹಾಡುಗಳ ದೊಡ್ಡ ಸಂಗ್ರಹವನ್ನು ಹೊಂದಿದೆ - ಗ್ರೈಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್‌ (ಎಡ). ಜೊತೆಗೆ, 'ಫೇಸ್' ಯೋಜನೆಯು ಈ ದೇಶದ ಜನರ ಮುಖಗಳ ವೈವಿಧ್ಯತೆಯನ್ನು ಸಂಗ್ರಹಿಸುತ್ತದೆ ( ಬಲ)

ಇದರ ಹೊರತಾಗಿ, ವೈವಿಧ್ಯಮಯ ಸಂಸ್ಕೃತಿಗಳು, ಭಾಷೆಗಳು, ಕಲಾ ಪ್ರಕಾರಗಳ ದೊಡ್ಡ ಭಂಡಾರವನ್ನು ನಾವು ಹೊಂದಿದ್ದೇವೆ. ಪ್ರಪಂಚದ ಯಾವುದೇ ಭಾಷೆಯಲ್ಲಿ ಗ್ರಾಮೀಣ ಮಹಿಳೆಯರು ರಚಿಸಿ ಹಾಡಿರುವ ಹಾಡುಗಳ ದೊಡ್ಡ ಸಂಗ್ರಹ ನಮ್ಮಲ್ಲಿದೆ. ಅದೇನೆಂದರೆ, ಮಹಾರಾಷ್ಟ್ರದ ಗ್ರಾಮಾಂತರ ಮತ್ತು ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಮಹಿಳೆಯರು ರಚಿಸಿ ಹಾಡಿರುವ 110,000 ಹಾಡುಗಳ ಸಂಗ್ರಹವಿರುವ 'ಗ್ರೈಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್ ' ನಮ್ಮ ವೇದಿಕೆಯಲ್ಲಿದೆ. ಇಲ್ಲಿಯವರೆಗೆ, ಈ ಹಾಡುಗಳಲ್ಲಿ ಸುಮಾರು 69000 ಸಾವಿರದಷ್ಟನ್ನು ನಮ್ಮ ತಂಡವು ಇಂಗ್ಲಿಷ್‌ಗೆ ಅನುವಾದಿಸಿದೆ.

ಜಾನಪದ ಕಲೆಗಳು, ಸಂಗೀತ, ಕಲಾವಿದರು, ಕುಶಲಕರ್ಮಿಗಳು, ಸೃಜನಶೀಲ ಬರವಣಿಗೆ ಮತ್ತು ಕವನಗಳನ್ನು ನಮ್ಮ ವೇದಿಕೆಯಲ್ಲಿ ಇರಿಸುವ ಮೂಲಕ ನಾವು ಭಾರತದ ವಿವಿಧ ಭಾಗಗಳಿಂದ ಬರುವ ಕಥೆಗಳು ಮತ್ತು ವೀಡಿಯೊಗಳ ಸಂಗ್ರಹವನ್ನು ಸ್ಥಾಪಿಸಿದ್ದೇವೆ. ಕಳೆದ ಎರಡು-ಮೂರು ದಶಕಗಳಲ್ಲಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ತೆಗೆದ ಕಪ್ಪು ಬಿಳುಪು ಛಾಯಾಚಿತ್ರಗಳ ಸಂಗ್ರಹ ಇರುವ ಏಕೈಕ ವೇದಿಕೆ ಬಹುಶಃ ನಮ್ಮ ವೇದಿಕೆಯಾಗಿದೆ, ಅಲ್ಲಿ ಒಟ್ಟು ಹತ್ತು ಸಾವಿರ ಛಾಯಾಚಿತ್ರಗಳು ಈ ಸಂಗ್ರಹದ  ಭಾಗವಾಗಿವೆ. ಈ ಚಿತ್ರಗಳಲ್ಲಿ ಹೆಚ್ಚಿನವು ಕೆಲಸ ಮಾಡುವ ಜನರ ಚಿತ್ರಗಳಾಗಿವೆ, ಆದರೂ ಕೆಲವು ಚಿತ್ರಗಳಲ್ಲಿ ಅವರನ್ನು ವಿಶ್ರಾಂತಿ ಪಡೆಯುತ್ತಿರುವಾಗಲೂ ಸಹ ಕಾಣಬಹುದು.

ಇಲ್ಲಿ ನಾವು ನಮ್ಮ ಫೇಸ್ ಪ್ರಾಜೆಕ್ಟ್ ‌ಕುರಿತು ಹೆಮ್ಮೆಯಿಂದ ಉಲ್ಲೇಖಿಸಲು ಬಯಸುತ್ತೇವೆ, ಇದು ದೇಶಾದ್ಯಂತ ಜನರ ಮುಖಗಳ ವೈವಿಧ್ಯತೆಯನ್ನು ಸಂಗ್ರಹಿಸುತ್ತದೆ. ಈ ಮುಖಗಳು ರಾಜಕಾರಣಿಗಳು ಅಥವಾ ಸೆಲೆಬ್ರಿಟಿಗಳದ್ದಲ್ಲ, ಆದರೆ ಸಾಮಾನ್ಯ ಜನರದು. ದೇಶದ ಪ್ರತಿ ಜಿಲ್ಲೆ ಮತ್ತು ಪ್ರತಿ ಬ್ಲಾಕ್‌ನ ಜನರ ಚಿತ್ರಗಳನ್ನು ನಾವು ಹೊಂದಿರಬೇಕೆನ್ನುವುದು ನಮ್ಮ ಗುರಿಯಾಗಿದೆ. ಇಲ್ಲಿಯವರೆಗೆ ನಾವು ದೇಶದ 220 ಜಿಲ್ಲೆಗಳು ಮತ್ತು 629 ಬ್ಲಾಕ್‌ಗಳಿಂದ 2756 ಮುಖಗಳ ಚಿತ್ರಗಳನ್ನು ಹೊಂದಿದ್ದೇವೆ. ತಮ್ಮ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 164 ಛಾಯಾಗ್ರಾಹಕರು ಈ ಚಿತ್ರಗಳನ್ನು ತೆಗೆದಿದ್ದಾರೆ. ಒಟ್ಟಾರೆಯಾಗಿ, ಕಳೆದ ಏಳು ವರ್ಷಗಳಲ್ಲಿ, ʼಪರಿʼ ತನ್ನ ವೇದಿಕೆಯಲ್ಲಿ 576 ಛಾಯಾಗ್ರಾಹಕರನ್ನು ಪ್ರತಿನಿಧಿಸಿದೆ.

