ಮಳೆಗಾಲದ ಮೊದಲ ಧಾರೆ ಸುರಿಯಿತು ಎಂದರೆ ಸಾನಿಯಾ ಮುಲ್ಲಾನಿ ತಾನು ಹುಟ್ಟಿದ ದಿನದಂದು ನುಡಿದ ಭವಿಷ್ಯವಾಣಿಯನ್ನು ನೆನಪಿಸಿಕೊಳ್ಳುತ್ತಾರೆ.
ಆಕೆ ಹುಟ್ಟಿದ್ದು 2005ನೇ ಇಸವಿಯ ಜುಲೈ ಮಾಸದಲ್ಲಿ. ಅಂದರೆ, ಮಹಾರಾಷ್ಟçದಲ್ಲಿ 1,000ಕ್ಕಿಂತ ಹೆಚ್ಚಿನ ಜನರ ಜೀವಕ್ಕೆ ಎರವಾದ ಮತ್ತು 20 ಮಿಲಿಯನ್ ಜನರನ್ನು ಬಾಧಿಸಿದ ಭೀಕರ ಪ್ರವಾಹದ ಒಂದು ವಾರ ನಂತರ. “ಆಕೆ ಹುಟ್ಟಿದ್ದು ಪ್ರವಾಹದ ವೇಳೆ; ಆಕೆ ಹೆಚ್ಚಿನ ಸಮಯವನ್ನು ಪ್ರವಾಹದ ಜೊತೆಯಲ್ಲೇ ಕಳೆಯುತ್ತಾಳೆ,” ಎಂದು ಗ್ರಾಮಸ್ಥರು ಆಕೆಯ ಹೆತ್ತವರ ಬಳಿ ಹೇಳಿದ್ದರು.
2022ರ ಜುಲೈ ತಿಂಗಳಿನ ಮೊದಲ ವಾರದಲ್ಲಿ ಭಾರೀ ಮಳೆ ಸುರಿಯಲು ಆರಂಭಿಸಿದಾದ ಹದಿನೇಳು ವರ್ಷ ಪ್ರಾಯದ ಯುವತಿ ಸಾನಿಯಾ ಆ ಮಾತುಗಳನ್ನು ಮತ್ತೆ ನೆನಪಿಸಿಕೊಂಡರು. “ಪಾನಿ ವಾಡತ್ ಚಾಲ್ಲೆ” (ನೀರು ಏರುತ್ತಿದೆ) ಎಂಬ ಮಾತು ಕಿವಿಗೆ ಬಿದ್ದಾಗಲೆಲ್ಲ ಮತ್ತು ಪ್ರವಾಹ ಬಾಧಿಸುವ ಭಯ ಕಾಡುತ್ತದೆ,” ಎಂದು ಮಹಾರಾಷ್ಟದ ಕೊಲ್ಲಾಪುರ ಜಿಲ್ಲೆಯ ಹಾತ್‌ಕಣಗಲೆ ತಾಲೂಕಿನ ಭೇಂಡಾವಾಡೆ ಗ್ರಾಮದ ನಿವಾಸಿಗಳು ಹೇಳುತ್ತಾರೆ. 2019ರಿಂದ ಇಲ್ಲಿಯ ತನಕ ಈ ಗ್ರಾಮದ 4,686 ನಿವಾಸಿಗಳು ಎರಡೆರಡು ಪ್ರವಾಹಗಳಿಗೆ ಸಾಕ್ಷಿಯಾಗಿದ್ದಾರೆ.
2019ರ ಅಗಸ್ಟ್ ತಿಂಗಳ ಪ್ರವಾಹದ ಸಮಯದಲ್ಲಿ ಕೇವಲ 24 ಗಂಟೆಯೊಳಗೆ ನೀರಿನ ಮಟ್ಟ ಏಳು ಅಡಿಗಳಷ್ಟು ಏರಿ ನಮ್ಮ ಮನೆಯನ್ನು ಮುಳುಗಿಸಿತ್ತು” ಎಂದು ಸಾನಿಯಾ ನೆನಪಿಸಿಕೊಳ್ಳುತ್ತಾರೆ. ಇನ್ನೇನು ಪ್ರವಾಹದ ನೀರಿ ಮನೆಯೊಳಗೆ ನುಗ್ಗಿಯೇ ಬಿಟ್ಟಿತು ಎನ್ನುವಷ್ಟರಲ್ಲೇ ಮುಲ್ಲಾನಿ ಕುಟುಂಬ ಅಲ್ಲಿಂದ ಪಾರಾಗಿತ್ತು. ಆದರೆ, ಆ ಘಟನೆ ಸಾನಿಯಾಳಿಗೆ ತೀವ್ರ ಮಾನಸಿಕ ಆಘಾತಕ್ಕೆ ಉಂಟು ಮಾಡಿತ್ತು.
ಮುಂದೆ 2022ರಲ್ಲಿ ಮತ್ತೊಂದು ಪ್ರವಾಹ ಗ್ರಾಮಸ್ಥರನ್ನು ಕಾಡಿತ್ತು. ಈ ಬಾರಿ ಅವರ ಕುಟುಂಬವನ್ನು ಪ್ರವಾಹ ಪೀಡಿತರ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅವರು ಅಲ್ಲಿ ಮೂರು ಇದ್ದು, ಪರಿಸ್ಥಿತಿ ತಿಳಿಗೊಂಡಿದೆ ಎಂದು ಗ್ರಾಮದ ಅಧಿಕಾರಿಗಳು ಹೇಳಿದ ಬಳಿಕವಷ್ಟೇ ಮನೆಗೆ ಹಿಂದಿರುಗಿದ್ದರು.
ಸಾನಿಯಾ ಟೆಕ್ವಾಂಡೊ ಚ್ಯಾಂಪಿಯನ್ ಆಗಿರುವ ಬ್ಲ್ಯಾಕ್ ಬೆಲ್ಟ್ ಸಲುವಾಗಿ ಪಡೆಯುತ್ತಿದ್ದ ತರಬೇತಿ 2019ರ ಪ್ರವಾಹದ ಬಳಿಕ ಮೊಟಕುಗೊಂಡಿದೆ. ಕಳೆದ ಮೂರು ವರ್ಷಗಳಿಂದ ದಣಿವು, ಆತಂಕ, ಸಿಡುಕುತನ, ಉದ್ವೇಗ ಆಕೆಯನ್ನು ತೀವ್ರವಾಗಿ ಕಾಡುತ್ತಿದೆ. “ನನಗೆ ತರಬೇತಿ ಮೇಲೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ” ಎಂದು ಹೇಳುವ ಸಾನಿಯಾ, “ಈಗಂತೂ ನನ್ನ ತರಬೇತಿ ಮಳೆಯನ್ನೇ ಅವಲಂಬಿಸಿಕೊAಡಿದೆ,” ಎನ್ನುತ್ತಾರೆ.
ಈ ಮೇಲಿನ ರೋಗಲಕ್ಷಣಗಳು ಕಾಣಿಸಿಕೊಂಡಾಗ, ಇದೆಲ್ಲ ಕಾಲಕ್ರಮೇಣ ಸರಿಹೋಗಬಹುದು ಎಂದೇ ಆಕೆಗೆ ಅನಿಸಿತ್ತು. ಆದರೆ, ಹಾಗಾಗದೇ ಇದ್ದಾಗ, ಆಕೆ ಸ್ಥಳೀಯ ಖಾಸಗಿ ವೈದ್ಯರನ್ನು ಸಂಪರ್ಕಿಸಿದ್ದಳು. 2019ರಿಂದೀಚಿಗೆ ಕನಿಷ್ಠ 20 ಸಲವಾದರೂ ಆಕೆ ವೈದ್ಯರನ್ನು ಕಂಡಿದ್ದಾಳೆ. ಆದರೆ, ತಲೆಸುತ್ತು, ದಣಿವು, ಮೈಕೈ ನೋವು, ಆಗಾಗ ಬರುವ ಜ್ವರ, ಏಕಾಗ್ರತೆಯ ಕೊರತೆ ಮತ್ತು “ಮಾನಸಿಕ ತುಮುಲ ಮತ್ತು ಒತ್ತಡ”ದಿಂದ ಮುಕ್ತಿ ಸಿಗುತ್ತಿಲ್ಲ.
“ಈಗಂತೂ ವೈದ್ಯರ ಬಳಿ ಹೋಗಬೇಕು ಎಂಬುದನ್ನು ನೆನೆಸಿಯೇ ಹೆದರಿಕೆ ಉಂಟಾಗುತ್ತದೆ” ಎಂದಾಕೆ ಹೇಳುತ್ತಾರೆ. “ಖಾಸಗಿ ವೈದ್ಯರು ಪ್ರತೀ ಭೇಟಿಗೆ ಕನಿಷ್ಟ ನೂರು ರೂಪಾಯಿ ಶುಲ್ಕ ಪಡೆಯುತ್ತಾರೆ. ಜೊತೆಯಲ್ಲಿ ಔಷಧಿ, ವಿವಿಧ ವೈದ್ಯಕೀಯ ತಪಾಸಣೆ, ಫಾಲೋ-ಅಪ್ ಮೊದಲಾದವುಗಳ ಖರ್ಚು ಬೇರೆ” ಎಂದರು. “ಒಂದು ವೇಳೆ, ಇಂಟ್ರಾವೆನಸ್ ಡ್ರಿಪ್ ಅಗತ್ಯ ಇದೆ ಎಂದಾದರೆ, ಪ್ರತೀ ಬಾಟಲಿಗೆ ಐನೂರು ರೂಪಾಯಿ ತೆರಬೇಕು.”
ವೈದ್ಯರ ಮೂಲಕ ಯಾವುದೇ ರೀತಿಯಲ್ಲಿ ಲಾಭವಾಗದೇ ಇದ್ದಾಗ, ಆಕೆಯ ಗೆಳತಿಯರ ಪೈಕಿ ಒಬ್ಬಾಕೆ ಪರಿಹಾರ ಸೂಚಿಸಿದಳು. “ಸುಮ್ಮನೆ ಟ್ರೇನಿಂಗ್ ಮಾಡು ಸಾಕು,” ಎಂದಾಕೆ ಹೇಳಿದರು. ಇದರಿಂದ ಕೂಡ ಪ್ರಯೋಜನ ಆಗಲಿಲ್ಲ. ಆಕೆ ಮತ್ತೆ ವೈದ್ಯರ ಬಳಿ ಹೋದಾಗ, “ಹೆಚ್ಚಿನ ಒತ್ತಡ ತೆಗೆದುಕೊಳ್ಳಬೇಡ” ಎಂದು ವೈದ್ಯರು ಹೇಳಿದ್ದು ಕೇಳಿ ಆಕೆ ಇನ್ನಷ್ಟು ತಳಮಳಗೊಂಡರು. ಮುಂದಿನ ಮಳೆಗಾಲ ಯಾವ ರೀತಿ ಇರಬಹುದು ಮತ್ತು ಆಗ ತನ್ನ ಕುಟುಂಬದ ಪರಿಸ್ಥಿತಿ ಏನಾಗಬಹುದು ಎಂಬುದೇ ಪ್ರಾಯಶಃ ಸಾನಿಯಾರನ್ನು ಎಲ್ಲಕ್ಕಿಂತ ಹೆಚ್ಚು ಕಾಡಿದ ಸಮಸ್ಯೆ.
ಒಂದು ಎಕ್ರೆ ಹೊಲ ಹೊಂದಿರುವ ಸಾನಿಯಾರ ತಂದೆ ಜಾವೇದ್‌ಗೆ 2019 ಮತ್ತು 2021ರ ಪ್ರವಾಹದಿಂದ 100,000 ಕಿಲೋಗಿಂತ ಹೆಚ್ಚಿನ ಪ್ರಮಾಣದ ಕಬ್ಬು ನಷ್ಟವಾಗಿದೆ. 2022ರಲ್ಲಿ ಭಾರೀ ಮಳೆ ಮತ್ತು ವರ್ಣಾ ನದಿ ಉಕ್ಕಿ ಹರಿದ ಪರಿಣಾಮವಾಗಿ ಅವರ ಬಹ್ವಂಶ ಬೆಳೆ ನಾಶವಾಗಿದೆ.
“2019ರ ಪ್ರವಾಹದ ಬಳಿಕ ಬೆಳೆದ ಬೆಳೆ ಕೈಗೆಟುಕುತ್ತದೆ ಎಂಬ ಭರವಸೆ ಉಳಿದಿಲ್ಲ. ಇಲ್ಲಿನ ಪ್ರತಿಯೊಬ್ಬ ರೈತರೂ ಕನಿಷ್ಟ ಎರಡು ಸಲ ಬಿತ್ತಲೇ ಬೇಕು,” ಎಂದು ಜಾವೇದ್ ಹೇಳುತ್ತಾರೆ. ಇದರಿಂದ ಉತ್ಪಾದನಾ ವೆಚ್ಚ ಇಮ್ಮಡಿಯಾಗುತ್ತದೆ. ಆದರೆ, ಕೈಗೆ ಸಿಗುವ ಉತ್ಪನ್ನ ಮಾತ್ರ ಹೆಚ್ಚುಕಡಿಮೆ ಸೊನ್ನೆಯಾಗಿರುವ ಕಾರಣ ಕೃಷಿ ಅಸ್ಥಿರವಾಗುತ್ತಿದೆ.
ಖಾಸಗಿ ಲೇವಾದೇವಿದಾರರಿಂದ ಹೆಚ್ಚಿನ ಬಡ್ಡಿದರ ತೆತ್ತು ಸಾಲ ಪಡೆಯುವುದು ಬಿಟ್ಟರೆ ಅವರಿಗೆ ಬೇರೆ ನಿರ್ವಾಹ ಇಲ್ಲ. ಇದರಿಂದ ರೈತರ ಮೇಲಿನ ಒತ್ತಡ ಹೆಚ್ಚುತ್ತದೆ ನಿಜ. “ಪ್ರತಿ ತಿಂಗಳು ಮರುಪಾವತಿ ತಾರೀಕು ಹತ್ತಿರ ಬರುತ್ತಿದ್ದಂತೆಯೇ ಖಿನ್ನತೆಗೆ ಒಳಗಾಗುವ ಅದೆಷ್ಟೋ ಜನರು ಆಸ್ಪತ್ರೆಗೆ ದಾಖಲಾಗುವುದು ಸಾಮಾನ್ಯ ಸಂಗತಿ” ಎಂದು ಸಾನಿಯಾ ಹೇಳುತ್ತಾರೆ.
ಏರುತ್ತಿರುವ ಸಾಲದ ಮೊತ್ತ ಮತ್ತು ಇನ್ನೊಂದು ಪ್ರವಾಹದ ಭೀತಿ ಸಾನಿಯಾರನ್ನು ಸದಾ ಕಾಡುತ್ತಿರುತ್ತದೆ.
ಸಾಮಾನ್ಯವಾಗಿ, ಯಾವುದೇ ಪ್ರಾಕೃತಿಕ ವಿಕೋಪದ ಬಳಿಕ ಜನರಿಗೆ ತಮ್ಮ ಗುರಿ ಸಾಧಿಸಲು ಅಗತ್ಯ ಪ್ರಯತ್ನ ಮಾಡುವಲ್ಲಿ ಸೋಲುತ್ತಾರೆ.” ಎಂದು ಕೊಲ್ಲಾಪುರದ ಕ್ಲಿನಿಕಲ್ ಸೈಕಾಲಜಿಸ್ಟ್ ಶಾಲ್ಮಲಿ ರನ್ಮಲೆ ಕಾಕಡೆ ಅವರ ಅಭಿಪ್ರಾಯ. “ಇದರಿಂದ ಕ್ರಮೇಣ ಅಸಹಾಯಕತೆ, ಖಿನ್ನತೆ ಮತ್ತು ನಿರಾಶಾ ಭಾವನೆ ಹೆಚ್ಚಾಗಿ ಅದು ಅವರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆತಂಕಕ್ಕೆ ಕಾರಣವಾಗುತ್ತದೆ”
ಹವಾಮಾನ ವೈಪರೀತ್ಯ ಜನರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ವಿಶ್ವಸಂಸ್ಥೆಯ ಅಂತರ-ಸರಕಾರಿ ಹವಾಮಾನ ಬದಲಾವಣೆ ತಜ್ಞರ ಸಮಿತಿ ಇದೇ ಮೊದಲ ಬಾರಿಗೆ ಒತ್ತಿ ಹೇಳಿದೆ. “ನಾವು ಸರ್ವೇಕ್ಷಣೆ ನಡೆಸಿದ ಪ್ರದೇಶಗಳಲ್ಲಿ ಆತಂತ ಮತ್ತು ಒತ್ತಡ ಸೇರಿದಂತೆ ಮಾನಸಿಕ ಆರೋಗ್ಯ ಸಂಬಂಧಿ ಸವಾಲುಗಳು ಅಧಿಕವಾಗಲಿದ್ದು, ಚಿಕ್ಕ ಮಕ್ಕಳು, ಹದಿಹರೆಯದವರು, ಹಿರಿಯರು ಮತ್ತು ರೋಗಿಗಳನ್ನು ಇದು ತೀವ್ರವಾಗಿ ಕಾಡಲಿದೆ.”
*****
ಐಶ್ವರ್ಯ ಬಿರಾಜದಾರ (18) ಕನಸುಗಳು 2021ರ ಪ್ರವಾಹದಲ್ಲಿ ಅಕ್ಷರಶಃ ಕೊಚ್ಚಿ ಹೋಗಿವೆ.
ಭೆಂಡಾವಾಡೆ ಗ್ರಾಮದಲ್ಲಿ ವಾಸಿಸುವ ಆಕೆ ಸ್ಪಿಂಟರ್ ಮತ್ತು ಟೆಕ್ವಾಂಡೋ ಚ್ಯಾಂಪಿಯನ್ ಆಗಿದ್ದು, ನೀರಿನ ಮಟ್ಟ ಇಳಿದ ನಂತರ ಸುಮಾರು 15 ದಿನಗಳ ಕಾಲ 100 ಗಂಟೆಗಳಷ್ಟು ಸಮಯವನ್ನು ಕೇವಲ ತನ್ನ ಮನೆ ಸ್ವಚ್ಛಗೊಳಿಸಲು ವ್ಯಯಿಸಿದ್ದರು. “ವಾಸನೆ ಇನ್ನೂ ಕೂಡ ಹೋಗುತ್ತಿಲ್ಲ. ಗೋಡೆಗಳು ಕೂಡ ಈಗಲೋ, ಆಗಲೋ ಕುಸಿಯುವಂತೆ ಕಾಣುತ್ತವೆ,” ಎಂದಾಕೆ ಹೇಳಿದರು.
ಜೀವನ ಸಾಮಾನ್ಯ ಸ್ಥಿತಿಗೆ ಮರಳಲು ಸುಮಾರು 45 ದಿನಗಳು ಬೇಕಾದವು. “ಒಂದು ದಿನ ತರಬೇತಿ ತಪ್ಪಿದರೂ ಕೂಡ ಬೇಸರವೆನಿಸುತ್ತದೆ” ಎಂದಾಕೆ ಹೇಳಿದರು. 45 ದಿನಗಳ ಕಾಲ ಬಿಟ್ಟಿರುವ ಕ್ರೀಡಾಭ್ಯಾಸವನ್ನು ಮತ್ತೆ ಆರಂಭಿಸುವುದು ಎಂದರೆ, ಆಕೆ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. “(ಆದರೆ), ನನ್ನ ದೈಹಿಕ ಸಾಮರ್ಥ ಬಹಳ ಕುಗ್ಗಿದೆ. ಏಕೆಂದರೆ, ಅರ್ಧದಷ್ಟು ಪ್ರಮಾಣದ ಆಹಾರ ಸೇವಿಸಿ ದುಪ್ಪಟ್ಟು ಅಭ್ಯಾಸ ನಡೆಸಬೇಕು. ಇದು ಅಸಹನೀಯ ಮತ್ತು ಉದ್ವೇಗ ಉಂಟುಮಾಡುತ್ತದೆ.”
ಪ್ರವಾಹ ಇಳಿದ ನಂತವೂ ಕೂಡ ಮೂರು ತಿಂಗಳ ಕಾಲ ಸಾನಿಯಾ ಮತ್ತು ಐಶ್ವರ್ಯಳ ಹೆತ್ತವರಿಗೆ ಸರಿಯಾದ ಉದ್ಯೋಗ ಸಿಕ್ಕಿರಲಿಲ್ಲ. ಕೃಷಿಯಿಂದ ಬರುವ ಆದಾಯದಲ್ಲಿ ಆಗಿರುವ ಕೊರತೆ ನೀಗಿಸಲು ಜಾವೇದ್ ಗಾರೆ ಕೆಲಸ ಮಾಡುತ್ತಾರೆ. ಆದರೆ, ಎಲ್ಲ ರೀತಿಯ ನಿರ್ಮಾಣ ಕಾಮಗಾರಿಗಳು ನಿಂತಿರುವ ಕಾರಣ ಗಾರೆ ಕೆಲಸ ಕೂಡ ಸಾಕಷ್ಟು ಸಿಗುತ್ತಿಲ್ಲ. ಗದ್ದೆಗಳು ಜಲಾವೃತಗೊಂಡಿರುವ ಕಾರಣ ಕೃಷಿ ಕೂಲಿ ಕಾರ್ಮಿಕರಾಗಿರುವ ಐಶ್ವರ್ಯರ ಹೆತ್ತವರ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ.
ಪಡೆದುಕೊಂಡಿರುವ ಸಾಲ ತೀರಿಸಲು ಮತ್ತು ಏರುತ್ತಿರುವ ಬಡ್ಡಿ ಮೊತ್ತ ನಿಭಾಯಿಸಲು ಅವರು ಸೇವಿಸುವ ಆಹಾರದ ಪ್ರಮಾಣ ಕಡಿಮೆಗೊಳಿಸುವಂತಹ ಕ್ರಮಕ್ಕೆ ಮುಂದಾಗುತ್ತಾರೆ. ನಾಲ್ಕು ತಿಂಗಳಿAದ ಐಶ್ವರ್ಯ ಮತ್ತು ಸಾನಿಯಾ ದಿನಕ್ಕೆ ಕೇವಲ ಒಂದು ಊಟ ಮಾತ್ರ ಸಿಗುತ್ತಿದೆ. ಕೆಲವೊಮ್ಮೆ ಅದೂ ಕೂಡ ಇರುವುದಿಲ್ಲ.
ಈ ಯುವ ಕ್ರೀಡಾಪಟುಗಳು ತಂತಮ್ಮ ಹೆತ್ತವರಿಗೆ ಜೀವನ ವೆಚ್ಚ ನಿಭಾಯಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ಅದೆಷ್ಟು ದಿನಗಳ ಕಾಲ ಖಾಲಿ ಹೊಟ್ಟೆಯಲ್ಲಿ ಮಲಗಿದ್ದಾರೋ ಅವರಿಗೇ ಲೆಕ್ಕ ಇಲ್ಲ. ಇವೆಲ್ಲ ಅವರ ತರಬೇತಿ ಮತ್ತು ನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. “ಕಠಿಣ ಅಭ್ಯಾಸ ನಡೆಸಲು ನನ್ನ ಶರೀರ ಒಪ್ಪುತ್ತಿಲ್ಲ” ಎಂದು ಸಾನಿಯಾ ಹೇಳುತ್ತಾರೆ.
ಸಾನಿಯಾ ಮತ್ತು ಐಶ್ವರ್ಯ ಮೊದಲ ಬಾರಿ ಮಾನಸಿಕ ಒತ್ತಡಕ್ಕೆ ಒಳಗಾದಾಗ ಅವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕ್ರೀಡಾಪಟುಗಳಿಗೆ ಇದೆಲ್ಲ ಸಾಮಾನ್ಯ ಎಂದೇ ಅವರಿಗೆ ಅನಿಸಿತ್ತು. “ಎಲ್ಲ ಪ್ರವಾಹ ಪೀಡಿತ ಕ್ರೀಡಾಪಟುಗಳು ಇದೇ ಸಮಸ್ಯೆ ಕುರಿತು ಮಾತನಾಡುತ್ತಿದ್ದರು,” ಎಂದು ಐಶ್ವರ್ಯ ಹೇಳುತ್ತಾರೆ. “ಇದರಿಂದ ಗಂಭೀರ ಸ್ವರೂಪದ ಮಾನಸಿಕ ಒತ್ತಡ ಉಂಟಾಗಿ ಅನೇಕ ವೇಳೆ ಖಿನ್ನತೆಗೆ ಒಳಗಾಗುತ್ತೇನೆ,” ಎಂದು ಸಾನಿಯಾ ತಿಳಿಸಿದರು.
“ಜೂನ್ ತಿಂಗಳಲ್ಲಿ ಮೊದಲ ಮಳೆ ಸುರಿಯಿತು ಎಂದರೆ ಸಾಕು. ಜನರು ಪ್ರವಾಹದ ಭೀತಿಯಲ್ಲೇ ದಿನ ದೂಡುತ್ತಾರೆ ಮತ್ತು ಈ ರೀತಿಯ ವರ್ತನೆಯನ್ನು ನಾನು 2022ರಿಂದ ಗಮನಿಸುತ್ತಿದ್ದೇವೆ” ಎಂದು ಹಾತ್‌ಕಣಗಲೆ ತಾಲೂಕು ವೈದ್ಯಾಧಿಕಾರಿ ಡಾ. ಪ್ರಸಾದ್ ದಾತಾರ್. “ ಈ ಪ್ರವಾಹ ಸಮಸ್ಯೆಗೆ ಪರಿಹಾರ ಗೋಚರಿಸದ ಕಾರಣ, ಜನರಲ್ಲಿ ಆತಂಕ ಹೆಚ್ಚುತ್ತಲೇ ಇದ್ದು, ಇದು ಗಂಭೀರ ಸ್ವರೂಪದ ಮಾನಸಿಕ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ”
2021ರ ತನಕ ಸುಮಾರಯ ಇಂದು ದಶಕಗಳ ಕಾಲ ಶಿರೋರ್ಳ ತಾಲೂಕಿನ 54 ಗ್ರಾಮಗಳ ಉಸ್ತುವಾರಿ ಹೊಂದಿದ್ದ ಡಾ. ಪ್ರಸಾದ್ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. “ಅನೇಕ ಜನರಲ್ಲಿ (ಪ್ರವಾಹದ ಬಳಿಕ) ಮಾನಸಿಕ ಒತ್ತಡ ಅದೆಷ್ಟು ಹೆಚ್ಚಿದೆ ಎಂದರೆ, ಅವರ ಪೈಕಿ ಅನೇಕರು ಹೈಪರ್‌ಟೆನ್ಷನ್ ಅಥವಾ ಮಾನಸಿಕ ಅಸ್ವಾಸ್ಥ್ಯಕ್ಕೆ ಗುರಿಯಾಗುತ್ತಾರೆ”
ಕೊಲ್ಲಾಪುರ ಜಿಲ್ಲೆಯಲ್ಲಿ 2015 ಮತ್ತು 2020ರ ನಡುವೆ ವಯಸ್ಕ ಮಹಿಳೆಯರಲ್ಲಿ (15ರಿಂ 49 ವರ್ಷ ಪ್ರಾಯ) ಹೈಪರ್‌ಟೆನ್ಷನ್ ಸಮಸ್ಯೆ ಶೇಕಡಾ 82ರಷ್ಟು ಏರಿಕೆ ಕಂಡಿದೆ ಎಂದು ರಾಷ್ಟಿçÃಯ ಕುಟುಂಬ ಆರೋಗ್ಯ ಸರ್ವೇಕ್ಷಣೆ ವರದಿ ಹೇಳುತ್ತದೆ. 2018ರಲ್ಲಿ ಪ್ರವಾಹಕ್ಕೆ ತುತ್ತಾದ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ನಡೆದ ಅಧ್ಯಯನದ ವೇಳೆ ಸಂಪರ್ಕಿಸಿದ 171 ಜನರ ಪೈಕಿ ಶೇಕಡಾ 66.7ರಷ್ಟು ಮಂದಿ ಖಿನ್ನತೆ, ಮನೋದೈಹಿಕ ಕಾಯಿಲೆಗಳು, ಮಾದಕ ವ್ಯಸನ, ಅನಿದ್ರೆ ಮತ್ತು ಆತಂಕದಿAದ ಬಳಲುತ್ತಿದ್ದಾರೆ.
ಇನ್ನೊಂದು ಅಧ್ಯಯನದ ಪ್ರಕಾರ 2015ರಲ್ಲಿ ತಮಿಳುನಾಡಿನ ಚೆನ್ನೆöÊ ಮತ್ತು ಕಡಲೂರಿನಲ್ಲಿ ಪ್ರವಾಹದಿಂದ ತೊಂದರೆಗೀಡಾಗಿದ್ದ ಜನರ ಪೈಕಿ ಶೇಕಡಾ 45.29ರಷ್ಟು ಜನರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂದಿದೆ. ಜೊತೆಯಲ್ಲಿ, ಸರ್ವೇಕ್ಷಣೆಗೆ ಒಳಗಾದ 223 ಜನರ ಪೈಕಿ 101 ಖಿನ್ನತೆಗೆ ಒಳಗಾಗಿರುವುದು ಕಂಡುಬAದಿದೆ.
ಯುವ ಕ್ರೀಡಾಪಟುಗಳ ಮಾಣಸಿಕ ಆರೋಗಯದ ಮೇಲೆ ಇಂತಹದೇ ಪರಿಣಾಮ ಆಗಿರುವುದು ಗಮನಕ್ಕೆ ಬಂದಿದೆ ಎಂದು ಭೆಂಡಾವಾಡೆ ಗ್ರಾಮದಲ್ಲಿ 30 ಟೆಕ್ವಾಂಡೋ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ವಿಶಾಲ್ ಚವಾಣ್ ಧೃಡೀಕರಿಸಿದರು. “2019ರಿಂದೀಚೆ, ಈ ಕಾರಣಕ್ಕಾಗಿ ಅನೇಕ ಮಂದಿ ವಿದ್ಯಾರ್ಥಿಗಳು ಕ್ರೀಡಾಭ್ಯಾಸ ಬಿಟ್ಟಿದ್ದಾರೆ” ಅವರ ಬಳಿ ತರಬೇತಿ ಪಡೆಯುತ್ತಿರುವ ಐಶ್ವರ್ಯ ಕೂಡ ಕ್ರೀಡೆ ಮತ್ತು ಸಮರಕಲೆಯಲ್ಲಿ ಮುಂದುವರಿಯುವ ಕುರಿತು ಮರುಚಿಂತನೆ ನಡೆಸುತ್ತಿದ್ದಾರೆ.
2019ರ ಪ್ರವಾಹದ ಮೊದಲು ಐಶ್ವರ್ಯ ನಾಲ್ಕು ಎಕ್ರೆ ಹೊಲದಲ್ಲಿ ಕಬ್ಬು ಬೆಳೆಯುವ ತನ್ನ ಹೆತ್ತವರ ಜೊತೆ ಕೃಷಿ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಳು. “24 ಗಂಟೆಗಳ ಒಳಗಾಗಿ ಪ್ರವಾಹದ ನೀರು ಕಬ್ಬಿನ ಗದ್ದೆಗೆ ನುಗ್ಗಿ ಎಲ್ಲ ಬೆಳೆ ನಾಶವಾಯಿತು,” ಎಂದಾಕೆ ಹೇಳಿದರು.
ಆಕೆಯ ಹೆತ್ತವರು ಗೇಣಿ ಕೃಷಿ ಮಾಡುತ್ತಿದ್ದು ಒಟ್ಟು ಉತ್ಪನ್ನದ ಶೇಕಡಾ 75ರಷ್ಟನ್ನು ಭೂಮಾಲೀಕರಿಗೆ ಸಂದಾಯ ಮಾಡಬೇಕಾಗುತ್ತದೆ. “2019 ಮತ್ತು 2021ರ ಪ್ರವಾಹ ಪೀಡಿತ ರೈತರಿಗೆ ಸರಕಾರ ಯಾವುದೇ ಪರಿಹಾರ ಕೊಟ್ಟಿಲ್ಲ. ಒಂದು ವೇಳೆ ಕೊಟ್ಟಿದ್ದರೂ ಕೂಡ ಅದು ದಕ್ಕಿರುವುದು ಭೂಮಾಲೀಕರಿಗೆ.” ಎಂದು ಆಕೆಯ ತಂದೆ ರಾವಸಾಹೇಬ್ (47) ಹೇಳಿದರು.
2019ರ ಪ್ರವಾಹವೊಂದರಲ್ಲೇ ರೂ. 7.2 ಲಕ್ಷ ಮೌಲ್ಯದ 240,000 ಕಿಲೋ ಕಬ್ಬು ನಾಶವಾಗಿರುವ ಕಾರಣ ರಾವಸಾಹೇಬ್ ಮತ್ತವರ ಪತ್ನಿ ಶಾರದಾ (40) ಜೀವನ ನಿರ್ವಹಣೆಗಾಗಿ ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಅವರ ಕೊತೆ ಕೈ ಜೋಡಿಸುವ ಐಶ್ವರ್ಯ ದಿನಕ್ಕೆರಡು ಬಾರಿ ಹಸುವಿನ ಹಾಲು ಕರೆಯುವ ಕೆಲಸ ಮಾಡುತ್ತಾಳೆ. “ಪ್ರವಾಹ ಇಳಿದ ನಳಿಕ ಕನಿಷ್ಟ ನಾಲ್ಕು ತಿಂಗಳ ತನಕ ಯಾವುದೇ ಕೆಲಸ ಸಿಗುವುದಿಲ್ಲ” ಎಂದು ಶಾರದಾ ಹೇಳುತ್ತಾಳೆ. “ಏಕೆಂದರೆ, ಗದ್ದೆಗಳಲ್ಲಿ ನೀರು ಪೂರ್ತಿ ಒಣಗಲು ಮತ್ತು ಪೋಷಕಾಂಶ ಮರುಪೂರಣ ಆಗಲು ಸಮಯ ಹಿಡಿಯುತ್ತದೆ.”
ಅದೇ ರೀತಿ, 2021ರ ಪ್ರವಾಹದ ಬಳಿಕ ರಾವ್ ಸಾಹೇಬ್ ಅವರು ರೂ. 42,000 ಮೌಲ್ಯದ 600 ಕಿಲೋ ಸೋಯಾಬಿನ್ ಕಳೆದುಕೊಂಡರು. ಹೀಗೆ ಕೈಷ್ಯುತ್ಪನ್ನ ನಾಶವಾಗಿರುವ ಕಾರಣ ಐಶ್ವರ್ಯಳ ಕ್ರೀಡಾ ಭವಿಷ್ಯಕ್ಕೆ ಮಂಕು ಕವಿದಿದೆ. ನಾನೀಗ ಪೋಲಿಸ್ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಹಾಕಲು ಯೋಚಿಸುತ್ತಿದ್ದೇನೆ,” ಎಂದಾಕೆ ಹೇಳಿದರು. “ಹವಾಮಾನ ವೈಪರೀತ್ಯದ ಈ ಕಾಲಘಟ್ಟದಲ್ಲಿ ಕೇವಲ ಕೃಷಿಯನ್ನು ನಂಬಿಕೊಂಡಿರುವುದು ಅಪಾಯಕಾರಿ.”
“ನನ್ನ ತರಬೇತಿ ಕೃಷಿಯೊಂದಿಗೆ ನೇರ ಸಂಬಂಧ ಹೊಂದಿದೆ,” ಎಂದಾಕೆ ಹೇಳಿದರು. ಆಕೆಯ ಕುಟುಂಬ ಜೀವನೋಪಾಯವಾಗಿರುವ ಕೃಷಿ ಹವಾಮಾನ ವೈಪರೀತ್ಯದ ದುಷ್ಪರಿಣಾಮ ಎದುರಿಸುತ್ತಿರವ ಕಾರಣ ತನ್ನ ಕ್ರೀಡಾ ಭವಿಷ್ಯದ ಬಗ್ಗೆ ಐಶ್ವರ್ಯರಿಗೆ ಅನುಮಾನ ಕಾಡುತ್ತಿರುವುದು ಸಹಜವೇ ಆಗಿದೆ.
“ಯಾವುದೇ (ಹವಾಮಾನ) ವಿಕೋಪಕ್ಕೆ ಮೊದಲು ಬಲಿಯಾಗುವುದೇ ಮಹಿಳಾ ಕ್ರೀಡಾಪಟುಗಳು.” ಎಂದು ಕೊಲ್ಲಾಪುರದ ಅಜ್ರಾ ತಾಲೂಕಿನ ಪೇಠೆವಾಡಿ ಗರಾಮದ ಕ್ರೀಡಾ ತರಬೇತುದಾರ ಪಾಂಡುರಂಗ ತೆರಾಸೆ ಹೇಳುತ್ತಾರೆ. “ಹೆಚ್ಚಿನ ಕುಟುಂಬಗಳು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಿಲ್ಲ. ಇನ್ನು ಕೆಲವೊಂದು ದಿನಗಳ ಮಟ್ಟಿಗೆ ತರಬೇತಿ ಮೊಟಕುಗೊಂಡಿತು ಅಂದರೆ ಕ್ರೀಡಾಭ್ಯಾಸ ಕೈಬಿಟ್ಟು ಹಣ ಸಂಪಾದನೆಗೆ ತೊಡುಗುವಂತೆ ಹೆತ್ತವರು ಹೇಳುತ್ತಾರೆ ಮತ್ತು ಇದರಿಂದ ಅವರು ಇನ್ನಷ್ಟು ಮಾನಸಿಕ ವೇದನೆಗೆ ಒಳಗಾಗುತ್ತಾರೆ”
ಈ ಯುವಕರಿಗೆ ಸಹಾಯ ಮಾಡಲು ಏನು ಮಾಡಬಹುದು ಎಂದು ಕೇಳಿದಾಗ, "ಮೊದಲ ಹಂತದಲ್ಲಿ ವ್ಯವಸ್ಥಿತ ಚಿಕಿತ್ಸೆಗಳು ಮತ್ತು ಸಮಾಲೋಚನೆಯಲ್ಲಿ ತೊಡಗಿಸಿಕೊಳ್ಳುವುದು. ಈ ಹಂತದಲ್ಲಿ ನಾವು ಕೇವಲ ಅವರ ಮಾತುಗಳನ್ನು ಆಲಿಸುವುದು ಮತ್ತು ಅವರ ಭಾವನೆಗಳ ಬಗ್ಗೆ ಮಾತನಾಡಲು ಬಿಡುವುದನ್ನು ಮಾಡುತ್ತೇವೆ. ಜನರಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ವೇದಿಕೆ ಸಿಕ್ಕಾಗ, ಅವರು ಪ್ರಾಥಮಿಕ ಬೆಂಬಲ ಗುಂಪನ್ನು ಹೊಂದಿರುವ ಕಾರಣ ನಿರಾಳರಾಗಲು ಪ್ರಾರಂಭಿಸುತ್ತಾರೆ, ಅದು ಅವರನ್ನು ಗುಣಮುಖರಾಗಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ," ಎಂದು ಕ್ಲಿನಿಕಲ್ ಸೈಕಾಲಜಿಸ್ಟ್ ಕಾಕಡೆ ಹೇಳಿದರು. ಆದಾಗ್ಯೂ, ಸತ್ಯವೇನೆಂದರೆ, ಕಡಿಮೆ ಸಂಪನ್ಮೂಲವುಳ್ಳ ಆರೋಗ್ಯ ರಕ್ಷಣಾ ಮೂಲಸೌಕರ್ಯ ಮತ್ತು ಹೆಚ್ಚಿನ ಚಿಕಿತ್ಸಾ ವೆಚ್ಚಗಳಿಂದಾಗಿ ಲಕ್ಷಾಂತರ ಭಾರತೀಯರು ಮಾನಸಿಕ ಆರೋಗ್ಯ ಆರೈಕೆಯನ್ನು ಪಡೆಯಲು ಕಷ್ಟಪಡುತ್ತಾರೆ .
*****
2019ರ ಪ್ರವಾಹವು ದೂರ ಓಟಗಾರ್ತಿ ಸೊನಾಲಿ ಕಾಂಬಳೆಯ ಕ್ರೀಡಾಕ್ಷೇತ್ರದ ಸಾಧನೆಗೆ ತಡೆ ಉಂಟುಮಾಡಿದೆ. ಭೂರಹಿತ ಕೃಷಿ ಕೂಲಿ ಕಾರ್ಮಿಕರಾಗಿರುವ ಆಕೆಯ ಹೆತ್ತವರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಾರಣ ಸಂಸಾರ ನೌಕೆ ಸಾಗಿಸಲು ಆಕೆಯ ನೆರವು ಯಾಚಿಸಿದ್ದಾರೆ.
“ನಾವು ಮೂರೂ ಮಂದಿ ದುಡಿದರೂ ಕೂಡ ಜೀವನ ನಿರ್ವಹಣೆ ದುಸ್ತರವಾಗಿದೆ,” ಎಂದು ಅವರ ತಂದೆ ರಾಜೇಂದ್ರ ಹೇಳುತ್ತಾರೆ. ಎಡೆಬಿಡದೆ ಸುರಿಯುವ ಮಳೆಯಿಂದ ಗದ್ದೆಗಳು ನೀರಿನಲ್ಲಿ ಮುಳುಗಿ ಅನೇಕ ದಿನಗಳ ತನಕ ಸಾಗುವಳಿ ಸಾಧ್ಯವಾಗುವುದಿಲ್ಲ. ಇದರಿಂದ ಕೆಲಸ ಬಹಳಷ್ಟು ಕಡಿಮೆಯಾಗಿ, ಕೃಷಿ ಕೂಲಿಯನ್ನೇ ಅವಲಂಬಿಸಿರುವ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುತ್ತದೆ.
ಕಾಂಬಳೆ ಕುಟುಂಬ ವಾಸಿಸುತ್ತಿರುವ ಶಿರೋಳ್ ತಾಲೂಕಿನ ಘಲ್ವಾಡ್ ಗ್ರಾಮದಲ್ಲಿ ಮಹಿಳೆಯರಿಗೆ ರೂ. 200 ಮತ್ತು ಪುರುಷರಿಗೆ ರೂ. 250 ದಿನಗೂಲಿ ಸಿಗುತ್ತದೆ. “ಇಷ್ಟು ಹಣ ಕೇವಲ ಕುಟುಂಬ ನಿರ್ವಹಣೆಗೆ ಸಾಕು. ಕ್ರೀಡಾ ಪರಿಕರಗಳನ್ನು ಖರೀದಿಸುವುದು ಮತ್ತು ತರಬೇತಿ ವೆಚ್ಚ ಭರಿಸುವುದು ದೂರದ ಮಾತು” ಎಂದು 21 ಹರೆಯದ ಸೋನಾಲಿ ಹೇಳುತ್ತಾರೆ.
2021ರ ಪ್ರವಾಹ ಕಾಂಬಳೆ ಕುಟುಂಬದ ಸಂಕಷ್ಟಗಳನ್ನು ಮತ್ತಷ್ಟು ಹೆಚ್ಚಿಸಿದ್ದು, ಇದರಿಂದ ಸೋನಾಲಿ ಖಿನ್ನತೆಗೆ ಒಳಗಾಗಿದ್ದಾಳೆ. “2021ರಲ್ಲಿ ಕೇವಲ 24 ಗಂಟೆಗಳ ಒಳಗೆ ನಮ್ಮ ಮನೆ ನೀರಿನಲ್ಲಿ ಮುಳುಗಿತ್ತು,” ಎಂದಾಕೆ ನೆನಪಿಸಿಕೊಳ್ಳುತ್ತಾರೆ. “ಆ ವರ್ಷ ಅದ್ಹೇಗೋ ನಾವು ಪ್ರವಾಹದ ನೀರಿನಿಂದ ಬಚಾವಾದೆವು. ಆದರೆ, ಈಗ ನೀರಿನ ಮಟ್ಟ ಹೆಚ್ಚಿದಂತೆಲ್ಲ ಇನ್ನೊಂದು ಪ್ರವಾಹ ಬಂದೀತೋ ಎಂಬ ಚಿಂತೆಯಿಂದ ಮೈ ನಡುಗುತ್ತದೆ.”
“2022 ಜುಲೈ ತಿಂಗಳಲ್ಲಿ ಭಾರೀ ಮಳೆ ಸುರಿದಿತ್ತು. ಆಗ ಕೃಷ್ಣಾ ನದಿ ಉಕ್ಕಿ ಹರಿಯುವ ಭೀತಿ ಎಲ್ಲ ಗ್ರಾಮಸ್ಥರನ್ನು ಬಹಳ ಕಾಡಿತ್ತು,” ಎಂದು ಸೋನಾಲಿಯ ತಾಯಿ ಶುಭಾಂಗಿ ಹೇಳಿದರು. ಸೋನಾಲಿ ಕೂಡ ತನ್ನ 150 ನಿಮಿಷದ ತರಬೇತಿ ನಿಲ್ಲಿಸಿ ಸಂಭಾವ್ಯ ಅಪಾಯ ಎದುರಿಸುವ ಸಿದ್ಧತೆಯಲ್ಲಿ ತೊಡಗಿದ್ದರು. ಕೆಲವೇ ದಿನಗಳಲ್ಲಿ ಆಕೆಯನ್ನು ಖಿನ್ನತೆ ಆವರಿಸಿ ವೈದ್ಯರ ಬಳಿ ಕರೆದೊಯ್ಯಲಾಗಿತ್ತು.
ನೀರಿನ ಮಟ್ಟ ಹೆಚ್ಚುತ್ತಿರುವ ಹಾಗೆ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗಬೇಕೋ, ಬೇಡವೋ ಎಂಬ ಗೊಂದಲ ಗ್ರಾಮಸ್ಥರಿಗೆ ಉಂಟಾಗುತ್ತದೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಮಾನಸಿಕ ಕ್ಷೋಭೆಗೆ ಒಳಗಾಗುತ್ತಾರೆ,” ಎಂದು ಡಾ. ಪ್ರಸಾದ್ ಹೇಳಿದರು.
ನೀರಿನ ಮಟ್ಟ ಇಳಿಯುತ್ತಿದ್ದ ಹಾಗೆ ಸೋನಾಲಿಗೆ ಒಂದಿಷ್ಟು ನಿರಾಳವೆನಿಸಿದರೂ, “ಅನಿಯಮಿತ ತರಬೇತಿಯ ಕಾರಣ ನನಗೆ ಸ್ಪರ್ಧಿಸಲು ಸಾಧ್ಯವಿಲ್ಲ ಮತ್ತು ಇದರಿಂದ ನನಗೆ ಬಹಳ ಕೆಟ್ಟದೆನಿಸುತ್ತದೆ”
ಪ್ರವಾಹವು ಅನೇಕ ಮಂದಿ ಸ್ಥಳೀಯ ಕ್ರೀಡಾಪಟುಗಳನ್ನು ಖಿನ್ನತೆಗೆ ನೂಕಿದೆ ಎಂದಿ ಕೊಲ್ಲಾಪುರದ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಒಪ್ಪುತ್ತಾರೆ. “ ಅವರನ್ನು ಅಸಹಾಯಕತೆ ಮತ್ತು ನಿರಾಶಾ ಭಾವನೆ ಕಾಡುತ್ತಿದೆ ಮತ್ತು ಅದು ಮಳೆ ಸುರಿದಾಗಲೆಲ್ಲ ಇನ್ನಷ್ಟು ಹೆಚ್ಚುತ್ತದೆ” ಎಂದು ಘಲ್ವಾಡ್ ಗ್ರಾಮದ ಆಶಾ ಕಾರ್ಯಕರ್ತೆ ಕಲ್ಪನಾ ಕಮಲಾಕರ್ ಹೇಳಿದರು.
ಐಶ್ವರ್ಯ, ಸಾನಿಯಾ ಮತ್ತು ಸೊನಾಲಿ ಕೃಷಿಕ ಕುಟುಂಬಗಳಿಗೆ ಸೇರಿದ್ದು, ಅವರ ಅದೃಷ್ಟ ಅಥವಾ ದುರಾದೃಷ್ಟ ಮಳೆಯನ್ನೇ ಅವಲಂಬಿಸಿದೆ. ಈ ಎಲ್ಲ ಕೃಷಿಕರು 2022ರ ಬೇಸಿಗೆಯಲ್ಲಿ ಕಬ್ಬು ಬೆಳೆದಿದ್ದವು.
ಭಾರತದ ಅನೇಕ ಕಡೆಗಳಲ್ಲಿ ಈ ಸಲ ಮಳೆಗಾಲ ತಡವಾಗಿ ಆರಂಭವಾಗಿದೆ. “ಮಳೆ ಬೀಳಲು ತಡವಾದರೂ ಕೂಡ ನಮ್ಮ ಬೆಳೆ ಉಳಿಯುತ್ತವೆ.” ಎಂದು ಐಶ್ವರ್ಯ ಹೇಳಿದರು. ಆದರೆ, ಜುಲೈಯಿಂದ ಅಂದಾಧುಂದಿ ಮಳೆ ಸುರಿದ ಕಾರಣ ನಮ್ಮ ಎಲ್ಲ ಬೆಳೆ ನಷ್ಟವಾಗಿ, ಅನೇಕ ಕುಟಂಬಗಳು ಸಾಲದ ಸುಳಿಯಲ್ಲಿ ಸಿಲುಕಿವೆ (ಇದನ್ನೂ ಓದಿ: ಸುರಿಮಳೆ ತಂದೊಡ್ಡುವ ಸಂಕಷ್ಟಗಳ ಸರಮಾಲೆ )
1953 ಮತ್ತು 2020ರ ನಡುವೆ ಭಾರತದಲ್ಲಿ 2,2000 ಮಿಲಿಯನ್ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ಈ ಸಂಖ್ಯೆ ಅಮೇರಿಕದ ಒಟ್ಟು ಜನಸಂಖ್ಯೆಯ 6.5 ಪಟ್ಟು ಹೆಚ್ಚು ಮತ್ತು ಉಂಟಾಗಿರುವ ಒಟ್ಟು ಹಾನಿಯ ಮೊತ್ತ ರೂ. 437,150 ಕೋಟಿ. ಕಳೆದ ಎರಡು ದಶಕಗಳಲ್ಲಿ (2000-2019), ಭಾರತದಲ್ಲಿ ಪ್ರತೀರ‍್ಷ ಸರಾಸರಿ 17 ಪ್ರವಾಹ ಉಂಟಾಗಿದ್ದು , ಜಗತ್ತಿನಲ್ಲಿ ಅತೀ ಹೆಚ್ಚು ಪ್ರವಾಹ ಪೀಡಿತ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದ್ದು, ಚೀನಾ ಮೊದಲನೇ ಸ್ಥಾನದಲ್ಲಿದೆ.
ಕಳೆದ ಒಂದು ದಶಕದ ಅವಧಿಯಲ್ಲಿ ಮಹಾರಾಷ್ಟçದ ಹಲವೆಡೆ, ಅದರಲ್ಲೂ ಮುಖ್ಯವಾಗಿ ಕೊಲ್ಲಾಪುರ ಜಿಲ್ಲೆಯಲ್ಲಿ ಅಂದಾಧುಂದಿ ಮಳೆ ಸುರಿಯುತ್ತಿದೆ. ಈ ವರ್ಷ ಅಕ್ಟೋಬರ್ ತಿಂಗಳಲ್ಲಷ್ಟೇ ರಾಜ್ಯದ 22 ಜಿಲ್ಲೆಗಳಲ್ಲಿ 7.5 ಲಕ್ಷ ಹೆಕ್ಟೆರ್ ಪ್ರದೇಶ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದೆ. ಈ ಪ್ರದೇಶಗಳ ಮುಖ್ಯವಾಗಿ ವಿವಿಧ ಕೃಷ್ಯುತ್ಪನ್ನ, ಹಣ್ಣುಹಂಪಲು ಮತ್ತು ತರಕಾರಿ ಬೆಳೆಯುತ್ತಾರೆ. ರಾಜ್ಯದ ಕೃಷಿ ಇಲಾಖೆ ಒದಗಿಸಿದ ಮಾಹಿತಿ ಪ್ರಕಾರ 2022ರ ಅಕ್ಟೋಬರ್ 28 ತನಕ 1,288 ಮಿ.ಮಿ. ಮಳೆಯಾಗಿದ್ದು, ಇದು ಸರಾಸರಿ ಮಳೆ ಪ್ರಮಾಣದ ಶೇಕಡಾ 120.5ರಷ್ಟು ಆಗಿದೆ. ಇದರ ಪೈಕಿ 1,068 ಮಿ.ಮಿ. ಮಳೆ ಜೂನ್ ಮತ್ತು ಅಕ್ಟೋಬರ್ ನಡುವೆ ಬಿದ್ದಿದೆ.
“ಮಳೆಗಾಲದಲ್ಲಿ ಬರಗಾಲದಂತಹ ಪರಿಸ್ಥಿತಿ ಇದ್ದು, ಆಗಾಗ ಭಾರೀ ಮಳೆ ಸುರಿಯುತ್ತದೆ,” ಎಂದು ಪುಣೆಯ ಭಾರತೀಯ ಉಷ್ಣವಲಯ ಹವಾಮಾನ ವಿಜ್ಞಾನ ಸಂಸ್ಥೆಯ ಹವಾಮಾನ ವಿಜ್ಞಾನಿ ಮತ್ತು ಐಪಿಸಿಸಿ ವರದಿಯ ಲೇಖಲರಲ್ಲಿ ಒಬ್ಬರಾದ ರಾಕ್ಸಿ ಕಾಲ್ ಹೇಳುತ್ತಾರೆ. “ಮಳೆ ಬಿದ್ದಾಗ, ಕೆಲವೇ ಸಮಯದಲ್ಲಿ ಅಧಿಕ ಪ್ರಮಾಣದ ತೇವಾಂಶ ಉಂಟಾಗುತ್ತದೆ.” ಇದರಿಂದ ಮೇಘಸ್ಪೋಟ ಮತ್ತು ಆಕಸ್ಮಿಕ ಪ್ರವಾಹ ಉಂಟಾಗುತ್ತದೆ,” ಎಂದವರು ವಿವರಿಸಿದರು. “ನಾವು ಉಷ್ಣ ವಲಯದಲ್ಲಿ ಇರುವ ಕಾರಣ ಇಲ್ಲಿ ಹವಾಮಾನ ಪರಿಸ್ಥಿತಿ ಬೇಗ ಬಿಗಡಾಯಿಸುತ್ತದೆ. ಹಾಗಾಗಿ, ನಾವು ಅತೀ ಹೆಚ್ಚು ಜಾಗರೂಕತೆ ವಹಿಸಬೇಕು. ಇಲ್ಲದಿದ್ದರೆ, ತೀವ್ರ ಹಾನಿ ಅನುಭವಿಸುವುದು ಖಂಡಿತ.”
ಆದರೆ, ಇಲ್ಲಿ ಆದ್ಯತೆಯ ಮೇರೆಗೆ ಪರಿಹರಿಸಬೇಕಾದ ಸಂಗತಿ ಮತ್ತೊಂದಿದೆ. ಅದೆಂದರೆ, ಆಯಾ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ಅದರಿಂದಾಗಿ ಏರುತ್ತಿರುವ ಆರೋಗ್ಯ ಸಂಬಂಧಿ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ನೀಡುವ ಅಂಕಿ-ಅಂಶಗಳ ಕೊರತೆ. ಇದರಿಂದಾಗಿ, ಸರಕಾರಿ ನೀತಿ ನಿರೂಪಣೆಯ ವೇಳೆ ಹವಾಮಾನ ವೈಪರೀತ್ಯ ಸಮಸ್ಯೆಯಿಂದ ತೊಂದರೆಗೀಡಾಗಿರುವ ಜನರ ಕುರಿತು ಹೆಚ್ಚಿನ ಗಮನ ಹರಿಸಲು ಆಗದೆ, ಅವರ ಪೈಕಿ ಅನೇಕರು ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
“ಅಥ್ಲೆಟ್ ಆಗಬೇಕು ಎಂಬುದು ನನ್ನ ಕನಸು,” ಎಂದು ಹೇಳುವ ಸೋನಾಲಿ, “ಆದರೆ, ನೀವು ಬಡವರಾಗಿದ್ದರೆ, ನಿಮ್ಮ ಮುಂದೆ ಹೆಚ್ಚಿನ ಆಯ್ಕೆಯಾಗಲಿ, ಆಯ್ದುಕೊಳ್ಳುವ ಅವಕಾಶವಾಗಲಿ ಇರುವುದಿಲ್ಲ,” ಎಂದರು. ಜಗತ್ತು ಹವಾಮಾನ ವೈಪರೀತ್ಯದ ಗಂಭೀರ ಸಮಸ್ಯೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮಳೆ ಪ್ರಮಾಣದಲ್ಲಿ ಆಗುತ್ತಿರುವ ವ್ಯತ್ಯಯದಿಂದ ಸಾನಿಯಾ, ಐಶ್ವರ್ಯ, ಸೋನಾಲಿ ಮೊದಲಾದವರ ಆಯ್ಕೆ ಸ್ವಾತಂತ್ರ್ಯ ಇನ್ನಷ್ಟು ಕುಂಟಿತಗೊಳ್ಳಲಿದೆ.
ನಾನು ಹುಟ್ಟಿದ್ದು ಪ್ರವಾಹದ ವೇಳೆ. ಆದರೆ, ಇಡೀ ಜೀವನವನ್ನು ಪ್ರವಾಹ ಭೀತಿಯಲ್ಲೇ ಕಳೆಯಬೇಕಾಗಬಹುದು ಎಂದು ಯಾವತ್ತೂ ಎಣಿಸಿರಲಿಲ್ಲ” ಎಂದು ಸಾನಿಯಾ ಹೇಳುತ್ತಾರೆ.
ಈ ವರದಿಯು ಇಂಟರ್‌ನ್ಯೂಸ್ ಅರ್ಥ್ ಜರ್ನಲಿಸಂ ನೆಟ್‌ವರ್ಕ್ ವರದಿಗಾರರಿಗರ ಒದಗಿಸಿರುವ ಸ್ವತಂತ್ರ ಪತ್ರಿಕೊದ್ಯಮ ಅನುದಾನದ ಮೂಲಕ ಸಿದ್ಧಪಡಿಸಲಾದ ಸರಣಿಯೊಂದರ ಭಾಗವಾಗಿದೆ.
ಅನುವಾದ: ದಿನೇಶ ನಾಯಕ್