ನಮ್ಮ ಅಮೂಲ್ಯ ಲೈಬ್ರರಿಯಲ್ಲಿ ಲಭ್ಯವಿರುವ ವಿಷಯಗಳಿಗೆ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ, ಇದು ಸಂಪೂರ್ಣವಾಗಿ ಉಚಿತ. ಯಾವುದೇ ಪ್ರಮುಖ ವರದಿಗಳು, ಡಾಕ್ಯುಮೆಂಟ್‌ಗಳು, ಕಾನೂನು ಮಾಹಿತಿ ಮತ್ತು ಮುದ್ರಣ ರೂಪದಲ್ಲಿ ಲಭ್ಯವಿಲ್ಲದ ಪುಸ್ತಕಗಳು, ಎಲ್ಲವೂ ʼಪರಿʼಯ ಲೈಬ್ರರಿಯಲ್ಲಿ ಲಭ್ಯವಿದೆ, ಅಲ್ಲಿ ನೀವು ಅವುಗಳನ್ನು ಡೌನ್‌ಲೋಡ್ ಮಾಡಬಹುದು ಅಥವಾ ಮುದ್ರಿಸಬಹುದು ಮತ್ತು ಸರಿಯಾದ ಉಲ್ಲೇಖಗಳೊಂದಿಗೆ, ನೀವು ಅವುಗಳನ್ನು ಉಚಿತವಾಗಿ ಬಳಸಬಹುದು. ಈ ಗ್ರಂಥಾಲಯದ ಇನ್ನೊಂದು ವಿಭಾಗವು ʼಪರಿʼ ಹೆಲ್ತ್ ಆರ್ಕೈವ್ , ಇದು ನಾವು ಕೊರೋನಾ ಪಿಡುಗಿನ ಮೊದಲ ವರ್ಷದಲ್ಲಿ ಪ್ರಾರಂಭಿಸಿದ್ದೇವೆ ಮತ್ತು ಈಗ ಒಟ್ಟು 140 ಪ್ರಮುಖ ಆರೋಗ್ಯ ವರದಿಗಳು ಮತ್ತು ದಾಖಲೆಗಳನ್ನು ಇದು ಒಳಗೊಂಡಿದೆ, ಅವುಗಳಲ್ಲಿ ಹಲವು ಕೆಲವು ದಶಕಗಳಷ್ಟು ಹಳೆಯವು, ಆದರೆ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಇತ್ತೀಚಿನ ವರದಿಗಳು ಸಹ ಲಭ್ಯವಿದೆ.

ಪರಿ ಸಾರ್ವಜನಿಕ ಮತ್ತು ಖಾಸಗಿ ಎರಡೂ ಬಗೆಯ ಒತ್ತಡಗಳಿಂದ ಮುಕ್ತವಾಗಿದೆ. ಮತ್ತು ನಾವು ಯಾವುದೇ ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ. ಇದು ನಮ್ಮ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆಯಾದರೂ, ನಾವು ಓದುಗರಾದ ನಿಮ್ಮ ಸಹಾಯ ಮತ್ತು ಆರ್ಥಿಕ ಬೆಂಬಲವನ್ನು ಅವಲಂಬಿಸಿರುತ್ತೇವೆ. ಇದು ತಮಾಷೆಯಲ್ಲ. ನೀವು ನಮಗೆ ಸಹಾಯ ಮಾಡದಿದ್ದರೆ, ನಾವು ತೊಂದರೆಗೆ ಸಿಲುಕುತ್ತೇವೆ. ಆದ್ದರಿಂದ, ದಯವಿಟ್ಟು ʼಪರಿʼಗೆ ಆರ್ಥಿಕವಾಗಿ ಸಹಾಯ ಮಾಡಿ , ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿ ಮತ್ತು ಉತ್ತಮ ಪತ್ರಿಕೋದ್ಯಮಕ್ಕೊಂದು ಅವಕಾಶ ನೀಡಿ.

ಅನುವಾದ: ಶಂಕರ. ಎನ್. ಕೆಂಚನೂರು

பி. சாய்நாத், பாரியின் நிறுவனர் ஆவார். பல்லாண்டுகளாக கிராமப்புற செய்தியாளராக இருக்கும் அவர், ’Everybody Loves a Good Drought' மற்றும் 'The Last Heroes: Foot Soldiers of Indian Freedom' ஆகிய புத்தகங்களை எழுதியிருக்கிறார்.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru